Monday, August 25, 2008

ಸಂಪಿಗೆ ಮರ

ನೀವು ಸಾಗರದಿಂದ ಗುಬ್ಬಗೋಡಿಗೆ ಹೋಗುವ ಟಾರ್ ರಸ್ತೆಯಲ್ಲಿ ಸುಮಾರು ಏಳು ಕಿಲೋಮೀಟರ್ ಸಾಗಿಬಂದ ನಂತರ, ರಸ್ತೆಯ ಎಡಗಡೆಗೆ ಒಂದು ತ್ರಿಕೋಣಾಕೃತಿಯ ಕಟ್ಟೆಯೂ, ಆ ಕಟ್ಟೆಯ ಗೋಡೆಯ ಮೇಲೆ ಕಪ್ಪಕ್ಷರದಿಂದ ಬರೆದ 'ಬೆಂಕಟವಳ್ಳಿ' ಎಂಬ ಬೋರ್ಡೂ ಕಾಣುತ್ತದೆ. ಅದೇ ನನ್ನ ಅಜ್ಜನ ಮನೆಯು. 'ಅದೇ' ಎಂದರೆ ಆ ಕಟ್ಟೆಯಲ್ಲ; ಆ ಕಟ್ಟೆಯ ಪಕ್ಕದ, ತಿರುವುಮುರುವಿನ, ಸೀದಾ ಇಳುಕಲಿನ, ಒಂದು ಕಡೆ ಬೆಟ್ಟವೂ ಇನ್ನೊಂದು ಕಡೆ ಪ್ರಪಾತವೂ ಇರುವ ಮಣ್ಣಿನ ರಸ್ತೆಯಲ್ಲಿ ಇಳಿದು ಹೋದರೆ ಸಿಗುವುದು ನನ್ನ ಅಜ್ಜನ ಮನೆ. ಅಜ್ಜನ ಮನೆಯ ಹಿಂದಿರುವ ಬೆಟ್ಟವನ್ನು ಈ ಕಡೆಯಿಂದ ಹತ್ತಿ ಆ ಕಡೆ ಇಳಿದರೆ ನೀವು ವರದಹಳ್ಳಿಯಲ್ಲಿರುತ್ತೀರಿ. ಹಿಂದೆಲ್ಲ ನನ್ನ ಅಮ್ಮ-ಮಾವಂದಿರೆಲ್ಲ ಪ್ರತಿ ಶನಿವಾರ-ಭಾನುವಾರ ಶ್ರೀಧರ ಸ್ವಾಮಿಗಳ ಪ್ರವಚನ ಕೇಳಲು ಇದೇ ಗುಡ್ಡ ಹತ್ತಿಳಿದು ವರದಹಳ್ಳಿಗೆ ಹೋಗುತ್ತಿದ್ದರಂತೆ. ಪ್ರವಚನ ಮುಗಿದ ನಂತರ ಶ್ರೀಧರ ಸ್ವಾಮಿಗಳು ಎಲ್ಲರಿಗೂ ಮಂತ್ರಾಕ್ಷತೆ ಕೊಡುತ್ತಿದ್ದರಂತೆ ಮತ್ತು ಅಮ್ಮ-ಮಾವರಂತಹ ಸಣ್ಣ ಮಕ್ಕಳಿಗೆ ತಮ್ಮ ಬಳಿಯಿದ್ದ ಹಣ್ಣು-ಹಂಪಲನ್ನೆಲ್ಲ ಕೊಡುತ್ತಿದ್ದರಂತೆ. "ಆವಾಗ ಪ್ರವಚನ ಎಲ್ಲಾ ನಮ್ಗೆ ಎಲ್ಲಿ ಅರ್ಥ ಆಗ್ತಿತ್ತು? ಹಣ್ಣು ಸಿಗ್ತಲಾ ಅಂತ ಗುಡ್ಡ ಹತ್ತಿಳ್ದು ವದ್ಧಳ್ಳಿಗೆ ಹೋಗ್ತಿದ್ಯ. ಈಗ ಹಣ್ಣು ಬಿಟ್ಟು ಏನು ಕೊಡ್ತಿ ಅಂದ್ರೂ ಗುಡ್ಡ ಹತ್ತಕ್ಕೆ ಹರಿಯದಿಲ್ಲೆ..!" ನೆನಪು ಮಾಡಿಕೊಳ್ಳುತ್ತಾ ಹೇಳುತ್ತಾಳೆ ಅಮ್ಮ.

ಅದಿರಲಿ, ನಾನಾಗ ಹೇಳಿದೆನಲ್ಲ, ಸಾಗರದಿಂದ ಏಳು ಕಿಲೋಮೀಟರ್ ಸಾಗಿಬಂದ ನಂತರ ಸಿಗುವ ಕಟ್ಟೆ, ಈ ಕಟ್ಟೆಯ ಬಾಜೂ, ಕಟ್ಟೆಗೆ ಸದಾ ನೆರಳಾಗಿ, ಒಂದು ಬೃಹತ್ ಸಂಪಿಗೆ ಮರವಿದೆ. ರಸ್ತೆಯ ಬಲಬದಿಗೆ ಲೋಕೋಪಯೋಗಿ ಇಲಾಖೆಯವರು ಕಟ್ಟಿಸಿದ ಬಸ್‌ಸ್ಟ್ಯಾಂಡ್ ಇದೆಯಾದರೂ ಯಾರೂ ಅದನ್ನು ಬಳಸುವುದಿಲ್ಲ. ಸದಾ ಅದರೊಳಗೆ ಹೇರಳ ಕಸ ಶೇಖರವಾಗಿರುತ್ತದೆ. ಬಿಂದಿಲು-ಬಲೆ ಕಟ್ಟಿಕೊಂಡಿರುತ್ತದೆ. ದನಕರುಗಳು ಅದನ್ನು ಕೊಟ್ಟಿಗೆ ಎಂದೇ ಭಾವಿಸಿ ಅಲ್ಲೇ ಮಲಗಿ ಮೆಲುಕು ಹಾಕುತ್ತಿರುವುದನ್ನೂ ಕಾಣಬಹುದು. ವರ್ಷ-ಎರಡು ವರ್ಷಕ್ಕೊಮ್ಮೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬಸ್‌ಸ್ಟಾಂಡನ್ನು ನವೀಕರಣಗೊಳಿಸುವ ನೆಪದಲ್ಲಿ ಪೇಯಿಂಟ್ ಮಾಡಿಸಿ, ಒಡೆದ ಹಂಚುಗಳನ್ನು ಬದಲಿಸಿ, ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ. ಬಸ್ಸಿಗೆ ಕಾಯುವ ಊರಿನ ಜನ ಯಾವಾಗಲೂ ನಿಲ್ಲುವುದು ಸಂಪಿಗೆ ಮರದ ಕೆಳಗೇ. ಬಸ್ ಬರುವುದು ತಡವಾಗಿ, ನಿಂತೂ ನಿಂತೂ ಸುಸ್ತಾದರೆ ಸಂಪಿಗೆ ಮರದ ಬುಡದಲ್ಲಿರುವ ತ್ರಿಕೋಣಾಕಾರದ ಕಟ್ಟೆಯ ಮೇಲೆ ಕೂರುತ್ತಾರೆ. ಕೆಲವರು ಮರದ ಬುಡದಲ್ಲೇ, ಮೇಲೆದ್ದು ಬಂದಿರುವ ಮರದ ಬೃಹತ್ ಬೇರುಗಳ ಮೇಲೇ ಅಂಡೂರುತ್ತಾರೆ. ಇನ್ನು ಕೆಲವರು ಟಾರ್ ರೋಡಿನ ಮೇಲೂ ಕೂರುವುದುಂಟು.

ಈ ಮರ ಯಾವುದೇ ಸಾಧಾರಣ ಸಂಪಿಗೆ ಮರದಂತೆ ಕಂಡರೂ ಇದಕ್ಕೊಂದು ಮಹತ್ವವಿದೆ. ಬೆಂಕಟವಳ್ಳಿ ಊರಿನ ಜನ ತಮ್ಮೂರಿನ ಬಸ್ ಇಳಿದು-ಹತ್ತುವ ಜಾಗವನ್ನು ಎಲ್ಲಾ ಊರಿನವರಂತೆ 'ಬಸ್‌ಸ್ಟ್ಯಾಂಡ್' ಎಂದು ಕರೆಯುವುದಿಲ್ಲ; 'ಸಂಪಿಗೆ ಮರ' ಅಂತ ಕರೆಯುತ್ತಾರೆ. ನಾವಾದರೆ 'ಬಸ್‌ಸ್ಟ್ಯಾಂಡಲ್ ಕಾದೂ ಕಾದೂ ಸಾಕಾಯ್ತು ಮಾರಾಯಾ, ಕೃಷ್ಣಾ ಬಸ್ ಬರಲೇ ಇಲ್ಲ!' ಎನ್ನುತ್ತೇವೆ. ಆದರೆ ಬೆಂಕಟವಳ್ಳಿಯ ಜನ 'ಬೇಗ್ ಬೇಗ ನಡೆ.. ಎರಡೂ ವರೆಗೆ ಕರೆಕ್ಟಾಗಿ ಬರತ್ತೆ ವರದಾ ಬಸ್ಸು ಸಂಪಿಗೆ ಮರದ ಹತ್ರ' ಎನ್ನುತ್ತಾರೆ. ಇವರು 'ಬಸ್‌ಸ್ಟ್ಯಾಂಡ್' ಶಬ್ದವನ್ನು ಬಳಸುವುದೇ ಇಲ್ಲ. ಅದರ ಜಾಗದಲ್ಲಿ ಸದಾ ಸಂಪಿಗೆ ಮರ ತೂಗುತ್ತಿರುತ್ತದೆ.

ವಸಂತ ಮಾಸದಲ್ಲಿ ನೀವೇನಾದರೂ ಇಲ್ಲಿಗೆ ಬಂದರೆ ಈ ಮರದ ಗೆಲ್ಲ ಮೇಲೆ ಕೋಗಿಲೆ ಕೂತು ಹಾಡುವುದನ್ನು ಕೇಳಬಹುದು. 'ಸಂಪಿಗೆಯೆಲ್ಲೋ ಕೋಗಿಲೆಯೆಲ್ಲೋ?' ಎಂಬ ಉದ್ಘಾರ ನಿಮ್ಮಿಂದ ಹೊರಬೀಳುವುದಂತೂ ಖಚಿತ. ಆದರೆ ಹಾಗೆ ಹಾಡು ಕೇಳಬೇಕೆಂದರೆ ನೀವು ಈ ಮರದಿಂದ ತುಸು ದೂರದಲ್ಲಿ, ಮರೆಯಲ್ಲಿ ನಿಂತಿರಬೇಕಾಗುತ್ತದೆ. ಮರದ ಕೆಳಗೇ ಇದ್ದರೆ ಕೋಗಿಲೆಗೆ ಸಂಕೋಚವಾಗಿ ಹಾಡುವುದಿಲ್ಲ. ಭಯಗೊಂಡು ಹಾರಿಹೋದರೂ ಹೋಗಬಹುದು. ನೀವು ದೂರದಲ್ಲಿ, ಅಗೋ, ಆ ಟ್ರಾನ್ಸ್‌ಫಾರ್ಮರ್ ಕಂಬದ ಬಳಿ ಒಂದು ಸಣ್ಣ ಗುಡ್ಡ ಇದೆಯಲ್ಲ, ಅದರ ಮೇಲೆ ಕುಳಿತುಕೊಳ್ಳಬೇಕು. ಆಗ ಈ ಕೋಗಿಲೆ, ವಧುವನ್ನು ನೋಡಲು ವರನ ಮನೆಯವರು ಹೋದಾಗ ತಲೆ ತಗ್ಗಿಸಿಕೊಂಡು ನಾಚುತ್ತಾ ಹಾಡುವ ಹುಡುಗಿಯಂತೆ, ಸುಮಧುರವಾಗಿ ಹಾಡುತ್ತದೆ. ಆ ಕೋಗಿಲೆ ಹಾಡು, ಪಕ್ಕದ ಗಹ್ವರದಲ್ಲಿಳಿದು, ಗಿರಿಗೆ ಬಡಿದು, ದೊಡ್ಡ ಮರಗಳ ಕಂಕುಳಲ್ಲಿ ಕಚಗುಳಿಯಾಗುವಂತೆ ಹಾದು ಪ್ರತಿಧ್ವನಿಸುವಾಗ ನಿಮಗದು ಹತ್ತಿರದಲ್ಲೆಲ್ಲೋ ಮತ್ತೊಂದು ಕೋಗಿಲೆ ಇದೆಯೇನೋ ಎಂಬ ಭ್ರಮೆ ತರಿಸುತ್ತದೆ. ಎರಡು ಕೋಗಿಲೆಗಳ ಜುಗಲ್‌ಬಂದಿಯಂತೆ ಭಾಸವಾಗುತ್ತದೆ.

ಸಂಪಿಗೆ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಆಗ ಈ ಮರದ ಸುತ್ತೆಲ್ಲ ಸಂಪಿಗೆಕಂಪು ಪೂಸಿಕೊಂಡಿರೊತ್ತೆ. ಬಸ್ಸಿಗೆ ಹೋಗಲೆಂದು ಬೆಂಕಟವಳ್ಳಿಯ ಮಣ್ಣು ರಸ್ತೆಯ ಏರು ಹತ್ತುತ್ತಿರುವವರು ಕೊನೆಯ ತಿರುವಿನಲ್ಲಿರುವಾಗಲೇ ಇದರ ಘಮ ಮೂಗಿಗಡರಿ ಅವರ ಏದುಸಿರೂ ಆಪ್ಯಾಯಮಾನವಾಗುತ್ತದೆ. ತಮ್ಮ ತಮ್ಮ ವಾಹನಗಳಲ್ಲಿ ಟಾರು ರಸ್ತೆಯಲ್ಲಿ ಗುಬ್ಬಗೋಡಿನ ಕಡೆ ಹೊರಟವರು, ಗುಬ್ಬಗೋಡಿನಿಂದ ಸಾಗರಕ್ಕೆ ಹೊರಟವರು ಸಂಪಿಗೆ ಮರ ಹೂ ಬಿಡುವ ಕಾಲದಲ್ಲಿ ಇಲ್ಲಿ ಐದು ನಿಮಿಷ ನಿಲ್ಲಿಸಿ, ಬಡಿಗೆಯಿಂದ ಬಡಿದು, ಒಂದೆರಡಾದರೂ ಹೂವುದುರಿಸಿಕೊಂಡು, ಅದರ ಪರಿಮಳ ಹೀರುತ್ತಾ ಮುಂದೆ ಸಾಗುತ್ತಾರೆ.

ನನ್ನ ಅಜ್ಜನ ಮನೆ ಊರಿನಲ್ಲಿ ಸಾಗರದ ಕಾಲೇಜಿಗೆ ಹೋಗುವ ಅತಿ ಚಂದದ ಹುಡುಗಿಯರು ಇದ್ದಾರೆ ಎಂದು ನಾನು ಹೇಳಿದರೆ ನೀವದನ್ನು ಆತ್ಮಪ್ರಶಂಸೆ ಎಂದು ಭಾವಿಸಬಾರದು. ಏಕೆಂದರೆ, ಹಾಗೆ ಹೇಳಿಕೊಳ್ಳುವುದರಿಂದ ನನಗೇನೂ ಲಾಭವಿಲ್ಲ. ಲಾಭವೇನಿದ್ದರೂ ಇರುವುದು ಬೆಂಕಟವಳ್ಳಿ ಮತ್ತು ಅಕ್ಕಪಕ್ಕದ ಊರಿನ ಹುಡುಗರಿಗೆ! ಬಸ್ಸು ಬರುವುದಕ್ಕೂ ಕನಿಷ್ಟ ಅರ್ಧ ಗಂಟೆ ಮುಂಚಿತವಾಗಿಯೇ ಇಲ್ಲಿಗೆ ಬಂದು ಸೇರುವ ಹುಡುಗರು, ಹುಡುಗಿಯರಿಗಾಗಿ ಕಾಯತೊಡಗುತ್ತಾರೆ. ಬೆಂಕಟವಳ್ಳಿಯ ಹಿಂದು-ಮುಂದಿನ ಊರಿನ ಹುಡುಗರೂ ಸಹ ಇಲ್ಲಿಗೇ ಬಂದು ಬಸ್ಸು ಹತ್ತುತ್ತಾರೆಂದರೆ ಅದರ ಹಿಂದೊಂದು ಗುಟ್ಟಿರಬೇಕಲ್ಲವೇ? ಅದು ಮತ್ತೇನೂ ಅಲ್ಲ: ಬಿಳಿ ಚೂಡಿದಾರು, ಮುಖಕ್ಕೆ ಕ್ರೀಮು-ಪೌಡರು, ಚಂದ ಬಾಚಿದ ಕೂದಲು, ಮ್ಯಾಚಿಂಗ್ ಕಲರ್ ಸ್ಲಿಪ್ಪರು -ಧರಿಸಿ ಚಂದದ ಬೊಂಬೆಗಳಂತೆ ತಯಾರಾಗಿ ಕಾಲೇಜಿಗೆ ಹೊರಟಿರುವ ಈ ಹುಡುಗಿಯರಿಗೆ ಸಂಪಿಗೆಯ ಪರಿಮಳ ಕೇಳಿ ಅದನ್ನು ಮುಡಿಯಬೇಕೆಂಬ ಆಸೆಯಾಗುತ್ತದಾದರೂ, ಬಡಿಗೆ ಹುಡುಕಿ, ಎತ್ತಿ ಎಸೆದು, ಹೂವು ಬೀಳಿಸಿ ಮುಡಿದುಕೊಳ್ಳಲಿಕ್ಕೆ -ತಮ್ಮ ಅಲಂಕಾರವೆಲ್ಲಾ ಎಲ್ಲಿ ಹಾಳಾಗುತ್ತದೋ ಎಂಬ ಹಿಂಜರಿಕೆ. ಇದನ್ನರಿತಿರುವ ಚಾಣಾಕ್ಷಮತಿ ಹುಡುಗರು, ಮುಂಚೆಯೇ ಇಲ್ಲಿಗೆ ಬಂದು ಹೂವನ್ನೆಲ್ಲಾ ಹುಡುಕಿ ಬಡಿದು ಕೆಡವಿ ಗುಡ್ಡೆ ಮಾಡಿ, ಹುಡುಗಿಯರು ಬರುವಷ್ಟರಲ್ಲಿ ಬೊಗಸೆ ತುಂಬ ಹೂ ಹಿಡಿದು ನಿಂತಿರುತ್ತಾರೆ. ಹೀಗಾಗಿ, ಸಂಪಿಗೆ ಹೂ ಬಿಡುವ ಕಾಲದಲ್ಲಿ ನೀವು ಈ ಕಡೆ ಬಂದರೆ, ಇನ್ನೂ ಮಂಜು ಮುಸುಕಿದ ಮುಂಜಾವಿನಲ್ಲಿ, ಮೊದಲ ಬಸ್ಸಿನ್ನೂ ಬರುವುದಕ್ಕೆ ಸಮಯವಿರಲು, ಬೆಂಕಟವಳ್ಳಿಯ ಸಂಪಿಗೆ ಮರದ ಕೆಳಗೆ ಹುಡುಗರು ಹುಡುಗಿಯರಿಗೆ ಹೂ ಕೊಟ್ಟು ಪ್ರತಿದಿನವೂ 'ಪ್ರಪೋಸ್' ಮಾಡುವ ಅಮೋಘ ಸಿನಿಮಾ ದೃಶ್ಯವನ್ನು ಕಾಣಬಹುದು!

ಹಾಂ, ಸಿನಿಮಾ ಎಂದಾಕ್ಷಣ ನೆನಪಾಯಿತು. ಪುಟ್ಟಣ್ಣ ಕಣಗಾಲರ 'ಅಮೃತ ಘಳಿಗೆ' ಸಿನಿಮಾ ಇದೆಯಲ್ಲಾ, ಆ ಸಿನಿಮಾ ಚಿತ್ರೀಕರಿಸಲ್ಪಟ್ಟಿರುವುದು ಇದೇ ಸಂಪಿಗೆ ಮರದ ಸುತ್ತಲಿನ ಪ್ರದೇಶದಲ್ಲಿ. ಈ ಸಂಪಿಗೆ ಮರವೂ ಆ ಚಿತ್ರದಲ್ಲಿ ಹಸಿರು ಸೀರೆ ಉಟ್ಟು ಚಂದ ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದಕ್ಕೆ ಅಭಿನಯದಲ್ಲಿ ಆಸಕ್ತಿಯಿತ್ತೇ ಎಂಬ ಅನುಮಾನ ಬರುತ್ತದೆ. ಈ ಸಂಪಿಗೆ ಮರದಿಂದ ಸುಮಾರು ಒಂದೂ ವರೆ ಮೈಲಿ ದೂರದಲ್ಲಿರುವ 'ತುಂಬೆ' ಎಂಬ ಊರಿನಲ್ಲಿ ಒಬ್ಬ ಭಾರೀ ಶ್ರೀಮಂತರ ಮನೆಯಿದೆ. 'ತುಂಬೆ ಹೆಗ್ಡೇರು' ಅಂತಲೇ ಅವರು ಜನಜನಿತರು. ಅವರ ಮನೆಯಲ್ಲೇ ನಡೆದದ್ದು 'ಅಮೃತ ಘಳಿಗೆ'ಯ ಮುಕ್ಕಾಲು ಪಾಲು ಚಿತ್ರೀಕರಣ. ಅದು ನಡೆಯುವಾಗ ಅಮ್ಮ ತನ್ನ ಗೆಳತಿಯರೊಡಗೂಡಿ ಅಲ್ಲಿಗೆ ಹೋದದ್ದು, ಅಲ್ಲಿ ಶ್ರೀಧರ್, ರಾಮಕೃಷ್ಣ, ಪುಟ್ಟಣ್ಣ -ಮುಂತಾದವರನ್ನು ನೋಡಿದ್ದನ್ನು ನೆನಪಿಟ್ಟುಕೊಂಡಿದ್ದಾಳೆ. 'ಅಮೃತ ಘಳಿಗೆ' ಸಿನಿಮಾ ನಮ್ಮೂರ ಡಾ| ವೆಂಕಟಗಿರಿ ರಾವ್ ಅವರ 'ಅವಧಾನ' ಕಾದಂಬರಿಯನ್ನು ಆಧರಿಸಿದ್ದು ಎಂದೆಲ್ಲ ಹೇಳಿದರೆ ನಾನು ಸಂಪಿಗೆ ಮರ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಿದ್ದೇನೆ ಎಂದು ನೀವು ಆಪಾದಿಸಬಾರದು. ಏನು ಮಾಡಲಿ? ಸಂಪಿಗೆ ಮರ ಎಂದಾಕ್ಷಣ ನನಗೆ ಅವೆಲ್ಲ ನೆನಪಾಗುತ್ತದೆ.

ಬೆಂಕಟವಳ್ಳಿ ಬಸ್‌ಸ್ಟ್ಯಾಂಡ್‌ನ ಹತ್ತಿರದಲ್ಲಿ ಯಾವುದೇ ಮನೆಯಾಗಲೀ, ಅಂಗಡಿಯಾಗಲೀ ಇಲ್ಲವಾದ್ದರಿಂದ - ಅದೊಂದು ನಿರ್ಜನ ಪ್ರದೇಶವಾದ್ದರಿಂದ, ಅದರ ಸುತ್ತ ಕೆಲವೊಂದು ನಿಗೂಢ ಘಟನೆಗಳೂ ನಡೆದ ಸುದ್ಧಿಗಳಿವೆ. ಉದಾಹರಣೆಗೆ, ಸಂಪಿಗೆ ಮರದ ಕೆಳಗೆ ಬಸ್ಸಿಗೆ ಕಾಯುತ್ತಿದ್ದ ಸುಜಾತಕ್ಕನನ್ನು ಯಾರೋ ಬೆದರಿಸಿ ದುಡ್ಡು ಕಿತ್ತುಕೊಂಡರಂತೆ ಎಂಬುದು; ಬಸ್‌ಸ್ಟ್ಯಾಂಡ್ ಒಳಗೆ ಪ್ರಕಾಶಣ್ಣ ಒಂದು ಮೂಟೆ ಕಂಡನೆಂದೂ - ಅದು ಕಳ್ಳಸಾಗಣೆದಾರರು ಬಚ್ಚಿಟ್ಟಿದ್ದ ಗಂಧವೆಂದೂ - ಮರುದಿನ ನೋಡುವಷ್ಟರಲ್ಲಿ ಇರಲಿಲ್ಲವೆಂದೂ; ಬಸ್‍ಸ್ಟ್ಯಾಂಡ್ ಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್ ಪದೇ ಪದೇ ಹೋಗುವುದಕ್ಕೆ ಕಾರಣ ಸಂಪಿಗೆ ಮರದಲ್ಲಿರುವ ಯಾವುದೋ ಕ್ಷುದ್ರಶಕ್ತಿಯೆಂದೂ -ಹೀಗೆ. ಮತ್ತೆ, ಇವೆಲ್ಲಕ್ಕಿಂತಲೂ ಆಸಕ್ತಿಕರವಾದ ಮತ್ತೊಂದು ಘಟನೆಗೆ ಕಣ್ಣು-ಕಿವಿಯಾಗುವ ಅವಕಾಶ ನನಗೊದಗಿ ಬಂತು.

ಈ ಸಂಪಿಗೆ ಮರದ ಬಳಿ ಒಬ್ಬ ಬೆತ್ತಲೆ ಹುಡುಗಿ ಓಡಾಡುತ್ತಿದ್ದಳು ಎಂಬ ಸುದ್ಧಿ ಸ್ಪೋಟವಾದದ್ದು ಬಿರುಬೇಸಿಗೆಯ ಸಂಜೆಯೊಂದರಲ್ಲಿ. ನಾನು ಬೇಸಿಗೆ ರಜೆಗೆಂದು ಅಜ್ಜನ ಮನೆಗೆ ಹೋಗಿದ್ದೆ. ಅದಾಗ ತಾನೆ ಆರೂವರೆ ಬಸ್ಸಿಗೆ ಸಾಗರದಿಂದ ಬಂದ ನನ್ನ ಮಾವನಿಗೆ, ಮಾವನೊಂದಿಗೇ ಬಸ್ಸಿಳಿದ ರಾಘವೇಂದ್ರಣ್ಣ ಬೆಳಗ್ಗೆ ತಾನು ಕಂಡ ದೃಶ್ಯವನ್ನು ವಿವರಿಸಿದನಂತೆ: "ಚಾಲಿ ಸುಲ್ಸಿದ್ದು ನಾಕು ಚೀಲ ಆಗಿತ್ತಾ.. ಮಂಡಿಗೆ ಸಾಗ್ಸಲೆ ಆನಂದ್ ಗೌಡನ ರಿಕ್ಷಾಕ್ಕೆ ಬರಕ್ ಹೇಳಿದಿದ್ದಿ.. ಅಂವ ಒಂಭತ್ ಗಂಟಿಗೆ ಬಂದ.. ಚೀಲ ಹೇರ್ಕ್ಯಂಡು, ಆನೂ ಹೊಂಟಿ ರಿಕ್ಷಾದ್ ಮೇಲೇ ಹೇಳ್ಯಾತು.. ಸಂಪ್ಗೆ ಮರದ್ ಬುಡಕ್ ಬಪ್ಪ ಹೊತ್ತಿಗೆ ಅಲ್ಲೊಂದು ಹೆಂಗ್ಸು ಮಾರಾಯಾ.. ಎಂಥಾ? ದುಂಡಗೆ!! ಫುಲ್ ದುಂಡಗ್ ನಿಂತಿದ್ಲಪಾ..! ಕೈ ಮಾಡಿದ ಯಂಗ್ಳ ರಿಕ್ಷಾಕ್ಕೆ.. ಯಂಗಂತು ಹೆದ್ರಿಕೆ ಆಗೀ.. ಆನಂದ ಜೋರಾಗ್ ಹೊಡ್ದ ನೋಡು ರಿಕ್ಷಾನಾ.. ಕರ್ಕಿಕೊಪ್ಪದ್ ಇಳುಕ್ಲು ಇಳಿಯಹೊತ್ತಿಗೆ ಇಬ್ರಿಗೂ ಬೆವ್ರು ಇಳ್ದ್ ಹೋಗಿತ್ತು! ಎಂಥಾ- ದುಂಡಗೆ ಮಾರಾಯಾ..!"

ಮಾವ, ರಾಘವೇಂದ್ರಣ್ಣ ತನಗೆ ಹೇಳಿದ್ದನ್ನು ಹಾಗೇ ಹೇಳಿದ. ಕೇಳಿದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಸಂಪಿಗೆ ಮರದ ಬಳಿ! ಬೆತ್ತಲೆ ಹುಡುಗಿ! "ಯಾರೂಂತ ಏನಾರು ಗೊತ್ತಾತನಾ?" ಎಂದು ಮಾವ ರಾಘವೇಂದ್ರಣ್ಣನ ಬಳಿ ಕೇಳಿದನಂತೆ. ರಾಘವೇಂದ್ರಣ್ಣ "ಎಂಥೇನ, ಸರಿಯಾಗ್ ನೋಡಕ್ ಆಗಲ್ಲೆ. ಆದರೆ ನಮ್ಮ ಕಡೆಯೋರಂತೂ ಯಾರೂ ಅಲ್ಲ ನೋಡು" ಎಂದನಂತೆ. ಅದರಲ್ಲಿ 'ಸರಿಯಾಗಿ ನೋಡಕ್ಕಾಗಲ್ಲೆ' ಎಂಬ ಮಾತು ನನಗೆ ಮೋಟುಗೋಡೆಯಾಚೆಗಿನ ಆಲೋಚನೆಗಳಿಗೆ ಕೊಂಕಾಯಿತಾದರೂ, ದೇವರ ಮನೆಯಿಂದ ಬಂದ ಅಜ್ಜಿ "ಮಾಣೀ, ಮೂರ್ ಸಂಜೆ ದೀಪ ಹಚ್ಚೋ ಹೊತ್ತಿಗೆ ಎಂಥೆಂತೆಲ್ಲಾ ಹೇಳಡ.. ಮೊದ್ಲು ಕೈಕಾಲ್ ತೊಳ್ಕಂಡ್ ಬಂದು ಕಾಪಿ ಕುಡಿ" ಎಂದದ್ದರಿಂದ ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಆದರೆ ಅಂತಹ ರೋಚಕ ಸುದ್ಧಿ ಪ್ರಕಟಗೊಂಡಾಗ ಅದರ ಬಗ್ಗೆ ನಾಲ್ಕು ಮಾತಾಡದೇ, ಚರ್ಚಿಸದೇ ಅಲ್ಲಿಗೇ ನಿಲ್ಲಿಸಲಿಕ್ಕೆ ಬರುತ್ತದೆಯೇ? ಮಾವ ಹಾಗೆ ಕಥೆ ಹೇಳುವಾಗ ಅಲ್ಲಿ ಏಳು ಗಂಟೆ ವಾರ್ತೆ ನೋಡಲಿಕ್ಕೆಂದು ಬಂದು ಕೂತಿದ್ದ ಅಕ್ಕಪಕ್ಕದ ಮನೆಯವರನೇಕರೂ ಇದ್ದರು. ಹೀಗಾಗಿ, ಅಜ್ಜಿಯ ಕಿವಿಮಾತು ಯಾರ ಕಿವಿಗೂ ಬೀಳಲಿಲ್ಲ. "ಅಲ್ದಾ, ಬದ್ಧನಡನಾ?" ಎಂದು ಅನಂತಣ್ಣ ಬಾಯಿ ಹಾಕಿದರೆ, "ಇಶೀ, ಅದು ಹೆಂಗ್ ಸಾಧ್ಯನಾ? ರಾಘವೇಂದ್ರಣ್ಣ ಏನ್ ನೋಡಿ ಏನ್ ತಿಳ್ಕಂಡ್ನಾ ಎಂಥೇನ!" ಎಂದು ಯಶೋಧಕ್ಕ ರಾಘವೇಂದ್ರಣ್ಣನ ಲೌಕಿಕ ಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದಳು.

"ರಾಘವೇಂದ್ರಣ್ಣ ಒಬ್ನೇ ಏನು ಅಲ್ದಲಾ? ಆನಂದ್ ಗೌಡನೂ ನೋಡಿದ್ದ.. ರಿಕ್ಷಾದ ಹಿಂದಕೇ ಅದು ಸುಮಾರ್ ದೂರ ಓಡ್ಯೂ ಬಂತಡ.. ಕನ್ನಡೀಲಿ ಕಾಣ್ತಿತ್ತಡ ಆನಂದಂಗೆ.." ಎಂದ ಮಾವ. ನಾನಾಗ ಇನ್ನೂ ಮೊದಲ ವರ್ಷದ ಕಾಲೇಜು ಹುಡುಗನಾಗಿದ್ದರಿಂದ 'ಇಂತಹ' ವಿಷಯದ ಬಗ್ಗೆ ಆಸಕ್ತಿ ಇರುವವನಂತೆ ನಡೆದುಕೊಳ್ಳುವುದು ಉಚಿತವಲ್ಲೆಂದರಿತು ಸುಮ್ಮನಿದ್ದೆ. ಏಕೆಂದರೆ, ನಾನೇನಾದರೂ ಬಾಯಿ ಬಿಟ್ಟಿದ್ದರೆ, ತಕ್ಷಣ ಎಲ್ಲರೂ ನನ್ನೆಡೆಗೆ ನೋಡುತ್ತಿದ್ದರು ಮತ್ತು ಅಜ್ಜಿ "ಅಪ್ಪೀ ನಿಂಗೆ ಇವೆಲ್ಲ ಎಂಥೂ ಗೊತ್ತಾಗ್ತಲ್ಲೆ; ನೀ ಸುಮ್ಮನ್ ಕೂತ್ಗ" ಎಂದು ಬಾಯಿ ಮುಚ್ಚಿಸುತ್ತಿದ್ದಳು. ನಮ್ಮ ಮನೆಗೆ ಫೋನ್ ಮಾಡಿದಾಗ ಅಮ್ಮನ ಬಳಿ ಸೂಕ್ಷ್ಮವಾಗಿ 'ಅಪ್ಪಿಯ ಬಗ್ಗೆ ಒಂದು ಕಣ್ಣಿಟ್ಟರಲು' ಅಜ್ಜಿ ಸೂಚನೆ ಕೊಟ್ಟರೂ ಕೊಡುವ ಸಾಧ್ಯತೆ ಇತ್ತು. ಹೀಗಾಗಿ, ನಾನು ಏನೂ ಅರಿಯದವನಂತೆ ಸುಮ್ಮನಿದ್ದುಬಿಟ್ಟಿದ್ದೆ. ಒಟ್ಟಿನಲ್ಲಿ ಮರುದಿನ ಬೆಳಗಾಗುವುದರೊಳಗಾಗಿ ಈ ಪ್ರಕರಣ ಬೆಂಕಟವಳ್ಳಿ ಊರಲೆಲ್ಲ ಗುಸುಗುಸು ಸುದ್ಧಿಯಾಗಿತ್ತು. ರಾಘವೇಂದ್ರಣ್ಣನ ಹೆಂಡತಿ ಮಾತ್ರ ಯಾಕೋ ಸೆಟಗೊಂಡ ಮುಖದಲ್ಲಿ ಓಡಾಡುತ್ತಿರುವುದನ್ನೂ ನಾನು ಗಮನಿಸದಿರಲಿಲ್ಲ.

ಅದಾಗಿ ಮೂರ್ನಾಲ್ಕು ದಿನಗಳ ನಂತರ, ಕಲ್ಲುಕೊಪ್ಪದ ಬಳಿ ಹೀಗೇ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂದು ಸುದ್ಧಿಯಾಯಿತು. ಕಲ್ಲುಕೊಪ್ಪವೆಲ್ಲಿ ಬೆಂಕಟವಳ್ಳಿಯೆಲ್ಲಿ? ಕಲ್ಲುಕೊಪ್ಪ ಬೆಂಕಟವಳ್ಳಿಗೆ ಹದಿನೈದಿಪ್ಪತ್ತು ಮೈಲಿ ದೂರದಲ್ಲಿರುವ ಹಳ್ಳಿ. ಹಾಗಾದರೆ ಇದೂ ಅದೇ ಹುಡುಗಿಯೇ? ಅಥವಾ ಬೇರೆ ಹುಡುಗಿಯೇ? ಅರಳಿಕಟ್ಟೆ ಬಳಿ, ಅಡಿಕೆ ಸುಲಿಯುವಲ್ಲಿ, ರಸ್ತೆ-ತೋಟದಲ್ಲಿ ಯಾರಾದರೂ ಎದುರು ಸಿಕ್ಕಾಗ -ಹೀಗೆ ಎರಡು ಬಾಯಿ ಸೇರಿತೆಂದರೆ ಅಲ್ಲಿ ಬೆತ್ತಲೆ ಹುಡುಗಿ ಕಾಣಿಸಿಕೊಂಡ ಬಿಸಿಬಿಸಿ ಸುದ್ಧಿ ಚರ್ಚೆಯಾಯಿತು. 'ಜೋಗದಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಂತೆ. ಅಲ್ಲಿಂದೊಬ್ಬ ನಟಿ ಕಾಣೆಯಾಗಿದ್ದಾಳಂತೆ. ಪೋಲೀಸರು ಹುಡುಕುತ್ತಿದ್ದಾರಂತೆ' ಎಂದು ಸಹ ಯಾರೋ ಹೇಳಿಬಿಟ್ಟರು. ಈ ಎಲ್ಲ ಸುದ್ಧಿಗಳು ಹವೆಗೆ ಭಯವನ್ನು ಬೆರೆಸಿಬಿಟ್ಟವು. ಜನ ಸಂಪಿಗೆ ಮರದ ಬಳಿ ಒಬ್ಬರೇ ಹೋಗುವುದಕ್ಕೆ ಹೆದರತೊಡಗಿದರು. ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ 'ಬೇಗ ಮನೆ ಮುಟ್ಕ್ಯಳಿ' ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ.

ನಾನು ಈ ವಿದ್ಯಮಾನವನ್ನೆಲ್ಲಾ ಕಂಡೂ-ಕೇಳಿಯೂ ಸುಮ್ಮನೆ ಓಡಾಡಿಕೊಂಡಿದ್ದೆ. ಯಾರಿಗೂ ತಿಳಿಯದಂತೆ ನಾನೊಬ್ಬನೇ ಸಂಪಿಗೆ ಮರದ ಬಳಿ ಹೋಗಿ ಸುಮಾರು ಒಂದು ತಾಸು ಅಡ್ಡಾಡಿಕೊಂಡು ಬಂದಿದ್ದೆ. ಇದರ ಹಿಂದಿರುವ ರಹಸ್ಯವನ್ನು ಒಂಟಿಯಾಗಿ ಭೇದಿಸಿ ಭೇಷ್ ಎನಿಸಿಕೊಳ್ಳಬೇಕೆಂಬ ಇರಾದೆಯೂ ನನಗಿತ್ತೋ ಏನೋ ಈಗ ನೆನಪಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆಗ ಯಾವ ನಗ್ನ ಸುಂದರಿಯ ದರ್ಶನವೂ ನನಗಾಗಲಿಲ್ಲ.

ಈ ಬಿಸಿಬಿಸಿ ಸುದ್ಧಿಯ ಗುಸುಗುಸು-ಪಿಸಪಿಸಗಳು ನಿಲ್ಲಬೇಕಾದರೆ ಮತ್ತೊಂದು ಗರಮಾಗರಂ ಸುದ್ಧಿ ಬರಬೇಕಾಯಿತು: ಸಂಪಿಗೆ ಮರದಿಂದ ಮೂವತ್ತು ಮೈಲಿಗೂ ಹೆಚ್ಚು ದೂರದಲ್ಲಿರುವ ಕಾನುಬೈಲು ಎಂಬ ಊರಿನ ಕೆರೆಯಲ್ಲಿ ಒಂದು ಹೆಣ್ಣಿನ ಶವ ಸಿಕ್ಕಿತಂತೆ, ಜನ ಸೇರಿ, ಪೋಲೀಸರು ಬಂದು, ಪೋಸ್ಟ್‌ಮಾರ್ಟೆಮ್ ಮಾಡಿ, ಶವವನ್ನು ಯಾರೂ ಗುರುತಿಸದಿದ್ದರಿಂದ, ಅವರೇ ಗುಂಡಿ ತೋಡಿ ಹುಗಿದುಬಿಟ್ಟರಂತೆ ಎಂಬುದೇ ಆ ಸುದ್ಧಿ. ಆದರೆ ಬೆಂಕಟವಳ್ಳಿ ಸಂಪಿಗೆ ಮರದ ಬಳಿ ಕಾಣಿಸಿಕೊಂಡ ಬೆತ್ತಲೆ ಹುಡುಗಿಗೂ, ಕಲ್ಲುಕೊಪ್ಪದ ಬಳಿಯೂ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂಬ ಸುದ್ಧಿಗೂ, ಕಾನುಬೈಲಿನ ಕೆರೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶವಕ್ಕೂ ಅದು ಹೇಗೆ ತಳಕು ಕಲ್ಪಿಸಿಕೊಂಡರೋ ಗೊತ್ತಿಲ್ಲ; ಅಂತೂ 'ರಾಘವೇಂದ್ರಣ್ಣ ನೋಡಿದ ಬೆತ್ತಲೆ ಹೆಂಗಸು ಕೊಲೆಯಾಗಿ ಸತ್ತು ಹೋದಳಂತೆ' ಎಂದು ಜನ ಮಾತಾಡಿಕೊಂಡರು. ಅವರಲ್ಲಡಗಿದ್ದ ಭಯವೂ ಹೋದಂತನಿಸಿತು. ನಾನು ಅಜ್ಜನ ಮನೆ ಪ್ರವಾಸ ಮುಗಿಸಿ ವಾಪಸು ಊರಿಗೆ ಹೊರಟಾಗ, ಯಾಕೋ ಈ ಸಂಪಿಗೆ ಮರವನ್ನು ಮೂರ್ನಾಲ್ಕು ಸುತ್ತು ಸುತ್ತಿ ಬಂದು, ಅದರ ಕಾಂಡವನ್ನು ತಡವಿ, ಅದರ ಎದ್ದು ಬಂದಿರುವ ಬೇರುಗಳ ಮೇಲೆಲ್ಲ ಓಡಾಡಿ, ಕೆಳಗೆ ಬಿದ್ದಿದ್ದ ಒಂದೆರಡು ತರಗೆಲೆಯನ್ನೆತ್ತಿ ಮೂಸಿ, ಬಿಸಾಕಿ ಬಂದಿದ್ದೆ. ಸಂಪಿಗೆ ಮರ ಮಾತ್ರ ನಿರುಮ್ಮಳವಾಗಿ ನೆರಳು ಸೂಸುತ್ತ ನಿಂತಿತ್ತು.

ಮೊನ್ನೆ ಊರಿಗೆ ಹೋದವನು ಅಪ್ಪನ ಬೈಕೆತ್ತಿಕೊಂಡು ಅಜ್ಜನ ಮನೆಗೆ ಹೋಗಿದ್ದೆ. ವಾಪಸು ಬರುವಾಗ ಸಂಪಿಗೆ ಮರ ಕಣ್ಣಿಗೆ ಬಿದ್ದದ್ದೇ ಹಳೆಯದೆಲ್ಲ ಕ್ಷಣದಲ್ಲಿ ನೆನಪಾಗಿ, ಹಳೇ ಪ್ರಿಯತಮೆಯನ್ನು ಕಂಡಂತಾಗಿ, ಬೈಕು ನಿಲ್ಲಿಸಿ, ಆಫ್ ಮಾಡಿದೆ. ಫಕ್ಕನೆ ಮೌನ ಕವಿಯಿತು. ಈ ಮರದ ಬಗ್ಗೆ ಏನಾದರೂ ಬರೆಯಬೇಕು ಎನಿಸಿತು ನನಗೆ... ಮೇಲೆ ಸೊಂಪಾಗಿ ಚಪ್ಪರದಂತೆ ಒತ್ತರಿಸಿಕೊಂಡಿರುವ ಇದರ ಹಸಿರೆಲೆರಾಶಿಯನ್ನು ನೋಡುತ್ತಿದ್ದೆ...

ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ.

Wednesday, August 13, 2008

ಡೇರೆ-ಗುಲಾಬಿ

ಹೊಸ ಮಳೆಗಾಲ; ಹೊಸ ಮಳೆ:
ಮಣ್ಣಾಳದಿಂದೆದ್ದು ಬರುತ್ತದೆ ಡೇರೆ ಗಿಡ...
ದುಬುದುಬನೆ ಬೆಳೆಯುತ್ತದೆ ತಲೆಯೆತ್ತಿ
ಬಲಿಷ್ಟವಾಗುತ್ತ ಕಾಂಡ ಬಾಗದಂತೆ...
ಹೂವಾಗುತ್ತದೆ ತಿಂಗಳಲ್ಲಿ ಮೊಗ್ಗರಳಿ
ಪಕಳೆ ಪಕಳೆಯಲ್ಲೂ ಚೆಲ್ಲಿ ಚೆಲುವು.

ಅಂಗಳದಲ್ಲೀಗ ಇದರದೇ ರಾಜ್ಯಭಾರ:
ಒಡತಿ ಡೇರೆಯನ್ನೇ ಮುಡಿಯುತ್ತಾಳೆ
ದೇವರ ಗೂಡಿನಲ್ಲೂ ಇದರದೇ ಅಲಂಕಾರ
ದಾರಿಹೋಕರ ಕಣ್ಣಿಗೂ ಡೇರೆಯೇ ಚಂದ
ದುಂಬಿಗಂತೂ ಕಹಿ ಬೇರೆ ಹೂವ ಮಕರಂದ!

ವರುಷವಿಡೀ ಹೂ ಬಿಡುವ ಗುಲಾಬಿಗೆ ಹೊಟ್ಟೆಉರಿ!
ಮೈಮೇಲಿನ ಮಳೆಹನಿಯನೆಲ್ಲ ಕಣ್ಣೀರಂತೆ ಉದುರಿಸುತ್ತಾ
ಅಳು ಅಳು ಅಳುತ್ತದೆ ಗುಲಾಬಿ...
ತಾನೆಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದೆನೋ,
ಪ್ರೀತಿಯೆಲ್ಲ ಎಲ್ಲಿ ಬೇರೆಯವರ ಪಾಲಾಯಿತೋ
ಎಂದು ಕರುಬುತ್ತದೆ...
ಮುಳ್ಳುಮುಳ್ಳಿನ ತನ್ನ ಶರೀರ
ಕುರೂಪದಂತೆ ಭಾಸವಾಗುತ್ತದೆ;
ವಿಧಿಯನ್ನು ಶಪಿಸುತ್ತದೆ; ಡೇರೆಯನ್ನು ದ್ವೇಷಿಸುತ್ತದೆ;
'ಈ ಜಗತ್ತು ಮೃಗಜಲ; ಪ್ರೀತಿ ಪ್ರೇಮ ಎಲ್ಲಾ ಸುಳ್ಳು'
ಎಂದು ಹತಾಶ ದನಿಯಲ್ಲಿ ಉಸುರುತ್ತದೆ.

ಜಗತ್ತೂ ಸುಮ್ಮನಿದೆ ನೋಡುತ್ತ ಇವನ್ನೆಲ್ಲ
ಪ್ರತಿ ಅಂಗಳದಲ್ಲೂ ಇದ್ದದ್ದೇ ಈ ವರಾತ
ನೋಡೀ ನೋಡಿ ಬಂದಿದೆ ಅದಕ್ಕೂ ಬೇಸರ
ನಕ್ಕು ಸುಮ್ಮನಾಗುತ್ತದೆ ಅದು:

'ಹುಚ್ಚು ಹೂವೇ, ಈ ಡೇರೆಯ ಮೆರೆತ
ಹೆಚ್ಚೆಂದರೆ ಇದೊಂದು ತಿಂಗಳು...
ಆಮೇಲೆ ಬೇಕು ಮತ್ತೆ ನೀನೇ...
ವರುಷವಿಡೀ ಗೆಡ್ಡೆಯಾಗಿ ಅಡಗಿದ್ದು
ಹೀಗೆಲ್ಲೋ ಋತುವೊಂದರಲ್ಲಿ ಚಿಗಿತು ಬೆಳೆದು
ಸುಂದರಿಯಂತೆ ಕಂಡುಬಿಟ್ಟರೆ ಆಗಲಿಲ್ಲ...
ಮೈತುಂಬ ಮುಳ್ಳನಿಟ್ಟುಕೊಂಡೂ,
ಗ್ರೀಷ್ಮದ ಉರಿಬಿಸಿಲಲ್ಲೂ ಬಾಡದೇ,
ಕೊರೆವ ಹುಳುಗಳಿಗೂ ಜಗ್ಗದೇ
ಅರಳಿ ನಿಂತು ನಯನವನಾಕರ್ಷಿಸುವುದು ಇದೆಯಲ್ಲ-
ಅದು ದೊಡ್ಡದು... ಅದು ಶಾಶ್ವತ...
ನೆನಪಿಡು: ನೀನು ಗುಲಾಬಿ; ಪ್ರೀತಿಯ ಸಂಕೇತ'

ಗುಲಾಬಿಗೀಗ ಚೂರು ಸಮಾಧಾನ...
ಇಷ್ಟಗಲ ಹೂ ಬಿಟ್ಟುಕೊಂಡು ನಿಂತ ಡೇರೆ
ಬಜಾರಿಯಂತೆ ಕಾಣುತ್ತದೆ...
ತನ್ನ ಹೂವೋ, ಪುಟ್ಟಕೆ, ಕೆಂಪಗೆ, ಲಘುವಾಗಿ-
ಆಹಾ! ತನ್ನ ಸೌಂದರ್ಯಕ್ಕೆ ತಾನೇ ಮಾರುಹೋದಂತೆ
ತೂಗುತ್ತದೆ ಗುಲಾಬಿಗಿಡ...
ಕಾಯತೊಡಗುತ್ತದೆ ನಿರೀಕ್ಷೆಯಲ್ಲಿ:

ಡೇರೆ ಮುಡಿದು ಬೇಸರ ಬಂದು-
ಒಡತಿ ಬರುವುದ ತನ್ನೆಡೆಗೆ ಮತ್ತೆ;
ಮಳೆ ಮಧ್ಯದಲ್ಲೇ ನಿಂತು, ಡೇರೆಗಿಡ ಬಾಡಿ-
ದೇವರಿಗೆ ಗುಲಾಬಿಯೇ ಗತಿಯಾಗಿ ಮತ್ತೆ;
ಡೇರೆಯಂಕುರಗಳಲಿ ಖಾಲಿಯಾಗಿ ಜೇನು-
ತನ್ನನರಸಿ ಬರುವ ದುಂಬಿಗಾಗಿ ಮತ್ತೆ;
ದಾರಿಗರ ಕಣ್ಣಲ್ಲಿ ತಾನೇ ಬಿಂದುವಾಗಿ-
ಮತ್ತೆ!