Tuesday, December 15, 2009

ಹೂಮಾಲೆ

-ಸಂಜೆ-

ಬಿಡಿ ಮುಡಿಯುವಂತಿಲ್ಲ
ಅಬ್ಬಲಿಗೆಯನ್ನು
ಕಟ್ಟಲೇಬೇಕು ಮಾಲೆ

ಹನಿಸಿದ ನೀರ
ತುಂತುರುಗಳಿನ್ನೂ
ಇರುವಾಗಲೇ ಗುಚ್ಚುಗಳ
ಸಂದಿಯಲಿ

ಕೀಳಬೇಕು ಹೂವ
ಬಿಡಿಸಿ ತೊಟ್ಟ ಬಂಧ
ತುಂಬುವನಕ ಬುಟ್ಟಿ


-ರಾತ್ರಿ-

ಕಚ್ಚಿ ಹಲ್ಲಿಂದ
ಕತ್ತರಿಸಿದ ದಾರ
ಸುತ್ತಿ ಬೆರಳಿಂದ ಮಾಡಿ
ಗಂಟು

ನಾಲ್ಕು ನಾಲ್ಕು
ಆಚೆ ಈಚೆ
ಒಟ್ಟು ನೂರು ಹೂವು

ಹಳದಿ-ಕೆಂಪು
ಮಾಲೆ ಮೇಲೆ
ಕರಗಿ ಚಿಮಣಿ
ದೀಪ ಬೆಳಕು

ಹೂವ ಬಣ್ಣ ಹೆಚ್ಚಿತೆ?
ಚಳಿಯ ರಾತ್ರಿ,
ಸೆಳೆವ ನಿದ್ರೆ
ಬೆರಳ ವೇಗ ಕಸಿಯಿತೆ?

ಎಷ್ಟು ಮಾಲೆ
ಒಟ್ಟು ಎಂಬ
ಲೆಕ್ಕ ತಪ್ಪಿ ಹೋಯಿತೆ?


-ಉಷೆ-

ಬಿಳಿಯಂಗಿ
ನೀಲಿ ಲಂಗ
ಕೆಂಪು ರಿಬ್ಬನ್ನು
ಎರಡೂ ಜುಟ್ಟಿಗೆ

ಹೆದ್ದಾರಿಯಲಿಹ ಶಾಲೆಗೆ
ಮೈಲಿಯೆರಡು
ಕಾಲ್ನಡಿಗೆ

ಹಾಯುವ ಕಾರು
ತುಂಬಿದ ಬಸ್ಸು
ಸೆಳೆಯಲೆಬೇಕು
ಎಲ್ಲರ ಕಣ್ಣು

ಬಾಗಿದಂತೆ
ಮರದ ಟೊಂಗೆ
ಎತ್ತರದಲಿ
ಹಿಡಿದು ಕೈ

ತೂಗಬೇಕು ಕೂಗಬೇಕು
'ಮಾಲೆ ಆಣಿಗೆರಡು'
ನಿಂತರೊಂದು ವಾಹನ,
ಕೇಳ್ದ ಬೆಲೆಗೆ ಕ್ರಯವು

'ನೂರು ಹೂವ ಮಾಲೆ
ಮುಡಿದು ಮುಂದೆ ದಾರಿ ಸಾಗಿರಿ
ಚೈತ್ರಗಂಧ ಹಿಂದೇ ಬರುವ
ಮೋಡಿಯನ್ನು ನೋಡಿರಿ'


-ಮಧ್ಯಾಹ್ನ-

ಶಾಲೆಯ ಊಟದ ಸಮಯದಿ
ಈಕೆಗೆ ಏಕೋ ಏನೋ
ತರಾತುರಿ

ಮೂಲೆಯಲಿರುವ ಅಂಗಡಿಯಲ್ಲಿ
ಕೂತಿಹ ನಸುನಗು
ವ್ಯಾಪಾರಿ

ಕೂಡಿಹ ಚಿಲ್ಲರೆ ಕಾಸಿಗೆ
ಸಿಕ್ಕದೆ ಹೊಸ ರಿಬ್ಬನ್,
ಹೇರ್‌ಕ್ಲಿಪ್, ಪ್ಲಾಸ್ಟಿಕ್
ಗುಲಾಬಿ?

Wednesday, December 02, 2009

ಒಂದು ಹೆಸರಿಡದ ಪ್ರಬಂಧ

ಬಹುಶಃ ಈ ಕಷ್ಟವನ್ನು ಬಹಳಷ್ಟು ಜನ ಅನುಭವಿಸಿರುತ್ತಾರೆ. ಸ್ವಲ್ಪ ನಮಗೆ ಏನಾದರೂ ‘ಬರೆಯಲಿಕ್ಕೆ’ ಬರುತ್ತದೆ ಎಂದಾದರೆ ಸಾಕು, ಜನ ‘ನಮ್ಗೂ ಬರ್ಕೊಡು’ ಅಂತ ಮುತ್ತಿಕೊಂಡುಬಿಡುತ್ತಾರೆ.

ಊರಲ್ಲಿ ಅಪ್ಪನಿಗೆ ಇಂಥದೇ ಕಷ್ಟ ತಗುಲಿಹಾಕಿಕೊಳ್ಳುತ್ತಿತ್ತು. ಏನಾದರೂ ಅರ್ಜಿ ಬರೆಸುವುದಿದ್ದರೆ, ವರದಿ ಬರೆಸುವುದಿದ್ದರೆ, ಸನ್ಮಾನ ಪತ್ರ ಬರೆಸುವುದಿದ್ದರೆ ಜನ ಅಪ್ಪನ ಬಳಿ ಬರುತ್ತಿದ್ದರು. ಅಪ್ಪನ ಕೈಬರಹ ಸಹ ಅಷ್ಟೇ ಚಂದ ಇರುವುದರಿಂದ ಬರೆದದ್ದನ್ನು ಪ್ರಿಂಟ್ ಮಾಡಿಸುವ ಅವಶ್ಯಕತೆ ಸಹ ಇರುತ್ತಿರಲಿಲ್ಲ.

ಅರ್ಜಿ, ವರದಿ ಅಷ್ಟೇ ಅಲ್ಲದೇ ಅಪ್ಪನ ಬಳಿ ಬೋರ್ಡು, ಬ್ಯಾನರ್ರು, ಛತ್ರಿಯ ಮೇಲೆ ಹೆಸರು ಬರೆಸುವುದಕ್ಕೂ ಜನ ಬರುತ್ತಿದ್ದರು. ಕಪ್ಪು ಕೊಡೆಯ ಒಳಗೆ ಪೆನ್ಸಿಲ್ಲಿನಿಂದ ನೀಟಾಗೆರಡು ಗೆರೆ ಎಳೆದುಕೊಂಡು, ಜೀರೋ ಪಾಯಿಂಟ್ ಕುಂಚವನ್ನು ಪುಟ್ಟ ಆಯಿಲ್ ಪೇಯಿಂಟ್ ಡಬ್ಬಿಯೊಳಗೆ ಅದ್ದಿ ತೆಗೆದ ಬಣ್ಣದಿಂದ ‘ಜಿ. ನಾರಾಯಣರಾವ್, ದೊಡ್ಡೇರಿ’ ಅಂತಲೋ ‘ಸುಜಾತಾ ರಾಘವೇಂದ್ರ, ದೊಡ್ಡೇರಿ’ ಅಂತಲೋ ನಾಲಿಗೆ ಕಚ್ಚಿಕೊಂಡು, ತದೇಕಚಿತ್ತದಿಂದ ಬರೆಯುತ್ತಿದ್ದ ಅಪ್ಪ. ಪಕ್ಕದಲ್ಲಿ ಕೂತು ಅದನ್ನೇ ನೋಡುತ್ತಿದ್ದ ನನಗೆ ‘ಹಂದಾಡ್ಸಡ ಮತ್ತೆ.. ಅಪ್ಪ ಬೈತ’ ಅಂತ ಅಮ್ಮ ಅಡುಗೆಮನೆಯಿಂದ ಎಚ್ಚರಿಕೆ ಕೊಡುತ್ತಿದ್ದಳು. ಆದರೆ ಹಾಗೆ ನೋಡಿ ನೋಡಿಯೇ ಬಂತೋ ಅಥವಾ ಅಪ್ಪನ ಜೀನ್ಸಿನಲ್ಲೇ ಬಂದಿತ್ತೋ, ನನ್ನ ಕೈಬರಹವೂ ಮುದ್ದಾಗಿ ರೂಪುಗೊಂಡುಬಿಟ್ಟಿತು. ಶಾಲೆಯ ಪ್ರತಿವರ್ಷದ ‘ದುಂಡಕ್ಷರ ಸ್ಪರ್ಧೆ’ಯಲ್ಲೂ ನನಗೇ ಮೊದಲ ಬಹುಮಾನ ಬರುತ್ತಿದ್ದುದು. ಪರಿಣಾಮವಾಗಿ, ಈ ಬೋರ್ಡು ಬರೆಯುವ, ಛತ್ರಿ ಮೇಲೆ ಹೆಸರು ಬರೆಯುವ ಕೆಲಸ ಕೆಲವೇ ವರ್ಷಗಳಲ್ಲಿ ಅಪ್ಪನಿಂದ ನನಗೆ ವರ್ಗಾವಣೆಯಾಯ್ತು. ಅಪ್ಪನೇ ತನಗೆ ಯಾರಾದರೂ ಏನನ್ನಾದರೂ ಬರೆದುಕೊಡಲಿಕ್ಕೆಂದು ಕೊಟ್ಟದ್ದನ್ನು ನನಗೆ ವರ್ಗಾಯಿಸುತ್ತಿದ್ದ. ನಾನೂ ಖುಶಿಯಿಂದಲೇ ಅವನ್ನೆಲ್ಲ ಮಾಡುತ್ತಿದ್ದೆ.

ಆದರೆ ನಿಜವಾದ ಸಮಸ್ಯೆ ಶುರುವಾದದ್ದು ನಾನು ಕನ್ನಡದಲ್ಲಿ ಕತೆ-ಕವಿತೆ ಬೇರೆ ಬರೀತೀನಿ ಅನ್ನೋದು ಜನಕ್ಕೆ ಗೊತ್ತಾದಾಗ! ಈ ಕತೆ-ಕವಿತೆ ಬರಿಯೋರು ಇಡೀ ಪದಕೋಶವನ್ನೇ ಜಗಿದು ನುಂಗಿ ಜಠರದಲ್ಲಿಟ್ಟುಕೊಂಡಿರುತ್ತಾರೆ ಎಂದು ತಪ್ಪು ತಿಳಿದುಕೊಂಡಿರುವ ಜನ, ಅವಕಾಶ ಸಿಕ್ಕಾಗಲೆಲ್ಲ ನಮ್ಮನ್ನು ಪರೀಕ್ಷೆಗೊಡ್ಡುತ್ತಿರುತ್ತಾರೆ. ನಾವು ಯಾವುದೋ ಬ್ಯುಸಿಯಲ್ಲಿ ಮುಳುಗಿದ್ದಾಗ ಧಡಾರನೆ ಬಂದು, “ಈ ಶಬ್ದದ ಅರ್ಥ ಏನು?” ಅಂತಲೋ “ಇದಕ್ಕೆ ಕನ್ನಡದಲ್ಲಿ ಏನಂತಾರೆ?” ಅಂತಲೋ ನಾಲ್ಕು ಜನರ ಎದುರಿಗೆ ಕೇಳಿ ಅಲ್ಲೇ ನಿಂತುಬಿಡುತ್ತಾರೆ. ‘ಈ ನನ್ ಮಗನ ಮಾನ ಹರಾಜ್ ಹಾಕ್ಬೇಕು’ ಎಂದುಕೊಂಡು ಇಂತಹ ಸಂದರ್ಭಗಳನ್ನೇ ಕಾಯುತ್ತಿದ್ದ ನಮ್ಮ ನಸೀಬು ಆ ಕ್ಷಣದಲ್ಲೇ ಕೈ ಕೊಟ್ಟು, ನಾವು ಅದೆಷ್ಟೇ ಪ್ರಯತ್ನಪಟ್ಟರೂ ಆ ಶಬ್ದ ಗಂಟಲಿಂದ ಈಚೆಗೇ ಬರದೇ ಇರುವಂತೆ ಮಾಡುತ್ತದೆ. “ಹೆಹೆ, ಅದಾ.. ಹೆಹೆ..” ಎನ್ನುತ್ತಾ ನಾವು ಪೆಚ್ಚುನಗೆ ನಗುವಂತೆ ಮಾಡುತ್ತದೆ.

ಇರಲಿ, ಏನೋ ತಮಗೆ ಗೊತ್ತಿಲ್ಲದ್ದು ನಮಗೆ ಗೊತ್ತಿರಬಹುದು ಅಂತ ನಮ್ಮ ಬಳಿ ಬರುವ ಜನ ಇವರು. ಆದರೆ ನನಗೆ ವಿಪರೀತ ಕೋಪ ಬರುವುದು “ನನ್ ಹೆಂಡತಿಗೆ ಡೆಲಿವರಿ ಆಯ್ತು ಇವತ್ತು.. ಗಂಡು ಮಗು.. ‘ಸ’ ಅಕ್ಷರದಿಂದ ಶುರು ಆಗೋ ಒಂದು ಚಂದದ ಹೆಸರು ಹುಡುಕ್ಕೊಡು ಪ್ಲೀಸ್..” ಎನ್ನುತ್ತಾ ಯಾರಾದರೂ ಬಂದಾಗ. ಅಲ್ಲಾ ಸಾರ್, ಡೆಲಿವರಿ ಆಗಿರೋದು ಅವನ ಹೆಂಡತಿಗೆ, ಡೆಲಿವರಿ ಆಗೋಹಾಗೆ ಮಾಡಿರೋದು ಅವನು, ಈಗ ‘ಸ’ ಅಕ್ಷರದಿಂದ ಶುರುವಾಗೋ ಹೆಸರು ಹುಡುಕೋ ಕೆಲಸ ಮಾತ್ರ ನನಗೆ ವಹಿಸೋದು ಯಾವ ರೀತೀಲಿ ಸರಿ? ಅಲ್ಲಾ, ಅದರ ಅರ್ಥ ಬೇರೆ ಯಾವುದಾದರೂ ಕೆಲಸ ನಂಗೆ ವಹಿಸ್ಬೇಕಿತ್ತು ಅಂತ ಅಲ್ಲ, ಡೋಂಟ್ ಮಿಸ್ಟೇಕ್ ಮಿ, ನಾ ಹೇಳಿದ್ದು, ಈ ಜವಾಬ್ದಾರಿ-ತಲೆಬಿಸಿ ನನಗ್ಯಾಕೆ ಅಂತ? ಅದನ್ನೆಲ್ಲಾ ಅವನ ಬಳಿ ಹೇಳೋ ಹಾಗಿಲ್ಲ, ಏನೋ ಪಾಪ, ಅಪರೂಪಕ್ಕೆ ಅಪ್ಪ ಆಗಿದಾನೆ, ಫುಲ್ ಜೋಶಲ್ಲಿ ಇದಾನೆ, ನಾನು ಕನ್ನಡ ರತ್ನಕೋಶ ತೆರೆದಾದರೂ, ಗೂಗಲ್ ಸರ್ಚ್ ಮಾಡಿಯಾದರೂ ಅವನು ಹೇಳಿದ ಅಕ್ಷರದಿಂದ ಶುರು ಆಗೋ ಹೆಸರು ಹುಡುಕಿ ಹೇಳಬೇಕು.

ಇದೂ ಓಕೆ. ಮುಂದ್ಯಾವತ್ತೋ ‘ಅಂಕಲ್’ ಅಂತ ಮುದ್ದು ದನಿಯಿಂದ ನನ್ನನ್ನು ಕರೆಯಬಹುದಾದ ಮಗುವೊಂದಕ್ಕೆ ಹೆಸರು ಕೊಟ್ಟೆನಲ್ಲಾ ಅಂತ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಕೆಲ ಗೆಳೆಯರು ಅದೆಂತಹ ಕೆಳ ಮಟ್ಟಕ್ಕೆ ಇಳಿಯುತ್ತಾರೆ ಅಂದ್ರೆ, ‘ನನ್ ಗರ್ಲ್‌ಫ್ರೆಂಡಿಗೆ ಕಳ್ಸೋಕೆ ಒಂದು ಒಳ್ಳೇ ಎಸ್ಸೆಮ್ಮೆಸ್ ಬರ್ಕೊಡೋ’ ಅಂತೆಲ್ಲ ಕೇಳುತ್ತಾರೆ. ಸ್ವಾಮೀ, ನಮ್ ನಮ್ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಕಳುಹಿಸ್ಕೊಂಡು ಇದ್ರೆ ಸಾಕಾಗಿರತ್ತೆ, ಇನ್ನು ಬೇರೆಯವರ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಬರೆದುಕೊಡುವ ಕಷ್ಟವನ್ನೂ ನಾವೇ ತೆಗೆದುಕೊಳ್ಳಬೇಕು ಎಂದರೆ! ‘ಒಬ್ಳಿಗೆ ಕಳ್ಸಿದ್ನೇ ಮತ್ತೊಬ್ಳಿಗೆ ಕಳುಹಿಸಿದ್ರೆ ಆಯ್ತು, ಅವ್ರಿಗ್ ಹೆಂಗ್ ಗೊತ್ತಾಗತ್ತೆ?’ಅಂತ ನೀವು ಕೇಳಬಹುದು, ಇಲ್ಲಾ ಗುರುಗಳೇ, ಅದು ಸಿಕ್ಕಾಪಟ್ಟೆ ಡೇಂಜರಸ್ಸು! “ನೋಡೇ, ನನ್ ಬಾಯ್‌ಫ್ರೆಂಡ್ ಎಷ್ಟ್ ಚಂದ ಎಸ್ಸೆಮ್ಮೆಸ್ ಕಳ್ಸಿದಾನೆ.. ಹಿ ಲವ್ಸ್ ಮಿ ಲೈಕ್ ಎನಿಥಿಂಗ್” ಎನ್ನುತ್ತಾ ತನ್ನ ರೂಮ್‌ಮೇಟಿನ ಮುಖಕ್ಕೆ ಮೊಬೈಲಿನ ಪರದೆಯನ್ನು ಇವಳು ಒಡ್ಡಿದ್ದೇ ತಡ, “ಹೆಹ್! ನಂಗೂ ಬಂದಿದೆ ಆ ಎಸ್ಸೆಮ್ಮೆಸ್. ನನ್ ಬಾಯ್‌ಫ್ರೆಂಡ್ ಕಳ್ಸಿರೋದು” ಎಂದವಳು ಮೂಗು ಮುರಿಯುತ್ತಾಳೆ. ಯು ಅಂಡರ್‌ಸ್ಟೂಡ್ ದ ಕೇಸ್ ರೈಟ್? ನಾನು ನನ್ ಗರ್ಲ್‌ಫ್ರೆಂಡಿಗೆ ಕಳುಹಿಸಿದ್ದ ಎಸ್ಸೆಮ್ಮೆಸ್ಸನ್ನೇ ಗೆಳೆಯನಿಗೂ ‘ಪಾಪ, ಅವನ್ ಗರ್ಲ್‌ಫ್ರೆಂಡಿಗೂ ಕಳುಹಿಸಿಕೊಳ್ಳಲಿ’ ಅಂತ ಫಾರ್ವರ್ಡ್ ಮಾಡಿದ್ದೇ ಆಗಿದ್ದು ತಪ್ಪು! ನೀತಿಯೆಂದರೆ, ಒಂದೇ ಹಾಸ್ಟೆಲ್ಲಿನಲ್ಲಿರೋ ಹುಡುಗಿಯರನ್ನು ಲವ್ ಮಾಡುತ್ತಿರುವ ಇಬ್ಬರು ಗೆಳೆಯರು ಹುಷಾರಾಗಿರಬೇಕು.

ಸರಿ, ಇವೆಲ್ಲ ಟೆಕ್ನಿಕಲ್ ಆಸ್ಪೆಕ್ಟ್ಸ್ ಆಯ್ತು. ಹೇಗೋ, ಸಂಭಾಳಿಸಬಹುದು ಅಂದುಕೊಳ್ಳೋಣ. ಈಗ ಕೆಲ ತಿಂಗಳ ಹಿಂದೆ ನನ್ನ ಎಕ್ಸ್-ಕಲೀಗೊಬ್ಬ ಫೋನ್ ಮಾಡಿದ್ದ. “ಸುಶ್ರುತ್, ನಮ್ಮನೆಗೊಂದು ಹೊಸ ನಾಯಿಮರಿ ತಂದ್ವಿ. ಅದಕ್ಕೆ ಇಡ್ಲಿಕ್ಕೆ ಒಂದು ಹೆಸರು ಹೇಳ್ತೀರಾ ಪ್ಲೀಸ್? ಕನ್ನಡದ್ದು ಬೇಕು. ಇಂಗ್ಲೀಷಿಂದ್ರ ಥರ ಇರ್ಬೇಕು. ಹೊಸಾ ಥರಾ ಇರ್ಬೇಕು. ಪ್ರಕೃತಿಗೆ ಸಂಬಂಧಿಸಿದ್ದಾಗಿರ್ಬೇಕು. ಕರೀಲಿಕ್ಕೆ ಈಜಿ ಇರ್ಬೇಕು. ಹೆಣ್ಣು ನಾಯಿ” ಅಂತ ಅರ್ಜಿಯಿಟ್ಟ. ನಾಯಿಗೆ ಹೆಸರಿಡುವುದು ಎಷ್ಟು ಕಷ್ಟದ ವಿಷಯ ಅಂತ ನನಗೆ ಅರಿವಾದದ್ದು ಆಗಲೇ. ನೋಡಿ, ಮೊದಲನೆಯದಾಗಿ ಅದು ಕನ್ನಡದ ಶಬ್ದ ಆಗಿರಬೇಕು, ಆದರೂ ಇಂಗ್ಲೀಷಿನದರಂತೆ ಧ್ವನಿಸಬೇಕು, ಹಿಂದೆಲ್ಲೂ ಕೇಳಿಲ್ಲ ಎನಿಸಬೇಕು, ಪರಿಸರಕ್ಕೆ ಸಂಬಂಧಿಸಿರಬೇಕು, ಎರಡ್ಮೂರು ಅಕ್ಷರಗಳಲ್ಲಿರಬೇಕು, ಸ್ತ್ರೀಲಿಂಗವಾಗಿರಬೇಕು -ಇಷ್ಟೆಲ್ಲಾ ಆಗಿದ್ದೂ ಅದು ನಾಯಿ ಹೆಸರು ಅಂತ ಗೊತ್ತಾಗಬೇಕು! ನಾಯಿಗೆ ಕವಿತಾ, ಕಾವೇರಿ, ಕನಕಮ್ಮ, ಕರುಮಾರಿಯಮ್ಮ ಅಂತೆಲ್ಲ ಹೆಸರಿಡಲಿಕ್ಕೆ ಆಗುವುದಿಲ್ಲ. ಮನುಷ್ಯರ ಹೆಸರೇ ಬೇರೆ ನಾಯಿನೇಮೇ ಬೇರೆ. ಬುದ್ದೀನೆಲ್ಲಾ ಖರ್ಚು ಮಾಡಿ, ಮಿನ್ನು, ಸರು, ಕೀಚು, ಬಾನು, ವರ್ಣಿ, ವೀಚಿ, ಸಿಂಪಿ -ಇತ್ಯಾದಿ ಹೆಸರುಗಳನ್ನು ಟೈಪಿಸಿ ಕಳುಹಿಸಿದೆ. ಆಮೇಲೊಮ್ಮೆ ಅವರ ಮನೆಗೆ ಹೋದಾಗ ಪೋರ್ಟಿಕೋದಲ್ಲಿ ಕಟ್ಟಿಹಾಕಿದ್ದ ನಾಯಿಯ ಬಳಿಗೆ ಕರೆದೊಯ್ದ ಅವನು, “ಸಿಂಪೀ, ಇವರೇ ನೋಡು, ನಿಂಗೆ ಹೆಸರು ಕೊಟ್ಟವರು” ಅಂತ ನನ್ನನ್ನು ನಾಯಿಗೆ ಪರಿಚಯಿಸಿಕೊಟ್ಟ. ಸಿಂಪಿ ಕೆಕ್ಕರಿಸಿಕೊಂಡು ನೋಡುತ್ತಿತ್ತು.

ಅದಾಗಿ ಕೆಲ ದಿವಸಕ್ಕೇ, ಮೈಸೂರಿನ ಗೆಳೆಯನೊಬ್ಬ ಫೋನಿಸಿ “ಗುರೂ, ಫ್ರೀ ಇದೀಯಾ?” ಅಂತ ಕೇಳಿದ. “ಹೂಂ, ಹೇಳು ಗುರು” ಎಂದೆ. “ಒಂದು ಶವವಾಹನಕ್ಕೆ ಹೆಸರು ಹೇಳಯ್ಯಾ” ಅಂತ ಕೇಳಿದ. ಕೂತಿದ್ದ ಜಾಗದಿಂದೊಮ್ಮೆ ಜಿಗಿದು ಕೂತೆ! “ಏನಂದೇ?” ಅಂತ ಮತ್ತೊಮ್ಮೆ ಕೇಳಿದೆ. “ಹೂಂ ಗುರು. ನಮ್ಮ ಟ್ರಸ್ಟ್ ಹೆಸರಲ್ಲಿ ಮೈಸೂರಿಗೆ ಒಂದು ಉಚಿತ ಶವವಾಹನ ವ್ಯವಸ್ಥೆ ಮಾಡ್ಬೇಕು ಅಂತ ನಮ್ ತಂದೆ ಡಿಸೈಡ್ ಮಾಡಿದಾರೆ. ಅದಕ್ಕೊಂದು ಚಂದದ ಹೆಸರು ಬೇಕಾಗಿತ್ತು. ನಿನ್ ನೆನಪಾಯ್ತು, ಹಾಗೇ ಕಾಲ್ ಮಾಡ್ದೆ” ಅಂದ. ನಾನು ಕನ್ನಡಪ್ರೇಮಿಯೂ ಬರಹಗಾರನೂ ಆದುದರ ಬಗ್ಗೆ ಮೊದಲ ಬಾರಿ ವಿಷಾದ ಪಟ್ಟುಕೊಂಡದ್ದೇ ಆವಾಗ! ಹೋಗೀ ಹೋಗಿ ಶವವಾಹನಕ್ಕೆ ಹೆಸರಿಡಬೇಕಾದರೆ ಜನಕ್ಕೆ ನನ್ನ ನೆನಪಾಗುವ ಹಾಗೆ ಆಯ್ತಲ್ಲಾ, ಛೇ ಅನ್ನಿಸಿತು. ಉರಿದು ಉಕ್ಕಿ ಬರುತ್ತಿದ್ದ ದುಃಖ-ಸಿಟ್ಟುಗಳನ್ನು ತಡೆಹಿಡಿದು, ‘ಕೈಲಾಸಮುಖಿ’, ‘ವೈಕುಂಟಯಾತ್ರೆ’, ‘ಮುಕ್ತಿಬಂಡಿ’, ‘ಸಮಾಧಿಯೆಡೆಗೆ’ ಅಂತೆಲ್ಲ ಏನೇನೋ ಅವನಿಗೆ ಸೂಚಿಸಿದೆ. ಎಲ್ಲಾ ಕೇಳಿಸಿಕೊಂಡಾದಮೇಲೆ, “ಅವೆಲ್ಲಾ ಆಲ್ರೆಡಿ ಇದಾವೆ ಗುರೂ, ಏನಾದ್ರೂ ಕ್ರಿಯೇಟಿವ್ವಾಗಿ ಹೇಳೋ” ಅಂದ. ದುಃಖ-ಸಿಟ್ಟು ಉಕ್ಕಿ ಬಿದ್ದೇಬಿಟ್ಟಿತು: “ಹೆಣ ಒಯ್ಯೋ ಗಾಡಿಯಲ್ಲೂ ಎಂಥಾ ಕ್ರಿಯೇಟಿವಿಟಿನಯ್ಯಾ? ನಂಗೇನೂ ಹೊಳೀತಿಲ್ಲ. ಏನಾದ್ರೂ ಇಟ್ಕೊಂಡು ಸಾಯಿ” ಅಂತ ಕಿರುಚಿ ಫೋನಿಟ್ಟಿದ್ದೆ.

ಅವತ್ತಿಡೀ ಮೂಡು ಹಾಳಾಗಿಯೇ ಇತ್ತು. ಇನ್ನು ಮೇಲೆ ಯಾರೇ ಇಂತಹ ಸಹಾಯ ಕೇಳಿದರೂ ಮಾಡಿಕೊಡಬಾರದು ಅಂತ ತೀರ್ಮಾನಿಸಿದೆ. ಮಾಡಿಕೊಡುವುದಿದ್ದರೂ ‘ಛಾರ್ಜ್’ ಮಾಡಬೇಕು ಅಂತ ಅಂದುಕೊಂಡೆ. ಈ ತರಹದ ಸಲಹೆ ನೀಡುವುದನ್ನೇ ನನ್ನ ವೃತ್ತಿಯಾಗಿ ಮಾಡಿಕೊಂಡರೆ ಹೇಗೆ ಅಂತಲೂ ಯೋಚಿಸಿದೆ. ಕೊನೆಗೆ, ಉಕ್ಕಿಬಿದ್ದಿದ್ದ ದುಃಖ-ಸಿಟ್ಟುಗಳು ತಣ್ಣಗಾದಮೇಲೆ, ‘ಇವೆಲ್ಲಾ ಏನು ಬಹಳ ದೊಡ್ಡ ಕೆಲಸಗಳಾ? ಅಥವಾ ಹೀಗೆ ಕೊಡುವ ಸಣ್ಣಪುಟ್ಟ ಸಲಹೆಗಳಿಂದ ನಾನೇನಾದರೂ ಕಳೆದುಕೊಳ್ಳುತ್ತೇನಾ? ಇವೇನು ಮಹದುಪಕಾರಗಳಾ?’ ಅಂತೆಲ್ಲ ನನಗೆ ನಾನೇ ಪ್ರಶ್ನಿಸಿಕೊಂಡು, ಸಿಕ್ಕ ಉತ್ತರ ಕಂಡು ನಾಚಿಕೊಂಡು, ‘ನಾನು ಮಾಡುತ್ತಿರುವ ಸಾವಿರಾರು ಪಾಪಕಾರ್ಯಗಳಿಂದಾಗಿ ನರಕದಲ್ಲಿ ನನಗೆ ವಿಧಿಸಬಹುದಾದ ಶಿಕ್ಷೆಯಲ್ಲಿ ಸ್ವಲ್ಪವಾದರೂ ಕನ್ಸಿಷನ್ ದೊರೆತೀತು ಬಿಡು’ ಅಂತ ಸಮಾಧಾನ ಮಾಡಿಕೊಂಡಿದ್ದೆ.

ಇವೆಲ್ಲ ನೆನಪಾದದ್ದು ಮೊನ್ನೆ ದುಬಾಯಿಯಲ್ಲಿರುವ ಗೆಳೆಯನೊಬ್ಬ ತನ್ನ ಮಗುವಿನ ಫೋಟೋ ಮೇಯ್ಲ್ ಮಾಡಿ ‘ಇದನ್ನ ತರಂಗಕ್ಕೆ ಕಳುಹಿಸ್ತಾ ಇದೀನಿ. ಇದಕ್ಕೊಂದು ಕ್ಯಾಪ್ಷನ್ ಲೈನು ಕೊಡು’ ಅಂತ ಕೇಳಿದಾಗ. ಆದರೆ ಈ ಸಲ ನಾನು ಹೆಚ್ಚಿಗೆ ರಿಸ್ಕ್ ತೆಗೆದುಕೊಳ್ಳದೇ ಆ ಮೇಯ್ಲನ್ನು ನನ್ನ ಕೆಲ ಕನ್ನಡ ಬಲ್ಲ ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ‘ಇಂತಹ’ ಕೆಲಸಗಳಲ್ಲಿ ಹುಡುಗಿಯರು -ಅದರಲ್ಲೂ ಗೃಹಿಣಿಯರು- ಬಹಳ ಚುರುಕಿರುತ್ತಾರೆ ಎಂಬುದು ನನ್ನ ನಂಬುಗೆಯಾಗಿತ್ತು. ನಂಬುಗೆ ಉಳಿಯಿತು ಕೂಡಾ, ಅವರ ರಿಪ್ಲೇಗಳನ್ನು ನೋಡಿ. ಆ ಎಲ್ಲ ಪ್ರತಿಕ್ರಿಯೆಗಳನ್ನೂ ಒಟ್ಟಿಗೆ ಹಾಕಿ ದುಬಾಯಿ ಗೆಳೆಯನಿಗೆ ಕಳುಹಿಸಿದೆ. ಕೊನೆಗವನು ಅದರಲ್ಲಿ ಯಾವ ಸಾಲು ಆಯ್ದು ಕಳುಹಿಸಿದನೋ, ಅದು ತರಂಗದಲ್ಲಿ ಪ್ರಕಟವಾಯ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಇದನ್ನೇ ಬಂಡವಾಳವಾಗಿಸಿಕೊಂಡು ಬರೆದ ಈ ಪ್ರಬಂಧವನ್ನು, ಹೆಸರಿಡದೇ, ತರಂಗಕ್ಕೇ ಕಳುಹಿಸುತ್ತಿದ್ದೇನೆ. ಇನ್ನೆಲ್ಲಾ ಸಂಪಾದಕರ ಕಷ್ಟ.

[ಇದನ್ನ ಹೀಗೇ ತರಂಗಕ್ಕೆ ಕಳುಹಿಸಿದ್ದೆ. ಆದ್ರೆ ಉದಯವಾಣಿಯವರು ಇದನ್ನು ಅಪಹರಿಸಿ ತಮ್ಮ ಸಾಪ್ತಾಹಿಕ ಸಂಪದದಲ್ಲಿ ಹಾಕಿಕೊಂಡಿದ್ದಾರೆ (of course, ಹೆಸರಿಡದೆ; ಕೊನೆಯ ಪ್ಯಾರಾ ಕಿತ್ತುಹಾಕಿ!). ಅವರೆಡೆಗೆ ನಂದೊಂದು ಕೇಜಿ ಕೋಪ. :x ;) ]