Wednesday, September 08, 2010

ಗೆಜ್ಜೆವಸ್ತ್ರ

ಕಳೆದ ವರ್ಷದ ಗಣೇಶ ಚತುರ್ಥಿಯಂದು ಅಜ್ಜನ ಮನೆಗೆ ಹೋದಾಗ, “ಸತತ ಇಪ್ಪತ್ತಾರನೇ ವರ್ಷದ ಅಟೆಂಡೆನ್ಸು ಇದು” ಅಂತ ಅಪ್ಪ ಹೇಳಿದಾಗಲೇ ನನಗೂ ಅರಿವಾದದ್ದು ಅದು. ‘ಅರೆ, ಹೌದಲ್ಲಾ!’ ಎಂದುಕೊಂಡೆ. “ಮೊದಲನೇ ಸಲ ಹೊಸಹಬ್ಬಕ್ಕೆ ಅಂತ ನಿಂಗ ಗಂಡ-ಹೆಂಡ್ತಿ ಬಂದಿದ್ದೇ ಇನ್ನೂ ಮೊನ್‌ಮೊನ್ನೆ ಬಂದಂಗಿದ್ದು ನೋಡು ಭಾವಾ” ಅಂತ ಮಾವ ನೆನಪು ಮಾಡಿಕೊಂಡ. ಅದರ ಮುಂದಿನ ಸಲದ ಹಬ್ಬಕ್ಕೆ ಬಹುಶಃ ಅಮ್ಮ ನನ್ನನ್ನೂ ಕರೆದುಕೊಂಡು ಹೋಗಿದ್ದಳಿರಬೇಕು ಅಂತ ಹೊಳೆದು ನಾನು ನಸುನಕ್ಕೆ.

ಕಳೆದ ಇಪ್ಪತ್ತಾರು ವರ್ಷಗಳಿಂದ ಒಂದು ವರ್ಷವೂ ತಪ್ಪಿಸದೆ ಅಪ್ಪ-ಅಮ್ಮ ಅಥವಾ ನಾನು-ಅಮ್ಮ ಅಥವಾ ನಾನು-ಅಪ್ಪ ಅಥವಾ ನಾವು ಮೂವರೂ ಅಥವಾ ಕನಿಷ್ಟ ನಮ್ಮಲ್ಲಿ ಯಾರಾದರೂ ಒಬ್ಬರು, ಚೌತಿ ಹಬ್ಬದ ದಿನ ನನ್ನ ಅಜ್ಜನ ಮನೆಗೆ ಹೋಗೇ ಹೋಗುತ್ತಿದ್ದೇವೆ. ಯಾಕೆಂದರೆ, ಅಜ್ಜನ ಮನೆಯಲ್ಲಿ ಚೌತಿ ಹಬ್ಬಕ್ಕೆ ಗಣಪತಿ ತರುತ್ತಾರೆ. ಮತ್ತು ನಮ್ಮ ಮನೆಯಲ್ಲಿ ತರುವುದಿಲ್ಲ.

ಚೌತಿ ಹಬ್ಬಕ್ಕೆ ಒಂದು ತಿಂಗಳಿದೆ ಎನ್ನುವಾಗಲೇ ಅಮ್ಮನಿಗೆ ಗಡಿಬಿಡಿ ಶುರುವಾಗುತ್ತಿತ್ತು. ಅದು ಹಬ್ಬಕ್ಕೆ ನೆಂಟರು ಬರುತ್ತಾರೆ ಅಂತಲೋ, ಮನೆ ಸುತ್ತಮುತ್ತ ಸ್ವಚ್ಚ ಮಾಡಬೇಕು ಅಂತಲೋ, ಚಕ್ಕುಲಿ-ಪಂಚಕಜ್ಜಾಯ ಮಾಡಲು ಸಾಮಗ್ರಿ ತರಿಸಬೇಕು ಅಂತಲೋ ಅಲ್ಲ. ಬದಲಿಗೆ, ಅಮ್ಮನಿಗೆ ಚೌತಿ ಬರುವುದರೊಳಗೆ ‘ಗೆಜ್ವಸ್ತ್ರ’ ಮಾಡಿ ಮುಗಿಸಬೇಕಿರುತ್ತಿತ್ತು. ಪ್ರತಿವರ್ಷದ ಹಬ್ಬಕ್ಕೂ ಅಮ್ಮ ತನ್ನ ತವರುಮನೆಗೆ ಬರುವ ಗಣಪತಿಗೆಂದು ಗೆಜ್ವಸ್ತ್ರ ತಯಾರಿಸುತ್ತಿದ್ದಳು. ಏಕೆಂದರೆ, ಮಾವಂದಿರಿಗಿನ್ನೂ ಮದುವೆಯಾಗಿರಲಿಲ್ಲ. ಅಮ್ಮಮ್ಮನಿಗೆ ವಯಸ್ಸಾಗಿತ್ತು. “ಅವ್ಳಿಗೆ ಹರಿತಲ್ಲೆ. ದಿನಾ ಅಡುಗೆ-ಕಸಮುಸುರೆ ಮಾಡಹೊತ್ತಿಗೇ ಸಾಕ್‌ಸಾಕಾಗಿರ್ತು. ಚೌತಿ ಬಂತು ಅಂದ್ಮೇಲೆ ತಯಾರಿ ಬೇರೆ ಮಾಡ್ಕ್ಯಳವು. ಅಂತಾದ್ರಗೆ ಗೆಜ್ವಸ್ತ್ರ ಹೊಸ್ಕೋತ ಕೂರಕ್ಕೆ ಟೈಮ್ ಎಲ್ಲಿದ್ದು ಅವ್ಳಿಗೆ? ಅದ್ಕೇ ನಾನೇ ಮಾಡ್ಕೊಡ್ತಿ” ಅಂತ ಅಮ್ಮ, ಯಾರೂ ಕೇಳದಿದ್ದರೂ ತನಗೇ ಸಮರ್ಥಿಸಿ ಹೇಳಿಕೊಳ್ಳುತ್ತಿದ್ದಳು.

ಗೆಜ್ವಸ್ತ್ರ ಎಂದರೆ ಗೆಜ್ಜೆವಸ್ತ್ರ. ಹತ್ತಿಯಿಂದ ಮಾಡಿದ, ಬಿಂದಿ, ಬೇಗಡೆ, ಸಂತ್ರದ ತಗಡು, ಅರಿಶಿಣ-ಕುಂಕುಮಗಳಿಂದ ಅಲಂಕರಿಸಿದ ಮಾಲೆ. ಹತ್ತಿಯನ್ನು ಎಳೆಯೆಳೆಯಾಗಿ ಬಿಡಿಸಿ, ಮಣೆಯ ಮೇಲಿಟ್ಟು ಹೊಸೆದು, ಅದರಲ್ಲೇ ಹೂವುಗಳನ್ನು ಮಾಡಿ, ಹೊಸೆದ ದಾರದಿಂದ ಸುತ್ತುವರೆಸಿ, ಹೂವುಗಳ ಒಡಲಲ್ಲಿ ಬಣ್ಣಬಣ್ಣದ ಸಂತ್ರದ ತಗಡನ್ನು ಕತ್ತರಿಸಿ ಅಂಟಿಸಿ, ಬಳ್ಳಿಗಳಿಗೆ ಹಸಿರು ಬಣ್ಣ ಹಚ್ಚಿ, ಬಿಂದಿಗಳನ್ನು ಅಲ್ಲಲ್ಲಿ ಇಟ್ಟು -ಒಯ್ದು ಗಣಪತಿಯ ಕೊರಳಿಗೆ ಹಾಕಿದರೆ, ಗಣಪತಿ ಚೆಂದವೋ ಗೆಜ್ಜೆವಸ್ತ್ರ ಚೆಂದವೋ? ಉತ್ತರ ಹುಡುಕುವ ಗೊಂದಲದಲ್ಲಿ ಮನಸು ತನ್ಮಯವಾಗಬೇಕು.

ಅಮ್ಮ ಮಾಡಿದ ಗೆಜ್ಜೆವಸ್ತ್ರ ಅವಳ ತವರೂರಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಚೌತಿಯ ಸಂಜೆ ಗಣಪತಿ ನೋಡಲು ಬರುವ ಗುಂಪಿನಲ್ಲಿ ಹಲವರು ಬರುವುದು ಗಣಪತಿ ನೋಡಿ ನಮಸ್ಕರಿಸಿ ಅವನ ಕೃಪೆಗೆ ಪಾತ್ರರಾಗಲಲ್ಲ; ಗಣಪತಿಗೆ ಮಾಡಿದ ಅಲಂಕಾರ ನೋಡಲು. ಗಂಡಸರು-ಮಕ್ಕಳಿಗೆ ಯಾರ್ಯಾರ ಮನೆಯಲ್ಲಿ ಎಷ್ಟು ದೊಡ್ಡ ಮೂರ್ತಿ ತಂದಿದ್ದಾರೆ, ಮಂಟಪ ಹೇಗೆ ಕಟ್ಟಿದ್ದಾರೆ, ದೀಪಾಲಂಕಾರ ಹೇಗೆ ಮಾಡಿದ್ದಾರೆ ಎಂಬುದು ಮುಖ್ಯವಾದರೆ, ಹೆಂಗಸರಿಗೆ ಮಂಟಪಕ್ಕೆ ಎಷ್ಟು ಹೂವು ಹಾಕಿದ್ದಾರೆ, ಪಂಚಕಜ್ಜಾಯದ ರುಚಿ ಹದವಾಗಿದೆಯಾ, ಮನೆಯೊಡತಿ ಎಂಥ ಸೀರೆ ಉಟ್ಟಿದ್ದಾಳೆ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಈ ವರ್ಷ ಯಾವ ಥರದ ಗೆಜ್ಜೆವಸ್ತ್ರ ಮಾಡಿದ್ದಾರೆ ಎಂಬುದು ಗಮನಿಸುವ ವಿಷಯವಾಗುತ್ತದೆ.  “ಈ ವರ್ಷ ಏನ್ ಚನಾಗ್ ಮಾಡಿದ್ಲೇ ಗೆಜ್ವಸ್ತ್ರ ಗೌರೀ.. ದೃಷ್ಟಿ ಆಪಹಂಗೆ ಇದ್ದು” ಅಂತ ದೇವಕಕ್ಕ ಹೇಳಿದರೆ, “ಹೂವಿನ್ ಡಿಸೈನ್ ಅಂತೂ ಹೈಕ್ಲಾಸ್ ಬಿಡು! ಅಷ್ಟ್ ನಾಜೂಕಾಗಿ ಮಾಡಕ್ಕೆ ಎಷ್ಟು ದಿನ ತಗೈಂದ್ಲೇನ” ಅಂತ ಸುಮತಿ ಅತ್ತೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಳು.

ಚೌತಿ ಬಂತೆಂದರೆ ಅಮ್ಮನ ಗಡಿಬಿಡಿಯ ಜೊತೆ ನನ್ನ ಸಂಭ್ರಮವೂ ಸೇರಿಕೊಳ್ಳುತ್ತಿತ್ತು. ಸಾಮಾನ್ಯವಾಗಿ ರಾತ್ರಿ ಮನೆ ಕೆಲಸವನ್ನೆಲ್ಲ ಬೇಗಬೇಗನೆ ಮುಗಿಸಿ, ಕಸಮುಸುರೆ ಪೂರೈಸಿ, ಹಾಲಿಗೆ ಹೆಪ್ಪನ್ನೂ ಹಾಕಿದ ಮೇಲೆ ಅಮ್ಮ ಗೆಜ್ಜೆವಸ್ತ್ರದ ತಯಾರಿಗೆ ಕೂರುತ್ತಿದ್ದುದು. ಪ್ರತಿರಾತ್ರಿ ಕಣ್ಣಿಗೆ ನಿದ್ರೆ ಹತ್ತುವವರೆಗೆ ಗೆಜ್ವಸ್ತ್ರ ಮಾಡುವ ಕುಶಲ ಕೆಲಸದಲ್ಲಿ ಅಮ್ಮ; ಅವಳ ಪಕ್ಕ ಶಾಲೆಯಲ್ಲಿ ಕೊಟ್ಟಿರುತ್ತಿದ್ದ ಹೋಮ್‌ವರ್ಕ್ ಮಾಡುತ್ತ ಕೂತಿರುತ್ತಿದ್ದ ನಾನು. ದೇವರ ಮುಂದೋ, ಸೆಖೆಯಾಗುತ್ತಿದ್ದರೆ ತೆರೆದ ಹಿತ್ಲಕಡೆ ಬಾಗಿಲಿನ ಬಳಿಯೋ ಕೂತು ಕಾರ್ಯತತ್ಪರರಾದ ನಮ್ಮಿಬ್ಬರ ನಡುವಣ ಮೌನಕ್ಕೆ, ಹಾಳೆಯ ಮೇಲೆ ಓಡುವ ನನ್ನ ಪೆನ್ನು ಮತ್ತು ಗುಚ್ಚಿನಿಂದ ಎಳೆಯುವಾಗ ಹತ್ತಿಯೆಳೆಗಳು ಮೃದುಮಧುರ ರವವನ್ನು ಬೆರೆಸುತ್ತಿದ್ದವು. ಎರಡು ಲೆಕ್ಕ ಬಿಡಿಸಿಯೋ ನಾಲ್ಕು ಸಾಲು ಬರೆದೋ ನಾನು ಕತ್ತೆತ್ತಿ ನೋಡಿದರೆ ಅಮ್ಮನ ಕೈಯಲ್ಲಿ ಬಿಳಿಬಿಳಿಯ ಹೂಗಳು ಬಣ್ಣದ ಬೇಗಡೆ ಹಚ್ಚಿಸಿಕೊಂಡು ಸುಂದರಿಯರಾಗುತ್ತಿದ್ದವು.

ಒಂದು ವರ್ಷ ಅಮ್ಮ, ಚೌತಿಗೆ ತಿಂಗಳಿದೆ ಎನ್ನುವಾಗ, “ಅಪ್ಪೀ, ಇವತ್ತು ಶಾಲಿಂದ ಬರಕ್ಕರೆ ಸಂತ್ರದ ತಗಡು ತಗಂಬಾ. ಗೆಜ್ವಸ್ತ್ರ ಮಾಡಕ್ಕೆ ಶುರು ಮಾಡವು” ಎಂದಳು. ನಾನಾಗ ಉಳವಿಯ ಮೆಡ್ಲಿಸ್ಕೂಲಿಗೆ ಹೋಗುತ್ತಿದ್ದೆ. ಶಾಲೆಯಿಂದ ಬರುವಾಗ ಹೆಗಡೇರ ಅಂಗಡಿಗೆ ಹೋಗಿ “ಸಂತ್ರದ ತಗಡು ಇದೆಯಾ?” ಅಂತ ಕೇಳಿದೆ. “ಹೋ ಇದೆ. ಎಷ್ಟ್ ಬೇಕು?” ಅಂತ ಜಿತೇಂದ್ರಣ್ಣ ಕೇಳಿದ. ಅಮ್ಮ ನನ್ನ ಬಳಿ ಐದು ರೂಪಾಯಿ ಕೊಟ್ಟು ಯಾವುದಾದರೂ ಎರಡು ಬಣ್ಣದ ಸಂತ್ರದ ತಗಡು ತರುವಂತೆ ಹೇಳಿದ್ದಳು. ಜಿತೇಂದ್ರಣ್ಣ ಒಟ್ಟು ಐದು ಬಣ್ಣದ ಸಂತ್ರದ ತಗಡುಗಳನ್ನು ತೋರಿಸಿದ. ಕೆಂಪಿ, ಹಸಿರು, ನೀಲಿ, ಅರಿಶಿಣ ಮತ್ತು ಗುಲಾಬಿ... “ಎಷ್ಟ್  ರೂಪಾಯಿ ಒಂದಕ್ಕೆ?” ಅಂತ ಕೇಳಿದೆ. ಜಿತೇಂದ್ರಣ್ಣ “ಒಂದು ರೂಪಾಯಿಗೆ ಒಂದು” ಅಂತ ಹೇಳಿದ. ನನ್ನ ಕಣ್ಣರಳಿತು. “ಹಾಗಾದ್ರೆ ಎಲ್ಲಾ ಬಣ್ಣದ್ದೂ ಒಂದೊಂದು ಕೊಡಿ” ಅಂತ ಕೊಂಡುತಂದೆ. ದಾರಿಯಲ್ಲೆಲ್ಲ ಅಮ್ಮನಿಗೆ ಐದು ಬಣ್ಣದ ತಗಡು ತೋರಿಸಿದಾಗ ಅವಳು ಖುಶಿ ಪಡುವುದನ್ನೂ, ಅಷ್ಟನ್ನೂ ಬಳಸಿ ಅವಳು ತಯಾರಿಸಿದ ಗೆಜ್ವಸ್ತ್ರ ಸುಂದರವಾಗಿ ಮೂಡಿಬರುವುದನ್ನೂ ಕಲ್ಪಿಸಿ ಹಿಗ್ಗಿದೆ.

ಆದರೆ ಅಮ್ಮ ನನ್ನ ಕಲ್ಪನೆಗಳಿಗೆ ಸಂಪೂರ್ಣ ತದ್ವಿರುದ್ದವಾಗಿ ವರ್ತಿಸಿದಳು. “ಎರಡು ಸಂತ್ರದ ತಗಡು ತಗಂಬಾ ಅಂತ ಹೇಳಿದ್ರೆ ಕೊಟ್ಟಿದ್ದಷ್ಟೂ ದುಡ್ಡು ಖರ್ಚು ಮಾಡ್ಕ್ಯಂಡ್ ಬೈಂದ್ಯಲೋ.. ದುಡ್ಡಿನ ಬೆಲೆಯೇ ಗೊತ್ತಿಲ್ಲೆ ನಿಂಗೆ” ಅಂತ ಅಮ್ಮ ಬೈದುಬಿಟ್ಟಳು! ನಾನು ಸಣ್ಣ ಮುಖ ಮಾಡಿಕೊಂಡೆ.  ಐದು ರೂಪಾಯಿಯೆಂದರೆ ಅವಳಿಗೆ ಗಂಟೆಗಟ್ಟಲೆ ಕೂತು ಕೈ ನೋವು ಮಾಡಿಕೊಂಡು ಅಡಿಕೆ ಸುಲಿದು ಸಂಪಾದಿಸಿದ ದುಡ್ಡು. ಅದನ್ನು ನಾನು ಬಣ್ಣದ ತಗಡಿನ ಮೋಹಕ್ಕೆ ತೂರಿಬಂದದ್ದು ಅವಳ ಸಿಟ್ಟಿಗೆ ಕಾರಣವಾಗಿತ್ತು. ಆದರೂ ಎಲ್ಲೋ ವರ್ಷಕ್ಕೊಂದು ಸಲ -ಅದೂ ದೇವರಿಗೆಂದು ಮಾಡುವ ಗೆಜ್ಜೆವಸ್ತ್ರಕ್ಕಾಗಿ ನಾನು ಖರ್ಚು ಮಾಡಿದ ದುಡ್ಡಿಗೆ ಅಮ್ಮ ಇಷ್ಟೆಲ್ಲ ರಂಪ ಮಾಡಬಾರದಿತ್ತು ಅಂತ ನನಗನ್ನಿಸಿತು. ಅವಳು ಅವಲಕ್ಕಿ-ಮೊಸರು ಕೊಡಲು ಬಂದರೆ “ಬ್ಯಾಡ” ಅಂತ ಸಿಟ್ಟು ತೋರಿದೆ. ಕೊನೆಗೆ ಅವಳೇ, “ಎರಡೇ ಬಣ್ಣದ್ದು ತರಕ್ ಹೇಳಿದ ಅಮ್ಮಂಗೆ ಐದೈದ್ ಬಣ್ಣದ್ದು ತಗಬಂದು ಕೊಟ್ರೆ ಖುಶಿಯಾಗ್ತು ಅಂದ್ಕಂಡ್ಯಾ? ಇಲ್ಲೆ.. ಎರಡೇ ಬಣ್ಣ ಬಳಸಿಯೂ ತುಂಬಾ ಚನಾಗ್ ಕಾಣೋಹಂಗೆ ಗೆಜ್ವಸ್ತ್ರ ಮಾಡ್ಲಕ್ಕು. ದೇವರಿಗೆ ನಾವು ಎಷ್ಟು ಖರ್ಚು ಮಾಡಿದ್ದು ಅನ್ನೋದು ಮುಖ್ಯ ಆಗದಿಲ್ಲೆ; ಎಷ್ಟು ಭಕ್ತಿ ಇಟ್ಟು ಮಾಡಿದ್ದು ಅನ್ನೋದು ಮುಖ್ಯ. ಅದು ನಿಂಗೆ ಗೊತ್ತಾಗ್ಲಿ ಅಂತ ಸಿಟ್ಟು ಮಾಡಿದ್ದು ಅಷ್ಟೇ” ಅಂತ ಸಮಾಧಾನ ಮಾಡಿದಳು. ಮತ್ತು ನನಗೆ ಬೇಜಾರಾಗದಿರಲಿ ಅಂತ, ಆ ವರ್ಷ ಐದೂ ಬಣ್ಣದ ಸಂತ್ರದ ತಗಡು ಬಳಸಿ ಅಮ್ಮ ಗೆಜ್ಜೆವಸ್ತ್ರ ಮಾಡಿದಳು.

ಮಾವನಿಗೆ ಮದುವೆಯಾದಮೇಲೆ ಅಮ್ಮ ತವರಿಗಾಗಿ ಗೆಜ್ವಸ್ತ್ರ ಮಾಡುವುದನ್ನು ಬಿಟ್ಟಳು. “ಶಾಂತತ್ಗಿಗೆ ಯನಗಿಂತ ಎಷ್ಟೋ ಚನಾಗ್ ಮಾಡಕ್ ಬರ್ತು. ನಾ ಮಾಡಿದ್ ತಗಂಡ್ ಹೋದ್ರೆ ನೆಗ್ಯಾಡ್ತ ಅಷ್ಟೇ” ಅಂತ ಕಾರಣ ಕೊಟ್ಟಳು. ಅವಳು ಹೇಳಿದ್ದು ಸತ್ಯವೂ ಆಗಿತ್ತು. ನಾನು ಚೌತಿಗೆ ಅಜ್ಜನ ಮನೆಗೆ ಹೋದಾಗ, ಮಂಟಪದಲ್ಲಿನ ಗಣೇಶ ಶಾಂತತ್ತೆಯ ಹೊಚ್ಚಹೊಸ ಮಾದರಿಯ ಗೆಜ್ಜೆವಸ್ತ್ರದಿಂದ ಕಂಗೊಳಿಸುತ್ತಿದ್ದ.  ತವರಿಗೆ ಮಾಡುವುದನ್ನು ಬಿಟ್ಟರೂ ಅಮ್ಮ ಮನೆದೇವರಿಗೆಂದು ಪ್ರತಿ ಚೌತಿಗೂ ಗೆಜ್ವಸ್ತ್ರ ಮಾಡುತ್ತಿದ್ದಳು. ಆದರೆ ಅದರಲ್ಲಿ ಹಿಂದಿನ ವರ್ಷಗಳಲ್ಲಿರುತ್ತಿದ್ದ ಕುಶಲತೆ-ಚಂದ ಇರುತ್ತಿರಲಿಲ್ಲ. ಯಾಕೆ ಅಂತ ಕೇಳಿದರೆ, “ಅಲ್ಲಿಗಾದ್ರೆ ಗಣಪತಿ ಬರ್ತು. ಸುಮಾರ್ ಜನ ನೋಡಕ್ ಬರ್ತ. ಅವ್ರಿಗೆ ಚಂದ ಕಾಣಹಂಗೆ ಇರಕ್ಕಾತಲ? ಇಲ್ಲಾದ್ರೆ ಯಾರೂ ನೋಡೋರ್ ಇಲ್ಲೆ. ನಮ್ಮನೆ ದೇವ್ರಿಗೆ ಇಷ್ಟೇ ಸಾಕು” ಎನ್ನುತ್ತಿದ್ದಳು. ಗೂಡಿನಲ್ಲಿದ್ದ ದೇವರು ಈ ತಾರತಮ್ಯ ಕಂಡು ನಿಟ್ಟುಸಿರು ಬಿಡುತ್ತಿದ್ದ; ಮೂರು ದಿನವಿರುವ ಮಣ್ಣ ಗಣೇಶನ ಸೌಭಾಗ್ಯಕ್ಕೆ ಹೊಟ್ಟೆಕಿಚ್ಚು ಪಡುತ್ತಿದ್ದ.

ನಮ್ಮ ಮನೆಯಲ್ಲಿ ಅಜ್ಜಿ ತೀರಿಕೊಂಡಮೇಲೆ ಅಮ್ಮ ಚೌತಿ ಹಬ್ಬದ ದಿನ ತವರಿಗೆ ಹೋಗುವುದೂ ಕಡಿದುಹೋಯಿತು. “ಮನೇಲಿ ನೈವೇದ್ಯಕ್ಕೆ ಅನ್ನ ಮಾಡೋರೂ ಇಲ್ಲೆ, ನಾ ಹೆಂಗೆ ಬಿಟ್ಟಿಕ್ ಹೋಗದು?” ಎಂದು ತನ್ನ ಅಳಲನ್ನು ತೋಡಿಕೊಂಡಳು. ಅದು ಹೌದೆಂದು ಎಲ್ಲರೂ ಒಪ್ಪಿದೆವು. ಹೀಗಾಗಿ ಈಗ ನಾಲ್ಕೈದು ವರ್ಷಗಳಿಂದ ಬರೀ ನಾನು-ಅಪ್ಪನೇ ಚೌತಿಗೆ ಅಜ್ಜನ ಮನೆಗೆ ಹೋಗುವುದಾಗಿದೆ.

ಹೋದವರ್ಷ ಹೀಗೇ ಚೌತಿಗೆಂದು ನಾವು ಹೊರಟಿದ್ದಾಗ ಬಂದ ಮಧು ತಮಾಷೆ ಮಾಡುತ್ತಿದ್ದ: “ಇಷ್ಟು ವರ್ಷ ಪ್ರತಿ ಹಬ್ಬಕ್ಕೂ ಅಜ್ಜನ್ ಮನಿಗೆ ಹೋಪ್ದಾತು; ಇನ್ನು ಮದ್ವೆ ಆದ್ಮೇಲೆ ಹೆಂಗಂದ್ರೂ ಹೆಂಡ್ತಿ ಮನಿಗೆ ಹೋಪ್ದಾತು! ನೀನು ಮನೇಲಿ ಹಬ್ಬ ಮಾಡೋದು ಯಾವಾಗ?” ಅಂತ.

ಇವತ್ತು ಅದು ನೆನಪಾದದ್ದೇ ಮನೆಗೆ ಫೋನ್ ಮಾಡಿದೆ: “ಅಮ್ಮಾ, ಈ ವರ್ಷ ಗೆಜ್ವಸ್ತ್ರ ಮಾಡಿದ್ಯಾ? ಮುಂಚೆಯೆಲ್ಲಾ ಎಷ್ಟ್ ಚನ್‌ಚನಾ ಡಿಸೈನ್ಸ್ ಮಾಡ್ತಿದ್ದೆ.. ಬಿಡಡ ಅಮ್ಮಾ.. ಅದೂ ಒಂದು ಕಲೆ. ಬಿಟ್ರೆ ಮರ್ತೇ ಹೋಗ್ತು” ಅಂತ ಹೇಳಿದೆ.
“ಇನ್ನು ಮರೆತರೆ ಎಷ್ಟು ಬಿಟ್ರೆ ಎಷ್ಟು ಬಿಡಾ.. ಮುಂದೆಲ್ಲ ಇದ್ನೆಲ್ಲ ಕೇಳೋರಾದ್ರೂ ಯಾರಿದ್ದ?” ಎಂದಳು.
“ಹಂಗಲ್ಲ ಅಮ್ಮಾ, ಈಗ ನೀನು ನೆನಪು ಇಟ್ಕಂಡಿದ್ರೆ ಮುಂದೆ ನಿನ್ ಸೊಸೆಗೆ ಹೇಳಿಕೊಡ್ಲಕ್ಕು.. ಅವ್ಳಿಗೂ ಇಂತಹುದರಲ್ಲಿ ಆಸಕ್ತಿ ಇದ್ದು ಅಂತ ಆದ್ರೆ, ಅತ್ತೆ ನೋಡಿ ಅವಳೂ ಕಲಿತ” ಎಂದೆ.
“ಆಂ, ಎಂತಂದೇ? ಸೊಸೆಯಾ?” ಅಮ್ಮ ಆ ಕಡೆಯಿಂದ ಧ್ವನಿಯೇರಿಸಿದಳು.
“ಎಂತಿಲ್ಲೆ” ಎಂದವನೇ ನಕ್ಕು ಫೋನ್ ಇಟ್ಟುಬಿಟ್ಟೆ.

* * *

ಗೆಜ್ಜೆವಸ್ತ್ರ ಧರಿಸಿದ ಬ್ರಹ್ಮಚಾರಿ ಗಣೇಶ ನಿಮಗೆ ಒಳ್ಳೇದು ಮಾಡಲಿ. ಶುಭಾಶಯಗಳು.