Sunday, May 29, 2011

ಮುಳಕ

ನೋ, ಇದು ಪ್ಲಾಸ್ಟಿಕ್ಕಲ್ಲ ಕಣೋ, ಇಕೋ, ಒಮ್ಮೆ ಮುಟ್ಟಿ ನೋಡು
ತಾಜಾ ಇದೆ ಹೂವು. ಕೆಸವಿನೆಲೆಮೇಲಿನ ಇಬ್ಬನಿ ಹನಿ,
ಮುಟ್ಟಿದರೆ ನಾಚಿಕೊಳ್ಳುವ ಮುಚ್ಚಗನ ಎಲೆಗಳು,
ಕಾಪಿಡದಿದ್ದರೆ ಕೊಳೆತುಹೋಗುವ ಕೊಯ್ದ ಹಣ್ಣು
ಎಲ್ಲ - ಎಲ್ಲ ನಿಜವಾದ್ದು.
ಚಳಿ ನೀಗುವ ಈ ಕೆಂಪನೆ ಮೃದು ರಗ್ಗು,
ಫ್ರಿಜ್ಜಿನಿಂದ ಹೊರತೆಗೆದರೆ ಕರಗುವ ಐಸ್‌ಕ್ರೀಂ,
ಕಿಡಿ ತಾಕಿದರೆ ಗಂಧ ಹೊಮ್ಮಿಸುವ ಲೋಭಾನ,
ನೀರು ಹೊಯ್ದರೆ ಕೊತಕೊತ ಕುದಿಯುವ ಸುಣ್ಣದ ಕಲ್ಲು,
ಬೆಳಕು ಹಾಯ್ದರೆ ಕಾಮನಬಿಲ್ಲು ಮೂಡಿಸುವ ಪಟ್ಟಕ,
ಎಲ್ಲಾ ಸತ್ಯ. ಎಲ್ಲಿತ್ತು ಆ ಏಳು ಬಣ್ಣಗಳು,
ಸುಡುಸುಡು ಬೆಂಕಿ, ಆ ಪರಿಮಳ, ಘನದೊಳಗಿನ ದ್ರವ,
ನೆಮ್ಮದಿಯ ಕಾವು -ಅಂತೆಲ್ಲ ಕೇಳಬಾರದು.

ಬಾಯೊಳಗಿಟ್ಟುಕೋ ಚೂರೇ ಮುರಿದು
ಅಮ್ಮ ನಿನಗೇಂತಲೇ ಈ ಗಡಿಬಿಡಿಯಲ್ಲೂ ಮಾಡಿಕೊಟ್ಟಿದ್ದು
ಹಲಸಿನ ಹಣ್ಣಿನ ಮುಳಕ ಎಂದರೆ ಅವನಿಗೆ ಪಂಚಪ್ರಾಣ
ಅಂತ ಹಿಂದೆಲ್ಲೋ ಹೇಳಿದ್ದೆ. ಅದನ್ನೇ ನೆನಪಿಟ್ಟುಕೊಂಡಿದ್ದಾಳೆ.
ಹಾಗೆ ದುರುಗುಟ್ಟಿಕೊಂಡು ನೋಡಬೇಡ, ಎಲ್ಲ ಸುಳ್ಳೆನ್ನಬೇಡ.

ಅರ್ಥ ಮಾಡಿಕೋ, ಅಜ್ಜನಿಗೆ ನಾನೆಂದರೆ ಅಷ್ಟು ಪ್ರೀತಿ
ಮೊಮ್ಮಗಳು ಏನು ಮಾಡಿಕೊಂಡಳೋ ಅಂತ ಭಯ
ಮೂರು ಜನರಿಗೆ ಅಭಯ ತುಂಬಿ ಬರುವುದು
ನೂರು ಯೋಜನ ದಾಟಿ ಬಂದಷ್ಟೇ ಕಷ್ಟ.
ನಾಲ್ಕು ದಿನ ತಡವಾಗಿದೆ ಅಷ್ಟೇ.
ನಮ್ಮ ಮದುವೆಯಲ್ಲಿ ಮನೆಯವರೆಲ್ಲ ಇರ್ತೀವಿ
ಅಂತ ಅಜ್ಜನೇ ಹೇಳಿದ್ದಾನೆ.

ನನಗೂ ತಿಳಿಸದೆ ನೀನು ಮಾಡಿಸಲು ಹಾಕಿದ
ಮಾಂಗಲ್ಯದ ಗುಟ್ಟು ಅಕ್ಕಸಾಲಿಗ ಹೇಳಿಬಿಟ್ಟಿದ್ದಾನೆ.
ತಯಾರಾಗಿದೆಯಂತೆ, ನೋಡಿಕೊಂಡು ಬರೋಣ ಬಾ.

Wednesday, May 18, 2011

ಹೊಸ ಭಾವ

‘ನಿನ್ನ ಜೀವನದಲ್ಲಿ ಅತಿ ಹೆಚ್ಚು ಉಪ್ಪಿಟ್ಟು ತಿಂದ ದಿನಗಳು ಯಾವುದು?’ ಅಂತ ಯಾರಾದರೂ ಕೇಳಿದರೆ, ನಾನು ಸುಲಭವಾಗಿ ‘ಅದು ನನ್ನ ಅಕ್ಕನಿಗೆ ಗಂಡು ಹುಡುಕುವ ದಿನಗಳಲ್ಲಿ’ ಅಂತ ಉತ್ತರಿಸುತ್ತೇನೆ.

ಅಕ್ಕ ಡಿಗ್ರಿಯಲ್ಲಿ ಡುಮ್ಕಿ ಹೊಡೆದದ್ದೇ ಮದುವೆಯಾಗಲಿಕ್ಕೆ ಅರ್ಹತೆ ಪಡೆದುಬಿಟ್ಟಳು. ‘ಶೇಷಭಟ್ರ ಮನೆ ಕೂಸಿಗೆ ಮದುವೆ ಮಾಡ್ತಾರಂತೆ. ಜಾತಕ ಹೊರಡಿಸಿದ್ದಾರಂತೆ’ ಎಂಬ ಸುದ್ದಿ ಊರಿನ ಬಾಯ್ಬಡುಕರ ಮುಂದಿನ ನೋಟೀಸ್ ಬೋರ್ಡಿನಲ್ಲಿ ತೂಗಾಡಿತು. ಆಮೇಲೆ ಆ ಸುದ್ದಿ ಹರಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗಣಪತಣ್ಣನನ್ನು ಮೊದಲ್ಗೊಂಡು ಕೊನೇಮನೆ ಸೌಭದ್ರಕ್ಕನವರೆಗೆ ಎಲ್ಲರೂ ದೂರ್ವೆ ಕೊಯ್ಯುವ ನೆಪದಲ್ಲೋ, ಹೆಪ್ಪಿಗೆ ಮಜ್ಜಿಗೆ ಕೇಳುವ ನೆಪದಲ್ಲೋ, ಕುಡಗೋಲು ಮಸೆಯುವ ನೆಪದಲ್ಲೋ ನಮ್ಮನೆಗೆ ಬಂದು, ‘ಕೂಸಿನ ಜಾತಕ ಹೊಂಡ್ಸಿದ್ರಡ ಹೌದನೇ?’ ಅಂತ ಕೇಳಿಕೊಂಡು, ತಮ್ಮ ನೆಂಟರಿಷ್ಟರ ಪೈಕಿ ಮದುವೆಗೆ ಇರುವ ಗಂಡಿನ ಬಗ್ಗೆ ಒಂದು ಮಾತು ನಮ್ಮ ಕಿವಿಗೆ ಹಾಕಿ, ‘ನಿಮ್ಮನೆ ಕೂಸು ಬಿಡು, ಹೈಕ್ಲಾಸ್ ಇದ್ದು. ಅಲ್ದೇ ಮೊದಲೇ ಹುಡುಗಿಯರಿಗೆ ಬರ ಈಗ, ಯಾರರು ಫಾರಿನ್ನಗಿಪ್ಪವೇ ಹಾರ್‌ಸ್ಕ್ಯಂಡ್ ಹೋಗ್ತ ತಗ’ ಅಂತ ಹೊಗಳಿ ಹೋಗುತ್ತಿದ್ದರು.

ಒಂದೇ ಇದ್ದ ಅಕ್ಕನ ಜಾತಕ ಜೆರಾಕ್ಸ್ ಮಷೀನಿನ ಗಾಜುಗಳ ನಡುವೆ ಕೂತು ಮೂವತ್ತು ಕಾಪಿಯಾಯಿತು. ಯಶವಂತ್ ಸ್ಟುಡಿಯೋದ ಹಸಿರು ಉದ್ಯಾನದ ಪೋಸ್ಟರಿನ ಮುನ್ನೆಲೆಯಲ್ಲಿ ನಿಂತ ಸೀರೆಯುಟ್ಟ ಅಕ್ಕ ಕೆಮೆರಾದ ಫ್ಲಾಶಿನಲ್ಲಿ ಬೆಳಗಿದಳು. ಒಂದು ವಾರದೊಳಗೆ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಧಾಳಿ ಇಡಲು ಶುರು ಮಾಡಿದರು.

ಹುಡುಗಿಯರಿಗಿರುವ ಬೇಡಿಕೆಯ ಸಂಪೂರ್ಣ ಲಾಭ ಪಡೆದುಕೊಂಡ ಪೀಯೂಸಿ ಪಾಸಾಗಿದ್ದ ಅಕ್ಕ, ಹಳ್ಳಿಯಲ್ಲಿರುವ ಹುಡುಗ ಬೇಡವೇ ಬೇಡ ಅಂತ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಳು. ಆದರೆ ಆ ಕಂಡೀಶನ್ನು, ಜಾತಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯಾಗುವ ನಡುವೆ ಎಲ್ಲೋ ತಪ್ಪಿಹೋಗಿಬಿಟ್ಟಿರುತ್ತಿತ್ತು. ಹೀಗಾಗಿ ಮೊದಮೊದಲು ಅಕ್ಕನನ್ನು ನೋಡಲು ಬಂದವರು ಹಳ್ಳೀಹುಡುಗರ ಪೋಷಕರೇ. ಹಳ್ಳಿಯವರಾದರೇನು ದಿಲ್ಲಿಯವರಾದರೇನು, ಹುಡುಗಿ ನೋಡಲು ಬಂದವರನ್ನು ಹಾಗೇ ಕಳಿಸಲಿಕ್ಕೆ ಬರುತ್ತದೆಯೇ? ದೂರದ ಊರಿನಿಂದ ಬಜಾಜ್ ಎಮ್‌ಎಯ್ಟಿಯಲ್ಲಿ ಧೂಳು ಹಾರಿಸುತ್ತಾ ಬಂದ ಹುಡುಗನ ಕಡೆಯವರಿಗೆ ಉಪ್ಪಿಟ್ಟು-ಕಾಫಿ ಮಾಡುವುದು ಅಮ್ಮನಿಗೆ ಅನಿವಾರ್ಯ ಕರ್ಮವಾಯಿತು. ಹಳ್ಳಿಯವರಾದರೆ, ತನ್ನ ತಂದೆಯ ಜೊತೆಗೋ ಮಾವನ ಜೊತೆಗೋ ಹುಡುಗನೇ ಬಂದುಬಿಟ್ಟಿರುತ್ತಿದ್ದ. ಆದರೆ ಹುಡುಗ ಪರ ಊರಿನಲ್ಲಿರುವವನಾದರೆ, ಮೊದಲ ಭೇಟಿಯಲ್ಲಿ ಹುಡುಗನ ತಂದೆ ಮತ್ತು ಹುಡುಗನ ಮಾವ ಅಥವಾ ಹತ್ತಿರದ ಯಾರೋ ನೆಂಟ -ನೋಡಲು ಬರುತ್ತಿದ್ದುದು. ಜಾಗತೀಕರಣದ ಪರಿಣಾಮವೋ, ಪೇಟೆಯೆಡೆಗಿನ ಆಕರ್ಷಣೆಯೋ, ಟೀವಿ-ಗೀವಿಗಳಲ್ಲಿ ನೋಡಿದ ಸಿಟಿಲೈಫಿನ ಥಳುಕುಬಳುಕಿನ ಮೋಡಿಯೋ ಅಥವಾ ತನ್ನ ಓರಗೆಯ ಹುಡುಗಿಯರ ಗಂಡಂದಿರನ್ನು ನೋಡಿದ್ದ ಪ್ರಭಾವವೋ ಏನೋ, ಈ ಹಳ್ಳಿಯ ಹುಡುಗರೆಲ್ಲ ಅಕ್ಕನಿಗೆ ಬೆಪ್ಪುತಕ್ಕಡಿಗಳಂತೆ ಕಾಣಿಸುತ್ತಿದ್ದರು. ಬೆಂಗಳೂರಿನಲ್ಲಿರುವವ, ಅಮೆರಿಕೆಗೆ ಹೋಗಿಬಂದವ, ಸಾಫ್ಟ್‌ವೇರ್ ಇಂಜಿನಿಯರು, ಓನ್ ಫ್ಲಾಟು, ಸ್ವಿಫ್ಟ್ ಕಾರು -ಇತ್ಯಾದಿ ಶಬ್ದಗಳು ಅಡುಗೆಮನೆಯಲ್ಲೋ ರೂಮಿನಲ್ಲೋ ನಿಂತು ಜಗುಲಿಯಲ್ಲಿನ ಮಾತುಗಳನ್ನು ಕದ್ದು ಕೇಳುತ್ತಿದ್ದ ಅಕ್ಕನಿಗೆ ಖುಶಿ ತರುತ್ತಿದ್ದವು.

ವಿಷಯ ಎಂದರೆ- ಬಂದ ಅಭ್ಯಾಗತರೊಂದಿಗೆ ಒಳ್ಳೆಯ ಮಾತಾಡಿ ಸಂಭಾಳಿಸುವ ಸಂಕಷ್ಟಲ್ಲಿರುತ್ತಿದ್ದ ಅಪ್ಪ, ಉಪ್ಪಿಟ್ಟಿನ ರುಚಿ ಸರಿಯಾಗಿದೆಯೋ ಇಲ್ಲವೋ ಎಂಬ ಆತಂಕದಲ್ಲಿರುತ್ತಿದ್ದ ಅಮ್ಮ, ಮತ್ತೊಂದು ಹೊಸ ನಾಟಕ ಪ್ರದರ್ಶನಕ್ಕೆ ಸೀರೆಯಂತಹ ತನ್ನಿಷ್ಟದ್ದಲ್ಲದ ಉಡುಗೆ ತೊಡುತ್ತಿದ್ದ ಅಕ್ಕ -ಇವರೆಲ್ಲರ ನಡುವೆ ಈ ಸನ್ನಿವೇಷದ ನಿಜವಾದ ಮಜಾ ತೆಗೆದುಕೊಳ್ಳುತ್ತಿದ್ದುದು ನಾನು! ಈ ಹುಡುಗಿ ನೋಡಲಿಕ್ಕೆಂದು ಬಂದ ಹುಡುಗರೆಲ್ಲ ಒಂದು ತರಹದ ವಿಚಿತ್ರ ಸೋಗಿನಲ್ಲಿರುತ್ತಿದ್ದರು. ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟು ಧರಿಸಿ, ಇನ್‌ಶರ್ಟ್ ಮಾಡಿಕೊಂಡು, ಫಳಫಳ ಹೊಳೆಯುವ ತೊಳೆದ ಚಪ್ಪಲಿ ಹಾಕಿಕೊಂಡು ಬಂದಿರುತ್ತಿದ್ದ ಇವರು ಟೈ ಒಂದು ಇದ್ದರೆ ಥೇಟ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೆ ಕಾಣುತ್ತಿದ್ದರು. ಇವರು ಧರಿಸಿದ ಬಿಳಿಯಂಗಿಯ ಮೇಲೆ ನಮ್ಮೂರ ರಸ್ತೆಯ ಧೂಳಿನ ಕಣಗಳು ಬಿಂದಾಸ್ ಕೂತು ರಾರಾಜಿಸುತ್ತಿದ್ದವು. ನಗೆಯೆಂಬುದು ಇವರ ತುಟಿಗಳಿಗೇ ಪೇಟೆಂಟ್ ಆಗಿಹೋಗಿರುತ್ತಿತ್ತು. ‘ನಾನೇ ಹುಡುಗಿ ಅಪ್ಪ, ಇವಳು ನಮ್ಮನೆಯವಳು, ಇಂವ ಹುಡುಗಿ ತಮ್ಮ’ ಅಂತೆಲ್ಲ ಅಪ್ಪ ಪರಿಚಯಿಸಿಕೊಡುವಾಗ ಈ ಬಕರಾ, ಅಪ್ಪ-ಅಮ್ಮರ ಜೊತೆಗೆ ನನಗೂ ‘ಹೆಹೆ, ನಮಸ್ಕಾರ’ ಅಂತ ಕೈ ಮುಗಿಯುತ್ತಿದ್ದ. ಬಹುಶಃ ನನಗಿಂತ ಹಿರಿಯವರಿಂದ ಅನೇಕ ನಮಸ್ಕಾರಗಳನ್ನು ನಾನು ಪಡೆದದ್ದೂ ಆ ದಿನಗಳಲ್ಲೇ ಇರಬೇಕು!

ಅಕ್ಕ ಅಡುಗೆಮನೆಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟ್ರೇಯಲ್ಲಿಟ್ಟುಕೊಂಡು ಬರುವಾಗ ನನ್ನೀ ಭಾವೀ ಭಾವಂದಿರ ಮುಖ ನೋಡುವ ಹಾಗಿರುತ್ತಿತ್ತು. ಸಿಗುತ್ತಿದ್ದ ಆ ಎರಡ್ಮೂರು ನಿಮಿಷಗಳಲ್ಲೇ ಹುಡುಗಿಯನ್ನು ಪೂರ್ತಿಯಾಗಿ ಅಳೆದುಬಿಡುವ ಸಾಮರ್ಥ್ಯವನ್ನು ಈಗಾಗಲೇ ತಮ್ಮ ಅನುಭವದಿಂದ ಸಂಪಾದಿಸಿಕೊಂಡಿರುತ್ತಿದ್ದ ಈ ಭಾವಂದಿರು, ಅಕ್ಕ ಟ್ರೇಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟೀಪಾಯಿಯ ಮೇಲಿಟ್ಟು, ಅಮ್ಮ ಹೇಳಿದ ‘ತಗಳಿ, ನಮ್ಮನೆ ಕೂಸೇ ಮಾಡಿದ್ದು ಉಪ್ಪಿಟ್ಟು’ ಎಂಬ ಶುದ್ಧ ಸುಳ್ಳಿನ ನುಡಿಗೆ ‘ಓಹೋ?’ ಎಂದು ಮುಗುಳ್ನಕ್ಕು ತಲೆಯಾಡಿಸಿ, ತಟ್ಟೆಗೂ ಸ್ಪೂನಿಗೂ ಕೈ ಹಾಕುವ ಈ ದೃಶ್ಯ, ಎಲ್‌ಬಿಡಬ್ಲೂ ಅಪೀಲನ್ನು ಮತ್ತೆಮತ್ತೆ ತೋರಿಸುವ ಕ್ರಿಕೆಟ್ಟಿನಾಟದ ರಿಪ್ಲೇಯಂತೆ ಪ್ರತಿ ವಧುಪರೀಕ್ಷೆಯಲ್ಲೂ ಸಾಮಾನ್ಯವಾಗಿರುತ್ತಿತ್ತು. ಈ ಹುಡುಗರು ತಮ್ಮ ಮಾವ-ಅತ್ತೆಯರ -ಅದಕ್ಕೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೇಳಿಸಿಕೊಳ್ಳುತ್ತಲೇ ಇರಬಹುದಾದ ಹುಡುಗಿಯ- ಮನ ಗೆಲ್ಲಲೆಂದು ಅನೇಕ ಕಸರತ್ತು ನಡೆಸುತ್ತಿದ್ದರು. ತಮ್ಮ ತಂದೆ ‘ಯಮ್ಮನೆ ಮಾಣಿಗೆ ಒಂದೇ ಒಂದು ಚಟ ಇಲ್ಲೆ. ತಪ್ಪಿ ಎಲೆ-ಅಡಿಕೆ ಸಹ ಹಾಕದಿಲ್ಲೆ. ಜಾಬಲ್ಲಿ ಇಲ್ದೇ ಇದ್ರೆ ಎಂತಾತು? ಆರು ಎಕರೆ ತೋಟ ಇದ್ದು. ಮನೇಲಿ ಸಕಲ ಸೌಕರ್ಯವೂ ಇದ್ದು. ಕೈಕಾಲಿಗೆ ಆಳು ಇದ್ದ. ಪ್ಯಾಟೆ ಮನೇಲಿ ಇದ್ದಂಗೇ ಆರಾಮಾಗಿ ಇರ್ಲಕ್ಕು ನಿಮ್ಮನೆ ಕೂಸು’ ಅಂತೆಲ್ಲ ಹೇಳುವಾಗ, ಅದಾಗಲೇ ನನ್ನಕ್ಕನ ಸೌಂದರ್ಯಕ್ಕೆ ಮರುಳಾಗಿರುತ್ತಿದ್ದ ಈ ಭಾವಿ ಭಾವ ಪ್ರತಿಯೊಂದಕ್ಕೂ ತಲೆಯಾಡಿಸುತ್ತಿದ್ದ. ಎಲ್ಲಾ ಮುಗಿದು, ‘ಸರಿ. ಹುಡುಗ-ಹುಡುಗಿ ನೋಡಿ ಆತು. ಇನ್ನು ನಿಂಗ್ಳ ನಿರ್ಧಾರ ಲಘೂ ತಿಳಿಸಿ’ ಅಂತ ಹೇಳಿ, ನಿರ್ಣಯವನ್ನು ಥರ್ಡ್ ಅಂಪೇರಿಗೆ ವರ್ಗಾಯಿಸಿ ಅವರು ಜಾಗ ಖಾಲಿ ಮಾಡುತ್ತಿದ್ದರು. ಅವರಿಗೂ ಗೊತ್ತಿತ್ತು: ಇಲ್ಲಿ ಆಟಗಾರಳೇ ಥರ್ಡ್ ಅಂಪೇರೂ! ಅವಳದೇ ಕೊನೆಯ ನಿರ್ಧಾರ! ಹುಡುಗ ಔಟೋ ನಾಟೌಟೋ ಎಂದು ತೀರ್ಮಾನಿಸುವ ಸಿಗ್ನಲ್ಲಿನ ಸ್ವಿಚ್ಚು ಅಕ್ಕನ ಕೈಯಲ್ಲೇ ಇರುತ್ತಿತ್ತು.

ಅವರು ಅತ್ತ ಹೋದಮೇಲೆ ಅಕ್ಕ ಆ ಹುಡುಗ ಹೇಗೆ ಬೆಪ್ಪನಂತಿದ್ದನೆಂದು ನನ್ನ ಮತ್ತು ಅಮ್ಮನ ಬಳಿ ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು. ಮಿಕ್ಕಿರುತ್ತಿದ್ದ ಉಪ್ಪಿಟ್ಟು ತಿನ್ನುತ್ತಾ ನಾನು, ಈ ಭಾವನೂ ಔಟ್ ಆದುದಕ್ಕೆ, ಆತನ ಪ್ರದರ್ಶನವೆಲ್ಲ ವೇಸ್ಟ್ ಆದುದಕ್ಕೆ ಅಯ್ಯೋ ಪಾಪ ಎಂದುಕೊಳ್ಳುತ್ತಿದ್ದೆ. ಅಮ್ಮ-ಅಪ್ಪಂದಿರು ಮಾತ್ರ, ಅಕ್ಕನಿಗೆ ಅದ್ಯಾವತ್ತು ಬುದ್ಧಿ ಬರುತ್ತದೋ, ಯಾವಾಗ ಗ್ರೀನ್ ಸಿಗ್ನಲ್ಲು ಕೊಡುತ್ತಾಳೋ ಎಂಬ ಚಿಂತೆಯಲ್ಲಿ ಕಾಫಿ ಕುಡಿಯುತ್ತಿದ್ದರು.

ಅಕ್ಕ ಕೊನೆಗೂ ಒಪ್ಪಿದ್ದು ಬೆಂಗಳೂರಿನ ಸಾಫ್ಟ್‌ವೇರ್ ಮಾಣಿಯನ್ನೇ. ಅಕ್ಕನನ್ನು ನೋಡಲು ಟೀಶರ್ಟ್ ಧರಿಸಿ ಪ್ಲೇಬಾಯ್ ಥರ ಬಂದಿದ್ದ ಈ ಹೊಸ ಭಾವ ಮೊದಲು ಸಂಪಾದಿಸಿದ್ದು ನನ್ನ ಗೆಳೆತನ! ಇವನ ಅಪ್ಪ ನನ್ನ ಅಪ್ಪನೊಂದಿಗೆ ಹುಡುಗನ ಗುಣಗಾನದಲ್ಲಿ ತೊಡಗಿದ್ದಾಗ ಅಲ್ಲಿಂದ ಮೆಲ್ಲನೆದ್ದುಬಂದ ಇವನು, ನನ್ನನ್ನು ಹೊರಕಟ್ಟೆಗೆ ಕರೆದೊಯ್ದು ‘ಯಾವ ಕಾಲೇಜು, ಏನು ಓದ್ತಿದೀ, ಮುಂದೇನು ಮಾಡಬೇಕು ಅಂತಿದೀಯಾ, ಜೂನಿಯರ್ ಕಾಲೇಜಿನಲ್ಲಿ ಈಗಲೂ ಆ ಲೆಕ್ಚರರ್ ಇದಾರಾ’ ಅಂತೆಲ್ಲ ಕೇಳಿ ಮೊದಲ ವಿಕೆಟ್ಟು ಗಳಿಸಿಬಿಟ್ಟ. ಅಪ್ಪ-ಅಮ್ಮಂದಿರಂತೂ ಇವರು ನೋಡಲು ಬರುತ್ತಿರುವ ಸುದ್ದಿ ಕೇಳಿಯೇ ಆಸ್ಟ್ರೇಲಿಯಾ ಎದುರಿನ ಕೀನ್ಯಾ ಆಟಗಾರರಂತೆ ಮೊದಲೇ ಶರಣಾಗಿಹೋಗಿದ್ದರು. ಇನ್ನು ಥರ್ಡ್ ಅಂಪೇರ್ ಡಿಸಿಷನ್ ಒಂದೇ ಪೆಂಡಿಂಗ್ ಇದ್ದುದು. ಕನ್ನಡಕದ ಭಾವ, ನಾವೆಲ್ಲ ನಿಬ್ಬೆರಗಾಗುವಂತೆ ಅಕ್ಕನನ್ನೂ ಹೊರಕಟ್ಟೆಗೆ ಕರೆದೊಯ್ದು ಅದೇನೇನೋ ಮಾತಾಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಆಟ ಮುಗಿಸಿಯೇಬಿಟ್ಟ!

ಧಾಮ್‌ಧೂಮ್ ಎಂದು ಮುಗಿದುಹೋದ ಮದುವೆಯ ನಂತರ ಈ ಹೊಸ ಭಾವ ನಮ್ಮ ಮನೆ ಅಳಿಯನಾಗಲು, ಎಲ್ಲರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲವೇ ಹಿಡಿಯಿತು. ಮೂಲ ಹಳ್ಳಿಯವನೇ ಆದರೂ ಅದಾಗಲೇ ಬೆಂಗಳೂರಿನ ಗತ್ತುಗಳನ್ನು ಮೈಮೇಲೆ ಹಾಕಿಕೊಂಡಿದ್ದ ಭಾವ, ನಮ್ಮ ಮನೆಯ ಗಾರೆ ನೆಲ, ಕತ್ತಲೆಯ ನಡುಮನೆ, ಬೋಲ್ಟು ಕೂರದ ಬೆಡ್‌ರೂಮಿನ ಬಾಗಿಲು, ಜಾರುವ ಬಚ್ಚಲುಕಲ್ಲು, ಸುಳಿದಾಡುವ ನೆಂಟರ ನಡುವೆ ನುಣುಚಿಕೊಳ್ಳುವ ಹೆಂಡತಿ -ಇವುಗಳೊಂದಿಗೆ ಹೇಳಿಕೊಳ್ಳಲಾಗದ ಅಸಮಾಧಾನ ಅನುಭವಿಸುತ್ತಾ ಕಷ್ಟ ಪಡುತ್ತಿದ್ದುದು ನನಗೆ ಅರ್ಥವಾಗುತ್ತಿತ್ತು. ನಮಗೂ ಈ ಹೊಸ ಅಳಿಯದೇವನನ್ನು, ಬೀಗರನ್ನು, ಅವರ ಕಡೆಯ ನೆಂಟರನ್ನು ಸಂಭಾಳಿಸುವ, ಅವರಿಗೆ ಅಭಾಸವಾಗದಂತೆ ನಡೆದುಕೊಳ್ಳುವ ಕಷ್ಟ ಇತ್ತು. ಮಧ್ಯಾಹ್ನದ ಊಟದ ನಂತರ ‘ಸುಸ್ತಾಗಿದ್ದರೆ ರೂಮಿಗೆ ಹೋಗಿ ಮಲಗಿ’ ಅಂತ ಅಪ್ಪ ಕೇಳಿದರೆ, ಅದೆಷ್ಟೇ ನೇರ ನಡೆಯವನಾದರೂ ಭಾವ ‘ಅಯ್ಯೋ, ಎಂಥಾ ಸುಸ್ತೂ ಇಲ್ಲೆ’ ಅಂತ, ಜಗುಲಿಯ ಕಂಬಳಿಯ ಮೇಲೇ ಕೂತು ತೂಕಡಿಸುತ್ತಿದ್ದ. ಅಂತೂ ಭಾವ ದಿನ ಕಳೆದಂತೆ, ಹಬ್ಬಗಳಿಗೆ ಬಂದು-ಹೋಗಿ ಮಾಡುತ್ತ, ಫೋನಿನಲ್ಲಿ ಮಾತಾಡುತ್ತಾ ಹಳಬನಾದ. ಅವನ ಬೆಂಗಳೂರಿನ ಮನೆಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆತ ಅನುಭವಿಸಿದ್ದ ಧರ್ಮಸಂಕಟಗಳನ್ನೆಲ್ಲ ನಾವು ಇಲ್ಲಿ ಅನುಭವಿಸಿದೆವು. ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು.

ಓದು ಮುಗಿಸುವ, ಕೆಲಸ ಹುಡುಕುವ, ನಗರದಲ್ಲಿ ಸೆಟಲ್ ಆಗುವ ಜರೂರಿನಲ್ಲಿ ಮುಳುಗಿಹೋಗಿದ್ದ ನನಗೆ ಇವೆಲ್ಲ ನೆನಪಾದದ್ದು, ‘ಇಪ್ಪತ್ತೇಳು ವರ್ಷ ಆತು ನಿಂಗೆ. ಮನೆಗೆ ಸುಮಾರೆಲ್ಲ ಜಾತಕ ಬೈಂದು. ನಿನ್ನೆ ಬಂದಿದ್ದೋರು ಹೇಳಿದ, ಕೂಸಿಗೆ ಕಾನಸೂರು ಆತಡ. ಬೆಂಗಳೂರಲ್ಲೇ ಯಾವುದೋ ಕಂಪನೀಲಿ ಕೆಲಸ ಮಾಡ್ತಡ. ಮೊಬೈಲ್ ನಂಬರ್ ಕೊಡಸ್ತಿ. ಮೊದಲು ನಿಂಗನೇ ಎಲ್ಲಾದ್ರೂ ಮೀಟ್ ಆಗಿ ಮಾತಾಡಿ. ನಿಮಗೆ ಪರಸ್ಪರ ಒಪ್ಪಿಗೆ ಆತು ಅಂದ್ರೆ ನಾವು ಮುಂದುವರಿತ್ಯ. ಅಡ್ಡಿಲ್ಯಾ?’ ಅಂತ ಅಪ್ಪ ಫೋನ್ ಮಾಡಿ ಕೇಳಿದಾಗ.

ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು. ನಿಶ್ಚಿತಾರ್ಥದ ದಿನ ಅವರ ಮನೆಗೆ ಹೋದಾಗ, ಈಗಾಗಲೇ ಫೇಸ್‌ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿಹೋಗಿದ್ದ ಆಕೆಯ ಭೇಷ್ ತಮ್ಮ ಸಂಪತ್, ಬಿಳೀ ಜುಬ್ಬಾ ಧರಿಸಿ ‘ಇವನೇನಾ ಹೊಸ ಭಾವ?’ ಎಂಬಂತೆ ನನ್ನನ್ನು ನೋಡುತ್ತಿದ್ದ. ಇವನಿಗೊಂದು ಡೈರಿಮಿಲ್ಕ್ ಹಿಡಿದುಕೊಂಡು ಬರಬೇಕಿತ್ತು ಅಂತ ಅನಿಸಿತಾದರೂ ಈಗಾಗಲೇ ಬುಟ್ಟಿಗೆ ಬಿದ್ದವನಿಗೆ ಕಾಳು ಹಾಕುವುದ್ಯಾಕೆ ಅಂತ ಸುಮ್ಮನಾದೆ. ಆದರೆ, ಹುಡುಗಿಗೆ ಉಂಗುರ ತೊಡಿಸುವಾಗ ‘ಅವತ್ತು ನೋಡಿದ ಕೂಸು ಇವಳೇ ಸೈಯಾ ಕರೆಕ್ಟಾಗಿ ನೋಡಿಕೊಳ್ಳೋ. ಒಂದೇ ಸಲ ನೋಡಿದ್ದು, ಮರೆತು ಹೋಗಿರ್ತು’ ಅಂತ ಮಾವನ ಕಡೆಯವರ್ಯಾರೋ ಕಿಚಾಯಿಸುವಾಗ, ನಮ್ಮ ಮನೆಗಳಿಗೆ ತಿಳಿಸದಂತೆ ಲಾಲ್‌ಭಾಗ್, ಫೋರಮ್ ಮಾಲ್, ನಂದಿಬೆಟ್ಟ ಅಂತೆಲ್ಲ ಸುತ್ತಿದ್ದ ನಮ್ಮ ಜಂಟಿ ಫೋಟೋಗಳನ್ನು ಅಲ್ಬಮ್ಮಿನಲ್ಲಿ ನೋಡಿಬಿಟ್ಟಿರಬಹುದಾದ ಸಂಪತ್, ಅದನ್ನು ಈಗ ಬಾಯಿಬಿಡದಿರಲಪ್ಪಾ ಅಂತ ನಾನು ಪ್ರಾರ್ಥಿಸುತ್ತಿದ್ದೆ. ಹೊಸ ಭಾವನ ತಳಮಳ ಸಂಪೂರ್ಣ ಅರ್ಥವಾದವನಂತೆ, ಅವನು ಮುಗುಳ್ನಕ್ಕ. ನಾನು ಕಣ್ಣು ಹೊಡೆದೆ. ಸುಳ್ಳೇ ಸಂಕೋಚವನ್ನು ಆವಾಹಿಸಿಕೊಂಡು, ಹೊಸಬನಂತೆ ನಟಿಸುವ ಪ್ರಯತ್ನ ಮಾಡಿದೆ. ಉಪ್ಪಿಟ್ಟಿನ ಘಮ ಅಡುಗೆಮನೆಯಿಂದ ತೇಲಿಬರುತ್ತಿತ್ತು.


 [ಕನ್ನಡ ಪ್ರಭ - ಅಂಕಿತ ಪುಸ್ತಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯ ಯುವ ವಿಭಾಗದಲ್ಲಿ ಬಹುಮಾನ.]

Monday, May 09, 2011

ಬಾವಿಯ ಸುತ್ತ ಭಾವಬಂಧ

ಐವತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ ಇದ್ದುದು ಐದೋ ಆರೋ ಮನೆಗಳಂತೆ. ಮೂಲ ಮನೆಯಿಂದ ಬೇರಾಗಿ ಬಂದ ನನ್ನ ಅಜ್ಜ ಒಂದು ಪುಟ್ಟ ಸ್ವಾಂಗೆಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ನಮ್ಮ ಮನೆಗೆ ಬಾವಿ ಇರಲಿಲ್ಲ. ಬಾವಿ ತೆಗೆಸುವಷ್ಟು ದುಡ್ಡೂ ಅಜ್ಜನ ಬಳಿ ಇರಲಿಲ್ಲ. ಅಜ್ಜಿ ಹತ್ತಿರವಿದ್ದ ಸರ್ಕಾರಿ ಬಾವಿಯಿಂದ ನೀರು ಹೊತ್ತು ತರುತ್ತಿದ್ದಳಂತೆ. ಸೊಂಟದಲ್ಲೊಂದು, ಕೈಯಲ್ಲೊಂದು ಕೊಡಪಾನ ಹಿಡಿದು ಗಂಡ-ಮೂರು ಮಕ್ಕಳ ಮನೆಗೆ ಒದಗಿಸುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನನ್ನ ಅಪ್ಪ-ಅತ್ತೆಯರು ಸ್ವಲ್ಪ ನೀರು ದಂಡ ಮಾಡಿದರೂ ಅಜ್ಜಿಯ ದಾಸವಾಳ ಬರಲಿನ ಹೊಡೆತಕ್ಕೆ ಒಳಗಾಗಬೇಕಿತ್ತು. ಊರ ಯಾರ ಮನೆಯಲ್ಲೂ ಇಲ್ಲದಷ್ಟು ಸಣ್ಣ ಚೊಂಬು, ಮಗ್ಗುಗಳು ನಮ್ಮ ಮನೆಯಲ್ಲಿದ್ದವಂತೆ. ದೊಡ್ಡ ಚೊಂಬು ಇದ್ದರೆ ಜಾಸ್ತಿ ನೀರು ಖರ್ಚಾಗುತ್ತದೆಯಲ್ಲವೇ? ‘ನಿನ್ನ ಅಜ್ಜಿಯ ಹೆದರಿಕೆಗೆ ಎಷ್ಟೋ ಸಲ ನಾವು ಬರೀ ಎರಡೇ ಚೊಂಬು ನೀರಲ್ಲಿ ಸ್ನಾನ ಮಾಡಿ ಮುಗಿಸ್ತಿದ್ಯ’ ಅಂತ ಅಪ್ಪ ಆಗೀಗ ನೆನಪು ಮಾಡಿಕೊಂಡು ಹೇಳುತ್ತಾನೆ. ‘ಬಿಂದಿಗೆ ಹೊತ್ತ ನಾರಿ’ ಎಂಬುದು ರೂಪಕಕ್ಕಷ್ಟೇ ಚೆಂದ, ಹೊರುವ ಕಷ್ಟ ನಾರಿಗಷ್ಟೇ ಗೊತ್ತು ಅಂತ ನಾನು ಅಂದುಕೊಳ್ಳುತ್ತಿದ್ದೆ.

ಅಪ್ಪ ಸಂಸಾರ ವಹಿಸಿಕೊಂಡಮೇಲೆ ಮೊದಲು ಮಾಡಿದ ಕೆಲಸ ಮನೆಯ ಆವರಣದಲ್ಲೊಂದು ಬಾವಿ ತೆಗೆಸಿದ್ದು. ನನ್ನ ದೊಡ್ಡತ್ತೆಯ ಬಾಣಂತನಕ್ಕೆ ಅಜ್ಜಿ ಸರ್ಕಾರಿ ಬಾವಿಯಿಂದ ನೀರು ಹೊರುವುದನ್ನು ಅವನಿಗೆ ನೋಡಲಾಗಲಿಲ್ಲವಂತೆ. ನನ್ನ ಅಜ್ಜಿಯ ತಮ್ಮ ರಾಘವೇಂದ್ರಜ್ಜ ಅಂತರ್ಜಲ ನೋಡುವ ಕಲೆಯಲ್ಲಿ ನಿಪುಣ. ಅವನನ್ನು ಕರೆಸಿ, ಮನೆಯ ಹತ್ತಿರ ಜಲ ನೋಡಿಸಿದ್ದು. ಸುಮಾರು ಹೊತ್ತು ತೆಂಗಿನಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು ಮನೆಯ ಸುತ್ತಮುತ್ತ ಓಡಾಡಿದ ರಾಘವೇಂದ್ರಜ್ಜ, ಬೀಡಿ ಮುಗಿಯುವುದರೊಳಗೆ ಮನೆಯ ಸ್ವಲ್ಪ ಹಿಂದೆ ನೀರ ನಿಕ್ಷೇಪ ಇರುವುದು ಪತ್ತೆ ಹಚ್ಚಿದ. ಅಲ್ಲಿಗೆ ಹೋಗಿ ಅಂವ ನಿಲ್ಲುತ್ತಿದ್ದಂತೆ ತೆಂಗಿನಕಾಯಿಯೂ ಜುಟ್ಟು ಮೇಲೆ ಮಾಡಿ ನಿಂತಿತಂತೆ! ಅವನ ಅಣತಿಯಂತೆ ಅಗೆಯಲು, ಐವತ್ತು ಅಡಿ ಆಳದಲ್ಲಿ ಅಂತೂ ನೀರು ಸಿಕ್ಕಿತು. ಬಾವಿಯ ಸುತ್ತ ಒಂದು ಕಟ್ಟೆ ಎದ್ದುನಿಂತಿತು. ಆ ಕಡೆಗೊಂದು - ಈ ಕಡೆಗೊಂದು ಕವಲುಕಂಬಗಳು ಹೂಳಲ್ಪಟ್ಟು, ಅದರ ಮೇಲೊಂದು ಮರದ ತುಂಡು ಹೇರಿ, ಮಧ್ಯದಲ್ಲಿ ಗಡಗಡೆ ಕಟ್ಟಿ, ಪೇಟೆಯಿಂದ ತಂದ ಅರವತ್ತಡಿ ಉದ್ದದ ಬಾವಿಹಗ್ಗಕ್ಕೆ ಕುಣಿಕೆ ಬಿಗಿದು, ಕೊಡಪಾನ ಇಳಿಸಿ, ಅಜ್ಜಿ-ಅತ್ತೆಯರೆಲ್ಲ ನಿಟ್ಟುಸಿರಾಗುವಂತೆ, ಗಂಗೆಯನ್ನು ಮೇಲೆತ್ತಿಯೇಬಿಟ್ಟರು!

ಆದರೆ ನಮ್ಮ ಮನೆಯ ಬಾವಿಯ ಜಲದ ಸೆಲೆ ಅಷ್ಟೊಂದು ಚೆನ್ನಾದ್ದಲ್ಲ. ಸರ್ಕಾರಿ ಬಾವಿಯಲ್ಲಿ ವರುಷವಿಡೀ ನೀರು ಕೈಗೆಟುಕುವಷ್ಟು ಸಮೀಪವಿರುತ್ತದೆ. ಊರಿನ ಐದಾರು ಮನೆಗಳಲ್ಲೂ ಹಾಗೆಯೇ. ನಮ್ಮ ಮನೆಯ ಬಾವಿ ಜೋರು ಮಳೆಗಾಲದಲ್ಲಿ ತುಂಬಲ್ಪಟ್ಟು ಕಟ್ಟೆಯಿಂದ ತುಸು ಕೆಳಗಿರುವ ಪೈಪಿನ ಮೂಲಕ ನೀರು ಹೊರಬರುತ್ತದಾದರೂ ಮೇ ತಿಂಗಳಿನ ಹೊತ್ತಿಗೆ ನೀರು ತಳ ಕಂಡಿರುತ್ತದೆ. ಪಂಪ್‌ಸೆಟ್ಟಿನ ಫೂಟ್‌ವಾಲ್ವ್‌ಗೆ ನೀರು ಸಿಗದೇ ಒದ್ದಾಡುತ್ತದೆ. ಪ್ರತಿವರ್ಷವೂ ಬೇಸಿಗೆಯ ಕಡೆಯ ಎರಡು ತಿಂಗಳು ಮೋಟರು ಕೆಲಸ ಮಾಡದೆ ನೀರು ಸೇದುವುದು ಅನಿವಾರ್ಯವಾಗುತ್ತದೆ. ಏಳೆಂಟು ವರ್ಷಗಳ ಕೆಳಗೆ ‘ಜಲ ಜಾಗೃತಿ’ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಸೀಮೆಯ ಒಂದಷ್ಟು ಪ್ರಗತಿಪರರು ಊರೂರಿನಲ್ಲಿ ಜಾತಾ ಮಾಡಿದ್ದರು. ‘ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಇಲ್ಲವಾಗುವುದಕ್ಕೆ ಮಳೆಗಾಲದಲ್ಲಿ ಜಲದ ಸೆಲೆಗಳು ಸರಿಯಾಗಿ ಭರ್ತಿಯಾಗದಿರುವುದೇ ಕಾರಣ. ಮಳೆಯ ನೀರು ಹರಿದು ಕೆರೆಕೋಡಿ ಸೇರುತ್ತದೆ, ನೆಲದಲ್ಲಿ ಇಂಗುತ್ತಲೇ ಇಲ್ಲ. ಹಾಗಾಗಿ ನಿಮ್ಮ ಬಾವಿಯ ಆವರಣದಲ್ಲಿ ಇಂಗುಗುಂಡಿಗಳನ್ನು ಮಾಡಿ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಬೇಕು’ ಅಂತ ಕರೆ ಕೊಟ್ಟರು. ಅಮ್ಮ ಬೇಸಿಗೆಯಲ್ಲಿ ನೀರು ಸೇದೀ ಸೇದೀ ರಟ್ಟೆ ನೋವು ಮಾಡಿಕೊಂಡು ಅಮೃತಾಂಜನ ತಿಕ್ಕಿಕೊಳ್ಳುವುದನ್ನು ನೋಡಲಾರದ ನಾನೂ ನಮ್ಮ ಹಿತ್ತಿಲಿನಲ್ಲಿ ಗುದ್ದಲಿಯಿಂದ ಸುಮಾರು ಗುಂಡಿಗಳನ್ನು ತೋಡಿ ಬಂದೆ. ಅದರಿಂದ ಬಾವಿಯ ನೀರಿನ ಮಟ್ಟ ಏರಿತೋ ಇಲ್ಲವೋ ಗೊತ್ತಿಲ್ಲ, ಆದರೆ ಜಾನುವಾರಿಗೆ ಹುಲ್ಲು ಕೊಯ್ಯಲು ಹೋದ ಅಪ್ಪ ಆ ಗುಂಡಿಯಲ್ಲಿ ಕಾಲು ಹಾಕಿ ಸರಿಯಾಗಿ ಉಳುಕಿಸಿಕೊಂಡು ಬಂದ. ಒಟ್ಟಿನಲ್ಲಿ ಅಮೃತಾಂಜನದ ಕಂಪನಿಗೆ ಅಳಿವಿಲ್ಲ ಅಂತ ನಾನು ತೀರ್ಮಾನಿಸಿದೆ.

ವೀಣತ್ತೆಯ ಮಗಳು ವರ್ಷ ನಮ್ಮ ಮನೆಗೆ ಬಂದಾಗ ಅವಳನ್ನು ಕಾಯುವುದು ಒಂದು ಸಾಹಸವೇ ಆಗುತ್ತಿತ್ತು. ಏಕೆಂದರೆ ಅವಳೂರಿನಲ್ಲಿ ಅಬ್ಬಿ ನೀರು. ಬಾವಿ ಅವಳಿಗೆ ಹೊಸತು. ತನಗಿಂತ ಎತ್ತರದ ಕಟ್ಟೆಯನ್ನು ಸುತ್ತ ಕಟ್ಟಿಸಿಕೊಂಡು ಬಚ್ಚಲಮನೆಯ ಪಕ್ಕದಲ್ಲಿ ನಿಗೂಢವಾಗಿದ್ದ ಬಾವಿ ಅವಳಿಗೆ ಕುತೂಹಲಕಾರಿಯಾಗಿತ್ತು. ದೇವರ ಪೂಜೆ, ಕುಡಿಯುವ ನೀರು ಅಂತ ದಿನಕ್ಕೆ ಎರಡ್ಮೂರು ಬಾರಿಯಾದರೂ ನಾವು ನೀರೆತ್ತುವುದು, ಕೆಳಗಿಳಿಸುವಾಗ ಖಾಲಿಯಾಗಿದ್ದ ಸ್ಟೀಲಿನ ಕೊಡಪಾನ ಮೇಲೆ ಬರುವಷ್ಟರಲ್ಲಿ ತುಂಬಿಕೊಂಡಿರುವುದು, ಅವಳಿಗೆ ಆಶ್ಚರ್ಯವಾಗಿತ್ತು. ನಾವು ಸ್ವಲ್ಪ ಆಚೀಚೆ ಹೋದರೂ ಸಾಕು, ಅವಳು ಸೀದಾ ಬಾವಿಕಟ್ಟೆ ಹತ್ತಿ ಕೆಳಗಿಣುಕುವ ಸಾಹಸ ಮಾಡುತ್ತಿದ್ದಳು. ‘ಕೆಳಗಡೆ ಬಿದ್ರೆ ಮುಳುಗಿಹೋಗ್ತೆ ಅಷ್ಟೇ.. ಅಲ್ಲಿ ಹಾವು, ಮೊಸಳೆ, ಭೂತ ಎಲ್ಲಾ ಇದ್ದ’ ಅಂತ ಹೆದರಿಸಿದರೂ ಪುಟ್ಟಿ ಕೇಳುತ್ತಿರಲಿಲ್ಲ. ಕೊನೆಗೆ ನಾವೇ ಅವಳನ್ನೆತ್ತಿಕೊಂಡು ಚೂರೇ ಬಗ್ಗಿಸಿ ‘ನೋಡಿದ್ಯಾ? ಎಷ್ಟು ಆಳ ಇದ್ದೂ..?’ ಅಂತ ತೋರಿಸಬೇಕು, ಅವಳು ಹೆದರಿದಂತೆ ನಟಿಸಿ ‘ಹೂಂ, ನಾ ಇನ್ನು ಇದರ ಹತ್ರ ಬರದಿಲ್ಯಪಾ’ ಎನ್ನಬೇಕು.

ಬಾವಿಯೊಂದಿಗೆ ನಾವು ಅನುಭವಿಸಿದ ಪುಳಕಗಳನೇಕವನ್ನು ವರ್ಷ ಪುಟ್ಟಿ ಅನುಭವಿಸಲಿಲ್ಲವಲ್ಲಾ ಅಂತ ನಾನು ಅಂದುಕೊಳ್ಳುತ್ತಿದ್ದೆ. ಚಿಕ್ಕವರಿದ್ದಾಗ ಬಾವಿಯ ಬಳಿ ಹೋಗಲು ನಮಗೂ ದೊಡ್ಡವರ ತಡೆಯಿತ್ತಾದರೂ ನಮಗೆ ಬಾವಿಯೆಂದರೆ ಆಳವಿರುವ, ತುಂಬ ನೀರಿರುವ, ಅಕಸ್ಮಾತ್ ಬಿದ್ದರೆ ಮತ್ತೆ ಬರಲಾಗದ ಕೂಪ ಎಂಬ ಅರಿವಿತ್ತು. ಆದರೆ ತೋಟದ ಕಾದಿಗೆಯಲ್ಲಿ ಮೀನು ಹಿಡಿದು, ಹೊಂಬಾಳೆಯಲ್ಲಿಟ್ಟುಕೊಂಡು ಬಂದು ಮನೆಯ ಬಾವಿಗೆ ಬಿಡುವ ಸಂಭ್ರಮದಲ್ಲಿ ಮಾತ್ರ ಅವೆಲ್ಲ ನೆನಪಾಗುತ್ತಿರಲಿಲ್ಲ. ಮೀನು ಬಿಟ್ಟ ಮರುದಿನದಿಂದ ಯಾರೇ ನೀರು ಸೇದಲು ಬಂದರೂ ಅವರೊಂದಿಗೂ ನಾನೂ ನಿಂತು, ಮೇಲೆ ಬಂದ ಕೊಡಪಾನದಲ್ಲಿ ನಾವು ಬಿಟ್ಟ ಮೀನೇನಾದರೂ ಬಂದಿದೆಯಾ ಅಂತ ನೋಡುವ ಕುತೂಹಲಕ್ಕೆ ಪಾರವಿರಲಿಲ್ಲ. ಒಂದಲ್ಲಾ ಒಂದು ದಿನ ಮೀನು ಕೊಡಪಾನದಲ್ಲಿ ಬಂದೇ ಬಿಡುತ್ತಿತ್ತು. ಅಮ್ಮ ‘ಥೋ, ಇದ್ಯಾವಾಗ ತಂದು ಬಿಟ್ಟಿದ್ರಾ? ಕುಡಿಯೋ ನೀರು.. ಥೋ..’ ಎನ್ನುತ್ತಾ, ಹೆದರುತ್ತಾ ಆ ಮೀನನ್ನು ಎಡಗೈಯಿಂದ ತೆಗೆದು ಬಿಸಾಕುತ್ತಿದ್ದಳು. ನಾನು ಮತ್ತೆ ಅದನ್ನು ನೀರು ತುಂಬಿದ ಹಾಳೆಯಲ್ಲಿಟ್ಟುಕೊಂಡು ಬಂದು ತೋಟದ ಕಾದಿಗೆಯಲ್ಲಿ ಬಿಡುತ್ತಿದ್ದೆ.

ಒಮ್ಮೆ ಅಮ್ಮ ನೀರು ಸೇದುವಾಗ ಕುಣಿಕೆ ಸರಿಯಾಗಿ ಹಾಕದೆ ಕೊಡಪಾನ ಬಾವಿಯಲ್ಲಿ ಬಿದ್ದುಬಿಟ್ಟಿತು. ಅರ್ಧದವರೆಗೆ ಬಂದಿದ್ದ ಕೊಡ ಕಳಚಿ ಬಿದ್ದುದಕ್ಕೆ ಹಗ್ಗ ಹಿಡಿದು ಜಗ್ಗುತ್ತಿದ್ದ ಇವಳೂ ಆಯತಪ್ಪಿ ಹಿಂದೆ ಬಿದ್ದಳು. ಎರಡೆರಡು ಸದ್ದು ಕೇಳಿ ಮನೆಮಂದಿಯೆಲ್ಲ ಏನೋ ಅನಾಹುತವಾಯಿತೆಂದು ಓಡಿ ಬಂದೆವು. ಬಗ್ಗಿ ನೋಡಿದರೆ ಪ್ಲಾಸ್ಟಿಕ್ ಕೊಡಪಾನ ತೇಲುತ್ತಿತ್ತು. ತಕ್ಷಣ ಬುಟ್ಟಿ ಇಳಿಬಿಟ್ಟು ತಡಕಾಡಿದರೂ ಮೇಲೆತ್ತಲಾಗಲಿಲ್ಲ. ಬದಲಿಗೆ ಅದು ಪೂರ್ತಿ ಮುಳುಗಿಯೇ ಹೋಯಿತು. ಆಮೇಲೆ ಸೀತಾರಾಮಣ್ಣನ ಮನೆಯಿಂದ ಪಾತಾಳಗರುಡ ತಂದು ಹರಸಾಹಸ ಮಾಡಿದರೂ ಅದು ಸಿಗಲೇ ಇಲ್ಲ. ಮಣ್ಣಿನಲ್ಲಿ ಹೂತು ಹೋಗಿರಬಹುದೆಂದು ತೀರ್ಮಾನಿಸಿ, ಹೇಗೂ ಬಾವಿ ಸೋಸದೆ ಸುಮಾರು ವರ್ಷ ಆಗಿದ್ದುದರಿಂದ, ಯಾರಾದರೂ ಪರಿಣಿತರನ್ನು ಕರೆಸಿ ಸೋಸುವುದು ಅಂತ ಆಯಿತು. ಮಳಲಗದ್ದೆಯ ಕನ್ನಪ್ಪ ಎಂಬುವವ ಈ ಕೆಲಸದಲ್ಲಿ ಭಾರಿ ಜೋರಿದ್ದಾನೆ ಅಂತ ಯಾರೋ ಅಂದರು. ಕನ್ನಪ್ಪನಿಗೆ ಬುಲಾವ್ ಹೋಯಿತು.

ಈ ಕನ್ನಪ್ಪ ಬಂದವನೇ ಮೊದಲು ಒಂದು ಲಾಟೀನು ಹೊತ್ತಿಸಿ ಬಾವಿಗೆ ಇಳಿಸಿ ನೋಡಿದ. ಕೆಳಕೆಳಗೆ ಹೋಗುತ್ತಿದ್ದಂತೆ ಅದು ಆರಿಹೊಯ್ತು. ‘ಹೋಯ್, ಈ ಬಾವಿಗೆ ಇಳದ್ರೆ ನನ್ ಕತೆ ಪೋಂಯ! ಉಸುರೇ ಇಲ್ಲ ಇದ್ರಲ್ಲಿ. ಮೊದ್ಲು ಬಾಳೆದಿಂಡು ತಕಂಬನ್ನಿ’ ಅಂತ ಆಜ್ಞಾಪಿಸಿದ. ಸರಿ, ಬಾಳೆದಿಂಡು ಕಡಿದು ತಂದು ಏಳೆಂಟು ಸಲ ಇಳಿಸಿ ಏರಿಸಿ ಮಾಡಿ ಬಾವಿಯೊಳಗೊಂದಷ್ಟು ಆಮ್ಲಜನಕ ತುಂಬಿದ್ದಾಯ್ತು. ‘ಇನ್ನು ತೊಂದ್ರೆ ಇಲ್ಲ, ಇಳಿಯಪ್ಪಾ’ ಎಂದು ನಾವು ಹೇಳಿದರೆ, ಇಂವ ‘ಸರಿ, ಇಳಿಸಿ’ ಅಂದ. ನಮಗೆ ಅರ್ಥವಾಗಲಿಲ್ಲ. ಕೊನೆಗೆ ನೋಡಿದರೆ, ಕನ್ನಪ್ಪ ಬಾವಿ ಸೋಸುವುದರಲ್ಲಿ ಮಾತ್ರ ನಿಪುಣನಿದ್ದನೇ ವಿನಹ ಬಾವಿಗೆ ಇಳಿಯುವುದರಲ್ಲಾಗಲೀ ವಾಪಸು ಹತ್ತುವುದರಲ್ಲಾಗಲೀ ಅಲ್ಲ! ಇವನನ್ನು ಒಂದು ದೊಡ್ಡ ಬುಟ್ಟಿಯೊಳಗೆ ಕೂರಿಸಿ ಇಳಿಸಿ ನಾವೇ ಮೇಲೆತ್ತಬೇಕಿತ್ತು! ಹತ್ತತ್ತಿರ ಒಂದು ಕ್ವಿಂಟಾಲ್ ತೂಕವಿದ್ದ ಇವನನ್ನು ಇಳಿಸಿ-ಎತ್ತುವುದೆಂದರೆ! ಕನ್ನಪ್ಪನಿಗೆ ಮೊದಲೇ ದುಡ್ಡು ಕೊಟ್ಟು ಕರಕೊಂಡು ಬಂದ ತಪ್ಪಿಗೆ ಈಗ ಹಾಗೇ ಬಿಡುವಂತೆಯೂ ಇರಲಿಲ್ಲ. ಊರ ಐದಾರು ಜನರನ್ನು ಕರೆಸಿಕೊಂಡು, ದೊಡ್ಡ ಬುಟ್ಟಿಯಲ್ಲಿ ಇವನನ್ನು ಕೂರಿಸಿದ್ದಾಯ್ತು. ಪದ್ಮಾಸನ ಹಾಕಿ ದೇವರ ಥರ ಕನ್ನಪ್ಪ ಕೂತ. ಇವನನ್ನು ಕೆಳಗಿಳಿಸುವಾಗ ಎಲ್ಲಿ ಕಂಬವೋ ಗಡಗಡೆಯೋ ಹಗ್ಗವೋ ತುಂಡಾಗಿ ಧಡಾಲನೆ ಬೀಳುತ್ತಾನೋ ಅಂತ ನಾವೆಲ್ಲ ಭಯದಲ್ಲಿದ್ದಾಗ, ಸ್ಥಿತಪ್ರಜ್ಞ ಕನ್ನಪ್ಪ ಟಾಟಾ ಮಾಡಿದ. ದೇವರಾಣೆಗೂ ನಾವ್ಯಾರೂ ವಾಪಸು ಟಾಟಾ ಮಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ನಮಗ್ಯಾರಿಗೂ ಮುಳುಗುವ ಸೂರ್ಯನ ಉಪಮೆ ನೆನಪಾಗಲಿಲ್ಲ. ಅಂತೂ ಕನ್ನಪ್ಪ ತಳ ತಲುಪಿ ಕೊಡಪಾನವೇ ಅಲ್ಲದೇ ಇನ್ನೂ ಬಿದ್ದಿದ್ದ ಅನೇಕ ವಸ್ತುಗಳನ್ನೂ, ಕೂತಿದ್ದ ಹೂಳುಮಣ್ಣನ್ನೂ ಮೊಗೆದು, ನಾವು ಇಳಿಬಿಟ್ಟ ಬುಟ್ಟಿಯಲ್ಲಿ ತುಂಬಿ ತುಂಬಿ ಮೇಲೆ ಕಳುಹಿಸಿ ಬಾವಿಯನ್ನು ಸ್ವಚ್ಚ ಮಾಡಿ, ಅರ್ಧಗಂಟೆಯ ನಂತರ ಮತ್ತದೇ ಬುಟ್ಟಿಯಲ್ಲಿ ಕೂತು ಜಗದೇಕವೀರನಂತೆ ಮೇಲೆ ಮೂಡಿಬಂದಾಗ, ಅವನಿಗೆ ಹಾಕಲಿಕ್ಕೆ ಒಂದು ಗೊಲ್ಟೆ ಹೂವಿನ ಹಾರವೂ ಇಲ್ಲವಲ್ಲಪ್ಪಾ ಅಂತ ನಾವು ಕೈ ಕೈ ಹಿಸುಕಿಕೊಂಡೆವು. ಆದರೆ ಅದಕ್ಕೇನು ಬೇಸರಿಸಿಕೊಳ್ಳದ ಕನ್ನಪ್ಪ ‘ಇನ್ನೊಂದು ಐವತ್ರುಪಾಯಿ ಜಾಸ್ತಿ ಕೊಡ್ರೀ ಹೆಗಡೇರೇ’ ಅಂತ ಹೇಳಿದ.

ನಮ್ಮ ಮನೆಯ ಬಾವಿಯಲ್ಲಿ ಒಂದು ಫ್ರಿಜ್ ಇತ್ತು. ‘ಅದು ಹ್ಯಾಗೆ ಬಿತ್ತು?’ ಅಂತ ಕೇಳಬೇಡಿ. ನೀವು ಅಂದುಕೊಂಡ ಎಲೆಕ್ಟ್ರಿಕ್ ರೆಫ್ರಿಜರೇಟರ್ ಅಲ್ಲ ಅದು. ನೈಸರ್ಗಿಕ ಶಿತಿಲೀಕರಣ ಯಂತ್ರ ಅದು. ಒಂದು ಕೈಚೀಲಕ್ಕೆ ಹಗ್ಗ ಕಟ್ಟಿ, ಅದನ್ನು ನೀರಿನ ಸಮೀಪದವರೆಗೆ ಇಳಿಬಿಟ್ಟು, ಹಗ್ಗದ ಈ ತುದಿಯನ್ನು ಮೇಲೆ ಕಂಬಕ್ಕೆ ಕಟ್ಟಿರುತ್ತಿದ್ದೆವು. ಈ ಚೀಲದೊಳಗೆ ನಿಂಬೆಹಣ್ಣು, ವೀಳ್ಯದೆಲೆ, ಕೊತ್ತಂಬರಿ ಕಟ್ಟು, ಇತ್ಯಾದಿ ವಸ್ತುಗಳನ್ನು ಹಾಕಿ ಬಾವಿಯೊಳಗೆ ಇಳಿಸಿಟ್ಟರೆ ವಾರಗಳವರೆಗೆ ಅವು ಹಾಳಾಗದೇ ಇರುತ್ತಿದ್ದವು. ಕವಳದ ತಬಕಿನಲ್ಲಿ ವೀಳ್ಯದೆಲೆ ಖಾಲಿಯಾಯಿತೆಂದರೆ ಮತ್ತೆ ತೋಟಕ್ಕೆ ಓಡುವ ಅಗತ್ಯವಿರುತ್ತಿರಲಿಲ್ಲ. ಬಾವಿಯ ಬಳಿ ಹೋಗಿ ಈ ಹಗ್ಗ ಎಳೆದರೆ ಸಾಕು, ತಾಜಾ ತಾಜಾ ಎಲೆ ಫ್ರಿಜ್ಜಿನಲ್ಲಿ ನಮ್ಮನ್ನೇ ಕಾಯುತ್ತಿರುತ್ತಿತ್ತು.

ಬಾವಿ, ಮೇಲ್ಚಾವಣಿ ಇಲ್ಲದ ಹೊರ ಆವರಣದಲ್ಲಿದ್ದರೆ ಚಂದ. ಆಗ ತುಂಬುಚಂದಿರನೂ ಮೋಹಗೊಂಡು ಇದರಲ್ಲಿ ಬಿದ್ದೇಬಿಡುತ್ತಾನೆ. ನೀರವ ರಾತ್ರಿಯಲ್ಲಿ, ನಿಶ್ಚಲ ನೀರಲ್ಲಿ, ತೇಲುತ್ತಿರುವ ಚಂದಿರನನ್ನು ಬಿಂದಿಗೆ ಇಳಿಬಿಟ್ಟು ಎತ್ತುವಾಗ ಹುಡುಗಿ, ಕವಿಗಳೆಲ್ಲ ನವಿಲುಗರಿ ಹಿಡಿದು ಸಜ್ಜಾಗುತ್ತಾರೆ. ಸುಂದರಿಯ ಸೊಂಟಪೀಟದಲ್ಲಿ ಕೂತ ಬಿಂದಿಗೆಯಲ್ಲಿ ಶಶಿ ಮುಗುಳ್ನಗುವಾಗ ಪರವಶರಾಗುತ್ತಾರೆ.

ಕೇರಿಗೊಂದೇ ಬಾವಿಯಾಗಿಬಿಟ್ಟರಂತೂ ಹೆಂಗಸರಿಗೆ ಇದು ಹರಟೆಕಟ್ಟೆಯಾಗಿಬಿಡುತ್ತದೆ. ನೀರು ತುಂಬಲು ಬಂದವರೆಲ್ಲ ಹಗ್ಗ ಇಳಿಬಿಟ್ಟು ಕತೆ ಹೊಡೆಯುವರು. ಪಾತಾಳದಲ್ಲೆಲ್ಲೋ ದುಡದುಡ ಸದ್ದು ಮಾಡುತ್ತಾ ಬಿಂದಿಗೆ ತುಂಬಿದ್ದು ಇವರ ಅರಿವಿಗೇ ಬರುವುದಿಲ್ಲ. ಅಂದಿನ ಅಡುಗೆ, ಮನೆಗೆ ಬಂದಿರುವ ನೆಂಟರು, ಯಾರದೋ ಮನೆಯ ಕತೆ, ಮತ್ಯಾರದೋ ಬಗೆಗಿನ ಗುಸುಗುಸುಗಳಿಗೆಲ್ಲ ಬಾವಿಕಟ್ಟೆಯೇ ವೇದಿಕೆ. ತುಂಬಿದ ಬಿಂದಿಗೆ ಮೇಲೆಳೆಯುವಾಗ ಇವಳಿಗೆ ಅವಳೂ ಅವಳಿಗೆ ಇವಳೂ ಸಹಾಯ ಮಾಡುವರು. ಅದನ್ನು ಸೊಂಟದಲ್ಲಿಟ್ಟುಕೊಂಡು ಮನೆ ತಲುಪುವವರೆಗೂ ಕತೆ ಮುಗಿಯುವುದೇ ಇಲ್ಲ.

ನಗರಗಳಲ್ಲಿ ಬಾವಿಯೇ ಇರುವುದಿಲ್ಲ. ಅಡಿ ಜಾಗವೇ ದುಬಾರಿಯಾಗಿರುವ ಕಾಲದಲ್ಲಿ ಅಷ್ಟು ದೊಡ್ಡ ಜಾಗವನ್ನು ಬಾವಿಗಾಗಿ ಮೀಸಲಿಡಲು ಸಾಧ್ಯವೂ ಇಲ್ಲ. ಅಂಗೈಯಷ್ಟು ಅಗಲದಲ್ಲಿ ಬೋರ್ ಕೊರೆದು ನೀರೆತ್ತಿಬಿಡುತ್ತಾರೆ. ಮಳೆಯ ಏರುಪೇರು, ಮರಗಳ ಹನನ, ಅತಿಯಾಗಿ ಬೋರ್‌ವೆಲ್ ಕೊರೆಯುವುದರಿಂದಾಗಿ ಹಳ್ಳಿಗಳಲ್ಲೂ ಅಂತರ್ಜಲದ ಪ್ರಮಾಣ ಇಳಿಕೆಯಾಗಿ ಸುಮಾರು ಬಾವಿಗಳು ಪಾಳಾಗುತ್ತಿವೆ. ಬೇಸಿಗೆ ಬಂತೆಂದರೆ ಮಲೆನಾಡಿನಲ್ಲೂ ಬರ. ಭವಿಷ್ಯದ ಬಗ್ಗೆ ಯೋಚಿಸಲು ಭಯ ಪಡುವ ಮನಸು ಮೌನದಲ್ಲೇ ಹಾರೈಸುತ್ತದೆ: ಎಲ್ಲ ಬಾವಿಯಲ್ಲೂ ಸದಾ ಸಿಹಿನೀರು ತುಂಬಿರಲಿ. ಬಿಂದಿಗೆಯ ನೀರು ತುಳುಕಿದರೆ ತರುಣಿ ಪುಳಕಗೊಳ್ಳಲಿ. ಬಾವಿಯ ಸುತ್ತ ಬೆಸೆದುಕೊಂಡಿರುವ ಭಾವಬಂಧ ಚಿರಂತನವಿರಲಿ.

[ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ.]