Sunday, January 29, 2012

ಮತ್ತೆ ಬರೆದ ಕವಿತೆ


ಬರೆಯದೇ ಹಾಗೇ ಇದ್ದುಬಿಟ್ಟರೆ ಏನಾಗುತ್ತದೆ?
ಏನೂ ಆಗುವುದಿಲ್ಲ. ಖಾಲಿ ಹಾಳೆ. ತುಂಬು ಇಂಕಿನ ಪೆನ್ನು
ಕ್ಷಣಗಳನ್ನಾಚೀಚೆ ತಳ್ಳುತ್ತ ನಡೆದ ಲೋಲಕದ ಹೆಜ್ಜೆ ಸದ್ದು
ತಂತಿ ಬಿಗಿಹಿಡಿದೆಳೆದಷ್ಟೂ ಪ್ರವಹಿಸುವ ಸಿತಾರಿನ ಝರಿ
ಔಷಧಿ ನಿಲ್ಲಿಸಿದ್ದೇ ಮತ್ತೆ ಶುರುವಾಗುವ ವಾತ ಕಸ
ಹೇಗಿದ್ದ ಚಿನ್ನಾರಿಮುತ್ತನೂ ಬೆಳೆದು ಹೇಗೋ ಆಗಿಬಿಡುತ್ತಾನೆ.

ಹಿಡಿಯದೇ ಬಿಟ್ಟ ಮೀನುಗಳಿಗೋ, ತಮ್ಮ ಹೆಜ್ಜೆಯನ್ನೇ ಪತ್ತೆ-
ಹಚ್ಚಲಾಗದು ಎಂಬ ಜಂಬ. ಕಿವಿರುಗಳಲಿ ತುಂಬಿದ
ಬೆಚ್ಚನೆ ಉಸಿರಿನಲಿ ಗರ್ಭದಲ್ಲಡಗಿದ ಸಾವಿರ ಮೊಟ್ಟೆಗಳ ಗುಟ್ಟು.
ಭಾರ ಹೊಟ್ಟೆಯೆಳೆದು ಈಜಿದ್ದೇನು! ಇನ್ನೇನು ಕೆಲವೇ ದಿನ:
ಸಾವಿರ ಮರಿಗಳ ಈಜು ಸೃಷ್ಟಿಸಲಿರುವ ಪ್ರವಾಹದ ಮುನ್ಸೂಚನೆ
ಬೆಸ್ತನ ರೇಡಿಯೋದ ಹವಾ ವರ್ತಮಾನದಲ್ಲಿ ಬಂದೇ ಇಲ್ಲ.

ಅಕ್ವೇರಿಯಮ್ಮಿನ ನಕ್ಷತ್ರ ಮೀನು ಮನೆಯೆದುರಿಗೆ ತೂಗಿ
ಬಿಟ್ಟ ಆಕಾಶಬುಟ್ಟಿಯಲಿ ತನ್ನನೇ ಕಂಡು ದಿಗ್ಭ್ರಾಂತಗೊಂಡಿದೆ.
ಸಂತಾಪ ಸೂಚಕ ಸಭೆಯಲ್ಲಿ ಬೆಕ್ಕೊಂದು ಮ್ಯಾಂವ್‌ಗುಟ್ಟಿ
ಒಂದು ನಿಮಿಷದ ಮೌನದಲ್ಲಪಶೃತಿಯಾಗಿದೆ.
ಹತ್ತಂಗಡಿ ಹತ್ತಿಳಿದರೂ ಸರಿಯಾದ ಸೈಜಿನ ಉಂಗುರ ಸಿಗದೇ
ನಿಶ್ಚಿತಾರ್ಥ ನಿಗದಿಯಾದ ಜೋಡಿಗೆ ಕಳವಳವಾಗಿದೆ.

ಎಲ್ಲೂ ಸುದ್ದಿಯಾಗದ ಸಂಗತಿಗಳೇ ಬೇಕಿದೆ ಕವನಕ್ಕೆ
ಇನ್ನೂ ಮುದ್ದು ಮಾಡದ ಟೆಡ್ಡಿಯೇ ಬೇಕಿದೆ ಉಡುಗೊರೆಗೆ
ಮಶಿಯ ನಿಬ್ಬಿನಿಂದಕ್ಷರಗಳರಳರಳಿ ಬರುತ್ತಿವೆ ಉಕ್ಕಿ
ಮಶೀನಿನುಬ್ಬೆಯಲಿ ಬೆಂದರಳಿ ಬಂದ ಪಾಪ್‌ಕಾರ್ನ್
ಕೋನ ಪಾಕೀಟಿನಲಿ ಸಿದ್ದ ಕವಿತೆಯಂತೆಯೇ ಇದೆ
ಹಿಡಿ ಬೊಗಸೆ: ನಿನಗೂ ನಾಲ್ಕು ಕೊಡುವೆ.