ಪಿಯೂಸಿ ಮುಗಿಸಿದ ಮೇಲೆ ಮುಂದೆ ಓದದೇ ಮನೆಯಲ್ಲೇ ಉಳಿದಿದ್ದ ಮಗಳು ಪೂರ್ಣಿಮಾಳನ್ನು ಕಾಲಿಗೊರಗಿಸಿಕೊಂಡು ಅವಳ ಬಿಚ್ಚಿದ ಕೂದಲ ನಡುವೆ ಹೇನು ಹುಡುಕುತ್ತಾ ಹಿತ್ಲಕಡೆ ಮೆಟ್ಟಿಲ ಮೇಲೆ ಕೂತಿದ್ದ ಶರಾವತಿ, ಓಡಿಹೋಗುತ್ತಿದ್ದ ದೊಡ್ಡದೊಂದು ಗೂಳಿ ಹೇನನ್ನು ಹೆಕ್ಕಿ ತನ್ನ ಎಡಗೈ ಹೆಬ್ಬೆರಳ ಉಗುರ ಮೇಲಿಟ್ಟುಕೊಂಡು, ಬಲಗೈ ಹೆಬ್ಬೆರಳ ಉಗುರಿನಿಂದ 'ಚಟ್' ಎನಿಸುತ್ತಾ ಒರೆಯುವಾಗ "ಅಮಾ ಎಲ್ಲಿ ಎಲ್ಲಿ? ಎಷ್ಟು ದೊಡ್ಡದು?" ಎಂದು ಕೇಳಿದಳು ಪೂರ್ಣಿಮಾ. "ನೋಡೋದೆಂತಿದ್ದು ಅದ್ರಲ್ಲಿ? ಗೂಳಿ ಹೇನು! ಆ ಮೇಸ್ತ್ರಿ ಮಗಳು ನಾಗ್ರತ್ನನ ಜೊತೆ ಸೇರಡ ಅಂದ್ರೆ ಕೇಳದಿಲ್ಲೆ.. ಅವ್ವೆಲ್ಲ ವಾರಕ್ಕೊಂದು ಸಲ ಸ್ನಾನ ಮಾಡೋದು.. ಹೇನಾಗ್ದೆ ಇರ್ತಾ? ನೀನು ಅವಳ ಜೊತೆ ಸುತ್ತಿದ್ರೆ ಅವಳ ತಲೆ ಹೇನೆಲ್ಲ ನಿನ್ ತಲೇಗೆ ಸೇರ್ಕ್ಯಳ್ತು ಅಷ್ಟೆ.. ಇನ್ನು ನಾಕು ತಿಂಗ್ಳಾದ್ರೆ ಮದ್ವೆ ನಿಂಗೆ.. ಸ್ವಲ್ಪಾನೂ ಜವಾಬ್ದಾರಿ ಇಲ್ಲೆ" ಬೈದಳು ಅಮ್ಮ. ಮಗಳು ಮುಖ ಊದಿಸಿಕೊಂಡಳು.
ನಾಗರತ್ನಳ ಜೊತೆ ಅದು ಹೇಗೆ ತಾನೆ ಸೇರದಿರುವುದು? ...ಪೂರ್ಣಿಮಾಗೆ ತಿಳಿಯುವುದಿಲ್ಲ. ಮೊದಲಿನಿಂದಲೂ ಅವರಿಬ್ಬರೂ ಫ್ರೆಂಡ್ಸು. ಅವರಿಬ್ಬರೂ ಒಟ್ಟಿಗೇ ಶಾಲೆಗೆ ಹೋಗಿದ್ದು, ಒಟ್ಟಿಗೇ ಓದಿದ್ದು, ಒಟ್ಟಿಗೇ ಆಡಿದ್ದು, ಒಟ್ಟಿಗೇ ಉಂಡದ್ದು, ಒಟ್ಟಿಗೇ ಬೆಳೆದದ್ದು ಮತ್ತು, ದೊಡ್ಡವರಾದಮೇಲೆ ತಮ್ಮ ಯೌವನದ ಗುಟ್ಟುಗಳನ್ನು ಪರಸ್ಪರ ಹಂಚಿಕೊಂಡದ್ದು, ನಕ್ಕಿದ್ದು, ಕನಸು ಕಂಡಿದ್ದು. ಪೂರ್ಣಿಮಾ ನಾಗರತ್ನಳ ಮನೆಗೆ ಹೋದಾಗ ನಾಗರತ್ನಳ ಅಮ್ಮ ಬಂಗಾರಮ್ಮ ಇವಳಿಗೆ ಉಪ್ಪು ಹಾಕಿ ಬೇಯಿಸಿದ ಗೆಣಸು ಕೊಡುತ್ತಾಳೆ.. ಅದು ಪೂರ್ಣಿಮಾಗೆ ಇಷ್ಟ.. ಅದಕ್ಕಿಂತಲೂ, ಬಂಗಾರಮ್ಮ ಹೆರೆದು ಅಂಗಳದಲ್ಲಿ ಒಣಗಲು ಹಾಕಿರುವ ಹುಳಿಹುಳಿ ವಾಟೆಕಾಯಿಯ ಸಿಪ್ಪೆ ಎಂದರೆ ಪೂರ್ಣಿಮಾಗೆ ಪ್ರಾಣ.. ಅದಲ್ಲದೆ, ನಾಗರತ್ನ ಅಡುಗೆಮನೆಯಿಂದ ಕದ್ದು, ಇಷ್ಟೇ ಮೆಣಸಿನಪುಡಿ, ಇಷ್ಟೇ ಉಪ್ಪು ಬೆರೆಸಿ, ಒಳ್ಳುಕಲ್ಲಿನ ಮೇಲಿಟ್ಟು ಜಜ್ಜಿ ತಂದುಕೊಡುತ್ತಿದ್ದ ಹುಣಸೇಹಣ್ಣಿನ ಚೂರುಗಳು ಪೂರ್ಣಿಮಾಗೆ ನಾಗರತ್ನಳ ಮೇಲೆ ಮುದ್ದು ಮಾಡುವಷ್ಟು ಪ್ರೀತಿಯನ್ನು ತರುತ್ತಿದ್ದವು. ಅವಳ ಸಂಗದಿಂದ ತಲೆಯಲ್ಲಿ ಹೇನಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇವನ್ನೆಲ್ಲ ಕಳೆದುಕೊಳ್ಳಲಿಕ್ಕೆ ಪೂರ್ಣಿಮಾ ತಯಾರಿರಲಿಲ್ಲ.
ಅವಳ ಅಪ್ಪ ರಘುರಾಮ, ಮೇಸ್ತ್ರಿಯಾಗಿ ಈ ಊರಿಗೆ ಬಂದದ್ದಂತೆ. ಪೂರ್ಣಿಮಾಳ ಅಪ್ಪ ಕೃಷ್ಣಮೂರ್ತಿ ಶಾಸ್ತ್ರಿಗಳೇ ಅವನನ್ನು ಕರೆತಂದದ್ದು. ಪುರೋಹಿತಿಕೆಗೆಂದು ಕರ್ಕಿಕೊಪ್ಪಕ್ಕೆ ಹೋಗಿದ್ದ ಕೃಷ್ಣಮೂರ್ತಿ ಶಾಸ್ತ್ರಿಗಳು, ಅಲ್ಲಿ ತಮ್ಮ ಖಾಯಂ ಪುರೋಹಿತಿಕೆಯ ಮನೆಯೊಂದರ ಗೃಹಪ್ರವೇಶ ಮಾಡಿಸಿದವರು, ಆ ಮನೆ ಕಟ್ಟಿದವರಾರೆಂದು ವಿಚಾರಿಸಿ, ರಘುರಾಮ ಮೇಸ್ತ್ರಿಯನ್ನು ತಮಗೊಂದು ಹೊಸ ಮನೆ ಕಟ್ಟಿ ಕೊಡುವಂತೆ ಊರಿಗೆ ಕರೆತಂದಿದ್ದರು. ಅವನ ಮಗಳು ನಾಗರತ್ನಳೊಂದಿಗೆ ಪೂರ್ಣಿಮಾ ಕುಂಟಲ್ಪೆ, ಅನ್ನ-ಆಸೆ, ಹುಲಿ-ಹಸು ಆಟಗಳನ್ನು ಆಡುತ್ತಿದ್ದಳು. ಮರಳ ರಾಶಿಯಲ್ಲಿ ಇಬ್ಬರೂ ಸೇರಿ ಗುಬ್ಬಚ್ಚಿ ಗೂಡು ಮಾಡುತ್ತಿದ್ದರು. ಪೂರ್ಣಿಮಾಳನ್ನು ಶಾಲೆಗೆ ಸೇರಿಸುವಾಗ ಶರಾವತಿ ರಘುರಾಮನಿಗೆ ಹೇಳಿ ನಾಗರತ್ನಳನ್ನೂ ಒಟ್ಟಿಗೇ ಸೇರಿಸಿದ್ದಳು.
ಮೊದಲು ಒಂದು ಸಣ್ಣ ಬಿಡಾರ ಹೂಡಿಕೊಂಡು ವಾಸವಾಗಿದ್ದ ರಘುರಾಮ, ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆ ಕಟ್ಟಿಯಾದಮೇಲೂ ಒಂದಾದ ಮೇಲೊಂದರಂತೆ ಕೆಲಸಗಳು ಸಿಗತೊಡಗಿ, ಇಲ್ಲೇ ನೆಲೆಯೂರುವಂತಾಯಿತು. ಬಿಡಾರದ ಜಾಗದಲ್ಲೊಂದು ಗಟ್ಟಿ ಮನೆ ಎದ್ದು ನಿಂತಿತು. ಊರವರೂ ಯಾರೂ ಆಕ್ಷೇಪಿಸಲಿಲ್ಲ. ಮನೆ, ಗೋಬರ್ ಗ್ಯಾಸ್ ಡ್ಯೂಮ್ ಕಟ್ಟುವುದು, ಇತ್ಯಾದಿಗಳಲ್ಲಿ ಚಾಣಾಕ್ಷತೆ ಪಡೆದ ರಘುರಾಮ ಸುತ್ನಾಲ್ಕೂರುಗಳಲ್ಲಿ ಹೆಸರು ಮಾಡಿದ. ಸಾಗರ ಪೇಟೆಯಲ್ಲಿ ಎರಡು ದೊಡ್ಡ ಕಟ್ಟಡಗಳನ್ನು ತಾನೇ ಮುಖ್ಯ ಮೇಸ್ತ್ರಿಯಾಗಿ ನಿಂತು ಕಟ್ಟಿಸಿದ ಮೇಲೆ ಅವನ ದೆಸೆಯೇ ಬದಲಾಗಿಹೋಯಿತು. ಈಗ್ಗೆ ಎಂಟೊಂಭತ್ತು ವರ್ಷಗಳ ಹಿಂದೆ ಯಾರದೋ ಸಂಪರ್ಕ ಸಿಕ್ಕು ಬೆಂಗಳೂರಿಗೆ ಹೋದವನು ಒಂದು ವರ್ಷ ಮನೆಗೇ ಬಂದಿರಲಿಲ್ಲ. ಎಲ್ಲಿಗೆ ಹೋದ ಏನಾದ ಅಂತ ತಿಳಿಯದೇ ಕಂಗಾಲಾಗಿದ್ದ ಬಂಗಾರಮ್ಮನಿಗೆ ಒಂದು ತಿಂಗಳಾದಮೇಲೆ, ಡೈರೆಕ್ಟ್-ಬೆಂಗಳೂರು ಬಸ್ಸಿನ ಕಂಡಕ್ಟರ್ ಶಿವರಾಮು ಸುದ್ದಿ ಮುಟ್ಟಿಸಿದ ಮೇಲೇ ತಿಳಿದದ್ದು ಗಂಡ ಬೆಂಗಳೂರಿನಲ್ಲಿ ಸುರಕ್ಷಿತವಾಗಿದ್ದಾನೆ, ಈಗ ದೊಡ್ಡ ದೊಡ್ಡ ಕಾಂಟ್ರಾಕ್ಟರುಗಳ ಕೈಕೆಳಗೆ ಕೆಲಸ ಮಾಡುತ್ತಿದ್ದಾನೆ ಎಂದು. ದುಡ್ಡು ಮಾಡಿಕೊಂಡು ಚಿನ್ನ-ಬೆಳ್ಳಿ ಹೊತ್ತು ತರುವ ಗಂಡನಿಗಾಗಿ ಬಂಗಾರಮ್ಮ, ಹಣ್ಣು-ಚಾಕ್ಲೇಟು-ಹೊಸ ಅಂಗಿ ತರುವ ಅಪ್ಪನಿಗಾಗಿ ನಾಗರತ್ನ ಕಾಯತೊಡಗಿದರು.
ಒಂದು ವರ್ಷವಾದಮೇಲೆ ರಘುರಾಮ ಊರಿಗೆ ಮರಳಿದ್ದೇನೋ ನಿಜ; ಆದರೆ ಹೆಂಡತಿ-ಮಗಳ ಚಿನ್ನ-ಬಟ್ಟೆಯ ಕನಸುಗಳು ಮಾತ್ರ ನನಸಾಗಲೇ ಇಲ್ಲ. 'ರಘುರಾಮ ಸರಿಯಾಗಿ ದುಡ್ಡು ಮಾಡಿ ಬ್ಯಾಂಕಿನಲ್ಲಿಟ್ಟಿರಬಹುದು, ಚಿನ್ನ-ಬಟ್ಟೆ ಎಂದೆಲ್ಲ ಪ್ರದರ್ಶಿಸಿದರೆ ಊರವರಿಗೆ ಹೊಟ್ಟೆಕಿಚ್ಚಾಗಬಹುದೆಂದು ತಂದಿಲ್ಲವೇನೋ' ಎಂದೆಲ್ಲ ಊರವರು ಮಾತಾಡಿಕೊಂಡರು. ಅಕ್ಕಿ ಕೇರಿಕೊಡಲು ಬಂದ ಬಂಗಾರಮ್ಮ ಮಾತ್ರ ಶರಾವತಿಯ ಬಳಿ 'ನಮ್ಮನ್ಯೋರಿಗೆ ದುಡ್ದಿದ್ದೆಲ್ಲ ಉಣ್ಣಕ್ಕೆ, ಕುಡಿಯಕ್ಕೆ, ಬೀಡಿಗೇ ಹೋಯ್ತದಂತೆ.. ಬೆಂಗ್ಳೂರು ಅಂದ್ರೇನು ತಮಾಸೇನಾ? ಅಲ್ಲಿ ಎಲ್ಲಾದಕ್ಕೂ ಕಾಸು ಬಿಚ್ಬೇಕು' ಎಂದಿದ್ದಳು.
ಈಗ ಒಂದು ವರ್ಷದ ಹಿಂದೆ ರಘುರಾಮ ಊರಿಗೆ ಬಂದಿದ್ದಾಗ ಬೆಂಗಳೂರಿನ ರಾಜಾಜಿನಗರದಲ್ಲಿ ತಾವೊಂದು ದೊಡ್ಡ ಅಪಾಲ್ಟ್‍ಮೆಂಟ್ ಕಟ್ಟುತ್ತಿರುವುದಾಗಿ ಹೇಳಿಕೊಂಡಿದ್ದ. ಅದೆಂಥದು ಅಪಾಲ್ಟ್‍ಮೆಂಟು ಎಂದು ಪೂರ್ಣಿಮಾ ನಾಗರತ್ನಳ ಬಳಿ ಕೇಳಿದಾಗ 'ಅದೇನೋ ನಂಗ್ ಸರಿಯಾಗಿ ಗೊತ್ತಿಲ್ಲ ಕಣೇ.. ಬಿರ್‌ಗೇಡ್ ಅಂತ ಹೆಸ್ರಂತೆ.. ದೊಡ್ಡ ಮನೆಯಂತೆ.. ಮನೆ ಅಂದ್ರೇನು, ಒಂದು ಬಿಲ್ಡಿಂಗ್ನಾಗೆ ಮೂರ್ನಾಕು ಸಾವ್ರ ಮನೆ ಇದಾವಂತೆ.. ಹತ್ತೆಕರೆ ಜಾಗದಲ್ಲಿ ಕಟ್ತಿದಾರಂತೆ.. ಅದ್ರಲ್ಲೇ ಇಸ್ಕೂಲು, ಸಿನ್ಮಾ ಟಾಕೀಸು, ದೊಡ್ ದೊಡ್ ಅಂಗಡಿ ಎಲ್ಲಾ ಇದಾವಂತೆ.. ಸಾವ್ರಾರು ಜನ ಹಗ್ಲೂ-ರಾತ್ರಿ ಕೆಲಸ ಮಾಡ್ತಿದಾರಂತೆ' ಎಂದೆಲ್ಲ ಇಷ್ಟು ದೊಡ್ಡದಾಗಿ ಕಣ್ಣರಳಿಸುತ್ತಾ ಹೇಳಿದ್ದಳು ನಾಗರತ್ನ. 'ಅಷ್ಟು ದೊಡ್ಡ ಮನೆಯಲ್ಲಿ ಯಾರೇ ಇರ್ತಾರೆ ನಾಗಿ?' ಎಂದ ಪೂರ್ಣಿಮಾಗೆ ನಾಗರತ್ನ, 'ಅಲ್ಲೆಲ್ಲ ತುಂಬಾ ಜನ ಸಾವ್ಕಾರು ಇದಾರಲ್ವಾ, ಅವ್ರೇ ಯಾರೋ ಇರ್ಬೋದು' ಎಂದಿದ್ದಳು. 'ನಿಮ್ಮಪ್ಪ ಇನ್ನೂ ಎಷ್ಟು ವರ್ಷ ಬೆಂಗ್ಳೂರಲ್ಲೇ ಇರ್ತಾರಂತೆ?' ಎಂದು ಪೂರ್ಣಿಮಾ ಕೇಳಿದ್ದಕ್ಕೆ, 'ಬರ್ತಾನಂತೆ ಕಣೇ.. ಇನ್ನೊಂದು ಐದಾರ್ ವರ್ಷ ಅಲ್ಲಿದ್ದು ಆಮೇಲೆ ಇಲ್ಲಿಗೇ ಬಂದು ಇರ್ತಾನಂತೆ' ಎಂದಿದ್ದಳು.
ಹೀಗೆ ಮೇಸ್ತ್ರಿ ರಘುರಾಮ ಅವಾಗಿವಾಗ ಊರಿಗೆ ಬಂದು, ಏನೇನೋ ತಮಗರ್ಥವಾಗದ ಭಾಷೆಯಲ್ಲಿ ಬೆಂಗಳೂರಿನ ಸುದ್ದಿಗಳನ್ನು ರಂಜನೀಯವಾಗಿ ಹೇಳುವಾಗ, ಊರವರಿಗೆ ಆತ ಸಹ ಒಬ್ಬ ಸಾಫ್ಟ್‍ವೇರ್ ಇಂಜಿನಿಯರಿನಂತೆ, ಮೇಲಿನ ಮನೆ ಗೋಪಿಯಂತೆ ಅಥವಾ ಸುಬ್ಬಣ್ಣನ ಮಗ ಚಿನ್ಮಯನಂತೆ ಕಾಣಿಸುತ್ತಿದ್ದ. ಬೆಂಗಳೂರೆಂಬ, ದಿನವೂ ಟೀವಿ-ಪೇಪರುಗಳಲ್ಲಿ ಸುದ್ದಿಯಾಗುವ, ರಸ್ತೆ ತುಂಬಾ ಕಾರು-ಬೈಕುಗಳೇ ಓಡಾಡುವ ಸಿಟಿಯಲ್ಲಿ ಬದುಕನ್ನು ಒಲಿಸಿಕೊಂಡ ವೀರನಂತೆ ಕಾಣಿಸುತ್ತಿದ್ದ. ಮೇಲಿನ ಮನೆ ಗೋಪಿಯಂತೆ ಕಾರಿನಲ್ಲಿ ಬರುವುದೋ, ಚಿನ್ಮಯನಂತೆ ಮನೆಗೆ ಬರುವಾಗಲೆಲ್ಲ ಹೊಸ ವಸ್ತುವೇನನ್ನಾದರೂ ತರುವುದೋ ಮಾಡದಿದ್ದರೂ, ರಘುರಾಮ ಬೆಂಗಳೂರಿನಿಂದ ಊರಿಗೆ ಬಂದಿದ್ದಾನೆ ಎಂದರೇ ಜನ ಒಮ್ಮೆ ಅತ್ತ ಸುಳಿದಾಡಿ ಬರುವಂತಹ ಆಕರ್ಷಣೆ ಅವನಿಗೆ ಲಭಿಸಿತ್ತು.
* *
ಜಡೆ ಹೆಣಿಸಿಕೊಂಡ ಪೂರ್ಣಿಮಾ ಅವಲಕ್ಕಿ-ಮೊಸರನ್ನೂ ತಿನ್ನದೇ ನಾಗರತ್ನಳ ಮನೆಗೆ ಓಡಿದಾಗ ಅವಳಿಗೊಂದು ಅಚ್ಚರಿ ಕಾದಿತ್ತು. ಕೇವಲ ಮೂರು ತಿಂಗಳ ಹಿಂದಷ್ಟೇ ಬಂದುಹೋಗಿದ್ದ ರಘುರಾಮ ಇವತ್ತು ಮತ್ತೆ ಬಂದಿದ್ದ. ಮನೆಯ ಅಂಗಳದಲ್ಲೇ ಬೀಡಿ ಸೇದುತ್ತಾ ನಿಂತಿದ್ದ ಅವನು ಪೂರ್ಣಿಮಾಳನ್ನು ಕಂಡದ್ದೇ "ಏನು ಸಣ್ಣಮ್ಮಾರು.. ಪುಲ್ ಡ್ರೆಸ್ಸಾಗಿ ಬಂದೀರಿ..?" ಎಂದ. ಅವನಿಂದ ಮಾರು ದೂರದಲ್ಲಿ ಚುಪುರು ಗಡ್ಡದ ಯುವಕನೊಬ್ಬ ತೆಂಗಿನ ಮರಕ್ಕೆ ಒರಗಿಕೊಂಡು ಬೀಡಿ ಸೇದುತ್ತಿದ್ದ. ಸುಮ್ಮನೆ ಮುಗುಳ್ನಕ್ಕು ಮನೆಯ ಒಳನಡೆದ ಪೂರ್ಣಿಮಾ, ನಾಗರತ್ನಳನ್ನು ಕೌಳಿ ಹಣ್ಣಿಗೆ ಹೋಗಲು ಕರೆದಳು. ಆದರೆ ನಾಗರತ್ನ "ಇವತ್ತು ನಾನು ಬರಾಕಿಲ್ಲ ಕಣೇ.. ನಮ್ಮನಿಗೆ ನೆಂಟ್ರು ಬಂದಾರೆ.." ಎಂದು ಒಳಹೋಗಿಬಿಟ್ಟಳು. ಅವಳ ವರ್ತನೆ ಪೂರ್ಣಿಮಾಗೆ ವಿಚಿತ್ರವೆನಿಸಿದರೂ ಏನೂ ಹೇಳದೇ ಮನೆಗೆ ಮರಳಿದಳು.
ಮರುದಿನ ಬೆಳಗ್ಗೆ ಹೊತ್ತಿಗೆ, 'ರಘುರಾಮ ಬೆಂಗಳೂರಿನಿಂದ ಮಗಳಿಗೆ ವರನನ್ನು ಕರೆತಂದಿದಾನಂತೆ, ಅವನೂ ಮೇಸ್ತ್ರಿಯಂತೆ, ಇವನ ಜೊತೆಯಲ್ಲೇ ಕೆಲಸ ಮಾಡೋದಂತೆ' ಎಂದೆಲ್ಲ ಸುದ್ದಿಯಾಯಿತು. ಅವತ್ತು ಕೆಲಸಕ್ಕೆ ಬಂಗಾರಮ್ಮ ಬರಲಿಲ್ಲ. ಪೂರ್ಣಿಮಾಳಿಗೂ ಏನೋ ತಡೆದಂತಾಗಿ ನಾಗರತ್ನಳನ್ನು ಕಾಣಲು ಹೋಗಲಿಲ್ಲ. ಎರಡು ದಿನ ಬಿಟ್ಟು ಅವರು ವಾಪಸು ಹೋದಮೇಲೆ ಸಂಜೆ ಹೊತ್ತಿಗೆ ಮನೆಗೆ ಬಂದ ಬಂಗಾರಮ್ಮ ವಿಷಯ ಹೌದೆಂದು ಖಚಿತಪಡಿಸಿ, ಇನ್ನು ಒಂದು ತಿಂಗಳಲ್ಲಿ ನಾಗರತ್ನಳ ಮದುವೆ ಎಂದು ಹೇಳಿದಳು. ಖರ್ಚಿಗೆ ದುಡ್ಡೆಲ್ಲಾ ರಘುರಾಮನೇ ತರುತ್ತಿರುವುದಾಗಿಯೂ, ಇನ್ನು ಹತ್ತು ದಿನದೊಳಗೆ ಅವನು ಬರುತ್ತಿರುವುದಾಗಿಯೂ ಹೇಳಿದಳು.
"ಹುಡುಗ ಏನ್ ಮಾಡ್ತಿದಾನೆ ಬಂಗಾರಮ್ಮ?" ಕೇಳಿದರು ಶಾಸ್ತ್ರಿಗಳು.
"ಇವ್ರ ಜತೀಗೇ ಕೆಲ್ಸ ಮಾಡ್ತಾನಂತೆ.. ಒಳ್ಳೇ ಸಂಮಂದ ಅನ್ನುಸ್ತಂತೆ.. ಮೂಲ ಊರು ಬಳ್ಳಾರಿ ಕಡೀಗಂತೆ.. ನಮ್ಮೋರೇ.. ಬೆಂಗ್ಳೂರಾಗೆ ದುಡಿಯಾಕ್ ಹಿಡ್ದು ಆಗ್ಲೇ ಏಳೆಂಟ್ ವರ್ಸ ಆಯ್ತಂತೆ.. ಚನಾಗ್ ದುಡ್ ಮಾಡಿ ಮಡ್ಗಿದಾನಂತೆ.. ನಮ್ ಮನ್ಯೋರಿಗೆ ಮೊದ್ಲಿಂದ್ಲೂ ಗೊತ್ತಂತೆ.. ನಾನೂ ನೋಡಿದ್ನಲ್ಲ, ಒಳ್ಳೇ ಗುಣ" ಹೇಳಿದಳು ಬಂಗಾರಮ್ಮ.
"ಒಪ್ಗೆ ಆಯ್ತಾ ಅವ್ನಿಗೆ?" ಕೇಳಿದರು ಶಾಸ್ತ್ರಿಗಳು.
"ಹೂಂ.. ಒಂದೇ ಪಟ್ಗೆ ಒಪ್‍ಗಂಡ.. ಆದ್ರೆ ನಮ್ ನಾಗೀಗೇ ಒಪ್ಗೆ ಇಲ್ಲ ಅನ್ಸುತ್ತೆ.. ಒಂದೇ ಸಮನೆ ಅಳ್ತಾ ಕೂತಿದೆ.. 'ಇಷ್ಟ್ ಬೇಗ ತಂಗೆ ಮದುವೆ ಬ್ಯಾಡ.. ಅಷ್ಟು ದೂರ ಬ್ಯಾಡ' ಅನ್ತಾ.. ಆದ್ರೆ ನಮ್ಮನೆಯೋರು ಬಿಡ್ಬೇಕಲ್ಲ? 'ಒಳ್ಳೇ ಸಂಮಂದ.. ಬಿಟ್ಕಂಡ್ರೆ ಸಿಗಾಕಿಲ್ಲ.. ಅಲ್ದೇ ನಿಂಗೂ ಬೆಂಗ್ಳೂರ್ ಪ್ಯಾಟೆ ಸೇರೋ ಅವ್ಕಾಸ' ಅಂತೆಲ್ಲ ಹೇಳಿ ನಂಬ್ಸಿದಾರೆ.."
ಪೂರ್ಣಿಮಾಗೆ ನಾಗರತ್ನಳ ಬಗ್ಗೆ ಯೋಚಿಸಿ ಬೇಸರವಾಯ್ತು. ಮೊನ್ನೆ ಅವಳ ಮನೆಯೆದುರು ಬೀಡಿ ಸೇದುತ್ತಾ ನಿಂತಿದ್ದ ಕೆಂಪಿಕಣ್ಣು - ಚುಪುರು ಗಡ್ಡದ ಯುವಕನ ಚಿತ್ರ ಕಣ್ಮುಂದೆ ಬಂತು. ನಾಗರತ್ನಳ ಮನೆಗೆ ಓಡಿ ಅವಳನ್ನು ಸಮಾಧಾನ ಮಾಡಲೆತ್ನಿಸಳು. ಇಬ್ಬರು ಗೆಳತಿಯರೂ ಪರಸ್ಪರ ಅಗಲಲೇಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಂಡರು. ನೋಡನೋಡುತ್ತಿದ್ದಂತೆ ನಾಗರತ್ನಳ ಮನೆ ಮುಂದೆ ಚಪ್ಪರ ಎದ್ದುನಿಂತು, ವಾಲಗ ಊದಲ್ಪಟ್ಟು, ಭರ್ಜರಿಯೇ ಎನ್ನುವಷ್ಟು ಜೋರಾಗಿ ಮದುವೆ ನಡೆದು, ನಾಗರತ್ನ ರಾಜಧಾನಿ ಸೇರಿಬಿಟ್ಟಳು.
ಪೂರ್ಣಿಮಾ ಒಂಟಿಯಾದಳು. ಕೌಳಿ ಮಟ್ಟಿಯ ಹಾದಿಗೆ, ಬುಕ್ಕೆ ಹಣ್ಣಿನ ಗಿಡಗಳಿಗೆ, ಒಣಗಿಸಿದ ವಾಟೆ ಸಿಪ್ಪೆಗಳಿಗೆ ಬೇಸರದ ಮೋಡ ಕವಿಯಿತು. ಕುಂಟ್-ಹಲ್ಪೆ ಬೇರೆ ಕಲ್ಲುಗಳೊಡನೆ ಸೇರಿತು. ಬಂಗಾರಮ್ಮ ಗೆಣಸು ಕೀಳುವುದನ್ನೇ ಬಿಟ್ಟಳು.
* *
ಪೂರ್ಣಿಮಾಳ ಮನೆಯಲ್ಲಿ 'ಹುಡುಗಿ ನೋಡುವ ಶಾಸ್ತ್ರ'. ಹುಡುಗನಿಗೆ ಇಲ್ಲೇ ಬೆಳೆಯೂರು. ಬೆಂಗಳೂರಿನಲ್ಲಿದ್ದಾನೆ. ಸಾಫ್ಟ್‍ವೇರ್ ಇಂಜಿನಿಯರ್. ಅವನ ಜುಬ್ಬಾದ ಘರಿಘರಿ ಸ್ಪರ್ಶವನ್ನು ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆಯ ಮರದ ಸೋಫಾ ಅನುಭವಿಸುತ್ತಿದೆ. ಕಾಫಿ ಕಪ್ಪುಗಳನ್ನಿಟ್ಟ ಟ್ರೇ ಹಿಡಿದು ಬರುತ್ತಿರುವ ಪೂರ್ಣಿಮಾಳ ಹೆಜ್ಜೆಗಳಿಗೆ ಗೆಜ್ಜೆ ದನಿಯಿದೆ. ಗಲ್ಲಕ್ಕೆ ಲಜ್ಜೆ ಲಗ್ಗೆ ಇಟ್ಟಿದೆ. ಉದ್ದ ಜಡೆಗೆ ಮೊಗ್ಗೆ ಮಲ್ಲಿಗೆ ದಂಡೆ. ಪೂರ್ಣಿಮಾಳ ಕಣ್ಣೋಟದಿಂದಲೇ ಬಿಸಿಯಾಗಿದೆಯೇನೋ ಎನಿಸುವ ನೊರೆನೊರೆ ಕಾಫಿ, ಗುಡ್-ಡೇ ಬಿಸ್ಕೇಟಿಗಿಂತ ರುಚಿಯೆನಿಸಿದೆ ಸಾಫ್ಟ್‍ವೇರ್ ಇಂಜಿನಿಯರ್ರಿಗೆ.
ಹುಡುಗನ ಸಂಬಂಧಿಕರು ಶುರು ಮಾಡಿದರು: "ಅಂದ್ನಲ್ಲಾ, ಸಾಫ್ಟ್‍ವೇರ್ ಇಂಜಿನಿಯರ್ರು. ಮುಂದಿನ್ ವರ್ಷ ಅಮೆರಿಕಾ. ಬೆಂಗ್ಳೂರಲ್ಲಿ ಓನ್ ಅಪಾರ್ಟ್‍ಮೆಂಟು. ಕಾರು. ಊರಲ್ಲಿ ಎರಡು ಎಕರೆ ತೋಟ."
"ನಮ್ಮನೆ ಮಾಣಿಗೆ ಹೆಚ್ಗೆ ಓದಿದವರು ಬ್ಯಾಡ ಹೇಳಿ. ಜಸ್ಟ್ ಪೀಯೂಸಿ ಆಗಿದ್ರೂ ಸಾಕು. ತಾನು ಹೆಂಗಂದ್ರೂ ದುಡಿತ. ಮನೇಲಿ ಹೆಂಡತಿ ಆರಾಮಾಗಿ ಅಡುಗೆ ಮಾಡ್ಕ್ಯಂಡು ಇರ್ಲಿ ಹೇಳಿ" ಎಂದರು ಹುಡುಗನ ತಂದೆ.
"ಮನೆ ಯಾವ ಏರಿಯಾದಲ್ಲಿ ಮಾಡಿದ್ದೆ?" ಕೇಳಿದರು ಶಾಸ್ತ್ರಿಗಳು.
"ರಾಜಾಜಿನಗರದಲ್ಲಿ. ಬ್ರಿಗೇಡ್ ಗೇಟ್‍ವೇ ಅಂತ. ಅದ್ರಲ್ಲಿ ನಾರ್ತ್ ಬ್ಲಾಕಲ್ಲಿ ಎಯ್ತ್ ಫ್ಲೋರಲ್ಲಿ ನಾ ಖರೀದಿ ಮಾಡಿರೋ ಅಪಾರ್ಟ್‍ಮೆಂಟು." ಹೇಳಿದ ಹುಡುಗ.
"ಬಿರ್‌ಗೇಡಾ?" ಇಷ್ಟು ಹೊತ್ತೂ ತಲೆತಗ್ಗಿಸಿ ಕೂತಿದ್ದ ಪೂರ್ಣಿಮಾ ಸಟ್ಟನೆ ಕೇಳಿ ನಾಲಿಗೆ ಕಚ್ಚಿಕೊಂಡಳು.
"ಹಾಂ! ಬ್ರಿಗೇಡೇ! ಯಾಕೆ?" ಕೇಳಿದರು ಹುಡುಗನ ತಂದೆ.
"ಯಾಕೂ ಇಲ್ಲೆ"
"ಮನೆ ಅಂದ್ರೆ ಏನು ಮಾಡಿದ್ದೆ? ಅದ್ರಲ್ಲೇ ಎಲ್ಲಾನೂ ಇದ್ದು. ಅಲ್ಲೇ ಶಾಪಿಂಗ್ ಮಾಲು, ಅಲ್ಲೇ ಟಾಕೀಸು, ಅಲ್ಲೇ ಪಾರ್ಕು, ಅಲ್ಲೇ ಹುಡುಗ್ರಿಗೆ ಆಟದ ಬಯಲು, ಅಲ್ಲೇ ಸ್ವಿಮ್ಮಿಂಗ್ ಪೂಲು... ಯಾವ್ದಕ್ಕೂ ಹೊರಗಡೆ ಹೋಗೋದೇ ಬ್ಯಾಡ... ಗೊತ್ತಾತಲ?"
ತಲೆಯಾಡಿಸಿದಳು ಪೂರ್ಣಿಮಾ. ಎಲ್ಲರೂ ತಲೆದೂಗಿದರು.
ಇನ್ನರ್ಧ ಗಂಟೆಯಲ್ಲಿ ಮಾತುಕತೆ ಮುಗಿಯಿತು: ಎರಡು ತಿಂಗಳೊಳಗೆ ನಿಶ್ಚಿತಾರ್ಥ. ಮಳೆಗಾಲ ಬರುವುದರೊಳಗೆ ಮದುವೆ.
ಪೂರ್ಣಿಮಾ ಸೀರೆ ಬಿಚ್ಚಿ ಹಾಕಿ ನೈಟಿ ತೊಡುತ್ತಿದ್ದಾಗ ರೂಮಿಗೆ ಬಂದ ಶರಾವತಿ "ಎಂಥಾ ಆಶ್ಚರ್ಯ ನೋಡು ಅಮ್ಮೀ.. ಈ ಮನೆ ಕಟ್ಟಿದ್ದೂ ರಘುರಾಮ ಮೇಸ್ತ್ರಿ. ಈಗ ನೀ ಹೋಗ್ತಿರೋ ಮನೆ ಕಟ್ಟಿರೋದೂ ರಘುರಾಮ ಮೇಸ್ತ್ರಿ. ಜತೆಗೆ ನಿನ್ನ ನೆಚ್ಚಿನ ಗೆಳತಿಯ ಗಂಡ! ಎಂಥಾ ವಿಚಿತ್ರ ಅಲ್ದಾ?" ಎಂದಳು. ಬಿಚ್ಚಿ ಹಾಕಿದ್ದ ಸೀರೆಯ ಗುಡ್ಡೆಯನ್ನೇ ನೋಡುತ್ತಿದ್ದಳು ಪೂರ್ಣಿಮಾ.
Thursday, January 17, 2008
Wednesday, January 09, 2008
ಬೆಟ್ಟ, ಚಿಟ್ಟೆ..
"ಶೆಡ್ತಿಕೆರೆಯಾ?" ಉದ್ಘರಿಸಿದರು ಭಟ್ಟರು.
"ಹೌದು. ಯಾಕೆ ಅಲ್ಲಿ ಯಾರಾದ್ರೂ ಗೊತ್ತಾ ನಿಮಗೆ?" ಕೇಳಿದೆ.
"ಹಾಂ! ನಮ್ಮನೆಯವಳಿಗೆ ಅಲ್ಲೇ ವರದಾಮೂಲ! ಏಯ್ ಏನೇ, ನಿಮ್ಮೂರು ಕಡೆಯೋರು ಬಂದಿಯಾರೆ ನೋಡು.." ಭಟ್ಟರು ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕೂಗಿದರು.
ಒಳಗಿನಿಂದ ಬಂದ ಭಟ್ರ ಹೆಂಡತಿಯನ್ನು ಅಡುಗೆ ಒಲೆಯ ಮಶಿ ಬಡಿದು ಬಡಿದೇ ಹೀಗಾಗಿದೆಯೇನೋ ಎನಿಸುವಷ್ಟು ಕಪ್ಪು ಬಣ್ಣದ ಸೀರೆಯೊಂದು ಸುತ್ತಿತ್ತು. ಆ ಸೀರೆಗೆ ಹೊಳೆಯುವ ಹಸಿರು ಗೆರೆಗಳಿದ್ದವು. ಕೈಯ ಬಳೆಗಳಿಗೆ ಅದು ಮ್ಯಾಚಿಂಗ್ ಆಗುತ್ತಿತ್ತು.
"ಶೆಡ್ತಿಕೆರೆಯಾ? ಯಾರ ಮನೆ?" ಕೇಳಿದರು ಭಟ್ರ ಹೆಂಡತಿ.
"ಹೊಸೊಕ್ಲೋರ ಮನೆ ಅಂತಾರೆ. ನನ್ನ ಅಪ್ಪನ ಹೆಸರು ಅನಂತರಾವ್ ಅಂತ"
"ನಿನ್ನ ಅಮ್ಮಂಗೆ ಯಾವೂರು ಹೇಳು? ತುಮರಿ ಅಲ್ದಾ?"
"ಹಾಂ, ತುಮರಿಯೇ"
"ಗೊತ್ತಾತು ಬಿಡು.. ವನಮಾಲ ಅಲ್ದಾ ಹೆಸರು? ನಂಗೆ ವರದಾಮೂಲ. ಶಂಕರ ಭಟ್ರ ಮನೆ.. ನೀವು ಈಗಿನ ಹುಡುಗ್ರಿಗೆ ಗೊತ್ತಿರೂದಿಲ್ಲ ಬಿಡು.."
ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಪೆಚ್ಚು ನಗೆ ನಕ್ಕೆ. ಇವರು ಹವಿಗನ್ನಡ, ಮಂಗಳೂರು ಕನ್ನಡ ಮಿಕ್ಸ್ ಮಾಡಿ ಮಾತಾಡುತ್ತಿದ್ದರು. ಅದಕ್ಕಾಗಿ ನಾನು ಪೂರ್ತಿ ಪೇಟೆ ಭಾಷೆಯಲ್ಲೇ ಮಾತಾಡುತ್ತಿದ್ದೆ. ಹೊರಗೆ ಇಳಿಯುತ್ತಿದ್ದ ಸಂಜೆಗತ್ತಲೆ, ಜಗುಲಿಯಲ್ಲಿದ್ದ ಅಲ್ಪ ಬೆಳಕನ್ನೂ ಆಹುತಿ ತೆಗೆದುಕೊಳ್ಳುತ್ತಿತ್ತು. ಜಗುಲಿಯ ಬಲಮೂಲೆಯಲ್ಲಿದ್ದ ಕಿಟಕಿಯಿಂದ ಭಟ್ಟರ ಮನೆಯ ಧರೆ ಕಾಣುತ್ತಿತ್ತು. ಬಳಿಯೇ ಹೋಗಿ ಬಗ್ಗಿ ನೋಡಿದರೆ ಇಡೀ ಬೆಟ್ಟ ಕಾಣಬಹುದೆಂದು ನಾನು ಊಹಿಸಿದೆ. "ಇನ್ನು ನೀನು ಕೆಳಗಿಳೀಲಿಕ್ಕೆ ಆಗೂದಿಲ್ಲ. ನಮ್ಮಲ್ಲೇ ಉಳ್ದು ಬೆಳಗ್ಗೆ ಮುಂಚೆ ಹೊರಡು" ಎಂದರು ಭಟ್ಟರು. ಸುಸ್ತಾಗಿದ್ದ ನನಗೂ ಗತ್ಯಂತರವಿರಲಿಲ್ಲ. ಭಟ್ಟರ ಹೆಂಡತಿ ಜಗುಲಿಯ ಲೈಟಿನ ಸ್ವಿಚ್ಚು ಒತ್ತಿ ಕಾಫಿ ತರುವುದಾಗಿ ಹೇಳಿ ಒಳಹೋದರು. ನಾನು ಬಟ್ಟೆ ಬದಲಿಸಲೆಂದು ಎದ್ದೆ. ಟ್ಯೂಬ್‍ಲೈಟು ಫಕಫಕನೆ ಹೊತ್ತಿಕೊಂಡಿತು.
ಇಲ್ಲಿಗೆ ಚಾರಣಕ್ಕೆ ಹೊರಡುವ ಮೊದಲೇ 'ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲಿಕ್ಕೆ ಸಾಧ್ಯವೇ ಇಲ್ಲ, ನೀನು ಭಟ್ಟರ ಮನೆಯಲ್ಲಿ ಪರಿಚಯ ಹೇಳಿಕೊಂಡು ಇರು, ಕತ್ತಲಾದಮೇಲೂ ಮುಂದುವರೆಯುವ ಸಾಹಸ ಮಾಡಬೇಡ, ಒಬ್ಬನೇ ಬೇರೆ ಹೋಗುತ್ತಿದ್ದೀಯಾ, ತುಂಬಾ ದಟ್ಟ ಕಾಡಿದೆ, ಆನೆ ಹಿಂಡೂ ಇದೆಯಂತೆ' ಎಂದೆಲ್ಲ ನನ್ನ ಸ್ನೇಹಿತರು ಹೆದರಿಸಿದ್ದರು. ಅವರು ಅಷ್ಟೆಲ್ಲಾ ಅಂದಿದ್ದರೂ ನನಗೆ ನಾವು ಹಿಂದೊಮ್ಮೆ ಮಾಡಿದ ಸಾಹಸದ ನೆನಪಿದ್ದಿದ್ದರಿಂದ 'ಏಯ್ ಅವ್ಕೆಲ್ಲ ನಾನು ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಹತ್ತಿಳಿದು ತೋರಿಸ್ತೇನೆ ನೋಡ್ತಿರಿ' ಅಂದು ಬಂದಿದ್ದೆ.
ಆದರೆ ಕಳೆದ ಬಾರಿಯಂತೆ ಈ ಬಾರಿ ಹತ್ತಿಳಿಯುವುದು ಸುಲಭವಿರಲಿಲ್ಲ. ನನ್ನ ಸ್ಪೋರ್ಟ್ಸ್ ಶೂ ಹೊಸದಾಗಿದ್ದರಿಂದ ಅದಿನ್ನೂ ಕಾಲಿಗೆ ಹೊಂದಿಕೊಂಡಿರಲಿಲ್ಲ. ಬೆಟ್ಟದ ಕಲ್ಲು ಹಾದಿಯಲ್ಲಿ ಇಳಿಯುವಾಗ ಪಾದಕ್ಕೆ, ಹೆಬ್ಬೆರಳುಗಳಿಗೆ ಒತ್ತೀ ಒತ್ತಿ ತುಂಬಾ ನೋಯುತ್ತಿತ್ತು. ಹೆಜ್ಜೆ ಎತ್ತಿಡುವುದೆಂದರೆ ಜೀವ ಹೋದಂತಾಗುತ್ತಿತ್ತು. ಭಟ್ಟರ ಮನೆ ಬಳಿ ಬರುವುದರೊಳಗೆ ನಾನು ಪೂರ್ತಿ ಬಸವಳಿದುಹೋಗಿದ್ದೆ. ನನ್ನ ಜೊತೆ ತಾನೂ ಇಳಿಯುತ್ತಿದ್ದ ಸೂರ್ಯ, ನಾನು ಭಟ್ಟರ ಮನೆ ಬಳಿ ಬರುವಷ್ಟರಲ್ಲಿ ತಾನಿನ್ನು ಮರೆಯಾಗುವುದಾಗಿ ಹೇಳಿ ಟಾಟಾ ಮಾಡುತ್ತಿದ್ದ. ನನ್ನ ಬ್ಯಾಗಿನೊಳಗಿದ್ದ ಪೆನ್-ಟಾರ್ಚನ್ನು ಒಮ್ಮೆ ತಡವಿಕೊಂಡೆ. ಅದು ತಾನು ಬೇಕಾದರೆ ಒಂದೆರೆಡು ತಾಸು ಉರಿಯಬಲ್ಲೆ ಎಂದು ಅಭಯ ನೀಡಿತು. ಆದರೆ ಪೂರ್ತಿ ಬೆಟ್ಟ ಇಳಿಯುವುದಕ್ಕೆ ಇನ್ನೂ ಮೂರು ತಾಸಾದರೂ ಬೇಕೆಂದು ನನ್ನ ಹಿಂದಿನ ಅನುಭವ ಹೇಳುತ್ತಿತ್ತು. ಆನೆಯ ಹಿಂಡಿನ ನೆನಪಾಯಿತು. ಧೈರ್ಯ ಸಾಲಲಿಲ್ಲ. ಭಟ್ಟರ ಮನೆಯಲ್ಲೇ ಉಳಿದು ನಾಳೆ ಬೆಳಗ್ಗೆ ಅವರೋಹಣ ಮುಂದುವರೆಸುವುದೇ ಸರಿಯಿಂದು ನಿಶ್ಚಯಿಸಿದೆ. ಅಲ್ಲದೇ ಭಟ್ಟರ ಹೆಂಡತಿಯ ಊರಿನವನೇ ಅಂತ ಹೇಳಿಕೊಂಡಿದ್ದರಿಂದ ನನಗೆ ಇವತ್ತು ಇಲ್ಲಿ ಉಳಕೊಳ್ಳಲಿಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿತ್ತು. ಅದನ್ನು ನಿರಾಕರಿಸುವ ಗೋಜಿಗೆ ಹೋಗದೇ, ಬಟ್ಟೆ ಬದಲಿಸಿದವನು ಕೈಕಾಲು ತೊಳೆದು ಬರುವುದಾಗಿ ಹೇಳಿ, ಬಚ್ಚಲು ಮನೆ ಕೇಳಿಕೊಂಡು ಮನೆಯ ಒಳಹೊಕ್ಕೆ.
ಮೊದಲಿನದು ಜಗುಲಿ. ನಂತರ ಕತ್ತಲ ಒಳಮನೆ. ಆಮೇಲೆ ಕೈಸಾಲೆ. ಅದರ ಪಕ್ಕದಲ್ಲೇ ಅಡುಗೆಮನೆ. ಕೈಸಾಲೆಯಿಂದ ಹೊರಗೆ ನಡೆದರೆ ಅಲ್ಲೇ ಬಚ್ಚಲುಮನೆ. "ಬಿಸೀ ನೀರಿದ್ದು. ಬೇಕಾದ್ರೆ ಸ್ನಾನ ಮಾಡೋದಿದ್ರೆ ಮಾಡು" ಎಂದರು ಭಟ್ಟರ ಹೆಂಡತಿ. ಬಿಂದಿಗೆ ಬಿಂದಿಗೆ ಹೊಯ್ದುಕೊಂಡೆ. ಗೂಡಿನಲ್ಲಿದ್ದ ಅವರ ಲೈಫ್‍ಬಾಯ್ ಸೋಪನ್ನೇ ಬಳಸಿಕೊಂಡೆ. ಘಮಘಮ ಪರಿಮಳ. ಹಬೆ. ಹಿತಾನುಭವ. ನಾನು ಸ್ನಾನ ಮುಗಿಸಿ, ಬರೀ ಟವಲು ಸುತ್ತಿಕೊಂಡು ಕೈಸಾಲೆಗೆ ಬಂದೆ.
ಕೈಸಾಲೆಯ ಮೂಲೆಯಲ್ಲಿ ಒಂದು ಹುಡುಗಿ ಕೂತಿತ್ತು. ಬರೀ ಮೈಯಲ್ಲಿ ಬಂದ ನನ್ನನ್ನು ನೋಡಿದ ಅದು ನಾಚಿದಂತೆ ಮುಖವನ್ನು ಗೋಡೆಯ ಕಡೆ ತಿರುಗಿಸಿಕೊಂಡಿತು. ನೆಲ್ಲಿಕಾಯಿಯನ್ನೋ ಏನನ್ನೋ ತಿನ್ನುತ್ತಿದ್ದಂತಿತ್ತು. ಓರೆಗಣ್ಣಿನಿಂದ ನೋಡುತ್ತಾ ನಾನು ಒಳಮನೆ ದಾಟಿ ಜಗುಲಿಗೆ ಹೋಗಿ ಒಂದು ತೆಳು ಬನೀನು, ಬರ್ಮುಡಾ ಧರಿಸಿ, ತಲೆ ಬಾಚಿ ರೆಡಿಯಾಗುವಷ್ಟರಲ್ಲಿ ಭಟ್ಟರ ಹೆಂಡತಿ ಒಳಗೆ ಕರೆದರು. ಅಡುಗೆ ಮನೆಯಲ್ಲಿ ಮಣೆ ಹಾಕಿ ಕೂರಿಸಿ ನನಗೆ ಮಸಾಲೆ ಅವಲಕ್ಕಿ, ಒಂದು ದೊಡ್ಡ ಲೋಟದ ತುಂಬ ಕಾಫಿ ಕೊಟ್ಟರು. ಹಸಿವಾಗಿದ್ದ ನನ್ನ ಹೊಟ್ಟೆಗೆ ಖುಷಿಯಾಯಿತು. ಕೈ ತೊಳೆಯಲು ಬಚ್ಚಲಿಗೆ ಹೋಗುವಾಗ ಕೈಸಾಲೆಯ ಮೂಲೆ ನೋಡಿದರೆ ಅಲ್ಲಿ ಆ ಹುಡುಗಿ ಇರಲಿಲ್ಲ.
ಜಗುಲಿಗೆ ಬಂದು ಕೂತೆ. ಭಟ್ಟರು ಟೀವಿ ನೋಡುತ್ತಿದ್ದರು. ದೂರದರ್ಶನದ ಏಳು ಗಂಟೆ ವಾರ್ತೆ ಬರುತ್ತಿತ್ತು. ನನ್ನ ಅರೆತೆರೆದ ಕಣ್ಗಳು ನಿದ್ರೆಯನ್ನು ಬಯಸುತ್ತಿದ್ದವು. ಆದರೆ ವಾರ್ತೆ ಮುಗಿಯುತ್ತಿದ್ದಂತೆಯೇ ಭಟ್ಟರು ನನ್ನ ಬಗ್ಗೆಯೆಲ್ಲಾ ವಿಚಾರ ಮಾಡಲು ಶುರು ಮಾಡಿದ್ದರಿಂದ ನಾನು ಕಷ್ಟಪಟ್ಟು ನಿದ್ರೆಯನ್ನು ತಡೆಹಿಡಿಯಲೇ ಬೇಕಾಯಿತು. ಊರು, ಕೇರಿ, ಅಪ್ಪ, ಕೆಲಸ... ಎಲ್ಲಾ ವಿಚಾರಿಸಿದ ಅವರು, ತಮ್ಮ ಬಗ್ಗೆಯೂ ಹೇಳಿಕೊಂಡರು. ಇಲ್ಲಿಗೆ ತಾವು ಬಂದದ್ದು, ಹೀಗೆ ಒಂಟಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿರುವುದು, ಈ ಪಾಳುಗುಡಿಯ ಪೂಜೆ... ಎಲ್ಲಾ ಕಾರಣ, ಕತೆ, ಹಿನ್ನೆಲೆಗಳನ್ನು ಹೇಳಿದರು. "ಕುಮಾರ ಪರ್ವತವನ್ನು ಒಂದೇ ದಿನದಲ್ಲಿ ಹತ್ತಿಳಿಯೋದಕ್ಕೆ ಗಂಡೆದೆ ಬೇಕು" ಎಂದರು. ಇಲ್ಲಿಗೆ ಬರುವವರೆಲ್ಲರು ಅಡುಗೆ-ಆಹಾರವನ್ನೆಲ್ಲ ತಂದುಕೊಂಡು, ಮೇಲ್ಗಡೆ ಟೆಂಟು ಹಾಕಿ ಉಳಿದು ಮರುದಿನ ಕೆಳಗಿಳಿಯುತ್ತಾರಂತೆ. ಆದರೆ ಹಿಂದೊಮ್ಮೆ ನಾವು ಆರು ಜನ ಹುಡುಗರು ಸಾಹಸ ಮಾಡಿ ಒಂದೇ ದಿನದಲ್ಲಿ ಹತ್ತಿಳಿದ ಕತೆಯನ್ನು ನಾನು ಅವರಿಗೆ ಹೇಳಿದೆ. ಭಟ್ಟರು "ಭಯಂಕರ ಬಿಡ್ರಪ್ಪ.. ಅದೂ ಪುಳಿಚಾರು ತಿನ್ನೋ ಬ್ರಾಮಣ್ರ ಹುಡುಗ್ರಾಗಿ.. ಆಂ?" ಎಂದು ನಕ್ಕರು. ಆ ಹಿಂದಿನ ಬಾರಿಯ ಚಾರಣವನ್ನು ನೆನೆಸಿಕೊಳ್ಳುತ್ತಾ ನಾನೂ ನಕ್ಕೆ.
ಬೆಂಗಳೂರಿನಿಂದ ರಾತ್ರಿ ಹನ್ನೊಂದರ ಹೊತ್ತಿಗೆ ರಾಜಹಂಸ ಬಸ್ಸಿಗೆ ಹೊರಟ ನಾವು ಆರು ಜನ ಹುಡುಗರು ಸೋಮವಾರಪೇಟೆಯಲ್ಲಿ ಇಳಿದಾಗ ಮೂಲೆ ಹೋಟಿಲಿನ ಕಾಫಿಯೋ ಚಹಾವೋ ಗೊತ್ತಾಗದಂತಹ ಬಣ್ಣದ ದ್ರವವೊಂದು ಸ್ವಾಗತ ಕೋರಿತ್ತು. ಅಲ್ಲೇ ನಾವೆಲ್ಲ ಮುಖ ತೊಳೆದು, ಹಲ್ಲುಜ್ಜಿ, ಮೈಮುರಿದು ತಯಾರಾದೆವು. ನೀರಿಗಿಂತಲೂ ತೆಳ್ಳಗಿದ್ದ ಸಾರಿನಲ್ಲಿ ಇಡ್ಲಿಯ ಚೂರುಗಳನ್ನು ಮುಳುಗಿಸಿ ಎತ್ತಿ ಬಾಯಿಗೆಸೆದುಕೊಂಡು ಅಗಿಯದೇ ನುಂಗಿ ಬೆಳಗಿನ ತಿಂಡಿ ಮುಗಿಸಿದ್ದೆವು. ಅಲ್ಲಿಂದ ಬೆಟ್ಟದ ಬುಡದವರೆಗೆ ಒಂದು ಕಾರು. ನಂತರ ಒಂದೇ ಸಮನೆ ಆರೋಹಣ.
ಕರ್ನಾಟಕದ ಅತ್ಯಂತ ದುರ್ಗಮ ಚಾರಣದ ಹಾದಿಯೂ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವೂ ಆಗಿರುವ ಕುಮಾರ ಪರ್ವತವನ್ನು ಹತ್ತಲಿಕ್ಕೆ ಎರಡು ದಾರಿಗಳಿವೆ. ಒಂದು, ಸೋಮವಾರಪೇಟೆಯಿಂದ ಶುರುವಾಗುವುದು. ಇನ್ನೊಂದು, ಸುಬ್ರಹ್ಮಣ್ಯದಿಂದ ಶುರುವಾಗುವುದು. ನಾವು ಸೋಮವಾರಪೇಟೆಯಿಂದ ಹತ್ತಿ ಸುಬ್ರಹ್ಮಣ್ಯದಲ್ಲಿ ಇಳಿಯುವ ಯೋಜನೆ ಹಾಕಿಕೊಂಡಿದ್ದೆವು. ಬೆಟ್ಟ ಹತ್ತಲಿಕ್ಕೆ ಮುಂಚೆ ಅರಣ್ಯ ಮಂಡಲಿಯವರದೊಂದು ಆಫೀಸಿದೆ. ಅಲ್ಲಿ ಒಂದು ಡಿಕ್ಲರೇಶನ್ ಬರೆದುಕೊಡಬೇಕು. ಪ್ರತಿ ಚಾರಣಿಗನಿಗೆ ೧೧೫ ರೂಪಾಯಿ ಫೀಸು. ಸುಮಾರು ಮುಕ್ಕಾಲು ಬೆಟ್ಟ ಹತ್ತುವವರೆಗೆ ಬೆಟ್ಟವೇ ಕಾಣುವುದಿಲ್ಲ. ಸುಮ್ಮನೆ ಕಾಡ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು: ಹಕ್ಕಿ ಹಾಡು ಕೇಳುತ್ತಾ. ತುಂಬಾ ಕಡಿದಾಗಿಯೂ ಇಲ್ಲದ, ಅಲ್ಲಲ್ಲಿ ಏರು ಅಲ್ಲಲ್ಲಿ ಇಳುಕಲಿನ ದಾರಿ: ನಾವು ಬೆಟ್ಟವನ್ನೇ ಹತ್ತುತ್ತಿದ್ದೇವೋ ಇಲ್ಲಾ ತಪ್ಪು ದಾರಿ ಹಿಡಿದು ಯಾವುದೋ ಊರ ಕಡೆ ಹೋಗುತ್ತಿದ್ದೇವೋ ಎಂದು ಅನುಮಾನ ಬರುವಂತೆ. ನಾವು ಅಲ್ಲಲ್ಲಿ ನಿಂತು ನೀರು ಕುಡಿಯುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ಕತೆ ಹೇಳುತ್ತಾ, ಚೆರ್ರಿ ಹಣ್ಣು ತಿನ್ನುತ್ತಾ ನಡೆಯುತ್ತಿದ್ದೆವು. ಯಾರಿಗೂ ಸುಸ್ತೇನು ಆದಂತೆ ಕಾಣುತ್ತಿರಲಿಲ್ಲ. ಮಧ್ಯೆ ಮಧ್ಯೆ ಸುಮಾರು ಜನ ಬೆಟ್ಟ ಇಳಿಯುತ್ತಿದ್ದವರು ಸಿಗುತ್ತಿದ್ದರು. ಅವರ ಬಳಿ 'ಇನ್ನೆಷ್ಟು ದೂರ?' ಅಂತ ಕೇಳುವುದು. ಅವರು 'ಇನ್ನೂ ಒಂದು-ಒಂದೂ ವರೆ ತಾಸು ಬೇಕು ತುದಿ ಮುಟ್ಟಲಿಕ್ಕೆ' ಎನ್ನುವುದು. ನಂತರ ಅವರು ನಮ್ಮ ಬಳಿ 'ಕೆಳಗಿಳಿಯಲಿಕ್ಕೆ ಇನ್ನೂ ಎಷ್ಟು ದೂರ?' ಅಂತ ಕೇಳುವುದು. ನಾವು 'ಇನ್ನೂ ಎರಡು ತಾಸು ಬೇಕು' ಎನ್ನುವುದು. ಮಧ್ಯೆ ಎರಡ್ಮೂರು ದೊಡ್ಡ ಬಂಡೆಗಳಿವೆ. ಹತ್ತಬೇಕಾದರೆ ಸ್ವಲ್ಪ ಹುಷಾರಾಗಿರಬೇಕು. ಉಳಿದಂತೆ ಕುಮಾರ ಪರ್ವತವನ್ನು ಸೋಮವಾರಪೇಟೆಯ ಕಡೆಯಿಂದ ಹತ್ತುವುದು ಕಷ್ಟದ ವಿಷಯವೇನಲ್ಲ.
ನಾವು ಶೃಂಗವನ್ನು ಮುಟ್ಟಿದಾಗ ಮಧ್ಯಾಹ್ನ ಒಂದೂ ವರೆ. ಸುಡು ಬಿಸಿಲು. ಬಿಸಿ ಗಾಳಿ. ಅಲ್ಲಲ್ಲಿ ಟೆಂಟು ಹಾಕಿ ಅಡುಗೆ ಮಾಡಿಕೊಳ್ಳುತ್ತಿದ್ದ ಗುಂಪುಗಳು. ನಾವೂ ಅಲ್ಲೇ ಒಂದು ಕಡೆ ತಂಪಲು ಅರಸಿ ಕೂತು, ಕಟ್ಟಿಕೊಂಡು ಹೋಗಿದ್ದ ಚಪಾತಿ ತಿಂದು ಮುಗಿಸಿದೆವು. ಕತ್ತಲಾಗುವುದರೊಳಗೆ ಕೆಳಗಿಳಿಯಲೇಬೇಕಿದ್ದರಿಂದ, ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಅವರೋಹಣವನ್ನು ಶುರುಮಾಡಿಯೇ ಬಿಟ್ಟೆವು. ಶೃಂಗದಿಂದ ಸ್ವಲ್ಪ ಇಳಿದ ಮೇಲೆ ಎಡಕ್ಕೊಮ್ಮೆ ತಿರುಗಿ ನೋಡಬೇಕು. ಅಲ್ಲಿಂದ ಕಾಣುತ್ತದೆ ಕುಮಾರ ಪರ್ವತದ ರುದ್ರ ರಮಣೀಯ ದೃಶ್ಯ... ಇದೇ ಬೆಟ್ಟವನ್ನಾ ನಾವು ಹತ್ತಿ ಬಂದಿದ್ದು ಎನಿಸುವಂತೆ ದಂಗುಬಡಿಸುವ ದೃಶ್ಯ.
ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಕೊನೆಯ ಅಧ್ಯಾಯವನ್ನು ಸಟ್ಟನೆ ನೆನಪಿಸುವಂತಹ ದೃಶ್ಯ. ಇಲ್ಲೇ, ಹೀಗೇ, ಆ ಓತಿ ತನ್ನ ರೆಕ್ಕೆಗಳನ್ನು ಪವಾಡದಂತೆ ಬಿಚ್ಚಿ ದಿಗಂತದತ್ತ ಸ್ವಚ್ಚಂದ ಪಯಣ ಹೋದದ್ದು.. ಇದೇ, ಇಲ್ಲೇ, ಕರ್ವಾಲೊ, ತೇಜಸ್ವಿ, ಕರಿಯಪ್ಪ, ಮಂದಣ್ಣ, ಯೆಂಗ್ಟ, ಕಿವಿ... ದಿಗ್ಭ್ರಮೆಗೊಂಡು ಶೂನ್ಯದತ್ತ ನೋಡಿದ್ದುದು.. ಕುಮಾರ ಪರ್ವತವನ್ನು ಹತ್ತಿದ್ದು ಸಾರ್ಥಕವಾಯ್ತೆಂದೆನಿಸುತ್ತದೆ ಇಲ್ಲಿಗೆ ಬಂದಾಗ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.
ಭಟ್ಟರ ಜೊತೆ ಮಾತಾಡುತ್ತಲೇ ಯೋಚಿಸುತ್ತಿದ್ದ ನನಗೆ ಹಳೆಯದೆಲ್ಲ ತುಂಬಾ ಆಪ್ಯಾಯಮಾನವಾಗಿ ಕಾಣತೊಡಗಿದ್ದವು. ಭಟ್ಟರ ಹೆಂಡತಿ ಊಟಕ್ಕೆ ಕರೆದರು. ನಾನೂ ಭಟ್ಟರೂ ಒಳಹೋದೆವು. "ಇವಳು ನನ್ನ ಮಗಳು. ಶ್ಯಾಮಲಾ ಅಂತ. ಫಸ್ಟ್ ಇಯರ್ ಡಿಗ್ರೀ. ಮಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿ ಇದ್ಕಂಡು ಓದ್ತಾ ಇದ್ದು.." ಭಟ್ಟರು ಕೈಸಾಲೆಯ ಮೂಲೆಯಲ್ಲಿ ಕೂತಿದ್ದ ಹುಡುಗಿಯನ್ನು ಪರಿಚಯಿಸಿಕೊಟ್ಟರು. ಹುಡುಗಿ ನನ್ನೆಡೆಗೆ ನೋಡಿ ಮುಗುಳ್ನಕ್ಕಳು. "ಡಿಗ್ರಿ, ಯಾವುದ್ರಲ್ಲಿ?" ನಾನು ಕೇಳಿದೆ. "ಬಿಎಸ್ಸಿ" ಅವಳೆಂದಳು. ನಾನು ಭಟ್ಟರ ಹಿಂದೆ ಅಡುಗೆ ಮನೆಗೆ ಹೋದೆ. ನಮ್ಮಿಬ್ಬರಿಗೂ ಅಡುಗೆಮನೆಯಲ್ಲೇ ಬಾಳೆ ಹಾಕಿದ ಭಟ್ಟರ ಹೆಂಡತಿ, ಮಗಳಿಗೆ ಕೈಸಾಲೆಯ ಮೂಲೆಯಲ್ಲೇ ಬಾಳೆ ಹಾಕಿದರು. ಇದೇನು ಹೀಗೆ ಅಂತ ನಾನು ಯೋಚಿಸುತ್ತಿರುವಾಗಲೇ "ಅವ್ಳು ಒಳಗೆ ಬರೂಹಂಗಿಲ್ಲೆ ಇವತ್ತು.. ಹಹ್ಹ!" ಎಂದರು ಭಟ್ಟರ ಹೆಂಡತಿ. ಹುಡುಗಿ ಸಿಟ್ಟು ಮಾಡಿಕೊಂಡವಳಂತೆ ಅಮ್ಮನೆಡೆಗೆ ಒಮ್ಮೆ ಬಿರುಗಣ್ಣು ಬಿಟ್ಟು ತಲೆತಗ್ಗಿಸಿ ಅನ್ನ ಕಲಸತೊಡಗಿದಳು. "ನಿಧಾನ ಊಟ ಮಾಡು" ಎಂದರು ನನ್ನ ಬಳಿ ಭಟ್ಟರ ಹೆಂಡತಿ. ಶ್ಯಾಮಲಾಳ ಮುಗುಳ್ನಗೆ, ಬಿರುಗಣ್ಣು, ನೆಲ್ಲಿಕಾಯಿ ಹಿಡಿದಿದ್ದ ಚಿಗುರು ಬೆರಳುಗಳು ನನಗೆ ಬಾಳೆ ಎಲೆಯ ಮೇಲೆಲ್ಲ ಕಾಣಿಸಿ ಕಾಡತೊಡಗಿದ್ದರಿಂದ ಊಟ ತನ್ನಿಂತಾನೇ ನಿಧಾನವಾಗಿತ್ತು.
"ಕವಳ ಹಾಕ್ತೀಯೇನು?" ಭಟ್ಟರು ತಬಕನ್ನು ನನ್ನ ಮುಂದೆ ದೂಡಿದರು. ನಾನು ಬರೀ ಎರಡು ಅಡಿಕೆಯ ಹೋಳುಗಳನ್ನು ಬಾಯಿಗೆಸೆದುಕೊಂಡೆ. "ಸುಸ್ತಾಯ್ದು ನಿಂಗೆ. ಮೆತ್ತಿನ ಮೇಲೆ ಹಾಸಿಗೆ ಹಾಸ್ತಿ. ಮಲಗೂವಂತೆ" ಭಟ್ಟರು ಬಾಯೊಳಗಿನ ಕವಳದ ರಸವನ್ನು ಕುಲುಕಿಸುತ್ತ ಒಳನಡೆದರು. ನನಗೆ ಕಣ್ಣು ಎಳೆಯುತ್ತಿದ್ದವು.
ಅಷ್ಟೊತ್ತಿಗೆ ಕರೆಂಟು ಹೋಯಿತು! ಭಟ್ಟರ ಹೆಂಡತಿ ಇನ್ನೂ ಊಟ ಮಾಡುತ್ತಿದ್ದರು ಅನ್ನಿಸೊತ್ತೆ. "ಥೋ! ಕರೆಂಟ್ ಹೋಯ್ತಲ್ಲಪ್ಪ.. ಹೋಯ್, ಒಂಚೂರು ಲಾಟೀನ್ ಹಚ್ಚಿ ಬನ್ನಿ.." ಗಂಡನನ್ನು ಕೂಗಿದರು. ಭಟ್ಟರು ನನ್ನ ಹಾಸಿಗೆ ತಯಾರು ಮಾಡುವುದಕ್ಕೆ ಮಹಡಿಯ ಮೇಲಿದ್ದರು. ಅವರು ಮೆಟ್ಟಿಲಿಳಿದು ಬರುವುದಕ್ಕೆ ಸಮಯವಾಗಬಹುದೆಂದು ಬಗೆದು ನಾನೇ ಎದ್ದು, "ಎಲ್ಲಿದ್ದು ಅಕ್ಕಾ ಲಾಟೀನು..? ನಾನೇ ಹಚ್ತಿ.." ಎನ್ನುತ್ತಾ, ತಡಕಾಡುತ್ತಾ ಒಳಮನೆ ದಾಟಿ, ಅಡುಗೆ ಮನೆ ಇಲ್ಲೇ ಇರಬೇಕೆಂದು ಕೈಸಾಲೆ ಬಳಿ ಅತ್ತಿತ್ತ ಕೈಚಾಚುತ್ತಾ ಹುಡುಕಾಡುತ್ತಿರಬೇಕಾದರೆ, ಯಾರಿಗೋ ಕೈ ತಾಕಿದಂತಾಗಿ, ಅವರು ಸರಕ್ಕನೆ ಅತ್ತ ಸರಿದು, ಅದು ಯಾರೆಂದು ಕ್ಷಣದಲ್ಲಿ ಮೆದುಳಿಗೆ ಗೊತ್ತಾಗಿ, ಮೈಯಲ್ಲಿ ರೋಮಾಂಚನವಾಗಿ, ಕತ್ತಲಲ್ಲದು ಯಾರಿಗೂ ತಿಳಿಯದೇ ಹೋಗಿ, ನಾನು "ಎಲ್ಲಿದೆ ಲಾಟೀನು?" ಎಂದು ಮತ್ತೊಮ್ಮೆ ಕೇಳುವಷ್ಟರಲ್ಲಿ ಕರೆಂಟೇ ಬಂದುಬಿಟ್ಟಿತು. "ಹಾಳು ಕರೆಂಟು.. ಒಂದು ನಿಮಿಷಕ್ಕೆ ಹೋಗ್ತು, ಮತ್ತೊಂದು ನಿಮಿಷಕ್ಕೆ ಬರ್ತು!" ಗೊಣಗಿದರು ಭಟ್ಟರ ಹೆಂಡತಿ. ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು. ನಾನು ಒಂದು ನಿಮಿಷ ಅಡುಗೆಮನೆಯ ಬಾಗಿಲಲ್ಲಿ ನಿಂತಿದ್ದು, ನಂತರ ಸೀದಾ ಮೆತ್ತಿಗೆ ಹೋಗಿ, ಭಟ್ಟರು ಹಾಸಿಕೊಟ್ಟ ಹಾಸಿಗೆಯಲ್ಲಿ ಪವಡಿಸಿಬಿಟ್ಟೆ: ಅಷ್ಟೆಲ್ಲ ಸುಸ್ತಾಗಿದ್ದರೂ ನಿದ್ರೆ ಬರದಿರುವಂತೆ ಮಾಡಿದ ಆ ಚಿಟ್ಟೆಯ ಸ್ಪರ್ಶಕ್ಕೆ ಮನಸಿನಲ್ಲೇ ಶಾಪ ಹಾಕುತ್ತಾ.
ಬೆಳಗ್ಗೆ ಭಟ್ಟರ ಮನೆಯಲ್ಲಿ ದೋಸೆ ತಿಂದು, ಊರಿಗೆ ಹೋದಾಗ ಶೆಡ್ತಿಕೆರೆಗೆ-ನಮ್ಮ ಮನೆಗೆ ಹೋಗಿಬರುವಂತೆ ಭಟ್ಟರ ಹೆಂಡತಿಗೆ ಹೇಳಿ, ನನ್ನ ಸ್ಪೋರ್ಟ್ಸ್ ಶೂಗೆ ಲೇಸ್ ಬಿಗಿಯುತ್ತಿದ್ದಾಗ, ಚಿಟ್ಟೆ ಶ್ಯಾಮಲಾ ಒಳಮನೆಯ ಬಾಗಿಲ ಹಿಂದೆ ನಿಂತಿದ್ದಳು. ಆಗತಾನೆ ಮಿಂದು ಬಂದಿದ್ದ ಅವಳ ಹೆರಳು ವಾಸ್ತುಬಾಗಿಲಿಗೆ ಇಳಿಬಿಟ್ಟ ತೋರಣವಾಗಿತ್ತು. ಜಿಂಕೆ ಕಣ್ಣು ಕಳ್ಳ ಕಣ್ಣಾಗಿದ್ದವು. "ಮತ್ತೆ ಸಿಗೋಣ?" ಮುಗುಳ್ನಗುತ್ತಾ ನಾನು ಕೈ ಚಾಚಿದೆ: ಇನ್ನು ಸಿಗುತ್ತದೋ ಇಲ್ಲವೋ ಎಂಬ ಸ್ಪರ್ಶ ಇದೊಮ್ಮೆ ದೊರಕಿಬಿಡಲಿ ಎಂಬಾಸೆಯಿಂದ. ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು.
ಚುರುಕು ಬಿಸಿಲಲ್ಲಿ ಬೆಟ್ಟ ಇಳಿಯುವಾಗ ಹಿಂದಿನ ಬಾರಿ ಇಳಿದ ಘೋರ ನೆನಪುಗಳು.. 'ಕರ್ವಾಲೋ ಪಾಯಿಂಟಿ'ನಿಂದ ಒಂದೇ ಸಮನೆ ಇಳಿಜಾರು. ಇಳಿ ಇಳಿ ಇಳಿ. ಒತ್ತುವ ಕಲ್ಲುಗಳು. ಜಾರಿದರೆ ಪ್ರಪಾತ. ಸುಮಾರು ಒಂದು ತಾಸು ಇಳಿದ ಮೇಲೆ ಕಾಣಿಸತೊಡಗುವ ಭಟ್ಟರ ಮನೆ. ಅದೇ ಭಟ್ಟರ ಮನೆಯಾ ಎಂಬ ಅನುಮಾನ. ಇಳಿದು ಇಳಿದು ಇಳಿದು... ಕಾಲುಗಳಿಗೆ ಕೆಳಕೆಳಗೆ ಹೆಜ್ಜೆಯಿಡುವುದೊಂದು ಯಾಂತ್ರಿಕ ಕ್ರಿಯೆಯಂತಾಗಿ, ನಮಗಿನ್ನು ಸಮತಟ್ಟು ನೆಲದಲ್ಲಿ ನಡೆಯಲಿಕ್ಕೇ ಬರುವುದಿಲ್ಲವೇನೋ ಎಂದು ಭಯ ಹುಟ್ಟಿ... ಇನ್ನೇನು ಬಂದೇ ಬಿಟ್ಟಿತು ಎಂಬಂತೆ ತೋರಿದರೂ ಮತ್ತೆ ದೂರ ದೂರ ಹೋಗುವ 'ಭಟ್ಟರ ಮನೆ' ಎಂಬ ಮರೀಚಿಕೆ... ಭಟ್ಟರ ಮನೆಗಿಂತಲೂ ಮುಂಚೆ ಅರಣ್ಯ ಇಲಾಖೆಯವರ ಕಛೇರಿ. ಸುಸ್ತಾಗಿದ್ದ ನಾವೆಲ್ಲ ಅಲ್ಲೇ ಉಳಿದಿದ್ದ ತಿಂಡಿ ತಿಂದು, 'ಇಲ್ಲಿಂದ ದಾರಿ ಚೆನ್ನಾಗಿದೆ.. ಎರಡು ತಾಸಿನಲ್ಲಿ ಸುಬ್ರಹ್ಮಣ್ಯ ಮುಟ್ಟಬಹುದು' ಎಂಬ ಫಾರೆಸ್ಟರಿನ ಮಾತು ನಂಬಿ, ಭಟ್ಟರ ಮನೆಯಲ್ಲಿ ಅರ್ಧ ತಾಸು ರೆಸ್ಟ್ ತಗೊಂಡು ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ರದ್ದು ಮಾಡಿ, ದಢದಢನೆ ಇಳಿಯತೊಡಗಿದ್ದು. ಕತ್ತಲು.. ಕಾಡು.. ಕಲ್ಲು.. ಜೀವ ಹೋಗುವಂತೆ ನೋಯುತ್ತಿದ್ದ ಕಾಲು.. ಸುಸ್ತು.. ಆನೆ ಭಯ..
ಈಗ ಯೋಚಿಸಿದರೂ ಭಯವಾಗುತ್ತದೆ.. ಅಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ ನಮ್ಮ ಹುಂಬತನದ ಬಗ್ಗೆ.. ಆದರೆ ಜೀವನದ ಅತ್ಯದ್ಭುತ ಚಾರಣಾನುಭವವನ್ನು ಕಲ್ಪಿಸಿದ ಆ ದಿನದ ಬಗ್ಗೆ ಖುಷಿಯಿದೆ. ಮಾಡಿದ ಸಾಹಸದ ಬಗ್ಗೆ ಏನೋ ಹೆಮ್ಮೆಯಿದೆ.
ಚಿಟ್ಟೆ ಸ್ಪರ್ಶದ ಗುಂಗಿನಲ್ಲಿ ನಾನು ಸುಮ್ಮನೆ ಇಳಿಯುತ್ತೇನೆ.. ದೂರದಲ್ಲಿ ಸುಬ್ರಹ್ಮಣ್ಯದ ದೇವಸ್ಥಾನದ ಘಂಟೆಯ ಶಬ್ದ ಕೇಳಿಸುತ್ತದೆ.. ಇನ್ನೇನು ಸ್ವಲ್ಪ ದೂರ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.. ಕಾಡ ನೆರಳು, ಇಣುಕು ಬಿಸಿಲು, ಹಕ್ಕಿ ಕುಕಿಲು, ನೆನಪ ಹೊನಲು... ಕುಮಾರ ಪರ್ವತದ ಎತ್ತರಕ್ಕೆ ಶರಣು.
"ಹೌದು. ಯಾಕೆ ಅಲ್ಲಿ ಯಾರಾದ್ರೂ ಗೊತ್ತಾ ನಿಮಗೆ?" ಕೇಳಿದೆ.
"ಹಾಂ! ನಮ್ಮನೆಯವಳಿಗೆ ಅಲ್ಲೇ ವರದಾಮೂಲ! ಏಯ್ ಏನೇ, ನಿಮ್ಮೂರು ಕಡೆಯೋರು ಬಂದಿಯಾರೆ ನೋಡು.." ಭಟ್ಟರು ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕೂಗಿದರು.
ಒಳಗಿನಿಂದ ಬಂದ ಭಟ್ರ ಹೆಂಡತಿಯನ್ನು ಅಡುಗೆ ಒಲೆಯ ಮಶಿ ಬಡಿದು ಬಡಿದೇ ಹೀಗಾಗಿದೆಯೇನೋ ಎನಿಸುವಷ್ಟು ಕಪ್ಪು ಬಣ್ಣದ ಸೀರೆಯೊಂದು ಸುತ್ತಿತ್ತು. ಆ ಸೀರೆಗೆ ಹೊಳೆಯುವ ಹಸಿರು ಗೆರೆಗಳಿದ್ದವು. ಕೈಯ ಬಳೆಗಳಿಗೆ ಅದು ಮ್ಯಾಚಿಂಗ್ ಆಗುತ್ತಿತ್ತು.
"ಶೆಡ್ತಿಕೆರೆಯಾ? ಯಾರ ಮನೆ?" ಕೇಳಿದರು ಭಟ್ರ ಹೆಂಡತಿ.
"ಹೊಸೊಕ್ಲೋರ ಮನೆ ಅಂತಾರೆ. ನನ್ನ ಅಪ್ಪನ ಹೆಸರು ಅನಂತರಾವ್ ಅಂತ"
"ನಿನ್ನ ಅಮ್ಮಂಗೆ ಯಾವೂರು ಹೇಳು? ತುಮರಿ ಅಲ್ದಾ?"
"ಹಾಂ, ತುಮರಿಯೇ"
"ಗೊತ್ತಾತು ಬಿಡು.. ವನಮಾಲ ಅಲ್ದಾ ಹೆಸರು? ನಂಗೆ ವರದಾಮೂಲ. ಶಂಕರ ಭಟ್ರ ಮನೆ.. ನೀವು ಈಗಿನ ಹುಡುಗ್ರಿಗೆ ಗೊತ್ತಿರೂದಿಲ್ಲ ಬಿಡು.."
ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಪೆಚ್ಚು ನಗೆ ನಕ್ಕೆ. ಇವರು ಹವಿಗನ್ನಡ, ಮಂಗಳೂರು ಕನ್ನಡ ಮಿಕ್ಸ್ ಮಾಡಿ ಮಾತಾಡುತ್ತಿದ್ದರು. ಅದಕ್ಕಾಗಿ ನಾನು ಪೂರ್ತಿ ಪೇಟೆ ಭಾಷೆಯಲ್ಲೇ ಮಾತಾಡುತ್ತಿದ್ದೆ. ಹೊರಗೆ ಇಳಿಯುತ್ತಿದ್ದ ಸಂಜೆಗತ್ತಲೆ, ಜಗುಲಿಯಲ್ಲಿದ್ದ ಅಲ್ಪ ಬೆಳಕನ್ನೂ ಆಹುತಿ ತೆಗೆದುಕೊಳ್ಳುತ್ತಿತ್ತು. ಜಗುಲಿಯ ಬಲಮೂಲೆಯಲ್ಲಿದ್ದ ಕಿಟಕಿಯಿಂದ ಭಟ್ಟರ ಮನೆಯ ಧರೆ ಕಾಣುತ್ತಿತ್ತು. ಬಳಿಯೇ ಹೋಗಿ ಬಗ್ಗಿ ನೋಡಿದರೆ ಇಡೀ ಬೆಟ್ಟ ಕಾಣಬಹುದೆಂದು ನಾನು ಊಹಿಸಿದೆ. "ಇನ್ನು ನೀನು ಕೆಳಗಿಳೀಲಿಕ್ಕೆ ಆಗೂದಿಲ್ಲ. ನಮ್ಮಲ್ಲೇ ಉಳ್ದು ಬೆಳಗ್ಗೆ ಮುಂಚೆ ಹೊರಡು" ಎಂದರು ಭಟ್ಟರು. ಸುಸ್ತಾಗಿದ್ದ ನನಗೂ ಗತ್ಯಂತರವಿರಲಿಲ್ಲ. ಭಟ್ಟರ ಹೆಂಡತಿ ಜಗುಲಿಯ ಲೈಟಿನ ಸ್ವಿಚ್ಚು ಒತ್ತಿ ಕಾಫಿ ತರುವುದಾಗಿ ಹೇಳಿ ಒಳಹೋದರು. ನಾನು ಬಟ್ಟೆ ಬದಲಿಸಲೆಂದು ಎದ್ದೆ. ಟ್ಯೂಬ್‍ಲೈಟು ಫಕಫಕನೆ ಹೊತ್ತಿಕೊಂಡಿತು.
ಇಲ್ಲಿಗೆ ಚಾರಣಕ್ಕೆ ಹೊರಡುವ ಮೊದಲೇ 'ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲಿಕ್ಕೆ ಸಾಧ್ಯವೇ ಇಲ್ಲ, ನೀನು ಭಟ್ಟರ ಮನೆಯಲ್ಲಿ ಪರಿಚಯ ಹೇಳಿಕೊಂಡು ಇರು, ಕತ್ತಲಾದಮೇಲೂ ಮುಂದುವರೆಯುವ ಸಾಹಸ ಮಾಡಬೇಡ, ಒಬ್ಬನೇ ಬೇರೆ ಹೋಗುತ್ತಿದ್ದೀಯಾ, ತುಂಬಾ ದಟ್ಟ ಕಾಡಿದೆ, ಆನೆ ಹಿಂಡೂ ಇದೆಯಂತೆ' ಎಂದೆಲ್ಲ ನನ್ನ ಸ್ನೇಹಿತರು ಹೆದರಿಸಿದ್ದರು. ಅವರು ಅಷ್ಟೆಲ್ಲಾ ಅಂದಿದ್ದರೂ ನನಗೆ ನಾವು ಹಿಂದೊಮ್ಮೆ ಮಾಡಿದ ಸಾಹಸದ ನೆನಪಿದ್ದಿದ್ದರಿಂದ 'ಏಯ್ ಅವ್ಕೆಲ್ಲ ನಾನು ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಹತ್ತಿಳಿದು ತೋರಿಸ್ತೇನೆ ನೋಡ್ತಿರಿ' ಅಂದು ಬಂದಿದ್ದೆ.ಆದರೆ ಕಳೆದ ಬಾರಿಯಂತೆ ಈ ಬಾರಿ ಹತ್ತಿಳಿಯುವುದು ಸುಲಭವಿರಲಿಲ್ಲ. ನನ್ನ ಸ್ಪೋರ್ಟ್ಸ್ ಶೂ ಹೊಸದಾಗಿದ್ದರಿಂದ ಅದಿನ್ನೂ ಕಾಲಿಗೆ ಹೊಂದಿಕೊಂಡಿರಲಿಲ್ಲ. ಬೆಟ್ಟದ ಕಲ್ಲು ಹಾದಿಯಲ್ಲಿ ಇಳಿಯುವಾಗ ಪಾದಕ್ಕೆ, ಹೆಬ್ಬೆರಳುಗಳಿಗೆ ಒತ್ತೀ ಒತ್ತಿ ತುಂಬಾ ನೋಯುತ್ತಿತ್ತು. ಹೆಜ್ಜೆ ಎತ್ತಿಡುವುದೆಂದರೆ ಜೀವ ಹೋದಂತಾಗುತ್ತಿತ್ತು. ಭಟ್ಟರ ಮನೆ ಬಳಿ ಬರುವುದರೊಳಗೆ ನಾನು ಪೂರ್ತಿ ಬಸವಳಿದುಹೋಗಿದ್ದೆ. ನನ್ನ ಜೊತೆ ತಾನೂ ಇಳಿಯುತ್ತಿದ್ದ ಸೂರ್ಯ, ನಾನು ಭಟ್ಟರ ಮನೆ ಬಳಿ ಬರುವಷ್ಟರಲ್ಲಿ ತಾನಿನ್ನು ಮರೆಯಾಗುವುದಾಗಿ ಹೇಳಿ ಟಾಟಾ ಮಾಡುತ್ತಿದ್ದ. ನನ್ನ ಬ್ಯಾಗಿನೊಳಗಿದ್ದ ಪೆನ್-ಟಾರ್ಚನ್ನು ಒಮ್ಮೆ ತಡವಿಕೊಂಡೆ. ಅದು ತಾನು ಬೇಕಾದರೆ ಒಂದೆರೆಡು ತಾಸು ಉರಿಯಬಲ್ಲೆ ಎಂದು ಅಭಯ ನೀಡಿತು. ಆದರೆ ಪೂರ್ತಿ ಬೆಟ್ಟ ಇಳಿಯುವುದಕ್ಕೆ ಇನ್ನೂ ಮೂರು ತಾಸಾದರೂ ಬೇಕೆಂದು ನನ್ನ ಹಿಂದಿನ ಅನುಭವ ಹೇಳುತ್ತಿತ್ತು. ಆನೆಯ ಹಿಂಡಿನ ನೆನಪಾಯಿತು. ಧೈರ್ಯ ಸಾಲಲಿಲ್ಲ. ಭಟ್ಟರ ಮನೆಯಲ್ಲೇ ಉಳಿದು ನಾಳೆ ಬೆಳಗ್ಗೆ ಅವರೋಹಣ ಮುಂದುವರೆಸುವುದೇ ಸರಿಯಿಂದು ನಿಶ್ಚಯಿಸಿದೆ. ಅಲ್ಲದೇ ಭಟ್ಟರ ಹೆಂಡತಿಯ ಊರಿನವನೇ ಅಂತ ಹೇಳಿಕೊಂಡಿದ್ದರಿಂದ ನನಗೆ ಇವತ್ತು ಇಲ್ಲಿ ಉಳಕೊಳ್ಳಲಿಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿತ್ತು. ಅದನ್ನು ನಿರಾಕರಿಸುವ ಗೋಜಿಗೆ ಹೋಗದೇ, ಬಟ್ಟೆ ಬದಲಿಸಿದವನು ಕೈಕಾಲು ತೊಳೆದು ಬರುವುದಾಗಿ ಹೇಳಿ, ಬಚ್ಚಲು ಮನೆ ಕೇಳಿಕೊಂಡು ಮನೆಯ ಒಳಹೊಕ್ಕೆ.
ಮೊದಲಿನದು ಜಗುಲಿ. ನಂತರ ಕತ್ತಲ ಒಳಮನೆ. ಆಮೇಲೆ ಕೈಸಾಲೆ. ಅದರ ಪಕ್ಕದಲ್ಲೇ ಅಡುಗೆಮನೆ. ಕೈಸಾಲೆಯಿಂದ ಹೊರಗೆ ನಡೆದರೆ ಅಲ್ಲೇ ಬಚ್ಚಲುಮನೆ. "ಬಿಸೀ ನೀರಿದ್ದು. ಬೇಕಾದ್ರೆ ಸ್ನಾನ ಮಾಡೋದಿದ್ರೆ ಮಾಡು" ಎಂದರು ಭಟ್ಟರ ಹೆಂಡತಿ. ಬಿಂದಿಗೆ ಬಿಂದಿಗೆ ಹೊಯ್ದುಕೊಂಡೆ. ಗೂಡಿನಲ್ಲಿದ್ದ ಅವರ ಲೈಫ್‍ಬಾಯ್ ಸೋಪನ್ನೇ ಬಳಸಿಕೊಂಡೆ. ಘಮಘಮ ಪರಿಮಳ. ಹಬೆ. ಹಿತಾನುಭವ. ನಾನು ಸ್ನಾನ ಮುಗಿಸಿ, ಬರೀ ಟವಲು ಸುತ್ತಿಕೊಂಡು ಕೈಸಾಲೆಗೆ ಬಂದೆ.
ಕೈಸಾಲೆಯ ಮೂಲೆಯಲ್ಲಿ ಒಂದು ಹುಡುಗಿ ಕೂತಿತ್ತು. ಬರೀ ಮೈಯಲ್ಲಿ ಬಂದ ನನ್ನನ್ನು ನೋಡಿದ ಅದು ನಾಚಿದಂತೆ ಮುಖವನ್ನು ಗೋಡೆಯ ಕಡೆ ತಿರುಗಿಸಿಕೊಂಡಿತು. ನೆಲ್ಲಿಕಾಯಿಯನ್ನೋ ಏನನ್ನೋ ತಿನ್ನುತ್ತಿದ್ದಂತಿತ್ತು. ಓರೆಗಣ್ಣಿನಿಂದ ನೋಡುತ್ತಾ ನಾನು ಒಳಮನೆ ದಾಟಿ ಜಗುಲಿಗೆ ಹೋಗಿ ಒಂದು ತೆಳು ಬನೀನು, ಬರ್ಮುಡಾ ಧರಿಸಿ, ತಲೆ ಬಾಚಿ ರೆಡಿಯಾಗುವಷ್ಟರಲ್ಲಿ ಭಟ್ಟರ ಹೆಂಡತಿ ಒಳಗೆ ಕರೆದರು. ಅಡುಗೆ ಮನೆಯಲ್ಲಿ ಮಣೆ ಹಾಕಿ ಕೂರಿಸಿ ನನಗೆ ಮಸಾಲೆ ಅವಲಕ್ಕಿ, ಒಂದು ದೊಡ್ಡ ಲೋಟದ ತುಂಬ ಕಾಫಿ ಕೊಟ್ಟರು. ಹಸಿವಾಗಿದ್ದ ನನ್ನ ಹೊಟ್ಟೆಗೆ ಖುಷಿಯಾಯಿತು. ಕೈ ತೊಳೆಯಲು ಬಚ್ಚಲಿಗೆ ಹೋಗುವಾಗ ಕೈಸಾಲೆಯ ಮೂಲೆ ನೋಡಿದರೆ ಅಲ್ಲಿ ಆ ಹುಡುಗಿ ಇರಲಿಲ್ಲ.
ಜಗುಲಿಗೆ ಬಂದು ಕೂತೆ. ಭಟ್ಟರು ಟೀವಿ ನೋಡುತ್ತಿದ್ದರು. ದೂರದರ್ಶನದ ಏಳು ಗಂಟೆ ವಾರ್ತೆ ಬರುತ್ತಿತ್ತು. ನನ್ನ ಅರೆತೆರೆದ ಕಣ್ಗಳು ನಿದ್ರೆಯನ್ನು ಬಯಸುತ್ತಿದ್ದವು. ಆದರೆ ವಾರ್ತೆ ಮುಗಿಯುತ್ತಿದ್ದಂತೆಯೇ ಭಟ್ಟರು ನನ್ನ ಬಗ್ಗೆಯೆಲ್ಲಾ ವಿಚಾರ ಮಾಡಲು ಶುರು ಮಾಡಿದ್ದರಿಂದ ನಾನು ಕಷ್ಟಪಟ್ಟು ನಿದ್ರೆಯನ್ನು ತಡೆಹಿಡಿಯಲೇ ಬೇಕಾಯಿತು. ಊರು, ಕೇರಿ, ಅಪ್ಪ, ಕೆಲಸ... ಎಲ್ಲಾ ವಿಚಾರಿಸಿದ ಅವರು, ತಮ್ಮ ಬಗ್ಗೆಯೂ ಹೇಳಿಕೊಂಡರು. ಇಲ್ಲಿಗೆ ತಾವು ಬಂದದ್ದು, ಹೀಗೆ ಒಂಟಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿರುವುದು, ಈ ಪಾಳುಗುಡಿಯ ಪೂಜೆ... ಎಲ್ಲಾ ಕಾರಣ, ಕತೆ, ಹಿನ್ನೆಲೆಗಳನ್ನು ಹೇಳಿದರು. "ಕುಮಾರ ಪರ್ವತವನ್ನು ಒಂದೇ ದಿನದಲ್ಲಿ ಹತ್ತಿಳಿಯೋದಕ್ಕೆ ಗಂಡೆದೆ ಬೇಕು" ಎಂದರು. ಇಲ್ಲಿಗೆ ಬರುವವರೆಲ್ಲರು ಅಡುಗೆ-ಆಹಾರವನ್ನೆಲ್ಲ ತಂದುಕೊಂಡು, ಮೇಲ್ಗಡೆ ಟೆಂಟು ಹಾಕಿ ಉಳಿದು ಮರುದಿನ ಕೆಳಗಿಳಿಯುತ್ತಾರಂತೆ. ಆದರೆ ಹಿಂದೊಮ್ಮೆ ನಾವು ಆರು ಜನ ಹುಡುಗರು ಸಾಹಸ ಮಾಡಿ ಒಂದೇ ದಿನದಲ್ಲಿ ಹತ್ತಿಳಿದ ಕತೆಯನ್ನು ನಾನು ಅವರಿಗೆ ಹೇಳಿದೆ. ಭಟ್ಟರು "ಭಯಂಕರ ಬಿಡ್ರಪ್ಪ.. ಅದೂ ಪುಳಿಚಾರು ತಿನ್ನೋ ಬ್ರಾಮಣ್ರ ಹುಡುಗ್ರಾಗಿ.. ಆಂ?" ಎಂದು ನಕ್ಕರು. ಆ ಹಿಂದಿನ ಬಾರಿಯ ಚಾರಣವನ್ನು ನೆನೆಸಿಕೊಳ್ಳುತ್ತಾ ನಾನೂ ನಕ್ಕೆ.ಬೆಂಗಳೂರಿನಿಂದ ರಾತ್ರಿ ಹನ್ನೊಂದರ ಹೊತ್ತಿಗೆ ರಾಜಹಂಸ ಬಸ್ಸಿಗೆ ಹೊರಟ ನಾವು ಆರು ಜನ ಹುಡುಗರು ಸೋಮವಾರಪೇಟೆಯಲ್ಲಿ ಇಳಿದಾಗ ಮೂಲೆ ಹೋಟಿಲಿನ ಕಾಫಿಯೋ ಚಹಾವೋ ಗೊತ್ತಾಗದಂತಹ ಬಣ್ಣದ ದ್ರವವೊಂದು ಸ್ವಾಗತ ಕೋರಿತ್ತು. ಅಲ್ಲೇ ನಾವೆಲ್ಲ ಮುಖ ತೊಳೆದು, ಹಲ್ಲುಜ್ಜಿ, ಮೈಮುರಿದು ತಯಾರಾದೆವು. ನೀರಿಗಿಂತಲೂ ತೆಳ್ಳಗಿದ್ದ ಸಾರಿನಲ್ಲಿ ಇಡ್ಲಿಯ ಚೂರುಗಳನ್ನು ಮುಳುಗಿಸಿ ಎತ್ತಿ ಬಾಯಿಗೆಸೆದುಕೊಂಡು ಅಗಿಯದೇ ನುಂಗಿ ಬೆಳಗಿನ ತಿಂಡಿ ಮುಗಿಸಿದ್ದೆವು. ಅಲ್ಲಿಂದ ಬೆಟ್ಟದ ಬುಡದವರೆಗೆ ಒಂದು ಕಾರು. ನಂತರ ಒಂದೇ ಸಮನೆ ಆರೋಹಣ.
ಕರ್ನಾಟಕದ ಅತ್ಯಂತ ದುರ್ಗಮ ಚಾರಣದ ಹಾದಿಯೂ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವೂ ಆಗಿರುವ ಕುಮಾರ ಪರ್ವತವನ್ನು ಹತ್ತಲಿಕ್ಕೆ ಎರಡು ದಾರಿಗಳಿವೆ. ಒಂದು, ಸೋಮವಾರಪೇಟೆಯಿಂದ ಶುರುವಾಗುವುದು. ಇನ್ನೊಂದು, ಸುಬ್ರಹ್ಮಣ್ಯದಿಂದ ಶುರುವಾಗುವುದು. ನಾವು ಸೋಮವಾರಪೇಟೆಯಿಂದ ಹತ್ತಿ ಸುಬ್ರಹ್ಮಣ್ಯದಲ್ಲಿ ಇಳಿಯುವ ಯೋಜನೆ ಹಾಕಿಕೊಂಡಿದ್ದೆವು. ಬೆಟ್ಟ ಹತ್ತಲಿಕ್ಕೆ ಮುಂಚೆ ಅರಣ್ಯ ಮಂಡಲಿಯವರದೊಂದು ಆಫೀಸಿದೆ. ಅಲ್ಲಿ ಒಂದು ಡಿಕ್ಲರೇಶನ್ ಬರೆದುಕೊಡಬೇಕು. ಪ್ರತಿ ಚಾರಣಿಗನಿಗೆ ೧೧೫ ರೂಪಾಯಿ ಫೀಸು. ಸುಮಾರು ಮುಕ್ಕಾಲು ಬೆಟ್ಟ ಹತ್ತುವವರೆಗೆ ಬೆಟ್ಟವೇ ಕಾಣುವುದಿಲ್ಲ. ಸುಮ್ಮನೆ ಕಾಡ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು: ಹಕ್ಕಿ ಹಾಡು ಕೇಳುತ್ತಾ. ತುಂಬಾ ಕಡಿದಾಗಿಯೂ ಇಲ್ಲದ, ಅಲ್ಲಲ್ಲಿ ಏರು ಅಲ್ಲಲ್ಲಿ ಇಳುಕಲಿನ ದಾರಿ: ನಾವು ಬೆಟ್ಟವನ್ನೇ ಹತ್ತುತ್ತಿದ್ದೇವೋ ಇಲ್ಲಾ ತಪ್ಪು ದಾರಿ ಹಿಡಿದು ಯಾವುದೋ ಊರ ಕಡೆ ಹೋಗುತ್ತಿದ್ದೇವೋ ಎಂದು ಅನುಮಾನ ಬರುವಂತೆ. ನಾವು ಅಲ್ಲಲ್ಲಿ ನಿಂತು ನೀರು ಕುಡಿಯುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ಕತೆ ಹೇಳುತ್ತಾ, ಚೆರ್ರಿ ಹಣ್ಣು ತಿನ್ನುತ್ತಾ ನಡೆಯುತ್ತಿದ್ದೆವು. ಯಾರಿಗೂ ಸುಸ್ತೇನು ಆದಂತೆ ಕಾಣುತ್ತಿರಲಿಲ್ಲ. ಮಧ್ಯೆ ಮಧ್ಯೆ ಸುಮಾರು ಜನ ಬೆಟ್ಟ ಇಳಿಯುತ್ತಿದ್ದವರು ಸಿಗುತ್ತಿದ್ದರು. ಅವರ ಬಳಿ 'ಇನ್ನೆಷ್ಟು ದೂರ?' ಅಂತ ಕೇಳುವುದು. ಅವರು 'ಇನ್ನೂ ಒಂದು-ಒಂದೂ ವರೆ ತಾಸು ಬೇಕು ತುದಿ ಮುಟ್ಟಲಿಕ್ಕೆ' ಎನ್ನುವುದು. ನಂತರ ಅವರು ನಮ್ಮ ಬಳಿ 'ಕೆಳಗಿಳಿಯಲಿಕ್ಕೆ ಇನ್ನೂ ಎಷ್ಟು ದೂರ?' ಅಂತ ಕೇಳುವುದು. ನಾವು 'ಇನ್ನೂ ಎರಡು ತಾಸು ಬೇಕು' ಎನ್ನುವುದು. ಮಧ್ಯೆ ಎರಡ್ಮೂರು ದೊಡ್ಡ ಬಂಡೆಗಳಿವೆ. ಹತ್ತಬೇಕಾದರೆ ಸ್ವಲ್ಪ ಹುಷಾರಾಗಿರಬೇಕು. ಉಳಿದಂತೆ ಕುಮಾರ ಪರ್ವತವನ್ನು ಸೋಮವಾರಪೇಟೆಯ ಕಡೆಯಿಂದ ಹತ್ತುವುದು ಕಷ್ಟದ ವಿಷಯವೇನಲ್ಲ.ನಾವು ಶೃಂಗವನ್ನು ಮುಟ್ಟಿದಾಗ ಮಧ್ಯಾಹ್ನ ಒಂದೂ ವರೆ. ಸುಡು ಬಿಸಿಲು. ಬಿಸಿ ಗಾಳಿ. ಅಲ್ಲಲ್ಲಿ ಟೆಂಟು ಹಾಕಿ ಅಡುಗೆ ಮಾಡಿಕೊಳ್ಳುತ್ತಿದ್ದ ಗುಂಪುಗಳು. ನಾವೂ ಅಲ್ಲೇ ಒಂದು ಕಡೆ ತಂಪಲು ಅರಸಿ ಕೂತು, ಕಟ್ಟಿಕೊಂಡು ಹೋಗಿದ್ದ ಚಪಾತಿ ತಿಂದು ಮುಗಿಸಿದೆವು. ಕತ್ತಲಾಗುವುದರೊಳಗೆ ಕೆಳಗಿಳಿಯಲೇಬೇಕಿದ್ದರಿಂದ, ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಅವರೋಹಣವನ್ನು ಶುರುಮಾಡಿಯೇ ಬಿಟ್ಟೆವು. ಶೃಂಗದಿಂದ ಸ್ವಲ್ಪ ಇಳಿದ ಮೇಲೆ ಎಡಕ್ಕೊಮ್ಮೆ ತಿರುಗಿ ನೋಡಬೇಕು. ಅಲ್ಲಿಂದ ಕಾಣುತ್ತದೆ ಕುಮಾರ ಪರ್ವತದ ರುದ್ರ ರಮಣೀಯ ದೃಶ್ಯ... ಇದೇ ಬೆಟ್ಟವನ್ನಾ ನಾವು ಹತ್ತಿ ಬಂದಿದ್ದು ಎನಿಸುವಂತೆ ದಂಗುಬಡಿಸುವ ದೃಶ್ಯ.
ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಕೊನೆಯ ಅಧ್ಯಾಯವನ್ನು ಸಟ್ಟನೆ ನೆನಪಿಸುವಂತಹ ದೃಶ್ಯ. ಇಲ್ಲೇ, ಹೀಗೇ, ಆ ಓತಿ ತನ್ನ ರೆಕ್ಕೆಗಳನ್ನು ಪವಾಡದಂತೆ ಬಿಚ್ಚಿ ದಿಗಂತದತ್ತ ಸ್ವಚ್ಚಂದ ಪಯಣ ಹೋದದ್ದು.. ಇದೇ, ಇಲ್ಲೇ, ಕರ್ವಾಲೊ, ತೇಜಸ್ವಿ, ಕರಿಯಪ್ಪ, ಮಂದಣ್ಣ, ಯೆಂಗ್ಟ, ಕಿವಿ... ದಿಗ್ಭ್ರಮೆಗೊಂಡು ಶೂನ್ಯದತ್ತ ನೋಡಿದ್ದುದು.. ಕುಮಾರ ಪರ್ವತವನ್ನು ಹತ್ತಿದ್ದು ಸಾರ್ಥಕವಾಯ್ತೆಂದೆನಿಸುತ್ತದೆ ಇಲ್ಲಿಗೆ ಬಂದಾಗ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.ಭಟ್ಟರ ಜೊತೆ ಮಾತಾಡುತ್ತಲೇ ಯೋಚಿಸುತ್ತಿದ್ದ ನನಗೆ ಹಳೆಯದೆಲ್ಲ ತುಂಬಾ ಆಪ್ಯಾಯಮಾನವಾಗಿ ಕಾಣತೊಡಗಿದ್ದವು. ಭಟ್ಟರ ಹೆಂಡತಿ ಊಟಕ್ಕೆ ಕರೆದರು. ನಾನೂ ಭಟ್ಟರೂ ಒಳಹೋದೆವು. "ಇವಳು ನನ್ನ ಮಗಳು. ಶ್ಯಾಮಲಾ ಅಂತ. ಫಸ್ಟ್ ಇಯರ್ ಡಿಗ್ರೀ. ಮಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿ ಇದ್ಕಂಡು ಓದ್ತಾ ಇದ್ದು.." ಭಟ್ಟರು ಕೈಸಾಲೆಯ ಮೂಲೆಯಲ್ಲಿ ಕೂತಿದ್ದ ಹುಡುಗಿಯನ್ನು ಪರಿಚಯಿಸಿಕೊಟ್ಟರು. ಹುಡುಗಿ ನನ್ನೆಡೆಗೆ ನೋಡಿ ಮುಗುಳ್ನಕ್ಕಳು. "ಡಿಗ್ರಿ, ಯಾವುದ್ರಲ್ಲಿ?" ನಾನು ಕೇಳಿದೆ. "ಬಿಎಸ್ಸಿ" ಅವಳೆಂದಳು. ನಾನು ಭಟ್ಟರ ಹಿಂದೆ ಅಡುಗೆ ಮನೆಗೆ ಹೋದೆ. ನಮ್ಮಿಬ್ಬರಿಗೂ ಅಡುಗೆಮನೆಯಲ್ಲೇ ಬಾಳೆ ಹಾಕಿದ ಭಟ್ಟರ ಹೆಂಡತಿ, ಮಗಳಿಗೆ ಕೈಸಾಲೆಯ ಮೂಲೆಯಲ್ಲೇ ಬಾಳೆ ಹಾಕಿದರು. ಇದೇನು ಹೀಗೆ ಅಂತ ನಾನು ಯೋಚಿಸುತ್ತಿರುವಾಗಲೇ "ಅವ್ಳು ಒಳಗೆ ಬರೂಹಂಗಿಲ್ಲೆ ಇವತ್ತು.. ಹಹ್ಹ!" ಎಂದರು ಭಟ್ಟರ ಹೆಂಡತಿ. ಹುಡುಗಿ ಸಿಟ್ಟು ಮಾಡಿಕೊಂಡವಳಂತೆ ಅಮ್ಮನೆಡೆಗೆ ಒಮ್ಮೆ ಬಿರುಗಣ್ಣು ಬಿಟ್ಟು ತಲೆತಗ್ಗಿಸಿ ಅನ್ನ ಕಲಸತೊಡಗಿದಳು. "ನಿಧಾನ ಊಟ ಮಾಡು" ಎಂದರು ನನ್ನ ಬಳಿ ಭಟ್ಟರ ಹೆಂಡತಿ. ಶ್ಯಾಮಲಾಳ ಮುಗುಳ್ನಗೆ, ಬಿರುಗಣ್ಣು, ನೆಲ್ಲಿಕಾಯಿ ಹಿಡಿದಿದ್ದ ಚಿಗುರು ಬೆರಳುಗಳು ನನಗೆ ಬಾಳೆ ಎಲೆಯ ಮೇಲೆಲ್ಲ ಕಾಣಿಸಿ ಕಾಡತೊಡಗಿದ್ದರಿಂದ ಊಟ ತನ್ನಿಂತಾನೇ ನಿಧಾನವಾಗಿತ್ತು.
"ಕವಳ ಹಾಕ್ತೀಯೇನು?" ಭಟ್ಟರು ತಬಕನ್ನು ನನ್ನ ಮುಂದೆ ದೂಡಿದರು. ನಾನು ಬರೀ ಎರಡು ಅಡಿಕೆಯ ಹೋಳುಗಳನ್ನು ಬಾಯಿಗೆಸೆದುಕೊಂಡೆ. "ಸುಸ್ತಾಯ್ದು ನಿಂಗೆ. ಮೆತ್ತಿನ ಮೇಲೆ ಹಾಸಿಗೆ ಹಾಸ್ತಿ. ಮಲಗೂವಂತೆ" ಭಟ್ಟರು ಬಾಯೊಳಗಿನ ಕವಳದ ರಸವನ್ನು ಕುಲುಕಿಸುತ್ತ ಒಳನಡೆದರು. ನನಗೆ ಕಣ್ಣು ಎಳೆಯುತ್ತಿದ್ದವು.
ಅಷ್ಟೊತ್ತಿಗೆ ಕರೆಂಟು ಹೋಯಿತು! ಭಟ್ಟರ ಹೆಂಡತಿ ಇನ್ನೂ ಊಟ ಮಾಡುತ್ತಿದ್ದರು ಅನ್ನಿಸೊತ್ತೆ. "ಥೋ! ಕರೆಂಟ್ ಹೋಯ್ತಲ್ಲಪ್ಪ.. ಹೋಯ್, ಒಂಚೂರು ಲಾಟೀನ್ ಹಚ್ಚಿ ಬನ್ನಿ.." ಗಂಡನನ್ನು ಕೂಗಿದರು. ಭಟ್ಟರು ನನ್ನ ಹಾಸಿಗೆ ತಯಾರು ಮಾಡುವುದಕ್ಕೆ ಮಹಡಿಯ ಮೇಲಿದ್ದರು. ಅವರು ಮೆಟ್ಟಿಲಿಳಿದು ಬರುವುದಕ್ಕೆ ಸಮಯವಾಗಬಹುದೆಂದು ಬಗೆದು ನಾನೇ ಎದ್ದು, "ಎಲ್ಲಿದ್ದು ಅಕ್ಕಾ ಲಾಟೀನು..? ನಾನೇ ಹಚ್ತಿ.." ಎನ್ನುತ್ತಾ, ತಡಕಾಡುತ್ತಾ ಒಳಮನೆ ದಾಟಿ, ಅಡುಗೆ ಮನೆ ಇಲ್ಲೇ ಇರಬೇಕೆಂದು ಕೈಸಾಲೆ ಬಳಿ ಅತ್ತಿತ್ತ ಕೈಚಾಚುತ್ತಾ ಹುಡುಕಾಡುತ್ತಿರಬೇಕಾದರೆ, ಯಾರಿಗೋ ಕೈ ತಾಕಿದಂತಾಗಿ, ಅವರು ಸರಕ್ಕನೆ ಅತ್ತ ಸರಿದು, ಅದು ಯಾರೆಂದು ಕ್ಷಣದಲ್ಲಿ ಮೆದುಳಿಗೆ ಗೊತ್ತಾಗಿ, ಮೈಯಲ್ಲಿ ರೋಮಾಂಚನವಾಗಿ, ಕತ್ತಲಲ್ಲದು ಯಾರಿಗೂ ತಿಳಿಯದೇ ಹೋಗಿ, ನಾನು "ಎಲ್ಲಿದೆ ಲಾಟೀನು?" ಎಂದು ಮತ್ತೊಮ್ಮೆ ಕೇಳುವಷ್ಟರಲ್ಲಿ ಕರೆಂಟೇ ಬಂದುಬಿಟ್ಟಿತು. "ಹಾಳು ಕರೆಂಟು.. ಒಂದು ನಿಮಿಷಕ್ಕೆ ಹೋಗ್ತು, ಮತ್ತೊಂದು ನಿಮಿಷಕ್ಕೆ ಬರ್ತು!" ಗೊಣಗಿದರು ಭಟ್ಟರ ಹೆಂಡತಿ. ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು. ನಾನು ಒಂದು ನಿಮಿಷ ಅಡುಗೆಮನೆಯ ಬಾಗಿಲಲ್ಲಿ ನಿಂತಿದ್ದು, ನಂತರ ಸೀದಾ ಮೆತ್ತಿಗೆ ಹೋಗಿ, ಭಟ್ಟರು ಹಾಸಿಕೊಟ್ಟ ಹಾಸಿಗೆಯಲ್ಲಿ ಪವಡಿಸಿಬಿಟ್ಟೆ: ಅಷ್ಟೆಲ್ಲ ಸುಸ್ತಾಗಿದ್ದರೂ ನಿದ್ರೆ ಬರದಿರುವಂತೆ ಮಾಡಿದ ಆ ಚಿಟ್ಟೆಯ ಸ್ಪರ್ಶಕ್ಕೆ ಮನಸಿನಲ್ಲೇ ಶಾಪ ಹಾಕುತ್ತಾ.
ಬೆಳಗ್ಗೆ ಭಟ್ಟರ ಮನೆಯಲ್ಲಿ ದೋಸೆ ತಿಂದು, ಊರಿಗೆ ಹೋದಾಗ ಶೆಡ್ತಿಕೆರೆಗೆ-ನಮ್ಮ ಮನೆಗೆ ಹೋಗಿಬರುವಂತೆ ಭಟ್ಟರ ಹೆಂಡತಿಗೆ ಹೇಳಿ, ನನ್ನ ಸ್ಪೋರ್ಟ್ಸ್ ಶೂಗೆ ಲೇಸ್ ಬಿಗಿಯುತ್ತಿದ್ದಾಗ, ಚಿಟ್ಟೆ ಶ್ಯಾಮಲಾ ಒಳಮನೆಯ ಬಾಗಿಲ ಹಿಂದೆ ನಿಂತಿದ್ದಳು. ಆಗತಾನೆ ಮಿಂದು ಬಂದಿದ್ದ ಅವಳ ಹೆರಳು ವಾಸ್ತುಬಾಗಿಲಿಗೆ ಇಳಿಬಿಟ್ಟ ತೋರಣವಾಗಿತ್ತು. ಜಿಂಕೆ ಕಣ್ಣು ಕಳ್ಳ ಕಣ್ಣಾಗಿದ್ದವು. "ಮತ್ತೆ ಸಿಗೋಣ?" ಮುಗುಳ್ನಗುತ್ತಾ ನಾನು ಕೈ ಚಾಚಿದೆ: ಇನ್ನು ಸಿಗುತ್ತದೋ ಇಲ್ಲವೋ ಎಂಬ ಸ್ಪರ್ಶ ಇದೊಮ್ಮೆ ದೊರಕಿಬಿಡಲಿ ಎಂಬಾಸೆಯಿಂದ. ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು.
ಚುರುಕು ಬಿಸಿಲಲ್ಲಿ ಬೆಟ್ಟ ಇಳಿಯುವಾಗ ಹಿಂದಿನ ಬಾರಿ ಇಳಿದ ಘೋರ ನೆನಪುಗಳು.. 'ಕರ್ವಾಲೋ ಪಾಯಿಂಟಿ'ನಿಂದ ಒಂದೇ ಸಮನೆ ಇಳಿಜಾರು. ಇಳಿ ಇಳಿ ಇಳಿ. ಒತ್ತುವ ಕಲ್ಲುಗಳು. ಜಾರಿದರೆ ಪ್ರಪಾತ. ಸುಮಾರು ಒಂದು ತಾಸು ಇಳಿದ ಮೇಲೆ ಕಾಣಿಸತೊಡಗುವ ಭಟ್ಟರ ಮನೆ. ಅದೇ ಭಟ್ಟರ ಮನೆಯಾ ಎಂಬ ಅನುಮಾನ. ಇಳಿದು ಇಳಿದು ಇಳಿದು... ಕಾಲುಗಳಿಗೆ ಕೆಳಕೆಳಗೆ ಹೆಜ್ಜೆಯಿಡುವುದೊಂದು ಯಾಂತ್ರಿಕ ಕ್ರಿಯೆಯಂತಾಗಿ, ನಮಗಿನ್ನು ಸಮತಟ್ಟು ನೆಲದಲ್ಲಿ ನಡೆಯಲಿಕ್ಕೇ ಬರುವುದಿಲ್ಲವೇನೋ ಎಂದು ಭಯ ಹುಟ್ಟಿ... ಇನ್ನೇನು ಬಂದೇ ಬಿಟ್ಟಿತು ಎಂಬಂತೆ ತೋರಿದರೂ ಮತ್ತೆ ದೂರ ದೂರ ಹೋಗುವ 'ಭಟ್ಟರ ಮನೆ' ಎಂಬ ಮರೀಚಿಕೆ... ಭಟ್ಟರ ಮನೆಗಿಂತಲೂ ಮುಂಚೆ ಅರಣ್ಯ ಇಲಾಖೆಯವರ ಕಛೇರಿ. ಸುಸ್ತಾಗಿದ್ದ ನಾವೆಲ್ಲ ಅಲ್ಲೇ ಉಳಿದಿದ್ದ ತಿಂಡಿ ತಿಂದು, 'ಇಲ್ಲಿಂದ ದಾರಿ ಚೆನ್ನಾಗಿದೆ.. ಎರಡು ತಾಸಿನಲ್ಲಿ ಸುಬ್ರಹ್ಮಣ್ಯ ಮುಟ್ಟಬಹುದು' ಎಂಬ ಫಾರೆಸ್ಟರಿನ ಮಾತು ನಂಬಿ, ಭಟ್ಟರ ಮನೆಯಲ್ಲಿ ಅರ್ಧ ತಾಸು ರೆಸ್ಟ್ ತಗೊಂಡು ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ರದ್ದು ಮಾಡಿ, ದಢದಢನೆ ಇಳಿಯತೊಡಗಿದ್ದು. ಕತ್ತಲು.. ಕಾಡು.. ಕಲ್ಲು.. ಜೀವ ಹೋಗುವಂತೆ ನೋಯುತ್ತಿದ್ದ ಕಾಲು.. ಸುಸ್ತು.. ಆನೆ ಭಯ..ಈಗ ಯೋಚಿಸಿದರೂ ಭಯವಾಗುತ್ತದೆ.. ಅಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ ನಮ್ಮ ಹುಂಬತನದ ಬಗ್ಗೆ.. ಆದರೆ ಜೀವನದ ಅತ್ಯದ್ಭುತ ಚಾರಣಾನುಭವವನ್ನು ಕಲ್ಪಿಸಿದ ಆ ದಿನದ ಬಗ್ಗೆ ಖುಷಿಯಿದೆ. ಮಾಡಿದ ಸಾಹಸದ ಬಗ್ಗೆ ಏನೋ ಹೆಮ್ಮೆಯಿದೆ.
ಚಿಟ್ಟೆ ಸ್ಪರ್ಶದ ಗುಂಗಿನಲ್ಲಿ ನಾನು ಸುಮ್ಮನೆ ಇಳಿಯುತ್ತೇನೆ.. ದೂರದಲ್ಲಿ ಸುಬ್ರಹ್ಮಣ್ಯದ ದೇವಸ್ಥಾನದ ಘಂಟೆಯ ಶಬ್ದ ಕೇಳಿಸುತ್ತದೆ.. ಇನ್ನೇನು ಸ್ವಲ್ಪ ದೂರ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.. ಕಾಡ ನೆರಳು, ಇಣುಕು ಬಿಸಿಲು, ಹಕ್ಕಿ ಕುಕಿಲು, ನೆನಪ ಹೊನಲು... ಕುಮಾರ ಪರ್ವತದ ಎತ್ತರಕ್ಕೆ ಶರಣು.
Friday, December 28, 2007
ಹೊಸ ವರುಷದ ಜೋಳಿಗೆಯಲ್ಲಿ...
ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..
ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.
ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.
ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.
ಮತ್ತೆ ಬಿಳೀ ಖಾಲಿ ಹಾಳೆ..
ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.
ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.
ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.
ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.
ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.
ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.
ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.
ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'
ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...
* * *
ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.
ಶುಭಾಶಯಗಳು.
ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.
ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.
ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.
ಮತ್ತೆ ಬಿಳೀ ಖಾಲಿ ಹಾಳೆ..
ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.
ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.
ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.
ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.
ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.
ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.
ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.
ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...
* * *
ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.
ಶುಭಾಶಯಗಳು.
Tuesday, December 18, 2007
ವಡಪ್ಪೆಯ ಎಡವಟ್ಟುಗಳು!
ಹೌದು, ವಡಪ್ಪೆ ತಿಂದಿದ್ರ ಬಗ್ಗೆ ಬರಿಯಕ್ಕು ನೋಡು ಸಂದೀಪಾ!
ತಿಂದುಂಡಿದ್ರ ಬಗ್ಗೇನೆಲ್ಲ ಏನು ಬರಿಯೋದು, ಮಾಡಿದ್ರ ಬಗ್ಗೆ ಬರೀಬೇಕು. ನಿಜ ಹೇಳಬೇಕೂಂದ್ರೆ, ವಡಪ್ಪೆ ಮಾಡಿದ್ದಷ್ಟೇ, ತಿಂದಿದ್ದು ಅಷ್ಟರಲ್ಲೇ ಇದೆ! ಆದರೆ ಮಾಡಲು ನಾವು ಪಟ್ಟ ಸಾಹಸಗಳಿವೆಯಲ್ಲ, ಅದನ್ನು ಬರೆಯದಿದ್ದರೆ ತಪ್ಪಾದೀತು.
ಅದು ಏನಾಯಿತೆಂದರೆ.... ತಾಳಿ, ಅದನ್ನು ಹೇಳುವ ಮುನ್ನ ಸ್ವಲ್ಪ ಬ್ಯಾಕ್‍ಗ್ರೌಂಡ್ ಹೇಳ್ಕೋಬೇಕು: ನನ್ನ ರೂಂಮೇಟು ವಿನೂಗೆ ಅಡುಗೆ ಮಾಡಿಕೊಂಡು ತಿನ್ನೋದು ಅಂದ್ರೆ ಒಂದು ಕ್ರೇಜು. ಈ ಮಳ್ಗದ್ದೆ ಊರೋರು ಮತ್ತೆ ನಡಳ್ಳಿ ಊರೋರು ತಿನ್ನೋದ್ರಲ್ಲಿ ಎತ್ತಿದ್ ಕೈಯಿ ಅಂತ ಕ್ಯಾಸನೂರು ಸೀಮೆಲೆಲ್ಲ ಹೆಸರುವಾಸಿ. ಅವರು ಎಷ್ಟ್ರ ಮಟ್ಟಿಗೆ ಹೆಸರುವಾಸಿ ಅಂದ್ರೆ, 'ಕ್ಯಾಸನೂರು ಸೀಮೆಯವ್ರು ತಿನ್ನೋದ್ರಲ್ಲಿ ಎತ್ತಿದ್ ಕೈ' ಅಂತ ಬೇರೆ ಸೀಮೆಯವ್ರೆಲ್ಲ ಮಾತಾಡ್ಕೋತಾರೆ! ಐ ಮೀನ್, ನಾ ಹೇಳಿದ್ದು ನಿಮ್ಗೆ ಅರ್ಥ ಆಯ್ತಲ್ಲ? ಮಳಲಗದ್ದೆ ಮತ್ತು ನಡಹಳ್ಳಿ ಊರಿನವರ ಭೋಜನ ಪ್ರಿಯತೆ ಸುತ್ನಾಲ್ಕು ಸೀಮೆಗಳಲ್ಲಿ ಕ್ಯಾಸನೂರು ಸೀಮೆಗೇ ಒಂದು ಹೆಸರನ್ನು ತಂದುಕೊಟ್ಟಿದೆ. ಲಗ್ನದ ಮನೆಗಳಲ್ಲಿ, ಗಂಡು ಅಥವಾ ಹೆಣ್ಣು ಕ್ಯಾಸನೂರು ಸೀಮೆಯದು ಅಂತಾದ್ರೆ ಛತ್ರದ ಅಡುಗೆ ಮನೆಯಲ್ಲಿ ಮಾತುಕತೆ ನಡೆದಿರುತ್ತದೆ: "ಹೋಯ್, ಬಪ್ಪೋರು ಯಾರು ಗೊತಿದಲ, ಕ್ಯಾಸ್ನೂರು ಸೀಮ್ಯೋರು. ಐಟಮ್ಮೆಲ್ಲ ಸ್ವಲ್ಪ್ ಸ್ವಲ್ಪ ಜಾಸ್ತಿ ಮಾಡವು!"
ಉಳಿದೆಲ್ಲ ವಿಷಯಗಳಲ್ಲಿ ಓಕೆಯಾದರೂ, ವಿನೂಗೆ ನಾನು ತಿನ್ನುವ ವಿಷಯದಲ್ಲಿ ಕಂಪನಿ ಅಲ್ಲವೇ ಅಲ್ಲ. ನಾನು ತಿನ್ನುವುದು ಗುಬ್ಬಿ ತಿಂದಂತೆ ತುದೀ ಬೆರಳುಗಳಲ್ಲಿ ನಾಲ್ಕು ಅಗುಳು. ಅವನದೋ ಇಡೀ ಹಸ್ತ ಬಳಸಿ ಬಳುಗಿ, ಸುರಿದು, ಕತ್ತರಿಸಿ ಮಾಡುವ ಊಟ. ಪ್ರತಿ ರಾತ್ರಿ ಊಟ ಮಾಡುವಾಗ ನಮ್ಮನೆಯಲ್ಲಿ ಇದೇ ಕಾರಣಕ್ಕೆ ಮಾತುಗಳು. ಆಫೀಸಿನಿಂದ ಹೊರಡುವುದು ಸ್ವಲ್ಪ ತಡವಾದರೂ ನಾನು ಅವನಿಗೆ ಫೋನ್ ಹಚ್ಚಿ 'ಏಯ್ ಹೋಟ್ಲಲ್ಲೆ ಊಟ ಮಾಡ್ಕೊಂಡು ಹೋಗೋಣ ಮಾರಾಯಾ' ಅನ್ನುತ್ತೇನೆ. ಅವನು ನನ್ನ ಮಾತನ್ನು ಅಲ್ಲೇ ತುಂಡರಿಸಿ 'ಮನೇಲೆ ಅಡುಗೆ ಮಾಡೋಣ ಬಾ. ನೀ ಕಾಯಿ ಹೆರ್ಕೊಡು ಸಾಕು. ನಾನು ಅಡುಗೆ ಮಾಡ್ತೀನಿ' ಅನ್ನುತ್ತಾನೆ. ನಾನು ಸ್ಟ್ರಾಂಗ್ ಕಾಫಿ, ಖಾರದ ಚಿಪ್ಸು, ಚಾಕ್ಲೇಟು, ಬಿಸ್ಕೇಟು, ಕೇಕು ಎಂದೇನೇನೋ ಹಾಳುಮೂಳನ್ನೆಲ್ಲ ತಿಂದುಕೊಂಡು ಓಡಾಡಿಕೊಂಡಿರುತ್ತೇನೆ. ಅವನು ಹಾಲು, ಕಷಾಯ, ಹಣ್ಣು, ಹಂಪಲು ಇತ್ಯಾದಿಗಳಲ್ಲಿ ಮುಳುಗಿರುತ್ತಾನೆ.
ಇಂಥಾ ವಿನೂ 'ಒಂದು ಭಾನ್ವಾರ ತಿಂಡಿಗೆ ವಡಪ್ಪೆ ಮಾಡವಲೇ ಭಟ್ಟಾ' ಅಂತ ಅವಾಗಿವಾಗ ಹೇಳುತ್ತಿದ್ದ. ಆಗೆಲ್ಲ ನಾನು ಆ ವಡಪ್ಪೆ ಮಾಡಲು ಬೇಕಾಗುವ ಸಮಯ, ಶ್ರಮಗಳನ್ನು ನೆನೆಸಿಕೊಂಡೇ ಒಳಗೊಳಗೇ ಹಿಂಜರಿಯುತ್ತಿದ್ದೆ. ಬಹುಶಃ ನನ್ನ ಹಿಂಜರಿಕೆಯನ್ನು ನೋಡೀ ನೋಡಿ ಬೇಸತ್ತ ವಿನು ತಾನೊಬ್ಬನೇ ಕೂತು ಇದಕ್ಕೆ ಪರಿಹಾರ ಏನೆಂದು ಯೋಚಿಸಿದ್ದಾನೆ. ಆಗ ಅವನಿಗೆ ನೆನಪಾದದ್ದೇ ಸಂದೀಪ! ವಿನಾಯಕನಿಗೆ ಸಂದೀಪನಿಗಿಂತ ಬೆಸ್ಟ್ ಪಾರ್ಟನರ್ ಮತ್ತಿನ್ಯಾರು ಸಿಗಲಿಕ್ಕೆ ಸಾಧ್ಯ? ಸರಿ, ಅದೊಂದು ಭಾನುವಾರ ಅವನು ನನ್ನ ಕಣ್ತಪ್ಪಿಸಿ (ಸಾರಿ, ಕಿವಿ) ಸಂದೀಪನಿಗೆ ಫೋನ್ ಮಾಡಿದ್ದಾನೆ. ಇಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ: ವಡಪ್ಪೆ ಮಾಡಲೇಬೇಕು.
ಸಂದೀಪ ಸಂಜೆ ಆರರ ಹೊತ್ತಿಗೆ ನನಗೆ ಫೋನ್ ಮಾಡಿದ: "ಎಲ್ಲಾ ರೆಡಿನನಾ?"
"ಏಂತು?" ನಾನು ಕೇಳಿದೆ.
"ಅದೇ ವಡಪ್ಪೆ"
"ವಡಪ್ಪೆ?!"
"ಹಾಂ, ವಿನಾಯ್ಕ ಹೇಳಲ್ಯಾ? ಇವತ್ ನಿಮ್ಮನೆಲಿ ವಡಪ್ಪೆ ಮಾಡವು ಅಂತ ಆಯ್ದಲಾ.. ನಾ ಬರ್ತಾ ಇದ್ದಿ. ಹಿಟ್ಟು ಕಲ್ಸಿಟ್ಟಿರಿ!"
"!"
ವಿಶೇಷವೆಂದರೆ, ವಡಪ್ಪೆಯ ಬಗ್ಗೆ ಅಷ್ಟೊಂದು ನಿರಾಸಕ್ತಿ ಹೊಂದಿದ್ದ ನಾನೂ ಅದೇಕೋ ಇದ್ದಕ್ಕಿದ್ದಂತೆ ಹುಜುರತ್ತಾಗಿಬಿಟ್ಟೆ! ನಾನೂ-ವಿನು ಹೋಗಿ ಒಂದು ಕೇಜಿ ಅಕ್ಕಿ ಹಿಟ್ಟು ತಂದೆವು. ಈರುಳ್ಳಿ, ಹಸಿಮೆಣಸು, ತೆಂಗಿನಕಾಯಿ, ವಳ್ಳೆಣ್ಣೆ ತಂದು ಸಂದೀಪ ಬರುವ ಹೊತ್ತಿಗೆ ನಾವು ಸಕಲ ಶಸ್ತ್ರಸನ್ನದ್ಧರಾಗಿ ಕೂತಿದ್ದೆವು. ಸಂದೀಪ ಬಂದಮೇಲೆ ಈರುಳ್ಳಿ ಹೆಚ್ಚಲು ಕೂತೆವು. ಸಣ್ಣಕೆ ಹೆಚ್ಚಬೇಕು ಎಂದಾಯಿತು. ವಿನು ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದು ದೊಡ್ಡಕಾತು ಅಂತ ಸಂದೀಪ ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದೂ ದೊಡ್ಡಕಾತು ಅಂತ ನಾ ಹೆಚ್ಚಿದೆ. ನಾ ಹೆಚ್ಚಿದ್ದು ದೊಡ್ಡಕಾತು ಅಂತ ಹೇಳಲು ಯಾರೂ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಕಣ್ಣೀರು ಸುರಿಸುತ್ತ ಪೂರ್ತಿ ಈರುಳ್ಳಿಯನ್ನು ನಾನೇ ಹೆಚ್ಚಬೇಕಾಯಿತು. ಆಮೇಲೆ ಹಸಿಮೆಣಸು ಕತ್ತರಿಸಿ ಹಾಕಿದೆವು. ಕಾಯಿಯನ್ನು ಪುಟ್ಟ ಪುಟ್ಟ ಚೂರುಗಳನ್ನಾಗಿ ಕತ್ತರಿಸಿ ಮಿಕ್ಸ್ ಮಾಡಿದೆವು. ನಂತರ ಸುಮಾರು ಅರ್ಧ ಕೆಜಿ ಹಿಟ್ಟು ಬೇಸಿನ್ನಿಗೆ ಹಾಕಿಕೊಂಡು ಅದಕ್ಕೆ ನೀರು-ಎಣ್ಣೆ ಹಾಕಿ, ಹೆಚ್ಚಿದ್ದ ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಸ್ವಲ್ಪ ಉಪ್ಪು ಎಲ್ಲಾ ಹಾಕಿ ಕಲಸಲು ಶುರು ಮಾಡಿದೆವು. ಸ್ವಲ್ಪ ಗಟ್ಟಿಯಾಯಿತು ಎನಿಸಿತು. ನೀರು ಹಾಕಿದೆವು. ನೀರು ಜಾಸ್ತಿಯಾಯಿತು ಎನ್ನಿಸಿತು. ಹಿಟ್ಟು ಹಾಕಿದೆವು. ಮತ್ತೆ ಗಟ್ಟಿಯಾಯಿತೆನ್ನಿಸಿ ನೀರು ಹಾಕಿದೆವು... ಹೀಗೇ ಜಾಸ್ತಿಯಾಗುತ್ತಾ ಕಮ್ಮಿಯಾಗುತ್ತಾ ಅಂತೂ ಹಿಟ್ಟು ಹದಕ್ಕೆ ಬಂತು ಎನಿಸುವಷ್ಟರಲ್ಲಿ ಹಿಟ್ಟಿನ ಪ್ಯಾಕೆಟ್ಟು ಖಾಲಿಯಾಗಿತ್ತು!
ಸರಿ, ಹಿಟ್ಟೇನೋ ಹದಕ್ಕೆ ಬಂತು, ಈಗ ಅದನ್ನು ತಟ್ಟಿ ಕಾವಲಿಯ ಮೇಲೆ ಹಾಕಬೇಕಲ್ಲ... ತಟ್ಟಲಿಕ್ಕೇನಿದೆ ನಮ್ಮ ಬಳಿ? ಸಂದೀಪನ ಬಳಿ ಬರುವಾಗ ಬಾಳೆ ಎಲೆ ತಗೋಂಬಾ ಎಂದಿದ್ದೆವು. ಎಲ್ಲೂ ಸಿಕ್ಕಲಿಲ್ಲವಂತೆ, ಅವನು ತಂದಿರಲಿಲ್ಲ. ಈಗ ಇರುವುದರಲ್ಲಿಯೇ ಏನರಲ್ಲಾದರೂ ಅಡ್ಜಸ್ಟ್ ಮಾಡಬೇಕಾಯ್ತಲ್ಲ.. ನಾವು ಮೊದಲು ಆಯ್ದುಕೊಂಡದ್ದು ಪ್ಲಾಸ್ಟಿಕ್ ಕವರುಗಳು!
ದಪ್ಪ ಪ್ಲಾಸ್ಟಿಕ್ ಕವರೊಂದನ್ನು ಹುಡುಕಿ, ನೀಟಾಗಿ ಕತ್ತರಿಸಿ ಅದರ ಮೇಲೆ ಒಂದು ಮುಷ್ಟಿ ಹಿಟ್ಟಿಟ್ಟು ತಟ್ಟಿದ್ದಾಯ್ತು. ತಟ್ಟಿದ ವಡಪ್ಪೆಗೆ ನಾಲ್ಕಲ್ಲ, ಐದು ತೂತು ಮಾಡಿದ್ದಾಯ್ತು. ಒಲೆಯ ಮೇಲೆ ಕಾವಲಿ ಕಾಯುತ್ತಿತ್ತು. ಸಂದೀಪ ಎತ್ತಿಕೊಟ್ಟ. 'ಕಾವ್ಲಿ ಮೇಲೆ ಹಾಕ್ತಿದ್ದಾಂಗೆ ಕವರ್ ಎತ್ಕ್ಯಳವು' ಎಂದು ಕಾಶನ್ ಕೊಟ್ಟ. 'ಏಯ್ ಎತ್ತಿರೆ ಸೈ ತಗಳಾ' ಎಂದು ಭಾರೀ ಹುರುಪಿನಿಂದ ನಾನೇ ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಮಗುಚಿಯೇಬಿಟ್ಟೆ! ಆದರೆ ನಾನು ಕವರನ್ನು ಎತ್ತುವುದರೊಳಗೇ ಕಾದಿದ್ದ ಕಾವಲಿಗೆ ಪ್ಲಾಸ್ಟಿಕ್ಕೆಲ್ಲ ಮೆತ್ತಿಕೊಂಡು, ಕರಗಿ, ಹೊಗೆಯೆದ್ದು, ಕಮರು ಅಡುಗೆಮನೆಯನ್ನೆಲ್ಲ ತುಂಬಿಕೊಂಡು, ಸಂದೀಪ-ವಿನಾಯಕರ ಮೂಗು ತಲುಪಿ, ಅದನ್ನವರ ಮೆದುಳು ಪ್ರೊಸೆಸ್ ಮಾಡಿ, ಇದು ಪ್ಲಾಸ್ಟಿಕ್ ಸುಟ್ಟ ವಾಸನೆ ಎಂಬುದವರಿಗೆ ಹೊಳೆದು, 'ಏಯ್ ಎಂಥಾತಾ??' ಎಂದು ಕೇಳುವುದಕ್ಕೂ ನಾನು 'ಅಯ್ಯೋ ಹಿಡ್ಕಂಡೇಬುಡ್ಚ!' ಅನ್ನುವುದಕ್ಕೂ ಸರಿಹೋಯಿತು. ಆದರೂ ಅವರು ಅಡುಗೆಮನೆಗೆ ನುಗ್ಗುವುದರೊಳಗೆ ನಾನು ಹರಸಾಹಸ ಮಾಡಿ ಅಷ್ಟಿಷ್ಟು ಪ್ಲಾಸ್ಟಿಕ್ಕು ಎತ್ತಿ ಮರ್ಯಾದೆ ಉಳಿಸಿಕೊಳ್ಳುವ ಯತ್ನ ಮಾಡಿದೆ. ನಮ್ಮ ಮೊದಲ ವಡಪ್ಪೆ ಹೀಗೆ ವೇಸ್ಟಾಯಿತು. ಆಮೇಲೆ ಕಾವಲಿಯನ್ನು ನೆನೆಸಿ, ಕಾಯಿಸಿ, ಕೆರಚಿ, ವ್ಹಿಮ್ ಹಚ್ಚಿ ಏನೇನೋ ಮಾಡಿ ತೊಳೆದು ಕ್ಲೀನ್ ಮಾಡಿದೆವು.
ನಮ್ಮ ಮುಂದಿನ ಪ್ರಯೋಗಕ್ಕೆ ಕತ್ತರಿಸಲ್ಪಟ್ಟದ್ದು ರಟ್ಟುಗಳು! ಬಟ್ಟೆ ಕಂಪನಿಯವರು ನಮ್ಮ ಅಂಗಿಗಳಿಗೆ ರೇಟ್ ಹೆಚ್ಚಿಸಲು ಮುಚ್ಚಿ ಕೊಟ್ಟಿದ್ದ ಚಂದನೆಯ ಬಾಕ್ಸ್‍ಗಳನ್ನು ಕತ್ತರಿಸಿದೆವು. ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ನಾನು ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಹಾಕಿದೆ. ಆದರೆ ಈ ವಡಪ್ಪೆ ಹಿಟ್ಟಿಗೆ ಈ ಅಂಗಿ ಬಾಕ್ಸಿನ ಮೇಲೆ ಅದೇನೋ ಪ್ರೀತಿಯೋ ಏನೋ, ನಾನೆಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಅದು ರಟ್ಟಿನಿಂದ ಬಿಡಲೇ ಇಲ್ಲ! ಹಾಲಿನಲ್ಲಿ ಕೂತಿದ್ದ ಅವರು 'ಎಂಥಾತಾ ಎಂಥಾತಾ' ಎನ್ನುತ್ತಿದ್ದರು. ನಾನು ರಟ್ಟಿನಿಂದ ಹಿಟ್ಟು ಬಿಡಿಸುವುದರಲ್ಲೇ ಮಗ್ನನಾಗಿದ್ದೆ. ನನ್ನಿಂದ ಯಾವುದೇ ರಿಪ್ಲೇ ಬಾರದಿದ್ದುದನ್ನು ನೋಡಿ ಅವರೇ ಅಡುಗೆಮನೆಗೆ ಬಂದರು. ನನ್ನ ಕಷ್ಟದ ಬಗ್ಗೆ ಸಂತಾಪ ವ್ಯಕ್ತಪಡಿಸುವುದನ್ನು ಬಿಟ್ಟು ಮತ್ತಿನ್ನೇನೋ ಮಾಡುವುದು ಅವರಿಗೂ ಸಾಧ್ಯವಿರಲಿಲ್ಲ. ಹೀಗೆ ನಮ್ಮ ಎರಡನೇ ಪ್ರಯೋಗವೂ ಫೇಲಾಯಿತು.
ನಾವು ಈಗಾಗಲೇ ಹೇಗೆಹೇಗೋ ಅಷ್ಟಿಷ್ಟು ಬೆಂದು ತಯಾರಾಗಿದ್ದ ವಡಪ್ಪೆಯ ಚೂರುಗಳನ್ನು ಮೂವರೂ ಹಂಚಿಕೊಂಡು ತಿಂದಿದ್ದೆವು. ಅದು ಅದೆಷ್ಟು ರುಚಿಯಾಗಿಬಿಟ್ಟಿತ್ತು ಅಂದ್ರೆ, ನಾವು ವಡಪ್ಪೆ ಮಾಡುವುದನ್ನು ಎಟ್ಟೆನಿಕಾಸ್ಟ್ ಮುಂದುವರಿಸಲೇಬೇಕಿತ್ತು.
ಈ ಬಾರಿ ಹೊಸ ಪ್ರಯೋಗಕ್ಕೆ ಮುನ್ನಾಗುವ ಮೊದಲು ನಾವು ಸ್ವಲ್ಪ ಹೊತ್ತು ಯೋಚಿಸಿದೆವು. ಬಟ್ಟೆಯ ಮೇಲೆ ತಟ್ಟುವುದು ನಮ್ಮ ಐಡಿಯಾವಾಗಿತ್ತು. ವಿನಾಯಕನ ಹಳೆಯ ಶಾಲೊಂದನ್ನು ಕಪಾಟಿನಿಂದ ತೆಗೆದೆವು. 'ಮೊನ್ನೆಯಷ್ಟೇ ತೊಳೆದದ್ದು' ಅಂತ ವಿನು ಅಂದ. ನಾವು ನಂಬಿದೆವು. ಕತ್ತರಿಸಿ ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ಎರಡೆರೆಡು ಬಾರಿ ಪ್ರಯೋಗಿಸಿ ಮುಖಭಂಗವಾಗಿದ್ದ ನಾನು ಈ ಬಾರಿ ಮುಗುಮ್ಮಾಗಿ ಪೇಪರ್ರೋದುತ್ತ ಕುಳಿತಿದ್ದೆ. ವಿನು ವಡಪ್ಪೆ ತಟ್ಟಲ್ಪಟ್ಟಿದ್ದ ಬಟ್ಟೆಯನ್ನು ಹಿಡಿದು ಅಡುಗೆಮನೆ ಹೊಕ್ಕ -ನಾನು ಮೊದಲ ಬಾರಿ ಹೊಕ್ಕಷ್ಟೇ ಗತ್ತಿನಿಂದ. ನಾನು ಪೇಪರ್ರನ್ನು ಕೈಯಲ್ಲಿ ಹಿಡಿದಿದ್ದೆನಷ್ಟೇ, ಕಿವಿಯೆಲ್ಲಾ ಇದೀಗ ಅಡುಗೆಮನೆಯಿಂದ ಕೇಳಿಬರಬಹುದಾದ ವಿನಾಯಕನ 'ಛೇ ತೂ' ಗಳನ್ನೇ ನಿರೀಕ್ಷಿಸುತ್ತಿತ್ತು. ಆದರೆ ನಾನು ನಿಬ್ಬೆರಗಾಗುವಂತೆ ವಿನು 'ಆಹಾಹ! ಏನು ಸಲೀಸಾಗಿ ಬಿಡ್ಚಲೇ! ನಾ ಆಗ್ಲೇನೇ ಹೇಳಿದ್ದಿ ಬಟ್ಟೆ ಮೇಲ್ ಹಾಕನ ಅಂತ' ಎನ್ನುತ್ತಾ ಖಾಲಿ ಬಟ್ಟೆಯನ್ನು ಹಿಡಿದು ಬಂದ. ನಾನು ಬೆಪ್ಪನಂತೆ ಮಿಕಿಮಿಕಿ ನೋಡಿದೆ. ಅಂತೂ ನಾವು ಮೂವರು ಗಂಡುಗಲಿಗಳ ಸಾಹಸದಿಂದ ಸುಂದರ ವಡಪ್ಪೆಯೊಂದು ಕಾವಲಿಯ ಮೇಲೆ ಬೆಂದು ಕೆಂಪಾಗಿ ಹೊರಬಂತು. ನಮಗೆ ದ್ರೌಪದಿಯನ್ನೇ ಗೆದ್ದಷ್ಟು ಖುಷಿ!
ಆಮೇಲೆಲ್ಲ ಸುಲಭವಾಯಿತು. ಒಂದರ ಮೇಲೊಂದು ವಡಪ್ಪೆ ತಟ್ಟಿದೆವು. ಐದೇ ನಿಮಿಷದಲ್ಲಿ ಕಾಯಿಚಟ್ನಿ ತಯಾರಾಯಿತು. ಊರಿಂದ ತಂದಿದ್ದ ಜೋನಿ ಬೆಲ್ಲವಂತೂ ಇತ್ತು. ತುಪ್ಪದ ಬಾಟ್ಲಿಯೂ ಇತ್ತು. ಆದರೆ ಪೂರ್ತಿ ವಡಪ್ಪೆ ತಟ್ಟಿಯಾಗಿ, ಅವು ಬೆಂದು, ನಾವು ಪ್ಲೇಟೆಲ್ಲ ಹಾಕಿಕೊಂಡು, ಮಧ್ಯದಲ್ಲಿ ಸಿದ್ಧವಾಗಿದ್ದ ವಡಪ್ಪೆ ಗುಡ್ಡೆ ಇಟ್ಟುಕೊಂಡು ಕೂರುವ ಹೊತ್ತಿಗೆ ಎರಡು ಎಡವಟ್ಟುಗಳಾಗಿದ್ದವು:
ಮಾಡುತ್ತ ಮಾಡುತ್ತಲೇ ನಾವು ಸುಮಾರು ವಡಪ್ಪೆಗಳನ್ನು ತಿಂದುಬಿಟ್ಟಿದ್ದರಿಂದ ನಮ್ಮೆಲ್ಲರ ಹೊಟ್ಟೆಯೂ ತುಂಬಿಹೋಗಿತ್ತು. ಮತ್ತು ಎಂಟು ಗಂಟೆಗೆ ಶುರು ಮಾಡಿದ್ದ ನಮ್ಮ ವಡಪ್ಪೆ ತಯಾರಿಕೆ ಫ್ಯಾಕ್ಟರಿ ಮುಗಿದಾಗ ರಾತ್ರಿ ಹನ್ನೊಂದೂವರೆ ಆಗಿತ್ತು! ಇನ್ನೆಲ್ಲಿಂದ ತಿನ್ನುವುದು? ಒಂದು ಕಡೆಗೆ ನಿದ್ರೆ ಎಳೆಯುತ್ತಿತ್ತು. ಸಂದೀಪ ಜೋಕಿನ ಮೇಲೆ ಜೋಕು ಹೇಳುತ್ತಿದ್ದ. ಚಟ್ನಿ ಬೇರೆ ಖಾರವಾಗಿತ್ತು. ನನಗಂತೂ ನಗುವುದೋ ಅಳುವುದೋ ಒಂದೂ ಗೊತ್ತಾಗದೆ, ತಿಂಗಳಿಗೆ ಕನಿಷ್ಟ ನಾಲ್ಕು ದಿನ ಸ್ವಲ್ಪವೂ ಬೇಸರಿಸಿಕೊಳ್ಳದೆ ಬೆಳಗ್ಗೆ ತಿಂಡಿಗೆ ವಡಪ್ಪೆ ಮಾಡುವ ಅಮ್ಮನನ್ನು ನೆನೆಸಿಕೊಳ್ಳುತ್ತಾ, ಚೂರು ಚೂರೇ ಮುರಿಯುತ್ತ ಮೆಲ್ಲತೊಡಗಿದೆ. ತಲಾ ಎರಡು ವಡಪ್ಪೆ ತಿನ್ನುವುದರೊಳಗೆ ನಾವೆಲ್ಲ ಸುಸ್ತು! 'ನಾಳೆ ತಿಂದ್ರಾತು ತಗಳಾ' ಎಂದು ಗೊಣಗಿಕೊಂಡು ಮಲಗಿದೆವು. ಸಂದೀಪನೂ ಆ ರಾತ್ರಿ ನಮ್ಮನೆಯಲ್ಲೇ ಉಳಿದ.
ಆದರೆ ಬೆಳಗ್ಗೆ ಮತ್ತೆ ಅದೇ ವಡಪ್ಪೆಯನ್ನು ತಿನ್ನುವ ಉತ್ಸಾಹ ಯಾರಿಗೂ ಇರಲಿಲ್ಲ. ಹೀಗಾಗಿ, ಆ ಉಳಿದ ವಡಪ್ಪೆಗಳು ನಮ್ಮನೆ ಗ್ಯಾಸ್ ಕಟ್ಟೆ ಮೇಲೆ ಮೂರ್ನಾಲ್ಕು ದಿನ ಕೂತಿದ್ದು, ಆಮೇಲೆ ಡಸ್ಟ್‍ಬಿನ್ನು ಸೇರಿ, ನಂತರ ಕಸ ಸಂಗ್ರಹಿಸುವವರ ತಳ್ಳುಗಾಡಿ ಹತ್ತಿ, ಆಮೇಲೆ ದೊಡ್ಡದೊಂದು ಲಾರಿಯಲ್ಲಿ ಕೂತು ರಾಜಧಾನಿಯ ಬೀದಿಯಲ್ಲಿ ಮೆರವಣಿಗೆ ಹೋಗಿ, ನಮಗ್ಯಾರಿಗೂ ಗೊತ್ತಿಲ್ಲದ ತಗ್ಗು ಪ್ರದೇಶವೊಂದರಲ್ಲಿ ಅಂತರ್ಧಾನವಾಗಿಹೋದವು.

Thursday, November 22, 2007
ಸಿಡಿಯಲಿರುವ ಪಟಾಕಿ
ಅಪ್ಪ ಪ್ರತಿ ಕವಳವನ್ನೂ ತುಂಬಾ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಹಾಕುತ್ತಿದ್ದ. ಅದು ಅವನ ಬಾಯಲ್ಲಿರುವುದು ಐದೇ ನಿಮಿಷವಿರಬಹುದು, ಆದರೆ ಮೊದಲು ಒಂದಿಡೀ ಕೆಂಪಡಿಕೆ ಕತ್ತರಿಸಿ ನಾಲ್ಕು ಹೋಳು ಮಾಡಿ ಬಾಯಿಗೆ ಹಾಕಿಕೊಂಡು, ಅದು ಹಲ್ಲ ಮಿಕ್ಸರಿಗೆ ಸಿಕ್ಕು ನಲವತ್ನಾಲ್ಕು ಹೋಳಾಗಿ, ನಂತರ ಲೆಕ್ಕಕ್ಕೇ ಸಿಗದಷ್ಟು ಸಂಖ್ಯೆಯಲ್ಲಿ ಪುಡಿಪುಡಿಯಾಗುತ್ತಿರುವಾಗ ಅಪ್ಪ ಒಂದು ಸುಂದರ ಅಂಬಡೆ ಎಲೆಯ ತೊಟ್ಟು ಮುರಿದು, ನಂತರ ಅದರ ಕೆಳತುದಿಯನ್ನು ಮುರಿದು ತಲೆ ಮೇಲೆಸೆದುಕೊಂಡು, ಎಲೆಯ ಹಿಂಬದಿಯ ದಪ್ಪ ಗೀರುಗಳನ್ನು ನಾಜೂಕಾಗಿ ಚರ್ಮದಂತೆ ಬಿಡಿಸಿ ಎಳೆದು ತೆಗೆದು, ನಂತರ ಸುಣ್ಣದ ಕರಡಿಗೆಯಿಂದ ಸುಣ್ಣ ತೆಗೆದು ಎಲೆಯ ಬೆನ್ನಿಗೆ ನೀಟಾಗಿ ಸವರಿ, ಸಾಲಂಕೃತ ಎಲೆಯನ್ನು ಮಡಿಚಿ ಮಡಿಚಿ ಮಡಿಚಿ ಬಾಯಿಗಿಟ್ಟುಕೊಳ್ಳುತ್ತಿದ್ದ. ಅಡಿಕೆಯ ಕೆಂಪು ರಸ ತುಂಬಿದ್ದ ಬಾಯೊಳಗೆ ಈ ಅಂಬಡೆ ಎಲೆ ತನ್ನ ಹಸಿರು ಕಂಪಿನೊಂದಿಗೆ ಬೆರೆತು ಸಾಮ್ರಾಜ್ಯ ಸ್ಥಾಪಿಸುವ ವೇಳೆಯಲ್ಲಿ ಅಪ್ಪ ಕಪ್ಪು ತಂಬಾಕಿನ ಎಸಳಿನಿಂದ ಚೂರೇ ಚೂರನ್ನು ಚಿವುಟಿ ಮುರಿದು, ಅದನ್ನು ಅಂಗೈಯಲ್ಲಿ ಸ್ವಲ್ಪ ಸುಣ್ಣದೊಂದಿಗೆ ತಿಕ್ಕಿ ಸಣ್ಣ ಉಂಡೆ ಮಾಡಿ ಬಾಯಿಗೆಸೆದುಕೊಳ್ಳುತ್ತಿದ್ದ. ಅಪ್ಪನ ಈ ಕವಳ ತಯಾರಿಕಾ ಕ್ರಮವನ್ನೂ, ನಂತರ ಆ ಕವಳ ಅಪ್ಪನನ್ನು ಅನಿರ್ವಚನೀಯ ಬ್ರಹ್ಮಾನಂದದಲ್ಲಿ ಐದಾರು ನಿಮಿಷಗಳ ಕಾಲ ತೇಲಿಸುತ್ತಿದ್ದ ವಿಸ್ಮಯವನ್ನೂ ಕಣ್ಣು ಮಿಟುಕಿಸದೇ ನೋಡುತ್ತಾ ಪಕ್ಕದಲ್ಲಿ ಕೂತಿರುತ್ತಿದ್ದ ನನಗೂ ಅಪ್ಪ ಒಮ್ಮೊಮ್ಮೆ ಪುಟ್ಟ ಸಿಹಿಗವಳ ಮಾಡಿಕೊಡುತ್ತಿದ್ದ. 'ಅವಂಗೆಂತಕೆ ಕವಳ ಮಾಡ್ಕೊಡ್ತಿ? ಕವಳ ಹಾಕಿರೆ ನಾಲ್ಗೆ ದಪ್ಪ ಆಗ್ತು. ಕೊನಿಗೆ ಶಾಲೆಲಿ ಮಗ್ಗಿ ಹೇಳಕ್ಕರೆ ತೊದಲೋ ಹಂಗೆ ಆಗ್ತು ಅಷ್ಟೆ' ಎಂಬ ಅಮ್ಮನ ಅಸಹನೆಯ ಕಿಸಿಮಾತನ್ನು ಅಪ್ಪ ಕವಳ ತುಂಬಿದ ಮುಚ್ಚಿದ ಬಾಯಿಂದಲೇ, ಅದರಿಂದಲೇ ಮೂಡಿಸುತ್ತಿದ್ದ ಮುಗುಳ್ನಗೆ ಬೆರೆತ ಅನೇಕ ಭಾವಸಂಜ್ಞೆಗಳಿಂದಲೇ ಸಂಭಾಳಿಸುತ್ತಿದ್ದ. ಅಪ್ಪ ಮಾಡಿಕೊಟ್ಟ ಸಿಹಿಗವಳ ಹದವಾಗಿರುತ್ತಿತ್ತು, ನನ್ನ ಮೈಯನ್ನು ಬಿಸಿ ಬಿಸಿ ಮಾಡುತ್ತಿತ್ತು.
ಅಪ್ಪ ಸದಾ ನನ್ನನ್ನು ಬೆಚ್ಚಗಿಟ್ಟಿರಲು ಪ್ರಯತ್ನಿಸುತ್ತಿದ್ದ. ಅಥವಾ, ಅಪ್ಪನೊಂದಿಗೆ ನಾನಿರುತ್ತಿದ್ದ ಸಂದರ್ಭವೆಲ್ಲ ಬೆಚ್ಚನೆಯ ಹವೆಯೇ ಸುತ್ತ ಇರುತ್ತಿತ್ತು. ಅಪ್ಪ ನನ್ನ ಚಳಿಗೊಂದು ಕೌದಿಯಂತಿದ್ದ.
ಮಲೆನಾಡಿನ - ಹೊಳೆಯಾಚೆಗಿನ ಊರು ನಮ್ಮದು. ದಟ್ಟ ಕಾಡು - ಬೆಟ್ಟಗಳ ನಡುವಿನ, ಎಂಟೇ ಎಂಟು ಮನೆಗಳ ಪುಟ್ಟ ಊರು. ಒಂದು ಮನೆಗೂ ಮತ್ತೊಂದು ಮನೆಗೂ ಕೂಗಳತೆಯ ಅಂತರ. ಸದಾ ಮಳೆ, ಇಲ್ಲವೇ ಇಬ್ಬನಿ, ಅಪರೂಪಕೊಮ್ಮೆ ಉರಿಬಿಸಿಲು. ದೊಡ್ಡ ಭವಂತಿ ಮನೆಯ ಆಚೆ ಕಡೆ ಕೊಟ್ಟಿಗೆ, ಅದರ ಪಕ್ಕದಲ್ಲೇ ಬಚ್ಚಲುಮನೆ, ನಡುವೆ ಹಾವಸೆಗಟ್ಟಿದ - ಜಾರುವ ಅಂಗಳ. ಅಪ್ಪ-ನಾನು ಕವಳದ ತಬಕು, ಚಿಮಣಿ ಬುರುಡೆಯೊಂದಿಗೆ ಬೆಳಗ್ಗೆ ಎದ್ದಕೂಡಲೇ ಬಚ್ಚಲು ಒಲೆಗೆ ಬೆಂಕಿ ಒಟ್ಟಲು ಹೋಗುತ್ತಿದ್ದೆವು. ಒಟ್ಟು ಕುಟುಂಬವೆಂದಮೇಲೆ ಸ್ನಾನಕ್ಕೆ ಎಷ್ಟು ಬಿಸಿ ನೀರಿದ್ದರೂ ಬೇಕು. ಹಂಡೆಯ ನೀರನ್ನು ಸದಾ ಬಿಸಿಯಾಗಿಡುವ ಕೆಲಸ ಸಾಮಾನ್ಯವಾಗಿ ಅಪ್ಪನದ್ದೇ. ಜಂಬೆಮರದ ಚಕ್ಕೆಯನ್ನು ಒಲೆಯೊಳಗೆ ಕೂಡಿ, ಚಿಮಣಿ ಬುರುಡೆಯಿಂದ ಹಾಳೆಭಾಗ ಅಥವಾ ತೆಂಗಿನ ಗರಿಯ ತುದಿಗೆ ಬೆಂಕಿ ಹತ್ತಿಸಿಕೊಂಡು ಒಲೆಯೊಳಗೆ ಕೂಡುತ್ತಿದ್ದೆವು. ಹಂಡೆಯ ಅಂಡಿನಿಂದ ವಿಸ್ತರಿಸುತ್ತಿದ್ದ ಶಾಖಕ್ಕೆ ಅದರೊಡಲ ನೀರೆಲ್ಲ ಬಿಸಿ ಬಿಸಿ ಬಿಸಿಯಾಗಿ ಕಾಲು ಗಂಟೆಯೊಳಗೆ ಕೊತ ಕೊತ! ಬೆಂಕಿ ಒಟ್ಟಲು ಕೂತ ನನ್ನ ಚಳಿ ಹಾರಿಹೋಗಿ, ಅಡುಗೆಮನೆಗೆ ಓಡಿಬಂದು ತಿಂಡಿ ತಿಂದು ಸ್ನಾನ ಮಾಡಿ ಶಾಲೆಗೆ ಹೊರಡಲು ತಯಾರಾಗುತ್ತಿದ್ದೆ.
ಅಣ್ಣ ಮಹೇಶನನ್ನು ದೊಡ್ಡಪ್ಪ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಶಾಲೆಗೆ ಬಿಟ್ಟು ಹೋಗುತ್ತಿದ್ದ. ನಾನು ಮಾತ್ರ ರೈತರ ಕೇರಿಯ ಹುಡುಗರೊಂದಿಗೆ ನಡೆದೇ ಹೋಗುತ್ತಿದ್ದೆ. ಮಹೇಶನಿಗೆ ಪ್ರತಿವರ್ಷವೂ ಹೊಸ ಯುನಿಫಾರಂ ಹೊಲಿಸುತ್ತಿದ್ದ ದೊಡ್ಡಪ್ಪ. ನನಗೆ ಎರಡು ವರ್ಷಕ್ಕೊಮ್ಮೆ. 'ನಿನ್ ಯುನಿಫಾರ್ಂ ಹೊಸದರಂಗೆ ಚನಾಗೇ ಇದ್ದಲಾ.. ನಮ್ಮನೆ ಮಾಣಿಗೆ ಒಂದು ಬಟ್ಟೆಯೂ ತಡಿಯದಿಲ್ಲೆ.. ಹರಕೈಂದ ನೋಡು' ಎನ್ನುತ್ತ ನನ್ನ ಬಳಿ ಮಹೇಶನ ಬಗ್ಗೆ ಸುಳ್ಳೇ ಸಿಟ್ಟು ವ್ಯಕ್ತಪಡಿಸುತ್ತಿದ್ದ. ಮಹೇಶನ ಈ ವರ್ಷದ ಪಠ್ಯ ಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ. ಪೇಟೆಯಿಂದ ತಂದ ಬಿಸ್ಕೇಟ್ ಪ್ಯಾಕನ್ನು ಮಹೇಶ ಜಗಲಿ ಬಾಗಿಲಿನಲ್ಲೇ ಕಸಿದುಕೊಂಡು ನನಗೆ ಎರಡೇ ಎರಡು ಕೊಟ್ಟು ಉಳಿದಿದ್ದನ್ನು ಅವನೇ ಗುಳುಂ ಮಾಡುತ್ತಿದ್ದ. ಹಾಗಂತ ನನಗೇನು ಮಹೇಶನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ದಿನಾ ಸಂಜೆ ಒಟ್ಟಿಗೇ ಆಡಿಕೊಳ್ಳುತ್ತಿದ್ದೆವು. ಆದರೆ ಎಲ್ಲಾದರೊಮ್ಮೆ ದೊಡ್ಡಪ್ಪ-ದೊಡ್ಡಮ್ಮ ಹೀಗೆ ನನಗೂ-ಅವನಿಗೂ ಮಾಡುತ್ತಿದ್ದ ಆರೈಕೆಯಲ್ಲಿನ ವ್ಯತ್ಯಾಸ ನನ್ನ ಅರಿವಿಗೆ ಬೇಡವೆಂದರೂ ಬರುತ್ತಿತ್ತು.
ಅಮ್ಮ ಪ್ರತಿ ರಾತ್ರಿ ಕೋಣೆಯಲ್ಲಿ ಅಪ್ಪನೊಂದಿಗೆ ಗುಸುಗುಸು ಮಾಡುತ್ತಿದ್ದಳು. 'ಅಕ್ಕಯ್ಯ ಹಂಗೆ ಹಿಂಗೆ. ನಿಮಗೆ ಏನೂ ಗೊತ್ತಾಗ್ತಲ್ಲೆ, ಅಣ್ಣ ಅಂದ್ರೆ ದೇವ್ರು, ಅವ್ರು ಒಳಗಿಂದೊಳಗೇ ದುಡ್ಡು ಮಾಡಿಟ್ಕಳ್ತಿದ್ದ, ಅತ್ತೆಮ್ಮನೂ ಅವ್ರಿಗೇ ಸಪೋರ್ಟು, ಒಂದು ದಿನ ಹಿಸೆ ಮಾಡಿ ನಮ್ಮುನ್ನ ಬರಿಗೈಯಲ್ಲಿ ಹೊರಡುಸ್ತ ಅಷ್ಟೆ' ಇತ್ಯಾದಿ. ನನಗೆ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಆದರೆ ಎಲ್ಲರ ಕಿವಿ ತಪ್ಪಿಸಿ ಅಪ್ಪನ ಬಳಿ ಅಮ್ಮ ಆಡುತ್ತಿದ್ದ ಈ ಗುಸುಗುಸು-ಪಿಸಪಿಸಗಳೇ ನನಗೆ ದೊಡ್ಡಪ್ಪ-ದೊಡ್ಡಮ್ಮ ನಮಗೇನೋ ಮೋಸ ಮಾಡುತ್ತಿದ್ದಾರೆ ಎಂಬಂತಹ ಸೂಚನೆ ಕೊಟ್ಟು, ಅವರೆಡೆಗಿನ ನನ್ನ ನೋಟಕ್ಕೆ ಗುಮಾನಿಯ ಕನ್ನಡಕ ತೊಡಿಸುತ್ತಿತ್ತು. ಅಪ್ಪ ಮಾತ್ರ ಸದಾ ಮೌನಮೂರ್ತಿ. ಅಮ್ಮನ ಈ ರಾತ್ರಿಯ ಗುಸುಗುಸುಗಳಿಗೆ 'ಥೋ ಸಾಕು ಸುಮ್ನಿರೇ. ನಂಗೆಲ್ಲ ಗೊತ್ತಿದ್ದು' ಎಂದು ಸಿಡುಕಿದಂತೆ ಉತ್ತರಿಸಿ ಅತ್ತ ತಿರುಗಿ ಮಲಗುತ್ತಿದ್ದ. ಅಮ್ಮ ಇತ್ತ ತಿರುಗಿ ಮಲಗುತ್ತಿದ್ದಳು. ನಾನು ಕಣ್ಮುಚ್ಚಿ ನಿದ್ರೆ ಹೋಗುತ್ತಿದ್ದೆ.
ಅಪ್ಪ, ಈ ರಾತ್ರಿಯ ಗುಸುಗುಸುಗಳಿಂದ ತಪ್ಪಿಸಿಕೊಂಡಿರಲೇನೋ ಎಂಬಂತೆ, ಅವಕಾಶ ಸಿಕ್ಕಿದಾಗಲೆಲ್ಲ, ಯಕ್ಷಗಾನ - ತಾಳಮದ್ದಲೆ ಎಂದು ಹೋಗಿಬಿಡುತ್ತಿದ್ದ. ನಮ್ಮ ಸೀಮೆಯದೇ ಆದ 'ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಲಿ'ಯಲ್ಲಿ ಅಪ್ಪನೊಬ್ಬ ಮುಖ್ಯ ಭಾಗವತ. ಮರುದಿನ ರಜಾದಿನವಾಗಿದ್ದರೆ ನಾನೂ ಅಪ್ಪನೊಟ್ಟಿಗೆ ಹೋಗುತ್ತಿದ್ದೆ. ತುಮರಿ, ಬ್ಯಾಕೋಡು, ಸುಳ್ಳಳ್ಳಿ, ನಿಟ್ಟೂರು, ಸಂಪೆಕಟ್ಟೆ ಹೀಗೆ ತಿಂಗಳಿಕೆ ನಾಲ್ಕು ಬಯಲಾಟವೋ ತಾಳಮದ್ದಲೆಯೋ ಇದ್ದೇ ಇರುತ್ತಿತ್ತು. ಅಪ್ಪ ತಾಳ ಹಿಡಿದು ಮೈಕಿನ ಮುಂದೆ ಕೂತರೆ ಹಾರ್ಮೋನಿಯಂ ಎದುರು ನಾನು. ಕೈ ಸೋಲುವವರೆಗೆ ಅಥವಾ ನಿದ್ರೆ ಬರುವವರೆಗೆ ಹಾರ್ಮೋನಿಯಂನ ಬಾಟಿ ಎಳೆಯುವುದು. ನನಗೇನು ಯಕ್ಷಗಾನದ ಪದ್ಯಗಳಾಗಲೀ, ಪೂರ್ತಿ ಪ್ರಸಂಗವಾಗಲೀ ಅರ್ಥವಾಗುತ್ತಿತ್ತೆಂದಲ್ಲ, ಆದರೆ ಎಲ್ಲ ಕತೆಯೂ ಗೊತ್ತಿತ್ತು ಮತ್ತು, ಹಾಗೆ ಅಪ್ಪನ ಪಕ್ಕ ಸ್ವೆಟರು - ಜುಬ್ಬ ಹಾಕಿ ಕೂತಾಗ ತುಂಬಾ ಬೆಚ್ಚನೆ ಹಿತಾನುಭವವಾಗುತ್ತಿತ್ತು. ನಾಗೇಶಣ್ಣ ಚಂಡೆಯ ಮೇಲೆ ಆ ಎರಡು ಕಡ್ಡಿಗಳಿಂದ ಆಡುತ್ತಿದ್ದ ಆಟ, ಗಣಪಣ್ಣ ಮೃದಂಗದೊಂದಿಗೆ ತನ್ನ ಬೆರಳುಗಳಲ್ಲೇ ಮೂಡಿಸುತ್ತಿದ್ದ ಮಾಟ, ಸುರೇಶ ಶೆಟ್ಟಿ - ಮಂಜಪ್ಪಣ್ಣರ ಚಕ್ರಮಂಡಿ ಕುಣಿತಗಳೆಡೆಗೆ, ಆಟದ ಮಧ್ಯೆ ಮಧ್ಯೆ ನಮಗೆ ತಂದುಕೊಡುತ್ತಿದ್ದ ಬಿಸಿಬಿಸಿ ಚಹಾದಷ್ಟೇ ವಿಚಿತ್ರ ಸೆಳೆತವಿತ್ತು.
ಅಪ್ಪ ಈ ಯಕ್ಷಗಾನ - ತಾಳಮದ್ದಲೆಗಳಲ್ಲಿ ಸಿಗುತ್ತಿದ್ದ ನೂರು - ಇನ್ನೂರು ರೂಪಾಯಿ ಸಂಭಾವನೆಗಳಿಂದಾಗಿಯೋ ಏನೋ ತನ್ನ ಪಾಡಿಗೆ ತಾನು ನಿರುಮ್ಮಳವಾಗಿದ್ದುಬಿಡುತ್ತಿದ್ದ. ದೊಡ್ಡಪ್ಪ ಒಂದು ಕಡೆಯಿಂದ ಒಪ್ಪವಾಗಿ ನಮ್ಮೆಡೆಗೆ ಹೂಡುತ್ತಿದ್ದ ಸಂಚುಗಳು ಅವನಿಗೆ ತಿಳಿಯುತ್ತಲೇ ಇರಲಿಲ್ಲವೆನಿಸುತ್ತೆ. ಅಮ್ಮನಿಗೆ ತಿಳಿಯುತ್ತಿತ್ತು. ಆದರೆ ನನಗೆ ಮಾತ್ರ ಸದಾ ಅಪ್ಪನ ಮೇಲೆ ಸಿಡುಕುವ ಅವಳ ಬಗ್ಗೆ ಕೋಪವಿತ್ತು. ಅಪ್ಪ ತುಂಬಾ ಪಾಪ ಎನಿಸುತ್ತಿದ್ದ.
ಆ ವರ್ಷ ಜೋರು ಚಳಿಯಿತ್ತು. ಪ್ರತಿವರ್ಷಕ್ಕಿಂತ ಜಾಸ್ತಿಯೇ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಕಾರ್ತೀಕ ಮಾಸ. ಊರಲ್ಲೆಲ್ಲಾ ಅಡಿಕೆ ಸುಗ್ಗಿಯ ಭರಾಟೆ. 'ಮುಂದಿನ ವಾರ ನಮ್ಮನೇಲಿ ಕೊಯ್ಸವು. ಕೊನೆಕಾರಂಗೆ ಹೇಳಿಕ್ ಬೈಂದಿ' ಅಂತ ದೊಡ್ಡಪ್ಪ ಹೇಳುತ್ತಿದ್ದ. ಅವತ್ತು ತುಳಸೀಕಟ್ಟೆ ಕಾರ್ತೀಕವಿತ್ತು. ನಾನು-ಮಹೇಶ-ಅಮ್ಮ-ದೊಡ್ಡಮ್ಮ ಮನೆಮನೆಗೂ ಹೋಗಿ, ತುಳಸೀಕಟ್ಟೆ ಪೂಜೆಯಲ್ಲಿ ಪಾಲ್ಗೊಂಡು, ಮಂಗಳರಾತಿ ಸಮಯದಲ್ಲಿ ಝಾಂಗ್ಟೆ ಬಡಿದು, ಹಣತೆ ದೀಪಗಳ ಬೆಳಕಲ್ಲಿ ಕೋಸಂಬರಿ - ಚೀನಿಕಾಯಿ ಶೀಂಗಳ ಪನಿವಾರ ತಿಂದು, ರಾತ್ರಿ ಒಂಭತ್ತರ ಹೊತ್ತಿಗೆ ಮನೆ ತಲುಪುವಷ್ಟರಲ್ಲಿ ನಮಗೊಂದು ಆಘಾತ ಕಾದಿತ್ತು.
ಅಪ್ಪ ಎದೆನೋವು, ಹೊಟ್ಟೆಲೆಲ್ಲಾ ಸಂಕಟ, ಕರುಳು ಉರೀತಾ ಇದ್ದು ಎಂದೇನೇನೋ ಹೇಳುತ್ತಾ ಕೋಣೆಯಲ್ಲಿ ಮಲಗಿಕೊಂಡಿದ್ದ. ಅಮ್ಮ ಆತಂಕಗೊಂಡು ದೊಡ್ಡಪ್ಪನಿಗೆ ಹೇಳಿ, ಮನೆಯವರೆಲ್ಲಾ ಕೋಣೆಯಲ್ಲಿ ಸೇರಿದ್ದಾಯ್ತು. 'ಗ್ಯಾಸು ಆಗಿಕ್ಕು, ಸುಮ್ನೆ ಹೊಟ್ಟೆ ಮುರ್ವು ಕಾಣ್ತು, ಅದಾಗಿಕ್ಕು ಇದಾಗಿಕ್ಕು' ಅಂತೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಏನೇನೋ ಕಷಾಯ ಅದೂ ಇದೂ ಕಾಸಿ ಬೀಸಿ ಅಪ್ಪನಿಗೆ ಕುಡಿಸಿದರು. ಕೊಲ್ಲೂರು ಮೂಕಾಂಬಿಕೆಗೆ ಕಾಯಿ ತೆಗೆದಿಟ್ಟದ್ದಾಯ್ತು. ಆದರೆ ರಾತ್ರಿ ಹನ್ನೊಂದರ ಹೊತ್ತಿಗೆ ಅಪ್ಪನ ನೋವು-ನರಳಾಟಗಳು ಜಾಸ್ತಿಯಾದವು. ದಡಬಡಾಯಿಸಿ, ಹೊಸಕೊಪ್ಪದಿಂದ ಸುಬ್ಬಣ್ಣನ ಜೀಪು ತರಿಸಿ, ಬ್ಯಾಕೋಡಿನ ಸರ್ಕಾರಿ ಆಸ್ಪತ್ರೆ ಕಾಂಪೌಂಡರಿನ ಬಳಿ ಅಪ್ಪನನ್ನು ಕರೆದೊಯ್ದದ್ದಾಯ್ತು. ದೊಡ್ಡಪ್ಪ, ಪಕ್ಕದಮನೆ ನಾಗೇಶಣ್ಣ, ಅಮ್ಮ, ಅಮ್ಮನನ್ನು ಬಿಟ್ಟಿರದ ನಾನೂ ಜೊತೆಗೆ. ಕಾಂಪೌಂಡರು ಅಲ್ಸರು, ಅಪೆಂಡಿಕ್ಸು ಎಂದೇನೇನೋ ಅಂದರು. ಇಲ್ಲಿ ಆಗುವುದಿಲ್ಲ, ಸಾಗರಕ್ಕೇ ಕರೆದೊಯ್ಯಬೇಕು ಎಂದರು. ಆಪರೇಶನ್ ಆಗಬೇಕು ಎಂದರು. ಸರಿ, ಬೆಳಗಿನ ಮೊದಲ ಲಾಂಚಿಗೇ ಹೋಗುವುದು ಎಂದಾಯಿತು. ಆದರೆ ರಾತ್ರಿ ಮೂರರ ಹೊತ್ತಿಗೆ, ಏನಾಯಿತು ಎಂತಾಯಿತು ಎಂಬುದು ಯಾರಿಗೂ ಸರಿಯಾಗಿ ಅರ್ಥವಾಗುವ ಮೊದಲೇ ಅಪ್ಪ ನರಳಾಡುವುದನ್ನೂ ಹೊರಳಾಡುವುದನ್ನೂ ನಿಲ್ಲಿಸಿ, ಕೊನೆಗೆ ಉಸಿರಾಡುವುದನ್ನೂ ನಿಲ್ಲಿಸಿಬಿಟ್ಟ. ಅಪ್ಪನ ಬಿಸಿ ದೇಹ ತಣ್ಣಗಾಗುತ್ತಾ ಆಗುತ್ತಾ, ಅಳು, ದಿಗ್ಭ್ರಮೆ, ಹೇಳಲಾರದ ನೋವು, ಮುಂದೇನೆಂದೇ ತಿಳಿಯದ ಮುಗ್ಧ-ಮೂಢತೆಯ ಸೂತಕ ನಮ್ಮನ್ನಾವರಿಸಿ, ಘೋರ ಚಳಿಯಂತೆ ಮೈ ಮರಗಟ್ಟಿಸಿಬಿಟ್ಟಿತು. ಅಪ್ಪನ ನಿಶ್ಚೇಷ್ಟಿತ ತಣ್ಣನೆ ದೇಹವನ್ನು ಜೀಪಿನ ಸದ್ದು ಬೆರೆತ ಮೌನದಲ್ಲಿ ಮನೆಗೆ ತಂದಾಗ, ತುಳಸೀಕಟ್ಟೆಯ ಸುತ್ತ ಹಚ್ಚಿಟ್ಟಿದ್ದ ದೀಪಗಳು ಆಗ ತಾನೇ ಆರಿದ್ದವು.
ನಂತರ ದೊಡ್ಡಪ್ಪನ ಯಜಮಾನಿಕೆ ಮತ್ತೂ ಜೋರಾಗಿದ್ದು, ವಿಧವೆ ಅಮ್ಮ ಬಾಯಿ ಬಿಡಲೂ ಆಗದಂತೆ ಕಟ್ಟಿ ಹಾಕಲ್ಪಟ್ಟಿದ್ದು, ಅದೇ ಕಲಕಿದ ವಾತಾವರಣದಲ್ಲೇ ನಾನು ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದು, ಇನ್ನು ಅಲ್ಲಿರಲಾಗದೇ ಈ ಬೆಂಗಳೂರಿಗೆ -ಚಿಕ್ಕ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲಿಕ್ಕೆ ಬಂದದ್ದು ...ಏನೆಲ್ಲ ಆಗಿ ಹೋಯಿತು! ಅಮ್ಮ ಮೊನ್ನೆ ಫೋನ್ ಮಾಡಿದ್ದಳು. 'ನಿನಗೆ ಮುಂದಿನ ತಿಂಗಳಿಗೆ ಹದಿನೆಂಟು ವರ್ಷ ತುಂಬುತ್ತದೆ. ಊರಿಗೆ ಬಾ. ದೊಡ್ಡಪ್ಪನ ಬಳಿ ಮಾತಾಡು. ಒಪ್ಪಲಿಲ್ಲ ಎಂದರೆ ಅವನ ಮೇಲೆ ದಾವೆ ಹೂಡೋಣ. ನಿನ್ನ ದೊಡ್ಡ ಮಾವ ಲಾಯರ್ ಹತ್ರ ಎಲ್ಲಾ ಮಾತಾಡಿದಾನಂತೆ. ಲಾಯರು ಕೇಸು ಗೆದ್ದುಕೋಡೋಣ ಎಂದಿದಾರಂತೆ. ಅಲ್ಲಿ ಇದ್ದು ನೀನು ಸಾಧಿಸೋದು ಅಷ್ಟರಲ್ಲೇ ಇದೆ. ನಮಗೆ ಸೇರಬೇಕಾದ ಆಸ್ತೀನ ನಾವು ಪಡೆದುಕೊಂಡು, ಒಂದು ಮನೆ-ಗಿನೆ ಕಟ್ಟಿಕೊಂಡು ಆರಾಮಾಗಿರೋಣ. ನಮಗೆ ಯಾರ ಹಂಗೂ ಬ್ಯಾಡ...' ಅಮ್ಮ ನಾನಾಗೇ ಫೋನಿಡುವವರೆಗೂ ಮಾತಾಡುತ್ತಲೇ ಇದ್ದಳು.
ಇಲ್ಲಿ ಇವತ್ತು ಮತ್ತೆ ತುಳಸೀಕಟ್ಟೆ ಕಾರ್ತೀಕ. ಅಂದರೆ ಅಪ್ಪ ಸತ್ತು ಇವತ್ತಿಗೆ ಹತ್ತು ವರ್ಷವಾಯ್ತು. ಹೊರಗಿನಿಂದ ಒಂದೇ ಸಮನೆ ಪಟಾಕಿಗಳ ಶಬ್ದ ಕೇಳಿಬರುತ್ತಿದೆ. ಪ್ರತಿ ಮನೆಯ ಎದುರೂ ಬಿರುಸಿನಕುಡಿಕೆಯ ಹೂಕುಂಡಗಳು. ತುಳಸೀಪಾಟಿನ ಸುತ್ತ ದೀಪಗಳು. ಒಂದು ನೆಲ್ಲಿರೆಂಬೆ. ಸುರುಸುರುಬತ್ತಿ ಹಿಡಿದ ಪುಟ್ಟ ಮಕ್ಕಳು... ಸಂಭ್ರಮವೋ ಸಂಭ್ರಮ.
ನಾನು ಯೋಚಿಸುತ್ತಿದ್ದೇನೆ: ಬೆಂಗಳೂರಿಗೆ ಬಂದು ಎರಡು ವರ್ಷವಾಯಿತು. ಇಷ್ಟಿಷ್ಟೇ ದುಡ್ದು ಮಾಡಿಕೊಳ್ಳುತ್ತಾ, ಇಲ್ಲಿ ನನ್ನದೇ ಆದ ಬದುಕೊಂದನ್ನು ರೂಪಿಸಿಕೊಳ್ಳುವ ಛಲ ಮೈದಾಳುತ್ತಿದೆ. ಬೆಂಗಳೂರು ಬದುಕುವುದನ್ನು ಕಲಿಸಿಬಿಟ್ಟಿದೆ. ಇಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುವಷ್ಟು ದೊಡ್ಡವ ನಾನಾದದ್ದಾದರೂ ಹೇಗೆ ಎಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಈ ಇಂತಹ ಸಂದರ್ಭದಲ್ಲಿ ಮತ್ತೆ ಊರಿಗೆ ಹೋಗಿ, ದೊಡ್ಡಪ್ಪನೆದುರು ಮಂಡಿಯೂರಿ ಕೂತು ಹಿಸೆ ಕೇಳುವುದು, ಅವನು ಒಪ್ಪದಿದ್ದರೆ ಅವನ ಮೇಲೇ ದಾವೆ ಹೂಡುವುದು ಎಲ್ಲಾ ಬೇಕಾ? ಜೊತೆಗೇ ಆಟವಾಡುತ್ತಿದ್ದ ಮಹೇಶನ ಜೊತೆಗೂ ಹಲ್ಲು ಮಸೆಯುವಂತಹ ದ್ವೇಷ ಕಟ್ಟಿಕೊಳ್ಳುವುದು ಬೇಕಾ? ಬೇಡವೆಂದು ಬಿಟ್ಟುಬಿಟ್ಟರೆ ಅಮ್ಮನ ಈ ಬೇಗುದಿಗೆ ಬಿಡುಗಡೆಯೆಂದು? ನಾನು ದುಡಿದು ದುಡ್ದು ಮಾಡಿ, ನನ್ನ ಕಾಲಮೇಲೆ ನಾನು ನಿಂತು, ಅಮ್ಮನನ್ನೂ ಸಾಕುವ, ಸಂಸಾರ ಸಂಭಾಳಿಸುವ ಹಂತ ತಲುಪಲಿಕ್ಕೆ ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಇಷ್ಟೆಲ್ಲ ಸ್ವಾಭಿಮಾನ ಮೆರೆದು ಸಾಧಿಸುವುದಾದರೂ ಏನಿದೆ? ನ್ಯಾಯಯುತವಾಗಿ ನನಗೆ ಬರಬೇಕಾದ ಪಾಲನ್ನು ನಾನು ಕೇಳಿ ಪಡೆಯುವುದರಲ್ಲಿ ತಪ್ಪೇನಿದೆ? ಅದಿಲ್ಲದಿದ್ದರೆ ಜನರಿಂದ 'ಮಗನೂ ಅಪ್ಪನಂತೆ ದಡ್ಡ' ಎಂಬ ಹೀಯಾಳಿಕೆಗೆ ಗುರಿಯಾಗಬೇಕಾಗುತ್ತದಲ್ಲವೇ? ಹಾಗಾದರೆ ಈಗ ಊರಿಗೆ ಹೋಗಿ ದೊಡ್ಡಪ್ಪನೆದುರು ಪಟಾಕಿ ಸಿಡಿಸಿಯೇ ಬಿಡಲೇ?
ನಾನು ಸುಮ್ಮನೆ ನಿಂತಿರುವುದನ್ನು ನೋಡಿದ ನಮ್ಮನೆ ಓನರ್ರಿನ ಮೊಮ್ಮಗ ನಿಶಾಂತ್ ಓಡಿ ಬಂದು 'ಅಣ್ಣಾ ನೀನೂ ಪಟಾಕಿ ಹಚ್ಚು ಬಾ' ಎಂದು ಕೈ ಹಿಡಿದು ಎಳೆಯುತ್ತಿದ್ದಾನೆ. 'ನಾನು ಬರಲೊಲ್ಲೆ; ಇವತ್ತು ನನ್ನ ಅಪ್ಪನ ತಿ..' ಎಂದೇನೋ ಹೇಳಹೊರಟವನು ಅಲ್ಲಿಗೇ ತಡೆದು ಸುಮ್ಮನೆ ನಿಶಾಂತ್ ಜೊತೆ ಹೋಗುತ್ತೇನೆ. ಪಟಾಕಿಯ ಬತ್ತಿಯನ್ನು ಚೂರೇ ಸುಲಿದು, ಊದುಬತ್ತಿಯಿಂದ ಕಿಡಿ ತಾಕಿಸುತ್ತೇನೆ. ದೂರ ಬಂದು ನಿಶಾಂತ್ ಜೊತೆ ನಿಲ್ಲುತ್ತೇನೆ. ನಿಶಾಂತ್ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡು ಇನ್ನೇನು ಸಿಡಿಯಲಿರುವ ಆ ಪಟಾಕಿಯನ್ನೇ, ಅದರ ಬತ್ತಿಗುಂಟ ಸಾಗುತ್ತಿರುವ ಬೆಂಕಿಯ ಕಿಡಿಯನ್ನೇ ನೋಡುತ್ತಿದ್ದಾನೆ... ನನಗೆ ಹತ್ತು ವರ್ಷಗಳ ಹಿಂದೆ ಅಪ್ಪನ ಪಕ್ಕ ಹೀಗೇ ನಿಂತಿರುತ್ತಿದ್ದ ನನ್ನ ಚಿತ್ರದ ಕಲ್ಪನೆ ಕಣ್ಣಮುಂದೆ ಬರುತ್ತದೆ...
[ಈ ಕತೆ 'ಮಯೂರ' ಮಾಸಿಕದ ಮೇ 2008ರ ಸಂಚಿಕೆಯಲ್ಲಿ ಪ್ರಕಟವಾಗಿದೆ.]

Subscribe to:
Posts (Atom)