Friday, February 26, 2016

ಮಾರುವೇಷ

ಭಾವಗಳ ಅಭಿವ್ಯಕ್ತಿ ಬಲು ಸುಲಭ ಈಗ.
ಬೆರಳಂಚಲ್ಲಿ ಎಮೋಟಿಕಾನುಗಳು:
ನಗುವೋ, ಮುಗುಳ್ನಗುವೋ, ಗಹಗಹವೋ,
ಅಳುವೋ, ಬೇಸರವೋ, ಕೋಪವೋ,
ಯಾವುದೆಂದರಿಯಲಾಗದ ಬರಿಮೌನವೋ-
ಹುಡುಕಿ ಕಳುಹಿಸಿದರೆ ಖಂಡಾಂತರ ದಾಟಿ
ತಲುಪಬೇಕಾದವರ ತಲುಪುವುದು ಕ್ಷಣದಲ್ಲೇ.
ಓಹೋ, ಅತ್ತಲಿಂದಲೂ ಪ್ರತಿಕ್ರಿಯೆ ಮರುಕ್ಷಣವೇ.

ವಾದಗಳ ಮಾಡುವುದೂ ಬಲು ಸುಲಭ ಈಗ.
ಬೆರಳಂಚಲ್ಲಿ ಮಾಹಿತಿಗಳ ಸಮೃದ್ಧಿ:
ನಂಬಿದ ಸೂತ್ರಗಳ, ಮೂಗನೇರ ಕಂಡ ದೃಶ್ಯಗಳ,
ಸುಳ್ಳುಗಳ, ನಿಜಗಳ, ಹೇಳಿದ್ದ, ಮಾಡಿದ್ದ, ನೋಡಿದ್ದ,
ಬರೆದಿದ್ದ, ತಿರುಚಿದ್ದ -ಏನು ಬೇಕೆಂದರದನ್ನ ಕ್ಷಣದಲ್ಲಿ ಹುಡುಕಿ ತೆಗೆದು
ಪ್ರಸ್ತುತಪಡಿಸಿ ಸಮಜಾಯಿಷಿ ನೀಡಿ ನಿಬ್ಬೆರಗಾಗುವಂತೆ
ದಾಖಲೆಯೊದಗಿಸಿ ಪಟ್ಟು ಸಡಿಲಿಸದೆ ಬಿಗಿಹಿಡಿದು.
ನೋನೋ, ಇಳಿಸಬೇಡಿ ಬಿಲ್ಲು, ಅತ್ತಲಿಂದಿನ್ನೇನು ಬರಲಿದೆ ತಿರುಗುಬಾಣ.

ಸಂಜೆಯಾಯಿತೋ, ಸೂರ್ಯ ಮುಳುಗಿದನೋ,
ಮುಟ್ಟಬೇಕಾದವರಿಗೆ ಮುಟ್ಟಿತೋ, ನಾಟಬೇಕಾದವರಿಗೆ ನಾಟಿತೋ,
ಕೊಡಬೇಕೆಂದುಕೊಂಡದ್ದನ್ನು ಕೊಟ್ಟಾಯಿತೋ-
ಮುಗಿಯಿತು ನಿಮ್ಮ ಕೆಲಸ.
ನಾಳೆ ಬೆಳಗಾದರೆ ಹೊಸ ಎಮೋಟಿಕಾನುಗಳು
ಪರದೆಯ ಮೇಲೆ ಹೊಳೆಯುತ್ತ ನರ್ತಿಸುತ್ತವೆ.
ಪ್ರತಿಪಾದಿಸಲು ಹೊಸ ವಿಷಯ ಸಿದ್ಧವಿರುತ್ತದೆ.
ಹಳೆಧೂಳ ಕೊಡವಿಕೊಂಡು ಮುಂದೆ ಹೋದರಾಯಿತು.

ಯಾರಲ್ಲಿ ಬಿಕ್ಕಳಿಸುತ್ತಿರುವವರು –ನಮ್ಮ ಬಳಿ ಕರ್ಚೀಫ್ ಇಲ್ಲ.
ಯಾರಲ್ಲಿ ರಕ್ತ ಕಾರಿಕೊಂಡು ಬಿದ್ದವರು –ಬ್ಯಾಂಡೇಡ್ ಮೆಡಿಕಲ್ಲಿನಲ್ಲಿ ಸಿಗುತ್ತದೆ.
ಯಾರಲ್ಲಿ ಬಿದ್ದೂಬಿದ್ದು ನಗುತ್ತಿರುವವರು –ಬೀಳಲಿ, ಈಗ ನಮಗೆ ಪುರುಸೊತ್ತಿಲ್ಲ.
ಯಾರಲ್ಲಿ ಹಸಿದು ಅಡ್ಡಾದವರು –ಮೊಬೈಲಲ್ಲೇ ಊಟ ಆರ್ಡರ್ ಮಾಡ್ಬಹುದು,
ಆದರೆ ಅವನಿಗೆ ವಿಳಾಸವಿಲ್ಲವಲ್ಲ.

ಪರರ ಪಾಡು ಕಡೆಗಿರಲಿ, ಈಗಷ್ಟೆ ನಾನು ತಿಂದ ಪಲಾವಿನ ರುಚಿ ಹೇಗಿತ್ತು,
ದಾಟಿ ಬಂದ ಹೂಬನದಲ್ಲಿ ಯಾವ ಕಂಪಿತ್ತು, ಸ್ನಾನ ಮಾಡಿದ ನೀರು
ಎಷ್ಟು ಬೆಚ್ಚಗಿತ್ತು, ಕೇಳಿಸಿದ ದನಿಯಲ್ಲಿ ಎಷ್ಟು ಮಾರ್ದವವಿತ್ತು,
ಆ ಸಾಲ್ಸಾ ನೃತ್ಯದಲದೆಂತ ಸೊಬಗಿತ್ತು –ಅಂತೆಲ್ಲ ಯೋಚಿಸಲೂ ಸಮಯವಿಲ್ಲ.

ಬಟ್ಟೆಯ ಮೇಲೆ ಬಟ್ಟೆಯ ಧರಿಸಿ ಏನೂ ತಾಕುತ್ತಿಲ್ಲ.
ಕಡುಗಪ್ಪು ಕನ್ನಡಕದ ಮೂಲಕ ಏನೂ ಕಾಣಿಸುತ್ತಿಲ್ಲ.
ಬಳಿದುಕೊಂಡ ಢಾಳ ಬಣ್ಣ ದಾಟಿ ಏನೂ ಇಳಿಯುತ್ತಿಲ್ಲ.
ಇಯರ್ಫೋನು ಕಿವಿಯೊಳಗೇ ಹೊಕ್ಕು ಏನೂ ಕೇಳಿಸುತ್ತಿಲ್ಲ.

ನಿನ್ನೆ ಏನಾಯಿತು ಗೊತ್ತಾ?
ಕನ್ನಡಿಯೊಳಗೆ ನನ್ನನ್ನೇ ನಾನು ನೋಡಿಕೊಂಡು ಬೆಚ್ಚಿಬಿದ್ದೆ. 

Tuesday, February 09, 2016

ಕದ, ಬೆಳಕು ಮತ್ತು ಸದ್ದು

ಕದ ಹಾಕುವುದು ಸದ್ದಡಗುವ ಮುನ್ಸೂಚನೆ.
ದೀಪ ನಿಧಾನಕೆ ಡಿಮ್ಮಾಗುತ್ತಾ ಪೂರ್ತಿ ಕತ್ತಲಾವರಿಸಿದಮೇಲೆ
ಅಂಬಲದ ತುಂಬ ಮೌನದೊಡೆತನ, ಹೆಚ್ಚೆಂದರೆ ಪಿಸುಮಾತು.
ಆಮೇಲೆ ನಾಟಕವೋ ಸಿನಿಮಾವೋ ಶುರುವಾಗುವುದು ಸರಿಯೇ;
ಆದರೆ, ಆಶ್ಚರ್ಯ ನನಗೆ: ಈ ಕದ ಹಾಕುವ – ದೀಪವಾರುವ ಪ್ರಕ್ರಿಯೆ
ಪ್ರತಿ ಸಲ ಮೌನದ ಕರೆಯಾಗುವ ರೀತಿಗೆ.

ಅಂತೂ ಅವತ್ತು ನಗರ ದಾಟುತ್ತಿದ್ದಂತೆಯೇ ನೈಟ್‌ಬಸ್ಸಿನ ಕದ ಹಾಕಲ್ಪಟ್ಟು,
ಆವಾರದಲ್ಲಿ ತುಂಬಿದ್ದ ಬೆಳಕೆಲ್ಲ ಆರಿ ನೀವಿನ್ನು ಮಲಗಬೇಕೂ
ಎಂಬ ಚಾಲಕನ ಮೌನ ತಾಕೀತಿಗೆ ಬೆದರಿ ಪ್ರಯಾಣಿಕರೆಲ್ಲ ಹರಟೆ ನಿಲ್ಲಿಸಿ
ಸೀಟು ಹಿಂದೆ ಮಾಡಿಕೊಂಡು ಕಣ್ಮುಚ್ಚಿಕೊಂಡು ನಿದ್ರಿಸಲೆಣಿಸುತ್ತಾ...

ಆದರೆ ಅವಳು ಮಾತ್ರ ಯಾಕೆ ಹಾಗೆ ಕಣ್ಬಿಟ್ಟುಕೊಂಡು...
ಎಲ್ಲರಿಂದ ಬೇರ್ಪಟ್ಟವಳಂತೆ, ಜನರಲ್ ವಾರ್ಡಿನ ನಿದ್ರೆ ಬಾರದ ರೋಗಿಯಂತೆ...
ಚಿರಂತನ ತಿಮಿರದಲ್ಲಿ ಮುಳುಗಿದವಳಂತೆ...

ಕತ್ತಲಾದಾಗಲಾದರೂ ಕಣ್ಮುಚ್ಚು. ಕಹಿಯನ್ನೂ, ಆತಂಕವನ್ನೂ,
ಜಗತ್ತನ್ನೂ ಮರೆ. ಹಾಗೆ ಕಿಟಕಿಯಿಂದ ಹೊರಗೆ ನಿರುಕಿಸಬೇಡ.
ಹಾಯುವ ವಾಹನಗಳ ಕೋರೈಸುವ ಬೆಳಕು
ನಿನ್ನ ಎದೆಬಡಿತ ಕಿತ್ತುಕೊಂಡಾವು. ಎವೆಯಿಕ್ಕು.
-ಎಂದೆಷ್ಟೇ ಅನುನಯದಿಂದ ಹೇಳಿದರೂ ರೆಪ್ಪೆಯಲ್ಲಾಡಿಸದೆ,
ಸೀಟಿಗೊರಗದೆ, ಚೂರೂ ಕದಲದೆ. ಹಾ! ಅವಳದದೆಂಥ ಹಟ.

ಆ ಅಪರಿಚಿತೆಯ ಕಣ್ಣಲ್ಲಿ ಪ್ರಜ್ವಲಿಸುತ್ತಿದ್ದ ಹಾಯ್ವ ವಾಹನಗಳ ಬೆಳಕು
ಈಗ ಈ ಕೋಣೆಯಲ್ಲಿ ನನ್ನ ನಿದ್ರೆಗೆಡಿಸುತ್ತಿರುವಾಗ
ಅವಳ ಹೃದಯದಲ್ಲಿದ್ದ ಕತ್ತಲೆಯ ಮೇಲೊಂದು ಕವಿತೆ ಬರೆಯಬೇಕಿದೆ.

ಕವಿತೆಯೇನು, ಕಲ್ಪನೆಯ ಸ್ವಚ್ಛಂದದಲ್ಲಿ ಕತೆಯೂ ಬರೆದೇನು.
ಸುತ್ತ ಕತ್ತಲಾವರಿಸಿದೆ, ರಂಗದ ಮೇಲೆ ಅಲ್ಲಲ್ಲಿ ಬೆಳಕಿದೆ.
ಅವಳ ಜೀವನದ ಪಾತ್ರಧಾರಿಗಳೆಲ್ಲ ಅಲ್ಲಿದ್ದಾರೆ.
ಅವರು ಹೆಜ್ಜೆಯಿಟ್ಟೆಡೆಗೆಲ್ಲ ಬೆಳಕೂ ಚಲಿಸುತ್ತಿದೆ.
ಇನ್ನೇನು, ಅವಳೆದೆಯ ಘನೀಕೃತ ಮೌನಕ್ಕೆ ಕಾರಣರಾರು,
ದೀಪವಾರಿಸಿದ ಗಾಳಿ ಯಾವ ದಿಕ್ಕಿನದು,
ಬಾಗಿಲು ಮುಚ್ಚಿದ ಕೈಯಲ್ಲೆಂಥ ಹೊಳೆವ ಉಂಗುರವಿತ್ತು
ಎಂದೆಲ್ಲ ಕಲ್ಪಿಸಿ ಬರೆದು ನಿರೂಪಿಸಬಲ್ಲೆ.

ಅಷ್ಟರಲ್ಲಿ ಚಕ್ಕನೆ ಹಿಂದಿಂದ ಕದ ತೆರೆದು ಬಂದವರಾರು?
ಶುರುವಲ್ಲೇ ಇದೆಂಥ ತಿರುವು?

Wednesday, January 20, 2016

ಹೊಸ ಅಂಗಿ ಧರಿಸಿದ ಹುಮ್ಮಸ್ಸಿನಲ್ಲಿ...

ಈಗಷ್ಟೆ ಕವರಿನಿಂದ ಹೊರತೆಗೆದು ಧರಿಸಿದ ಹೊಸ ಅಂಗಿಯಂತಿದೆ ಎರಡು ಸಾವಿರದ ಹದಿನಾರು. ಇನ್ನೂ ಒಂದೂ ನೆರಿಗೆ ಬಿದ್ದಿಲ್ಲ. ಗರಿಗರಿಯಿದೆ. ಕಮ್ಮಗೆ ಪರಿಮಳ ಬೀರುತ್ತಿದೆ. ಫಳಫಳ ಹೊಳೆಯುತ್ತಿದೆ. ಹೊಸ ಅಂಗಿ ಅಂತ ನೋಡಿದಾಕ್ಷಣ ಗೊತ್ತಾಗುವಂತಿದೆ. ಗೋಡೆಯ ಮೇಲಿನ ಹೊಸ ಕ್ಯಾಲೆಂಡರಿನಂತೆ ಈ ಅಂಗಿಯಲ್ಲೂ ಚೌಕಳಿಗಳು. ಎಷ್ಟಿವೆ ಚೌಕಳಿಗಳು? ಮುನ್ನೂರರವತ್ತೈದಿದೆಯಾ? ಅಥವಾ ಒಂದು ಜಾಸ್ತಿಯಿದೆಯಾ? ಎಣಿಸಲಿಕ್ಕೆ ಯಾರಿಗೂ ಪುರುಸೊತ್ತಿಲ್ಲ. ಹೊಸ ಅಂಗಿ ಧರಿಸಿದ ಖುಷಿಯಲ್ಲಿ, ಹಮ್ಮಿನಲ್ಲಿ, ಭಿಮ್ಮಿನಲ್ಲಿ, ಹೊಸ ಉತ್ಸಾಹದಲ್ಲಿ ಹೊರಟಿದ್ದೇವೆ ನಡೆದು.

ಹಳೆಯ ಅಂಗಿ ಅಗೋ ಅಲ್ಲಿ ಮೂಲೆ ಸೇರಿದೆ. ಬಳಸಿ ಬಳಸಿ ಅದು ಪೂರ್ತಿ ಮಾಸಲಾಗಿದೆ. ಅದನ್ನಿನ್ನು ಧರಿಸಲಾಗದು. ಹಳೆಯ ಕ್ಯಾಲೆಂಡರಿನಂತೆ, ತನ್ನ ಕೆಲಸ ಇಲ್ಲಿಗೆ ಮುಗಿಯಿತೆಂಬಂತೆ, ವಿನಮ್ರವಾಗಿ ಪುಟ್ಟಗೆ ಮುರುಟಿಕೊಂಡು ನಿಶ್ಶಬ್ದಕ್ಕದು ಮೊರೆ ಹೋಗಿದೆ. ಹಾಗಂತ ಅದನ್ನು ಇಷ್ಟು ಬೇಗ ಮರೆಯಲಾದೀತೇ? ಅದರ ಚೌಕಳಿಗಳಲ್ಲಿ ಪೂರ್ತಿ ಒಂದು ವರ್ಷದ ಅಸಂಖ್ಯ ನೆನಪುಗಳಿವೆ, ಅಲ್ಲಲ್ಲಿ ಕಲೆಯ ಗುರುತಿದೆ, ಕೆಲವೆಡೆ ನೂಲು ಕಿತ್ತುಬಂದಿದೆ, ಒಗೆದು ಗಟ್ಟಿ ಹಿಂಡಿದ ನೋವಿದೆ, ಎಂದೋ ಹೊಡೆದ ಪರ್ಫ್ಯೂಮಿನ ಘಮ ಇನ್ನೂ ಅದರ ಕಂಕುಳಲ್ಲಿ ಉಳಿದುಕೊಂಡಿದೆ. ಸರಿಯಾಗಿ ಪರಿಶೀಲಿಸಿದರೆ, ಆ ಅಂಗಿಯ ಜೇಬಲ್ಲಿ ಒಂದೆರಡು ಹರಕಲು ನೋಟುಗಳೂ ಸಿಕ್ಕಾವು. ಸಿಹಿಸುದ್ದಿ ಬಂದ ದಿನ ಕೊಂಡ ಚಾಕಲೇಟಿನ ಜರಿ ಇನ್ನೂ ಉಳಕೊಂಡಿರಬಹುದು. ಒಮ್ಮೆ ಹಿಂತಿರುಗಿ ನೋಡೋಣ. ಎರಡು ಹೆಜ್ಜೆ ಹಿಂದಿಟ್ಟು, ಆ ಅಂಗಿಯನ್ನೊಮ್ಮೆ ಕೈಯಲ್ಲಿ ಹಿಡಿದು ಕಣ್ಣಗಲಿಸಿ ನೋಡೋಣ. ಮೂಗಿನ ಬಳಿ ತಂದು ಉಸಿರೆಳೆದು ನೋಡೋಣ. ಮೈಗೊತ್ತಿಕೊಂಡು ಹಳೆಯ ನೆನಪುಗಳನ್ನು ಆಹ್ವಾನಿಸಿಕೊಡು ಆಸ್ವಾದಿಸಲಾದೀತೇ ನೋಡೋಣ.

ಹೀಗೇ ಒಂದು ವರ್ಷದ ಹಿಂದೆ, ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ, ಜನಗಳೆಲ್ಲಾ ಹೊಸ ವರ್ಷ ಬಂತೆಂದು ಸಂಭ್ರಮಿಸಿ ಪಟಾಕಿ ಹೊಡೆದು ಕುಣಿದಾಡುವಾಗ ಧರಿಸಿದ ಶರ್ಟು ಅದು. ಹೀಗೇ ಚಳಿಯಿತ್ತು. ಚೂರು ನಶೆಯಿತ್ತು. ಅವರೆಕಾಳಿನ ಸಿಪ್ಪೆ ಬೀದಿಯಲ್ಲೆಲ್ಲ ಹಾಸಿತ್ತು. ನಾವು ಹೊಸ ವರ್ಷವನ್ನು ತೋಳ್ಬಿಚ್ಚಿ ಸ್ವಾಗತಿಸಿದ್ದೆವು. ಸಂತಸದಿಂದ ಎರಡು ಸಾವಿರದ ಹದಿನೈದರಲ್ಲಿ ಅಡಿಯಿಟ್ಟಿದ್ದೆವು.  ಮುಂದಿನ ಹೆಜ್ಜೆಗಳಲ್ಲಿ ಅದೆಷ್ಟೋ ಸಂತೋಷ-ದುಃಖದ, ನಲಿವು-ಬಿಕ್ಕಳಿಕೆಯ, ಗೆಲುವು-ಸೋಲಿನ, ಆತಂಕ-ನಿರಾಳದ ದಿನಗಳನ್ನು ನಾವು ಅನುಭವಿಸಿದೆವು. ನಮ್ಮ ವೈಯಕ್ತಿಕ ಹರುಷ-ದುಗುಡಗಳೊಡನೆ ಎದುರಿನವರ ನಗು-ಅಳುಗಳಿಗೂ ಸ್ಫಂದಿಸಿದೆವು. ಪ್ರಪಂಚದ ಆಗುಹೋಗುಗಳಿಗೆ ನಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆವು.

ಅಲ್ಲೆಲ್ಲೋ ಬಿಹಾರದಲ್ಲಿ ನಡೆದ ಚುನಾವಣೆಯ ದೃಶ್ಯಗಳನ್ನು ನಾವಿಲ್ಲಿ ಕೂತು ಟೀವಿಯಲ್ಲಿ ನೋಡಿ ಚರ್ಚಿಸಿದೆವು. ದೆಹಲಿಯಲ್ಲಿ ಆಪ್ ಗೆಲ್ತು ಅಂದಾಗ ’ಅರೇ!’ ಎಂದುದ್ಘರಿಸಿದೆವು. ವಿಧಾನಸಭೆಯೊಳಗೆ ಕೂತು ರಾಜಕಾರಣಿಗಳು ವಾಗ್ವಾದ ಮಾಡಿಕೊಳ್ಳುತ್ತಿದ್ದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಿಲುವುಗಳನ್ನು ಮಂಡಿಸಿದೆವು.’ಇನ್ನು ಡಿಜಿಟಲ್ ಇಂಡಿಯಾ’ ಎಂದಾಗ ಅನುಮಾನದೊಂದಿಗೇ ಅದನ್ನು ಸ್ವಾಗತಿಸಿದೆವು. ಕಳಂಕಿತ ಲೋಕಾಯುಕ್ತರು ಯಾವಾಗ ಕೆಳಗಿಳಿಯುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ನಮ್ಮನ್ನು ಕಾಡಿತು. ವಿಶ್ವವೇ ಯೋಗ ದಿನವನ್ನಾಚರಿಸುವಾಗ ಹೆಮ್ಮೆಯಿಂದ ಬೀಗಿದೆವು. ಪ್ರಧಾನಿಗಳ ವಿದೇಶ ಪ್ರವಾಸ-ಪಾಕಿಸ್ತಾನ ಭೇಟಿಯನ್ನೂ, ಮುಖ್ಯಮಂತ್ರಿಗಳ ’ಭಾಗ್ಯ’ ಯೋಜನೆಗಳನ್ನು ಕೆಲವರು ಸ್ವಾಗತಿಸಿದರೆ ಕೆಲವರು ಗೇಲಿ ಮಾಡಿದ್ದಕ್ಕೆ ಸಾಕ್ಷಿಯಾದೆವು.

ಮಂಗಳ ಗ್ರಹವನ್ನು ಸುತ್ತುತ್ತಿರುವ ’ಮಾಮ್’ ವರ್ಷ ಪೂರೈಸಿದ್ದಕ್ಕೆ ನಾವಿಲ್ಲಿ ಸಿಹಿ ಹಂಚಿಕೊಂಡೆವು. ಸೆನ್ಸೆಕ್ಸ್ ಮೇಲೇರಿದಾಗ ಕಾಲರ್ ಏರಿಸಿದ್ದೂ, ಪೆಟ್ರೋಲ್ ಬೆಲೆ ಇಳಿದಾಗ ಖುಷಿಯಾದದ್ದೂ ನಾವೇ. ರೈತರ ಆತ್ಮಹತ್ಯೆಗಳು ಸರ್ಕಾರಗಳನ್ನು ಕಂಗೆಡಿಸಿದ್ದಷ್ಟೇ ಅಲ್ಲ, ಸಾರ್ವಜನಿಕರೆಲ್ಲ ಇದಕ್ಕೆ ಕಾರಣವನ್ನೂ ಪರಿಹಾರವನ್ನೂ ಯೋಚಿಸುವಂತಾಯಿತು. ಎತ್ತಿನಹೊಳೆ, ಕಳಸಾ-ಬಂಡೂರಿ ಯೋಜನೆಗಳ ಬಗ್ಗೆ ನಡೆದ ಪ್ರತಿಭಟನೆಗಳಲ್ಲಿ ನಾವೂ ಘೋಷಣೆ ಕೂಗಿದೆವು.

ಪ್ರಪಂಚದಾದ್ಯಂತದ ಉಗ್ರರ ಅಟ್ಟಹಾಸ ಕಂಡು ನಾವೆಲ್ಲ ಕ್ರುದ್ಧರಾದದ್ದು ನಿಜ. ಇದ್ದಲ್ಲೇ ಚಡಬಡಿಸಿದ್ದು, ಶಾಪ ಹಾಕಿದ್ದು, ಅಸಹಾಯಕತೆಯಿಂದ ಕುದ್ದಿದ್ದೂ ಸತ್ಯ. ಯಾಕೂಬನನ್ನು ಗಲ್ಲಿಗೇರಿಸುವ ಹಿಂದಿನ ಮಧ್ಯರಾತ್ರಿ ಕೋರ್ಟ್ ಕಲಾಪ ನಡೆಸಿದ್ದು ತಿಳಿದಾಗ ’ಹೀಗೂ ಉಂಟೇ?’ ಎಂಬಂತೆ ಕಣ್ಣರಳಿಸಿದ್ದೂ ನಿಜ. ಭಾರೀ ಭೂಕಂಪಕ್ಕೆ ನೇಪಾಳ ನಲುಗಿದಾಗ, ಮಹಾಮಳೆಗೆ ಚೆನ್ನೈ ತತ್ತರಿಸಿದಾಗ ನಮ್ಮ ಹೃದಯ ಕರಗಿ, ಅತ್ತ ಸಹಾಯಹಸ್ತ ಚಾಚಿದೆವು.

ಇಷ್ಟದ ನಾಯಕ-ನಾಯಕಿಯರ, ಇಷ್ಟದ ನಿರ್ದೇಶಕರ ಸಿನಿಮಾಗೆ ಕ್ಯೂನಲ್ಲಿ ನಿಂತು ಟಿಕೀಟು ಖರೀದಿಸಿ ಫಸ್ಟ್ ಡೇ ಫಸ್ಟ್ ಶೋ ನೋಡಿದೆವು. ಕಡಿಮೆ ಸ್ಟಾರ್ ಸಿಕ್ಕ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆದ್ದು, ನಾವು ಮೆಚ್ಚಿದ ಸಿನಿಮಾಗಳು ಎರಡು ವಾರವೂ ಓಡದೇ ಇದ್ದಾಗ ಇದಕ್ಕೆಲ್ಲ ಯಾರು ಹೊಣೆ ಅಂತ ನಮಗೆ ತಿಳಿಯದಾಯಿತು. ಸಲ್ಮಾನ್ ಖಾನ್ ನಿರ್ದೋಷಿ ಅಂತ ತೀರ್ಮಾನವಾದಾಗ ’ರಿಯಲೀ?’ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದೇನು ’ಬಜರಂಗಿ ಬಾಯಿಜಾನ್’ ಚೆನ್ನಾಗಿದೆ ಅಂತ ಪ್ರಶಂಸಿವುದಕ್ಕೆ ಅಡ್ಡಿಯಾಗಲಿಲ್ಲ.

ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ನಿನಲ್ಲಿ ನಂ. ೧ ಸ್ಥಾನಕ್ಕೇರಿದಾಗ ನಮ್ಮ ಮನೆ ಮಗಳೇ ಗೆದ್ದಷ್ಟು ಖುಷಿ ಪಟ್ಟೆವು. ವಿರಾಟ್ ಕೊಹ್ಲಿ ಕಪ್ ಎತ್ತಿದಾಗ ಆದಷ್ಟೇ ಸಂತೋಷ, ಡಿವಿಲಿಯರ್ಸ್ ಚಮತ್ಕಾರಿಕ ಹೊಡೆತಗಳ ಮೂಲಕ ದಾಖಲೆಗಳನ್ನು ಸೃಷ್ಟಿಸುವಾಗಲೂ ಆಗಿದ್ದು ಸುಳ್ಳಲ್ಲ. ಸೆಹವಾಗ್-ಜಹೀರ್ ನಿವೃತ್ತರಾದಾಗ ಅವರ ವೈಭವದ ದಿನಗಳನ್ನು ನೆನೆದೆವು. 

ಅಬ್ದುಲ್ ಕಲಾಮ್ ಇನ್ನಿಲ್ಲವೆಂದಾಗ ಇಡೀ ದೇಶ ಕಣ್ಣೀರಾಯಿತು. ’ಸಾಹಿತಿ ಕಲ್ಬುರ್ಗಿ ಗುಂಟೇಗಿ ಬಲಿ’ ಎಂಬ ಸುದ್ದಿ ಬೆಳಗಾಮುಂಚೆ ಕೇಳಿ ಬೆಚ್ಚಿಬಿದ್ದೆವು.  ವಿಚಾರವಾದಿಗಳ ಹತ್ಯೆ ವಿರೋಧಿಸಿ ನಡೆದ ಪ್ರಶಸ್ತಿ ವಾಪಸಾತಿ ಅಭಿಯಾನ ಭರ್ಜರಿ ಚರ್ಚೆಗೆ ಘ್ರಾಸವಾಯಿತು. ಅಸಹಿಷ್ಣುತೆಯ ವಿವಾದ ಭುಗಿಲೆದ್ದಾಗ ’ಛೇ ಛೇ, ನಮ್ಮ ದೇಶದ ಬಗ್ಗೆ ನಾವೇ ಹೀಗೆ ಮಾತಾಡೋದಾ’ ಅಂತ ನಮ್ಮನಮ್ಮಲ್ಲಿ ಕೇಳಿಕೊಂಡೆವು.

ಗಣ್ಯ ವ್ಯಕ್ತಿಗಳು ಕಣ್ಮರೆಯಾದಾಗ ಆಪ್ತರನ್ನು ಕಳೆದುಕೊಂಡ ಭಾವ ಅನುಭವಿಸಿದೆವು. ದೇಶವನ್ನು ಪ್ರತಿನಿಧಿಸುವವರು ಪ್ರಶಸ್ತಿ ಗೆದ್ದಾಗ ಆನಂದಬಾಷ್ಪ ಸುರಿಸಿದೆವು. ಇಂಡಿಯಾ ಶೈನಿಂಗ್ ಎಂದಾಗ ನಮ್ಮ ಮೊಗದಲ್ಲೂ ಅದು ಪ್ರತಿಫಲಿಸಿತು.  ಐಸಿಸ್ ಉಗ್ರರ ಉಪಟಳಕ್ಕೊಳಗಾದ ಸಿರಿಯಾದಲ್ಲಿ ಮಡಿದ ಪುಟ್ಟ ಮಗುವಂದು ಮಕಾಡೆ ಮಲಗಿರುವ ಚಿತ್ರಕ್ಕೆ ಇಡೀ ವಿಶ್ವದ ಕಣ್ಣು ತೇವಗೊಳಿಸುವ ಶಕ್ತಿಯಿತ್ತು.

ನಮ್ಮೆಲ್ಲ ಅರಿವು, ಅಜ್ಞಾನ, ಗಡಿಬಿಡಿ, ನಿಲುವು, ಪೂರ್ವಾಗ್ರಹ, ಹಿಂಜರಿಕೆ, ಬಲ, ಅಸಹಾಯಕತೆಗಳ ಜೊತೆಯಲ್ಲೇ ನಾವು ನಮ್ಮವರ, ನೆರೆಯವರ, ಊರವರ, ನಾಗರೀಕರ, ರಾಜ್ಯದ, ದೇಶದ, ವಿಶ್ವದ ವಿದ್ಯಮಾನಗಳಿಗೆ ತುಡಿದೆವು. ಬಿತ್ತಿ ಬೆಳೆದದ್ದಕ್ಕೆ ಒಳ್ಳೆಯ ಬೆಲೆ ಸಿಕ್ಕಾಗ ಸಂತೃಪ್ತಿಯಿಂದ ಉಂಡದ್ದೂ, ಬೇಕಾದ ವಸ್ತು ಕೊಳ್ಳಲು ದುಬಾರಿಯೆನಿಸಿದಾಗ ನಾಲಿಗೆ ಕಚ್ಚಿಕೊಂಡಿದ್ದೂ, ಒಳ್ಳೆಯ ವ್ಯಾಪಾರವಾದ ದಿನ ಖುಷಿಯಿಂದ ಗುನುಗುತ್ತ ಮನೆಗೆ ಹೋದದ್ದು, ಸಂಬಳ ಬಂದ ದಿನ ಪಾರ್ಟಿ ಮಾಡಿದ್ದೂ, ಟ್ರಾಫಿಕ್ಕನ್ನು ಬೈದುಕೊಳ್ಳುತ್ತಲೇ ಗಂಡಾಗುಂಡಿಯ ರಸ್ತೆಯಲ್ಲಿ ಓಡಾಡಿದ್ದೂ, ಕಂಡ ಕನಸು ನನಸಾದಾಗ ಹಿಗ್ಗಲ್ಲಿ ಉಬ್ಬಿದ್ದೂ, ಒಡೆದ ಗಾಜು ನೋಡುತ್ತ ಮರುಗಿದ್ದೂ ನಾವೇ.  ಬಿಸಿಲಲ್ಲಿ ಬಾಯಾರಿದಾಗ ಹದಮಜ್ಜಿಗೆ ಕುಡಿದು ತೇಗಿದೆವು, ಮಳೆಯ ಹಾಡು ಕೇಳಿದಾಗ ಬಣ್ಣದ ಕೊಡೆ ಹಿಡಿದು ಅಂಗಳದಲ್ಲಿ ಕುಣಿದೆವು, ಚಳಿಗೆ ಹಿಮ್ಮಡಿ ಒಡೆದಾಗ ಮುಲಾಮು ಹಚ್ಚಿ ಹಿತನೋವಲ್ಲಿ ನರಳಿದೆವು.


ಹಳೆಯ ಅಂಗಿ ಹಿಡಿದು ನಿಧಾನಕ್ಕದರ ಮೇಲೆ ಕೈಯಾಡಿಸುತ್ತಿದ್ದರೆ ಅದೆಷ್ಟು ನೆನಪುಗಳು... ಅದೆಷ್ಟು ಚಿತ್ರಗಳು ಒಂದು ಕೊಲಾಜಿನಲ್ಲಿ... ಅದೆಷ್ಟು ಭಾವಗಳನುದ್ಧೀಪಿಸುವ ಶಕ್ತಿ ಈ ಪುಟ್ಟ ಅರಿವೆಗೆ... ಈಗ ಅಂಥದೇ ಮತ್ತೊಂದು ಅಂಗಿ ಧರಿಸಿ ನಿಂತಿದ್ದೇವೆ. ಗೊತ್ತು ನಮಗೆ: ಇದೂ ಹಾಗೇ ನೀರು-ಗಾಳಿ-ಬೆಳಕುಗಳಿಗೆ ಒಡ್ಡಲ್ಪಡುತ್ತದೆ. ಇದನ್ನೂ ನೆನೆ ಹಾಕಬೇಕು, ಒಗೆಯಬೇಕು, ಹಿಂಡಬೇಕು, ಒಣಹಾಕಬೇಕು, ಇಸ್ತ್ರಿ ಮಾಡಬೇಕು. ಇದೂ ಸ್ವಲ್ಪ ಕಾಲಕ್ಕೆ ಮಾಸಲಾಗುತ್ತದೆ. ಆಶಯವಿಷ್ಟೇ: ಇದರ ಚೌಕಳಿಗಳಲ್ಲಿ ನಲಿವುಗಳಿಗೆ, ಗೆಲುವುಗಳಿಗೆ, ಸಿಹಿಘಳಿಗೆಗಳಿಗೆ, ನೆಮ್ಮದಿಯ ನಿಟ್ಟುಸಿರುಗಳಿಗೆ ಹೆಚ್ಚಿನ ಜಾಗವಿರಲಿ. ತೊಟ್ಟಷ್ಟು ದಿನ ನಮ್ಮನ್ನು ಬೆಚ್ಚಗಿಟ್ಟಿರಲಿ. ನಂತರವೂ ಸವಿನೆನಪಾಗಿ ನಮ್ಮೊಂದಿಗೆ ಇರಿಸಿಕೊಳ್ಳುವಂತಿರಲಿ. ಹೊಸ ವರುಷ ನಮಗೆಲ್ಲಾ ಶುಭಪ್ರದವಾಗಿರಲಿ. 

['ವಿಶ್ವವಾಣಿ'ಗಾಗಿ ಬರೆದುಕೊಟ್ಟಿದ್ದು. 17.01.2016ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿತ.]

Thursday, December 31, 2015

2016ರಲ್ಲಿ ಸುಖನಿದ್ರೆಯನ್ನೂ ಸವಿಗನಸನ್ನೂ ಹಾರೈಸುತ್ತಾ...

ಅಣ್ಣಮ್ಮನುತ್ಸವಕ್ಕೆಂದು ಬಂದಿರುವ ರಥರೂಪೀ ಲಾರಿ ದೇವಸ್ಥಾನದೆದುರು ಸಿಂಗರಗೊಂಡು ಕಾಯುತ್ತಿದೆ;
ಪವರ್ ಬ್ಯಾಂಕೊಂದು ಮೊಬೈಲನ್ನು ಮಗುವಂತೆ ಮಡಿಲಲ್ಲಿಟ್ಟುಕೊಂಡು ಚಾರ್ಜೂಡಿಸುತ್ತಿದೆ;
ನೇರ ರಸ್ತೆಯಲ್ಲಿ ಸಾಗುತ್ತಿರುವ ಬೈಕೊಂದರ ಆರಿಸಲು ಮರೆತ ಇಂಡಿಕೇಟರ್ ವಿಲಕ್ಷಣ ಮಿಂಚುತ್ತಿದೆ;
ನಿನ್ನೆ ಉದ್ಘಾಟಿಸಿದ ಹೊಸ ಟೂತ್‌ಬ್ರಶ್ಶು ಕೆದರಿದ ಕುಸುಮಗಳ ಹಳೇ ಬ್ರಶ್ಶನ್ನು ಬಾತ್ರೂಮಿನಲ್ಲಿ ಅಣಕಿಸುತ್ತಿದೆ;
ಬಿಗ್‌ಬಾಸ್ ಮನೆಯಲ್ಲಿ ಸಣ್ಣ ವಿಷಯಕ್ಕೆ ನಡೆದ ಜಗಳದಿಂದ ಎಲ್ಲರಿಗೂ ಮನಸ್ತಾಪವಾಗಿದೆ;
ಫೋರ್ಕಿಗೆ ಸಿಕ್ಕಿಕೊಂಡಿರುವ ಗೋಬಿ ಮಂಚೂರಿ ಟೊಮೆಟೋ ಸಾಸಿನಲ್ಲಿ ಮುಳುಗೆದ್ದು ಮತ್ತಷ್ಟು ಕೆಂಪಾಗಿದೆ;
ಕ್ಯಾಂಡಿಕ್ರಶ್ ಆಟದಲ್ಲಿ ಶತಪ್ರಯತ್ನ ಮಾಡಿದರೂ ಕೊನೆಯಲ್ಲೊಂದು ಜೆಲ್ಲಿ ಉಳಿದೇಹೋಗಿದೆ;
ಕಾಶೀಯಾತ್ರೆಗೆ ಹೋದವರ ಬೀಗ ಹಾಕಿದ ಮನೆಯ ದೇವರ ಗೂಡಿನಲ್ಲಿ ಜೇಡ ಬಲೆ ಕಟ್ಟಿದೆ;
ಸುರಿದ ಹಸಿಕಸದಲ್ಲಿ ಶ್ಯಾಂಪೂ ಸ್ಯಾಚೆಟ್ಟೊಂದು ಸಿಕ್ಕಿದ್ದಕ್ಕೇ ಕಸದವಳೊಂದಿಗೆ ನಡುಬೀದಿಯಲ್ಲಿ ರಂಪವಾಗಿದೆ;
ಕೊಯ್ಲಿನ ನಂತರ ಪೇರಿಸಿರುವ ಬಿಳಿಹುಲ್ಲಿನ ಗೊಣಬೆ ಗದ್ದೆಯಲ್ಲೆದ್ದ ಗುಮ್ಮಟದಂತೆ ಕಂಡಿದೆ;
ರಂಗನತಿಟ್ಟಿನ ಪಕ್ಷಿಧಾಮಕ್ಕೆ ವಲಸೆ ಬಂದಿರುವ ಪೆಲಿಕನ್ ಹಕ್ಕಿ ಅವಸರವಸರದಲ್ಲೊಂದು ಗೂಡು ಕಟ್ಟಿದೆ;
ನೆಚ್ಚಿನ ನಟನ ಸಿನೆಮಾಗೆ ಬಾಲ್ಕನಿ ಕ್ಯೂನಲ್ಲಿ ನಿಂತ ಕಟ್ಟಕಡೆಯ ವ್ಯಕ್ತಿಗೆ ಟಿಕೀಟು ಸಿಗದಿರುವ ಆತಂಕ ಕಾಡಿದೆ;
ಓಪನರಿನಿಕ್ಕಳದೆಳೆತಕ್ಕೆ ಮುಚ್ಚಳವಿತ್ತ ನೀಳ ಬಾಟಲಿಯೊಂದು ಪಬ್ಬಮಬ್ಬಲ್ಲಿ ನಶೆಯ ನೊರೆಯುಕ್ಕಿಸುತ್ತಿದೆ.

- - -
ನೀವಡಿಯಿಡುತ್ತಿರುವ ಹೊಸ ವರ್ಷದ ಹೊಸ ಕ್ಯಾಲೆಂಡರಿನ ಬಣ್ಣಬಣ್ಣದ ಖಾನೆಗಳಲ್ಲಿ ಹೂ ಹಾಸಿರಲಿ. ನಿಮ್ಮಿಷ್ಟದ ಹಾಡೇ ಕೇಳುತ್ತಿರಲಿ ಕಿವಿಯಲ್ಲಿ. ಸಿಹಿಯೇ ಸಿಗಲಿ ಬಾಯಾಡಲು. ನೆನೆದಾಗೆಲ್ಲ ಬರಲಿ ಕೊಡೆ ಹಿಡಿದು ನಿಮ್ಮೊಲವಿನವರು. ಬಿರುಗಾಳಿಯೆಂದುಕೊಂಡದ್ದು ತಂಗಾಳಿಯಾಗಲಿ. ಕಣ್ಮುಚ್ಚಿದಾಕ್ಷಣ ನಿದ್ರೆ ಬರುವಷ್ಟು ನೆಮ್ಮದಿ ವರುಷವಿಡೀ ಇರಲಿ. ಆ ನಿದ್ರೆಯಲ್ಲೂ ಚಂದಗನಸುಗಳೇ ಬೀಳಲಿ.

ಶುಭಾಶಯಗಳು.

Thursday, November 19, 2015

ಹುಚ್ಚ ವೆಂಕಟ್‌ಗೆ

ನಿನ್ನ ಕೆದರಿದ ತಲೆಗೂದಲು
ರಕ್ತ ತುಂಬಿದ ಕೆಂಗಣ್ಣು
ನೀಲಿಯಂಗಿಯ ವೇಷ
ಉಕ್ಕುಕ್ಕಿ ಬರುವ ಆವೇಶ
ಕೆಮೆರಾದ ಎದೆಯೊಡೆಯುವಂತೆ ದುರುಗುಟ್ಟುವ ಆ ನೋಟ
ಚೂರೇ ಬಾಗಿದ ಕತ್ತು
ಕುಡಿಯುವೆಯೆನ್ನುವ ಲೋಕಲ್ ವಿಸ್ಕಿ

ನಿನ್ನ ಹಳೆಯ ಪ್ರೇಮಕಥೆಗಳು
ಸಿನಿಮಾದೆಡೆಗಿನ ಅಪಾರ ಮೋಹ
ಯಾರನ್ನೂ ಎದುರಿಸುವ ಕಿಚ್ಚು
ಮೇಲೇರೆರಗಿಹೋಗುವ ತಾಕತ್ತು
ಹೃದಯದೊಳಗೆ ತುಂಬಿಕೊಂಡಿರುವ ಕಣ್ಣೀರು

ನಿನ್ನ ಮೇಲೆ ನಿನಗೇ ಇರುವ ವಿಷಾದ
ಲೋಕದೆಡೆಗಿನ ಅತಾರ್ಕಿತ ಭ್ರಮೆಗಳು
ಕುಲುಮೆಯಿಂದೀಗಷ್ಟೆ ತಂದ ಕತ್ತಿಯಲಗಿನಂಥ ಮಾತುಗಳು
ಹೆಮ್ಮಕ್ಕಳ ಕಾಲಿಗೆ ಬೀಳುವೆನೆನ್ನುವ ಗುಣ
ಕಂಬಳಿಹುಳುವಿನ ಹಾರುವ ಕನಸು
ಗಳಿಗೆಗೊಮ್ಮೆ ಗುಟುಕರಿಸುವ ಚಹಾ

ಪುರಾಣದಲ್ಲಿ ಕಥೆಗಳು:
ಉಗ್ರನಾಗಿದ್ದ ನರಸಿಂಹನ ಕೋಪಶಮನ ಮಾಡಲು
ಲಕ್ಷ್ಮಿಯೇ ಪ್ರಾರ್ಥಿಸಿ ಅವನ ಜತೆಯಾದಳಂತೆ..
ಸೊಕ್ಕಿನಿಂದ ಮುನ್ನುಗ್ಗಿ ಹರಿಯುತ್ತಿದ್ದ ಗಂಗೆಯನ್ನು
ಆಪೋಶನ ತೆಗೆದುಕೊಂಡನಂತೆ ಜಹ್ನು ಮಹರ್ಷಿ..
ದೂರ್ವಾಸರ ಕೋಪಶಮನ ಮಾಡಲು
ಲಕ್ಷ್ಮಣ ಸಾವನ್ನೇ ಸ್ವೀಕರಿಸಿದನಂತೆ..

ನರಸಿಂಹ, ಜಾಹ್ನವಿ, ದೂರ್ವಾಸರ ಕೋಪಗಳಿಗೂ
ಕಥೆಯಿದೆ, ಕಾರಣವಿದೆ ಪುರಾಣದಲ್ಲಿ.
ವೆಂಕಟ್, ಹಾಗೇ ನಿನ್ನ ಕೋಪ, ತಾಪ, ಪ್ರತಾಪಗಳಿಗೂ.
ವ್ಯತ್ಯಾಸ ಇಷ್ಟೇ: ಇಲ್ಲಿ ನಿನ್ನನ್ನು ರಕ್ಷಿಸಲು
ಯಾವ ಲಕ್ಷ್ಮಿಯೂ ಇಲ್ಲ, ಜಹ್ನುವೂ ಇಲ್ಲ,
ತ್ಯಾಗಕ್ಯಾರೂ ಸಿದ್ಧರಿಲ್ಲ.

ಮಥನದಲುದ್ಭವಿಸುವ ಹಾಲಾಹಲದ ಹಾಹಾಕಾರ
ನಮಗೆಲ್ಲ ರುಚಿಯೆನಿಸುವ ಹೊತ್ತಿನಲ್ಲಿ ನೀಲಕಂಠನಿಗೇನು ಕೆಲಸ
ನರಕಾಸುರ, ಶಂಬರಾಸುರ, ಕಂಸ, ಶಿಶುಪಾಲರ
ರಾಜ್ಯಭಾರವನ್ನೊಪ್ಪಿಕೊಂಡ ಮೇಲೆ ಕೃಷ್ಣನ ಸುದರ್ಶನ ಚಕ್ರಕಿಲ್ಲ ತಾವು
ಅತ್ಯಾಚಾರ, ಕೊಲೆ, ಸುಲಿಗೆಗಳ ನೋಡಿ ಸುಮ್ಮನಿರುವ ನಮಗೆ
ದುಷ್ಟಸಂಹಾರೀ ರಾಮನ ಅವಶ್ಯಕತೆಯಿಲ್ಲ ಬಿಡು.

ನಿನ್ನ ನೋವು, ನಿರಾಶೆ, ವಿಷಾದ, ಕೋಪಗಳನ್ನು ಹೀರಲು
ಇಲ್ಯಾರೂ ಅವತರಿಸುವುದಿಲ್ಲ. ನೀನು ಬಲಿಪಶು.
ನಾನು ಕೊಲೆಗಾರ.  

['ಸಖಿ' ಪಾಕ್ಷಿಕದಲ್ಲಿ ಪ್ರಕಟಿತ]