ಯಾವಾಗ ಶುರುವಾಯಿತೋ ಬೆಳ್ಳಿಗೆರೆಗಳ ಅಟ್ಟಹಾಸ
ಅಪ್ಪನ ಕೇಶರಾಶಿಯ ನಡುವೆ:
ಈಗ ಕನ್ನಡಿ ಸ್ಟಾಂಡಿನ ಮೇಲೊಂದು ಪುಟ್ಟ ಬೋಗುಣಿ
ಕತ್ತಲ ಕರಗಿಸಿ ಮಾಡಿದ ಕರೀ ಕಣಕ- ಜತೆಗೊಂದು ಕೆದರಿದ ಬ್ರಶ್ಶು.
ಮೊದಮೊದಲು ಅಲಕ್ಷಿಸಿ, ಕೊನೆಗೆ ತುಸುವೇ ಮುತುವರ್ಜಿ ವಹಿಸಿ
ಬಾಗಿಸಿ ವಾಲಿಸಿ ಎತ್ತರಿಸಿ ಕೈಯುದ್ದ ಮಾಡಿ ಸರೀ ಹಿಡಿದು ಕನ್ನಡಿ
ಚೂರ್ಚೂರೆ ನಾಚಿಕೆ, ಚೂರ್ಚೂರೆ ಹಿಂಜರಿಕೆ, ಚೂರ್ಚೂರೆ ಅಂಜಿಕೆ-
ವಯಸು ಮುಚ್ಚಿಡಲು ಮರೆಮಾಚಲು ಮುಂದೂಡಲು ಹರಸಾಹಸ.
ನಿಧಾನಕೆ ಅಮ್ಮನಿಗೂ ವಯಸ್ಸಾದ ಹಾಗೆ ಭಾಸ...
ಮೇಲ್ಮೆತ್ತಿನಲ್ಲಿ ಹಾಗೇ ಬಿಟ್ಟ ಹಳೆಯ ಕುರ್ಚಿಗೆ ಬಿಂದಿಲು ಹಿಡಿದು,
ವರಲೆ ಹುಳುಗಳ ಸುಗ್ರಾಸ ಕೂಳಿಗೆ ಅಷ್ಟಷ್ಟೆ ಕರಗುವ ಕೋಳು.
ಅಪ್ಪ ತೋಟಕ್ಕೆ ಹೋದ ಸಮಯ ನೋಡಿ ಅಮ್ಮನ ಮುಂಗುರುಳು
ಸವರುವ ಕರಿಕುಸುಮಗಳು. ‘ಥೋ ಥೋ, ಸರಿಯಾಗಲ್ಯೇ, ಹಂಗಲ್ದೇ’
-ಅನುನಯದಿಂದಲೇ ಅಮ್ಮನಿಗೆ ಸಹಾಯ ಮಾಡುವ ಅಪ್ಪ.
ಈಗಲೂ ಸಿಗ್ಗಿಗೆ ಕೆಂಪಡರುವ ಅಮ್ಮನ ಮುದ್ದುಮೊಗ.
ಕನ್ನಡಿಗಂತೂ ಭೇದಭಾವವಿಲ್ಲ. ಮೊಸರಲ್ಲಿ ಕಲಸಿ ಚಪ್ಚಪ್ಪೆನಿಸುತ್ತ
ಸವರುತ್ತಿದ್ದಾಳೆ ಹೆಂಡತಿ ನನ್ನದೇ ತಲೆಗೆ ಇಂದು ಮದರಂಗಿ.
ಕೇಳಿದವರಿಗೆ ಕ್ಲೋರಿನ್ ನೀರಿನ ಸ್ನಾನದ ನೆಪ; ಸಿಟಿಲೈಫಿಗೆ ಶಾಪ.
ಬೋರಿಗೆ ಬರುವ ಬೈಕಿನ ಎಂಜಿನ್ನು. ಸವೆಸವೆದೇ ಹರಿದ ಬನಿಯನ್ನು.
ಅಂಚೆ ಕಚೇರಿಯ ಮುಂದಣ ಡಬ್ಬಿಗೆ ತುಕ್ಕು ಹಿಡಿಯದಂತೆ ಕೆಂಪು ಮಾಲೀಶು.
ಇವತ್ತು ಊಟದ ತಟ್ಟೆಯಲ್ಲೊಂದು ಬಿಳಿಗೂದಲು ಸಿಕ್ಕು
ಅಪ್ಪನದೋ, ಅಮ್ಮನದೋ, ನನ್ನದೋ ತಿಳಿಯದೇ ಜೋರು ನಗೆ.
ಮೇಯಲು ಬೆಟ್ಟಕ್ಕೆ ಹೋಗಿ ಎಂದೋ ಕಳೆದುಹೋಗಿದ್ದ ದನವೊಂದು
ಮನೆ ಹುಡುಕಿಕೊಂಡು ಬಂದು ಆಶ್ಚರ್ಯ, ಸಂತೋಷ, ಗೋಗ್ರಾಸ.
ತಳಸಾರಿದ ಬಾವಿಯಲ್ಲಿ ಜಲವೊಡೆದ ಹಾಗೆ ಎಲ್ಲಿಲ್ಲದ ಉಲ್ಲಾಸ.
ಸಂಭ್ರಮಿಸಲೊಂದು ಸಣ್ಣ ನಿಮಿತ್ತ. ಬಣ್ಣ ಬೇಗಡೆಯೆಲ್ಲ ಆಯಾ ಕ್ಷಣದ ಚಿತ್ತ.
* * *
ನನ್ನೀ ಬ್ಲಾಗು ‘ಮೌನಗಾಳ’ ಶುರುವಾಗಿ ಮೊನ್ನೆ 26ಕ್ಕೆ ಹತ್ತು ವರ್ಷ ಸಂದಿತು. ಅಂಬೆಗಾಲಲ್ಲಿ ಪ್ರಾರಂಭವಾದ ಈ ಗೀಚಿನ ನಡಿಗೆ ಕೆಲವೊಮ್ಮೆ ಬಿರುಸಾಗಿ, ಕೆಲವೊಮ್ಮೆ ಕುಂಟುತ್ತ, ಕೆಲವೊಮ್ಮೆ ಓಟವಾಗಿ, ಕೆಲವೊಮ್ಮೆ ಸಮವೇಗವಾಗಿ ಸಾಗಿ, ಒಮ್ಮೊಮ್ಮೆ ಮಾಗಿದಂತೆ ಮತ್ತೊಮ್ಮೆ ಮಾಸಿದಂತೆ ಎನಿಸಿ, ಆಗಾಗ ಬಣ್ಣ ಬೇಗಡೆ ಹಚ್ಚಿಕೊಂಡು ಅಲ್ಲೇ ಚಿಗುರಿ ಮೈತಳೆದು ಹೊಳೆದು ಬೆಳೆದು ಮತ್ಮತ್ತೆ ಸೊರಗಿ ಮತ್ಮತ್ತೆ ಎದ್ದು ನನಗೆ ಖುಷಿ ಕೊಡುತ್ತಾ ಮುಂದುವರೆದಿದೆ. ಈ ಪಯಣದಲಿ ಜತೆಗಾರರಾದ ನಿಮಗೆಲ್ಲಾ ಆಭಾರಿಯೆನ್ನುತ್ತಾ...
Friday, April 29, 2016
Friday, April 15, 2016
ರಾಮಭಕ್ತ ತುಳಸೀದಾಸ
ಯಮುನಾ ನದಿ ತುಂಬಿ ಹರಿಯುತ್ತಿತ್ತು. ರಾಂಬೋಲ
ಹಿಂದೆಮುಂದೆ ಸಹ ನೋಡದೆ ಅದರಲ್ಲಿ ಧುಮುಕಿದ. ಆಚೆ ದಡ ತಲುಪಿ ಹೆಂಡತಿ ರತ್ನಾವತಿಯನ್ನು ಕಾಣುವ
ತವಕದಲ್ಲಿ ತೆರೆಗಳನ್ನು ತೆತ್ತೈಸುತ್ತ ಈಜಿದ. ಆದರೆ ಅಷ್ಟೆಲ್ಲ ಧಾವಂತದಲ್ಲಿ ಬಂದ ಗಂಡನಿಗೆ
ರತ್ನಾವತಿ, “ನಿನಗೆ ನನ್ನ
ಬಗೆಗಿರುವಷ್ಟೇ ಆರಾಧನೆ ದೇವರ ಬಗೆಗೆ ಇದ್ದಿದ್ದರೆ ಇಷ್ಟೊತ್ತಿಗೆ ಮಹಾಸಾಧಕನಾಗಿರುತ್ತಿದ್ದೆ” ಎಂದುಬಿಟ್ಟಳು. ಅಷ್ಟೇ: ರಾಂಬೋಲ ಮತ್ತೆ ಸಂಸಾರದತ್ತ ತಿರುಗಿ ನೋಡಲಿಲ್ಲ. ಸಂತನಾದ.
ತುಳಸೀದಾಸನಾದ.
ತುಳಸಿದಾಸರು ಹುಟ್ಟಿದ್ದು ಈಗಿನ ಉತ್ತರ
ಪ್ರದೇಶದಲ್ಲಿರುವ ಚಿತ್ರಕೂಟದಲ್ಲಿ. ರಾಂಬೋಲನೆಂಬುದು ಅವರ ಹುಟ್ಟುಹೆಸರು. ವಾಲ್ಮೀಕಿಯ ಅಪರಾವತಾರವೆಂದೇ ಕರೆಯಲ್ಪಡುವ ಅವರು, ವೈರಾಗ್ಯ ದೀಕ್ಷೆ ಹೊತ್ತ ನಂತರ, ಗುರು ನರಹರಿದಾಸ
ಮತ್ತು ಶೇಷ ಸನಾತನರ ಮೂಲಕ, ಸಂಸ್ಕೃತವನ್ನೂ, ವೇದ-ವೇದಾಂಗಗಳನ್ನೂ, ಜ್ಯೋತಿಷ್ಯವನ್ನೂ, ಮೂಲ ರಾಮಾಯಣವನ್ನೂ, ಹಿಂದೂ ಸಂಸ್ಕೃತಿಯನ್ನೂ ಅಧ್ಯಯನ ಮಾಡಿದರು. ಚಿತ್ರಕೂಟದ ತಮ್ಮ ಮನೆಯ ಬಳಿ ರಾಮಾಯಣದ ಕಥೆಯನ್ನು ಹೇಳುತ್ತಾ ಬಹುಕಾಲ ಕಳೆದರು.
ನಂತರ ಅವರು ವಾರಣಾಸಿ, ಪ್ರಯಾಗ, ಅಯೋಧ್ಯೆ, ಬದರಿ, ದ್ವಾರಕೆ, ರಾಮೇಶ್ವರ, ಮಾನಸ ಸರೋವರ
...ಹೀಗೆ ದೇಶಾದ್ಯಂತ ಯಾತ್ರೆ ಕೈಗೊಂಡರು. ತಂಗಿದೆಡೆಯೆಲ್ಲ ರಾಮಾಯಣದ ಕಥೆ ಹೇಳುವರು. ತಮ್ಮ
ಕೃತಿಗಳಲ್ಲಿ ತುಳಸೀದಾಸರು ಹೇಳಿಕೊಳ್ಳುವಂತೆ, ವಾರಣಾಸಿಯಲ್ಲಿ ಅವರು
ಪಾರಾಯಣ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ಪ್ರತಿದಿನವೂ ತಮ್ಮ ಪಾರಾಯಣ ಕೇಳಲು ಮೊಟ್ಟಮೊದಲು ಬಂದು
ಕೂತು, ಕಟ್ಟಕಡೆಯಲ್ಲಿ ತೆರಳುವುದನ್ನು ಗಮನಿಸಿದರು. ಒಂದು ದಿನ ಅವನನ್ನು
ಹಿಂಬಾಲಿಸಿದರು. ಆತ ಕಾಡಿನೆಡೆಗೆ ತೆರಳುತ್ತಿರುವುದನ್ನು ಕಂಡು ಇವರ ಅನುಮಾನ ಬಲವಾಯಿತು. ಅವನ
ಕಾಲು ಹಿಡಿದು ತನ್ನ ನಿಜರೂಪ ತೋರಿಸುವಂತೆ ಬೇಡಿಕೊಂಡರು. ತುಳಿಸೀದಾಸರ ಅನುಮಾನದಂತೆ ಆತ
ಸಾಕ್ಷಾತ್ ಹನುಮಂತನಾಗಿದ್ದ. ತುಳಸೀದಾಸರು ತನಗೆ
ರಾಮನ ದರ್ಶನ ಮಾಡಿಸುವಂತೆ ಹನುಮನಲ್ಲಿ ಬೇಡಿಕೊಂಡರು. ಆಗ ಹನುಮ ತುಳಸೀದಾಸರಿಗೆ ವಾಪಸು ಚಿತ್ರಕೂಟಕ್ಕೆ
ತೆರಳುವಂತೆ ಸೂಚಿಸುತ್ತಾನೆ. ಅಲ್ಲಿ ತುಳಸೀದಾಸರಿಗೆ ರಾಮ ಒಂದು ಮಗುವಿನ ರೂಪದಲ್ಲಿ
ದರ್ಶನವೀಯುತ್ತಾನೆ. ನಂತರ ಪ್ರಯಾಗದಲ್ಲಿ ತುಳಸಿಗೆ ಯಾಜ್ನವಲ್ಕ್ಯರ, ಭಾರದ್ವಾಜ ಮುನಿಗಳ ಸಂದರ್ಶನವೂ ಆಗುತ್ತದೆ.
ತುಳಸೀದಾಸರು ಸುಪ್ರಸಿದ್ಧ ‘ರಾಮಚರಿತಮಾನಸ’ವನ್ನು ಬರೆಯಲು ಪ್ರಾರಂಭಿಸಿದ್ದು 1631ರ ವಿಕ್ರಮ ಸಂವತ್ಸರದ
ರಾಮನವಮಿಯಂದು. ಭಾರತ ಆಗ ಮೊಘಲರ ಆಳ್ವಿಕೆಯಲ್ಲಿತ್ತು. ಸುಮಾರು ಎರಡೂವರೆ ವರ್ಷದ ಅವಧಿಯಲ್ಲಿ
ಅಯೋಧ್ಯೆ, ವಾರಣಾಸಿ ಮತ್ತು ಚಿತ್ರಕೂಟಗಳಲ್ಲಿ ರಾಮಚರಿತಮಾನಸ ರಚಿಸಲ್ಪಟ್ಟಿತು. ತುಳಸೀದಾಸರು
ಸಂಸ್ಕೃತದಲ್ಲಿ ಪಾರಂಗತರಾಗಿದ್ದರೂ, ರಾಮಚರಿತಮಾನಸವನ್ನು
ಅವರು ‘ಅವಧಿ’ ಎಂಬ ಪೂರ್ವಭಾರತದ
ಜನರ ಆಡುಭಾಷೆಯಲ್ಲಿ (ಹಿಂದಿಯ ಪ್ರಾದೇಶಿಕ ಭಾಷೆ) ಬರೆದರು. ಇದರಿಂದಾಗಿ ಆಗಿನ ಕಾಲದ ಸಂಸ್ಕೃತ
ವಿದ್ವಾಂಸರ ಟೀಕೆಗೂ ಗುರಿಯಾಗಿದ್ದರು. ಆದರೆ
ತುಳಸೀದಾಸರ ಬಯಕೆ ಪುಣ್ಯಕಥೆ ರಾಮಾಯಣವನ್ನು ಅತಿಸಾಮಾನ್ಯ ಮನುಷ್ಯನಿಗೂ ತಲುಪಿಸುವುದಾಗಿತ್ತು. ಹೀಗಾಗಿ
ಅವರು ತಮ್ಮ ನಿಲುವಿಗೆ ನಿಷ್ಠರಾಗಿ ಕಾವ್ಯರಚನೆ ಮುಂದುವರೆಸಿದರು. ಏಳು ಕಾಂಡಗಳಲ್ಲಿ
ರಚಿಸಲ್ಪಟ್ಟಿರುವ, ವಾಲ್ಮೀಕಿ ರಾಮಾಯಣದ ಅವತರಿಣಿಕೆಯಾಗಿರುವ ರಾಮಚರಿತಮಾನಸದ
ವಿಶೇಷತೆಯೆಂದರೆ, ಪ್ರತಿ ಸಾಲಿನಲ್ಲೂ ‘ಸ’, ‘ತ’, ‘ರ’ ಅಥವಾ ‘ಮ’ ಅಕ್ಷರ ಇದ್ದೇ ಇದೆ. ತನ್ಮೂಲಕ ತುಳಸೀದಾಸರು ತಮ್ಮ ಪ್ರಾಣದೇವರಾದ ‘ಸೀತಾರಾಮ’ರು ಪ್ರತಿ ಸಾಲಿನಲ್ಲೂ ಇರುವಂತೆ ನೋಡಿಕೊಂಡಿದ್ದಾರೆ. ಮೂರೂವರೆ ಶತಮಾನದ ಹಿಂದೆ ಬರೆಯಲ್ಪಟ್ಟಿದ್ದರೂ ಸಹ ಇವತ್ತಿಗೂ
ಅದು ಭಾರತೀಯ ಕಾವ್ಯ ಪರಂಪರೆಯ ಅತ್ಯುತ್ತಮ ಕೃತಿ ಎಂದು ಪರಿಗಣಿಸಲ್ಪಡುತ್ತದೆ. ಇವತ್ತಿಗೂ
ಲಕ್ಷಾಂತರ ರಾಮಭಕ್ತರಿಂದ ಹಾಡಲ್ಪಡುತ್ತದೆ.
ರಾಮಚರಿತಮಾನಸವಲ್ಲದೇ, ಬದುಕನ್ನೂ-ಜಗವನ್ನೂ ಎರಡೆರಡೇ ಸಾಲುಗಳಲ್ಲಿ ಕಟ್ಟಿಕೊಡುವ ಐನೂರಕ್ಕೂ ಹೆಚ್ಚು ದೋಹಾಗಳನ್ನೂ, ಭಗವಾನ್ ಕೃಷ್ಣನೆಡೆಗಿನ ಭಕ್ತಿಗೀತೆಗಳನ್ನೂ ತುಳಸಿ ರಚಿಸಿದರು. ಅವರ ರಾಮಸ್ತುತಿ ‘ಗೀತಾವಲಿ’ ಹಿಂದೂಸ್ತಾನೀ ಗಾಯಕರ ಅಚ್ಚುಮೆಚ್ಚು. ಅವರ ‘ವಿನಯಪತ್ರಿಕಾ’, ಷಡ್ವೈರಿಗಳಿಂದ ಕೂಡಿದ ಕಲಿಯುಗದ ಭಕ್ತನೊಬ್ಬ ರಾಮನ ಆಸ್ಥಾನದಲ್ಲಿ
ನಿಂತು ಅಹವಾಲು ಸಲ್ಲಿಸುವ ರೀತಿಯಲ್ಲಿರುವ ಅತ್ಯುತ್ಕೃಷ್ಟ ಕಾವ್ಯ. ಅದು ಪ್ರಪಂಚದ ಹಲವು
ಭಾಷೆಗಳಿಗೆ ಅನುವಾದವಾಗಿದೆ. ‘ಹನುಮಾನ್ ಚಾಲೀಸಾ’ವಂತೂ ಪ್ರತಿಮನೆಯ
ಭಜನೆಯಾಗಿರುವುದು ಸತ್ಯ.
ಹದಿನಾರನೇ ಶತಮಾನದಲ್ಲಿ ಬಾಳಿದ್ದ ತುಳಸೀದಾಸರು
ಅವರ ಕಾಲಾನಂತರವೂ ಉಳಿದಿರುವುದು ಅವರ ಕಾವ್ಯದ ಮೂಲಕ. ಅವರ ಪ್ರತಿ ರಚನೆಯಲ್ಲೂ ರಾಮಭಕ್ತಿ ಎದ್ದು
ಕಾಣುತ್ತದೆ. ರಾಮಾಯಣವನ್ನು ತಮ್ಮ ಪ್ರವಚನಗಳ ಮೂಲಕ, ಬರಹದ ಮೂಲಕ
ಜನಮಾನಸಕ್ಕೆ ತಲುಪಿಸಿದ ಕೀರ್ತಿ ತುಳಸೀದಾಸರದ್ದು. ಅವರು ನಮ್ಮ ದೇಶ ಕಂಡ ಅತ್ಯುತ್ತಮ ಕವಿಗಳಲ್ಲಿ
ಒಬ್ಬರಾಗಿ ಇಂದಿಗೂ ಪ್ರಸ್ತುತ.
['ಧರ್ಮಭಾರತೀ' ಪತ್ರಿಕೆಗಾಗಿ ಬರೆದದ್ದು.]
Thursday, March 31, 2016
ಹೋಳಿಯ ಮರುದಿನ
ಹೋಳಿಹಬ್ಬದ ಮರುದಿನ ಎಲ್ಲೆಂದರಲ್ಲಿ ಕಾಮನಬಿಲ್ಲು
ಜೋಡುರಸ್ತೆಯಲ್ಲಿ, ಸಣ್ಣ ಗಲ್ಲಿಯಲ್ಲಿ, ಕಾರಿಡಾರಿನಲ್ಲಿ,
ಮರದ ಬುಡದಲ್ಲಿ, ಉದ್ಯಾನದ ಬೆಂಚಿನಲ್ಲಿ, ಚಪ್ಪಲಿ ಸ್ಟಾಂಡಿನಲ್ಲಿ
ಚೆಲ್ಲಿದ ಬಣ್ಣ. ಮುಂಜಾನೆ ಮಬ್ಬಲ್ಲಿ ಕಣ್ಣುಜ್ಜುತ್ತಲೇ
ಬಾಗಿಲು ತೆರೆದರೆ
ಹೂಕುಂಡದ ಪುಟ್ಟಗಿಡದಲ್ಲೊಂದು ಕೆಂಪುಹೂ.
ಬಚ್ಚಲ ಪೈಪಿನಿಂದ ಧಾರಾಕಾರ ಹೊರಹರಿವ ಬಣ್ಣನೀರು;
ಮುಖ ತೊಳೆದಷ್ಟೂ ತೆರೆಯುತ್ತ ಹೋಗುವ ಹೊಸ ಪದರಗಳು;
ತಲೆಗೂದಲ ಸಿಕ್ಕುಗಳಲಿ ಶಾಂಪೂಗಂತೂ ಸಿಕ್ಕಾಪಟ್ಟೆ
ಕೆಲಸ;
ಬಿಳಿಯಂಗಿ ಇನ್ನು ಬಳಸಲಾಗದಂತಾದುದಕ್ಕೆ ಒಳಗೇ ಬೇಗುದಿ;
ವಿವರ್ಣವಿಶ್ವಕ್ಕೆ ಹೊಂದಿಕೊಳ್ಳಲು ಅಂದಿಡೀ ಕಷ್ಟ
ಪಡುವ ಕಣ್ಣು.
ಆ ರಾತ್ರಿ ಬಹುಳದ ಚಂದ್ರ ಬೆಳ್ಳಗೇ ಏಳುವನು.
ತಾರಸಿಯ ಮೌನದಲ್ಲಿ ಕಾಲಿಡುವಾಗ ಕೌಮುದಿ ಕೇಳುವುದು:
ಬಳಿಸಿಕೊಂಡ ಬಣ್ಣ ಬಲು ಸುಲಭದಲ್ಲಳಿಸುವುದು.
ಬಳಿದುಕೊಂಡ ಬಣ್ಣ ಕಳಚುವುದು ಹೇಗೆ?
ತಂತಿಯಲ್ಲೊಣಗುತ್ತಿರುವ ಅಂಗಿ, ತೊಳೆದ ಅಂಗಳದ ಒದ್ದೆನೆಲ,
ಗೋಡೆಯಲ್ಲಿ ಚಟ್ಟು ಹೊಯ್ದ ಅವಳ ಕೈಯಚ್ಚು
ಎಂದೋ ಬಂದಿದ್ದ ಆಪ್ತಮಿತ್ರನ ಪತ್ರ
ಜಾನಪದ ಸಿರಿಯಜ್ಜಿಯ ಹಾಡಿನಲ್ಲಿನ ಮುಗ್ಧತೆ
ಎಲ್ಲವೂ ಸೇರಿಸುತ್ತಿವೆ ಬೆಳದಿಂಗಳೊಂದಿಗೆ ತಮ್ಮ ದನಿ.
ಪಿಚಕಾರಿಯಲ್ಲುಳಿದ ಓಕುಳಿ ಕುಲುಕದೇ ಕಾಯುತ್ತಿದೆ
ಉತ್ತರಕ್ಕೆ.
ತತ್ತರಿಸುತ್ತೇನೆ ಈ ದಾಳಿಗೆ. ಕೆಳಗೋಡಿ ತಿಕ್ಕಿತಿಕ್ಕಿ
ತೊಳೆಯುತ್ತೇನೆ ಮೊಕ. ಶವರಿನಡಿ ಕೊನೆಯಿಲ್ಲದಂತ
ಭರ್ಜರಿ ಅಭ್ಯಂಜನ. ಬುರುಬುರು ಬರುವ ಬುರುಗು.
ಬಚ್ಚಲ ತುಂಬ ಸಾಬೂನಿನ ಘಮಘಮ ಪರಿಮಳ.
ಓಹೋ ಸ್ವಚ್ಛವಾದೆನೇ ಬಣ್ಣವೆಲ್ಲ ಕರಗಿತೇ ನಿರಭ್ರನಾದೆನೇ
-ಎಂದು ಮತ್ತೆಮತ್ತೆ ನೀರೆರೆದುಕೊಂಡು ಬಿಳಿಯ ಟವೆಲಿನಲ್ಲಿ
ಮೈಯೊರೆಸಿಕೊಂಡು ಶುಭ್ರ ಹೊಸಬಟ್ಟೆ ಧರಿಸಿ...
ಮೂರ್ನಾಲ್ಕು ದಿನಗಳಲ್ಲಿ ನಗರ ತನ್ನ ಕಾಲುದಾರಿ,
ಕಟ್ಟಡ ಸೋಪಾನ, ಮರದಿಂದೆದ್ದುಬಂದ ಬೇರು,
ಎಷ್ಟೋ ದಿನದಿಂದ ಅಲ್ಲೇ ನಿಂತಿರುವ ವಾಹನ,
ಮುಚ್ಚಿದಂಗಡಿಯ ಶಟರಿಗೆ ಹಾಕಿದ ಬೀಗ-ಗಳಿಗೆ
ಮೆತ್ತಿದ ಬಣ್ಣವನ್ನೆಲ್ಲ ನಿವಾರಿಸಿಕೊಂಡು ಸರಳ ಸುಂದರ
ನಿತ್ಯನಿರ್ಮಲ ಯೋಗಮುದ್ರೆ ಧರಿಸಿ ನಿಂತಿದೆ.
ನನ್ನ ಕಿವಿಯಲ್ಲಿ ಮಾತ್ರ ಇನ್ನೂ ಸ್ವಲ್ಪ ಬಣ್ಣ ಉಳಿದಿರುವ
ಶಂಕೆ.
Tuesday, March 01, 2016
ಖಾಲಿ ಟೆರೇಸು ಮತ್ತು ಒಂಟಿ ರೂಮು
ಒಂದಾನೊಂದು ಕಾಲದಲ್ಲಿ ಈ ನಗರದಲ್ಲೂ ಹೆಂಚಿನ ಮನೆಗಳೂ, ಸೋಗೆಯ ಗುಡಿಸಲುಗಳೂ ಇದ್ದವಂತೆ. ನಗರ ಬೆಳೆದಂತೆ, ಜನರು ಸಿರಿವಂತರಾದಂತೆ, ಅವಶ್ಯಕತೆಗಳು ಅಧಿಕವಾದಂತೆ, ಹೊಸ ಅನ್ವೇಷಣೆಗಳ ಉತ್ಪನ್ನವೇ
ಚೆನ್ನ ಎಂಬ ನಿಲುವು ಜಾಸ್ತಿಯಾಗುತ್ತ ಹೋದಂತೆ ಹೆಂಚು-ಸೋಗೆಯ ಮನೆಗಳು ಮಾಯವಾಗತೊಡಗಿ ಆರ್‌ಸಿಸಿ ಮನೆಗಳು
ನಗರಾದ್ಯಂತ ತಲೆಯೆತ್ತತೊಡಗಿದವು. ಅಲ್ಲಿಲ್ಲಿ ಇದ್ದ ಶೀಟಿನ ಮನೆಗಳನ್ನೂ ಕೆಡವಿ ಸ್ಲಾಬ್ ಹಾಕಲಾಯಿತು.
ಪರವೂರಿನಿಂದ ಇಲ್ಲಿಗೆ ಬಂದು ಬಾಡಿಗೆಗೆ ಮನೆ ಹುಡುಕುವವರೂ ‘ಮೌಲ್ಡ್ ಇರೋ ಮನೆ ಬೇಕಪ್ಪ
ನಮಗೆ, ಶೀಟ್ ಆಗಲ್ಲ’ ಎಂದು ರಿಯಲ್ ಎಸ್ಟೇಟ್
ಏಜೆಂಟುಗಳಿಗೆ ತಾಕೀತು ಮಾಡತೊಡಗಿದರು. ಸೋಗೆ ಹೊಚ್ಚಿದ
ಮನೆಗಳು ಗುಡಿಸಲುಗಳು ಎಂದೂ, ಹೆಂಚಿನ ಮನೆಗಳು ಹಳೆಯ
ಕಾಲದ – ಅವಾಸ್ತವಿಕ ವ್ಯವಸ್ಥೆಗಳೆಂದೂ, ಶೀಟಿನ ಮನೆಗಳು ಭಯಂಕರ
ಸೆಖೆ – ಸುಂದರವಲ್ಲದವೆಂದೂ ನಮ್ಮ ಕಲ್ಪನೆಯಲ್ಲಿ ಮಾರ್ಪಾಟಾದವು. ಮಹಡಿಯ ಮೇಲೆ ಮಹಡಿಯನ್ನು ಕಟ್ಟಿಸಿಕೊಳ್ಳುತ್ತ ಆರ್‌ಸಿಸಿ
ಮನೆಗಳು ಒಂದರ ಪಕ್ಕ ಒಂದರಂತೆ ನಗರದ ತುಂಬ ಸಪಾಟಾಗಿ ಎದ್ದೆದ್ದು ನಿಂತವು.
ಈ ನಗರವೇನಾದರೂ ಸಮತಲದಲ್ಲಿದ್ದರೆ, ಮನೆಗಳೆಲ್ಲಾ ಇಂತಿಷ್ಟೇ ಎತ್ತರವಿರಬೇಕು ಎಂಬ ನಿಯಮವೇನಾದರೂ ಇದ್ದಿದ್ದರೆ, ಎಲ್ಲ ಮನೆಗಳನ್ನೂ ಸೇರಿಸಿ ಒಂದೇ ತಾರಸಿ ಹಾಕಿ ಮುಚ್ಚಿ, ಅದರ ಮೇಲೊಂದು ಉಪನಗರವನ್ನೇ
ಸೃಷ್ಟಿಸಿಬಿಡಬಹುದಿತ್ತೇನೋ. ಆದರೆ ಹಾಗಾಗಲಿಲ್ಲ. ಇಂಚು ಜಾಗವೂ ಲಕ್ಷಗಟ್ಟಲೆ ಬೆಲೆ ಬಾಳುವ ಈ ನಗರದಲ್ಲಿ, ವಿವಿಧ ಎತ್ತರದ ವಿವಿಧ ಆಕಾರದ ಮನೆಗಳು ತಮ್ಮ ನಡುವೆ ಇಷ್ಟಿಷ್ಟೇ ಅಂತರವಿಟ್ಟುಕೊಂಡು ವಿವಿಧ
ಭಂಗಿಯಲ್ಲಿ ರಸ್ತೆಯ ಪಕ್ಕದಲ್ಲಿ ಕ್ಯೂ ನಿಂತವು. ಯಾರು ‘ಅಟೆನ್ಷನ್’ ಹೇಳಿದರೋ ಏನೋ, ಇವು ಮಾತ್ರ ಮುಂದೆ ಹೆಜ್ಜೆಯಿಡದೆ, ಭಂಗಿ ಬದಲಿಸದೇ ನಿಂತಲ್ಲೇ ನಿಂತುಬಿಟ್ಟವು. ಮಾಲೀಕರ ಅವಶ್ಯಕತೆಗೆ ತಕ್ಕಂತೆಯೋ, ಆರ್ಥಿಕ ಸ್ಥಿತಿಗನುಗುಣವಾಗಿಯೋ, ಸರ್ಕಾರದ ನಿಯಮದ ಅನ್ವಯವೋ, ಹೀಗೆ ಪೆಟ್ಟಿಗೆಗಳಂತೆ ಮೇಲ್ಮೇಲೆ ಏಳುವ ಈ ಮನೆಗಳ ಬೆಳವಣಿಗೆ ಯಾವುದೋ ನಿಗಧಿತ ಎತ್ತರ ತಲುಪಿದಾಕ್ಷಣ
ನಿಂತುಬಿಡುವುದು. ಆ ಕಟ್ಟಕಡೆಯಲ್ಲಿ ಹಾಕಲ್ಪಟ್ಟ ತಾರಸಿಗೆ ಇನ್ನು ಜೀವಮಾನವಿಡೀ ಬಿಸಿಲು-ಮಳೆಯುಣ್ಣುತ್ತ
ಹಾಗೇ ಬಿದ್ದಿರುವ ಶಾಪ.
ಕಟ್ಟಿದ ಕೆಲಕಾಲದವರೆಗೆ ಕ್ಯೂರಿಂಗಿನ ನೀರು ಕುಡಿದು
ಗಟ್ಟಿಯಾಗುವ ತಾರಸಿ, ಮುಂದೆ ಬರುವ ಸಕಲ ಕಷ್ಟ-ಸುಖಗಳನ್ನೂ ಎದುರಿಸಲು ಸಿದ್ದವಾಗುವುದು. ಹರವಾಗಿರುವ
ತನ್ನೆದೆಯನ್ನು ಬಿಸಿಲಿಗೊಡ್ಡಿ ಧೈರ್ಯವಾಗಿ ನಿಲ್ಲುವುದು. ಸಂಜೆಮಳೆಗೆ ಮೈಯೊಡ್ಡಿ ಸ್ನಾನ ಮಾಡಿ ಸ್ವಚ್ಛವಾಗುವುದು. ಮಾಘೀಚಳಿಯಲ್ಲಿ ತನ್ನ ಕಾಂಕ್ರೀಟೊಡಲ ಸಿಮೆಂಟಿನ ಕಣಗಳಿಗೆಲ್ಲ
ಪರಸ್ಪರ ತಬ್ಬಿ ಹಿಡಿದುಕೊಳ್ಳುವಂತೆ ಹೇಳಿ ಆದಷ್ಟೂ ಬೆಚ್ಚಗಿರಲು ಪ್ರಯತ್ನಿಸುವುದು. ಅಪರೂಪಕ್ಕೆ ವೃಷ್ಟಿಯಾದ
ಆಲಿಕಲ್ಲುಗಳನ್ನು ತನ್ನ ಬೊಗಸೆಯೊಡ್ಡಿ ಹಿಡಿದು, ಆಯಲು ಬರುವ ಚಿಣ್ಣರಿಗಾಗಿ
ಕರಗಿಸದೇ ಕಾಯುವುದು. ಪ್ರತಿ ಸಂಜೆ ದಪ್ಪ ಹೆಜ್ಜೆಯಿಟ್ಟು ವಾಕ್ ಮಾಡುವ ಆಂಟಿಯನ್ನು ಚೂರೂ ಬೈದುಕೊಳ್ಳದೇ
ನಡೆಸುವುದು. ಮಕ್ಕಳ ಪ್ಲಾಸ್ಟಿಕ್ ಬಾಲಿನ ಕ್ರಿಕೆಟ್ಟಿಗೆ ತಾನೇ ಪಿಚ್ ಆಗುವುದು. ಹಾರಿ ಬರುವ ದೂರಮರದ
ಹಣ್ಣೆಲೆಯನ್ನು, ಹಪ್ಪಳ-ಸಂಡಿಗೆಗಳೊಂದಿಗೆ, ಜತನದಿಂದ ಒಣಗಿಸುವುದು.
ರಾತ್ರಿಯ ಹೊತ್ತು ನಕ್ಷತ್ರ ತುಂಬಿದ ಆಕಾಶ ನೋಡುತ್ತ, ಇತ್ತಲಿಂದ ಅತ್ತ ಸಾಗುವ
ತುಂಬುಚಂದಿರನನ್ನು ಕಣ್ತುಂಬಿಕೊಳ್ಳುತ್ತ, ಆಗೀಗ ಸದ್ದು ಮಾಡುತ್ತ
ಹೋಗುವ ವಿಮಾನಗಳನ್ನು ಬೆರಗಿನಿಂದ ವೀಕ್ಷಿಸುತ್ತ, ಜಾರಿ ಬೀಳುವ ಉಲ್ಕೆಯನ್ನು
ಒಮ್ಮೆಯಾದರೂ ಹಿಡಿಯಬೇಕು ಅಂತ ಆಸೆಪಡುತ್ತಾ ನಿದ್ದೆ ಹೋಗುವುದು.
ಈ ತಾರಸಿಯ ಮೇಲೆ, ಸದಾ ಇದರ ಗೆಳೆಯರಂತೆ, ಅಡ್ಡಡ್ಡ ಎಳೆದ ಒಂದಷ್ಟು
ತಂತಿಗಳು. ಬಟ್ಟೆ ಒಣಗಿಸಲೆಂದು ಕಟ್ಟಿದ ಈ ತಂತಿಗಳು ಆಗಾಗ ಗಾಳಿಗೆ ಪರಸ್ಪರ ತಾಗಿ ಹೊರಡಿಸುವ ನಾದ
ತಾರಸಿಯ ಪಾಲಿಗೆ ಸಂಗೀತೋತ್ಸವ. ತನ್ನನ್ನೇ ಒಂದು ತಂಬೂರಿ ಹಾಗೆ, ಆ ತಂತಿಗಳನ್ನು ತಂಬೂರಿಯ ತಂತಿಗಳ ಹಾಗೆ ಕಲ್ಪಿಸಿಕೊಂಡು ತಾರಸಿ ರೋಮಾಂಚನಗೊಳ್ಳುವುದು. ಈ ತಂತಿಗಳ
ಮೇಲೆ ಒಣಹಾಕಿದ ಬಟ್ಟೆಗಳು ಟಪ್ಟಪ್ ಉದುರಿಸುವ ನೀರ ಹನಿಗಳೂ ತಾರಸಿಗೆ ಇಷ್ಟ. ಆಗಾಗ ಆಯತಪ್ಪಿ ಬೀಳುವ
ಬಟ್ಟೆಗಳನ್ನು ಈ ಮನೆಬಿಟ್ಟು ಹೊರಹಾರದಂತೆ ತಾರಸಿ ತನ್ನ ಪ್ಯಾರಾಪಿಟ್ಟಿನ ಮೂಲಕ ತಡೆಯುವುದು.
ತಾರಸಿಯ ಮೇಲೆ ಒಂದೋ ಎರಡು ನೀರಿನ ಟ್ಯಾಂಕುಗಳು.
ತಾರಸಿಯಿಂದ ಸ್ವಲ್ಪ ಎತ್ತರಕ್ಕೇರಿಸಿ ಕಟ್ಟಿದ ಕಟ್ಟೆಯ ಮೇಲೆ ಇವುಗಳ ಆವಾಸಸ್ಥಾನ. ದಿನಕ್ಕೊಮ್ಮೆ ತುಂಬಿ
ಉಕ್ಕುವ ನೀರು ತಾರಸಿಯನ್ನು ಸ್ವಲ್ಪವೇ ತೋಯಿಸಿ, ಯಾವುದೋ ಆಕಾರ ಮೂಡಿಸಿ, ಹಾಗೇ ಬಿಸಿಲಿಗಾವಿಯಾಗುವುದು. ಈ ಟ್ಯಾಂಕು, ತನ್ನ ಸನಿಹದಲ್ಲೇ ಸ್ಥಾಪಿಸಲ್ಪಟ್ಟಿರುವ, ಸೂರ್ಯನ ಶಕ್ತಿ ತನಗೆ
ಮಾತ್ರ ಅರಿವಿದೆ ಎಂಬಂತೆ ನಿಂತಿರುವ, ಬಾಗು ಸೋಲಾರ್ ಪ್ಯಾನೆಲ್ಲಿಗೂ ನೀರೊದಗಿಸುತ್ತದೆ.
ದೊಡ್ಡ ಟ್ಯಾಂಕು ಪಕ್ಕದ ಟೆರೇಸಿನಲ್ಲಿರುವ ತನಗಿಂತ ಚಿಕ್ಕದಾದ ಟ್ಯಾಂಕನ್ನು ತನ್ನ ತಮ್ಮನಂತೆ ಆದರಿಸುತ್ತದೆ.
ಎಲ್ಲರೂ ಮಲಗಿದ ಒಂದು ನಟ್ಟಿರುಳು, ಕರೆಂಟು ಸಹ ಹೋಗಿ ಜಗದೆಲ್ಲ ಯಂತ್ರಗಳೂ
ನಿಂತು, ರಸ್ತೆಯಲ್ಲಿ ಯಾವ ವಾಹನವೂ ಓಡಾಡದ ಅಪರೂಪದ ತೃಣಮೌನದ ಹೊತ್ತಲ್ಲಿ, ಎಲ್ಲರ ಮನೆಯ ಟೆರೇಸಿನ ಮೇಲಿನ ಟ್ಯಾಂಕುಗಳು ತಮ್ಮೊಡಲ ನೀರನ್ನು ಜುಳುಜುಳುಗುಡಿಸುತ್ತ ಮಾತಾಡಿಕೊಳ್ಳುತ್ತವೆ
ಮತ್ತು ಈ ಗುಟ್ಟು ಯಾರಿಗೂ ತಿಳಿಯದಂತೆ ಎಚ್ಚರ ವಹಿಸುತ್ತವೆ. ಆಶ್ಚರ್ಯ ಎಂದರೆ, ಈ ರಹಸ್ಯದ ಅರಿವಿರುವ ತಾರಸಿಯ ಮೇಲೆ ಇರಿಸಲಾಗಿರುವ ನಾಲ್ಕೈದು ಹೂಕುಂಡಗಳಲ್ಲಿ ಅರಳಿದ ಹೂಗಳೂ
ಈ ವಿಷಯದಲ್ಲಿ ಬಾಯಿಬಿಡದೇ ಸುಮ್ಮನಿರುವುದು.
ಸ್ವಲ್ಪ ಬುದ್ಧಿವಂತಿಕೆ ಇರುವ, ಬಾಡಿಗೆಯ ಆಸೆ ಹೆಚ್ಚಿದ ಅಥವಾ ಸರ್ಕಾರದ ನಿಯಮವನ್ನು ಉಲ್ಲಂಘಿಸುವ ಧೈರ್ಯ ತೋರಿದ ಮಾಲೀಕರು ಮತ್ತು
ಬಿಲ್ಡರುಗಳು, ಈ ಟ್ಯಾಂಕುಗಳನ್ನು ಇಡಲು ಕಟ್ಟೆ ಕಟ್ಟುವ ಬದಲು ಒಂದು ಪುಟ್ಟ ರೂಮು ಕಟ್ಟಿಬಿಟ್ಟರು.
ಈ ರೂಮಿಗೆ ಹೊಂದಿಕೊಂಡಂತೆ ಒಂದು ಶೌಚಗೃಹ. ಕೆಲ ರೂಮುಗಳೊಳಗೆ
ಸಣ್ಣದೊಂದು ಅಡುಗೆ ಕಟ್ಟೆಯೂ ಮೂಡಿತು. ಟೆರೇಸಿನ ಮೇಲಿನ ಈ ಒಂಟಿಕೋಣೆಗಳು ಬ್ಯಾಚುಲರುಗಳ ವಾಸಕ್ಕೆ
ಬಾಗಿಲು ತೆರೆದು ನಿಂತವು. ಕೆಲಸ ಅರಸಿ ನಗರಕ್ಕೆ ಬರುವ
ಬ್ಯಾಚುಲರುಗಳ ಪಾಲಿಗೆ ಇವೇ ಅರಮನೆಗಳಾದವು. ಒಬ್ಬರೋ ಇಬ್ಬರೋ ಸೇರಿ, ಓನರಿನ
ಜತೆ ಮಾತಾಡಿ ಬಾಡಿಗೆ ಹೊಂದಿಸಿ, ತಮ್ಮ ಪುಟ್ಟ ಬಟ್ಟೆಗಂಟು
ಮತ್ತು ಆರೆಂಟು ಪಾತ್ರೆಗಳ ಅಡುಗೆ ಸಾಮಾನಿನೊಂದಿಗೆ ಈ ಗೂಡು ಹೊಕ್ಕುಬಿಟ್ಟರೆ ಆಮೇಲೆ ಅದೇ ಅವರ ಸ್ವರ್ಗ.
ಒಳಗೆ ಇಷ್ಟೇ ಜಾಗವಿರುವ ಕೋಣೆ, ಎದುರು ಎಷ್ಟೆಲ್ಲ ಜಾಗವಿರುವ
ವಿಶಾಲ ಟೆರೇಸು. ಅಂಚಿಗೆ ಬಂದು, ಪ್ಯಾರಾಪಿಟ್ಟಿಗೆ ಒರಗಿ, ಬಗ್ಗಿ ನೋಡಿದರೆ ಕೆಳಗೆ ಹುಳುಗಳಂತೆ ಓಡಾಡುವ ಜನಗಳು, ಆಟಿಕೆಗಳಂತೆ ಕಾಣುವ
ವಾಹನಗಳು. ಸ್ವಚ್ಛಂದ ಬೀಸುವ ಗಾಳಿಗೆ ತೋಳ್ಬಿಚ್ಚಿ ನಿಂತರೆ ಜಗವನ್ನೇ ಮರೆಸುವ ಮಾಯಾಶಕ್ತಿ.
ರೂಮನ್ನಷ್ಟೇ ಬಾಡಿಗೆಗೆ ಪಡೆದಿದ್ದರೂ ಬ್ಯಾಚುಲರುಗಳ
ಪಾಲಿಗೆ ಎದುರಿನ ಟೆರೇಸು ಸಹ ಅದರಲ್ಲಿ ಸೇರಿಕೊಂಡಂತೆ. ಟೆರೇಸೂ ಸಹ ಎಂದೂ ಆ ರೂಮನ್ನು ಬೇರೆಯಾಗಿ ಕಂಡಿಲ್ಲ.
ಅದು ತನ್ನ ಮಡಿಲ ಮಗುವಂತೆ, ತನ್ನ ಅವಿಭಾಜ್ಯ ಅಂಗದಂತೆ ಭಾವಿಸಿದೆ. ಹೀಗಾಗಿ, ಬ್ಯಾಚುಲರುಗಳು ರೂಮಿನೊಳಗಿನಗಿಂತ ಹೆಚ್ಚಿನ ಸಮಯವನ್ನು ಕಳೆಯುವುದು ಈ ಖಾಲಿ ಟೆರೇಸಿನಲ್ಲೇ.
‘ಬಾಡಿಗೆ ಮಾತಾಡಿದ್ದೇನೂ ಜಾಸ್ತಿಯಾಗ್ಲಿಲ್ಲ ಕಣೋ, ಇಷ್ಟು ದೊಡ್ಡ ಟೆರೇಸು ಫ್ರೀ ಸಿಕ್ಕಿದ್ಯಲ್ಲ?’ ಅಂತ ತಮಗೆ ತಾವೇ ಹೇಳಿಕೊಂಡು
ಸಮರ್ಥಿಸಿಕೊಳ್ಳುವರು. ಟೆರೇಸಿನಲ್ಲಿ ಅಡ್ಡಾದಿಡ್ಡಿ ಎಳೆದಿರುವ ವಿವಿಧ ಕೇಬಲ್ಲುಗಳನ್ನು ಇವರು ಸರಿಸಿ
ಒಂದು ಮೂಲೆಗೆ ತಳ್ಳುವರು. ಫೋನಿನಲ್ಲಿ ಮಾತಾಡುತ್ತಾ, ಹಾಡು ಕೇಳುತ್ತಾ, ಹರಟೆ ಹೊಡೆಯುತ್ತಾ, ದಿಗಂತದೆಡೆಗೆ ನೋಡುತ್ತಾ ಈ ಟೆರೇಸಿನ ತುಂಬಾ ಅಡ್ಡಾಡುವರು. ಇಲ್ಲಿವರು
ಸಿಗರೇಟು ಹಚ್ಚಿದರೆ ಯಾವ ಗ್ರೌಂಡ್ ಫ್ಲೋರಿನ ಅಜ್ಜನೂ ಕೆಮ್ಮುವುದಿಲ್ಲ. ಇಲ್ಲಿವರು ಎಷ್ಟು ಹೊತ್ತು
ಶೂನ್ಯದೆಡೆಗೆ ನೋಡುತ್ತ ನಿಂತರೂ ಯಾವ ದಾರಿಹೋಕನೂ ಯಾಕೆಂದು ವಿಚಾರಿಸುವುದಿಲ್ಲ. ಬೇಸಿಗೆಯಲ್ಲಿ ರೂಮಿನೊಳಗೆ ಮಲಗಲು ತುಂಬಾ ಸೆಖೆಯಾಯಿತಾ? ಟೆರೇಸಿನಲ್ಲಿ ಒಂದು ಚಾಪೆ ಹಾಸಿ ಅಡ್ಡಾದರೆ ಆಕಾಶಕಂಬಳಿಯಡಿ ಹಾಯಾದ ನಿದ್ರೆ. ಶನಿವಾರ ಸಂಜೆಗೆ
ಗೆಳೆಯರು ಬಂದರಾ? ಟೆರೇಸಿನಲ್ಲಿ ನಾಲ್ಕು ಸ್ಟೂಲು ಹಾಕಿ, ನಡುವೆ ಒಂದು ಟೀಪಾಯಿಯಿಟ್ಟು, ಅದರ ಮೇಲೆ ಬಾಟಲಿಗಳನ್ನೂ
ಕರಿದ ತಿಂಡಿಗಳನ್ನೂ ಇರಿಸಿ ಭರ್ಜರಿ ಪಾರ್ಟಿ. ಸಿಕ್ಕಾಪಟ್ಟೆ ಗಲಾಟೆ ಮಾಡ್ತೀರಿ ಅಂತ ಓನರು ತಕರಾರು
ತೆಗೆದರಾ? ಇನ್ಯಾವುದೋ ಇಂಥದೇ ಟೆರೇಸಿನ ಮೇಲಿನ ರೂಮಿಗೆ ಗಂಟುಮೂಟೆ ಕಟ್ಟಿ ಹೊರಟರಾಯಿತು.
ಎಷ್ಟೋ ವರ್ಷಗಳಿಂದ ಬ್ಯಾಚುಲರುಗಳಿಗೂ, ವಿದ್ಯಾರ್ಥಿಗಳಿಗೂ, ಕೆಲವೊಮ್ಮೆ ಪುಟ್ಟ ಸಂಸಾರಗಳಿಗೂ ಆಶ್ರಯದಾಯಿಯಾಗಿರುವ ಈ ಒಂಟಿಕೋಣೆಗಳು, ದೊಡ್ಡ ಮನೆ ಬಾಡಿಗೆಗೆ ಪಡೆದರೆ ಪ್ರತಿ ತಿಂಗಳು ತೆರಬೇಕಿದ್ದ ಬಾಡಿಗೆ ಹಣದಲ್ಲಿ ನಾಲ್ಕು ಕಾಸು
ಉಳಿಸುವಲ್ಲಿ ಮಹತ್ವದ ಪಾತ್ರವನ್ನೇ ವಹಿಸಿವೆ. ಇಲ್ಲಿ ಉಳಿದ ರೂಪಾಯಿ ಯಾವುದೋ ಊರಿನಲ್ಲಿರುವ ಅಮ್ಮನಿಗೆ
ಮನಿಯಾರ್ಡರ್ ಆಗಿದೆ. ತಂಗಿಯ ಬಳೆಯಾಗಿ ಘಲ್ಲೆಂದಿದೆ. ಟೆರೇಸಿನ ಪುಟ್ಟ ಕೋಣೆಯಲ್ಲೇ ಇದ್ದು ಓದಿದ ಹುಡುಗ
ದೊಡ್ಡ ನೌಕರಿ ಹಿಡಿದು ಕೈತುಂಬ ಸಂಬಳ ಗಳಿಸಿ ಹೊಸ ಮನೆ ಕಟ್ಟಿಸಿದ್ದಾನೆ.
ಎಲ್ಲಾ ಗೊತ್ತಿದ್ದೂ ಏನೂ ತಿಳಿಯದಂತೆ ಸುಮ್ಮನೆ ಮಲಗಿದೆ
ತಾರಸಿ. ಬಟ್ಟೆ ಒಣಗಿಸಲೆಂದು ತಾರಸಿಗೆ ಬಂದ ಕೆಲಸದವಳು, ಬೀಗ ಹಾಕಿದ ಕೋಣೆಯ ತೆರೆದ
ಕಿಟಕಿಯಿಂದ ಹಣಿಕಿ ನೋಡಿ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು, ಹೌಹಾರಿ ವಾಪಸು ಹೋಗಿದ್ದಾಳೆ. ಎದುರು ಮನೆಯ ಬಾಲ್ಕನಿಯಲ್ಲಿ ಪ್ರತಿ ಮುಂಜಾನೆ ಕಾಣುವ ಚೆಲುವೆಯ
ಮೇಲೆ ಒಂಟಿಕೋಣೆಯ ಹುಡುಗನಿಗೆ ಮನಸಾಗಿದೆ. ಟೆರೇಸಿನ ತುತ್ತತುದಿಯಲ್ಲಿ ನಿಂತು, ಗಾಳಿಗೆ ಹಾರುವ ಅವಳ ರೇಷ್ಮೆಗೂದಲನ್ನು ಇಲ್ಲಿಂದಲೇ ನೇವರಿಸುತ್ತಾನೆ. ಅವಳಿಂದೊಂದು ಸಣ್ಣ ಇಷಾರೆ
ಸಿಕ್ಕರೆ ಸಾಕು, ಇವನು ಟೆರೇಸಿಗಿಂತಲೂ ಎತ್ತರದಲ್ಲಿ ತೇಲುತ್ತಾನೆ. ಟೆರೇಸು ತನ್ನ ಮೈತುಂಬ
ಮರಳ ನವಿರೇಳಿಸಿಕೊಂಡು ಈ ಬೆರಗನ್ನು ಎವೆಯಿಕ್ಕದೆ ನೋಡುತ್ತದೆ.
[ವಿಶ್ವವಾಣಿಯ ಸಾಪ್ತಾಹಿಕ 'ವಿರಾಮ'ದಲ್ಲಿ ಪ್ರಕಟಿತ.]
Friday, February 26, 2016
ಮಾರುವೇಷ
ಭಾವಗಳ ಅಭಿವ್ಯಕ್ತಿ ಬಲು ಸುಲಭ ಈಗ.
ಬೆರಳಂಚಲ್ಲಿ ಎಮೋಟಿಕಾನುಗಳು:
ನಗುವೋ, ಮುಗುಳ್ನಗುವೋ, ಗಹಗಹವೋ,
ಅಳುವೋ, ಬೇಸರವೋ, ಕೋಪವೋ,
ಯಾವುದೆಂದರಿಯಲಾಗದ ಬರಿಮೌನವೋ-
ಹುಡುಕಿ ಕಳುಹಿಸಿದರೆ ಖಂಡಾಂತರ ದಾಟಿ
ತಲುಪಬೇಕಾದವರ ತಲುಪುವುದು ಕ್ಷಣದಲ್ಲೇ.
ಓಹೋ, ಅತ್ತಲಿಂದಲೂ
ಪ್ರತಿಕ್ರಿಯೆ ಮರುಕ್ಷಣವೇ.
ವಾದಗಳ ಮಾಡುವುದೂ ಬಲು ಸುಲಭ ಈಗ.
ಬೆರಳಂಚಲ್ಲಿ ಮಾಹಿತಿಗಳ ಸಮೃದ್ಧಿ:
ನಂಬಿದ ಸೂತ್ರಗಳ, ಮೂಗನೇರ ಕಂಡ ದೃಶ್ಯಗಳ,
ಸುಳ್ಳುಗಳ, ನಿಜಗಳ, ಹೇಳಿದ್ದ, ಮಾಡಿದ್ದ, ನೋಡಿದ್ದ,
ಬರೆದಿದ್ದ, ತಿರುಚಿದ್ದ -ಏನು
ಬೇಕೆಂದರದನ್ನ ಕ್ಷಣದಲ್ಲಿ ಹುಡುಕಿ ತೆಗೆದು
ಪ್ರಸ್ತುತಪಡಿಸಿ ಸಮಜಾಯಿಷಿ ನೀಡಿ
ನಿಬ್ಬೆರಗಾಗುವಂತೆ
ದಾಖಲೆಯೊದಗಿಸಿ ಪಟ್ಟು ಸಡಿಲಿಸದೆ ಬಿಗಿಹಿಡಿದು.
ನೋನೋ, ಇಳಿಸಬೇಡಿ ಬಿಲ್ಲು, ಅತ್ತಲಿಂದಿನ್ನೇನು ಬರಲಿದೆ ತಿರುಗುಬಾಣ.
ಸಂಜೆಯಾಯಿತೋ, ಸೂರ್ಯ ಮುಳುಗಿದನೋ,
ಮುಟ್ಟಬೇಕಾದವರಿಗೆ ಮುಟ್ಟಿತೋ, ನಾಟಬೇಕಾದವರಿಗೆ ನಾಟಿತೋ,
ಕೊಡಬೇಕೆಂದುಕೊಂಡದ್ದನ್ನು ಕೊಟ್ಟಾಯಿತೋ-
ಮುಗಿಯಿತು ನಿಮ್ಮ ಕೆಲಸ.
ನಾಳೆ ಬೆಳಗಾದರೆ ಹೊಸ ಎಮೋಟಿಕಾನುಗಳು
ಪರದೆಯ ಮೇಲೆ ಹೊಳೆಯುತ್ತ ನರ್ತಿಸುತ್ತವೆ.
ಪ್ರತಿಪಾದಿಸಲು ಹೊಸ ವಿಷಯ ಸಿದ್ಧವಿರುತ್ತದೆ.
ಹಳೆಧೂಳ ಕೊಡವಿಕೊಂಡು ಮುಂದೆ ಹೋದರಾಯಿತು.
ಯಾರಲ್ಲಿ ಬಿಕ್ಕಳಿಸುತ್ತಿರುವವರು –ನಮ್ಮ ಬಳಿ ಕರ್ಚೀಫ್ ಇಲ್ಲ.
ಯಾರಲ್ಲಿ ರಕ್ತ ಕಾರಿಕೊಂಡು ಬಿದ್ದವರು –ಬ್ಯಾಂಡೇಡ್ ಮೆಡಿಕಲ್ಲಿನಲ್ಲಿ ಸಿಗುತ್ತದೆ.
ಯಾರಲ್ಲಿ ಬಿದ್ದೂಬಿದ್ದು ನಗುತ್ತಿರುವವರು –ಬೀಳಲಿ, ಈಗ ನಮಗೆ ಪುರುಸೊತ್ತಿಲ್ಲ.
ಯಾರಲ್ಲಿ ಹಸಿದು ಅಡ್ಡಾದವರು –ಮೊಬೈಲಲ್ಲೇ ಊಟ ಆರ್ಡರ್ ಮಾಡ್ಬಹುದು,
ಆದರೆ ಅವನಿಗೆ ವಿಳಾಸವಿಲ್ಲವಲ್ಲ.
ಪರರ ಪಾಡು ಕಡೆಗಿರಲಿ, ಈಗಷ್ಟೆ ನಾನು ತಿಂದ ಪಲಾವಿನ ರುಚಿ ಹೇಗಿತ್ತು,
ದಾಟಿ ಬಂದ ಹೂಬನದಲ್ಲಿ ಯಾವ ಕಂಪಿತ್ತು, ಸ್ನಾನ ಮಾಡಿದ ನೀರು
ಎಷ್ಟು ಬೆಚ್ಚಗಿತ್ತು, ಕೇಳಿಸಿದ ದನಿಯಲ್ಲಿ ಎಷ್ಟು ಮಾರ್ದವವಿತ್ತು,
ಆ ಸಾಲ್ಸಾ ನೃತ್ಯದಲದೆಂತ ಸೊಬಗಿತ್ತು –ಅಂತೆಲ್ಲ ಯೋಚಿಸಲೂ ಸಮಯವಿಲ್ಲ.
ಬಟ್ಟೆಯ ಮೇಲೆ ಬಟ್ಟೆಯ ಧರಿಸಿ ಏನೂ
ತಾಕುತ್ತಿಲ್ಲ.
ಕಡುಗಪ್ಪು ಕನ್ನಡಕದ ಮೂಲಕ ಏನೂ
ಕಾಣಿಸುತ್ತಿಲ್ಲ.
ಬಳಿದುಕೊಂಡ ಢಾಳ ಬಣ್ಣ ದಾಟಿ ಏನೂ
ಇಳಿಯುತ್ತಿಲ್ಲ.
ಇಯರ್ಫೋನು ಕಿವಿಯೊಳಗೇ ಹೊಕ್ಕು ಏನೂ
ಕೇಳಿಸುತ್ತಿಲ್ಲ.
ನಿನ್ನೆ ಏನಾಯಿತು ಗೊತ್ತಾ?
ಕನ್ನಡಿಯೊಳಗೆ ನನ್ನನ್ನೇ ನಾನು ನೋಡಿಕೊಂಡು
ಬೆಚ್ಚಿಬಿದ್ದೆ.
Subscribe to:
Posts (Atom)