ಲೋಕಲ್ ರೈಲುಗಳು ಮಾತ್ರ ನಿಲ್ಲುವ
ಸಣ್ಣ ಪಟ್ಟಣದ ಸ್ಟೇಷನ್ನಿನ ತಡರಾತ್ರಿಯ ನೀರವದಲ್ಲಿ
ಬ್ಯಾಂಡ್‌ಸೆಟ್ ತಂಡವೊಂದರ ಐವರು ಸಮವಸ್ತ್ರಧಾರಿಗಳ ಗುಂಪು
ಪ್ಲಾಟ್‌ಫಾರ್ಮಿನ ಮೂಲೆಯಲ್ಲಿ ಕೂತಿದೆ.
ಎಲ್ಲಿಂದ ಬಂದವರೋ, ಎಲ್ಲಿಗೆ ಹೊರಟವರೋ-
ಕಾಯುತ್ತ ಕೂತು ಬಹಳ ಹೊತ್ತಾದ ಕುರುಹಂತೆ
ಎಲ್ಲರೂ ತೂಕಡಿಸುತ್ತಿದ್ದಾರೆ.
ಅತ್ತ ದಿಕ್ಕಿಂದ ಕ್ಷೀಣ ಸದ್ದಿನೊಡನೆ ಬರುವ
ಯಾವ ಬೆಳಕೇ ಕಂಡರೂ ಧಿಗ್ಗನೆ ಎಚ್ಚರಗೊಂಡು
ದಡಬಡಿಸಿ ತಮ್ಮ ಸಲಕರಣೆಗಳನೆಲ್ಲ ಬಗಲಿಗೇರಿಸಿ
ಸುಸ್ತು ತುಂಬಿದ ನಿದ್ರೆಗಣ್ಣನ್ನು ಇಷ್ಟಗಲ ಮಾಡಿಕೊಂಡು
ಪ್ಲಾಟ್‌ಫಾರ್ಮಿನ ತುದಿಗೆ ಹೋಗಿ ನಿಲ್ಲುವರು.
ಪೋಂಕನೆ ಸದ್ದು ಮಾಡುತ್ತ ಹಳಿಗಳ ಮೇಲೆ ಹಾಯುವ
ಎಕ್ಸ್‌ಪ್ರೆಸ್ ರೈಲಿನ ರಭಸದಲ್ಲೇ ಇರುವ ನಿರ್ದಯೆಗೆ ಕಂಗಾಲಾಗುವರು.
ಮತ್ತದೇ ಮೂಲೆಗೆ ಸರಿದು ಅದದೇ ಜಾಗದಲ್ಲಿ
ತಮ್ಮ ಬಗಲ ಚೀಲಗಳನ್ನಿರಿಸಿ ಕುಕ್ಕರಿಸುವರು.
ಎಲ್ಲಿ ಯಾರ ಮದುವೆ ದಿಬ್ಬಣವೋ,
ಯಾರ ಶವಯಾತ್ರೆಯೋ,
ಯಾವ ರಾಜಕಾರಣಿಯ ವಿಜಯದ ಮೆರವಣಿಗೆಯೋ,
ಯಾವ ದೇವರ ಪಲ್ಲಕ್ಕಿಯುತ್ಸವವೋ,
ಯಾವ ಮಠಾಧಿಪತಿಗೆ ಪೂರ್ಣಕುಂಭ ಸ್ವಾಗತವೋ-
ತಮ್ಮ ಉಸಿರನ್ನೂ ಕಸುವನ್ನೂ ಅರ್ಪಿಸಿ
ಸದ್ದಲ್ಲೇ ಸಂಭ್ರಮ ಹೆಚ್ಚಿಸಿ, ಟಪ್ಪಾಂಗುಚ್ಚಿ ಕುಣಿಸಿ ಧೂಳೆಬ್ಬಿಸಿ,
ಪಡೆದು ರಿಯಾಯಿತಿ ಜತೆ ಕೊಟ್ಟ ಹಣ,
ಈಗ ಈ ನಿಲ್ದಾಣದ ಮೌನದಲ್ಲಿ ಚಳಿಗೆ ಗಢಗಢ
ನಡುಗುತ್ತ ಹಳಿಗಳನ್ನೇ ನೋಡುತ್ತ ಕೂತಿರುವರು.
ಅವರ ಬಾಜೂ ಇರುವ ಕ್ಲಾರಿಯೋನೆಟ್ಟು-
ಟ್ರಂಪೆಟ್ಟುಗಳೊಳಗೆ ಇನ್ನೂ ಸಿಕ್ಕಿಕೊಂಡಿರುವ ಉಸಿರು,
ಕಿವಿಯಿಟ್ಟು ಕೇಳಿದರೆ ಬಟ್ಟೆಚೀಲದಲ್ಲಿನ ಡ್ರಮ್ಮುಗಳಿಂದ
ಇನ್ನೂ ಹೊಮ್ಮುತ್ತಿರುವ ಡಂಕ್ಕಣಕ ಧ್ವನಿ,
ಅವರ ಯೂನಿಫಾರ್ಮು-ಟೋಪಿಗಳ ಮೇಲೆ ಕೂತಿರುವ
ಧೂಳಿನಲ್ಲಿ ಇನ್ನೂ ಅಡಗಿರುವ ಟಪ್ಪಾಂಗುಚ್ಚಿಯ ಹೆಜ್ಜೆಲಯ-
ಯಾವುದೂ ಈ ನಿಶ್ಶಬ್ದವ ಕಲಕುವ ಗೋಜಿಗೆ ಹೋಗುತ್ತಿಲ್ಲ.
ಆದರೂ, ಹಳಿಗಳಾಚೆಯಿಂದ ಅನಾಮತ್ ಹಾರಿಬಂದು
ಡ್ರಮ್ಮಿಗೆ ಬಡಿದ ಜೀರುಂಡೆ ಹೊಮ್ಮಿಸಿದ ಶಬ್ದ ತಡೆಯಲು
ಯಾರಿಂದಲೂ ಸಾಧ್ಯವಾಗಿಲ್ಲ.
ಕೆಲವರು ಹೇಳುವುದುಂಟು: ಈ ಬ್ಯಾಂಡ್‌ಸೆಟ್ಟಿನವರು
ಅವಕಾಶವಾದಿಗಳೆಂದು. ಅದು ಸುಳ್ಳೇ ಇರಬೇಕು.
ಹಾಗಿದ್ದಿದ್ದರೆ, ಈ ದರವೇಶಿ ನಿಲ್ದಾಣದಲ್ಲಿ
ಗಂಟೆಗಟ್ಟಲೆ ಕಾಯುವ ಬದಲು ತಮ್ಮ ಚೀಲಗಳಿಂದ
ಬ್ಯಾಂಡ್‌ಸೆಟ್ ಹೊರತೆಗೆದು ಸ್ಟೇಶನ್ ಮಾಸ್ತರನೂ,
ಅಳಿದುಳಿದ ಪ್ರಯಾಣಿಕರೂ ಬೆಚ್ಚಿಬೀಳುವಂತೆ ಗದ್ದಲವೆಬ್ಬಿಸಿ
ಯಾವುದಾದರೂ ರೈಲು ನಿಲ್ಲುವಂತೆ ಮಾಡಿ
ಅದನ್ನೇರಿ ಇಲ್ಲಿಂದ ಈಗಾಗಲೇ ಜಾಗ ಖಾಲಿ ಮಾಡಿರುತ್ತಿದ್ದರು.
ಇವರು ಅವಕಾಶ ಕೊಟ್ಟಾಗ ವಾದ್ಯ ನುಡಿಸುವವರು ಅಷ್ಟೇ.
ಸಂದರ್ಭವಿಲ್ಲವೆಂದರೆ ತಮ್ಮ ಪೀಪಿಯ ಮೂತಿಗೆ ಬಿರಡೆ ಹಾಕಿ
ಡ್ರಮ್ಮಿನ ಕಡ್ಡಿಗಳನ್ನು ಚೀಲದೊಳಗಿರಿಸಿ, ಹೀಗೆ
ಅನಂತದತ್ತ ದಿಟ್ಟಿನೆಟ್ಟು ಯಾವುದೋ ಲೋಕದಿಂದ ಬರುವ
ರೈಲಿಗಾಗಿ ಕೂತಲ್ಲೆ ಜೋಲಿ ಹೊಡೆಯುತ್ತಾ ಇಡೀರಾತ್ರಿ ಕಾಯುವರು:
ಕೆಲವೇ ಗಂಟೆ ಮೊದಲು ತಾವಿದ್ದ ಜಾಗದ ಸಂಭ್ರಮಕ್ಕೋ
ದುಃಖಕ್ಕೋ ಗದ್ದಲಕ್ಕೋ ಶಾರೀರವಾದುದ ಮರೆತು,
ಏನನ್ನೂ ಅಂಟಿಸಿಕೊಳ್ಳದೆ, ಹಗುರವಾಗಿಯೇ ಉಳಿದು.
Wednesday, September 07, 2016
Tuesday, September 06, 2016
ಶಿಕ್ಷಕರ ದಿನದಂದು ಪಿ.ಟಿ. ಮೇಷ್ಟ್ರು ನೆನಪಾಗಿ...
ಶಾಲೆಯಲ್ಲಿರುತ್ತಿದ್ದಾಗ ನಿಮ್ಮ ನೆಚ್ಚಿನ ಮೇಷ್ಟ್ರು ಯಾರಾಗಿದ್ದರು? ತಿಪ್ಪರಲಾಗ ಹೊಡೆದರೂ
ಬಿಡಿಸಲಾಗದ ಲೆಕ್ಕಗಳನ್ನು ಬಿಡಿಸಲು ಹೇಳುತ್ತಿದ್ದ ಗಣಿತದ ಮೇಷ್ಟ್ರೇ? ಎಷ್ಟೇ ಉರು ಹೊಡೆದರೂ ಮರೆಯುವ
ಇಸವಿಗಳನ್ನು ನೆನಪಿಡಲು ಹೇಳುತ್ತಿದ್ದ ಇತಿಹಾಸದ ಮೇಷ್ಟ್ರೇ? ಮುಟ್ಟಲೇ ಹೇಸಿಗೆಯಾಗುವ ಕಪ್ಪೆಯನ್ನು ಕತ್ತರಿಸಲು
ಹೇಳುತ್ತಿದ್ದ ವಿಜ್ಞಾನ ಶಿಕ್ಷಕರೇ? ಮೀನಿಂಗು, ಸಿನಾನಿಮ್ಮು, ಪ್ಯಾಸಿವ್ ವಾಯ್ಸು, ನೆಗೆಟಿವ್ ಸೆಂಟೆನ್ಸು
ಅಂತೆಲ್ಲ ನಾಲಿಗೆ, ಪೆನ್ನು, ತಲೆಗಳಿಗೆ ಕಷ್ಟ
ಕೊಡುತ್ತಿದ್ದ ಇಂಗ್ಲೀಷ್ ಮೇಡಮ್ಮೇ? ಲಘು, ಗುರು, ಛಂದಸ್ಸು, ಸಮಾಸ, ವ್ಯಾಕರಣ, ರಾಘವಾಂಕನ ಕಾವ್ಯ ಅಂತೆಲ್ಲ
ಹೇಳುತ್ತ ಮಧ್ಯಾಹ್ನದ ತರಗತಿಯಲ್ಲಿ ಬೋರು ಹೊಡೆಸುತ್ತಿದ್ದ ಕನ್ನಡ ಬೋಧಕರೇ?
ಅಥವಾ- ಬಿಳೀ ಅಂಗಿ, ಬಿಳೀ ಪ್ಯಾಂಟು, ಬಿಳ್‌ಬಿಳೀ ಶೂ ಧರಿಸಿ ಬರುತ್ತಿದ್ದ, ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಕೋ ಮೂಲೆಯಲ್ಲಿ ಅಟೆನ್ಷನ್ ಪೊಸಿಷನ್ನಿನಲ್ಲಿ
ನಿಂತಿರುತ್ತಿದ್ದ, ಇಳಿಬಿಸಿಲಿನ ಆಟದ
ತರಗತಿಗಳಲ್ಲಿ ದೊಡ್ಡ ಬಯಲಿಗೆ ಕರೆದೊಯ್ದು, ನಿಮ್ಮನ್ನೇ ಕಂಬ ಹತ್ತಿಸಿ ನಿಮ್ಮಿಂದಲೇ ನೆಟ್ ಕಟ್ಟಿಸಿ ನಿಮ್ಮಿಂದಲೇ ಸರ್ವ್ ಮಾಡಿಸಿ
ವಾಲಿಬಾಲ್ ಆಡಿಸುತ್ತಿದ್ದ, ಫುಟ್‌ಬಾಲಿನ ನಾಭಿಗೆ ಬಾಲದ ನಾಝಲ್ ಒತ್ತಿ ಹಿಡಿದು ಸೈಕಲ್ ಪಂಪಿನಿಂದ ಗಾಳಿ ಹೊಡೆಯಲು
ಹೇಳುತ್ತಿದ್ದ, ಗೋಲ್‌ಪಾಯಿಂಟ್‌ವರೆಗೆ
ನಿಮ್ಮೊಂದಿಗೇ ಬಾಲಿನ ಹಿಂದೆ ಓಡಿ ಬರುತ್ತಾ ಪಾಸ್ ಮಾಡುವ ಟ್ರಿಕ್ ಹೇಳಿಕೊಡುತ್ತಿದ್ದ, ‘ಇವತ್ತು ನಂಗೆ ಓಡ್ಲಿಕ್ಕೆ
ಆಗಲ್ಲ’ ಅಂದ ಹುಡುಗಿಯ ಸಣ್ಣ ಮುಖ ನೋಡಿಯೇ ವಿಷಯ ಅರ್ಥ ಮಡಿಕೊಳ್ಳುತ್ತಿದ್ದ, ಅಷ್ಟೊಳ್ಳೆಯ ಪಿಟಿ-ಮೇಷ್ಟ್ರೇ?
ನೀವೇನಾದರೂ ಅಕೌಂಟ್ಸನ್ನೋ ಕಾಮರ್ಸನ್ನೋ ನಿಮ್ಮ ಉದ್ಯೋಗದ ಕ್ಷೇತ್ರವನ್ನಾಗಿ
ತೆಗೆದುಕೊಂಡವರಾಗಿದ್ದರೆ, ಮೂಲಸೂತ್ರಗಳನ್ನು ಎಂದೂ ಮರೆಯದಂತೆ ಹೇಳಿಕೊಟ್ಟಿದ್ದಕ್ಕೆ ಹೈಸ್ಕೂಲಿನ ಗಣಿತದ ಮೇಷ್ಟ್ರಿಗೆ
ನೀವು ಕೃತಜ್ಞರಾಗಿರಬಹುದು. ಇಲ್ಲವೇ, ಒಂದ್ಯಾವುದೋ ತರಗತಿಯಲ್ಲಿ ಭಗತ್‌ಸಿಂಗನ ಶೌರ್ಯದ ಕತೆಯನ್ನು ಮೈನವಿರೇಳಿಸುವಂತೆ ಹೇಳಿದ
ಇತಿಹಾಸದ ಮೇಷ್ಟ್ರ ಪಾಠ ನಿಮಗೆ ಇನ್ನೂ ನೆನಪಿರಬಹುದು. ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ
ಅವಿವಾಹಿತ ಟೀಚರ್ರು, ‘ಮಾನವ ಜೀವಿಯಲ್ಲಿ ಸಂತಾನಪ್ರಕ್ರಿಯೆ’ ಎಂಬ ಅಧ್ಯಾಯವನ್ನು ಅತ್ಯಂತ ಮುಜುಗರ ಪಟ್ಟುಕೊಂಡು
ಓದಿಹೇಳಿದ್ದು ಮರೆತಿಲ್ಲದಿರಬಹುದು. ಸಂಸ್ಕೃತ ಪಂಡಿತರು ‘ಹೇಲತಾ, ಹೇಲತೇ, ಹೇಲತಾಃ’ವನ್ನು ಕಂಠಪಾಠ ಮಾಡಿಸುತ್ತಿದ್ದುದು ನೆನಪಾದರೆ ಈಗಲೂ ನಗು ಬರಬಹುದು. ಎಲ್ಲ
ಶಿಕ್ಷಕರೂ ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ಘಳಿಗೆಯಲ್ಲಿ ನೆನಪಿಗೆ ಬರಬಹುದು.
ಆದರೆ ನಮ್ಮ ಸ್ಮೃತಿಪಟಲದಲ್ಲಿ ಅವರೊಬ್ಬ ಪಿಟಿ-ಮೇಷ್ಟ್ರು ಸಹ ಇದ್ದಾರಾ? ಅಥವಾ ಹೈಸ್ಕೂಲು
ಮುಗಿಯುತ್ತಿದ್ದಂತೆ ಹೆಚ್ಚುಕಮ್ಮಿ ನಿಂತೇಹೋದ ಗುಂಡು ಎಸೆತ, ಜಾವಲಿನ್ ಥ್ರೋ, ಕೋಕೋ, ಕಬ್ಬಡ್ಡಿ, ರಿಲೇ ಆಟಗಳ ಹಾಗೆ ಅವರೂ ನಮ್ಮ
ನೆನಪಿನ ಕೋಶದಿಂದ ಮರೆಯಾಗಿಹೋದರಾ? ಶಾಲೆಯ ದಿನಗಳು ಮುಗಿದು ಕಾಲೇಜು ಸೇರುವಷ್ಟರಲ್ಲಿ ಆ ಎಲ್ಲ ಆಟಗಳನ್ನು ಬಿಟ್ಟು, ಊರಲ್ಲಿ ಹುಡುಗರನ್ನು
ಸಂಘಟಿಸಿಕೊಂಡು ಕ್ರಿಕೆಟ್ಟೊಂದೇ ಸರ್ವಶ್ರೇಷ್ಠ ಆಟವೆಂಬಂತೆ ಆಡುತ್ತಾ, ವಿದ್ಯಾಭ್ಯಾಸ ಮುಗಿದು
ದುಡಿಯುವವರಾದಮೇಲಂತೂ ಯಾವ ಆಟ ಆಡುವುದಕ್ಕೂ ಸಮಯವಿಲ್ಲವೆಂಬಂತೆ ಬಿಜಿಯಾಗಿ, ಭಾರತದ ಕ್ರಿಕೆಟ್ ಇದ್ದಾಗಲೆಲ್ಲಾ
ಟೀವಿಯಲ್ಲಿ ಮುಳುಗಿ, “ನಮ್ ಕೋಹ್ಲಿ ಮುಂದೆ ನಿಮ್ ತೆಂಡೂಲ್ಕರ್ ಏನು ಮಹಾ?” ಎಂದು ಕೇಳುವ ಹೊಸ ಹುಡುಗರಿಗೆ ಉತ್ತರಿಸಲು ತಿಳಿಯದೇ ಒದ್ದಾಡುತ್ತಾ, ಬೊಜ್ಜು ಬೆಳೆಸಿಕೊಂಡು ಓಡಾಡುವ
ಅಂಕಲ್-ಆಂಟಿಯರಾಗಿಬಿಟ್ಟೆವಾ? ಇವತ್ತು ನಾವು ಟೀವಿಯಲ್ಲಿ ನೋಡುವ ಏಷ್ಯನ್, ಕಾಮನ್‌ವೆಲ್ತ್, ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ತಮ್ತಮ್ಮ ದೇಶವನ್ನು
ಪ್ರತಿನಿಧಿಸುತ್ತಾ, ಪದಕವನ್ನು ಗೆಲ್ಲಲ್ಲೇಬೇಕು ಅಂತ ಒದ್ದಾಡುತ್ತಾ, ಸೋತಾಗ ದುಃಖದಿಂದ – ಗೆದ್ದಾಗ ಆನಂದದಿಂದ ಕಣ್ಣೀರಿಡುತ್ತಾ, ಗೆಲುವೊಂದನ್ನೇ ಮಂತ್ರವಾಗಿಸಿಕೊಂಡು
ಬೆವರು ಹರಿಸುತ್ತಿರುವ ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಇದ್ದಿರಬಹುದಾದ ಒಬ್ಬ ಮೆಡ್ಲಿಸ್ಕೂಲ್-ಹೈಸ್ಕೂಲ್
ಸ್ಪೋರ್ಟ್ಸ್ ಟೀಚರನ್ನು ನಾವು ಕಲ್ಪಿಸಿಕೊಂಡೆವಾ?
ಎಂದೂ ಅಪ್ರಿಯರಾಗಿರಲಿಲ್ಲ ನಮಗೆ ಪಿಟಿ-ಮೇಷ್ಟ್ರು. ಯಾವತ್ತೂ ಹೊಡೆಯಲಿಲ್ಲ. ಯಾವಾಗಲೂ
ಹೆದರಿಸಲಿಲ್ಲ. ಎಲ್ಲೂ ಪ್ರಶ್ನೆಪತ್ರಿಕೆಯಲ್ಲಿ ಕಷ್ಟದ ಪ್ರಶ್ನೆಗಳನ್ನು ಹೆಣೆದು ನಮ್ಮನ್ನು ಫೇಲ್
ಮಾಡಲಿಲ್ಲ. ನೋಟ್ಸ್ ಬರೆಸಲಿಲ್ಲ, ಹೋಮ್‌ವರ್ಕ್ ಕೊಡಲಿಲ್ಲ. ಪಿಟಿ-ಮೇಷ್ಟ್ರು ನಮಗೆ ಆಟ ಹೇಳಿಕೊಟ್ಟರು. ನಮ್ಮನ್ನು ಓಡಿಸಿದರು.
ನಮ್ಮೊಂದಿಗೆ ಆಟವಾಡಿದರು. ನಮಗೆ ಕವಾಯತು ಮಾಡಿಸಿದರು. ‘ಕಮಾನ್, ಯು ಕ್ಯಾನ್ ಡೂ ಇಟ್’ ಎಂದು ಹುರಿದುಂಬಿಸಿದರು. ‘ಲೆಫ್ಟ್-ರೈಟ್ ಲೆಫ್ಟ್-ರೈಟ್’ ಎಂದು ಕೂಗುತ್ತಾ ನಮ್ಮ
ಹೆಜ್ಜೆಗಳಿಗೆ ಶಿಸ್ತು ಕಲಿಸಿದರು. ತಮ್ಮ ಉಸಿರನ್ನು ವಿಷಲ್‌ನ ಶಬ್ದ ಹೊರಡಿಸಲು ಖರ್ಚು ಮಾಡಿದರು.
ನಮ್ಮ ದೇಹಗಳನ್ನು ಹಗುರು ಮಾಡಿದರು.
ಪಿಟಿ-ಮೇಷ್ಟ್ರು ನಮ್ಮನ್ನು ಯಾವ್ಯಾವುದೋ ಊರಲ್ಲಿ ನಡೆಯುವ ಕ್ರೀಡಾಕೂಟಗಳಿಗೆ
ಸಮವಸ್ತ್ರದಲ್ಲಿ ಕರೆದುಕೊಂಡು ಹೋದರು. ಹತ್ತಾರು ಶಾಲೆಗಳ ಹುಡುಗ-ಹುಡುಗಿಯರೊಂದಿಗೆ ನಾವು
ಬೆರೆತೆವು. ನಮ್ಮ ಮೇಷ್ಟ್ರು ಬೇರೆ ಶಾಲೆಯ ಪಿಟಿ-ಮೇಷ್ಟ್ರುಗಳೊಂದಿಗೆ ಕೈ ಕುಲುಕಿ ಮಾತಾಡುವುದನ್ನು
ಹೆಮ್ಮೆಯಿಂದ ನೋಡಿದೆವು. ಪಕ್ಕದೂರ ಶಾಲೆಯ ಹುಡುಗರೊಂದಿಗೆ ನಾವು ಕಬ್ಬಡ್ಡಿ ಆಡುವಾಗ ನಮ್ಮ
ಮೇಷ್ಟ್ರು ಔಟಾದ ಹುಡುಗರೊಂದಿಗೆ ನಿಂತು ಶಕ್ತಿಯಾದರು. ದಡಿಯ ಎದುರಾಳಿ ಎರಗಿ ಬಂದಾಗ ‘ಬಕಾಪ್’
ಅಂದು ಧೈರ್ಯ ತುಂಬಿದರು. ಉದ್ದಜಿಗಿತದ ದೂರವನ್ನು ಪಟ್ಟಿ ಹಿಡಿದು ಅಳೆದರು. ಬಿದ್ದು ಮಾಡಿಕೊಂಡ
ಮಳ್ಳಂಡೆ ಗಾಯಕ್ಕೆ ಟಿಂಚರ್ ಹಚ್ಚಿದರು. ವಿದ್ಯಾರ್ಥಿನಿಯರ ರಿಲೇಯಲ್ಲಿ ಓಡಿ ಸುಸ್ತಾಗಿ ಬಂದ
ಹುಡುಗಿಗೆ ಗ್ಲುಕೋಸು ತಿನ್ನಿಸಿದರು. ಕೋಕೋ ಆಟದಲ್ಲಿ ತಾವೇ ಕಂಬವಾಗಿ ನಿಂತ ಅವರನ್ನು ನಾವು ಪ್ರದಕ್ಷಿಣೆ
ಹಾಕಿದೆವು.
ಹೊರಗೆ ಮಳೆ ಬಂದ ದಿನ, ಈ ದೈಹಿಕ ಶಿಕ್ಷಣದ ಮೇಷ್ಟ್ರು ನಮ್ಮನ್ನು ಕ್ಲಾಸ್‌ರೂಮಿನೊಳಗೇ ಕೂರಿಸಿಕೊಂಡು ದೇಶವಿದೇಶಗಳ
ಕ್ರೀಡಾಪಟುಗಳ ಸಾಧನೆಯ ಕಥೆ ಹೇಳಿದರು. ಮಿಲ್ಕಾಸಿಂಗ್ ಫ್ಲೈಯಿಂಗ್ ಸಿಖ್ ಆದ ಕಥೆಯನ್ನೂ, ಬ್ಲಾಕ್ ಪೀಲೆ ಹೇಗೆ ಫುಟ್‌ಬಾಲ್
ಪ್ರಿಯರಿಗೆ ಜ್ವರ ಹಿಡಿಸಿದ್ದ ಎಂಬುದನ್ನೂ, ಮೊಹಮ್ಮದ್ ಅಲಿ ಬಾಕ್ಸಿಂಗಿನ ದಂತಕಥೆಯಾದ ಪರಿಯನ್ನೂ, ಮಣಿಪುರದ ಒಂದು ಸಣ್ಣ ಹಳ್ಳಿಯಿಂದ ಬಂದ ಮೇರಿಕೋಮ್ ವಿಶ್ವ
ಮಟ್ಟಕ್ಕೆ ಏರಿದ ಸಾಹಸವನ್ನೂ ಮೈಜುಮ್ಮೆನಿಸುವಂತೆ ವಿವರಿಸಿ ಹೇಳಿದರು. “ಬರೀ ಕ್ರಿಕೆಟ್
ಕ್ರಿಕೆಟ್ ಅಂತ ಒಂದೇ ಜಪ ಮಾಡ್ಬೇಡ್ರೋ.. ಕ್ರಿಕೆಟ್ ಅಲ್ಲದೇನೂ ಬಹಳಷ್ಟು ಆಟಗಳು ಇವೆ
ಜಗತ್ತಲ್ಲಿ. ಅವುಗಳ ಕಡೇನೂ ಗಮನ ಹರಿಸಿ” ಅಂತ ಕಿವಿಮಾತು ಹೇಳಿದರು.
ಆಟೋಟಗಳಲ್ಲಿ ಮುಂದಿರುವ, ಲಘು ಶರೀರದ ಹುಡುಗ-ಹುಡುಗಿಯರು ಪಿಟಿ-ಮೇಷ್ಟ್ರಿಗೆ ಹೆಚ್ಚು ಪ್ರಿಯರಾಗುತ್ತಿದ್ದರು. ಆ
ವಿದ್ಯಾರ್ಥಿಗಳಿಗಾದರೂ ಅಷ್ಟೇ, ಪಿಟಿ-ಮೇಷ್ಟ್ರು ಉಳಿದೆಲ್ಲರಿಗಿಂತ ಅಚ್ಚುಮೆಚ್ಚು. ಶಾಲಾ ಮಟ್ಟದಲ್ಲಿ ಗೆದ್ದ
ವಿದ್ಯಾರ್ಥಿಗಳನ್ನು ವಲಯ ಮಟ್ಟಕ್ಕೆ, ವಲಯ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ತಾಲೂಕು-ಜಿಲ್ಲಾ ಮಟ್ಟಗಳಿಗೆ ಪಿಟಿ-ಮೇಷ್ಟ್ರು
ಬಸ್ಸಿನಲ್ಲಿ ಕರೆದುಕೊಂಡು ಹೋಗುವರು. ಅಲ್ಲಿ ಆ ವಿದ್ಯಾರ್ಥಿಯ ಲಗೇಜುಗಳನ್ನು ತಾವೇ ಹೊತ್ತು ಅವನ
ಜತೆಜತೆಗೆ ನಡೆವರು. ಅಲ್ಲಿಂದ ತನ್ನ ವಿದ್ಯಾರ್ಥಿ ಗೆದ್ದು ತಂದ ಪದಕಗಳನ್ನು ಹೆಮ್ಮೆಯಿಂದ ಇಡೀ
ಶಾಲೆಗೆ ತೋರಿಸುವರು. ಬಡ ವಿದ್ಯಾರ್ಥಿಯೊಬ್ಬ ಆಟದಲ್ಲಿ ಸಮರ್ಥನಿದ್ದಾನೆ ಎನಿಸಿದರೆ ತಮ್ಮದೇ
ದುಡ್ಡಿನಲ್ಲಿ ಅವನಿಗೆ ಸ್ಪೋರ್ಟ್ಸ್ ಶೂ ಕೊಡಿಸುವರು. ಸಣ್ಣ ಸಾಧನೆಗಳಿಗೂ ಬೆನ್ನು ತಟ್ಟುವರು. ಸೋಲುಗಳಿಗೆ
ಖಿನ್ನರಾಗದೇ ದೊಡ್ಡ ಗಮ್ಯಗಳೆಡೆಗೆ ಹೇಗೆ ನಡೆಯುವುದು ಎಂದು ಹೇಳಿಕೊಡುವರು.
ಇವತ್ತು ವಿಕಾಸ್ ಗೌಡ ಡಿಸ್ಕಸ್ ಎಸೆವ ಕಸುವಿನಲ್ಲಿ, ಸೈನಾ ನೆಹ್ವಾಲ್ ಸರ್ವ್ ಮಾಡುವಾಗಿನ ಚಾಕಚಕ್ಯತೆಯಲ್ಲಿ, ಅಭಿನವ್ ಬಿಂದ್ರಾ ದೃಷ್ಟಿ
ಕದಲಿಸದಂತೆ ಗುರಿ ಇಡುವಲ್ಲಿ, ದೀಪಾ ಕರ್ಮಕಾರ್, ಸಾಕ್ಷಿ ಮಲಿಕ್, ಪಿವಿ ಸಿಂಧು ಮುಂತಾದವರು ದೇಶಕ್ಕೆ ಹೆಮ್ಮೆ ತಂದಿರುವಲ್ಲಿ –ಹಿಂದೆಲ್ಲೋ ಅವರುಗಳ ಶಾಲಾದಿನಗಳಲ್ಲಿ
ಅವರ ಪ್ರತಿಭೆಯನ್ನು ಗುರುತಿಸಿ ಹುರಿದುಂಬಿಸಿದ ಪಿಟಿ-ಮೇಷ್ಟ್ರು ಸಹ ಇರುತ್ತಾರೆ. ಸುಸ್ತಾಗಿ
ನಿಂತ ಬಾಲಕನಿಗೆ ನೀರು-ಗ್ಲುಕೋಸು ಕೊಟ್ಟು ಪ್ರೋತ್ಸಾಹದ ಮಾತನ್ನಾಡಿರುತ್ತಾರೆ. ಶಿಸ್ತಿನ ಮೊದಲ
ಪಾಠ ಮಾಡಿರುತ್ತಾರೆ. ಈಗ ಟೀವಿಯ ಮುಂದೆ ಕೂತಿರುವ ಆ ಮೇಷ್ಟ್ರು, ತನ್ನ ವಿದ್ಯಾರ್ಥಿ ಯಾವುದೋ ದೇಶದಲ್ಲಿ ಕ್ರೀಡಾಂಗಣದಲ್ಲಿ ಆಡಿ
ಗೆಲ್ಲುತ್ತಿರುವುದನ್ನು ನೋಡಿ, “ನನ್ ಸ್ಟುಡೆಂಟು.. ನನ್ ಸ್ಟುಡೆಂಟು” ಅಂತ ಹೆಮ್ಮೆಯಿಂದ ತುಂಬುಗಣ್ಣಾಗಿ
ಅಕ್ಕಪಕ್ಕದವರನ್ನೆಲ್ಲ ಕರೆದು ತೋರಿಸಿರುತ್ತಾರೆ.
ನಮಗೆ ಅಕ್ಷರ-ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯುವ ಶಿಕ್ಷಕರ ದಿನದ ಈ ಸಂದರ್ಭದಲ್ಲಿ, ನಮ್ಮ ಶಾಲಾದಿನಗಳ ಶನಿವಾರದ
ಮುಂಜಾನೆಗಳ ಚಳಿ ಓಡಿಸುತ್ತಿದ್ದ, ನಮಗೆ ವಿವಿಧ ಆಟಗಳನ್ನು ಕಲಿಸಿದ, ನಮ್ಮೊಂದಿಗೇ ಕಲೆತು ಆಟವಾಡಿದ, ಸದಾ ಉತ್ಸಾಹದ ನಗು ಬೀರುತ್ತಿರುತ್ತಿದ್ದ ಪಿಟಿ-ಮೇಷ್ಟ್ರನ್ನೂ ನೆನಪು ಮಾಡಿಕೊಳ್ಳೋಣ.
ಅವರಿಗೊಂದು ಶುಭಾಶಯ ಹೇಳೋಣ.
[ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]
Saturday, July 02, 2016
ಬೇಡ್ಕಣಿ ಕ್ರಾಸ್
ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು
ಮೈಮರೆಯಬಾರದು.
ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಇಳಿವ
ಅಷ್ಟಗಲದ ಜಾರು-
ರಸ್ತೆಯಲ್ಲಿ ಬ್ರೇಕು ಗೀಕು ಸರಿಯಾಗಿರದ ಸೈಕಲ್ಲಿನಲ್ಲಂತೂ
ಹೋಗಲೇಬಾರದು.
ಅದೆಷ್ಟೋ ಅಪಘಾತಗಳಿಗೆ ಸಾಕ್ಷಿಯಾಗಿರುವ ಈ
ತಿರುವಿನಲ್ಲಿ,
ಸಂಜೆಯಾದರೆ ಸಾಕು, ನಿಮ್ಮ ಮಗ್ನತೆ ಭಗ್ನಗೊಳಿಸಲು ನೂರೆಂಟಾಕರ್ಷಣೆಗಳು-
ಆ ತಿರುವ ಕೊನೆಯೇ ದಿಗಂತವೆಂಬಂತೆ ಅಲ್ಲೇ ಇಳಿವ
ಕೆಂಪುಸೂರ್ಯ;
ಕತ್ತೆತ್ತಿದರೆ ಸಗ್ಗವಿಲ್ಲಿಯೇ ಎನ್ನುವ ಬೆಟ್ಟಸಾಲು;
ಅತ್ತಿತ್ತ ನೋಡಿದರೋ ದಿಕ್ಕೆಟ್ಟ ನವಿಲುಗಳು, ಹಾರುವ ಗಿಣಿವಿಂಡು,
ಗಿಡ್ಡಮರದ ಟೊಂಗೆಯಲ್ಲಿ ಕಿಲಿಗುಡುತ್ತ ಕುಣಿವ
ಪಿಕಳಾರ.
ಅಪರೂಪಕ್ಕೆ ನುಣುಪಾಗಿರುವ ರಸ್ತೆಯಂದಕ್ಕೆ
ಮನಸೋತು
ಪೆಡಲು ತುಳಿದಿರೋ, ಓಹೋ ಹಿಂದೆ ದಬ್ಬುವ ತೂರುಗಾಳಿ.
ಇವ್ಯಾವಕ್ಕೂ ಚಿತ್ತ ಕಲಕದೇ ದಿಟ್ಟತನದಲಿ ನೀವು
ರಸ್ತೆಯೆಡೆಗೇ ದಿಟ್ಟಿಯಿಟ್ಟು ನಡೆದಿರೋ- ಊಹುಂ,
ಆ ತಿರುವಿನಲ್ಲೇ ಸಿಗುತ್ತಾಳವಳು ಎಷ್ಟೋ ವರ್ಷದ
ತರುವಾಯ.
ಜತೆಗೆ ಇದ್ದಕ್ಕಿದ್ದಂತೆ ಸುರಿಯತೊಡಗುವ
ಮುಂಗಾರು ಮಳೆ.
ಬಿಡಿಸಿ ಹಿಡಿದ ಪುಟ್ಟ ಕೆಂಪು ಕೊಡೆ ಬೀಸಿ ಬಂದ
ಅಡ್ಡಗಾಳಿಗೆ
ಉಲ್ಟಾ ಆಗಿ, ತುಂತುರು ನೀರ
ಹನಿಗಳು ಅರಗಿಣಿಯ ಕೆನ್ನೆ,
ಅರೆಮುಚ್ಚಿದ ಕಣ್ಣು, ಅರೆಬಿರಿದ ತುಟಿಗಳ ಮೇಲೂ ಸೇಚನಗೊಂಡು,
ತ್ವರಿತ ಆತಂಕದ ಮೋಡಗಳು ಅವಳ ಮೊಗಕವಿದು
ನೀವದೇ ಹಳೆಯ ಪಡ್ಡೆ ಪ್ರೇಮಿಯಾಗಿ ಪರಿವರ್ತಿತರಾಗಿ
ಅದೇ ದೌರ್ಬಲ್ಯದ ಅದೇ ಹಳೆಹುಡುಗನಾಗಿ ಕ್ಷಣದಲ್ಲಿ
ಅವಳಿಗೆ ಸಹಾಯ ಮಾಡಲು ಹೋಗಿ,
ಮತ್ತೇನೋ ಹೊಳೆದು ಥಟ್ಟನೆ, ಮೋರೆ ತಿರುಗಿಸಿ, ಹತಾಶ ನಾಯಕನಾಗಿ...
ಬೇಡ್ಕಣಿ ಕ್ರಾಸು ಜುಗಾರಿ ಕ್ರಾಸಿನಂತಲ್ಲ.
ಮಳ್ಗದ್ದೆ ಇಳಕಲಿನ ಹಾಗೂ ಅಲ್ಲ.
ಲಿಂಗ್ದಳ್ಳಿಯ ತಿರುವಿಗೂ, ಅಮಚಿ ಸೇತುವೆಗೂ ಹೋಲಿಕೆಯೇ ಸಲ್ಲ.
ಸಿಲ್ಕ್ಬೋರ್ಡ್ ಜಂಕ್ಷನ್ನಿನಂತೆ ಜಂಗುಳಿಯೂ
ಇಲ್ಲ-
ಹಿಂದಡಿಯಿಡಲು. ತರೆಮರೆಸಿಕೊಳ್ಳಲು. ಕಳೆದುಹೋಗಲು.
ಮತ್ತೆ ಮನುಷ್ಯನಾಗಲು.
*
ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಇದೆಲ್ಲ ಮಾಯವಾಗಿ,
ಈಗಷ್ಟೆ ಕಂಡ ಅವಳು, ಹಳದಿ
ಚೂಡಿ, ಬಣ್ಣಕೊಡೆ,
ಸೋಕಿದ ಮಳೆನೀರು, ದಡಬಡಾಯಿಸಿ ಧಾವಿಸಿದ
ನೀವು
-ಎಲ್ಲ ಬರಿ ಭ್ರಮೆಯೆಂದರಿವಾಗಿ...
ಬಿಕೋರಸ್ತೆಯ ಮಧ್ಯದಲಿ ಬಿರ್ರನೆ ಚಲಿಸುತ್ತಿರುವ ನಿಮ್ಮ ಸೈಕಲ್
ಮತ್ತು ಎದುರಿಗೆ ಬರುತ್ತಿರುವ ಬೃಹತ್ ಲಾರಿ:
ಹ್ಯಾಂಡಲ್ ಎತ್ತ ತಿರುಗಿಸಬೇಕೆಂದು ಹೊಳೆಯದೆ
ಗಲಿಬಿಲಿಗೊಂಡು ಅತ್ತಿತ್ತ ನೋಡುವಷ್ಟರಲ್ಲಿ...
ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು
ಮೈಮರೆಯಬಾರದು.
Thursday, June 02, 2016
ಸಾಸ್ವೆ ಮಾವು
ಬಿಗ್‌ಬಜಾರಿನ ಪ್ರಖರ ದೀಪಬೆಳಕಲಿ
ಬೆಲೆಯ ಲೇಬಲ್ಲು ಹೊದ್ದು ಕೂತದ್ದಿಲ್ಲ..
ಮೇಳಗಳ ಮಳಿಗೆಯಲಿ ಮಂತ್ರಿವರ್ಯರ ಬಾಯಿ
ಸಿಹಿಮಾಡಿ ಫೋಟೋಗೆ ಪೋಸು ಕೊಟ್ಟದ್ದಿಲ್ಲ..
ರಟ್ಟಪೆಟ್ಟಿಗೆಯಲಿ ಘನಮಾಡಿ ತುಂಬಿಸಲ್ಪಟ್ಟು
ದೇಶಾಂತರ ರಫ್ತಾದದ್ದೂ ಇಲ್ಲ..
ಬೀದಿಬದಿಯ ತಳ್ಳುಗಾಡಿಯಲಿ ಬೀಳದಂತೆ ಪೇರಿಸ್ಪಟ್ಟು
ಮಾರಾಟವಾಗುವ ಭಾಗ್ಯ ಸಹ ಇಲ್ಲ..
ಕಾನನದ ಮಾಮರವೊಂದು ಮೈತುಂಬ ಪೂತು
ಇಬ್ಬನಿ ಬಿಸಿಲು ಗಾಳಿ ಮಳೆ ಕೋಗಿಲೆಕೂಗನ್ನೆಲ್ಲ ಸಹಿಸಿ
ಗೊಂಚಲುಗಳಲಿ ಮಿಡಿತೂಗಿ ಹಟಹಿಡಿದು ಮಾಗಿ ಹಣ್ಣಾಗಿ
ರಸದುಂಬಿ ಬೀಗಿ ಸಿಹಿಯಾಗಿ ಕೆಂಪಾಗಿ ಸಫಲತೆಯ ಪಡೆದು
ಊರ ಪೋರರಿಗೀಗ ಹಬ್ಬ.. ಹಿತ್ತಿಲ ಹಿಂದಿನ ಕಾಲುದಾರಿಯಲಿ
ಪುಟ್ಟಪಾದಗಳ ಓಡು. ಬಾಗುಮಟ್ಟಿಗಳೂ ತುರುಚಿಗಿಡಗಳೂ ಲೆಕ್ಕಕ್ಕಿಲ್ಲ.
ಮನೆಗಳನು ಮುಚ್ಚಿದರೂ ತೆರೆದೇ ಇರುವ ಈ ಕಾಡದಾರಿ
ಸೈಕಲ್ಲಿನಲ್ಲಿ ಬಂದವರನ್ನೂ ಟಯರ್ ಓಡಿಸಿಕೊಂಡು ಬಂದವರನ್ನೂ
ಒಟ್ಟಿಗೇ ತಲುಪಿಸುತ್ತದೆ ಸಾಸ್ವೆ ಮಾವಿನಮರದ ಬುಡಕೆ..
ತಣ್ಣೆಳಲ ಕೆಳಗೀಗ ಸರೀ ಬಡಿಗೆಗಾಗಿ ಹುಡುಕಾಟ
ಕಲ್ಲಲ್ಲೇ ಬೀಳಿಸುವೆವೆನ್ನುವ ಧೀರರ ಹಾರಾಟ
ಬೀಸಿ ಒಗೆದರೆ, ಪಕ್ಕದೂರ ನಾಚುಪೋರಿಯೂ ಮನಮೆಚ್ಚುವಂತೆ ಫಲಧಾರೆ
ಓಡಿ ಆಯುವ ಭರದಲ್ಲಿ ಚೂರೇ ಕೈತಾಕಿ ಕಣ್ತುಂಬ ಸಂಭ್ರಮತಾರೆ
ಬಡಿದು ಬೀಳಿಸಿ ಹೆಕ್ಕಿ ಗುಡ್ಡೆಹಾಕಿ ಇಡೀ ಹಣ್ಣು ಬಾಯೊಳಗಿಟ್ಟು
ರಸಹೀರಿ ಹೊಟ್ಟೆ ತುಂಬುವವರೆಗೂ ತಿಂದು ಕುಣಿದು ಕುಪ್ಪಳಿಸಿ
ನಾನಾ ಆಟವಾಡಿ ದಣಿದು ಅಲ್ಲೇ ತುಸು ವಿರಮಿಸಿ
ಇನ್ನೂ ಉಳಿದ ಹಣ್ಣುಗಳು ಬಕ್ಕಣದಲ್ಲೂ ಪುಟ್ಟ ಕೈಚೀಲದಲ್ಲೂ
ತುಂಬಿಸಲ್ಪಟ್ಟು ಮನೆ ಸೇರಿ, ಇಂದು ಮಧ್ಯಾಹ್ನದೂಟದ
ಸಾಸ್ವೆಯಲಿ ತೇಲುವ ಪುಟ್ಪುಟ್ಟ ಹಣ್ಣುಗಳು..
ಮೇಯ್ದು ಸಂಜೆ ಕೊಟ್ಟಿಗೆಗೆ ಮರಳಿದ ಗೌರಿ
ಹಾಕಿದ ಸಗಣಿಯಲ್ಲೂ ಪುಟ್ಪುಟ್ಟ ಓಟೆಗಳು.
ಸಾಸ್ವೆ ಮಾವಿನಹಣ್ಣು ಯಾವ ಮಾರ್ಕೆಟ್ಟಿನಲ್ಲೂ ಸಿಗುತ್ತಿಲ್ಲ...
ಆಪೋಸು ರಸಪುರಿಗಳ ನೀಟಾಗಿ ಕತ್ತರಿಸಿ ಸಿಪ್ಪೆ ಸಹ ತೆಗೆದು
ಪಿಂಗಾಣಿ ಬಟ್ಟಲಲಿ ಜೋಡಿಸಿ ಟೇಬಲಿನ ಮೇಲಿಟ್ಟಿದ್ದಾರೆ ಚಮಚದೊಂದಿಗೆ..
ಏಸಿಯಿಂದ ಬಂದ ತಂಪುಗಾಳಿಯಲ್ಲಿ ತೇಲಿಬರುತ್ತಿದೆ ಆ
ಕಾಡಮಾವಿನ ಮರದ ಸಾಸ್ವೆಹಣ್ಣಿನ ರುಚಿಯ ನೆನಪು..
ನೂರುಮರ ನಡುವೆ ಹೆಸರಿಲ್ಲದೆ ಹಸಿರಾಗಿ ತೂಗುವ ತುಂಬುತರು..
ಕಾಡುತ್ತಿದೆ ಆ ಕಾಡಹಾದಿ.. ಯಾರಾದರೂ ತಂದುಕೊಟ್ಟಿದ್ದರೆ
ರಾತ್ರಿಯಡುಗೆಗೆ ಸಾಸ್ವೆಗಾಗುತ್ತಿತ್ತು ಎಂದು ನಿಟ್ಟುಸಿರಿಡುವ ಅಮ್ಮ.

Wednesday, May 25, 2016
ಎಲ್ಲ ಹಕ್ಕಿಗಳಿಗೂ ಗೂಡು
‘ಯಾರಿಗೂ ಹೇಳ್ಬೇಡಿ’ ಅನ್ನೋ ಕೋಡ್ಲು ರಾಮಕೃಷ್ಣ ನಿರ್ದೇಶನದ ಸಿನೆಮಾ ನೋಡ್ತಿದ್ದೆ. ನೀವೂ ನೋಡಿರುತ್ತೀರಿ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗದ ಒಂದಷ್ಟು ಮಹಿಳೆಯರ ಕನಸನ್ನು ಬಂಡವಾಳ ಮಾಡಿಕೊಳ್ಳುವ ಒಬ್ಬಾತ, ತನ್ನ ಬುದ್ಧಿವಂತಿಕೆ ಮತ್ತು ನಯವಾದ ಮಾತುಗಳಿಂದ ಹೇಗೆ ಅವರನ್ನು ವಂಚಿಸುತ್ತಾನೆ ಎಂಬುದು ಸಿನೆಮಾ ಕತೆ. ಸಿನೆಮಾ ಪೂರ್ತಿ ಇರುವುದು ಒಂದು ವಟಾರದಲ್ಲಿನ ಗೃಹಿಣಿಯರ ಸ್ವಂತ ಮನೆ ಮಾಡುವ ಮಹದಾಸೆಯ ಸುತ್ತ. ಬಾಡಿಗೆ ಮನೆಯ ಸಂಕಷ್ಟಗಳೂ, ಸ್ವಂತ ಮನೆ ಇಲ್ಲ ಎಂಬುದು ಒಂದು ಮಾನಸಿಕ ಕೊರಗೇ ಆಗಿಬಿಡುವ ಪರಿಯೂ, ಸ್ವಗೃಹವೆಂಬ ಮರೀಚಿಕೆಯ ಬೆನ್ನೇರಿ ಹೊರಟ ಬಡ ಮತ್ತು ಮಧ್ಯಮ ವರ್ಗದವರ ಪಾಡು –ಎಲ್ಲವೂ ಈ ಚಿತ್ರದಲ್ಲಿ ಅತ್ಯದ್ಭುತವಾಗಿ ಬಿಂಬಿತವಾಗಿವೆ ಎಂದರೆ ನೀವು ‘ಚೆನ್ನಾಗ್ ಹೇಳಿದ್ರಿ’ ಎನ್ನದೇ ಇರಲಾರಿರಿ.
ನಮ್ಮ ಶಾಲೆಯ ಎರಡನೆಯ ಇಯತ್ತೆಯ ಕನ್ನಡ ಪಠ್ಯದಲ್ಲಿ ‘ನಮ್ಮ ಮನೆ’ ಎಂಬ ಪಾಠವೊಂದಿತ್ತು. ಈ ಪಾಠದಲ್ಲಿ ಇದ್ದ ಮನೆ, ಒಳಾಂಗಣ, ಮನೆಯಲ್ಲಿನ ಪೀಠೋಪಕರಣಗಳು, ಮನೆಯ ಹೊರಗಿನ ವಾತಾವರಣಗಳ ವಿವರಗಳನ್ನೆಲ್ಲ ನಾವು ವಿದ್ಯಾರ್ಥಿಗಳು ನಮ್ನಮ್ಮ ಮನೆಗಳಿಗೆ ಹೋಲಿಸಿ ರೋಮಾಂಚಿತರಾಗುತ್ತಿದ್ದೆವು. ನಮ್ಮ ಮಾಸ್ತರರೂ ಈ ಪಾಠ ಮಾಡಿದ ಮರುದಿನದ ಹೋಂವರ್ಕಾಗಿ ನಮ್ನಮ್ಮ ಮನೆಗಳ ಸ್ವರೂಪವನ್ನು ವಿವರವಾಗಿ ಬರೆದುಕೊಂಡು ಬರುವಂತೆ ಹೇಳಿರುತ್ತಿದ್ದರು. ನಮ್ಮ ಮನೆಯನ್ನು ಕೂಲಂಕುಷವಾಗಿ ನಾವು ನೋಡಿದ್ದೂ ಆಗಲೇ. ಮನೆಗೆ ಎಷ್ಟು ಮೆಟ್ಟಿಲಿದೆ, ಜಗುಲಿಯಲ್ಲಿ ಎಷ್ಟು ಕುರ್ಚಿಯಿದೆ, ಅಡುಗೆಮನೆಯ ನಾಗಂದಿಗೆ ನಮ್ಮ ಕೈಗೆ ಸಿಗದಂತಿದೆ, ಅಪ್ಪ-ಅಮ್ಮ ಮಲಗುವ ಮಂಚದ ಕೆಳಗೇನಿದೆ, ಅಜ್ಜಿಯ ಕೋಲು ಯಾಕೆ ಬಾಗಿಲ ಹಿಂದೇ ಅಡಗಿಕೊಂಡಿರುತ್ತೆ, ನಾಯಿ ಜಾಕಿಯ ಮಲಗುವ ಮೂಲೆಗೆ ಕಟ್ಟಿದ ಸರಪಳಿ ಎಷ್ಟುದ್ದವಿದೆ ಎಂಬೆಲ್ಲ ವಿವರಗಳು ಅದೇ ಮೊದಲ ಸಲ ದಾಖಲಾದವು.
ನಮ್ಮ ಮನೆಯ ಮಾಡು ಸೋಗೆಯಿಂದ ಹೆಂಚಿಗೆ ಬಡ್ತಿ ಪಡೆದ ಕತೆಯನ್ನು ಅಪ್ಪ ಆಗಾಗ ಹೇಳುತ್ತಿದ್ದ. ಅಜ್ಜ ಕಟ್ಟಿಸಿದ್ದ ಮಣ್ಣು ಗೋಡೆಯ ಮನೆಗೆ ಹೆಂಚು ಹೊದಿಸುವ ಮೂಲಕವೇ ತನ್ನ ಅಧಿಕಾರವನ್ನು ಶುರು ಮಾಡಿದ ಅಪ್ಪ, ಆಮೇಲೆ ಆ ಮನೆ ಕೆಡವಿ ಹೊಸ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದದ್ದು ಒಂದು ಸಾಹಸಗಾಥೆಯೇ. ಅನೇಕ ಮಳೆಗಾಲಗಳನ್ನು ಕಂಡಿದ್ದ ಆ ನಮ್ಮ ಮನೆಯ ಮಣ್ಣಿನ ಗೋಡೆಗಳನ್ನು ಇಲಿಗಳು ಕೊರೆದು ದೊರಗು ಮಾಡಿದ್ದರೆ, ಬಾಗಿಲು-ಕಿಟಕಿ-ಕಂಬಗಳನ್ನು ವರಲೆ ಹುಳುಗಳು ತಿಂದು ಜೀರ್ಣ ಮಾಡಿದ್ದವು. ಹೆಂಚಿನ ಮಾಡಿಗೆ ಹಾಕಿದ್ದ ಅಡಿಕೆ ದಬ್ಬೆಗಳಂತೂ ಪೂರ್ತಿ ಲಡ್ಡಾಗಿ ಜೋರು ಗಾಳಿಯೋ ಮಳೆಯೋ ಬಂದರೆ ಸೂರೇ ಕಳಚಿ ಬೀಳಬಹುದೆಂಬ ಭಯವೂ ಇತ್ತು. ಮನೆಗೆ ಬಂದ ನೆಂಟರು ಅಕಸ್ಮಾತ್ ಕತ್ತೆತ್ತಿ ಮೇಲೆ ನೋಡಿದರೆ ಬೆಚ್ಚಿ ಬೀಳುವಂತೆ ಮಾಡು ಒಂದು ಕಡೆ ವಾಲಿತ್ತು ಸಹ. ಹೀಗಾಗಿ ಈ ಅಭ್ಯಾಗತರನ್ನು ಭಯಮುಕ್ತಗೊಳಿಸಲು ನಾವು ಬಿಳಿಯ ಸಿಮೆಂಟ್ ಚೀಲಗಳನ್ನು ಹೊಲಿದು ದೊಡ್ಡ ಶೀಟ್ ಮಾಡಿ ಇಡೀ ಮನೆಗೆ ‘ಫಾಲ್ ಸೀಲಿಂಗ್’ ಥರ ಹೊದಿಸಿಬಿಟ್ಟಿದ್ದೆವು. ಜೋರು ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದ್ದ ನೀರು ಈ ಫಾಲ್ ಸೀಲಿಂಗ್ ಮೇಲೆ ಶೇಖರಗೊಂಡು ಅಲ್ಲಲ್ಲೇ ಜೋತುಕೊಂಡಿರುತ್ತಿತ್ತು. ಹಾಗೆ ಶೇಖರಗೊಂಡ ನೀರನ್ನು ನಾವು ಅಲ್ಲಲ್ಲೇ ಒಂದು ದಬ್ಬಣ ಹೆಟ್ಟಿ ಕೆಳಗೆ ಬಕೆಟ್ ಹಿಡಿದು ಬಸಿದುಕೊಳ್ಳುತ್ತಿದ್ದೆವು.
ಅಡಿಕೆಗೆ ರೇಟ್ ಬಂದ ಒಂದು ವರ್ಷ ಅಪ್ಪ ಈ ಮನೆ ಕೆಡವಿ ಹೊಸ ಮನೆ ಕಟ್ಟಿಸುವುದಾಗಿ ಘೋಷಿಸಿದ. ಆಟವಾಡುವಾಗ ಮರಳಿನಲ್ಲೋ, ಮಣ್ಣಿನಲ್ಲೋ, ಕೋಲಿನಿಂದಲೋ ಮನೆ ಕಟ್ಟಿಯಷ್ಟೇ ಗೊತ್ತಿದ್ದ ನನಗೆ, ಹೊಸದೊಂದು ವಾಸದ ಮನೆ ಕಟ್ಟಬೇಕು ಎಂದರೆ ಅದಕ್ಕೆ ಎಷ್ಟು ಹಣ ಬೇಕು, ಅಪ್ಪ ಅದನ್ನು ಎಲ್ಲಿಂದ ಹೊಂದಿಸುತ್ತಾನೆ, ಎಷ್ಟು ಪರಿಶ್ರಮ ಬೇಕು –ಎಂಬ್ಯಾವುದರ ಅರಿವೂ ಇರಲಿಲ್ಲವಷ್ಟೇ? ಆದರೆ ಅಪ್ಪನಿಗೆ ಅದು ಹೇಗೆ ಎಲ್ಲಾ ಕೂಡಿ ಬಂತೋ, ಎರಡು ವರ್ಷದೊಳಗೆ ಹೊಸ ಮನೆ ಎದ್ದು ನಿಂತಿತು. ಆ ಮನೆ ಕಟ್ಟುವಷ್ಟು ಕಾಲ ನಾವು ಬಾವಿಮನೆಯ ಪುಟ್ಟ ಜಾಗದಲ್ಲಿ ಇದ್ದುದು. ಹಳೇ ಮನೆ ಕೆಡವುವ ಭಾವಪೂರ್ಣ ಸನ್ನಿವೇಶದಿಂದ ಹೊಸ ಮನೆಗೆ ಒಕ್ಕಲಾಗುವ ಸಂತೋಷದ ಘಳಿಗೆಯವರೆಗೆ ದಿನಗಳು ನೋಡನೋಡುತ್ತ ಕಳೆದವು. ಫೌಂಡೇಶನ್ ಹಾಕುವುದೇನು, ದಿನವೂ ಕ್ಯೂರಿಂಗ್ ಮಾಡುವುದೇನು, ಮರಳು-ಜಲ್ಲಿಗಳ ಲಾರಿಗಳಿಗೆ ಕಾಯುವುದೇನು, ಮಟಗೋಲಿಟ್ಟು ಅಳೆಯುತ್ತ ಇಟ್ಟಿಗೆಗಳನ್ನು ಜೋಡಿಸುವ ಮೇಸ್ತ್ರಿಯ ಕೆಲಸ ನೋಡುವುದೇನು, ಬಂದವರೆಲ್ಲ ಹೊಸಹೊಸ ಐಡಿಯಾ ಕೊಡುವುದೇನು, ವಾಸ್ತು ಪ್ರಕಾರ ಕಟ್ಟಿ ಅಂತ ಹೆದರಿಸುವವರೇನು, ಕಳ್ಳನಾಟಕ್ಕಾಗಿ ರಾತ್ರಿ ಕಾರ್ಯಾಚರಣೆ ನಡೆಸುವುದೇನು, ವಾಸ್ತುಬಾಗಿಲಿಗೆ ಆಚಾರಿ ಹೂಬಳ್ಳಿ ಕೆತ್ತುವಾಗ ಪಕ್ಕ ನಿಂತು ವೀಕ್ಷಿಸುವುದೇನು, ಸ್ಲಾಬ್ ಹಾಕುವ ದಿನ ನೂರಾರು ಕೆಲಸಗಾರರಿಗೆ ಅಡುಗೆ ಮಾಡುವುದೇನು... ಓಹೋಹೋ! ಮೇಸ್ತ್ರಿಗಳು, ಆಚಾರಿಗಳು, ವೈರಿಂಗಿನವರು, ಟೈಲ್ಸ್ ಹಾಕುವವರು, ಪೇಂಟಿಂಗ್ ಮಾಡುವವರು –ಹೀಗೆ ಬೇರೆಬೇರೆ ವಿಭಾಗದ ಹತ್ತಾರು ಜನಗಳ ಜೊತೆಗೆ ಹೆಣಗಾಡುತ್ತ, ಮನೆ ಕಟ್ಟಿ ಮುಗಿಯಿತು ಎಂಬಷ್ಟರಲ್ಲಿ ‘ಮನೆ ಕಟ್ಟಿ ನೋಡು’ ಅನ್ನೋ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬ ಅರಿವು ನಮಗೆಲ್ಲ ಆಗಿತ್ತು. ಅಂತೂ ಅಪ್ಪ ಸಾಧಿಸಿಯೇಬಿಟ್ಟಿದ್ದ. ನೂತನ ಗೃಹಪ್ರವೇಶಕ್ಕೆ ಬಂದವರೆಲ್ಲ ‘ಚನಾಗಿದೆ’, ‘ಸಖತ್ ಪ್ಲಾನ್ ಮಾಡಿ ಕಟ್ಸಿದೀರಿ’, ‘ಎಲ್ಲೂ ಸ್ವಲ್ಪ ಜಾಗಾನೂ ವೇಸ್ಟ್ ಮಾಡಿಲ್ಲ’ ಅಂತೆಲ್ಲ ಹೊಗಳಿ ನಮ್ಮ ಹಿಗ್ಗು ಹೆಚ್ಚಿಸಿದ್ದರು.
ಅಂತೂ ಊರ ಮೊದಲ ಆರ್ಸಿಸಿ ಮನೆಯಾಗಿ ನಮ್ಮ ಮನೆ ಥಳಥಳ ಹೊಳೆಯಿತು. ಹಿಂದೆಯೇ ಕಟ್ಟಲ್ಪಟ್ಟ, ನಮ್ಮ ಮನೆಗಿಂತ ಬೃಹತ್ತಾದ, ಮೆತ್ತು-ಮೇಲ್ಮೆತ್ತುಗಳೂ ಇರುವ, ಆದರೂ ಹಳೇ ಶೈಲಿಯ ಹೆಂಚು ಹೊದಿಸಿದ ನಮ್ಮೂರ ಅನೇಕ ಮನೆಗಳಿಗಿಂತ ನಮ್ಮ ಮನೆಯೇ ಪುಟ್ಟಗೆ ಚೆನ್ನಾಗಿದೆ ಅಂತ ನಮಗೆ ನಾವೇ ಅಂದುಕೊಂಡೆವು. ‘ನಿಮ್ಮನೆ ಹಳ್ಳಿಮನೆ ಥರಾನೇ ಇಲ್ಲ, ಪೇಟೆ ಮನೆ ಇದ್ದಂಗಿದೆ’ ಅಂತ ಯಾರಾದರೂ ಹೇಳಿದರೆ ಅದು ಹೊಗಳಿದ್ದೋ ತೆಗಳಿದ್ದೋ ಗೊತ್ತಾಗದೆ ಒದ್ದಾಡಿದೆವು. ಸಿಮೆಂಟಿನ ಗೋಡೆಗಳಿಗೆ ಕನ್ನ ಕೊರೆಯಲಾಗದೆ ಇಲಿಗಳು ಈಗ ಹಳೆಯ ಕೊಟ್ಟಿಗೆಮನೆ ಸೇರಿದವು. ಪಾಲಿಶ್ ವಾಸನೆಯ ಮರಮಟ್ಟುಗಳು ಗೆದ್ದಲು ಹುಳುಗಳಿಗೆ ಇಷ್ಟವಾಗಲಿಲ್ಲ. ಹೀಗಾಗಿ, ಹಳೇಮನೆಯಲ್ಲಿ ಅನೇಕ ಜೀವಿಗಳೊಂದಿಗೆ ಒಂದಾಗಿ ಸಹಜೀವನ ನಡೆಸುತ್ತಿದ್ದ ನಾವು, ಈ ಹೊಸಮನೆಯಲ್ಲಿ ಮನುಷ್ಯರು ಮಾತ್ರ ಜೀವಿಸುವಂತಾಯ್ತು. ನಮ್ಮ ಪುಣ್ಯಕ್ಕೆ ಒಂದೆರಡು ತಿಂಗಳಲ್ಲಿ ಹಲ್ಲಿಗಳೂ, ನೊಣಗಳೂ ಮನೆಯೊಳಗೆ ಸೇರಿಕೊಂಡು ನಮಗೆ ಕಂಪನಿ ಕೊಟ್ಟವು.
‘ದಟ್ಟ ಹಸಿರು-ಅಲ್ಲಲ್ಲಿ ಮನೆ’ ಎಂಬಂತಿರುವ ಹಳ್ಳಿಯಿಂದ, ‘ಎಲ್ಲೆಲ್ಲೂ ಮನೆಗಳು-ಅಲ್ಲಲ್ಲಿ ಹಸಿರು’ ಎಂಬಂತಿರುವ ನಗರಕ್ಕೆ ಬಂದಮೇಲೆ ಮನೆಗಳ ಬಗ್ಗೆ ಇರುವ ನನ್ನ ಕಲ್ಪನೆಯೇ ಬದಲಾಯಿತು. ಮನೆ ಎಂದರೆ ಬರೀ ಕಟ್ಟಡವಲ್ಲ, ಅದೊಂದು ಸಜೀವ ಭಾವಕೋಶ ಎಂದುಕೊಂಡಿದ್ದ ನನ್ನ ಊಹನೆಯನ್ನು ತೊಡೆದುಹಾಕಿದ್ದು ಈ ನಗರ. ಮನೆ ಎಂದರೆ ಕಳೆ ತುಂಬಿದ ಅಂಗಳ, ಜಗುಲಿಯ ಟೇಬಲ್ಲಿನ ಮೇಲಿನ ಕವಳದ ಹರಿವಾಣ, ನಡುಮನೆಯ ಕತ್ತಲು, ಅಡುಗೆಮನೆ ಗ್ಯಾಸ್ಕಟ್ಟೆ ಮೇಲೆ ಕೂತು ಹೇಳಿದ ಕತೆ, ಬೆಡ್ರೂಮಿನ ಮಂಚದ ಕೆಳಗೆ ಪೇರಿಸಿರುವ ಚೀನೀಕಾಯಿ, ಹಿತ್ತಿಲ ಕಟ್ಟೆಯ ಹರಟೆಗೆ ಸಾಥಿಯಾಗುವ ತಂಗಾಳಿ, ಬಾವಿಯ ನೀರಲ್ಲಿ ಪ್ರತಿಫಲಿತ ಗಡಗಡೆಯ ಬಿಂಬ, ಕೊಟ್ಟಿಗೆಯಲ್ಲಿನ ಹೊಸ ಪುಟ್ಟಿಕರುವಿನ ಜಿಗಿತ, ಅಟ್ಟದ ಕಂಬಕ್ಕೆ ಸಿಕ್ಕಿಸಿದ ಕುಡುಗೋಲು ...ಎಂಬೆಲ್ಲ ಚಿತ್ರಗಳನ್ನು ಅಳಿಸಿಹಾಕಿ, ಮನೆ ಎಂದರೆ ಒಂದೋ-ಎರಡೋ-ಮೂರೋ ಬಿಎಚ್ಕೆಗಳಲ್ಲಿ ಅಳೆಯಲ್ಪಡುವ, ಬಾಡಿಗೆಗೆ ಕೊಡಲೆಂದೇ ಕಟ್ಟಿಸಿದ ಬೆಂಕಿಪೊಟ್ಟಣಗಳಂತ ಅಚೇತನ ನಿಕೇತನಗಳು ಎಂಬ ವಿಷಯ ಅರಗಿಸಿಕೊಳ್ಳಲೇ ಕಷ್ಟವಾಗಿತ್ತು.
ಆದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವುದೇ ಮನುಷ್ಯನ ಸ್ವಭಾವವಲ್ಲವೇ? ಹೀಗಾಗಿ ದುಡಿಮೆಯ ಜಿದ್ದಿಗೆ ಬಿದ್ದು ನಗರ ಸೇರಿದ ನಾನೂ ಈ ಪುಟ್ಪುಟ್ಟ ಮನೆಗಳಲ್ಲೇ ಸೌಂದರ್ಯ ಹುಡುಕುವ ಅನಿವಾರ್ಯತೆಗೆ ಸಿಲುಕಿದೆ. ಬಾಡಿಗೆ ಮನೆಗೆಂದು ಬೀದಿಬೀದಿ ಅಲೆಯುವ, ಟು-ಲೆಟ್ ಬೋರ್ಡುಗಳನ್ನು ದೂರದಿಂದಲೇ ಗುರುತಿಸುವ, ರಿಯಲ್ ಎಸ್ಟೇಟ್ ಏಜೆಂಟುಗಳ ಜತೆ ಗುದ್ದಾಡುವ, ಓನರುಗಳ ಜತೆ ವ್ಯವಹರಿಸುವ, ಒಂದು ಮನೆಯಿಂದ ಮತ್ತೊಂದು ಮನೆಗೆ ಆಗಾಗ ಪೆಟ್ಟಿಗೆ ಕಟ್ಟುವ ಜಾಣ್ಮೆ ಬೆಳೆಸಿಕೊಂಡೆ. ಹೀಗೆ ಮನೆಯೊಂದನ್ನು ಪ್ರವೇಶಿಸುವಾಗ ಯಾರೋ ತೊಟ್ಟು ಬಿಟ್ಟ ಬಟ್ಟೆ ತೊಡುತ್ತಿದ್ದೇನೆ ಎನ್ನುವಂತ ಅವಮಾನವೇನೂ ಆಗುತ್ತಿರಲಿಲ್ಲ. ಈ ಮನೆಗಳೂ ಈಗಾಗಲೇ ಯಾರ್ಯಾರೋ ಇದ್ದು ಹೋಗಿದ್ದ ಜಾಗವಿದು ಎಂಬ ಲಕ್ಷಣಗಳನ್ನೆಲ್ಲ ತೊಡೆದುಹಾಕುವಂತೆ ಒಮ್ಮೆ ಬಣ್ಣ ಹೊಡೆಸಿಕೊಂಡು, ಸಣ್ಣ-ಪುಟ್ಟ ರಿಪೇರಿ ಮಾಡಿಸಿಕೊಂಡು ಚಂದ ಪ್ರಸಾದನಕ್ಕೊಳಗಾಗಿ ಹೊಸ ಅತಿಥಿಯನ್ನು ಸ್ವಾಗತಿಸುವವು. ನಗರಕ್ಕೆ ಬ್ಯಾಚುಲರ್ರಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ, ಟೆರೇಸಿನ ಮೇಲಿನ ಒಂಟಿಕೋಣೆಯಿಂದ ಗ್ರೌಂಡ್ ಫ್ಲೋರಿನ ಥ್ರೀ ಬಿಎಚ್ಕೆ ಮನೆಯವರೆಗೆ, ಒಂಟಿಯಿಂದ ಜಂಟಿಯಾಗಿ ಮಕ್ಕಳೊಂದಿಗನಾಗಿ ಸಂಸಾರವನ್ನು ಬೆಳೆಸುತ್ತ ಸದೃಢನಾಗುತ್ತ ಹೋಗುವುದನ್ನು ಈ ನಿರ್ಜೀವ ಕಟ್ಟಡಗಳು ತಮ್ಮ ಸಿಮೆಂಟಿನ ಕಣ್ಣುಗಳಿಂದ ನೋಡುವವು. ಬರೀ ಒಂದು ಚಾಪೆ, ಬಟ್ಟೆಗಂಟು, ನಾಲ್ಕು ಪಾತ್ರೆಗಳೊಂದಿಗೆ ಶುರುವಾಗಿದ್ದ ಅವನ ಜೀವನ, ಬೆಳೆಯುತ್ತ ಬೆಳೆಯುತ್ತ ಒಂದು ಲಾರಿಯಲ್ಲಿ ಹಿಡಿಸಲಾಗದಷ್ಟು ಸಾಮಗ್ರಿಗಳ ಆಗರವಾಗುವುದಕ್ಕೆ ನಗರದ ಮನೆಗಳು ಸಾಕ್ಷಿಯಾಗುವವು.
ಮತ್ತು ಹಾಗೆ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ವರ್ಗವಾಗುತ್ತ ಈಗ ಗ್ರೌಂಡ್ ಫ್ಲೋರಿನ ಮನೆಯಲ್ಲಿರುವ ಈತನ ಮುಂದಿನ ವಾಸ್ತವ್ಯ ‘ಸ್ವಂತ ಮನೆ’ಯಲ್ಲಿ ಎಂಬುದೂ ಸ್ಪಷ್ಟ. ‘ಪ್ರತಿ ಸಲ ಮನೆ ಬದಲಿಸ್ಬೇಕಾದ್ರೂ ಸಾಮಾನು ಸೇರ್ಸೀ ಸೇರ್ಸೀ ಸಾಕಾಯ್ತು ನಂಗೆ.. ಇನ್ನೊಂದ್ ವರ್ಷ ಬಿಟ್ಟು ನೀವು ಮತ್ತೆ ಶಿಫ್ಟ್ ಮಾಡ್ತೀನಿ ಅಂದ್ರೆ ನಾನಂತೂ ಬರಲ್ಲ. ಸ್ವಂತ ಮನೆ ಮಾಡಿ, ಪರ್ಮನೆಂಟಾಗಿ ಒಕ್ಕಲಾಗೋಣ’ ಎಂಬ ಹೆಂಡತಿಯ ಚಿತಾವಣೆಗೆ ಮಣಿದ ಗಂಡ ನಿಧಾನಕ್ಕೆ ಬ್ಯಾಂಕ್ ಅಕೌಂಟಿನಲ್ಲಿ ಎಷ್ಟು ಸೇವಿಂಗ್ಸ್ ಇದೆ, ಚೀಟಿ ಹಣ ಎಷ್ಟು ಬರಬಹುದು, ನನ್ನ ಯೋಗ್ಯತೆಗೆ ಎಷ್ಟು ಸಾಲ ಸಿಗಬಹುದು ಎಂಬೆಲ್ಲ ಲೆಕ್ಕಾಚಾರಕ್ಕೆ ಬೀಳುತ್ತಾನೆ. ‘ಈಗೆಲ್ಲಾ ಸೈಟ್ ತಗೊಂಡು ಮನೆ ಕಟ್ಟಿಸಿ ಉದ್ಧಾರ! ಅಲ್ಲದೇ ಸೈಟ್ ಸಿಕ್ಕರೂ ಅದು ನಗರದ ಹೊರಭಾಗದಲ್ಲಿ ಸಿಗೋದು. ಅಲ್ಲಿ ಮನೆ ಕಟ್ಟಿಕೊಂಡು ಅಷ್ಟೆಲ್ಲ ದೂರದ ಆಫೀಸಿಗೆ ಈ ಟ್ರಾಫಿಕ್ಕಲ್ಲಿ ದಿನಾ ಓಡಾಡ್ತೀಯಾ? ಸುಮ್ನೇ ಒಂದು ಫ್ಲಾಟ್ ತಗೋ. ಈ ಬಾಡಿಗೆ ಕಟ್ಟೋ ದುಡ್ಡಲ್ಲೇ ಸಾಲದ ಕಂತು ಕಡ್ಕೊಂಡು ಹೋದ್ರೆ ಆಯ್ತು’ ಎಂಬ ಗೆಳೆಯರ ಸಲಹೆ ಇವನನ್ನು ಯೋಚಿಸುವಂತೆ ಮಾಡುತ್ತದೆ. ನಿಜವಾಗಿಯೂ ಫ್ಲಾಟ್ ಕೊಳ್ಳುವಷ್ಟು ಹಣ, ಆಮೇಲೆ ಆ ಸಾಲ ತೀರಿಸುವಷ್ಟು ಶಕ್ತಿ ತನ್ನಲ್ಲಿದೆಯಾ ಎಂಬ ವಿಶ್ಲೇಷಣೆಗೆ ತೊಡಗುತ್ತಾನೆ. ದಿನವೂ ನ್ಯೂಸ್ಪೇಪರುಗಳಲ್ಲಿ ನೋಡಿ ಉಪೇಕ್ಷಿಸುತ್ತಿದ್ದ ಜಾಹೀರಾತುಗಳೆಡೆಗೆ ಕಣ್ಣು ಹಾಯುತ್ತದೆ. ಯಾರೋ ಎಲ್ಲೋ ಮನೆ ಖರೀದಿಗಿದೆ ಎಂದಾಗ ಕಿವಿ ನೆಟ್ಟಗಾಗುತ್ತದೆ.
ನಗರದ ತುಂಬ ಮಾರಲೆಂದೇ ಕಟ್ಟಿದ ಅಪಾರ್ಟ್ಮೆಂಟುಗಳು, ಬಾಡಿಗೆ ಕೊಡಲೆಂದೇ ಕಟ್ಟಿದ ಮನೆಗಳ ನಡುವಿನ ರಸ್ತೆಯಲ್ಲಿ ನಿರಾಶ್ರಿತ ಉದ್ಯೋಗಾಕಾಂಕ್ಷಿ ಒಂಟಿಯಾಗಿ ನಡೆಯುತ್ತಾನೆ. ಪಾರ್ಕಿನ ಬೆಂಚಿನ ಮೇಲೆ ಕೂತು, ಅಲ್ಲೇ ಪಕ್ಕದ ಮರದ ಮೇಲೆ ಹೊಸ ಗೂಡು ಕಟ್ಟುತ್ತಿರುವ ಹಕ್ಕಿಯೊಂದರ ಚುರುಕು ಕೆಲಸ ನೋಡುತ್ತಾನೆ. ಚಿಲಿಪಿಲಿಗುಟ್ಟಲೂ ಸಮಯವಿಲ್ಲವೆಂಬಂತೆ ಹೊಂಚಿ ತಂದ ಕಡ್ಡಿಗಳನ್ನು ಜೋಡಿಸಿ ಹೊಲಿಯುವಲ್ಲಿ ನಿರತವಾಗಿರುವ ಹಕ್ಕಿ, ಆ ಗಡಿಬಿಡಿಯಲ್ಲೂ ಓರೆಗಣ್ಣಲ್ಲಿ ಇವನೆಡೆಗೆ ನೋಡುತ್ತದೆ. ಆ ನೋಟದಿಂದ, ಚಿಕ್ಕವನಿದ್ದಾಗ ಹಕ್ಕಿ ಹಿಡಿಯಲು ತನ್ನೊಂದಿಗೆ ಕಾಡಿಗೆ ಬರುತ್ತಿದ್ದ ಗೆಳೆಯನ ನೆನಪಾಗುತ್ತದೆ. ಕಳೆದ ಸಲ ಊರಿಗೆ ಬಂದಾಗ ಫೋನ್ ನಂಬರ್ ಕೊಟ್ಟುಹೋಗಿದ್ದು ಹೊಳೆದು, ಪಾಕೀಟಿನಲ್ಲಿ ತಡಕಾಡಿ, ಅಲ್ಲೇ ಕಾಯ್ನ್ ಬೂತಿನಿಂದ ಒಂದು ಫೋನ್ ಮಾಡಿಯೇಬಿಡುತ್ತಾನೆ. ‘ಬಾರೋ ಗೆಳೆಯಾ... ಕೆಲಸ ಸಿಕ್ಕು ಬಾಡಿಗೆ ಮನೆ ತೆಗೆದುಕೊಳ್ಳುವಷ್ಟು ಚೈತನ್ಯ ಬರುವವರೆಗೂ ನಮ್ಮನೆಯಲ್ಲೇ ಇರು. ಸ್ವಲ್ಪಾನೂ ಸಂಕೋಚ ಪಟ್ಕೋಬೇಡ’ ಎಂಬ ಭರವಸೆ ಅತ್ತಲಿಂದ ಸಿಕ್ಕಿದ್ದು ಈತನ ಮುಖಭಾವದಿಂದಲೇ ಗೊತ್ತಾಗುತ್ತದೆ. ಎಲ್ಲ ಹಕ್ಕಿಗಳಿಗೂ ಗೂಡು ಕಲ್ಪಿಸುವ ಈ ನಗರದ ಅಗಾಧತೆ ಮತ್ತು ಇನ್ನೂ ಉಳಿದುಕೊಂಡಿರುವ ಆತ್ಮೀಯತೆಯೆಡೆಗೆ ಬೆರಗಾಗುತ್ತದೆ. ಪಾರ್ಕಿನ ಮರದ ಹಕ್ಕಿಯೆಡೆಗೆ ಕೃತಜ್ಞತೆಯಲ್ಲಿ ಕಣ್ಣು ಮಿಟುಕಿಸುತ್ತಾನೆ.
ನಗರದ ಏಕತಾನತೆ ಎಲ್ಲರಿಗೂ ಈಗ ಬೇಸರ ತಂದಿದೆ. ಮೊನ್ನೆ ಹೆಂಡತಿ ಹೇಳುತ್ತಿದ್ದಳು: ‘ಇನ್ನೊಂದಷ್ಟು ವರ್ಷ ಇಲ್ಲಿದ್ದು ದುಡ್ಡು ಮಾಡಿಕೊಂಡು ಊರಿಗೆ ಹೋಗಿಬಿಡೋಣ. ಹೇಗೂ ನಿಮ್ಮಪ್ಪ ಕಟ್ಟಿಸಿದ ಮನೆ ಗಟ್ಟಿಮುಟ್ಟಾಗಿ ಚೆನ್ನಾಗಿದೆ. ಅದರ ಮೇಲೆ ಇನ್ನೊಂದು ಫ್ಲೋರ್ ಕಟ್ಟಿಸಿ ಮೇಲೆ ಹೆಂಚು ಹೊದಿಸೋಣ. ಮತ್ತೆ ಆರ್ಸಿಸಿ ಬೇಡ. ಹಳ್ಳಿಮನೆ ಅಂದ್ರೆ ಹಳ್ಳಿಮನೆ ಥರಾನೇ ಇರ್ಬೇಕು. ಬೇಕಿದ್ರೆ ಪಕ್ಕದಲ್ಲಿ ಒಂದು ಸೋಗೆಯ ಗುಡಿಸಲು ಕಟ್ಟಿಸಿ ಹೋಮ್ಸ್ಟೇ ಶುರು ಮಾಡೋಣ. ಈಗಂತೂ ಈ ಪೇಟೆ ಮಂದಿಗೆ ಹಸಿರು-ನೀರು-ಮಣ್ಣು ರಸ್ತೆ ಇರೋ ಹಳ್ಳಿಗಳಿಗೆ ಹೋಗಿ ಗುಡಿಸಲುಗಳಂತಹ ಮನೆಯಲ್ಲಿ ಇದ್ದು ವೀಕೆಂಡ್ ಕಳೆದು ಬರೋದು ಶೋಕಿಯಾಗಿಬಿಟ್ಟಿದೆ. ಒಂದು ವೆಬ್ಸೈಟ್ ಮಾಡಿ ಸ್ವಲ್ಪ ಪ್ರಚಾರ ಕೊಟ್ರೆ ಆಯ್ತು’ ಅಂತ.
ಹತ್ತಾರು ವರ್ಷದ ಹಿಂದೆ, ಊರಿಗೆ ಒಂದೇ ಆರ್ಸಿಸಿ ಮನೆ ಅಂತ ನಾವು ಖುಷಿ ಪಟ್ಟಿದ್ದು ನೆನಪಾಯಿತು. ಈಗ ಊರಲ್ಲೂ ಅನೇಕ ಹೊಸಮನೆಗಳು ಎದ್ದುನಿಂತಿವೆ. ಒಂದೆಡೆ ಆಧುನಿಕತೆಯ ಹೆಸರಲ್ಲಿ ತಳುಕು-ಬಳುಕು ಮೆರೆಯುತ್ತಿದ್ದರೆ, ಇನ್ನೊಂದೆಡೆ ಪುರಾತನಕ್ಕೆ ಮರಳುವ – ಅದೇ ಚಂದ ಎಂದು ಹೇಳುವ ಮನಸುಗಳೂ ಜಾಸ್ತಿಯಾಗುತ್ತಿವೆ. ಗಗನಚುಂಬಿ ಕಟ್ಟಡಗಳು, ಇಟಾಲಿಯನ್ ಸ್ಟೈಲ್ ಕಿಚನ್, ಫಳಫಳ ಗ್ರಾನೈಟ್ ನೆಲಹಾಸು, ಪಿಂಗಾಣಿಯ ಸಿಂಕು, ಬಿಳಿಬಿಳಿ ಬಚ್ಚಲಲ್ಲಿನ್ನ ಬಾತ್ಟಬ್ಬು, ಇತ್ಯಾದಿಗಳ ಮೆರವಣಿಗೆಯ ಜತೆಜತೆಯಲ್ಲೇ, ಹಳ್ಳಿಯ ಸಾದಾಸೀದಾ ಮನೆಗಳು, ಮರದ ಕೆತ್ತನೆ ಕಂಬಗಳು, ಕೆಂಪು ಗಾರೆ ನೆಲ, ಮಾಳಿಗೆಯ ಮುಚ್ಚಿಗೆ, ಬಚ್ಚಲ ಹಂಡೆಯ ನೀರು, ಹಳೆಯ ಪೀಠೋಪಕರಣಗಳಿಂದ ಕೂಡಿದ ತಾವುಗಳೆಡೆಗಿನ ಆಕರ್ಷಣೆ ಹೆಚ್ಚಾಗುತ್ತಿದೆ. ಸರಳತೆಯಲ್ಲೇ ಮನೆಗಳಿಗೊಂದು ಆಪ್ತತೆ ಬರುತ್ತದೆ ಎಂಬ ಭಾವ ಮತ್ತಷ್ಟು ದೃಢವಾಗುತ್ತಿದೆ.
ಅಪ್ಪನಿಗೆ ಫೋನ್ ಮಾಡಿ ಹೆಂಡತಿ ಹೇಳಿದ ವಿಚಾರ ಅರುಹುತ್ತೇನೆ. ‘ಈಗ ಇರೋ ಮನೇನೆ ಗುಡಿಸಿ-ಸಾರಿಸಿ ಮಾಡೋರ್ ಇಲ್ಲ, ಇನ್ನು ಮೇಲೆ ಬೇರೆ ಕಟ್ಟಿಸಿದ್ರೆ ಏನೋ ಗತಿ?’ ಅಂತ ಕೇಳುತ್ತಾನೆ. ‘ತಾಳು ತಾಳು, ಅದೆಲ್ಲಾ ಬೇರೇನೇ ಪ್ಲಾನ್ ಇದೆ’ ಅಂತಂದು ನಗುತ್ತಾ ನಾನು ಫೋನ್ ಇಡುತ್ತೇನೆ. ಈ ಸಂಭಾಷಣೆಯನ್ನು ಕದ್ದಾಲಿಸಿದ ಅಡುಗೆ ಮನೆಯ ಮೂಲೆಯಲ್ಲಿದ್ದ ಒಂದಷ್ಟು ಇರುವೆಗಳು ಎಲ್ಲಿ ತಮಗೆ ಶಿಕ್ಷೆಯಾಗುತ್ತದೋ ಎಂಬ ಭಯಕ್ಕೊಳಗಾದಂತೆ ಚುರುಕಾಗಿ ಓಡಿ ಗೂಡು ಸೇರಿಕೊಳ್ಳುತ್ತವೆ.
[ವಿಶ್ವವಾಣಿ 'ವಿರಾಮ'ದ 'ಮನೆ' ಬಗೆಗಿನ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.]

Subscribe to:
Posts (Atom)