ತನ್ನ ಪುಟ್ಟ ಬೆರಳುಗಳಲ್ಲಿ ಪೆನ್ನು ಹಿಡಿದು
ಬರೆಯುತ್ತಿದ್ದಾಳೆ ಮಗಳು ಬಿಳಿಹಾಳೆಯಲ್ಲಿ
ಹೀಗೇ ಒಂದೊಂದಕ್ಷರ ಕಲಿತು
ಆಮೇಲವನ್ನು ಜೋಡಿಸಿ ಪದಗಳಾಗಿಸಿ
ಪದಕೆ ಪದ ಪೋಣಿಸಿ ವಾಕ್ಯ ರಚಿಸಿ
ವಾಕ್ಯದ ಮುಂದೆ ವಾಕ್ಯವನಿಟ್ಟು ಮಹಾಪ್ರಬಂಧ ಬರೆದು
ಈ ನಡುವೆ ಆಕೆಗೆ ಗೀಚುವುದು ಬಿಟ್ಟು ಹೋಗಿರುತ್ತೆ
ಇಷ್ಟು ದಿನ ಗೋಡೆ ನೆಲ ಟೇಬಲು ಅಪ್ಪನ ಪುಸ್ತಕ
ಅಮ್ಮನ ಬಿಳಿಯಂಗಿ ತನ್ನದೇ ಮೈಕೈ-
ಗಳ್ಯಾವುದರಲೂ ಭೇದವೆಣಿಸದೆ
ಮನಸಿಗೆ ಬಂದುದ ಗೀಚುತ್ತಿದ್ದ ಮಗಳು
ಈಗ ಅಕ್ಷರಗಳನರಿತು
ಬರೆವುದ ಕಲಿತ ಮೇಲೆ ಗೀಚುವ ಹಾಗಿಲ್ಲ
ನಡೆವುದ ಕಲಿತ ಮೇಲೆ ಬೀಳುವ ಹಾಗಿಲ್ಲ
ಮಾತು ಕಲಿತ ಮೇಲೆ ತೊದಲುವ ಹಾಗಿಲ್ಲ
ಮುಗ್ದತೆಯ ತೊಡೆಯಲೆಂದೇ ಇರುವ
ಈ ಜಗದ ರೀತಿಗೆ ಬಲಿಯಾದ ಮಗಳು
ಒಂದೊಂದಾಗಿ ಕಲಿಯುತ್ತ ಕಲಿಯುತ್ತ
ಆಮೇಲೆ ನಾವೂ ಈ ಮನೆ ಬದಲಿಸಿ
ಮಾಲೀಕರು ಗೋಡೆಗೆ ಹೊಸ ಬಣ್ಣ ಬಳಿಸಿ
ಇನ್ನೆಂದೂ ಕಾಣಿಸದಂತೆ ನನ್ನ ಮಗಳ ಗೀಚು
ಹಳೇ ಪರಿಚಯ ಹಳೇ ನೆನಪುಗಳ
ಮೆಲುಕು ಹಾಕೋಣವೆಂದು
ಮತ್ತೆ ಆ ಮನೆಗೆ ಬಂದರೆ ಮೊಂದೊಂದು ದಿನ
ಗೋಡೆಯ ಹೊಸ ಬಣ್ಣಪದರದ ಮೇಲೆ
ಹೊಸ ಬಾಡಿಗೆದಾರರ ಮಗುವಿನ ಮುದ್ದುಗೀಚು
ಈಗಾಗಲೇ ದೊಡ್ಡವಳಾಗಿಹೋಗಿರುವ ಮಗಳು
ತನಗಿಂತ ಸಣ್ಣ ವಯಸಿನ ಆ ಮಗುವಿಗೆ
ಗೋಡೆಯ ಮೇಲೆ ಗೀಚಬಾರದೆಂದು
ತಿಳಿ ಹೇಳುತ್ತಿದ್ದಾಳೆ.
Tuesday, November 03, 2020
ಗೀಚು
Tuesday, September 22, 2020
ಅಕ್ಷಯ ಕಾವ್ಯದ ಅಕ್ಷಯ ಓದು
ಈ ದಿನ ಹೇಳಿಯೇಬಿಡುವೆನೆಂದು ಅವಳೂ
ಎಷ್ಟೊಂದು ದೂರ ನಡೆದರು
ಅಣಬೆಗಳ ಹುಡುಕುತ್ತ
‘ಅಕ್ಷಯ ಕಾವ್ಯ’ ಎಂಬ ಈ ಹೊತ್ತಗೆಯನ್ನು ನಾನು ತಂದಿಟ್ಟುಕೊಂಡು ಎರಡು ವರ್ಷದ ಮೇಲಾಯಿತು. ಈ ದಿನ ಓದಿ ಮುಗಿಸಿಯೇಬಿಡುತ್ತೇನೆಂದು ಎಷ್ಟು ಸಲ ಅದನ್ನು ಕೈಗೆತ್ತಿಕೊಂಡಿಲ್ಲ... ಆದರೆ ಮುಗಿಸಲು ಸಾಧ್ಯವಾಗಿಯೇ ಇಲ್ಲ. ಮುಗಿಸುವುದಿರಲಿ, ಕೆಲವೊಂದು ಸಲ ಎರಡ್ಮೂರು ಪುಟದ ಮುಂದೆ ಹೋಗಲಿಕ್ಕೂ ಸಾಧ್ಯವಾಗಿಲ್ಲ. ಹಾಗಾದರೆ ಇದು ಅಷ್ಟೊಂದು ಸಂಕೀರ್ಣವಾದ ಗ್ರಂಥವೇ? ಹಾಗೂ ಅನಿಸಿಲ್ಲ. ಸರಳ ಶಬ್ದಗಳು, ಸರಳ ವಾಕ್ಯಗಳು, ಸರಳ ಪ್ರತಿಮೆಗಳು, ಎಲ್ಲೂ ಗಂಟಲಿಗೆ ಸಿಕ್ಕದ ಮೃದು ಆಹಾರವೇ. ಆದರೂ, ಈ ಎರಡು ವರ್ಷಗಳಲ್ಲಿ ಕನಿಷ್ಟ ನೂರು ಸಲ ಈ ಪುಸ್ತಕ ನನ್ನ ಕೈಗಳನ್ನಲಂಕರಿಸಿದ್ದರೂ, ‘ಓದಿ ಮುಗಿದ ಪುಸ್ತಕ’ಗಳ ಗುಂಪಿಗೆ ಇದನ್ನು ಸೇರಿಸಲಾಗುತ್ತಿಲ್ಲ ಯಾಕೆ?
ಬಹುಶಃ ಈ ಪುಸ್ತಕದ ಹೆಗ್ಗಳಿಕೆಯೇ ಅದು. ಗದ್ಯಸಾಹಿತ್ಯವನ್ನೇ ಹೆಚ್ಚು ನೆಚ್ಚಿಕೊಂಡಿದ್ದ ನಾನು ಈಗ ಏಳೆಂಟು ವರ್ಷಗಳಿಂದ ಕಾವ್ಯದ ಹುಚ್ಚಿಗೆ ಬಿದ್ದು, ‘ಹೊಸ ತರಹದ್ದು’ ಅಂತ ಕಂಡ ಕಾವ್ಯವನ್ನೆಲ್ಲ ಆಸೆ ಪಟ್ಟು ಕೊಂಡು ಓದಿ, ಕೆಲವಷ್ಟು ಸಲ ಅದರದೇ ಪ್ರಭಾವಕ್ಕೊಳಗಾಗಿ ಬರೆಯುತ್ತಿರುವವನು. ನವ್ಯದ ರುಚಿಗೆ ಮಾರುಹೋದವನು. ಆದಿಪ್ರಾಸ-ಅಂತ್ಯಪ್ರಾಸ-ಗಣ-ಪ್ರಸ್ತಾರಗಳ ಹಂಗು ಮುರಿದಮೇಲೂ ಕವಿ ಹೇಗೆ ಲಯ ಕಂಡುಕೊಂಡ ತನ್ನ ಕಾವ್ಯದಲ್ಲಿ? ಹೇಗೆ ತನ್ನ ರಚನೆ ಅಕಾವ್ಯವಾಗುವುದನ್ನು ತಪ್ಪಿಸಿದ? ಹೇಗೆ ವಸ್ತುವೊಂದು ಕವಿತೆಯಾಗಿ ರೂಪುಗೊಳ್ಳುತ್ತೆ? -ಎಂಬುದು ನನಗೆ ಇನ್ನೂ ಆಶ್ಚರ್ಯದ ವಿಷಯ. ಹೀಗಿರುವಾಗ, ಖಚಿತ ಸಂಗತಿಯಿಲ್ಲದ, ನಿಶ್ಚಿತ ವಾಹಿನಿಯಿಲ್ಲದ, ಲಿಖಿತ ಕ್ರಮವಿಲ್ಲದ, ಬದ್ಧ ರೂಪವಿಲ್ಲದ ಅಖಂಡ ಬರಹವೊಂದು ಹೇಗೆ ಕಾವ್ಯವಾಗಿ ಮೈತಳೆಯುತ್ತದೆ?
‘ಅಕ್ಷಯ ಕಾವ್ಯ’ವನ್ನು ಓದುವಾಗೆಲ್ಲ ನನ್ನನ್ನು ಕಾಡುವ ಪ್ರಶ್ನೆಗಳು ಇವು. ಇಲ್ಲಿ ಬರುವ ತೊಂಬತ್ತು ಪ್ರತಿಶತ ಕಥೆಗಳು-ಉಲ್ಲೇಖಗಳ ಪರಿಚಯ ನನಗಿಲ್ಲ. ಗೂಗಲ್ ಮಾಡಿದರೆ ತಿಳಿಯುತ್ತಿತ್ತೇನೋ, ಆದರೆ ಯಾವತ್ತೂ ಆ ಗೋಜಿಗೆ ಹೋಗಿಲ್ಲ. ತಿಳಿದುಕೊಳ್ಳಬೇಕು ಅಂತ ಅನಿಸಿಯೇ ಇಲ್ಲ. ಇಷ್ಟಕ್ಕೂ ಈ ಪುಸ್ತಕವನ್ನು ‘ಅರ್ಥ ಮಾಡಿಕೊಳ್ಳಬೇಕು’ ಅಂತಲೇ ನನಗೆ ಇದುವರೆಗೆ ಅನಿಸಿಲ್ಲ. ಆದಾಗ್ಯೂ ಇದು ನಿರರ್ಥಕ ಓದು ಎಂಬ ಭಾವನೆ ಬಂದಿಲ್ಲ!
ಕಸ ಪಿಪಾಯಿಯೊಳಗೆರಡು ನಾಯಿಗಳು
ಅಂಡ ಅಂಡಾಶಯ ಕಂಫೀಟುಗಳ ಜಾಲಾಡಿಸುತ್ತಿವೆ
ಸಕಲರೂ ಕಾಯುತ್ತ ಭಿಕ್ಷುಕರೂ ಹಾಗೇ
ಸೇಂಟ್ ಥಾಮಸ್ ಅಕ್ವಿನಾಸ್ ಹೇಳಿದ ಹಾಗೆ
ಕಾರಣ ವಿನಾ ಕಾರ್ಯವಿಲ್ಲ
ಮನುಷ್ಯರ ದೃಷ್ಟಿಗಳ ಕತ್ತರಿಸುವ ಹಾಗೆ
ಯುಗಾಂತರದ ಗಾಡಿ
-ಈ ಸಾಲುಗಳಲ್ಲಿ ಬರುವ ಸೇಂಟ್ ಥಾಮಸ್ ಅಕ್ವಿನಾಸ್ ಯಾರು? ನನಗೆ ಅದು ಮುಖ್ಯ ಅಂತ ಅನಿಸಿಯೇ ಇಲ್ಲ. ಹುಡುಕಿದರೆ ಅವನೊಬ್ಬ ಇಟಲಿ ದೇಶದ ಫಿಲಾಸಫರ್ ಅಂತ ಗೊತ್ತಾಗುತ್ತಿತ್ತು. ಅಂವ ಏನು ಬರೆದ, ಏನೇನು ಮಾಡಿದ, ಯಾಕೆ ಹಾಗೆ ಹೇಳಿದ –ಎಲ್ಲಾ ವಿಷಯ ಸಂಗ್ರಹಿಸಬಹುದಿತ್ತು. ಆದರೆ ಕವಿತೆಯ ಓದನ್ನು ಮುಂದರಿಸಿಕೊಂಡು ಹೋಗಲು ನನಗೆ ಯಾವ ತೊಡಕೂ ಆಗಲಿಲ್ಲ. ಹಾಗೆಯೇ ಈ ಪುಸ್ತಕದಲ್ಲಿ ಬರುವ ಅರಬೀ ಸಮುದ್ರವೋ, ಅರಾರತ್ ಪರ್ವತವೋ, ಮೆಡಿಟರೇನಿಯನ್ ಬಿಸಿಲೋ, ರೋಡಿನ್‌ನ ಶಿಲ್ಪವೋ, ಬಾಮಿಯಾನಿನ ಬುದ್ಧನೋ –ನಾನು ಕಂಡವಲ್ಲ. ಇದರೊಳಗೆ ಪ್ರಸ್ತಾಪ ಮಾಡಲಾಗಿರುವ ಯಾವ್ಯಾವುದೋ ದೇಶಗಳ ಯಾವ್ಯಾವುದೋ ಭಾಷೆಗಳ ಕವಿಗಳ ಸಾಲುಗಳು ನಾನೆಂದೂ ಓದಿದವಲ್ಲ. ಮೆಂಡೆಲ್‌ಸ್ಟಾಮ್ ಬರೆದ ಒಂದು ಕವಿತೆಯನ್ನೂ ನಾನು ಓದಿದಂತಿಲ್ಲ. ಹಾಗಿದ್ದೂ ನನ್ನ ಓದು ಆ ಸಾಲುಗಳಲ್ಲಿ ನಿಲ್ಲಲಿಲ್ಲ. ಯಾಕೆಂದರೆ, ಈ ಗುಚ್ಛಗಳಲ್ಲಿ ನನ್ನ ನಿಲುಕಿಗೆ ಸಿಗದ ಯಾವುದೋ ದೇಶಭಾಷೆಗಳ ದಾರ್ಶನಿಕರ ಜತೆ ನನ್ನದೇ ದೇಶದ ನನ್ನದೇ ಜನವೂ ಏಕಕಾಲದಲ್ಲಿ ಇದ್ದಾರೆ. ನನಗೆ ಅಷ್ಟೇನು ಪರಿಚಿತವಲ್ಲದ ಸೂಫಿ ಭಜನೆಯ ಕೆಳಸಾಲುಗಳಲ್ಲೇ ಡಿಸೆಂಬರ್ ಬಂದರೆ ನನ್ನ ಕಿವಿಗೆ ಬೀಳುವ ಅಯ್ಯಪ್ಪ ಭಕ್ತರ ಭಜನೆ ಸದ್ದು ಇದೆ. ಅಮೆರಿಕೆಯ ಅಪರಿಚಿತ ಓಣಿಯ ಜತೆಜತೆಗೇ ಪರ್ಕಳದ ಬೀದಿಯೂ ಇದೆ. ಜಪಾನೀ ನಾಟಕದ ದೃಶ್ಯದ ಬೆನ್ನ ಹಿಂದೆಯೇ ವಿವಿಧಭಾರತಿಯ ಗಾನವಿದೆ.
ಬಹುಶಃ ಇದೇ ಕಾರಣಕ್ಕೆ ಈ ಕೃತಿ ನನ್ನನ್ನು ಹಿಡಿದಿಟ್ಟುಕೊಂಡಿರುವುದು. ಪೂರ್ತಿ ಅರ್ಥವಾಗುವುದಿಲ್ಲ, ಆದರೆ ಇದರಲ್ಲೇನೋ ಅರ್ಥವಿದೆ ಅಂತ ಅನಿಸುತ್ತದೆ. ತಿಳಿದವರು ಹೇಳುವಂತೆ, ಕಾವ್ಯದ ಸಾರ್ಥಕತೆಯೂ ಅಷ್ಟೆಯೇ ಅಲ್ಲವೇ? ಯಾವುದೇ ಕವಿತೆ ಕಾಡಬೇಕಾದರೆ ಅದು ಪೂರ್ತಿ ಅರ್ಥವಾಗಬಾರದು: ಇದರಲ್ಲಿ ‘ಇನ್ನೇನೋ ಇದೆ, ಇನ್ನೇನೋ ಇದೆ’ ಅನ್ನಿಸುತ್ತಿರಬೇಕು!
ಒಂದು ದಿನ ನಾನೂ ಕೆಲವು ಮಹಾವಾಕ್ಯಗಳ ಬರೆಯುವೆ
ಬರೆದು ಸರ್ಕಸ್ ಡೇರೆಗಳ ಸುತ್ತ ಆಡಲು ಬಿಡುವೆ
ಅವು ಕಂಡವರ ಮನಸ್ಸುಗಳ ಸೇರಲಿ ಎನ್ನುವೆ
ಕೆಲವು ಅಲ್ಲೇ ಉಳಿದಾವು
ಕೆಲವು ವಾಪಸು ಬರುತ್ತವೆ
ಬಂದಾಗ ಅವಕ್ಕೆ ಗಾಯಗಳಾಗಿರುತ್ತವೆ
ಮಹಾವಾಕ್ಯಗಳು ಈ ಕಾವ್ಯದಲ್ಲಿ ಇಲ್ಲವೆಂದೇ ಹೇಳಬೇಕು. ಇಲ್ಲಿ ಉದುರಿದ ಹಕ್ಕಿಯ ಪುಕ್ಕವೂ ಹಾರುತ್ತದೆ. ಹಗ್ಗದ ಮೇಲೆ ಒಣಹಾಕಿದ ಅಂಗಿ ಗಾಳಿಗೆ ಅಲ್ಲಾಡುತ್ತದೆ. ಆಕಾಶ ನೋಡುತ್ತಾ ನಿಂತವಳ ಕಣ್ಣಲ್ಲಿ ನಕ್ಷತ್ರಗಳು ಮೆಲ್ಲಗೆ ತೇಲುತ್ತವೆ. ಕತ್ತಲೆ ಗಾಢವಾದಂತೆ ನೆರಳುಗಳು ಕರಗುತ್ತವೆ. ಓದುತ್ತಾ ಕುಳಿತ ನಾನು ಅದರಲ್ಲೇ ಮುಳುಗುತ್ತೇನೆ. ರಾಜಧಾನಿ ಎಕ್ಸ್‌ಪ್ರೆಸ್ ನನ್ನನ್ನು ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ಹುಸೇನ್‌ಸಾಗರದ ಬುದ್ಧನನ್ನು ತೋರಿಸುತ್ತದೆ. ಗಜಿಬಿಜಿಯ ಸಂತೆಯಲ್ಲಿ ಮಂಡಕ್ಕಿ ಕೊಳ್ಳುತ್ತೇನೆ. ಆಸ್ಪತ್ರೆ ಪಕ್ಕದ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತೇನೆ. ಹೂಗಳು ತುಂಬಿದ ಶೀತಲ ಕೊಳದಲ್ಲಿ ಸ್ನಾನ ಮಾಡುತ್ತೇನೆ. ದಟ್ಟಾರಣ್ಯದ ನಡುವಿನ ಕಣಿವೆಯ ಪಕ್ಕದಲ್ಲಿ ನಿಂತು ಬಟ್ಟೆ ಬದಲಿಸಿಕೊಳ್ಳುತ್ತೇನೆ. ರೋಡ್‌ರೋಲರ್ ಒಂದು ಮೈಮೇಲೆ ಹರಿದಂತಾಗುತ್ತದೆ. ಎಚ್ಚರಾದರೆ ನಮ್ಮೂರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದೇನೆ.
ಈ ಕೃತಿಯ ಓದು ನನಗೆ ವಿಶಿಷ್ಟ ಅನುಭವ ನೀಡಿದೆ. ನಾನಿದನ್ನು ನಿದ್ರೆ ಬಾರದ ನಡುರಾತ್ರಿಗಳಲ್ಲಿ ಎದ್ದು ಕೂತು ಓದಿದ್ದೇನೆ, ಕುಟುಂಬದ ಜತೆ ಪ್ರವಾಸ ಹೋದಾಗ ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದೇನೆ, ಊರಿನ ಮಳೆ ನೋಡುತ್ತಾ ಇದನ್ನು ಧೇನಿಸಿದ್ದೇನೆ, ಲಾಕ್‌ಡೌನ್ ಕಾಲದ ತಳಮಳದ ದಿನಗಳಲ್ಲಿ ಕೈಗೆತ್ತಿಕೊಂಡಿದ್ದೇನೆ. ಯಾವುದೋ ಪುಟ ತೆರೆದು ಏನೂ ನಿರೀಕ್ಷೆಯಿಲ್ಲದೆ ಸುಮ್ಮನೆ ಕಣ್ಣಾಡಿಸುತ್ತಾ ಕೂತಿದ್ದೇನೆ. ಇಲ್ಲಿನ ಕೆಲ ಸಾಲುಗಳು ವಿನಾಕಾರಣ ಸುಖ ಕೊಟ್ಟಿವೆ:
ಕಾದೆ ನಾನು ಇಡೀ ವರುಷ ಒಂದು ಕಿರುನಗೆಗೆ
ಬ್ರಹ್ಮಕಮಲವಾದರೂ ಅರಳಬೇಕಿತ್ತು ಇಷ್ಟರೊಳಗೆ
ಯಾವೂರ ಕಮಲಿ ನೀನು
ಸಾವಿರ ವರುಷ ಕಾಯುವುದು ಹೇಗೆ ನಾನು
ಬಹುಶಃ ಈ ಪುಸ್ತಕವನ್ನು ನನಗೆ ಓದಿ ಮುಗಿಸಲು ಸಾಧ್ಯವಿಲ್ಲ. ಅಥವಾ ಯಾವತ್ತಾದರೂ ಇದನ್ನು ಓದಿ ಮುಗಿಸಿದ್ದೇನೆಂದು ಹೇಳುವ ಧೈರ್ಯ ಮಾಡಲಾರೆ. ಯಾರಾದರೂ ಇದರ ಬಗ್ಗೆ ಹೇಳು ಎಂದರೆ ಸರಿಯಾಗಿ ಹೇಳಲೂ ಸಾಧ್ಯವಾಗದು. ಮತ್ತು ಯಾರಾದರೂ ಇದನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಅವಡುಗಚ್ಚಿ ಹಿಡಿದು ಓದಿ ಮುಗಿಸಬಹುದು ಅಂತಲೂ ನನಗನಿಸುತ್ತಿಲ್ಲ. ಇದೊಂದು ಮುಗಿಯದ ಮುಂಜಾವು. ಪೂರೈಸಲಾಗದ ಅಪರಾಹ್ನ. ಸಂಪನ್ನವಾಗದ ಸಂಧ್ಯೆ. ಅಂತ್ಯವಿರದ ಇರುಳು.
ಪ್ರಯೋಗಶೀಲತೆಯ ಉತ್ತುಂಗದಂತಿರುವ ಈ ಕಾವ್ಯಧಾರೆ ನನ್ನನ್ನು ಸದಾ ಎಚ್ಚರದಲ್ಲಿಟ್ಟಿರುತ್ತದೆ ಅಂತ ನಾನು ನಂಬಿದ್ದೇನೆ. ಇಲ್ಲಿನ ಸಾಲುಗಳಿಂದ ಪ್ರೇರಿತನಾಗಿ ನಾನೂ ಏನೇನೋ ಗೀಚಿದ್ದೇನೆ. ಮತ್ತೇನನೋ ಓದುವಾಗ ಇಲ್ಲಿಯ ಸಾಲುಗಳನ್ನು ನೆನಪಿಸಿಕೊಂಡಿದ್ದೇನೆ. ಓದುವ ನನಗೇ ಇದು ಮುಗಿಯದ ತಪನೆಯಾಗಿರುವಾಗ, ಬರೆದ ಕವಿಗೆ ಇದು ಇನ್ನೆಷ್ಟು ಕಾಡಿರಬಹುದು ಅಂತ ಕಲ್ಪಿಸಿಕೊಂಡು ಅಚ್ಚರಿಯಲ್ಲಿ ಕಂಪಿಸಿದ್ದೇನೆ. ಇಂಥದ್ದೊಂದು ಪ್ರಯೋಗದ ಮೋಹಕ್ಕೆ ಸಿಲುಕಿದ ಕವಿಯ ಸ್ಥಿತಿಯನ್ನು ಊಹಿಸಿಕೊಂಡಿದ್ದೇನೆ. ಬರೆದೇ ತೀರಿಸಿಕೊಳ್ಳಬೇಕಾದ ಈ ದಾಹ ಬರೆದು ಮುಗಿಸಿದಮೇಲಾದರೂ ಅವರಿಗೆ ತೀರಿತಾ? ಗೊತ್ತಿಲ್ಲ. ಆದರೆ ಒಂದಂತೂ ಸತ್ಯ: ಇದೊಂದು ಬಗೆಹರಿಯದ ಬೇಗೆಯಂತೆ ನನ್ನೊಂದಿಗೇ ಇರಲಿದೆ ಬಹಳ ಕಾಲ ತಣ್ಣಗೆ. ಇಂಥದ್ದೊಂದು ಹೊರೆಯನ್ನು ನನಗೆ ದಾಟಿಸಿದ ಕವಿಗೆ ನಮಸ್ಕಾರ. ಆ ಕಾವ್ಯಶಕ್ತಿಗೆ ಶರಣು.
Friday, August 28, 2020
ಅಮ್ಮದಕಣ್ಣನಿಗೆ
ಸಂಜೆಯಾಗುತ್ತಿದ್ದಂತೆಯೇ ಒಂದು ಬಂಡೆಯ ಮೇಲೆ ಕೂರುತ್ತೀ-
ತುಂಗಭದ್ರೆಯ ಜುಳುಜುಳುವಿಗೆ ಕಾಲು ತಾಕಿಸಿ ಧ್ಯಾನಸ್ಥನಾಗಿ
ಕೈಯಲ್ಲಿ ಗಾಳವಿದ್ದರೂ ಪಕ್ಕದಲ್ಲಿ ಬುಟ್ಟಿಯಿಲ್ಲ
ಸಿಕ್ಕ ಮೀನುಗಳನೆಲ್ಲ ವಾಪಸು ನೀರಿಗೆ ಬಿಡುತ್ತೀ
ಊರ ಹುಡುಗರು ನಿನ್ನ ನೋಡಿ ಹೆದರಿ ಓಡುವರು
ಜನವೆಲ್ಲ ನಿನ್ನ ಬಗ್ಗೆ ಏನೇನೋ ಆಡಿಕೊಳ್ಳುವರು
ಆದರೂ ನಿನ್ನದು ನಿಷ್ಕಂಪಿತ ನಡೆ
ಕಿವಿಯಿಲ್ಲದ ನೀನು ಹೇಗೆ ಎಲ್ಲವನೂ ಕೇಳುತ್ತೀ
ಮೂಗಿಲ್ಲದ ನೀನು ಹೇಗೆ ಎಲ್ಲವನೂ ಗ್ರಹಿಸುತ್ತೀ
ತೆಂಬಕಸ್ವಾಮಿಯ ದೇಗುಲದ ಘಂಟೆನಿನಾದದ ಪ್ರತಿಧ್ವನಿಯಲಿ
ಕಂಡುಕೊಂಡೆಯೇ ನಿಮ್ಮೂರ ದೇಗುಲದ ಢಂಡಣ
ತುಂಗಭದ್ರೆಯ ಒಡಲ ತಂಪಲಿ ಸಿಕ್ಕಿತೇ
ನಿಮ್ಮೂರ ನದಿನೀರ ಸೇಚನ
ಇಲ್ಲಿ ಸುರಿಯುತ್ತಿರುವ ಧೋಮಳೆಗಿದೆಯೇ
ಕಡಲ ಮೇಲಿನ ಮಳೆಯ ಮರೆಸುವಷ್ಟು ಕಸುವು
ಹಾಗೆ ಯಾರದೋ ಕಥೆ ಕೇಳಿ ಕಣ್ಣೀರಾಗಲು
ನಮ್ಮೊಳಗೂ ಒಂದು ಕಣ್ಣೀರ ಕಥೆಯಿರಬೇಕೆ?
ಹಾಗೆ ಯಾರಿಗೋ ನಿರಪೇಕ್ಷೆಯಿಂದ ಹೆಗಲಾಗಲು
ನಮ್ಮನೂ ಹೆಗಲು ಕೊಟ್ಟು ಯಾರಾದರೂ ಎಬ್ಬಿಸಿರಬೇಕೆ?
ಹಾಗೆ ನುಡಿ ಹೊರಡದವರ ದನಿ ಅರಿಯುವಂತಾಗಲು
ನಮ್ಮೊಳಗೂ ಘನಿಗಟ್ಟಿದ ಮೌನವಿರಬೇಕೆ?
ಹೇ ವಿಜಯನಗರದ ಬಂಧುವೇ,
ಅಪರೂಪದ ಸುಂದರನೇ,
ಕೊನೆಗಾದರೂ ಸಿಕ್ಕಿತೇ ನಿನಗೆ
ನೀನು ಹುಡುಕುತ್ತಿದ್ದ ಮೀನು?
ನಿನ್ನಂತಃಕರಣಕ್ಕೊಪ್ಪುವ ಮೀನು?
[ವಸುಧೇಂದ್ರರ 'ತೇಜೋ ತುಂಗಭದ್ರಾ' ಓದಿ]
Wednesday, August 26, 2020
ಮೊಳೆಗಳು ಸಾರ್ ಮೊಳೆಗಳು
Monday, August 24, 2020
ಕೊವಿಡ್ ಕಾಲದ ಗಣಪಗೆ
ಮಾಸ್ಕು ಹಾಕ್ಕೊಂಡ್ ಮಾರ್ಕೆಟ್ಗೋಗಿ
ಬಣ್ಣಾ ಬಣ್ಣದ್ ಹೂವಾ ತಂದು
ಸೋಪಿನ್ ನೀರಾಗ್ ತಿಕ್ಕೀ ತೊಳ್ದು
ನಿನ್ನಾ ಮುಡಿಗೆ ಇಟ್ಟೀವ್ನಿ
ಎಷ್ಟೇ ಕಾಸ್ಟ್ಲೀ ಆಗಿದ್ರೂನೂ
ಹಬ್ಬಾ ಅಂದ್ರೆ ಬಿಡ್ಲಿಕ್ಕಿಲ್ಲ
ಥರಥರದ್ ಹಣ್ಣಾ ಕೊಂಡು ತಂದು
ಉಪ್ಪಿನ ನೀರಲಿ ತೊಳೆದಿವ್ನಿ
ವೈರಸ್ಸೆಲ್ಲಾ ಸತ್ತೋಗ್ಲಿ ಅಂತ
ಮೋದಕ ಚಕ್ಕುಲಿ ಪಂಚ್ಕಜ್ಜಾಯ
ಎರ್ಡೆರ್ಡ್ ಸರ್ತಿ ಹುರ್ದು ಕರ್ದು
ನೈವೇದ್ಯಕ್ಕೆ ಮಡಗೀವ್ನಿ
ಕರ್ಪೂರೇನೂ ಊದ್ಬತ್ಯೇನು
ಬತ್ತಿ ಸೈತ ಸ್ಯಾನಿಟೈಸ್ ಮಾಡಿ
ಮಂಟಪಾ ಕಟ್ವಾಗ್ ದೂರ್ದೂರ್ ನಿಂತು
ಎಲ್ಲಾ ಕ್ರಮ ತಗೊಂಡೀವಿ
ಕ್ವಾರಂಟೈನಲ್ ಇರೋ ನಾವು
ಸಂದ್‌ಸಂದ್ ಬಟ್ಟೇ ತೊಟ್ಟೂಕೊಂಡು
ಸೊಂಡ್ಲಾ ಗಣಪ್ನೇ ಕಾಯೋ ಅಂತ
ನಿನ್ ಮುಂದ್ ಬಂದು ಅಡ್ಡಾಗೀವಿ
ಕಷ್ಟಾನೆಲ್ಲಾ ಕಳೀತೀಯಂತೆ
ಯಿಘ್ನಾನೆಲ್ಲಾ ತೊಡೀತೀಯಂತೆ
ಈ ಕೊರೋನಾ ಏನು ದೊಡ್ದು ನಿಂಗೆ
ಹೊಡ್ದೋಡ್ಸದ್ನಾ ಕೈ ಮುಗಿತೀವಿ
ಜೈಜೈ ಗಣಪಾ ಜೈಜೈ ಗಣಪಾ
ಸಿವನಾ ಮಗನೇ ಹರಸೋ ಯಪ್ಪಾ
ಮೊದ್ಲೀನಂಗೆ ಎಲ್ಲಾ ಮರಳಿಸಿ
ನಗುವಿನ ಹೂವಾ ಅರಳಿಸೋ ಗಣಪಾ.