ಅಹಹಹ ಚಳಿ...! ಮೈ ಕೊರೆಯುವ ಚಳಿ. ಗಡಗಡ ನಡುಗಿಸುವ ಚಳಿ. ಹಲ್ಲುಗಳನ್ನು ಕಟಕಟ ಅನ್ನಿಸುವ ಚಳಿ. ಮಾಘಿ ಚಳಿ. ಚಳಿ ಚಳಿ! ಬೆಂಗಳೂರಿನಲ್ಲಿ ಕಮ್ಮಗೆ ಚಳಿ ಬಿದ್ದಿದೆ.
ಊರಿನಲ್ಲಿ ಸುಗ್ಗಿ ಶುರುವಾಗಿದೆಯಂತೆ. ಪ್ರತಿ ವರ್ಷವೂ ಹೀಗೆಯೇ. ಚಳಿ ಬೀಳುತ್ತಿದ್ದಂತೆಯೇ ಸುಗ್ಗಿಯೂ ಶುರುವಾಗುತ್ತದೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಅಡಿಕೆಕಾಯಿಗಳು ಬೆಳೆದು ಹಣ್ಣಾಗಿ ಉದುರಲಾರಂಭಿಸುತ್ತವೆ. ಚಾಲಿ ಮಾಡುವ ಆಲೋಚನೆ ಇದ್ದವರು ಸ್ವಲ್ಪ ತಡವಾಗಿ ಕೊನೆ ಕೊಯ್ಲು ಶುರುಮಾಡುತ್ತಾರೆ. ಕೆಂಪಡಿಕೆ ಮಾಡುವವರು, ಚಳಿ ಬೀಳುತ್ತಿದ್ದಂತೆಯೇ, ಒಂದೆರಡು ಮರಗಳಲ್ಲಿ ಹಣ್ಣಡಿಕೆಗಳು ಉದುರಲು ಶುರುವಿಡುತ್ತದ್ದಂತೆಯೇ, ಅಡಿಕೆ ಬೆಳೆದದ್ದು ಗೊತ್ತಾಗಿ ಕೊನೆಕಾರನಿಗೆ ಬರಲು ಹೇಳಿಬಿಡುತ್ತಾರೆ.
ಈಗ ಚಾಲಿ ಅಡಿಕೆಗೆ ರೇಟ್ ಇಲ್ಲವಾದ್ದರಿಂದ ಕೆಂಪಡಿಕೆ ಮಾಡುವವರೇ ಜಾಸ್ತಿ. ಅಲ್ಲದೇ, ಅಡಿಕೆ ಹಣ್ಣಾಗಿ, ಆಮೇಲೆ ಅದನ್ನು ಒಣಗಿಸಿ, ಆಮೇಲೆ ಸುಲಿಸಿ, ಮಂಡಿಗೆ ಒಯ್ದು ಹಾಕಿ... ಅಷ್ಟೆಲ್ಲಾ ಆಗಲಿಕ್ಕೆ ಮತ್ತೆರಡು-ಮೂರು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಕಾಯುವ ಚೈತನ್ಯವಿದ್ದವರು ಕಾಯುತ್ತಾರೆ. ಆದರೆ ಅರ್ಧ-ಒಂದು ಎಕರೆ ತೋಟ ಇರುವವರಿಗೆ ಅಷ್ಟೊಂದು ಕಾಯಲಿಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ 'ಕೈ' ಖಾಲಿಯಾಗಿರೊತ್ತೆ. ಮಂಡಿಯವರು 'ಇನ್ನು ಅಡಿಕೆ ತಂದು ಹಾಕುವವರೆಗೂ ದುಡ್ಡು ಕೊಡುವುದಿಲ್ಲ' ಅಂದಿರುತ್ತಾರೆ. ಆದ್ದರಿಂದ, ಅಡಿಕೆ ಬೆಳೆಯುತ್ತಿದ್ದಂತೆಯೇ ಕೊಯ್ಲು ಮಾಡಿ, ಕೆಂಪಡಿಕೆ ಮಾಡಿ, ಮಂಡಿಗೆ ಸಾಗಿಸಿ, ಸುಗ್ಗಿ ಮುಗಿಸಿಕೊಂಡುಬಿಡುತ್ತಾರೆ ಬಹಳಷ್ಟು ಬೆಳೆಗಾರರು.
ಸುಗ್ಗಿ ಸಾಮಾನ್ಯವಾಗಿ ದೀಪಾವಳಿಯ ಎಡ-ಬಲಕ್ಕೆ ಬರುತ್ತದೆ. ಅಂಗಳದಲ್ಲಿ ಬೆಳೆದಿದ್ದ ಕಳೆ-ಜಡ್ಡನ್ನೆಲ್ಲಾ ಕೆತ್ತಿಸಿ ಚೊಕ್ಕು ಮಾಡಿ 'ದೊಡ್ಡಬ್ಬಕ್ಕೂ ಆತು - ಸುಗ್ಗಿಗೂ ಆತು' ಅನ್ನುವುದರೊಂದಿಗೆ ಸುಗ್ಗಿಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗುತ್ತವೆ. ತೋಟದಲ್ಲಿ ಗೋಟಡಿಕೆಗಳು ಬೀಳುವುದು ಶುರುವಾಯಿತೆಂದರೆ ಅಪ್ಪ ಕೊನೆಕಾರನಿಗೆ ಹೇಳಿ ನಮ್ಮ ಮನೆಯ ಕೊಯ್ಲಿನ 'ಡೇಟ್ ಫಿಕ್ಸ್' ಮಾಡಿಕೊಂಡು ಬರುತ್ತಾನೆ. ಸರಿ, ಹೇಳಿದ ದಿನ ಕೊನೆಕಾರ ತನ್ನ ಊದ್ದನೆಯ ದೋಟಿ, ನೇಣಿನ ಹಗ್ಗ, ಕಡಿಕೆ ಮಣೆ.. ಎಲ್ಲಾ ಹಿಡಿದುಕೊಂಡು, ತನ್ನ ಸೈಕಲ್ಲನ್ನು ತಳ್ಳಿಕೊಂಡು, ತನ್ನ ಜೊತೆ ಮತ್ತೆ ನಾಲ್ಕಾರು ಜನ ಆಳುಗಳನ್ನು ಕರೆದುಕೊಂಡು ಬೆಳಗ್ಗೆ ೮.೩೦ಕ್ಕೆಲ್ಲ ಬಂದುಬಿಡುತ್ತಾನೆ. ಆಳುಗಳಲ್ಲಿ ಹೆಣ್ಣಾಳು-ಗಂಡಾಳು ಇಬ್ಬರೂ ಇರುತ್ತಾರೆ. ಕೆಲವೊಮ್ಮೆ ಕೊನೆಕಾರ ತನ್ನ ಮಕ್ಕಳನ್ನೂ ಕರೆತರುವುದುಂಟು. ಈ ಮಕ್ಕಳು ತಮ್ಮ ತಾಯಂದಿರ ಜೊತೆ ಕೊನೆಕಾರ ಉದುರಿಸಿದ ಅಡಿಕೆಗಳನ್ನು ಒಟ್ಟುಮಾಡುತ್ತಾರೆ. ದೊಡ್ಡವರು, ಗಂಡಸರು ಕೊನೆಯನ್ನು ಕಲ್ಲಿ / ಹೆಡಿಗೆಯಲ್ಲಿ ತುಂಬಿ ತೋಟದಿಂದ ಮನೆಯ ಅಂಗಳಕ್ಕೆ ಹೊತ್ತು ತಂದು ಹಾಕುತ್ತಾರೆ. ಇವರಲ್ಲೇ ಒಬ್ಬ ನೇಣು (ಮಿಣಿ) ಹಿಡಿಯುತ್ತಾನೆ.

ಕೊನೆಕಾರ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ, ಕೇವಲ ಲಂಗೋಟಿ, ಹಾಳೆಟೊಪ್ಪಿ ಮತ್ತು ಕೊರಳಿಗೊಂದು ಹಾಳೆಯ ಪಟ್ಟಿಯನ್ನು ನೇತುಬಿಟ್ಟುಕೊಂಡು ಮರ ಹತ್ತುತ್ತಾನೆ. ಒಮ್ಮೆ ಬೀಡಿ ಎಳೆದು ಮರ ಹತ್ತಿದನೆಂದರೆ ಸುತ್ತಮುತ್ತಲಿನ ಎಲ್ಲಾ ಮರಗಳ ಕೊನೆಗಳನ್ನೂ, ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತಾ, ಕೊಯ್ದು ಮುಗಿಸಿಬಿಡುತ್ತಾನೆ.
ಅಪ್ಪ, ಹತ್ತೂ ವರೆ ಹೊತ್ತಿಗೆ, ಅಮ್ಮನ ಬಳಿ ಚಹ ಮಾಡಿಸಿಕೊಂಡು ಒಂದು ಗಿಂಡಿಯಲ್ಲಿ ತುಂಬಿಕೊಂಡು, ಒಂದು ದೊಡ್ಡ ಕ್ಯಾನಿನಲ್ಲಿ ನೀರು ತುಂಬಿಕೊಂಡು, ಸ್ವಲ್ಪ ಬೆಲ್ಲವನ್ನೂ ತಗೊಂಡು, ತೋಟಕ್ಕೆ ಧಾವಿಸುತ್ತಾನೆ. ಅಪ್ಪನ ಜೊತೆ, ಮೂರನೇ ಕ್ಲಾಸಿಗೆ ಹೋಗುವ ಪುಟ್ಟನೂ ಬರುತ್ತಾನೆ. ಈ ಪುಟ್ಟ 'ಇವತ್ತು ಕೊನೆಕೊಯ್ಲು' ಅಂತ ಹೇಳಿ ಮೇಷ್ಟ್ರಿಂದ ರಜೆ ಪಡೆದು ಬಂದಿದ್ದಾನೆ. ಅಪ್ಪ, 'ಕೊನೆ ಕೊಯ್ಯದು ಅವ್ವು, ಇಲ್ಲಿ ಅಡುಗೆ ಮಾಡದು ಅಮ್ಮ, ನಿಂಗೆಂತಾ ಕೆಲ್ಸ? ಸುಮ್ನೇ ಶಾಲಿಗೆ ಹೋಗದು ಬಿಟ್ಟು.. ಸರಿ, ಬಾ ತೋಟಕ್ಕೆ, ಒಂದು ಹೆಡಿಗೆ ಹೊರುಸ್ತಿ, ಹೊತ್ಕಂಡು ಬರ್ಲಕ್ಕಡ..' ಅನ್ನುತ್ತಲೇ ಮಗನನ್ನೂ ಕರೆದುಕೊಂಡು ತೋಟಕ್ಕೆ ಹೊರಟಿದ್ದಾನೆ. 'ಅಪ್ಪ ತಮಾಷೆಗೆ ಹೇಳ್ತಿದ್ದಾನೆ' ಅಂತ ಗೊತ್ತಿದ್ದರೂ ಪುಟ್ಟನಿಗೆ ಒಳಗೊಳಗೇ ಭಯ. ಅಂವ ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದ್ದಾನೆ. ಸಾರ ದಾಟುವಾಗ, ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಮೀನು ನೋಡಲು ಹೋಗಿ, ಒಮ್ಮೆ ಓಲಾಡಿ, ಮೈಯೆಲ್ಲಾ ನಡುಗಿ, ಅಪ್ಪನ ಕೈ ಹಿಡಕೊಂಡಿದ್ದಾನೆ.
'ನಿಧಾನಕ್ಕೆ ಕಾಲ್ಬುಡ ನೋಡ್ಕ್ಯೋತ ಬಾ, ಹಾವು-ಹುಳ ಇರ್ತು... ಮೇಲೆ ನೋಡಡ, ಕಣ್ಣಿಗೆ ಕಸ ಬೀಳ್ತು' ಎಂದೆಲ್ಲಾ ಪುಟ್ಟನಿಗೆ ಅಪ್ಪ 'ಇನ್ಸ್ಟ್ರಕ್ಷನ್ಸ್' ಕೊಡುತ್ತಾ ಬರುತ್ತಿದ್ದಾನೆ. ಕೊನೆ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದಂತೆಯೇ ನೇಣು ಹಿಡಿಯುತ್ತಿದ್ದ ಮಾದೇವ 'ಓಹೋ.. ಸಣ್ ಹೆಗಡೇರು ಬಂದ್ಬುಟ್ಯಾರೆ.. ಏನು ಸಾಲಿಗೆ ಹೋಗ್ನಲ್ಲಾ?' ಎಂದಿದ್ದಾನೆ. ಪುಟ್ಟ ಮೇಲೆ ನೋಡಿದರೆ ಕೊನೆಕಾರ ಒಂದು ಕೋತಿಯಂತೆ ಕಾಣಿಸುತ್ತಾನೆ. ಅಂವ ಒಂದು ಮರದಿಂದ ಒಂದು ಮರಕ್ಕೆ ಹಾರಿದಾಕ್ಷಣ ಮರ ಸುಂಯ್ಯನೆ ತೂಗುತ್ತಾ ವಾಪಸು ಬರುವುದನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಅಪ್ಪ ಈಗಾಗಲೆ ಎಷ್ಟು ಕೊಯ್ದಾಗಿದೆ, ಆಚೆ ತುಂಡಿಗೆ ಹೋಗಲಿಕ್ಕೆ ಇನ್ನೂ ಎಷ್ಟು ಹೊತ್ತು ಬೇಕು, ಇವತ್ತು ಆಚೆ ಬಣ್ಣ ಮುಗಿಯಬಹುದೇ, ಈ ವರ್ಷ ಕೊನೆಯಲ್ಲಿ 'ಹಿಡಿಪು' ಇದೆಯೇ, ಅಥವಾ ಪೀಚೇ? -ಅಂತೆಲ್ಲಾ ನೋಡಿಕೊಂಡು, ಲೆಕ್ಕ ಹಾಕಿಕೊಂಡು, ಪುಟ್ಟನೊಂದಿಗೆ ಮನೆಗೆ ಮರಳುತ್ತಾನೆ. ಅದಾಗಲೇ ಮನೆಯ ಅಂಗಳದಲ್ಲಿ ಕೊನೆ, ಉದುರಡಿಕೆಗಳನ್ನು ತಂದು ಸುರಿದು ಅಂಗಳದ ತುಂಬಾ ಸುಗ್ಗಿಯ ಕಳೆ ತುಂಬಿರುತ್ತದೆ.
ಅಮ್ಮ ಕೊನೆಕೊಯ್ಲಿನವರಿಗಾಗಿಯೇ ಇವತ್ತು ಚಿತ್ರಾನ್ನ ಮಾಡುತ್ತಾಳೆ. ರವೆ ಉಂಡೆ ಮಾಡುತ್ತಾಳೆ. ಅಪ್ಪ ನಾಲ್ಕು ಬಲಿಷ್ಟ ಕೊನೆಗಳನ್ನು ತಂದು ದೇವರ ಮುಂದಿಟ್ಟು, ತನಗಿನ್ನೂ ಸ್ನಾನವಾಗದೇ ಇದ್ದುದರಿಂದ 'ಆನು ಇವತ್ತು ಸಂಜೆ ಸ್ನಾನ ಮಾಡ್ತಿ; ನೀನೇ ಒಂಚೂರು ಪೂಜೆ ಮಾಡ್ಬುಡೇ' ಎಂದು ಅಮ್ಮನ ಬಳಿ ಹೇಳುತ್ತಾನೆ. ಅಮ್ಮ, ದೇವರಿಗೂ, ಅಡಿಕೆ ಕೊನೆಗಳಿಗೂ ಕುಂಕುಮ-ಗಿಂಕುಮ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಾಳೆ. ತುಪ್ಪದ ದೀಪ ಹಚ್ಚಿಟ್ಟು, 'ನಮ್ಮನೆ ಅಡಿಕೆಗೆ ಈ ವರ್ಷ ಒಳ್ಳೇ ರೇಟು ಸಿಗ್ಲಿ ದೇವ್ರೇ' ಎಂದು ಪ್ರಾರ್ಥಿಸುತ್ತಾಳೆ. ಶುಭ್ರವಾಗಿ ಬೆಳಗುತ್ತದೆ ದೇವರ ಗೂಡಿನಲ್ಲಿ ದೀಪ.
ಮಧ್ಯಾಹ್ನ ಒಂದೂ ವರೆ ಹೊತ್ತಿಗೆ ಕೊನೆ ಹೊರುವ ಒಬ್ಬ ಆಳು, ಅಮ್ಮ 'ಇಲ್ಲೇ ಹಾಕ್ತೀನಿ ಊಟ ಮಾಡ್ರೋ' ಅಂದರೂ ಕೇಳದೇ, 'ತ್ವಾಟದಾಗೇ ಉಣ್ತೀನಿ ಅಮ್ಮಾವ್ರೇ' ಅಂತಂದು, ಚಿತ್ರಾನ್ನ-ರವೆ ಉಂಡೆ-ನೀರು ಇತ್ಯಾದಿಗಳನ್ನೆಲ್ಲಾ ತೋಟಕ್ಕೆ ಒಯ್ದುಬಿಡುತ್ತಾನೆ. ಅವರು ಅಲ್ಲಿ ತೋಟದ ತಂಪಿನಲ್ಲಿ ಊಟ ಮಾಡುತ್ತಿರಬೇಕಾದರೆ ಇಲ್ಲಿ ಅಪ್ಪ-ಅಮ್ಮ-ಪುಟ್ಟ ಮನೆಯಲ್ಲಿ ಉಂಡು ಮುಗಿಸುತ್ತಾರೆ.
ಸಂಜೆ ಐದೂ ವರೆ ಹೊತ್ತಿಗೆ ಅವತ್ತಿನ ಕೊಯ್ಲು ಮುಗಿಸಿ ಆಳುಗಳೆಲ್ಲಾ ತೋಟದಿಂದ ಮರಳುತ್ತಾರೆ. 'ಕೊನೆ, ಉದುರು ಏನನ್ನೂ ತೋಟದಲ್ಲಿ ಬಿಟ್ಟಿಲ್ಲ ತಾನೆ?' ಅಂತ ಅಪ್ಪ ಕೇಳುತ್ತಾನೆ. ಆಮೇಲೆ ಅವತ್ತು ಕೊಯ್ದ ಕೊನೆಗಳನ್ನು ಎಣಿಸಬೇಕು. ಏಕೆಂದರೆ ಕೊನೆಕಾರನಿಗೆ 'ಪೇಮೆಂಟ್' ಮಾಡುವುದು ಕೊನೆಯ ಲೆಕ್ಕದ ಮೇಲೆ. 'ಒಂದು ಕೊನೆಗೆ ಇಷ್ಟು' ಅಂತ. ಲೆಕ್ಕವೆಲ್ಲ ಮುಗಿದ ಮೇಲೆ, ಅಪ್ಪ 'ಲೆಕ್ಕದ ಪುಸ್ತಕ'ದಲ್ಲಿ ನಮೂದಿಸಿಯಾದ ಮೇಲೆ, ಆಳುಗಳು ನಾಳೆ ಬೆಳಗ್ಗೆ ಬರುವುದಾಗಿ ಹೇಳಿ ಹೊರಟುಹೋಗುತ್ತಾರೆ.
ಮುಂದಿನ ಕೆಲಸವೆಂದರೆ, ಉದುರಡಿಕೆಯಲ್ಲಿ ಗೋಟು-ಹಸಿರಡಿಕೆಗಳನ್ನು 'ಸೆಪರೇಟ್' ಮಾಡುವುದು. ಬೇಗಬೇಗ ಮಾಡಬೇಕು. ಏಕೆಂದರೆ ಇನ್ನು ಸ್ವಲ್ಪೇ ಹೊತ್ತಿಗೆ ಅಡಿಕೆ ಸುಲಿಯುವವರು ಬಂದುಬಿಡುತ್ತಾರೆ. ಈ ಕೆಲಸಕ್ಕೆ ಅಮ್ಮ, ಪುಟ್ಟ ಎಲ್ಲರೂ ಕೈಜೋಡಿಸುತ್ತಾರೆ -ಅಪ್ಪನ ಜೊತೆ. ಉದುರಡಿಕೆಯೇ ಸಾಕಷ್ಟಿರುವುದರಿಂದ ಇವತ್ತು ಕೊನೆ ಬಡಿಯುವುದೇನು ಬೇಡ. ನಾಳೆ ಆಳಿಗೆ ಬರಲಿಕ್ಕೆ ಹೇಳಿ ಬಡಿಸಿದರಾಯಿತು.
ಈಗ ಅಡಿಕೆ ಸುಲಿಯುವವರು ಬಂದಿದ್ದಾರೆ. ಜ್ಯೋತಿ ಬಂದ್ಲು, ಜಲಜ ಬಂದ್ಲು, ಸುಮಿತ್ರ ಬಂದ್ಲು, ಬಾಕರ ಬಂದ... ಎಲ್ಲರೂ ತಮ್ಮ ಮೆಟಗತ್ತಿಯನ್ನು (ಮೆಟ್ಟುಗತ್ತಿ) ಮಣೆಗೆ ಬಡಿದು ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ. ಅಪ್ಪ ಅಂಗಳಕ್ಕೆ ಒಂದು ತಾತ್ಕಾಲಿಕ ವೈರೆಳೆದು ನೂರು ಕ್ಯಾಂಡಲಿನ ಬಲ್ಬು ಹಾಕಿ ಬೆಳಕು ಮಾಡಿಕೊಟ್ಟಿದ್ದಾನೆ. ಈಗ ಅಂಗಳದಲ್ಲಿ 'ಕ್ಚ್ ಕ್ಚ್ ಕಟ್ ಕಟ್' ಶಬ್ದ ಶುರುವಾಗಿದೆ. ರಾತ್ರಿ ಒಂಬತ್ತರವರೆಗೆ ಸುಲಿದು, ಗಿದ್ನ (ಅಥವಾ ಡಬ್ಬಿ) ಯಲ್ಲಿ ಅಳೆದು, ಲೆಕ್ಕದ ಪುಸ್ತಕದಲ್ಲಿ ಬರೆಸಿ, ಅವರೆಲ್ಲ ಮನೆಗೆ ಹೋಗುತ್ತಾರೆ. (ಕೆಲವೊಂದು ಊರುಗಳಲ್ಲಿ ರಾತ್ರಿ-ಬೆಳಗು ಸುಲಿಯುತ್ತಾರೆ) ನಂತರ, ಸುಲಿದ ಅಡಕೆಯ ಬುಟ್ಟಿಗಳನ್ನು ಅಪ್ಪ-ಅಮ್ಮ ಇಬ್ಬರೂ ಆಚೆ-ಈಚೆ ಹಿಡಿದುಕೊಂಡು ಮನೆಯೊಳಗೆ ತಂದು ಇಡುತ್ತಾರೆ. ಇವತ್ತು ಹೆಚ್ಚು ಅಡಿಕೆ ಆಗಿಲ್ಲವಾದ್ದರಿಂದ, ನಾಳೆ ಎಲ್ಲಾ ಸೇರಿ ಬೇಯಿಸಿದರಾಯಿತು ಅಂದುಕೊಂಡಿದ್ದಾನೆ ಅಪ್ಪ.
ಮರುದಿನ ಮತ್ತೆ ಕೊನೆಕೊಯ್ಲು, ಅಡಿಕೆ ಸುಲಿಯುವುದು ನಡೆಯುತ್ತದೆ. ಅಪ್ಪ ಅಂಗಳದಲ್ಲೇ ಒಂದು ಮೂಲೆಯಲ್ಲಿ ಅಡಿಕೆ ಬೇಯಿಸುವುದಕ್ಕೆ ದೊಡ್ಡ ಎರಡು ಜಂಬಿಟ್ಟಿಗೆ ಕಲ್ಲುಗಳಿಂದ ಒಲೆ ಹೂಡುತ್ತಾನೆ. ಅದರ ಮೇಲೆ ಹಂಡೆ ತಂದಿಡುತ್ತಾನೆ. ರಾತ್ರಿ ಅಡಿಕೆ ಸುಲಿಯುವವರು ಹೋದಮೇಲೆ ಅಪ್ಪ ಒಲೆಗೆ ಬೆಂಕಿ ಕೊಟ್ಟು, ಹಂಡೆಯಲ್ಲಿ ನೀರು ಸುರಿದು, ಕಳೆದ ವರ್ಷದ ತೊಗರು (ಅಡಿಕೆ ಬೇಯಿಸಿಯಾದ ಮೇಲೆ ಉಳಿಯುವ ಕೆಂಪಗಿನ ನೀರು; 'ಚೊಗರು' ಅಂತಲೂ ಕೆಲವಡೆ ಕರೆಯುತ್ತಾರೆ) ಉಳಿದಿದ್ದರೆ ಅದನ್ನು ಸ್ವಲ್ಪ 'ಮಿಕ್ಸ್' ಮಾಡಿ, ಬುಟ್ಟಿಗಳಲ್ಲಿನ ಸುಲಿದ ಅಡಿಕೆಗಳನ್ನು ತಂದು ಸುರಿಯುತ್ತಾನೆ. ಚಳಿ ಕಾಯಿಸಲಿಕ್ಕೆ ಈ ಅಡಿಕೆ ಬೇಯಿಸುವ ಒಲೆ ಹೇಳಿ ಮಾಡಿಸಿದಂತಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ಗಣಪತಣ್ಣ, ಪಕ್ಕದ ಕಣವನ್ನು ಕಾಯಲು ಬರುವ ಮಾಬ್ಲಜ್ಜ ಎಲ್ಲರೂ ಈ ಒಲೆಯೆಡೆಗೆ ಆಕರ್ಷಿತರಾಗಿ ಒಬ್ಬೊಬ್ಬರೇ ಬರುತ್ತಾರೆ... 'ಹೂಂ, ಈ ವರ್ಷ ಏನು ಭಾರೀ ತೇಜಿ ಕಾಣ್ತಲೋ.. ಶ್ರೀಪಾದನ ಮನೆ ಅಡಿಕೆ ಹನ್ನೆರಡು ಸಾವ್ರಕ್ಕೆ ಹೋತಡ..' ಎನ್ನುತ್ತಾ ಮಾಬ್ಲಜ್ಜ ಕವಳ ಉಗಿದು, ಅಂಗಳದ ಮೂಲೆಗೆ ಹೋಗಿ ವಂದಕ್ಕೆ ಕೂರುತ್ತಾನೆ. 'ಓಹ..? ಆದ್ರೂ ನಮ್ಮನೆ ಅಡಿಕೆ ರೆಡಿಯಾಗ ಹೊತ್ತಿಗೆ ಎಂತಾಗ್ತೇನ' ಎನ್ನುತ್ತಾನೆ ಅಪ್ಪ. 'ಹೂಂ, ಜಾಸ್ತಿ ತೆರಿಬೆಟ್ಟೆ ಬರ್ಲೆ ಅಲ್ದಾ?' ಅನ್ನುತ್ತಾನೆ ನಾರಣಣ್ಣ ಬುಟ್ಟಿಯಲ್ಲಿದ್ದ ಅಡಿಕೆಯಲ್ಲಿ ಒಮ್ಮೆ ಕೈಯಾಡಿಸಿ. 'ಏನಂದ್ರೂ ಇನ್ನೂ ನಾಕು ಒಬ್ಬೆ ಆಗ್ತೇನ' ಅನ್ನುತ್ತಾನೆ ಗಣಪತಣ್ಣ. ಅಷ್ಟೊತ್ತಿಗೆ ಲಕ್ಷ್ಮೀ ಬಸ್ಸು ನಿಂತುಹೋದ ಸದ್ದು ಕೇಳಿಸುತ್ತದೆ. 'ಬಸ್ಸಿಗೆ ಯಾರೋ ಬಂದ ಕಾಣ್ತು.' 'ಹೂಂ, ಯಾರು ಬಂದ್ರೂ ಇನ್ನು ಎರಡು ನಿಮಿಷದಾಗೆ ಗೊತ್ತಾಗ್ತಲ..' 'ಯಾರೋ ಪ್ಯಾಂಟು-ಶರಟು ಹಾಕ್ಯಂಡವರ ಥರ ಕಾಣ್ತಪ.. ಸ್ಟ್ರೀಟ್ಲೈಟ್ ಬೆಳಕಗೆ' 'ಓ, ಹಂಗರೆ ಪಟೇಲರ ಮನೆ ಗಣೇಶನೇ ಸಯ್ಯಿ ತಗ..!' ಅವರ ಹರಟೆ ಮುಂದುವರಿಯುತ್ತದೆ. ಅಮ್ಮ ಎಲ್ಲರಿಗೂ ಕಷಾಯ ಮಾಡಿಕೊಟ್ಟು, ತಾನು ಮಲಗಲು ಕೋಣೆಗೆ ಹೋಗುತ್ತಾಳೆ. ಪುಟ್ಟ ಅದಾಗಲೇ ನಿದ್ದೆ ಹೋಗಿರುತ್ತಾನೆ.
ಕೊನೆಕೊಯ್ಲು ಮೂರ್ನಾಲ್ಕು ದಿನಗಳ ವರೆಗೆ ಮುಂದುವರೆಯುತ್ತದೆ: ತೋಟದ ವಿಸ್ತೀರ್ಣವನ್ನು ಅವಲಂಭಿಸಿ. ಬೇಯಿಸಿದ ಅಡಿಕೆಯನ್ನು ಚಾಪೆ (ಅಥವಾ ತಟ್ಟಿ)ಯ ಮೇಲೆ ಒಣಗಿಸಲಾಗುತ್ತದೆ. ಒಳ್ಳೆಯ ಬಿಸಿಲಿದ್ದರೆ ಐದಾರು ದಿನಗಳಲ್ಲಿ ಅಡಿಕೆ ಒಣಗುತ್ತದೆ. ಈ ಮಧ್ಯೆ ತೆರಿಬೆಟ್ಟೆ-ಗೋಟಡಿಕೆಗಳನ್ನು ಹೆರೆಯುವುದು, ಇತ್ಯಾದಿ ಕೆಲಸಗಳು ನಡೆದಿರುತ್ತವೆ. ಒಣಗಿದ ಅಡಿಕೆಯನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ ಅಪ್ಪ ಬಾಯಿ ಹೊಲೆಯುತ್ತಾನೆ. ಸುಬ್ಬಣ್ಣನ ಮನೆ ವ್ಯಾನು ಪೇಟೆಗೆ ಹೋಗುವಾಗ ಅದರಲ್ಲಿ ಹೇರಿ ಮಂಡಿಗೆ ಸಾಗಿಸಲಾಗುತ್ತದೆ. ವ್ಯಾಪಾರಿಗಳು ಒಳ್ಳೆಯ ರೇಟು ನಿಗಧಿಪಡಿಸಿದ ದಿನ ಅಪ್ಪ ಅದನ್ನು ಕೊಡುತ್ತಾನೆ.
ಎಷ್ಟೇ ಮುಂಚೆ ಕೊಯ್ಲು ಮಾಡಿಸಿ ಕೆಂಪಡಿಕೆ ಮಾಡಿದ್ದರೂ ಸಹ ಒಂದಷ್ಟು ಅಡಿಕೆ ಹಣ್ಣಾಗಿರುತ್ತದಾದ್ದರಿಂದ ಅವು ಅಂಗಳದಲ್ಲಿ ಒಣಗುತ್ತಿರುತ್ತವೆ. ಸುಮಾರು ನಲವತ್ತು ದಿನಗಳಲ್ಲಿ ಅದೂ ಒಣಗುತ್ತದೆ. ಆಮೇಲೆ ಅದನ್ನು ಸುಲಿಸಿ ಮಂಡಿಗೆ ಕಳಿಸಲಾಗುತ್ತದೆ.
ಹೀಗೆ ಅಡಿಕೆ ಬೆಳೆಗಾರ ಹವ್ಯಕರ ಮನೆಗಳಲ್ಲಿ ಸುಗ್ಗಿಯೆಂದರೆ ಹಬ್ಬವೇ. ಆ ಒಂದಷ್ಟು ದಿನ ಗುದ್ದಾಡಿಕೊಂಡು ಬಿಟ್ಟರೆ, ಒಳ್ಳೆಯ ಬೆಲೆಗೆ ಅಡಿಕೆ ಮಾರಾಟವಾಗಿಬಿಟ್ಟರೆ, ಉಳಿದಂತೆ ಇಡೀ ವರ್ಷ ಆರಾಮಾಗಿರಬಹುದು. ತೋಟಕ್ಕೆ ದಿನಕ್ಕೊಮ್ಮೆ ಹೋಗಿ-ಬಂದು ಮಾಡಿಕೊಂಡು ಇದ್ದರೆ ಆಯಿತು. ಮಳೆಗಾಲದಲ್ಲಿ ಒಮ್ಮೆ ಗೊಬ್ಬರ ಹಾಕಿಸಬೇಕು. ಮಳೆ ಮುಗಿದಮೇಲೆ ಕಳೆ ತೆಗೆಸಬೇಕು. ಅಷ್ಟೇ! ಉಳಿದಂತೆ ಅಡಿಕೆ ಬೆಳೆಗಾರನ ಜೀವನವೆಂದರೆ ಸುಖಜೀವನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಸಿಕ್ಕಾಪಟ್ಟೆ ಏರುಪೇರು ಆಗುತ್ತಿರುವುದರಿಂದ, ಮತ್ತು ಮಳೆ ಸರಿಯಾಗಿ ಆಗದೆ ಸಿಂಗಾರ ಒಣಗುವುದರಿಂದ, ಮರಗಳೇ ಸಾಯುತ್ತಿರುವುದರಿಂದ, ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು. ಮಳೆ ಸರಿಯಾಗಿ ಆಗಿ, ಅಡಿಕೆಗೆ ಒಳ್ಳೆಯ ರೇಟ್ ಬಂದು, ಬರೆಯದಿರುವಂತೆ ಆದರಂತೂ ಒಳ್ಳೆಯದೇ!