Showing posts with label ಪುಸ್ತಕಪ್ರೀತಿ. Show all posts
Showing posts with label ಪುಸ್ತಕಪ್ರೀತಿ. Show all posts

Friday, November 13, 2020

ಉರಿದು ಮುಗಿದ ರವಿಯು


 ಬಹುಶಃ 1998-99ನೇ ಸಾಲು. ನಾನು ಒಂಬತ್ತನೇ ತರಗತಿಯಲ್ಲಿದ್ದೆ. ಗಂಟಲು ಒಡೆಯುವ ವಯಸ್ಸು. ಆಗ ನಮ್ಮೂರ ಭಾಗದಲ್ಲಿ ಬಹಳವಾಗಿ ಚಾಲ್ತಿಯಲ್ಲಿದ್ದ ಸ್ವಾಮೀಜಿಯೊಬ್ಬರ ಬಗ್ಗೆ 'ಹಾಯ್ ಬೆಂಗಳೂರ್'ನಲ್ಲಿ ತನಿಖಾ ವರದಿ ಬಂದಿತ್ತು. ಸಹಜವಾಗಿಯೇ ಅಪ್ಪ ಸಾಗರದಿಂದ ಬರುವಾಗ ಪತ್ರಿಕೆಯನ್ನು ತಂದಿದ್ದ. ಆಗ ಆ ಸ್ವಾಮೀಜಿಗಳಿಗೆ ಎಷ್ಟು ಅನುಯಾಯಿಗಳಿದ್ದರೆಂದರೆ, ಮನೆಗೆ ಬಂದ ಪತ್ರಿಕೆಯನ್ನು ನಾವು ಮುಚ್ಚಿಟ್ಟುಕೊಂಡು ಓದಿದ್ದೆವು. ಅದನ್ನು ಓದಿದರೆ 12 ಸಲ ಸ್ನಾನ ಮಾಡಬೇಕಂತೆ‌ ಅಂತ‌ ಬೇರೆ‌ ಅವರ ಭಕ್ತರು ಹಬ್ಬಿಸಿಬಿಟ್ಟಿದ್ದರು! ಆದರೂ ನಮ್ಮ ಮನೆಗೆ‌ ಪತ್ರಿಕೆ ಬಂದಿರುವ ಸುದ್ದಿ ತಿಳಿದು, ಆ ಸ್ವಾಮೀಜಿಯ ಬಗ್ಗೆ ಅಷ್ಟಿಷ್ಟು ಆಕ್ಷೇಪಗಳಿದ್ದ ಊರ ಕೆಲವರು, ಕದ್ದುಮುಚ್ಚಿ ಬಂದು ಓದಿ ಹೋಗಿದ್ದರು. ಆಗಷ್ಟೆ ಬಾಲಮಂಗಳದಿಂದ ಕ್ರೈಂ, ಸ್ಪ್ರೈ, ಡಿಟೆಕ್ಟಿವ್ ಥ್ರಿಲ್ಲರ್‌ಗಳಿಗೆ ಶಿಫ್ಟಾಗುತ್ತಿದ್ದ ನಾನು 'ಹಾಯ್'ನ ಒಂದೇ‌ ಒಂದು ವರದಿಗೆ ಬಿದ್ದುಹೋಗಿದ್ದೆ. ಆ ಆರ್ಟಿಕಲ್, ಆ ಬರಹದ ಶೈಲಿ, ಆ ದಿಟ್ಟತನ, ಆ ಖದರ್ -ಒಂದೇ ಹೊಡೆತಕ್ಕೆ ನನ್ನನ್ನು ಸೆಳೆದುಕೊಂಡಿದ್ದವು. ವರದಿಯೊಂದನ್ನು ಓದಲೆಂದು ತಂದುಕೊಂಡಿದ್ದ ಪತ್ರಿಕೆಯಲ್ಲಿದ್ದ ಉಳಿದ ಕಾಲಮ್ಮುಗಳಾದ 'ಹಲೋ', 'ಖಾಸ್‌ಬಾತ್', 'ಬಾಟಮ್ ಐಟಮ್', 'ಲವ್‌ಲವಿಕೆ'ಗಳನ್ನು ಮರುದಿನ ಓದಿದೆ. ಅಷ್ಟೇ: ರವಿ ಬೆಳಗೆರೆ ಎಂಬ ಮಾಂತ್ರಿಕ ಶಕ್ತಿಗೆ ನಾನು ಶರಣಾಗಿ ಹೋಗಿದ್ದೆ!

ಅಪ್ಪ ಅದಾಗಲೇ‌ ರವಿಯ ಹಲವು ಕಥೆಗಳನ್ನು ಓದಿದ್ದನಾದರೂ ನಾನು ಅವನ ಹೆಸರೂ ಕೇಳಿರಲಿಲ್ಲ. ಅಪ್ಪನಿಗೂ ಹಾಯ್ ಇಷ್ಡವಾಯಿತು ಅನ್ನಿಸುತ್ತೆ, ಆಗ ನಮ್ಮ ಮನೆಗೆ 'ಮಂಗಳ' ಬರುತ್ತಿತ್ತು, ಅದನ್ನು ನಿಲ್ಲಿಸಿ ಮುಂದಿನ ವಾರದಿಂದ ಈ ಕಪ್ಪು ಸುಂದರಿಯನ್ನು ಹಾಕಲು ಹೇಳಲಾಯಿತು. ಪತ್ರಿಕೆಯಲ್ಲಾಗ 'ಹೇಳಿ ಹೋಗು ಕಾರಣ'ದ ಹದಿನೈದನೆಯದೋ ಇಪ್ಪತ್ತನ್ನೆಯದೋ ಕಂತು ಬರುತ್ತಿತ್ತು. ಅದನ್ನೋದಿ ನಾನೇ ಹಿಮವಂತನಾದಂತೆ, ಕನಸಿನ ಹುಡುಗಿ ಪ್ರಾರ್ಥನಾ ಆದಂತೆ, ದೇಬಶಿಶು, ಊರ್ಮಿಳಾ, ರಸೂಲ್ ಜಮಾದಾರರೆಲ್ಲ ಎದುರಿಗೇ ಓಡಾಡಿದಂತೆಲ್ಲ ಪರಿಭಾವಿಸಿ, ಪ್ರತಿ ಬುಧವಾರಕ್ಕೆ ಪತ್ರಿಕೆ ಬರುವುದನ್ನು ತುದಿಗಾಲಲ್ಲಿ ನಿಂತು ಕಾದು... ಕಾಲೇಜಿಗೆ ಹೋಗುವ ಹೊತ್ತಿಗೆ ಅಲ್ಲೂ ಕೆಲ ಬೆಳಗೆರೆ ಅಭಿಮಾನಿಗಳು ಸಿಕ್ಕು, ಆ ಧಾರಾವಾಹಿ ಮುಂದೇನಾಗಬಹುದು ಅಂತೆಲ್ಲ ಚರ್ಚಿಸುತ್ತಾ, ಲವ್‌ಲವಿಕೆಯನ್ನು ನಕಲು ಮಾಡಿ ನಾನೂ ಪ್ರೇಮಪತ್ರಗಳ ಬರೆಯಲೆತ್ನಿಸುತ್ತಾ, ಖಾಸ್‌ಬಾತ್ ಓದಿ ನಾನೂ ಕಷ್ಟಗಳನ್ನೆಲ್ಲ ದಾಟಿ ಗೆದ್ದು ಸಾಧಿಸುವ ಕನಸು ಕಾಣುತ್ತಾ, ಬಾಟಮ್ ಐಟೆಮ್‌ನ ಹಿತವಚನಗಳನೋದಿ ಆಹಾ ಈ ರವಿಯೆಂಬ ಬೆಳಗೆರೆ ಎಷ್ಟೊಳ್ಳೆಯವನು ಎಂದುಕೊಳ್ಳುತ್ತಾ, ಹಲೋ ಓದಿ ನಾನೂ ರಾಜಕೀಯ-ಪ್ರಸ್ತುತ-ವರ್ತಮಾನಗಳನೆಲ್ಲ ತಿಳಿದುಕೊಳ್ಳುತ್ತಾ, ಇವನಷ್ಟು ಚೆನ್ನಾಗಿ ಮತ್ಯಾರೂ ಬರೆಯಲಿಕ್ಕೆ ಸಾಧ್ಯವೇ ಇಲ್ಲ ಅಂತೆಲ್ಲ ಬೇರೆಯವರ ಬಳಿ ವಾದಿಸುತ್ತಾ...  'ರವಿ ಬೆಳಗೆರೆ ಅಂದ್ರೆ ಹೆಂಗೆ ಕೇಜಿ?' ಅಂತಿದ್ದ‌ ಕಾಲದಿಂದ ಎಂತಹ ದೊಡ್ಡ ವ್ಯಕ್ತಿಯಾಗಿ ಬೆಳೆದ ಬೆಳಗೆರೆಯ ಬಗ್ಗೆ ಅಗಾಧ ಅಭಿಮಾನವೂ, ಆರಾಧನೆಯೂ ಬೆಳೆದುಬಿಟ್ಟಿತ್ತು. ಆರ್.ಬಿ., ರವೀ, ರವಿ ಬೆಳಗೆರೆ, ಬರೀ ಬೆಳಗೆರೆ, ವೀ -ಎಲ್ಲರೂ ಅಂದರೆ ಎಲ್ಲರೂ ಇಷ್ಟವೋ ಇಷ್ಟವಾಗಿದ್ದರು.

ನಾನು ಅರೆಬರೆ ಓದಿಕೊಂಡು ಬೆಂಗಳೂರಿಗೆ ಬರುವಾಗಲೂ ರವಿ ನಿಗಿನಿಗಿ ಉರಿಯುತ್ತಿದ್ದ: ಹೊರಗೂ, ನನ್ನೊಳಗೂ. ಎಷ್ಟರ ಮಟ್ಟಿಗೆ ಎಂದರೆ, ನಾನು ಊರಿಂದ ಹೊರಡುವಾಗ, "ನಿಂಗೆ ಎಲ್ಲೂ ಕೆಲಸ ಸಿಗಲ್ಲೆ ಅಂದ್ರೆ ರವಿ ಬೆಳಗೆರೆನ ಕಾಣ್ಲಕ್ಕೇನ, ಅಂವ ಎಂಥರು ಒಂದು ಕೆಲಸ ಕೊಡುಸ್ತ" ಅಂತ ಅಮ್ಮ ಹೇಳಿದ್ದಳು. ಮಜಾ ಎಂದರೆ, ನಾನಿಲ್ಲಿ ಮೊದಲಿಗೆ ಉಳಕೊಂಡಿದ್ದ ನಮ್ಮ ನೆಂಟರ ಮನೆಯವರೂ ಬೆಳಗೆರೆ ಅಭಿಮಾನಿಗಳೇ ಆಗಿದ್ದರು. ಹೀಗಾಗಿ, ಅವರ‌ ಮನೆಗೆ‌ ಪತ್ರಿಕೆ ಬಂದಾಕ್ಷಣ ನಾವೆಲ್ಲ 'ನಾ‌ ಮೊದಲು ನಾ ಮೊದಲು' ಅಂತ‌ ಕಿತ್ತಾಡಿಕೊಂಡು, ಪತ್ರಿಕೆಯ ಒಂದೊಂದು ಪುಟವನ್ನು ಒಬ್ಬೊಬ್ಬರು ಹಂಚಿಕೊಂಡು ಓದಿ, ಅದರ ಬಗ್ಗೆಯೇ ಮಾತಾಡಿ ಮಾತಾಡಿ ಮಾತಾಡಿ... ಆಮೇಲೆ ನಾನು ಅವರ ಮನೆ ಬಿಟ್ಟು ಒಂದಿಷ್ಟು ಸಮವಯಸ್ಕರೊಂದಿಗೆ ರೂಮು-ಗೀಮು ಮಾಡಿಕೊಂಡು ಇದ್ದಾಗ, ಬರುವ ಅಲ್ಪ ಸಂಬಳದಲ್ಲಿ ಪ್ರತಿ ವಾರ ಪತ್ರಿಕೆಯನ್ನು ಕೊಳ್ಳುವುದು ದುಬಾರಿಯೆನಿಸಿ ಪಬ್ಲಿಕ್ ಲೈಬ್ರರಿಗೆ ಹೋಗಿ ಸರತಿಯಲ್ಲಿ ಕಾದು ಕುಳಿತು ಓದಿದ್ದು... ಆಮೇಲೆ ಆರ್ಕುಟ್‌ನಲ್ಲಿ ರವಿ ಬೆಳಗೆರೆ ಅಭಿಮಾನಗಳ ಸಂಘದಲ್ಲಿ ನಡೆಯುತ್ತಿದ್ದ ಭಯಂಕರ ಚರ್ಚೆಗಳಲ್ಲಿ ನಾನೂ ಭಾಗವಹಿಸುತ್ತಿದ್ದುದು,  ಅಲ್ಲಿಂದಲೇ ಹಲವು ಗೆಳೆಯರನ್ನು ಪಡೆದುದು... 'ನೀ ಹಿಂಗ ನೋಡಬ್ಯಾಡ ನನ್ನ'ದ ಬಾಬ್‌ಕಟ್ ಹುಡುಗಿ ಅಲ್ಲೆಲ್ಲೋ ಸಿಗುತ್ತಾಳೆ ಅಂದುಕೊಂಡುದು... ಅವಳಿಗೆ ದೇವತೆಗಳು ಮಾತ್ರ ಕುಡಿಯುವಂತಹ ಕಾಫಿ ಕುಡಿಸಬೇಕು ಅಂದುಕೊಳ್ಳುತ್ತಿದ್ದುದು...

ಇಷ್ಟೆಲ್ಲ ಆದರೂ ನಾನು ರವಿಯನ್ನು ಮುಖತಃ ಕಾಣುವ, ಕನಿಷ್ಟ ಒಂದು ಪತ್ರ ಬರೆಯುವ ಧೈರ್ಯ ಮಾಡಲಿಲ್ಲ ಎಂದರೆ ಅದಕ್ಕೆ‌ ನನ್ನ ಸಂಕೋಚ-ಹಿಂಜರಿಕೆಗಳೇ ಕಾರಣ. ಮೊದಲ ಸಲ ರವಿಯನ್ನು ನಾನು ನೋಡಿದ್ದು ಪ್ರಾರ್ಥನಾ ಶಾಲೆಯ ಸ್ವಾತಂತ್ರೋತ್ಸವದ ಪೆರೇಡಿನಲ್ಲಿ. ಅವತ್ತು ಆತ ಒಂದು ಕಪ್ಪು ಗಾಗಲ್ ಧರಿಸಿ ನೂರಾರು ಜನರೊಂದಿಗೆ ನಡೆದು ಬರುತ್ತಿದ್ದ. ನಂತರ ಬೆಂಗಳೂರಿನ ಸುಮಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ರವಿ ಎದುರಾದರೂ ಯಾಕೋ ಹೋಗಿ ಮಾತನಾಡಿಸಬೇಕು ಅಂತ ಅನಿಸಲೇ ಇಲ್ಲ. ಪತ್ರಿಕೆಯದೇ ಹಲವು ಕಾರ್ಯಕ್ರಮಗಳಿಗೆ ಹೋದರೂ ಅವರ ಸನಿಹಕ್ಕೆ ಹೋಗಲಿಲ್ಲ.

ಈ ನಡುವೆ ರವಿ ಕಾರ್ಗಿಲ್ಲಿಗೆ ಹೋದ, ಪಾಕಿಸ್ತಾನಕ್ಕೆ ಹೋದ, ಅಫಗನಿಸ್ತಾನಕ್ಕೆ ಹೋದ, ಗುಜರಾತ್ ಭೂಕಂಪಿತ ಪ್ರದೇಶಕ್ಕೆ ಹೋಗಿಬಂದ, ರಾಜ್‌ಕುಮಾರ್ ಅಪಹರಣವಾದಾಗ ಕಾಡಿಗೇ ನುಗ್ಗಿದ. ಪ್ರಾರ್ಥನಾ ಶಾಲೆ ಮಾಡಿದ, ಓ ಮನಸೇ ಶುರುವಾಯಿತು, ವೀಣಾ ಧರಿ ಎಂಬ ಎಚ್‌ಐವಿ ಪೀಡಿತ ಹೆಣ್ಣುಮಗಳನ್ನು ಸಾಕುತ್ತಿದ್ದೀನಿ ಅಂತ ಬರೆದುಕೊಂಡ, ಟೀವಿಯಲ್ಲಿ ಕ್ರೈಂ ಡೈರಿ - ಕ್ರೈಂ ಸ್ಟೋರಿ ಅಂತೆಲ್ಲ ಶುರುವಾಗಿ ಅವನ ಕಂಠಕ್ಕೆ, ಡೈಲಾಗ್ ಡೆಲಿವರಿ ಶೈಲಿಗೆ ಮರುಳಾದ ಹೊಸ ಅಭಿಮಾನಿಗಳು ಹುಟ್ಟಿಕೊಂಡರು.  ಹೆಚ್ಚುಕಮ್ಮಿ ಅಲ್ಲಿಯವರೆಗೂ ರವಿ ನನ್ನ ದೃಷ್ಟಿಯಲ್ಲಿ ಉನ್ನತ ಸ್ಥಾನದಲ್ಲೇ ಇದ್ದ.

ಆದರೆ ಅದ್ಯಾವಾಗಲೋ ರವಿಯ ಫಾಲ್ ಶುರುವಾಯಿತು: ನನ್ನ ದೃಷ್ಟಿಯಲ್ಲೂ ಮತ್ತು ಬಹುಶಃ ಆ ಕಾಲದಲ್ಲಿ ನನ್ನಂತೆಯೇ ರವಿಗೆ‌ ಮರುಳಾಗಿದ್ದ ಹಲವರ ದೃಷ್ಟಿಯಲ್ಲೂ. ರವಿ ರಿಪಿಟಿಟೀವ್ ಅನ್ನಿಸತೊಡಗಿದ. ಅವಕಾಶವಾದಿ ಅನ್ನಿಸತೊಡಗಿದ. ತನ್ನ ಮಾತನ್ನು ತಾನೇ ಕಾಯ್ದುಕೊಳ್ಳಲಾಗದ ಚೀಟರ್ ಅನ್ನಿಸತೊಡಗಿದ. 'ಲಾರಿ ಟೈರ್ ಮಾರುವವನಿಗೆ ಪತ್ರಿಕೋದ್ಯಮದ ಬಗ್ಗೆ ಹೇಗೆ ಗೊತ್ತಾಗಬೇಕು?' ಅಂತೆಲ್ಲ‌ ಟೀಕಿಸಿ ಬರೆದಿದ್ದ ವಿಜಯ ಸಂಕೇಶ್ವರರನ್ನ ನಂತರ 'ನನ್ನ ಗುರು' ಅಂತ ಕರೆದ. ರವಿಯನ್ನು ನಂಬಿ ಯಾರದಾದರೂ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದ ನಮಗೆ‌ ಈತ ಉಲ್ಟಾ ಹೊಡೆದಾಗ ಏನು ಮಾಡಬೇಕು ತಿಳಿಯಲಿಲ್ಲ.  ಅನಾವಶ್ಯಕವಾಗಿ ಯಾರ್ಯಾರನ್ನೋ ಟಾರ್ಗೆಟ್ ಮಾಡಿ ಬರೀತಿದಾನೆ ಅನ್ನಿಸಲಿಕ್ಕೆ‌ ಶುರುವಾಯಿತು. ಕ್ರೈಂ-ಸೆಕ್ಸ್-ಆತ್ಮಪ್ರಶಂಸೆಗಳು ಬೇಸರ ತರಿಸಿದ್ದವು. ಅವನೀಗ ಅಂಡರ್‌ವರ್ಲ್ಡ್ ಡಾನುಗಳ ಬಗ್ಗೆ ಬರೆವುದು ಬಿಟ್ಟು ಸಣ್ಣಪುಟ್ಟ ರಾಜಕಾರಣಿಗಳು, ಸಿನೆಮಾ ರಂಗದವರು, ಮಠಾದೀಶರನ್ನು ಟಾರ್ಗೆಟ್ ಮಾಡಿ ಬರೆಯುತ್ತಿದ್ದ. "ಇವಳ ಲೈಫಲ್ಲಿ ಏನಾಯ್ತು ಗೊತ್ತೇ?", "ಇವನ ಅಪ್ಪ ಎಂತವ ಗೊತ್ತೇ?" ಮುಂತಾದ ಹೆಡ್ಡಿಂಗುಗಳಿಂದ ಬರುತ್ತಿದ್ದ ಹಾಯ್, ಪುಟಗಳನ್ನು ತೆರೆದು ನೋಡಿದರೆ ಆ ವರದಿಯಲ್ಲಿ ಹೂರಣವೇ ಇರುತ್ತಿರಲಿಲ್ಲ. ಅವು ಯಾರದೋ ಇಮೇಜ್ ಕೆಡಿಸಲೆಂದೇ ಬರೆದಹಾಗೆ‌ ಕಾಣತೊಡಗಿದವು.  ತನ್ನ ಬಗ್ಗೆ ಹೇಳಿಕೊಳ್ಳುವ ಮೂಲಕವೇ ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದ  ಬೆಳಗೆರೆಗೆ ಅದೇ ದೌರ್ಬಲ್ಯವೂ ಆಗಿತ್ತು. ಏನೇ ಬರೆದರೂ, ಏನೇ ಹೇಳಹೊರಟರೂ ಕೊನೆಗೆ 'ತಾನು ತಾನು ತಾನು' ಎಂಬ ಜಪದೊಂದಿಗೆ ಕೊನೆಯಾಗುತ್ತಿದ್ದ ರವಿಯ ಬರಹ-ಭಾಷಣಗಳು ರುಚಿ ಕಳೆದುಕೊಳ್ಳತೊಡಗಿದವು.  ಇಡೀ ರಾಜ್ಯವೇ ಹೇವರಿಕೆಯಿಂದ ನೋಡುತ್ತಿದ್ದ ಬಳ್ಳಾರಿ ಗಣಿಧಣಿಗಳ ಪರವಾಗಿ ಪ್ರಚಾರ ಮಾಡಿದ. ಇಂವ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾನೆ ಅನ್ನಿಸುವ ಹಾಗೆ ಆಯಿತು.

ಎಲ್ಲಕ್ಕಿಂತ ಮುಖ್ಯವಾಗಿ, ನಾನೀಗ ಹೊರಗೆ ಕಣ್ಬಿಟ್ಟು ನೋಡತೊಡಗಿದ್ದೆ. ಕನ್ನಡದ ಹಲವು ಬರಹಗಾರರನ್ನು ಓದತೊಡಗಿದ್ದೆ.  ನೋಟ ವಿಶಾಲದಂತೆ, ಆಕಾಶ ದೊಡ್ಡದಾದಂತೆ ರವಿ ಚಿಕ್ಕವನೆನಿಸುತ್ತ ಹೋದ. 'ಬರೀ ಇವನನ್ನೇ ಓದುತ್ತ ಎಂತೆಂಥಾ ಸಾಹಿತ್ಯವನ್ನು ಬಿಟ್ಟುಬಿಟ್ಟಿದ್ದೆ' ಎನಿಸತೊಡಗಿತು. ಮತ್ತೆ ನಾನೂ ಈಗ ನಾಕಕ್ಷರ ಬರೆವವನಾಗಿ,‌ ವೃತ್ತಿ-ಜವಾಬ್ದಾರಿ-ಬದುಕು ಇತ್ಯಾದಿಗಳು ಶುರುವಾಗಿ, ನನ್ನದೆಂಬ ವ್ಯಕ್ತಿತ್ವವೂ ರೂಪುಗೊಳ್ಳತೊಡಗಿತ್ತಿರಬೇಕು.

ಹೆಚ್ಚುಕಮ್ಮಿ ಇದೇ ಹೊತ್ತಿಗೆ ರವಿಯ ಕಲರ್‌ಫುಲ್‌ ಜೀವನದ ಬಗ್ಗೆ, ಆತನ ಇನ್ನೊಂದು ಮುಖದ ಬಗ್ಗೆ, ವಿಚಿತ್ರ ಖಯಾಲಿಗಳ ಬಗ್ಗೆ, ಹುಚ್ಚುಚ್ಚು ವರ್ತನೆಗಳ ಬಗ್ಗೆ, ದುಷ್ಟತನಗಳ ಬಗ್ಗೆ, ದೌರ್ಬಲ್ಯಗಳ ಬಗ್ಗೆ, ಹೆಣ್ಣುಮಕ್ಕಳನ್ನು ಹೇಗ್ಹೇಗೋ ನಡೆಸಿಕೊಳ್ಳುತ್ತಾನಂತೆ ಎಂಬ ಗಂಭೀರ ಆರೋಪದ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ - ಕೆಲವು ಪತ್ರಿಕೆಗಳು, ಅನಾಮಧೇಯ ವ್ಯಕ್ತಿಗಳು, ಪ್ರತ್ಯಕ್ಷವಾಗಿ ಕಂಡಿದ್ದೇನೆ ಅಂತ ಹೇಳಿಕೊಳ್ಳುವವರಿಂದ ಥರಹೇವಾರಿ ಮಾತುಗಳು, ಗಾಸಿಪ್ಪುಗಳು ಶುರುವಾಗಿದ್ದವು. ಇವನ್ನೆಲ್ಲಾ ಕೇಳಿ ಕೇಳಿ, ಅರೆ, ಇಷ್ಟು ಕಾಲ 'ಗುರುವಲ್ಲದ ಗುರು, ಅಪ್ಪನಲ್ಲದ ಅಪ್ಪ' ಅಂತೆಲ್ಲ ಅಂದುಕೊಂಡಿದ್ದು ಇವನ ಬಗ್ಗೆಯೇನಾ ಅಂತಂದುಕೊಳ್ಳುವ ಮಟ್ಟಿಗೆ ರವಿಯೆಡಿಗಿನ ನನ್ನ ಅಭಿಪ್ರಾಯ ಬದಲಾಗಿಹೋಯಿತು. ಕುಡಿತ-ಸಿಗರೇಟು ಎಲ್ಲಾ ಬಿಟ್ಟು ಬಹಳ ಕಾಲವಾಯ್ತು ಅಂತ ಅವನು ಬರಕೊಂಡ ಕೆಲವೇ ಕಾಲಕ್ಕೆ ಅದೆಲ್ಲ‌ ಸುಳ್ಳೇಸುಳ್ಳು ಅಂತ ಸಾಕ್ಷ್ಯ ಸಿಕ್ಕಿತು. ಗಳಸ್ಯ-ಕಂಠಸ್ಯ ಅಂತ ಕರೆದುಕೊಳ್ಳುತ್ತಿದ್ದ ವಿಶ್ವೇಶ್ವರ ಭಟ್ಟರ ವಿರುದ್ಧ ಬರೆದು, ಆಮೇಲೆ ಅವರೂ-ಅವರ ತಂಡದವರೂ ತಿರುಗಿ ಇವನ ಬಗ್ಗೆ ಬರೆದು, ಅವರೆಲ್ಲಾ ಬೀದಿಜಗಳ ಆಡಿದಾಗಲಂತೂ ಬೆಳಗೆರೆ ಬಹುಶಃ ಹಲವರ ದೃಷ್ಟಿಯಲ್ಲಿ ಸಣ್ಣವನಾದ. ಆಮೇಲೆ ಅದ್ಯಾರದೋ ಕೊಲೆಗೆ ಸುಪಾರಿ ಕೊಟ್ನಂತೆ ಅಂತ ಜೈಲಿಗೂ ಹೋಗಿ ಬಂದ.

ಯಾರಾದರೂ ತೀರಿಕೊಂಡಾಗ ಅವರ ಬಗ್ಗೆ ಒಳ್ಳೆಯದಷ್ಟನ್ನೇ ಬರೆಯಬೇಕು ಎನ್ನುತ್ತಾರೆ. ಬರಹಗಾರನೇ ಬೇರೆ, ಅವನ ವೈಯಕ್ತಿಕ ಬದುಕೇ ಬೇರೆ - ಅವೆರಡನ್ನು ತಳುಕು ಹಾಕಬಾರದು ಎನ್ನುತ್ತಾರೆ. ಆದರೆ ಬೆಳಗೆರೆಯ ವಿಷಯದಲ್ಲಿ ಹಾಗೆ ಮಾಡುವುದು ಕಷ್ಟ ಎನಿಸುತ್ತದೆ ನನಗೆ. ಯಾಕೆಂದರೆ, ನಾವು ಬರೀ ರವಿಯ ಕಥೆ-ಕಾದಂಬರಿಗಳನ್ನು ಓದಲಿಲ್ಲ; ಅವನ‌ ಬಗ್ಗೆ ಅವನೇ ಬರೆದುಕೊಂಡುದನ್ನು ಓದಿದೆವು, ಅವನ್ನೆಲ್ಲ ನಿಜವೆಂದು ಭಾವಿಸಿದೆವು, ಅವನೊಬ್ಬ ಸಂಭಾವಿತ ಎಂದು ನಂಬಿದೆವು, ಪ್ರೀತಿಸಿದೆವು, ಆರಾಧಿಸಿದೆವು: ಆದರೆ ಮುಂದೊಂದು ದಿನ ಅವೆಲ್ಲ ಸುಳ್ಳು, ಆತ ಅಷ್ಟೆಲ್ಲ ಪ್ರೀತಿಗೆ, ಆರಾಧನೆಗೆ, ನಂಬುಗೆಗೆ ಅರ್ಹ ವ್ಯಕ್ತಿಯಾಗಿರಲಿಲ್ಲ ಅಂತ‌ ಗೊತ್ತಾದಾಗ ಆಗುವ ಆಘಾತ - ನಿರಾಶೆ ದೊಡ್ಡ ಮಟ್ಟದ್ದು. ರವಿಯ 'ಫಸ್ಟ್ ಹಾಫ್' ಮಾತ್ರ ಇಷ್ಟ, ಅಥವಾ ಅವನೇ ಅಫಿಡವಿಟ್ಟಿನಲ್ಲಿ ಬರೆದುಕೊಳ್ಳುತ್ತಿದ್ದಂತೆ ಅವನ ಬರಹ-ಸಾಹಿತ್ಯಪ್ರೀತಿ-ಭಾಷಣ-ನಿರೂಪಣೆ-ಶಾಲೆ ಇತ್ಯಾದಿ ಸಾಧನೆಗಳನ್ನು ಬಿಟ್ಟು ಉಳಿದ ವಿವರಗಳೆಲ್ಲ ಅನ್‌-ಇಂಟರೆಸ್ಟಿಂಗ್ ಅಂತ ಬಿಟ್ಟುಬಿಡುವುದು ಹೇಗೆ ಸಾಧ್ಯ?

ರವೀ, ಸುಮಾರು ಎಂಟ್ಹತ್ತು ವರ್ಷ ನಿಮ್ಮ ಬರಹದ ಮೋಡಿಗೆ‌ ಒಳಗಾಗಿದ್ದೆ, ಹೇಳಿ ಹೋಗು ಕಾರಣವನ್ನೂ - ಪತ್ರಿಕೆಯನ್ನೂ ಹುಚ್ಚು ಹಿಡಿಸಿಕೊಂಡು ಓದಿದ್ದೆ, ನಿಮ್ಮ ಕಥೆಗಳನ್ನು, ಕೆಲವು ಕಾದಂಬರಿಗಳನ್ನು, ಒಂದಷ್ಟು ಅನುವಾದಗಳನ್ನು ಇವತ್ತಿಗೂ ಅತ್ಯುತ್ತಮವೆಂದು ಒಪ್ಪುತ್ತೇನೆ. ನಿಮ್ಮ ಬರಹಗಳಿಂದ - ಮಾತುಗಳಿಂದ ಸ್ಫೂರ್ತಿ ಪಡೆದಿದ್ದೇನೆ. ಇವತ್ತು ನಾನೂ ಏನಾದರೂ ಬರೆಯುತ್ತಿದ್ದರೆ ಅದಕ್ಕೆ ನಿಮ್ಮನ್ನು ಓದಿದ್ದೂ ಒಂದು ಕಾರಣ ಅಂತ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮ ಪತ್ರಿಕೆ ಹಲವು ಒಳ್ಳೆಯ ಅಂಕಣಕಾರರನ್ನು - ಬರಹಗಾರರನ್ನೂ ಕನ್ನಡಕ್ಕೆ ಕೊಟ್ಟಿರುವುದೂ ನಿಜ. ಹಾಗೆಯೇ, ನಿಮ್ಮ ಪತ್ರಿಕೆಯೇ  ಹತ್ತು-ಹಲವು ಶ್ರೇಷ್ಠ ಸಾಹಿತಿಗಳನ್ನು ನಾನು ಓದಲು ಬೆಳಕಿಂಡಿಯಾಯಿತು ಅಂತಲೂ ಹೇಳುತ್ತೇನೆ.

ನಿಮ್ಮ ಬರಹದ ಚುಂಬಕ ಶೈಲಿಗೆ, ಅಗಾಧ ಬರಹಗಾರಿಕೆಗೆ, ನನ್ನನ್ನು ಓದಲು-ಬರೆಯಲು ಹಚ್ಚಿದ್ದಕ್ಕೆ ಧನ್ಯವಾದ, ನಮಸ್ಕಾರ.


Tuesday, September 22, 2020

ಅಕ್ಷಯ ಕಾವ್ಯದ ಅಕ್ಷಯ ಓದು

ಈ ದಿನ ಹೇಳಿಯೇಬಿಡುವೆನೆಂದು ಅವನೂ
ಈ ದಿನ ಹೇಳಿಯೇಬಿಡುವೆನೆಂದು ಅವಳೂ
ಎಷ್ಟೊಂದು ದೂರ ನಡೆದರು
ಅಣಬೆಗಳ ಹುಡುಕುತ್ತ

‘ಅಕ್ಷಯ ಕಾವ್ಯ’ ಎಂಬ ಈ ಹೊತ್ತಗೆಯನ್ನು ನಾನು ತಂದಿಟ್ಟುಕೊಂಡು ಎರಡು ವರ್ಷದ ಮೇಲಾಯಿತು. ಈ ದಿನ ಓದಿ ಮುಗಿಸಿಯೇಬಿಡುತ್ತೇನೆಂದು ಎಷ್ಟು ಸಲ ಅದನ್ನು ಕೈಗೆತ್ತಿಕೊಂಡಿಲ್ಲ... ಆದರೆ ಮುಗಿಸಲು ಸಾಧ್ಯವಾಗಿಯೇ ಇಲ್ಲ. ಮುಗಿಸುವುದಿರಲಿ, ಕೆಲವೊಂದು ಸಲ ಎರಡ್ಮೂರು ಪುಟದ ಮುಂದೆ ಹೋಗಲಿಕ್ಕೂ ಸಾಧ್ಯವಾಗಿಲ್ಲ. ಹಾಗಾದರೆ ಇದು ಅಷ್ಟೊಂದು ಸಂಕೀರ್ಣವಾದ ಗ್ರಂಥವೇ? ಹಾಗೂ ಅನಿಸಿಲ್ಲ. ಸರಳ ಶಬ್ದಗಳು, ಸರಳ ವಾಕ್ಯಗಳು, ಸರಳ ಪ್ರತಿಮೆಗಳು, ಎಲ್ಲೂ ಗಂಟಲಿಗೆ ಸಿಕ್ಕದ ಮೃದು ಆಹಾರವೇ. ಆದರೂ, ಈ ಎರಡು ವರ್ಷಗಳಲ್ಲಿ ಕನಿಷ್ಟ ನೂರು ಸಲ ಈ ಪುಸ್ತಕ ನನ್ನ ಕೈಗಳನ್ನಲಂಕರಿಸಿದ್ದರೂ, ‘ಓದಿ ಮುಗಿದ ಪುಸ್ತಕ’ಗಳ ಗುಂಪಿಗೆ ಇದನ್ನು ಸೇರಿಸಲಾಗುತ್ತಿಲ್ಲ ಯಾಕೆ?

ಬಹುಶಃ ಈ ಪುಸ್ತಕದ ಹೆಗ್ಗಳಿಕೆಯೇ ಅದು. ಗದ್ಯಸಾಹಿತ್ಯವನ್ನೇ ಹೆಚ್ಚು ನೆಚ್ಚಿಕೊಂಡಿದ್ದ ನಾನು ಈಗ ಏಳೆಂಟು ವರ್ಷಗಳಿಂದ ಕಾವ್ಯದ ಹುಚ್ಚಿಗೆ ಬಿದ್ದು, ‘ಹೊಸ ತರಹದ್ದು’ ಅಂತ ಕಂಡ ಕಾವ್ಯವನ್ನೆಲ್ಲ ಆಸೆ ಪಟ್ಟು ಕೊಂಡು ಓದಿ, ಕೆಲವಷ್ಟು ಸಲ ಅದರದೇ ಪ್ರಭಾವಕ್ಕೊಳಗಾಗಿ ಬರೆಯುತ್ತಿರುವವನು. ನವ್ಯದ ರುಚಿಗೆ ಮಾರುಹೋದವನು. ಆದಿಪ್ರಾಸ-ಅಂತ್ಯಪ್ರಾಸ-ಗಣ-ಪ್ರಸ್ತಾರಗಳ ಹಂಗು ಮುರಿದಮೇಲೂ ಕವಿ ಹೇಗೆ ಲಯ ಕಂಡುಕೊಂಡ ತನ್ನ ಕಾವ್ಯದಲ್ಲಿ? ಹೇಗೆ ತನ್ನ ರಚನೆ ಅಕಾವ್ಯವಾಗುವುದನ್ನು ತಪ್ಪಿಸಿದ? ಹೇಗೆ ವಸ್ತುವೊಂದು ಕವಿತೆಯಾಗಿ ರೂಪುಗೊಳ್ಳುತ್ತೆ? -ಎಂಬುದು ನನಗೆ ಇನ್ನೂ ಆಶ್ಚರ್ಯದ ವಿಷಯ. ಹೀಗಿರುವಾಗ, ಖಚಿತ ಸಂಗತಿಯಿಲ್ಲದ, ನಿಶ್ಚಿತ ವಾಹಿನಿಯಿಲ್ಲದ, ಲಿಖಿತ ಕ್ರಮವಿಲ್ಲದ, ಬದ್ಧ ರೂಪವಿಲ್ಲದ ಅಖಂಡ ಬರಹವೊಂದು ಹೇಗೆ ಕಾವ್ಯವಾಗಿ ಮೈತಳೆಯುತ್ತದೆ?

‘ಅಕ್ಷಯ ಕಾವ್ಯ’ವನ್ನು ಓದುವಾಗೆಲ್ಲ ನನ್ನನ್ನು ಕಾಡುವ ಪ್ರಶ್ನೆಗಳು ಇವು. ಇಲ್ಲಿ ಬರುವ ತೊಂಬತ್ತು ಪ್ರತಿಶತ ಕಥೆಗಳು-ಉಲ್ಲೇಖಗಳ ಪರಿಚಯ ನನಗಿಲ್ಲ. ಗೂಗಲ್ ಮಾಡಿದರೆ ತಿಳಿಯುತ್ತಿತ್ತೇನೋ, ಆದರೆ ಯಾವತ್ತೂ ಆ ಗೋಜಿಗೆ ಹೋಗಿಲ್ಲ. ತಿಳಿದುಕೊಳ್ಳಬೇಕು ಅಂತ ಅನಿಸಿಯೇ ಇಲ್ಲ. ಇಷ್ಟಕ್ಕೂ ಈ ಪುಸ್ತಕವನ್ನು ‘ಅರ್ಥ ಮಾಡಿಕೊಳ್ಳಬೇಕು’ ಅಂತಲೇ ನನಗೆ ಇದುವರೆಗೆ ಅನಿಸಿಲ್ಲ. ಆದಾಗ್ಯೂ ಇದು ನಿರರ್ಥಕ ಓದು ಎಂಬ ಭಾವನೆ ಬಂದಿಲ್ಲ!

ಕಸ ಪಿಪಾಯಿಯೊಳಗೆರಡು ನಾಯಿಗಳು
ಅಂಡ ಅಂಡಾಶಯ ಕಂಫೀಟುಗಳ ಜಾಲಾಡಿಸುತ್ತಿವೆ
ಸಕಲರೂ ಕಾಯುತ್ತ ಭಿಕ್ಷುಕರೂ ಹಾಗೇ
ಸೇಂಟ್ ಥಾಮಸ್ ಅಕ್ವಿನಾಸ್ ಹೇಳಿದ ಹಾಗೆ
ಕಾರಣ ವಿನಾ ಕಾರ್ಯವಿಲ್ಲ
ಮನುಷ್ಯರ ದೃಷ್ಟಿಗಳ ಕತ್ತರಿಸುವ ಹಾಗೆ
ಯುಗಾಂತರದ ಗಾಡಿ

-ಈ ಸಾಲುಗಳಲ್ಲಿ ಬರುವ ಸೇಂಟ್ ಥಾಮಸ್ ಅಕ್ವಿನಾಸ್ ಯಾರು? ನನಗೆ ಅದು ಮುಖ್ಯ ಅಂತ ಅನಿಸಿಯೇ ಇಲ್ಲ. ಹುಡುಕಿದರೆ ಅವನೊಬ್ಬ ಇಟಲಿ ದೇಶದ ಫಿಲಾಸಫರ್ ಅಂತ ಗೊತ್ತಾಗುತ್ತಿತ್ತು. ಅಂವ ಏನು ಬರೆದ, ಏನೇನು ಮಾಡಿದ, ಯಾಕೆ ಹಾಗೆ ಹೇಳಿದ –ಎಲ್ಲಾ ವಿಷಯ ಸಂಗ್ರಹಿಸಬಹುದಿತ್ತು. ಆದರೆ ಕವಿತೆಯ ಓದನ್ನು ಮುಂದರಿಸಿಕೊಂಡು ಹೋಗಲು ನನಗೆ ಯಾವ ತೊಡಕೂ ಆಗಲಿಲ್ಲ. ಹಾಗೆಯೇ ಈ ಪುಸ್ತಕದಲ್ಲಿ ಬರುವ ಅರಬೀ ಸಮುದ್ರವೋ, ಅರಾರತ್ ಪರ್ವತವೋ, ಮೆಡಿಟರೇನಿಯನ್ ಬಿಸಿಲೋ, ರೋಡಿನ್‌ನ ಶಿಲ್ಪವೋ, ಬಾಮಿಯಾನಿನ ಬುದ್ಧನೋ –ನಾನು ಕಂಡವಲ್ಲ. ಇದರೊಳಗೆ ಪ್ರಸ್ತಾಪ ಮಾಡಲಾಗಿರುವ ಯಾವ್ಯಾವುದೋ ದೇಶಗಳ ಯಾವ್ಯಾವುದೋ ಭಾಷೆಗಳ ಕವಿಗಳ ಸಾಲುಗಳು ನಾನೆಂದೂ ಓದಿದವಲ್ಲ. ಮೆಂಡೆಲ್‌ಸ್ಟಾಮ್ ಬರೆದ ಒಂದು ಕವಿತೆಯನ್ನೂ ನಾನು ಓದಿದಂತಿಲ್ಲ. ಹಾಗಿದ್ದೂ ನನ್ನ ಓದು ಆ ಸಾಲುಗಳಲ್ಲಿ ನಿಲ್ಲಲಿಲ್ಲ. ಯಾಕೆಂದರೆ, ಈ ಗುಚ್ಛಗಳಲ್ಲಿ ನನ್ನ ನಿಲುಕಿಗೆ ಸಿಗದ ಯಾವುದೋ ದೇಶಭಾಷೆಗಳ ದಾರ್ಶನಿಕರ ಜತೆ ನನ್ನದೇ ದೇಶದ ನನ್ನದೇ ಜನವೂ ಏಕಕಾಲದಲ್ಲಿ ಇದ್ದಾರೆ. ನನಗೆ ಅಷ್ಟೇನು ಪರಿಚಿತವಲ್ಲದ ಸೂಫಿ ಭಜನೆಯ ಕೆಳಸಾಲುಗಳಲ್ಲೇ ಡಿಸೆಂಬರ್ ಬಂದರೆ ನನ್ನ ಕಿವಿಗೆ ಬೀಳುವ ಅಯ್ಯಪ್ಪ ಭಕ್ತರ ಭಜನೆ ಸದ್ದು ಇದೆ. ಅಮೆರಿಕೆಯ ಅಪರಿಚಿತ ಓಣಿಯ ಜತೆಜತೆಗೇ ಪರ್ಕಳದ ಬೀದಿಯೂ ಇದೆ. ಜಪಾನೀ ನಾಟಕದ ದೃಶ್ಯದ ಬೆನ್ನ ಹಿಂದೆಯೇ ವಿವಿಧಭಾರತಿಯ ಗಾನವಿದೆ.

ಬಹುಶಃ ಇದೇ ಕಾರಣಕ್ಕೆ ಈ ಕೃತಿ ನನ್ನನ್ನು ಹಿಡಿದಿಟ್ಟುಕೊಂಡಿರುವುದು. ಪೂರ್ತಿ ಅರ್ಥವಾಗುವುದಿಲ್ಲ, ಆದರೆ ಇದರಲ್ಲೇನೋ ಅರ್ಥವಿದೆ ಅಂತ ಅನಿಸುತ್ತದೆ. ತಿಳಿದವರು ಹೇಳುವಂತೆ, ಕಾವ್ಯದ ಸಾರ್ಥಕತೆಯೂ ಅಷ್ಟೆಯೇ ಅಲ್ಲವೇ? ಯಾವುದೇ ಕವಿತೆ ಕಾಡಬೇಕಾದರೆ ಅದು ಪೂರ್ತಿ ಅರ್ಥವಾಗಬಾರದು: ಇದರಲ್ಲಿ ‘ಇನ್ನೇನೋ ಇದೆ, ಇನ್ನೇನೋ ಇದೆ’ ಅನ್ನಿಸುತ್ತಿರಬೇಕು!

ಒಂದು ದಿನ ನಾನೂ ಕೆಲವು ಮಹಾವಾಕ್ಯಗಳ ಬರೆಯುವೆ
ಬರೆದು ಸರ್ಕಸ್ ಡೇರೆಗಳ ಸುತ್ತ ಆಡಲು ಬಿಡುವೆ
ಅವು ಕಂಡವರ ಮನಸ್ಸುಗಳ ಸೇರಲಿ ಎನ್ನುವೆ
ಕೆಲವು ಅಲ್ಲೇ ಉಳಿದಾವು
ಕೆಲವು ವಾಪಸು ಬರುತ್ತವೆ
ಬಂದಾಗ ಅವಕ್ಕೆ ಗಾಯಗಳಾಗಿರುತ್ತವೆ

ಮಹಾವಾಕ್ಯಗಳು ಈ ಕಾವ್ಯದಲ್ಲಿ ಇಲ್ಲವೆಂದೇ ಹೇಳಬೇಕು. ಇಲ್ಲಿ ಉದುರಿದ ಹಕ್ಕಿಯ ಪುಕ್ಕವೂ ಹಾರುತ್ತದೆ. ಹಗ್ಗದ ಮೇಲೆ ಒಣಹಾಕಿದ ಅಂಗಿ ಗಾಳಿಗೆ ಅಲ್ಲಾಡುತ್ತದೆ. ಆಕಾಶ ನೋಡುತ್ತಾ ನಿಂತವಳ ಕಣ್ಣಲ್ಲಿ ನಕ್ಷತ್ರಗಳು ಮೆಲ್ಲಗೆ ತೇಲುತ್ತವೆ. ಕತ್ತಲೆ ಗಾಢವಾದಂತೆ ನೆರಳುಗಳು ಕರಗುತ್ತವೆ. ಓದುತ್ತಾ ಕುಳಿತ ನಾನು ಅದರಲ್ಲೇ ಮುಳುಗುತ್ತೇನೆ. ರಾಜಧಾನಿ ಎಕ್ಸ್‌ಪ್ರೆಸ್ ನನ್ನನ್ನು ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ಹುಸೇನ್‌ಸಾಗರದ ಬುದ್ಧನನ್ನು ತೋರಿಸುತ್ತದೆ. ಗಜಿಬಿಜಿಯ ಸಂತೆಯಲ್ಲಿ ಮಂಡಕ್ಕಿ ಕೊಳ್ಳುತ್ತೇನೆ. ಆಸ್ಪತ್ರೆ ಪಕ್ಕದ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತೇನೆ. ಹೂಗಳು ತುಂಬಿದ ಶೀತಲ ಕೊಳದಲ್ಲಿ ಸ್ನಾನ ಮಾಡುತ್ತೇನೆ. ದಟ್ಟಾರಣ್ಯದ ನಡುವಿನ ಕಣಿವೆಯ ಪಕ್ಕದಲ್ಲಿ ನಿಂತು ಬಟ್ಟೆ ಬದಲಿಸಿಕೊಳ್ಳುತ್ತೇನೆ. ರೋಡ್‌ರೋಲರ್ ಒಂದು ಮೈಮೇಲೆ ಹರಿದಂತಾಗುತ್ತದೆ. ಎಚ್ಚರಾದರೆ ನಮ್ಮೂರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದೇನೆ.

ಈ ಕೃತಿಯ ಓದು ನನಗೆ ವಿಶಿಷ್ಟ ಅನುಭವ ನೀಡಿದೆ. ನಾನಿದನ್ನು ನಿದ್ರೆ ಬಾರದ ನಡುರಾತ್ರಿಗಳಲ್ಲಿ ಎದ್ದು ಕೂತು ಓದಿದ್ದೇನೆ, ಕುಟುಂಬದ ಜತೆ ಪ್ರವಾಸ ಹೋದಾಗ ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದೇನೆ, ಊರಿನ ಮಳೆ ನೋಡುತ್ತಾ ಇದನ್ನು ಧೇನಿಸಿದ್ದೇನೆ, ಲಾಕ್‌ಡೌನ್ ಕಾಲದ ತಳಮಳದ ದಿನಗಳಲ್ಲಿ ಕೈಗೆತ್ತಿಕೊಂಡಿದ್ದೇನೆ. ಯಾವುದೋ ಪುಟ ತೆರೆದು ಏನೂ ನಿರೀಕ್ಷೆಯಿಲ್ಲದೆ ಸುಮ್ಮನೆ ಕಣ್ಣಾಡಿಸುತ್ತಾ ಕೂತಿದ್ದೇನೆ. ಇಲ್ಲಿನ ಕೆಲ ಸಾಲುಗಳು ವಿನಾಕಾರಣ ಸುಖ ಕೊಟ್ಟಿವೆ:

ಕಾದೆ ನಾನು ಇಡೀ ವರುಷ ಒಂದು ಕಿರುನಗೆಗೆ
ಬ್ರಹ್ಮಕಮಲವಾದರೂ ಅರಳಬೇಕಿತ್ತು ಇಷ್ಟರೊಳಗೆ
ಯಾವೂರ ಕಮಲಿ ನೀನು
ಸಾವಿರ ವರುಷ ಕಾಯುವುದು ಹೇಗೆ ನಾನು

ಬಹುಶಃ ಈ ಪುಸ್ತಕವನ್ನು ನನಗೆ ಓದಿ ಮುಗಿಸಲು ಸಾಧ್ಯವಿಲ್ಲ. ಅಥವಾ ಯಾವತ್ತಾದರೂ ಇದನ್ನು ಓದಿ ಮುಗಿಸಿದ್ದೇನೆಂದು ಹೇಳುವ ಧೈರ್ಯ ಮಾಡಲಾರೆ. ಯಾರಾದರೂ ಇದರ ಬಗ್ಗೆ ಹೇಳು ಎಂದರೆ ಸರಿಯಾಗಿ ಹೇಳಲೂ ಸಾಧ್ಯವಾಗದು. ಮತ್ತು ಯಾರಾದರೂ ಇದನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಅವಡುಗಚ್ಚಿ ಹಿಡಿದು ಓದಿ ಮುಗಿಸಬಹುದು ಅಂತಲೂ ನನಗನಿಸುತ್ತಿಲ್ಲ. ಇದೊಂದು ಮುಗಿಯದ ಮುಂಜಾವು. ಪೂರೈಸಲಾಗದ ಅಪರಾಹ್ನ. ಸಂಪನ್ನವಾಗದ ಸಂಧ್ಯೆ. ಅಂತ್ಯವಿರದ ಇರುಳು.

ಪ್ರಯೋಗಶೀಲತೆಯ ಉತ್ತುಂಗದಂತಿರುವ ಈ ಕಾವ್ಯಧಾರೆ ನನ್ನನ್ನು ಸದಾ ಎಚ್ಚರದಲ್ಲಿಟ್ಟಿರುತ್ತದೆ ಅಂತ ನಾನು ನಂಬಿದ್ದೇನೆ. ಇಲ್ಲಿನ ಸಾಲುಗಳಿಂದ ಪ್ರೇರಿತನಾಗಿ ನಾನೂ ಏನೇನೋ ಗೀಚಿದ್ದೇನೆ. ಮತ್ತೇನನೋ ಓದುವಾಗ ಇಲ್ಲಿಯ ಸಾಲುಗಳನ್ನು ನೆನಪಿಸಿಕೊಂಡಿದ್ದೇನೆ. ಓದುವ ನನಗೇ ಇದು ಮುಗಿಯದ ತಪನೆಯಾಗಿರುವಾಗ, ಬರೆದ ಕವಿಗೆ ಇದು ಇನ್ನೆಷ್ಟು ಕಾಡಿರಬಹುದು ಅಂತ ಕಲ್ಪಿಸಿಕೊಂಡು ಅಚ್ಚರಿಯಲ್ಲಿ ಕಂಪಿಸಿದ್ದೇನೆ. ಇಂಥದ್ದೊಂದು ಪ್ರಯೋಗದ ಮೋಹಕ್ಕೆ ಸಿಲುಕಿದ ಕವಿಯ ಸ್ಥಿತಿಯನ್ನು ಊಹಿಸಿಕೊಂಡಿದ್ದೇನೆ. ಬರೆದೇ ತೀರಿಸಿಕೊಳ್ಳಬೇಕಾದ ಈ ದಾಹ ಬರೆದು ಮುಗಿಸಿದಮೇಲಾದರೂ ಅವರಿಗೆ ತೀರಿತಾ? ಗೊತ್ತಿಲ್ಲ. ಆದರೆ ಒಂದಂತೂ ಸತ್ಯ: ಇದೊಂದು ಬಗೆಹರಿಯದ ಬೇಗೆಯಂತೆ ನನ್ನೊಂದಿಗೇ ಇರಲಿದೆ ಬಹಳ ಕಾಲ ತಣ್ಣಗೆ. ಇಂಥದ್ದೊಂದು ಹೊರೆಯನ್ನು ನನಗೆ ದಾಟಿಸಿದ ಕವಿಗೆ ನಮಸ್ಕಾರ. ಆ ಕಾವ್ಯಶಕ್ತಿಗೆ ಶರಣು.

[ಕೆ.ವಿ. ತಿರುಮಲೇಶರಿಗೆ 80 ವರ್ಷ ತುಂಬಿದ ಸಂದರ್ಭ ಬರೆದದ್ದು. 'ಹೊಸ ದಿಗಂತ'ದಲ್ಲಿ ಪ್ರಕಟಿತ.]

Friday, August 28, 2020

ಅಮ್ಮದಕಣ್ಣನಿಗೆ

ಸಂಜೆಯಾಗುತ್ತಿದ್ದಂತೆಯೇ ಒಂದು ಬಂಡೆಯ ಮೇಲೆ ಕೂರುತ್ತೀ-
ತುಂಗಭದ್ರೆಯ ಜುಳುಜುಳುವಿಗೆ ಕಾಲು ತಾಕಿಸಿ ಧ್ಯಾನಸ್ಥನಾಗಿ
ಕೈಯಲ್ಲಿ ಗಾಳವಿದ್ದರೂ ಪಕ್ಕದಲ್ಲಿ ಬುಟ್ಟಿಯಿಲ್ಲ
ಸಿಕ್ಕ ಮೀನುಗಳನೆಲ್ಲ ವಾಪಸು ನೀರಿಗೆ ಬಿಡುತ್ತೀ

ಊರ ಹುಡುಗರು ನಿನ್ನ ನೋಡಿ ಹೆದರಿ ಓಡುವರು
ಜನವೆಲ್ಲ ನಿನ್ನ ಬಗ್ಗೆ ಏನೇನೋ ಆಡಿಕೊಳ್ಳುವರು
ಆದರೂ ನಿನ್ನದು ನಿಷ್ಕಂಪಿತ ನಡೆ
ಕಿವಿಯಿಲ್ಲದ ನೀನು ಹೇಗೆ ಎಲ್ಲವನೂ ಕೇಳುತ್ತೀ
ಮೂಗಿಲ್ಲದ ನೀನು ಹೇಗೆ ಎಲ್ಲವನೂ ಗ್ರಹಿಸುತ್ತೀ

ತೆಂಬಕಸ್ವಾಮಿಯ ದೇಗುಲದ ಘಂಟೆನಿನಾದದ ಪ್ರತಿಧ್ವನಿಯಲಿ
ಕಂಡುಕೊಂಡೆಯೇ ನಿಮ್ಮೂರ ದೇಗುಲದ ಢಂಡಣ
ತುಂಗಭದ್ರೆಯ ಒಡಲ ತಂಪಲಿ ಸಿಕ್ಕಿತೇ
ನಿಮ್ಮೂರ ನದಿನೀರ ಸೇಚನ
ಇಲ್ಲಿ ಸುರಿಯುತ್ತಿರುವ ಧೋಮಳೆಗಿದೆಯೇ
ಕಡಲ ಮೇಲಿನ ಮಳೆಯ ಮರೆಸುವಷ್ಟು ಕಸುವು

ಹಾಗೆ ಯಾರದೋ ಕಥೆ ಕೇಳಿ ಕಣ್ಣೀರಾಗಲು
ನಮ್ಮೊಳಗೂ ಒಂದು ಕಣ್ಣೀರ ಕಥೆಯಿರಬೇಕೆ?
ಹಾಗೆ ಯಾರಿಗೋ ನಿರಪೇಕ್ಷೆಯಿಂದ ಹೆಗಲಾಗಲು
ನಮ್ಮನೂ ಹೆಗಲು ಕೊಟ್ಟು ಯಾರಾದರೂ ಎಬ್ಬಿಸಿರಬೇಕೆ?
ಹಾಗೆ ನುಡಿ ಹೊರಡದವರ ದನಿ ಅರಿಯುವಂತಾಗಲು
ನಮ್ಮೊಳಗೂ ಘನಿಗಟ್ಟಿದ ಮೌನವಿರಬೇಕೆ?

ಹೇ ವಿಜಯನಗರದ ಬಂಧುವೇ,
ಅಪರೂಪದ ಸುಂದರನೇ,
ಕೊನೆಗಾದರೂ ಸಿಕ್ಕಿತೇ ನಿನಗೆ
ನೀನು ಹುಡುಕುತ್ತಿದ್ದ ಮೀನು?
ನಿನ್ನಂತಃಕರಣಕ್ಕೊಪ್ಪುವ ಮೀನು?

[ವಸುಧೇಂದ್ರರ 'ತೇಜೋ ತುಂಗಭದ್ರಾ' ಓದಿ]

 

Friday, February 04, 2011

ಟು ದತ್ತಾತ್ರಿ, ವಿಥ್ ಪ್ರೀತಿ

ಪ್ರಿಯ ದತ್ತಾತ್ರಿ ಸರ್,

ನಮಸ್ಕಾರ. ಹೇಗಿದ್ದೀರಿ?

ನಿನ್ನೆ ರಾತ್ರಿ ಹನ್ನೆರಡಕ್ಕೆ ನಿಮ್ಮ ಕಾದಂಬರಿ 'ದ್ವೀಪವ ಬಯಸಿ' ಓದಿ ಮುಗಿಸಿದೆ. ಇನ್ನೂ ಹೊರಬರಬೇಕಿದೆ. ಅದೆಷ್ಟ್ ಚನಾಗ್ ಬರ್ದಿದೀರಾ! ಗೊಲ್ಲರಹಳ್ಳಿಯಿಂದ ಲಾಸ್ ಏಂಜಲೀಸ್‌ವರೆಗೆ, ಲಾಸ್ ಏಂಜಲೀಸಿನಿಂದ ಅಮೂರ್ತದೆಡೆಗೆ -ಪ್ರತಿ ಪುಟದಲ್ಲೂ ಮುಂದಿನ ಪುಟದಲ್ಲೇನಾಗುತ್ತೋ ಅನ್ನೋ ಕುತೂಹಲ ಹುಟ್ಟಿಸ್ತಾ, ಸಸ್ಪೆನ್ಸನ್ನು ಬೆಳೆಸ್ತಾ, ಹೊಸ ರೂಪಕಗಳೊಂದಿಗೆ ಹೊಸ ರಾಗಗಳೊಂದಿಗೆ ಹೊಸ ಹೊಳಹುಗಳೊಂದಿಗೆ ಸಾಗುವ ನಿಮ್ಮ ಕಾದಂಬರಿ ಓದಿದ್ದು ನನಗೆ ತುಂಬಾ ಖುಶಿ ನೀಡಿತು. ಮುಕ್ತವಾಗಿ, ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ: ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಕಾದಂಬರಿ ಇದು.

ಶುರುವಿನಲ್ಲೇ ಕಾರ್ಪೋರೇಟ್ ಜಗತ್ತಿನ ಪರಿಮಳ ಚೆಲ್ಲಿ ನನಗೆ 'ಶಿಕಾರಿ'ಯನ್ನು ನೆನಪಿಸಿದ ನಿಮ್ಮ ಕಾದಂಬರಿ, ಆಮೇಲೆ ತಮ್ಮನನ್ನು ಹುಡುಕುವ ಶ್ರೀಕಾಂತನ ನಿರೂಪಣೆ ಓದುವಾಗ 'ಅರೆ, ಅದ್ರಲ್ಲೂ ಹೀಗೇ ಇತ್ತು' ಅನ್ನಿಸಿಬಿಟ್ಟಿತು. ಆದರೆ ಶಿಕಾರಿಯಷ್ಟು ಕ್ಲಿಷ್ಟ ಭಾಷೆಯಲ್ಲಿಲ್ಲದೇ, ಶಿಕಾರಿಗಿಂತ ಆಧುನಿಕವಾಗಿ, ಶಿಕಾರಿಗಿಂತ ಕುತೂಹಲಕಾರಿಯಾಗಿ, ಶಿಕಾರಿಗಿಂತ ಆಪ್ತವಾಗಿ ಓದಿಸಿಕೊಂಡುಹೋಯಿತು.  ಮೊದಲ ಪುಟದ ಅಕ್ಷರಗಳಲ್ಲೇ ಪುಟಿದೇಳುವ ಉತ್ಸಾಹ ಮಧ್ಯದಲ್ಲೆಲ್ಲೂ 'ಡಲ್' ಎನಿಸಲಿಲ್ಲ. ನಗರ, ವಿಮಾನ, ವೇಗ, ಕಂಪನಿ, ಸಾಫ್ಟ್‌ವೇರ್, ಪ್ರಾಜೆಕ್ಟ್, ಟ್ರಾಫಿಕ್, ಪೆಟ್ರೋಲ್, ಹಣ, ಅಮೆರಿಕಾ -ಇಂತಹ ಕಾವ್ಯಕ್ಕೆ ದಕ್ಕದ ಪರಿಸರದಲ್ಲಿನ ಕತೆಯಿಟ್ಟುಕೊಂಡೂ ಇಷ್ಟು ನವಿರಾದ ಕಾದಂಬರಿ ಬರೆದ ನಿಮಗೆ ಹ್ಯಾಟ್ಸಾಫ್!  ಮತ್ತು, ವಿಮಾನ ನಿಲ್ದಾಣವಿರಬಹುದು, ಕಾನ್ಫರೆನ್ಸ್ ರೂಮ್ ಇರಬಹುದು, ಫೋಟೋ ಎಗ್ಜಿಬಿಷನ್ ಇರಬಹುದು, ಯುದ್ಧವಿರಬಹುದು, ಮನಃಶಾಸ್ತ್ರಜ್ಞರ ಕ್ಲಿನಿಕ್ಕಿರಬಹುದು, ಕೊನೆಗೆ ಗಲಾಟೆಯ ಆರ್ಬಿಟ್ರೇಶನ್ ಹಾಲ್ ಇರಬಹುದು -ಎಲ್ಲೆಡೆ ಉದ್ಭವಿಸುವ ಬುದ್ಧರು ಅಥವಾ ಬುದ್ಧರಂತ ಅವಧೂತರನ್ನು ತೋರಿಸಿದ ನಿಮಗೆ ಶರಣು. ನಿಮ್ಮ ಕಾದಂಬರಿ ಓದುತ್ತಾ, ಪ್ರತಿಯೊಬ್ಬನಲ್ಲೂ ಇರುವ ಒಬ್ಬ ಬಿಕ್ಕಳಿಸುವ ಮನುಷ್ಯನನ್ನು ಕಂಡು ನಾನು ಕಣ್ತುಂಬಿಕೊಂಡಿದ್ದೇನೆ.

ಪ್ರತಿ ಅಧ್ಯಾಯವೂ ಬೇರೆಬೇರೆ ಕತೆಗಳನ್ನು ಹೇಳುವ -ಆದರೂ ಅವೆಲ್ಲ ಸೇರಿ ಒಂದೇ ಕತೆಯಾಗಿರುವ- ಎಲ್ಲರ ಕತೆಯಲ್ಲೂ ಎಲ್ಲರೂ ಇರುವ ಪರಿಗೆ ಬೆರಗಾಗಿದ್ದೇನೆ. ಜೋಳದಿಂದ ಇಂಧನ ತಯಾರಿಸುವ ಹಿಂದಿರುವ ಲಾಭ ಮತ್ತು ತೊಂದರೆಗಳ ಬಗೆಗೆ ಶ್ರೀಕಾಂತ್ ಮಾಡಿಕೊಳ್ಳುವ, ಸುಮಾರು ಮೂರ್ನಾಲ್ಕು ಪುಟಗಳಿರುವ, ನ್ಯೂಸ್‌ಪೇಪರಿನಲ್ಲೋ ಅಥವಾ ಬೇರ್ಯಾವುದೋ ಮಾಧ್ಯಮದಲ್ಲೋ ಬಂದಿದ್ದರೆ ಕಣ್ಣು ಹಾಯಿಸಲೂ ಸಹ ಸಹ್ಯವಾಗದಿದ್ದ, ನೋಟ್ಸ್ ಸಹ ನಮ್ಮಿಂದ ಸಹನೆಯಿಂದ ಓದಿಸಿಕೊಳ್ಳುತ್ತದೆ ಎಂದರೆ, ಬರೆದ ನಿಮ್ಮ ಕಲೆ ನಿಜಕ್ಕೂ ದೊಡ್ಡದು. ಲೇ‌ಆಫ್ ಡೇ-ಯ ಅಧ್ಯಾಯ ಓದುವಾಗ ಭಯದಿಂದ ನಮ್ಮೆದೆಯ ಢವವೇ ಏರುತ್ತ ಹೋದರೆ, ಯೊಸಿಮಿಟಿಯ ಸ್ವರ್ಗದ ವರ್ಣನೆಯಲ್ಲಿ ಕಾವ್ಯದ ಝರಿಯೇ ಎದೆಯಲ್ಲಿ ಹರಿಯುತ್ತದೆ. ನಿಮ್ಮ ಬರವಣಿಗೆಯ ಶೈಲಿ ಅದೆಷ್ಟು ಆಪ್ತವಾಗಿದೆಯಂದರೆ, ಪ್ರತಿ ಪಾತ್ರದ ತಲ್ಲಣವೂ ನಮ್ಮದಾಗುತ್ತದೆ. ಹಾರ್ವರ್ಡ್ ಬ್ರಿಜ್ಜಿನ ಮೇಲೆ ಶ್ರೀಕಾಂತ್ ಸೈಕಲ್ ತುಳಿಯುವಾಗ ಕಾಣುವ ದೃಶ್ಯಗಳನ್ನೆಲ್ಲಾ ನಾವೇ ಕಾಣುತ್ತ ಸಾಗಿದಂತೆ ಭಾಸವಾದರೆ, ಸಾಂಟಾ ಆಣಾ ಗಾಳಿಯಲ್ಲಿನ ಬೆಂಕಿಯ ಝಳ ನಮ್ಮನ್ನೇ ತಾಕುತ್ತದೆ. ಮರ್ಲಿನ್ ಮನ್ರೋಳ ಎದೆಯೆಡೆಗೆ ಹೋಗುವ ರಸ್ತೆ, ಬುದ್ಧನ ಚೂರಿನ ನುಣುಪು, ಶ್ರೀಲಂಕಾದ ಯೋಧ ಹಿಡಿದ ಫೋಟೋ, ಫ್ರಾಂಕೋನ ಹೆಂಡತಿಯ ಮನೆತುಂಬಿದ ವಸ್ತುಗಳು -ಎಲ್ಲವನ್ನೂ ನಾವೂ ಸವರಿದ್ದೇವೆ, ಸವಿದಿದ್ದೇವೆ.

ಈ ಕಾದಂಬರಿ ನನಗೆ ಅನೇಕ ಹೊಸ ರೂಪಕಗಳನ್ನು ಕಟ್ಟಿಕೊಟ್ಟಿದೆ, ಪ್ರತಿಮೆಗಳಿಗೆ ನೆಲೆಯಾಗಿದೆ, ಕತೆಗಳಿಗೆ ಸ್ಫೂರ್ತಿಯಾಗಿದೆ, ಅರಿವುಗಳನ್ನು ತೆರೆದಿದೆ, ವಿಷಯಗಳನ್ನು ಸ್ಪಷ್ಟಪಡಿಸಿದೆ, ಪ್ರಶ್ನೆಗಳನ್ನು ಎತ್ತಿದೆ. ಕೊನೆಗೂ ತಿಳಿಯಲಾಗದ ಭೂಷಣ ರಾವ್ ಎಂಬ ನಿಗೂಢ, ಮುಗಿಯದ ಕೃಷ್ಣನ ಹುಡುಕಾಟ, ಅರ್ಥವಾಗದ ನಮ್ಮದೇ ಮನಸುಗಳ ತಾಕಲಾಟ, ದಾರಿತಪ್ಪಿದ ಎಲ್ಲರ ಪರದಾಟ, ಜಗತ್ತು ಸಧ್ಯಕ್ಕಿರುವ ಪರಿಪಾಠ -ಎಲ್ಲವೂ ನಿಮ್ಮ ಕಾದಂಬರಿ ಓದುತ್ತ ನನಗೆ ಹೃದ್ಯವಾಗಿವೆ. ನನ್ನ ಗೊಂದಲಗಳು ಎಲ್ಲರಿಗೂ ಇವೆಯಲ್ಲಾ ಎಂಬ ಸಮಾಧಾನವಾಗಿದೆ.

ಐದು ದಿನಗಳಲ್ಲಿ, ದಿನಕ್ಕೆ ಐವತ್ತು ಪುಟಗಳಂತೆ 'ದ್ವೀಪವ ಬಯಸಿ' ಓದಿದ್ದು, ಮೈಮರೆತಿದ್ದು ನನಗೆ ದಿವ್ಯಾನುಭವ. ಇಂಥದೊಂದು ಕಾದಂಬರಿ ಕೊಟ್ಟ ನಿಮಗೆ ಧನ್ಯವಾದ. ನಿಮ್ಮ ಹೆಂಡತಿ ಹಣ್ಣನ್ನು ಟ್ರಾಷ್‌ಕ್ಯಾನಿಗಾದರೂ ಹಾಕಲಿ, ಸಿಪ್ಪೆಯನ್ನು ಫ್ರಿಜ್ಜಿನಲ್ಲಾದರೂ ಇಡಲಿ -ಇಷ್ಟೊಳ್ಳೆಯ ಮಾವಿನ ಹಣ್ಣು ತಿನ್ನಿಸಿದ ನಿಮಗೆ ನಾನಂತೂ ಆಭಾರಿ! ನಿಮ್ಮ ಮುಂದಿನ ಕಾದಂಬರಿಗೆ ಈಗಿನಿಂದಲೇ ಕಾಯುವಷ್ಟು ಉತ್ಸಾಹ ಸೃಷ್ಟಿಸಿದ್ದಕ್ಕೆ ಅಭಿನಂದನೆಯೂ!

ಪ್ರೀತಿಯಿಂದ,
ನಿಮ್ಮ,

-ಸುಶ್ರುತ ದೊಡ್ಡೇರಿ

---

ಇನ್ನೂ ಓದದವರಿಗೆ, ಪುಸ್ತಕ ವಿವರ:

ದ್ವೀಪವ ಬಯಸಿ (ಕಾದಂಬರಿ)
ಲೇಖಕರು: ಎಂ.ಆರ್. ದತ್ತಾತ್ರಿ
ಪ್ರಕಾಶನ: ಛಂದ ಪುಸ್ತಕ
ಪುಟಗಳು: 264; ಬೆಲೆ: 150/-

ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಖಂಡಿತ ಲಭ್ಯ!

Friday, September 01, 2006

ನಾನು ಓದಿದ ಪುಸ್ತಕ (೨)

ದಾಟು: ಜಾತಿ ಸಮಸ್ಯೆಯ ಒಳನೋಟ

ತಿರುಮಲಾಪುರದ ದೇವಸ್ಥಾನದ ಅರ್ಚಕ ವೆಂಕಟರಮಣಯ್ಯನವರ ಮಗಳು ಸತ್ಯಭಾಮಳೂ ಅದೇ ಊರಿನ ಶಾಸಕ ಮೇಲಗಿರಿ ಗೌಡರ ಮಗ ಶ್ರೀನಿವಾಸನೂ ಪ್ರೀತಿಸುತ್ತಿದ್ದಾರೆ, ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ತಿಳಿದು ಕೆರಳುವ ಸತ್ಯಳ ತಂದೆ ಬೆಂಗಳೂರಿಗೆ ಹೋಗಿ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಬುದ್ಧಿ ಹೇಳುತ್ತಾರೆ. ಶ್ರೀನಿವಾಸನ ಪೋಷಕರೂ ಮಗನಿಗೆ ಬುದ್ಧಿ ಹೇಳುತ್ತಾರೆ. ಆದರೆ ಸತ್ಯ ನಿರ್ಧಾರ ಬದಲಿಸುವುದಿಲ್ಲ; ಶ್ರೀನಿವಾಸ ನಿರ್ಧಾರ ಬದಲಿಸಿ ಬೇರೆ ಮದುವೆಯಾಗುತ್ತಾನೆ.

ಇತ್ತ ಮಗಳನ್ನು ಚಪ್ಪಲಿಯಲ್ಲಿ ಹೊಡೆದು ಬಂದನಂತರ ವೆಂಕಟರಮಣಯ್ಯರವರನ್ನು ಚಿಂತೆ ಆವರಿಸಿಕೊಳ್ಳುತ್ತದೆ. ವೆಂಕಟರಮಣಯ್ಯನವರಿಗೆ ಒಂದು ಚರಿತ್ರೆ ಇರುತ್ತದೆ. ಅವರ ಹೆಂಡತಿ ಪ್ರಾಯದಲ್ಲೇ ತೀರಿಕೊಂಡಿರುತ್ತಾರೆ. ದೇವಸ್ಥಾನದ ಅರ್ಚಕರಾಗಿದ್ದ ಇವರು ಮೊದಮೊದಲು ಹೆದರಿದರೂ, ಕೊನೆಗೂ ದೈಹಿಕ ವಾಂಛೆಗಳನ್ನು ಗೆಲ್ಲಲಾಗದೆ, ಮಾತಂಗಿ ಎಂಬ ಹರಿಜನರ ವಿಧವೆ ಹೆಂಗಸಿನೊಂದಿಗೆ ಸಂಬಂಧವಿರಿಸಿಕೊಳ್ಳುತ್ತಾರೆ. ಈ ಗೌಪ್ಯ ಸಂಬಂಧಕ್ಕೆ ಸುಮಾರು ಮೂರು ವರ್ಷಗಳ ಕಾಲವಾಗಿರುತ್ತದೆ. ಆಗ ಒಂದು ಎಡವಟ್ಟು ಆಗಿಬಿಡುತ್ತದೆ. ಮಾತಂಗಿ ಗರ್ಭವತಿಯಾಗಿಬಿಡುತ್ತಾಳೆ. ಗುಡಿಯ ಅರ್ಚಕರಿಗೆ ಕೆಟ್ಟ ಹೆಸರು ಬರುವುದನ್ನು ಬಯಸದ ಅವಳು ದೂರದ ಊರೊಂದಕ್ಕೆ ಹೋಗಿ, ಅಲ್ಯಾರೊಂದಿಗೋ ಮದುವೆಯಾಗಿ, ಮಗುವನ್ನು ಹೆತ್ತು ಸಾಕಿಕೊಳ್ಳುತ್ತಾಳೆ. ಇದೆಲ್ಲಾ ಆಗಿದ್ದು ಈಗ ಹದಿನೈದಿಪತ್ತು ವರ್ಷಗಳಾಗಿವೆ.

ಈ ಮಧ್ಯೆ ದೇಶದಲ್ಲಿ ಜಾತಿಮತ ಭೇದವೆಲ್ಲಾ ದೂರವಾಗಬೇಕು ಅಂತ ಕ್ರಾಂತಿಯಾಯಿತು. ಹೊಲೆಯ, ಮಾದಿಗರನ್ನು 'ಹರಿಜನರು' ಅಂತ ಕರೆಯಬೇಕು ಎಂದಾಯಿತು. ಅವರೆಲ್ಲರಿಗೂ ದರಖಾಸ್ತಿನಲ್ಲಿ ಸರ್ಕಾರ ಜಮೀನು ಮಂಜೂರು ಮಾಡಿತು. ಮಂಗಳೂರು ಹೆಂಚಿನ ಮನೆ ಕಟ್ಟಿಸಿಕೊಟ್ಟಿತು. ಹರಿಜನರನ್ನು ಅಸ್ಪೃಷ್ಯರನ್ನಾಗಿ ಕಾಣಬಾರದು ಎಂದರು. ಅವರನ್ನು ದೇವಸ್ಥಾನದೊಳಕ್ಕೆ ಬಿಡುವಂತೆಯೂ ಆಯಿತು.

ಈಗ ವೆಂಕಟರಮಣಯ್ಯನವರಿಗೆ ಇವೆಲ್ಲ ನೆನಪಾಗಿ, ಸತ್ಯಳ ವರ್ತನೆ, ವಾದಗಳೊಂದಿಗೆ ಹೋಲಿಸಿಕೊಳ್ಳುವಂತಾಗಿ, ಗೊಂದಲವಾಗಿ, ಅದೇ ಯೋಚನೆ ಮಾಡಿ ಮಾಡಿ, ಹುಚ್ಚೇ ಹಿಡಿದುಬಿಡುತ್ತದೆ. ಅವರು ಮನೆ ಬಿಟ್ಟು, ದೇವಸ್ಥಾನದ ಪೂಜೆ ಬಿಟ್ಟು, ತೋಟದಲ್ಲಿ ಗುಡಿಸಲೊಂದನ್ನು ಕಟ್ಟಿಕೊಂಡು ಬದುಕಲು ಶುರುವಿಡುತ್ತಾರೆ.

ಪ್ರೇಮಭಂಗವಾಗಿ, ವಿಷಯ ಬಹಿರಂಗವಾಗಿ, ಸಮಾಜದಲ್ಲಿ ಹೆಸರು ಕಳೆದುಕೊಂಡು, ಅದರಿಂದಾಗಿ ಕೆಲಸ ಕಳೆದುಕೊಂಡು, ಸೀರೆ ಅಂಗಡಿಯೊಂದರಲ್ಲಿ ಕೂಲಿ ಮಾಡಿಕೊಂಡಿದ್ದ ಸತ್ಯ ಅಪ್ಪನ ಪರಿಸ್ಥಿತಿಯ ಸುದ್ಧಿ ಕೇಳಿ ಊರಿಗೆ ಧಾವಿಸುತ್ತಾಳೆ. ತೋಟದ ಗುಡಿಸಲಿನಲ್ಲಿ ಹುಚ್ಚು ಹಿಡಿದಿದ್ದ ತಂದೆ ವೆಂಕಟರಮಣಯ್ಯ, ಸತ್ಯಳಿಗೆ ಯಜ್ನೋಪವೀತ ಧಾರಣೆ ಮಾಡುತ್ತಾರೆ. 'ಇನ್ನು ಮೇಲೆ ಹೋಮ, ಹವನ ಮಾಡು' ಅಂತ ಭೋದಿಸುತ್ತಾರೆ. ಅವರ ಹುಚ್ಚು ಹುಚ್ಚು ಮಾತುಗಳ ಸಹಾಯದಿಂದಲೇ ಸತ್ಯ ಮಾತಂಗಿಯ ಜತೆಗಿನ ಗೌಪ್ಯ ಸಂಬಂಧದ ಇತಿಹಾಸವನ್ನು ಪತ್ತೆ ಮಾಡುತ್ತಾಳೆ. ಅವರನ್ನು ಮಾನಸಿಕ ರೋಗ ತಜ್ನರ ಬಳಿಗೊಯ್ದು ಕಾಯಿಲೆ ವಾಸಿ ಮಾಡಿಸಿಕೊಂಡು ಬರಬೇಕು ಎಂಬ ಪ್ರಯತ್ನಗಳು ನಡೆಯುತ್ತಿರುವಾಗಲೇ ವೆಂಕಟರಮಣಯ್ಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸತ್ಯ ತಾನು ಇನ್ನು ಇದೇ ಗುಡಿಸಲಿನಲ್ಲಿ ಬದುಕಬೇಕು ಅಂತ ತೀರ್ಮಾನಿಸುತ್ತಾಳೆ. ಅಪ್ಪ ಬರೆದಿಟ್ಟಿದ್ದ ವಿಲ್ ಅವಳ ನೆರವಿಗೆ ಬರುತ್ತದೆ. ತಾನು ಶೂದ್ರಳಂತೆ ಬದುಕಬೇಕಂತ ನಿರ್ಧರಿಸುತ್ತಾಳೆ. ಮಾತಂಗಿಗಿಂತ ಶೂದ್ರಳಾಗಬೇಕೆಂದುಕೊಳ್ಳುತ್ತಾಳೆ.
ಅತ್ತ ಶ್ರೀನಿವಾಸನ ಹೆಂಡತಿ ಹೆರಿಗೆಯ ಸಮಯದಲ್ಲಿ ತೀರಿಕೊಳ್ಳುತ್ತಾಳೆ. ಶ್ರೀನಿವಾಸ ಒಬ್ಬಂಟಿಯಾಗುತ್ತಾನೆ. ಸತ್ಯಳ ನೆನಪು ಕಾಡಲಾರಂಭಿಸುತ್ತದೆ. ಅವನಿಗೆ ಮತ್ತೊಂದು ಮದುವೆ ಮಾಡುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಅವನ ಪೋಷಕರು 'ಹೋಗಲಿ, ಸತ್ಯಳನ್ನೇ ಮಾಡಿಕೋ ಹಾಗಾದರೆ' ಅನ್ನುತ್ತಾರೆ. ಆದರೆ ಈ ಬಾರಿ ಸತ್ಯಳೇ ಮದುವೆಯನ್ನು ನಿರಾಕರಿಸುತ್ತಾಳೆ ಮತ್ತು ಹರಿಜನರ ಬೆಟ್ಟಯ್ಯನ ಮಗಳು ಮೀರಾಳನ್ನು ಮಾಡಿಕೋ ಎಂದು ಶ್ರೀನಿವಾಸನಿಗೆ ಸಲಹೆ ಕೊಡುತ್ತಾಳೆ. ಅವಳು ಕೊಟ್ಟ ಸಲಹೆಯೇ ಗಟ್ಟಿಯಾಗಿ ಶ್ರೀನಿವಾಸನಿಗೆ ಮೀರಾಳ ಮೇಲೆ ಎಂಥದೋ ಆಕರ್ಷಣೆ ಉಂಟಾಗಿ ಪ್ರೇಮ ಶುರುವಾಗುತ್ತದೆ. ಅವರಿಬ್ಬರೂ ಮದುವೆ ಮಾಡಿಕೊಳ್ಳುವುದು ಅಂತ ತೀರ್ಮಾನಿಸುತ್ತಾರೆ.

ಆದರೆ ಶ್ರೀನಿವಾಸನ ಮನೆಯಿಂದ ಈ ಬಗ್ಗೆ ತೀವ್ರವಾದ ವಿರೋಧ ಬರುತ್ತದೆ. ಬೆಟ್ಟಯ್ಯನವರೂ ಮನಸ್ಪೂರ್ತಿಯಿಂದ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಬುದ್ಧಿ ಹೇಳಿದರೂ ಸರಿಹೋಗದ ಶ್ರೀನಿವಾಸನನ್ನು ತಹಬಂದಿಗೆ ತರಲು ಅವನ ತಂದೆ ಉಪಾಯ ಮಾಡಿ ಸತ್ಯಳ ಅಣ್ಣ ವೆಂಕಟೇಶನನ್ನು ಈ ಕೆಲಸಕ್ಕೆ ನೇಮಿಸುತ್ತಾರೆ. ವೆಂಕಟೇಶ ಶ್ರೀನಿವಾಸನನ್ನು ಕಂಡು 'ಸತ್ಯ ಮೀರಾಳ ಅಣ್ಣ ಮೋಹನದಾಸನನ್ನು ಮದುವೆಯಾಗುತ್ತಿದ್ದಾಳೆ. ನಿನಗೆ ಈ ರೀತಿ ದಡ ಕಾಣಿಸಿ ಅವನನ್ನು ಮದುವೆಯಾಗುವ ಪ್ಲಾನು ಅವಳದು' ಎಂದು ಸುಳ್ಳು ಹೇಳಿ ಕಿವಿ ತಿರುಚುತ್ತಾನೆ. ಸದರಿ ಮೋಹನದಾಸ -ಬೆಟ್ಟಯನವರ ಮಗ- ತಲತಲಾಂತರದಿಂದ ತಮ್ಮನ್ನು ಕೀಳಾಗಿ ಕಾಣುತ್ತಾ ಬಂದಿರುವ ಮೇಲುಜಾತಿಯವರ ಮೇಲೆ ಸದಾ ಕೆಂಡ ಕಾರುವ, ಇವೆಲ್ಲಾ ತೊಲಗಬೇಕಾದರೆ ಕ್ರಾಂತಿಯಾಗಬೇಕು, ಮೇಲು ಜಾತಿಯವರ ಮೇಲೆ ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಬೇಕು ಎಂಬ ತತ್ವವುಳ್ಳ ತರುಣ. 'ಜಾತಿ ಬೇಧವೆಲ್ಲಾ ಸುಳ್ಳು' ಎಂಬ ವಾದವನ್ನು ನಂಬಿದ್ದ ಮತ್ತು ಎಂದೂ ಜಾತಿ ಬೇಧ ಮಾಡದ ಸತ್ಯಳೊಂದಿಗೆ ಅವನಿಗೆ ಪರಿಚಯ ಬೆಳೆಯುತ್ತದೆ. ಅವನ ಅನೇಕ ತತ್ವಗಳನ್ನು ಸತ್ಯ ಒಪ್ಪದಿದ್ದರೂ, ಅವನು ಒತ್ತಾಯಿಸಿದ ಕಾರಣ, ಈ ಜಾತಿಪದ್ಧತಿ, ಹರಿಜನ, ಅಸ್ಪೃಷ್ಯತೆ, ಸಮಾನತೆ -ಇವುಗಳನ್ನೆಲ್ಲಾ ಸಮೀಕರಿಸಿ ಒಂದು ಪುಸ್ತಕ ಬರೆದು ಮೋಹನದಾಸನಿಗೆ ಕೊಡಲು ಒಪ್ಪಿರುತ್ತಾಳೆ. ಇದೇ ಕಾರಣಕ್ಕೆ ಅವಳ ತೋಟದ ಮನೆಗೆ ಪದೇ ಪದೇ ಬಂದು ಹೋಗುತ್ತಿದ್ದ ಮೋಹನದಾಸನ ಬಗ್ಗೆ ತಿಳಿದಿದ್ದ ಶ್ರೀನಿವಾಸ, ಈಗ 'ಸತ್ಯ ಅವನನ್ನೇ ಮದುವೆಯಾಗುತ್ತಿದ್ದಾಳಂತೆ' ಎಂಬ ಸುಳ್ಳು ಸುದ್ಧಿಯನ್ನು ಸುಲಭವಾಗಿ ನಂಬುತ್ತಾನೆ. ತನ್ನಂತಹ ತನ್ನನ್ನೇ ನಿರಾಕರಿಸಿ ಆ ಮಾದಿಗನನ್ನು ಕಟ್ಟಿಕೊಳ್ಳಲು ಹೊರಟಿರುವ ಸತ್ಯಳ ಬಗ್ಗೆ ದ್ವೇಷ ಬೆಳೆಯುತ್ತದೆ. 'ತಾನು ಮಾದಿಗನಿಂತ ಕೀಳಾ?' ಅಂತ ಕೇಳಿಕೊಳ್ಳುತ್ತಾನೆ. ಮೀರಾಳೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಮೀರಾ ಈ ಅವಮಾನ, ಅನ್ಯಾಯವನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮತ್ತು ಶ್ರೀನಿವಾಸ ಅಕ್ಷರಶಃ ಹುಚ್ಚನೇ ಆಗಿಬಿಡಿತ್ತಾನೆ.

ಈ ಮಧ್ಯೆ ಸತ್ಯ ಬರೆದ ಪುಸ್ತಕ ಕ್ರಾಂತಿಯನ್ನೇ ಉಂಟುಮಾಡುತ್ತದೆ. ಮೋಹನದಾಸನ ನೇತೃತ್ವದಲ್ಲಿ ಎಲ್ಲೆಡೆಯಲ್ಲೂ ಹರಿಜನರು ಸಂಘಗಳನ್ನು ಕಟ್ಟಿಕೊಂಡು ಹೋರಾಟಕ್ಕಿಳಿಯುತ್ತಾರೆ. ದೇವಸ್ಥಾನಗಳಿಗೆ ನುಗ್ಗುತ್ತಾರೆ. ಹೋಟೆಲುಗಳಿಗೆ ನುಗ್ಗುತ್ತಾರೆ. ಅವರ ಕ್ರಾಂತಿಯಾತ್ರೆ ತಿರುಮಲಾಪುರಕ್ಕೂ ಬರುತ್ತದೆ. ಜನಗಳ ತೀವ್ರ ಪ್ರತಿರೋಧದ ನಡುವೆಯೂ ಅವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಆದರೆ ಮಂಗಳಾರತಿಯ ಸಂದರ್ಭದಲ್ಲಿ ಮೋಹನದಾಸನಿಗೆ ಅಂತಃಪ್ರಜ್ನೆ ಕೆಲಸ ಮಾಡಿ ಮೂರ್ಚೆ ತಪ್ಪಿ ಬಿದ್ದುಬಿಡುತ್ತಾನೆ.

ಎಚ್ಚರಾಗಿ ಎದ್ದು ಊರುಬಿಟ್ಟು ಹೋದವನಿಗೆ ತನ್ನ ಊರಲ್ಲೇ ತನಗಾದ ಈ ಅವಮಾನವನ್ನು ಸಹಿಸಲಾಗದೆ, ದೇವಸ್ಥಾನವನ್ನೇ, ಮೇಲ್ಜಾತಿಯ ಜನಗಳನ್ನೇ, ಇಡೀ ಊರನ್ನೇ ನಾಶ ಮಾಡುವ ಸಂಚು ಹೂಡುತ್ತಾನೆ. ಡೈನಾಮೈಟ್ ಇಟ್ಟು ಕೆರೆಯನ್ನು ಉಡಾಯಿಸಿಬಿಡುತ್ತಾನೆ. ಇಡೀ ಊರು ಜಲಪ್ರಳಯಕ್ಕೊಳಗಾಗುತ್ತದೆ. ಸತ್ಯ ಮೂಕವಿಸ್ಮಿತಳಾಗಿ ದೂರ ನಿಂತು ನೋಡುತ್ತಾಳೆ.

Monday, August 28, 2006

ನಾನು ಓದಿದ ಪುಸ್ತಕ (೧)

ಪರ್ವ: ಮಹಾಭಾರತದ ಮರುಸೃಷ್ಟಿ
ಕಾದಂಬರಿಯನ್ನು ಮದ್ರದೇಶದ ಅರಮನೆಯ ದೃಶ್ಯದೊಂದಿಗೆ ಶುರು ಮಾಡುತ್ತಾರೆ ಭೈರಪ್ಪ. ರಾಜ ಶಲ್ಯ ತನ್ನ ಮೊಮ್ಮಗಳು ಹಿರಣ್ಯವತಿಯೊಂದಿಗೆ ಮಾತನಾಡುತ್ತಿದ್ದಾನೆ. ಹಿರಣ್ಯವತಿ ತಾತನ ವಯಸ್ಸನ್ನು ಕೇಳುತ್ತಾಳೆ. ಅದಕ್ಕೆ ಶಲ್ಯ ಎಂಬತ್ತನಾಲ್ಕು ಎಂದು ಉತ್ತರಿಸುತ್ತಾನೆ. ಹೇಗೆ ಲೆಕ್ಕ ಇಟ್ಟಿದ್ದೀಯ ಎಂಬ ಅವಳ ಮರುಪ್ರಶ್ನೆಗೆ 'ಭೀಷ್ಮನಿಗಿಂತ ನಾನು ಮೂವತ್ತಾರು ವರ್ಷಕ್ಕೆ ಚಿಕ್ಕವನು. ಅವನಿಗೆ ಈಗ ನೂರ ಇಪ್ಪತ್ತಂತೆ. ಅಂದರೆ ನನಗೆಷ್ಟಾಯಿತು ಹೇಳು..?' ಎನ್ನುತ್ತಾನೆ.

ಪರ್ವದಲ್ಲಿ ನಾನು ಮೊದಲು ಗಮನಿಸಿದ ಅಂಶವೆಂದರೆ, ಪಾತ್ರಗಳ ವಯಸ್ಸನ್ನು ಖಚಿತವಾಗಿ mention ಮಾಡಿದ್ದು. ಮೂಲ ಮಹಾಭಾರತದಲ್ಲಿ ಇಲ್ಲದ, ಪರ್ವವನ್ನು ಓದುವಾಗ 'ಅರೆರೆ, ಹೌದಲ್ಲ' ಅನ್ನಿಸುವ ಅತ್ಯಂತ ದೊಡ್ಡ ವಿಶೇಷ ಇದು. ಮೂಲ ಮಹಾಭಾರತವನ್ನು ಓದುವಾಗ, ಅಥವಾ ಅದರ ಕತೆಯನ್ನು ಕೇಳುವಾಗ, ಅಥವಾ ಟೀವಿ - ಯಕ್ಷಗಾನಗಳಲ್ಲಿ ನೋಡುವಾಗ ನಮ್ಮ ಗಮನಕ್ಕೇ ಬಾರದ ಅಂಶ ಇದು. ಅಲ್ಲೆಲ್ಲಾ ಧರ್ಮರಾಯನಿಗೆ ಸುಮಾರು ನಲವತ್ತು ವರ್ಷವಾದಂತೆ ಅನ್ನಿಸುತ್ತದೆ. ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ, ಕರ್ಣ, ಕೃಷ್ಣರನ್ನೆಲ್ಲ ಮೂವತ್ತು - ಮೂವತ್ತೈದರ ಆಸುಪಾಸಿನವರಂತೆ ಬಿಂಬಿಸಲಾಗುತ್ತದೆ. ಭೀಷ್ಮ-ದ್ರೋಣರು ಅರವತ್ತೈದು-ಎಪ್ಪತ್ತರವರವರಂತೆ ಕಾಣಿಸುತ್ತಾರೆ. ಆದರೆ ಪರ್ವದಲ್ಲಿ ಅದು ಪೂರ್ತಿಯಾಗಿ ವಿಭಿನ್ನವಾಗಿದೆ. ಇಲ್ಲಿ ಧರ್ಮರಾಯನಿಗೆ ಅರವತ್ತು; ಭೀಮ ದುರ್ಯೋಧನರಿಗೆ ಐವತ್ನಾಲ್ಕು-ಐವತ್ತೈದು; ಅರ್ಜುನ ಕೃಷ್ಣರಿಗೆ ಐವತ್ಮೂರು; ಭೀಷ್ಮರಿಗೆ ಪೂರ್ತಿ ನೂರ ಇಪ್ಪತ್ತು!

ಪರ್ವದ ಮೊದಲ ಅಧ್ಯಾಯದ ಪೂರ್ತಿ ಶಲ್ಯಾದಿ ರಾಜರುಗಳಲ್ಲಿ ಯುದ್ಧ ಪೂರ್ವದಲ್ಲಿದ್ದ ತೊಡಕುಗಳ ಚಿತ್ರಣವಿದೆ. ಕುರುಕ್ಷೇತ್ರ ಯುದ್ಧಕ್ಕೆ ತಾವು ಹೋಗಬೇಕೆ ಬೇಡವೆ? ಹೋದರೆ ಯಾರ ಪರವಾಗಿ ಹೋಗಬೇಕು? ಧರ್ಮದ ಪರ ಹೋಗಬೇಕು. ಇಷ್ಟಕ್ಕೂ ಯಾರದು ಧರ್ಮ? ಕೌರವರದ್ದೋ ಪಾಂಡವರದ್ದೋ? ಎರಡೂ ಪಕ್ಷಗಳಿಂದ ರಾಜದೂತರು ಬಂದು ಇವರ ಮನವೊಲಿಸಲಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. 'ಧರ್ಮಕ್ಕೆ ಗೆಲುವಾಗಬೇಕು; ಆದ್ದರಿಂದ ನೀವು ನಮ್ಮ ಕಡೆ ಬರಬೇಕು' ಎಂದು ಓಲೈಸುತ್ತಾರೆ. ಎರಡೂ ಕಡೆಯವರೂ ತಮ್ಮದೇ ಧರ್ಮ ಅನ್ನುವಂತೆ ಮಾತನಾಡುತ್ತಾರೆ. ಇವರಿಗೆ dilemma. ಅದಲ್ಲದೆ 'ಹೋಗಲಿ, ಯಾರ ಕಡೆಗೂ ಬೇಡ, ನಾವು ತಟಸ್ಥರಾಗಿದ್ದುಬಿಡೋಣ' ಎಂದರೆ, ನಡೆಯಲಿರುವುದು ಭಾರೀ ಯುದ್ಧ. ಎಲ್ಲಾ ರಾಜರೂ ಒಂದಲ್ಲಾ ಒಂದು ಕಡೆ ಹೋಗಿಯೇ ಹೋಗುತ್ತಾರೆ. ಹಾಗಿದ್ದಾಗ ನಾವು ಸುಮ್ಮನಿದ್ದರೆ ನಮ್ಮ ಗೌರವ, ಪ್ರತಿಷ್ಠೆಗಳಿಗೆ ಕುಂದು ಎಂದುಕೊಂಡು, ಇಡೀ ಆರ್ಯಾವರ್ತದ ರಾಜರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗುತ್ತಾರೆ.

ಎರಡನೇ ಅಧ್ಯಾಯ ವಿದುರನ ಮನೆಯ ಎದುರಿಗೆ ಹರಿಯುವ ಗಂಗಾನದಿಯ ದಡದಲ್ಲಿ ಯೋಚನಾಮಗ್ನಳಾಗಿ ಕುಳಿತ ಮುದುಕಿ ಕುಂತಿಯ ಚಿತ್ರಣದೊಂದಿಗೆ ಆರಂಭವಾಗುತ್ತದೆ. ವಿದುರ ಬಂದು ಕುಂತಿಗೆ ಹೇಳುತ್ತಾನೆ: 'ಸಂಧಾನಕ್ಕೇಂತ ಇಂದು ಕೃಷ್ಣ ಕೌರವನ ಆಸ್ಥಾನಕ್ಕೆ ಬಂದಿದ್ದ. ಆಗ ಎಲ್ಲರೂ ನಿಬ್ಬೆರಗಾಗುವಂತಹ ಒಂದು ಮಾತನ್ನು ದುರ್ಯೋಧನ ಆಡಿದ. ಪಾಂಡವರ್‍ಯಾರೂ ಅಪ್ಪನಿಗೆ ಹುಟ್ಟಿದವರಲ್ಲ. ಅವರಿಗೆ ನಾವ್ಯಾಕೆ ಪಾಲು ಕೊಡಬೇಕು. ಅವರು ಕುಂತಿಯ ಮಕ್ಕಳು ಅಷ್ಟೆ. ನಿಯೋಗದಿಂದ ಹುಟ್ಟಿದ ಮಕ್ಕಳು ಧರ್ಮದ ಸಂತತಿಯಲ್ಲ -ಎಂದುಬಿಟ್ಟ.' ಕುಂತಿ ಮತ್ತೆ ಯೋಚನಾಲಹರಿಗೆ ಬೀಳುತ್ತಾಳೆ.

ಪರ್ವದ ವೈಶಿಷ್ಟ್ಯವೇನೆಂದರೆ, ಮೂಲ ಮಹಾಭಾರತದಲ್ಲಿನ ಯಾವತ್ತೂ ಅಲೌಕಿಕ ಅಂಶಗಳಿಂದ ಪಾರಾಗಿರುವುದು. ಇಲ್ಲಿ ಕೃಷ್ಣ ದೇವರಲ್ಲ, ಪಾಂಡವರು ವರದಿಂದ ಜನಿಸಿದವರಲ್ಲ, ನೂರೂ ಜನ ಕೌರವರು ಗಾಂಧಾರಿಯ ಪಿಂಡದಿಂದ ಹುಟ್ಟಿದವರಲ್ಲ, ಕರ್ಣ ಸೂರ್ಯಪುತ್ರನಲ್ಲ, ಅಭಿಮನ್ಯು ಹೊಟ್ಟೆಯಲ್ಲಿದ್ದಾಗಲೇ ಚಕ್ರವ್ಯೂಹದ ಗುಟ್ಟು ತಿಳಿದದ್ದು ಸುಳ್ಳು. ಒಂದೊಮ್ಮೆ ಮಹಾಭಾರತ ನಡೆದಿದ್ದರೂ ನಡೆದಿದ್ದಿರಬಹುದೇನೋ ಅನ್ನಿಸುವಂತೆ ಬರೆದಿದ್ದಾರೆ ಭೈರಪ್ಪ. ಪ್ರತಿ ವಿವರವೂ ಓದುಗನಿಗೆ ಆಪ್ತವೆನಿಸುವಂತೆ, ಕಣ್ಣಿಗೆ ಕಟ್ಟಿದಂತೆ, ಇಲ್ಲೇ ಎದುರಿಗೆ ನಡುಯುತ್ತಿದೆಯೇನೋ ಅನ್ನಿಸುವಂತ ಚಿತ್ರಕ ಶಕ್ತಿಯಿಂದ ಕೂಡಿದೆ ಇಡೀ ಪರ್ವ. ಅದಕ್ಕಾಗಿ ಭೈರಪ್ಪ ವರ್ಷಾನುಗಟ್ಟಲೆ study ಮಾಡಿದ್ದೇನು ಸುಳ್ಳಲ್ಲವಲ್ಲ?

ಕುಂತಿ ಯೋಚಿಸುತ್ತಾಳೆ. ನೆನಪುಗಳು ತೂರಿ ಬರುತ್ತವೆ. ಪಾಂಡುವಿನೊಂದಿಗೆ ತನ್ನ ಮದುವೆಯಾದದ್ದು.... ಎಂತಹ ವೈಭವದ ಮದುವೆ! ಎಲ್ಲಾ ನೆನಪಾಗುತ್ತದೆ ಕುಂತಿಗೆ... ಮದುವೆಯ ರಾತ್ರಿಯೇ ಅವಳಿಗೆ ಅರಿವಾಗುತ್ತದೆ: ಪಾಂಡುರಾಜ ನಿರ್ವೀರ್ಯ ಎಂದು. ಆದರೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಪಾಂಡು ಮತ್ತೊಂದು ಮದುವೆಯಾಗುತ್ತಾನೆ. ಮಾದ್ರಿ ಅವನ ಹೆಂಡತಿಯಾಗಿ ಬರುತ್ತಾಳೆ. ಆದರೆ ಅವಳಲ್ಲಿಯೂ ಮಕ್ಕಳಾಗದಿದ್ದಾಗ ದೋಷ ಪಾಂಡುವಿನದೇ ಎಂದು ಸಾಬೀತಾಗುತ್ತದೆ. ಆತ ಹಿಮಾಲಯಕ್ಕೆ ಹೋಗಿ ತನ್ನ ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದು ಬರುವುದಾಗಿ ಹೊರಡುತ್ತಾನೆ. ಅವನ ಇಬ್ಬರು ಮಡದಿಯರೂ ಅವನನ್ನು ಹಿಂಬಾಲಿಸುತ್ತಾರೆ. ಅವರು ಹೋಗಿ ಪರ್ವತವೊಂದರ ತಪ್ಪಲಿನಲ್ಲಿ ನೆಲೆಸುತ್ತಾರೆ. 'ಆ ಪರ್ವತದಾಚೆಗಿನದೇ ದೇವಲೋಕ' ಎಂದು ಪಾಂಡು ಪರಿಚಯಿಸುತ್ತಾನೆ. 'ಅಲ್ಲಿ ನಾನಾ ಔಷಧಿ, ಗಿಡಮೂಲಿಕೆಗಳನ್ನು ತಿಳಿದವರಿದ್ದಾರೆ. ಅವರ ಸಹಾಯದಿಂದ ನಾನು ದೌರ್ಬಲ್ಯಮುಕ್ತನಾಗುತ್ತೇನೆ' ಎಂದು ಅರುಹುತ್ತಾನೆ. ಪರ್ವತಗಳು ಕುಂತಿಗೆ ಕರ್ಣನ ಹುಟ್ಟಿನ ನೆನಪನ್ನು ಮರುಕಳಿಸುತ್ತವೆ.

ಏನೂಂತ ತಿಳಿಯುವ ಮೊದಲೇ ಹುಟ್ಟಿದ ಮಗು. ಕುಂತೀಭೋಜನ ಮಗಳು ಕುಂತಿಗೆ ಹದಿನೈದು ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ, ಒಂದು ದಿನ ದುರ್ವಾಸ ಮುನಿಗಳು ಅರಮನೆಗೆ ಬರುತ್ತಾರೆ. ಅವರ ಸೇವೆಗೆಂದು ನಿಯೋಜಿತಳಾಗಿದ್ದ ಕುಂತಿ ಅವರ ಬಳಿ ಕುತೂಹಲಕ್ಕೆಂದು 'ತಾಯಿಯಾಗುವುದು ಎಂದರೇನು?' ಅಂತ ಕೇಳುತ್ತಾಳೆ. 'ಮಗು ಅಂದರೆ ತುಂಬ ಆಸೆಯೇ?' ದುರ್ವಾಸರು ಕೇಳುತ್ತಾರೆ. ಕುಂತಿ ಹೂಂಗುಡುತ್ತಾಳೆ. ದುರ್ವಾಸರು ಕುಂತಿಯನ್ನು ಕೂಡುತ್ತಾರೆ. ಮಗು ಹುಟ್ಟುತ್ತದೆ. ಆದರೆ ಅದು ಕಾನೀನ (ಮದುವೆಗೆ ಮುಂಚೆ ಹುಟ್ಟಿದ ಮಗು) ವಾದ್ದರಿಂದ, ಅದಾಗಲೇ ಆರ್ಯಜಗತ್ತು ಮುಂದುವರೆದು, ಇಂಥದ್ದನ್ನು ಗೌರವಿಸುತ್ತಿರಲಿಲ್ಲವಾದ್ದರಿಂದ, ವಿಷಯವನ್ನು ಮುಚ್ಚಿಟ್ಟು, ಹುಟ್ಟಿದ ಮಗುವನ್ನು ದಾಸಿ ರಾಧೆಗೆ ಸಾಕಿಕೊಳ್ಳಲು ಕೊಟ್ಟುಕಳುಹಿಸುತ್ತಾರೆ. ಕರ್ಣ ರಾಧೆಯ ಮನೆಯಲ್ಲಿ ಸೂತಪುತ್ರನಂತೆ ಬೆಳೆಯುತ್ತಾನೆ.

ಕುಂತಿ ನೆನಪುಗಳಲ್ಲಿ ತೋಯುತ್ತಿರುವಾಗ ಇತ್ತ ಹಸ್ತಿನಾವತಿಯಿಂದ ಧೃತರಾಷ್ಟ್ರನ ಮದುವೆಯಾದ ಸುದ್ದಿ ಬರುತ್ತದೆ. ಪಾಂಡುವಿಗೆ ಯೋಚನೆಯಾಗುತ್ತದೆ. ತನಗಿಂತ ಮೊದಲು ಧೃತರಾಷ್ಟ್ರನಿಗೆ ಮಕ್ಕಳಾದರೆ ಕುರು ಸಿಂಹಾಸನ ಅವರದೇ ಪಾಲಾಗಿ ನಾವು ಇಲ್ಲೇ ಪರ್ವತದ ತಪ್ಪಲಿನಲ್ಲೇ ಉಳಿಯುವಂತಾಗಿಬಿಡುತ್ತದೇನೋ ಎಂದು ಯೋಚಿಸುತ್ತಾನೆ. ಮತ್ತು ಕುಂತಿಯನ್ನು 'ನಿಯೋಗ'ದಿಂದ ತನಗೊಂದು ಮಗುವನ್ನು ಹೆತ್ತುಕೊಡುವಂತೆ ಪುಸಲಾಯಿಸುತ್ತಾನೆ. ಅವಳಿಗೆ ವೀರ್ಯದಾನ ಮಾಡಲು ದೇವಲೋಕದವರಲ್ಲಿ ಬೇಡಿಕೊಳ್ಳುತ್ತಾನೆ. ಅಲ್ಲಿನ ಧರ್ಮಾಧಿಕಾರಿ ಮುಂದೆ ಬರುತ್ತಾನೆ. ಪಾಂಡುವಿನೊಂದಿಗೆ ಒಪ್ಪಂದದ ನಂತರ ಆತ ಕುಂತಿಯೊಂದಿಗೆ ಕೂಡುತ್ತಾನೆ. ಅವನಿಂದಾಗಿ ಕುಂತಿಗೆ ಮಗು ಜನಿಸುತ್ತದೆ. ಆ ಮಗುವೇ ಧರ್ಮರಾಜ. ಸಣ್ಣ ಮೈಕಟ್ಟಿನ, ಶಾಂತ ಸ್ವಭಾವದ ಮಗು. ಅದರಿಂದ ಪಾಂಡುವಿಗೆ ತೃಪ್ತಿಯಾಗುವುದಿಲ್ಲ. ತನಗೆ ಇನ್ನೊಂದು ಮಗುವನ್ನು ಹೆತ್ತುಕೊಡುವಂತೆ ಕೇಳಿಕೊಳ್ಳುತ್ತಾನೆ. ಈ ಭಾರಿ ದೇವಲೋಕದ ಸೇನಾಪತಿ ಮರುತ್ ಬರುತ್ತಾನೆ. ಅವನಿಂದ ಕುಂತಿಗೆ ಭೀಮ ಜನಿಸುತ್ತಾನೆ; ಬಲಭೀಮ. ತದನಂತರ, ಒಂದು ದಿನ ಕುಂತಿ ನದಿಯಲ್ಲಿ ಭೀಮನಿಗೆ ಸ್ನಾನ ಮಾಡಿಸುತ್ತಿರುವಾಗ ದೇವಲೋಕದಿಂದ ಬಂದ ಅಲ್ಲಿನ ಮುಖ್ಯಸ್ಥ ಇಂದ್ರ ಇವಳ ರೂಪವನ್ನು ಕಂಡು ಮನಸೋತು ತಾನೇ ಅವಳಲ್ಲಿ ಒಂದಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಕುಂತಿ ಹೆದರಿದರೂ ಇಂದ್ರನೇ ಪಾಂಡುವನ್ನು 'ತಾನೂ ಕುಂತಿಗೆ ನಿಯೋಗದಲ್ಲಿ ಒಬ್ಬ ಪುತ್ರನನ್ನು ಕರುಣಿಸುವುದಾಗಿ' ಹೇಳಿ ಒಪ್ಪಿಸುತ್ತಾನೆ. ಕುಂತಿಗೆ ಇಂದ್ರನಿಂದ ಹುಟ್ಟಿದ ಮಗುವೇ ಅರ್ಜುನ.

ಇಷ್ಟೆಲ್ಲಾ ಆದಮೇಲೆ ಮಾದ್ರಿಗೆ ಅಕ್ಕನ ಮೇಲೆ ಅಸೂಯೆಯಾಗುತ್ತದೆ. ಆಕೆ ತನಗೂ ಮಕ್ಕಳು ಬೇಕು ಎಂಬ ಆಸೆಯನ್ನು ಪಾಂಡುವಿನಲ್ಲಿ ಅರುಹುತ್ತಾಳೆ. ಕುಂತಿಯೂ ಸಮ್ಮತಿಸುತ್ತಾಳೆ. ಪಾಂಡುವಿನ ಚಿಕಿತ್ಸೆಗೆಂದು ಬರುತ್ತಿದ್ದ ಇಬ್ಬರು ವೈದ್ಯರು ಮಾದ್ರಿಯನ್ನು ಕೂಡುತ್ತಾರೆ. ಮಾದ್ರಿಗೆ ಅವಳಿ ಮಕ್ಕಳಾಗುತ್ತವೆ. ಅವರಿಗೆ ನಕುಲ-ಸಹದೇವರೆಂದು ನಾಮಕರಣವಾಗುತ್ತದೆ. ಇಷ್ಟರಲ್ಲಿ ಪಾಂಡುವಿಗೆ ತನ್ನ ಮೇಲೆ ಔಷಧಿಗಳು ಬೀರುತ್ತಿರುವ ಪ್ರಭಾವದ ಮೇಲೆ ವಿಶ್ವಾಸ ಬಂದಿರುತ್ತದೆ. ಒಂದು ದಿನ ಅವನೇ ಬಲವಂತದಿಂದ ಮಾದ್ರಿಯನ್ನು ಕೂಡಲು ಹೋಗಿ, ಆಘಾತವಾಗಿ, ಸಾವನ್ನಪ್ಪುತ್ತಾನೆ. ಮಾದ್ರಿಗೆ ಪಾಪಪ್ರಜ್ನೆ ಕಾಡಿ, ಯಾರು ಎಷ್ಟೇ ತಡೆದರೂ, ಗಂಡನ ಚಿತೆಯಲ್ಲಿ ತಾನೂ ಸಹಗಮನ ಮಾಡಿಬಿಡುತ್ತಾಳೆ. ಕುಂತಿ ಐದೂ ಮಕ್ಕಳೊಂದಿಗೆ ಹಸ್ತಿನಾವತಿಗೆ ಮರಳಿ ಮಕ್ಕಳನ್ನು ಬೆಳೆಸುತ್ತಾಳೆ.

ಪರ್ವದ ಮೂರನೇ ಅಧ್ಯಾಯ ಭೀಮನ ಮನಸ್ಸಿನ ತುಮುಲಗಳನ್ನು ಚಿತ್ರಿಸುತ್ತದೆ. ಇಡೀ ಪರ್ವ ಕಾದಂಬರಿಯೇ ಪಾತ್ರಗಳ ಮನಸ್ಸಿನ ತಾಕಲಾಟಗಳಿಂದ ತುಂಬಿದುದು. ಭೀಮ, ರಾಕ್ಷಸಜನರ ಸಾಲಕಟಂಕಟಿ (ಹಿಡಿಂಬೆ)ಯಿಂದ ತನಗೆ ಜನಿಸಿದ ಪುತ್ರ ಘಟೋತ್ಕಜನನ್ನು ತನ್ನ ಸೈನ್ಯ ಸಮೇತ ಬಂದು ಯುದ್ಧದಲ್ಲಿ ತನ್ನನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳಲು ಕಾಡಿಗೆ ಹೊರಟಿದ್ದಾನೆ. ಅವನಿಗೆ ಹಿಂದಿನದೆಲ್ಲಾ ನೆನಪಾಗುತ್ತಾ ಹೋಗುತ್ತದೆ. ಅಣ್ಣ ಧರ್ಮಜನ ಯುವರಾಜ ಪಟ್ಟದ ಆಳ್ವಿಕೆಯ ಕಾಲದಿಂದ. ಅಣ್ಣ ಚೆನ್ನಾಗಿಯೇ ಆಳ್ವಿಕೆ ನಡೆಸುತ್ತಿದ್ದ. ಕೀರ್ತಿ ಸಂಪಾದಿಸಿದ್ದ. ಹೀಗೆಯೇ ಮುಂದುವರೆದರೆ ಇವನನ್ನೇ ರಾಜಪದವಿಗೇರಿಸಬೇಕಾಗುತ್ತದೆ ಎಂದರಿತ ಧೃತರಾಷ್ಟ್ರ, ಧರ್ಮಜನ ಬಳಿ ನಯವಾಗಿ 'ವಾರಣಾವತದಲ್ಲಿ ನಿಮಗಾಗಿ ಹೊಸ ಅರಮನೆಯೊಂದನ್ನು ಕಟ್ಟಿಸಿದ್ದೀನಿ. ನೀವೆಲ್ಲ ಅದನ್ನೇ ಉಪರಾಜಧಾನಿಯೆಂದು ಭಾವಿಸಿ ಅಲ್ಲೇ ವಾಸಿಸಿದರೆ ರಾಜ್ಯಕ್ಕೆ ಒಳಿತಾಗುತ್ತದೆ, ರಾಜ್ಯ ವಿಸ್ಥರಣೆಗೂ ಅನುಕೂಲವಾಗುತ್ತದೆ' ಎಂದು ಮರುಳು ಮಾಡಿ ಒಪ್ಪಿಸಿ, ತಮ್ಮನ್ನು ಅರಗಿನ ಅರಮನೆಗೆ ಸ್ಥಳಾಂತರಿಸಿದ್ದ. ವಿದುರನ ಸಹಾಯದಿಂದ ಕುತಂತ್ರ ಬಯಲಾಗಿತ್ತು. ಅರಗಿನ ಅರಮನೆ ಉರಿದುಹೋಗಿ, ಅಲ್ಲಿ ಅಂದು ತಂಗಿದ್ದ ಭೀಲರ ಹೆಂಗಸು ಮತ್ತವಳ ಐವರು ಮಕ್ಕಳ ಸುಟ್ಟ ಶವವನ್ನು ನೋಡಿ, ಪಾಂಡವರು ಸತ್ತೇ ಹೋದರೆಂದು ಭಾವಿಸಿ ಖುಷಿ ಪಟ್ಟಿದ್ದರಂತೆ ದುರ್ಯೋಧನಾದಿಗಳು. ಸುರಂಗದಿಂದ ತಪ್ಪಿಸಿಕೊಂಡು, ತಾಯಿ ಮತ್ತು ನಾಲ್ಕು ಜನ ಸಹೋದರರನ್ನು ತಾನು ಹೊತ್ತು ಕಾಡಿನ ಕತ್ತಲೆಯಲ್ಲಿ ದಿಕ್ಕು ದೆಸೆಯನ್ನದೆ ಓಡಿ ಓಡಿ ಓಡಿ....

to be continued...