Showing posts with label Thought Spot. Show all posts
Showing posts with label Thought Spot. Show all posts

Wednesday, November 14, 2007

ಆಮೆ-ಮೊಲ

ಮೂರನೇ ಕ್ಲಾಸಿನಲ್ಲೋ ನಾಲ್ಕನೇ ಕ್ಲಾಸಿನಲ್ಲೋ ಇದ್ದ ಈ ನೀತಿಕತೆಯನ್ನು ನಿಮ್ಮ ಕನ್ನಡ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡಿ ಹೇಳಿರುತ್ತಾರೆ. ಮಾಡಿರದಿದ್ದರೂ, ಆ ಪಾಠದೊಂದಿಗಿದ್ದ ಓಡುತ್ತಿದ್ದ ಮೊಲ-ಚಿಪ್ಪಿನೊಳಗಿಂದ ಕತ್ತು ಹೊರಹಾಕಿ ಹಿಂದೆ ನೋಡುತ್ತಿದ್ದ ಆಮೆಯ ಬಣ್ಣ ಬಣ್ಣದ ಚಿತ್ರಗಳು ನಿಮಗೆ ನೆನಪಿರುತ್ತವೆ. ಮರೆತು ಹೋಗಿದ್ದಿದ್ದರೂ ನಾನೀಗ ಹೇಳಿದಮೇಲೆ ನೆನಪಾಗಿರುತ್ತದೆ. ನೀವಿದನ್ನು ಓದಿರದಿದ್ದರೂ ನಿಮ್ಮ ಮಗನೋ, ಪಕ್ಕದ ಮನೆ ಪುಟ್ಟಿಯೋ ಶಾಲೆಯಿಂದ ಬಂದೊಡನೆ 'ಇವತ್ತು ಮಿಸ್ಸು ಆಮೆ-ಮೊಲದ ಕಥೆ ಹೇಳಿದ್ರು.. ಎಷ್ಟು ಚೆನ್ನಾಗಿತ್ತು.. ನಿಂಗೊತ್ತಾ ಅದು?' ಎನ್ನುತ್ತಾ ಮೊಲದಂತೆಯೇ ಮುದ್ದಾಗಿ-ಪೆದ್ದಾಗಿ ಪಿಳಿಪಿಳಿ ಕಣ್ಣು ಬಿಡುತ್ತಾ ಕೇಳಿದಾಗ ನೆನಪಾಗುತ್ತಿತ್ತು. ಮರೆತು ಹೋಗಿದ್ದರೂ, ನಿನಪಿದ್ದರೂ, ಹಿಂದೆಲ್ಲೂ ಕೇಳಿರದಿದ್ದರೂ, ಓದಿರದಿದ್ದರೂ ನೀವೀ ಕತೆಯನ್ನು ಮತ್ತೊಮ್ಮೆ ಓದಲಿಕ್ಕೇನು ಅಡ್ಡಿಯಿಲ್ಲ. ಏಕೆಂದರೆ, ಈ ಕತೆ ತುಂಬಾ ಚೆನ್ನಾಗಿದೆ.

ಆಮೆ ಮತ್ತು ಮೊಲದ ಮಧ್ಯೆ ಒಮ್ಮೆ ಓಟದ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರಿಗೂ ಗೊತ್ತಿರುವಂತೆಯೇ ಮೊಲದ ಓಟಕ್ಕೆ ವೇಗ ಹೆಚ್ಚು. ಆಮೆ ಅಂಗುಲ ಸಾಗಲೂ ಗಂಟೆ ಬೇಕು. ಕಾಡಿನ ಪ್ರಾಣಿಗಳೆಲ್ಲ ಈ ತಮಾಷೆಯನ್ನು ನೋಡಲು ಸೇರಿದ್ದವು. ಸಿಂಹರಾಜನೂ ಬಂದಿದ್ದ. ಮಂತ್ರಿ ನರಿ ಶಿಳ್ಳೆ ಊದುತ್ತಿದ್ದಂತೆಯೇ ಓಟ ಶುರುವಾಯಿತು.

ಮೊಲ ಜೋರಾಗಿ ಓಡಿತು. ಸುಮಾರು ದೂರ ಓಡಿಯಾದ ಮೇಲೆ ಹಿಂದೆ ತಿರುಗಿ ನೋಡಿದರೆ ಆಮೆ ಇನ್ನೂ ಎಷ್ಟೋ ಹಿಂದಕ್ಕೆ ನಿಧಾನವಾಗಿ ಬರುತ್ತಿದೆ. ಮೊಲ ಮುಖದಲ್ಲಿ ಗರ್ವದ ಗಹಗಹ ನಗುವನ್ನು ತಂದುಕೊಂಡು, ಒಮ್ಮೆ ಆಕಳಿಸಿ, 'ಅದು ಇಲ್ಲಿಗೆ ಬರುವುದರೊಳಗೆ ಒಂದು ನಿದ್ರೆ ಮಾಡಿ ತೆಗೆಯುವಾ' ಅಂದುಕೊಂಡು, ಅಲ್ಲೇ ಮರದ ಬುಡದಲ್ಲಿ ಮಲಗಿಬಿಟ್ಟಿತು. ಬಿಸಿಲಿನ ಜಳಕ್ಕೋ ಏನೋ, ಆಲಸಿ ಮೊಲಕ್ಕೆ ಜೋರು ನಿದ್ರೆ ಬಂದುಬಿಟ್ಟಿತು.

ಸುಮಾರು ಹೊತ್ತಿನ ಮೇಲೆ ಚಪ್ಪಾಳೆ, ಶಿಳ್ಳೆಗಳ ಶಬ್ದ ಕೇಳಿದಂತಾಗಿ ಮೊಲಕ್ಕೆ ಎಚ್ಚರಾಗಿ ಕಣ್ತೆರೆದು ನೋಡಿದರೆ ಆಮೆ ಹಾಗೇ ನಿಧಾನವಾಗಿ ನಡೆಯುತ್ತ ಓಡುತ್ತ ಮಲಗಿದ್ದ ಮೊಲವನ್ನು ದಾಟಿ ಮುಂದೆ ಹೋಗಿ ಆಗಲೇ ಗುರಿಯ ಸಮೀಪ ತಲುಪಿಬಿಟ್ಟಿದೆ...! ಮೊಲ ಹೌಹಾರಿ ಎದ್ದೆನೋ ಬಿದ್ದೆನೋ ಎಂಬಂತೆ ಓಡತೊಡಗಿತು. ಆದರೆ ಅದು ಏದುಸಿರು ಬಿಡುತ್ತಾ ಗುರಿ ತಲುಪುವುದರೊಳಗೆ ಆಮೆ ಗೆರೆ ದಾಟಿ ಪಂದ್ಯದಲ್ಲಿ ಗೆದ್ದಾಗಿತ್ತು.

ಈ ಕತೆಯ ನೀತಿ ನಿಮಗೆ ಗೊತ್ತಿದ್ದದ್ದೇ. ಸೋಮಾರಿತನ ಒಳ್ಳೇದಲ್ಲ; ಯಾರನ್ನೂ ಕಡೆಗಣಿಸಬಾರದು; ಕಷ್ಟ ಪಟ್ಟರೆ ಎಂಥವರನ್ನು ಬೇಕಾದರೂ ಸೋಲಿಸಬಹುದು; ಇತ್ಯಾದಿ.

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ. ಈ ಮುಂದುವರಿಕೆಯನ್ನು ನಾನು ಓದಿದ್ದು ವಿಶ್ವೇಶ್ವರ ಭಟ್ಟರ 'ನೂರೆಂಟು ಮಾತು' ಅಂಕಣದಲ್ಲಿ, ನಾಲ್ಕಾರು ವರ್ಷಗಳ ಹಿಂದೆ. ಇಂಗ್ಲೆಂಡಿನಲ್ಲಿ ಬೆಕರ್(?) ಅಂತ ಒಬ್ಬನಿದ್ದಾರಂತೆ. ಬೆಕರ್‌ನ ಕೆಲಸವೆಂದರೆ ಕತೆ ಹೇಳುವುದು. ಜಗತ್ತಿನ ಅತಿರಥ ಮಹಾರಥರೆಲ್ಲ ಈತನ ಸ್ಪೂರ್ತಿ ನೀಡುವ ಕತೆ ಕೇಳಲು ಬರುತ್ತಾರಂತೆ. ಕತೆ ಕೇಳಿ, ಕೇಳಿದಷ್ಟು ಡಾಲರ್ ದುಡ್ಡು ಕೊಟ್ಟು ಹೋಗುತ್ತಾರಂತೆ.

ಬೆಕರ್‌ನ ಬಳಿ ಅಂದು ಲಂಡನ್ನಿನ ದೊಡ್ಡ ಉದ್ಯಮಿಯೊಬ್ಬ ಬಂದಿದ್ದ. ತನ್ನದೇ ಉದ್ಯಮದಲ್ಲಿನ ಮತ್ತೊಂದು ಕಂಪನಿ ತನಗೆ ಕೊಡುತ್ತಿರುವ ಪೈಪೋಟಿಯನ್ನು ಎದುರಿಸಲು ಅವನಿಗೆ ನಾಲ್ಕು ಸ್ಪೂರ್ತಿಭರಿತ ಮಾತು ಬೇಕಿತ್ತು. ಬೆಕರ್ ಇದೇ ಆಮೆ-ಮೊಲದ ಕತೆ ಹೇಳಲು ಶುರು ಮಾಡಿದ. ಈ ಕತೆ ಆ ಉದ್ಯಮಿಗೂ ಗೊತ್ತಿತ್ತು. 'ಅಯ್ಯೋ, ಇದೇನು ಗೊತ್ತಿರೋ ಕತೆಯನ್ನೇ ಹೇಳುತ್ತಿದ್ದಾನಲ್ಲ..' ಅಂದುಕೊಂಡ. ಬೆಕರ್ ಕತೆಯನ್ನು ಮುಂದುವರೆಸಿದ:

ಅವಮಾನಿತ ಮೊಲ ಆಮೆಯನ್ನು ಮತ್ತೊಮ್ಮೆ ಪಂದ್ಯಕ್ಕೆ ಆಹ್ವಾನಿಸುತ್ತದೆ. ಆಮೆ ಒಪ್ಪಿಕೊಳ್ಳುತ್ತದೆ. ಪ್ರಾಣಿಗಳೆಲ್ಲವೂ ಸೇರುತ್ತವೆ. ನರಿ ಶಿಳ್ಳೆ ಊದುತ್ತದೆ. ಓಟ ಶುರುವಾಗುತ್ತದೆ. ಈ ಬಾರಿ ಮೊಲ ಸ್ವಲ್ಪವೂ ಆಲಸ್ಯ ತೋರದೆ, ಯಾವುದೇ 'ಛಾನ್ಸ್' ತೆಗೆದುಕೊಳ್ಳದೆ ಜೋ..ರಾಗಿ ಓಡಿ ಗುರಿ ತಲುಪಿ ಕಿಲೋಮೀಟರುಗಟ್ಟಲೆ ಅಂತರದಿಂದ ಆಮೆಯನ್ನು ಸೋಲಿಸುತ್ತದೆ.

ಈ ಕತೆಯ ನೀತಿಯೆಂದರೆ, ನಮಗಿರುವ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಂಡರೆ ಗೆಲುವು ನಮ್ಮದೇ.

ಕತೆ ಅಷ್ಟಕ್ಕೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ:

ಆಮೆಗೆ ತನ್ನ ಸೋಲನ್ನು ಒಪ್ಪಿಕೊಂಡು ಸುಮ್ಮನಿರುವ ಮನಸ್ಸಿಲ್ಲ. ಅದಕ್ಕೆ ಹೇಗಾದರೂ ಮಾಡಿ ಮೊಲವನ್ನು ಸೋಲಿಸಲೇಬೇಕೆಂಬ ತುಡಿತ. ಅದೊಂದು ಪ್ಲಾನ್ ಮಾಡುತ್ತದೆ. ಮೊಲವನ್ನು ಮತ್ತೆ ಸ್ಪರ್ಧೆಗೆ ಆಹ್ವಾನಿಸುತ್ತದೆ.

ಕಾಡಿನ ಪ್ರಾಣಿಗಳಿಗೆಲ್ಲ ಇದೆಂಥಾ ತಮಾಷೆಯಪ್ಪಾ, ಈ ಆಮೆಗೆ ಬುದ್ಧಿಯಿಲ್ಲ ಅಂತ ಅಪಹಾಸ್ಯ. ಆದರೂ ಎಲ್ಲವೂ ಸೇರುತ್ತವೆ. ಸ್ಪರ್ಧೆ ಶುರುವಾಗುತ್ತದೆ. ಮೊಲ ಓಡತೊಡಗುತ್ತದೆ. ಓಡಿ ಓಡಿ ಓಡಿ ಸುಮಾರು ದೂರ ಬಂದಮೇಲೆ ಅದಕ್ಕೆ ಅರಿವಾಗುತ್ತದೆ: ಓಟದ 'ಟ್ರಾಕ್' ಬದಲಾಗಿಬಿಟ್ಟಿದೆ! ಮಧ್ಯದಲ್ಲೊಂದು ಹೊಳೆ ಅಡ್ಡ ಬಂದುಬಿಟ್ಟಿದೆ! ಈ ಹಿಂದಿನ ಸ್ಪರ್ಧೆಗಳಲ್ಲಿ ಬರೀ ನೆಲದ ಮೇಲೆ ಓಟವಿರುತ್ತಿತ್ತು. ತಾನು ಮೋಸ ಹೋದದ್ದು ಮೊಲಕ್ಕೆ ಅರಿವಾಗುತ್ತದೆ. ಅದು ಇಡೀ ಹೊಳೆಯನ್ನು ದಡದಗುಂಟ ಸುತ್ತುವರೆದು ಓಡಿ ಬಂದು ಗುರಿಯನ್ನು ತಲುಪುವುದರೊಳಗೆ ಆಮೆ ಸಲೀಸಾಗಿ ಹೊಳೆಯನ್ನು ಈಜಿ ಆಚೆ ದಡ ಸೇರಿ ಗುರಿಯನ್ನು ತಲುಪುತ್ತದೆ. ವನ್ಯಮೃಗಗಳೆಲ್ಲ ಆಮೆಯ ಬುದ್ಧಿವಂತಿಕೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡುತ್ತವೆ.

ಈ ಕತೆಯ ನೀತಿಯೆಂದರೆ ಗೆಲ್ಲಲೇಬೇಕು ಎಂದಾದರೆ ಹೇಗಾದರೂ ಗೆಲ್ಲಬಹುದು. ಆಟದಲ್ಲಿ ಮೋಸ ಸಾಮಾನ್ಯ ಮತ್ತು ಕ್ಷಮ್ಯ! ಪ್ರತೀ ಆಟಕ್ಕೂ ಮುಂಚೆ ಅದರ ನಿಯಮಾವಳಿಗಳನ್ನು ಸ್ಪರ್ಧಿಗಳು ಚರ್ಚಿಸಿ ಮನದಟ್ಟು ಮಾಡಿಕೊಂಡಿರಬೇಕು. ಇತ್ಯಾದಿ.

ಕತೆ ಇಲ್ಲಿಗೂ ನಿಲ್ಲುವುದಿಲ್ಲ! ಮತ್ತೂ ಮುಂದುವರೆಯುತ್ತದೆ:

ಮೊಲಕ್ಕೆ ಅರಿವಾಗುತ್ತದೆ, ನಮ್ಮಿಬ್ಬರಿಗೂ ಅವರವರದ್ದೇ ಆದ ಸಾಮರ್ಥ್ಯಗಳಿವೆ. ನಾವಿಬ್ಬರೂ ಹೀಗೆ ಸ್ಪರ್ಧೆ ಮಾಡಿಕೊಂಡು ಇದ್ದರೆ ಒಮ್ಮೆ ನಾನು ಸೋಲುತ್ತೇನೆ, ಇನ್ನೊಮ್ಮೆ ಆಮೆ ಸೋಲುತ್ತದೆ. ಅಷ್ಟೇ ವಿನಃ ಮತ್ತೇನೂ ಪ್ರಯೋಜನವಿಲ್ಲ. ಹೀಗೆ ಯೋಚಿಸಿದ ಮೊಲ ಆಮೆಯ ಮನೆಗೆ ಹೋಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಇಬ್ಬರೂ ಫ್ರೆಂಡ್ಸ್ ಆಗುತ್ತವೆ. ಮತ್ತೆ ತಮ್ಮ ಮಧ್ಯೆ ಸ್ಪರ್ಧೆ ನಡೆಯುತ್ತಿರುವುದಾಗಿ ಕಾಡಿನಲ್ಲಿ ಡಂಗುರ ಸಾರುತ್ತವೆ.

ಇಷ್ಟೊತ್ತಿಗಾಗಲೇ ಆಮೆ-ಮೊಲದ ಓಟದ ಸ್ಪರ್ಧೆ ಕಾಡಿನಲ್ಲೆಲ್ಲಾ ಜನಪ್ರಿಯ (ಪ್ರಾಣಿಪ್ರಿಯ?)ವಾಗಿರುತ್ತದೆ. ಎಲ್ಲಾ ಕಡೆ ಬ್ಯಾನರ್ರು ಕಟ್ಟಲಾಗುತ್ತದೆ. ರಾಜ ಸಿಂಹ ತನ್ನ ಹೆಂಡತಿ ಮಕ್ಕಳ ಸಮೇತ ಬಂದು ಗ್ಯಾಲರಿಯಲ್ಲಿ ಕೂರುತ್ತದೆ. ಟ್ರಾಕಿನ ಇಕ್ಕೆಲಗಳಲ್ಲೂ ಪ್ರಾಣಿಗಳು ಓಟವನ್ನು ವೀಕ್ಷಿಸಲು ನಿಂತಿರುತ್ತವೆ. ಕ್ಷಣಗಣನೆ ಆರಂಭವಾಗುತ್ತದೆ. ನರಿ ವಿಶಲ್ ಊದುತ್ತದೆ.

ಮೊದಲೇ ಗುಪ್ತವಾಗಿ ಮಾತಾಡಿಕೊಂಡಿದ್ದಂತೆ, ಶಿಳ್ಳೆ ಶಬ್ದ ಕೇಳುತ್ತಿದ್ದಂತೆಯೇ ಆಮೆ ಮೊಲದ ಬೆನ್ನೇರಿ ಕೂರುತ್ತದೆ. ಆಮೆ ಜೋರಾಗಿ ಓಡುತ್ತದೆ. ಮಧ್ಯದಲ್ಲಿ ಹೊಳೆ ಬರುತ್ತದೆ. ಆಗ ಆಮೆ ಕೆಳಗಿಳಿದು ತನ್ನ ಬೆನ್ನ ಮೇಲೆ ಮೊಲವನ್ನು ಕೂರಿಸಿಕೊಳ್ಳುತ್ತದೆ. ಹೊಳೆ ದಾಟಿಯಾದ ಮೇಲೆ ಮತ್ತೆ ಮೊಲದ ಬೆನ್ನಮೇಲೆ ಆಮೆ ಕೂರುತ್ತದೆ. ಜೋರಾಗಿ ಓಡಿ, ವೀಕ್ಷಕರೆಲ್ಲ ಬೆಕ್ಕಸ ಬೆರಗಾಗುವಂತೆ, ಸ್ಪರ್ಧೆ ಶುರುವಾದ ಕೆಲವೇ ನಿಮಿಷಗಳಲ್ಲಿ ಆಮೆ-ಮೊಲ ಎರಡೂ ಒಟ್ಟಿಗೇ ಗುರಿ ತಲುಪುತ್ತವೆ.

ಕತೆಯ ನೀತಿಯನ್ನು ಅರಿತ ಲಂಡನ್ನಿನ ಆ ವ್ಯಾಪಾರಿ ವಾಪಸು ತೆರಳಿ ಆ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಎರಡೂ ಕಂಪನಿಗಳೂ ವಿಲೀನವಾಗಿ, ಮುಂದಿನ ವರ್ಷ ದುಪ್ಪಟ್ಟು ಲಾಭ ಗಳಿಸಿ, ಲಂಡನ್ನಿನ ವಿಖ್ಯಾತ ಕಂಪನಿಗಳಾಗುತ್ತವೆ.

ಕತೆ, ಯಕ್ಚುವಲಿ ಇಲ್ಲಿಗೆ ಮುಗಿಯಿತು. ಆದರೆ ನನಗೆ ಇತ್ತೀಚೆಗೊಂದು ಎಸ್ಸೆಮ್ಮೆಸ್ ಬಂದಿತ್ತು. ಈಗ ನೀವು ಈ ಸೀಕ್ವೆಲ್ಲುಗಳನ್ನೆಲ್ಲ ಒಂದು ಕ್ಷಣ ಮರೆತು, ಒರಿಜಿನಲ್ ಆಮೆ-ಮೊಲದ ಕತೆಯನ್ನಷ್ಟೇ ನೆನಪಿಟ್ಟುಕೊಳ್ಳಿ. ನನಗೆ ಬಂದ ಎಸ್ಸೆಮ್ಮೆಸ್ಸು ಹೀಗಿದೆ:

ಆಮೆ ಮತ್ತು ಮೊಲ ಸಿಇಟಿ ಪರೀಕ್ಷೆಗೆ ಕಟ್ಟಿದ್ದವು. ಇಬ್ಬರೂ ಸಮಾನ ಬುದ್ಧಿವಂತರು, ಇಬ್ಬರ ಕೈಯಲ್ಲೂ ಸಮಾನ ಅಂಕಗಳಿದ್ದ ಅಂಕಪಟ್ಟಿಗಳಿದ್ದವು. ಆದರೆ ಕೊನೆಯಲ್ಲಿ, ಆಮೆಗೆ ಸಿಇಟಿಯಲ್ಲಿ ಸೀಟು ಸಿಗುತ್ತದೆ; ಮೊಲಕ್ಕೆ ಸಿಗುವುದಿಲ್ಲ. ಯಾಕೆ?

ಉ: ಯಾಕೇಂದ್ರೆ, ಆಮೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಸೀಟ್ ಸಿಕ್ತು! (ಹಿಂದೆ ಆಮೆ ಓಟದ ಸ್ಪರ್ಧೇಲಿ ಗೆದ್ದಿದ್ದು ನೆನಪಿದೆಯಲ್ವಾ?) :-)

ನನಗೆ ಈ ಎಸ್ಸೆಮ್ಮೆಸ್ಸು ಇಷ್ಟವಾಗಿ ನನ್ನೊಂದಿಷ್ಟು ಗೆಳೆಯ-ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ಅವರಲ್ಲಿ ಒಬ್ಬ ಗೆಳತಿ ರಿಪ್ಲೇ ಮಾಡಿದ್ದಳು:

ಓಹ್ ಅದಕ್ಕೇನಾ ಮೊಲ ಬೇಜಾರಾಗಿ 'ಮುಂಗಾರು ಮಳೆ' ಫಿಲ್ಮಲ್ಲಿ ದೇವದಾಸ್ ಆಗಿ ಗಣೇಶನ ಜೊತೆ ಸೇರಿಕೊಂಡಿದ್ದು..? ಅಂತ!

ಕತೆಯೊಂದು ಮುಂದುವರೆಯುವ ಬಗೆ ಕಂಡು ನನಗೆ ಅಚ್ಚರಿ!

(ಈ 'ಕತೆಗಳ ಕತೆ'ಯನ್ನು ಓದುವಾಗ ನೀವೂ ಮಗುವಾಗಿದ್ದಿರಿ ಅಂತ ನಂಗೊತ್ತು. ನಿಮಗೆ ಮಕ್ಕಳ ದಿನಾಚರಣೆಯ ಶುಭಾಷಯಗಳು!)

Monday, July 02, 2007

ಬೆನ್ನ ಮೇಲಿನ ಮಚ್ಚೆ

ನನ್ನ ರೂಂಮೇಟ್ ಹೇಳಿದ:
'ನಿನ್ನ ಬೆನ್ನಲ್ಲೊಂದು ಮಚ್ಚೆಯಿದೆ.'

ಇಷ್ಟರೊಳಗೆ ನಾನು ನನ್ನ ಬೆನ್ನನ್ನು ನೋಡಿಕೊಂಡೇ ಇಲ್ಲ ನೋಡಿ,
ಹಾಗಾಗಿ ಗೊತ್ತೇ ಇರಲಿಲ್ಲ ನನಗೆ ಇದು...
ಹಾಗಂತ ಅವನು ಹೇಳಿದ್ದನ್ನು ನಾನು ತಕ್ಷಣ ನಂಬಲಿಲ್ಲ;
'ಸಾಕ್ಷ್ಯ ಬೇಕು, ಪುರಾವೆ ಬೇಕು, ಹಾಗೆಲ್ಲ ಸುಲಭಕ್ಕೆ
ಏನನ್ನೂ ನಂಬುವುದಿಲ್ಲ ನಾನು' ಎಂದೆಲ್ಲ ದೊಡ್ಡದಾಗಿ ಹೇಳಿದೆ.

ನನ್ನನ್ನು ಒಂದು ನಿಲುವುಗನ್ನಡಿಯ ಮುಂದೆ ಅಂಗಿ ಬಿಚ್ಚಿ ನಿಲ್ಲಿಸಿದ ಅವನು
ಹಿಂದಿನಿಂದ ಮತ್ತೊಂದು ಕನ್ನಡಿ ಹಿಡಿದು ಏನೇನೋ ಕಸರತ್ತು ಮಾಡಿ
ನನಗೆ ನನ್ನ ಬೆನ್ನ ಮಚ್ಚೆಯನ್ನು ತೋರಿಸಲಿಕ್ಕೆ ಪ್ರಯತ್ನಿಸಿದ.
ಏನೇ ಮಾಡಿದರೂ ನನಗೆ ಕಾಣಿಸಲಿಲ್ಲ ಮಚ್ಚೆ.

ಬಗೆಬಗೆಯಾಗಿ ಅವನನ್ನು ಪ್ರಶ್ನಿಸಿ ಪೀಡಿಸಿದೆ:
'ಹೇಗಿದೆ ಅದು? ಎಷ್ಟು ಅಗಲಕ್ಕಿದೆ? ಬಣ್ಣ ಕಪ್ಪಾ? ಅಥವಾ ಜೇನು ಬಣ್ಣವಾ?
ಆಕಾರ ಯಾವುದು? ಎಲ್ಲಿದೆ ಮುಟ್ಟಿ ತೋರಿಸು..' ಇತ್ಯಾದಿ ಇತ್ಯಾದಿ.
'ತಾಳು ಮಾರಾಯ, ಒಂದು ಉಪಾಯ ಮಾಡ್ತೀನಿ' ಎಂದ ಅವನು
ತನ್ನ ಮೊಬೈಲ್ ಕೆಮೆರಾದಿಂದ ನನ್ನ ಬೆನ್ನಿನದೊಂದು ಫೋಟೋ ತೆಗೆದು
ನನ್ನ ಮುಂದೆ ಹಿಡಿದ.

ಹೇಳಿದೆನಲ್ಲ, ನಾನು ಹಾಗೆಲ್ಲಾ ಸುಲಭಕ್ಕೆ ಏನನ್ನೂ ನಂಬುವುದಿಲ್ಲ ಎಂದು,
ಹಾಗೆಯೇ ಇದನ್ನೂ ನಂಬಲಿಲ್ಲ..!
'ಇದು ನನ್ನ ಬೆನ್ನೇ ಅಲ್ಲ' ಎಂದು ವಾದಿಸಿದೆ.
ರೂಂಮೇಟ್‍ಗೆ ಸಿಟ್ಟು ಬಂತು:
'ನನ್ನ ಮೇಲೆ ಇಷ್ಟು ಅನುಮಾನವಾ ನಿಂಗೆ?
ನಾನ್ಯಾಕೆ ಸುಮ್ಮನೇ ಸುಳ್ಳು ಹೇಳಲಿ?
ಏನಾದರೂ ಮಾಡಿಕೊಂಡು ಸಾಯಿ' ಎಂದೆಲ್ಲಾ ಬೈದು
ಉಪ್ಪಿಟ್ಟಿಗೆ ಉಪ್ಪು ಜಾಸ್ತಿ ಹಾಕಿಟ್ಟು ಆಫೀಸಿಗೆ ಹೋಗಿಬಿಟ್ಟ.

'ಸರಿ ಬಿಡಪ್ಪ, ನಂಬ್ತೀನಿ' ಎಂದು
ರಾತ್ರಿ ಮನೆಗೆ ಮರಳಿದ ಅವನನ್ನು ಸಮಾಧಾನ ಮಾಡಿದೆ.
ಹಾಗಂತ ನಾನೇನು ನಂಬಲಿಲ್ಲ, ನಂಬಿದಂತೆ ನಟಿಸಿದೆ ಅಷ್ಟೆ!

ಇದೆಲ್ಲಾ ಆಗಿದ್ದು ಈಗ ಆರು ತಿಂಗಳ ಹಿಂದೆ.
ಮೊನ್ನೆ ಯಾರೋ ಯಾರ ಬಗ್ಗೆಯೋ 'ಅವನು ಹೇಗೆ?' ಅಂತ ಕೇಳಿದರು ನೋಡಿ,
ನನ್ನ ಬೆನ್ನ ಮೇಲಿನ ಮಚ್ಚೆಯ ಬಗ್ಗೆಯೇ ಗೊತ್ತಿಲ್ಲದ ನಾನು
ಇನ್ಯಾರದೋ ಬಗ್ಗೆ 'ಅವನು ಹೀಗೇ' ಅಂತ ಹೇಗೆ ಹೇಳಲಿ,
ಅಥವಾ ನಾನು ಹೇಳಿದರೂ ಅದನ್ನು ಅವರು ನಂಬುತ್ತಾರೆಯೇ,
ನಂಬದಿದ್ದರೆ ನನಗೆ ಖಂಡಿತ ಸಿಟ್ಟು ಬರುತ್ತದಲ್ಲವೇ,
-ಎಂದೆಲ್ಲಾ ಎನಿಸಿ, ಇದೆಲ್ಲಾ ನೆನಪಾಗಿ ಕಾಡಿ,
ಅನಿರ್ವಚನನಾಗಿ ನಿಂತುಬಿಟ್ಟೆ.

ಹೋಗಲಿ ಬಿಡಿ, ನೀವೂ ಇದನ್ನೆಲ್ಲ ನಂಬಲೇಬೇಕೆಂದೇನು ಇಲ್ಲ.

Tuesday, April 17, 2007

ಮತ್ತೇರಿಸುವ ಮುತ್ತು

ಶಿಲ್ಪಾ ಶೆಟ್ಟಿಗೆ ರಿಚರ್ಡ್ ಗೇರ್ ಮೊನ್ನೆ ಮುತ್ತು ಕೊಟ್ಟಿದ್ದು ಇವತ್ತಿನ ಪೇಪರುಗಳಲ್ಲಿ ದೊಡ್ಡ ಸುದ್ದಿ. ಸಿಟ್ಟಿಗೆದ್ದ ಶಿಲ್ಪಾ ಅಭಿಮಾನಿಗಳು ಅವಳ ಪೋಸ್ಟರುಗಳಿಗೆ ಬೆಂಕಿಯಿಡುತ್ತಿರುವ ಚಿತ್ರಗಳು. ರಿಚರ್ಡ್ ಗೇರ್ ವಿರುದ್ಧ ಕೂಗುತ್ತಿರುವ ಘೋಷಣೆಯ ಸದ್ದೂ ಇದೆ ಪೇಪರಿನಲ್ಲಿ. 'ಗೇರ್ ತನ್ನ ಈ ಹೊಲಸು ವರ್ತನೆಗಾಗಿ ಕ್ಷಮೆ ಕೋರಬೇಕು; ಇಲ್ಲವೇ ತಕ್ಷಣ ಭಾರತ ಬಿಟ್ಟು ತೊಲಗಬೇಕು' ಎಂದು ಪ್ರತಿಭಟನಾಕಾರರು ಕೂಗಾಡುತ್ತಿದ್ದಾರೆ. ಈ ಸುದ್ದಿಯನ್ನು ವೈಭವೀಕರಿಸಿ ಬರೆಯುತ್ತಿರುವ ಮೀಡಿಯಾದ ಮೇಲೆ ಶಿಲ್ಪಾ ಸಿಟ್ಟಾಗಿದ್ದಾಳೆ. 'ಇಂಥಾ ಸುದ್ದಿಯನ್ನೆಲ್ಲಾ ದೊಡ್ಡದು ಮಾಡಿದರೆ ನಾವು ವಿದೇಶಿಯರ ದೃಷ್ಟಿಯಲ್ಲಿ ಸಣ್ಣವರಾಗುತ್ತೀವಿ' ಎಂದು ಅಲವತ್ತುಕೊಂಡಿದ್ದಾಳೆ. ಒಂದು ಮುತ್ತನ್ನು ಅರಗಿಸಿಕೊಳ್ಳಲು ಅವಳು ಪಡುತ್ತಿರುವ ಪಾಡು ನೋಡಿದರೆ ಬೇಸರವಾಗುತ್ತದೆ.

ಆದರೆ ನನ್ನ ಆಶ್ಚರ್ಯ ಏನೆಂದರೆ, ಮುತ್ತು ಪಡೆವಾಗ ಆದ ರೋಮಾಂಚನವನ್ನು ಶಿಲ್ಪಾ ಎಲ್ಲೂ ಹೇಳಿಕೊಂಡಿಲ್ಲ. ಗೇರ್ ನಂತಹ ಗೇರ್. ಜಗತ್ತಿನ ಅತ್ಯಂತ 'ಸೆಕ್ಸಿ ಮ್ಯಾನ್' ಎಂಬ ಖ್ಯಾತಿಯ ಗೇರ್. ಶ್ರೀಮಂತ ಹಾಲಿವುಡ್ ನಟ ಗೇರ್. ಆತ ಕೊಟ್ಟ ಮುತ್ತು ಶಿಲ್ಪಾಗೆ ಯಾವ ರೀತಿಯ ಖುಷಿಯನ್ನು ಕೊಟ್ಟಿರಬಹುದು? ಸಿನಿಮಾಗಳಲ್ಲಿ ಅಭಿನಯಿಸುವಾಗ ಇಂತಹ ಎಷ್ಟೋ ಮುತ್ತೆತ್ತಿರಾಯರಿಂದ ಮುತ್ತು ಕೊಡಿಸಿಕೊಳ್ಳುವ ಶಿಲ್ಪಾಗೆ ಇದು ಏನೂ ಅನ್ನಿಸಲಿಲ್ಲವೇ? ಅದು ಹೇಗೆ ಸಾಧ್ಯ? ಒಂದು ಮುತ್ತು.. ಅಚಾನಕ್ಕಾಗಿ ಪಡೆದ ಒಂದು ಚುಂಬನ.. ಹುಡುಗಿ ಶಿಲ್ಪಾಳಲ್ಲಿ ಒಂದು ಮಧುರ ಅಲೆ ಎಬ್ಬಿಸಲಿಲ್ಲವೇ? ಆಕೆಯ ರಾತ್ರಿಯ ಅಂದಿನ ಕನಸಿನಲ್ಲಿ ಗೇರ್ ಬರಲಿಲ್ಲವೇ? ಗೇರ್‌ನ ಮುತ್ತು ಸಹ ಮತ್ತು ತರಿಸುವುದಿಲ್ಲವೆಂದರೆ ಹುಡುಗಿಯರು ಇನ್ನು ಯಾರ ಮೊರೆ ಹೋಗಬೇಕು?

ಹೋಗಲಿ, ಚುಂಬಿಸುವಾಗ ತುಟಿಗಂಟಿದ ಶಿಲ್ಪಾಳ ಮುಖದ ಕ್ರೀಮು, ಪೌಡರು, ಎಟ್ಸೆಟ್ರಾ.. ಗೇರ್‌ನನ್ನು ಕಾಡುತ್ತಿಲ್ಲವೇ? ಬಾಗಿದಾಗ ಮೈಗಂಟಿದ ಅವಳ ಸೀರೆಯ ಅತ್ತರು ರಿಚರ್ಡ್‌ನ ಧೃತಿಯನ್ನು ಸ್ವಲ್ಪವಾದರೂ ಕೆಡಿಸಲಿಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರ 'ಇಲ್ಲ' ಎಂಬುದಾದರೆ ಅದು ಸುಳ್ಳು. ಸುಳ್ಳಲ್ಲ; ಅದು ಸತ್ಯ ಎಂದಾದರೆ ನಾವೆಲ್ಲಾ ಸಿನಿಮಾ ನೋಡಿ, ನಮ್ಮ ಪ್ರೀತಿಯ ನಟ-ನಟಿಯರನ್ನು ನೋಡಿ ಕಲ್ಪಿಸಿಕೊಳ್ಳುವ ಮಧುರ ಆಲೋಚನೆಗಳಿಗೆ ಅರ್ಥವೆಲ್ಲಿದೆ? ಎಲ್ಲಾ ಕನ್ನಡಿಯೊಳಗಿನ ಗಂಟು ಎಂದಾಯ್ತಲ್ಲಾ?

* * *

ಒಂದ್ಸಲ ನಮ್ಮನೆ ಆಳು ಗುತ್ಯಪ್ಪ ಹೇಳ್ತಿದ್ದ: ಪಕ್ಕದ ಊರಿನ ರಾಯರ ಮನೆಗೆ ಅವನು ಕೆಲಸಕ್ಕೆ ಹೋಗಿದ್ನಂತೆ. ಅವತ್ತು ಭಾನುವಾರ. ಟೀವಿಯಲ್ಲಿ ಯಾವುದೋ ಪಿಚ್ಚರ್ ಬರುತ್ತಿತ್ತು. ತುಂಬಾ ಜನ ಕುಳಿತು ಪಿಚ್ಚರ್ ನೋಡುತ್ತಿದ್ದರು. ರಾಯರ ಮಗಳೂ ಇದ್ದಳಂತೆ. ಸಿನಿಮಾದ ಮಧ್ಯೆ ಹೀರೋ ಹೀರೋಯಿನ್ನಿಗೆ ಮುತ್ತು ಕೊಡುವ ಸೀನ್ ಬಂತಂತೆ. ಅವಾಗ ರಾಯರ ಮಗಳು 'ಅಯ್ಯೋ! ಅದು ಹೆಂಗೆ ಮುತ್ತು ಕೊಡಿಸಿಕೊಳ್ತಾರೇನೋ! ನಮಗಾದ್ರೆ ಒಂಥರಾ ಆಗೊತ್ತಪ್ಪ. ನಾಚ್ಕೆ ಆಗುತ್ತೆ!' ಅಂದಳಂತೆ! ಜನ ಎಲ್ಲ ಮುಸಿಮುಸಿ ನಕ್ಕರಂತೆ. ನಮ್ಮನೆ ಆಳು ಗುತ್ಯಪ್ಪನ ಪ್ರಕಾರ 'ರಾಯರ ಮಗಳು ಹಂಗೆ ಹೇಳಿದ್ಲು ಅಂದಮೇಲೆ ಅವಳಿಗೆ ಮುತ್ತು ಕೊಡಿಸಿಕೊಂಡು ಗೊತ್ತಿರಬೇಕಲ್ಲವೇ?! ಅವಳು ಸಾಮಾನ್ಯದವಳಲ್ಲ! ಸಿಕ್ಕಾಪಟೆ ಜೋರಿದಾಳೆ!' ಗುತ್ಯಪ್ಪನ ಮಾತಿಗೆ ಅವನ ಯೋಚನಾಲಹರಿಗೆ ನಾನು ತಲೆದೂಗಿದ್ದೇನು ಸುಳ್ಳಲ್ಲ.

* * *

ಮುತ್ತಿನ ಬಗ್ಗೆ ಮತ್ತಷ್ಟು ಹುಡುಕಿದಾಗ ಕೆಲವು ಆಸಕ್ತಿಕರ ವಿಷಯಗಳು ದೊರಕಿದವು. ಒಬ್ಬ ಅವರೇಜ್ ಮನುಷ್ಯ ತನ್ನಾಯಸ್ಸಿನ ೨೦,೧೬೦ ನಿಮಿಷಗಳನ್ನು ಮುತ್ತು ಕೊಡುವುದರಲ್ಲಿ ಕಳೆಯುತ್ತಾನಂತೆ! ಒಂದು ನಿಮಿಷದ ಚುಂಬನಕ್ಕೆ ೨೬ ಕ್ಯಾಲೋರಿಯಷ್ಟು ಶಕ್ತಿ ವ್ಯಯವಾಗುತ್ತದಂತೆ. ಪ್ರಪಂಚದ ಐವತ್ತು ಪ್ರತಿಶತಕ್ಕೂ ಹೆಚ್ಚು ಜನ ತಮ್ಮ ಹದಿನಾಲ್ಕನೇ ವಯಸ್ಸಿನ ಒಳಗೇ ಪ್ರಥಮ ಚುಂಬನದ ಅನುಭವ ಪಡೆದಿರುತ್ತಾರಂತೆ. (ಮಗುವಾಗಿದ್ದಾಗ ಪಡೆಯುವ 'ಪಪ್ಪಿ'ಯನ್ನೂ ಇದರಲ್ಲಿ ಸೇರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ!). ಮುತ್ತು ಕೊಡುವುದಕ್ಕೆ ಒಟ್ಟು ಮೂವತ್ನಾಲ್ಕು ಮೂಳೆಗಳು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದಂತೆ. ೧೮೯೬ರಲ್ಲಿ ಬಿಡುಗಡೆಯಾದ 'ದಿ ಕಿಸ್' ಅನ್ನೋ ಸಿನಿಮಾದಲ್ಲಿ ಮೊದಲ ಕಿಸ್ಸಿಂಗ್ ಸೀನ್ ತೋರಿಸಿದ್ದಂತೆ.

ಚುಂಬನದಿಂದ ಅನೇಕ ಲಾಭಗಳಿವೆ. ಮುತ್ತು ಕೊಟ್ಟುಕೊಳ್ಳುವುದರಿಂದ (ಕೊಟ್ಟು - ಕೊಳ್ಳುವುದು!) ಬಾಯಲ್ಲಿ ಲಾಲಾರಸ ಹೆಚ್ಚುತ್ತದಂತೆ. ಇದರಿಂದ ಹಲ್ಲುಗುಳಿ (tooth decay) ಆಗುವುದು ಕಮ್ಮಿಯಾಗುತ್ತದಂತೆ. ಮುತ್ತು ಕೊಡುವುದು ಟೆನ್ಷನ್ನನ್ನು ಕಮ್ಮಿ ಮಾಡುತ್ತದಂತೆ. (ಆದರೆ ಗೇರ್-ಶಿಲ್ಪಾ ಕೇಸಲ್ಲಿ ಇದು ಉಲ್ಟಾ ಆಯ್ತು; ಪಾಪ!). ಸುದೀರ್ಘ ಚುಂಬನ ದೇಹದ ತೂಕವನ್ನು ಕಮ್ಮಿ ಮಾಡುತ್ತದೆ ಎಂಬುದು ಇತ್ತೀಚಿನ ಶೋಧದಿಂದ ತಿಳಿದು ಬಂದಿದೆ. ಅದು ದೇಹದ 'ಫಿಟ್‌ನೆಸ್' ಕಾಯ್ದುಕೊಳ್ಳಲು ಸಹಾಯ ಮಾಡುತ್ತದಂತೆ.

ಮುತ್ತು ಸಾಮಾನ್ಯವಾಗಿ ಸಿಹಿಯಾಗಿರುತ್ತದೆ (ಅಂತೆ). ಕಹಿಮುತ್ತು ಅನ್ನೋ ಪದ ಬಳಕೆಯಲ್ಲಿದ್ದಂತಿಲ್ಲ. ತುಟಿಗೆ ತುಟಿ ಸೇರಿಸಿದರೆ ಅದು ಸ್ಮೂಚಿಂಗ್. ಕೆನ್ನೆಗೋ ಗಲ್ಲಕ್ಕೋ ಹಣೆಗೋ ಮತ್ತೆಲ್ಲಿಗೋ ಕೊಟ್ಟರೆ ಅದು ಬರೀ ಮುತ್ತು. ನಲ್ಲೆಯ ಮುತ್ತಿನಿಂದ ಮೈಮರೆಯುವ ನಲ್ಲ ಅವಳನ್ನು ಮದುವೆಯಾಗಿ ಆಮೇಲೆ ಪ್ರತಿದಿನವೂ ಅವಳಿಂದ ಮುತ್ತು-ರತ್ನದ ಬೇಡಿಕೆ ಸ್ವೀಕರಿಸುವ ಕಷ್ಟಕ್ಕೆ ಬೀಳುವುದು ತೀರಾ ಸಾಮಾನ್ಯ ಸಂಗತಿ.

ಮುತ್ತಿನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಕೆಲವು:

  • ಕೆನ್ನೆಗೆ ಮುತ್ತು (Cheek Kiss): ಸ್ನೇಹಕ್ಕಾಗಿ ಕೊಟ್ಟುಕೊಳ್ಳುವ ಸಾಮಾನ್ಯ ಮುತ್ತು. ಮೊದಲ ‘ಡೇಟ್’ ದಿನ ಈ ಮುತ್ತು ಕೊಟ್ಟುಕೊಳ್ಳುವುದು ಸಾಮಾನ್ಯ. ಸಂಗಾತಿಯ ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಕೆನ್ನೆಗೆ ಮುತ್ತೊತ್ತಬೇಕು.
  • ಕಿವಿಗೆ ಮುತ್ತು (Earlobe Kiss): ಕಿವಿಯನ್ನು ಕಚ್ಚಿ (ಜೋರಾಗಲ್ಲಾರೀ!), ಚೀಪುವುದು! ಈ ಪ್ರಕ್ರಿಯೆಯಲ್ಲಿ ಜಾಸ್ತಿ ಶಬ್ದ ಮಾಡುವುದು ಅಪಾಯ. ಏಕೆಂದರೆ ನಿಮ್ಮ ಸಂಗಾತಿ ಕಿವುಡಾಗುವ ಸಂಭವವಿರುತ್ತದೆ!
  • ಮೂಗು ಮರ್ದನ (Eskimo Kiss): ಇಬ್ಬರೂ ತುಂಬಾ ಹತ್ತಿರ ಬಂದು ಪರಸ್ಪರರ ಮೂಗನ್ನು (ಮೂಗಿನಿಂದಲೇ) ತಿಕ್ಕಾಡುವುದು. ಇದನ್ನೂ ಮುತ್ತಿನ ಪಟ್ಟಿಗೆ ಸೇರಿಸಿದ ಮಹಾನುಭಾವರು ಯಾರೋ ಗೊತ್ತಿಲ್ಲ.
  • ಹಣೆಗೆ ಮುತ್ತು (Forehead Kiss): ‘ಮದರ್ಲಿ ಕಿಸ್’ ಎಂದು ಜನಜನಿತವಾದ ಇದು ಕೇವಲ ಸ್ನೇಹದ ದ್ಯೋತಕ. ಈ ಮುತ್ತು ‘ಮುತ್ತಿಸಿಕೊಂಡವ’ರಿಗೆ ಏನೋ ಸಮಾಧಾನ ನೀಡುತ್ತದೆ.
  • ಹಣ್ ಮುತ್ತು (Fruity Kiss): ಇಬ್ಬರ ಬಾಯಲ್ಲೂ ಹಣ್ಣಿನ ಚೂರನ್ನು ಕಚ್ಚಿಕೊಂಡು (ದ್ರಾಕ್ಷಿ, ಸ್ಟ್ರಾಬೆರಿಯಂತ ರಸಭರಿತ ಹಣ್ಣು ಇದಕ್ಕೆ ಸೂಕ್ತ), ತುಟಿಗೆ ತುಟಿ ಹಚ್ಚಿ ಚುಂಬಿಸುವುದು. ಹಣ್ಣಿನ ರಸ ಹೀರಿ ಖಾಲಿಯಾದರೂ ಅಧರದ ಮಾಧುರ್ಯವನ್ನು ಹೀರುತ್ತಾ ಚುಂಬನವನ್ನು ಮುಂದುವರಿಸಲು ಅಡ್ಡಿಯಿಲ್ಲ.
  • ವ್ಯಾಘ್ರ ಚುಂಬನ (Tiger Kiss): ಸಂಗಾತಿಗೆ ತಿಳಿಯದಂತೆ ಹಿಂದಿನಿಂದ ಹೋಗಿ ಗಬ್ಬಕ್ಕನೆ ‘ಗ್ರಾಬ್’ ಮಾಡಿ ಜೋರಾಗಿ ಮುತ್ತಿಡುವುದು. ಈ ಸಪ್ರೈಸ್ ಚುಂಬನ ಆಕೆ/ಆತ ನನ್ನು ರೋಮಾಂಚನಗೊಳಿಸುತ್ತದೆ.
  • ಪಾತರಗಿತ್ತಿ ಮುತ್ತು (Butterfly Kiss): ಉಸಿರಿನಷ್ಟು ಸಮೀಪಕ್ಕೆ ಹೋಗಿ ನಿಮ್ಮ ಸಂಗಾತಿಗೆ ಮುತ್ತೊತ್ತುವಾಗ ನಿಮ್ಮ ಕಣ್ಣುಗಳು ಪಟಪಟನೆ ಬಡಿದುಕೊಂಡರೆ ಅದು ಪಾತರಗಿತ್ತಿ ಮುತ್ತು! ಈ ಥರದ ಮುತ್ತು ಸಂಗಾತಿಯೆಡೆಗೆ ನಿಮ್ಮ ಹೃದಯ ತೆರೆದುಕೊಳ್ಳುವಂತೆ ಮಾಡುತ್ತವೆ.
  • ಮಾತಿನಲ್ಲೇ ಮುತ್ತು (Talking Kiss): ಸಂಗಾತಿಯ ಬಾಯ ಸಮೀಪಕ್ಕೆ ಹೋಗಿ ಏನನ್ನೋ ಉಸುರುವುದು! ಯಾರಾದರೂ ನೋಡಿ ಸಿಕ್ಕಿಬಿದ್ದರೆ, ‘ಇಲ್ಲ, ನಾನು ಅವಳಿಗೆ ಮುತ್ತು ಕೊಡುತ್ತಿರಲಿಲ್ಲ. ಗುಟ್ಟು ಹೇಳುತ್ತಿದ್ದೆ’ ಎಂದು ಹೇಳಿ ತಪ್ಪಿಸಿಕೊಳ್ಳುವುದು!
  • ಇಂಟರ್‌ನೆಟ್ ಮುತ್ತು (Internet Kiss): ಇಷ್ಟೆಲ್ಲಾ ಹೇಳಿ ಇದನ್ನು ಹೇಳದಿದ್ದರೆ ನೀವು ಮುನಿಸಿಕೊಳ್ಳುತ್ತೀರಿ. ಏನಿಲ್ಲ, ತೀರಾ ಸುಲಭ. ಚಾಟಿಂಗ್ ಮಾಡುವಾಗ ಅಥವಾ ಸ್ಕ್ರಾಪ್ ಬರೆಯುವಾಗ ಈ ಚಿಹ್ನೆಯನ್ನು ಬಳಸಿದರಾಯ್ತು: :-*

ಸಾಕು. ತುಂಬಾ ಜಾಸ್ತಿ ಆಯ್ತು. ಯಕ್ಚುವಲೀ, ಇವತ್ತು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಬೆಳಗಿನಿಂದ ನನಗೆ ಮೂಡ್ ಔಟ್. ನನ್ನ ಮೂಡೇ ಆವಿಯಾಗಿ ಹೋಗಿ ಆಗಸದಲ್ಲಿ ಮೋಡವಾದಂತಿದೆ. ಹೀಗಾಗಿ, ಏನಾದರೂ ಇಂಟರೆಸ್ಟಿಂಗ್ ವಿಷಯವನ್ನು ಓದಿ ಮನಸ್ಸನ್ನು ಸರಿ ಮಾಡಿಕೊಳ್ಳೋಣ ಅಂತ ಇಂಟರ್‌ನೆಟ್ಟಿನಲ್ಲಿ ಹುಡುಕ ಹೊರಟೆ. ಆಗ ಸಿಕ್ಕಿದ್ದು ಇದು! ಹೀಗಾಗಿ, ನಿಮಗೆ ಈ ಮಾಹಿತಿಯಿಂದ ಮತ್ತೇರಿ, ಯಾವುದಾದರೂ ವಿಧಾನವನ್ನು ಪ್ರಯೋಗ ಮಾಡಲು ಹೋಗಿ ಹೆಚ್ಚು-ಕಮ್ಮಿ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಇಲ್ಲಿರುವ ಮಾಹಿತಿಯೆಲ್ಲವನ್ನೂ ನಾನು ಪಡೆದದ್ದು ಅಂತರ್ಜಾಲದಿಂದ. ನನ್ನ ಅನುಭವ ಎಳ್ಳಷ್ಟೂ ಇಲ್ಲ.

ಮತ್ತೊಂದು ವಿಷಯ: ನೀವು ಈ ವಿಧಾನವನ್ನು ಪ್ರಯೋಗಿಸಲೇಬೇಕು ಎಂದಾದರೆ ದಯವಿಟ್ಟು ಅದನ್ನು ನಿಮ್ಮ ಸಂಗಾತಿಯ ಮೇಲೇ ಪ್ರಯೋಗಿಸಿ. ಅದಿಲ್ಲದಿದ್ದರೆ ‘ಪ್ರಥಮ ಚುಂಬನಂ ದಂತ ಭಗ್ನಂ’ ಆದೀತು; ಎಚ್ಚರ!

Tuesday, March 27, 2007

ಹೊಸ ಆಹ್ಲಾದ

"ರಾಧೇಶಾಮ ರಾಧೇ ಶಾಮ್
ರಾಧಾ ಮಾಧವ ಮೇಘಶ್ಶಾಮ್.."

ದೇವಸ್ಥಾನದಿಂದ ಮಹಿಳೆಯರ ಭಜನೆಯ ದನಿ ತೇಲಿಬರುತ್ತಿತ್ತು. ಕಟ್ಟೆಯ ಮೇಲೆ ಕುಳಿತಿದ್ದ ನಾನು ಅಂಗಳದಲ್ಲಿ ಅಕ್ಕಿ ಹೆಕ್ಕುತ್ತಿದ್ದ ಪಾರಿವಾಳಗಳನ್ನು ನೋಡುತ್ತಿದ್ದೆ. ತಾಳದ ಟಿಣ್‍ಟಿಣ್‍ನೊಂದಿಗೆ ಬೆರೆತು ಬರುತ್ತಿದ್ದ ಭಜನೆ ಕಿವಿಗಿಂಪಾಗಿತ್ತು. ನಮ್ಮೂರಿನದು ಗೋಪಾಲಕೃಷ್ಣನ ದೇವಸ್ಥಾನ. ಈ ಕೃಷ್ಣನಿಗೆ ಸಂಬಂಧಿಸಿದ ಭಜನೆಗಳು, ಭಕ್ತಿಗೀತೆಗಳೆಲ್ಲ ಪ್ರೇಮಗೀತೆಗಳೇ ಆಗಿಬಿಟ್ಟಿವೆ. ಅವನ್ನ ಆಲಿಸುತ್ತಿದ್ದರೆ ಕೃಷ್ಣ ಸಹ ನಮ್ಮ-ನಿಮ್ಮಂತೆ ಪ್ರೀತಿ-ಗೀತಿ ಮಾಡಿಕೊಂಡಿದ್ದ ಸಾಮಾನ್ಯ ಮನುಷ್ಯನಂತೆ ಭಾಸವಾಗುತ್ತಾನೆ. ಭಕ್ತಿಗಿಂತ ಹೆಚ್ಚಾಗಿ ಅವನಲ್ಲಿ ಅನುರಕ್ತಿ ಮೂಡುತ್ತದೆ: ಮೀರಾಗೆ ಆದಂತೆ.

ಅಂಗಳದಲ್ಲಿ ಬಣ್ಣ ಬಣ್ಣದ ಪಾರಿವಾಳಗಳು ಬಿಳಿಹುಲ್ಲು ಗೊಣಬೆಯ ಅಕ್ಕಪಕ್ಕ ಸಿಕ್ಕಬಹುದಾದ ಅಕ್ಕಿಕಾಳುಗಳನ್ನು ಹೆಕ್ಕುತ್ತಾ, ಪುರ್ರನೆ ಹಾರುತ್ತಾ, ಗುಟುರು ಗಲಾಟೆ ಮಾಡಿಕೊಂಡಿದ್ದವು. ಅಪ್ಪ ಅಂದ, "ಗುಂಡನ ಮನೆ ಪಾರಿವಾಳಗಳು ಇವು. ಗುಂಡ ಒಂದು ತಿಂಗಳಿಂದ ಊರಲ್ಲಿಲ್ಲ. ಎಲ್ಲಿದಾನೆ ಅಂತಾನೆ ಗೊತ್ತಿಲ್ಲ. ಕೆಲವರು 'ಮನೆಯವರು ಅಡಗಿಸಿಟ್ಟಿದಾರೆ' ಅಂತಾರೆ ಮತ್ತೆ ಕೆಲವರು 'ಏನೋ ಕೆಟ್ಟ ಖಾಯಿಲೆ ಬಂದಿದೆ ಅವಂಗೆ. ಅದ್ಕೇ ಯಾವ್ದೋ ಆಸ್ಪತ್ರೆಗೆ ಸೇರಿಸಿದಾರೆ' ಅಂತಾರೆ. ಅಂವ ಇದ್ದಿದ್ದಿದ್ರೆ ಈ ಪಾರಿವಾಳಗಳಿಗೆಲ್ಲ ಕಾಳು ಹಾಕ್ಕೊಂಡು ಇರ್ತಿದ್ದ. ಪಾಪ, ಈಗ ಅವರ ಮನೇಲಿ ಯಾರೂ ಕಾಳು ಹಾಕೋರು ಇಲ್ಲ ಅನ್ಸುತ್ತೆ ಇವಕ್ಕೆ. ಅದ್ಕೇ ಇಲ್ಲಿಗೆ ಬರ್ತಿವೆ.." ಇಷ್ಟು ಸಣ್ಣ ಹಳ್ಳಿಯಲ್ಲೂ ಸಹ ಎಷ್ಟೊಂದು ಗೌಪ್ಯಗಳು! ಗುಪ್ತ ಚಟುವಟಿಕೆಗಳು! ಗುಸುಗುಸುಗಳು! ನಾನು ಪಾರಿವಾಳಗಳನ್ನೇ ನೋಡುತ್ತಾ ಕುಳಿತೆ.

ಅಪ್ಪ ಅಡುಗೆಮನೆಯಿಂದ ಒಂದು ಮುಷ್ಟಿ ಅಕ್ಕಿ ತಂದ. ನನ್ನ ಪಕ್ಕದಲ್ಲೇ ಕುಳಿತು ಸ್ವಲ್ಪ ಅಕ್ಕಿಯನ್ನು ಅಂಗಳಕ್ಕೆ ಬೀರಿದ. ಬಿಳಿಹುಲ್ಲು ಗೊಣಬೆಯ ಬಳಿ ಓಡಾಡುತ್ತಿದ್ದ ಪಾರಿವಾಳಗಳು ಈಗ ನಮ್ಮ ಕಡೆಯೇ ಬಂದವು. ಅಪ್ಪ ಬೀರಿದ್ದ ಅಕ್ಕಿಕಾಳುಗಳನ್ನು ಕ್ಷಣಮಾತ್ರದಲ್ಲಿ ಹೆಕ್ಕಿಕೊಂಡು ಪುರ್ರನೆ ಮತ್ತೆ ಹುಲ್ಲು ಗೊಣಬೆ ಕಡೆ ಹಾರಿಬಿಟ್ಟವು. ಅಪ್ಪ ಮತ್ತೆ ಅಕ್ಕಿ ಬೀರಿದ. ಪಾರಿವಾಳಗಳು ಮತ್ತೆ ಬಂದವು. ಅಪ್ಪ ಅಂಗೈಯಲ್ಲಿ ಅಕ್ಕಿ ಹಾಕಿಕೊಂಡು 'ಗುಕ್' 'ಗುಕ್' 'ಗುಕ್' ಅಂತ ಪಾರಿವಾಳ ಗುಟುರು ಹಾಕುವಂತೆಯೇ ಶಬ್ದ ಮಾಡುತ್ತಾ ಕರೆದ. ಆದರೆ ಅವು ಅಂಗಳಕ್ಕೆ ಬೀರಿದ್ದ ಅಕ್ಕಿಕಾಳನ್ನು ಹೆಕ್ಕಿಕೊಂಡು ಹೋದವೇ ಹೊರತು ನಮ್ಮ ಹತ್ತಿರ ಬರಲೇ ಇಲ್ಲ.

"ಆ ಪಾರಿವಾಳ ನೋಡು.. ಏನ್ ಚನಾಗಿದೆ...!" ಅಪ್ಪ ನನಗೆ ಬೆರಳು ಮಾಡಿ ತೋರಿಸಿದ. ಮುಟ್ಟುವುದಾದರೆ ಕೈತೊಳೆದುಕೊಂಡು ಮುಟ್ಟಬೇಕೆನಿಸುವಷ್ಟು ಬಿಳಿ ಇರುವ ಆ ಪಾರಿವಾಳಕ್ಕೆ ಅಲ್ಲಲ್ಲಿ ಕಾಫಿ ಕಲರಿನ ಪೇಯಿಂಟ್ ಸ್ಪ್ರೇ ಮಾಡಿದಂತೆ ಹಚ್ಚೆ. ಗೋಣು ಕುಣಿಸುತ್ತಾ ಒಂದೊಂದೇ ಹೆಜ್ಜೆಯನ್ನು ಮೆಲ್ಲಮೆಲ್ಲನೆ ಇಡುತ್ತಿದೆ: ಪುಟ್ಟ ಕೃಷ್ಣನಂತೆ. ಊಹುಂ, ಕೃಷ್ಣನೆಡೆಗೆ ಲಜ್ಜೆಯಿಂದ ಹೆಜ್ಜೆಯಿಡುತ್ತಿರುವ ರಾಧೆಯಂತೆ. ಅಕ್ಕಿ ಕಂಡಲ್ಲಿ ಬಾಗಿ ತನ್ನ ಕೊಕ್ಕಿನಿಂದ ಹೆಕ್ಕುತ್ತಿದೆ. ಅಲ್ಲಲ್ಲಿ ನಿಂತು ಗಾಂಭೀರ್ಯದಿಂದ ತಲೆಯೆತ್ತಿ ನೋಡುತ್ತಿದೆ. ಇಡುತ್ತಿರುವ ಪ್ರತಿ ಹೆಜ್ಜೆಯಲ್ಲೂ ಬಿಂಕ-ಬಿನ್ನಾಣ. ಎಷ್ಟೊತ್ತಾಗಿತ್ತೋ ಅವನ್ನು ನೋಡುತ್ತಾ ನಾವು? ಅಪ್ಪ ತಂದಿದ್ದ ಅಕ್ಕಿಯೆಲ್ಲಾ ಖಾಲಿಯಾಗುವಷ್ಟರಲ್ಲಿ ದೇವಸ್ಥಾನದಲ್ಲಿ ಹೆಂಗಸರ ಭಜನೆ ಮುಗಿದು ಘಂಟೆ ಬಾರಿಸುವ ಶಬ್ದ ಕೇಳಿಬಂತು.

ನಮ್ಮೂರಿನ ಹೆಂಗಸರೆಲ್ಲಾ ಪ್ರತಿ ಶನಿವಾರ ಸೇರಿ ಇಲ್ಲಿ ಭಜನೆ ಮಾಡುತ್ತಾರೆ. ನಮ್ಮ ಮನೆಯ ಎದುರಿಗೇ ದೇವಸ್ಥಾನ. ಹೀಗಾಗಿ, ನಮ್ಮ ಮನೆಯಲ್ಲಿ ತುಂಬಿರುವ ಟೀವಿ, ಮಿಕ್ಸಿ, ಪಂಪ್ಸೆಟ್ಟು, ಫೋನಿನ ರಿಂಗು, ಮನೆಮಂದಿಯ ಮಾತು-ಕತೆ, ಜಾನುವಾರುಗಳ 'ಅಂಬಾ', ಇತ್ಯಾದಿ ಶಬ್ದಗಳ ಜೊತೆಗೆ ದೇವಸ್ಥಾನದಿಂದ ಆಗಾಗ ತೇಲಿಬರುವ ಘಂಟೆಗಳ ನಿನಾದವೂ ಸೇರಿರುತ್ತೆ. ನಮಗೆ ಗೊತ್ತು: ಯಾರ್‍ಯಾರು ಯಾವಾಗ್ಯಾವಾಗ ದೇವಸ್ಥಾನಕ್ಕೆ ಬರುತ್ತಾರೆ ಅಂತ. ಘಂಟೆ ಶಬ್ದದಿಂದಲೇ ಪತ್ತೆ ಮಾಡುತ್ತೇವೆ ಅದನ್ನು! ದೊಡ್ಡ ಘಂಟೆ ಎರಡು ಸಲ ಬಡಿದು ಸಣ್ಣ ಘಂಟೆ ಮೂರು ಸಲ ಬಡಿದ ಶಬ್ದ ಬಂತೆಂದರೆ, ಈಗ ದೇವಸ್ಥಾನಕ್ಕೆ ಬಂದಿರುವವರು ಸುಧಣ್ಣ! ಸಣ್ಣ ಘಂಟೆಯನ್ನು ಕೇವಲ ಎರಡು ಸಲ ಬಡಿದ ಸದ್ದಾದರೆ, ಈಗ ಬಂದಿರುವುದು ಲಕ್ಷ್ಮಕ್ಕ! ಇವತ್ತು ಬೆಳಗ್ಗೆ ಎಷ್ಟೊತ್ತಿಗೆ ಗಣೇಶಣ್ಣ ಬಂದು ಪೂಜೆ ಮಾಡಿಕೊಂಡು ಹೋದ ಅಂತ ನಮಗೆ ಗೊತ್ತು. ಸಂಜೆ ಬಂದು ದೀಪ ಹಚ್ಚಿ ಹೋದ ಗಳಿಗೆಯೂ ಗೊತ್ತು!

ಲಾಂಗ್ ಬೆಲ್ ಹೊಡೆದ ಕೂಡಲೆ ಮಕ್ಕಳೆಲ್ಲ ಶಾಲೆಯಿಂದ ಹೊರಬೀಳುವಂತೆ ಭಜನೆ ಮುಗಿದ ಕೂಡಲೆ ಹೆಂಗಸರೆಲ್ಲ ದೇವಸ್ಥಾನದಿಂದ ಮನೆ ಕಡೆ ಹೊರಟರು. ನಮ್ಮ ಮನೆ ಹಾದು ಹೋಗುವಾಗ ಕಟ್ಟೆಯ ಮೇಲೆ ಕುಳಿತಿದ್ದ ನನ್ನನ್ನು 'ಯಾವಾಗ ಬಂದಿದೀಯ?' 'ಅರಾಮಿದೀಯಾ?' 'ಬೆಂಗ್ಳೂರಲ್ಲೂ ಸೆಖೇನಾ?' ಇತ್ಯಾದಿ ಪ್ರಶ್ನೆಗಳ ಮೂಲಕ ಕುಶಲ ವಿಚಾರಿಸಿದರು. 'ಬನ್ರೇ, ಆಸರಿಗೆ ಕುಡಿದು ಹೋಗ್ಬಹುದು' ಎಂಬ ಅಮ್ಮನ ಕರೆಗೆ ಯಾರೂ ಸೊಪ್ಪು ಹಾಕಲಿಲ್ಲ. ಅಮ್ಮ ಬಂದದ್ದೇ ಹೂವಿನ ಗಿಡಗಳಿಗೆ ನೀರು ಹಾಕಲಿಕ್ಕೆಂದು ಬಚ್ಚಲು ಮನೆಯಿಂದ ಕೊಡಪಾನ ತಂದು ನಲ್ಲಿಯ ಕೆಳಗಿಟ್ಟಳು. ಅಮ್ಮನ ಈ ಕೆಲಸದಲ್ಲಿ ನೆರವಾಗಲು ನಾನು ಕಟ್ಟೆಯಿಳಿದು ಬಂದೆ.

ನಮ್ಮ ಮನೆಯ ಅಂಗಳವೆಂಬ ಗಾರ್ಡನ್ನಿನ್ನಲ್ಲಿ ಎಷ್ಟೊಂದು ಬಣ್ಣದ ಹೂಗಳು. ಯಾವುದಕ್ಕೆ ಹೋಲಿಸುವುದು ಇದನ್ನು? 'ಅವಳ' ಚೂಡಿಗೆ? ಊರಲ್ಲಿದ್ದಾಗ ನಾನೂ ಅಮ್ಮನೂ ಸೇರಿ ಅದೆಷ್ಟೋ ಹೂವಿನ ಗಿಡಗಳನ್ನು ನೆಡುತ್ತಿದ್ದವು. ಮಳೆಗಾಲ ಶುರುವಾಯಿತೆಂದರೆ ನಮಗೆ ಅದೇ ಕೆಲಸ. ಸುಜಾತಕ್ಕನ ಮನೆಯ ಅಂಗಳದಲ್ಲಿ ಹೊಸ ಬಣ್ಣದ ದಾಸಾಳ ಹೂವು ಕಂಡರೆ ಸಾಕು, ಅಮ್ಮ ಹೋಗಿ 'ನಂಗೊಂದು ಹೆಣಿಕೆ ಕೊಡೇ' ಅಂತಂದು ಇಸಕೊಂಡು ಬರುತ್ತಿದ್ದಳು. ಕೊನೆಗೆ ನಾನೂ ಅಮ್ಮನೂ ಸೇರಿ, ಅಂಗಳದಲ್ಲಿ ಗುದ್ದು ತೋಡಿ, ಸ್ವಲ್ಪೇ ಸ್ವಲ್ಪ ಗೊಬ್ಬರ - ಹೊಸ ಮಣ್ಣು ಹಾಕಿ ಆ ರೆಂಬೆಯನ್ನು ಊರುವುದು. ಅಮ್ಮನ ಕೈಗುಣದ ಬಗ್ಗೆ ಎರಡು ಮಾತಿಲ್ಲ. ಅವಳು ನೆಟ್ಟಮೇಲೆ ಅದು ಚಿಗುರಲೇಬೇಕು: ಉಲ್ಟಾ ನೆಟ್ಟಿದ್ದರೂ! ಎಷ್ಟು ಗಿಡ ನೆಡುತ್ತಿದ್ದೆವು ನಾವು... ನೆಂಟರ ಮನೆಗೆ ಹೋದಾಗ ಬಿಳಿ ಬಿಳಿ ಎಸಳಿನ ಶ್ಯಾವಂತ್ಗೆ ಹೂವು ಕಣ್ಣಿಗೆ ಬಿತ್ತೋ, ಅಮ್ಮ ಅವರ ಬಳಿ ಗೋಗರೆದು ಒಂದು ಹಿಳ್ಳು ಪಡೆದು ತಂದು ನಮ್ಮನೆಯ ಶ್ಯಾವಂತಿಗೆ ಪಟ್ಟೆಯಲ್ಲಿ ಸೇರಿಸುತ್ತಿದ್ದಳು. ನಾನಾದರೂ ಅಷ್ಟೆ: ಮೆಡ್ಲಿಸ್ಕೂಲಿಗೆ ಹೋಗಬೇಕಾದರೆ ಯಾವ ಹುಡುಗಿಯರ ಮುಡಿಯಲ್ಲಿ ನಮ್ಮನೆಯಲ್ಲಿ ಇಲ್ಲದ ಬಣ್ಣದ ಡೇರೇ ಹೂವು ಕಂಡರೂ 'ಇದರ ಗಿಡದ ಒಂದು ಕೊಂಬೆ ತಂದ್ಕೊಡ್ರೇ, ನಮ್ಮಮ್ಮಂಗೆ...' ಅಂತ ದುಂಬಾಲು ಬೀಳುತ್ತಿದ್ದೆ. ಆ ಹುಡುಗಿಯರಿಗೂ ನನ್ನ ಮೇಲೆ ಎಂಥದೋ ಪ್ರೀತಿ; ತಪ್ಪದೇ ತಂದುಕೊಡುತ್ತಿದ್ದರು! ಹಾಲಮ್ಮನಂತೂ ಪಿಂಡಿಗಟ್ಟಲೆ ತಂದು ಕೊಟ್ಟಿದ್ದಳು ಒಮ್ಮೆ! ಆದರೆ ಹೈಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಹಾಗೆ ಹುಡುಗಿಯರನ್ನು ಕೇಳುತ್ತಿರಲಿಲ್ಲ. ಏಕೆಂದರೆ ನಮ್ಮ ಹೈಸ್ಕೂಲಿನಲ್ಲಿ ಹುಡುಗರೂ-ಹುಡುಗಿಯರೂ ಪರಸ್ಪರ ಮಾತಾಡಿಕೊಳ್ಳುವಂತೆಯೇ ಇರಲಿಲ್ಲ, ಇನ್ನು ನಾನು ಹೂವಿನ ಗಿಡ ಕೇಳುವುದೆಲ್ಲಿಂದ ಬಂತು? ಅಮ್ಮ 'ನಿಮ್ ಶಾಲೆ ಹುಡುಗಿಯರ ಮನೇಲಿ ಒಳ್ಳೊಳ್ಳೇ ಹೂವಿನ ಗಿಡ ಇದ್ರೆ ತಂದುಕೊಡಕ್ಕೆ ಹೇಳಾ' ಅಂತ ನನ್ನ ಬಳಿ ಹೇಳಿದಾಗ ನಾನು 'ಹಂಗೆಲ್ಲ ಕೇಳಕ್ಕೆ ಆಗೊಲ್ಲಮ್ಮ, ನಾನು ಹೈಸ್ಕೂಲು ಈಗ' ಅನ್ನುತ್ತಿದ್ದೆ. ಅಮ್ಮನಿಗೆ ನನ್ನ ಪರಿಸ್ಥಿತಿಯ ಅರಿವಾಗಿಯೋ, ಮಗ ದೊಡ್ಡವನಾಗಿದ್ದಾನೆ ಎಂಬ ಸುಳಿವು ಸಿಕ್ಕೋ ಅಥವಾ ತನ್ನ ಹೈಸ್ಕೂಲು ದಿನಗಳ ನೆನಪಾಗಿಯೋ, ಸಣ್ಣಗೆ ನಾಚುತ್ತಿದ್ದಳು: ಶಂಖಪುಷ್ಪದ ಹೂವಿನಂತೆ.

ಅಮ್ಮನೊಂದಿಗೆ ನಾನೂ ಬಣ್ಣಬಣ್ಣದ ಗುಲಾಬಿ ಗಿಡಗಳಿಗೆ ನೀರು ಹನಿಸಿದೆ. ಬೇಲಿಗೂಟವನ್ನು ತಬ್ಬಿದ್ದ ಮಲ್ಲಿಗೆ ಬಳ್ಳಿ, ತೆಂಗಿನ ಮರದ ತಂಪಿನಲ್ಲಿದ್ದ ಗೊಲ್ಟೆ ಹೂವಿನ ಗಿಡ, ಅದರ ಪಕ್ಕದಲ್ಲೇ ನವಿಲುನೀಲಿ ಹೂಗಳನ್ನು ತೂಗುತ್ತಿರುವ ಶಂಖಪುಷ್ಪ, ಚಿಕ್ಕ ಮಕ್ಕಳಂತೆ ನಗುತ್ತಿರುವ ತುಂಬೆ ಹೂವು, ಮನೆಯ ಪಕ್ಕ ನೆರಳಿನಲ್ಲಿರುವ ಶ್ಯಾವಂತಿಗೆ ಪಟ್ಟೆ... ಎಲ್ಲಕ್ಕೂ ನೀರು ಹಾಕಿದೆವು. ತುಂತುರು ತಾಕಿದ್ದೇ ಖುಷಿಯೋ ಖುಷಿ ಹೂವುಗಳಿಗೆ! ತಣ್ಣೀರಿನಿಂದ ಮೈಪುಳಕಗೊಂಡು ಗಾಳಿಗೆ ತೂಗತೊಡಗಿದವು. ಈ ಹೂವುಗಳು ಸಾಮಾನ್ಯ ಅಂದುಕೊಳ್ಳಬೇಡಿ, ಸಿಕ್ಕಾಪಟ್ಟೆ ಕಿಲಾಡಿ ಇದಾವೆ... ನೋಡಿದ ಗೃಹಿಣಿಯ ಕಣ್ಣಲ್ಲಿ ಆಕರ್ಷಣೆ ಹುಟ್ಟಿಸಿ, ಆಕೆಯ ಮುಡಿಯೇರಿ, ರಾತ್ರಿ ಮಲಗುವಾಗ ಅವಳು ಹೇರ್‌ಕ್ಲಿಪ್ಪಿನಿಂದ ಬಿಡಿಸಿಕೊಳ್ಳುವ ಮುನ್ನ ಅವಳ ಹೆರಳ ತುಂಬಾ ತಮ್ಮ ಘಮವನ್ನು ಉಳಿಸಿಯೇ ಇಳಿಯುತ್ತವೆ ಇವು. ಆ ರಾತ್ರಿ ಆ ಪರಿಮಳದಿಂದಲೇ ಅವನು ಇನ್ನಷ್ಟು ಉನ್ಮತ್ತನಾಗುತ್ತಾನೆ...

ಹಿತ್ತಿಲ ಹಲಸಿನ ಮರದ ಹಿಂದೆಲ್ಲೋ ಸೂರ್ಯ ಮುಳುಗುತ್ತಿದ್ದ. ಆಗಸದ ಹೂದೋಟದಲ್ಲಿ ಚುಕ್ಕಿಗಳು ಒಂದೊಂದಾಗಿ ಅರಳುತ್ತಿದ್ದವು. ಪಾರಿವಾಳಗಳೆಲ್ಲ ಆಗಲೇ ಗೂಡು ಸೇರಿದ್ದವಿರಬೇಕು. 'ಸಾಕು, ಕಪ್ಪಾಯ್ತು, ಒಳಗೆ ಹೋಗೋಣ ಬಾ. ಅವಲಕ್ಕಿ-ಮೊಸರು ತಿನ್ನುವಂತೆ' ಅಮ್ಮ ಕರೆದಳು. ಹೊಸ ಆಹ್ಲಾದದೊಂದಿಗೆ ನಾನು ಮನೆಯ ಒಳನಡೆದೆ.

Saturday, March 10, 2007

ಕೊಟ್ಟಿಗೆ: ಒಂದು ಸುಲಲಿತ ಪ್ರಬಂಧ

ಅಮ್ಮ ಅಂದಳು ಫೋನಿನಲ್ಲಿ "ದನ ಮೊನ್ನೆ ಕರ ಹಾಕ್ಚು. ಆದರೆ ಹಾಲು ಕರೆಯಕ್ಕೇ ಕೊಡ್ತಾ ಇಲ್ಲೆ. ಹಾಯಕ್ಕೇ ಬರ್ತು. ನಿಲ್ತೇ ಇಲ್ಲೆ ಒಂದು ಕಡೆ, ಒಂದೇ ಸಮನೆ ತಿರುಗ್ತು. ಮೊಲೆಗೆ ಕೈ ಹಾಕಿದ್ರೆ ಒದಿತು.."

ಅಯ್ಯೋ! ಏನಾಯಿತು ನಮ್ಮನೆ ದನಕ್ಕೆ? ಎಂಥ ಸಿಟ್ಟು ಅದಕ್ಕೆ? ನಾನು ಯೋಚಿಸಿದೆ. ಹೇಳಿದೆ ಅಮ್ಮನ ಹತ್ರ "ಕೈ ಮರ್ಚಲೇನ? ಅಪ್ಪನ ಹತ್ರ ನೋಡಕ್ಕೆ ಹೇಳಕ್ಕಾಯಿತ್ತು" ಅಂತ. ಅಮ್ಮ ಅಂದಳು "ಅಯ್ಯೋ ಎಲ್ಲಾ ನೋಡ್ಯಾತು. ಅವರಿಗೂ ಕೊಡ್ಲೆ. ನಿನ್ನೆ ಮಾವ ಬಂದಿದ್ದಿದ್ದ, ಅವನ ಹತ್ರ ನೋಡು ಅಂದ್ಯ. ಅವಂಗೆ ಸಲೀಸಾಗಿ ಕೊಡ್ಚು!"

ವಿಷಯ ಏನಪ್ಪಾ ಅಂದ್ರೆ, ಅದು ಮಾವನ ಮನೆಯಿಂದ ಹೊಡೆದು ತಂದ ದನ. ನಮ್ಮನೆಯಲ್ಲಿ ಅಜ್ಜಿ ತೀರಿಕೊಂಡಾಗ, ಪ್ರತಿ ತಿಂಗಳೂ ಗೋಗ್ರಾಸ ಕೊಡಬೇಕಲ್ಲ, ಅದಕ್ಕೆ ದನ ಇರಲಿಲ್ಲ. ಬೇರೆ ಯಾರ ಮನೆ ದನಕ್ಕಾದರೂ ಕೊಡುವುದು ಅಂತ ನಾವು ತೀರ್ಮಾನಿಸಿದ್ದೆವು. ಆದರೆ ಅಷ್ಟೊತ್ತಿಗೆ ನಮ್ಮನೆ ಎಮ್ಮೆಯೂ ಹಾಲು ಕಮ್ಮಿ ಮಾಡಿತ್ತು. 'ಓ, ಈಗ ಒಂದು ಬೇರೆ ಜಾನುವಾರು ಮಾಡೋದೇ ಸೈ' ಅಂತ ಅಪ್ಪ ಯೋಚಿಸುತ್ತಿದ್ದಾಗಲೆ ಮಾವ ಬಂದು "ಈಗ ಅರ್ಜೆಂಟಿಗೆ ಎಲ್ಲಿ ಅಂತ ಹುಡುಕ್ತಿ? ನಮ್ಮನೆ ದನಾನೆ ಹೊಡಕಂಡು ಹೋಕ್ಯಳಿ" ಅಂದ. ನಾವೂ ಹೆಚ್ಚು ಯೋಚಿಸದೆ ಮಾವನ ಮನೆ ದನ 'ಕೃಷ್ಣೆ'ಯನ್ನು ತಂದುಕೊಂಡೆವು. ತೌರಿನಿಂದ ಬಂದಮೇಲೆ ಬೇರೆ ಹೆಸರಿಡುವ ಸಂಪ್ರದಾಯ ಜಾನುವಾರುಗಳಲ್ಲಿ ಇಲ್ಲವಾದರೂ ನಾನು ಅದಕ್ಕೆ 'ಮಂಗಳ' ಅಂತ ಹೊಸ ಹೆಸರಿಟ್ಟೆ. ನಾನು ಆ ಹೆಸರಿಟ್ಟಿದ್ದಕ್ಕೆ ನಿಜವಾದ ಕಾರಣ ಅದು ನನ್ನ ಕಾಲೇಜಿನ ಚಂದದ ಹುಡುಗಿಯೊಬ್ಬಳ ಹೆಸರು ಎಂಬುದಾಗಿತ್ತಾದರೂ "ಇವತ್ತು ಮಂಗಳವಾರವಾದ್ದರಿಂದ 'ಮಂಗಳ' ಅಂತ ಹೆಸರಿಟ್ಟೆ" ಅಂತ ನಾನಂದಾಗ ನಮ್ಮ ಮನೆಯಲ್ಲಿ ಯಾರಿಗೂ ಅನುಮಾನ ಬರಲಿಲ್ಲ.

ಇದೆಲ್ಲಾ ಆಗಿದ್ದು ಎರಡು ವರ್ಷದ ಹಿಂದೆ. ಆದರೆ ಆ ದನ ಇನ್ನೂ ಮಾವನನ್ನು ನೆನಪಿಟ್ಟುಕೊಂಡಿದೆ! ಅದು ಅವರ ಮನೆಯಲ್ಲೇ ಹುಟ್ಟಿದ ದನ. ಮಾವನ ಮನೆಯವರು ಅಕ್ಕರೆಯಿಂದ ಬೆಳೆಸಿದ ದನ. ಮೊದಲನೇ ಕರು ಹಾಕಿದಾಕ್ಷಣ ನಮ್ಮನೆಗೆ ಬಂದಿತ್ತು ಅದು.

ಹಳ್ಳಿ ಮನೆ ಎಂದಮೇಲೆ ಅದಕ್ಕೊಂದು ಕೊಟ್ಟಿಗೆ ಇರಬೇಕು. ಕೊಟ್ಟಿಗೆ ತುಂಬಾ ಜಾನುವಾರುಗಳಿರಬೇಕು. ಒಂದು ಕೊಟ್ಟಿಗೆ ಇದೆ ಎಂದರೆ ಏನೆಲ್ಲ ಇರಬೇಕು... ಹುಲ್ಲು ಗೊಣಬೆ, ಕಲ್ಡದ ಬ್ಯಾಣ, ಹಸಿಹುಲ್ಲಿಗೆ ಹಿತ್ಲು, ಹಿಂಡಿ-ಗೋಧಿಭೂಸ-ತೌಡು ಶೇಖರಿಸಿಡಲು ಗೋಡೌನು, ಅಕ್ಕಚ್ಚು ತೋರಲು ಒಂದು ಹಿಂಡಾಲಿಯಂ ಬಕೀಟು, ಹರಿದು ಹೋದರೆ ಬೇಕಾಗುತ್ತದೆ ಎಂದು ತಂದಿಟ್ಟ ಎಕ್ಸ್‍ಟ್ರಾ ಕಣ್ಣಿ.... ಕೊಟ್ಟಿಗೆ ಇದೆ ಎಂದಮೇಲೆ ಅಲ್ಲಿ ಏನೆಲ್ಲ ಇರುತ್ತದೆ... ಆಡಿಕೊಳ್ಳಲೆಂದು ಅಂಗಳದಲ್ಲಿ ಬಿಟ್ಟಿದ್ದ ಕರು ಅಲ್ಲಲ್ಲಿ ಹಾಕಿದ ಸಗಣಿ ಉಳ್ಳೆ, ಸರಿಯಾದ ಹೊತ್ತಿಗೆ ಹುಲ್ಲು ಹಾಕಲಿಲ್ಲವೆಂದರೆ ಕೊಟ್ಟಿಗೆಯಿಂದ ಬರುವ ದನದ 'ಅಂಬಾ..' ಕೂಗು, ಅದನ್ನು ಹಿಂಬಾಲಿಸುವ ಎಮ್ಮೆಯ 'ಆಂಯ್' ಕೂಗು, ಹಾಗೆ ಕೊಟ್ಟಿಗೆಯಿಂದ ಕೂಗುಗಳು ಬಂದಾಕ್ಷಣ ಅಮ್ಮನನ್ನು 'ಹುಲ್ಲು ಹಾಕಲ್ಯನೇ?' ಎಂದು ಕೇಳುವ ಅಪ್ಪ, 'ಹಿಂಡಿ ಖಾಲಿ ಆಯ್ದು. ಸುಬ್ಬಣ್ಣನ ವ್ಯಾನು ಸಾಗರಕ್ಕೆ ಹೋಗ್ತೇನ, ಒಂದು ಚೀಲ ಹಾಕ್ಯಂಡು ಬರಕ್ಕೆ ಹೇಳಲಾಗಿತ್ತು' ಎಂಬ ಅಮ್ಮನ ವರಾತ, ಹಾಲು ಕೊಡದಿದ್ದರೆ 'ಮುರ ಇಟ್ಕಂಡು ನೋಡಿ' ಎಂಬ ಸಲಹೆ... ಕೊಟ್ಟಿಗೆ ಎಂಬುದು ಹಳ್ಳಿಯ ಮನೆಗಳ ಅವಿಭಾಜ್ಯ ಅಂಗ. ಅದು ಹಳ್ಳಿಗರ ಜೀವನಶೈಲಿಯೆಂಬ ಚಿತ್ರಾನ್ನಕ್ಕೆ ಹಾಕಿದ ಉಪ್ಪು-ಖಾರ.

ಮನೆಗೆ ಹೊಂದಿಕೊಂಡಂತೆ ಇರುತ್ತದೆ ಕೊಟ್ಟಿಗೆ. ಚಪ್ಪಡಿ ಹಾಸಿದ ಕೊಟ್ಟಿಗೆಯಲ್ಲಿ ಮಧ್ಯದಲ್ಲೊಂದು ಒಗದಿ. ಜಾನುವಾರು ಹೊಯ್ದ ಉಚ್ಚೆ (ಗ್ವಾತ), ಅವುಗಳ ಮೈತೊಳೆದ ನೀರು, ಎಲ್ಲಾ ಆ ಒಗದಿಯ ಮೂಲಕ ಸಾಗಿ ಗೊಬ್ಬರಗುಂಡಿಯ ಪಕ್ಕ ಇರುವ ಒಂದು ಬಾನಿಗೆ ಬೀಳುತ್ತದೆ. ಹುಲ್ಲು ತಿನ್ನುತ್ತಾ ನಿಂತಿರುವ ದನ, ಮಲಗಿ ಮೆಲಕು ಹಾಕುತ್ತಿರುವ ಎಮ್ಮೆ, ಆಸೆಗಣ್ಣುಗಳಲ್ಲಿ ತಾಯಿಯನ್ನೇ ನೋಡುತ್ತಿರುವ ಕರು, ತಾನು ಹಾಕಿದ ಸಗಣಿಯನ್ನು ತಾನೇ ಮೂಸುತ್ತಿರುವ ಪೆದ್ದ ಎಮ್ಮೆಕರು... ಈ ಜಾನುವಾರುಗಳು ಎಷ್ಟೊಂದು ಸುಖಿಗಳು ಅನ್ನಿಸುತ್ತದೆ ಎಷ್ಟೋ ಸಲ. ಅವುಗಳ ಸುಖ ನಮಗಿಲ್ಲವಲ್ಲ ಅನ್ನಿಸುತ್ತದೆ. ಅರಾಮಾಗಿ ಹಾಕಿದ ಹುಲ್ಲು ತಿನ್ನುವುದು, ಮಲಗುವುದು, ಮೆಲುಕು ಹಾಕುವುದು, ಏಳುವುದು.... ಉಚ್ಚೆ ಹೊಯ್ಯುವುದಕ್ಕೂ ಹೊರಗೆ ಹೋಗಬೇಕಿಲ್ಲ; ಸಂಡಾಸನ್ನು ಲ್ಯಾಟ್ರೀನ್ ರೂಮಿಗೇ ಹೋಗಿ ಮಾಡಬೇಕೆಂಬ ರಿಸ್ಟ್ರಿಕ್ಷನ್ ಇಲ್ಲ! ನಿಂತಲ್ಲೇ ಎಲ್ಲಾ ಮಾಡಿದರಾಯಿತು. ಬೇಕಾದರೆ ಸಾಕಿಕೊಂಡವರು ಅವನ್ನೆಲ್ಲಾ ಕ್ಲೀನ್ ಮಾಡಿಕೊಳ್ಳಲಿ. ಆಹಾ! ಎಷ್ಟು ಸುಖಜೀವನ! ಯಾವ ಸಾಫ್ಟ್‍ವೇರ್ ಇಂಜಿನಿಯರ್ರಿನ ಹೆಂಡತಿಗಿದೆ ಈ ಸುಖ?

ಇವೆಲ್ಲಾ ಮೇಯಲು ಹೊರಗಡೆ ಬಿಡದ, ಮನೆಯಲ್ಲೇ ಕಟ್ಟಿ ಹಾಕುವ ಮನೆಗಳ ಜಾನುವಾರುಗಳ ಸುಖದ ಕತೆಯಾದರೆ ಮೇಯಲು ಬ್ಯಾಣಕ್ಕೆ ಬಿಡುವ ಜಾನುವರಗಳ ಸುಖ ಮತ್ತೊಂದು ತರ! ಬೆಳಗ್ಗೆ ಎದ್ದ ಕೂಡಲೆ ಹುಲ್ಲು ಹಾಕಿ, ಹಾಲು ಕರೆದು, ತೊಳಕಲು, ಹಿಂಡಿ ಕೊಟ್ಟು, ಕಣ್ಣಿ ಕಳಚಿ ಹೊರಗೆ ಬಿಟ್ಟರೆ ಆಮೇಲು ಅವು ವಾಪಾಸು ಕೊಟ್ಟಿಗೆಗೆ ಬರುವುದು ಸೂರ್ಯ ಮುಳುಗಿದ ಮೇಲೇ. ಕೆಲ ಊರುಗಳಲ್ಲಿ ದನಗಾವಲು ಅಂತಲೇ ಇರುತ್ತದೆ. 'ದನ ಕಾಯುವ ಹುಡುಗ' ಎಂಬ ಬಿರುದಾಂಕಿತ ಹುಡುಗನೊಬ್ಬ ತನ್ನ ಕಂಬಳಿ ಕೊಪ್ಪೆ ಮತ್ತು ದಾಸಾಳ ಬರ್ಲು ಹಿಡಿದು 'ದನ ಹೊಡಿರೋss..' ಎಂದು ಕೂಗುತ್ತ ಪ್ರತಿ ಬೆಳಗ್ಗೆ ಬರುತ್ತಾನೆ. ಅವನ ಕೂಗು ಕೇಳುತ್ತಿದ್ದಂತೆ ಎಲ್ಲರೂ ತಮ್ಮ ಮನೆಗಳ ಕೊಟ್ಟಿಗೆಯ ಬಾಗಿಲು ತೆರೆದು ದನಕರುಗಳನ್ನು ಕಣ್ಣಿ ಕಳಚಿ ಹೊರಬಿಡುತ್ತಾರೆ. ಎಲ್ಲರ ಮನೆಯ ಜಾನುವಾರುಗಳ ಹಿಂಡಿನ ಜೊತೆ ನಮ್ಮನೆ ದನವೂ ಸೇರಿಕೊಳ್ಳುವುದನ್ನು ನೋಡುವಾಗ ಶಾಲೆಗೆ ಹೊರಟ ಮಗುವಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೀಳ್ಕೊಡುವ ಹೃದಯ ಒಂದು ಕ್ಷಣ ತುಂಬಿಕೊಳ್ಳುತ್ತದೆ.

ಗೋಪಬಾಲಕ ಜಾನುವಾರುಗಳನ್ನೆಲ್ಲ ಹೊಡೆದುಕೊಂಡು ಯಾವುದೋ ಬೆಟ್ಟದ ಮೇಲೋ, ಹುಲ್ಲುಗಾವಲಿಗೋ ಒಯ್ಯುತ್ತಾನೆ. ಅಲ್ಲಿ ಅವನ್ನೆಲ್ಲಾ ಮೇಯಲು ಬಿಟ್ಟು ಇವನು ಮರ ಹತ್ತಿ ಹಣ್ಣು ಕೀಳುವುದೋ, ಊರ ಹುಡುಗರಿಗೆ ಎರಡು ರೂಪಾಯಿಗೆ ಕೊಡಲು ಪೆಟ್ಲು ಮಾಡುವುದರಲ್ಲೋ ತೊಡಗುತ್ತಾನೆ. ಅವನು ಹಾಗೆ ಬೇರೆ ಕಡೆ ಹೋಗುತ್ತಿದ್ದಂತೆಯೇ ದನಗಳು ಮರದ ತಂಪನ್ನರಸಿ ಹೊರಟರೆ ಎಮ್ಮೆಗಳು ಕೆಸರಿನ ಹೊಂಡ ಎಲ್ಲಿದೆ ಅಂತ ಹುಡುಕಿ ಹೊರಡುತ್ತವೆ. ಈ ಎಮ್ಮೆಗಳಿಗೆ ಕೆಸರಿನ ಹೊಂಡದಲ್ಲಿ ಹೊರಳಾಡುವುದೆಂದರೆ ಭಾರೀ ಪ್ರೀತಿ. ಉರಿಬಿಸಿಲಿನಲ್ಲಿ ಮುಖವನ್ನಷ್ಟೇ ನೀರಿನಿಂದ ಮೇಲಕ್ಕೆ ಎತ್ತಿ ಕೆಸರಿನ ಹೊಂಡದಲ್ಲಿ ಶತಸೋಮಾರಿಯಂತೆ ಈಜುತ್ತಾ ತೂಕಡಿಸುತ್ತಾ ಇರುವ ಎಮ್ಮೆಯ ಸುಖದ ತಂಪಿನ ಮುಂದೆ ಹೊಂಡಾ ಕಾರಿನ ಏಸಿ ಏನೂ ಅಲ್ಲ. ಹೊಟ್ಟೆಕಿಚ್ಚಾಗುತ್ತೆ ಅದನ್ನು ನೋಡಿದರೆ!

ಸೂರ್ಯ ಮುಳುಗುವ ಹೊತ್ತಿಗೆ ದನಕರುಗಳೆಲ್ಲ ತಮ್ಮ ತಮ್ಮ ಮನೆ ಸೇರುತ್ತವೆ. ಬೆಳಗ್ಗೆಯಷ್ಟೆ ಮೈತೊಳೆದು ಬಿಟ್ಟಿದ್ದ ಎಮ್ಮೆ ಮೈಯೆಲ್ಲಾ ಕೆಸರು ಮಾಡಿಕೊಂಡು ಬಂದದ್ದನ್ನು ನೋಡಿ ಅಪ್ಪ ಸಿಡಿಮಿಡಿಗೊಳ್ಳುತ್ತಾನೆ. ಗೂಟಕ್ಕೆ ಕಣ್ಣಿ ಕಟ್ಟಿ ಹಿಂದೆ ಬರುವಾಗ ಅದು ಬೀಸಿದ ಬಾಲ ಅಪ್ಪನ ಮುಖಕ್ಕೆ ಹೊಡೆದು ಅಪ್ಪನ ಸಿಟ್ಟು ಇಮ್ಮಡಿಯಾಗುತ್ತದೆ. 'ಥೂ, ಸುಮ್ನೆ ನಿಂತ್ಕಳಕ್ಕೆ ಆಗ್ತಲ್ಯನೆ?' ಎಂದು ಒಂದೇಟು ಕೊಡುತ್ತಾನೆ. ಆಮೇಲೆ ಅಕ್ಕಚ್ಚು ಕೊಡುತ್ತಾನೆ. ಯಜಮಾನ ಬೈದನಲ್ಲ ಎಂಬ ಅವಮಾನಕ್ಕೋ ಅಥವಾ ಮತ್ತೆ ಹೊಡೆದಾನು ಎಂಬ ಭಯಕ್ಕೋ, ಪೂರ್ತಿ ಎರಡು ಬಕೆಟ್ ಅಕ್ಕಚ್ಚನ್ನು ಶುಲ್ಟಿ ಎಮ್ಮೆ ತಲೆ ಎತ್ತದೆ ಕುಡಿದು ಮುಗಿಸುತ್ತದೆ. ಆಮೇಲೆ ಅಮ್ಮ ದನದ ಹಾಲನ್ನೂ ಅಪ್ಪ ಎಮ್ಮೆಯ ಹಾಲನ್ನೂ ಕರೆಯುತ್ತಾರೆ. ಹಾಲು ಕರೆದಾದಮೇಲೆ ಹುಲ್ಲು ಹಾಕಿ, ಕೊಟ್ಟಿಗೆಯ ಬಾಗಿಲು ಮುಚ್ಚಿ ಒಳಬಂದರೆ ಹೆಚ್ಚುಕಮ್ಮಿ ಅವತ್ತಿನ ಕೊಟ್ಟಿಗೆ ಕೆಲಸ ಆದಂತೆಯೇ.

ಹಳ್ಳಿಯ ಜನ ಕೊಟ್ಟಿಗೆಗೆ, ಜಾನುವಾರುಗಳಿಗೆ ಎಷ್ಟು ಹೊಂದಿಕೊಂಡಿರುತ್ತಾರೆಂದರೆ ಒಂದು ದಿನ ಕೊಟ್ಟಿಗೆಗೆ ಹೋಗಲಿಲ್ಲವೆಂದರೆ ಸಮಾಧಾನವಿರುವುದಿಲ್ಲ. ಅಲ್ಲದೇ ಕೊಟ್ಟಿಗೆ ಇಲ್ಲದಿದ್ದರೆ ಹಳ್ಳಿ ಮನೆಯ ಜನಗಳಿಗೆ ಅಂತಹ ಕೆಲಸವೂ ಇರುವುದಿಲ್ಲ. ಕೊಟ್ಟಿಗೆ ಕೆಲಸ ದಿನದ ಮುಖ್ಯ ಕೆಲಸಗಳಲ್ಲಿ ಒಂದು. ಬೆಳಗ್ಗೆ ಎದ್ದಕೂಡಲೇ ಹಾಲು ಕರೆಯುವುದು, ಆಮೇಲೆ ದನಕರುಗಳ ಮೈತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನ್ ಮಾಡುವುದು, ಗೋಬರ್ ಗ್ಯಾಸಿಗೆ ಸಗಣಿ ಕರಡುವುದು, ಹಿತ್ಲಿನಿಂದ ಹಸಿ ಹುಲ್ಲು ಕೊಯ್ದು ತರುವುದು, ಅವಾಗಿವಾಗ ಹುಲ್ಲು ಹಾಕುತ್ತಿರುವುದು, ಸಂಜೆ ತೊಳಕಲು ತೋರುವುದು, ಹಿಂಡಿ ಕೊಡುವುದು.... ಹೀಗೆ ಕೊಟ್ಟಿಗೆ ಕೆಲಸ ಹಳ್ಳಿಗರ ದಿನದ ಬಹಳ ಸಮಯವನ್ನು ತಿಂದು ಹಾಕುತ್ತದೆ. ಇದನ್ನು ಆಲೋಚಿಸಿಯೇ ಕೆಲ ಮನೆಯವರು ಇತ್ತೀಚೆಗೆ ತಮ್ಮ ಮನೆಯ ಜಾನುವಾರುಗಳನ್ನೆಲ್ಲಾ ಮಾರಿ ಹಾಲು ಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಕೊಟ್ಟಿಗೆಗೆ ಖರ್ಚೂ ತುಂಬಾನೇ ಬರುತ್ತದೆ. ದನಕರುಗಳಿಗೆ ಹಿಂಡಿ, ಹತ್ತಿಕಾಳು, ಗೋಧಿಬೂಸ, ತೌಡು, ಬಿಳಿಹುಲ್ಲು.... ಹೀಗೆ ಆಹಾರಕ್ಕೇ ಸಿಕ್ಕಾಪಟ್ಟೆ ಖರ್ಚು. ಅವಕ್ಕೆ ಖಾಯಿಲೆ-ಕಸಾಲೆ ಬಂದರಂತೂ ಡಾಕ್ಟರಿಗೆ-ಔಷಧಿಗೆ ದುಡ್ಡು ಕೊಟ್ಟು ಪೂರೈಸುವುದೇ ಅಲ್ಲ. ಈ ಮಧ್ಯೆ ಎಮ್ಮೆ-ದನಗಳು ಯಾವಾಗ ಬತ್ತಿಸಿಕೊಳ್ಳುತ್ತವೆ (ಹಾಲುಕೊಡುವುದು ನಿಲ್ಲಿಸುವುದು) ಎಂದು ಹೇಳಲಾಗುವುದಿಲ್ಲ. ಬಲ್ಡು (ಬರಡು) ಬಿದ್ದ ಜಾನುವಾರನ್ನು ಇಟ್ಟುಕೊಂಡು ಸುಮ್ಮನೆ ಸಾಕುವುದು ಯಜಮಾನನಿಗೆ ಹೊರೆಯೇ. ಹೀಟಿಗೆ ಬಂದಾಗ ಮಳಗದ್ದೆ ಮನೋಹರನನ್ನೋ ಮೂಡಗೋಡು ಅರವಿಂದನನ್ನೋ ಕರೆಸಿ ಇನ್ಸೆಮಿನೇಶನ್ ಮಾಡಿಸಬೇಕು. ಒಂದೇ ಸಲಕ್ಕೆ ಗರ್ಭ ಕಟ್ಟುತ್ತದೆ ಅಂತ ಹೇಳಲಾಗುವುದಿಲ್ಲ. ಮತ್ತೆ ಮತ್ತೆ ಕರೆಸಬೇಕಾಗಬಹುದು. ಗಬ್ಬ ಆಗಿ ಐದಾರು ತಿಂಗಳಾದ ಮೇಲೆ ದನ ಹಾಲು ಕೊಡುವುದು ನಿಲ್ಲಿಸುತ್ತದೆ. ಇನ್ನು ಅದು ಕರು ಹಾಕುವವರೆಗೂ ಕಾಯಬೇಕು. ಇದೆಲ್ಲಾ ರಗಳೆಗಳು ಬೇಡವೇ ಬೇಡ ಎಂದು ನಿರ್ಧರಿಸಿ ಹಳ್ಳಿ ಜನಗಳು ಈಗೀಗ 'ಬುದ್ಧಿವಂತ'ರಾಗುತ್ತಿದ್ದಾರೆ. ದಿನಕ್ಕೆ ಎರಡು ಲೀಟರ್ ಹಾಲು ಕೊಂಡರಾಯಿತು. ತೋಟಕ್ಕೆ ಹಾಕಿಸಲು ಎರಡು ಲೋಡ್ ಗೊಬ್ಬರ ಕೊಂಡರಾಯಿತು. ಅಡುಗೆಗೆ ಹೇಗಿದ್ದರೂ ಸಿಲಿಂಡರ್ ಗ್ಯಾಸ್ ಇದೆ.

ಆದರೆ ಹಾಗೆ ಜಾನುವಾರುಗಳನ್ನೆಲ್ಲಾ ಕೊಟ್ಟು ಕೊಟ್ಟಿಗೆ ಖಾಲಿ ಮಾಡಿಕೊಂಡವರು ಆ ಮೂಲಕ ಕೆಲಸ ಕಮ್ಮಿ ಮಾಡಿಕೊಂಡರೂ ಕೊಟ್ಟಿಗೆಯಿಂದ ಸಿಗುತ್ತಿದ್ದ ಅದೆಷ್ಟೋ ಖುಷಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ. ದನಕರುಗಳು, ಅವು ಕೊಟ್ಟಿಗೆಯಲ್ಲಿದ್ದರೂ, ಮನೆ ಮಂದಿಯಷ್ಟೇ ಪ್ರಾಮುಖ್ಯತೆ ಇರುತ್ತದೆ ಅವಕ್ಕೆ. 'ಏನೇ, ಇನ್ನೂ ಮಲಗಿದ್ಯಲ, ಏಳು ಸಾಕು' ಎನ್ನುತ್ತಾ ಕೊಟ್ಟಿಗೆಗೆ ಹೋದರೆ ಅದೆಷ್ಟು ದೈನ್ಯತೆಯಿಂದ ಎದ್ದು ನಿಲ್ಲುತ್ತದೆ ದನ! ಎಷ್ಟು ಪ್ರೀತಿ ತೋರಿಸುತ್ತದೆ ಅದು ಯಜಮಾನನಿಗೆ! ಸಾಕುಪ್ರಾಣಿಗಳ ಒಡನಾಟದಲ್ಲಿ ನಾವು ನಮ್ಮ ದುಃಖವನ್ನೆಲ್ಲಾ ಮರೆಯುತ್ತೇವೆ. ಅಪ್ಪ-ಅಮ್ಮ ಯಾವುದೋ ಕಾರಣಕ್ಕೆ ಬೈದಾಗ ಕೊಟ್ಟಿಗೆಗೆ ಹೋಗಿ ಕರುವಿನ ಎದುರು ನಿಂತು ಬಿಕ್ಕಿ ಬಿಕ್ಕಿ ಅಳುತಿದ್ದರೆ, ಅದು ನಮ್ಮ ಕಷ್ಟವನ್ನೆಲ್ಲಾ ಅರಿತಂತೆ, ತನ್ನ ಒರಟು ನಾಲಿಗೆಯಿಂದ ನಮ್ಮ ಕಾಲನ್ನು ನೆಕ್ಕುತ್ತಾ ಸಾಂತ್ವನ ಹೇಳುತ್ತದೆ. ಕೊಟ್ಟಿಗೆಗೆ ಹೋಗಿ ಬರುವಾಗೆಲ್ಲ ದನಕರುಗಳೊಂದಿಗೆ ಮಾತನಾಡುತ್ತಾ, ಅವುಗಳ ಮೈದಡುವುತ್ತಾ, ಒಂದು ವಿಲಕ್ಷಣ ಸುಖವನ್ನು ಅನುಭವಿಸುತ್ತಿರುತ್ತೇವೆ.

ಜಾನುವಾರುಗಳಿಗೆ, ಕೊಟ್ಟಿಗೆಯನ್ನು ತೂಗಿಸುವುದಕ್ಕೆ ತುಂಬಾ ಖರ್ಚು ಬರುತ್ತದೆಯಾದರೂ ಅದರಿಂದ ಲಾಭವೂ ಅಷ್ಟೇ ಇದೆ. ಒಳ್ಳೆಯ ಬನಿ ಇರುವ ಹಾಲು, ಸಗಣಿಯಿಂದ ಗೋಬರ್ ಗ್ಯಾಸ್, ಕೊಟ್ಟಿಗೆಯ ತ್ಯಾಜ್ಯದಿಂದ ತೋಟಕ್ಕೆ ಫಲವತ್ತಾದ ಗೊಬ್ಬರ.... ನಮ್ಮನೆ ಅಜ್ಜಿ ಅವಾಗಿವಾಗ ಹೇಳುತ್ತಿದ್ದಳು: 'ನಾವು ತಿನ್ನೋದು ದನಕರದ ಸಗಣಿ! ಅವುನ್ನ ಚನಾಗಿ ಸಾಕವು' ಅಂತ. ಎಷ್ಟೋ ಸಲ ಅದು ಸರಿ ಅನ್ನಿಸುತ್ತದೆ.

ಎಮ್ಮೆ ವ್ಯಾಪಾರದಿಂದಲೇ ದುಡ್ಡು ಮಾಡಿದವರಿದ್ದಾರೆ. ಅದನ್ನೇ ದಂಧೆಯನ್ನಾಗಿ, ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದಾರೆ. ಕ್ಯಾಸನೂರು ಮಾರ್‍ಯಾ (ಮಾರಪ್ಪ)ನಂತೂ ಫೇಮಸ್ಸು ನಮ್ಮ ಕಡೆ! ಸಾಗರದ ಪುರುಷೋತ್ತಮ ಎಮ್ಮೆ ದಲ್ಲಾಳಿ ಮಾಡಿ ಮಾಡಿಯೇ ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದಾನೆ! ಒಳ್ಳೆಯ ಶುಲ್ಟಿ (ಸುರುಟಿ) ಎಮ್ಮೆಗಳಿಗೆ, ಜರ್ಸಿ ಆಕಳುಗಳಿಗೆ ತುಂಬಾನೇ ರೇಟ್ ಇದೆ.

ನಾನು ಇಲ್ಲಿ ಬರೆದದ್ದೆಲ್ಲಾ ದನ-ಎಮ್ಮೆಗಳ ಕತೆಯಾಯಿತು. ಗದ್ದೆ ಇರುವ ಮನೆಗಳಲ್ಲಿ ಕೋಣ, ಎತ್ತುಗಳನ್ನೂ ಸಾಕಿರುತ್ತಾರೆ. ಎತ್ತುಗಳು ಗದ್ದೆ ಉಳುಮೆಗೆ, ಗಾಡಿಯಲ್ಲಿ ಸರಂಜಾಮುಗಳನ್ನು ಸಾಗಿಸುವುದಕ್ಕೆ ಬಳಸಲ್ಪಡುತ್ತವೆ. ಕೋಣಗಳು ಆಲೆಮನೆಯಲ್ಲಿ ಗಾಣ ತಿರುಗಿಸಲಿಕ್ಕೆ ಬಳಸಲ್ಪಡುತ್ತವೆ. ಗದ್ದೆ ಇಲ್ಲದ ಮನೆಯಲ್ಲಿ ಗಂಡು ಕರುಗಳು ಜನಿಸಿದರೆ ಅವಕ್ಕೆ ಒಂದೆರಡು ವರ್ಷ ವಯಸ್ಸಾಗುತ್ತಿದ್ದಂತೆಯೇ ಮಾರಿಬಿಡುತ್ತಾರೆ. 'ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕು; ಮನೆಯಲ್ಲಿ ಗಂಡು ಹುಟ್ಟಬೇಕು' ಎಂಬುದು ನಮ್ಮ ಕಡೆ ನಾಣ್ಣುಡಿ.

ಮನುಷ್ಯರಿಗೆ ಇಷ್ಟೆಲ್ಲಾ ಉಪಕಾರ ಮಾಡುವ ದನಕರುಗಳಿಗೆ ಹಳ್ಳಿಗರು ದೀಪಾವಳಿಯ ಸಮಯದಲ್ಲಿ ವಿಶೇಷ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಗೋವುಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಬಣ್ಣ ಹಚ್ಚಿ, ಹೂಮಾಲೆ ಕಟ್ಟಿ ಸಿಂಗರಿಸಿ, ಭರ್ಜರಿ ಪೂಜೆ ಮಾಡಿ, ಹೋಳಿಗೆ-ಗೋಗ್ರಾಸ ಕೊಟ್ಟು ಸಂಭ್ರಮಿಸುತ್ತಾರೆ. ಗೋವುಗಳನ್ನು ದೇವರೆಂದೇ ಪೂಜಿಸುತ್ತಾರೆ. ಗೋಮಾತಾ ಎಂದೇ ಕರೆಯುತ್ತಾರೆ. ಆದರೆ ಗೋವಿಗೆ ಸಿಗುವ ಈ ವಿಶೇಷ ಆದರ ಎಮ್ಮೆ-ಕೋಣಗಳಿಗೆ ಅಷ್ಟಾಗಿ ಸಿಕ್ಕುವುದಿಲ್ಲ.

ಬೆಂಗಳೂರಿನಿಂದ ಊರಿಗೆ ಹೋದಾಗೆಲ್ಲಾ, ನನ್ನನ್ನು ಎಂದೂ ಮರೆಯದ ಮಂಗಳ, ನನ್ನನ್ನು ಕಾಣುತ್ತಿದ್ದಂತೆ ಕಣ್ಣಿ ಕಿತ್ತು ಬರುವಂತೆ, ನನ್ನನ್ನು ಮುಟ್ಟಲು ಬಾಗುತ್ತಾ ಹಾತೊರೆಯುತ್ತದೆ. ಕಾಲೇಜಿನ ಮಂಗಳಳ ಪ್ರೀತಿ ದಕ್ಕದಿದ್ದರೂ ಕೊಟ್ಟಿಗೆಯ ಮಂಗಳಳ ಪ್ರೀತಿ ಸಿಕ್ಕತಲ್ಲ, ನಾನು ಧನ್ಯ! ಅದರ ಪ್ರೀತಿಗೆ ನನ್ನ ಮರುಪ್ರೀತಿಯ ಶರಣು.

Monday, March 05, 2007

ಹೀಗೊಂದು ವೀಕೆಂಡು

ಈ ಸಲದ ವೀಕೆಂಡನ್ನು ಬಹಳ ಚೆನ್ನಾಗಿ ಕಳೆದೆ. ಇಷ್ಟೊಳ್ಳೆಯ ವೀಕೆಂಡ್ ಅನುಭವಿಸದೇ ತಿಂಗಳುಗಳೇ ಆಗಿದ್ದವೇನೋ? ಈ ಪರಿ ಭಾವಾವೇಶಕ್ಕೆ ಒಳಗಾಗದೆಯೂ.

ಮೊನ್ನೆ ಶನಿವಾರ ಬೆಂಗಳೂರಿಗರೆಲ್ಲ ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ಮಜಾ ಮಾಡುತ್ತಿದ್ದರು. ನನಗೆ ಯಾರೂ ಎರಚಲಿಲ್ಲವಾದರೂ ನಾನೂ ಎರಚಿಸಿಕೊಂಡವನಷ್ಟೇ ಉನ್ಮಾದದಲ್ಲಿ ತೇಲುತ್ತಿದ್ದೆ. ಈ ಬೆಂಗಳೂರಿಗರು ಎಲ್ಲದರಲ್ಲೂ ಸ್ವಲ್ಪ ಓವರ್ರು. ಇವರು ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ತಿಂಗಳಿಡೀ ಆಚರಿಸುತ್ತಾರೆ (ಕೆಲವೊಮ್ಮೆ ತಿಂಗಳು ಮುಗಿದರೂ ಆರ್ಕೆಸ್ಟ್ರಾದವರ ಮೈಕು ಕೇಳಿಸುತ್ತಿರುತ್ತದೆ). ಚೌತಿ ಮುಗಿದು ಎರಡು ತಿಂಗಳಾದರೂ 'ಗಾಯತ್ರಿನಗರ ಗೆಳೆಯರ ಬಳಗದ ೧೫ನೇ ವರ್ಷದ ಗಣಪತಿ ಉತ್ಸವ' ನಡೆಯುತ್ತಿರುತ್ತದೆ. ಹಬ್ಬಗಳನ್ನಂತೂ ಒಂದನ್ನೂ ಬಿಡದೇ ಆಚರಿಸುತ್ತಾರೆ. ಹೋಳಿಹಬ್ಬ ಆಗಿ ಮೂರು ದಿನ ಆದರೂ ಇವರ ಬಣ್ಣ ಎರಚುವ ಸಂಭ್ರಮ ಮುಗಿದಿರುವುದಿಲ್ಲ. ಇವತ್ತು ಆಫೀಸಿಗೆ ಬರುವಾಗ ಕಾಲೇಜ್ ಹುಡುಗರು ಮುಖಕ್ಕೆಲ್ಲಾ ಬಣ್ಣ ಮೆತ್ತಿಕೊಂಡು ಕುಣಿದಾಡುತ್ತಿರುವುದನ್ನು ನೋಡಿದೆ. ಹುಡುಗಿಯರು ಅಂಜಿಕೊಂಡು ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟುಕೊಂಡು ಬರುತ್ತಿದ್ದರು (ಪಾಪ!).

ಶನಿವಾರ ರಾತ್ರಿಯ ಹೊತ್ತಿಗೆ ಬೆಂಗಳೂರಿಗರು ತಮ್ಮ ಮುಖಗಳಿಗೆ ಎಣ್ಣೆ ಹಚ್ಚಿಕೊಂಡು, ಲಕ್ಸ್ ಸೋಪಿನಿಂದ ಬಣ್ಣ ತೊಳೆದುಕೊಳ್ಳುತ್ತಿರುವಾಗ ನಾನು ಟೆರೇಸಿನ ಮೇಲೆ ಚಾಪೆ ಹಾಸಿ ಆಕಾಶ ನೋಡುತ್ತಾ ಮಲಗಿಕೊಂಡಿದ್ದೆ. ಗೆಳೆಯ ಶ್ರೀನಿಧಿಗೆ ಫೋನಾಯಿಸಿದರೆ ಅವನು ಅದೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಚಂದ್ರವೀಕ್ಷಣೆಯಲ್ಲಿ ತೊಡಗಿರುವುದಾಗಿ ಹೇಳಿದ. ನಾವು ಭಾವಜೀವಿಗಳದ್ದು ಇದೊಂದು ಕರ್ಮ! ಬಣ್ಣ ಹಚ್ಚಿಕೊಂಡು ವಿಕಾರಗೊಂಡ ಮುಖಗಳಲ್ಲೂ ಸೌಂದರ್ಯ ಕಾಣುತ್ತದಾ ಅಂತ ಹುಡುಕುತ್ತಿರುತ್ತೇವೆ, ಚಂದ್ರಗ್ರಹಣ ಇದೆ ಇವತ್ತು ರಾತ್ರಿ ಎಂದರೆ -ಅದು ಎಷ್ಟೊತ್ತಿಗಾದರೂ ಇರಲಿ- ಕಣ್ಣಿಗೆ ಎಣ್ಣೆ ಹಾಕಿಕೊಂಡು ನಿದ್ದೆ ಮಾಡದೇ ಆಕಾಶ ನೋಡುತ್ತಾ ಕಾಯುತ್ತೇವೆ! ಮೊನ್ನೆಯ ಚಂದ್ರಗ್ರಹಣ ಇದ್ದದ್ದು ಬೆಳಗಿನ ಜಾವ ಮೂರಕ್ಕೆ. ಅಲ್ಲಿಯವರೆಗೆ ಮಲಗಿ ಅಲಾರ್ಮ್ ಇಟ್ಟುಕೊಂಡು ಎದ್ದು ವೀಕ್ಷಿಸೋಣ ಅಂದುಕೊಂಡೆ. ಆದರೆ ಕಾದಂಬರಿಯೊಂದು ಅರ್ಧ ಓದಿದ ಸ್ಥಿತಿಯಲ್ಲಿತ್ತು. ಸರಿ ಹಾಗಾದ್ರೆ, ಅದನ್ನು ಪೂರ್ತಿ ಮಾಡಿಬಿಡೋಣ ಅಂತ ಅಂದುಕೊಂಡು, ಒಳಬಂದು, ಕಾದಂಬರಿಯ ಪುಟಗಳಲ್ಲಿ ಕಣ್ಣು ಹುದುಗಿಸಿ ಮಲಗಿಕೊಂಡೆ. ಹಾಗೇ ಓದ್ತಾ ಓದ್ತಾ ಅಕಸ್ಮಾತಾಗಿ ನಿದ್ದೆ ಬಂದುಬಿಟ್ಟರೆ ಕಷ್ಟ ಅಂತ ಅಲಾರ್ಮನ್ನೂ ಮೂರು ಗಂಟೆಗೆ ಸೆಟ್ ಮಾಡಿಟ್ಟಿದ್ದೆ.

ಕಾದಂಬರಿ ಮುಗಿದಾಗ ಎರಡು ಗಂಟೆ ನಲವತ್ತೇಳು ನಿಮಿಷ. ಹೊರಬಂದು ನೋಡಿದೆ. ಚಂದಿರನಿಗೆ ಇನ್ನೂ ಯಾರ ನೆರಳೂ ತಾಗಿರಲಿಲ್ಲ. ಮತ್ತೆ ಟೆರೇಸಿನಲ್ಲಿ ಚಾಪೆ ಹಾಸಿ ನನ್ನ ಚಂದ್ರನನ್ನು ವೀಕ್ಷಿಸುತ್ತಾ ಮಲಗಿದೆ. ಕೆಲ ಗೆಳೆಯರಿಗೆ ಮಿಸ್-ಕಾಲ್ ಕೊಟ್ಟು ಎಚ್ಚರ ಮಾಡಿದೆ. ಕೆಲವರಿಂದ ಬೈಗುಳದ ಎಸ್ಸೆಮ್ಮೆಸ್ ವಾಪಸ್ ಬಂತು. ಮಧ್ಯರಾತ್ರಿ ನಿದ್ರೆ ಕೆಡಿಸಿದರೆ ಯಾರಿಗಾದರೂ ನಖಶಿಖಾಂತ ಕೋಪ ಬರುತ್ತದೆ. ಕನಿಷ್ಟ ಮಳ್ಳಂಡೆಯಿಂದ ಮುಖದವರೆಗಂತೂ ಬರುತ್ತದೆ. 'ಒಳ್ಳೆಯ' ಭಾಷೆ ಬಳಸಿದ ಬೈಗುಳ ದೊರೆಯುತ್ತದೆ. ಅವರ ಬೈಗುಳವನ್ನು ನಾನು ಎಂಜಾಯ್ ಮಾಡಿದೆ. ಭಾಷಾಬಳಕೆಯ ಸಾಮರ್ಥ್ಯವನ್ನು ಮೆಚ್ಚಿಕೊಂಡೆ.

ತಿಂಗಳ ಬೆಳಕ ತುಂತುರು ಚೆಲ್ಲುತ್ತಿರುವ ಶಶಿ... ಯಾವುದೋ ದೂರದ ದೇಶಕ್ಕೆ ಬೆಳಕು ಕೊಡುತ್ತಿರುವ ರವಿ... ತಿರುಗುತ್ತಿರುವ ಭುವಿ... ಅಲ್ಲೆಲ್ಲೋ ಭುವನಗಿರಿಯ ಬೆಟ್ಟದ ಮೇಲೆ ಕುಳಿತಿರುವ ನಿಧಿ... ಇಲ್ಲಿ 'ಟೆರೇಸುಶಯನ'ನಾಗಿರುವ ನಾನು... ಎಲ್ಲಕ್ಕೂ ಬಂಧವನ್ನು ಬೆಸೆಯುತ್ತಿರುವ ಈ ರಾತ್ರಿ...

ಸದಾ ಸೂರ್ಯನನ್ನು ನೋಡುತ್ತಲೇ ಇರಬೇಕಂತೆ ಚಂದ್ರನಿಗೆ. ಆದರೆ ಈ ಭೂಮಿಗೆ ಅದೇನು ಹೊಟ್ಟೆಕಿಚ್ಚೋ ಅವನ ಮೇಲೆ? 'ಏಯ್, ಇವತ್ತು ನಿಂಗೆ ನೋಡ್ಲಿಕ್ಕೆ ಬಿಡಲ್ಲ' ಅಂತಂದು, ಸೂರ್ಯ-ಚಂದ್ರರ ಮಧ್ಯೆ ತಾನು ಅಡ್ಡ ಬರುತ್ತಾಳಂತೆ ಧಾರಿಣಿ...

ಚಂದ್ರನನ್ನು ಭೂಮಿಯ ನೆರಳು ಪೂರ್ತಿ ಕವಿಯುವವರೆಗೂ ನಾನು ಎಚ್ಚರಿದ್ದು ಆಕಾಶ ನೋಡುತ್ತಿದ್ದೆ. ನಾಲ್ಕೂ ಮುಕ್ಕಾಲರ ಹೊತ್ತಿಗೆ 'ಇನ್ನು ಸಾಕು' ಅನ್ನಿಸಿ, "ಗ್ರಹಣ ಬಿಡದೇ ಏನಾದ್ರೂ ಹೆಚ್ಚು-ಕಮ್ಮಿ ಆದ್ರೆ ನಂಗೆ ತಿಳ್ಸಿ" ಅಂತ ಗೆಳೆಯರಿಗೆ ಒಂದು ಮೆಸೇಜು ಕಳಿಸಿ, ಒಳಬಂದು ಮಲಗಿದೆ.

ಹಾಗೆ ಮಲಗಿದವನಿಗೆ ಎಚ್ಚರಾದದ್ದು ಭಾನುವಾರ ಮಧ್ಯಾಹ್ನ ಹನ್ನೊಂದಕ್ಕೆ ಅಂತ ಎದ್ದ ಕೂಡಲೇ ಗೊತ್ತಾಯಿತು. ಚುರುಗುಡುತ್ತಿರುವ ಹೊಟ್ಟೆಯನ್ನು ಸಮಾಧಾನಗೊಳಿಸಲು ತಿಂಡಿ ತಿನ್ನುವುದೊಂದೇ ಪರಿಹಾರವಾಗಿತ್ತಾದ್ದರಿಂದ, ಹಲ್ಲುಜ್ಜಿ, ಮುಖ ತೊಳೆದು, ಕೆಳಗಿಳಿದು ಹೋಗಿ, ಹೋಟೆಲ್ಲಿನಲ್ಲಿ ತಿಂಡಿ ತಿಂದು, ಒಂದು 'ವಿಜಯ ಕರ್ನಾಟಕ' ಪೇಪರು ತಗೊಂಡು ಬಂದೆ. 'ಎಲ್ಲಿ ಏನು' ಕಾಲಮ್ಮಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ೪.೩೦ಕ್ಕೆ ಸಿ. ಅಶ್ವತ್ಥ್, ಎಸ್.ಪಿ.ಬಿ. ಸಂಗಡಿಗರಿಂದ ಸುಗಮ ಸಂಗೀತ ಅಂತ ಇತ್ತು. ಮಿಸ್ ಮಾಡಿಕೊಳ್ಳಬಾರದು ಅಂತ ತೀರ್ಮಾನಿಸಿ ಹೋಗಲು ತಯಾರಾದೆ.

ಕಲಾಕ್ಷೇತ್ರದ ಬಾಗಿಲಲ್ಲಿ ನನ್ನನ್ನು ತಡೆದು ನಿಲ್ಲಿಸಿದರು: 'ಎಂಟ್ರಿ ವಿತ್ ಪಾಸ್ ಓನ್ಲೀ!' ಅಯ್ಯೋ ಇಲ್ಲಿಯವರೆಗೆ ಬಂದು ವಾಪಾಸ್ ಹೋಗುವಂತಾಯಿತಲ್ಲ ಅಂತ ಬೇಜಾರಾಯಿತು. ಕಲಾಕ್ಷೇತ್ರದ ಪಕ್ಕದಲ್ಲಿ ಒಂದು ಸ್ಕ್ರೀನ್ ಹಾಕಿದ್ದರು. ಆದರೆ ಇನ್ನೂ ಹೊರಗಡೆ ಬಿಸಿಲಿತ್ತಾದ್ದರಿಂದ ಪ್ರಾಜೆಕ್ಟರಿನ ಬೆಳಕು ಸ್ಕ್ರೀನಿನ ಮೇಲೆ ಕಾಣುತ್ತಲೇ ಇರಲಿಲ್ಲ. ಸೌಂಡ್ ಮಾತ್ರ ಕೇಳುತ್ತಿತ್ತು. ಮತ್ತೇನು ಮಾಡುವುದು, ಸ್ವಲ್ಪ ಹೊತ್ತು ಇಲ್ಲಿಯೇ ಕುಳಿತು ನೋಡಿ (ಕೇಳಿ) ಹೋಗೋಣ ಅಂತ ಕುಳಿತೆ. ನನ್ನಂತಹ ಇನ್ನೂ ಅನೇಕ ನಿರ್ಭಾಗ್ಯವಂತರು ಅಲ್ಲಿದ್ದರು. ಅಷ್ಟೊತ್ತಿಗೆ ಗೆಳೆಯ ಸಂತೋಷ ಬಂದ. ಅವನು ಬಂದಮೇಲೆ ನನಗೆ ಮತ್ತೊಮ್ಮೆ ಹುಮ್ಮಸ್ಸು ಬಂತು. ಇಬ್ಬರೂ ಹೋಗಿ ದ್ವಾರಪಾಲಕನ ಬಳಿ ರಿಕ್ವೆಸ್ಟ್ ಮಾಡಿಕೊಂಡೆವು. 'ಸೀಟಿಲ್ಲ ಸಾರ್, ಬೇಕಾದ್ರೆ ನಿಂತ್ಕೊಂಡು ನೋಡಿ. ನಿಮ್ಮಿಬ್ರನ್ನೇ ಒಳಗಡೆ ಬಿಡ್ತಿದೀನಿ ಮತ್ತೆ' ಅಂತಂದು ನಮ್ಮನ್ನು ಒಳಗಡೆ ಬಿಟ್ಟ. ಅವನಿಗೊಂದು ದೊಡ್ಡ ಥ್ಯಾಂಕ್ಸ್ ಹೇಳಿ ನಾವು ಕಲಾಕ್ಷೇತ್ರದ ಉಪ್ಪರಿಗೆ ಏರಿದೆವು. ಅವನು ಹೇಳಿದಂತೆ ಸೀಟೆಲ್ಲ ಭರ್ತಿಯಾಗಿದ್ದವು. ನಾವು ಮೆಟ್ಟಿಲ ಮೇಲೆ ಕುಳಿತೆವು.

ಕಾರ್ಯಕ್ರಮದ ಹೆಸರು 'ಸ್ವರ ಸಮರ್ಪಣೆ'. ಅದು ಸಿ. ಅಶ್ವತ್ಥ್ ತಮ್ಮ ಕುಟುಂಬದವರೊಂದಿಗೆ ತಮ್ಮ ಪ್ರೀತಿಯ ಕವಿಗಳಿಗೋಸ್ಕರ ಏರ್ಪಡಿಸಿದ್ದ ಸನ್ಮಾನ ಸಮಾರಂಭ. ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ, ಬಿ.ಆರ್. ಲಕ್ಷ್ಮಣರಾವ್, ಎಚ್.ಎಸ್. ವೆಂಕಟೇಶಮೂರ್ತಿ, ಡುಂಡಿರಾಜ್, ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಎಂ.ಆರ್. ಕಮಲ -ಇವರುಗಳನ್ನು ಅಶ್ವತ್ಥ್ ತಮ್ಮ ಕುಟುಂಬದ ಸದಸ್ಯರಿಂದಲೇ ಸನ್ಮಾನಿಸಿದರು. ಹಿರಿಯರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದ ಮೊದಲ ಹಂತದ ಈ ಆಪ್ತ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ನರಹಳ್ಳಿ ಬಾಲಸುಬ್ರಹ್ಮಣ್ಯ, ಮತ್ತಿತರು ಭಾಗವಹಿಸಿದ್ದರು. ಪುಸ್ತಕಗಳು, ಸಿಡಿಗಳು ಬಿಡುಗಡೆಯಾದವು.

ಉಪ್ಪಿಟ್ಟು-ಕಾಫಿಯ ನಂತರ ಏಳೂ ಹದಿನೈದಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಶುರುವಾಯಿತು. ಅಶ್ವತ್ಥ್, ಎಸ್.ಪಿ., ಸಂಗೀತಾ ಕಟ್ಟಿ, ಎಮ್.ಡಿ. ಪಲ್ಲವಿ, ಸುಪ್ರಿಯಾ ಆಚಾರ್ಯ ಮತ್ತಿತರರು ಗಾನಸುಧೆ ಉಣಿಸಿದರು. ಪ್ರತಿ ಹಾಡು ಮುಗಿದ ಮೇಲೂ ಬೀಳುತ್ತಿದ್ದ ಚಪ್ಪಾಳೆಯ ಜೋರು ಶಬ್ದ ಕಲಾಕ್ಷೇತ್ರದ ಟೆರೇಸಿಗೆ ಹೊಡೆದು ಅಲ್ಲಿ ಗಾಯಗಳಾಗುತ್ತಿದ್ದವು. ಅಶ್ವತ್ಥರ 'ಖದರಿ'ಗೆ ಎಸ್ಪಿಯೇ ದಂಗಾಗಿಹೋದರು. 'ಹೀಗೆ ಹಾಡ್ಲಿಕ್ಕೆ ನನಗೇ ಭಯವಾಗುತ್ತೆ' ಅಂತ ಒಪ್ಪಿಕೊಂಡುಬಿಟ್ಟರು. ಸುಮಾರು ಹತ್ತು-ಹನ್ನೆರಡು ಹಾಡುಗಳಾದ ಮೇಲೆ ಎಸ್.ಪಿ. 'ಮಾವು ಬೇವು' ಅಲ್ಬಮ್ಮಿನ 'ಯಾರಿಗುಂಟು ಯಾರಿಗಿಲ್ಲ' ಗೀತೆಯನ್ನು ಹಾಡಲು ಬಂದರು. ಅರ್ಧ ಹಾಡನ್ನು ತಾವೊಬ್ಬರೇ ಹಾಡಿದಮೇಲೆ ಅಶ್ವತ್ಥರನ್ನೂ 'ಕಮ್ ಅಶ್ವತ್ಥ್‍ಜೀ' ಅಂತ ಕರೆದು, ಇಬ್ಬರೂ ಸೇರಿ ಹಾಡಲು ಶುರುವಿಟ್ಟರು ನೋಡಿ? ಜನಗಳ ಉನ್ಮಾದ ತಾರಕ್ಕೇರಿಬಿಟ್ಟಿತು. ಚಪ್ಪಾಳೆ, ಸಿಳ್ಳೆ, ಕೇಕೆ... ಓಹ್! ಅಶ್ವತ್ಥ್-ಎಸ್.ಪಿ.ಬಿ.ಯವರ ಜುಗಲ್‍ಬಂದಿ ಅದಿನ್ಯಾವ ಪರಿ ಜನರನ್ನು ಖುಷಿಗೊಳಿಸಿತೆಂದರೆ, ಎಲ್ಲರೂ 'ಒನ್ಸ್ ಮೋರ್' 'ಒನ್ಸ್ ಮೋರ್' ಎಂದು ಕೂಗಹತ್ತಿದರು. 'ಜಾಸ್ತಿ ಆದ್ರೆ ಅಜೀರ್ಣ ಆಗೊತ್ತೆ ಸುಮ್ನಿರಿ' ಅಂದು ಸುಮ್ಮನಾಗಿಸಿದರು ಎಸ್ಪಿ. 'ಬಾ ಇಲ್ಲಿ ಸಂಭವಿಸು...' ಕೊನೆಯ ಹಾಡಿನಲ್ಲಂತೂ ಅಶ್ವತ್ಥ್ ಹುಚ್ಚೆಬ್ಬಿಸಿಬಿಟ್ಟರು. ಅವರು ಧ್ವನಿ ಏರಿಸುವ ರೀತಿ, ಧ್ವನಿಯನ್ನು ಹಿಡಿದಿಡುವ ರೀತಿ... ಉಫ್! ಜಸ್ಟ್ ಅಮೇಜ಼ಿಂಗ್. ಹರ್ಷವನ್ನು, ಭಾವಾವೇಶವನ್ನು ತಡೆಯಲಾಗದೆ ನಾವೆಲ್ಲಾ ಕುಣಿದಾಡಿಬಿಟ್ಟೆವು.

ವಾಪಸು ಬರುವ ದಾರಿಯಲ್ಲಿ ನನಗನ್ನಿಸಿತು: ಕನ್ನಡಿಗರಿಗೆ ಕನ್ನಡದ ಬಗ್ಗೆ ಪ್ರೀತಿಯಿಲ್ಲ ಎಂಬುದೆಲ್ಲಾ ಸುಳ್ಳೇ ಸರಿ. ಹಿಂದೆ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮಕ್ಕೂ ನಾನು ಹೋಗಿದ್ದೆ. ಪ್ಯಾಲೇಸ್ ಗ್ರೌಂಡ್ಸ್ ತುಂಬಿ ಹೋಗಿತ್ತು: ಅಷ್ಟು ಜನ! ಸುಮಾರು ಎಪ್ಪತ್ತೈದು ಸಾವಿರ ಜನ ಸೇರಿದ್ದರು. ಮತ್ತೆ ಆ ಕಾರ್ಯಕ್ರಮಕ್ಕೇನು ಯಾವುದೇ ರಾಜಕೀಯ ಮುಖಂಡರಾಗಲೀ, ಚಿತ್ರನಟ-ನಟಿಯರಾಗಲೀ ಬಂದಿರಲಿಲ್ಲ. ಆದರೂ ಅಷ್ಟೊಂದು ಜನ, ಭಾವಗೀತೆಗಳನ್ನು ಕೇಳಲೆಂದೇ ಬಂದಿದ್ದರು. ಇತ್ತೀಚೆಗೆ ಬೇಂದ್ರೆ, ಅಡಿಗ, ನಿಸಾರ್‌ರ ಕಾವ್ಯ ವಾಚನ ಕಾರ್ಯಕ್ರಮಗಳು ನಡೆದವಲ್ಲ? ಅದಕ್ಕೂ ಜನ ಕಿಕ್ಕಿರಿದು ಸೇರಿದ್ದರು. 'ಕನ್ನಡ ಅಳಿದು ಹೋಗುತ್ತದೆ' ಎಂಬ ಭಯಗಳೆಲ್ಲಾ ಸುಳ್ಳೇನೇನೋ ಅನ್ನಿಸುತ್ತದೆ ಕೆಲವೊಮ್ಮೆ. ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ನೋಡುವುದಿಲ್ಲ ಅನ್ನುತ್ತಾರೆ ಕೆಲವರು. ಯಾಕೆ ನೋಡುವುದಿಲ್ಲ? 'ಮುಂಗಾರು ಮಳೆ'ಯಂತಹ ಒಳ್ಳೆಯ ಚಿತ್ರಗಳು ಬಂದರೆ ನೋಡಿಯೇ ನೋಡುತ್ತಾರೆ. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿ ತಿಂಗಳೊಳಗೆ ನಾಲ್ಕು ಬಾರಿ ಮರುಮುದ್ರಣ ಕಂಡಿದೆ ಅಂದರೆ ಏನು ತಮಾಷೆಯೇ? ಸದಭಿರುಚಿಯ, ಒಳ್ಳೆಯ, ಮುದ ನೀಡುವ, ಖುಷಿ ಕೊಡುವ ಏನನ್ನು ಕೊಟ್ಟರೂ ಜನ ಸ್ವೀಕರಿಸುತ್ತಾರೆ. ಕೊಡಬೇಕಾದರೆ ನೋಡಿಕೊಂಡು ಕೊಡಬೇಕಷ್ಟೇ.

'ಸ್ವರ ಸಮರ್ಪಣೆ'ಯಲ್ಲಿ ಹೊಡೆದ ಚಪ್ಪಾಳೆಯಿಂದಾಗಿ ನನ್ನ ಕೈ ಇನ್ನೂ ಉರಿಯುತ್ತಿದೆ. ತುಂಬಿಕೊಂಡಿರುವ ಭಾವೋನ್ಮಾದ ಬಹಳ ದಿನಗಳಿಗೆ ಸಾಕಾಗುವಷ್ಟಿದೆ. ಒಂದು ಒಳ್ಳೆಯ ವೀಕೆಂಡು ಕಳೆದ ಖುಷಿಯಲ್ಲಿ ಮನೆಯ ಮೆಟ್ಟಿಲು ಹತ್ತಿದೆ. ಬಟ್ಟೆ ತೊಳೆಯುವುದಿತ್ತು.

- - - - - - - - - - - -
Related article: ಗ್ರಹಣ ಮತ್ತು ಚಂದ್ರ

Tuesday, January 23, 2007

ಮಗುವಿನ ನಗು

ನಿನ್ನೆ ಸಂಜೆ ಹೀಗೇ.

ರಜಾದಿನವಾದ್ದರಿಂದ ರೂಮಿನಲ್ಲೇ ಇದ್ದೆ. ಕವಿತೆಯೊಂದು ಕೈಕೊಟ್ಟು ಕೂತಿತ್ತು. ಮೊದಲೆರಡು ಸಾಲುಗಳನ್ನೇನೋ ಸರಾಗವಾಗಿ ಬರೆದಿಟ್ಟಿದ್ದೆ. ಆದರೆ ಮುಂದಿನ ಸಾಲುಗಳು ಮಾತ್ರ ಅದೇನೇ ಕಸರತ್ತು ಮಾಡಿದರೂ ಮೂಡಿಬರದೇ ನನ್ನನ್ನು ಚಡಪಡಿಸುವಂತೆ ಮಾಡಿದ್ದವು. ಏನು ಬರೆಯಬೇಕೂಂತ ಗೊತ್ತು; ಆದರೆ ಅವು ಶಬ್ದಗಳಾಗಿ ಪಡಿಮೂಡುತ್ತಿರಲಿಲ್ಲ. ವಿಪರೀತ ಟೆನ್ಶನ್ನಿಗೆ ಒಳಗಾಗಿ, ತಲೆಬಿಸಿಯಾಗಿ, ರೂಮಿನಿಂದ ಹೊರಬಂದೆ.

ಟೆರೇಸು ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳಿಗಾಗಿ ಕಾಯುತ್ತಿದ್ದಂತಿತ್ತು. ಸುಮ್ಮನೇ ಅದರ ಮೇಲೆ ಓಡಾಡಿದೆ. ನನ್ನ ಟೆನ್ಶನ್ನನ್ನು ಕಡಿಮೆ ಮಾಡುವಲ್ಲಿ ಆ ಟೆರೇಸಾಗಲೀ, ಆಗಸದ ಕೆಂಬಣ್ಣವಾಗಲೀ, ಆಗ ತಾನೇ ಹೊತ್ತಿಕೊಳ್ಳುತ್ತಿದ್ದ ಬೆಂಗಳೂರಿನ ಬೀದಿದೀಪಗಳಾಗಲೀ, ಪಕ್ಕದ ದೇವಸ್ಥಾನದ ಗಂಟೆಯ ನಿನಾದವಾಗಲೀ ಸಫಲವಾಗುವಂತೆ ಕಾಣಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ಸ್ಟೇರ್‌ಕೇಸಿನಲ್ಲಿ ಬೀದಿನಾಯಿಯೊಂದು ಹತ್ತಿ ಬರುತ್ತಿರುವುದು ಕಾಣಿಸಿತು. ದುಡುದುಡನೆ ಹತ್ತುತ್ತಾ ಟೆರೇಸಿಗೆ ಬಂತು ನಾಯಿ. ನನಗೇಕೋ ಆ ನಾಯಿಯೂ ಟೆನ್ಶನ್ನಿನ್ನಲ್ಲಿರುವಂತೆ ಕಂಡಿತು. ಕೇಳಿದೆ ಅದರ ಬಳಿ: "ಏನಯ್ಯಾ, ಟೆನ್ಶನ್ನಿನಲ್ಲಿದ್ದಂಗಿದೆ?" ಅಂತ. ಅದಕ್ಕೆ ನಾಯಿ, "ಹೂಂ ಕಣಣ್ಣ, ದೊಡ್ಡ ತಲೆಬಿಸಿ ಆಗ್‍ಹೋಗಿದೆ. ಅದೆಲ್ಲೋ ವಿಜಯನಗರದಲ್ಲಿ ನಮ್ಮ ಕುಲಬಾಂಧವರು ಯಾವನೋ ಒಬ್ಬ ಮನುಷ್ಯನಿಗೆ ಕಚ್ಚಿ ಅವನು ಸತ್ತೇ ಹೋದನಂತಲ್ಲಾ? ಅವತ್ತಿಂದ ಈ ಮನುಷ್ಯರೆಲ್ಲರೂ ನಮ್ಮ ಮೇಲೆ ಕೆಂಡ ಕಾರಲಿಕ್ಕೆ ಶುರು ಮಾಡಿದಾರೆ. ಕಾರ್ಪೋರೇಶನ್ನಿನವರು ನಮ್ಮನ್ನೆಲ್ಲಾ ಕಿಡ್ನಾಪ್ ಮಾಡಲಿಕ್ಕೆ ಪ್ಲಾನ್ ಮಾಡಿದಾರಂತೆ. ಲಾರಿಯಲ್ಲಿ ಹೇರ್ಕೊಂಡು ಹೋಗ್ತಾರಂತೆ. ನಂಗಂತೂ ಅದೇ ಟೆನ್ಶನ್ನು. ಯಾವ ಲಾರಿ ಕಂಡರೂ ಯಮರಾಯನ ಮುಖದರ್ಶನ ಮಾಡಿದಂಗೆ ಆಗೊತ್ತೆ. ಈಗ್ಲೂ ಹಾಗೇ: ಯಾವುದೋ ಲಾರಿ ದೂರದಲ್ಲಿ ಬರ್ತಿರೋದು ಕಾಣಿಸ್ತು; ತಕ್ಷಣ ಓಡಿ ಟೆರೇಸಿಗೆ ಬಂದ್ಬಿಟ್ಟೆ!" ಅಂತು. ಮನುಷ್ಯನಿಗಷ್ಟೇ ಅಲ್ಲ, ನಾಯಿಗಳಿಗೂ ಇರೊತ್ತೆ ಟೆನ್ಷನ್ನು ಅನ್ನುವ ಹೊಸ ಜ್ಞಾನೋದಯದೊಂದಿಗೆ ನಗುತ್ತಾ ರೂಮಿನೊಳಬಂದೆ.

ಮತ್ತೆ ಬರೆಯಲು ಕುಳಿತೆ. ಆದರೆ ಅಕ್ಷರಗಳೇಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದವು ಅನ್ನಿಸೊತ್ತೆ. ಏನಂದರೂ ಕವಿತೆ ಮುಂದುವರಿಯುವ ಲಕ್ಷಣ ಕಾಣಲಿಲ್ಲ. ಮತ್ತೇನು ಮಾಡುವುದು ಎಂದು ಯೋಚಿಸಿದೆ. ನನ್ನ ನೆಂಟರೊಬ್ಬರ ಮನೆಗೆ ಹೋಗದೇ ಬಹಳ ದಿನಗಳಾದವು ಎಂದು ನೆನಪಾಯಿತು. ಅವರಿಗೆ ಒಂದು ಗಂಡು ಮಗು ಹುಟ್ಟಿದ್ದ ಸುದ್ದಿ ನನಗೆ ತಿಳಿದಿದ್ದುದೇ ಆಗಿತ್ತು. ಫೋನ್ ಮಾಡಿ ವಿಶ್ ಮಾಡಿದ್ದೆ. ಪಾಪುವನ್ನು ನೋಡಲು ಬರುವುದಾಗಿ ಹೇಳಿದ್ದೆನಾದರೂ, ಹಾಗೆ ಹೇಳಿ ಈಗ ಆರು ತಿಂಗಳಿಗೆ ಬಂದಿದ್ದರೂ ಇನ್ನೂ ನನಗೆ ಹೋಗಲಿಕ್ಕೆ ಆಗಿರಲಿಲ್ಲ. ಈಗ ಹೀಗೆ ಸಡನ್ನಾಗಿ ನೆನಪಾದ್ದರಿಂದ, ಬೇರೆ ಏನೂ ಕೆಲಸವೂ ಇಲ್ಲದ್ದರಿಂದ, ಅಲ್ಲಿಗೇ ಹೋಗೋಣವೆಂದು ತೀರ್ಮಾನಿಸಿದೆ. ಫೋನಾಯಿಸಿ ವಿಚಾರಿಸಿದಾಗ ಅವರು ಮನೆಯಲ್ಲೇ ಇರುವುದು ತಿಳಿಯಿತು. ರಾತ್ರಿ ಊಟಕ್ಕೆ ಬರುತ್ತಿರುವುದಾಗಿ ತಿಳಿಸಿದೆ.

ಪ್ಯಾಂಟೇರಿಸಿ, ಕೆಳಗಿಳಿದು ಬಂದು, ನೆಂಟರ ಮನೆ ಕಡೆ ಹೋಗುವ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಹಿಂದಿನ, ಗಂಡಸರ ಸೀಟುಗಳ್ಯಾವೂ ಖಾಲಿಯಿರಲಿಲ್ಲ. ಮುಂದಿನ, ಹೆಂಗಸರ ಸೀಟುಗಳಲ್ಲಿ ಒಂದೆರಡು ಸೀಟುಗಳು ಖಾಲಿಯಿದ್ದವು. ಸರಿ, ಮುಂದೆ ಯಾರಾದರೂ ಹೆಂಗಸರು ಹತ್ತಿದರೆ ಬಿಟ್ಟುಕೊಟ್ಟರಾಯಿತು ಅಂದುಕೊಂಡು ಅವುಗಳಲ್ಲೇ ಒಂದರಲ್ಲಿ ಆಸೀನನಾದೆ. ಕೂತದ್ದೇ ತಪ್ಪಾಗಿಹೋಯಿತು: ಮತ್ತೆ ಟೆನ್ಶನ್ ಶುರುವಾಯಿತು! ಸ್ಟಾಪ್ ಬಂದಾಗಲೆಲ್ಲಾ ಯಾರಾದರೂ ಹೆಂಗಸರು ಹತ್ತಿಬಿಡುತ್ತಾರೇನೋ, ಸೀಟ್ ಬಿಟ್ಟುಕೊಡಬೇಕಾಗುತ್ತದೇನೋ ಎಂದು ಚಡಪಡಿಸತೊಡಗಿದೆ. ಪ್ರತಿ ಸ್ಟಾಪಿನಲ್ಲಿ ಬಸ್ಸು ನಿಂತಾಗಲೂ ನಾನು ಕೂತಲ್ಲೇ ಬಗ್ಗಿ, ತಲೆ ಎತ್ತಿ, ಮಿಸುಕಾಡಿ, ಬಾಗಿಲ ಕಡೆ ನೋಡುವುದಾಯಿತು. ಸಾಯಲಿ, ಈ ಟೆನ್ಶನ್ನೇ ಬೇಡ, ಶಿಸ್ತಾಗಿ ಎದ್ದುನಿಂತುಬಿಡೋಣ ಅನ್ನಿಸಿತಾದರೂ ಹಿಂದಿನ ಸೀಟಿನವರು ಏನೆಂದುಕೊಂಡಾರೆಂದು ಭಾವಿಸಿ ಮತ್ತೆ ಸೀಟಿಗೊರಗಿದೆ. ಅಂತೂ ಮುಂದಿನ ಸ್ಟಾಪಿನಲ್ಲಿ ಐದಾರು ಮಹಿಳೆಯರು ಬಸ್ಸು ಹತ್ತಿ ನನ್ನ ಸೀಟಿಗೆ ಸಂಚಕಾರ ತಂದರು. ಅವರಿಗೆ ಸೀಟು ಬಿಟ್ಟುಕೊಟ್ಟು ನಾನು ಟೆನ್ಶನ್ನಿನಿಂದ ಅಷ್ಟರ ಮಟ್ಟಿಗೆ ಹೊರಬಂದೆನಾದರೂ, ಸೀಟು ಬಿಟ್ಟುಕೊಡುವಾಗ ಮಾತ್ರ ಒಬ್ಬ ರಾಜಕಾರಣಿಗೆ ಎಷ್ಟು ಬೇಸರ, ಅಪಮಾನಗಳು ಆಗಬಹುದೋ ಅವೆಲ್ಲವನ್ನೂ ನಾನು ಅನುಭವಿಸಿದ್ದೆ. ನಾನು ಎದ್ದು ನಿಂತು ಅವರಿಗೆ ಸೀಟು ಬಿಟ್ಟುಕೊಟ್ಟದ್ದೇ ನನ್ನ ಹಿಂದಿನ ಸೀಟಿನವರ ಮುಖಗಳನ್ನು ನೋಡದಾದೆ. ಅವರೆಲ್ಲಾ ನನ್ನನ್ನು ಅಪಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗಲಾರಂಭಿಸಿತು.

ನೆಂಟರ ಮನೆಯ ಬೆಲ್ಲು ಒತ್ತಿ ಹೊರಗೆ ಕಾಯತೊಡಗಿದೆ. ಒಂದು ನಿಮಿಷವಾದರೂ ಬಾಗಿಲು ತೆರೆಯದಿದ್ದುದರಿಂದ ಮತ್ತೆ ಟೆನ್ಶನ್ ಶುರುವಾಯಿತು. ಮತ್ತೆರಡು ಬಾರಿ ಬೆಲ್ ಒತ್ತಿದೆ. ಸುಮಾರು ಎರಡು ನಿಮಿಷಗಳ ಬಳಿಕ ಅತ್ತಿಗೆ ಬಂದು ಬಾಗಿಲು ತೆರೆದಳು. "ಓ, ಬಾ, ಸಾರಿ, ಪಾಪೂನ ಮಲಗಿಸ್ತಾ ಇದ್ದೆ, ಅದ್ಕೇ ಲೇಟಾಯ್ತು ಡೋರ್ ಓಪನ್ ಮಾಡ್ಲಿಕ್ಕೆ. ಒಳಗೆ ಬಾ. ಎಷ್ಟು ದಿವಸ ಆಯ್ತೋ ಮಹಾನುಭಾವ ಈ ಕಡೆ ಬರದೇ...?" ಎನ್ನುತ್ತಾ ಅತ್ತಿಗೆ ನನ್ನನ್ನು ಆದರದಿಂದ ಸ್ವಾಗತಿಸಿದಳು. ಸೀದಾ ಕಿಚನ್ನಿಗೆ ಕರೆದೊಯ್ದಳು. ಅತ್ಮೀಯವಾಗಿ ಮಾತನಾಡುತ್ತಾ ಕಾಫಿ ಮಾಡಿಕೊಟ್ಟಳು. ಅಷ್ಟರಲ್ಲಿ ಜಗದೀಶಣ್ಣ ಕೂಡ ಬಂದ. ಅವನೊಂದಿಗೆ ಹಾಲ್‍ಗೆ ಬಂದು ಮಾತನಾಡುತ್ತಾ ಕುಳಿತೆವು. ಆಫೀಸು, ವರ್ಕ್‍ಲೋಡು, ಸ್ಯಾಲರಿ, ಟ್ರಾಫಿಕ್ಕು, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದು, 'ಒಂದು ಗಾಡಿ ತಗೊಳ್ಳೋ ಮರಾಯಾ', ಇಂಡಿಯಾ-ಸೌತ್ ಆಫ್ರಿಕಾ ಮ್ಯಾಚು... ಹೀಗೆ ಅವ್ಯಾಹತವಾಗಿ ಮಾತಾಡಿದೆವು. ಅತ್ತಿಗೆ ಅಡುಗೆಯಲ್ಲಿ ತೊಡಗಿದ್ದಕ್ಕೆ ಸಾಕ್ಷಿಯಾಗಿ ಕಿಚನ್ನಿನಿಂದ ಮಿಕ್ಸಿ, ತುರಿಮಣೆ, ಸೌಟುಗಳ ಸದ್ದು ಕೇಳಿಬರುತ್ತಿತ್ತು. ವಗ್ಗರಣೆಯ ಶಬ್ದದೊಂದಿಗೇ ಪರಿಮಳವೂ ತೇಲಿಬಂತು.

ಅಷ್ಟೊತ್ತಿಗೆ ಮಲಗಿದ್ದ ಪಾಪುವಿಗೆ ಎಚ್ಚರವಾಗಿ ಕೋಣೆಯಿಂದ ಅಳು ಕೇಳಿಬಂತು. ಅತ್ತಿಗೆ 'ಹೂಂ ಬಂದೇ...' ಎನ್ನುತ್ತಾ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಳು. ತಾಯಿಯ ತೋಳಿನಲ್ಲಿ ಕುಳಿತು ಮಿಕಮಿಕನೆ ನಮ್ಮನ್ನೇ ನೋಡುತ್ತಿದ್ದ ಮಗು ಮೊಲದ ಮರಿಯಂತೆ ಕಂಡಿತು. 'ಇಲ್ನೋಡು... ಇದು ಯಾರು ಗೊತ್ತಾ? ಮಾಮ.. ಮಾಮ ಇದು. ಹೋಗ್ತೀಯಾ ಮಾಮನ ಹತ್ರ?' ಅನ್ನುತ್ತಾ ಅತ್ತಿಗೆ ಪಾಪುವನ್ನು ನನ್ನ ಕೈಗೆ ವರ್ಗಾಯಿಸಿದಳು. ಆದರೆ ನನ್ನ ಕೈಗೆ ಬಂದದ್ದೇ ಪಾಪು ಅಳಲಿಕ್ಕೆ ಶುರುಮಾಡಿತು. 'ಏ.. ಸುಮ್ನಿರೂ... ಆ.. ವೂ..' ಎಂದು ಇತ್ಯಾದಿ ಏನೇನೋ ಬಡಬಡಿಸಿ ಮಗುವನ್ನು ಸುಮ್ಮನಿರಿಸಲು ನೋಡಿದೆನಾದರೂ ಅದು ಅಳುವನ್ನು ನಿಲ್ಲಿಸಲಿಲ್ಲ. ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ ಮಗುವನ್ನು ಜಗದೀಶಣ್ಣನಿಗೆ ಒಪ್ಪಿಸಿದೆ. ಅವನು ನೆಲಕ್ಕೆ ಕುಳಿತುಕೊಂಡು, ಮಗವನ್ನು ತೊಡೆಯಮೇಲೆ ಕೂರಿಸಿಕೊಂಡು, 'ಆನೆ ಬಂತೊಂದಾನೆ' ಮಾಡತೊಡಗಿದ.

ಆನೆ ಬಂತೊಂದಾನೆ
ಯಾವೂರಾನೆ?
ಸಿದ್ದಾಪುರದಾನೆ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಬೀದಿ ತಪ್ಪಿ ಬಂತು
ನಮ್ಮನೆ ಪಾಪಚ್ಚಿ ನೋಡಕ್ ಬಂತು..!

ಅಳು ನಿಲ್ಲಿಸಿ ಮಗು ಗಿಟಗಿಟನೆ ನಗಲಿಕ್ಕೆ ಶುರುಮಾಡಿತು. ಬೊಚ್ಚುಬಾಯಿ ಬಿಟ್ಟುಕೊಂಡು ನಿಷ್ಕಳಂಕವಾಗಿ ನಗುತ್ತಿದ್ದ ಈ ಮಗುವಿನ ಚೆಲುವಿಗೆ ನಾನು ಮಾರುಹೋದೆ. ಆ ನಗೆಯ ಶಬ್ದದ ಅಲೆಯಲ್ಲಿ ತೇಲಿಹೋದೆ.

ನಾನೂ ಜಗದೀಶಣ್ಣನ ಪಕ್ಕ ಹೋಗಿ ಕುಳಿತುಕೊಂಡೆ. ಪಕ್ಕದಲ್ಲೇ ಮಗುವನ್ನು ಆಡಿಸಲಿಕ್ಕೆಂದು ತಂದಿದ್ದ ಗಿಲಗಿಚ್ಚಿಯೊಂದಿತ್ತು. ಅದನ್ನು ಗಿಲಗಿಲನೆ ಅಲುಗಾಡಿಸುತ್ತಾ ನಾನು ಮಗುವಿನ ಸ್ನೇಹ ಸಂಪಾದಿಸಲು ನೋಡಿದೆ. ಸ್ವಲ್ಪ ಹೊತ್ತಿನ ನಂತರ ಮಗು ನನಗೆ ಹೊಂದಿಕೊಂಡಿತು. ಅದರ ಮುದ್ದು ಗಲ್ಲವನ್ನು ಚಿವುಟಿದೆ. 'ಛೀ ಕಳ್ಳ!' ಎಂದೆ. ಮಗು ಮತ್ತೆ ಗಿಟಗಿಟನೆ ನಕ್ಕಿತು.

ಯೋಚಿಸುತ್ತಿದ್ದೆ ನಾನು: ಯಾಕೆ ಹೀಗೆ ನಗುತ್ತದೆ ಮಗು? ನಾವು 'ಆನೆ ಬಂತೊಂದಾನೆ' ಮಾಡುವ ಮೊದಲು ಮಗುವಿಗೇನು ಆನೆಯನ್ನು ತೋರಿಸಿರುವುದಿಲ್ಲ. 'ಛೀ ಕಳ್ಳ' ಎನ್ನುವಾಗ ಕಳ್ಳ ಎಂದರೆ ಯಾರು ಎಂಬುದೇ ಗೊತ್ತಿರುವುದಿಲ್ಲ ಮಗುವಿಗೆ. ಆದರೂ ನಗುತ್ತದೆ. ಯಾಕೆ?

ಮಗುವಿನ ಕೈಗೆ ಗಿಲಗಿಚ್ಚಿಯನ್ನು ಕೊಟ್ಟು ಕೇಳಿದೆ ನಾನು: "ನಾವು 'ಆನೆ ಬಂತೊಂದಾನೆ' ಎನ್ನುತ್ತಾ ಬಾಗಿದರೆ-ತೂಗಿದರೆ, ಅಥವಾ 'ಛೀ ಕಳ್ಳ!' ಎಂದು ಗೋಣು ಕೊಡವಿದರೆ ನಿನಗೆ ಏನು ಕಾಣಿಸುತ್ತದೆ ಮಗುವೇ? ಅದರಲ್ಲಿ ಅಷ್ಟೆಲ್ಲಾ ನಗುವಂತದ್ದು ಏನಿದೆ? ನಾವೆಲ್ಲಾ ಚಿತ್ರಗಳೇ ನಿನ್ನ ಪಾಲಿಗೆ?"

ಕೈಯಲ್ಲಿ ಹಿಡಿದಿದ್ದ ಗಿಲಗಿಚ್ಚಿಯಿಂದ ಕಿಂಕಿಣಿ ನಾದ ಹೊಮ್ಮಿಸುತ್ತಾ ಹೇಳಿತು ಮಗು, "ಎಲ್ಲದಕ್ಕೂ ಕಾರಣ ಕೇಳಬೇಡವೋ ದಡ್ಡ ಮಾಮ! ಕಾರಣಗಳನ್ನೆಲ್ಲಾ ನೀನಿಟ್ಟುಕೋ. ಬೇಕಾದರೆ ಮತ್ತಷ್ಟು ಟೆನ್ಶನ್ ಮಾಡಿಕೋ. ಆನೆ ಎಂದರೆ ಏನು ಅಂತ ನನಗೆ ಬೇಕಿಲ್ಲ. ಆನೆ ಹೇಗಿರುತ್ತದೋ ನನಗೆ ಗೊತ್ತಿಲ್ಲ. ಆದರೂ ನಗಲಿಕ್ಕೇನು! ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! ನಿನಗೆ ಹೀಗೆ ನಗಲಿಕ್ಕಾಗುತ್ತದಾ? 'ಆನೆ ಬಂತೊಂದಾನೆ' ಮಾಡಿದರೂ ನೀನು ನಗುವಂತಿಲ್ಲ; 'ಛೀ ಕಳ್ಳ' ಎಂದರೂ ನಗುವಂತಿಲ್ಲ. ಆನೆ ಬಂದರೂ ಕಳ್ಳ ಬಂದರೂ ಹೆದರಿಕೊಂಡು ಓಡಿಹೋಗುತ್ತೀ ನೀನು! ದಿನವಿಡೀ 'ಟೆನ್ಶನ್ ಟೆನ್ಶನ್' ಎನ್ನುತ್ತಾ ಓಡಾಡುವ ನೀನು ನಗುವಿಗೂ ಕಾರಣ ಕೇಳುತ್ತೀಯ, ಅಳುವಿಗೂ ಕಾರಣ ಕೇಳುತ್ತೀಯ, ಪ್ರೀತಿಗೂ ಕಾರಣ ಕೇಳುತ್ತೀಯ... ಏಯ್ ಸುಮ್ನಿರೋ ದಡ್ಡ ಮಾಮ!" ಅಷ್ಟಂದು ಮತ್ತೆ ನಗಲಾರಂಭಿಸಿತು. ನಾನು ತಿರುಗಿ ಮಾತಾಡಲು ಏನೂ ತೋಚದೇ ಸುಮ್ಮನೆ ಮಗುವಿನ ಮುಖವನ್ನೇ ನೋಡುತ್ತಿದ್ದೆ.

ಅತ್ತಿಗೆ ಊಟಕ್ಕೆ ಕರೆಯುವವರೆಗೂ ನಾನು ಮಗುವನ್ನು ಆಡಿಸುತ್ತಲೇ ಇದ್ದೆ. ಊಹೂಂ, ಹಾಗನ್ನುವುದಕ್ಕಿಂತ 'ನಾನೇ ಮಗುವಾಗಿದ್ದೆ ಮಗುವಿನ ಜೊತೆ' ಎಂದರೆ ಹೆಚ್ಚು ಸರಿಯಾಗುತ್ತದೆ. ಒಳ್ಳೆಯದೊಂದು ಊಟ ಮಾಡಿ, ಸಾದಾ ಕವಳ ಹಾಕಿ ನಾನು ನೆಂಟರ ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ಮಗು ತೊಟ್ಟಿಲಿನ ಮೆತ್ತೆಯಲ್ಲಿ ಬೆಚ್ಚಗೆ ನಿದ್ದೆ ಹೋಗಿತ್ತು.

ರೂಮಿಗೆ ಮರಳುವ ಹಾದಿಯಲ್ಲಿ ಹೊಸದೇ ಆದ ಉಲ್ಲಾಸವೊಂದು ನನ್ನಲ್ಲಿ ತುಂಬಿಕೊಂಡಿರುವ ಭಾವವನ್ನು ಅನುಭವಿಸಿದೆ. ಅರ್ಧ ಬರೆದಿಟ್ಟು ಬಂದಿದ್ದ ಕವಿತೆಯ ಮುಂದಿನ ಸಾಲುಗಳು ಅದಾಗಲೇ ಕಣ್ಣ ಮುಂದೆ ನಿಲ್ಲತೊಡಗಿದ್ದವು. ಆ ಸಾಲುಗಳ ಹಿಂದೆ ಅದೇ ಮಗುವಿನ ಬೊಚ್ಚು ಬಾಯಿಯ ನಗುವಿನ ಚಿತ್ರ ಅಚ್ಚೊತ್ತಿತ್ತು.

Monday, December 18, 2006

ಹೊಸ ವರ್ಷದ ಆಶಯ

ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು.

ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.

ನಾನು ಹೊಸವರ್ಷದ ಬಳಿ ಕೇಳಿದೆ, 'ಇದೇನಿದು, ಇಷ್ಟು ಮುಂಚೆ ಬಂದ್ಬಿಟ್ಯಲ್ಲ?' ಅಂತ. ಅದಕ್ಕೆ ಹೊಸವರ್ಷ 'ಅದಕ್ಕೇನೀಗ? ಏನೋ ಒಂದೆರಡು ವಾರ ಮುಂಚೆ ಬಂದಿದೀನಿ. ಬೆಂಗಳೂರಿನಲ್ಲಿ ಭಯಂಕರ ಟ್ರಾಫಿಕ್ಕು ಅಂತ ಕೇಳಿದ್ದೆ. ಹಾಗಾಗಿ ಸ್ವಲ್ಪ ಮುಂಚೇನೇ ಹೊರಟುಬಿಟ್ಟೆ. ಆದ್ರೆ ಮಜಾ ನೋಡು, ನಂಗೆ ಎಲ್ಲೂ ಟ್ರಾಫಿಕ್ಕೇ ಸಿಗಲಿಲ್ಲ! ಹಾಗಾಗಿ... ಹೆಹ್ಹೆ! ಲೇಟಾಗಿ ಬರೋದಕ್ಕಿಂತ ಮುಂಚೆ ಬಂದಿರೋದು ಒಳ್ಳೇದಲ್ವಾ?' ಎಂದು ಹೇಳಿ ಪ್ಯಾಲಿ ನಗೆಯಾಡಿತು.

ಆದರೆ ನನಗೆ ಕೋಪ ಬಂತು. 'ಛೇ! ನೀನು ಇಷ್ಟು ಬೇಗ ಬರ್ತೀಯ ಅಂತ ಗೊತ್ತಿರ್ಲಿಲ್ಲ. ನಾನು ನಿನ್ನನ್ನು ಸ್ವಾಗತಿಸಲಿಕ್ಕೇಂತ ಎಷ್ಟು ತಯಾರಿ ಮಾಡ್ಕೊಂಡಿದ್ದೆ ಗೊತ್ತಾ? ಎಲ್ಲಾ ಹಾಳು ಮಾಡಿಬಿಟ್ಟೆ' ಅಂತ ಬೈದೆ. ಅದಕ್ಕೆ ಹೊಸವರ್ಷ, 'ಹೌದಾ? ಏನೇನು ತಯಾರಿ ಮಾಡ್ಕೊಂಡಿದ್ದೆ?' ಅಂತ ಕೇಳ್ತು. ನಾನೆಂದೆ: 'ಈ ವರ್ಷ ಇಯರೆಂಡನ್ನು ಗ್ರಾಂಡ್ ಆಗಿ ಆಚರಿಸ್ಬೇಕೂಂತ ಮೈಸೂರ್ ರೋಡಲ್ಲಿ ಒಂದು ರೆಸಾರ್ಟ್‍ಗೆ ಬುಕ್ ಮಾಡಿದ್ವಿ ನಾನೂ ನನ್ನ ಫ್ರೆಂಡ್ಸೂ. ಥರ್ಟಿಫಸ್ಟ್ ಇವನಿಂಗೇ ಅಲ್ಲಿಗೆ ಹೋಗಿ, ಎರಡು ಲಾರ್ಜ್ ವ್ಹಿಸ್ಕಿ ಆರ್ಡರ್ ಮಾಡಿ, ಅದರಳೊಗೆ ಐಸನ್ನು ಕರಗಿಸಿ, ನಿಧನಿಧಾನವಾಗಿ ಹೀರ್ತಾ... ತೇಲಿ ಬರೋ ವೆಸ್ಟರ್ನ್ ಮ್ಯೂಸಿಕ್ಕಿನಲ್ಲಿ ಒಂದಾಗ್ತಾ... ಸುಂದರ ಸ್ಲೀವ್‍ಲೆಸ್‍ ಹುಡುಗೀರ ಜೊತೆ ಡಾನ್ಸ್ ಮಾಡ್ತಾ... ಆಹಾ! ಅದರಲ್ಲಿರೋ ಮಜಾ ನಿಂಗೇನು ಗೊತ್ತು? ಗಡಿಯಾರದ ಮುಳ್ಳು ಹನ್ನೆರಡನ್ನು ಮುಟ್ಟುತ್ತಿದ್ದಂತೆಯೇ ಎಲ್ಲರೂ 'ಹೋ' ಎಂದು ಜೋರಾಗಿ ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಎಲ್ರೂ ಎಲ್ರಿಗೂ 'ಹ್ಯಾಪಿ ನ್ಯೂ ಇಯರ್' ಹೇಳಿ, ತಬ್ಕೊಂಡು..... ಓಹ್! ನಮ್ಮ ಯೋಜನೆಗಳನ್ನೆಲ್ಲಾ ಹಾಳು ಮಾಡಿಬಿಟ್ಟೆ' ಅಂದೆ.

ನನ್ನ ಮಾತನ್ನು ಕೇಳಿ ಹೊಸವರ್ಷ ನಸು ನಕ್ಕಿತು. ಅದರ ನಗು ನನಗೆ ವ್ಯಂಗ್ಯಭರಿತವಾಗಿದ್ದಂತೆ, ಒಂಥರಾ ನಿಗೂಢವಾಗಿದ್ದಂತೆ ಅನ್ನಿಸಿತು. 'ಅಲ್ಲಿಂದ ನಡಕೊಂಡು ಬಂದಿದೀನಿ. ಸುಸ್ತಾಗಿದೆ. ತಣ್ಣಗೆ ಒಂದು ಸ್ನಾನ ಮಾಡಿ ಬರ್ತೀನಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ, ಕೂತಿರು' ಅಂತಂದು ಹೊಸವರ್ಷ ನನ್ನ ಟವೆಲನ್ನು ಎತ್ತಿಕೊಂಡು ಬಾತ್‍ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿತು. ನಾನು ತಕ್ಷಣ ಮೊಬೈಲೆತ್ತಿಕೊಂಡು ಗೆಳೆಯರಿಗೆಲ್ಲ ಫೋನ್ ಮಾಡಿ 'ಅಯ್ಯೋ ಕೆಲಸ ಕೆಟ್‍ಹೋಯ್ತು ಕಣ್ರೋ.. ಹೊಸವರ್ಷ ಆಗಲೇ ಬಂದುಬಿಟ್ಟಿದೆ. ರೆಸಾರ್ಟಿಗೆ ಬುಕ್ ಮಾಡಿದ್ದೆಲ್ಲಾ ಕ್ಯಾನ್ಸೆಲ್ ಮಾಡ್ಸಿ. ಪಟಾಕಿ ತಗೋಳ್ಲಿಕ್ಕೆ ಹೋಗ್ಬೇಡಿ' ಅಂತೆಲ್ಲಾ ಅಂದೆ. ಗೆಳೆಯರು 'ಯಾಕೋ ಹುಚ್ಚು-ಗಿಚ್ಚು ಹಿಡಿದಿದೆಯೇನೋ?' ಅಂತ ಗೇಲಿ ಮಾಡಿ ನಕ್ಕುಬಿಟ್ಟರು. ಇವರಿಗೆ ಹೇಗೆ ಅರ್ಥ ಮಾಡಿಸಬಹುದು ಅಂತಲೇ ನನಗೆ ತಿಳಿಯಲಿಲ್ಲ. ಅಷ್ಟರಲ್ಲಿ ಹೊಸವರ್ಷದ ಸ್ನಾನ ಮುಗಿದು, ಬಾತ್‍ರೂಮಿನಿಂದ ಹೊರಬಂತು. ನಾನು ಫೋನ್ ಕಟ್ ಮಾಡಿ, ಹುಳ್ಳಹುಳ್ಳಗೆ ನಗೆಯಾಡುತ್ತಾ, ಯಥಾಸ್ಥಾನದಲ್ಲಿ ಕುಳಿತೆ.

ಹೊಸವರ್ಷ ನನ್ನ ಎದುರಿಗೆ ಬಂದು ಕುಳಿತುಕೊಂಡು ಮಾತನಾಡಲಾರಂಭಿಸಿತು: 'ನೋಡು ಗೆಳೆಯಾ, ಈ ತರಹದ ಆಡಂಭರಗಳೆಲ್ಲ ನಿಮ್ಮಂಥವರಿಗೆ ಮಾತ್ರ. ಫೂಟ್‍ಪಾತಿನ ಮೇಲೆ ಸೆಕೆಂಡ್ಸ್ ಮಾರುವವರು, ಮೆಜೆಸ್ಟಿಕ್ಕಿನ ಫ್ಲೈಓವರಿನ ಮೇಲೆ ಬ್ಯಾಟರಿ, ಕೀಚೈನು, ಮೊಬೈಲ್ ಕವರ್ರು, ಕರ್ಚೀಫು, ಬೂಟಿನ ಹಿಮ್ಮಡ, ಬೇಯಿಸಿದ ಮೊಟ್ಟೆ, ಕಡಲೆಕಾಯಿಗಳನ್ನು ಮಾರುವವರನ್ನು ಹೋಗಿ ನೋಡು. ಕೆ.ಆರ್. ಮಾರ್ಕೆಟ್ಟಿನ ಇಕ್ಕಟ್ಟಿನಲ್ಲಿ ತರಕಾರಿ ಮಾರುವವರನ್ನು ನೋಡು. ಹೋಟೆಲ್ಲುಗಳಲ್ಲಿ ಟೇಬಲ್ ಕ್ಲೀನ್ ಮಾಡುವ ಹುಡುಗರನ್ನು ನೋಡು. ಕಸ ಎತ್ತುವ, ಚರಂಡಿ ದುರಸ್ಥಿ ಮಾಡುವ ಕಾರ್ಪೋರೇಷನ್ ಕೆಲಸಗಾರನ್ನು ನೋಡು. ಅವರುಗಳ ಬಳಿ ಹೋಗಿ ಕೇಳು: 'ನೀವು ಹೊಸವರ್ಷವನ್ನು ಹೇಗೆ ಸ್ವಾಗತಿಸುತ್ತೀರಿ?' ಅಂತ. ಅವರು ಜೋರಾಗಿ ನಕ್ಕುಬಿಡುತ್ತಾರೆ. ಅವರು ನಿಮ್ಮಂತೆ ರೆಸಾರ್ಟುಗಳಲ್ಲಿ ಚಿಲ್ಡ್ ಬಿಯರ್ ಕುಡಿಯುವವರಲ್ಲ, ಕೇಕ್ ಕತ್ತರಿಸುವವರಲ್ಲ, ರಾಕೆಟ್ಟುಗಳನ್ನು ಹಾರಿಸಿ 'ಹೋ' ಎಂದು ಕೂಗುವವರಲ್ಲ. ಹೊಸವರ್ಷದ ದಿನ ಅವರ ಮನೆಯಲ್ಲಿ ಸ್ವೀಟ್ ಮಾಡುವುದಿಲ್ಲ. ಅವರು ಹೊಸವರ್ಷಕ್ಕೇಂತ ಕ್ಯಾಲೆಂಡರು ಸಹ ಕೊಳ್ಳುವುದಿಲ್ಲ. ನಿನಗೆ ಗೊತ್ತಾ ಬ್ರದರ್, ನೀನು ಹೊಸವರ್ಷದ ಸಂಭ್ರಮಕ್ಕೆಂದು ಖರ್ಚು ಮಾಡುವ ಹಣವನ್ನು ಒಬ್ಬೊಬ್ಬರಿಗೆ ಒಂದೊಂದು ರೂಪಾಯಿಯಂತೆ ಹಂಚುತ್ತಾ ಬಂದರೂ ಸಾಕಾಗದಷ್ಟು ಭಿಕ್ಷುಕರು ಬರೀ ಈ ಬೆಂಗಳೂರಿನಲ್ಲಿದ್ದಾರೆ...'

ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಏನೋ ತಪ್ಪು ಮಾಡಲು ಹೊರಟಿದ್ದ ನನ್ನನ್ನು ತಡೆದಂತಾಯಿತು. ನನ್ನ ಕೋಪ, ಆವೇಶ, ಅಸಮಾಧಾನಗಳೆಲ್ಲಾ ತಣ್ಣಗಾಗಿದ್ದವು. 'ಹಾಗಾದರೆ ನನ್ನನ್ನು ಈಗ ಏನು ಮಾಡು ಅಂತೀಯಾ?' ತಗ್ಗಿದ ದನಿಯಲ್ಲಿ ಕೇಳಿದೆ.

'ಅದನ್ನೂ ನಾನೇ ಹೇಳಬೇಕಾ?' ಎಂದು ಹೊಸವರ್ಷ ಎದ್ದು ನಿಂತಿತು. 'ಅರೆ, ತಾಳು ಹೊರಡಬೇಡ...' ಅಂದೆ. 'ಇಲ್ಲ, ನಾನು ಹೊರಟೆ. ನಿನ್ನಂತಹ ಇನ್ನೊಂದಿಷ್ಟು ಜನರಿಗೆ ಇದೇ ಮಾತುಗಳನ್ನು ಹೇಳಬೇಕಿದೆ. ನೀನೂ ನಿನ್ನ ಗೆಳೆಯರಿಗೆ ತಿಳಿಹೇಳು. ಮತ್ತೆ ಸಿಗೋಣ. ಒಂದನೇ ತಾರೀಖು ಬರ್ತೀನಲ್ಲ!' ಎಂದು ಹೇಳಿ ಹೊರಟೇಬಿಟ್ಟಿತು. 'ಏ.. ನಿಲ್ಲು..' ಅಂತ ನಾನು ಕೂಗಿಕೊಂಡೆ.

ನನಗೆ ತಟ್ಟನೆ ಎಚ್ಚರಾಯಿತು. ದಢಬಡಿಸಿ ಎದ್ದು ಕುಳಿತೆ. ಕಿಟಕಿಯಲ್ಲಿ ಹೊಸ ಬೆಳಗಿನ ಬಿಸಿಲು ಕಾಣಿಸಿತು. ಕ್ಯಾಲೆಂಡರು ನೋಡಿದೆ: ಇನ್ನೂ ಡಿಸೆಂಬರಿನಲ್ಲಿಯೇ ಇತ್ತು. ಗಡಿಯಾರ ನೋಡಿದೆ: ಏಳು ಗಂಟೆಯನ್ನೂ ದಾಟಿ ಓಡುತ್ತಿತ್ತು ಮುಳ್ಳು.

[ಈ ಲೇಖ, 'ವಿಕ್ರಾಂತ ಕರ್ನಾಟಕ ' ಪತ್ರಿಕೆಯ ಈ ವಾರದ (22.12.2006) ಸಂಚಿಕೆಯಲ್ಲಿ ಪ್ರಕಟವಾಗಿದೆ. ಅವರಿಗೆ ನನ್ನ ಕೃತಜ್ಞತೆಗಳು.]

Tuesday, September 26, 2006

'ಸರ್ವಸ್ವ'ದ ಬಗ್ಗೆ ಸರ್ವೇಸಾಮಾನ್ಯನ ಒಂದು ಸರ್ವೆ!

ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ ಸಾಗುತ್ತವೆ. ಅನೇಕ ಸಲ ಚರ್ಚೆ ದಾರಿ ತಪ್ಪುತ್ತದೆ. ನನ್ನ ಕೆಲ concept ಗಳನ್ನು ಆತ ಒಪ್ಪುವುದಿಲ್ಲ; ಹಾಗೆಯೇ ಅವನ ಕೆಲ ವಾದಗಳನ್ನು ನಾನು ಅಲ್ಲಗಳೆಯುತ್ತೇನೆ. ಒಟ್ಟಿನಲ್ಲಿ ಕೊನೆಯಲ್ಲಿ ಇಬ್ಬರೂ satisfy ಆಗದೇ ಮಾತು ಮುಗಿಸುತ್ತೇವೆ.

ಇವತ್ತು ನಾವು ಮಾತಾಡಿದ್ದು 'ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲನೇ?' ಎಂಬ ವಿಷಯದ ಮೇಲೆ. 'ಹಾಯ್' ನ ಬಾಟಮ್ ಐಟಮ್ ನಲ್ಲಿ ರವಿ ಬೆಳಗೆರೆ ಬರೆದ ಲೇಖನವೊಂದರ ತಳಹದಿಯ ಮೇಲೆ ನಮ್ಮ ವಾದ ಸಾಗಿತ್ತು. ನಾನೆಂದೆ, 'ಹೌದು, ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿ ಸರ್ವಸ್ವ ಆಗಬಲ್ಲ' ಅಂತ. ಆತ ಅದನ್ನು ಒಪ್ಪಲಿಲ್ಲ. ನನ್ನ ವಾದ- ನಾವು ಪ್ರೀತಿಸಿದ ವ್ಯಕ್ತಿ ನಮಗೆ ಸರ್ವಸ್ವವೇ ಅಲ್ಲವೇ? ನೀನೇ ನನ್ನ ಸರ್ವಸ್ವ ಅಂತ ಒಪ್ಪಿಕೊಂಡಿರುತ್ತೇವಲ್ಲವೇ ಅವಳ ಬಳಿ? ಆಕೆಗೆ ನಾನು ಸರ್ವಸ್ವ ಎಂದಾದಾಗ ನಾನು ಆಕೆಯನ್ನು ಸರ್ವಸ್ವ ಅಂದುಕೊಳ್ಳುವುದರಲ್ಲಿ ಯಾವ ತಪ್ಪಿದೆ? ಆಕೆಗೆ ನಾನು ಸರ್ವಸ್ವ ಅಲ್ಲ ಅಂತಾದರೆ, of course, ನನಗೆ ಆಕೆ ಸರ್ವಸ್ವಳಾಗಲಿಕ್ಕೂ ಅರ್ಹಳಲ್ಲ.

ಇಷ್ಟಕ್ಕೂ ಒಬ್ಬ ವ್ಯಕ್ತಿ ನನಗೆ ಸರ್ವಸ್ವ ಯಾವಾಗ ಆಗುತ್ತಾನೆ? ಆತ ನನ್ನೆಲ್ಲಾ need ಗಳನ್ನೂ fulfill ಮಾಡುವವನಾಗಿದ್ದಾಗ. ಬೆಳಗೆರೆಯ ಉದಾಹರಣೆಯನ್ನೇ ಇಲ್ಲಿ ಬಳಸುವುದಾದರೆ, ನಮ್ಮ ಮಗುವಿನ ಮೂಗಿನಲ್ಲಿ ಬಳಪ ಸಿಕ್ಕಿಕೊಂಡಿರುತ್ತದೆ. ನಾವು ಡಾಕ್ಟರ್ ಬಳಿಗೊಯ್ಯುತ್ತೇವೆ. ಆಗಿನ ಆ ಕ್ಷಣದಲ್ಲಿ ಆ ಡಾಕ್ಟರೇ ನಮ್ಮ ಸರ್ವಸ್ವ. ಹೀಗೆ, ನಮ್ಮನ್ನು ಕಷ್ಟದಿಂದ ಪಾರು ಮಾಡುವವರು, ನಮ್ಮ ಅಪೇಕ್ಷೆಯನ್ನು ಈಡೇರಿಸುವವರು ನಮಗೆ ಸರ್ವಸ್ವವಾಗುತ್ತಾರೆ.

ಸಂತೋಷ ನಾನು ಮೊದಲು ಹೇಳಿದ್ದನ್ನೇ ಮತ್ತೆ ಕೈಗೆತ್ತಿಕೊಂಡು ಕೆಣಕಲಾರಂಭಿಸಿದ. 'ಪ್ರೀತಿಸಿದ ವ್ಯಕ್ತಿಯೇ ಸರ್ವಸ್ವ ಅಂದೆಯಲ್ಲಾ, ನೀನು ನಿನ್ನ ತಾಯಿಯನ್ನು ಪ್ರೀತಿಸುತ್ತೀಯ. ಹಾಗಾದರೆ ನೀನು ತಾಯಿಯನ್ನು ಸರ್ವಸ್ವ ಎಂದು ಭಾವಿಸಿದ್ದೀಯಾ? ಪ್ರಾಮಾಣಿಕವಾಗಿ ಉತ್ತರಿಸು.' ನಾನು ಯೋಚಿಸಿದೆ: ಹೌದು, ನನ್ನಮ್ಮ ನನ್ನ ಪಾಲಿಗೆ ಸರ್ವಸ್ವವೇ ಸರಿ. ಹಾಗಿದ್ದಾಗ, ಆಕೆಯೇ ನನ್ನ ಸರ್ವಸ್ವವಾಗಿದ್ದಾಗ, ನಾನ್ಯಾಕೆ ಮತ್ತೊಬ್ಬ ಹುಡುಗಿಯನ್ನು ಪ್ರೀತಿಸಬೇಕು? ಅಮ್ಮನಲ್ಲಿ ಇಲ್ಲದ್ದು ಇವಳಲ್ಲಿ ಏನಿದೆ? ಹೌದು, ಸಾಕಷ್ಟಿದೆ. ಅದಕ್ಕಾಗಿಯೇ ನಾನು ಇವಳ ಪ್ರೀತಿಗೆ ಕೈ ಚಾಚಿದ್ದು. ಇವಳು ಅಂತ ಅಷ್ಟೇ ಅಲ್ಲ, ಇವಳ ಪ್ರೀತಿ ಅಲ್ಲದೆಯೂ ನನಗೆ ಇನ್ನೂ ಸಾಕಷ್ಟು ಬೇಕು. ನನಗೆ ಸಂತೋಷನಂತಾ ಉತ್ತಮ ಗೆಳೆಯರ ಸ್ನೇಹ ಬೇಕು, ಬೆಳಗೆರೆಯಂತಾ 'ಗುರುವಲ್ಲದ ಗುರು-ತಂದೆಯಲ್ಲದ ತಂದೆ'ಯ ಬರಹ ಬೇಕು, ಮನಸ್ಸಿಗೆ ಬೇಸರವಾದಾಗ ಮುದ ನೀಡುವಂತಹ ಹಾಡು ಬೇಕು, ನೋಡಲು ಖುಷಿ ನೀಡುವಂತಹ ಸಿನಿಮಾ ಬೇಕು... ನನ್ನ ಬೇಕುಗಳ ಪಟ್ಟಿ ದೊಡ್ಡದಿದೆ. ಇವನ್ನೆಲ್ಲಾ ಕೊಡಮಾಡುವವರು ಆಯಾ ಕ್ಷಣದಲ್ಲಿ ನನ್ನ ಪಾಲಿನ ಸರ್ವಸ್ವಗಳೇ. ಆದರೂ ಒಬ್ಬ ಹುಡುಗಿ ಒಬ್ಬ ಹುಡುಗನಿಗೆ ಕೊಡಬಹುದಾದಂತಹ ಸರ್ವಸ್ವದ ಘಾಢತೆ ಇದೆಯಲ್ಲಾ, ಅದು ಉಳಿದೆಲ್ಲಕ್ಕಿಂತ ಶ್ರೇಷ್ಟವಾದದ್ದು ಅಂತ ನನ್ನ ನಂಬುಗೆ. ಒಬ್ಬ ಹುಡುಗಿ ನನಗೆ ಎಲ್ಲವೂ ಆಗಬಲ್ಲಳು. ಆಕೆ ನನಗೆ ಅತ್ಯುತ್ತಮ ಗೆಳತಿ, ಪ್ರೇಯಸಿ, ಗುರು, ಅಮ್ಮ, ಬಂಧು... ಆಕೆಗೆ ಸರ್ವಸ್ವವೂ ಆಗುವ ಸಾದ್ಯತೆ ಇದೆ. She means everything to me. ಬಹಶಃ ಬೇರೆ ಯಾರಿಗೂ ಈ ಸಾಧ್ಯತೆ ಇಲ್ಲ.

ಸಂತೋಷ ಮತ್ತೆ ನನ್ನನ್ನು cross-question ಮಾಡಿದ: ಹಾಗಾದರೆ 'ಪ್ರೀತಿ' ಮತ್ತು 'ಅವಳಿಗೆ ಸರ್ವಸ್ವವಾಗುವುದು' ('love' and 'being everything to her') ಎರಡೂ ಒಂದೇನಾ? ಒಂದೇ ಎಂತಾದರೆ, ನೀನಾಗ ಹೇಳಿದಂತೆ 'ನಮ್ಮ ಅಪೇಕ್ಷೆಯನ್ನು ಈಡೇರಿಸುವವರೇ ನಮಗೆ ಸರ್ವಸ್ವ'; ಹಾಗಾಗಿ ಪ್ರೀತಿಯೂ ಸಹ ನಿನ್ನ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುವ ಒಂದು ಮಾರ್ಗ ಅಷ್ಟೇನಾ? ನೀನು ಪ್ರೀತಿ ಮಾಡುವುದು ಕೇವಲ ನಿನ್ನ ಅಪೇಕ್ಷೆಗಳ ಈಡೇರಿಕೆಗೋಸ್ಕರವೊ? ನಿರಪೇಕ್ಷ ಪ್ರೇಮವೆಂಬುದಿಲ್ಲವೋ?

ಈ ಬಗ್ಗೆ ಇಬ್ಬರೂ ಸ್ವಲ್ಪ ಚರ್ಚಿಸಿದೆವಾದರೂ, 'ಪ್ರೀತಿ'ಗೆ ಹೊಸ definition ಕೊಡಬೇಕಾದಂತಾದಾಗ, ಅದನ್ನು ಅಲ್ಲಿಗೇ ಕೈಬಿಟ್ಟು ಮತ್ತೆ ವಾಪಾಸು ಬಂದೆವು.

ಇಷ್ಟಕ್ಕೂ 'ಅವಳಿಗೆ ಸರ್ವಸ್ವವಾಗುವುದು' ಅಂದರೇನು? ಅದೊಂದು ಸಾಧ್ಯವಾಗುವಂತಹ ಮಾತಾ? ಯಾವಾಗ 'ಅವಳೇ ನನ್ನ ಸರ್ವಸ್ವ' ಅಂತ ನನಗೆ ಭಾಸವಾಗುತ್ತದೆಯೆಂದರೆ, ನಾನು ಅವಳ ಪ್ರೀತಿಯ ಕೊಳದಲ್ಲಿ ಪೂರ್ತಿ ಮುಳುಗಿಹೋಗಿದ್ದಾಗ. ನಾನು ಯಾರನ್ನು ನೋಡಿದರೂ, ಏನನ್ನು ನೋಡಿದರೂ ಅದರಲ್ಲಿ ಅವಳ ಬಿಂಬವೇ ಕಾಣಿಸುತ್ತದೆ. ಅಮ್ಮನಲ್ಲೂ ಅವಳು, ಗುರುವಿನಲ್ಲೂ ಅವಳು, ಸಿನಿಮಾದ ನಾಯಕಿಯಲ್ಲೂ ಅವಳ ಮುಖ, ಹಾಡಿನ ಗಾಯಕಿಯಲ್ಲೂ ಅವಳ ದನಿ. ಈಕೆ ಹೀಗೆಂದರೆ, ನಾನು ಎಲ್ಲವನ್ನೂ ಅವಳ ಪ್ರೀತಿಯ ಕೊಳದ ನೀರಿನ ಮೂಲಕವೇ ನೋಡುತ್ತಿದ್ದೇನೆ.

ಈ ವಾದದ ಮಧ್ಯೆ ನನಗೆ ಮತ್ತೊಂದು ಅನುಮಾನ ಬಂತು. ಹಾಗಾದರೆ ಈ ಪ್ರೀತಿಯ ಕೊಳ ಬತ್ತಿಹೋದರೆ? 'ನನ್ನ ಸರ್ವಸ್ವ' ಅಂದುಕೊಂಡಿದ್ದ ಅವಳು ಬಿಟ್ಟುಹೋದರೆ? ಸರ್ವಸ್ವವೂ ಹೋದಮೇಲೆ ಉಳಿಯುವುದೇನು? ನಾನೂ ಉಳಿಯಬಾರದಲ್ಲವೇ? ಆದರೂ ಎಷ್ಟೊಂದು ಜನ ಹೀಗಾದಮೇಲೂ ಉಳಿದಿದ್ದಾರಲ್ಲವೇ? ಸರ್ವಸ್ವ ಎಂದುಕೊಂಡಿದ್ದ ಹುಡುಗಿ ಬಿಟ್ಟುಹೋದಮೇಲೂ ಬದುಕಿದ್ದಾರೆ, ಮತ್ತೊಂದು 'ಸರ್ವಸ್ವ'(?) ದೆಡೆಗೆ ಕಣ್-ಚಾಚಿದ್ದಾರೆ. ಹಾಗಾದರೆ ಪ್ರೀತಿ, ಪ್ರೀತಿಸಿದ ಹುಡುಗಿ ಸರ್ವಸ್ವ ಅಲ್ಲವೇ? ಯಾರೂ ಯಾರಿಗೂ 'ಸರ್ವಸ್ವ' ಆಗಲಿಕ್ಕೆ ಸಾಧ್ಯವಿಲ್ಲವೇ? 'ಅವಳೇ ನನ್ನ ಸರ್ವಸ್ವ' ಅಂದುಕೊಳ್ಳುವುದು ಕೇವಲ ಭ್ರಮೆಯೇ? 'Being everything to somebody' ಎಂಬುದು ಕೇವಲ ಆ ಕ್ಷಣದ ಸತ್ಯವೇ? ಅಷ್ಟೇನೇನೋ ಅನ್ನಿಸಿಬಿಟ್ಟಿತು -ಫೋನೀಟ್ಟ ಮೇಲೆ.

ಗೆಳೆಯನಿಗೆ SMS ಮಾಡಿದೆ: 'ಸಂತೋಷ, ಅವಳೇ ಸರ್ವಸ್ವ ಅಲ್ಲದಿರಬಹುದು, ಆದರೆ ಅವಳೇ ನನ್ನ ಸರ್ವಸ್ವ - ಮತ್ತು ಅವಳಿಗೆ ನಾನೇ ಸರ್ವಸ್ವ ಅಂದುಕೊಳ್ಳುವಾಗ ಸಿಗುವ ನಿರಾಳತೆ, ಖುಷಿ ಮತ್ತು ಹಮ್ಮು ಇದೆಯಲ್ಲ, ಅವು ನಿಜಕ್ಕೂ ಉನ್ನತವಾದವು. ಮತ್ತು ಅದಕ್ಕಾಗಿಯಾದರೂ ಪ್ರೀತಿಸಬೇಕು!' ಅಂತ. 'Good Night' ಒಂದು ಆ ಕಡೆಯಿಂದ ಬಂತು.

(೨೫.೦೯.೨೦೦೬; ರಾತ್ರಿ ೧.೩೦)


--------------
ಇಲ್ಲಿ 'ಅವಳು' ಅಂತ ಇರುವಲ್ಲೆಲ್ಲ 'ಅವನು' ಅಂತ, replace ಮಾಡಿಕೊಂಡರೂ ಈ ಲೇಖನದ ದಾಟಿ ಬದಲಾಗಲಾರದು ಅಲ್ಲವೇ? (ಹುಡುಗಿಯರೇ ಉತ್ತರಿಸಬೇಕು!)

Saturday, September 09, 2006

ಗ್ರಹಣ ಮತ್ತು ಚಂದ್ರ

ಎಲ್ಲೋ ಓದಿದ ನೆನಪು:

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆ ಅದು ಬರೀ ಕಲ್ಲುಗುಂಡು

ಕವಿ ಯಾರೋ ನೆನಪಿಲ್ಲ. ಹೈಸ್ಕೂಲ್ ಕನ್ನಡ ಪಠ್ಯದಲ್ಲಿತ್ತು. ನಮ್ಮ ಮೇಷ್ಟ್ರು ಎಂ.ಜಿ. ಹೆಗಡೆ ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದರು ಕೂಡ. ಹೇಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ತರಹ ಇರುತ್ತೆ ಎಂಬುದನ್ನ ತುಂಬ ಸುಂದರವಾಗಿ, ಕೇವಲ ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಿಚ್ಚಿಡುತ್ತದೆ ಆ ಕವನ.

ಇಲ್ಲ, ನಾನಿವತ್ತು ಕವಿತೆಗಳ ಬಗ್ಗೆಯಾಗಲೀ, ದೃಷ್ಟಿಕೋನಗಳ ಬಗ್ಗೆಯಾಗಲೀ, ಬೇರೆ ಬೇರೆ ದೃಷ್ಟಿಕೋನಗಳ ಜನಗಳ ಬಗ್ಗೆಯಾಗಲೀ ಹೇಳುವುದಕ್ಕೆ ಹೊರಟಿಲ್ಲ. ನಾನು ಹೇಳ ಹೊರಟಿರುವುದು ಚಂದಿರನ ಬಗ್ಗೆ.

ಚಂದಿರ. ಅದೆಷ್ಟು ಚಂದದ ಹೆಸರು. ಅದೆಷ್ಟು ಸುಂದರ ಅಂವ. ಚಂದಿರ ಎಂದರೆ ಬೆಳದಿಂಗಳು. ಬೆಳದಿಂಗಳು ಎಂದರೆ ಪ್ರೀತಿ. ಪ್ರೀತಿ ಎಂದರೆ ಅವಳು. ಅವಳು ಎಂದರೆ ಪ್ರೀತಿ.

ಚಂದ್ರ ಎಂದರೆ, ಭಾವನೆಗಳನ್ನು ಸ್ಪುರಿಸುವ ಕೇಂದ್ರ ನನ್ನ ಪಾಲಿಗೆ. ಹುಣ್ಣಿಮೆಯ ರಾತ್ರಿ ಲಕ್ಷ ನಕ್ಷತ್ರಗಳ ನಡುವೆ ತಾನೇ ತಾನಾಗಿ ಮೆರೆಯುವ ಮನ್ಮತ. ಕಪ್ಪು ಕಡಲಲ್ಲಿ ಬೆಳ್ಳಿತುಂಡಿನಂತೆ ತೇಲುವವ. ಹೊಟ್ಟೆಕಿಚ್ಚಾಗೊತ್ತೆ ಅವನನ್ನು ನೋಡಿದರೆ.

ಲೆಕ್ಕ ಇಟ್ಟಿಲ್ಲವಂತೆ ಚಂದ್ರ: ಅದೆಷ್ಟೋ ಮಕ್ಕಳಿಗೆ ಮಾಡಿಸಿದ ಊಟ. ನನಗೆ ಅಮ್ಮನೂ ಹಾಗೇ ಊಟ ಮಾಡಿಸುತ್ತಿದ್ದಿದ್ದಂತೆ. ಚಂದ್ರನಿಗೊಂದು ತುತ್ತು - ನಿನಗೊಂದು ತುತ್ತು ಅಂತ ಹೇಳಿ, ಚಂದ್ರನಿಗೆ ಕೊಟ್ಟಂತೆ ಮಾಡಿ, ನಾನು ಬೆರಗುಗಣ್ಣುಗಳಲ್ಲಿ ಮೇಲ್ನೋಡುತ್ತಿರುವಾಗ, ತೆರೆದ ಬಾಯಿಗೆ ತುತ್ತು ತುರುಕಿ... ಹೀಗೇ ಅದೆಷ್ಟು ತಾಯಂದಿರು ಉಣ್ಣಿಸಿದ ತುತ್ತು ತಿಂದಿದ್ದಾನೋ ಚಂದ್ರ. ಅದಕ್ಕೇ ಅಷ್ಟು ಸ್ಮಾರ್ಟ್ ಅಂವ. ಆದರೆ ಅದು ವಿಚಿತ್ರವೂ ಹೌದು: ಅಷ್ಟೊಂದು ಮನೆಯ ಅಡಿಗೆ ಉಂಡು ಅವನ ಹೊಟ್ಟೆ ಕೆಟ್ಟು ಹೋಗಬೇಕಿತ್ತು! ಆದರೆ ಎಂದೂ ಅಂವ ಕಾಯಿಲೆ ಬಿದ್ದ ವರ್ತಮಾನ ಬಂದಿಲ್ಲ!

ನಿನ್ನೆ ರಾತ್ರಿ ಎಲ್ಲ ರಾತ್ರಿಗಳಂತಲ್ಲ. ನನ್ನ ಗೆಳೆಯ ಚಂದ್ರನಿಗೆ ಗ್ರಹಣ. ಬಿಚ್ಚು ಆಕಾಶದಲ್ಲಿ ನಕ್ಷತ್ರಗಳ ಜಾತ್ರೆ ನೆರೆದಿತ್ತು.. ಕಪ್ಪು ಕಡಲಲ್ಲಿ ತೇಲಿಬಂದ ನನ್ನ ಗೆಳೆಯ.. ಮೇಲೆ ಮೇಲೆ ಬಂದ.. ರಾತ್ರಿ ಹತ್ತೂ ವರೆಯಾಗಿತ್ತೇನೋ: ನಿಧ ನಿಧಾನವಾಗಿ ಅವನ ಒಂದು ಪಾರ್ಶ್ವದಿಂದ ಕಪ್ಪು ಆವರಿಸುತ್ತಾ ಬಂತು... ತುಂಬು ಚಂದಿರನ ಮೇಲ್ಮೈಯ ಮೇಲೆ ಯಾರದೋ ಕಪ್ಪು ನೆರಳು.. ನನಗೆ ಬೇಸರ..

ದುಂಡೀರಾಜರ ಕವನವೊಂದು ಬಿಟ್ಟೂ ಬಿಡದೆ ನೆನಪಾಗುತ್ತಿತ್ತು:

ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಬದಿಗೆ
ಸರಿಸುತ್ತಾ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ..

'ಹುಣ್ಣಿಮೆ' ಎಂಬ ಶೀರ್ಷಿಕೆಯಡಿ ಅದೆಷ್ಟು ಅದ್ಭುತವಾಗಿ ಬರೆದಿದ್ದಾರೆ ಕವಿ! ನಾನು ಚಂದಿರನನ್ನು ನೋಡುತ್ತಾ ಹಾಗೇ ಟೆರೇಸಿನಲ್ಲಿ ಅಡ್ಡಾಡುತ್ತಿದ್ದೆ ಮಧ್ಯರಾತ್ರಿಯವರೆಗೂ. ಒಂದು ಗಂಟೆಯ ಮೇಲೆ ಗ್ರಹಣ ಬಿಟ್ಟಿತು. ನನ್ನನ್ನು ಕವಿದಿದ್ದ ಖಿನ್ನತೆಯೂ ಕಳೆದಂತಾಯ್ತು.

Tuesday, September 05, 2006

ಸಿಗ್ನಲ್ಲಿನ ಕ್ಷಣದ ಚಿತ್ರಗಳು

ಓಡುತ್ತಿರುವ ಬಸ್ಸುಗಳು ಕಾರುಗಳು ಬೈಕುಗಳು ಎಲ್ಲಾ ಕೆಂಪು ಸಿಗ್ನಲ್ಲು ಬೀಳುತ್ತಿದ್ದಂತೆ ಗಕ್ಕನೆ brake ಹೊಡೆದು ಒಂದು ಕ್ಷಣದ ಮಟ್ಟಿಗೆ ನಿಲ್ಲುತ್ತವೆ. ಹಾಗೆ ಅವು ನಿಲ್ಲುತ್ತಿದ್ದಂತೇ ಕೌಂಟ್‍ಡೌನ್ ಶುರುವಾಗುತ್ತದೆ. ಎಂಬತ್ತು, ಎಪ್ಪತ್ತೊಂಬತ್ತು, ಎಪ್ಪತ್ತೆಂಟು, ಎಪ್ಪತ್ತೇಳು, ಎಪ್ಪತ್ತಾರು.... ಅದು ಮೂರು, ಎರಡು, ಒಂದು, ಸೊನ್ನೆಯಾದ ಮೇಲೆ ಹಸಿರು ಬಣ್ಣದ ದೀಪ ಹೊತ್ತಿಕೊಳ್ಳುತ್ಥದೆ. ಅಷ್ಟರವರೆಗೆ ಕಾಯುವುದೇ ಇದೆ ರಗಳೆ.

ಕೆಲವರು ತಮ್ಮ ವೆಹಿಕಲ್ಲನ್ನು off ಮಾಡಿದ್ದಾರೆ. ಇನ್ನು ಕೆಲವರು ಹಾಗೇ ನಿಲ್ಲಿಸಿಕೊಂಡಿದ್ದಾರೆ. ಎಲ್ಲೈಸಿ ಏಜೆಂಟ್ ಕಾಮತ್ತರ ಗಾಡಿ ಅದೆಷ್ಟೇ brake ಹೊಡೆದರೂ ನಿಲ್ಲದೇ, ಸ್ಕೂಟರಿನ ಮುಂದಿನ ಗಾಲಿ ಎದುರುಗಡೆ ನಿಂತಿದ್ದ ಬಿಎಂಟೀಸಿ ಬಸ್ಸಿನ ಅಡಿಗೇ ಹೋಗಿಬಿಟ್ಟಿದೆ. 'ಇನ್ನೊಂದು ಸ್ವಲ್ಪ ಮುಂದೆ ಹೋಗಿದ್ದಿದ್ರೆ ಹ್ಯಾಂಡಲು ಹೋಗಿ ಬಸ್ಸಿಗೆ ಗುದ್ದೇ ಬಿಟ್ಟಿರೋದು, ಸಧ್ಯ!' ಅಂದ್ಕೊಂಡಿದಾರೆ ಕಾಮತರು. ಹಿಂದಕ್ಕಾದರೂ ತಗೊಳ್ಳಾಣಾಂದ್ರೆ ಕಾರೊಂದು ಬಂದು ಇವರ ಸ್ಕೂಟರಿನ ಹಿಂದೇ, ಒಂದೇ ಒಂದು ಇಂಚು ಗ್ಯಾಪು ಕೊಟ್ಟು ನಿಂತಿದೆ. 'ಅಯ್ಯೋ, ಈ ಬಸ್ಸಿನವನು ಸೀದಾ ಮುಂದೆ ಹೋದ್ರೆ ಸಾಕಿತ್ತು. ಒಂಚೂರು ಹಿಂದೆ ಬಂದ್ರೂ ನಂಗೆ ಗ್ರಾಚಾರ ತಪ್ಪಿದ್ದಲ್ಲ...' -ಕಾಮತರು ಮನಸ್ಸಿನಲ್ಲೇ ದೇವರನ್ನು ನೆನೆಯುತ್ತಿದ್ದಾರೆ.

ಮುಂದೆ, ಸಿಗ್ನಲ್ ಬ್ರೇಕ್ ಮಾಡಿ ಗಾಡಿ ಓಡಿಸಿದ್ದಕ್ಕಾಗಿ ಕಾಲೇಜು ಹುಡುಗನೊಬ್ಬನನ್ನು ಟ್ರಾಫಿಕ್ ಪೋಲೀಸ್ ಹಿಡಿದುಕೊಂಡು ದಂಡ ವಸೂಲಿ ಮಾಡುತ್ತಿದ್ದಾನೆ. ಅವನ ಬೆನ್ನಿಗೆ ಕಚ್ಚಿಕುಳಿತ ಹುಡುಗಿ ಬೆಪ್ಪುತಕಡಿಯಂತೆ ಆ ಪೋಲೀಸನ ಟೋಪಿಯನ್ನೇ ನೋಡುತ್ತಿದ್ದಾಳೆ.

ಜೀಬ್ರಾಲೈನಿಗೆ ಸರಿಯಾಗಿ brake ಹೊಡೆದು ನಿಲ್ಲಿಸಿಕೊಂಡಿರುವ ಗಾಡಿಯಲ್ಲಿ ಕುಳಿತ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಅಭಿಜಿತ್ ತನ್ನ ಹೆಲ್ಮೆಟ್ಟಿನ ಕಿಟಕಿಯಿಂದಲೇ ರೋಡ್ ಕ್ರಾಸ್ ಮಾಡುತ್ತಿರುವ ಹುಡುಗಿಯನ್ನು ನೋಡುತ್ತಿದ್ದಾನೆ. ಕೊಳಕಾದ, ಹರುಕು ಅಂಗಿಯ, ಕೈಯಲ್ಲೊಂದು ದೇವರ ಫೋಟೋ ಹಿಡಿದು ದುಡ್ಡು ಕೇಳಲು ಬರುತ್ತಿರುವ ಹುಡುಗನನ್ನು ಕಂಡದ್ದೇ, ಹಸಿರು ಲಾನ್ಸರ್ ಕಾರಿನ ಕಿಟಕಿಯ ಅಪಾರದರ್ಶಕ ಗಾಜು ಮೇಲಕ್ಕೆ ಸರಿದಿದೆ.

ಬಿಎಂಟೀಸಿ ಬಸ್ಸಿನಲ್ಲಿ ಕುಳಿತ ಜನ ಆಕಳಿಸುತ್ತಾ ಕಿಟಿಕಿಯಾಚೆಗೆ ತಲೆಹಾಕಿ ಇನ್ನೂ ಎಷ್ಟು ಸೆಕೆಂಡು ಬಾಕಿಯಿದೆ ಅಂತ ನೋಡುತ್ತಿದ್ದಾರೆ. ಇನ್ನೇನು ಮುಗೀತಾ ಬಂತು; ಆಗಲೇ ನಲವತ್ತೊಂಬತ್ತು, ನಲವತ್ತೆಂಟು, ನಲವತ್ತೇಳು... ಇನ್ನು ಸ್ವಲ್ಪ ಹೊತ್ತು; ಬಸ್ಸು start ಆಗಿ ಬಿಡುತ್ತದೆ.

ಕೈನೆಟಿಕ್ಕಿನ ಹುಡುಗಿ ತನ್ನ ಕೊರಳಲ್ಲಿ ನೇತುಹಾಕಿಕೊಂಡಿರುವ ಮೊಬೈಲನ್ನು ಕೈಗೆತ್ತಿಕೊಂಡು 'missed call' ಯಾರದ್ದು ಅಂತ ನೋಡುತ್ತಿದ್ದಾಳೆ. ಮೊಳಕೈ ತುಂಬಾ ಯಾವ್ಯಾವುದೋ ವೃತ್ತಪತ್ರಿಕೆ, ವಾರಪತ್ರಿಕೆ, ಮ್ಯಾಗಜೀನುಗಳನ್ನು ಜೋಲಿಸಿಕೊಂಡ ಕುಡಿಮೀಸೆಯ ಯುವಕ ಕಾರಿನ ಕಿಟಕಿ, ಆಟೊರಿಕ್ಷಾಗಳ ಅಕ್ಕಪಕ್ಕ ಎಲ್ಲಾ ಓಡಾಡುತ್ತಿದ್ದಾನೆ. ಇನ್ನೊಂದು ಸ್ವಲ್ಪ ಹೊತ್ತಿಗೇ ಇವತ್ತಿನ 'ಸಂಜೆವಾಣಿ' ರಿಲೀಸ್ ಆಗುತ್ತದೆ. ಆಗ ಈ ಯುವಕ, ಕೈ ತುಂಬಾ ಸಂಜೆವಾಣಿಗಳನ್ನೇ ತುಂಬಿಕೊಂಡು, 'ಬಿಸಿ ಬಿಸೀ ಸುದ್ಧಿ...' ಅಂತ ಕೂಗುತ್ತಾ ಓಡಾಡುತ್ತಾನೆ. ಅದರಲ್ಲಿದ್ದುದು ಬಿಸೀ ಸುದ್ಧಿಯೇ ಆಗಿದ್ದಲ್ಲಿ ಇವತ್ತು ರಾತ್ರಿ ಅವನ ಹೊಟ್ಟೆಗೆ ಊಟ ಸಿಕ್ಕುತ್ತದೆ; ಅದಿಲ್ಲದಿದ್ದರೆ ಇಲ್ಲ.

ಸಿಗ್ನಲ್ಲು ಮುಗಿಯುತ್ತಿದೆ: ಅಗೋ, ಆಗಲೇ ಹದಿನೆಂಟು, ಹದಿನೇಳು.... ಉಹೂಂ, ಇನ್ನೂ ಪಾಪ್ ಮ್ಯೂಸಿಕ್ ಹಾಕಿಕೊಂಡು ಕಾರೊಳಗೆ ಕುಳಿತಿರುವ software engineerನ ಸಿಗರೇಟು ಮುಗಿದಿಲ್ಲ. ಅವನು ಬಿಟ್ಟ ಹೊಗೆ ಕಾರೊಳಗೆಲ್ಲಾ ತುಂಬಿಕೊಂಡಿದೆ.

ಅರೆ! ಸಿಗ್ನಲ್ಲು ಮುಗಿಯುತ್ತಿದೆ.. ಒಂಬತ್ತು, ಎಂಟು, ಏಳು... ಎಲ್ಲಾ ತಮ್ಮ ವೆಹಿಕಲ್ಲನ್ನು ಸ್ಟಾರ್ಟ್ ಮಾಡುತ್ತಿದ್ದಾರೆ.. ಇಲ್ಲ, 'ತಾಯಿಯ ಆಶೀರ್ವಾದ' ಎಂಬ ಬೋರ್ಡಿರುವ ಆಟೋ ಅದೇಕೋ ಸ್ಟಾರ್ಟೇ ಆಗುತ್ತಿಲ್ಲ. ಡ್ರೈವರು ಈಗ ಪುಳಕ್ಕನೆ ಕೆಳಗಿಳಿದು, ಹಿಂದೆ ಬಂದು, ಅಡಿಷನಲ್ ಸಿಲಿಂಡರಿಗೆ ಕನೆಕ್ಟ್ ಮಾಡುತ್ತಿದ್ದಾನೆ. ಅಗೋ ಸಿಗ್ನಲ್ಲು ಮುಗಿಯಿತು.. ಎರಡು, ಒಂದು, ಸೊನ್ನೆ..... ಆಟೋ ಸ್ಟಾರ್ಟ್ ಆಗುತ್ತಿದೆ.. ಹಿಂದಿನಿಂದ ಒಂದೇ ಸಮನೆ ಹಾರನ್ನುಗಳ ಶಬ್ದ ಕೇಳಿಬರುತ್ತಿದೆ. ಅಬ್ಬ, ಆಟೋ ಹೊರಟಿತು. ಅದರ ಹಿಂದಿನಿಂದಲೇ, ಕಾಮತ್ತರ ಗಾಡಿಯೂ ಸೇರಿದಂತೆ, ಒಂದೊಂದೇ ವೆಹಿಕಲ್ಲುಗಳು ಭರಭರನೆ ಓಡಹತ್ತಿವೆ: ಬಿಡುಗಡೆಯ ಖುಷಿಯಲ್ಲಿ.

(ಬರೆದದ್ದು: ೨೬.೦೯.೨೦೦೪)

Saturday, September 02, 2006

ಕಾಣೆಯಾದವರ ಪಟ್ಟಿಯಲ್ಲಿ ನಾನು!

ಗೆಳತಿ ನಿಮ್ಮಿ ಬರೆದುಕೊಟ್ಟ ಆಟೋಗ್ರಾಫಿನ ಕೊನೆಯ ಸೆಂಟೆನ್ಸುಗಳು ಹೀಗಿದ್ದವು:

"Be a good human, be a good student, be a good son, be a good husband, be a good father, be a good citizen... then only your life is worth living"

ಇವು ಕೇವಲ ಆಟೋಗ್ರಾಫ್ ಆಗಿರದೆ, ನನಗೆ ಕೊಡುವ advise ಆಗಿರದೆ, ನೇರವಾಗಿ ನನ್ನ roleಗಳ ಬಗ್ಗೆ ನನಗೇ ಪರಿಚಯ ಮಾಡಿಕೊಡುವ ಪ್ರಯತ್ನವೂ ಆಗಿತ್ತು ಅಂತ ಅನ್ನಿಸೊತ್ತೆ.

ನಿಜ, ನಾವೆಲ್ಲಾ ಬದುಕುವ ಒಂದೇ ಒಂದು ಬದುಕಿನಲ್ಲಿ ಎಷ್ಟೆಲ್ಲಾ ಪಾತ್ರಗಳನ್ನು ನಿರ್ವಹಿಸುತ್ತೇವೆ! ಅಪ್ಪನಿಗೆ ಮಗ, ಅಜ್ಜಿಗೆ ಮೊಮ್ಮಗ, ಮಾವನಿಗೆ ಅಳಿಯ, ಮಾವನ ಮಗಳಿಗೆ ಭಾವಯ್ಯ, ಹೆಂಡತಿಗೆ ಗಂಡ, ಮಗನಿಗೆ ಅಪ್ಪ, ಮೊಮ್ಮಗನಿಗೆ ಅಜ್ಜ! ಊರ ಜನರಿಗೆ ಗ್ರಾಮಸ್ಥ, ಬೇರೆ ಊರಿಗೆ ಹೋದರೆ ನೆಂಟ, ಹೊಸ ಊರಿಗೆ ಹೋದರೆ ಅತಿಥಿ, ಆಫೀಸಿನಲ್ಲಿ ಮ್ಯಾನೇಜರ್ರು, ಆಳಿಗೆ ಯಜಮಾನ, ಅಂಗಡಿಯವನಿಗೆ ಕಸ್ಟಮರ್ರು.... ಹೀಗೇ.

ಈಗ ನನ್ನನ್ನೇ ತೆಗೆದುಕೊಳ್ಳಿ: ಅಪ್ಪ 'ಪಾಪು' ಅನ್ನುತ್ತಾನೆ, ಅಮ್ಮ 'ಅಪ್ಪಿ' ಅನ್ನುತ್ತಾಳೆ, ಮಾವ 'ಗುಂಡ' ಅನ್ನುತ್ತಾನೆ, ಊರ ಹುಡುಗರೆಲ್ಲ 'ಸೂರು' ಅನ್ನುತ್ತಾರೆ, ಪ್ರೀತಿಯ ಕೆಲವು ಗೆಳೆಯರು 'ಸುಶಿ' ಅನ್ನುತ್ತಾರೆ, ಆಫೀಸಿನಲ್ಲಿ ನಾನು 'ಮಿಸ್ಟರ್ ಸುಶ್ರುತ್', ಆಫೀಸಿಗೆ ಬರುವ client ಗಳಿಗೆ 'ಸರ್'!

ಇಷ್ಟೆಲ್ಲಾ designationಗಳ ಮಧ್ಯೆ 'ನಾನು' ಕಳೆದುಹೋಗಿದ್ದೇನೇನೋ ಅಂತ ಒಮ್ಮೊಮ್ಮೆ ಭಯವಾಗುತ್ತದೆ. ಇವುಗಳೆಲ್ಲದರ ಮಧ್ಯೆ 'ನಾನು' ಯಾರು ಎಂಬ ಪ್ರಶ್ನೆ ಒಮ್ಮೊಮ್ಮೆ ಎದ್ದುಬಿಡುತ್ತದೆ. ಅಥವಾ ಇವೆಲ್ಲವೂ ಸೇರಿದರೇ ನಾನಾ? ಹಾಗೆನಿಲ್ಲ; ಇದರಲ್ಲಿ ಒಂದೆರಡು ಪಾತ್ರಗಳನ್ನು ತೆಗೆದರೂ ನಾನು ನಾನಾಗೇ ಇರುತ್ತೇನಲ್ಲಾ, ಎಲ್ಲವನ್ನೂ ತೆಗೆದರೂ.... ಅರೆ! ಹಾಗಾದರೆ ನಾನೆಲ್ಲಿ?

'ನಾನು' ಯಾರು?