Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Monday, July 14, 2008

ಕೀಟಾಣೂ, ಐ ಲವ್ ಯೂ!

ತಿಂಗಳು ಜೂನಿಗೆ ಕಾಲಿಡುತ್ತಿದ್ದ ಕಾಲ. ಬಂದ ಸಣ್ಣಮಳೆಯೊಂದು ಚಳಿಗೆ 'ಕೋ' ಕೊಟ್ಟು ಪರಾರಿಯಾಗಿತ್ತು. ಗಾಳಿಯೊಂದಿಗೆ ಸೇರಿಕೊಂಡ ಆ ಚಳಿ ನಮ್ಮನ್ನು ರ್‍ಯಾಗಿಂಗ್ ಮಾಡುತ್ತಿತ್ತು. ಸಂಜೆ ಏಳರ ಹೊತ್ತಿಗೆ ಆಫೀಸಿನಿಂದ ಬಂದ ನಾನೂ ನನ್ನ ರೂಂಮೇಟೂ ಪ್ಲಾಸ್ಟಿಕ್ ಕಪ್ಪಿನಲ್ಲಿ ಬೈಟೂ ಟೀ ಕುಡಿಯುತ್ತಾ, ‘ಅಂಬೊಡೆ’ ಎಂದು ರೋಡ್‌ಸೈಡ್ ಅಂಗಡಿಯವನು ಬಾಣಲಿಯಿಂದ ಎತ್ತಿಕೊಟ್ಟ ಗಟ್ಟಿಮುಟ್ಟಾದ ಬಿಸಿಬಿಸಿ ಪದಾರ್ಥವನ್ನು ಉಫು‌ಉಫು ಮಾಡಿಕೊಂಡು ಬಾಯೊಳಗಿಟ್ಟುಕೊಂಡು ಚಳಿಗೆ ಬುದ್ಧಿ ಕಲಿಸಿದ ಖುಶಿಯಲ್ಲಿ ಹಿಗ್ಗುತ್ತಿದ್ದೆವು.

ಅಂಬೊಡೆಯ ಖಾರಕ್ಕೆ ಬಾಯಿ ಸೆಳೆದುಕೊಳ್ಳುತ್ತಾ ರೂಂಮೇಟು “ದೋಸ್ತಾ, ಈ ಚಳೀಲಿ ಬಿಸಿಬಿಸಿ ಕರಿದ ಪದಾರ್ಥ ತಿನ್ನೋಕಿಂತ ಸುಖ ಪ್ರಪಂಚದಲ್ಲಿ ಮತ್ತಿನ್ನೇನೂ ಇಲ್ಲ ನೋಡು!” ಎಂದ. ಅವನು ಹಾಗೆ ಹೇಳುವುದರ ಮೂಲಕ ಮತ್ತೆರಡು ಅಂಬೊಡೆ ಆರ್ಡರ್ ಮಾಡುವುದಕ್ಕೆ ಪೀಠಿಕೆ ಹಾಕುತ್ತಿದ್ದಾನೆ ಎಂಬುದು ನನಗೆ ತಕ್ಷಣ ಹೊಳೆದರೂ “ಕರೆಕ್ಟ್ ಹೇಳ್ದೆ ನೋಡು” ಎಂದು ತಲೆಯಾಡಿಸಿದೆ. ಮತ್ತೆ, ಅಂಬೊಡೆ ರುಚಿರುಚಿಯಾಗಿತ್ತು. ಅಲ್ಲದೇ ಆ ಅಂಬೊಡೆ ಕರಿಯುತ್ತಿದ್ದ ದೊಡ್ಡ ಬಾಣಲಿಯ ಸುತ್ತಲಿನ ಸುಮಾರು ಜಾಗ ಬೆಚ್ಚಬೆಚ್ಚಗಿತ್ತು. ಆದರೂ ಉಳಿದಿದ್ದ ಚೂರುಪಾರು ಚಳಿಯನ್ನು ಓಡಿಸಲೆಂದು ರಸ್ತೆಯಲ್ಲಿ ಇಬ್ಬರು ಟೈಟ್ ಜೀನ್ಸಿನ ಹುಡುಗಿಯರು ಪಾಸಾಗುತ್ತಿದ್ದರು. ಹೀಗಾಗಿ ಚಳಿ, ಇನ್ನು ಇವರ ಬಳಿ ತನ್ನ ಆಟ ನಡೆಯುವುದಿಲ್ಲ ಎಂದರಿತು ಕಾಲಿಗೆ ಬುದ್ಧಿ ಹೇಳಲು ರೆಡಿಯಾಗಿತ್ತು.

ಚುಳ್ಳನೆ ನೋವಾಯಿತು. ಎಲ್ಲಿ ಅಂತ ಮೊದಲು ಗೊತ್ತಾದದ್ದು ಬಹುಶಃ ಕೈಗೆ. ಅದು ಹೋಗಿ ಗದ್ದವನ್ನು ಹಿಡಿದುಕೊಂಡಿತು. ಮುಖದ ಎಕ್ಸ್‌ಪ್ರೆಶನ್ನೂ ಬದಲಾಯಿತಿರಬೇಕು, ರೂಂಮೇಟು “ಏನಾಯ್ತೋ?” ಎಂದ. “ಹಲ್ಲು..” ಎಂದೆ. ಅವನಿಗೆ ವಿಷಯ ವಿಷದವಾಯಿತು. “ಮಗನೇ ಆ ಹಲ್ಲು ಹೋಗಿದೆ, ಡಾಕ್ಟರ್ ಹತ್ರ ತೋರಿಸ್ಕೊಂಡು ಬಾ ಅಂತ ಬಡ್ಕೋತಿದೀನಿ ಒಂದು ತಿಂಗ್ಳಿಂದ, ನೀನು ಹೋಗ್ಬೇಡ! ನೋಡು ಈಗ, ನೋವು ಬಂತು ಅನ್ಸುತ್ತೆ” ಬೈದ. ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು. “ಸಾಕು ಬಾ ಹೋಗೋಣ” ಎಂದು, ಅಂಗಡಿಯವನಿಗೆ ದುಡ್ಡು, ಕರುಣಾಜನಕ ಸ್ಥಿತಿಯಲ್ಲಿದ್ದ ನನ್ನನ್ನು ಕರೆದುಕೊಂಡು ಮನೆಕಡೆ ಹೊರಟ.

ನಾನು ಯಾವಾಗಲೂ ಹಾಗೇ. ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ. ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ. ನನಗೇ ಗೊತ್ತಿರುವ ಮಾತ್ರೆಗಳನ್ನು ತಿಂದುಕೊಂಡು ಹಾಯಾಗಿರುತ್ತೇನೆ. ಅಲ್ಲಿಗೆ ಹೋದಕೂಡಲೇ, ಏನೋ ಪುರುಸೊತ್ತು ಮಾಡಿಕೊಂಡು ಬಂದಿದ್ದಾರೆ ಪಾಪ ಅನ್ನುವ ಕರುಣೆಯನ್ನೂ ತೋರದೇ, ನೂರಾರು ಅಪರಿಚಿತ ಖಾಯಿಲೆಗಳ ಹೆಸರು ಹೇಳಿ ಹೆದರಿಸಿ, ‘ಹೀಗೆ ಮಾಡಿಸಿ, ಹಾಗೆ ಮಾಡಿಸಿ, ಅದಿಲ್ಲಾಂದ್ರೆ ಮುಂದೆ ತೊಂದ್ರೆ ಆಗತ್ತೆ’ ಅಂತೆಲ್ಲಾ ಹೇಳಿ, ದುಡ್ಡು ವಸೂಲಿ ಮಾಡುವ ಡಾಕ್ಟರನ್ನು ಕಂಡರೆ ಯಾರಿಗೇ ತಾನೇ ಇಷ್ಟವಾಗತ್ತೆ ಹೇಳಿ? ಆದರೂ ‘ಇಷ್ಟ’ ಪಡಬೇಕಾಗುವಂತಹ ಸಂದರ್ಭ ಸಧ್ಯದಲ್ಲೇ ನನಗೆ ಬರಲಿತ್ತು!

ಮನೆಗೆ ಬಂದವನೇ ನನಗೆ ಈ ಪರಿ ನೋವುಂಟು ಮಾಡುತ್ತಿರುವ ಹಲ್ಯಾವುದು ಅಂತ ಕನ್ನಡಿಯಲ್ಲಿ ನೋಡಿಕೊಂಡೆ. ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್‌ಹೋಲ್‌ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು. ‘ಸಧ್ಯಕ್ಕಿರಲಿ’ ಅಂತ ಒಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿದವನೇ ನಾಳೆ ದಂತವೈದ್ಯರನ್ನು ಕಾಣುವುದೇ ಸೈ ಅಂತ ನಿರ್ಧರಿಸಿದೆ. ರೂಂಮೇಟಿಗೂ ಹೇಳಿದೆ. ಅವನು ‘ಗುಡ್ ಗುಡ್’ ಅಂದ. ಕಷ್ಟ ಪಟ್ಟು ಊಟ ಮಾಡಿ ಮಲಗಿದೆ. ನೋವಿನ ಮಧ್ಯೆಯೇ ಚೂರುಪಾರು ನಿದ್ರೆ.

* *

ಮರುದಿನ. ಆಫೀಸಿನಿಂದ ಬರುತ್ತಿದ್ದೇನೆ. ಪ್ಲಸ್ ಚಿಹ್ನೆಯ ಪಕ್ಕದ ‘ಡೆಂಟಲ್ ಕ್ಲಿನಿಕ್’ ಎಂಬ ಕೆಂಪಕ್ಷರದ ಬೋರ್ಡು ಕಂಡದ್ದೇ ಬೈಕು ನಿಲಿ ಸಿ ಒಳನುಗ್ಗಿದೆ. “ಕನ್ಸಲ್ಟೇಶನ್ನಾ ಸರ್?” ಎಂದು ತನ್ನ ಮೃದುವಾದ ದನಿಯಲ್ಲಿ ಕೇಳಿದ ರಿಸೆಪ್ಷನಿಸ್ಟು, ಒಂದು ರಿಜಿಸ್ಟರಿನಲ್ಲಿ ನನ್ನ ಹೆಸರು ನಮೂದಿಸಿಕೊಂಡು, ಕಾಯಲು ಹೇಳಿದಳು. ಸೋಫಾದಲ್ಲಿ ಕೂತು, ಟೀಪಾಯಿಯ ಮೇಲಿದ್ದ ಯಾವುದೋ ಮ್ಯಾಗಜೀನೆತ್ತಿಕೊಂಡು ಚಿತ್ರಗಳನ್ನು ನೋಡತೊಡಗಿದೆ. ನಿಶ್ಯಬ್ದ. ಆಸ್ಪತ್ರೆಯ ವಾಸನೆ. ಹತ್ತು ನಿಮಿಷದ ನಂತರ ನನಗೆ ಕರೆ ಬಂತು. ‘ಪುಶ್ ಮಿ’ ಡೋರು ತಳ್ಳಿಕೊಂಡು ಒಳಗೆ ಹೋದೆ.

ಏನನ್ನೋ ಬರೆಯುತ್ತ ಖುರ್ಚಿಯಲ್ಲಿ ಕೂತ್ತಿದ್ದ ಡಾಕ್ಟರು ತಲೆಯಿತ್ತಿದರು. ಹೇಳ್ತೀನಲ್ಲ, ಹುಡುಗಿಯರು ಅಷ್ಟೊಂದು ಚೆನ್ನಾಗಿ ಇರಬಾರದು. ಅವನೆಂಥಾ ಹುಡುಗನೇ ಇರಲೀರಿ, ಮೊದಲ ನೋಟಕ್ಕೇ, ನಾನು ಹೇಳ್ತೀನಲ್ಲ, ಮೊದಲ ನೋಟಕ್ಕೇ ಬಿದ್ದು ಹೋಗ್ಬೇಕು, ಅಷ್ಟು ಚೆನ್ನಾಗಿದ್ದರು ಆ ಡಾಕ್ಟರು. ಈ ಬೆಳದಿಂಗಳ ರಾತ್ರೀಲಿ ದೇವತೆಯೊಬ್ಬಳು ನಮ್ಮೆಡೆಗೇ ನಡೆದು ಬಂದಹಾಗೆ ನಮಗೆ ಆಗಾಗ ಕನಸು ಬೀಳುತ್ತೆ ನೋಡಿ, ಹಾಂ, ಆ ದೇವತೆಯ ಹಾಗಿದ್ದರು ಡಾಕ್ಟರು. ಬಾಬ್ ಮಾಡಿದ, ನನ್ನ ಹಲ್ಲಿನ ಬಣ್ಣದ್ದೇ ಕೂದಲು. ಪುಟ್ಟ ಫ್ರೇಮಿಲ್ಲದ ಕನ್ನಡಕ. ಅದರ ಹಿಂದೆ ಕೂದಲಿಗಿಂತ ಕಪ್ಪು ಬಣ್ಣದ ಪಿಳಿಪಿಳಿ ಕಣ್ಗಳು. ಪುಟ್ಟ ಮೂಗು. ಯು ನೋ, ಮುದ್ದು ಬರಬೇಕು, ಹಾಗೆ ಪುಟ್ಟ ಮೂಗು. ತುಟೀನಂತೂ ಕೇಳಲೇಬೇಡಿ. ನಾನು ಒಂದು ಕ್ಷಣ ಹಾಗೇ ನಿಂತುಬಿಟ್ಟೆ. ಡಾಕ್ಟರು ಮುಗುಳ್ನಕ್ಕರು. ನಾನು ಎಚ್ಚೆತ್ತುಕೊಂಡು ಮುಂದೆ ನಡೆದು, ‘ಹಲೋ ಡಾಕ್ಟರ್’ ಅಂತ ಕೈ ಚಾಚಿದೆ. ಮುಗುಳ್ನಗೆಗೆ ಮತ್ತಷ್ಟು ಪರ್ಸೆಂಟ್ ಸೇರಿಸಿ, ಮತ್ತಷ್ಟು ಚಂದ ಚಂದ ಕಾಣುತ್ತಾ, ಅವರೂ ‘ಹಲೋ’ ಅಂದು ಕೈ ಕುಲುಕಿದರು. ಆಹ್, ಈ ಡಾಕ್ಟರ ದನಿಯೂ ಎಷ್ಟು ಇನಿ..! ನಕ್ಕಾಗ ಕಂಡ ಅವರ ಹಲ್ಲನ್ನೂ ಗಮನಿಸಿದೆ. ಬಹುಶಃ ದಂತವೈದ್ಯರಾಗಲು ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅನಿಸೊತ್ತೆ- ಅವರ ಹಲ್ಲನ್ನು ಹುಣ್ಣಿಮೆ ಚಂದ್ರ ನೋಡಿದರೆ ಅವಮಾನಗೊಂಡು ನಾಳೆಯೇ ಅಮಾವಾಸ್ಯೆ ಘೋಷಿಸಬೇಕು -ಅಷ್ಟು ಬೆಳ್ಳಗಿದ್ದವು ಅವು. ಮತ್ತೆ ಕುಲುಕಿದ ಆ ಹಸ್ತ ಅದೆಷ್ಟು ಮೃದುವಾಗಿತ್ತು ಅಂದ್ರೆ, ಛೇ, ಹೋಗ್ಲಿ ಬಿಡಿ.

“ಸೋ, ವ್ಹಾಟೀಸ್ ಯುವರ್ ಪ್ರಾಬ್ಲಮ್?” ಕೇಳಿದರು. ಇಷ್ಟೊಂದು ಚಂದದ ಹುಡುಗಿಯೆದುರು ನನ್ನ ಪ್ರಾಬ್ಲಮ್ಸ್ ಹೇಳಿಕೊಳ್ಳುವುದು, ಬಾಯಿಬಿಟ್ಟು ನನ್ನ ಕೆಟ್ಟ ದಂತಪಂಕ್ತಿಯನ್ನು ತೋರಿಸುವುದು ನನಗೆ ಸರಿಯೆನಿಸಲಿಲ್ಲ. ಅವಮಾನವೆನಿಸಿತು. ಸಣ್ಣವನಿದ್ದಾಗ ಅಷ್ಟೊಂದು ಚಾಕ್ಲೇಟ್ ತಿನ್ನಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟುಕೊಂಡೆ. ಆದರೂ ಡಾಕ್ಟರು ಹಾಗೆ ಕೇಳುತ್ತಿರುವಾಗ ಏನು ಸುಳ್ಳು ಹೇಳುವುದು ಅಂತ ಹೊಳೆಯದೇ ನನ್ನ ಪ್ರಾಬ್ಲಮ್ಮುಗಳನ್ನೆಲ್ಲ ಹೇಳಿಕೊಂಡೆ. ಮತ್ತೆ ಮುಗುಳ್ನಕ್ಕ ಡಾಕ್ಟರು, “ಫೈನ್, ಕಮ್ ವಿತ್ ಮಿ. ಐ ವಿಲ್ ಚೆಕ್ ಇಟ್” ಎನ್ನುತ್ತಾ ನನ್ನನ್ನು ಒಳಗಡೆಗೆ ಕರೆದೊಯ್ದದು.

ಈ ಸಿನಿಮಾಗಳಲ್ಲಿ ತೋರಿಸುತ್ತಾರಲ್ಲ, ಆಪರೇಶನ್ ಥಿಯೇಟರ್, ಹಾಗಿದ್ದ ಕೋಣೆ. ಮಂಚದಂತಿದ್ದ ಖುರ್ಚಿಯನ್ನು ತೋರಿಸುತ್ತಾ, “ಪ್ಲೀಸ್ ಸಿಟ್” ಎಂದರು ಡಾಕ್ಟರು. ಸೆಲೂನಿನಲ್ಲಿ ಬಿಟ್ಟರೆ ಇಷ್ಟೊಳ್ಳೆ ಖುರ್ಚಿ ಇರುವುದು ದಂತವೈದ್ಯರಲ್ಲೇ ಇರಬೇಕು. ಈ ಖುರ್ಚಿಯಲ್ಲ್ಲಿ ಕೂತು ಒರಗಲು ನೋಡಿದರೆ ಇದು ನನ್ನನ್ನು ಮಲಗಿಸಿಕೊಂಡುಬಿಟ್ಟಿತು. ಇದಕ್ಕೆ ಅನೇಕ ಬಾಹುಗಳಿದ್ದವು. ಅವನ್ನೆಲ್ಲಾ ಡಾಕ್ಟರು ತಮ್ಮ ಕಡೆ ಎಳೆದುಕೊಂಡರು. ಮೇಲ್ಗಡೆ ಕೈಯಾಡಿಸಿ ಟಕ್ಕೆಂದು ಒಂದು ಸ್ವಿಚ್ಚದುಮಿದ್ದೇ ಲೈಟೊಂದು ಆನಾಗಿ ನನ್ನ ಕಣ್ಣಿಗೆ ಕುಕ್ಕಲಾರಂಭಿಸಿತು. ನಾನು ತಲೆ ಸರಿಸಿ ಡಾಕ್ಟರನ್ನೇ ನೋಡತೊಡಗಿದೆ. ಅವರೀಗ ತಮ್ಮ ಮೂಗು, ಬಾಯಿ ಮುಚ್ಚುವಂತೆ ಮಫ್ಲರಿನಂತಹ ಹಸಿರು ಬಟ್ಟೆಯೊಂದನ್ನು ಕಟ್ಟಿಕೊಂಡರು. ನನಗೀಗ ಅತೀವ ಅವಮಾನವಾಯಿತು.

ಹುಡುಗಿಯೊಬ್ಬಳು, ಅದರಲ್ಲೂ ಚಂದದ ಹುಡುಗಿಯೊಬ್ಬಳು, ನಾನು ಪ್ರಪೋಸ್ ಮಾಡಲಾ ಅಂತ ಯೋಚಿಸುತ್ತಿರುವವಳು, ನನ್ನೆಡೆಗೆ ಬಗ್ಗಿ, ನನ್ನನ್ನು ಮುಟ್ಟುವಂತಹ ಸಂದರ್ಭ... ಆಗ ಅವಳು ಈ ಹುಡುಗನ ಬಾಯಿಯಿಂದ ದುರ್ವಾಸನೆ ಬರಬಹುದೆಂದು ಬಗೆದು, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುವುದೆಂದರೆ... ಛೇ! ಹೀಗೇಂತ ಗೊತ್ತಿದ್ದರೆ ನಾನು ಮತ್ತೊಮ್ಮೆ ಬ್ರಶ್ ಮಾಡಿಕೊಂಡೇ ಬರುತ್ತಿರಲಿಲ್ಲವಾ ಕ್ಲಿನಿಕ್ಕಿಗೆ? “ಓಪನ್ ಯುವರ್ ಮೌತ್.. ಆ...” ಡಾಕ್ಟರು ನಿರ್ದೇಶಿಸಿದರು. ಎಲ್ಲ ಅವಮಾನಗಳನ್ನೂ ನುಂಗಿಕೊಂಡು, ಬ್ರಹ್ಮಾಂಡ ತೋರಿಸಲು ಅಣಿಯಾಗಿ ನಾನು ಬಾಯಿ ತೆರೆದೆ. ಲೈಟು ಸರಿಹೊಂದಿಸಿಕೊಂಡರು. ಟಿಣ್ ಟಿಣ್ ಶಬ್ದ ಮಾಡುತ್ತಾ ತಟ್ಟೆಯಲ್ಲಿದ್ದ ಅದ್ಯಾವುದೋ ಸ್ಟೀಲಿನ ಹತಾರವೊಂದನ್ನು ಹುಡುಕಿ ಹಿಡಿದು ನನ್ನೆಡೆಗೆ ಬಗ್ಗಿದರು. ನನ್ನ ಮುಖವನ್ನು ತಮ್ಮ ಎಡಗೈಯಲ್ಲಿ, ನಾನು ಬಾಯಿ ಮುಚ್ಚಲಾಗದಂತೆ ಹಿಡಿದುಕೊಂಡರು. ಸ್ಟೀಲಿನ ಉಪಕರಣವನ್ನು ನನ್ನ ಬಾಯೊಳಗೆ ಹಾಕಿ ಜಾಲಾಡಿದರು. ಒಂದೆರಡು ಹಲ್ಲಿಗೆ ಬಡಿದರು. ಕುಕ್ಕಿದರು. “ಓಹ್! ದೇರಾರ್ ಸೋ ಮೆನಿ ಡಿಕೇಸ್!” ಉದ್ಘರಿಸಿದರು. ನಾನು ಡಾಕ್ಟರ ಕನ್ನಡಕದ ಹಿಂದಿನ ಕಣ್ಣನ್ನೇ ನೋಡುತ್ತಿದ್ದೆ. ಮತ್ತೆ, ಅವರ ಕೆನ್ನೆ. ಈ ಪಾಲಿಶ್ ಮಾಡಿದ ಅಮೃತಶಿಲೆ ಇರುತ್ತಲ್ಲ, ಅಷ್ಟು ನುಣುಪಾಗಿತ್ತು ಅದು. ಕುಂಚದಿಂದ ಬರೆದಂತಹ ಕಡುಗಪ್ಪು ಹುಬ್ಬುಗಳ ಮಧ್ಯದಲ್ಲೊಂದು ಕಂಡೂ ಕಾಣದಷ್ಟು ಸಣ್ಣ ಕಪ್ಪು ಸ್ಟಿಕರ್. ಅವರು ಮಾತಾಡುವಾಗ ಅವರ ಮಿತಪಾರದರ್ಶಕ ಹಸಿರು ಬಟ್ಟೆಯ ಹಿಂದಿನ ತುಟಿಗಳು ಊಂ, ಚಂದ ಕಾಣುತ್ತಿದ್ದವು. ‘ಹೀಗೇ ನೀವು ನನ್ನ ಪಕ್ಕದಲ್ಲಿ, ಇಷ್ಟು ಹತ್ತಿರದಲ್ಲಿ ನಿಂತಿರ್ತೀರಾ ಅಂದ್ರೆ ಮೂವತ್ತೆರಡೂ ಹಲ್ಲು ಹಾಳು ಮಾಡಿಕೊಂಡು ಬರ್ತೀನಿ ಡಾಕ್ಟ್ರೇ’ ಅಂತ ಮನಸಿನಲ್ಲೇ ಹೇಳಿಕೊಂಡೆ. ಆದರೆ “ಓಹ್..” “ಟೂ ಬ್ಯಾಡ್..” “ಈವನ್ ದಿಸ್ ಟೀತ್” ಎಂದೆಲ್ಲ ಅವರು ಉದ್ಘರಿಸುವಾಗ ಕಟುವಾಸ್ತವ ನೆನಪಾಗಿ, ನನಗಾಗುತ್ತಿದ್ದ ಅವಮಾನವನ್ನು ಹೀಗೆ ಬಾಯಿ ಕಳೆದುಕೊಂಡು ವ್ಯಕ್ತಪಡಿಸುವುದು ಹೇಗೆಂದು ತಿಳಿಯದೇ, ಒದ್ದಾಡಿದೆ. ಸುಮಾರು ಐದು ನಿಮಿಷದ ನಂತರ, “ಓಕೆ. ಗೆಟಪ್” ಎಂದು ಹೇಳಿ, ಅಂತೂ ಆ ಸುಖಾಸನದಿಂದ ನನ್ನನ್ನೆಬ್ಬಿಸಿದರು.

ನನ್ನ ಊಹೆಯ ಪ್ರಕಾರ ಈ ಡಾಕ್ಟರುಗಳ ಹೃದಯ ತುಂಬಾ ಗಟ್ಟಿಯಿರುತ್ತದೆ. ಅಥವಾ ಅವರಿಗೆ ಹೃದಯವೇ ಇರುವುದಿಲ್ಲ. ಅವರು ಯಾರ ಮೈಯ ಯಾವ ಭಾಗವನ್ನು ಬೇಕಾದರೂ ಕತ್ತರಿಸಬಲ್ಲರು. ಅವರಿಗೆ ತರಕಾರಿಯೂ ಒಂದೇ ಮನುಷ್ಯರೂ ಒಂದೇ. ಎಲ್ಲಿಗೆ ಬೇಕಾದರೂ ಹೊಲಿಗೆ ಹಾಕಬಲ್ಲರು. ಅವರು ಏನಕ್ಕೂ ಅಂಜುವುದಿಲ್ಲ. ಸುಲಭಕ್ಕೆಲ್ಲ ಪೆಗ್ಗು ಬೀಳುವುದಿಲ್ಲ. ಮರುಳಾಗುವುದಿಲ್ಲ. ಮೃದುವಾಗುವುದಿಲ್ಲ. ಅವರಿಗೆ ತಮ್ಮದೇ ಆದ ಸ್ಪಷ್ಟ ನಿಲುವುಗಳಿರುತ್ತವೆ. ತುಂಬಾ ಗಂಭೀರ ಸ್ವಭಾವದವರು. ಹಾಗಿದ್ದಾಗ, ಸೀ, ಈಗ ಇವಳ ಮೇಲಂತೂ ನನಗೆ ಪ್ರೀತಿಯಾಗಿಬಿಟ್ಟಿದೆ, ಇನ್ನು ಒಲಿಸಿಕೊಳ್ಳುವುದು ಹೇಗೆ? ನಾನು ಚಿಂತೆಗೆ ಬಿದ್ದೆ. ನಾನು ಕ್ಲಿನಿಕ್ಕಿಗೆ ಹೊಕ್ಕ ಕ್ಷಣದಿಂದಲೂ ಇವಳ ಕಣ್ಣಿನಲ್ಲಿ ಅವಮಾನಿತ ಬೇರೆ. ನಾನು ಇವಳಿಗೆ ಒಬ್ಬ ಪೇಶೆಂಟು ಅಷ್ಟೇ. ಹಲ್ಲನ್ನೆಲ್ಲಾ ಹುಳುಕು ಹಿಡಿಸಿಕೊಂಡಿರುವ ಒಬ್ಬ ಬಾಯ್ಕುರೂಪಿ. ನನ್ನ ಪ್ರೀತಿಯನ್ನು ಇವಳು ಒಪ್ಪಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ. ಇವಳೇನಾದರೂ ಪ್ರೀತಿಸಿದರೆ ಎಲ್ಲಾ ಮೂವತ್ತೆರಡೂ ಹಲ್ಲೂ ಸರಿಯಿರುವ, ಫಳಫಳನೆ ಹೊಳೆಯುವಂತಿರುವ, ದಿನಕ್ಕೆ ಕನಿಷ್ಟ ಐವತ್ತು ಸಲ ಬ್ರಶ್ ಮಾಡುವ ಹುಡುಗನನ್ನೇ ಪ್ರೀತಿಸುತ್ತಾಳೆ. ಬಹುಶಃ ಕೋಲ್ಗೇಟ್ ಕಂಪನಿ ಓನರ್ರಿನ ಮಗನನ್ನೇ ಮದುವೆಯಾಗಬಹುದು. ಗ್ಯಾರೆಂಟಿ. ನೋ ಡೌಟು.

ಡಾಕ್ಟರು ನನ್ನನ್ನು ಮತ್ತೆ ತಮ್ಮ ಛೇಂಬರಿಗೆ ಕರೆದೊಯ್ದರು. ತಮ್ಮ ಡ್ರಾವರಿನಿಂದ ಪುಸ್ತಕವೊಂದನ್ನು ಹೊರತೆಗೆದು ಬರೆದುಕೊಳ್ಳತೊಡಗಿದರು:

“ಯುವರ್ ನೇಮ್?”
“ಸುಶ್ರುತ”
“ಸುಶ್ರುತ? ಓಹ್.. ಇಫ್ ಯು ಡೋಂಟ್ ಮೈಂಡ್, ಕ್ಯಾನೈ ಆಸ್ಕ್ ಯೂ ಸಮ್‌ಥಿಂಗ್? ಯೂ ಆರ್ ದಿ ಸೇಮ್ ಸುಶ್ರುತ ಹೂ ರೈಟ್ ಇನ್ ಬ್ಲಾಗ್ಸ್? ಸುಶ್ರುತ ದೊಡ್ಡೇರಿ?”
“ಯೆಸ್! ನಾನೇ!” ಇಷ್ಟಗಲ ಕಣ್ಣು ಬಿಡುತ್ತಾ ನಾನು ಹೇಳಿದೆ.
“ಓಹ್! ನಾನು ನಿಮ್ಮ ಬ್ಲಾಗಿನ ದೊಡ್ಡ ಫ್ಯಾನು! ವೆರಿ ನೈಸ್ ಮೀಟಿಂಗ್ ಯೂ! ತುಂಬಾ ಚನಾಗ್ ಬರೀತೀರಾ ನೀವು..”, ಖುರ್ಚಿಯಲ್ಲಿ ಕೂತಿರಲಾಗದೇ ಜಿಗಿದಾಡುತ್ತಾ ಹೇಳಿದಳು, “ಐ ಯಾಮ್ ಸೋ ಎಕ್ಸೈಟೆಡ್!”
ನಾನೂ ಅದೇ ಆಗಿದ್ದೆ. “ಓಹ್ ಥ್ಯಾಂಕ್ಯೂ ವೆರಿ ಮಚ್! ಥ್ಯಾಂಕ್ಯೂ..!” ಏನು ಹೇಳುವುದು ಅಂತಲೇ ಗೊತ್ತಾಗದೇ ಒದ್ದಾಡಿದೆ.
“ನಿಮ್ಮ ರೀಸೆಂಟ್ ಆರ್ಟಿಕಲ್.. ..” ಅವಳು ಇನ್ನೂ ಏನೇನೋ ಹೇಳತೊಡಗಿದಳು. ನಾನಾಗಲೇ ಆಕಾಶದಲ್ಲಿದ್ದೆ.

ನೋಡಿ, ನಾನು ಈ ಅದೃಷ್ಟ ಪಿದೃಷ್ಟಗಳನ್ನೆಲ್ಲಾ ಯಾವಾಗಲೂ ನಂಬಿದವನಲ್ಲ. ಆದರೂ ಕೆಲವೊಮ್ಮೆ ನಂಬುವಂತಾಗುತ್ತದೆ. ನಾನು ಚಿಕ್ಕವನಿದ್ದಾಗ ಸಿಕ್ಕಾಪಟ್ಟೆ ಚಾಕ್ಲೇಟು ತಿನ್ನುತ್ತಿದ್ದುದು, ಕೀಟಾಣುಗಳೆಲ್ಲಾ ಸೇರಿ ನನ್ನ ಹಲ್ಲಿನ ಮೇಲೆ ದಾಳಿ ಮಾಡಿ ಕುಳಿ ತೋಡಿದ್ದು, ನಾನು ಸರಿಯಾಗಿ ಬ್ರಶ್ ಮಾಡದೇ ಇದ್ದುದು, ನಿನ್ನೆ ಅಂಬೊಡೆ ತಿಂದಿದ್ದು, ಆಗ ಅದರಲ್ಲಿದ್ದ ಕಡಲೆ ಬೇಳೆ ಒತ್ತಿ ಹಲ್ಲಿನಲ್ಲಿ ನೋವು ಕಾಣಿಸಿಕೊಂಡದ್ದು, ರೂಂಮೇಟಿನ ಸಲಹೆಗೆ ಗೌರವ ತೋರಿಸಿ ಡಾಕ್ಟರನ್ನು ನೋಡುವ ತೀರ್ಮಾನ ತೆಗೆದುಕೊಂಡದ್ದು, ಹುಡುಹುಡುಕಿಕೊಂಡು ಇದೇ ಕ್ಲಿನಿಕ್ಕಿಗೆ ಬಂದದ್ದು, ಇಲ್ಲಿ ಇದೇ ಡಾಕ್ಟರು ಇದ್ದದ್ದು, ಇವರು ನನ್ನ ಬರಹಗಳನ್ನೆಲ್ಲಾ ಓದಿದ್ದು... ಯು ನೋ, ದೇರೀಸ್ ಸಮ್‌ಥಿಂಗ್ ಯಾರ್! ಏನಿರಬಹುದು ಅದು?

“ಅದು ಏನೂ ಅಲ್ಲ” ನನಗಿಂತ ಮೊದಲು ವಾಸ್ತವಕ್ಕೆ ಬಂದ ಡಾಕ್ಟರು ಹೇಳಿದರು, “ಅದು ಕೀಟಾಣು. ಜರ್ಮ್ಸ್ ಅಷ್ಟೇ. ಐದು ಡಿಕೇಸ್ ಇವೆ. ಕ್ಯಾವಿಟಿ ಫಿಲ್ ಮಾಡಿದ್ರೆ ಆಯ್ತು; ಯು ವಿಲ್ ಬಿ ಆಲ್ರೈಟ್. ಐದು ದಿನ ಬರಬೇಕಾಗತ್ತೆ. ಒಂದೊಂದು ದಿನ ಒಂದೊಂದು ಹಲ್ಲು. ಯಾವಾಗ ಬರ್ತೀರಾ?”
“ಆಂ.. ಯಾವಾಗಾದ್ರೂ ಓಕೇ. ನಾಳೆ? ಸಂಜೆ ಆರರ ನಂತರವಾದರೆ ಉತ್ತಮ” -ಹೇಳಿದೆ.
“ಸರಿ ಹಾಗಾದ್ರೆ. ನಾಳೆ ಸಿಕ್ಸ್ ಥರ್ಟಿಗೆ ಬನ್ನಿ” -ತಮ್ಮ ಕಾರ್ಡೊಂದನ್ನು ತೆಗೆದು ಕೊಟ್ಟರು.
“ಥ್ಯಾಂಕ್ಯೂ ಡಾಕ್ಟರ್” ನಾನು ಎದ್ದು ನಿಂತು ಕುಲುಕಲಿಕ್ಕೆ ಕೈ ಚಾಚಿ ಹೇಳಿದೆ.
“ಅಯ್ಯೋ.. ಡಾಕ್ಟರ್ ಅಂತೆಲ್ಲ ಕರೀಬಾರದು ನೀವು. ಪ್ರೀತಿಯಿಂದ ಹೆಸರು ಹೇಳಿ ಕರೀರಿ. ನಿಮ್ಮನ್ನ ಮೀಟ್ ಮಾಡಿ ತುಂಬಾ ಖುಶಿಯಾಯ್ತು ನಂಗೆ..” ಈ ಸಲ ತುಂಬಾ ಹೊತ್ತು ಅವರ ಕೈ ನನ್ನ ಹಸ್ತದಲ್ಲಿತ್ತು. ಮತ್ತದು ಆಗಿನಕಿಂತ ಮೃದುವಾಗಿತ್ತು. ಅಲೆಲೆಲೆ! ‘ಪ್ರೀತಿಯಿಂದ ಕರೀರಿ’ -ಹೌದಲ್ವಾ, ಹಾಗೇ ಹೇಳಿದಳಲ್ವಾ? ಗುನುಗುನು ಹಾಡುತ್ತಾ ಹೊರಬಂದೆ. ಕಾಯುತ್ತಿದ್ದ ಪೇಶೆಂಟುಗಳಲ್ಲಿ ಕೆಲವರು ಗದ್ದದ ಮೇಲೆ ಕೈ ಇಟ್ಟುಕೊಂಡಿದ್ದರು, ಕೆಲವರ ಮುಖ ಇಷ್ಟು ದೊಡ್ಡಕೆ ಊದಿಕೊಂಡಿತ್ತು, ಕೆಲವರದು ಮುದುಕರ ಕೆನ್ನೆಯಂತೆ ಬೊಚ್ಚಾಗಿತ್ತು... ಛೇ, ಇವರಿಗೆಲ್ಲಾ ಹೋಲಿಸಿದರೆ ನನ್ನದು ಏನೂ ಅಲ್ಲ. ಐದಾರು ಕುಳಿಗಳು ಅಷ್ಟೇ. ಮುಚ್ಚಿಸಿಬಿಟ್ಟರೆ ಮುಗಿಯಿತು. ನಾನೇ ರಾಜಕುಮಾರ. ಮತ್ತೆ ಅವಳೇ ರಾಜಕುಮ್..? ಯಾ ಯಾ ಯಾ..! ಏನಂದಳು? ‘ಪ್ರೀತಿಯಿಂದ..’ ರೈಟ್? ಗೆದ್ದೆ ನಾನು.

ಕೀಟಾಣೂಗೆ ಜೈ. ಅಂಬೊಡೆ ಅಂಗಡಿಯವನಿಗೆ ಜೈ. ರೂಂಮೇಟಿಗೂ ಜೈ.

* *

“ಏಯ್ ಏನಾಯ್ತೋ? ಜೈ ಜೈ ಅಂತಿದೀಯಾ? ಯಾವುದೋ ಚಳುವಳೀಲಿ ಭಾಗವಹಿಸಿದ ಕನಸು ಬಿತ್ತಾ?” ರೂಂಮೇಟು ತಟ್ಟಿ ಎಬ್ಬಿಸಿ ಕೇಳಿದ.
ಕಣ್ಬಿಟ್ಟೆ. ಕತ್ತಲೆ. ಎದ್ದು ಕೂತು ಲೈಟ್ ಹಾಕಿದೆ. ಗದ್ದವನ್ನು ಒತ್ತಿ ನೋಡಿಕೊಂಡೆ. ಹಲ್ಲು ಇನ್ನೂ ನೋಯುತ್ತಿತ್ತು. “ಥೂ ಇದರಜ್ಜಿ! ನಾನು ನಾಳೆ ಡಾಕ್ಟರ್ ಹತ್ರ ಹೋಗಲ್ಲ ಕಣೋ. ಸುಮ್ನೇ ಎಲ್ಲಾ ಕನಸು. ಅವಳು ನನ್ನನ್ನ ಒಪ್ಪಲ್ಲ. ಯಾವ ಡಾಕ್ಟ್ರೂ ಹಲ್ಲು ಹುಳುಕಾಗಿರೋ ಪೇಶೆಂಟ್‌ನ ಲವ್ ಮಾಡಲ್ಲ. ಶಿಟ್!” ಎಂದು ಬೈದುಕೊಂಡು, ಗೂಡಿನಲ್ಲಿದ್ದ ಮತ್ತೊಂದು ಪೇನ್‌ಕಿಲ್ಲರ್ ಮಾತ್ರೆ ನುಂಗಿ ನೀರು ಕುಡಿದೆ.
“ಲವ್ವಾ? ಎಲ್ಲೋ? ಯಾವ ಡಾಕ್ಟ್ರೋ? ಏನೋ ಹೇಳ್ತಿದೀಯಾ?” ರೂಂಮೇಟು ಎದ್ದು ಕೂತು ಕೇಳಿದ.
“ಏನೂ ಇಲ್ಲ” ನಾನು ಲೈಟ್ ಆಫ್ ಮಾಡಿದೆ.
“ನಿಂಗೆಲ್ಲೋ ತಲೆ ಕೆಟ್ಟಿದೆ! ಹಲ್ಲಿನ ಕೀಟಾಣು ತಲೇಗೂ ದಾಳಿ ಮಾಡಿರ್ಬೇಕು” ಅವನು ಗೊಣಗಿಕೊಂಡ. ನನಗೂ ಹಾಗೇ ಅನಿಸಿತು. ಆದರೂ ಕನಸಿನಲ್ಲಾದರೂ ಒಬ್ಬ ಇಷ್ಟು ಚಂದದ ಹುಡುಗಿ ನನ್ನನ್ನು ಮುಟ್ಟುವಂತೆ, ಇಷ್ಟ ಪಡುವಂತೆ, ಪ್ರೀತಿ ಮಾಡುವಂತೆ ಮಾಡಿದ ಕೀಟಾಣೂಗೆ ಮನಸಿನಲ್ಲೇ ಥ್ಯಾಂಕ್ಸ್ ಮತ್ತು ಲವ್ಯೂ ಹೇಳುತ್ತಾ, ನಿದ್ರೆ ಮಾಡಲು ಪ್ರಯತ್ನಿಸಿದೆ.

Thursday, September 13, 2007

ಗಣೇಶ ಬಂದು ಹೋದ

ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:

“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”

‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.

ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"

"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.

“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”

“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”

“ಏನದು ಅಧಿಕಾರ ಹಸ್ತಾಂತರ?”

“ಅದೇ ಕುಮಾರಸ್ವಾಮಿ ಇದಾರಲ್ಲಾ..?”

“ಯಾರು ನನ್ನ ಅಣ್ಣಾನಾ?”

“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”

“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”

“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”

“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”

ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.

ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.

ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”

ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..

ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.

ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.

[ಎಲ್ಲರಿಗೂ ಚೌತಿಯ ಶುಭಾಷಯಗಳು.]