Showing posts with label Sweet Memories. Show all posts
Showing posts with label Sweet Memories. Show all posts

Monday, May 26, 2008

ಮಂಡೆಕಸ

ಅಜ್ಜಿ ಅದನ್ನು ಹಿತ್ಲಕಡೆ ಬಾಗಿಲಿನ ಚಿಲಕಕ್ಕೆ ಸಿಕ್ಕಿಸುತ್ತಿದ್ದಳು. ಅಮ್ಮನಿಗೆ ಅದಕ್ಕೇ ಸಿಟ್ಟು: “ಶೀ! ಅದೆಂತು ಬಾಗ್ಲು ಚಿಲ್ಕಕ್ ಸಿಕ್ಸಿಡ್‌ತ್ರಪ! ಒಂಥರಾ ಆಗ್ತು ಮುಟ್ಯೋದ್ರೆ! ಒಂಚೂರ್ ಮುಂದೆ ಹೋಗಿ ಬಿಸಾಕಿಕ್ ಬರ್ಲಕ್ಕು. ಯಾರರು ನೋಡಿರೆ ಚೊಲೋ ಕಾಣ್ತಲ್ಲೆ..” ಅಜ್ಜಿಗೆ ಹಾಗೆ ಹೇಳಿಸಿಕೊಂಡೂ ಹೇಳಿಸಿಕೊಂಡೂ ಅಭ್ಯಾಸವಾಗಿಬಿಟ್ಟಿತ್ತಾದ್ದರಿಂದ ಅಮ್ಮನ ಸಿಡುಕಿಗೆ ನಿರುಮ್ಮಳವಾಗಿ ಉತ್ತರಿಸುತ್ತಿದ್ದಳು: “ಹಾಕಿರ್ ಸೈ ತಗಳೇ! ಈಗ್ಯಾರ್ ಬರ್ತ ನಮ್ಮನಿಗೆ? ಎಲ್ಲರ ಕೂದ್ಲೂ ಉದುರ್ತು!” ಹಾಗನ್ನುತ್ತಾ ಅಜ್ಜಿ ತನ್ನ ತಲೆಕೂದಲ ಶಿಂಬಿಯನ್ನು ಚಿಲಕದಿಂದ ಎತ್ತಿಕೊಂಡು ಹೋಗಿ ಹೊರಗಡೆ ಎಸೆದು ಬರುತ್ತಿದ್ದಳು. ಅದನ್ನು ನಮ್ಮ ಮನೆಯಲ್ಲಿ ‘ಮಂಡೆಕಸ’ ಎಂದು ಕರೆಯಲಾಗುತ್ತಿತ್ತು.

ಅಜ್ಜಿಯ ಕೂದಲು ಎಷ್ಟು ಉದುರುತ್ತಿತ್ತು..! “ಥೋ, ಪಿತ್ತ ಕಾಣ್ತು! ಕಡಿತೂ ಅಂದ್ರೆ ಕಡಿತು! ಬಾಚ್‌ಕ್ಯಂಡ್ರೆ ಉದುರ್ತು! ಹಾಳ್ ಬೀಳ್ಳಿ!” -ತನ್ನ ತಲೆಕೂದಲಿಗೆ ತಾನೇ ಬೈದುಕೊಳ್ಳುತ್ತಿದ್ದಳು. ಅಜ್ಜಿ ಪ್ರತಿ ಸಂಜೆ, ಮದ್ದಿನ್ ಮೇಲಿನ್ ನಿದ್ದೆ ಮಾಡಿ ಎದ್ದಮೇಲೆ, ಒಂದು ನ್ಯೂಸ್‌ಪೇಪರ್ ಇಟ್ಟುಕೊಂಡು, ಹಿತ್ಲಕಡೆ ಮೆಟ್ಟಿಲ ಮೇಲೋ, ಹಾಲಿನ ನೆಲದ ಮೇಲೋ ಕೂತು, ತಲೆ ಬಾಚಿಕೊಳ್ಳುತ್ತಿದ್ದಳು. ಆಕೆ ತನ್ನ ಪ್ರಾಯದಲ್ಲಿ ಸಾಗರದ ಮಾರಿಜಾತ್ರೆಯಿಂದ ತಂದ ಸಣ್ಣ ಹೇನಿನ ಬಾಚಣಿಗೆ ಬಳಸುತ್ತಿದ್ದಳು. ಆ ಹಣಿಗೆಗೆ ಇಪ್ಪತ್ತಕ್ಕಿಂತಲೂ ಜಾಸ್ತಿ ವರ್ಷ ವಯಸ್ಸಾಗಿತ್ತು, ಅಜ್ಜಿಯ ತಲೆ ಬಾಚುವುದು ಅದಕ್ಕೆ ಕರ‘ತಲಾ'ಮಲಕವಾಗಿತ್ತು. ಕೆಂಪು-ಕಪ್ಪು ಬಣ್ಣವಿದ್ದ ಆ ಬಾಚಣಿಗೆ, ಅಜ್ಜಿಯ ತಲೆಗೂದಲು ಕಡುಗಪ್ಪು ಬಣ್ಣದಿಂದ ವಿರಳಗಪ್ಪು ಆಗತೊಡಗಿ ಕೊನೆಗೆ ಪೂರ್ತಿ ಬಿಳಿಯಾದುದಕ್ಕೆ ಸಾಕ್ಷಿಯಾಗಿತ್ತು. ಅದರೊಳಗೆ ಸಿಕ್ಕಿಕೊಂಡ ಕಸವನ್ನು ಅಜ್ಜಿ ಹದಿನೈದು ದಿನಕ್ಕೊಮ್ಮೆ ತನ್ನ ಬಳೆಗೆ ನೇತುಬಿಟ್ಟುಕೊಂಡಿರುತ್ತಿದ್ದ ಸೇಫ್ಟಿ ಪಿನ್ನಿನಿಂದ ತೆಗೆಯುತ್ತಿದ್ದಳು. ಹಾಗೆ ಚೊಕ್ಕಟಗೊಳಿಸಿದ ಬಾಚಣಿಗೆಯನ್ನು ತನ್ನ ಮಂಚದಲ್ಲಿ - ಹಾಸಿಗೆಯ ಕೆಳಗೆ ಜೋಪಾನ ಮಾಡಿ ಇಡುತ್ತಿದ್ದಳು. ಹಣಿಗೆ ಹಾಸಿಗೆಯಡಿ ಮರುಸಂಜೆಯವರೆಗೂ ಕುಂಭಕರ್ಣನಂತೆ ಬೆಚ್ಚಗೆ ನಿದ್ರೆ ಹೋಗುತ್ತಿತ್ತು.

ಊಟ ಮಾಡುವಾಗ ಒಮ್ಮೊಮ್ಮೆ ತಲೆಗೂದಲು ಸಿಕ್ಕಿಬಿಡುತ್ತಿತ್ತು. ಬಿಳಿ ಅನ್ನಕ್ಕೆ ಹುಳಿ ಹಾಕಿ ಕಲಸಿ ತುತ್ತು ಮಾಡಿ ಬಾಯ ಬಳಿ ತರುವಷ್ಟರಲ್ಲಿ ಅದು ತಟ್ಟೆಯಿಂದ ಬಾಯಿಯವರೆಗೂ ಬಾಲವಾಗಿ ಬಂದಿರುತ್ತಿತ್ತು. ಸಿಕ್ಕಿಬಿದ್ದ ಕಳ್ಳನಂತೆ ಅದನ್ನು ನೋಡಲಾಗುತ್ತಿತ್ತು. “ಏ ಏ ಏ..! ಯಾರದ್ದು ಇದು? ಬಿಳೀ ಕೂದ್ಲು! ಅಜ್ಜಿದೇಯ!” -ಸಿಕ್ಕಿಬಿದ್ದ ಕೂದಲನ್ನು ಕೈಯಲ್ಲಿ ಎತ್ತಿ ಹಿಡಿದು ಎಲ್ಲರಿಗೂ ತೋರಿಸಿ ಹೇಳುತ್ತಿದ್ದೆ. “ಓಹೊಹೋ! ಯಂದಂತು ಅಲ್ಲ. ಗೌರಿದೇ ಸೈ. ಆನು ಇವತ್ತು ಅಡುಗೆಮನೆ ಕಡೀಗೇ ಬರ್ಲೆ” -ಅಜ್ಜಿ ಅಮ್ಮನ ಮೇಲೆ ತಪ್ಪು ಹೊರಿಸುತ್ತಿದ್ದಳು. “ಹೂಂ! ಬಿಳೀ ಕೂದ್ಲು! ನೋಡಿರ್ ಕಾಣ್ತಲ್ಯಾ? ನಿಂಗ್ಳುದ್ದೇಯಾ! ಹಾರಿ ಬಂದು ಬಿದ್ದಿಕ್ಕು” -ಅಮ್ಮ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಿದ್ಧಳಿರುತ್ತಿರಲಿಲ್ಲ. ಆ ಕೂದಲು ಅಪ್ಪನ ಬಾಳೆಯಲ್ಲೇನಾದರೂ ಸಿಕ್ಕಿದ್ದರೆ ಅವನು ಸಿಟ್ಟು ಮಾಡಿಕೊಂಡು ಅದಿಷ್ಟೂ ಅನ್ನವನ್ನು ಬಿಟ್ಟು ಬೇರೆ ಬಾಳೆ ಹಾಕಿಸಿಕೊಳ್ಳುತ್ತಿದ್ದ ಅಥವಾ ಆ ಹೊತ್ತು ಊಟವನ್ನೇ ಬಿಟ್ಟುಬಿಡುತ್ತಿದ್ದ. ಅಜ್ಜಿಗೋ ಅಮ್ಮನಿಗೋ ಹಾಗೆ ಕೂದಲು ಸಿಕ್ಕಿದರೆ ಅವರು ಯಾರಿಗೂ ಹೇಳುತ್ತಲೇ ಇರಲಿಲ್ಲ; ಸುಮ್ಮನೆ ತೆಗೆದಿಟ್ಟುಬಿಡುತ್ತಿದ್ದರು. ನನಗೆ ಸಿಕ್ಕಿದ್ದರಿಂದ ಎಲ್ಲರಿಗೂ ತೋರಿಸಿ, ಅಜ್ಜಿ-ಅಮ್ಮರನ್ನು ವಾದಕ್ಕೆ ಹಚ್ಚಿಸಿ, ಗೊಂದಲದ ವಾತಾವರಣ ಸೃಷ್ಟಿಸಿ, ಮಜಾ ತೆಗೆದುಕೊಳ್ಳುತ್ತಾ ನಾನು ಊಟ ಮುಂದುವರೆಸುತ್ತಿದ್ದೆ. ಸಿಕ್ಕಿಬಿದ್ದದ್ದು ಕರೀ ಕೂದಲು ಮತ್ತು ಸಣ್ಣ ಗಾತ್ರದ್ದು ಅಂತಾದರೆ ಮಾತ್ರ ತೊಂದರೆ ಜಾಸ್ತಿಯಾಗುತ್ತಿತ್ತು. ಏಕೆಂದರೆ, ಆಗ ಅಮ್ಮನೊಂದಿಗೆ ಅಪ್ಪ ಮತ್ತು ನಾನು -ಇಬ್ಬರೂ ತಪ್ಪಿತಸ್ಥರ ಗುಂಪು ಸೇರುತ್ತಿದ್ದೆವು!

ಅಮ್ಮನ ಕೂದಲೂ ಸಿಕ್ಕಾಪಟ್ಟೆ ಉದುರುತ್ತಿತ್ತು. ಅಮ್ಮ ಅದಕ್ಕೆ ಸಾಕಷ್ಟು ಪ್ರಯೋಗಗಳನ್ನೂ ಮಾಡುತ್ತಿದ್ದಳು. ಸೋಪು ಬದಲಿಸಿ ನೋಡಿದಳು, ಶೀಗೆಕಾಯಿ ಬಳಸಿ ನೋಡಿದಳು, ಕಡ್ಲೆಹಿಟ್ಟು ಹಚ್ಚಿಕೊಂಡು ನೋಡಿದಳು.. ಆದರೂ ‘ಹೇರ್ಪಾತ’ ಮುಂದುವರೆದೇ ಇತ್ತು. “ಹಿಂಗೇ ಉದುರ್ತಾ ಇದ್ರೆ ಒಂದ್ ದಿನ ಬೋಳ್ ಮಂಡೆ ಆಗ್ತೇನ ಅಪ್ಪೀ ನಂದು! ಹೊರಬೈಲಗೆ ಒಬ್ಳಿಗೆ ಹಂಗೇ ಆಯ್ದಡ ಪಾಪ!” ಎನ್ನುತ್ತಿದ್ದಳು ನನ್ನ ಬಳಿ. ಭಾಗ್ಯತ್ಗೆ ಮನೆಯಲ್ಲಿದ್ದಾಗಲಂತೂ ದಿನಕ್ಕೊಂದು ಹೆಸರಿನ ಶ್ಯಾಂಪೂ ತಂದು ನನ್ನ ಅಮ್ಮನಿಗೆ ಕೊಡುತ್ತಿದ್ದಳು. ಅಮ್ಮನಿಗೆಂದು ತಂದ ಶ್ಯಾಂಪೂವನ್ನು ತಾನೇ ಹೆಚ್ಚಾಗಿ ಬಳಸುತ್ತಿದ್ದಳು. ಮತ್ತೆ ಆಗ, ಒಂದು ಕಡೆ ಕಿವಿ ಕತ್ತರಿಸಿಕೊಂಡು ಬಚ್ಚಲು ಮನೆಯ ಗೂಡಿನಲ್ಲಿ ಸುಂದರಿಯಂತೆ ನಿಂತು ಕಂಗೊಳಿಸುತ್ತಾ ನನ್ನ ಚಿತ್ತವನ್ನಾಕರ್ಷಿಸುತ್ತಿದ್ದ ಆ ಬಣ್ಣ ಬಣ್ಣದ ಪಳಪಳನೆ ಹೊಳೆಯುವ ಶ್ಯಾಂಪೂ ಸ್ಯಾಚೆಟ್ಟುಗಳನ್ನು, ಅತ್ತಿಗೆಗಾಗಲೀ ಅಮ್ಮನಿಗಾಗಲೀ ಗೊತ್ತಾಗದಂತೆ ಮೃದುವಾಗಿ ಒತ್ತಿ, ಅದರೊಡಲ ಬಿಳೀ ದ್ರವವನ್ನು ಚೂರೇ ಚೂರು ಕೈಗೆ ಹಾಕಿಕೊಂಡು ಮೂಸಿ ನೋಡಿ ತಲೆಗೆ ತಿಕ್ಕಿಕೊಂಡು ನೊರೆ ನೊರೆ ನೊರೆ ಬರಿಸಿಕೊಂಡು ನೀರು ಹೊಯ್ದುಕೊಂಡು ಮಜಾ ಮಾಡುವ ಯೋಗ ನನ್ನದಾಗುತ್ತಿತ್ತು.

ಅಪ್ಪ ಎರಡು ತಿಂಗಳಿಗೊಮ್ಮೆ ಉಳವಿಗೆ ನನ್ನನ್ನು ಚೌರ ಮಾಡಿಸುವ ಸಲುವಾಗಿ ಸೈಕಲ್ಲಿನಲ್ಲಿ ಕರೆದೊಯ್ಯುತ್ತಿದ್ದ. ನನ್ನನ್ನು ರಾಜುವಿನ ಚೌರದಂಗಡಿಯಲ್ಲಿ ಬಿಟ್ಟು, ತಾನು ಅಕ್ಕಿಹಿಟ್ಟು ಮಾಡಿಸಿಕೊಂಡು ಅರ್ಧಗಂಟೆಯಲ್ಲಿ ಬರುವುದಾಗಿ ಹೇಳಿ ಹೋಗಿಬಿಡುತ್ತಿದ್ದ. ನಾನು ಕುಳಿತ ಬೆಂಚಿನಲ್ಲಿ ಇನ್ನೂ ಅನೇಕರು ತಮ್ಮ ಸರತಿ ಕಾಯುತ್ತಾ, ಪೇಪರ್ರೋದುತ್ತಾ ಕೂತಿರುತ್ತಿದ್ದರು. ಚುಕುಚುಕು ಸದ್ದು ಮಾಡುತ್ತಾ ರಾಜುವಿನ ಕತ್ತರಿ ಕನ್ನಡಿ ಮುಂದೆ ಕೂತವನ ತಲೆಯ ಮೇಲೆ ಓಡಾಡುತ್ತಿತ್ತು. ಹಾಗೆ ಕೂತವನ ತಲೆಗೂದಲು ಆ ಕುರ್ಚಿಯ ಸುತ್ತಲೂ, ಅವನ ಮೈಮೇಲೆ ಹೊಚ್ಚಿದ ಬಿಳೀ ವಸ್ತ್ರದ ಮೇಲೂ ಬಿದ್ದಿರುತ್ತಿತ್ತು. ಜಾಹೀರಾತುಗಳಲ್ಲಿ ಹೇಳುವ ‘ಕೇಶರಾಶಿ’ ಎಂಬ ಪದ ಬಹುಶಃ ಇದನ್ನು ನೋಡಿಯೇ ಚಾಲ್ತಿಗೆ ಬಂದದ್ದೇನೋ ಎಂದು ನಾನು ಅಂದುಕೊಳ್ಳುತ್ತಿದ್ದೆ. ಚೌರದಂಗಡಿಯ ಮೂಲೆಯಲ್ಲಿ ಒಂದು ಸಿಮೆಂಟಿನ ಚೀಲದ ತುಂಬಾ ವಾಕರಿಕೆ ಬರುವಷ್ಟು ಕೂದಲಿರುತ್ತಿತ್ತು. ಅದನ್ನು ಏನು ಮಾಡುತ್ತಾರೆ ಎಂದು ನನಗೆ ಚಿಂತೆಯಾಗುತ್ತಿತ್ತು. ಕನ್ನಡಿ ಮುಂದೆ ಕೂತಿದ್ದವನ ಚೌರ ಮುಗಿದು, ಅವನು ದರ್ಪದಿಂದೆಂಬಂತೆ ಎರಡ್ಮೂರು ಸಲ ‘ಎಲ್ಲಾ ಸರಿಯಾಗಿದೆಯೇ?’ ಎಂದು ಸಾವಿರ ಬಿಂಬಗಳಲ್ಲಿ ತನ್ನನ್ನು ನೋಡಿಕೊಂಡು, ಥೇಟು ರಾಜಕುಮಾರನಂತೆ ಸಿಂಹಾಸನದಿಂದ ಇಳಿದು ಹೋಗುತ್ತಿದ್ದಂತೆಯೇ, ಮತ್ತೊಬ್ಬ ಗದ್ದುಗೆ ಏರುತ್ತಿದ್ದ.

ಬಹಳ ಸಲ, ಅಪ್ಪ ವಾಪಸು ಬರುವವರೆಗೂ ರಾಜು ನನ್ನನ್ನು ಚೌರಕ್ಕೆ ಕರೆಯುತ್ತಲೇ ಇರಲಿಲ್ಲ. ‘ದೊಡ್ಡ ದೊಡ್ಡ’ ಜನಗಳೆಲ್ಲ ಬರುತ್ತಲೇ ಇರುತ್ತಿದ್ದುದರಿಂದ, ಸಣ್ಣಕಿದ್ದ ನಾನು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೆ. “ಅಪ್ಪ ಬರೂದು ಇನ್ನೂ ತಡ ಇತ್ತಲ ಮಾಣೀ? ನಿಂದು ಇವ್ರುದ್ದಾದ್ಮೇಲ್ ಮಾಡ್ತೆ” -ಎಂದು ರಾಜು ಮತ್ಯಾರನ್ನೋ ಕರೆದುಬಿಡುತ್ತಿದ್ದ. ಕಾದೂ ಕಾದೂ ನನಗಂತೂ ಆಕಳಿಕೆ ಬರುತ್ತಿತ್ತು. ಅಪ್ಪ ಬಂದು, “ಏ, ಒಂದು ತಾಸು ಆಯ್ತಲಾ ರಾಜೂ ಇವನ್ನ ಬಿಟ್ ಹೋಗಿ? ಬೇಗ ಕಟಿಂಗ್ ಮಾಡಿ ಕಳ್ಸು ಮಾರಾಯಾ” ಎಂದಮೇಲೆ, ನನಗೆ ಸಿಂಹಾಸನವೇರುವ ಅವಕಾಶ ಸಿಗುತ್ತಿತ್ತು. ರಾಜು, ತನ್ನ ಒಂದು ಕೈಯಲ್ಲಿ ಬಾಚಣಿಗೆ - ಮತ್ತೊಂದು ಕೈಯಲ್ಲಿ ಕತ್ತರಿ ಹಿಡಿದು, ಅಷ್ಟೆಲ್ಲಾ ಬುದ್ಧಿ, ದಡ್ಡತನ, ಯೋಚನೆ, ಭಾವನೆ ತುಂಬಿದ್ದ ನನ್ನ ತಲೆಯನ್ನು, ಯಕಃಶ್ಚಿತ್ ಒಂದು ಚೆಂಡಿನಂತೆ ಹೇಗೆ ಬೇಕೆಂದರೆ ಹಾಗೆ ಆಡಿಸುತ್ತಿದ್ದ. ಚೌರ ಮುಗಿದು ಅಪ್ಪ ದುಡ್ಡು ಕೊಡುವಾಗ, ನನ್ನ ತಲೆಕೂದಲೂ ಆ ಕೆಳಗೆ ಬಿದ್ದಿದ್ದ ಕೇಶರಾಶಿಯಲ್ಲಿ ಒಂದಾದುದನ್ನು ನೋಡುತ್ತಾ ಕ್ಲೇಶ ಮನಸ್ಸಿನಿಂದ ಸೈಕಲ್ಲೇರುತ್ತಿದ್ದೆ.

ಬೆಂಕಟವಳ್ಳಿಯಲ್ಲಿ ನನ್ನ ಅಜ್ಜ ಸತ್ತ ಸುದ್ದಿ ಬಂದಾಗ ಶಾಲೆಯಿಂದ ನೇರವಾಗಿ ಅಲ್ಲಿಗೆ ಹೋದೆ. ಹಿತ್ಲಕಡೆ ಲಾಯದಲ್ಲಿ ಅಮ್ಮ, ಅಜ್ಜಿ, ನೆಂಟರು, ಊರ ಹೆಂಗಸರು -ಎಲ್ಲಾ ಕೂತಿದ್ದರು. ಅಜ್ಜಿ ಅಳುತ್ತಿದ್ದಳು. ತುಂಬಾ ಸಂಪ್ರದಾಯಸ್ಥೆಯಾಗಿದ್ದ ನನ್ನ ಅಜ್ಜಿ, ತಾನು ಕೇಶಮುಂಡನ ಮಾಡಿಸಿಕೊಳ್ಳುವುದಾಗಿ, ‘ಮಡಿ’ ಮಾಡಿಕೊಳ್ಳುವುದಾಗಿ ಹಟಕ್ಕೆ ಬಿದ್ದಿದ್ದಳು. “ಈಗಿನ ಕಾಲದಲ್ಲಿ ಹಂಗೆಲ್ಲ ಯಾರೂ ಮಾಡ್‌ಸ್ಕ್ಯಳದಿಲ್ಲೆ. ಮಳ್ಳನು ನಿಂಗೆ?” ಎಂದು ಹೆಂಗಸರೆಲ್ಲಾ ಬೈದು ಸಮಾಧಾನ ಮಾಡಿದರು. ಅವರು ಆಡಿಕೊಳ್ಳುತ್ತಿದ್ದ ಮಾತುಗಳು ನನಗೆ ಸರಿಯಾಗಿ ಅರ್ಥವಾಗದೇ, ಅಮ್ಮನ ಬಳಿ ಹೋಗಿ “ಅಮ್ಮಾ ಅಜ್ಜಿಗೆ ಎಂಥ ಮಾಡ್ತ್ವಡ?” ಎಂದು ಕೇಳಿದೆ. “ಎಂಥೂ ಇಲ್ಲೆ. ಅವ್ಳಿಗೆ ಮುತ್ತಜ್ಜಿಗೆ ಇತ್ತಲಾ, ಹಂಗೇ ಬೋಳುಮಂಡೆ ಮಾಡ್ಕ್ಯಳವು ಅಂತ ಇತ್ತಡ, ನಾವೆಲ್ಲ ಬ್ಯಾಡ ಅಂದ್ಯ” ಎಂದಳು ಅಮ್ಮ. ಅಜ್ಜಿಯ ಜಡೆಯನ್ನೇ ಕತ್ತರಿಸಿ, ತಲೆ ಬೋಳಿಸಿಬಿಟ್ಟರೆ... ಆಹ್! ಅದೆಷ್ಟು ಭೀಕರವಾಗಿ ಕಾಣಬಹುದೆಂದು ಕಲ್ಪಿಸಿಕೊಂಡು ನಾನು ಹೆದರಿ ಹೊರಗೆ ಓಡಿಬಂದುಬಿಟ್ಟೆ. ಅಷ್ಟರಲ್ಲಾಗಲೇ ತಲೆ ಬೋಳಿಸಿಕೊಂಡು ಸ್ನಾನಕ್ಕೆ ಹೊರಟಿದ್ದ ಮಾವಂದಿರು “ಗುಂಡಾ, ಶಾಲೆಯಿಂದ ಬಂದ್ಯಾ? ಅಜ್ಜ ಹೋಗ್ಬುಟ!” ಎಂದರು.

ಬೆಂಗಳೂರಿಗೆ ಬಂದು ಜಾಬಿಗಾಗಿ ಅಲೆಯುತ್ತಿದ್ದೆ. ತಿಂಗಳಾದರೂ ಸಿಕ್ಕಿರಲಿಲ್ಲ. ‘ಹೆದ್ರಿಕೆ ಆಗೋ ಹಾಗೆ ಕಾಣ್ತಿದೀಯ. ನಾಳೆ ಯಾವುದೋ ಒಳ್ಳೇ ಕಂಪನೀಲಿ ಇಂಟರ್‌ವ್ಯೂ ಇದೆ ಅಂತ ಬೇರೆ ಹೇಳ್ತಿದೀಯ. ಹೋಗಿ ಕಟಿಂಗ್ ಆದ್ರೂ ಮಾಡಿಸ್ಕೊಂಡು ಬಾ’ ಎಂದರು ನಾನು ಉಳಿದುಕೊಂಡಿದ್ದ ನೆಂಟರ ಮನೆಯವರು. ಹೊರಟೆ. ‘ಮಾಡರ್ನ್ ಜೆಂಡ್ಸ್ ಸಲೂನ್’ -ಬೋರ್ಡು ಕಣ್ಣಿಗೆ ಬಿತ್ತು. ‘ಹೂಂ, ನಾನೂ ಮಾಡರ್ನ್ ಜೆಂಡ್ಸೇ’ ಎಂದುಕೊಂಡು ಶಾಪಿನ ಒಳಹೊಕ್ಕೆ. ಎಲ್ಲೆಲ್ಲೂ ಗ್ಲಾಸು, ಕನ್ನಡಿ. ಕಟಿಂಗ್ ಮಾಡಿಸಿಕೊಳ್ಳುತ್ತಿದ್ದವರು, ಡೈ ಮಾಡಿಸಿಕೊಳ್ಳುತ್ತಿದ್ದವರು, ಮುಖಕ್ಕೆ ಬೆಳ್ಳಗೆ ಏನನ್ನೋ ಮೆತ್ತಿಸಿಕೊಂಡು ಕೂತಿದ್ದವರು, ತಲೆಗೆ ಪರಿಮಳದೆಣ್ಣೆ ಹಾಕಿಸಿಕೊಂಡು ತಟ್ಟಿಸಿಕೊಳ್ಳುತ್ತಿದ್ದವರು... ನಾನೂ ಸಿಂಹಾಸನವನ್ನೇರಿ ಕೂತೆ.

ಇನ್‌ಶರ್ಟ್ ಮಾಡಿದ್ದ ಕಟಿಂಗ್‌ನವ “ಸಾರ್, ಶಾರ್ಟಾ ಮೀಡಿಯಮ್ಮಾ?” -ಕೇಳಿದ.
“ಊಮ್.. ಮೀಡಿಯಮ್ಮೇ ಇರ್ಲಿ” -ಉತ್ತರಿಸಿದೆ.
“ಲಾಕ್ ಬಿಡ್ಲಾ ಸರ್?”
“ಏನ್ರೀ ಅದು?”
“ಲಾಕು ಸರ್.. ಕಿವಿ ಪಕ್ಕ.. ಉದ್ದಕೆ..?” ಕತ್ತರಿಯನ್ನು ಕಿವಿಯ ಪಕ್ಕ ಆಡಿಸುತ್ತಾ ಕೇಳಿದ.
ನನಗೆ ಕಚಗುಳಿಯಾದಂತಾಗಿ “ರೀ, ಲಾಕೂ ಬ್ಯಾಡ ಕೀನೂ ಬ್ಯಾಡ! ಸುಮ್ನೇ ಕಟಿಂಗ್ ಮಾಡ್ರೀ!” ರೇಗಿದೆ.
“ಸರ್ ಶೇವಿಂಗೂ ಮಾಡ್ಲಾ?” ಕೇಳಿದ.
“ಹೂಂ ಮಾಡಿ” ಎಂದೆ.

ಹತ್ತು ನಿಮಿಷದಲ್ಲಿ ಎಲ್ಲಾ ಮುಗಿದು ಕೆಳಗಿಳಿದೆ. ಜೇಬಿನಿಂದ ಐವತ್ತರ ನೋಟು ತೆಗೆದು “ಹೆಹ್ಹೆ! ಛೇಂಜ್ ಇಲ್ಲ..” ಎನ್ನುತ್ತಾ ಕೊಟ್ಟೆ. ಅವನು ಐದು ರೂಪಾಯಿ ವಾಪಸು ಕೊಟ್ಟ. ಮತ್ತೊಬ್ಬರನ್ನು ಕುರ್ಚಿಗೆ ಕರೆದ. ನಾನು ನಿಂತೇ ಇದ್ದೆ. ಅವನು ನನ್ನನ್ನು ನೋಡಿದ. “ಮತ್ತೇನಾದ್ರೂ ಆಗ್ಬೇಕಿತ್ತಾ ಸಾರ್?” ಕೇಳಿದ. “ಏನಿಲ್ಲ, ಛೇಂಜ್ ಬರೀ ಐದು ರೂಪಾಯಿ ಕೊಟ್ರಿ..?” ಎಂದೆ. “ಸರಿ ಆಯ್ತಲ್ಲಾ ಸಾರ್! ಕಟಿಂಗು - ಶೇವಿಂಗು: ಫಾರ್ಟಿಫೈವ್ ರುಪೀಸ್!” ಮರುಮಾತಾಡದೇ ಹಿಂತಿರುಗಿ ಹೊರಟೆ. ‘ರಾಜು ಶಾಪಿನ ಏಳು ರೂಪಾಯಿ ಎಲ್ಲಿ, ಈ ನಲವತ್ತೈದು ರೂಪಾಯಿ ಎಲ್ಲಿ? ಅಬ್ಬಾ ಬೆಂಗಳೂರೇ!’ -ಎಂದುಕೊಳ್ಳುತ್ತಾ ತಲೆದೂಗಿದೆ. “ನಿಂಗೆ ಎಷ್ಟ್ ತಲೆ ಇದೆ! ಬೆಂಗ್ಳೂರಿಗೆ ಹೋದ್ರೆ ಏನಾದ್ರೂ ಒಂದು ಮಾಡಿ ದುಡ್ಡು ಮಾಡ್ತೀಯಾ ಬಿಡು” ಎಂದು ನಾನು ಇಲ್ಲಿಗೆ ಹೊರಡುವ ಮುನ್ನ ಕೆಲ ಗೆಳೆಯರು ಹೇಳಿದ್ದು ನೆನಪಾಯಿತು. ನಿಜಕ್ಕೂ ನನ್ನ ತಲೆಯ ಬೆಲೆ ನನಗೆ ಗೊತ್ತಾದದ್ದು ಈಗಲೇ! ‘ಹೌದಪ್ಪಾ ಹೌದು!’ ಎಂದುಕೊಂಡೆ. ಇನ್ನು ಈ ಬೆಂಗಳೂರಿನಲ್ಲಿ ಇಂತಹ ಅದೆಷ್ಟು ‘ಚೌರ’ ಮಾಡಿಸಿಕೊಳ್ಳಬೇಕಿದೆಯೋ ಎಂದುಕೊಳ್ಳುತ್ತಾ, ನಾಳೆಯ ಕೆಲಸವಾದರೂ ಆದರೆ, ಕನಿಷ್ಟ ಚೌರಕ್ಕೆ ಸಾಕಾಗುವಷ್ಟು ಸಂಬಳವನ್ನಾದರೂ ಅವರು ಕೊಟ್ಟರೆ ಸಾಕಪ್ಪಾ ಎಂದು ಆಶಿಸುತ್ತಾ, ನೆಂಟರ ಮನೆ ದಾರಿ ಹಿಡಿದೆ.

Wednesday, November 14, 2007

ಆಮೆ-ಮೊಲ

ಮೂರನೇ ಕ್ಲಾಸಿನಲ್ಲೋ ನಾಲ್ಕನೇ ಕ್ಲಾಸಿನಲ್ಲೋ ಇದ್ದ ಈ ನೀತಿಕತೆಯನ್ನು ನಿಮ್ಮ ಕನ್ನಡ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡಿ ಹೇಳಿರುತ್ತಾರೆ. ಮಾಡಿರದಿದ್ದರೂ, ಆ ಪಾಠದೊಂದಿಗಿದ್ದ ಓಡುತ್ತಿದ್ದ ಮೊಲ-ಚಿಪ್ಪಿನೊಳಗಿಂದ ಕತ್ತು ಹೊರಹಾಕಿ ಹಿಂದೆ ನೋಡುತ್ತಿದ್ದ ಆಮೆಯ ಬಣ್ಣ ಬಣ್ಣದ ಚಿತ್ರಗಳು ನಿಮಗೆ ನೆನಪಿರುತ್ತವೆ. ಮರೆತು ಹೋಗಿದ್ದಿದ್ದರೂ ನಾನೀಗ ಹೇಳಿದಮೇಲೆ ನೆನಪಾಗಿರುತ್ತದೆ. ನೀವಿದನ್ನು ಓದಿರದಿದ್ದರೂ ನಿಮ್ಮ ಮಗನೋ, ಪಕ್ಕದ ಮನೆ ಪುಟ್ಟಿಯೋ ಶಾಲೆಯಿಂದ ಬಂದೊಡನೆ 'ಇವತ್ತು ಮಿಸ್ಸು ಆಮೆ-ಮೊಲದ ಕಥೆ ಹೇಳಿದ್ರು.. ಎಷ್ಟು ಚೆನ್ನಾಗಿತ್ತು.. ನಿಂಗೊತ್ತಾ ಅದು?' ಎನ್ನುತ್ತಾ ಮೊಲದಂತೆಯೇ ಮುದ್ದಾಗಿ-ಪೆದ್ದಾಗಿ ಪಿಳಿಪಿಳಿ ಕಣ್ಣು ಬಿಡುತ್ತಾ ಕೇಳಿದಾಗ ನೆನಪಾಗುತ್ತಿತ್ತು. ಮರೆತು ಹೋಗಿದ್ದರೂ, ನಿನಪಿದ್ದರೂ, ಹಿಂದೆಲ್ಲೂ ಕೇಳಿರದಿದ್ದರೂ, ಓದಿರದಿದ್ದರೂ ನೀವೀ ಕತೆಯನ್ನು ಮತ್ತೊಮ್ಮೆ ಓದಲಿಕ್ಕೇನು ಅಡ್ಡಿಯಿಲ್ಲ. ಏಕೆಂದರೆ, ಈ ಕತೆ ತುಂಬಾ ಚೆನ್ನಾಗಿದೆ.

ಆಮೆ ಮತ್ತು ಮೊಲದ ಮಧ್ಯೆ ಒಮ್ಮೆ ಓಟದ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರಿಗೂ ಗೊತ್ತಿರುವಂತೆಯೇ ಮೊಲದ ಓಟಕ್ಕೆ ವೇಗ ಹೆಚ್ಚು. ಆಮೆ ಅಂಗುಲ ಸಾಗಲೂ ಗಂಟೆ ಬೇಕು. ಕಾಡಿನ ಪ್ರಾಣಿಗಳೆಲ್ಲ ಈ ತಮಾಷೆಯನ್ನು ನೋಡಲು ಸೇರಿದ್ದವು. ಸಿಂಹರಾಜನೂ ಬಂದಿದ್ದ. ಮಂತ್ರಿ ನರಿ ಶಿಳ್ಳೆ ಊದುತ್ತಿದ್ದಂತೆಯೇ ಓಟ ಶುರುವಾಯಿತು.

ಮೊಲ ಜೋರಾಗಿ ಓಡಿತು. ಸುಮಾರು ದೂರ ಓಡಿಯಾದ ಮೇಲೆ ಹಿಂದೆ ತಿರುಗಿ ನೋಡಿದರೆ ಆಮೆ ಇನ್ನೂ ಎಷ್ಟೋ ಹಿಂದಕ್ಕೆ ನಿಧಾನವಾಗಿ ಬರುತ್ತಿದೆ. ಮೊಲ ಮುಖದಲ್ಲಿ ಗರ್ವದ ಗಹಗಹ ನಗುವನ್ನು ತಂದುಕೊಂಡು, ಒಮ್ಮೆ ಆಕಳಿಸಿ, 'ಅದು ಇಲ್ಲಿಗೆ ಬರುವುದರೊಳಗೆ ಒಂದು ನಿದ್ರೆ ಮಾಡಿ ತೆಗೆಯುವಾ' ಅಂದುಕೊಂಡು, ಅಲ್ಲೇ ಮರದ ಬುಡದಲ್ಲಿ ಮಲಗಿಬಿಟ್ಟಿತು. ಬಿಸಿಲಿನ ಜಳಕ್ಕೋ ಏನೋ, ಆಲಸಿ ಮೊಲಕ್ಕೆ ಜೋರು ನಿದ್ರೆ ಬಂದುಬಿಟ್ಟಿತು.

ಸುಮಾರು ಹೊತ್ತಿನ ಮೇಲೆ ಚಪ್ಪಾಳೆ, ಶಿಳ್ಳೆಗಳ ಶಬ್ದ ಕೇಳಿದಂತಾಗಿ ಮೊಲಕ್ಕೆ ಎಚ್ಚರಾಗಿ ಕಣ್ತೆರೆದು ನೋಡಿದರೆ ಆಮೆ ಹಾಗೇ ನಿಧಾನವಾಗಿ ನಡೆಯುತ್ತ ಓಡುತ್ತ ಮಲಗಿದ್ದ ಮೊಲವನ್ನು ದಾಟಿ ಮುಂದೆ ಹೋಗಿ ಆಗಲೇ ಗುರಿಯ ಸಮೀಪ ತಲುಪಿಬಿಟ್ಟಿದೆ...! ಮೊಲ ಹೌಹಾರಿ ಎದ್ದೆನೋ ಬಿದ್ದೆನೋ ಎಂಬಂತೆ ಓಡತೊಡಗಿತು. ಆದರೆ ಅದು ಏದುಸಿರು ಬಿಡುತ್ತಾ ಗುರಿ ತಲುಪುವುದರೊಳಗೆ ಆಮೆ ಗೆರೆ ದಾಟಿ ಪಂದ್ಯದಲ್ಲಿ ಗೆದ್ದಾಗಿತ್ತು.

ಈ ಕತೆಯ ನೀತಿ ನಿಮಗೆ ಗೊತ್ತಿದ್ದದ್ದೇ. ಸೋಮಾರಿತನ ಒಳ್ಳೇದಲ್ಲ; ಯಾರನ್ನೂ ಕಡೆಗಣಿಸಬಾರದು; ಕಷ್ಟ ಪಟ್ಟರೆ ಎಂಥವರನ್ನು ಬೇಕಾದರೂ ಸೋಲಿಸಬಹುದು; ಇತ್ಯಾದಿ.

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ. ಈ ಮುಂದುವರಿಕೆಯನ್ನು ನಾನು ಓದಿದ್ದು ವಿಶ್ವೇಶ್ವರ ಭಟ್ಟರ 'ನೂರೆಂಟು ಮಾತು' ಅಂಕಣದಲ್ಲಿ, ನಾಲ್ಕಾರು ವರ್ಷಗಳ ಹಿಂದೆ. ಇಂಗ್ಲೆಂಡಿನಲ್ಲಿ ಬೆಕರ್(?) ಅಂತ ಒಬ್ಬನಿದ್ದಾರಂತೆ. ಬೆಕರ್‌ನ ಕೆಲಸವೆಂದರೆ ಕತೆ ಹೇಳುವುದು. ಜಗತ್ತಿನ ಅತಿರಥ ಮಹಾರಥರೆಲ್ಲ ಈತನ ಸ್ಪೂರ್ತಿ ನೀಡುವ ಕತೆ ಕೇಳಲು ಬರುತ್ತಾರಂತೆ. ಕತೆ ಕೇಳಿ, ಕೇಳಿದಷ್ಟು ಡಾಲರ್ ದುಡ್ಡು ಕೊಟ್ಟು ಹೋಗುತ್ತಾರಂತೆ.

ಬೆಕರ್‌ನ ಬಳಿ ಅಂದು ಲಂಡನ್ನಿನ ದೊಡ್ಡ ಉದ್ಯಮಿಯೊಬ್ಬ ಬಂದಿದ್ದ. ತನ್ನದೇ ಉದ್ಯಮದಲ್ಲಿನ ಮತ್ತೊಂದು ಕಂಪನಿ ತನಗೆ ಕೊಡುತ್ತಿರುವ ಪೈಪೋಟಿಯನ್ನು ಎದುರಿಸಲು ಅವನಿಗೆ ನಾಲ್ಕು ಸ್ಪೂರ್ತಿಭರಿತ ಮಾತು ಬೇಕಿತ್ತು. ಬೆಕರ್ ಇದೇ ಆಮೆ-ಮೊಲದ ಕತೆ ಹೇಳಲು ಶುರು ಮಾಡಿದ. ಈ ಕತೆ ಆ ಉದ್ಯಮಿಗೂ ಗೊತ್ತಿತ್ತು. 'ಅಯ್ಯೋ, ಇದೇನು ಗೊತ್ತಿರೋ ಕತೆಯನ್ನೇ ಹೇಳುತ್ತಿದ್ದಾನಲ್ಲ..' ಅಂದುಕೊಂಡ. ಬೆಕರ್ ಕತೆಯನ್ನು ಮುಂದುವರೆಸಿದ:

ಅವಮಾನಿತ ಮೊಲ ಆಮೆಯನ್ನು ಮತ್ತೊಮ್ಮೆ ಪಂದ್ಯಕ್ಕೆ ಆಹ್ವಾನಿಸುತ್ತದೆ. ಆಮೆ ಒಪ್ಪಿಕೊಳ್ಳುತ್ತದೆ. ಪ್ರಾಣಿಗಳೆಲ್ಲವೂ ಸೇರುತ್ತವೆ. ನರಿ ಶಿಳ್ಳೆ ಊದುತ್ತದೆ. ಓಟ ಶುರುವಾಗುತ್ತದೆ. ಈ ಬಾರಿ ಮೊಲ ಸ್ವಲ್ಪವೂ ಆಲಸ್ಯ ತೋರದೆ, ಯಾವುದೇ 'ಛಾನ್ಸ್' ತೆಗೆದುಕೊಳ್ಳದೆ ಜೋ..ರಾಗಿ ಓಡಿ ಗುರಿ ತಲುಪಿ ಕಿಲೋಮೀಟರುಗಟ್ಟಲೆ ಅಂತರದಿಂದ ಆಮೆಯನ್ನು ಸೋಲಿಸುತ್ತದೆ.

ಈ ಕತೆಯ ನೀತಿಯೆಂದರೆ, ನಮಗಿರುವ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಂಡರೆ ಗೆಲುವು ನಮ್ಮದೇ.

ಕತೆ ಅಷ್ಟಕ್ಕೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ:

ಆಮೆಗೆ ತನ್ನ ಸೋಲನ್ನು ಒಪ್ಪಿಕೊಂಡು ಸುಮ್ಮನಿರುವ ಮನಸ್ಸಿಲ್ಲ. ಅದಕ್ಕೆ ಹೇಗಾದರೂ ಮಾಡಿ ಮೊಲವನ್ನು ಸೋಲಿಸಲೇಬೇಕೆಂಬ ತುಡಿತ. ಅದೊಂದು ಪ್ಲಾನ್ ಮಾಡುತ್ತದೆ. ಮೊಲವನ್ನು ಮತ್ತೆ ಸ್ಪರ್ಧೆಗೆ ಆಹ್ವಾನಿಸುತ್ತದೆ.

ಕಾಡಿನ ಪ್ರಾಣಿಗಳಿಗೆಲ್ಲ ಇದೆಂಥಾ ತಮಾಷೆಯಪ್ಪಾ, ಈ ಆಮೆಗೆ ಬುದ್ಧಿಯಿಲ್ಲ ಅಂತ ಅಪಹಾಸ್ಯ. ಆದರೂ ಎಲ್ಲವೂ ಸೇರುತ್ತವೆ. ಸ್ಪರ್ಧೆ ಶುರುವಾಗುತ್ತದೆ. ಮೊಲ ಓಡತೊಡಗುತ್ತದೆ. ಓಡಿ ಓಡಿ ಓಡಿ ಸುಮಾರು ದೂರ ಬಂದಮೇಲೆ ಅದಕ್ಕೆ ಅರಿವಾಗುತ್ತದೆ: ಓಟದ 'ಟ್ರಾಕ್' ಬದಲಾಗಿಬಿಟ್ಟಿದೆ! ಮಧ್ಯದಲ್ಲೊಂದು ಹೊಳೆ ಅಡ್ಡ ಬಂದುಬಿಟ್ಟಿದೆ! ಈ ಹಿಂದಿನ ಸ್ಪರ್ಧೆಗಳಲ್ಲಿ ಬರೀ ನೆಲದ ಮೇಲೆ ಓಟವಿರುತ್ತಿತ್ತು. ತಾನು ಮೋಸ ಹೋದದ್ದು ಮೊಲಕ್ಕೆ ಅರಿವಾಗುತ್ತದೆ. ಅದು ಇಡೀ ಹೊಳೆಯನ್ನು ದಡದಗುಂಟ ಸುತ್ತುವರೆದು ಓಡಿ ಬಂದು ಗುರಿಯನ್ನು ತಲುಪುವುದರೊಳಗೆ ಆಮೆ ಸಲೀಸಾಗಿ ಹೊಳೆಯನ್ನು ಈಜಿ ಆಚೆ ದಡ ಸೇರಿ ಗುರಿಯನ್ನು ತಲುಪುತ್ತದೆ. ವನ್ಯಮೃಗಗಳೆಲ್ಲ ಆಮೆಯ ಬುದ್ಧಿವಂತಿಕೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡುತ್ತವೆ.

ಈ ಕತೆಯ ನೀತಿಯೆಂದರೆ ಗೆಲ್ಲಲೇಬೇಕು ಎಂದಾದರೆ ಹೇಗಾದರೂ ಗೆಲ್ಲಬಹುದು. ಆಟದಲ್ಲಿ ಮೋಸ ಸಾಮಾನ್ಯ ಮತ್ತು ಕ್ಷಮ್ಯ! ಪ್ರತೀ ಆಟಕ್ಕೂ ಮುಂಚೆ ಅದರ ನಿಯಮಾವಳಿಗಳನ್ನು ಸ್ಪರ್ಧಿಗಳು ಚರ್ಚಿಸಿ ಮನದಟ್ಟು ಮಾಡಿಕೊಂಡಿರಬೇಕು. ಇತ್ಯಾದಿ.

ಕತೆ ಇಲ್ಲಿಗೂ ನಿಲ್ಲುವುದಿಲ್ಲ! ಮತ್ತೂ ಮುಂದುವರೆಯುತ್ತದೆ:

ಮೊಲಕ್ಕೆ ಅರಿವಾಗುತ್ತದೆ, ನಮ್ಮಿಬ್ಬರಿಗೂ ಅವರವರದ್ದೇ ಆದ ಸಾಮರ್ಥ್ಯಗಳಿವೆ. ನಾವಿಬ್ಬರೂ ಹೀಗೆ ಸ್ಪರ್ಧೆ ಮಾಡಿಕೊಂಡು ಇದ್ದರೆ ಒಮ್ಮೆ ನಾನು ಸೋಲುತ್ತೇನೆ, ಇನ್ನೊಮ್ಮೆ ಆಮೆ ಸೋಲುತ್ತದೆ. ಅಷ್ಟೇ ವಿನಃ ಮತ್ತೇನೂ ಪ್ರಯೋಜನವಿಲ್ಲ. ಹೀಗೆ ಯೋಚಿಸಿದ ಮೊಲ ಆಮೆಯ ಮನೆಗೆ ಹೋಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಇಬ್ಬರೂ ಫ್ರೆಂಡ್ಸ್ ಆಗುತ್ತವೆ. ಮತ್ತೆ ತಮ್ಮ ಮಧ್ಯೆ ಸ್ಪರ್ಧೆ ನಡೆಯುತ್ತಿರುವುದಾಗಿ ಕಾಡಿನಲ್ಲಿ ಡಂಗುರ ಸಾರುತ್ತವೆ.

ಇಷ್ಟೊತ್ತಿಗಾಗಲೇ ಆಮೆ-ಮೊಲದ ಓಟದ ಸ್ಪರ್ಧೆ ಕಾಡಿನಲ್ಲೆಲ್ಲಾ ಜನಪ್ರಿಯ (ಪ್ರಾಣಿಪ್ರಿಯ?)ವಾಗಿರುತ್ತದೆ. ಎಲ್ಲಾ ಕಡೆ ಬ್ಯಾನರ್ರು ಕಟ್ಟಲಾಗುತ್ತದೆ. ರಾಜ ಸಿಂಹ ತನ್ನ ಹೆಂಡತಿ ಮಕ್ಕಳ ಸಮೇತ ಬಂದು ಗ್ಯಾಲರಿಯಲ್ಲಿ ಕೂರುತ್ತದೆ. ಟ್ರಾಕಿನ ಇಕ್ಕೆಲಗಳಲ್ಲೂ ಪ್ರಾಣಿಗಳು ಓಟವನ್ನು ವೀಕ್ಷಿಸಲು ನಿಂತಿರುತ್ತವೆ. ಕ್ಷಣಗಣನೆ ಆರಂಭವಾಗುತ್ತದೆ. ನರಿ ವಿಶಲ್ ಊದುತ್ತದೆ.

ಮೊದಲೇ ಗುಪ್ತವಾಗಿ ಮಾತಾಡಿಕೊಂಡಿದ್ದಂತೆ, ಶಿಳ್ಳೆ ಶಬ್ದ ಕೇಳುತ್ತಿದ್ದಂತೆಯೇ ಆಮೆ ಮೊಲದ ಬೆನ್ನೇರಿ ಕೂರುತ್ತದೆ. ಆಮೆ ಜೋರಾಗಿ ಓಡುತ್ತದೆ. ಮಧ್ಯದಲ್ಲಿ ಹೊಳೆ ಬರುತ್ತದೆ. ಆಗ ಆಮೆ ಕೆಳಗಿಳಿದು ತನ್ನ ಬೆನ್ನ ಮೇಲೆ ಮೊಲವನ್ನು ಕೂರಿಸಿಕೊಳ್ಳುತ್ತದೆ. ಹೊಳೆ ದಾಟಿಯಾದ ಮೇಲೆ ಮತ್ತೆ ಮೊಲದ ಬೆನ್ನಮೇಲೆ ಆಮೆ ಕೂರುತ್ತದೆ. ಜೋರಾಗಿ ಓಡಿ, ವೀಕ್ಷಕರೆಲ್ಲ ಬೆಕ್ಕಸ ಬೆರಗಾಗುವಂತೆ, ಸ್ಪರ್ಧೆ ಶುರುವಾದ ಕೆಲವೇ ನಿಮಿಷಗಳಲ್ಲಿ ಆಮೆ-ಮೊಲ ಎರಡೂ ಒಟ್ಟಿಗೇ ಗುರಿ ತಲುಪುತ್ತವೆ.

ಕತೆಯ ನೀತಿಯನ್ನು ಅರಿತ ಲಂಡನ್ನಿನ ಆ ವ್ಯಾಪಾರಿ ವಾಪಸು ತೆರಳಿ ಆ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಎರಡೂ ಕಂಪನಿಗಳೂ ವಿಲೀನವಾಗಿ, ಮುಂದಿನ ವರ್ಷ ದುಪ್ಪಟ್ಟು ಲಾಭ ಗಳಿಸಿ, ಲಂಡನ್ನಿನ ವಿಖ್ಯಾತ ಕಂಪನಿಗಳಾಗುತ್ತವೆ.

ಕತೆ, ಯಕ್ಚುವಲಿ ಇಲ್ಲಿಗೆ ಮುಗಿಯಿತು. ಆದರೆ ನನಗೆ ಇತ್ತೀಚೆಗೊಂದು ಎಸ್ಸೆಮ್ಮೆಸ್ ಬಂದಿತ್ತು. ಈಗ ನೀವು ಈ ಸೀಕ್ವೆಲ್ಲುಗಳನ್ನೆಲ್ಲ ಒಂದು ಕ್ಷಣ ಮರೆತು, ಒರಿಜಿನಲ್ ಆಮೆ-ಮೊಲದ ಕತೆಯನ್ನಷ್ಟೇ ನೆನಪಿಟ್ಟುಕೊಳ್ಳಿ. ನನಗೆ ಬಂದ ಎಸ್ಸೆಮ್ಮೆಸ್ಸು ಹೀಗಿದೆ:

ಆಮೆ ಮತ್ತು ಮೊಲ ಸಿಇಟಿ ಪರೀಕ್ಷೆಗೆ ಕಟ್ಟಿದ್ದವು. ಇಬ್ಬರೂ ಸಮಾನ ಬುದ್ಧಿವಂತರು, ಇಬ್ಬರ ಕೈಯಲ್ಲೂ ಸಮಾನ ಅಂಕಗಳಿದ್ದ ಅಂಕಪಟ್ಟಿಗಳಿದ್ದವು. ಆದರೆ ಕೊನೆಯಲ್ಲಿ, ಆಮೆಗೆ ಸಿಇಟಿಯಲ್ಲಿ ಸೀಟು ಸಿಗುತ್ತದೆ; ಮೊಲಕ್ಕೆ ಸಿಗುವುದಿಲ್ಲ. ಯಾಕೆ?

ಉ: ಯಾಕೇಂದ್ರೆ, ಆಮೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಸೀಟ್ ಸಿಕ್ತು! (ಹಿಂದೆ ಆಮೆ ಓಟದ ಸ್ಪರ್ಧೇಲಿ ಗೆದ್ದಿದ್ದು ನೆನಪಿದೆಯಲ್ವಾ?) :-)

ನನಗೆ ಈ ಎಸ್ಸೆಮ್ಮೆಸ್ಸು ಇಷ್ಟವಾಗಿ ನನ್ನೊಂದಿಷ್ಟು ಗೆಳೆಯ-ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ಅವರಲ್ಲಿ ಒಬ್ಬ ಗೆಳತಿ ರಿಪ್ಲೇ ಮಾಡಿದ್ದಳು:

ಓಹ್ ಅದಕ್ಕೇನಾ ಮೊಲ ಬೇಜಾರಾಗಿ 'ಮುಂಗಾರು ಮಳೆ' ಫಿಲ್ಮಲ್ಲಿ ದೇವದಾಸ್ ಆಗಿ ಗಣೇಶನ ಜೊತೆ ಸೇರಿಕೊಂಡಿದ್ದು..? ಅಂತ!

ಕತೆಯೊಂದು ಮುಂದುವರೆಯುವ ಬಗೆ ಕಂಡು ನನಗೆ ಅಚ್ಚರಿ!

(ಈ 'ಕತೆಗಳ ಕತೆ'ಯನ್ನು ಓದುವಾಗ ನೀವೂ ಮಗುವಾಗಿದ್ದಿರಿ ಅಂತ ನಂಗೊತ್ತು. ನಿಮಗೆ ಮಕ್ಕಳ ದಿನಾಚರಣೆಯ ಶುಭಾಷಯಗಳು!)

Friday, September 28, 2007

ದಾರದ ದಾರಿಯ ದೂರ

ರಾತ್ರಿಗೆ ಈಗ ಹನ್ನೆರಡರ ಜಾವ. ಒಂಟಿ ರೂಮಿನಲ್ಲಿ ಒಂಟಿ ನಾನು. ಒಂಟಿ ಹಾಸಿಗೆ. 'ಬಾ, ನನ್ನ ಮೇಲೆ ಮಲಗು' ಎಂದು ಸುತ್ತಿ ಸುತ್ತಿ ಕೂತಿರುವ ಅದು ಕರೆಯುತ್ತಿದೆ ಹತ್ತಿರದಿಂದ. ನನಗೋ ನಿದ್ರೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಈ 'ಯಯಾತಿ' ಎಂಬ ಹೆಸರಿನ ಪುಸ್ತಕವನ್ನು ಹಿಡಿದು ಕುಳಿತುಬಿಟ್ಟಿದ್ದೇನೆ. ಇದೇನು ಕಾದಂಬರಿಯೋ, ಕಥೆಯೋ, ಗ್ರಂಥವೋ ನನಗೆ ಹೆಸರು ಕೊಡಲು ಸಾಧ್ಯವಾಗುತ್ತಿಲ್ಲ. ಅಮರ ಪ್ರೇಮ ಕಾವ್ಯ ಎಂದರೆ ಸರಿಯಾಗಬಹುದೇನೋ. ಯಯಾತಿಯ ದುಃಖ, ಶಮಾಳ ಪ್ರೀತಿ, ಕಚನ ತತ್ವ, ದೇವಯಾನಿಯ ದುರುಳತನ... ಅಬ್ಬ, ಅದು ಹೇಗೆ ಬರೆದಿದ್ದಾರೆ ವಿ.ಎಸ್. ಖಾಂಡೇಕರ್! ಅದೆಷ್ಟು ಅದ್ಭುತವಾಗಿ ಕನ್ನಡಕ್ಕೆ ತಂದಿದ್ದಾರೆ ವಿ.ಎಂ. ಇನಾಂದಾರ್! ಅದರೊಳಗೇ ಮುಳುಮುಳುಗಿ ಹೋಗುತ್ತೇನೆ ನಾನು.. ಮುಳುಗಿನಲ್ಲೇ ತೇಲಿ ಮತ್ತೆಲ್ಲೋ ಏಳುತ್ತೇನೆ..

ದೂರದ ಚರ್ಚಿನಲ್ಲಿ ಘಂಟೆ ಹೊಡೆದ ಸದ್ದು. ಮೇನ್ ರೋಡಿನಲ್ಲಿ ಏರು ಹತ್ತುತ್ತಿರುವ ಲಾರಿಯ ಸದ್ದು. ಬಲಕಿವಿಯ ಕಡೆಯಿಂದ ಶುರುವಾಗಿ ಎಡಕಿವಿಯ ಕೊನೆಯಲ್ಲಿ ಮುಗಿದುಹೋದಂತೆ ಹಾದುಹೋದ ಯಮಾಹಾ ಬೈಕಿನ ರೊಂಯ್ ಸದ್ದು. ಯಯಾತಿಯ ಇನ್ನೂರಾ ಮೂವತ್ತೇಳನೇ ಪುಟದ ಮೇಲ್ಗಡೆ ಎಡತುದಿಯನ್ನು ಕಿವಿಯಂತೆ ಸಣ್ಣಗೆ ಮಡಿಚಿ ಗುರುತು ಮಾಡಿ ಮುಚ್ಚಿಟ್ಟು ನಾನು ಗೂಡಿನಿಂದ ಹೊರಬರುತ್ತೇನೆ.

ಆಕಾಶದ ಅಂಗಳದ ತುಂಬ ಯಾರೋ ಚುಕ್ಕಿಗಳನ್ನಿಟ್ಟು ಹೋಗಿದ್ದಾರೆ. ಯಾರದಿರಬಹುದು ಕೆಲಸ..? ದೂರದಲ್ಲಿ ಚಂದ್ರ ಕಾಣಿಸುತ್ತಾನೆ... ಪೋಲಿ, ಇವನದೇ ಕೆಲಸ ಇದು ಅಂದುಕೊಳ್ಳುತ್ತೇನೆ. ನನ್ನ ಕವಿಕಲ್ಪನೆಗೆ ಚಂದ್ರ ಮುಗುಳ್ನಗುತ್ತಾನೆ.

ತಣ್ಣನೆ ಟೆರೇಸು. ಒಂದು, ಎರಡು, ಮೂರು, ನಾಲ್ಕು ....ಐದನೇ ಹೆಜ್ಜೆ ಇಟ್ಟವನು, ಏನೋ ತಡೆದಂತಾಗಿ ಹಿಂದಡಿಯಿಡುತ್ತೇನೆ. ಏನೋ ತಡೆದಂತಾಯಿತು. ತಂತಿಯಂತಹುದು. ಅಥವಾ ಹಗ್ಗ. ಇನ್ನೆರೆಡು ಹೆಜ್ಜೆ ಹಿಂದಿಟ್ಟು ನಾನು ಕಣ್ಣನ್ನು ಕಿರಿದು ಮಾಡಿ ನೋಡುತ್ತೇನೆ. ಹೌದು, ಹಗ್ಗ. ಒಂದು ದಾರ. ಹೊಲಿಯಲು ಬಳಸುತ್ತಾರಲ್ಲ, ಅಂತಹ ಒಂದು ದಾರ. ನನ್ನ ಎದೆ ಮಟ್ಟದಲ್ಲಿ ಟೆರೇಸಿನಲ್ಲಿ ಅಡ್ಡ ಹೋಗಿದೆ. ನಾನು ಆಚೆ ದಾಟದಂತೆ, ಬೇಲಿಯಂತೆ, ಗಡಿರೇಖೆಯಂತೆ ನನ್ನನ್ನು ತಡೆದು ನಿಲ್ಲಿಸಿದೆ. ಬೆಳದಿಂಗಳ ಬೆಳಕಿಗೆ ಬೆಳ್ಳಗೆ ಹೊಳೆಯುತ್ತಿದೆ. ತಂಬೂರಿಯ ತಂತಿಯಂತೆ ನಾನದನ್ನು ಮೀಟುತ್ತೇನೆ. ಗಾಳಿಯಲ್ಲೊಮ್ಮೆ ತುಯ್ದಾಡುತ್ತದೆ ದಾರ. ಸಂಜೆ ಮನೆಗೆ ಬರುವಾಗ ಇರಲಿಲ್ಲವಲ್ಲ ಈ ದಾರ? ಈಗೆಲ್ಲಿಂದ ಬಂತು ಇದು? ಎಲ್ಲಿಗೆ ಹೋಗಿದೆ? ಯಾರು ಎಳೆದದ್ದು ಇದನ್ನು? ಯಾಕೆ ಎಳೆದದ್ದು?

ನನಗೆ ಏನೋ ನೆನಪಾದಂತಾಗುತ್ತದೆ. ಕ್ಷಣದಲ್ಲೇ ಆ ನೆನಪು ಸ್ಪಷ್ಟವಾಗುತ್ತದೆ. ಚಿಕ್ಕವನಿದ್ದಾಗ ನಾನೂ ಹೀಗೇ ದಾರ ಎಳೆದು ಆಟವಾಡುತ್ತಿದ್ದುದು... ನಾವು ಟೆಲಿಫೋನ್ ಆಟ ಆಡುತ್ತಿದ್ದೆವು. ಒಂದು ಟೂಥ್‍ಪೇಸ್ಟ್ ಡಬ್ಬಿಯನ್ನು ಮಧ್ಯದಲ್ಲಿ ಕತ್ತರಿಸಬೇಕು. ಈಗ ಎರಡು ಪುಟ್ಟ ಪುಟ್ಟ ಡಬ್ಬಿಗಳಾಗುತ್ತವಲ್ಲ, ಒಂದು ಊದ್ದ ದಾರ ತೆಗೆದುಕೊಂಡು ಒಂದು ತುದಿಯನ್ನು ಒಂದು ಡಬ್ಬಿಯ ತುದಿಗೆ ಕಟ್ಟುವುದು. ದಾರದ ಮತ್ತೊಂದು ತುದಿಯನ್ನು ಮತ್ತೊಂದು ಡಬ್ಬಿಯ ತುದಿಗೆ ಕಟ್ಟುವುದು. ಒಂದು ಡಬ್ಬಿಯನ್ನು ಒಬ್ಬರು ಹಿಡಿದುಕೊಂಡು ಇಲ್ಲೇ ನಿಲ್ಲುವುದು. ಮತ್ತೊಬ್ಬರು ದೂರ ದೂರ ಹೋಗುವುದು. ದೂರ ಹೋಗಿ ಸಣ್ಣಗೆ ಮಾತಾಡುವುದು. ಅದು ಈಚೆಗಿರುವವರಿಗೆ ದಾರದ ಮೂಲಕ ಹರಿದು ಬಂದು ಡಬ್ಬಿಯಲ್ಲಿ ಗುನುಗುಗುನುಗಾಗಿ ಕೇಳಿಸುತ್ತದೆ.

ಅಪ್ಪ ಹೇಳಿಕೊಟ್ಟದ್ದು ಅದನ್ನು ನನಗೆ. ಸಾಗರದಿಂದ ತಂದ ಹೊಸ ಕೋಲ್ಗೇಟ್ ಡಬ್ಬಿಯನ್ನು ಕತ್ತರಿಸಿ ನನಗವನು ಮಾಡಿಕೊಟ್ಟಿದ್ದ ಈ ಫೋನು. ಅವನು ಟೆಲಿಫೋನ್ ತಯಾರಿಸುವಾಗ ಪಕ್ಕದಲ್ಲಿ ಕೂತು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ ನಾನು. ತಯಾರಾದಮೇಲೆ ತಾನೊಂದು ತುದಿ ಹಿಡಿದು ಜಗುಲಿಯ ಮೇಲೆ ನಿಂತು ಮತ್ತೊಂದು ತುದಿಯನ್ನು ನನಗೆ ಕೊಟ್ಟು ದೂರಕ್ಕೆ ಹೋಗುವಂತೆ ಹೇಳಿದ. ನಾನು ಡಬ್ಬಿಯನ್ನು ಹಿಡಿದು ಅಂಗಳಕ್ಕೆ ಓಡಿದೆ. ದಾರ ಬರುವವರೆಗೂ ಹೋಗಿ, ದಾರ ಜಗ್ಗುವಂತಾದಾಗ ನನ್ನನ್ನು ಅಲ್ಲೇ ನಿಲ್ಲುವಂತೆ ಹೇಳಿದ ಅಪ್ಪ. 'ಫೋನ್ ಕಿವೀಲಿ ಇಟ್ಕೋ' ಎಂದ. ನಾನು ಕಿವಿಗೆ ಹಿಡಿದೆ. 'ಹಲೋ ಹಲೋ.. ಪಾಪು.. ಕೇಳ್ತಾ ಇದ್ದಾ..?' ಕೇಳಿದ. ಅಪ್ಪನ ಪಿಸುಮಾತು ದಾರದಲ್ಲಿ ಹರಿಹರಿದು ಬಂದು ಈ ಡಬ್ಬಿಯಲ್ಲಿ ಅಪ್ಪನೇ ಹತ್ತಿರ ನಿಂತು ಮಾತಾಡಿದಂತೆ ಕೇಳಿಸಿ ಏನೋ ಒಂಥರಾ ಭಯವಾದಂತಾಗಿ ನನಗೆ ರೋಮಾಂಚನ! 'ಹಲೋ ಹಲೋ.. ಕೇಳ್ತಾ ಇದ್ದಾ..? ನೀನೂ ಮಾತಾಡು..' ಅಪ್ಪ ಹೇಳುತ್ತಿದ್ದ. ನನಗೆ ಕೇಳಿಸುತ್ತಿತ್ತು. 'ಹಾಂ, ಕೇಳ್ತಾ ಇದ್ದು' ಎಂದೆ. 'ಇನ್ನೂ ಮಾತಾಡು..' ಎಂದ. ಆದರೆ ಅಪ್ಪನ ಜೊತೆ ಇನ್ನೂ ಏನು ಮಾತಾಡುವುದು ಅಂತಲೇ ನನಗೆ ಹೊಳೆಯಲಿಲ್ಲ. ಅಚಾನಕ್ಕಾಗಿ ಅಪ್ಪನ ಜೊತೆ, ಅದೂ ಫೋನಿನಲ್ಲಿ ಏನಂತ ಮಾತಾಡುವುದು? ನಾನು-ಅಪ್ಪ ಸಾಧಾರಣವಾಗಿ ಮಾತಾಡಿಕೊಳ್ಳುತ್ತಿದ್ದುದೇ ಕಮ್ಮಿ. ಅಂಥದರಲ್ಲಿ ಈಗ ಫೋನಿನಲ್ಲಿ ಏನು ಮಾತಾಡುವುದು? ಅಲ್ಲದೆ ನಾನು ಅಷ್ಟರೊಳಗೆ ಫೋನಿನಲ್ಲಿ ಮಾತಾಡಿರಲೇ ಇಲ್ಲ. ನಮ್ಮೂರಿನಲ್ಲಿ ಆಗ ಪಾಪಣ್ಣನ ಮನೆಯಲ್ಲಿ ಮಾತ್ರ ಫೋನಿತ್ತು. ವಿಪಿಟಿ ಫೋನು. ಡಾಕ್ಟ್ರ ಮನೆಯಲ್ಲೂ ಇತ್ತು ಅನ್ಸುತ್ತೆ. ನಾನು ಫೋನಿನಲ್ಲಿ ಮಾತಾಡಿರಲೇ ಇಲ್ಲ. ಪಾಪಣ್ಣನ ಮನೆಗೆ ಹೋದಾಗ ಯಾರಾದರೂ ಮಾತಾಡುತ್ತಿರುವುದನ್ನು ನೋಡಿದ್ದೆ ಅಷ್ಟೆ. ಅದು ಬಿಟ್ಟರೆ ಭಾನುವಾರದ ಸಿನಿಮಾಗಳಲ್ಲಿ ನೋಡಿದ್ದೆ. ನನಗಂತೂ ಅಪ್ಪನೊಟ್ಟಿಗೆ ಏನು ಮಾತಾಡುವುದು ಅಂತಲೇ ತಿಳಿಯದೆ, ತೀರಾ ಸಂಕೋಚವಾಗಿ ಸುಮ್ಮನೆ ನಿಂತುಬಿಟ್ಟಿದ್ದೆ.

ಇದೂ ಹಾಗೆಯೇ ಟೆಲಿಫೋನ್ ವ್ಯವಸ್ಥೆಯಾ? ದಾರದಗುಂಟ ನಾನು ಟೆರೇಸಿನ ತುದಿಗೆ ಬರುತ್ತೇನೆ. ನಮ್ಮ ಪಕ್ಕದ ಮನೆಯ ಟೆರೇಸಿನಿಂದ ಉದ್ಭಸಿದಂತೆ ಕಾಣಿಸುತ್ತದೆ ದಾರದ ತುದಿ. ಹೌದಾ? ಏನೋ, ಸರಿಯಾಗಿ ಕಾಣುತ್ತಿಲ್ಲ. ಇವತ್ತು ಹುಣ್ಣಿಮೆಯಾಗಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ. ಈಗಿನ ಕಾಲದಲ್ಲೂ ಹೀಗೆ ದಾರ ಎಳೆದು ಫೋನ್ ಮಾಡಿಕೊಂಡು ಆಟವಾಡುವ ಮಕ್ಕಳಿದ್ದಾರಾ? ಅದೂ ಬೆಂಗಳೂರಿನಲ್ಲಿ? ಚಿಕ್ಕ ಹುಡುಗರ ಕೈಯಲ್ಲೂ ಮೊಬೈಲುಗಳಿರುವಾಗ ಈ ದಾರ ಎಳೆಯುವ ರಿಸ್ಕು ಯಾರು ತಾನೆ ತೆಗೆದುಕೊಂಡಾರು ಎಂದೆನಿಸಿ ನಗು ಬಂತು.

ಹಾಗಾದರೆ ಏನಿದು ದಾರ? ಹಾಂ, ಹೊಳೆಯಿತು. ಇದು ಗಾಳಿಪಟದ ದಾರ. ಹೌದು, ಸಂಜೆ ಹೊತ್ತಿಗೆ ಪಕ್ಕದ ಮನೆ ಟೆರೇಸಿನ ಮೇಲೆ ನಿಂತು ಇಬ್ಬರು ಹುಡುಗರು ಗಾಳಿಪಟ ಹಾರಿಸುತ್ತಿದ್ದರು. ಬಹುಶಃ ಗಾಳಿಪಟ ಯಾವುದೋ ಮರಕ್ಕೋ, ಟವರ್ರಿಗೋ, ದೊಡ್ಡ ಕಟ್ಟಡದ ತುದಿಗೋ ಸಿಕ್ಕಿಕೊಂಡಿರಬೇಕು. ಕತ್ತಲಾದ್ದರಿಂದ ದಾರವನ್ನು ಹಾಗೇ ಬಿಟ್ಟು ಹೋಗಿದ್ದಾರೆ ಹುಡುಗರು.

ಆದರೂ ನನಗೇಕೋ ಅನುಮಾನ.. ಇದು ಗಾಳಿಪಟದ ದಾರವೇ ಹೌದೇ? ಅಥವಾ ನಾನು ಆಗ ಅಂದುಕೊಂಡಂತೆ ಟೆಲಿಫೋನ್ ಲೈನೇ? ಆ ಕಡೆಯ ಮನೆಯಲ್ಲಿ ಒಬ್ಬ ಹುಡುಗ, ಈ ಕಡೆಯ ಮನೆಯಲ್ಲಿ ಒಬ್ಬ ಹುಡುಗಿ ಇರಬಹುದೇ? ಅವರಿಬ್ಬರೂ ಪ್ರೇಮಿಗಳೇ? ರಾತ್ರಿಹೊತ್ತು, ಎಲ್ಲರೂ ಮಲಗಿರಲು, ಇವರಿಬ್ಬರೇ ಟೆರೇಸಿಗೆ ಬಂದು, ಒಬ್ಬರನ್ನೊಬ್ಬರು ದೂರದೂರದಿಂದ ನೋಡಿಕೊಳ್ಳುತ್ತ, ಈ ಫೋನಿನ ಮೂಲಕ ಪಿಸುಮಾತನಾಡಿಕೊಳ್ಳುತ್ತ, ಬೆಳದಿಂಗಳು ಚೆಲ್ಲಿದ ಟೆರೇಸಿನಮೇಲೆ ನಡೆದಾಡುತ್ತಿರುತ್ತಾರೆಯೇ? ಮಾತು ಸಾಕಾಗಿ, ಕಣ್ಣು ನಿದ್ರೆ ಬಯಸಿ, ಕೆಳಗಿಳಿದುಹೋಗುವ ಮುನ್ನ ಇಬ್ಬರೂ ಫ್ಲೈಯಿಂಗ್ ಕಿಸ್ ರವಾನಿಸಿಕೊಂಡು, ಗುಡ್‍ನೈಟ್ ಹೇಳಿ... ಇಲ್ಲ, ನಾನು ಇಷ್ಟೆಲ್ಲ ಕಲ್ಪನೆ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಯೋಚಿಸುತ್ತಿದ್ದೇನೆ. ತಪ್ಪು ಸುಶ್, ತಪ್ಪು.

ಗಾಳಿಪಟ ಏನಕ್ಕೆ ಸಿಲುಕಿಕೊಂಡಿದೆ? ನಾನು ಟೆರೇಸಿನ ಆಚೆ ತುದಿಗೆ ನಡೆಯುತ್ತೇನೆ. ದಾರದ ಮೈಯನ್ನೇ, ಕಣ್ಣು ನಿಲುಕುವವರೆಗೂ ದೃಷ್ಟಿ ಹಾಯಿಸಿ ನೋಡುತ್ತೇನೆ. ಸ್ವಲ್ಪ ದೂರದವರೆಗೆ ಕಾಣುತ್ತದೆ ಅಷ್ಟೆ. ಆಮೇಲೆ ಏನಾಗಿದೆಯೋ ಎಲ್ಲಿಗೆ ಹೋಗಿದೆಯೋ ಹೇಗೆ ಮುಂದುವರೆದಿದೆಯೋ ಗೋಚರಿಸುವುದಿಲ್ಲ. ಬೆಳಗ್ಗೆ ಎದ್ದಕೂಡಲೇ ನೋಡಬೇಕು ಎಂದುಕೊಳ್ಳುತ್ತೇನೆ. ಆಕಳಿಕೆ ಬರುತ್ತದೆ.

ಟಾಯ್ಲೆಟ್ಟಿಗೆ ಹೋಗಿಬಂದು ರೂಮಿನೊಳಸೇರುವಾಗ ಮತ್ತೆ ನೆನಪು ಮುಂದುವರೆಯುತ್ತದೆ: ಅಪ್ಪ ಮಾಡಿಕೊಟ್ಟ ಫೋನು ನನಗೆ ತುಂಬಾ ಇಷ್ಟವಾಗಿಬಿಟ್ಟು, ನಾನು ಊರ ಹುಡುಗರಿಗೆಲ್ಲ ತೋರಿಸಿ, ಕೊನೆಗೆ ನಮ್ಮ ಮನೆಗೂ ಮಧು ಮನೆಗೂ ಒಂದು ಟೆಲಿಫೋನ್ ಲೈನ್ ಎಳೆದಿದ್ದೆವು ನಾವು! ಆದರೆ 'ತಾಂತ್ರಿಕ ಅಡಚಣೆ'ಗಳಿಂದಾಗಿ ನಮ್ಮ ಟೆಲಿಫೋನ್ ವ್ಯವಸ್ಥೆ ಸಕ್ಸಸ್ ಆಗಿರಲಿಲ್ಲ. ಮಧು 'ಕೇಳ್ತಾ ಇದ್ದನಾ?' ಎಂದು ಕೂಗುತ್ತಿದ್ದುದು ನನಗೆ ಡೈರೆಕ್ಟಾಗಿಯೇ ಕೇಳಿಸುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಿದುದಕ್ಕೆ ಇಬ್ಬರ ಮನೆಯಿಂದಲೂ ಪ್ರಶಂಸೆ ಸಿಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡು ಶುರುಮಾಡಿದ್ದ ನಮಗೆ ಒಂದು ಪೂರ್ತಿ ನೂಲಿನುಂಡೆ ವೇಸ್ಟ್ ಮಾಡಿದ್ದಕ್ಕಾಗಿ ಬೈಗುಳದ ಬಹುಮಾನ ಸಿಕ್ಕಿದ್ದು ಬಿಟ್ಟರೆ ಮತ್ತಿನ್ನೇನೂ ಸಿಕ್ಕಿರಲಿಲ್ಲ.

ಹಾಸಿಗೆ ಬಿಚ್ಚಿ ಮಲಗುವ ಮುನ್ನ ಹೊಳೆಯುತ್ತದೆ: ಹೌದು, ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ. ರೊಟೀನ್ ಲೈಫು. ಬೆಳಗ್ಗೆ ಎದ್ದಕೂಡಲೆ ಸ್ನಾನ ಮಾಡಿ ಆಫೀಸಿಗೆ ಹೊರಡುವುದು, ಸಂಜೆಯವರೆಗೂ ಆಫೀಸು, ಆಫೀಸು ಮುಗಿಸಿ, ಮಧ್ಯದಲ್ಲೇ ಎಲ್ಲೋ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬರುವುದು. ಒಂದಷ್ಟು ಹೊತ್ತು ಏನನ್ನಾದರೂ ಓದಿ ಮಲಗಿಬಿಡುವುದು. ಮತ್ತೆ ಮರುದಿನ ಬೆಳಗ್ಗೆ ಆಫೀಸು.

ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ. ಕಂಡುಕೊಳ್ಳಬೇಕಿದೆ: ಮನೆಯಿಂದ ಮನೆಗೆ, ಮನದಿಂದ ಮನಕ್ಕೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇರುವ ದಾರದ ದಾರಿಯ ದೂರ...


[೨೪.೦೫.೨೦೦೫; ರಾತ್ರಿ ೧]

Friday, August 17, 2007

ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ

ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು... ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, 'ಉಫ್ ಉಫ್' ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ 'ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬರ್ತು.. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..' ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ 'ಏಯ್ ಇನ್ನೂ ನೈವೇದ್ಯ ಆಗಲ್ಲೆ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..' ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...

ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ 'ನಿಮ್ಮನೆ ಪೂಜ್ಯಾತನೇ?' ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...

ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. 'ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತಡ..' ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು.. ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ.. ಅಪ್ಪ ಚುಟುಕಾಗಿ ಪೂಜೆ ಮುಗಿಸಿ, ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.

ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ.. ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು. ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..

ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ 'ಬಿಗಿ ಸಾಕಾ?' ಕೇಳುತ್ತಿದ್ದ. ನಾನು 'ಸಾಕು' ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‍ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು. ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ 'ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ' ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ 'ಇನ್ನೊಂದ್ ಬೆರಳು' ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ 'ಇಶಿಶೀ..!' ಎನ್ನುತ್ತಿದ್ದಳು.

ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ 'ಎಲ್ಲಿ ತುರುಸ್ತು?' ಎಂದು ಕೇಳುತ್ತಾ ತುರುಸಿಕೊಟ್ಟದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.

'ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?' ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ 'ಕೆಂಪೆಲ್ಲಾ ಅಳಿಸಿಹೋದರೇ?' ಅಂತ ಕೈ ತೊಳೆಯಲಿಕ್ಕೆ ಅಂಜಿಕೆ.. 'ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..' ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. 'ಹುಡುಗ್ರಿಗೆ ಇಷ್ಟೇ ಕೆಂಪಾಗದು' ಎಂದವಳಂದಾಗ ಸುಪ್ತ ಸಮಾಧಾನ..

ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು. ಶಾಲೆಯಲ್ಲೂ ಅವತ್ತಿಡೀ 'ನಿಮ್ಮನೆಲಿ ಯಾರು ಬೀಸಿದ್ದು?' 'ಸುಣ್ಣ ಹಾಕಿ ಬೀಸಿದ್ದಿದ್ರಾ?' 'ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು' ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.

ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.

Monday, July 09, 2007

ಗಂಗಮ್ಮನ ಜೀರಿಗೆ

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಓದಿ: ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‍ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನಿತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. 'ಹುಚ್ಚಾಪಟ್ಟೆ ಗಾಳಿ ಸಹ' ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು 'ಈ ವರ್ಷ ಗಂಗಮ್ಮನ ಜೀರಿಗೆ ಫಸಲು ಬಂದಿದೆಯಾ?' ಎಂದು ಕೇಳಲು ಮರೆಯಲಿಲ್ಲ. ಈ ಗಂಗಮ್ಮನ ಜೀರಿಗೆ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ. ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆ, ಬಂದ ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ. ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

ನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ. ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಗಂಗಮ್ಮನ ಜೀರಿಗೆ ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಗಂಗಮ್ಮನ ಜೀರಿಗೆ ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ. ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. 'ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‍ಕಾಯಿ ಜೊತಿಗೆ ಸೇರುಸ್ತಿದ್ದಿ' ಎಂದ ಸರೋಜಕ್ಕನಿಂದ ಹಿಡಿದು 'ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ...' ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ 'ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ' ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಗಂಗಮ್ಮನ ಜೀರಿಗೆಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ 'ಊರಲ್ಲಿ ಗಾಳಿಮಳೆ' ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಗಂಗಮ್ಮನ ಜೀರಿಗೆ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು. ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‍ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! 'ಏನೋ? ಸಿಕ್ಚನೋ?' ಎಂದ ಮಾಬ್ಲಗಿರಣ್ಣನಿಗೆ 'ಇಲ್ಯಾ, ಎರಡೇ ಸಿಕ್ಕಿದ್ದು' ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಗಂಗಮ್ಮನ ಜೀರಿಗೆ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಗಂಗಮ್ಮನ ಜೀರಿಗೆಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ.

[ಈ ಲೇಖನ, ದಿನಾಂಕ ೨೬.೦೮.೨೦೦೭ರ ವಿಜಯ ಕರ್ನಾಟಕ - ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದೆ.]

Thursday, June 21, 2007

ಹತ್ ಗಂಟೆ ಕರೆಂಟು

ಕಾದಂಬರಿ ಓದುತ್ತಿರುವ ಅಪ್ಪ, ಬತ್ತಿ ಹೊಸೆಯುತ್ತಿರುವ ಅಮ್ಮ, ಟೀವಿ ನೋಡುತ್ತಿರುವ ಅಜ್ಜಿ, ಹೋಮ್‍ವರ್ಕ್ ಮಾಡುತ್ತಿರುವ ನಾನು -ಎಲ್ಲರೂ ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಸ್ಥಬ್ಧವಾಗುತ್ತಿದ್ದೆವು. ಸರಿಯಾಗಿ ಹತ್ತು ಗಂಟೆಗೆ ಕರೆಂಟ್ ಹೋಗುತ್ತಿತ್ತು ನಮ್ಮಲ್ಲಿ! ಅದು ಹಾಗೆ ಹೋದಕೂಡಲೇ "ಓಹ್! ಹತ್ ಗಂಟೆ ಕರೆಂಟು.. ಎಲ್ಲಾ ಕೂತಲ್ಲೇ ಕೂತಿರಿ.. ಇನ್ನೊಂದು ನಿಮ್ಷಕ್ಕೆ ಬರ್ತು!" ಅಂತ ಅಜ್ಜಿ ಹೇಳುತ್ತಿದ್ದಳು. ಹೋದ ಕರೆಂಟು ಒಂದರಿಂದ ಎರಡು ನಿಮಿಷಗಳಲ್ಲಿ ವಾಪಸು ಬರುತ್ತಿತ್ತು. ಅಷ್ಟು ಬೇಗ ಅದೆಲ್ಲಿಗೆ ಹೋಗಿ ಬರುತ್ತಿತ್ತೋ ಅದು, ದೇವರೇ ಬಲ್ಲ! ಆದರೆ ಆ ಒಂದು ನಿಮಿಷದ ಅವಧಿಯಲ್ಲಿ, ನನಗೆ ನೆನಪಿದ್ದಂತೆ, ನಾವೆಲ್ಲಾ ಒಂದು ತೀರಾ ಆಪ್ತ ವಾತಾವರಣದಲ್ಲಿರುತ್ತಿದ್ದೆವು.

ಮನೆಯನ್ನೆಲ್ಲಾ ಧುತ್ ಎಂದು ಆವರಿಸಿರುವ ಕತ್ತಲೆ. ಓದುತ್ತಿದ್ದ ಕಾದಂಬರಿ ಆಗತಾನೇ ಪಡೆದುಕೊಳ್ಳ ಹೊರಟಿದ್ದ ಹೊಸ ತಿರುವು, ಹೊಸೆಯುತ್ತಿದ್ದ ಬತ್ತಿಯಲ್ಲಿದ್ದ ದೇವರೆಡೆಗಿನ ಭಕ್ತಿ, ಉರಿಯುತ್ತಿದ್ದ ಟೀವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಮಾಡುತ್ತಿದ್ದ ಹೋಮ್‍ವರ್ಕ್‍ನೆಡೆಗಿನ ನನ್ನ ಶ್ರದ್ಧೆ -ಎಲ್ಲವೂ ಮಾಯವಾಗಿ ಸೀದಾ ವಾಸ್ತವಕ್ಕೆ ಬಂದಿಳಿಯುತ್ತಿದ್ದೆವು ನಾವೆಲ್ಲರೂ. ಇನ್ನೆರೆಡು ನಿಮಿಷಗಳಲ್ಲಿ ಕರೆಂಟು ಬಂದೇ ಬರುತ್ತದೆಂಬ ವಿಶ್ವಾಸ. ಲಾಟೀನು ಹಚ್ಚಲು ಏಳಲಿಕ್ಕೆ ಎಲ್ಲರಿಗೂ ಸೋಮಾರಿತನ. ಆ ಎರಡು ನಿಮಿಷ ನಾವು ಕತ್ತಲೆಯಲ್ಲಿ, ನಮ್ಮ ನಮ್ಮ ಜೊತೆ ಮಾತಾಡಿಕೊಳ್ಳುತ್ತಾ, ಏನೆಂದರೆ ಏನೂ ಮಾಡದೆ, ಶಪಿತ ಗಂಧರ್ವರಂತೆ ಸುಮ್ಮನೆ ಕುಳಿತಿರುತ್ತಿದ್ದೆವು.

ನನಗೆ ಆಗಲೇ ನಿದ್ರೆ ಬರುತ್ತಿರುತ್ತಿತ್ತು. ಬೇಗ ಕರೆಂಟ್ ಬಂದು ಬೇಗ ಹೋಮ್‍ವರ್ಕ್ ಮುಗಿಸಿ ಮಲಗುವ ಆತುರದಲ್ಲಿರುತ್ತಿದ್ದೆ. ಅಪ್ಪನಿಗೆ ಕತೆ ಮುಂದೇನಾಗುವುದೋ ಎಂಬ ಕುತೂಹಲ. ಅಮ್ಮನ ಕೈಗಳಿಗೆ ಬತ್ತಿ ಹೊಸೆದೂ ಹೊಸೆದೂ ಅಭ್ಯಾಸವಾಗಿಬಿಟ್ಟಿದ್ದರಿಂದ, ಹತ್ತಿಯನ್ನು ಬಿಡಿಸುವುದಕ್ಕಾಗಲೀ, ಮಣೆಯ ಮೇಲಿಟ್ಟು ಹೊಸೆಯುವುದಕ್ಕಾಗಲೀ ಬೆಳಕಿನ ಅಗತ್ಯವೇ ಇರಲಿಲ್ಲ. ಅವಳು ತನ್ನ ಪಾಡಿಗೆ ತಾನು ತನ್ನ ಕಾಯಕವನ್ನು ಮುಂದುವರೆಸಿರುತ್ತಿದ್ದಳಾದರೂ ಅಳತೆ ಸರಿಯಾಗಿ ಬರುತ್ತಿದೆಯಾ ಇಲ್ಲವಾ ಎಂಬ ಆತಂಕ. ಅಜ್ಜಿಗೆ ಕರೆಂಟ್ ಹೋದ ಸಂದರ್ಭದಲ್ಲಿ ಧಾರಾವಾಹಿ ಮುಂದೆ ಹೋಗಿಬಿಡುತ್ತದಲ್ಲಾ ಎಂಬ ಚಿಂತೆ: ಯಾರೋ ಬಾಗಿಲು ತಟ್ತಾ ಇದ್ದಿದ್ರು... ಇವಳು 'ಬಂದೇ' ಎನ್ನುತ್ತಾ ಬಾಗಿಲಿನತ್ತ ಧಾವಿಸುತ್ತಿದ್ದಳು... ಸರಿಯಾಗಿ ಅಷ್ಟೊತ್ತಿಗೆ ಹೋಗಬೇಕಾ ಕರೆಂಟು! ಇನ್ನು ಕರೆಂಟು ಬರುವುದರೊಳಗೆ ಏನೇನಾಗಿ ಹೋಗಿರುತ್ತದೋ ಏನೋ? ಛೇ!

ಆದರೆ ಅಜ್ಜಿಯ ಈ ಚಿಂತೆ ಅರ್ಥವಿಲ್ಲದ್ದಾಗಿ ಕಾಣುತ್ತಿತ್ತು ನನಗೆ. ನನ್ನ ಅಜ್ಜಿಗೆ ಟೀವಿ ಹುಚ್ಚು. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲವಾದರೂ ಅವಳು ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನೂ ನೋಡುತ್ತಿದ್ದಳು. ಆಕೆಗೆ ಛಾನೆಲ್ ಬದಲಿಸಲಿಕ್ಕಾಗಲೀ, ರಿಮೋಟ್ ಬಳಸಲಿಕ್ಕಾಗಲೀ ಗೊತ್ತಾಗುತ್ತಿರಲಿಲ್ಲ. ಟೀವಿ ಹಾಕಿಕೊಳ್ಳಲಿಕ್ಕೆ ಮಾತ್ರ ಬರುತ್ತಿತ್ತು. ಹೀಗಾಗಿ, ಟೀವಿ ಹಾಕಿದಾಗ ಯಾವ ಛಾನಲ್ ಬರುತ್ತಿರುತ್ತದೋ ಅದನ್ನೇ ನೋಡುತ್ತಾ ಕೂರುತ್ತಿದ್ದಳು. ಈ ಧಾರಾವಾಹಿಗಳ ವಿಷಯದಲ್ಲಂತೂ ಅವಳು ಸಾಕಷ್ಟು ಕನ್‍ಫ್ಯೂಶನ್ನುಗಳಿಗೆ ಒಳಗಾಗುತ್ತಿದ್ದಳು. ಈ ಛಾನಲ್ಲುಗಳವರು ಒಂದಾದ ನಂತರ ಒಂದು ಧಾರಾವಾಹಿ ಹಾಕುತ್ತಾರೆ. ಅಲ್ಲದೇ ಒಂದು ಧಾರಾವಾಹಿಯಲ್ಲಿನ ತಾರೆಗಳೇ ಮತ್ತೊಂದು ಧಾರಾವಾಹಿಯಲ್ಲೂ ಇರುತ್ತಾರೆ. ಹೀಗಾಗಿ, ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳನ್ನು ನೋಡುತ್ತಿದ್ದ ನನ್ನ ಅಜ್ಜಿ, ಅವೆಲ್ಲವನ್ನೂ ಸೇರಿಸಿ ಏನೋ ಒಂದು ಅರ್ಥ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ, ಕರೆಂಟ್ ಹೋದಾಗ ಧಾರಾವಾಹಿ ಮುಂದುವರೆದುದಕ್ಕೆ ಅಜ್ಜಿ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವಳಿಗೆ ಸಿನಿಮಾಗಳಲ್ಲಿ ಬರುವ ಫ್ಲಾಶ್‍ಬ್ಯಾಕುಗಳಂತೂ ದೇವರಾಣೆ ಅರ್ಥವಾಗುತ್ತಿರಲಿಲ್ಲ. 'ಈಗ ವಿಷ್ಣುವರ್ಧನ್ ಇದ್ದಿದ್ನಲ, ಅವ ಸಣ್ಣಕಿದ್ದಾಗ ಹೆಂಗಿದ್ದಿದ್ದ ಅಂತ ತೋರುಸ್ತಾ ಇದ್ದ' ಎಂದು ನಾವು ಎಕ್ಸ್‍ಪ್ಲನೇಶನ್ ಕೊಟ್ಟರೆ, 'ಹೂಂ ಸುಮ್ನಿರು! ಅಷ್ಟು ದೊಡ್ಡಕಿದ್ದ ಅಂವ ಅದು ಹೆಂಗೆ ಅಷ್ಟು ಸಣ್ಣಕಾಗಕ್ಕೆ ಸಾಧ್ಯ?' ಎನ್ನುತ್ತಿದ್ದಳು. ಅವಳ ಪ್ರಕಾರ ಆ ಹುಡುಗ ಬೇರೆಯವನು, ವಿಷ್ಣುವರ್ಧನ್ ಅಲ್ಲ! ಎಲ್ಲಾದರೂ ಮದುವೆಯ ಸೀನ್ ಬಂದರೆ ಅಡುಗೆಮನೆಯಲ್ಲಿರುತ್ತಿದ್ದ ನನ್ನ ಅಮ್ಮನನ್ನು ಕರೆಯುತ್ತಿದ್ದಳು: 'ಗೌರೀ ಬಾರೇ, ಮದ್ವೆ ತೋರುಸ್ತಾ ಇದ್ದ...!' ಅಂತ. ಅವಳಿಗೆ ಟೀವಿಯಲ್ಲಿ ಮದುವೆ-ಗಿದುವೆ ನೋಡುವುದೆಂದರೆ ಇನ್ನಿಲ್ಲದ ಸಂಭ್ರಮ. ಪುಣ್ಯಕ್ಷೇತ್ರಗಳನ್ನಾಗಲೀ, ವಿದೇಶವನ್ನಾಗಲೀ, ಬೆಂಗಳೂರಿನ ಟ್ರಾಫಿಕ್ಕನ್ನಾಗಲೀ ನೋಡಿ ತಾನೇ ಅಲ್ಲಿಗೆ ಹೋಗಿಬಂದಷ್ಟು ಖುಷಿ ಪಡುತ್ತಿದ್ದಳು. 'ಕಾಶಿಯೂ ಬ್ಯಾಡ ಏನೂ ಬ್ಯಾಡ. ಎಲ್ಲಾ ಇಲ್ಲೇ ಕೂತ್ಕಂಡು ನೋಡ್ಯಾತು ತಗ!' ಎನ್ನುತ್ತಿದ್ದಳು ಅಪ್ಪನ ಬಳಿ.

ನಾವು ಈ ಹತ್ತು ಗಂಟೆ ಕರೆಂಟಿಗೆ ಅದೆಷ್ಟು ಅಡಿಕ್ಟ್ ಆಗಿದ್ದೆವು ಅಂದ್ರೆ, ಒಂದು ದಿನ ಹತ್ತು ಗಂಟೆಗೆ ಕರೆಂಟ್ ಹೋಗಲಿಲ್ಲವೆಂದರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು. ಪ್ರತಿ ಮುಂಜಾನೆಯೂ ಬರುವ ಪೇಪರು ಒಂದು ದಿನ ಬಾರದೇ ಹೋದರೆ ಹೇಗಾಗುತ್ತದೋ ಹಾಗೆ, ಅಥವಾ ದಿನವೂ ಬರುವ ಹಾಲಿನವಳು ಇಂದು ಬಾರದಿದ್ದರೆ ಹೇಗಾಗುತ್ತದೋ ಹಾಗೆ, ಅಥವಾ ಪ್ರತಿದಿನ ಊಟದ ಸಮಯಕ್ಕೆ ಸರಿಯಾಗಿ 'ಮ್ಯಾಂವ್ ಮ್ಯಾಂವ್' ಎನ್ನುತ್ತಾ ಹಾಜರಾಗುತ್ತಿದ್ದ ಬೆಕ್ಕು ಇಂದು ಕಾಣಿಸಿಕೊಳ್ಳದಿದ್ದರೆ ಹೇಗಾಗುತ್ತದೋ ಹಾಗೆ -ನಾವು ಹತ್ ಗಂಟೆಗೆ ಕರೆಂಟ್ ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ವ್ಯಥೆ ಪಡುತ್ತಿದ್ದೆವು.

ಬಹುಶಃ ಈ ಕರೆಂಟು ಹೋದ ಘಳಿಗೆಯಲ್ಲಿ ಆವರಿಸಿಕೊಳ್ಳೂತ್ತಿದ್ದ ಕತ್ತಲೆಯಲ್ಲಿ ನಮಗೇ ತಿಳಿಯದಂಥ ಅದೇನೋ ಮೋಡಿಯಿರುತ್ತಿತ್ತು. ಆಗ ಚಂದ್ರ ಬೆಳದಿಂಗಳಾಗಿ ಮನೆಯೊಳಗೆ ಬರುತ್ತಿದ್ದ. ಆ ಹಿತವಾದ ಮಂದ ತಿಂಗಳ ಬೆಳಕು ಕಿಟಕಿಯ ಸರಳುಗಳ ಚಿತ್ರವನ್ನು ನೆಲದ ಮೇಲೆ ಮೂಡಿಸುತ್ತಿತ್ತು. ನೆಲದ ಮೇಲೆ ಮೂಡಿದ ಆ ಬೆಳಕ ಚಿತ್ತಾರವೇ ಇಡೀ ಮನೆಗೆ ದೀಪವಾಗುತ್ತಿತ್ತು. ಆ ಬೆಳಕಿನಲ್ಲಿ ಅಮ್ಮನ ಮಂದಹಾಸಮಯ ಮುಖದಲ್ಲಿನ ಭಕ್ತಿ, ಅಜ್ಜಿಯ ಸುಕ್ಕುಗಟ್ಟಿದ ಮುಖದಲ್ಲಿನ ಚಡಪಡಿಕೆ, ಅಪ್ಪನ ಶೇವ್ ಮಾಡದ ಮುಖದಲ್ಲಿನ ಕುತೂಹಲ ನನಗೆ ಕಾಣಿಸುತ್ತಿತ್ತು.

ಒಮ್ಮೊಮ್ಮೆ, ತೀರಾ ಒಮ್ಮೊಮ್ಮೆ, ಹೀಗೆ ಹತ್ತು ಗಂಟೆಗೆ ಹೋದ ಕರೆಂಟು ಎಷ್ಟು ಹೊತ್ತಾದರೂ ಬರುತ್ತಲೇ ಇರಲಿಲ್ಲ. ಆಗ ನಮ್ಮಲ್ಲಿ ಯಾರಾದರೂ ಒಬ್ಬರು ಲಾಟೀನು ಹಚ್ಚಲಿಕ್ಕೆ ಏಳುವುದು ಅನಿವಾರ್ಯವಾಗುತ್ತಿತ್ತು. ತಡಕಾಡಿಕೊಂಡು ಹೋಗಿ ಲಾಟೀನು ತಂದು, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಗ್ಲಾಸೇರಿಸಿ, ಬತ್ತಿಯ ಕಿಟ್ಟ ತೆಗೆದು... ಹಚ್ಚಿ ಗ್ಲಾಸು ಇಳಿಸಿದರೆ ಮನೆಯನ್ನೆಲ್ಲಾ ತುಂಬಿಕೊಳ್ಳುತ್ತಿದ್ದ ಹಳದಿ ಬೆಳಕು... ಬೆಳದಿಂಗಳ ಬೆಳ್ಳಿ ಬೆಳಕಿನೊಂದಿಗೆ ಬೆರೆಯುತ್ತಿದ್ದ ಈ ಸ್ವರ್ಣವರ್ಣದ ಬೆಳಕು ಅಮ್ಮನ ಮೂಗುತಿಯನ್ನೂ ಅಜ್ಜಿಯ ಕೈಬಳೆಯನ್ನೂ ಹೊಳೆಸುತ್ತಿತ್ತು.

ಇನ್ನು ಮಾಡಲಿಕ್ಕೇನೂ ಕೆಲಸವಿಲ್ಲ. ಎಲ್ಲಾ ಹಾಸಿಗೆ ಬಿಚ್ಚಿ ಮಲಗಿದರಾಯಿತು. ಮಲಗುವ ಮುನ್ನ ಅಮ್ಮ ಹಾಲಿಗೆ ಹೆಪ್ಪು ಹಾಕಬೇಕಿದೆ, ಅಜ್ಜಿ ಲ್ಯಾಟ್ರೀನಿಗೆ ಹೋಗಿ ಬರಬೇಕಿದೆ, ಅಪ್ಪ ಉಚ್ಚೆ ಹೊಯ್ದು ಬರಬೇಕು ಮತ್ತು ನಾನು ಅಮ್ಮ ತಂದುಕೊಟ್ಟ ಹಾಲನ್ನು ಕುಡಿಯಬೇಕು. ಆದಷ್ಟೂ ವೇಗದಲ್ಲಿ ಮಾಡುತ್ತಿದ್ದೆವು ನಾವು ಆ ಕೆಲಸಗಳನ್ನು... ಎಲ್ಲಾ ಮಾಡಿ ಮುಗಿಸಿ, ನಾನು ಪುಸ್ತಕವನ್ನೆಲ್ಲಾ ಮುಚ್ಚಿಟ್ಟು, ಇನ್ನೇನು ಮಲಗಲು ಹೊರಡಬೇಕು; ಅಷ್ಟರಲ್ಲಿ ಬರುತ್ತಿತ್ತು ಹಾಳು ಕರೆಂಟು! ಆಗ ಕರೆಂಟು ಹೋದುದಕ್ಕೆ ಬೈದುಕೊಂಡಿದ್ದ ನಾವು ಈಗ ಕರೆಂಟು ಬಂದುದಕ್ಕೆ ಶಪಿಸುತ್ತಿದ್ದೆವು ಮನಸಿನಲ್ಲೇ. ಏಕೆಂದರೆ, ಕರೆಂಟು ಬಾರದೇ ಇದ್ದರೆ ನಾವೆಲ್ಲಾ ಹಾಸಿಗೆ ಬಿಚ್ಚಿ ಹಾಯಾಗಿ ಮಲಗಿರುತ್ತಿದ್ದೆವು. ಆದರೆ ಈಗ ಕರೆಂಟು ಬಂದುಬಿಟ್ಟಿದ್ದರಿಂದ ಮತ್ತೆ ನಮ್ಮ ನಮ್ಮ 'ಕೆಲಸ'ಗಳಿಗೆ ವಾಪಸಾಗುವುದು ಅನಿವಾರ್ಯವಾಗಿತ್ತು. ಬಂದ ಕರೆಂಟನ್ನು ಮನದಲ್ಲೇ ಶಪಿಸುತ್ತಾ ಆದರೂ ಬಾಯಲ್ಲಿ 'ಅಬ್ಬ ಸಧ್ಯ! ಬಂತು!' ಎನ್ನುತ್ತಾ ಹುಸಿನಗೆಯಾಡುತ್ತಿದ್ದೆವು. ಮತ್ತೆ ಎಲ್ಲವೂ ಮುಂದುವರೆಯುತ್ತಿದ್ದವು: ಕಾದಂಬರಿ, ಧಾರಾವಾಹಿ, ಬತ್ತಿ ಹೊಸೆಯುವಿಕೆ ಮತ್ತು ಹೋಮ್‍ವರ್ಕ್!

[ನನ್ನ ಬ್ಲಾಗಿನ ಹಿಟ್ಟನ್ನು ಹತ್ತು ಸಾವಿರದ ಗಡಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ತುಂಬಾ ಪ್ರೀತಿಯ ಧನ್ಯವಾದಗಳು.]

Wednesday, May 16, 2007

ಕೃಷ್ಣ ಮತ್ತು ಅಮ್ಮ

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ... ಕೃಷ್ಣ ಗೋಗರೆಯುತ್ತಿದ್ದಾನೆ... ನೋಡಮ್ಮಾ, ಬೆಣ್ಣೆ ಗಡಿಗೆ ನೋಡಮ್ಮಾ: ಎಷ್ಟು ಮೇ...ಲೆ ಇದೆ. ನನ್ನ ಈ ಪುಟ್ಟ ಕೈಗಳು ಅಲ್ಲಿಗೆ ನಿಲುಕುತ್ತವೆಯೇ ಅಮ್ಮಾ...? ನಾನು ಕದ್ದಿಲ್ಲಮ್ಮ.. ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ...

ಮೊನ್ನೆ ಭಾನುವಾರ ಕಲಾಕ್ಷೇತ್ರದಲ್ಲಿ ಎಂ.ಡಿ. ಪಲ್ಲವಿ ಹಾಡುತ್ತಿದ್ದರೆ ನಾವೆಲ್ಲಾ ಮಂತ್ರಮುಗ್ಧರಂತೆ ಕುಳಿತಿದ್ದೆವು. ನಮ್ಮೆಲ್ಲರ ಕಣ್ಣ ಮುಂದೂ ಬೆಣ್ಣೆಯ ಮೆತ್ತಿದ ಬಾಯ ಮುದ್ದುಕೃಷ್ಣ ಓಡಾಡುತ್ತಿದ್ದ. ಅಮ್ಮ ಯಶೋಧೆ ಕೈಯಲ್ಲಿ ಬೆತ್ತ ಹಿಡಿದು ಕೃಷ್ಣನನ್ನು ಹೆದರಿಸುತ್ತಿದ್ದಳು. ಕೃಷ್ಣನ ಮುಗ್ಧ ಬೇಡಿಕೆಯ ಮುಂದೆ ಅವಳ ಕೋಪವೆಲ್ಲ ಇಳಿಯುತ್ತಿದ್ದುದು ನಮಗೆ ಕಾಣುತ್ತಿತ್ತು. ಕೊನೆಗೊಮ್ಮೆ ಅವಳು, ಇನ್ನೇನು ಅಳಲಿರುವ ಮುಖದ ಕಂದ ಕೃಷ್ಣನನ್ನು ನೋಡಲಾಗದೇ, ಬರಸೆಳೆದು ಅಪ್ಪಿ ಮುತ್ತಿಕ್ಕಿ ಎತ್ತಿಕೊಂಡಾಡುವಾಗ ನಾವೆಲ್ಲಾ ಚಪ್ಪಾಳೆ ತಟ್ಟುತ್ತಿದ್ದೆವು: ಹಾಡು ಮುಗಿದಿತ್ತು.

ಮಗು ಅಳುವುದನ್ನು ತಾಯಿ ಸಹಿಸಲಾರಳು. ತಡೆಹಿಡಿಯಲಾರದಷ್ಟು ಕೋಪ ಬಂದಾಗ ಒಂದೇಟು ಕೊಟ್ಟಾಳು: ಆದರೆ ಅದು ಅಳಲಾರಂಭಿಸಿದ ಮರುಕ್ಷಣ ಮತ್ತೆ ಅದನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡು 'ಓಓಓ.. ಹೋಯ್ತು ಹೋಯ್ತು.. ಎಲ್ಲೀ..? ಎಲ್ಲಿ ಅಬ್ಬು ಆಗಿದ್ದು? ಇಲ್ಲಾ? ಏ.. ಹೋತು.. ಹುಸಿಕಳ್ಳ..!' ಎನ್ನುತ್ತಾಳೆ ಮತ್ತು ಮಗುವ ಅಳುವ ಕಡಲಲ್ಲಿ ನಗೆಯ ಹಾಯಿದೋಣಿ ತೇಲಿಬರುತ್ತದೆ. ಅಮ್ಮನ ಹೊಡೆತವನ್ನು ಅರೆಕ್ಷಣದಲ್ಲಿ ಮರೆತುಬಿಡುತ್ತದೆ ಮಗುವಿನ ಮುಗ್ದ ಮನಸು. ಅಮ್ಮನ ತೆಕ್ಕೆ ನೀಡುವಷ್ಟು ಸುಖವನ್ನು ಮತ್ತಿನ್ನೇನೂ ನೀಡಲಾರದೇನೋ?

ನನ್ನಮ್ಮನೂ ಹಾಗೇ. ನಮ್ಮನೆಯಲ್ಲಿ ನನಗೆ ಯಾರೂ ಹೊಡೆಯುತ್ತಿರಲಿಲ್ಲ. ಹೊಡೆತ ತಿನ್ನುವಂತಹ ತಪ್ಪನ್ನು ನಾನು ಮಾಡುತ್ತಲೇ ಇರಲಿಲ್ಲ! ನನ್ನ ಅಪ್ಪ-ಅಮ್ಮರಿಂದ ಇಷ್ಟರೊಳಗೆ ನಾನು ತಿಂದದ್ದು ಮ್ಯಾಕ್ಸಿಮಮ್ ಎಂದರೆ ಹದಿನೈದಿಪತ್ತು ಹೊಡೆತಗಳು. ಅದೂ ರಾಜನೆಲ್ಲಿ ಗಿಡದ ಸಣ್ಣ ಕೋಲಿನಿಂದ. ಹೊಡೆತ ತಿಂದದ್ದೂ ತಪ್ಪು ಮಾಡಿದ್ದಕ್ಕಲ್ಲ. ನಾನು ಚಿಕ್ಕವನಿದ್ದಾಗ ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಅದಕ್ಕಾಗಿ ಅಮ್ಮ ಆ ಪುಟ್ಟ ಬರ್ಲು ಹಿಡಿದು ಎದುರು ನಿಂತು ಊಟ ಮಾಡಿಸುತ್ತಿದ್ದಳು. ನನ್ನ ಮುಖ ಸಿಕ್ಕಾಪಟೆ ಒಡೆಯುತ್ತಿತ್ತು. ಅದಕ್ಕೆ ಹಚ್ಚಿಕೋ ಅಂತ ಅಮ್ಮ ವ್ಯಾಸಲೀನ್ ಕೊಡುತ್ತಿದ್ದಳು. 'ಅದ್ನ ಹಚ್ಕೊಂಡ್ರೆ ಮುಂದೆ ಗಡ್ಡ-ಮೀಸೆ ಹುಟ್ಟೋದಿಲ್ವಂತೆ!' ಅಂತ ನನಗೆ ಯಾರೋ ಹೇಳಿಬಿಟ್ಟಿದ್ದನ್ನು ಬಲವಾಗಿ ನಂಬಿದ್ದರಿಂದ ನಾನು ಹಚ್ಚಿಕೊಳ್ಳುತ್ತಿರಲಿಲ್ಲ. ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ನನ್ನನ್ನು ಅಮ್ಮ ಹಿಡಿದು, ಎರಡು ಪೆಟ್ಟು ಕೊಟ್ಟು, ವ್ಯಾಸಲೀನ್ ಹಚ್ಚುತ್ತಿದ್ದಳು. ಈಗ ಕನ್ನಡಿಯ ಮುಂದೆ ನಿಂತರೆ ಒತ್ತಾಗಿ ಬಂದಿರುವ ಮೀಸೆ ಅಣಕಿಸುತ್ತದೆ: 'ಮಗನೇ ಶೇವ್ ಮಾಡ್ಕೋ' ಅಂತ!

ಮೊನ್ನೆ ಮಲ್ಲೇಶ್ವರಂನಲ್ಲಿ ಶಾಪಿಂಗಿನ ನೆಪದಲ್ಲಿ ಓಡಾಡುತ್ತಿದ್ದಾಗ ಚಂದ ಹುಡುಗಿಯರನ್ನು ನೋಡುತ್ತಾ ನನ್ನ ಗೆಳೆಯ 'ಕಣ್ಣಿಗೆ ತಂಪ್ ಆಗ್ತಾ ಇದೆ ಕಣಯ್ಯಾ..!' ಎಂದಾಗ ನನಗೆ ಹಳೆಯದೇನೋ ನೆನಪಾಯಿತು. ಚಿಕ್ಕವನಿದ್ದಾಗ ತಲೆಗೆ ಎಣ್ಣೆ ಹಾಕಿಕೊಳ್ಳಲಿಕ್ಕೆ ನನಗೆ ಅದೇಕೋ ತುಂಬಾ ಕಿರಿಕಿರಿಯಾಗುತ್ತಿತ್ತು. ಆದರೆ ಅಮ್ಮ ಬಿಡುತ್ತಿರಲಿಲ್ಲ. 'ಕಣ್ಣಿಗೆ ತಂಪು.. ದಿನಾನೂ ಹಾಕ್ಯಳವು..' ಎನ್ನುತ್ತಾ ಕೊಬ್ರಿ ಎಣ್ಣೆ ಗಿಂಡಿಯನ್ನು ಕೈಯಲ್ಲಿ ಹಿಡಿದು ಓಡಿಹೋಗುವ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಳು. ಕಟ್ಟೆಯ ಮೇಲೆ ಓಡುತ್ತೋಡುತ್ತಾ ಇಡೀ ಮನೆಯನ್ನು ಸುತ್ತು ಹೊಡೆಸುತ್ತಿದ್ದೆ ನಾನು. ಕೊನೆಗೆ ಸುಸ್ತಾಗುತ್ತಿದ್ದುದು ಅಮ್ಮನಿಗೇ. 'ಥೋ! ಎಂಥಾರು ಮಾಡ್ಕ್ಯ' ಎಂದು ಅಲ್ಲೇ ನಿಲ್ಲುತ್ತಿದ್ದಳು. ತಕ್ಷಣ ಅಮ್ಮನ ಬಳಿಗೆ ವಾಪಸು ಓಡಿ ನೆತ್ತಿಗೆ ಎಣ್ಣೆ ಹಾಕಿಸಿಕೊಂಡು ಬರುತ್ತಿದ್ದೆ. ಈಗ ಹುಡುಗಿಯರನ್ನು ನೋಡುವಾಗ ಸಿಗುವ ತಂಪಿಗಿಂತಲೂ ತಂಪು ಆ ಎಣ್ಣೆಯಲ್ಲಿರುತ್ತಿತ್ತು.

ಶಾಲೆಗೆ ಹೊರಟ ನನ್ನ ಯುನಿಫಾರಂನ್ನು ಅಮ್ಮ ಚಡ್ಡಿಯೊಳಗೆ ಸಿಕ್ಕಿಸಿ 'ಇನ್' ಮಾಡುತ್ತಿದ್ದಳು. ನಂಗೆ ಕಚಗುಳಿಯಾಗಿ 'ಅಯ್ಯೋ ಸಾಕು ಬಿಡಮ್ಮ' ಅನ್ನುತ್ತಿದ್ದೆ. ಅಮ್ಮ ಬಿಡುತ್ತಿರಲಿಲ್ಲ. ಕ್ರಾಪು ತಿದ್ದಿ ತಲೆ ಬಾಚಿ ಮುಖಕ್ಕೆ ಪೌಡರು ಬಳಿದು ಕೋತಿಮರಿಗೆ ಸಿಂಗಾರ ಮಾಡಿ ಕಳುಹಿಸುತ್ತಿದ್ದಳು. ಶಾಲೆಯಿಂದ ವಾಪಸು ಬಂದಕೂಡಲೇ ನನಗೆ ಅವಲಕ್ಕಿ-ಮೊಸರು ಕೊಡುತ್ತಿದ್ದಳು.

ಹಂಡೆಯಲ್ಲಿನ ಬಿಸಿನೀರನ್ನು ಚೊಂಬಿನಲ್ಲಿ ಮೊಗೆದುಕೊಳ್ಳಲು ನನಗೆ ಕೈ ಎಟುಕುತ್ತಿರಲಿಲ್ಲವಾದ್ದರಿಂದ ಅಮ್ಮನೇ ದಿನಾನೂ ಸ್ನಾನ ಮಾಡಿಸುತ್ತಿದ್ದುದು. ಅವಳು ಹಂಡೆಯ ಬಿಸಿನೀರನ್ನು ಮೊದಲು ಒಂದು ಬಕೆಟ್ಟಿಗೆ ಹಾಕಿ, ಅದಕ್ಕೆ ತಣ್ಣೀರು ಬೆರೆಸಿ, ಹೂಬೆಚ್ಚಗಿನ ನೀರು ಮಾಡಿ ನನಗೆ ಸ್ನಾನ ಮಾಡಿಸುತ್ತಿದ್ದಳು. ಮೈಮುಖಕ್ಕೆಲ್ಲಾ ಸೋಪು ಹಚ್ಚಿ, ಕಣ್ಣು ಮುಚ್ಚಿಕೊಂಡ ನನಗೆ ಏನೇನೂ ಕಾಣುತ್ತಿರಲಿಲ್ಲವಾಗಿರಲು, ಅಮ್ಮ ಎಲ್ಲೆಲ್ಲೆಲ್ಲ ತಿಕ್ಕಿ, 'ಸಾಕು ಅಮ್ಮಾ.. ಕಣ್ಣು ಉರಿತು.. ನೀರು ಹಾಕು...' ಎಂದು ನಾನು ಕೂಗಿಕೊಂಡಾಗ ಹೂಬೆಚ್ಚಗಿನ ನೀರನ್ನು ಹೊಯ್ಯುತ್ತಿದ್ದಳು. ಆ ಬಿಸಿಬಿಸಿ ಹಬೆಯಾಡುವ ಚೊಂಬ ನೀರುಗಳ ಮಧ್ಯೆ ಒಂದೇ ಒಂದೇ ಚೊಂಬು ತಣ್ಣೀರು ಹೊಯ್ದುಬಿಡುತ್ತಿದ್ದಳು ತುಂಟಿ ಅಮ್ಮ... ನನಗೆ ಆಗ ಮೈಯೆಲ್ಲಾ ರೋಮಾಂಚನವಾಗಿ, ಚಳಿಯಾಗಿ ನಡುಗಿ, ಮೈಪುಳಕದ ಖುಷಿಗೆ 'ಏ.... ಅಮ್ಮಾ.....' ಎನ್ನುತ್ತಾ ಬಚ್ಚಲ ತುಂಬಾ ತೈತೈ ಎಂದು ಕುಣಿದಾಡುತ್ತಿದ್ದೆ. ಅಮ್ಮನ ಸೀರೆಯೆಲ್ಲಾ ಒದ್ದೆಯಾಗುತ್ತಿತ್ತು. ತುಂಬಾ ಚಿಕ್ಕವನಿದ್ದಾಗ ದುಂಡಗೆ ನಿಂತು ಅಮ್ಮನ ಬಳಿ ಸ್ನಾನ ಮಾಡಿಸಿಕೊಳ್ಳುತ್ತಿದ್ದ ನಾನು ಆಮೇಲಾಮೇಲೆ ಅಂಡರ್‌ವೇರ್ ಬಿಚ್ಚಲಿಕ್ಕೆ ನಾಚಿಕೆ ಪಟ್ಟುಕೊಳ್ಳತೊಡಗಿದೆ. ಅಮ್ಮ, ತಲೆ, ಮೈ, ಕೈ, ಕಾಲು -ಎಲ್ಲಾ ತಿಕ್ಕಿ ಸ್ನಾನ ಮಾಡಿಸಿ, ಬಕೆಟ್ಟಿನಲ್ಲಿ ಕೊನೆಯ ನಾಲ್ಕು ಚೊಂಬು ನೀರು ಉಳಿಸಿ, 'ಚಡ್ಡಿ ಬಿಚ್ಚಿ ಅಲ್ಲೆಲ್ಲಾ ತೊಳ್ಕ ನೀನೇ' ಎಂದು ಬಾಗಿಲು ವಾರೆ ಮಾಡಿಕೊಂಡು ಹೋಗುತ್ತಿದ್ದಳು.

ಚಿಕ್ಕವನಿದ್ದಾಗ ನಾನು ಓದಿನಲ್ಲಿ ಚುರುಕಿದ್ದದ್ದರಿಂದ ನನಗೆ ಪಾಠ ಹೇಳಿಕೊಡುವ ಕಷ್ಟವೇನು ಅಮ್ಮ-ಅಪ್ಪ ಇಬ್ಬರಿಗೂ ಬರಲಿಲ್ಲ. ಆದರೂ ಮಗ್ಗಿ ಹೇಳುವಾಗ ತಪ್ಪಾದರೆ ಅಮ್ಮ ಎಚ್ಚರಿಸುತ್ತಿದ್ದಳು. ದಿನವೂ ಸಂಜೆ 'ಚೈತ್ರ ವೈಶಾಖ', 'ಪ್ರಭವ ವಿಭವ', 'ಮೇಷ ವೃಷಭ' ಇತ್ಯಾದಿ ಬಾಯಿಪಾಠ ಮಾಡಿಸುತ್ತಿದ್ದಳು. ತಪ್ಪದೇ ದೇವರಿಗೆ ನಮಸ್ಕಾರ ಮಾಡಿಸುತ್ತಿದ್ದಳು. ಊಟಕ್ಕೆ ಮುನ್ನ 'ಅನ್ನಪೂರ್ಣೆ ಸದಾಪೂರ್ಣೆ..' ಹೇಳಿಸುತ್ತಿದ್ದಳು. ಸಂಜೆ ದೀಪ ಹಚ್ಚಿದಾಕ್ಷಣ 'ದೀಪಂಜ್ಯೋತಿ ಪರಬ್ರಹ್ಮ..' ಹೇಳಿಸುತ್ತಿದ್ದಳು. ಬೆಳಗ್ಗೆ ಎದ್ದಕೂಡಲೇ 'ನಮಸ್ತೇ ನಾರಾಯಣಾಯ..' ಹೇಳಿಸುತ್ತಿದ್ದಳು. "ರಾತ್ರಿ ಮಲಗುವ ಮುನ್ನ 'ಹರೀ ಶಿವ ಮೃತ್ಯುಂಜಯ' ಹೇಳಿಕೊಂಡು ಮಲಗಿದರೆ ಕೆಟ್ಟ ಕನಸು ಬೀಳುವುದಿಲ್ಲ" ಎನ್ನುತ್ತಿದ್ದಳು. ಅವೆಲ್ಲವನ್ನೂ ನಾನು ಚಾಚೂ ತಪ್ಪದೇ ಮಾಡುತ್ತಿದ್ದೆ.

ಅದೊಂದು ರಾತ್ರಿ ನನಗೆ ನೂರಾಮೂರು ಡಿಗ್ರಿ ಜ್ವರ ಬಂದಿತ್ತು. ಅಪ್ಪ ಸೈಕಲ್ಲಲ್ಲಿ ಉಳವಿಗೆ ಹೋಗಿ ನಾರಾಯಣಮೂರ್ತಿ ಡಾಕ್ಟರನ್ನು ಎಬ್ಬಿಸಲು ನೋಡಿದರೆ ಅವರು ಬಾಗಿಲೇ ತೆರೆಯಲಿಲ್ಲವಂತೆ. ಕೊನೆಗೆ ಮೆಡಿಕಲ್ ಶಾಪಿನವರ ಮನೆಗೆ ಹೋಗಿ, ಅವರನ್ನು ಅಂಗಡಿಗೆ ಕರಕೊಂಡು ಬಂದು, ಎರಡು ಸ್ಟ್ರಾಂಗ್ ಮಾತ್ರೆ ಕೊಂಡುತಂದಿದ್ದ ಅಪ್ಪ. ಬೆಳಗಾಗುವ ವರೆಗೂ ಅಮ್ಮ ನಿದ್ರೆ ಮಾಡದೇ, ನನ್ನ ಬಳಿಯೇ ಕುಳಿತು, ವದ್ದಳ್ಳಿ ಶ್ರೀಧರ ಸ್ವಾಮಿಗಳಿಗೆ ಹರಕೆ ಹೊತ್ತುಕೊಂಡು, ನನ್ನ ಹಣೆಯ ಮೇಲೆ ಒದ್ದೆ ಬಟ್ಟೆ ಹಾಕುತ್ತಾ ಕುಳಿತಿದ್ದುದು ನನಗೆ ಆ ಮಂಪರಿನಲ್ಲೂ ಅರಿವಾಗುತ್ತಿತ್ತು. ಅಪ್ಪ ಉಳವಿಯಿಂದ ವಾಪಸ್ ಬಂದು ಸಮಾಧಾನ ಮಾಡುವವರೆಗೆ ಅಮ್ಮ ಸಣ್ಣಗೆ ಬಿಕ್ಕುತ್ತಿದ್ದುದು ನನ್ನ ಕಿವಿಯಲ್ಲಿ ಇನ್ನೂ ಇದೆ.

. . . . . . . .

ಹಾಗೇ ನೋಡುತ್ತಾ ಹೋದರೆ ಈ ಜಗದಲ್ಲಿ ಎಷ್ಟೊಂದು ತುಂಟ ಕೃಷ್ಣರು... ಅವರಿಗೆಲ್ಲಾ ಎಷ್ಟು ಒಳ್ಳೇ ಅಮ್ಮಂದಿರು... ಈಗ ನಾನು ಬೆಂಗಳೂರಿನಲ್ಲಿದ್ದೇನೆ. ಅಮ್ಮ ಊರಲ್ಲಿದ್ದಾಳೆ. ಕರುಳ ಬಳ್ಳಿಯ ಬಂಧ, ಹೌದು, ಬೆಸೆದುಕೊಂಡೇ ಇದೆ. ಆದರೆ ನಡುವೆ ಎಷ್ಟು ದೊಡ್ಡ ಶರಧಿಯಿದೆ..! ಈಗ ನನಗೆ ಅಮ್ಮ ಹೊಡೆಯುವುದಿಲ್ಲ, ಮುಖಕ್ಕೆ ವ್ಯಾಸಲೀನ್ ಹಚ್ಚುವುದಿಲ್ಲ, ತಲೆಗೆ ಎಣ್ಣೆ ಹಾಕುವುದಿಲ್ಲ, ಸ್ನಾನ ಮಾಡಿಸುವುದಿಲ್ಲ, ಬಾಯಿಪಾಠ ಮಾಡಿಸುವುದಿಲ್ಲ... ಈಗ ನಾನು ದೇವರಿಗೆ ನಮಸ್ಕಾರ ಮಾಡುವುದಿಲ್ಲ... ಈಗ ಜ್ವರ ಬಂದರೆ ನಾನೇ ಡಾಕ್ಟರ ಬಳಿಗೆ ಹೋಗಿ ಬರಬೇಕು... ಆದರೂ ದಿನವೂ ಫೋನ್ ಮಾಡಿ ನನ್ನ ಆರೋಗ್ಯ ವಿಚಾರಿಸಿಕೊಳ್ಳುತ್ತಾಳೆ, 'ಹೋಟೆಲ್ಲಿನಲ್ಲಿ ತಿನ್ನಬೇಡ, ಮನೆಯಲ್ಲೇ ಮಾಡ್ಕೊಳ್ಳಿ' ಅಂತಾಳೆ, 'ಸ್ಯಾಲರಿ ಜಾಸ್ತಿ ಮಾಡಿದ್ರಾ?' ಕೇಳ್ತಾಳೆ, 'ರೋಡ್ ಕ್ರಾಸ್ ಮಾಡ್ಬೇಕಾದ್ರೆ ಹುಷಾರಿ' ಎನ್ನುತ್ತಾಳೆ, 'ಯಾವಾಗ ಊರಿಗೆ ಬರ್ತೀಯಾ?' ಕೇಳ್ತಾಳೆ...

ಈ ವರ್ಷದ 'ಮದರ್ಸ್ ಡೇ'ಗೆ ಸ್ವಲ್ಪ ವಿಶೇಷವಿತ್ತು. 'ಮದರ್ಸ್ ಡೇ'ಯ ಹಿಂದಿನ ದಿನವೇ ನನ್ನ ಬರ್ಥ್ ಡೇ! ಅಮ್ಮನ ಹೊಟ್ಟೆಯೊಳಗಿಂದ ನಾನು ಕೊಸರಾಡಿ ಗುದ್ದಾಡಿ ಹೊರಬಂದು 'ಅಮ್ಮನನ್ನು ಅಮ್ಮನನ್ನಾಗಿ' ಮಾಡಿದ್ದ ದಿನ! ಹಿಂದಿನ ದಿನ ಅಮ್ಮ ಫೋನ್ ಮಾಡಿ ನನಗೆ ವಿಶ್ ಮಾಡಿದ್ದಳು. ಮರುದಿನ ಬೆಳಗ್ಗೆ ನಾನು ಫೋನ್ ಮಾಡಿ ಅವಳಿಗೆ ವಿಶ್ ಮಾಡಿದೆ! ನಾನು 'ಹ್ಯಾಪಿ ಮದರ್ಸ್ ಡೇ' ಅನ್ನುವುದಕ್ಕಿಂತ ಮುಂಚೆ ಅವಳು 'ನೀನು ಅರಾಮಿದೀಯಾ? ತಿಂಡಿ ಆಯ್ತಾ?' ಅಂತ ಕೇಳ್ತಾಳೆ... ಅಮ್ಮನ ಈ ಪ್ರೀತಿಗೆ, ಕಾಳಜಿಗೆ ನನ್ನ ಕಣ್ಣು ತುಂಬಿಕೊಳ್ಳುತ್ತವೆ.. ಕೃಷ್ಣನನ್ನು ಅಮ್ಮ 'ಏಯ್.. ಏನಾಯ್ತೋ' ಎನ್ನುತ್ತಾ ಎತ್ತಿಕೊಳ್ಳುತ್ತಾಳೆ...

Monday, April 02, 2007

ಪ್ರೈಮರಿ ಶಾಲೆಯ ದಿನಗಳ ನೆನೆದು...

ಆನಂದ್ ಮೇಷ್ಟ್ರು! ಹೆಸರು ಕೇಳಿದರೆ ಇವತ್ತಿಗೂ ರೋಮಾಂಚನವಾಗುತ್ತದೆ. ನನ್ನ ಪ್ರೈಮರಿ ಸ್ಕೂಲ್ ಮೇಷ್ಟ್ರು. ಚಿತ್ರ ಸ್ಪಷ್ಟವಿಲ್ಲ; ಮಸುಕಾಗಿದೆ. ಗುಂಡು ಗುಂಡಿ-ಗುಂಡಿ ಮುಖ, ತುಂಬಾ ಬೆಳ್ಳಗೇನಲ್ಲ; ಎಣ್ಣೆಗಪ್ಪು ಬಣ್ಣ. ಮೂಗಿನ ಮೇಲೆ ಬ್ಯಾಡಿತ್ತೇನೋ ಅನ್ನಿಸುವ ಕನ್ನಡಕ. ಮೂವತ್ತು ದಾಟದ ವಯಸ್ಸು. ಪ್ರತಿ ಮಾತಿನಲ್ಲೂ, ಪ್ರತಿ ನಡಿಗೆಯಲ್ಲೂ ಉತ್ಸಾಹ. ಪ್ರೈಮರಿ ಸ್ಕೂಲ್ ಮೇಷ್ಟ್ರು ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ರು ನಮ್ ಆನಂದ್ ಮೇಷ್ಟ್ರು.

ನಮ್ಮ ಮನೆ ಹತ್ರಾನೇ ಮೇಷ್ಟ್ರ ಮನೆ. ಅದೊಂದು ಬಾಡಿಗೆ ಮನೆ. ನಮ್ಮೂರಿನಂತಹ ಹಳ್ಳಿಯಲ್ಲೂ ಒಂದು ಬಾಡಿಗೆ ಮನೆ ಇದೆ ಎಂದರೆ ಅಚ್ಚರಿ ಪಡಬೇಡಿ. ಅದು ಇಂತಹ ಮೇಷ್ಟ್ರುಗಳಿಗಾಗಿಯೇ ಊರಿನವರು ಕಟ್ಟಿಸಿರುವ ಮನೆ. ತಿಂಗಳಿಗೆ ಬರೀ ಮೂವತ್ತು ರೂಪಾಯಿ ಬಾಡಿಗೆ. ಎದುರಿಗೇ ಸರ್ಕಾರಿ ಬಾವಿ ಇದೆ. ಟ್ವೆಂಟಿ ಫೋರ್ ಅವರ್ಸ್ ವಾಟರ್!

ಮೇಷ್ಟ್ರು ಒಬ್ಬರೇ ಇರುತ್ತಿದ್ದರು. ನಮ್ಮೂರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಉಳವಿಗೆ ತಮ್ಮ ಸೈಕಲ್ ಏರಿ 'ಶಾಪಿಂಗ್'ಗೆ ಹೋಗುತ್ತಿದ್ದರು. ಆನಂದ್ ಮೇಷ್ಟ್ರು ಉಳವಿಗೆ 'ಏನಕ್ಕೋ ಹೋಗುತ್ತಾರೆ' ಅಂತ ನಮ್ಮ ಮನೆಗಳಲ್ಲಿ ಹಿರಿಯರು ಮಾತಾಡಿಕೊಳ್ಳುತ್ತಿದ್ದರಾದರೂ ನಮಗೆ ಅವೆಲ್ಲಾ ಅರ್ಥವಾಗುತ್ತಿರಲಿಲ್ಲ. ಆನಂದ್ ಮೇಷ್ಟ್ರು ನಮ್ಮ ಪಾಲಿಗೆ ತುಂಬಾ ಒಳ್ಳೆಯವರಿದ್ರು.

ನಾನು ಚಿಕ್ಕವನಿರಬೇಕಾದರೆ ಓದಿನಲ್ಲಿ ತುಂಬಾ ಚುರುಕಿದ್ದೆ. ಶಾಲೆಗೆ ಸೇರುವ ಮೊದಲೇ, ಅಂದರೆ ನಾನು ಸುಮಾರು ನಾಲ್ಕು ವರ್ಷದವನಿದ್ದಾಗಲೇ ಬರೆಯುವುದು, ಓದುವುದು ಕಲಿತುಬಿಟ್ಟಿದ್ದೆ. ಕನ್ನಡವಷ್ಟೇ ಅಲ್ಲ; ಇಂಗ್ಲಿಷಿನಲ್ಲಿಯೂ ಎಲ್ಲರ ಹೆಸರನ್ನೂ ಬರೆಯುತ್ತಿದ್ದೆ. ಈಗಿನ ಮಕ್ಕಳ ಕಥೆ ಬಿಟ್‍ಹಾಕಿ. ಆದರೆ ಅವಾಗಿನ ಕಾಲದಲ್ಲಿ ಹಳ್ಳಿ ಮೂಲೆಯಲ್ಲಿನ ಹುಡುಗನೊಬ್ಬ ಹೀಗೆ ಓದುವುದರಲ್ಲಿ ಚುರುಕಾಗಿದ್ದಾನೆಂದರೆ ಅದು ಜನಗಳಿಗೆ ಅಗ್ರರಾಷ್ಟ್ರೀಯ ವಾರ್ತೆ! ಆನಂದ ಮೇಷ್ಟ್ರು ನನ್ನ ಪಾಂಡಿತ್ಯವನ್ನು ಕಂಡು ಸಂಪ್ರೀತರಾಗಿ (!) ನನ್ನನ್ನು ಐದನೇ ವರ್ಷಕ್ಕೇ ಶಾಲೆಗೆ ಸೇರಿಸಿಕೊಂಡುಬಿಟ್ಟರು. ನಾನೂ, ಬೇರೆ ಮಕ್ಕಳಂತೆ ಶಾಲೆಗೆ ಹೋಗಲು ರಗಳೆ ಮಾಡದೆ ಶಿಸ್ತಾಗಿ ಶಾಲೆಗೆ ಹೋಗತೊಡಗಿದೆ.

ಶಾಲೆಯಲ್ಲಿ ನಾನು ಉಳಿದವರಿಗಿಂತ ಸ್ವಲ್ಪ ಭಿನ್ನವಾಗಿ ಟ್ರೀಟ್ ಆಗುತ್ತಿದ್ದೆ. ಶಾಲೆಯಲ್ಲಿದ್ದುದು ಒಂದೇ ಕೊಠಡಿ. ಅದರಲ್ಲೇ ಒಂದರಿಂದ ನಾಲ್ಕನೇ ತರಗತಿವರೆಗಿನ ಎಲ್ಲಾ ಹುಡುಗರೂ ಕೂರುತ್ತಿದ್ದುದು. ಕೂರಲು ಮಣೆ ಇತ್ತು. ಸ್ಲೇಟು-ಕಡ್ಡಿ-ಪಾಟಿಚೀಲ ಇತ್ಯಾದಿಗಳೊಂದಿಗೆ 'ಅಣ್ಣನು ಮಾಡಿದ ಗಾಳಿಪಟ' ಹಾರುತ್ತಿತ್ತು. ಆನಂದ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಒಂದು ತರಗತಿಯವರಿಗೆ ಪಾಠ ಮಾಡುವಾಗ ಉಳಿದ ತರಗತಿಯವರಿಗೆ ಏನನ್ನಾದರೂ ಓದಿಕೊಳ್ಳಲಿಕ್ಕೋ, ಮಗ್ಗಿ ಬರೆಯಲೋ, ಇಲ್ಲಾ ಕಕಾಕಿಕೀ ಬರೆಯಲೋ ಹೇಳಿರುತ್ತಿದ್ದರು. ನಾನು ಅದನ್ನು ಮಾಡುತ್ತಲೇ ಮೇಷ್ಟ್ರು ಬೇರೆ ತರಗತಿಯವರಿಗೆ ಮಾಡುವ ಪಾಠದ ಕಡೆಗೂ ಒಂದು ಕಿವಿ ಇಟ್ಟಿರುತ್ತಿದ್ದೆ.

ಒಂದು ಘಟನೆ ತುಂಬಾ ಚೆನ್ನಾಗಿ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆನಂದ್ ಮೇಷ್ಟ್ರು ನಾಲ್ಕನೇ ಕ್ಲಾಸಿನವರಿಗೆ ಪಾಠ ಮಾಡುತ್ತಿದ್ದರು. ಪಾಠ ಮುಗಿದ ಮೇಲೆ 'ಮೋಹನ' ಅನ್ನೋ ಹುಡುಗನನ್ನು ಎಬ್ಬಿಸಿ ನಿಲ್ಲಿಸಿ ಏನೋ ಪ್ರಶ್ನೆ ಕೇಳಿದರು. ಮೋಹನ ಪಾಪ, ಉತ್ತರಿಸಲಿಲ್ಲ. ಅದೇ ಸಮಯಕ್ಕೆ ನಾನು ಕೈಯೆತ್ತಿಬಿಟ್ಟೆ! 'ಏನೋ, ನಿಂಗ್ ಉತ್ರ ಗೊತ್ತಾ?' ಕೇಳಿದ್ರು ಮೇಷ್ಟ್ರು. 'ಹೂಂ' ಅಂತ ತಲೆ ಗುಂಡು ಹಾಕಿದೆ. 'ಏನು ಹೇಳು ನೋಡೋಣ' ಅಂದ್ರು ಮೇಷ್ಟ್ರು. ನಾನು ಸರಿಯಾಗಿ ಉತ್ತರಿಸಿಬಿಟ್ಟೆ. ಇಡೀ ಕ್ಲಾಸೇ ಧಂಗಾಗಿಬಿಟ್ಟಿತು. ಮೇಷ್ಟ್ರು ಮೋಹನನಿಗೆ ಬೈಯತೊಡಗಿದರು: 'ಒಂದನೇ ಕ್ಲಾಸಿನ ಹುಡುಗ ಉತ್ರ ಹೇಳ್ತಿದಾನೆ ನಾಕ್ನೇ ಕ್ಲಾಸಿನವರ ಪ್ರಶ್ನೆಗೆ, ನಿಂಗೆ ನಾಚ್ಕೆ ಆಗಲ್ವೇನೋ......' ಮೋಹನ ತಲೆ ತಗ್ಗಿಸಿ ನಿಂತಿದ್ದ. ಮೇಷ್ಟ್ರು ನನಗೆ ಆದೇಶವಿತ್ತರು: 'ಏಯ್, ಅವನ ಕೆನ್ನೆಗೆ ಹೊಡಿಯೋ!' ನಾನು ಮೋಹನನತ್ತ ನಡೆಯತೊಡಗಿದೆ... ನನಗೆ ಮೋಹನನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ಎಲ್ಲಾ ಹುಡುಗರಂತೆಯೇ ಅವನೂ ಪಾಪ. ಅವನ ಊರು ಹೊಸಕೊಪ್ಪ; ನಮ್ಮೂರಿಗೆ ಹೊಂದಿಕೊಂಡಂತೆ ಇರುವ ಊರು. ಜೋಯಿಸರ ಮನೆ ರಾಘು, ಅಣ್ಣಪ್ಪ, ದೀಪ್ತಿ, ಭೈರಪ್ಪ ಮುಂತಾದ ಹುಡುಗರ ಜೊತೆ ತಾನೂ ಕೌಳಿಮಟ್ಟಿ ಸುತ್ತಿಕೊಂಡು ಶಾಲೆಗೆ ಬರುತ್ತಿದ್ದ. ನಾಲ್ಕನೇ ಕ್ಲಾಸು ಮುಗಿದ ಮೇಲೆ ತನ್ನ ಅಪ್ಪ ದನ ಕಾಯಲಿಕ್ಕೆ ಹಾಕೇ ಹಾಕುತ್ತಾನೆ ಎಂಬ ಅಂಶ ಅವನಿಗೆ ಆಗಲೇ ತಿಳಿದಿತ್ತೋ ಏನೋ, ಓದಿನಲ್ಲಿ ತುಂಬಾ ಹಿಂದಿದ್ದ. ನನಗೆ ಅವನನ್ನು ಹೊಡೆದು ಆಗಬೇಕಾದ್ದು ಏನೂ ಇರಲಿಲ್ಲ. ಮೇಷ್ಟ್ರು ಕೇಳಿದ್ದ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು; ಕೈಯೆತ್ತಿಬಿಟ್ಟೆ. ಈಗ ಮೇಷ್ಟ್ರು ಹೊಡೆಯಲಿಕ್ಕೆ ಹೇಳಿದರು; ಹೊಡೆಯಲಿಕ್ಕೆ ಹೊರಟಿದ್ದೆ. ಅಷ್ಟೆ!

ಮಣೆಯ ಮೇಲೆ ನಿಂತಿದ್ದ ಮೋಹನ ತನ್ನೆಡೆಗೆ ಯುದ್ಧಸನ್ನದ್ಧನಾಗಿ ಬರುತ್ತಿರುವ ನನ್ನನ್ನೇ ಕಿರುಗಣ್ಣಿನಿಂದ ನೋಡಿದ. ಇನ್ನೇನು ಅಳು ಬಂದುಬಿಡುತ್ತದೇನೋ ಎಂಬಂತಿತ್ತು ಅವನ ಮುಖ. ಅವನ ಕಣ್ಣುಗಳಲ್ಲಿ ನನ್ನೆಡೆಗೊಂದು ರಿಕ್ವೆಸ್ಟ್ ಇತ್ತು: 'ನಿಧಾನಕ್ಕೆ ಹೊಡಿಯೋ ಸುಶ್ರುತಾ' ಎಂದವು ಹೇಳುತ್ತಿದ್ದಂತೆ ನನಗನ್ನಿಸಿತು. ಅವನು ಸಿಂಬಳವನ್ನು ಏರಿಸಿ ನನಗೆ ಮೂಗು ಹಿಡಿಯಲಿಕ್ಕೆ ಅನುವು ಮಾಡಿಕೊಟ್ಟ. ನಾನು ಮೂಗು ಹಿಡಿಯಲಿಕ್ಕೆ ಕೈ ಹಾಕಿದೆ.. ಅವನು ನನಗಿಂತ ತುಂಬಾ ಎತ್ತರ ಇದ್ದ. ನಾನು ತುದಿಗಾಲ ಮೇಲೆ ನಿಂತೆ. ಅವನ ಮೂಗು ಹಿಡಿದೆ. ನನ್ನ ಪುಟ್ಟ ಅಂಗೈಯಿಂದ ಅವನ ಕೆನ್ನೆಗೆ ಒಂದೇಟು ಹಾಕಿದೆ. 'ಝೊಳ್' ಎಂದು ಸದ್ದಾಯಿತು. ಏನೂಂತ ನೋಡಿದರೆ, ಮೋಹನ ಪಾಪ ಉಚ್ಚೆ ಹೊಯ್ದುಕೊಂಡಿದ್ದ! ನನಗೆ ಆಘಾತವಾಯಿತು. ಹಾಗಾದರೆ ನಾನು ಅಷ್ಟೆಲ್ಲಾ ಜೋರಾಗಿ ಹೊಡೆದೆನೇ? ನಿಜ ಹೇಳ್ತೀನಿ ಕಣ್ರೀ, ನಾನು ಅವತ್ತು ಹೊಡೆದದ್ದು ಇಂದಿಗೂ ಸರಿಯಾಗಿ ನೆನಪಿದೆ. ನಾನು ಎಷ್ಟು ನಿಧಾನಕ್ಕೆ ಹೊಡೆದಿದ್ದೆ ಅಂದ್ರೆ, ಅಷ್ಟು ನಿಧಾನಕ್ಕೆ ಹೊಡೆದರೆ ಈಗಿನ ಕಾಲದಲ್ಲಿ ಸೊಳ್ಳೆ ಸಹ ಸಾಯುವುದಿಲ್ಲ. (ಹಿಂದಿನ ಕಾಲಕ್ಕಿಂತ ಈಗ ಸೊಳ್ಳೆಗಳು ಪ್ರಬಲವಾಗಿವೆ ಅಂತ ನನ್ನ ನಂಬುಗೆ, ಅದಿರಲಿ!).

ಮೇಷ್ಟ್ರು ತಕ್ಷಣ ಅಲ್ಲಿಗೆ ಧಾವಿಸಿದರು. 'ಏಯ್ ಏನೋ ನಿಂದು? ಇಲ್ಲೇ ಉಚ್ಚೆ ಮಾಡ್ಕೊಂಡ್ಯಲ್ಲೋ.. ಥೂ ನಿನ್ನ! ಹೋಗಿ ಗೋಣಿಚೀಲ ತಗಂಬಂದು ವರ್ಸು ಹೋಗು' ಎಂದು ಅವನನ್ನು ತಳ್ಳಿದರು. ಮೋಹನ ಎರಡು ಹೆಜ್ಜೆ ಮುಂದಿಟ್ಟರೆ ಇನ್ನೂ ಅವನ ಚಡ್ಡಿಯಿಂದ ನೀರು ಸೋರುತ್ತಲೇ ಇತ್ತು. ಮೇಷ್ಟ್ರು ಅವನನ್ನು ತಡೆದರು. 'ಏಯ್ ನೀನಿಲ್ಲೇ ನಿಂತ್ಕೋ. ಏಯ್ ನಟರಾಜಾ, ನೀನು ಗೋಣಿಚೀಲ ತಗಂಬಾರೋ' ಅಂದ್ರು. ನಟರಾಜ ಗೋಣಿಚೀಲ ತಂದು ಮೋಹನನ ಕಾಲ ಬುಡಕ್ಕೆ ಹಾಕಿದ. ಮೋಹನ ಎಲ್ಲವನ್ನೂ ಒರೆಸಿ ಚೊಕ್ಕ ಮಾಡಿದ. ಇಡೀ ಘಟನೆಯಲ್ಲಿ ನನ್ನದೇನೂ ತಪ್ಪಿರಲಿಲ್ಲವಾದರೂ ನಾನೇ ಅಪರಾಧಿಯೇನೋ ಎಂಬಂತೆ ನರಳಿದೆ.

ಆನಂದ ಮೇಷ್ಟ್ರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಧ್ಯಾರ್ಥಿಗಳನ್ನು ತಯಾರು ಮಾಡುವಲ್ಲಿ ಬಹಳ ಮುಂದಿದ್ದರು. ಅವರು ಮೇಷ್ಟ್ರಾಗಿದ್ದ ಕಾಲದಲ್ಲಿ ನಡೆದ ಶಾಲೆಯ ಯೂನಿಯನ್‍ಡೇಗಳನ್ನು ಊರಿನ ಜನಗಳು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅವರು ವರ್ಗವಾಗಿ ಹೋದಮೇಲೆ ನಮ್ಮ ಶಾಲೆಗೆ ಅನೇಕ ಬೇರೆ ಶಿಕ್ಷಕರು ಬಂದರು. ಯಶೋಧ ಟೀಚರ್ರು, ವೇದಾವತಿ ಟೀಚರ್ರು, ಯಲ್ಲಪ್ಪ ಮೇಷ್ಟ್ರು, ಈಶ್ವರಪ್ಪ ಮೇಷ್ಟ್ರು.. ಇತ್ಯಾದಿ ಇತ್ಯಾದಿ.

ಪ್ರೈಮರಿ ಶಾಲೆಯಲ್ಲಿ ನಮಗೆ ಕುಳಿತುಕೊಳ್ಳಲು ಊದ್ದ ಮಣೆ ಇತ್ತಲ್ಲಾ, ಆ ಮಣೆಯನ್ನು ನಾವು ಮೇಷ್ಟ್ರು ಇಲ್ಲದ ಹೊತ್ತಿನಲ್ಲಿ ಕಿಟಕಿಕಟ್ಟೆಗೆ ಸಾಚಿ ಜಾರುಬಂಡೆ ತರ ಮಾಡಿಕೊಂಡು ಆಟವಾಡುತ್ತಿದ್ದೆವು. ಮೇಷ್ಟ್ರು ಬಂದರೆ ಹೊರಗಡೆ ಇದ್ದ ಯಾರಾದರೂ ಹುಡುಗರು 'ಮೇಷ್ಟ್ರು ಬಂದ್ರು' ಅಂತ ಸಿಗ್ನಲ್ ಕೊಡುತ್ತಿದ್ದರು. ತಕ್ಷಣ ಮಣೆಗಳನ್ನು ಕೆಳಗಿಳಿಸಿ ಯಥಾಸ್ಥಾನದಲ್ಲಿರಿಸುತ್ತಿದ್ದೆವು.

ಬೆಳಗ್ಗೆ ಒಂಭತ್ತೂ ಮುಕ್ಕಾಲಿಗೆ ಶಾಲೆ ಶುರುವಾಗುತ್ತಿತ್ತು. ಪ್ರಾರ್ಥನೆ ಮಾಡಿ ಒಳಬಂದರೆ ಎರಡು ತಾಸು ಮೇಷ್ಟ್ರು ಮಾಡುವ ಪಾಠ ಕೇಳಬೇಕು. ಆಮೇಲೆ ರೀಸಸ್ಸಿಗೆ ಬಿಡುತ್ತಿದ್ದರು. ಹುಡುಗಿಯರು ಹೊಸಕೊಪ್ಪಕ್ಕೆ ಹೋಗುವ ದಾರಿಯಲ್ಲಿನ ಕೌಳಿಮಟ್ಟಿಯ ಮರೆಯನ್ನು ಆಶ್ರಯಿಸುತ್ತಿದ್ದರೆ ನಾವು ಶಾಲೆ ಪಕ್ಕದಲ್ಲಿದ್ದ ಅಕೇಶಿಯಾ ಮರಗಳ ತೋಪನ್ನು ಆರಿಸಿಕೊಂಡಿದ್ದೆವು. ಆಗೆಲ್ಲಾ ಉಚ್ಚೆ ಹೊಯ್ಯುವುದೂ ಒಂದು ಆಟವೇ! ಯಾರು ಹೆಚ್ಚು ದೂರ ಹಾರಿಸುತ್ತಾರೆ ಎಂದು! ಉಚ್ಚೆ ಹೊಯ್ಯಲಿಕ್ಕೆಂದು 'ಉಚ್ಚೆಗುಂಡೆ' ಅಂತ ಮಾಡಿಕೊಂಡಿದ್ದೆವು. ಎಲ್ಲರೂ ಅದಕ್ಕೇ ಉಚ್ಚೆ ಹೊಯ್ಯುವುದು. ಹೊಯ್ದ ಉಚ್ಚೆ ಸಾಗಿ ಹೋಗಲಿಕ್ಕೆ ಒಂದು ಒಗದಿಯನ್ನೂ ಕೊರೆದಿರುತ್ತಿದ್ದೆವು. ಉಚ್ಚೆ ಹೊಯ್ದಾದಮೇಲೆ ಒಂದು ಕಣ್ಣಿನ ರೆಪ್ಪೆಯನ್ನು ಕಿತ್ತು ಅದಕ್ಕೆ ಹಾಕಿ ಬರುತ್ತಿದ್ದೆವು. 'ಒಬ್ರು ಹೊಯ್ದ ಉಚ್ಚೆಯ ಮೇಲೆ ಮತ್ತೊಬ್ರು ಹೊಯ್ದ್ರೆ ಹೀಗೆ ಕಣ್ರೆಪ್ಪೆ ಕಿತ್ತು ಹಾಕ್ಬೇಕು' ಎಂದು ಆಗ ಯಾರೋ ರೂಮರ್ರು ಹಬ್ಬಿಸಿದ್ದರು! ಅದರ ಬಗ್ಗೆ ವಿಶ್ಲೇಷಿಸುವಷ್ಟೆಲ್ಲಾ ವಿವೇಕ ಆಗ ಇದ್ದರೆ ತಾನೇ! ಮಧ್ಯಾಹ್ನ ಒಂದೂ ಕಾಲಿಗೆ ಊಟಕ್ಕೆ ಬಿಡುತ್ತಿದ್ದರು. ಮನೆಗೆ ಬಂದು ಊಟ ಮಾಡಿ, ಎರಡು ಗಂಟೆ ಹೊತ್ತಿಗೆ ಮತ್ತೆ ಶಾಲೆಗೆ. ಮೂರೂ ವರೆಗೆ ಮತ್ತೆ ರೀಸಸ್ಸು; ನಾಲ್ಕೂ ಕಾಲಿಗೆ ಆಟ! ಎಷ್ಟೊಂದು ಆಟಗಳು ಗೊತ್ತಿದ್ದವು ನಮಗಾವಾಗ... ಅಜ್ಜಿ ಮನೆ ಆಟ, ಕೆರೆ-ದಡ ಆಟ, ಬಸ್ ಆಟ, ಕಣ್ಣಾಮುಚ್ಚಾಲೆ, ಐಸ್-ಪೀಸ್ ಕಂಬ, ವಿಮಾನ, ಅನ್ನ-ಆಸೆ ಆಟ.... ಶಾಲೆಯ ಕಸ ಗುಡಿಸುವುದಕ್ಕೆ ಪಾಳಿ ಮಾಡಿಕೊಂಡಿದ್ದೆವು. ದಿನಾ ಒಬ್ಬೊಬ್ಬರು ಗುಡಿಸುವುದು. ನೀರು ತರಲಿಕ್ಕೂ ಪಾಳಿ. ವಾರಕ್ಕೊಮ್ಮೆ ಇಡೀ ಶಾಲೆಯ ಆವರಣದ ಕಸ ಹೆಕ್ಕುತ್ತಿದ್ದೆವು. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಸರಸ್ವತಿ ಪೂಜೆಯ ದಿನಗಳಿಗಂತೂ ಹೂವು ತರುವ ಸಂಭ್ರಮ. ಆಗೆಲ್ಲಾ ಸರ್ಫ್ ಎಕ್ಸೆಲ್ ಇರಲಿಲ್ಲ: ಬಿಳೀ ಯೂನಿಫಾರ್ಮ್ ಕೊಳೆಯಾಗದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು ಗೊತ್ತಾ? ಶಾಲೆಯ ಅಕ್ಕಪಕ್ಕ ನಾವು ನೆಟ್ಟ ಗಿಡಗಳು ಈಗ ಆಳೆತ್ತರ, ಊಹೂಂ, ಮುಗಿಲಿನೆತ್ತರಕ್ಕೆ ಬೆಳೆದು ನಿಂತಿವೆ. ಊರಿಗೆ ಹೋದಾಗ, ಶಾಲೆ ಹಾದು ಹೋಗುವಾಗ ಏನೋ ಆಪ್ಯಾಯಮಾನ ಅನುಭವ...

ಪ್ರೈಮರಿ ಸ್ಕೂಲು ಎಂದಕೂಡಲೇ ನನಗೆ ನೆನಪಾಗುವುದು ಇನ್ಸ್‍ಪೆಕ್ಟರು! ಅವರ ಬಗ್ಗೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ! ಅವರೊಂಥರಾ ಲೋಕಾಯುಕ್ತ ವೆಂಕಟಾಚಲ ಇದ್ದಹಂಗೆ. ಯಾವಾಗ ಬರುತ್ತಾರೆ ಅಂತ ಹೇಳಲಿಕ್ಕಾಗೊಲ್ಲ. ಅವರು ಬಂದಾಗ ಏನಾದರೂ ಒಂದು ಗಂಢಾಂತರ ನಡೆದೇ ನಡೆಯುತ್ತಿತ್ತು. ಒಂದೋ ಮೇಷ್ಟ್ರೇ ಅವತ್ತು ಇರುತ್ತಿರಲಿಲ್ಲ; ಅಥವಾ ಅವರು ಕೇಳಬಹುದಾದ ಪ್ರಶ್ನೆಗಳಿಗೆ ನಾವು ಸಿದ್ಧರಾಗಿರುತ್ತಿರಲಿಲ್ಲ. ಅವರಾದರೂ ಏನು ಮಿಲಿಯನ್ ಡಾಲರ್ ಪ್ರಶ್ನೆ ಕೇಳುತ್ತಿರಲಿಲ್ಲ. ಯಾರನ್ನಾದರೂ ಎಬ್ಬಿಸಿ ನಿಲ್ಲಿಸಿ 'ಎಂಟ್ನಾಕ್ಲೆ ಎಷ್ಟು?' ಅಂತ ಕೇಳುತ್ತಿದ್ದರು. ಅಥವಾ 'ನಿಮ್ಮ ಜಿಲ್ಲೆಯ ಹೆಸರೇನು?' ಅಂತ ಕೇಳುತ್ತಿದ್ದರು. ಬಹಳ ಸಲ ಉತ್ತರ ಗೊತ್ತಿದ್ದರೂ ಇನ್ಸ್‍ಪೆಕ್ಟರ್ ಎದುರಿಗೆ ಕೈಕಾಲು ಥರಥರ ನಡುಗಿ ಏನನ್ನೂ ಹೇಳುತ್ತಿರಲಿಲ್ಲ. ಆನಂದ್ ಮೇಷ್ಟ್ರು ಕೈ-ಕಣ್ಸನ್ನೆಗಳ ಮೂಲಕ ಉತ್ತರ ಹೇಳಿಕೊಡುತ್ತಿದ್ದರೂ ನಮಗೆ ಅದನ್ನೆಲ್ಲಾ ಗಮನಿಸುವಷ್ಟು ವ್ಯವಧಾನ ಇರುತ್ತಿರಲಿಲ್ಲ. ಸಾಮಾನ್ಯವಾಗಿ ಇನ್ಸ್‍ಪೆಕ್ಟರಿಂದ ಬೈಯಿಸಿಕೊಳ್ಳುವುದು ಇದ್ದೇ ಇರುತ್ತಿತ್ತು. ಅವರು ನಮಗಿಂತಲೂ ಹೆಚ್ಚಾಗಿ ಮೇಷ್ಟ್ರಿಗೆ ಬೈಯುತ್ತಿದ್ದರು: 'ಏನ್ರೀ, ಇದನ್ನೇ ಏನ್ರೀ ನೀವು ಕಲ್ಸಿದ್ದು ಮಕ್ಳಿಗೇ?' ಅಂತ. ನಾವು ಪೆಕರರಂತೆ ನೋಡುತ್ತಿದ್ದೆವು.

ಮೊನ್ನೆ ಯುಗಾದಿಗೆ ಊರಿಗೆ ಹೋಗಿದ್ದೆನಲ್ಲ, ಹಬ್ಬದ ಹಿಂದಿನ ದಿನ ಹೊಸಕೊಪ್ಪದಲ್ಲಿ ಒಂದು ಬಯಲಾಟ ಇತ್ತು. ಗಣೇಶಣ್ಣ-ಮಧು ಜೊತೆ ನಾನೂ ಹೋಗಿದ್ದೆ. ಯಕ್ಷಗಾನ ಚೆನ್ನಾಗಿಯೇ ಇತ್ತು. ನನ್ನ ಹೈಸ್ಕೂಲು ಕ್ಲಾಸ್‍ಮೇಟು ದುರ್ಗಪ್ಪ ಬೋಂಡದ ಅಂಗಡಿ ಇಟ್ಟಿದ್ದ. ನಾವು ಬೋಂಡ ತಗೊಂಡೆವು. ದುಡ್ಡು ಕೊಡಲು ಹೋದರೆ 'ಏಯ್ ಸುಮ್ನಿರೋ.. ನೀವೆಲ್ಲ ಎಂಥ ದುಡ್ಡು ಕೊಡೋದು..' ಅಂದ. 'ನಿಂಗೆ ಗೊತ್ತಾಗಲ್ಲ ಸುಮ್ನಿರು. ವ್ಯಾಪಾರ ಅಂದ್ರೆ ವ್ಯಾಪಾರ' ಅಂದು ದುಡ್ಡನ್ನು ಜೇಬಿಗೆ ತುರುಕಿ ಬಂದೆವು. ಗುಂಡಾಲಿ ಆಟಾ ನೋಡೋಣ ಅಂತ ಆ ಕಡೆ ಹೋದೆವು. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಗುಡುಗುಡಿ ಮಂಡ್ಲ ಜೋರಾಗಿ ಸಾಗಿತ್ತು. 'ಸೂರ್ಯ ಚಂದ್ರ ಖಾಲಿ! ಹಾಕ್ಕೊಳಿ ಹಾಕ್ಕೊಳಿ' ಅಂತ ಕೂಗುತ್ತಿದ್ದರು. ಡಬ್ಬಿಯೊಳಗನ ಕಾಯಿ 'ಕಣಕಣಕಣ' ಸದ್ದು ಮಾಡುತ್ತಿತ್ತು. ಯಾರೋ ಕಳವಾರಿಗೆ ನೂರರ ನೋಟು ಎಸೆದರು. ನಾನು ಗಮನವಿಟ್ಟು ನೋಡುತ್ತಿದ್ದೆ. ಯಾರದೋ ನೆರಳ ಹಿಂದೆ ಯಾರೋ ಸರಿದಂತಾಯಿತು. ಫಕ್ಕನೆ ನೋಡಿದೆ: ಮೋಹನ! ಹೌದು, ನೋ ಡೌಟ್, ಮೋಹನನೇ. ಮಾತಾಡಿಸೋಣ ಅಂದುಕೊಂಡೆ. ಆದರೆ ಅವನೇ ನನ್ನ ಕಣ್ಣು ತಪ್ಪಿಸುತ್ತಿದ್ದಾನೆ ಅನ್ನಿಸಿತು. ನನಗೂ ಏನೋ ತಡೆದಂತಾಗಿ ಸುಮ್ಮನಾಗಿಬಿಟ್ಟೆ.

Tuesday, March 27, 2007

ಹೊಸ ಆಹ್ಲಾದ

"ರಾಧೇಶಾಮ ರಾಧೇ ಶಾಮ್
ರಾಧಾ ಮಾಧವ ಮೇಘಶ್ಶಾಮ್.."

ದೇವಸ್ಥಾನದಿಂದ ಮಹಿಳೆಯರ ಭಜನೆಯ ದನಿ ತೇಲಿಬರುತ್ತಿತ್ತು. ಕಟ್ಟೆಯ ಮೇಲೆ ಕುಳಿತಿದ್ದ ನಾನು ಅಂಗಳದಲ್ಲಿ ಅಕ್ಕಿ ಹೆಕ್ಕುತ್ತಿದ್ದ ಪಾರಿವಾಳಗಳನ್ನು ನೋಡುತ್ತಿದ್ದೆ. ತಾಳದ ಟಿಣ್‍ಟಿಣ್‍ನೊಂದಿಗೆ ಬೆರೆತು ಬರುತ್ತಿದ್ದ ಭಜನೆ ಕಿವಿಗಿಂಪಾಗಿತ್ತು. ನಮ್ಮೂರಿನದು ಗೋಪಾಲಕೃಷ್ಣನ ದೇವಸ್ಥಾನ. ಈ ಕೃಷ್ಣನಿಗೆ ಸಂಬಂಧಿಸಿದ ಭಜನೆಗಳು, ಭಕ್ತಿಗೀತೆಗಳೆಲ್ಲ ಪ್ರೇಮಗೀತೆಗಳೇ ಆಗಿಬಿಟ್ಟಿವೆ. ಅವನ್ನ ಆಲಿಸುತ್ತಿದ್ದರೆ ಕೃಷ್ಣ ಸಹ ನಮ್ಮ-ನಿಮ್ಮಂತೆ ಪ್ರೀತಿ-ಗೀತಿ ಮಾಡಿಕೊಂಡಿದ್ದ ಸಾಮಾನ್ಯ ಮನುಷ್ಯನಂತೆ ಭಾಸವಾಗುತ್ತಾನೆ. ಭಕ್ತಿಗಿಂತ ಹೆಚ್ಚಾಗಿ ಅವನಲ್ಲಿ ಅನುರಕ್ತಿ ಮೂಡುತ್ತದೆ: ಮೀರಾಗೆ ಆದಂತೆ.

ಅಂಗಳದಲ್ಲಿ ಬಣ್ಣ ಬಣ್ಣದ ಪಾರಿವಾಳಗಳು ಬಿಳಿಹುಲ್ಲು ಗೊಣಬೆಯ ಅಕ್ಕಪಕ್ಕ ಸಿಕ್ಕಬಹುದಾದ ಅಕ್ಕಿಕಾಳುಗಳನ್ನು ಹೆಕ್ಕುತ್ತಾ, ಪುರ್ರನೆ ಹಾರುತ್ತಾ, ಗುಟುರು ಗಲಾಟೆ ಮಾಡಿಕೊಂಡಿದ್ದವು. ಅಪ್ಪ ಅಂದ, "ಗುಂಡನ ಮನೆ ಪಾರಿವಾಳಗಳು ಇವು. ಗುಂಡ ಒಂದು ತಿಂಗಳಿಂದ ಊರಲ್ಲಿಲ್ಲ. ಎಲ್ಲಿದಾನೆ ಅಂತಾನೆ ಗೊತ್ತಿಲ್ಲ. ಕೆಲವರು 'ಮನೆಯವರು ಅಡಗಿಸಿಟ್ಟಿದಾರೆ' ಅಂತಾರೆ ಮತ್ತೆ ಕೆಲವರು 'ಏನೋ ಕೆಟ್ಟ ಖಾಯಿಲೆ ಬಂದಿದೆ ಅವಂಗೆ. ಅದ್ಕೇ ಯಾವ್ದೋ ಆಸ್ಪತ್ರೆಗೆ ಸೇರಿಸಿದಾರೆ' ಅಂತಾರೆ. ಅಂವ ಇದ್ದಿದ್ದಿದ್ರೆ ಈ ಪಾರಿವಾಳಗಳಿಗೆಲ್ಲ ಕಾಳು ಹಾಕ್ಕೊಂಡು ಇರ್ತಿದ್ದ. ಪಾಪ, ಈಗ ಅವರ ಮನೇಲಿ ಯಾರೂ ಕಾಳು ಹಾಕೋರು ಇಲ್ಲ ಅನ್ಸುತ್ತೆ ಇವಕ್ಕೆ. ಅದ್ಕೇ ಇಲ್ಲಿಗೆ ಬರ್ತಿವೆ.." ಇಷ್ಟು ಸಣ್ಣ ಹಳ್ಳಿಯಲ್ಲೂ ಸಹ ಎಷ್ಟೊಂದು ಗೌಪ್ಯಗಳು! ಗುಪ್ತ ಚಟುವಟಿಕೆಗಳು! ಗುಸುಗುಸುಗಳು! ನಾನು ಪಾರಿವಾಳಗಳನ್ನೇ ನೋಡುತ್ತಾ ಕುಳಿತೆ.

ಅಪ್ಪ ಅಡುಗೆಮನೆಯಿಂದ ಒಂದು ಮುಷ್ಟಿ ಅಕ್ಕಿ ತಂದ. ನನ್ನ ಪಕ್ಕದಲ್ಲೇ ಕುಳಿತು ಸ್ವಲ್ಪ ಅಕ್ಕಿಯನ್ನು ಅಂಗಳಕ್ಕೆ ಬೀರಿದ. ಬಿಳಿಹುಲ್ಲು ಗೊಣಬೆಯ ಬಳಿ ಓಡಾಡುತ್ತಿದ್ದ ಪಾರಿವಾಳಗಳು ಈಗ ನಮ್ಮ ಕಡೆಯೇ ಬಂದವು. ಅಪ್ಪ ಬೀರಿದ್ದ ಅಕ್ಕಿಕಾಳುಗಳನ್ನು ಕ್ಷಣಮಾತ್ರದಲ್ಲಿ ಹೆಕ್ಕಿಕೊಂಡು ಪುರ್ರನೆ ಮತ್ತೆ ಹುಲ್ಲು ಗೊಣಬೆ ಕಡೆ ಹಾರಿಬಿಟ್ಟವು. ಅಪ್ಪ ಮತ್ತೆ ಅಕ್ಕಿ ಬೀರಿದ. ಪಾರಿವಾಳಗಳು ಮತ್ತೆ ಬಂದವು. ಅಪ್ಪ ಅಂಗೈಯಲ್ಲಿ ಅಕ್ಕಿ ಹಾಕಿಕೊಂಡು 'ಗುಕ್' 'ಗುಕ್' 'ಗುಕ್' ಅಂತ ಪಾರಿವಾಳ ಗುಟುರು ಹಾಕುವಂತೆಯೇ ಶಬ್ದ ಮಾಡುತ್ತಾ ಕರೆದ. ಆದರೆ ಅವು ಅಂಗಳಕ್ಕೆ ಬೀರಿದ್ದ ಅಕ್ಕಿಕಾಳನ್ನು ಹೆಕ್ಕಿಕೊಂಡು ಹೋದವೇ ಹೊರತು ನಮ್ಮ ಹತ್ತಿರ ಬರಲೇ ಇಲ್ಲ.

"ಆ ಪಾರಿವಾಳ ನೋಡು.. ಏನ್ ಚನಾಗಿದೆ...!" ಅಪ್ಪ ನನಗೆ ಬೆರಳು ಮಾಡಿ ತೋರಿಸಿದ. ಮುಟ್ಟುವುದಾದರೆ ಕೈತೊಳೆದುಕೊಂಡು ಮುಟ್ಟಬೇಕೆನಿಸುವಷ್ಟು ಬಿಳಿ ಇರುವ ಆ ಪಾರಿವಾಳಕ್ಕೆ ಅಲ್ಲಲ್ಲಿ ಕಾಫಿ ಕಲರಿನ ಪೇಯಿಂಟ್ ಸ್ಪ್ರೇ ಮಾಡಿದಂತೆ ಹಚ್ಚೆ. ಗೋಣು ಕುಣಿಸುತ್ತಾ ಒಂದೊಂದೇ ಹೆಜ್ಜೆಯನ್ನು ಮೆಲ್ಲಮೆಲ್ಲನೆ ಇಡುತ್ತಿದೆ: ಪುಟ್ಟ ಕೃಷ್ಣನಂತೆ. ಊಹುಂ, ಕೃಷ್ಣನೆಡೆಗೆ ಲಜ್ಜೆಯಿಂದ ಹೆಜ್ಜೆಯಿಡುತ್ತಿರುವ ರಾಧೆಯಂತೆ. ಅಕ್ಕಿ ಕಂಡಲ್ಲಿ ಬಾಗಿ ತನ್ನ ಕೊಕ್ಕಿನಿಂದ ಹೆಕ್ಕುತ್ತಿದೆ. ಅಲ್ಲಲ್ಲಿ ನಿಂತು ಗಾಂಭೀರ್ಯದಿಂದ ತಲೆಯೆತ್ತಿ ನೋಡುತ್ತಿದೆ. ಇಡುತ್ತಿರುವ ಪ್ರತಿ ಹೆಜ್ಜೆಯಲ್ಲೂ ಬಿಂಕ-ಬಿನ್ನಾಣ. ಎಷ್ಟೊತ್ತಾಗಿತ್ತೋ ಅವನ್ನು ನೋಡುತ್ತಾ ನಾವು? ಅಪ್ಪ ತಂದಿದ್ದ ಅಕ್ಕಿಯೆಲ್ಲಾ ಖಾಲಿಯಾಗುವಷ್ಟರಲ್ಲಿ ದೇವಸ್ಥಾನದಲ್ಲಿ ಹೆಂಗಸರ ಭಜನೆ ಮುಗಿದು ಘಂಟೆ ಬಾರಿಸುವ ಶಬ್ದ ಕೇಳಿಬಂತು.

ನಮ್ಮೂರಿನ ಹೆಂಗಸರೆಲ್ಲಾ ಪ್ರತಿ ಶನಿವಾರ ಸೇರಿ ಇಲ್ಲಿ ಭಜನೆ ಮಾಡುತ್ತಾರೆ. ನಮ್ಮ ಮನೆಯ ಎದುರಿಗೇ ದೇವಸ್ಥಾನ. ಹೀಗಾಗಿ, ನಮ್ಮ ಮನೆಯಲ್ಲಿ ತುಂಬಿರುವ ಟೀವಿ, ಮಿಕ್ಸಿ, ಪಂಪ್ಸೆಟ್ಟು, ಫೋನಿನ ರಿಂಗು, ಮನೆಮಂದಿಯ ಮಾತು-ಕತೆ, ಜಾನುವಾರುಗಳ 'ಅಂಬಾ', ಇತ್ಯಾದಿ ಶಬ್ದಗಳ ಜೊತೆಗೆ ದೇವಸ್ಥಾನದಿಂದ ಆಗಾಗ ತೇಲಿಬರುವ ಘಂಟೆಗಳ ನಿನಾದವೂ ಸೇರಿರುತ್ತೆ. ನಮಗೆ ಗೊತ್ತು: ಯಾರ್‍ಯಾರು ಯಾವಾಗ್ಯಾವಾಗ ದೇವಸ್ಥಾನಕ್ಕೆ ಬರುತ್ತಾರೆ ಅಂತ. ಘಂಟೆ ಶಬ್ದದಿಂದಲೇ ಪತ್ತೆ ಮಾಡುತ್ತೇವೆ ಅದನ್ನು! ದೊಡ್ಡ ಘಂಟೆ ಎರಡು ಸಲ ಬಡಿದು ಸಣ್ಣ ಘಂಟೆ ಮೂರು ಸಲ ಬಡಿದ ಶಬ್ದ ಬಂತೆಂದರೆ, ಈಗ ದೇವಸ್ಥಾನಕ್ಕೆ ಬಂದಿರುವವರು ಸುಧಣ್ಣ! ಸಣ್ಣ ಘಂಟೆಯನ್ನು ಕೇವಲ ಎರಡು ಸಲ ಬಡಿದ ಸದ್ದಾದರೆ, ಈಗ ಬಂದಿರುವುದು ಲಕ್ಷ್ಮಕ್ಕ! ಇವತ್ತು ಬೆಳಗ್ಗೆ ಎಷ್ಟೊತ್ತಿಗೆ ಗಣೇಶಣ್ಣ ಬಂದು ಪೂಜೆ ಮಾಡಿಕೊಂಡು ಹೋದ ಅಂತ ನಮಗೆ ಗೊತ್ತು. ಸಂಜೆ ಬಂದು ದೀಪ ಹಚ್ಚಿ ಹೋದ ಗಳಿಗೆಯೂ ಗೊತ್ತು!

ಲಾಂಗ್ ಬೆಲ್ ಹೊಡೆದ ಕೂಡಲೆ ಮಕ್ಕಳೆಲ್ಲ ಶಾಲೆಯಿಂದ ಹೊರಬೀಳುವಂತೆ ಭಜನೆ ಮುಗಿದ ಕೂಡಲೆ ಹೆಂಗಸರೆಲ್ಲ ದೇವಸ್ಥಾನದಿಂದ ಮನೆ ಕಡೆ ಹೊರಟರು. ನಮ್ಮ ಮನೆ ಹಾದು ಹೋಗುವಾಗ ಕಟ್ಟೆಯ ಮೇಲೆ ಕುಳಿತಿದ್ದ ನನ್ನನ್ನು 'ಯಾವಾಗ ಬಂದಿದೀಯ?' 'ಅರಾಮಿದೀಯಾ?' 'ಬೆಂಗ್ಳೂರಲ್ಲೂ ಸೆಖೇನಾ?' ಇತ್ಯಾದಿ ಪ್ರಶ್ನೆಗಳ ಮೂಲಕ ಕುಶಲ ವಿಚಾರಿಸಿದರು. 'ಬನ್ರೇ, ಆಸರಿಗೆ ಕುಡಿದು ಹೋಗ್ಬಹುದು' ಎಂಬ ಅಮ್ಮನ ಕರೆಗೆ ಯಾರೂ ಸೊಪ್ಪು ಹಾಕಲಿಲ್ಲ. ಅಮ್ಮ ಬಂದದ್ದೇ ಹೂವಿನ ಗಿಡಗಳಿಗೆ ನೀರು ಹಾಕಲಿಕ್ಕೆಂದು ಬಚ್ಚಲು ಮನೆಯಿಂದ ಕೊಡಪಾನ ತಂದು ನಲ್ಲಿಯ ಕೆಳಗಿಟ್ಟಳು. ಅಮ್ಮನ ಈ ಕೆಲಸದಲ್ಲಿ ನೆರವಾಗಲು ನಾನು ಕಟ್ಟೆಯಿಳಿದು ಬಂದೆ.

ನಮ್ಮ ಮನೆಯ ಅಂಗಳವೆಂಬ ಗಾರ್ಡನ್ನಿನ್ನಲ್ಲಿ ಎಷ್ಟೊಂದು ಬಣ್ಣದ ಹೂಗಳು. ಯಾವುದಕ್ಕೆ ಹೋಲಿಸುವುದು ಇದನ್ನು? 'ಅವಳ' ಚೂಡಿಗೆ? ಊರಲ್ಲಿದ್ದಾಗ ನಾನೂ ಅಮ್ಮನೂ ಸೇರಿ ಅದೆಷ್ಟೋ ಹೂವಿನ ಗಿಡಗಳನ್ನು ನೆಡುತ್ತಿದ್ದವು. ಮಳೆಗಾಲ ಶುರುವಾಯಿತೆಂದರೆ ನಮಗೆ ಅದೇ ಕೆಲಸ. ಸುಜಾತಕ್ಕನ ಮನೆಯ ಅಂಗಳದಲ್ಲಿ ಹೊಸ ಬಣ್ಣದ ದಾಸಾಳ ಹೂವು ಕಂಡರೆ ಸಾಕು, ಅಮ್ಮ ಹೋಗಿ 'ನಂಗೊಂದು ಹೆಣಿಕೆ ಕೊಡೇ' ಅಂತಂದು ಇಸಕೊಂಡು ಬರುತ್ತಿದ್ದಳು. ಕೊನೆಗೆ ನಾನೂ ಅಮ್ಮನೂ ಸೇರಿ, ಅಂಗಳದಲ್ಲಿ ಗುದ್ದು ತೋಡಿ, ಸ್ವಲ್ಪೇ ಸ್ವಲ್ಪ ಗೊಬ್ಬರ - ಹೊಸ ಮಣ್ಣು ಹಾಕಿ ಆ ರೆಂಬೆಯನ್ನು ಊರುವುದು. ಅಮ್ಮನ ಕೈಗುಣದ ಬಗ್ಗೆ ಎರಡು ಮಾತಿಲ್ಲ. ಅವಳು ನೆಟ್ಟಮೇಲೆ ಅದು ಚಿಗುರಲೇಬೇಕು: ಉಲ್ಟಾ ನೆಟ್ಟಿದ್ದರೂ! ಎಷ್ಟು ಗಿಡ ನೆಡುತ್ತಿದ್ದೆವು ನಾವು... ನೆಂಟರ ಮನೆಗೆ ಹೋದಾಗ ಬಿಳಿ ಬಿಳಿ ಎಸಳಿನ ಶ್ಯಾವಂತ್ಗೆ ಹೂವು ಕಣ್ಣಿಗೆ ಬಿತ್ತೋ, ಅಮ್ಮ ಅವರ ಬಳಿ ಗೋಗರೆದು ಒಂದು ಹಿಳ್ಳು ಪಡೆದು ತಂದು ನಮ್ಮನೆಯ ಶ್ಯಾವಂತಿಗೆ ಪಟ್ಟೆಯಲ್ಲಿ ಸೇರಿಸುತ್ತಿದ್ದಳು. ನಾನಾದರೂ ಅಷ್ಟೆ: ಮೆಡ್ಲಿಸ್ಕೂಲಿಗೆ ಹೋಗಬೇಕಾದರೆ ಯಾವ ಹುಡುಗಿಯರ ಮುಡಿಯಲ್ಲಿ ನಮ್ಮನೆಯಲ್ಲಿ ಇಲ್ಲದ ಬಣ್ಣದ ಡೇರೇ ಹೂವು ಕಂಡರೂ 'ಇದರ ಗಿಡದ ಒಂದು ಕೊಂಬೆ ತಂದ್ಕೊಡ್ರೇ, ನಮ್ಮಮ್ಮಂಗೆ...' ಅಂತ ದುಂಬಾಲು ಬೀಳುತ್ತಿದ್ದೆ. ಆ ಹುಡುಗಿಯರಿಗೂ ನನ್ನ ಮೇಲೆ ಎಂಥದೋ ಪ್ರೀತಿ; ತಪ್ಪದೇ ತಂದುಕೊಡುತ್ತಿದ್ದರು! ಹಾಲಮ್ಮನಂತೂ ಪಿಂಡಿಗಟ್ಟಲೆ ತಂದು ಕೊಟ್ಟಿದ್ದಳು ಒಮ್ಮೆ! ಆದರೆ ಹೈಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಹಾಗೆ ಹುಡುಗಿಯರನ್ನು ಕೇಳುತ್ತಿರಲಿಲ್ಲ. ಏಕೆಂದರೆ ನಮ್ಮ ಹೈಸ್ಕೂಲಿನಲ್ಲಿ ಹುಡುಗರೂ-ಹುಡುಗಿಯರೂ ಪರಸ್ಪರ ಮಾತಾಡಿಕೊಳ್ಳುವಂತೆಯೇ ಇರಲಿಲ್ಲ, ಇನ್ನು ನಾನು ಹೂವಿನ ಗಿಡ ಕೇಳುವುದೆಲ್ಲಿಂದ ಬಂತು? ಅಮ್ಮ 'ನಿಮ್ ಶಾಲೆ ಹುಡುಗಿಯರ ಮನೇಲಿ ಒಳ್ಳೊಳ್ಳೇ ಹೂವಿನ ಗಿಡ ಇದ್ರೆ ತಂದುಕೊಡಕ್ಕೆ ಹೇಳಾ' ಅಂತ ನನ್ನ ಬಳಿ ಹೇಳಿದಾಗ ನಾನು 'ಹಂಗೆಲ್ಲ ಕೇಳಕ್ಕೆ ಆಗೊಲ್ಲಮ್ಮ, ನಾನು ಹೈಸ್ಕೂಲು ಈಗ' ಅನ್ನುತ್ತಿದ್ದೆ. ಅಮ್ಮನಿಗೆ ನನ್ನ ಪರಿಸ್ಥಿತಿಯ ಅರಿವಾಗಿಯೋ, ಮಗ ದೊಡ್ಡವನಾಗಿದ್ದಾನೆ ಎಂಬ ಸುಳಿವು ಸಿಕ್ಕೋ ಅಥವಾ ತನ್ನ ಹೈಸ್ಕೂಲು ದಿನಗಳ ನೆನಪಾಗಿಯೋ, ಸಣ್ಣಗೆ ನಾಚುತ್ತಿದ್ದಳು: ಶಂಖಪುಷ್ಪದ ಹೂವಿನಂತೆ.

ಅಮ್ಮನೊಂದಿಗೆ ನಾನೂ ಬಣ್ಣಬಣ್ಣದ ಗುಲಾಬಿ ಗಿಡಗಳಿಗೆ ನೀರು ಹನಿಸಿದೆ. ಬೇಲಿಗೂಟವನ್ನು ತಬ್ಬಿದ್ದ ಮಲ್ಲಿಗೆ ಬಳ್ಳಿ, ತೆಂಗಿನ ಮರದ ತಂಪಿನಲ್ಲಿದ್ದ ಗೊಲ್ಟೆ ಹೂವಿನ ಗಿಡ, ಅದರ ಪಕ್ಕದಲ್ಲೇ ನವಿಲುನೀಲಿ ಹೂಗಳನ್ನು ತೂಗುತ್ತಿರುವ ಶಂಖಪುಷ್ಪ, ಚಿಕ್ಕ ಮಕ್ಕಳಂತೆ ನಗುತ್ತಿರುವ ತುಂಬೆ ಹೂವು, ಮನೆಯ ಪಕ್ಕ ನೆರಳಿನಲ್ಲಿರುವ ಶ್ಯಾವಂತಿಗೆ ಪಟ್ಟೆ... ಎಲ್ಲಕ್ಕೂ ನೀರು ಹಾಕಿದೆವು. ತುಂತುರು ತಾಕಿದ್ದೇ ಖುಷಿಯೋ ಖುಷಿ ಹೂವುಗಳಿಗೆ! ತಣ್ಣೀರಿನಿಂದ ಮೈಪುಳಕಗೊಂಡು ಗಾಳಿಗೆ ತೂಗತೊಡಗಿದವು. ಈ ಹೂವುಗಳು ಸಾಮಾನ್ಯ ಅಂದುಕೊಳ್ಳಬೇಡಿ, ಸಿಕ್ಕಾಪಟ್ಟೆ ಕಿಲಾಡಿ ಇದಾವೆ... ನೋಡಿದ ಗೃಹಿಣಿಯ ಕಣ್ಣಲ್ಲಿ ಆಕರ್ಷಣೆ ಹುಟ್ಟಿಸಿ, ಆಕೆಯ ಮುಡಿಯೇರಿ, ರಾತ್ರಿ ಮಲಗುವಾಗ ಅವಳು ಹೇರ್‌ಕ್ಲಿಪ್ಪಿನಿಂದ ಬಿಡಿಸಿಕೊಳ್ಳುವ ಮುನ್ನ ಅವಳ ಹೆರಳ ತುಂಬಾ ತಮ್ಮ ಘಮವನ್ನು ಉಳಿಸಿಯೇ ಇಳಿಯುತ್ತವೆ ಇವು. ಆ ರಾತ್ರಿ ಆ ಪರಿಮಳದಿಂದಲೇ ಅವನು ಇನ್ನಷ್ಟು ಉನ್ಮತ್ತನಾಗುತ್ತಾನೆ...

ಹಿತ್ತಿಲ ಹಲಸಿನ ಮರದ ಹಿಂದೆಲ್ಲೋ ಸೂರ್ಯ ಮುಳುಗುತ್ತಿದ್ದ. ಆಗಸದ ಹೂದೋಟದಲ್ಲಿ ಚುಕ್ಕಿಗಳು ಒಂದೊಂದಾಗಿ ಅರಳುತ್ತಿದ್ದವು. ಪಾರಿವಾಳಗಳೆಲ್ಲ ಆಗಲೇ ಗೂಡು ಸೇರಿದ್ದವಿರಬೇಕು. 'ಸಾಕು, ಕಪ್ಪಾಯ್ತು, ಒಳಗೆ ಹೋಗೋಣ ಬಾ. ಅವಲಕ್ಕಿ-ಮೊಸರು ತಿನ್ನುವಂತೆ' ಅಮ್ಮ ಕರೆದಳು. ಹೊಸ ಆಹ್ಲಾದದೊಂದಿಗೆ ನಾನು ಮನೆಯ ಒಳನಡೆದೆ.

Saturday, March 10, 2007

ಕೊಟ್ಟಿಗೆ: ಒಂದು ಸುಲಲಿತ ಪ್ರಬಂಧ

ಅಮ್ಮ ಅಂದಳು ಫೋನಿನಲ್ಲಿ "ದನ ಮೊನ್ನೆ ಕರ ಹಾಕ್ಚು. ಆದರೆ ಹಾಲು ಕರೆಯಕ್ಕೇ ಕೊಡ್ತಾ ಇಲ್ಲೆ. ಹಾಯಕ್ಕೇ ಬರ್ತು. ನಿಲ್ತೇ ಇಲ್ಲೆ ಒಂದು ಕಡೆ, ಒಂದೇ ಸಮನೆ ತಿರುಗ್ತು. ಮೊಲೆಗೆ ಕೈ ಹಾಕಿದ್ರೆ ಒದಿತು.."

ಅಯ್ಯೋ! ಏನಾಯಿತು ನಮ್ಮನೆ ದನಕ್ಕೆ? ಎಂಥ ಸಿಟ್ಟು ಅದಕ್ಕೆ? ನಾನು ಯೋಚಿಸಿದೆ. ಹೇಳಿದೆ ಅಮ್ಮನ ಹತ್ರ "ಕೈ ಮರ್ಚಲೇನ? ಅಪ್ಪನ ಹತ್ರ ನೋಡಕ್ಕೆ ಹೇಳಕ್ಕಾಯಿತ್ತು" ಅಂತ. ಅಮ್ಮ ಅಂದಳು "ಅಯ್ಯೋ ಎಲ್ಲಾ ನೋಡ್ಯಾತು. ಅವರಿಗೂ ಕೊಡ್ಲೆ. ನಿನ್ನೆ ಮಾವ ಬಂದಿದ್ದಿದ್ದ, ಅವನ ಹತ್ರ ನೋಡು ಅಂದ್ಯ. ಅವಂಗೆ ಸಲೀಸಾಗಿ ಕೊಡ್ಚು!"

ವಿಷಯ ಏನಪ್ಪಾ ಅಂದ್ರೆ, ಅದು ಮಾವನ ಮನೆಯಿಂದ ಹೊಡೆದು ತಂದ ದನ. ನಮ್ಮನೆಯಲ್ಲಿ ಅಜ್ಜಿ ತೀರಿಕೊಂಡಾಗ, ಪ್ರತಿ ತಿಂಗಳೂ ಗೋಗ್ರಾಸ ಕೊಡಬೇಕಲ್ಲ, ಅದಕ್ಕೆ ದನ ಇರಲಿಲ್ಲ. ಬೇರೆ ಯಾರ ಮನೆ ದನಕ್ಕಾದರೂ ಕೊಡುವುದು ಅಂತ ನಾವು ತೀರ್ಮಾನಿಸಿದ್ದೆವು. ಆದರೆ ಅಷ್ಟೊತ್ತಿಗೆ ನಮ್ಮನೆ ಎಮ್ಮೆಯೂ ಹಾಲು ಕಮ್ಮಿ ಮಾಡಿತ್ತು. 'ಓ, ಈಗ ಒಂದು ಬೇರೆ ಜಾನುವಾರು ಮಾಡೋದೇ ಸೈ' ಅಂತ ಅಪ್ಪ ಯೋಚಿಸುತ್ತಿದ್ದಾಗಲೆ ಮಾವ ಬಂದು "ಈಗ ಅರ್ಜೆಂಟಿಗೆ ಎಲ್ಲಿ ಅಂತ ಹುಡುಕ್ತಿ? ನಮ್ಮನೆ ದನಾನೆ ಹೊಡಕಂಡು ಹೋಕ್ಯಳಿ" ಅಂದ. ನಾವೂ ಹೆಚ್ಚು ಯೋಚಿಸದೆ ಮಾವನ ಮನೆ ದನ 'ಕೃಷ್ಣೆ'ಯನ್ನು ತಂದುಕೊಂಡೆವು. ತೌರಿನಿಂದ ಬಂದಮೇಲೆ ಬೇರೆ ಹೆಸರಿಡುವ ಸಂಪ್ರದಾಯ ಜಾನುವಾರುಗಳಲ್ಲಿ ಇಲ್ಲವಾದರೂ ನಾನು ಅದಕ್ಕೆ 'ಮಂಗಳ' ಅಂತ ಹೊಸ ಹೆಸರಿಟ್ಟೆ. ನಾನು ಆ ಹೆಸರಿಟ್ಟಿದ್ದಕ್ಕೆ ನಿಜವಾದ ಕಾರಣ ಅದು ನನ್ನ ಕಾಲೇಜಿನ ಚಂದದ ಹುಡುಗಿಯೊಬ್ಬಳ ಹೆಸರು ಎಂಬುದಾಗಿತ್ತಾದರೂ "ಇವತ್ತು ಮಂಗಳವಾರವಾದ್ದರಿಂದ 'ಮಂಗಳ' ಅಂತ ಹೆಸರಿಟ್ಟೆ" ಅಂತ ನಾನಂದಾಗ ನಮ್ಮ ಮನೆಯಲ್ಲಿ ಯಾರಿಗೂ ಅನುಮಾನ ಬರಲಿಲ್ಲ.

ಇದೆಲ್ಲಾ ಆಗಿದ್ದು ಎರಡು ವರ್ಷದ ಹಿಂದೆ. ಆದರೆ ಆ ದನ ಇನ್ನೂ ಮಾವನನ್ನು ನೆನಪಿಟ್ಟುಕೊಂಡಿದೆ! ಅದು ಅವರ ಮನೆಯಲ್ಲೇ ಹುಟ್ಟಿದ ದನ. ಮಾವನ ಮನೆಯವರು ಅಕ್ಕರೆಯಿಂದ ಬೆಳೆಸಿದ ದನ. ಮೊದಲನೇ ಕರು ಹಾಕಿದಾಕ್ಷಣ ನಮ್ಮನೆಗೆ ಬಂದಿತ್ತು ಅದು.

ಹಳ್ಳಿ ಮನೆ ಎಂದಮೇಲೆ ಅದಕ್ಕೊಂದು ಕೊಟ್ಟಿಗೆ ಇರಬೇಕು. ಕೊಟ್ಟಿಗೆ ತುಂಬಾ ಜಾನುವಾರುಗಳಿರಬೇಕು. ಒಂದು ಕೊಟ್ಟಿಗೆ ಇದೆ ಎಂದರೆ ಏನೆಲ್ಲ ಇರಬೇಕು... ಹುಲ್ಲು ಗೊಣಬೆ, ಕಲ್ಡದ ಬ್ಯಾಣ, ಹಸಿಹುಲ್ಲಿಗೆ ಹಿತ್ಲು, ಹಿಂಡಿ-ಗೋಧಿಭೂಸ-ತೌಡು ಶೇಖರಿಸಿಡಲು ಗೋಡೌನು, ಅಕ್ಕಚ್ಚು ತೋರಲು ಒಂದು ಹಿಂಡಾಲಿಯಂ ಬಕೀಟು, ಹರಿದು ಹೋದರೆ ಬೇಕಾಗುತ್ತದೆ ಎಂದು ತಂದಿಟ್ಟ ಎಕ್ಸ್‍ಟ್ರಾ ಕಣ್ಣಿ.... ಕೊಟ್ಟಿಗೆ ಇದೆ ಎಂದಮೇಲೆ ಅಲ್ಲಿ ಏನೆಲ್ಲ ಇರುತ್ತದೆ... ಆಡಿಕೊಳ್ಳಲೆಂದು ಅಂಗಳದಲ್ಲಿ ಬಿಟ್ಟಿದ್ದ ಕರು ಅಲ್ಲಲ್ಲಿ ಹಾಕಿದ ಸಗಣಿ ಉಳ್ಳೆ, ಸರಿಯಾದ ಹೊತ್ತಿಗೆ ಹುಲ್ಲು ಹಾಕಲಿಲ್ಲವೆಂದರೆ ಕೊಟ್ಟಿಗೆಯಿಂದ ಬರುವ ದನದ 'ಅಂಬಾ..' ಕೂಗು, ಅದನ್ನು ಹಿಂಬಾಲಿಸುವ ಎಮ್ಮೆಯ 'ಆಂಯ್' ಕೂಗು, ಹಾಗೆ ಕೊಟ್ಟಿಗೆಯಿಂದ ಕೂಗುಗಳು ಬಂದಾಕ್ಷಣ ಅಮ್ಮನನ್ನು 'ಹುಲ್ಲು ಹಾಕಲ್ಯನೇ?' ಎಂದು ಕೇಳುವ ಅಪ್ಪ, 'ಹಿಂಡಿ ಖಾಲಿ ಆಯ್ದು. ಸುಬ್ಬಣ್ಣನ ವ್ಯಾನು ಸಾಗರಕ್ಕೆ ಹೋಗ್ತೇನ, ಒಂದು ಚೀಲ ಹಾಕ್ಯಂಡು ಬರಕ್ಕೆ ಹೇಳಲಾಗಿತ್ತು' ಎಂಬ ಅಮ್ಮನ ವರಾತ, ಹಾಲು ಕೊಡದಿದ್ದರೆ 'ಮುರ ಇಟ್ಕಂಡು ನೋಡಿ' ಎಂಬ ಸಲಹೆ... ಕೊಟ್ಟಿಗೆ ಎಂಬುದು ಹಳ್ಳಿಯ ಮನೆಗಳ ಅವಿಭಾಜ್ಯ ಅಂಗ. ಅದು ಹಳ್ಳಿಗರ ಜೀವನಶೈಲಿಯೆಂಬ ಚಿತ್ರಾನ್ನಕ್ಕೆ ಹಾಕಿದ ಉಪ್ಪು-ಖಾರ.

ಮನೆಗೆ ಹೊಂದಿಕೊಂಡಂತೆ ಇರುತ್ತದೆ ಕೊಟ್ಟಿಗೆ. ಚಪ್ಪಡಿ ಹಾಸಿದ ಕೊಟ್ಟಿಗೆಯಲ್ಲಿ ಮಧ್ಯದಲ್ಲೊಂದು ಒಗದಿ. ಜಾನುವಾರು ಹೊಯ್ದ ಉಚ್ಚೆ (ಗ್ವಾತ), ಅವುಗಳ ಮೈತೊಳೆದ ನೀರು, ಎಲ್ಲಾ ಆ ಒಗದಿಯ ಮೂಲಕ ಸಾಗಿ ಗೊಬ್ಬರಗುಂಡಿಯ ಪಕ್ಕ ಇರುವ ಒಂದು ಬಾನಿಗೆ ಬೀಳುತ್ತದೆ. ಹುಲ್ಲು ತಿನ್ನುತ್ತಾ ನಿಂತಿರುವ ದನ, ಮಲಗಿ ಮೆಲಕು ಹಾಕುತ್ತಿರುವ ಎಮ್ಮೆ, ಆಸೆಗಣ್ಣುಗಳಲ್ಲಿ ತಾಯಿಯನ್ನೇ ನೋಡುತ್ತಿರುವ ಕರು, ತಾನು ಹಾಕಿದ ಸಗಣಿಯನ್ನು ತಾನೇ ಮೂಸುತ್ತಿರುವ ಪೆದ್ದ ಎಮ್ಮೆಕರು... ಈ ಜಾನುವಾರುಗಳು ಎಷ್ಟೊಂದು ಸುಖಿಗಳು ಅನ್ನಿಸುತ್ತದೆ ಎಷ್ಟೋ ಸಲ. ಅವುಗಳ ಸುಖ ನಮಗಿಲ್ಲವಲ್ಲ ಅನ್ನಿಸುತ್ತದೆ. ಅರಾಮಾಗಿ ಹಾಕಿದ ಹುಲ್ಲು ತಿನ್ನುವುದು, ಮಲಗುವುದು, ಮೆಲುಕು ಹಾಕುವುದು, ಏಳುವುದು.... ಉಚ್ಚೆ ಹೊಯ್ಯುವುದಕ್ಕೂ ಹೊರಗೆ ಹೋಗಬೇಕಿಲ್ಲ; ಸಂಡಾಸನ್ನು ಲ್ಯಾಟ್ರೀನ್ ರೂಮಿಗೇ ಹೋಗಿ ಮಾಡಬೇಕೆಂಬ ರಿಸ್ಟ್ರಿಕ್ಷನ್ ಇಲ್ಲ! ನಿಂತಲ್ಲೇ ಎಲ್ಲಾ ಮಾಡಿದರಾಯಿತು. ಬೇಕಾದರೆ ಸಾಕಿಕೊಂಡವರು ಅವನ್ನೆಲ್ಲಾ ಕ್ಲೀನ್ ಮಾಡಿಕೊಳ್ಳಲಿ. ಆಹಾ! ಎಷ್ಟು ಸುಖಜೀವನ! ಯಾವ ಸಾಫ್ಟ್‍ವೇರ್ ಇಂಜಿನಿಯರ್ರಿನ ಹೆಂಡತಿಗಿದೆ ಈ ಸುಖ?

ಇವೆಲ್ಲಾ ಮೇಯಲು ಹೊರಗಡೆ ಬಿಡದ, ಮನೆಯಲ್ಲೇ ಕಟ್ಟಿ ಹಾಕುವ ಮನೆಗಳ ಜಾನುವಾರುಗಳ ಸುಖದ ಕತೆಯಾದರೆ ಮೇಯಲು ಬ್ಯಾಣಕ್ಕೆ ಬಿಡುವ ಜಾನುವರಗಳ ಸುಖ ಮತ್ತೊಂದು ತರ! ಬೆಳಗ್ಗೆ ಎದ್ದ ಕೂಡಲೆ ಹುಲ್ಲು ಹಾಕಿ, ಹಾಲು ಕರೆದು, ತೊಳಕಲು, ಹಿಂಡಿ ಕೊಟ್ಟು, ಕಣ್ಣಿ ಕಳಚಿ ಹೊರಗೆ ಬಿಟ್ಟರೆ ಆಮೇಲು ಅವು ವಾಪಾಸು ಕೊಟ್ಟಿಗೆಗೆ ಬರುವುದು ಸೂರ್ಯ ಮುಳುಗಿದ ಮೇಲೇ. ಕೆಲ ಊರುಗಳಲ್ಲಿ ದನಗಾವಲು ಅಂತಲೇ ಇರುತ್ತದೆ. 'ದನ ಕಾಯುವ ಹುಡುಗ' ಎಂಬ ಬಿರುದಾಂಕಿತ ಹುಡುಗನೊಬ್ಬ ತನ್ನ ಕಂಬಳಿ ಕೊಪ್ಪೆ ಮತ್ತು ದಾಸಾಳ ಬರ್ಲು ಹಿಡಿದು 'ದನ ಹೊಡಿರೋss..' ಎಂದು ಕೂಗುತ್ತ ಪ್ರತಿ ಬೆಳಗ್ಗೆ ಬರುತ್ತಾನೆ. ಅವನ ಕೂಗು ಕೇಳುತ್ತಿದ್ದಂತೆ ಎಲ್ಲರೂ ತಮ್ಮ ಮನೆಗಳ ಕೊಟ್ಟಿಗೆಯ ಬಾಗಿಲು ತೆರೆದು ದನಕರುಗಳನ್ನು ಕಣ್ಣಿ ಕಳಚಿ ಹೊರಬಿಡುತ್ತಾರೆ. ಎಲ್ಲರ ಮನೆಯ ಜಾನುವಾರುಗಳ ಹಿಂಡಿನ ಜೊತೆ ನಮ್ಮನೆ ದನವೂ ಸೇರಿಕೊಳ್ಳುವುದನ್ನು ನೋಡುವಾಗ ಶಾಲೆಗೆ ಹೊರಟ ಮಗುವಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೀಳ್ಕೊಡುವ ಹೃದಯ ಒಂದು ಕ್ಷಣ ತುಂಬಿಕೊಳ್ಳುತ್ತದೆ.

ಗೋಪಬಾಲಕ ಜಾನುವಾರುಗಳನ್ನೆಲ್ಲ ಹೊಡೆದುಕೊಂಡು ಯಾವುದೋ ಬೆಟ್ಟದ ಮೇಲೋ, ಹುಲ್ಲುಗಾವಲಿಗೋ ಒಯ್ಯುತ್ತಾನೆ. ಅಲ್ಲಿ ಅವನ್ನೆಲ್ಲಾ ಮೇಯಲು ಬಿಟ್ಟು ಇವನು ಮರ ಹತ್ತಿ ಹಣ್ಣು ಕೀಳುವುದೋ, ಊರ ಹುಡುಗರಿಗೆ ಎರಡು ರೂಪಾಯಿಗೆ ಕೊಡಲು ಪೆಟ್ಲು ಮಾಡುವುದರಲ್ಲೋ ತೊಡಗುತ್ತಾನೆ. ಅವನು ಹಾಗೆ ಬೇರೆ ಕಡೆ ಹೋಗುತ್ತಿದ್ದಂತೆಯೇ ದನಗಳು ಮರದ ತಂಪನ್ನರಸಿ ಹೊರಟರೆ ಎಮ್ಮೆಗಳು ಕೆಸರಿನ ಹೊಂಡ ಎಲ್ಲಿದೆ ಅಂತ ಹುಡುಕಿ ಹೊರಡುತ್ತವೆ. ಈ ಎಮ್ಮೆಗಳಿಗೆ ಕೆಸರಿನ ಹೊಂಡದಲ್ಲಿ ಹೊರಳಾಡುವುದೆಂದರೆ ಭಾರೀ ಪ್ರೀತಿ. ಉರಿಬಿಸಿಲಿನಲ್ಲಿ ಮುಖವನ್ನಷ್ಟೇ ನೀರಿನಿಂದ ಮೇಲಕ್ಕೆ ಎತ್ತಿ ಕೆಸರಿನ ಹೊಂಡದಲ್ಲಿ ಶತಸೋಮಾರಿಯಂತೆ ಈಜುತ್ತಾ ತೂಕಡಿಸುತ್ತಾ ಇರುವ ಎಮ್ಮೆಯ ಸುಖದ ತಂಪಿನ ಮುಂದೆ ಹೊಂಡಾ ಕಾರಿನ ಏಸಿ ಏನೂ ಅಲ್ಲ. ಹೊಟ್ಟೆಕಿಚ್ಚಾಗುತ್ತೆ ಅದನ್ನು ನೋಡಿದರೆ!

ಸೂರ್ಯ ಮುಳುಗುವ ಹೊತ್ತಿಗೆ ದನಕರುಗಳೆಲ್ಲ ತಮ್ಮ ತಮ್ಮ ಮನೆ ಸೇರುತ್ತವೆ. ಬೆಳಗ್ಗೆಯಷ್ಟೆ ಮೈತೊಳೆದು ಬಿಟ್ಟಿದ್ದ ಎಮ್ಮೆ ಮೈಯೆಲ್ಲಾ ಕೆಸರು ಮಾಡಿಕೊಂಡು ಬಂದದ್ದನ್ನು ನೋಡಿ ಅಪ್ಪ ಸಿಡಿಮಿಡಿಗೊಳ್ಳುತ್ತಾನೆ. ಗೂಟಕ್ಕೆ ಕಣ್ಣಿ ಕಟ್ಟಿ ಹಿಂದೆ ಬರುವಾಗ ಅದು ಬೀಸಿದ ಬಾಲ ಅಪ್ಪನ ಮುಖಕ್ಕೆ ಹೊಡೆದು ಅಪ್ಪನ ಸಿಟ್ಟು ಇಮ್ಮಡಿಯಾಗುತ್ತದೆ. 'ಥೂ, ಸುಮ್ನೆ ನಿಂತ್ಕಳಕ್ಕೆ ಆಗ್ತಲ್ಯನೆ?' ಎಂದು ಒಂದೇಟು ಕೊಡುತ್ತಾನೆ. ಆಮೇಲೆ ಅಕ್ಕಚ್ಚು ಕೊಡುತ್ತಾನೆ. ಯಜಮಾನ ಬೈದನಲ್ಲ ಎಂಬ ಅವಮಾನಕ್ಕೋ ಅಥವಾ ಮತ್ತೆ ಹೊಡೆದಾನು ಎಂಬ ಭಯಕ್ಕೋ, ಪೂರ್ತಿ ಎರಡು ಬಕೆಟ್ ಅಕ್ಕಚ್ಚನ್ನು ಶುಲ್ಟಿ ಎಮ್ಮೆ ತಲೆ ಎತ್ತದೆ ಕುಡಿದು ಮುಗಿಸುತ್ತದೆ. ಆಮೇಲೆ ಅಮ್ಮ ದನದ ಹಾಲನ್ನೂ ಅಪ್ಪ ಎಮ್ಮೆಯ ಹಾಲನ್ನೂ ಕರೆಯುತ್ತಾರೆ. ಹಾಲು ಕರೆದಾದಮೇಲೆ ಹುಲ್ಲು ಹಾಕಿ, ಕೊಟ್ಟಿಗೆಯ ಬಾಗಿಲು ಮುಚ್ಚಿ ಒಳಬಂದರೆ ಹೆಚ್ಚುಕಮ್ಮಿ ಅವತ್ತಿನ ಕೊಟ್ಟಿಗೆ ಕೆಲಸ ಆದಂತೆಯೇ.

ಹಳ್ಳಿಯ ಜನ ಕೊಟ್ಟಿಗೆಗೆ, ಜಾನುವಾರುಗಳಿಗೆ ಎಷ್ಟು ಹೊಂದಿಕೊಂಡಿರುತ್ತಾರೆಂದರೆ ಒಂದು ದಿನ ಕೊಟ್ಟಿಗೆಗೆ ಹೋಗಲಿಲ್ಲವೆಂದರೆ ಸಮಾಧಾನವಿರುವುದಿಲ್ಲ. ಅಲ್ಲದೇ ಕೊಟ್ಟಿಗೆ ಇಲ್ಲದಿದ್ದರೆ ಹಳ್ಳಿ ಮನೆಯ ಜನಗಳಿಗೆ ಅಂತಹ ಕೆಲಸವೂ ಇರುವುದಿಲ್ಲ. ಕೊಟ್ಟಿಗೆ ಕೆಲಸ ದಿನದ ಮುಖ್ಯ ಕೆಲಸಗಳಲ್ಲಿ ಒಂದು. ಬೆಳಗ್ಗೆ ಎದ್ದಕೂಡಲೇ ಹಾಲು ಕರೆಯುವುದು, ಆಮೇಲೆ ದನಕರುಗಳ ಮೈತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನ್ ಮಾಡುವುದು, ಗೋಬರ್ ಗ್ಯಾಸಿಗೆ ಸಗಣಿ ಕರಡುವುದು, ಹಿತ್ಲಿನಿಂದ ಹಸಿ ಹುಲ್ಲು ಕೊಯ್ದು ತರುವುದು, ಅವಾಗಿವಾಗ ಹುಲ್ಲು ಹಾಕುತ್ತಿರುವುದು, ಸಂಜೆ ತೊಳಕಲು ತೋರುವುದು, ಹಿಂಡಿ ಕೊಡುವುದು.... ಹೀಗೆ ಕೊಟ್ಟಿಗೆ ಕೆಲಸ ಹಳ್ಳಿಗರ ದಿನದ ಬಹಳ ಸಮಯವನ್ನು ತಿಂದು ಹಾಕುತ್ತದೆ. ಇದನ್ನು ಆಲೋಚಿಸಿಯೇ ಕೆಲ ಮನೆಯವರು ಇತ್ತೀಚೆಗೆ ತಮ್ಮ ಮನೆಯ ಜಾನುವಾರುಗಳನ್ನೆಲ್ಲಾ ಮಾರಿ ಹಾಲು ಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಕೊಟ್ಟಿಗೆಗೆ ಖರ್ಚೂ ತುಂಬಾನೇ ಬರುತ್ತದೆ. ದನಕರುಗಳಿಗೆ ಹಿಂಡಿ, ಹತ್ತಿಕಾಳು, ಗೋಧಿಬೂಸ, ತೌಡು, ಬಿಳಿಹುಲ್ಲು.... ಹೀಗೆ ಆಹಾರಕ್ಕೇ ಸಿಕ್ಕಾಪಟ್ಟೆ ಖರ್ಚು. ಅವಕ್ಕೆ ಖಾಯಿಲೆ-ಕಸಾಲೆ ಬಂದರಂತೂ ಡಾಕ್ಟರಿಗೆ-ಔಷಧಿಗೆ ದುಡ್ಡು ಕೊಟ್ಟು ಪೂರೈಸುವುದೇ ಅಲ್ಲ. ಈ ಮಧ್ಯೆ ಎಮ್ಮೆ-ದನಗಳು ಯಾವಾಗ ಬತ್ತಿಸಿಕೊಳ್ಳುತ್ತವೆ (ಹಾಲುಕೊಡುವುದು ನಿಲ್ಲಿಸುವುದು) ಎಂದು ಹೇಳಲಾಗುವುದಿಲ್ಲ. ಬಲ್ಡು (ಬರಡು) ಬಿದ್ದ ಜಾನುವಾರನ್ನು ಇಟ್ಟುಕೊಂಡು ಸುಮ್ಮನೆ ಸಾಕುವುದು ಯಜಮಾನನಿಗೆ ಹೊರೆಯೇ. ಹೀಟಿಗೆ ಬಂದಾಗ ಮಳಗದ್ದೆ ಮನೋಹರನನ್ನೋ ಮೂಡಗೋಡು ಅರವಿಂದನನ್ನೋ ಕರೆಸಿ ಇನ್ಸೆಮಿನೇಶನ್ ಮಾಡಿಸಬೇಕು. ಒಂದೇ ಸಲಕ್ಕೆ ಗರ್ಭ ಕಟ್ಟುತ್ತದೆ ಅಂತ ಹೇಳಲಾಗುವುದಿಲ್ಲ. ಮತ್ತೆ ಮತ್ತೆ ಕರೆಸಬೇಕಾಗಬಹುದು. ಗಬ್ಬ ಆಗಿ ಐದಾರು ತಿಂಗಳಾದ ಮೇಲೆ ದನ ಹಾಲು ಕೊಡುವುದು ನಿಲ್ಲಿಸುತ್ತದೆ. ಇನ್ನು ಅದು ಕರು ಹಾಕುವವರೆಗೂ ಕಾಯಬೇಕು. ಇದೆಲ್ಲಾ ರಗಳೆಗಳು ಬೇಡವೇ ಬೇಡ ಎಂದು ನಿರ್ಧರಿಸಿ ಹಳ್ಳಿ ಜನಗಳು ಈಗೀಗ 'ಬುದ್ಧಿವಂತ'ರಾಗುತ್ತಿದ್ದಾರೆ. ದಿನಕ್ಕೆ ಎರಡು ಲೀಟರ್ ಹಾಲು ಕೊಂಡರಾಯಿತು. ತೋಟಕ್ಕೆ ಹಾಕಿಸಲು ಎರಡು ಲೋಡ್ ಗೊಬ್ಬರ ಕೊಂಡರಾಯಿತು. ಅಡುಗೆಗೆ ಹೇಗಿದ್ದರೂ ಸಿಲಿಂಡರ್ ಗ್ಯಾಸ್ ಇದೆ.

ಆದರೆ ಹಾಗೆ ಜಾನುವಾರುಗಳನ್ನೆಲ್ಲಾ ಕೊಟ್ಟು ಕೊಟ್ಟಿಗೆ ಖಾಲಿ ಮಾಡಿಕೊಂಡವರು ಆ ಮೂಲಕ ಕೆಲಸ ಕಮ್ಮಿ ಮಾಡಿಕೊಂಡರೂ ಕೊಟ್ಟಿಗೆಯಿಂದ ಸಿಗುತ್ತಿದ್ದ ಅದೆಷ್ಟೋ ಖುಷಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ. ದನಕರುಗಳು, ಅವು ಕೊಟ್ಟಿಗೆಯಲ್ಲಿದ್ದರೂ, ಮನೆ ಮಂದಿಯಷ್ಟೇ ಪ್ರಾಮುಖ್ಯತೆ ಇರುತ್ತದೆ ಅವಕ್ಕೆ. 'ಏನೇ, ಇನ್ನೂ ಮಲಗಿದ್ಯಲ, ಏಳು ಸಾಕು' ಎನ್ನುತ್ತಾ ಕೊಟ್ಟಿಗೆಗೆ ಹೋದರೆ ಅದೆಷ್ಟು ದೈನ್ಯತೆಯಿಂದ ಎದ್ದು ನಿಲ್ಲುತ್ತದೆ ದನ! ಎಷ್ಟು ಪ್ರೀತಿ ತೋರಿಸುತ್ತದೆ ಅದು ಯಜಮಾನನಿಗೆ! ಸಾಕುಪ್ರಾಣಿಗಳ ಒಡನಾಟದಲ್ಲಿ ನಾವು ನಮ್ಮ ದುಃಖವನ್ನೆಲ್ಲಾ ಮರೆಯುತ್ತೇವೆ. ಅಪ್ಪ-ಅಮ್ಮ ಯಾವುದೋ ಕಾರಣಕ್ಕೆ ಬೈದಾಗ ಕೊಟ್ಟಿಗೆಗೆ ಹೋಗಿ ಕರುವಿನ ಎದುರು ನಿಂತು ಬಿಕ್ಕಿ ಬಿಕ್ಕಿ ಅಳುತಿದ್ದರೆ, ಅದು ನಮ್ಮ ಕಷ್ಟವನ್ನೆಲ್ಲಾ ಅರಿತಂತೆ, ತನ್ನ ಒರಟು ನಾಲಿಗೆಯಿಂದ ನಮ್ಮ ಕಾಲನ್ನು ನೆಕ್ಕುತ್ತಾ ಸಾಂತ್ವನ ಹೇಳುತ್ತದೆ. ಕೊಟ್ಟಿಗೆಗೆ ಹೋಗಿ ಬರುವಾಗೆಲ್ಲ ದನಕರುಗಳೊಂದಿಗೆ ಮಾತನಾಡುತ್ತಾ, ಅವುಗಳ ಮೈದಡುವುತ್ತಾ, ಒಂದು ವಿಲಕ್ಷಣ ಸುಖವನ್ನು ಅನುಭವಿಸುತ್ತಿರುತ್ತೇವೆ.

ಜಾನುವಾರುಗಳಿಗೆ, ಕೊಟ್ಟಿಗೆಯನ್ನು ತೂಗಿಸುವುದಕ್ಕೆ ತುಂಬಾ ಖರ್ಚು ಬರುತ್ತದೆಯಾದರೂ ಅದರಿಂದ ಲಾಭವೂ ಅಷ್ಟೇ ಇದೆ. ಒಳ್ಳೆಯ ಬನಿ ಇರುವ ಹಾಲು, ಸಗಣಿಯಿಂದ ಗೋಬರ್ ಗ್ಯಾಸ್, ಕೊಟ್ಟಿಗೆಯ ತ್ಯಾಜ್ಯದಿಂದ ತೋಟಕ್ಕೆ ಫಲವತ್ತಾದ ಗೊಬ್ಬರ.... ನಮ್ಮನೆ ಅಜ್ಜಿ ಅವಾಗಿವಾಗ ಹೇಳುತ್ತಿದ್ದಳು: 'ನಾವು ತಿನ್ನೋದು ದನಕರದ ಸಗಣಿ! ಅವುನ್ನ ಚನಾಗಿ ಸಾಕವು' ಅಂತ. ಎಷ್ಟೋ ಸಲ ಅದು ಸರಿ ಅನ್ನಿಸುತ್ತದೆ.

ಎಮ್ಮೆ ವ್ಯಾಪಾರದಿಂದಲೇ ದುಡ್ಡು ಮಾಡಿದವರಿದ್ದಾರೆ. ಅದನ್ನೇ ದಂಧೆಯನ್ನಾಗಿ, ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದಾರೆ. ಕ್ಯಾಸನೂರು ಮಾರ್‍ಯಾ (ಮಾರಪ್ಪ)ನಂತೂ ಫೇಮಸ್ಸು ನಮ್ಮ ಕಡೆ! ಸಾಗರದ ಪುರುಷೋತ್ತಮ ಎಮ್ಮೆ ದಲ್ಲಾಳಿ ಮಾಡಿ ಮಾಡಿಯೇ ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದಾನೆ! ಒಳ್ಳೆಯ ಶುಲ್ಟಿ (ಸುರುಟಿ) ಎಮ್ಮೆಗಳಿಗೆ, ಜರ್ಸಿ ಆಕಳುಗಳಿಗೆ ತುಂಬಾನೇ ರೇಟ್ ಇದೆ.

ನಾನು ಇಲ್ಲಿ ಬರೆದದ್ದೆಲ್ಲಾ ದನ-ಎಮ್ಮೆಗಳ ಕತೆಯಾಯಿತು. ಗದ್ದೆ ಇರುವ ಮನೆಗಳಲ್ಲಿ ಕೋಣ, ಎತ್ತುಗಳನ್ನೂ ಸಾಕಿರುತ್ತಾರೆ. ಎತ್ತುಗಳು ಗದ್ದೆ ಉಳುಮೆಗೆ, ಗಾಡಿಯಲ್ಲಿ ಸರಂಜಾಮುಗಳನ್ನು ಸಾಗಿಸುವುದಕ್ಕೆ ಬಳಸಲ್ಪಡುತ್ತವೆ. ಕೋಣಗಳು ಆಲೆಮನೆಯಲ್ಲಿ ಗಾಣ ತಿರುಗಿಸಲಿಕ್ಕೆ ಬಳಸಲ್ಪಡುತ್ತವೆ. ಗದ್ದೆ ಇಲ್ಲದ ಮನೆಯಲ್ಲಿ ಗಂಡು ಕರುಗಳು ಜನಿಸಿದರೆ ಅವಕ್ಕೆ ಒಂದೆರಡು ವರ್ಷ ವಯಸ್ಸಾಗುತ್ತಿದ್ದಂತೆಯೇ ಮಾರಿಬಿಡುತ್ತಾರೆ. 'ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕು; ಮನೆಯಲ್ಲಿ ಗಂಡು ಹುಟ್ಟಬೇಕು' ಎಂಬುದು ನಮ್ಮ ಕಡೆ ನಾಣ್ಣುಡಿ.

ಮನುಷ್ಯರಿಗೆ ಇಷ್ಟೆಲ್ಲಾ ಉಪಕಾರ ಮಾಡುವ ದನಕರುಗಳಿಗೆ ಹಳ್ಳಿಗರು ದೀಪಾವಳಿಯ ಸಮಯದಲ್ಲಿ ವಿಶೇಷ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಗೋವುಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಬಣ್ಣ ಹಚ್ಚಿ, ಹೂಮಾಲೆ ಕಟ್ಟಿ ಸಿಂಗರಿಸಿ, ಭರ್ಜರಿ ಪೂಜೆ ಮಾಡಿ, ಹೋಳಿಗೆ-ಗೋಗ್ರಾಸ ಕೊಟ್ಟು ಸಂಭ್ರಮಿಸುತ್ತಾರೆ. ಗೋವುಗಳನ್ನು ದೇವರೆಂದೇ ಪೂಜಿಸುತ್ತಾರೆ. ಗೋಮಾತಾ ಎಂದೇ ಕರೆಯುತ್ತಾರೆ. ಆದರೆ ಗೋವಿಗೆ ಸಿಗುವ ಈ ವಿಶೇಷ ಆದರ ಎಮ್ಮೆ-ಕೋಣಗಳಿಗೆ ಅಷ್ಟಾಗಿ ಸಿಕ್ಕುವುದಿಲ್ಲ.

ಬೆಂಗಳೂರಿನಿಂದ ಊರಿಗೆ ಹೋದಾಗೆಲ್ಲಾ, ನನ್ನನ್ನು ಎಂದೂ ಮರೆಯದ ಮಂಗಳ, ನನ್ನನ್ನು ಕಾಣುತ್ತಿದ್ದಂತೆ ಕಣ್ಣಿ ಕಿತ್ತು ಬರುವಂತೆ, ನನ್ನನ್ನು ಮುಟ್ಟಲು ಬಾಗುತ್ತಾ ಹಾತೊರೆಯುತ್ತದೆ. ಕಾಲೇಜಿನ ಮಂಗಳಳ ಪ್ರೀತಿ ದಕ್ಕದಿದ್ದರೂ ಕೊಟ್ಟಿಗೆಯ ಮಂಗಳಳ ಪ್ರೀತಿ ಸಿಕ್ಕತಲ್ಲ, ನಾನು ಧನ್ಯ! ಅದರ ಪ್ರೀತಿಗೆ ನನ್ನ ಮರುಪ್ರೀತಿಯ ಶರಣು.

Thursday, December 14, 2006

ಸುಗ್ಗಿ ವ್ಯಾಳ್ಯಾಗ...

ಅಹಹಹ ಚಳಿ...! ಮೈ ಕೊರೆಯುವ ಚಳಿ. ಗಡಗಡ ನಡುಗಿಸುವ ಚಳಿ. ಹಲ್ಲುಗಳನ್ನು ಕಟಕಟ ಅನ್ನಿಸುವ ಚಳಿ. ಮಾಘಿ ಚಳಿ. ಚಳಿ ಚಳಿ! ಬೆಂಗಳೂರಿನಲ್ಲಿ ಕಮ್ಮಗೆ ಚಳಿ ಬಿದ್ದಿದೆ.

ಊರಿನಲ್ಲಿ ಸುಗ್ಗಿ ಶುರುವಾಗಿದೆಯಂತೆ. ಪ್ರತಿ ವರ್ಷವೂ ಹೀಗೆಯೇ. ಚಳಿ ಬೀಳುತ್ತಿದ್ದಂತೆಯೇ ಸುಗ್ಗಿಯೂ ಶುರುವಾಗುತ್ತದೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಅಡಿಕೆಕಾಯಿಗಳು ಬೆಳೆದು ಹಣ್ಣಾಗಿ ಉದುರಲಾರಂಭಿಸುತ್ತವೆ. ಚಾಲಿ ಮಾಡುವ ಆಲೋಚನೆ ಇದ್ದವರು ಸ್ವಲ್ಪ ತಡವಾಗಿ ಕೊನೆ ಕೊಯ್ಲು ಶುರುಮಾಡುತ್ತಾರೆ. ಕೆಂಪಡಿಕೆ ಮಾಡುವವರು, ಚಳಿ ಬೀಳುತ್ತಿದ್ದಂತೆಯೇ, ಒಂದೆರಡು ಮರಗಳಲ್ಲಿ ಹಣ್ಣಡಿಕೆಗಳು ಉದುರಲು ಶುರುವಿಡುತ್ತದ್ದಂತೆಯೇ, ಅಡಿಕೆ ಬೆಳೆದದ್ದು ಗೊತ್ತಾಗಿ ಕೊನೆಕಾರನಿಗೆ ಬರಲು ಹೇಳಿಬಿಡುತ್ತಾರೆ.

ಈಗ ಚಾಲಿ ಅಡಿಕೆಗೆ ರೇಟ್ ಇಲ್ಲವಾದ್ದರಿಂದ ಕೆಂಪಡಿಕೆ ಮಾಡುವವರೇ ಜಾಸ್ತಿ. ಅಲ್ಲದೇ, ಅಡಿಕೆ ಹಣ್ಣಾಗಿ, ಆಮೇಲೆ ಅದನ್ನು ಒಣಗಿಸಿ, ಆಮೇಲೆ ಸುಲಿಸಿ, ಮಂಡಿಗೆ ಒಯ್ದು ಹಾಕಿ... ಅಷ್ಟೆಲ್ಲಾ ಆಗಲಿಕ್ಕೆ ಮತ್ತೆರಡು-ಮೂರು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಕಾಯುವ ಚೈತನ್ಯವಿದ್ದವರು ಕಾಯುತ್ತಾರೆ. ಆದರೆ ಅರ್ಧ-ಒಂದು ಎಕರೆ ತೋಟ ಇರುವವರಿಗೆ ಅಷ್ಟೊಂದು ಕಾಯಲಿಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ 'ಕೈ' ಖಾಲಿಯಾಗಿರೊತ್ತೆ. ಮಂಡಿಯವರು 'ಇನ್ನು ಅಡಿಕೆ ತಂದು ಹಾಕುವವರೆಗೂ ದುಡ್ಡು ಕೊಡುವುದಿಲ್ಲ' ಅಂದಿರುತ್ತಾರೆ. ಆದ್ದರಿಂದ, ಅಡಿಕೆ ಬೆಳೆಯುತ್ತಿದ್ದಂತೆಯೇ ಕೊಯ್ಲು ಮಾಡಿ, ಕೆಂಪಡಿಕೆ ಮಾಡಿ, ಮಂಡಿಗೆ ಸಾಗಿಸಿ, ಸುಗ್ಗಿ ಮುಗಿಸಿಕೊಂಡುಬಿಡುತ್ತಾರೆ ಬಹಳಷ್ಟು ಬೆಳೆಗಾರರು.

ಸುಗ್ಗಿ ಸಾಮಾನ್ಯವಾಗಿ ದೀಪಾವಳಿಯ ಎಡ-ಬಲಕ್ಕೆ ಬರುತ್ತದೆ. ಅಂಗಳದಲ್ಲಿ ಬೆಳೆದಿದ್ದ ಕಳೆ-ಜಡ್ಡನ್ನೆಲ್ಲಾ ಕೆತ್ತಿಸಿ ಚೊಕ್ಕು ಮಾಡಿ 'ದೊಡ್ಡಬ್ಬಕ್ಕೂ ಆತು - ಸುಗ್ಗಿಗೂ ಆತು' ಅನ್ನುವುದರೊಂದಿಗೆ ಸುಗ್ಗಿಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗುತ್ತವೆ. ತೋಟದಲ್ಲಿ ಗೋಟಡಿಕೆಗಳು ಬೀಳುವುದು ಶುರುವಾಯಿತೆಂದರೆ ಅಪ್ಪ ಕೊನೆಕಾರನಿಗೆ ಹೇಳಿ ನಮ್ಮ ಮನೆಯ ಕೊಯ್ಲಿನ 'ಡೇಟ್ ಫಿಕ್ಸ್' ಮಾಡಿಕೊಂಡು ಬರುತ್ತಾನೆ. ಸರಿ, ಹೇಳಿದ ದಿನ ಕೊನೆಕಾರ ತನ್ನ ಊದ್ದನೆಯ ದೋಟಿ, ನೇಣಿನ ಹಗ್ಗ, ಕಡಿಕೆ ಮಣೆ.. ಎಲ್ಲಾ ಹಿಡಿದುಕೊಂಡು, ತನ್ನ ಸೈಕಲ್ಲನ್ನು ತಳ್ಳಿಕೊಂಡು, ತನ್ನ ಜೊತೆ ಮತ್ತೆ ನಾಲ್ಕಾರು ಜನ ಆಳುಗಳನ್ನು ಕರೆದುಕೊಂಡು ಬೆಳಗ್ಗೆ ೮.೩೦ಕ್ಕೆಲ್ಲ ಬಂದುಬಿಡುತ್ತಾನೆ. ಆಳುಗಳಲ್ಲಿ ಹೆಣ್ಣಾಳು-ಗಂಡಾಳು ಇಬ್ಬರೂ ಇರುತ್ತಾರೆ. ಕೆಲವೊಮ್ಮೆ ಕೊನೆಕಾರ ತನ್ನ ಮಕ್ಕಳನ್ನೂ ಕರೆತರುವುದುಂಟು. ಈ ಮಕ್ಕಳು ತಮ್ಮ ತಾಯಂದಿರ ಜೊತೆ ಕೊನೆಕಾರ ಉದುರಿಸಿದ ಅಡಿಕೆಗಳನ್ನು ಒಟ್ಟುಮಾಡುತ್ತಾರೆ. ದೊಡ್ಡವರು, ಗಂಡಸರು ಕೊನೆಯನ್ನು ಕಲ್ಲಿ / ಹೆಡಿಗೆಯಲ್ಲಿ ತುಂಬಿ ತೋಟದಿಂದ ಮನೆಯ ಅಂಗಳಕ್ಕೆ ಹೊತ್ತು ತಂದು ಹಾಕುತ್ತಾರೆ. ಇವರಲ್ಲೇ ಒಬ್ಬ ನೇಣು (ಮಿಣಿ) ಹಿಡಿಯುತ್ತಾನೆ.

ಕೊನೆಕಾರ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ, ಕೇವಲ ಲಂಗೋಟಿ, ಹಾಳೆಟೊಪ್ಪಿ ಮತ್ತು ಕೊರಳಿಗೊಂದು ಹಾಳೆಯ ಪಟ್ಟಿಯನ್ನು ನೇತುಬಿಟ್ಟುಕೊಂಡು ಮರ ಹತ್ತುತ್ತಾನೆ. ಒಮ್ಮೆ ಬೀಡಿ ಎಳೆದು ಮರ ಹತ್ತಿದನೆಂದರೆ ಸುತ್ತಮುತ್ತಲಿನ ಎಲ್ಲಾ ಮರಗಳ ಕೊನೆಗಳನ್ನೂ, ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತಾ, ಕೊಯ್ದು ಮುಗಿಸಿಬಿಡುತ್ತಾನೆ.

ಅಪ್ಪ, ಹತ್ತೂ ವರೆ ಹೊತ್ತಿಗೆ, ಅಮ್ಮನ ಬಳಿ ಚಹ ಮಾಡಿಸಿಕೊಂಡು ಒಂದು ಗಿಂಡಿಯಲ್ಲಿ ತುಂಬಿಕೊಂಡು, ಒಂದು ದೊಡ್ಡ ಕ್ಯಾನಿನಲ್ಲಿ ನೀರು ತುಂಬಿಕೊಂಡು, ಸ್ವಲ್ಪ ಬೆಲ್ಲವನ್ನೂ ತಗೊಂಡು, ತೋಟಕ್ಕೆ ಧಾವಿಸುತ್ತಾನೆ. ಅಪ್ಪನ ಜೊತೆ, ಮೂರನೇ ಕ್ಲಾಸಿಗೆ ಹೋಗುವ ಪುಟ್ಟನೂ ಬರುತ್ತಾನೆ. ಈ ಪುಟ್ಟ 'ಇವತ್ತು ಕೊನೆಕೊಯ್ಲು' ಅಂತ ಹೇಳಿ ಮೇಷ್ಟ್ರಿಂದ ರಜೆ ಪಡೆದು ಬಂದಿದ್ದಾನೆ. ಅಪ್ಪ, 'ಕೊನೆ ಕೊಯ್ಯದು ಅವ್ವು, ಇಲ್ಲಿ ಅಡುಗೆ ಮಾಡದು ಅಮ್ಮ, ನಿಂಗೆಂತಾ ಕೆಲ್ಸ? ಸುಮ್ನೇ ಶಾಲಿಗೆ ಹೋಗದು ಬಿಟ್ಟು.. ಸರಿ, ಬಾ ತೋಟಕ್ಕೆ, ಒಂದು ಹೆಡಿಗೆ ಹೊರುಸ್ತಿ, ಹೊತ್ಕಂಡು ಬರ್ಲಕ್ಕಡ..' ಅನ್ನುತ್ತಲೇ ಮಗನನ್ನೂ ಕರೆದುಕೊಂಡು ತೋಟಕ್ಕೆ ಹೊರಟಿದ್ದಾನೆ. 'ಅಪ್ಪ ತಮಾಷೆಗೆ ಹೇಳ್ತಿದ್ದಾನೆ' ಅಂತ ಗೊತ್ತಿದ್ದರೂ ಪುಟ್ಟನಿಗೆ ಒಳಗೊಳಗೇ ಭಯ. ಅಂವ ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದ್ದಾನೆ. ಸಾರ ದಾಟುವಾಗ, ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಮೀನು ನೋಡಲು ಹೋಗಿ, ಒಮ್ಮೆ ಓಲಾಡಿ, ಮೈಯೆಲ್ಲಾ ನಡುಗಿ, ಅಪ್ಪನ ಕೈ ಹಿಡಕೊಂಡಿದ್ದಾನೆ.

'ನಿಧಾನಕ್ಕೆ ಕಾಲ್ಬುಡ ನೋಡ್ಕ್ಯೋತ ಬಾ, ಹಾವು-ಹುಳ ಇರ್ತು... ಮೇಲೆ ನೋಡಡ, ಕಣ್ಣಿಗೆ ಕಸ ಬೀಳ್ತು' ಎಂದೆಲ್ಲಾ ಪುಟ್ಟನಿಗೆ ಅಪ್ಪ 'ಇನ್‍ಸ್ಟ್ರಕ್ಷನ್ಸ್' ಕೊಡುತ್ತಾ ಬರುತ್ತಿದ್ದಾನೆ. ಕೊನೆ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದಂತೆಯೇ ನೇಣು ಹಿಡಿಯುತ್ತಿದ್ದ ಮಾದೇವ 'ಓಹೋ.. ಸಣ್ ಹೆಗಡೇರು ಬಂದ್ಬುಟ್ಯಾರೆ.. ಏನು ಸಾಲಿಗೆ ಹೋಗ್ನಲ್ಲಾ?' ಎಂದಿದ್ದಾನೆ. ಪುಟ್ಟ ಮೇಲೆ ನೋಡಿದರೆ ಕೊನೆಕಾರ ಒಂದು ಕೋತಿಯಂತೆ ಕಾಣಿಸುತ್ತಾನೆ. ಅಂವ ಒಂದು ಮರದಿಂದ ಒಂದು ಮರಕ್ಕೆ ಹಾರಿದಾಕ್ಷಣ ಮರ ಸುಂಯ್ಯನೆ ತೂಗುತ್ತಾ ವಾಪಸು ಬರುವುದನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಅಪ್ಪ ಈಗಾಗಲೆ ಎಷ್ಟು ಕೊಯ್ದಾಗಿದೆ, ಆಚೆ ತುಂಡಿಗೆ ಹೋಗಲಿಕ್ಕೆ ಇನ್ನೂ ಎಷ್ಟು ಹೊತ್ತು ಬೇಕು, ಇವತ್ತು ಆಚೆ ಬಣ್ಣ ಮುಗಿಯಬಹುದೇ, ಈ ವರ್ಷ ಕೊನೆಯಲ್ಲಿ 'ಹಿಡಿಪು' ಇದೆಯೇ, ಅಥವಾ ಪೀಚೇ? -ಅಂತೆಲ್ಲಾ ನೋಡಿಕೊಂಡು, ಲೆಕ್ಕ ಹಾಕಿಕೊಂಡು, ಪುಟ್ಟನೊಂದಿಗೆ ಮನೆಗೆ ಮರಳುತ್ತಾನೆ. ಅದಾಗಲೇ ಮನೆಯ ಅಂಗಳದಲ್ಲಿ ಕೊನೆ, ಉದುರಡಿಕೆಗಳನ್ನು ತಂದು ಸುರಿದು ಅಂಗಳದ ತುಂಬಾ ಸುಗ್ಗಿಯ ಕಳೆ ತುಂಬಿರುತ್ತದೆ.

ಅಮ್ಮ ಕೊನೆಕೊಯ್ಲಿನವರಿಗಾಗಿಯೇ ಇವತ್ತು ಚಿತ್ರಾನ್ನ ಮಾಡುತ್ತಾಳೆ. ರವೆ ಉಂಡೆ ಮಾಡುತ್ತಾಳೆ. ಅಪ್ಪ ನಾಲ್ಕು ಬಲಿಷ್ಟ ಕೊನೆಗಳನ್ನು ತಂದು ದೇವರ ಮುಂದಿಟ್ಟು, ತನಗಿನ್ನೂ ಸ್ನಾನವಾಗದೇ ಇದ್ದುದರಿಂದ 'ಆನು ಇವತ್ತು ಸಂಜೆ ಸ್ನಾನ ಮಾಡ್ತಿ; ನೀನೇ ಒಂಚೂರು ಪೂಜೆ ಮಾಡ್ಬುಡೇ' ಎಂದು ಅಮ್ಮನ ಬಳಿ ಹೇಳುತ್ತಾನೆ. ಅಮ್ಮ, ದೇವರಿಗೂ, ಅಡಿಕೆ ಕೊನೆಗಳಿಗೂ ಕುಂಕುಮ-ಗಿಂಕುಮ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಾಳೆ. ತುಪ್ಪದ ದೀಪ ಹಚ್ಚಿಟ್ಟು, 'ನಮ್ಮನೆ ಅಡಿಕೆಗೆ ಈ ವರ್ಷ ಒಳ್ಳೇ ರೇಟು ಸಿಗ್ಲಿ ದೇವ್ರೇ' ಎಂದು ಪ್ರಾರ್ಥಿಸುತ್ತಾಳೆ. ಶುಭ್ರವಾಗಿ ಬೆಳಗುತ್ತದೆ ದೇವರ ಗೂಡಿನಲ್ಲಿ ದೀಪ.

ಮಧ್ಯಾಹ್ನ ಒಂದೂ ವರೆ ಹೊತ್ತಿಗೆ ಕೊನೆ ಹೊರುವ ಒಬ್ಬ ಆಳು, ಅಮ್ಮ 'ಇಲ್ಲೇ ಹಾಕ್ತೀನಿ ಊಟ ಮಾಡ್ರೋ' ಅಂದರೂ ಕೇಳದೇ, 'ತ್ವಾಟದಾಗೇ ಉಣ್ತೀನಿ ಅಮ್ಮಾವ್ರೇ' ಅಂತಂದು, ಚಿತ್ರಾನ್ನ-ರವೆ ಉಂಡೆ-ನೀರು ಇತ್ಯಾದಿಗಳನ್ನೆಲ್ಲಾ ತೋಟಕ್ಕೆ ಒಯ್ದುಬಿಡುತ್ತಾನೆ. ಅವರು ಅಲ್ಲಿ ತೋಟದ ತಂಪಿನಲ್ಲಿ ಊಟ ಮಾಡುತ್ತಿರಬೇಕಾದರೆ ಇಲ್ಲಿ ಅಪ್ಪ-ಅಮ್ಮ-ಪುಟ್ಟ ಮನೆಯಲ್ಲಿ ಉಂಡು ಮುಗಿಸುತ್ತಾರೆ.

ಸಂಜೆ ಐದೂ ವರೆ ಹೊತ್ತಿಗೆ ಅವತ್ತಿನ ಕೊಯ್ಲು ಮುಗಿಸಿ ಆಳುಗಳೆಲ್ಲಾ ತೋಟದಿಂದ ಮರಳುತ್ತಾರೆ. 'ಕೊನೆ, ಉದುರು ಏನನ್ನೂ ತೋಟದಲ್ಲಿ ಬಿಟ್ಟಿಲ್ಲ ತಾನೆ?' ಅಂತ ಅಪ್ಪ ಕೇಳುತ್ತಾನೆ. ಆಮೇಲೆ ಅವತ್ತು ಕೊಯ್ದ ಕೊನೆಗಳನ್ನು ಎಣಿಸಬೇಕು. ಏಕೆಂದರೆ ಕೊನೆಕಾರನಿಗೆ 'ಪೇಮೆಂಟ್' ಮಾಡುವುದು ಕೊನೆಯ ಲೆಕ್ಕದ ಮೇಲೆ. 'ಒಂದು ಕೊನೆಗೆ ಇಷ್ಟು' ಅಂತ. ಲೆಕ್ಕವೆಲ್ಲ ಮುಗಿದ ಮೇಲೆ, ಅಪ್ಪ 'ಲೆಕ್ಕದ ಪುಸ್ತಕ'ದಲ್ಲಿ ನಮೂದಿಸಿಯಾದ ಮೇಲೆ, ಆಳುಗಳು ನಾಳೆ ಬೆಳಗ್ಗೆ ಬರುವುದಾಗಿ ಹೇಳಿ ಹೊರಟುಹೋಗುತ್ತಾರೆ.

ಮುಂದಿನ ಕೆಲಸವೆಂದರೆ, ಉದುರಡಿಕೆಯಲ್ಲಿ ಗೋಟು-ಹಸಿರಡಿಕೆಗಳನ್ನು 'ಸೆಪರೇಟ್' ಮಾಡುವುದು. ಬೇಗಬೇಗ ಮಾಡಬೇಕು. ಏಕೆಂದರೆ ಇನ್ನು ಸ್ವಲ್ಪೇ ಹೊತ್ತಿಗೆ ಅಡಿಕೆ ಸುಲಿಯುವವರು ಬಂದುಬಿಡುತ್ತಾರೆ. ಈ ಕೆಲಸಕ್ಕೆ ಅಮ್ಮ, ಪುಟ್ಟ ಎಲ್ಲರೂ ಕೈಜೋಡಿಸುತ್ತಾರೆ -ಅಪ್ಪನ ಜೊತೆ. ಉದುರಡಿಕೆಯೇ ಸಾಕಷ್ಟಿರುವುದರಿಂದ ಇವತ್ತು ಕೊನೆ ಬಡಿಯುವುದೇನು ಬೇಡ. ನಾಳೆ ಆಳಿಗೆ ಬರಲಿಕ್ಕೆ ಹೇಳಿ ಬಡಿಸಿದರಾಯಿತು.

ಈಗ ಅಡಿಕೆ ಸುಲಿಯುವವರು ಬಂದಿದ್ದಾರೆ. ಜ್ಯೋತಿ ಬಂದ್ಲು, ಜಲಜ ಬಂದ್ಲು, ಸುಮಿತ್ರ ಬಂದ್ಲು, ಬಾಕರ ಬಂದ... ಎಲ್ಲರೂ ತಮ್ಮ ಮೆಟಗತ್ತಿಯನ್ನು (ಮೆಟ್ಟುಗತ್ತಿ) ಮಣೆಗೆ ಬಡಿದು ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ. ಅಪ್ಪ ಅಂಗಳಕ್ಕೆ ಒಂದು ತಾತ್ಕಾಲಿಕ ವೈರೆಳೆದು ನೂರು ಕ್ಯಾಂಡಲಿನ ಬಲ್ಬು ಹಾಕಿ ಬೆಳಕು ಮಾಡಿಕೊಟ್ಟಿದ್ದಾನೆ. ಈಗ ಅಂಗಳದಲ್ಲಿ 'ಕ್ಚ್ ಕ್ಚ್ ಕಟ್ ಕಟ್' ಶಬ್ದ ಶುರುವಾಗಿದೆ. ರಾತ್ರಿ ಒಂಬತ್ತರವರೆಗೆ ಸುಲಿದು, ಗಿದ್ನ (ಅಥವಾ ಡಬ್ಬಿ) ಯಲ್ಲಿ ಅಳೆದು, ಲೆಕ್ಕದ ಪುಸ್ತಕದಲ್ಲಿ ಬರೆಸಿ, ಅವರೆಲ್ಲ ಮನೆಗೆ ಹೋಗುತ್ತಾರೆ. (ಕೆಲವೊಂದು ಊರುಗಳಲ್ಲಿ ರಾತ್ರಿ-ಬೆಳಗು ಸುಲಿಯುತ್ತಾರೆ) ನಂತರ, ಸುಲಿದ ಅಡಕೆಯ ಬುಟ್ಟಿಗಳನ್ನು ಅಪ್ಪ-ಅಮ್ಮ ಇಬ್ಬರೂ ಆಚೆ-ಈಚೆ ಹಿಡಿದುಕೊಂಡು ಮನೆಯೊಳಗೆ ತಂದು ಇಡುತ್ತಾರೆ. ಇವತ್ತು ಹೆಚ್ಚು ಅಡಿಕೆ ಆಗಿಲ್ಲವಾದ್ದರಿಂದ, ನಾಳೆ ಎಲ್ಲಾ ಸೇರಿ ಬೇಯಿಸಿದರಾಯಿತು ಅಂದುಕೊಂಡಿದ್ದಾನೆ ಅಪ್ಪ.

ಮರುದಿನ ಮತ್ತೆ ಕೊನೆಕೊಯ್ಲು, ಅಡಿಕೆ ಸುಲಿಯುವುದು ನಡೆಯುತ್ತದೆ. ಅಪ್ಪ ಅಂಗಳದಲ್ಲೇ ಒಂದು ಮೂಲೆಯಲ್ಲಿ ಅಡಿಕೆ ಬೇಯಿಸುವುದಕ್ಕೆ ದೊಡ್ಡ ಎರಡು ಜಂಬಿಟ್ಟಿಗೆ ಕಲ್ಲುಗಳಿಂದ ಒಲೆ ಹೂಡುತ್ತಾನೆ. ಅದರ ಮೇಲೆ ಹಂಡೆ ತಂದಿಡುತ್ತಾನೆ. ರಾತ್ರಿ ಅಡಿಕೆ ಸುಲಿಯುವವರು ಹೋದಮೇಲೆ ಅಪ್ಪ ಒಲೆಗೆ ಬೆಂಕಿ ಕೊಟ್ಟು, ಹಂಡೆಯಲ್ಲಿ ನೀರು ಸುರಿದು, ಕಳೆದ ವರ್ಷದ ತೊಗರು (ಅಡಿಕೆ ಬೇಯಿಸಿಯಾದ ಮೇಲೆ ಉಳಿಯುವ ಕೆಂಪಗಿನ ನೀರು; 'ಚೊಗರು' ಅಂತಲೂ ಕೆಲವಡೆ ಕರೆಯುತ್ತಾರೆ) ಉಳಿದಿದ್ದರೆ ಅದನ್ನು ಸ್ವಲ್ಪ 'ಮಿಕ್ಸ್' ಮಾಡಿ, ಬುಟ್ಟಿಗಳಲ್ಲಿನ ಸುಲಿದ ಅಡಿಕೆಗಳನ್ನು ತಂದು ಸುರಿಯುತ್ತಾನೆ. ಚಳಿ ಕಾಯಿಸಲಿಕ್ಕೆ ಈ ಅಡಿಕೆ ಬೇಯಿಸುವ ಒಲೆ ಹೇಳಿ ಮಾಡಿಸಿದಂತಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ಗಣಪತಣ್ಣ, ಪಕ್ಕದ ಕಣವನ್ನು ಕಾಯಲು ಬರುವ ಮಾಬ್ಲಜ್ಜ ಎಲ್ಲರೂ ಈ ಒಲೆಯೆಡೆಗೆ ಆಕರ್ಷಿತರಾಗಿ ಒಬ್ಬೊಬ್ಬರೇ ಬರುತ್ತಾರೆ... 'ಹೂಂ, ಈ ವರ್ಷ ಏನು ಭಾರೀ ತೇಜಿ ಕಾಣ್ತಲೋ.. ಶ್ರೀಪಾದನ ಮನೆ ಅಡಿಕೆ ಹನ್ನೆರಡು ಸಾವ್ರಕ್ಕೆ ಹೋತಡ..' ಎನ್ನುತ್ತಾ ಮಾಬ್ಲಜ್ಜ ಕವಳ ಉಗಿದು, ಅಂಗಳದ ಮೂಲೆಗೆ ಹೋಗಿ ವಂದಕ್ಕೆ ಕೂರುತ್ತಾನೆ. 'ಓಹ..? ಆದ್ರೂ ನಮ್ಮನೆ ಅಡಿಕೆ ರೆಡಿಯಾಗ ಹೊತ್ತಿಗೆ ಎಂತಾಗ್ತೇನ' ಎನ್ನುತ್ತಾನೆ ಅಪ್ಪ. 'ಹೂಂ, ಜಾಸ್ತಿ ತೆರಿಬೆಟ್ಟೆ ಬರ್ಲೆ ಅಲ್ದಾ?' ಅನ್ನುತ್ತಾನೆ ನಾರಣಣ್ಣ ಬುಟ್ಟಿಯಲ್ಲಿದ್ದ ಅಡಿಕೆಯಲ್ಲಿ ಒಮ್ಮೆ ಕೈಯಾಡಿಸಿ. 'ಏನಂದ್ರೂ ಇನ್ನೂ ನಾಕು ಒಬ್ಬೆ ಆಗ್ತೇನ' ಅನ್ನುತ್ತಾನೆ ಗಣಪತಣ್ಣ. ಅಷ್ಟೊತ್ತಿಗೆ ಲಕ್ಷ್ಮೀ ಬಸ್ಸು ನಿಂತುಹೋದ ಸದ್ದು ಕೇಳಿಸುತ್ತದೆ. 'ಬಸ್ಸಿಗೆ ಯಾರೋ ಬಂದ ಕಾಣ್ತು.' 'ಹೂಂ, ಯಾರು ಬಂದ್ರೂ ಇನ್ನು ಎರಡು ನಿಮಿಷದಾಗೆ ಗೊತ್ತಾಗ್ತಲ..' 'ಯಾರೋ ಪ್ಯಾಂಟು-ಶರಟು ಹಾಕ್ಯಂಡವರ ಥರ ಕಾಣ್ತಪ.. ಸ್ಟ್ರೀಟ್‍ಲೈಟ್ ಬೆಳಕಗೆ' 'ಓ, ಹಂಗರೆ ಪಟೇಲರ ಮನೆ ಗಣೇಶನೇ ಸಯ್ಯಿ ತಗ..!' ಅವರ ಹರಟೆ ಮುಂದುವರಿಯುತ್ತದೆ. ಅಮ್ಮ ಎಲ್ಲರಿಗೂ ಕಷಾಯ ಮಾಡಿಕೊಟ್ಟು, ತಾನು ಮಲಗಲು ಕೋಣೆಗೆ ಹೋಗುತ್ತಾಳೆ. ಪುಟ್ಟ ಅದಾಗಲೇ ನಿದ್ದೆ ಹೋಗಿರುತ್ತಾನೆ.

ಕೊನೆಕೊಯ್ಲು ಮೂರ್ನಾಲ್ಕು ದಿನಗಳ ವರೆಗೆ ಮುಂದುವರೆಯುತ್ತದೆ: ತೋಟದ ವಿಸ್ತೀರ್ಣವನ್ನು ಅವಲಂಭಿಸಿ. ಬೇಯಿಸಿದ ಅಡಿಕೆಯನ್ನು ಚಾಪೆ (ಅಥವಾ ತಟ್ಟಿ)ಯ ಮೇಲೆ ಒಣಗಿಸಲಾಗುತ್ತದೆ. ಒಳ್ಳೆಯ ಬಿಸಿಲಿದ್ದರೆ ಐದಾರು ದಿನಗಳಲ್ಲಿ ಅಡಿಕೆ ಒಣಗುತ್ತದೆ. ಈ ಮಧ್ಯೆ ತೆರಿಬೆಟ್ಟೆ-ಗೋಟಡಿಕೆಗಳನ್ನು ಹೆರೆಯುವುದು, ಇತ್ಯಾದಿ ಕೆಲಸಗಳು ನಡೆದಿರುತ್ತವೆ. ಒಣಗಿದ ಅಡಿಕೆಯನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ ಅಪ್ಪ ಬಾಯಿ ಹೊಲೆಯುತ್ತಾನೆ. ಸುಬ್ಬಣ್ಣನ ಮನೆ ವ್ಯಾನು ಪೇಟೆಗೆ ಹೋಗುವಾಗ ಅದರಲ್ಲಿ ಹೇರಿ ಮಂಡಿಗೆ ಸಾಗಿಸಲಾಗುತ್ತದೆ. ವ್ಯಾಪಾರಿಗಳು ಒಳ್ಳೆಯ ರೇಟು ನಿಗಧಿಪಡಿಸಿದ ದಿನ ಅಪ್ಪ ಅದನ್ನು ಕೊಡುತ್ತಾನೆ.

ಎಷ್ಟೇ ಮುಂಚೆ ಕೊಯ್ಲು ಮಾಡಿಸಿ ಕೆಂಪಡಿಕೆ ಮಾಡಿದ್ದರೂ ಸಹ ಒಂದಷ್ಟು ಅಡಿಕೆ ಹಣ್ಣಾಗಿರುತ್ತದಾದ್ದರಿಂದ ಅವು ಅಂಗಳದಲ್ಲಿ ಒಣಗುತ್ತಿರುತ್ತವೆ. ಸುಮಾರು ನಲವತ್ತು ದಿನಗಳಲ್ಲಿ ಅದೂ ಒಣಗುತ್ತದೆ. ಆಮೇಲೆ ಅದನ್ನು ಸುಲಿಸಿ ಮಂಡಿಗೆ ಕಳಿಸಲಾಗುತ್ತದೆ.

ಹೀಗೆ ಅಡಿಕೆ ಬೆಳೆಗಾರ ಹವ್ಯಕರ ಮನೆಗಳಲ್ಲಿ ಸುಗ್ಗಿಯೆಂದರೆ ಹಬ್ಬವೇ. ಆ ಒಂದಷ್ಟು ದಿನ ಗುದ್ದಾಡಿಕೊಂಡು ಬಿಟ್ಟರೆ, ಒಳ್ಳೆಯ ಬೆಲೆಗೆ ಅಡಿಕೆ ಮಾರಾಟವಾಗಿಬಿಟ್ಟರೆ, ಉಳಿದಂತೆ ಇಡೀ ವರ್ಷ ಆರಾಮಾಗಿರಬಹುದು. ತೋಟಕ್ಕೆ ದಿನಕ್ಕೊಮ್ಮೆ ಹೋಗಿ-ಬಂದು ಮಾಡಿಕೊಂಡು ಇದ್ದರೆ ಆಯಿತು. ಮಳೆಗಾಲದಲ್ಲಿ ಒಮ್ಮೆ ಗೊಬ್ಬರ ಹಾಕಿಸಬೇಕು. ಮಳೆ ಮುಗಿದಮೇಲೆ ಕಳೆ ತೆಗೆಸಬೇಕು. ಅಷ್ಟೇ! ಉಳಿದಂತೆ ಅಡಿಕೆ ಬೆಳೆಗಾರನ ಜೀವನವೆಂದರೆ ಸುಖಜೀವನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಸಿಕ್ಕಾಪಟ್ಟೆ ಏರುಪೇರು ಆಗುತ್ತಿರುವುದರಿಂದ, ಮತ್ತು ಮಳೆ ಸರಿಯಾಗಿ ಆಗದೆ ಸಿಂಗಾರ ಒಣಗುವುದರಿಂದ, ಮರಗಳೇ ಸಾಯುತ್ತಿರುವುದರಿಂದ, ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು. ಮಳೆ ಸರಿಯಾಗಿ ಆಗಿ, ಅಡಿಕೆಗೆ ಒಳ್ಳೆಯ ರೇಟ್ ಬಂದು, ಬರೆಯದಿರುವಂತೆ ಆದರಂತೂ ಒಳ್ಳೆಯದೇ!

Wednesday, November 29, 2006

ಕೀರ್ವಾಣಿಯ ಮದುವೆ ಸುದ್ದಿ ಕೇಳಿ...

ನಿನ್ನೆ ಮನೆಗೆ ಫೋನ್ ಮಾಡಿದ್ದಾಗ ಅಮ್ಮ 'ಅವಳ' ಮದುವೆ ಫಿಕ್ಸಾಗಿರುವ ಸುದ್ದಿ ಹೇಳಿದಳು. ತಕ್ಷಣ ನನ್ನ ನೆನಪಿನಾಳದಿಂದ ಹರಿದು ಬಂತಲ್ಲ ನೀರು..?

ನಾನು ನನ್ನ ಹೈಸ್ಕೂಲು ಓದಿದ್ದು ನಮ್ಮೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ನಿಸರಾಣಿಯ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯಲ್ಲಿ. ಏಳನೇ ತರಗತಿ ಮುಗಿದದ್ದೇ ನನ್ನನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಬೇಕು ಎಂದು ಅನೇಕರು ಸಲಹೆಯಿತ್ತರಾದರೂ ನನ್ನ ಅಪ್ಪ ಅದಕ್ಕೆ ಮನಸು ಮಾಡಲಿಲ್ಲ. 'ಓದೋವ್ರಿಗೆ ಎಲ್ಲಾದರೆ ಏನು? ನಿಸರಾಣಿ ಶಾಲೆಯಲ್ಲಿ ತುಂಬಾ ಚೆನ್ನಾಗಿ ಪಾಠ ನಡೆಯುತ್ತೆ. ಮೇಷ್ಟ್ರುಗಳೆಲ್ಲ ನಮ್ಮವರೇ. ನಾವೆಲ್ಲ ಹಿಂದೆ ಓದಿದ್ದು ಅಲ್ಲೇ ಅಲ್ವೇನು? ಅಲ್ಲಿ ಓದಿದ ಎಷ್ಟೊಂದು ಜನ ಈಗ ಎಲ್ಲೆಲ್ಲೋ ದೊಡ್ಡ ದೊಡ್ಡ ಕೆಲಸದಲ್ಲಿ ಇಲ್ವೇನು?' ಅಂತೆಲ್ಲಾ ಮಾತುಕತೆಯಾಗಿ ನಾನು ನಿಸರಾಣಿ ಶಾಲೆಗೇ ಸೇರುವುದು ಅಂತ ಆಯ್ತು. ಇಂಗ್ಲೀಷ್ ಮೀಡಿಯಂ ಶಾಲೆ ಎಂದರೆ ಸಾಗರದಲ್ಲಿತ್ತು. ದಿನವೂ ಓಡಾಡುವುದು ತೊಂದರೆ. ಅಲ್ಲದೆ ನಾನು ಆಗ ತುಂಬಾ ಚಿಕ್ಕವನಿದ್ದೆ ಬೇರೆಯವರಿಗೆ compare ಮಾಡಿದ್ರೆ. ಹೀಗಾಗಿ, 'ಇಂವ ಸಾಗರದ ಭಯಂಕರ ಟ್ರಾಫಿಕ್ಕಿನ (!) ರಸ್ತೆಯಲ್ಲಿ ಓಡಾಡಿ ಜಯಿಸಿಕೊಂಡು ಬರುವುದು ಸುಳ್ಳೇ ಸರಿ, ಬ್ಯಾಡೇ ಬ್ಯಾಡ ಸಾಗರ, ಇಲ್ಲೇ ನಿಸರಾಣಿಗೆ ಹೋಗಲಿ ಸಾಕು' ಅಂತ ಅಮ್ಮ ಅಜ್ಜಿಯರೂ ಸೇರಿಸಿದರು. ಅಲ್ಲಿಗೆ ಸರಿಯಾಯಿತು. ನನಗಂತೂ ಆಗ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಸಾಗರವಾದರೆ ಸಾಗರ, ನಿಸರಾಣಿಯಾದರೆ ನಿಸರಾಣಿ ಅಂತ ಇದ್ದವನು ನಾನು.

ಸರಿ, ನನ್ನನ್ನು ನಿಸರಾಣಿಯ ಶಾಲೆಗೆ ಸೇರಿಸಿದರು. ನಾನು ದಿನವೂ ನಾಲ್ಕು ಮೈಲು ಸೈಕಲ್ಲು ಹೊಡೆಯತೊಡಗಿದೆ. ಏರಲ್ಲೂ ಇಳಿಯದೇ ತುಳಿಯುತ್ತಿದ್ದೆ. ನನ್ನ ಜೊತೆ ಅಣ್ಣಪ್ಪ, ದುರ್ಗಪ್ಪರೇ ಮೊದಲಾದ ಸಹೃದಯ ಗೆಳೆಯರು ಸಿಕ್ಕಿದರು. ಈ ಲೋಕಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದ ಮಾತುಗಳನ್ನು ಲೋಕಾಭಿರಾಮವಾಗಿ ಆಡುತ್ತಾ ಸಾಗುತ್ತಿದ್ದರೆ ಶಾಲೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.

ನಿಸರಾಣಿ ಶಾಲೆ ಹಿಂದೊಂದು ಕಾಲದಲ್ಲಿ ತುಂಬಾ ಚೆನ್ನಾಗಿದ್ದ ಶಾಲೆ. ಇಡೀ ಸೊರಬ ತಾಲೂಕಿಗೆ, ಅಷ್ಟೇ ಏಕೆ, ಜಿಲ್ಲೆಯಲ್ಲೇ ಹೆಸರು ಮಾಡಿದ್ದ ಶಾಲೆ. ನಿಸರಾಣಿ ಹೈಸ್ಕೂಲಿನಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿಕೊಂಡು ಬಂದವರಿಗೆ ಯಾವ ಕಾಲೇಜಿನವರೂ ಸೀಟಿಲ್ಲ ಅನ್ನುತ್ತಿರಲಿಲ್ಲ. ಅಲ್ಲಿಯ ವಿಜ್ಞಾನ ಕೊಠಡಿಯಲ್ಲಿ ಇರುವ ಉಪಕರಣಗಳು ಮತ್ಯಾವುದೇ ಉತ್ತಮ ಶಾಲೆಗೆ ಹೋಲಿಸಬಹುದಾದಷ್ಟಿದ್ದವು. ಆಗ ಶಿಕ್ಷಕವರ್ಗವೂ ಹಾಗೆಯೇ ಇತ್ತು. ನನ್ನ ಅಪ್ಪ, ಅತ್ತೆಯರೆಲ್ಲರೂ ಓದಿದ್ದು ಅದೇ ಶಾಲೆಯಲ್ಲಿ. ನನ್ನ ಅಜ್ಜ ಶಾಲೆಯ ಪಕ್ಕ ಒಂದು ಕ್ಯಾಂಟೀನೂ ಇಟ್ಟಿದ್ದನಂತೆ.

ಆದರೆ ನಾನು ಸೇರುವ ಹೊತ್ತಿಗೆ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. Retirement ಸಮೀಪಿಸಿದ್ದ ಶಿಕ್ಷಕವರ್ಗ. ಯಾವ ಮೇಷ್ಟ್ರಿಗೂ ಪಾಟ ಮಾಡಬೇಕು ಅನ್ನುವ ಹುಮ್ಮಸ್ಸೇ ಇರಲಿಲ್ಲ. ಕೆಲ ಹಳೆಯ ಶಿಕ್ಷಕರು ಮತ್ತು ಆಗ ತಾನೇ ಸೇರಿದ್ದ ಒಂದಿಬ್ಬರು ಯುವ ಶಿಕ್ಷಕರನ್ನು ಬಿಟ್ಟರೆ ಉಳಿದವರೆಲ್ಲ ಕಾಟಾಚಾರಕ್ಕೆ ಶಾಲೆಗೆ ಬರುತ್ತಿದ್ದವರೇ. ನಮ್ಮ ಕನ್ನಡ ಪಂಡಿತರು ಕ್ಲಾಸಿಗೆ ಬಂದು ನಮಗೆ ಓದಿಕೊಳ್ಳಲು ಹೇಳಿ ತಾವು ಕಾಫಿಪುಡಿ ಲೆಕ್ಕ ಬರೆಯುತ್ತಾ ಕುಳಿತುಬಿಡುತ್ತಿದ್ದರು. ಹೆಡ್‍ಮಾಸ್ತರಂತೂ ಬಾಯಿ ತುಂಬಾ ಜರದಾ ತುಂಬಿಕೊಂಡು ಬರುತ್ತಿದ್ದರು. 'ಕೆಲವೊಂದು ದಿನ ಕುಡಿದುಕೊಂಡೇ ಬರ್ತಾರೆ' ಎಂದು ಕೆಲ ಗೆಳೆಯರು ಮೂದಲಿಸುತ್ತಿದ್ದರಾದರೂ ನನಗೆ ಆಗ ಅಷ್ಟೆಲ್ಲ ಮೂಗು ಚುರುಕಿರಲಿಲ್ಲ, ಮೇಲಾಗಿ ತಿಳಿಯುತ್ತಲೂ ಇರಲಿಲ್ಲ.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಲಗಡೆಯ ಬೆಂಚುಗಳಲ್ಲಿ, ಗಂಡುಮಕ್ಕಳು ಎಡಗಡೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಧ್ಯದಲ್ಲಿ ಓಡಾಡಲಿಕ್ಕೆ ದಾರಿ. ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಪರಸ್ಪರ ಮಾತನಾಡುವುದನ್ನು ನಿಷೇಧಿಸಲಾಗಿತ್ತು. ನಾವು ಗೆಳೆಯರು ಕಾರಿಡಾರಿನಲ್ಲಿ ಗುಂಪಾಗಿ ಮಾತನಾಡುತ್ತ ನಿಂತಿದ್ದಾಗ ಹುಡುಗಿಯರು ಬಂದರೆ 'ಹುಡುಗ್ರು ದಾರಿ ಬಿಡ್ಬೇಕು!' ಅಂತ ಹೇಳುತ್ತಿದ್ದರು. ನಾವು ಆ 'ಸಶರೀರವಾಣಿ'ಗೆ ಹೆದರಿ ತಕ್ಷಣ ಪಕ್ಕಕ್ಕೆ, ಅಂಗಳಕ್ಕೆ ಇಳಿದುಬಿಡುತ್ತಿದ್ದೆವು. ಯಾರಾದರೂ ಹುಡುಗರು ಕೀಟಲೆ ಮಾಡಿದರೆ ಹುಡುಗಿಯರು ಹೋಗಿ class teacherಗೆ complaint ಮಾಡುತ್ತಿದ್ದರು. ಹೀಗಾಗಿ ಹುಡುಗಿಯರೆಡೆಗೆ ನಮಗೆ ಒಂದು ತರಹದ ಭಯಮಿಶ್ರಿತ ದ್ವೇಷವಿತ್ತು.

ಆದರೆ ದ್ವೇಷವಿದ್ದಲ್ಲೇ ಪ್ರೀತಿ ಮೊಳೆಯುವ ಸಂಭವಗಳು ಜಾಸ್ತಿ. ನಮಗೆ ಅಷ್ಟೆಲ್ಲಾ restrictions ಇದ್ದರೂ ಹುಡುಗಿಯರೆಡೆಗೆ ಒಂದು 'ಹುಡುಗಸಹಜ'ವಾದ ಕುತೂಹಲ ಇದ್ದೇ ಇತ್ತು. ಸಿನಿಮಾ-ಗಿನಿಮಾ ನೋಡಿ ಅಷ್ಟಿಷ್ಟು ಪ್ರೀತಿ-ಪ್ರೇಮಗಳ ಬಗ್ಗೆ ಅರಿತಿದ್ದ ನಾವು, ನಮ್ಮ ನಮ್ಮ ಹೀರೋಯಿನ್ನುಗಳಿಗಾಗಿ ತಲಾಷೆ ನಡೆಸಿದ್ದೆವು. ಚಂದದ ಹುಡುಗಿಯನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನು ತಲೆಯಲ್ಲಿಟ್ಟುಕೊಳ್ಳದೇ ಮಾಸಿಕ ಟೆಸ್ಟುಗಳಲ್ಲಿ ಫೇಲಾಗುವ ಕಲೆಯನ್ನು ಅದಾಗಲೇ ಸಿದ್ಧಿಸಿಕೊಂಡಿದ್ದೆವು. 'ನನಗೆ ಆ ಹುಡುಗಿ, ನಿನಗೆ ಈ ಹುಡುಗಿ' ಎಂಬಂತೆ ನಮ್ಮನಮ್ಮಲ್ಲೇ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ ನಾವು, ಈ ವಿಷಯ ಮಾತ್ರ ಆ ಹುಡುಗಿಯರಿಗಾಗಲೀ, ಮೇಷ್ಟ್ರುಗಳಿಗಾಗಲೀ, ಮುಖ್ಯವಾಗಿ ನಮ್ಮ ತಂದೆ-ತಾಯಿಯರಿಗಾಗಲೀ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದೆವು.

ಏಳುತ್ತಾ ಬೀಳುತ್ತಾ ಅಂತೂ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬಂದಿದ್ದೆವು. ಶಾಲೆ ಬಿಟ್ಟುಹೋಗುವಾಗ ಆಟೋಗ್ರಾಫ್ ಬರೆಸಿಕೊಳ್ಳಬೇಕು ಅಂತಾಯಿತು. ಮನೆಯಲ್ಲಿ ಅಣ್ಣ-ಅಕ್ಕಂದಿರನ್ನು ಹೊಂದಿದ ಕೆಲ ಗೆಳೆಯರು ಈ ಬಗ್ಗೆ ಸ್ವಲ್ಪ ಜ್ಞಾನವುಳ್ಳವರಾಗಿದ್ದರು. ಏಕೆಂದರೆ ಅವರು ತಮ್ಮ ಅಣ್ಣ-ಅಕ್ಕಂದಿರು ಶಾಲೆ ಬಿಡುವಾಗ ಬರೆಸಿಕೊಂಡ ಆಟೋಗ್ರಾಫ್ ಪುಸ್ತಕಗಳನ್ನು ನೋಡಿದ್ದರು. ಹಾಗಾದರೆ ನಾವೂ ಬರೆಸಬೇಕು ಅಂತಾಯಿತು. ಅಲ್ಲದೇ ನಮ್ಮ ಆಟೋಗ್ರಾಫ್ ಪುಸ್ತಕದವನ್ನು ಹುಡುಗಿಯರಿಗೆ ಕೊಟ್ಟು (ಕೊಡುವಾಗ ಸಿಗಬಹುದಾದ ಅವರ ಹಸ್ತಸ್ಪರ್ಷವನ್ನು ಅನುಭವಿಸುವ ಅಭಿಲಾಷೆ ಇರುವಷ್ಟು ವಯಸ್ಸಾಗಿರಲಿಲ್ಲ ನಮಗೆ), ಅವರು ನಮಗೆ ಏನು ಬರೆದುಕೊಡುತ್ತಾರೆ ಎಂದು ನೋಡುವ ಕುತೂಹಲ ಬೇರೆ! ಸರಿ, ಬರೆಸಬೇಕು, ಅದಕ್ಕಿಂತ ಮುಂಚೆ ಆಟೋಗ್ರಾಫ್ ಪುಸ್ತಕವನ್ನು ತರಬೇಕಲ್ಲ? ಸೊರಬ ಪೇಟೆಯಿಂದ ತರುವುದು ಎಂದಾಯಿತು. ಅದಕ್ಕಾಗಿ ಸೊರಬ ಪೇಟೆಯ ಬಗ್ಗೆ ತಿಳಿದಿದ್ದ ಎರಡು ಹುಡುಗರು ಮುಂದೆಬಂದರು. ಆಟೋಗ್ರಾಫ್ ಬರೆಸುವ ಹುಕಿ ಇದ್ದವರೆಲ್ಲಾ ಅವರಿಗೆ ದುಡ್ಡು ಕೊಟ್ಟೆವು. ಒಂದು ಶನಿವಾರ ಅವರು ರಾಘವೇಂದ್ರ ಬಸ್ಸಿಗೆ ಸೊರಬಕ್ಕೆ ಹೋಗಿ ಆಟೋಗ್ರಾಫ್ ಪುಸ್ತಕಗಳನ್ನು ತಂದೇಬಿಟ್ಟರು!

ಬಣ್ಣದ ಕವರನ್ನು ಹೊದ್ದುಕೊಂಡಿದ್ದ ಈ ಪುಟ್ಟ ಆಟೋಗ್ರಾಫ್ ಪುಸ್ತಕ ನೋಡಲಿಕ್ಕೇ ಖುಷಿಯಾಗುವಂತಿತ್ತು. ಅದರೊಳಗೆ ಸ್ಕೆಚ್‍ಪೆನ್ನಿನಿಂದ ನನ್ನ ಹೆಸರು ಬರೆದೆ. 'ಸ್ನೇಹವೇ ಸಂಪದ' ಅಂತ ಮೊದಲ ಪುಟದಲ್ಲಿ ನನ್ನ artistic styleನಲ್ಲಿ ಬರೆದೆ. ನಾನು ಬರೆದಿದ್ದನ್ನು ನೋಡಿದ ನನ್ನ ಕೆಲ ಗೆಳೆಯರು ತಮಗೂ ಬರೆದುಕೊಡುವಂತೆ ಕೋರಿದರು. ಚಾಕ್ಲೇಟಿನ ಆಮಿಷ ಒಡ್ಡಿದರು. ಅವರಿಗೂ ಬರೆದುಕೊಟ್ಟೆ. ಅಂತೂ ಸುಂದರವಾಗಿದ್ದ ಪುಸ್ತಕವನ್ನು ಸಿಂಗಾರ-ಬಂಗಾರ ಮಾಡಿ ಮತ್ತಷ್ಟು ಸುಂದರಗೊಳಿಸಿ ಸುಂದರ ಹುಡುಗಿಯರ ಕಡೆಗೆ ವರ್ಗಾಯಿಸಿ 'ಎಲ್ಲರೂ ಬರ್ದುಕೊಟ್ಬಿಡಿ' ಅಂದು ಕೃಥಾರ್ತನಾದೆ!

ಹುಡುಗಿಯರು ಎಲ್ಲರೂ ಬರೆದುಕೊಡುವುದಕ್ಕೆ ಮೂರು ದಿನ ತೆಗೆದುಕೊಂಡರು. ಈ ಮಧ್ಯೆ ನಾವೂ ಅವರು ಕೊಟ್ಟ ಪುಸ್ತಕಗಳಿಗೆ ನಮ್ಮ ಆಟೋ ಬರೆಯುವದರಲ್ಲಿ ಬ್ಯುಸಿಯಾಗಿದ್ದೆವು. ಎಲ್ಲೆಲ್ಲೋ ತಡಕಾಡಿ ಹೊಂದಿಸಿದ ಸಾಲುಗಳನ್ನು, ಕೆಲವರಿಗೆ ನಮ್ಮದೇ 'own' ವ್ಯಾಕ್ಯೆಗಳನ್ನೂ, ಹಿತವಚನಗಳನ್ನೂ ಬರೆದುಕೊಟ್ಟದ್ದಾಯ್ತು. ಮೂರು ದಿನಗಳ ನಂತರ ಎಲ್ಲಾ ಹುಡುಗಿಯರೂ ಬರೆದಾದಮೇಲೆ ನನ್ನ ಆಟೋಗ್ರಾಫ್ ಬುಕ್ಕು ಕೈಗೆ ವಾಪಸು ಬಂತು. ಬಂದಮೇಲೆ ಅದನ್ನು ಅಲ್ಲಿಯೇ ಬಿಚ್ಚಿ ನೋಡಲಾದೀತೆ? ಎಲ್ಲಾ ಗೆಳೆಯರೂ ಮುತ್ತಿಕೊಂಡಿರುತ್ತಿದ್ದರು. ಅಕಸ್ಮಾತಾಗಿ ಯಾವುದಾದರೂ ಹುಡುಗಿ 'ಏನಾದ್ರೂ' ಬರೆದುಕೊಟ್ಟುಬಿಟ್ಟಿದ್ದರೆ....? ಹಾ! ಇಷ್ಟೆಲ್ಲಾ ಹುಡುಗರ ಎದುರಿಗೆ ಅದನ್ನು ಓಪನ್ನು ಮಾಡಲು ಮನಸಾಗದೆ (ಅಥವಾ ಧೈರ್ಯ ಸಾಲದೆ), ಮನೆಗೆ ಬಂದು, ಕೋಣೆ ಸೇರಿಕೊಂಡು, ಬೆಚ್ಚಗೆ ಕುಳಿತು ಬಿಚ್ಚಿ ನೋಡಿದೆ...

ಆದರೆ excite ಆಗುವಂತಹ ಯಾವ ಆಟೋಗ್ರಾಫೂ ಅದರಲ್ಲಿ ನನಗೆ ಕಾಣಲಿಲ್ಲ. 'ಪರೀಕ್ಷೆ ಎಂಬ ಯುದ್ಧದಲ್ಲಿ, ಪೆನ್ನು ಎಂಬ ಖಡ್ಗ ಹಿಡಿದು...' ಎಂಬಿತ್ಯಾದಿ ಪರೀಕ್ಷೆಯನ್ನು ನೆನಪಿಸಿ ಭಯ ಹುಟ್ಟಿಸುತ್ತಿದ್ದ ಆಟೋಗಳೂ, 'ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ನಶ್ವರವಾಗುವ ಈ ದೇಹಕ್ಕೆ ಸ್ನೇಹವೊಂದೇ ಶಾಶ್ವತ' ಎಂಬಿತ್ಯಾದಿ ಸ್ನೇಹಪರ ಸಾಲುಗಳೂ, 'ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ಉಳಿಯುವ ನೆನಪೇ ಸ್ನೇಹ' ಎಂಬಂತಹ ಗಜಾನನ ಬಸ್ಸಿನ ಹಿಂದಿನಿಂದ ಕದ್ದ ಸಾಲುಗಳೂ, 'Life is a game, play it!' ಎಂದು ಜೀವನವನ್ನು ಆಟಕ್ಕೆ ಹೋಲಿಸಿ ನಮ್ಮನ್ನು confuse ಮಾಡುವಂತಹ ಸಾಲುಗಳೂ ಇದ್ದವು. ಅದರಲ್ಲಿ ಸಹಸ್ರಾರು spelling mistakeಗಳೂ, ಕಾಟು-ಚಿತ್ತುಗಳೂ ಇದ್ದವು. ಎಲ್ಲಕ್ಕಿಂತ ಬೇಜಾರಾದ ಸಂಗತಿಯೆಂದರೆ ಎಲ್ಲಾ ಹುಡುಗಿಯರೂ ಮೊದಲ ಸಾಲಿನಲ್ಲಿ 'ಪ್ರಿಯ ಸಹೋದರನಾದ .....ನಿಗೆ' ಅಂತಲೋ 'My dear brother ....' ಅಂತಲೋ ಶುರುಮಾಡಿರುತ್ತಿದ್ದುದು. ನಾನು ಆಶಾಭಂಗವಾದವನಂತೆ ಸುಮ್ಮನೆ ಪುಟ ತಿರುವುತ್ತಾ ಮುನ್ನಡೆದೆ.

ಆದರೆ ಮತ್ತೆ ಮೂರ್ನಾಲ್ಕು ಪುಟಗಳನ್ನು ತಿರುವುತ್ತಿದ್ದಂತೆ ನನಗೆ ಒಂದು ಆಘಾತ ಕಾದಿತ್ತು. ಬೇರೆಲ್ಲಾ ಆಟೋಗಳಂತೆಯೇ 'My dear brother ....' ಅಂತಲೇ ಅದು ಶುರುವಾಗಿತ್ತಾದರೂ, ಅದರ ಮುಂದಿನ ಸಾಲುಗಳು ನನ್ನನ್ನು ತಬ್ಬಿಬ್ಬು ಮಾಡುವಂತಿದ್ದವು. ಅದನ್ನು ಯಥಾವತ್ತಾಗಿ, ಅದರ spelling mistakeಗಳ ಜೊತೆಗೆ, ಇಲ್ಲಿ ಕೊಡುತ್ತಿದ್ದೇನೆ:

"You are in mine heart like photograph
Then wat yuo to write in my autougraph

Your loving,

........."

ಮುಗಿಯಿತಲ್ಲಪ್ಪಾ? ನಮಗೋ, ಆಗ ಈ ಇಂಗ್ಲೀಷ್ ಭಾಷೆಯೆಂದರೆ ಭಯವಾಗುತ್ತಿದ್ದಂತಹ ಕಾಲ. ನಾವು ಅದನ್ನು ಪರಕೀಯ ಭಾಷೆಯೆಂದು ಪರಿಗಣಿಸಿ ಹೊರಗಿಟ್ಟಿದ್ದ ಕಾಲ. ಇಂಗ್ಲೀಷ್ ಟೀಚರ್ರು ಸಹ ನಮಗೆ ಪ್ರಿಯರಾಗಿರಲಿಲ್ಲ. ಇಂಗ್ಲೀಷ್ ಟೀಚರ್ರು ನಮಗೆ ಪಾಠ ಕಲಿಸಲು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ; ನಮಗೇ ಅವರ ಮೇಲೆ ಕರುಣೆ ಉಕ್ಕುವಷ್ಟು. ಹುಡುಗಿಯರೂ ಏನು ಇಂಗ್ಲೀಷಿನಲ್ಲಿ ಚುರುಕಾಗಿರಲಿಲ್ಲ. ಈ ಆಟೋಗ್ರಾಫ್ ಬರೆದುಕೊಟ್ಟ ಹುಡುಗಿಯೂ ಅದಕ್ಕೆ ಹೊರತಾಗಿರಲಿಲ್ಲ. ಅದು ಅವಳು ಸ್ವತಃ ರಚಿಸಿದ ಆಟೋಗ್ರಾಫ್ ಆಗಿರಲಿಕ್ಕಂತೂ ಶಕ್ಯವೇ ಇರಲಿಲ್ಲ. ಬಹುಶಃ ತನ್ನ ಅಕ್ಕನ ಆಟೋಗ್ರಾಫ್ ಪುಸ್ತಕದಿಂದ ಕದ್ದ ವಾಕ್ಯವಿರಬೇಕು. ಏನೇ ಆಗಿರಲಿ. ನಾನು ಅದನ್ನು ಹೀಗೆ ಅರ್ಥ ಮಾಡಿಕೊಂಡೆ:

"ನೀನು ನನ್ನ ಹೃದಯದಲ್ಲಿ ಒಂದು ಚಿತ್ರದಂತೆ ಇದ್ದೀಯ;
ಇನ್ನು ನೀನು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಏನು ಬರೆಯುತ್ತೀಯ ಎಂದು ಕಾಯುತ್ತಿರುತ್ತೇನೆ" !!!

ಅಬ್ಬ! ಅರ್ಥವಾದದ್ದೇ ನಾನು ಬೆವೆಯತೊಡಗಿದೆ...! ಮತ್ತೆ ಮತ್ತೆ ಓದಿಕೊಂಡೆ.. ಕೊನೆಯಲ್ಲಿ 'Your loving' ಅಂತ ಬೇರೆ! ಸೆಖೆ ಜಾಸ್ತಿಯಾಯಿತು. ಮನೆಯಲ್ಲಿ ಫ್ಯಾನ್ ಬೇರೆ ಇರಲಿಲ್ಲ.. ಆಟೋಗ್ರಾಫ್ ಪುಸ್ತಕವನ್ನು ರಪ್ಪನೆ ಮುಚ್ಚಿಟ್ಟು ಮನೆಯಿಂದ ಹೊರಬಿದ್ದೆ.. ತಂಗಾಳಿ ಸೋಕಿ ಮೈಪುಳಕವಾಯಿತು.. ದೂರದ ಸ್ಟ್ರೀಟ್‍ಲೈಟ್‍ನ ಬೆಳಕು ನನ್ನ ಮೈಮೇಲೆ ಬೀಳುತ್ತಿತ್ತು.. ಆ ಬೆಳಕಿನಲ್ಲಿ ಅಂತೂ ಒಂದು ಹುಡುಗಿಯನ್ನು 'ಬೀಳಿಸಿಕೊಂಡ' ನನ್ನ ಬಾಡಿಯನ್ನೇ ನೋಡಿಕೊಂಡೆ.. ನನಗೂ ಒಬ್ಬ ಹುಡುಗಿ.. ನನಗೂ ಒಬ್ಬ ಹೀರೋಯಿನ್..! ಇನ್ನು ನಾನೂ-ಅವಳೂ ಹಾಡು ಹೇಳುತ್ತಾ ಮರ ಸುತ್ತುತ್ತಾ.... ಅಷ್ಟರಲ್ಲಿ... ಅಮ್ಮ ಮನೆಯ ಒಳಗಿಂದ ಕೂಗಿದಳು: 'ಓದ್‍ಕ್ಯಾ ಅಂದ್ರೆ ಅದೇನು ಅಂಗಳದಲ್ಲಿ ಸುತ್‍ತಾ ಇದೀಯ? ಒಳಗೆ ಬಂದು ಓದ್‍ಕ್ಯಾ..!' ಆಹ್! ನಾನು ದುಃಸ್ವಪ್ನ ಕಂಡವನಂತೆ ಕಲ್ಪನಾಲೋಕದಿಂದ ಹೊರಬಂದೆ. ಮನೆಯ ಒಳಬಂದೆ. ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಕರಗುತ್ತಿರುವ, ಕೊರಗುತ್ತಿರುವ ಆ ಹುಡುಗಿಯ ಬಗ್ಗೆ ಪ್ರೀತಿಯುಂಟಾಯಿತು.. ಆದರೆ ಫಕ್ಕನೆ ಭಯವಾಯಿತು.. ಏನಾದ್ರೂ ಈ ವಿಷಯ ಮನೆಯವರಿಗೆ ಗೊತ್ತಾದ್ರೆ? ಹೋಗಲಿ, ಅವಳ ಮನೆಯಲ್ಲಿ ಈ ಬಗ್ಗೆ ಗೊತ್ತಿದೆಯಾ? ಗೊತ್ತಾದರೆ, ಅವಳ ಅಣ್ಣ ನನ್ನನ್ನು ಹೊಡೆಯಲಿಕ್ಕೆ ಅಂತ ಬಂದ್ರೆ? ...ನಾನು ಫೈಟ್ ಮಾಡಿ.. ಅವನನ್ನು ಮಾರಣಾಂತಿಕ ಗಾಯಗಳಿಗೆ ತುತ್ತುಮಾಡಿ... ಪೋಲೀಸರು ಬಂದು ನನಗೆ ಕೋಳ ಹಾಕಿ... ಸಿನಿಮಾಗಳಲ್ಲಿ ಆಗುವಂತೆ ನಿಜಜೀವನದಲ್ಲೂ ಆಗುತ್ತದೆ ಅಂದುಕೊಂಡೆ.. ಈ ರಗಳೆಗಳೆಲ್ಲ ಬೇಡವೇ ಬೇಡ, ಪ್ರೀತಿ-ಪ್ರೇಮಗಳಿಗೆಲ್ಲ ಗೋಲಿ ಹೊಡೀಲಿ. ಅವಳಾಗೇ ಬಂದು propose ಮಾಡಿದರೂ 'ಇಲ್ಲ' ಅಂದು ತಿರಸ್ಕರಿಸಬೇಕು ಅಂದುಕೊಂಡೆ!

ಇಷ್ಟಕ್ಕೂ ಆ ಹುಡುಗಿ ನಮ್ಮ ಊರಿನ ಪಕ್ಕದ ಊರಿನವಳು. ಶ್ರೀಮಂತರ ಮನೆಯ ಹುಡುಗಿ. ಒಂಥರಾ ಕೀರಲು ದನಿ ಅವಳದು. ಅದಕ್ಕಾಗಿಯೇ ಅವಳನ್ನು ನಾವು 'ಕೀರ್ವಾಣಿ' ಅಂತ ಕರೆಯುತ್ತಿದ್ದೆವು! ಅವಳಾಗಿಯೇ ಆ ಆಟೋಗ್ರಾಫನ್ನು ಉದ್ದೇಶಪೂರ್ವಕವಾಗಿ ಬರೆದಿರಲಿಕ್ಕಂತೂ ಸಾಧ್ಯವಿರಲಿಲ್ಲ. ಆದರೆ ನನ್ನ ಹುಚ್ಚು ಮನಸ್ಸು ಕೇಳಬೇಕಲ್ಲ? ಅಲ್ಲದೇ ಅವಳು ತನ್ನ ಆಟೋಗ್ರಾಫ್ ಬುಕ್ಕಿನಲ್ಲಿ ನಾನು ಏನು ಬರೆಯುತ್ತೀನಿ ಅಂತ ಕಾಯುತ್ತಾ ಇರುತ್ತಾಳೆ... ಅಥವಾ ಇವೆಲ್ಲಾ ಕೇವಲ ನನ್ನ ಹುಚ್ಚು ಭ್ರಮೆಯೇ? ಗೊಂದಲದಲ್ಲಿದ್ದೆ.

ಅಷ್ಟರಲ್ಲಿ ಮತ್ತೊಂದು ಘಟನೆಯಾಯಿತು! ನಮ್ಮೂರಿನಲ್ಲಿ ಒಬ್ಬರ ಮನೆಗೆ ಗುರುಗಳು (ಸ್ವಾಮೀಜಿ) ಬಂದಿದ್ದರು. ಅವರ ಮನೆಯಲ್ಲಿ ಸ್ವಾಮಿಗಳ 'ಭಿಕ್ಷಾ' ಇತ್ತು. ನಾನು ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಅಲ್ಲಿಗೆ ಕೀರ್ವಾಣಿಯ ಪಕ್ಕದ ಮನೆಯ ಒಬ್ಬ ಹುಡುಗ ಕೂಡ ಬಂದಿದ್ದ. ಸುಮಾರು ಐದನೇ ಕ್ಲಾಸು ಓದುತ್ತಿರಬಹುದಾದ ತುಂಬಾ ಕೀಟಲೆ ಹುಡುಗ ಅವನು. ಊಟಕ್ಕೆ ಪಂಕ್ತಿಯಲ್ಲಿ ನಾನೂ-ಅವನು ಒಟ್ಟಿಗೇ ಕುಳಿತುಕೊಳ್ಳುವಂತಾಯಿತು. ಊಟ ಮಾಡುತ್ತಿರುವಾಗ ನನ್ನ ಗೊಂದಲಗಳು ಹೆಚ್ಚಾಗುವಂತಹ ಒಂದು ಮಾತನ್ನು ಆ ಹುಡುಗ ಆಡಿದ. "ನಮ್ಮನೆ ಪಕ್ಕದ್ಮನೆ ಅಕ್ಕ ಇದಾಳಲ್ಲ, ಅವ್ಳು ನಿಂದು ಒಂದು ಫೋಟೋ ಕಟ್ ಮಾಡಿ ಇಟ್ಕೊಂಡ್ ಬಿಟ್ಟಿದಾಳೆ ಮಾರಾಯ.. ನಾವು ಎಷ್ಟು ಕೊಡು ಅಂದ್ರೂ ಕೊಡೋದಿಲ್ಲ.." ಅಂದುಬಿಟ್ಟ! ಅಲ್ಲಿಗೆ ಮುಗಿಯಿತಲ್ಲ? ಊಟ ಮಾಡುತ್ತಿದ್ದವನು ದಂಗಾಗಿಬಿಟ್ಟೆ. ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ಅಷ್ಟಂದು ಅವನೇನೋ ಸುಗ್ರಾಸ ಭೋಜನ ಮುಂದುವರಿಸಿದ. ಆದರೆ ನನಗೆ ಗಂಟಲಲ್ಲಿ ಅನ್ನ ಹಿಡಿಯಲಿಕ್ಕೆ ಶುರುವಾಯಿತು. ಪಲ್ಯ ಬಡಿಸುತ್ತಿದ್ದ ರಾಘವೇಂದ್ರಣ್ಣ 'ಪಲ್ಯ ಪಲ್ಯ ಪಲ್ಯ' ಎಂದು ನನ್ನ ಎದುರು ಮೂರು ಮೂರು ಸಲ ಕೇಳಿದರೂ ನಾನು ಸುಮ್ಮನಿದ್ದುದ್ದು ನೋಡಿ ಎರಡು ಸೌಟು ಸರಿಯಾಗಿ ಪಾಯಸದ ಮೇಲೆ ಹಾಕಿ ಹೋಗಿಬಿಟ್ಟ!

ಇಷ್ಟೆಲ್ಲಾ ಗೊಂದಲಗಳು ನನ್ನ ತಲೆಯಲ್ಲಿ ಆಗುತ್ತಿದ್ದರೂ ಆ ಹುಡುಗಿ ಮಾತ್ರ ಮಾಮೂಲಿನಂತೆಯೇ ಇದ್ದಳು. ಹಾಗೇ ತಲೆ ತಗ್ಗಿಸಿಕೊಂಡು ಶಾಲೆಗೆ ಬರುತ್ತಿದ್ದಳು. ತನ್ನ ಗೆಳತಿಯರೊಡನೆ ಕೀರಲು ದನಿಯಲ್ಲಿ ಮಾತನಾಡುತ್ತಿರುತ್ತಿದ್ದಳು. ಒಟ್ಟಿನಲ್ಲಿ ನನಗಂತೂ ತಲೆ ಕೆಟ್ಟು ಹೋಯಿತು. ನನ್ನ ಬಳಿ ಮಾತನಾಡಿ 'ಮುಂದುವರಿಸ'ಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಕಡೆ at least ಓರೆ ನೋಟವನ್ನೂ ಬೀರಲಿಲ್ಲ. ನನಗೆ ಆಗುತ್ತಿದ್ದುದ್ದು ಹತಾಶೆಯೋ, ನಿರಾಶೆಯೋ, ಭ್ರಮನಿರಸನವೋ ತಿಳಿಯದಾದೆ.

ಅಂತೂ ಮೂರ್ನಾಲ್ಕು ವಾರಗಳ ನಂತರ ಅವಳು ತನ್ನ ಆಟೋಗ್ರಾಫ್ ಪುಸ್ತಕವನ್ನು ನನಗೆ ಬರೆಯಲು ಕೊಟ್ಟಳು. ನಾನೂ ಇದಕ್ಕೇ ಕಾಯುತ್ತಿದ್ದವನಂತೆ, ಹಿಂದೆ ಮುಂದೆ ಯೋಚಿಸದೆ 'What is the real meaning of your autograph?' ಅಂತ ಒಂದೇ ಲೈನು ಬರೆದುಕೊಟ್ಟೆ. ಆದರೆ ಅದಕ್ಕೂ ಅವಳಿಂದ reply ಬರಲಿಲ್ಲ. ಬಹುಶಃ ಅವಳಿಗೆ ಅದು ಅರ್ಥವೇ ಆಗಲಿಲ್ಲವೇನೋ!

ನೋಡುನೋಡುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹತ್ತಿರಾದವು. ನಾವು ಬರೆದದ್ದೂ ಆಯಿತು. ರಿಸಲ್ಟು ಬಂದದ್ದೂ ಆಯಿತು. ಆಕೆ ಫೇಲ್ ಆಗಿದ್ದಳು; ನಾನು ಆ ಗಂಢಾಂತರದಿಂದ ಕೆಲವೇ ಮಾರ್ಕುಗಳ ಅಂತರದಿಂದ ಪಾರಾಗಿದ್ದೆ. ಹಾಗೆ ನಮ್ಮ ಹೈಸ್ಕೂಲು ಜೀವನ ಮುಗಿದುಹೋಯಿತು.

ಕೊನೆಗೆ ನಾನೆಲ್ಲೋ ಅವಳೆಲ್ಲೋ ಆದೆವು. ನಮ್ಮ ಪಕ್ಕದ ಊರಿನಲ್ಲೇ ಇರುತ್ತಿದ್ದಳಾದರೂ ಒಬ್ಬರಿಗೊಬ್ಬರು ಭೇಟಿ ಆಗುವಂತಹ ಸನ್ನಿವೇಶಗಳು ಕೂಡಿಬರಲಿಲ್ಲ. ಒಂದೆರಡು ಬಾರಿ ಕಂಡಿದ್ದಳಾದರೂ ಸುಮ್ನೆ 'ಅರಾಮಿದೀಯ?' 'ಏನ್ಮಾಡ್ತಿದೀಯ ಈಗ?' ಇತ್ಯಾದಿ ಪ್ರಶ್ನೋತ್ತರಗಳಲ್ಲಿ ಮಾತುಕತೆ ಮುಗಿದು ಹೋಗುತ್ತಿತ್ತು. 'ಇಷ್ಟಕ್ಕೂ ನೀನು ನನ್ನನ್ನು ಪ್ರೀತಿಸಿದ್ದು ಹೌದಾ?' ಅಂತ ಕೇಳಬೇಕೆಂದುಕೊಳ್ಳುತ್ತಿದ್ದೆ. ಆದರೆ ಧೈರ್ಯ ಸಾಲುತ್ತಿರಲಿಲ್ಲ. ಅಥವಾ ಮುಜುಗರವಾಗುತ್ತಿತ್ತು.

ಈಗ ನೋಡಿದರೆ ಕೀರ್ವಾಣಿಯ ಮದುವೆಯ ಸುದ್ದಿ ಬಂದಿದೆ. ಎಲ್ಲಾ ನೆನಪಾಗುತ್ತಿದೆ... ಇಷ್ಟಕ್ಕೂ ಕೀರ್ವಾಣಿಗೆ ನನ್ನ ಮೇಲೆ ಒಲವಿತ್ತಾ? ಆ ಪ್ರಶ್ನೆ ಮಾತ್ರ ನನ್ನಲ್ಲೇ ಉಳಿದುಹೋಗಿದೆ: ಸವಿನೆನಪುಗಳನ್ನು ಕೆದಕಲು ಗುದ್ದಲಿಯಾಗಿ.

Tuesday, November 07, 2006

ಹೋಳಿಗೆಯ ಮೆಲುಕು

ಹೋಳಿಗೆ ಮಾಡುವುದು ಹೇಗೆ ಗೊತ್ತಾ?

ಮೊದಲು ಕಡಲೆ ಬೇಳೆಯನ್ನು ತೊಳೆದು, ನೆನೆಸಿಡಬೇಕು. ಆಮೇಲೆ ಅದನ್ನು ಬೆಲ್ಲದೊಂದಿಗೆ ಬೇಯಿಸಬೇಕು. ಅದು ಬೆಂದಾದಮೇಲೆ ಸಿದ್ದವಾಗುವ ಖಾದ್ಯವೇ ಹಯಗ್ರೀವ. ಆಮೇಲೆ ಅದನ್ನು ಬೀಸಬೇಕು. ಈಗ ಹೂರಣ ಸಿದ್ದ. ಈ ಮಧ್ಯೆ ಹೋಳಿಗೆ ರವೆ (ಅಥವಾ ಗೋಧಿ/ಮೈದಾ ಹಿಟ್ಟು) ಯನ್ನು ಎಣ್ಣೆ/ನೀರಿನೊಂದಿಗೆ ಕಲಸಿ, ಮೆದ್ದು, ಸರಿಯಾಗಿ ಹದ ಮಾಡಿಟ್ಟುಕೊಳ್ಳಬೇಕು. ರಬ್ಬರಿನಂತೆ flexible ಆಗಿರಬೇಕು ಅದು. ಈಗ ಕಣಿಕೆ ಸಿದ್ದ. ಈಗ ಏನು ಮಾಡಬೇಕೆಂದರೆ.. ಕಣಿಕೆಯನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಹೂರಣವನ್ನೂ ಉಂಡೆ ಕಟ್ಟಬೇಕು. ಈ ಹೂರಣದ ಉಂಡೆಗಳು ಕಣಿಕೆ ಉಂಡೆಗಳಿಗಿಂತ ದೊಡ್ಡವು. ಕಣಿಕೆಯ ಉಂಡೆಗಳು ಮತ್ತು ಹೂರಣದ ಉಂಡೆಗಳು ಸಮಸಂಖ್ಯೆಯಲ್ಲಿರಬೇಕು. (ಕಣಿಕೆ ಸ್ವಲ್ಪ ಉಳಿದುಬಿಟ್ಟರೆ ಕೊನೆಯಲ್ಲಿ 'ಕಣಿಕೆ ರೊಟ್ಟಿ' ಮಾಡಬಹುದು, ಚಿಂತೆಯಿಲ್ಲ!). ಕಾವಲಿ ಕಾದಿದೆಯಾ ನೋಡಿ... ಹಾಂ, ಕಾದಿದೆ. ಈಗ ಕಾವಲಿಗೆ ಎಣ್ಣೆ ಸವರಿ. ಹಾಂ, ಇನ್ನು ಕಣಿಕೆಯನ್ನು ಒತ್ತಿ (ಅಥವಾ ತಟ್ಟಿ) ಚಪ್ಪಟೆ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು, ಕಣಿಕೆಯಿಂದ ಮುಚ್ಚಿಬಿಡಿ. ಈಗ ಅದನ್ನು ಮಣೆಯ ಮೇಲಿಟ್ಟು, (ಮಣೆಯ ಮೇಲೆ ಕವರು ಹಾಸಿಕೊಂಡಿದ್ದೀರ ತಾನೆ?), ಲಟ್ಟಣಿಗೆಯಿಂದ ತೆಳ್ಳಗೆ ವರೆಯಬೇಕು... ಕಣಿಕೆ transparent ಆಗಿ ಒಳಗಿನ ಹೂರಣ ಎದ್ದುಬರುವಂತಾಗುವವರೆಗೆ ವರೆಯಬೇಕು. ಈಗ ಇದನ್ನು ಕಾದ ಕಾವಲಿಯ ಮೇಲೆ ಹಾಕಬೇಕು. ಹತ್ತಿ ಕರಕಲಾಗದಂತೆ ಆಗಾಗ ಮಗುಚಿಹಾಕುತ್ತಿರಬೇಕು. ಬೆಂದಮೇಲೆ ತೆಗೆದು ಪೇಪರ್ ಮೇಲೆ ಆರಲು ಹಾಕಬೇಕು... ಇಗೋ, ಇದೀಗ ಹೋಳಿಗೆ ತಿನ್ನಲು ಸಿದ್ದ! ನೋಡಿ, ಎಷ್ಟು ಕಷ್ಟ ಹೋಳಿಗೆ ಮಾಡುವುದು...!

ಮನುಷ್ಯನಿಗೆ ಬೇಳೆ, ಬೆಲ್ಲ, ರವೆ, ಹಿಟ್ಟುಗಳನ್ನು ಹಾಗ್-ಹಾಗೇ ತಿನ್ನಲಾಗುವುದಿಲ್ಲ ಅದಕ್ಕಾಗಿ ಇಷ್ಟೆಲ್ಲ ಕಷ್ಟ ಪಡುತ್ತಾನೆ! ಅದ್ಸರಿ, ಈ ಹೋಳಿಗೆ ಮಾಡುವುದನ್ನು ಕಂಡುಹಿಡಿದವರು ಯಾರು?

ಮರೆತದ್ದು: ಹಯಗ್ರೀವವನ್ನು ಬೀಸುವ ಮುಂಚೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಹೋಳಿಗೆಗೆ ಪರಿಮಳವೂ, ಜಾಸ್ತಿ ರುಚಿಯೂ ಲಭ್ಯವಾಗುತ್ತದೆ!


***

ಯಾಕೆ ಬರೆದೆ ಇದನ್ನ ಇಲ್ಲಿ ಅಂದ್ರೆ...

ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಹೆಣ್ಣುಮಕ್ಕಳು ಇಲ್ಲದ ಕಾರಣ ನಾನೇ ಅಮ್ಮನಿಗೆ ಹೋಳಿಗೆ ಮಾಡುವಲ್ಲಿ assist ಮಾಡುವುದು. ಕಳೆದ ವರ್ಷದವರೆಗೆ ಅಜ್ಜಿ ಇದ್ದಳು. ಅವಳಿಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲವಾದರೂ, ಒಂದಷ್ಟು ಹೊತ್ತು ಒಲೆ ಬುಡದಲ್ಲಿ ಕೂತು ಹೋಳಿಗೆ ಮಗುಚಿಹಾಕುವ ಕೆಲಸವನ್ನು ಮಾಡುತ್ತಿದ್ದಳು. ಅವಳು ತೀರಿಕೊಂಡಮೇಲೆ ಈ ವರ್ಷ ಹೂರಣದ ಉಂಡೆ ಕಟ್ಟುವುದು, ಬೆಂಕಿಯ ಕಾವು ಹೆಚ್ಚುಕಮ್ಮಿಯಾಗದಂತೆ manage ಮಾಡುವುದು, ಹೋಳಿಗೆ ಮಗುಚಿಹಾಕುವುದು ಎಲ್ಲಾ ನಾನೇ. ಅಮ್ಮ ಕಣಿಕೆಯ ಉಂಡೆ ಕಟ್ಟುವುದು, ಹೂರಣದ ಉಂಡೆಯನ್ನು ಕಣಿಕೆಯ ಒಳಗಿಟ್ಟು ಹೋಳಿಗೆ ವರೆಯುವುದು, ಆಮೇಲೆ ಅದನ್ನು ಕೈಮೇಲೆ ಹಾಕಿಕೊಂಡು ಹರಿದುಹೋಗದಂತೆ ಕಾದ ಕಾವಲಿಯ ಮೇಲೆ ವರ್ಗಾಯಿಸುವುದು, ಹೋಳಿಗೆ ಬೆಂದಿತಾ ಅಂತ ಚೆಕ್ ಮಾಡುವುದು.. ಎಲ್ಲಾ ಮಾಡುತ್ತಾಳೆ.

ನನಗೆ ಮೊದಲಿನಿಂದಲೂ ಅಮ್ಮನಿಗೆ ಸಹಾಯ ಮಾಡುವ ಇಂತಹ ಕೆಲಸಗಳಲ್ಲಿ ಆಸಕ್ತಿ. ಏಕೆಂದರೆ ಒಲೆಯ ಹಳದಿ ಬೆಳಕು ಅಮ್ಮನ ಮುಖದ ಮೇಲೆ ಲಾಸ್ಯವಾಡುತ್ತಿರುವಾಗ ನಾನು ಉಂಡೆ ಕಟ್ಟಿಕೊಡುತ್ತಾ ಅದೆಷ್ಟು ಮಾತಾಡಬಹುದು...! ಊರ ಕಥೆಯನ್ನೆಲ್ಲಾ ಅಮ್ಮ ಹೇಳುತ್ತಾಳೆ. ಯಾರ್‍ಯಾರ ಮನೆಯಲ್ಲಿ ಏನೇನಾಯ್ತು, ಪಾರಕ್ಕ ಗಂಡ-ಹೆಂಡ್ತಿ ಕಾಶೀಯಾತ್ರೆಗೆ ಹೋಗಿಬಂದದ್ದು, ಹೊಸವರ್ಷದ ಹಿಂದಿನ ದಿನ ಊರವರೆಲ್ಲಾ ಸೇರಿ ಕಂಬಳ ಮಾಡಿದ್ದು, ಪ್ರಕಾಶಣ್ಣನ ಮನೆಯ ಹುಲ್ಲು ಗೊಣಬೆಗೆ ಬೆಂಕಿ ಬಿದ್ದುಬಿಟ್ಟದ್ದು, (ಬೆಂಕಿ ಹಾಕಿದ್ದು ಇಂಥವನೇ ಇರಬೇಕು ಅಂತ ಊರವರೆಲ್ಲ ಗುಸುಗುಸು ಮಾತಾಡಿಕೊಳ್ಳುತ್ತಿರುವುದು), ಸರೋಜಕ್ಕನೂ ಶ್ರೀಲಕ್ಷ್ಮಕ್ಕನೂ ಮಾಡಿಕೊಂಡ ಜಗಳ, ಗುಂಡ ಹೊಸ ಬೈಕಿನಿಂದ ಬಿದ್ದು ಕಾಲು ಮುರಿದುಕೊಂಡದ್ದು... ಎಲ್ಲ.

ಇವನ್ನೆಲ್ಲ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ. ಏಕೆಂದರೆ ಬಹಳ ಸಲ ನಮ್ಮನೆಯ ಫೋನಿನಲ್ಲಿ ಮಾತಾಡುತ್ತಿರುವುದನ್ನು ಬೇರೆಯವರ ಮನೆಯವರು ಫೋನೆತ್ತಿದರೆ ಕೇಳಿಸಿಕೊಳ್ಳಬಹುದು! ಆದ್ದರಿಂದ, ಇದಕ್ಕೆ ಹಿತ್ಲಕಡೆ ಲಾಯದಲ್ಲಿ ಹೋಳಿಗೆ ಮಾಡಲಿಕ್ಕೆಂದು ಹೂಡಿದ ವಿಶೇಷ ಒಲೆಯ ಎದುರೇ ಆಗಬೇಕು. ನಾನು ಹಿಂದಿನ ಸಲ ಊರಿಗೆ ಬಂದುಹೋದಂದಿನಿಂದ ಈ ಸಲ ಬರುವವರೆಗೆ ಊರಿನಲ್ಲಿ, ನಮ್ಮ ನೆಂಟರಿಷ್ಟರ ಕುಟುಂಬಗಳಲ್ಲಿ ಏನೇನಾಯ್ತೋ ಎಲ್ಲದರ ವರದಿ ಈ ಒಲೆಯ ಮುಂದೆ ನನಗೆ ಸಿಗುತ್ತದೆ ಅಮ್ಮನಿಂದ. ನಾನು ಹೂರಣದ ಉಂಡೆ ಕಟ್ಟಿಕೊಡುತ್ತಾ, ಆ ಉಂಡೆ ಅಮ್ಮನ ಪುಟ್ಟ ಕಣಿಕೆಯ ಉಂಡೆಯೊಳಗೆ ಬೆಚ್ಚಗೆ ಮುಚ್ಚಿಹೋಗುವುದನ್ನು ವಿಸ್ಮಯದಿಂದ ನೋಡುತ್ತಾ, ಈ ಕಥೆಯನ್ನೆಲ್ಲಾ ಕೇಳುತ್ತೇನೆ... ಆಗಾಗ ಬೆಂಕಿ ಮುಂದೂಡುತ್ತಾ, ಕಾವು ಜಾಸ್ತಿಯಾದರೆ ಕಟ್ಟಿಗೆಯನ್ನು ಹಿಂದಕ್ಕೆಳೆಯುತ್ತಾ, ಕಣಿಕೆಯ ಉಂಡೆ ಮತ್ತು ನನ್ನ ಹೂರಣದ ಉಂಡೆ -ಎರಡೂ ಸಮಸಂಖ್ಯೆಯಲ್ಲಿದೆಯಾ ಅಂತ ಲೆಕ್ಕ ಮಾಡುತ್ತಾ ನಾನು ಕುಳಿತಿರುವಾಗ ಲಟ್ಟಣಿಗೆಯ ಕೆಳಗೆ ಕಣಿಕೆಯೊಳಗಣ ಹೂರಣ ಅಗಲವಾಗುತ್ತಾ ಹೋಗುತ್ತದೆ. ಕಣಿಕೆ ತಾನು ಪಾರದರ್ಶಕವಾಗುತ್ತಾ, ಹೂರಣವನ್ನು ಅಗಲವಾಗಲು ಬಿಡುತ್ತದೆ. ಹೂರಣಕ್ಕೆ ಕಣಿಕೆಯನ್ನೂ ಮೀರಿ ಬೆಳೆಯುವ ಧೈರ್ಯ. ಆದರೆ ಅಷ್ಟರಲ್ಲಿ ಅಮ್ಮ ವರೆಯುವುದನ್ನು ನಿಲ್ಲಿಸಿಬಿಡುತ್ತಾಳೆ.

ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಆಟವಾಡಿದ್ದು ಎಲ್ಲ ಈ ಹಳ್ಳಿಯಲ್ಲೇ, ಅಮ್ಮ-ಅಪ್ಪ-ಅಜ್ಜಿಯರ ಸಂಗಡವೇ. ನನ್ನ ಜೀವನದ ಮೊದಲ ಹದಿನೆಂಟು ವರ್ಷಗಳನ್ನು ಇಲ್ಲೇ ಕಳೆದುಬಿಟ್ಟೆ. ಓದಿನಲ್ಲಿ ಮುಂದಿದ್ದ ಕಾರಣ, ನಾನೇ ಊರಿಗೆಲ್ಲ ಹೀರೋ ಆಗಿದ್ದೆ. ಅಲ್ಲದೆ ಏನೇನೂ ಕೀಟಲೆ ಮಾಡದೆ, ಹೆಚ್ಚು ಮಾತೂ ಆಡದೆ, decent ಆಗಿ ಇರುತ್ತಿದ್ದೆನಾದ್ದರಿಂದ ನನಗೆ 'ತುಂಬಾ ಒಳ್ಳೇ ಮಾಣಿ' ಎಂಬ ಬಿರುದೂ ಬಂದುಬಿಟ್ಟಿತ್ತು! ಆದರೆ ಕೊನೆಕೊನೆಗೆ ಆ ಪಟ್ಟ ಬೇರೆಯವರಿಗೆ ವರ್ಗಾವಣೆಯಾಗುವ ಸಂಭವ ಬಂತು. ಓದುವುದರಲ್ಲಿ dull ಹೊಡೆಯಲು ಶುರು ಮಾಡಿದೆ. ನನ್ನ ಉಳಿದ ಸ್ನೇಹಿತರಿಗೆ ಬೇರೆಬೇರೆ ಕ್ಷೇತ್ರಗಳಲ್ಲಿ 'ಮನ್ನಣೆ' ಸಿಗಲಿಕ್ಕೆ ಪ್ರಾರಂಭವಾಗಿತ್ತು. ಹೀಗಾಗಿ ನಾನು ಏನೂ ಇಲ್ಲದೆ, ತೀರ ಪೇಲವನಂತಾಗಿಬಿಟ್ಟೆ. ಇಲ್ಲೇ ಇದ್ದರೆ ನಾನು ಇನ್ನು ಕೊಳೆತುಹೋಗಿಬಿಡುತ್ತೇನೆ ಅನ್ನಿಸಲು ಶುರುವಾಯಿತು ನನಗೆ... So, ನನ್ನ ಡಿಪ್ಲೋಮಾ ಮುಗಿದದ್ದೇ ಬೆಂಗಳೂರಿಗೆ ಹತ್ತಿಬಿಟ್ಟೆ.

ಇಲ್ಲಿಗೆ ಬರುವ ಮುನ್ನ ಕಟ್ಟಿದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಅವನ್ನೆಲ್ಲಾ achieve ಮಾಡಿಕೊಳ್ಳಲು ಬೇಕಾದ ಸಮಯ ಮತ್ತು ಅವಕಾಶವನ್ನು ಈ ಬೆಂಗಳೂರಿನ busyನೆಸ್ಸು ತಿಂದುಹಾಕುತ್ತಿದೆ. ಮೆಜೆಸ್ಟಿಕ್ಕಿನ ಬಳಿಯ ಫ್ಲೈಓವರಿನ ಮೇಲೆ ನಿಂತು ಕೆಳಗೆ ನೋಡಿದರೆ ಜನಸಾಗರ. ಎಲ್ಲಾ ಸರಸರನೆ ಓಡಾಡುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಗೆ ಹೋಗುತ್ತಿದ್ದಾರೆ? ಏನದು ತರಾತುರಿ? ಒಂದೂ ಅರ್ಥವಾಗುತ್ತಿಲ್ಲ. ಸುಮ್ಮನೇ ಎಲ್ಲರೂ ಓಡುತ್ತಿದ್ದಾರೆ. ಗಮನಿಸಿ ನೋಡಿದರೆ, ನಾನೂ ಓಡುತ್ತಿದ್ದೇನೆ -ಇವರಂತೆಯೇ, ಇವರೊಂದಿಗೇ. ಹೀಗೇ ಓಡುತ್ತಿದ್ದರೆ ಮುಂದೊಂದು ದಿನ ಎಲ್ಲಿಗೆ ಹೋಗಿ ಮುಟ್ಟುತ್ತೇನೋ ಅನ್ನಿಸಿದಾಗ ಭಯವಾಗುತ್ತದೆ.


***

I am sorry. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಕ್ಕೆ ಬಂದರೂ, ಅದೆಷ್ಟೇ ನಗರೀಕೃತಗೊಂಡಿದ್ದೇನೆಂದರೂ, ಇನ್ನೂ ಊರಲ್ಲೇ ಇದ್ದೇನೆ ಅನ್ನಿಸುತ್ತದೆ. ಅಮ್ಮನನ್ನೂ, ಊರನ್ನೂ, ಬೆಚ್ಚನೆಯ ಆ ಒಲೆಯ ಎದುರನ್ನೂ ಬಿಟ್ಟಿರಲು ಆಗುವುದೇ ಇಲ್ಲ. ಅಮ್ಮ ಕೊಟ್ಟುಕಳುಹಿಸಿದ ಹೋಳಿಗೆಯನ್ನು ಮೆಲ್ಲುವಾಗ ಎಲ್ಲಾ ನೆನಪಾಗುತ್ತದೆ...

Saturday, November 04, 2006

ಮಳೆಗಾಲದ ನೆನಪು

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ, ಸಂಜೆ ಹೊತ್ತಿಗೆ ಮಳೆ. ಮನಸು ಪ್ರಫುಲ್ಲವಾಗಿರಬೇಕೆಂದರೆ ಆಗಸ ಶುಭ್ರವಾಗಿರಬೇಕು. ಬೆಳಗ್ಗೆ ಎದ್ದು ಹೊರಬಂದಾಗ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು ಕಂಡರೆ ಆ ದಿನವೆಲ್ಲಾ ಏನೋ ಹುಮ್ಮಸ್ಸು. ಬೆಳಗು ಚೆನ್ನಾಗಿ ಆಗಲಿಲ್ಲ ಆ ದಿನವೆಲ್ಲ mood out.

ಇವತ್ತು ಬೆಳಗ್ಗೆ ಎದ್ದಾಗ ಎಂಟೂ ಕಾಲು. ಮಬ್ಬು ವಾತಾವರಣವಾದ್ದರಿಂದ ಎಚ್ಚರೇ ಆಗಲಿಲ್ಲ. ಮೊಬೈಲಿನ ಅಲಾರಾಂ ಕೂಗಿದರೂ ಹಾಗೇ ಮುಸುಕು ಹಾಕಿ ಮಲಗಿಕೊಂಡಿರುವ ಮನಸು. ಆದರೂ ಆಫೀಸಿಗೆ ಹೋಗಬೇಕಾದ್ದರಿಂದ ಎದ್ದೆ. ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಊರಿಗೆ ಹೋಗಿದ್ದ ಗೆಳೆಯ ಶ್ರೀನಿಧಿಯಿಂದ ಎಸ್ಸೆಮ್ಮೆಸ್ಸು ಬಂತು:

"ಗುಡ್ಡೆಗೆ ದನ ಕಟ್ಟಿ ಬರಲು ಹೋಗಿದ್ದೆ.
ಚೆನ್ನಾದ ಐದಾರು ನವಿಲುಗರಿಗಳು ಸಿಕ್ಕಿದವು.
ಕೈಗೆ ಖುಷಿಯೇ ವಸ್ತುರೂಪ ಧರಿಸಿ ಸಿಕ್ಕಂತಾಯ್ತು"

-ಅಂತ ಇತ್ತು. ಮೆಸೇಜು ಓದಿಯಾದಮೇಲೆ ಮನಸ್ಸು ಉಲ್ಲಾಸದಿಂದ ತುಂಬಿಕೊಂಡಿತು. ಆ ಕ್ಷಣದಲ್ಲಿ ನವಿಲು, ನವಿಲುಗರಿ, ಗುಡ್ಡೆ (ನಮ್ಮೂರಿನ ಕಡೆ ಅದು ಹಿತ್ಲು ಅಥವಾ ಹಕ್ಲು), ದನ, ಅದನ್ನು ಮೇಯಲು ಬಿಟ್ಟುಬರಲು ಹೋಗುವುದು ....ಎಲ್ಲಾ ಕಣ್ಣಮುಂದೆ ಬಂದು, ಊರು ನೆನಪಾಗಿ, ಓಹ್! ನನ್ನ ದಿನವನ್ನು ಹಸನುಗೊಳಿಸಲು ಒಂದು ಮೆಸೇಜು ಸಾಕು. ಶ್ರೀನಿಧಿಯ ಕೈಗೆ ಸಿಕ್ಕ 'ಖುಷಿ' ಮೊಬೈಲಿನ ಮೂಲಕ ನನ್ನ ಕೈಗೆ ವರ್ಗಾವಣೆಯಾಗಿತ್ತು!

ಆಗಸದ ಬಣ್ಣ ನಮ್ಮ ಮೂಡನ್ನು ಹೇಗೆ ನಿರ್ಧರಿಸುತ್ತದೋ ಊರಿನ ನೆನಪೂ ಹಾಗೇ. ಈ ಬೆಂಗಳೂರಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಿಗೆ ವ್ಯತ್ಯಾಸವೇ ಇಲ್ಲ. ಯಾವಾಗ ಬೇಕೆಂದರೆ ಅವಾಗ ಮಳೆ ಬರುತ್ತದೆ. ಮಳೆಗಾಲದಲ್ಲೂ ಬಿಸಿಲಿರುತ್ತದೆ, ಎಲ್ಲೋ ಸಂಜೆ ಹೊತ್ತಿಗೆ ಒಂದು ಮಳೆ ಬಂದು ಹೋಗುತ್ತದೆ. ಆದರೆ ಊರಿನಲ್ಲಿ ಮಳೆಗಾಲ ಎಂದರೆ ಹೀಗಲ್ಲ. ಊರಿನಲ್ಲಿ ಮಳೆಗಾಲ ಎಂದರೆ... ಧೋ ಎಂದು ದಿನವಿಡೀ ಸುರಿಯುತ್ತಿರುತ್ತದೆ ಮಳೆ.. ಮಳೆ ನೀರು ಕುಡಿದು ಕುಡಿದು ಧರೆ ತಣಿಯುತ್ತದೆ... ಎಲ್ಲೆಂದರಲ್ಲಿ ಜಲ ಒಡೆದು, ಜವಳಾಗಿ, ಕೆರೆ ತುಂಬಿ, ಕೋಡಿ ಬಿದ್ದು, ವಟರುಗಪ್ಪೆ ಕೂಗಿ, ಕಂಬಳಿಕೊಪ್ಪೆ ಹಾಕಿಕೊಂಡ ರೈತರು ಉಗ್ಗ ಹಿಡಿದು ಗದ್ದೆಗಳಿಗೆ ತೆರಳಿ, ತೋಟದಲ್ಲಿ ಕಳೆ ಹುಟ್ಟಿ, ಹಿತ್ತಿಲಲ್ಲಿ ಹುಲ್ಲು ಚಿಗುರಿ, ಅಪ್ಪ ಹುಲ್ಲು ಕೊಯ್ದು ತಂದು ಹಾಕಿ, ಅಮ್ಮ ಸೌತೆ-ಚೀನಿ-ಕುಂಬಳ ಬೀಜಗಳನ್ನು ಅಲ್ಲಲ್ಲಿ ಹಾಕಿ... ಓಹೋಹೋ..! ಊರಿನಲ್ಲಿ ಮಳೆಗಾಲ ಎಂದರೆ ಏನೆಲ್ಲ... ಹೊರಗೆ ಜೋರು ಮಳೆಯಾಗುತ್ತಿದ್ದರೆ ಒಳಗೆ ಹಲಸಿನಕಾಯಿ ಹಪ್ಪಳವನ್ನು ಕರಿದುಕೊಂಡೋ, ಗೇರುಬೀಜ ಸುಟ್ಟುಕೊಂಡೋ ಬೆಚ್ಚಗೆ ತಿನ್ನುವುದರಲ್ಲಿರುವ ಸ್ವರ್ಗಸುಖ ಈ ಬೆಂಗಳೂರಿನ ಯಾವ ಡಿಸ್ಕೋಥೆಕ್ಕಿನಲ್ಲಿದೆ?

ಅಂಥಾ ಸುಂದರ 'ಕೈಬರಹ'ದಂತಹ ಊರನ್ನು ಬಿಟ್ಟುಬಂದು ಈ 'ಪ್ರಿಂಟೆಡ್'ನಂತಹ ಬೆಂಗಳೂರಿನಲ್ಲಿ ಬದುಕುತ್ತಿರುವ ನಮ್ಮದು ಇದೆಂತಹ ದುರಾದೃಷ್ಟ... ಊರು, I miss you.