Wednesday, June 16, 2010

ಉದ್ಯಾನದಲ್ಲೊಂದು ಸಂಜೆ..

ಇಂದು ಸಂಜೆ ಹೀಗಾಯಿತು
ಬರಬೇಕಿದ್ದ ಮಳೆ
ಬಾರದೆ ಹೋಯಿತು.

ಉದ್ಯಾನದ ನವಿಲು ಕಾಲಿಗೆ
ಗೆಜ್ಜೆಕಟ್ಟಿ ಇಷ್ಟಗಲ
ಗರಿಬಿಚ್ಚಿ ಕುಣಿದಿದ್ದಷ್ಟೇ ಬಂತು,
ಯಾವುದೋ ಗಾಳಿಗೆ ತೇಲಿ ಮೋಡ
ದೂರ ಹೋಗಿಬಿಟ್ಟಿತು.
ಕೊನೆಗದು ಪಾಪ ಸುಸ್ತಾಗಿ
ಇದ್ದ ಎರಡು ಕಾಳು ತಿಂದು
ನಾಲ್ಕು ಕೊಕ್ಕು ನೀರು ಕುಡಿದು
ಕಣ್ಮುಚ್ಚಿ ಮಲಗಿಬಿಟ್ಟಿತು.

ಅಷ್ಟರಮೇಲೇ ಶುರುವಾದದ್ದು ಇವೆಲ್ಲ ರಗಳೆ:
ಅವಳ ಕಣ್ಣನ್ನು ಕೊಳಕ್ಕೆ
ಹೋಲಿಸುವ ಬದಲು ಬಾಯ್ತಪ್ಪಿ
ಹೊಂಡಕ್ಕೆ ಹೋಲಿಸಿದ್ದಕ್ಕೆ
ಶರಂಪರ ಕಿತ್ತಾಡಿ ರಂಪ.
ಹೋಗಿದ್ದು ಕೊಂಚ ತಡವಾಗಿತ್ತಷ್ಟೇ,
ಅಷ್ಟಕ್ಕೇ
ಕಿತ್ತಿಟ್ಟುಕೊಂಡಿದ್ದ ಹೂಗಿಡದ
ಪಕಳೆಗಳನ್ನೆಲ್ಲ ಮೈಮೇಲೆ ಅರ್ಚಿಸಿ
ಓಟ.

ಹೂಮಳೆ ತೋಯ್ದ ರೋಮಾಂಚನಕ್ಕೆ
ಹೋದರೆ ಅಟ್ಟಿಸಿಕೊಂಡು, ಮಲಗಿದ್ದ
ನವಿಲಿಗೆ ಎಚ್ಚರಾಗಿ ಬೆದರಿ
ಗರಿ ಫಡಫಡಿಸಿದ ಗಾಳಿಗೆ
ಮೋಡ ಮಳೆಯಾಗಿ ಒದ್ದೆ ತೊಪ್ಪೆ.

ಈಗ ನವಿಲ ಗೂಡಿನಲ್ಲಿ
ಮೂವರು: ಚಳಿಯಿಂದ ರಕ್ಷಣೆಗೆ
ಒಂದಕ್ಕೆ ರೆಕ್ಕೆ, ಇನ್ನೆರಡಕ್ಕೆ ತೆಕ್ಕೆ.
ತಬ್ಬಿ ನಿದ್ದೆ.

[02 ಡಿಸೆಂಬರ್, 2009]

Monday, June 07, 2010

ರಂಗೋಲಿ


ಕಾವಲಿಯ ಮೇಲೆ ಹಾಕಿದ ರವೆ
ದೋಸೆಯಂತೆ ಅದನ್ನೂ ನೀಟಾಗಿ ಸಟ್ಟುಗದಿಂದ
ಎತ್ತುವಂತಿದ್ದರೆ ಮಡಿಚಿ
ಚೀಲದಲ್ಲಿಟ್ಟು ಒಯ್ಯುತ್ತಿದ್ದೆ ನಾನು..

ತಾಸುಗಟ್ಟಲೆ ಕೂತು ತದೇಕ,
ಜತನದಿಂದ ಹಾಕಿದ್ದ ಆ ರಂಗೋಲಿ*
ಆಮೇಲೆ ಏನಾಯಿತು?
ಬಿಳಿ ಬಣ್ಣದ ಪುಡಿಹಾಸ ಮೇಲೆ
ಕೈಕೈ ಹಿಡಿದಾಡುತ್ತಿದ್ದ ಪುಟ್ಟ ಬಾಲಕರು
ಇನ್ನೂ ಎಷ್ಟು ಹೊತ್ತು ಹಾಗೇ ಇದ್ದರು?
ಹಸಿಹಸಿರು ಗಿಡದ ರೆಂಬೆ
ಬಾಡಲಿಲ್ಲ ತಾನೆ?
ಎವೆಯಿಕ್ಕದ ಗೂಬೆಯ ಕಣ್ಣನ್ನು
ಹಾರಿ ಬಂದ ಹರಾಮಿ ಧೂಳು ಮುಚ್ಚಿತಾ?
ಕಳೆಗುಂದಿದವೇ ಚಂದ್ರ-ಚುಕ್ಕಿ
ಕರಗಿದಂತೆ ಇರುಳು?

ಮರುಮುಂಜಾನೆ ಕಸ ಗುಡಿಸಲು ಬಂದ
ಕೆಲಸದವಳು ನಿಂತಳೇ ಬೆರಗಾಗಿ?
ಗೂಬೆ-ಗಿಡ-ಹುಡುಗರ ಹೆಡೆಮುರಿ
ಕಟ್ಟಿ ಒಯ್ಯುವ ಮುನ್ನ ಅವಳು,
ಪೊರಕೆ ಮೈತಡವಿದ ಕ್ಷಣ ಆದ
ಕಚಗುಳಿಗೆ ರಂಗೋಲಿಯ ಕಣಗಳು
ನಾಚಿದವಾ?
ಬದುಕಲ್ಲಿ ಖುಶಿ ಕ್ಷಣಿಕ ಎಂದು
ಬಿಕ್ಕಳಿಸಿತಾ ಮಿಶ್ರಬಣ್ಣ?

ಬಣ್ಣಗಳು ಬಿಡಿಬಿಡಿಯಾಗಿದ್ದರಷ್ಟೇ ಅರ್ಥ.
ಕಲಸಿಬಿಟ್ಟರೆ ಎಲ್ಲಿ ರಂಗೋಲಿ?


ಎಂದು ಬರೆದಿಟ್ಟಿದ್ದ ನನ್ನ ಕವನ ಓದಿದ ಗೆಳೆಯ,
"ಅಯ್ಯೋ ಭಾವುಕ ಹುಚ್ಚನೇ,
ವರುಷಗಟ್ಟಲೆ ಜೋಪಾನ ಮಾಡಿದ್ದ ನನ್ನ ಹುಡುಗಿಗೆ
ನಿನ್ನೆ ಯಾರೊಂದಿಗೋ ಮದುವೆಯಾಯ್ತು"
ಎಂದು, ನಗುತ್ತ ಹೊರಟುಹೋದ.

--
* ಛಂದ ಪುಸ್ತಕ, ತನ್ನ ಸ್ಪರ್ಧೆಯಲ್ಲಿ ಗೆದ್ದ ಮುಖಪುಟವನ್ನು ಪುಸ್ತಕ ಬಿಡುಗಡೆ ಸಮಾರಂಭದ ದಿನ ರಂಗೋಲಿ ಹಾಕಿಸಿತ್ತು.