Thursday, March 26, 2009

ಹಾರಯಿಕೆ

ಫಾಲ್ಗುಣದ ಕೊನೆ ಸಂಜೆ, ಹೊತ್ತು ಮುಳುಗುವ ಸಮಯ,
ರವಿ ಕಂಡು ಕುಂಕುಮಕೆ ಹೊಟ್ಟೆಕಿಚ್ಚು;
ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು ||

ಇರುಳು ಇಳಿಯಲೆಬೇಕು, ಹಗಲು ಅಳಿಯಲೆಬೇಕು,
ಇಲ್ಲದಿರೆ ಇಳೆಗಿಲ್ಲ ನಾಳೆಯಾ ನಲಿವು;
ಮುಗಿದು ಚಂದ್ರನ ಪಾಳಿ, ತಾರೆ ತೆರೆಮರೆ ಸರಿದು
ಅರಳಿದರೆ ಅರುಣಪ್ರಭೆ ಮಧುಮಾಸವು ||

ಚೈತ್ರವೆಂದರೆ ಹಸಿರು, ನಭದಲ್ಲಿ ಮೇಘಗಳು,
ಝರಿನೀರು ಜರಿದು ಧರೆ ಧುಮುಕುವಾ ಸದ್ದು;
ಎಲ್ಲೊ ತಪ್ಪಲಿನಲ್ಲಿ ನಾಟ್ಯವಾಡಲು ನವಿಲು,
ಸೆಟೆದು ನೂಪುರ ಸೆರಿಗೆ ಮೈಕೊಡವಿ ಸಜ್ಜು ||

ಸಿರಿಸೂರೆಯಾಗಿರುವ ಮಾಮರದ ಎಲೆಮರೆಯೇ
ಪರಪುಟ್ಟ ಹಕ್ಕಿಗೆ ಸರಿಯಾದ ಗೊತ್ತು;
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||

ಋತುರಾಜನಾರ್ಭಟದಿ ಕಳೆದು ಕಹಿಯೆಲ್ಲ
ಹಿತಭಾವ ಹೃದಯದಲಿ ನೆಲೆಯೂರಲಿ;
ಜೀವಜೀವಪ್ರೀತಿ ಎಂದೂ ಮುಗಿಯದೆ ಇರಲಿ
ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ ||

Monday, March 16, 2009

ಇವತ್ತು ಬರೆಯದೇ ಇರಲಾರೆ..

"ಭಾಗ್ಯನ್ನ ಮನೆ ತುಂಬಿಸ್ಕ್ಯಂಡಾತು" ಎಂದ ಅಮ್ಮನ ದನಿಯಲ್ಲಿ ಸಂಭ್ರಮವಿತ್ತು. 'ಇಪ್ಪತ್ತೈದು ವರ್ಷದ ಹಿಂದೆ ನೀನು ಈ ಮನೆ ತುಂಬಬೇಕಾದ್ರೂ ಇಷ್ಟೇ ಸಂಭ್ರಮವಿತ್ತಾ ಅಮ್ಮಾ?' ಅಂತ ಕೇಳಬೇಕು ಅಂದುಕೊಂಡೆ, ಅಷ್ಟೊತ್ತಿಗೆ "ಒಲೆ ಮೇಲೆ ಎಂತೋ ಇಟ್ಟಿಕ್ ಬೈಂದಿ.. ಅಪ್ಪನ್ ಹತ್ರ ಮಾತಾಡ್ತಿರು" ಅಂತಂದು, ಅಪ್ಪನಿಗೆ ಫೋನು ಕೊಟ್ಟು ಅಡುಗೆ ಮನೆಗೋಡಿದಳು ಅಮ್ಮ. ಏನೆಲ್ಲ ಕೇಳಬೇಕೆಂದುಕೊಂಡಿದ್ದೆ ಅಮ್ಮನ ಬಳಿ, ಕೇಳಲಾಗಲೇ ಇಲ್ಲ.

ಹಾಗೆ ಒಲೆ ಮೇಲಿಟ್ಟ ಪಾತ್ರೆ ನೆನಪಿಸಿಕೊಂಡು ಒಳಗೋಡಿದ್ದು ಅದೆಷ್ಟು ಸಲವೋ ನನ್ನಮ್ಮ... 'ಅಯ್ಯೋ ಉಕ್ಕಿದರೆ ಉಕ್ಕಿತು, ಸೀದರೆ ಸೀಯ್ತು, ಹೊತ್ತಿದರೆ ಹೊತ್ತಿತು, ಆಮೇಲ್ ನೋಡ್ಕೊಂಡ್ರಾಯ್ತು; ಫಸ್ಟು ಪಿಚ್ಚರ್ ನೋಡು, ಇಲ್ಲಿ ಬಾ ಕೂತ್ಕೋ' ಎಂಬ ನಮ್ಮ ಮಾತು ಅವಳು ಎಂದಾದರೂ ಕೇಳಿದ್ದಿದೆಯಾ? ಅವಳ ಕಾಳಜಿಗೆ ಎಣೆಯಿಲ್ಲ.. ಅಡುಗೆ ಮನೆಯಲ್ಲಿ ಹೊಳೆಯುವ ಪ್ರತಿ ದಬರಿ, ಪ್ರತಿ ಸೌಟು, ಪ್ರತಿ ಲೋಟ, ಪ್ರತಿ ಚಮಚಕ್ಕೂ ಗೊತ್ತು ಅದು. ಕೇಳಿ ನೋಡಿ ಬೇಕಿದ್ದರೆ.

ಆದರೂ... ಇಂಥದ್ದೊಂದು ಆಸ್ತೆಯನ್ನು, ಇಂಥದ್ದೊಂದು ಪ್ರೀತಿಯನ್ನು ಅದು ಹೇಗೆ ತಾನೆ ರೂಢಿಸಿಕೊಂಡೆ ಅಮ್ಮಾ? ಅಥವಾ, ಅದು ಹೆಣ್ಣುಮಕ್ಕಳ ರಕ್ತದಲ್ಲೇ ಇರುತ್ತದಾ? ಇದು ನಮ್ಮ ಮನೆ, ಇವು ನಮ್ಮ ಮನೆಯ ವಸ್ತುಗಳು, ಇವರು ನಮ್ಮವರು -ಎಂದೆಲ್ಲ ಗುರುತಿಸಿಕೊಂಡು, ಗಟ್ಟಿ ಮಾಡಿಕೊಂಡು, ಇವಕ್ಕೆಲ್ಲಾ ಹೊಂದಿಕೊಂಡು, ಇವನ್ನೆಲ್ಲ-ಇವರನ್ನೆಲ್ಲ ಸಲಹುವ ಈ ಗುಣ ಹೇಗೆ ಬಂತದು ನಿಂಗೆ? ಎಷ್ಟು ದಿನ ತಗೊಂಡೆ ಕಲಿಯಲು: ಈ ಮನೆಯ ಸಂಪ್ರದಾಯಗಳು, ಅಡುಗೆಯ ರುಚಿ, ಯಜಮಾನರ ಬೇಕು-ಬೇಡಗಳು, ಮಾವನ ಸಿಡಿಮಿಡಿಗೆ ಕಾರಣಗಳು, ಅತ್ತಿಗೆಯರ ಗಮನಿಸುವಿಕೆ - ಅತ್ತೆಯ ಜೋರುಬಾಯಿಗಳ ಜತೆಗೇ ನಿನ್ನನ್ನು ನೀನು ಸ್ಥಾಪಿಸಿಕೊಳ್ಳಬೇಕಾದ ಅನಿವಾರ್ಯತೆ... ಹೆಪ್ಪಿಗೆ ಎಷ್ಟು ಮಜ್ಜಿಗೆ ಬಿಡಬೇಕು, ಬೆಳಗ್ಗೆ ಬೆಡ್‍ಕಾಫಿಗೆ ಹಾಲೆಷ್ಟು ಎತ್ತಿಡಬೇಕು, ಸಾಕಿದ ನಾಯಿಯ ತಟ್ಟೆಗಿಷ್ಟು ಅನ್ನ ಹಾಕಬೇಕು, ಸದ್ದಾಗದಂತೆ ಹಾಕಿಕೊಳ್ಳಬೇಕು ಕೋಣೆಯ ಬಾಗಿಲ ಚಿಲಕ, ಏಳಬೇಕು ಎಲ್ಲ ಏಳುವ ಮುನ್ನ, ಬಳಿದ ಅಂಗಳದಲ್ಲಿ ದಿನಕ್ಕೊಂದು ಚುಕ್ಕಿರಂಗೋಲಿ, ಗುಡಿಸಿ ಪುಟ್ಟ ಮನೆ - ಜೋಡಿಸಿಟ್ಟು ಎಲ್ಲ ಅಚ್ಚುಕಟ್ಟಾಗಿ, ಎಷ್ಟೆಂದರೂ ತವರಿನದೆಂತನಿಸದ ಬಚ್ಚಲಿನಲ್ಲಿ ಸ್ನಾನ, ಪೂಜೆಯ ಸಮಯಕ್ಕೊಂದು ಹಾಡು, ಹೊತ್ತಿಗೆ ಸರಿಯಾಗಿ ಅಡುಗೆ, ಹೊಸ ಪರಿಚಯದ ಪಕ್ಕದ ಮನೆಯವಳ ಜೊತೆ ಕಳೆದೂ ಸಮಯ, ಇಳಿದರೆ ಸಂಜೆಯಲೆ ರಾತ್ರಿ -ಮೌನ ಸಮ್ಮತಿ.

ಎಷ್ಟು ಮಾಗಿ, ಎಷ್ಟು ಚಳಿ, ಎಷ್ಟು ಮಳೆಗಾಲ, ಅದೆಷ್ಟು ದಾಹ ನೀಗದ ಬೇಸಗೆ, ಇದ್ದಕ್ಕಿದ್ದಂತೆ ಬಂದ ಹಳೇಮಳೆ, ತವರ ನೆನಪು, ಗುಡುಗು, ಅಪ್ಪುಗೆ, ರಾತ್ರಿ, ಕತ್ತಲೆ, ಮುನಿಸು, ತಣಿಸು, ಬೆರಗು, ಕನಸು, ಬೆಳಗು.. ಮೊದಲ ಬಾರಿ ಸಾರಿಗೆ ಉಪ್ಪು ಜಾಸ್ತಿಯಾದಾಗ, ಅದು ಹೇಗೆ ಸಹಿಸಿಕೊಂಡೆ ಅಪ್ಪ ಸಿಡಿಗುಟ್ಟಿದ್ದು? ಮೊದಲ ಬಾರಿ ತನಗಾಗದವರಿಗೆ ನೀನೇನೋ ಕೊಟ್ಟೆ ಅಂತ ಅಜ್ಜಿ ಕೋಪ ತೋರಿದಾಗ ಬೆವರಿದ ನೀನು ಅದು ಹೇಗೆ ಕರಗದೇ ಉಳಿದೆ? ಮೊದಲ ಬಾರಿ ಪೂಜೆಯ ಸಮಯಕ್ಕೆ ದೇವರ ದೀಪ ಹಚ್ಚಿರಲಿಲ್ಲಾಂತ ಅಜ್ಜ ಬಾಯಿ ಮಾಡಿದಾಗ ನೀನು ಸುರಿಸಿದ ಕಣ್ಣೀರು ನೆಲದಲ್ಲಿ ಹಿಂಗಿ ಎಷ್ಟಾಳಕ್ಕೆ ಇಳಿದಿರಬಹುದು ಈಗ?

ಹೇಳು: ತಿಂಗಳು ನಿಂತು, ವಾಕರಿಕೆ ಶುರುವಾದಾಗ ನಿನ್ನ ಹೃದಯದಲ್ಲಿ ಮಿಡಿದ ಮೊದಲ ಭಾವ ಯಾವುದು..? ತುಂಬಾ ಕಷ್ಟ ಕೊಟ್ಟೆನಾ ಅಮ್ಮಾ ನಾ ನಿನ್ನ ಹೊಟ್ಟೆಯಲ್ಲಿದ್ದಾಗ? ಒದ್ದೆನಾ ನಿನಗೆ? ತಿಂದಿದ್ದೆಲ್ಲಾ ವಾಂತಿಯಾಗುತ್ತಿತ್ತಂತೆ.. ಹಣುಕಿದ ನನ್ನ ಅತ್ತೆ ನಕ್ಕಳಂತೆ.. ತವರಿಗೆ ಸುದ್ದಿ ಮುಟ್ಟಿಸಿದ್ಯಾರು? ಬಂದನಾ ಮಾವ ತಕ್ಷಣ ಓಡೋಡಿ- ತಂಗಿಯನ್ನು ಕಾಣಲು? ಅಣ್ಣ ಬಂದಿದ್ದಾನೆಂದು ಹೆಚ್ಚು ಸಂಭ್ರಮಿಸಲು ಹೋಗಿ ಅಜ್ಜಿಯ ದೊಡ್ಡ ಕಣ್ಣುಗಳ ನೋಟಕ್ಕೆ ಗುರಿಯಾದೆಯಾ? ಹೊಟ್ಟೆಯೊಳಗೆ ಬೆಳೆಯುತ್ತಿದ್ದಾಗ ನಾನು, ಕೆಮ್ಮಣ್ಣು ತಿನ್ನುವ ಬಯಕೆಯಾಯ್ತಾ? ಎಷ್ಟು ನೋವನುಭವಿಸಿದೆ ನನ್ನ ಭುವಿಗೆ ತರಲು? ಕೈತುತ್ತು ಬೇಡವೆಂದು ದೂಡಿದಾಗ ಚಂದಿರನ ಕರೆದದ್ದು ನೀನೇನಾ? ಎದೆಹಾಲ ಸವಿ, ನಿನ್ನ ಮಡಿಲ ಬೆಚ್ಚನೆ ಅನುಭವ, ಮೆತ್ತನೆ ತೊಟ್ಟಿಲ ತೂಗು, ಲಾಲಿಯ ಗಾನದ ಲಹರಿ, ನಿನ್ನ ಮೈಮೇಲೇ ಉಚ್ಚೆ ಹೊಯ್ದದ್ದು... ಊಹೂಂ, ಒಂದೂ ನೆನಪಿಲ್ಲ ನನಗೆ. ಗೌರಿ ಎಂಬ ಹೆಸರಿನ ಹುಡುಗಿ ಬೆಂಕಟವಳ್ಳಿ ಎಂಬ ಹೆಸರಿನ ಗ್ರಾಮದಲ್ಲಿ ಬಿರಿದರಳಿ ಹಸಿಗನಸುಗಳ ಕಂಡು ಮಾಗಿ ಬೆಳೆದು ದೊಡ್ಡೇರಿ ಎಂಬೂರಿನ ಶ್ರೀಧರಮೂರ್ತಿ ಎಂಬ ಹುಡುಗನಿಗೊಲಿದು ಲಗ್ನವಾಗಿ ಬಂದು ಇಂದಿಗೆ ಇಪ್ಪತ್ತೈದು ವಸಂತಗಳು ಆಗಿಹೋದವು -ಎಂಬ ಸಂಗತಿ ಇಷ್ಟೆಲ್ಲಾ ಕಲ್ಪಿಸಿಕೊಳ್ಳುವಂತೆ ಮಾಡುತ್ತಿದೆ ಅಷ್ಟೇ..

ಒಂದು ನಿಮಿಷ ಅಪ್ಪಾ, ಫೋನಿಡಬೇಡ.. ಮಾತನಾಡುವುದಿದೆ ನಿನ್ನ ಬಳಿಯೂ.. ಅಮ್ಮನೇ ಆಗಿದ್ದಳಾ ನಿನ್ನ ಕನಸು? ಹುಡುಗಿ ನೋಡಿ ಬಂದ ರಾತ್ರಿ ಕೂತು ಬರೆದೆಯಾ ಕವನ ಎದೆಯಲ್ಲಿ? ಅಕ್ಷತಾವರ್ಷದಲಿ ತೋಯುತ್ತ ಕಟ್ಟುವಾಗ ತಾಳಿ, ಓಲಗದ ದನಿ ಝೇಂಕಾರವಾಗಿತ್ತಾ? ಮನೆಗೆ ಬಂದ ಹುಡುಗಿ ಬಡತನದ ಚಾಪೆಗೂ ಹೊಂದಿಕೊಳ್ವೆನೆಂದಾಗ ಸೆರೆಯುಬ್ಬಿಬಂತಾ? ಹೌದು ಹೌದು, ಇವಳೇ ನನ್ನವಳು ಎನ್ನಿಸಿತಾ? 'ಅಮ್ಮ ಸ್ವಲ್ಪ ಜೋರು, ಏನಾದ್ರೂ ಅಂದ್ರೆ ಬೇಜಾರಾಗ್ಬೇಡ' ಅಂತ ಎಷ್ಟು ಸಣ್ಣ ದನಿಯಲ್ಲಿ ಹೇಳಿದೆ? ಪೇಟೆಯಿಂದ ತಂದು ಕದ್ದು-ಮುಚ್ಚಿ ಕೊಟ್ಟ ಮೊದಲ ವಸ್ತು ಯಾವುದು? ಥೇಟರಿಗೆ ಹೋಗಿ ಒಟ್ಟಿಗೆ ನೋಡಿದ ಮೊದಲ ಸಿನಿಮಾ ಯಾವುದು? ತವರಿಂದ ತಂದ ಹೂಗಿಡವನ್ನು ನೆಡಬೇಕೆಂದಾಗ ಬುಟ್ಟಿಯಲ್ಲಿ ಗೊಬ್ಬರ ಹೊತ್ತುತಂದು ಕೊಟ್ಟೆಯಂತೆ ಅಂಗಳಕ್ಕೆ? ಅದರಲ್ಲರಳಿದ ಮೊದಲ ಹೂವು ಮುಡಿದಾಗ ಮಡದಿ, ತುಂಬ ಚಂದವೆನಿಸಿದ್ದು ಅವಳೋ ಅಥವಾ ಅವಳ ನಾಚಿಕೆಯೋ? ಅವಳೊಳಗೂ ನಿನ್ನದೊಂದು ಹೂವರಳಿರುವ ಸುದ್ದಿ ತಿಳಿದಾಗ, ಆ ಮೊದಲ ಸಿನಿಮಾದಲ್ಲಿ ನಾಯಕ ಎತ್ತಿಕೊಂಡಂತೆಯೇ ಎತ್ತಿಕೊಳ್ಳಬೇಕಿನಿಸಿತಾ ಅಮ್ಮನನ್ನು?

ನಾನು ಹುಟ್ಟಿದಾಗ, ಯಾರೋ 'ಥೇಟ್ ಅಪ್ಪಂದೇ ಮುಖ' ಎಂದಾಗ, ಎಷ್ಟು ಅಪ್ಪ ಅಪ್ಪ ಅನ್ನಿಸಿರಬಹುದು ನಿನಗೆ.. ಮೊದಲ ಬಾರಿ ನಾನು 'ಪ್ಪ' ಅಂತ ತೊದಲಿದಾಗ ಹಿಗ್ಗಿ ಎಷ್ಟೆತ್ತರಕ್ಕೆ ಎತ್ತಿಕೊಂಡೆ ನನ್ನ? ನಿನಗಿಲ್ಲದಿದ್ದ ಸೌಭಾಗ್ಯವೆಲ್ಲ ನನಗೆ ದೊರಕಲಿ ಎಂದು ಎಲ್ಲೆಲ್ಲೋ ಸಾಲ ಮಾಡಿ ದುಡ್ಡು ಹೊಂದಿಸಿ ಯುನಿಫಾರಂ ಹೊಲಿಸಿ, ಜಾಮಿಟ್ರಿ ಬಾಕ್ಸ್ ಕೊಡಿಸಿ, ಶಾಲೆಗೆ ಸೇರಿಸಿದ ಶ್ರಮಕ್ಕೆ 'ನಿಮ್ ಮಗ ಓದೋದ್ರಲ್ಲಿ ಸಖತ್ ಜೋರಿದಾನೆ' ಎಂಬ ಟೀಚರ್ರ ಪ್ರಶಂಸೆ ಮತ್ತು ವರ್ಷದ ಕೊನೆಯ 'ಕ್ಲಾಸಿಗೇ ಫಸ್ಟ್' ಮಾರ್ಕ್ಸ್ ಕಾರ್ಡ್ ಸಾಟಿಯಾ? ಊಹೂಂ.. ನೀನು ನನಸು ಮಾಡಿಕೊಳ್ಳಲಾಗದ ಕನಸುಗಳನ್ನು ನನ್ನಲ್ಲಿ ಬಿತ್ತಿ ಚಿಗುರಿಸಿ ಅವು ಸಾಕಾರಗೊಳ್ಳುತ್ತಾ ಹೋಗುವುದನ್ನು ಕಂಡು ಖುಶಿಗೊಂಡೆಯಾ? ನನ್ನನ್ನು ಬೆಂಗಳೂರಿಗೆ ಕಳುಹಿಸುವಾಗ ನಿನಗಾದ ಕಳವಳವೆಷ್ಟು? 'ಕೆಲಸ ಸಿಗ್ತು' ಅಂತ ನಾ ಫೋನಲ್ಲಿ ತಿಳಿಸಿದಾಗ ನಿನಗಾದ ನಿರಾಳವೆಷ್ಟು? ನನ್ನ ಮೊದಲ ಕತೆ ಪ್ರಕಟವಾದಾಗ ಹೇಗೆ ಪ್ರತಿಕ್ರಿಯಿಸಿದೆ? ನನ್ನ ಮೊದಲ ಪುಸ್ತಕವನ್ನು 'ಮಗ ಬರ್ದಿದ್ದು' ಅಂತ ಎಷ್ಟು ಜನಕ್ಕೆ ತೋರಿಸಿದೆ?

ಅಮ್ಮಾ, ಹೊರಬೈಲಿನಿಂದ ಸೈಕಲ್ಲಿನಲ್ಲಿ ಬರುತ್ತಿದ್ದ ಅಪ್ಪ ದಾರಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾನೆ ಎಂಬ ಸುದ್ದಿ ಕೇಳಿ ಎಷ್ಟು ಜೋರಾಗಿ ಓಡಿದೆ ಅಲ್ಲಿಗೆ? ರಕ್ತ ಸೋರುವ ಅವನ ಹಣೆ ಕಂಡಾಗ ನಿನಗೂ ತಲೆಸುತ್ತಿ ಬಂತಲ್ಲ.. ಕೊಟ್ಟಿಗೆಮನೆಗೆ ಬೆಂಕಿ ಬಿದ್ದಾಗ ಮೊದಲು ಓಡಿ ದನಕರುಗಳ ಹಗ್ಗ ಕತ್ತರಿಸಿ ಅವನ್ನು ಹೊರಗೋಡಿಸಿ ಸಮಯಪ್ರಜ್ಞೆ ತೋರಿದ್ದೂ ನೀನೇ ಅಲ್ಲವಾ? ಅಜ್ಜಿ ಹಾಸಿಗೆ ಹಿಡಿದಾಗ ಅವಳ ಸೇವೆ ಮಾಡುವುದು ಸೊಸೆಯ ಕರ್ತವ್ಯ ಎಂಬಂತೆ ನಡೆದುಕೊಂಡೆಯಲ್ಲ.. ಅವಳು ತೀರಿಕೊಂಡಾಗ, ಇನ್ನು ನೀನೇ ಈ ಮನೆಯನ್ನು ಸಂಭಾಳಿಸಬೇಕು ಎಂಬ ಸತ್ಯವನ್ನು ಹೇಗೆ ಮನದಟ್ಟು ಮಾಡಿಕೊಂಡೆ? ಅಪ್ಪಾ, ಜೋರು ಜ್ವರ ಬಂದ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತಾನೂ ಬರುತ್ತೇನೆಂದು ಅಂಜುಮೋರೆಯಲ್ಲಿ ಹೇಳಿದ ಅಮ್ಮನನ್ನು ಹೇಗೆ ಸಮಾಧಾನಿಸಿದೆ? ನೆಂಟರ ಮನೆ, ಯಕ್ಷಗಾನ ತಾಳಮದ್ದಲೆ, ಬೆಂಗಳೂರು -ಅಂತ ಎಲ್ಲೇ ಒಂದು ರಾತ್ರಿ ಹೊರಗೆ ಉಳಿಯಬೇಕಾದ ಸಂದರ್ಭ ಬಂದಾಗಲೂ ಅಮ್ಮನಿಗೆ ಫೋನ್ ಮಾಡಿ ತಿಳಿಸುವುದನ್ನು ಮರೆತೆಯಾ? ಒಮ್ಮೆಯಾದರೂ..?

ಕೆ‍ಎಸ್‍ನ ಬರೆದರು ಕವಿತೆ:

ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ?

ಇಪ್ಪತ್ತೈದು ವರ್ಷಗಳ ಹಿಂದೆ ಅಮ್ಮ ನಮ್ಮನೆಗೆ ಬಂದ ಹಾಗೇ, ಇವತ್ತು ಮತ್ತೊಬ್ಬಳು ಬಂದು ಸೇರಿದಳಂತೆ ನಮ್ಮನೆಗೆ.. ಹೆಸರು ಭಾಗ್ಯ.. ಅದು ಅಜ್ಜನ ಮನೆಯಿಂದ ನಮ್ಮನೆಗೆ ಬಂದ ದನವಿನ ಕರು.. ಈ ಇಪ್ಪತ್ತೈದು ವರ್ಷಗಳಲ್ಲಿ ನಮ್ಮಿಬ್ಬರ ಮನೆಗಳ ಮಧ್ಯೆ ಹೀಗೆ ಅದೇನೇನು ಬಂದು-ಹೋಗಿವೆಯೋ.. ವಿನಿಮಯಗಳಾಗಿವೆಯೋ.. ಪ್ರೀತಿಗೆ ಹೇಗೆ ಹಚ್ಚೋಣ ಲೆಕ್ಕ? ಮದುವೆಯೆಂಬುದು ಬರೀ ಒಂದು ಗಂಡು-ಹೆಣ್ಣಿನ ನಡುವಿನದಲ್ಲವಷ್ಟೇ? ದಾಂಪತ್ಯವೆಂಬುದು ಬಂಧವೇ ಆದರೂ ಅದರಲ್ಲಿ ಪ್ರೇಮವೊಂದು ಇದ್ದರೆ ಬಾಳೆಷ್ಟು ಸುಂದರ..

ಭಾಗ್ಯನನ್ನು ಮನೆತುಂಬಿಸಿಕೊಂಡ ಖುಶಿಯಲ್ಲಿದ್ದಾರೆ ಅಲ್ಲಿ ಅಮ್ಮ-ಅಪ್ಪ.. ಸುದ್ದಿ ಕೇಳಿದ ನನಗೂ ಏನೆಲ್ಲ ನೆನಪಾಗಿ ತುಂಬಿಬಂದಿದೆ ಮನಸು.. ಯಾಕೋ, ಕಣ್ಣೂ.

[15.03.2009; ಮಧ್ಯಾಹ್ನ 12:30]