Wednesday, April 22, 2020

ಬೇರೆ ವಿಶೇಷಗಳೇ ಇಲ್ಲದ ದಿನಗಳಲ್ಲಿ..


ಪ್ರಿಯ ದೋಸ್ತಾ,

ನಾನೂ-ನೀನೂ ಒಟ್ಟಿಗೇ ಈ ನಗರಕ್ಕೆ ಬಂದಿದ್ದು.  ಅರೆಬರೆ ಓದಿಕೊಂಡು, ಹಸಿಬಿಸಿ ಮೆತ್ತಿಕೊಂಡು, ಹುಸಿಧೈರ್ಯ ತುಂಬಿಕೊಂಡು ಮುಖ್ಯ ನಿಲ್ದಾಣದಲ್ಲಿ ಬಸ್ಸಿನಿಂದಿಳಿದಿದ್ದು ಬಗಲ ಚೀಲಗಳ ಸಮೇತ. ಆಗಷ್ಟೆ ತೆರೆದುಕೊಳ್ಳುತ್ತಿದ್ದ ಮುಂಜಾನೆ. ಸೂರ್ಯಕಿರಣಗಳು ನಿಲ್ದಾಣದ ಮೇಲ್ಚಾವಣಿಯ ಚುಂಬಿಸುತ್ತಿದ್ದವು. ಸಿಟಿಬಸ್ಸುಗಳು ದಿನದ ಮೊದಲ ಸುತ್ತಿಗೆ ಹೊರಡಲು ಅಣಿಯಾಗಿದ್ದವು. ಮೂಲೆಯಂಗಡಿಯ ಚಹಾದ ಬೋಗುಣಿಯಿಂದೆದ್ದ ಹಬೆ ಅದರ ಸೊಗಡನ್ನು ಎಲ್ಲೆಡೆ ಹರಡುತ್ತಿತ್ತು. ಹುರುಪಿನಲ್ಲಿದ್ದ ಕಂಡಕ್ಟರು-ಡ್ರೈವರುಗಳು ಅದಾಗಲೇ ಶುರುವಾಗಿದ್ದ ಗಿಜಿಗಿಜಿಯ ಚದುರಿಸುವಂತೆ ತಮ್ಮ ಬಸ್ಸುಗಳ ಹಾದಿಯನ್ನು ಉಚ್ಛಕಂಠದಲ್ಲಿ ಉಚ್ಛರಿಸುತ್ತಾ ಆಹ್ವಾನಿಸುತ್ತಿದ್ದರು.

ಹಾಗೆ ನಾವು ಬಂದಿಳಿದಾಗ ನಮಗೆ ಏನೆಂದರೆ ಏನೂ ಗೊತ್ತಿರಲಿಲ್ಲ. ಮಹಾನಗರ ಎಂದರೇನು, ಸಿಗ್ನಲ್ಲಿನಲ್ಲಿ ರಸ್ತೆ ದಾಟುವುದು ಎಂದರೇನು, ಸಿಟಿಬಸ್ಸುಗಳಲ್ಲಿ ಸಂಚರಿಸುವುದು ಹೇಗೆ, ನಾವಿಳಿಯಬೇಕಾದ ನಿಲ್ದಾಣವ ಪತ್ತೆ ಹಚ್ಚುವುದು ಹೇಗೆ, ಎಲ್ಲಿ ಉಳಕೊಳ್ಳುವುದು, ಕೆಲಸ ಹುಡುಕುವುದು ಹೇಗೆ, ಇಂಟರ್ವ್ಯೂಗಳನ್ನು ಎದುರಿಸುವುದು ಹೇಗೆ, ಸಂಬಳಕ್ಕಾಗಿ ದುಡಿಯುವುದು ಎಂದರೇನು, ಯಾರದೋ ಆದೇಶಗಳನ್ನು ಪಾಲಿಸುತ್ತ ಒಂದು ಸಂಸ್ಥೆಗೆ ನಿಷ್ಠನಾಗಿ ಕೆಲಸ ಮಾಡುವ ಪರಿಯೇನು, ದುಡಿದ ಹಣವನ್ನು ಇಷ್ಟಿಷ್ಟೇ ಖರ್ಚು ಮಾಡುತ್ತಾ ತಿಂಗಳಿಡೀ ಸಂಬಾಳಿಸುವುದು ಹೇಗೆ... ಏನೂ ಗೊತ್ತಿಲ್ಲದೆ ಈ ನಗರಿಗೆ ಬಂದುಬಿಟ್ಟಿದ್ದೆವು. ಅವರಿವರು ಕೊಟ್ಟ ಅಷ್ಟಿಷ್ಟು ಸಲಹೆಗಳು, ಎಲ್ಲೋ ಕೇಳಿದ ಆಣಿಮುತ್ತುಗಳು, ಮತ್ತೆಲ್ಲೋ ಓದಿಕೊಂಡ ಪಾಠಗಳು, ಅಸ್ಪಷ್ಟ ಇಂಗ್ಲೀಷು, ಅರ್ಧಮರ್ಧ ಕಂಪ್ಯೂಟರ್ ನಾಲೆಜ್ಜುಗಳನ್ನು ಎದೆಗವಚಿಕೊಂಡು ಇಲ್ಲಿಗೆ ಪದಾರ್ಪಣೆ ಮಾಡಿದ್ದೆವು.

ಆಮೇಲೆ ಇಲ್ಲಿ ತಿಂಗಳಾನುಗಟ್ಟಲೆ ಅಲೆದಾಡಿ ಕೆಲಸ ಗಿಟ್ಟಿಸಿಕೊಂಡದ್ದು, ನೆಂಟರಿಷ್ಟರ ಮನೆಯಲ್ಲಿ ಉಳಕೊಂಡಿದ್ದು, ನೀನೆಲ್ಲೋ ನಾನೆಲ್ಲೋ ಆದದ್ದು, ಬೆಳಬೆಳಗ್ಗೆ ತರಾತುರಿಯಲ್ಲಿ ಬಸ್ಸು ಹಿಡಿಯಲು ಓಡಿದ್ದು, ಕೆಲಸ ಸರಿಯಾಗಿ ಮಾಡಲು ತಿಳಿಯದೆ ಬೈಸಿಕೊಂಡಿದ್ದು, ಮೊದಲ ಸಂಬಳ ಬಂದಾಗ ಬೀಗಿದ್ದು, ಬಂದ ಸಂಬಳ ಎರಡೇ ವಾರದಲ್ಲಿ ಖಾಲಿಯಾದಾಗ ತತ್ತರಗುಟ್ಟಿದ್ದು, ಮತ್ತೊಬ್ಬರ ನೋಡುತ್ತಲೇ ತಿಳಿಯದ್ದ ಕಲಿತದ್ದು, ಕ್ಲಾಸು-ಕರೆಸ್ಪಾಂಡೆನ್ಸು ಅಂತ ಮತ್ತೇನೇನೋ ಕೋರ್ಸುಗಳ ಮಾಡಿಕೊಂಡಿದ್ದು, ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹಾರಿದ್ದು, ನಿಧಾನಕ್ಕೆ ಬದುಕು ಕಟ್ಟಿಕೊಳ್ಳುತ್ತ ಹೋಗಿದ್ದು...

ಈ ನಗರ ನಮಗೆ ಎಷ್ಟೆಲ್ಲ ಕಲಿಸಿತು. ಪ್ರತಿದಿನವೂ ಹೊಸತನ್ನು ಹೇಳಿಕೊಟ್ಟಿತು. ನಮ್ಮ ಮುಗ್ಧತೆಯ ಕಳೆಯುತ್ತ ಹೋಯಿತು. ಬಿದ್ದೆವು, ಎದ್ದೆವು, ಬೆಳೆಯುತ್ತ ಹೋದೆವು.  ಗಳಿಕೆ, ಉಳಿಕೆ, ವಸ್ತುಗಳು, ವಾಹನಗಳು, ಮದುವೆ, ಮನೆ, ಮಡದಿ, ಮಕ್ಕಳು... ಎಲ್ಲವನ್ನು ಹೊಂದಿದೆವು ಇದೇ ನಗರದಲ್ಲಿ. ಈ ನಗರ ಎಂದಿಗೂ ನಮ್ಮನ್ನು ಉಪೇಕ್ಷಿಸಲಿಲ್ಲ.  

ಈ ನಗರಕ್ಕೆ ನಾವೇನು ಮೊದಲಿಗರಲ್ಲ. ಇದು ಎಲ್ಲರನ್ನೂ ಹೆಚ್ಚುಕಮ್ಮಿ ಹೀಗೆಯೇ ಬೆಳೆಸಿದೆ. ಹೆದರಿ ಹಿಮ್ಮೆಟ್ಟಿ ಹೋದವರು ಇಲ್ಲದಿಲ್ಲ. ಆದರೆ ಇದು ಎಂಥವರಿಗೂ ಧೈರ್ಯ ಹೇಳದೇ ಉಳಿದಿಲ್ಲ. ಹುಮ್ಮಸ್ಸು ತುಂಬುವುದರಲ್ಲಿ ಲೋಪ ಮಾಡಿಲ್ಲ. ಆರ್ತರಾದವರಿಗೆ ಭರವಸೆಯ ಕೈಚಾಚುವುದರಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಗಗನಚುಂಬಿ ಕಟ್ಟಡಗಳಲ್ಲಿ, ಥಳಥಳ ಹೊಳೆವ ಹೊದಿಕೆಯ ಭವನಗಳಲ್ಲಿ, ಇರುವೆ ಸಾಲಿನಂಥ ಟ್ರಾಫಿಕ್ಕಿನಲ್ಲಿ, ಗಿಜಿಗುಟ್ಟುವ ಸಂದಣಿಯಲ್ಲಿ ಉತ್ಸಾಹದ ಬೆಳಕನ್ನೇ ಪ್ರತಿಫಲಿಸಿದೆ. ಉಳ್ಳವರಿಗೆ ಪಂಚತಾರಾ ಹೋಟೆಲುಗಳಲ್ಲೂ, ಭರಿಸಲಾಗದವರಿಗೆ ದರ್ಶಿನಿಗಳಲ್ಲೂ, ಅದೂ ಇಲ್ಲದವರಿಗೆ ಬೀದಿಬದಿಯಲ್ಲೂ ಊಟ ಹಾಕಿದೆ. ವಿಲ್ಲಾಗಳಲ್ಲೋ, ಅಪಾರ್ಟ್‌ಮೆಂಟುಗಳಲ್ಲೋ, ಮಹಡಿಮನೆಗಳಲ್ಲೋ, ಒಂಟಿರೂಮುಗಳಲ್ಲೋ, ಜೋಪಡಿಗಳಲ್ಲೋ, ಫ್ಲೈಓವರ್ ಕೆಳಗಿನ ಅಖಂಡ ನೆಲದಲ್ಲೋ ಮಲಗಿಸಿ ಜೋಗುಳ ಹಾಡಿದೆ. ಛಲ ಬಿಡದವರೆಲ್ಲ ಇಲ್ಲಿ ಹೇಗೋ ಬಚಾವಾಗಿದ್ದಾರೆ.

ಆದರೆ ಇದೇನಾಗಿ ಹೋಯಿತು ಈಗ? ಗ್ರಹಣ ಬಡಿದಂತೆ ಮ್ಲಾನಗೊಂಡಿದೆ ನಗರ. ಕಣ್ಣಿಗೇ ಕಾಣದ ವೈರಾಣುವೊಂದು ಇಡೀ ನಗರದ ಉತ್ಸಾಹವನ್ನು ಆಪೋಶನ ತೆಗೆದುಕೊಂಡಿದೆ. ರಸ್ತೆಗಳು ಖಾಲಿ. ನಿಲ್ದಾಣಗಳು ಖಾಲಿ. ಪಾದಚಾರಿ ಮಾರ್ಗಗಳು ಖಾಲಿ. ಎಂದೂ ತುಂಬಿರುತ್ತಿದ್ದ ಮಾಲುಗಳು, ಥಿಯೇಟರುಗಳು, ಹೋಟೆಲುಗಳು, ಅಂಗಡಿಗಳು ಈಗ ಬಣಬಣ. ಉಪವನದ ಗೇಟು ಹಾಕಲಾಗಿದೆ. ಬಹುಮಹಡಿಯ ವಾಣಿಜ್ಯ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ವೈನ್‌ಸ್ಟೋರಿನ ಶಟರ್ ಎಳೆಯಲಾಗಿದೆ. ಒಳಗಿರುವವರನ್ನೂ ತೋರುತ್ತಿದ್ದ ಕಾಫಿಡೇಗಳ ಗಾಜುಮುಖ ಬಾಡಿದೆ. ಹೊರಗಿರುವವರಿಗೂ ಮನರಂಜನೆಯೊದಗಿಸುತ್ತಿದ್ದ ಎಲೆಕ್ಟ್ರಿಕ್ ಶೋರೂಮುಗಳ ದೊಡ್ಡ ಪರದೆಯ ಟೀವಿಗಳು ಆಫಾಗಿವೆ. ಕೆಳಗಿರುವವರನ್ನು ಮೇಲಕ್ಕೊಯ್ಯುತ್ತಿದ್ದ ಬಜಾರಿನ ಲಿಫ್ಟುಗಳಿಗೆ ಜಂಗು ಹಿಡಿಯುತ್ತಿದೆ. ಸಾಲುದೀಪಗಳ ಮೆರವಣಿಗೆಯಂತೆ ಸಾಗುತ್ತಿದ್ದ ಮೆಟ್ರೋದ ಸುಳಿವಿಲ್ಲ. ಫುಟ್‌ಬೋರ್ಡಿನಲ್ಲಿ ಪಯಣಿಗರ ನೇತಾಡಿಸುತ್ತ ಓಡುತ್ತಿದ್ದ ದೊಡ್ಡ ಬಸ್ಸುಗಳ ಸದ್ದಿಲ್ಲ. ಟಕ್ಕನೆ ತಿರುವಿ ಟಕ್ಕನೆ ನಿಲ್ಲುತ್ತಿದ್ದ ಆಟೋಗಳು ಕಾಣುತ್ತಿಲ್ಲ. ಸ್ಕೈವಾಕುಗಳು, ಅಂಡರ್‌ಪಾಸುಗಳು, ಫ್ಲೈಓವರುಗಳು, ಗ್ರೇಡ್ ಸೆಪರೇಟರುಗಳು, ಜಂಕ್ಷನ್ನುಗಳಲ್ಲಿ ಜನರ ಹಾಜರಾತಿಯೇ ಇಲ್ಲ. ಸಿಗ್ನಲ್ಲಿನ ದೀಪಗಳಿಗೆ ಬಣ್ಣಗುರುಡಾಗಿದೆ.

ಇದು ನಾವು ನೋಡಿದ ನಗರ ಅಲ್ಲವೇ ಅಲ್ಲ. ಹೀಗೆ ವಾರಗಟ್ಟಲೆ-ತಿಂಗಳುಗಟ್ಟಲೆ ಈ ನಗರ ಸ್ಥಬ್ದವಾಗಿದ್ದು ಇಲ್ಲವೇ ಇಲ್ಲ. ಎಂತಹ ಪ್ರಖರ ಬಂದ್ ಆದರೂ, ಯಾವ ಜನನಾಯಕ ಸತ್ತರೂ, ಎಷ್ಟೇ ಬಿಗಿಯ ಕರ್ಫ್ಯೂ ಹಾಕಿದ್ದರೂ ಸಂಜೆಯ ಹೊತ್ತಿಗೆ ನಗರ ದೀಪಗಳನ್ನು ಬೆಳಗುತ್ತಾ ಮತ್ತೆ ಗರಿಗೆದರಿ ನಿಲ್ಲುತ್ತಿತ್ತು. ಪಾನಿಪುರಿ ಅಂಗಡಿಗಳಿಂದ ಪರಿಮಳ ಹೊಮ್ಮುತ್ತಿತ್ತು. ಐಸ್‌ಕ್ರೀಮ್ ಪಾರ್ಲರು ಅರಸಿ ಜೋಡಿಗಳು ನಡೆಯುತ್ತಿದ್ದವು. ಸೇಬುವಿನಂತಹ ಬಲೂನನ್ನು ಬಲಗೈಯಲ್ಲಿ ಚಿಮ್ಮಿಸುತ್ತ ಮಕ್ಕಳು ಬೀದಿಯಲ್ಲಾಡುತ್ತಿದ್ದವು.

ಕನಸಿನಲ್ಲೂ ಊಹಿಸಲಾಗದ ರೀತಿಯಲ್ಲಿ ಭೀತಿಯ ಪೊರೆಯೊಂದು ನಗರವನ್ನು ಆವರಿಸಿಬಿಟ್ಟಿದೆ. ನಮ್ಮನ್ಯಾರು ತಡೆಯಬಲ್ಲರು ಎಂಬ ದರ್ಪದಲ್ಲಿ ಓಡುತ್ತಿದ್ದ ಮನುಷ್ಯನಿಗೆ ತಡೆಯಾಗಿದೆ. ಧಾವಂತವೇ ದಿನಚರಿಯಾಗಿದ್ದವರ ಮುಂದೆ ಗೋಡೆಯೊಂದು ಎದ್ದುನಿಂತಿದೆ.  ವೇಗದೂತರನ್ನೆಲ್ಲ ಒಂದೇ ಹುರಿಯಿಂದ ಕಟ್ಟಿಹಾಕಲಾಗಿದೆ. ಹಣ, ಹುದ್ದೆ, ಹೆಸರು, ಮೇಲುಗೈಗಳ ಹಂಬಲವ ಹೇರಿಕೊಂಡು ನಮ್ಮನ್ನೇ ವಾಹನವೆಂದುಕೊಂಡು ನುಗ್ಗುತ್ತಿದ್ದವರೆಲ್ಲ ನಡುದಾರಿಯಲ್ಲಿ ನಿಂತುಬಿಟ್ಟಿದ್ದೇವೆ ಹಠಾತ್: ಒಂದು ಬೃಹತ್ ಟ್ರಾಫಿಕ್ ಜಾಮಿನಲ್ಲಿ ಸಿಲುಕಿದವರಂತೆ. ಇಲ್ಲಿಂದ ಮುಂದೆ ನೋಡಿದರೆ ತುದಿಯೇ ಕಾಣುತ್ತಿಲ್ಲ. ಜತೆಗೆ ನಮ್ಮ ಹಾಗೆಯೇ ನಿಂತಿರುವ ಇಡೀ ವಿಶ್ವಸಮೂಹ. ಕೆಲವರು ನಮಗಿಂತ ಮುಂದಿರುವಂತೆಯೂ ಹಲವರು ನಮಗಿಂತ ಹಿಂದಿರುವಂತೆಯೂ ಕಾಣುವರು.  ಆದರೆ ಈ ಸರತಿಸಾಲು ಮುಂದುವರೆಯುವಂತೆಯೇ ಕಾಣುತ್ತಿಲ್ಲ.  ಈ ಜಾಮ್ ಕ್ಲಿಯರ್ ಮಾಡಿ ಕೊಡಲು ಯಾವ ಪೊಲೀಸೂ ಬರುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.

ಹಾಗಾದರೆ ಮುಂದೇನು ಕಥೆ?  ಇವೆಲ್ಲ ಎಷ್ಟು ದಿನ? ಹೀಗೆ ಇನ್ನೆಷ್ಟು ಕಾಲ ನಿಂತಿರಲು ಸಾಧ್ಯ? ಈ ದುಸ್ಥಿತಿಗೆ ಕಂಗೆಟ್ಟು, ಊರು ಸೇರಿಕೊಳ್ಳುವ ಸಲುವಾಗಿ, ನೂರಾರು ಮೈಲಿ ನಡೆದು ಸಾಗಿರುವ ದಿನಗೂಲಿ ಕಾರ್ಮಿಕರ ದೃಶ್ಯ ನಮ್ಮ ಕಣ್ಣ ಮುಂದಿದೆ. ದುಡಿಮೆಯಿಲ್ಲದೆ ಹೈರಾಣಾಗಿರುವ ಅದೆಷ್ಟೋ ಕುಟುಂಬಗಳ ಕಥೆ ದಿನದಿನವೂ ಕೇಳಿಬರುತ್ತಿದೆ. ಅವರೆಲ್ಲ ಎಷ್ಟು ದಿನ ತಡೆದಾರು? ನಮ್ಮೆಲ್ಲರನ್ನು ಸಾಕಿ ಸಲಹುತ್ತಿದ್ದ ಈ ನಗರ ನಿಸ್ಸಹಾಕವಾಗಿ ನೋಡುತ್ತಿದೆ. ಇದರ ತಾಯಿಗುಣ ಮುಗಿಯಿತೆ? ನಾವೆಲ್ಲ ನಮ್ಮ ನಮ್ಮ ಊರುಗಳಿಗೆ ಮರಳುವ ಸಮಯ ಬಂದಿತೆ? ಸರಿ, ನಮಗಾದರೆ ವಾಪಸು ಹೋಗಲು ಊರು ಎಂಬುದೊಂದಿದೆ. ಅಂಥದ್ದೊಂದು ಆಯ್ಕೆ ಇಲ್ಲದಿರುವ, ಇಲ್ಲೇ ಹುಟ್ಟಿ ಬೆಳೆದವರ, ಬೇರೂ ಇಲ್ಲದೇ ಇಲ್ಲಿ ಗಟ್ಟಿ ತಳವೂರಲೂ ಆಗಿರದ ಅಬ್ಬೇಪಾರಿಗಳ ಗತಿಯೇನು? ಅವರೆಲ್ಲಿಗೆ ಹೋಗಬೇಕು?

ಊರಿನಿಂದ ಫೋನ್ ಮಾಡಿದಾಗೆಲ್ಲ ಅಮ್ಮ ಕೇಳುತ್ತಾಳೆ: ಮತ್ತೇನು ವಿಶೇಷ?”  ಏನು ಹೇಳಲಿ? ಎಲ್ಲೆಡೆ ಒಂದೇ ಸುದ್ದಿ ಈಗ.  ಬೇರೆ ವಿಶೇಷಗಳೇ ಇಲ್ಲದ ದಿನಗಳು ಇವು... ಟೀವಿ ಹಚ್ಚಿದರೆ ಅದೇ ಸುದ್ದಿ, ಫೋನೆತ್ತಿದರೆ ಅದೇ ಸುದ್ದಿ, ಇಂಟರ್ನೆಟ್ ತೆರೆದರೆ ಅದೇ ಸುದ್ದಿ. ಹೆಚ್ಚು ಹಬ್ಬಿಸುತ್ತಿರುವವರು ಅವರೇ.. ಸರ್ಕಾರದ ಆದೇಶಗಳನ್ನೂ ಪಾಲಿಸುತ್ತಿಲ್ಲ. ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ತಿಲ್ಲ ಯಾಕೆ?”; ಇಪ್ಪತ್ತು ಪರ್ಸೆಂಟ್ ಜನ ಮಾಡ್ತಿರೋ ತಪ್ಪಿಗೆ ಮನೆಯೊಳಗೆ ಕೂತಿರೋ ನಾವು ಎಂಬತ್ತು ಪರ್ಸೆಂಟ್ ಜನ ಯಾಕೆ ಅನುಭವಿಸಬೇಕು?”; ಚೀನಾವೇ ಸೃಷ್ಟಿಸಿದ ವೈರಸ್ ಇದು.. ಇನ್ನು ಮುಂದೆ ಚೀನಾ ತಯಾರಿಸಿದ ವಸ್ತುಗಳನ್ನು ಖರೀದಿಸಬಾರದು”; ತನ್ನ ದೇಶಕ್ಕೆ ಇಷ್ಟೊಂದು ನಷ್ಟ ಉಂಟುಮಾಡಿರೋದಕ್ಕೆ ದೊಡ್ಡಣ್ಣನಿಗೆ ಭಯಂಕರ ಸಿಟ್ಟು ಬಂದಿದೆಯಂತೆ. ಈ ವೈರಸ್ ನಿರ್ಮೂಲವಾಗುತ್ತಿದ್ದಂತೆ ವಿಶ್ವರಾಷ್ಟ್ರಗಳನ್ನೆಲ್ಲ ಒಗ್ಗೂಡಿಸಿ ಚೀನಾ ಮೇಲೆ ಯುದ್ಧ ಮಾಡ್ತಾರಂತೆ”; ಎಕಾನಮಿ ಹತ್ತಿಪ್ಪತ್ತು ವರ್ಷ ಹಿಂದೆ ಹೋಗಿ ಎಷ್ಟೋ ಜನ ಕೆಲಸ ಕಳ್ಕೊಳ್ತಾರಂತೆ.. ಉದ್ಯಮಿಗಳು ಮಣ್ಣು ಮುಕ್ತಾರಂತೆ”; ಇದಕ್ಕೆ ಔಷಧಿ ಬರಲಿಕ್ಕೆ ಇನ್ನೂ ಎರಡು ವರ್ಷ ಬೇಕಂತೆ”;  ನಗರಗಳಲ್ಲಿ ದುಡ್ಡು ಮಾಡೋ ಕಥೆ ಮುಗೀತು. ಇನ್ನೇನಿದ್ರೂ ಹಳ್ಳಿಯ ಬದುಕು, ಕೃಷಿಗೆ ಬೆಲೆ ತರಹೇವಾರಿ ಮಾತುಗಳು, ವಾದಗಳು, ಚರ್ಚೆಗಳು.  ಎಲ್ಲವೂ ಯೋಚನೆಗೆ ಹಚ್ಚುವಂತವೇ. ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುವಂತವೇ.

ದುಡಿಮೆಯಿದ್ದರೆ ನಗರ. ಹಣವಿದ್ದರೆ ನಗರ. ಇಲ್ಲಿ ಕಾಯಕವೇ ಕೈಲಾಸ. ಅದಿಲ್ಲದಿದ್ದರೆ ಇಲ್ಲಿ ಬದುಕುಳಿಯುವುದು ಕಷ್ಟಸಾಧ್ಯ. ಧನಿಕನಿಗೂ ಹತ್ತಾರು ಬಾದ್ಯತೆಗಳು. ಕೂಡಿಟ್ಟ ಹೊನ್ನು ಎಷ್ಟು ದಿನವೂ ಬಾಳದು. ಬಡವನಂತೆ ಧನಿಕನಿಗೂ ಇದು ತಟ್ಟಿಯೇ ತಟ್ಟುತ್ತದೆ. ಹೀಗಿರುವಾಗ ಎಲ್ಲರ ಸಹನೆಯ ಕಟ್ಟೆಯೂ ಒಡೆಯುವುದು ನಿಶ್ಚಿತ.

ಇಲ್ಲ, ಇದು ಸರಿಹೋಗಲೇ ಬೇಕು. ಯಾವ ರುಜಿನಕ್ಕೂ ಹೆದರಿ ಮನೆಯೊಳಗೆ ಕೂತಿರಲಾಗದು ದೀರ್ಘಕಾಲ. ಇದನ್ನು ನಾವು ಎದುರಿಸಲೇಬೇಕು. ನಿಂತಿರುವ ಈ ನಗರದ ಯಂತ್ರಕ್ಕೆ ಮತ್ತೆ ಚಾಲನೆ ದೊರಕಲೇಬೇಕು. ನಿಧಾನವಾಗಿಯಾದರೂ ಅದು ತಿರುಗಲು ಶುರುಮಾಡಲೇಬೇಕು. ನಾವೆಲ್ಲ ಕಬ್ಬಿನಂತೆ ಅದಕೆ ಬೈಯೊಡ್ಡಿಕೊಳ್ಳಲೇಬೇಕು. ಮತ್ತೆ ಕಾರ್ಖಾನೆಗಳ ಊದುಕೊಳವೆಗಳಿಂದ ಹೊಗೆ ಹೊಮ್ಮಬೇಕು. ಮತ್ತೆ ರೆಸ್ಟುರೆಂಟುಗಳ ಪಾಕಶಾಲೆಯಲ್ಲಿ ಒಲೆಗಳು ಹೊತ್ತಿಕೊಳ್ಳಬೇಕು. ಮತ್ತೆ ಎರಡು ಕೊಂಡರೆ ಒಂದು ಫ್ರೀ ಕೊಡುವ ಬಟ್ಟೆಯಂಗಡಿಗಳು ತೆರೆಯಬೇಕು.  ಬೀದಿಬದಿ ಮರಗಳಿಂದುದುರಿದ ಬಣ್ಣಪುಷ್ಪಗಳ ಮೇಲೆ ವಾಹನಚಕ್ರಗಳು ಉರುಳಬೇಕು. ಮಾರ್ಕೆಟ್ಟಿನಲ್ಲಿ ತರಕಾರಿಗೆ ಮುಗಿಬಿದ್ದು ಚೌಕಾಶಿ ಮಾಡಬೇಕು. ಥಿಯೇಟರಿನ ಗಾಂಧಿಕ್ಲಾಸಿನಲ್ಲಿ ಶಿಳ್ಳೆಗಳು ಮೊಳಗಬೇಕು. ಪಾರ್ಕಿನ ಮೂಲೆಯಲ್ಲಿ ಲಾಫ್ಟರ್ ಕ್ಲಬ್ಬಿನ ಸದಸ್ಯರು ಹುಚ್ಚುಚ್ಚಾಗಿ ನಗಬೇಕು.  ಶಾಲೆ-ಕಾಲೇಜುಗಳು ಪ್ರಾರಂಭವಾಗಿ ಹೊಸ ಪ್ರೇಮಗಳು ಮೊಳೆಯಬೇಕು. ಮದುವೆಗೂ ಮೊದಲೇ ನಡೆದ ರಿಸೆಪ್ಷನ್ನಿನಲ್ಲಿ ಉಡುಗೊರೆಗೆ ಸಾಲುಗಟ್ಟಬೇಕು. ಸಂಗೀತಕಾರಂಜಿಯಿಂದ ನೀರು ಚಿಮ್ಮಬೇಕು, ಗೂಡಂಗಡಿಯವ ಮೊಘಾಯ್ ಪಾನ್ ಸುತ್ತಿಕೊಡಬೇಕು, ಗೋಲ್ಗಪ್ಪಾವಾಲಾ ಕೈಯದ್ದಿ ಪುರಿಗಳಲ್ಲಿ ಪಾನಿ ತುಂಬಿಸಿಕೊಡಬೇಕು, ಹೂವಾಡಗಿತ್ತಿ ಮಾಲೆಮಲ್ಲಿಗೆಯನು ಮೊಳದಲ್ಲಳೆದುಕೊಡಬೇಕು. ಇದೆಲ್ಲ ಸರಿಹೋಗಲೇಬೇಕು.

ಸಿಗದೇ ಎಷ್ಟು ವರ್ಷವಾಯಿತು... ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಮನೆಗೆ ಬಾ. ಒಟ್ಟಿಗೇ ಕೂತು ಊಟ ಮಾಡೋಣ.

ಪ್ರೀತಿಯಿಂದ,

-ಸು