Tuesday, December 06, 2016

ಜಾತ್ರೆ ಮುಗಿದ ಬೀದಿ

ಜಾತ್ರೆಯಲ್ಲಿ ನಾನು ಭೇಟಿಯಿಡದ ಅಂಗಡಿಗಳಲ್ಲಿ ಏನಿತ್ತು?
ಹೊಸಾತಂಗಿಗಿಷ್ಟದ ನವಿಲಿನಾಕಾರದ ಹೇರ್‌ಕ್ಲಿಪ್ಪು,
ಮಡದಿಗೊಪ್ಪುವ ಬಣ್ಣದ ಟಾಪಿಗೆ ಮ್ಯಾಚಾಗುವ ಕಿವಿಯೋಲೆ,
ನೆರೆಮನೆ ಪುಟ್ಟಿಗೆ ಪುಟ್ಟಸೀರೆಯುಡಿಸಿದ ದಿನಕ್ಕೊಂದು ಮುಂದಲೆಬೊಟ್ಟು,
ಅತ್ತೆಮಗನಿಗೆ ಕೊಟ್ಟೂದಿಸಬಹುದಾಗಿದ್ದ ಈಷ್ಟುದ್ದದ ಪೀಪಿ,
ಮನೆಯ ವಾಸ್ತುಬಾಗಿಲಿಗೆ ಇಳಿಬಿಡಬಹುದಾಗಿದ್ದ ಪಿಳಿಪಿಳಿ ತೋರಣ...

ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು,
ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು,
ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು,
ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು

ನಾನು ಕೊಳ್ಳದ ಬಲೂನು ಕೊನೆಗೂ ಬಿಕರಿಯಾಗದೆ,
ಜಾತ್ರೆ ಮುಗಿದ ದಿನ ಅದರ ಬಾಯಿಗೆ ಕಟ್ಟಿದ್ದ ಗಂಟು ಬಿಚ್ಚಿ
ಅದರೊಳಗಿದ್ದ ಉಸಿರನ್ನೆಲ್ಲ ಫುಸ್ಸನೆ ಹೊರತೆಗೆದು
ಇಷ್ಟು ಸಣ್ಣಕಾದ ರಬ್ಬರಿನ ಮುದ್ದೆಯನ್ನು ಕೈಚೀಲದೊಳಗಿಟ್ಟು
ಗುಡಾರ ಸಮೇತ ಮತ್ಯಾವ ಊರಿಗೆ ಹೋದ ಆ ಅಂಗಡಿಯವ?
ಇಂದು ಎಲ್ಲಿ ತೇರು? ಯಾವ ದೇವರಿಗೆ ಉತ್ಸವ?

ನಾನು ಖರೀದಿಸದ ವಸ್ತುಗಳೆಲ್ಲ ಇನ್ಯಾವುದೋ ಊರಲ್ಲೀಗ
ವಿಕ್ರಯಕ್ಕಿರಬಹುದು. ಕೊನೆಗೂ ಎಲ್ಲಕ್ಕೂ ಯೋಗದ ನಂಟು:
ಯಾವ ಕ್ಲಿಪ್ಪು ಯಾರ ಮುಡಿಗೋ
ಯಾವ ಓಲೆ ಯಾರ ಕಿವಿಗೋ
ಹಸಿರು ತೋರಣ ಯಾರ ಮನೆ ಸಂಭ್ರಮಕ್ಕೋ
ಚೌಕಾಶಿಗೊಗ್ಗದೆ ನಾ ಬಿಟ್ಟುಬಂದ ಆ
ಚಿತ್ರಖಚಿತ ತಟ್ಟೆಯಲ್ಲಿ ಯಾರಿಗೆ ಊಟವೋ

ಜಾತ್ರೆ ಮುಗಿದ ಬೀದಿ ಬಿಕೋ ಎನ್ನುತ್ತಿದೆ
ಮೂಲೆಮೂಲೆಗೂ ಹರಡಿರುವ ಕಸದ ತುಣುಕುಗಳು
ಸಂಭ್ರಮ ಗಿಜಿಗಿಜಿ ವ್ಯಾಪಾರ ಲಾಭ ನಷ್ಟಗಳ ಕತೆ ಹೇಳುತ್ತಿವೆ
ಬಿಕರಿಯಾಗದ ಬಲೂನಿನೊಳಗಿಂದ ಹೊರಬಿದ್ದ ಉಸಿರು
ಇನ್ನೂ ಇಲ್ಲೇ ಹರಿದಾಡುತ್ತಿರಬೇಕು:
ಅದಕ್ಕೇ ಈ ಬೀದಿ ಈ ಕಾವಳದ ರಾತ್ರಿಯಲ್ಲೂ ಬೆಚ್ಚಗಿದೆ.