ಸೂರ್ಯ ತನ್ನತ್ತ ವಾಲುತ್ತಲೇ ಪಶ್ಚಿಮದ ದಿಗಂತ ನಾಚಿ ಕೆಂಪಾಗಿಬಿಟ್ಟಿತ್ತು. ಹಕ್ಕಿಗಳು ಗುಂಪುಗುಂಪಾಗಿ ಮನೆ ಕಡೆ ಹೊರಟಿದ್ದವು. ಸಂಜೆ, ತನ್ನ ಸೌಂದರ್ಯಕ್ಕೆ ತಾನೇ ಮೈಮರೆತಂತಿತ್ತು. ಗಂಧರ್ವ ಲೋಕದತ್ತ ನಡೆಯುವವರಂತೆ ಸುಮಂತ ಮತ್ತು ರಾಜಿ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದರು. ಸುಮಂತ ರಾಜಿಗಾಗಿ ಹಿತ್ತಿಲ ಬೇಲಿಯ ಗಿಡದಲ್ಲಿದ್ದ ಗೌರಿ ಹೂವನ್ನು ಕೊಯ್ದುಕೊಟ್ಟ. ಸಂಜೆ ಮುಗಿಲ ಬಣ್ಣ ಗೌರಿ ಹೂವಿನ ಬಣ್ಣಕ್ಕೇ ತಿರುಗಿತು. ಸ್ವಲ್ಪ ಮುಂದೆ ನಡೆದ ಸುಮಂತ, ಮುತ್ತುಗದ ಹೂವಿನ ಗೊಂಚಲೊಂದನ್ನು ಕೊಯ್ದು ತಾನೇ ರಾಜಿಯ ಮುಡಿಗೇರಿಸಿದಮೇಲಂತೂ ಸಂಜೆಗೆ ಅಲ್ಲೇ ರಾತ್ರಿಯ ಮಾದಕತೆ ಪ್ರಾಪ್ತವಾಗಿಬಿಟ್ಟಿತು.ಶಾಲೆಯಲ್ಲಿ ಎನ್.ಎಸ್.ಎಸ್. ಕ್ಯಾಂಪುಗಳಲ್ಲಿ ಕೆಲಸ ಮಾಡಿ ಗೊತ್ತಿದ್ದ ಸುಮಂತ ರಾಜಿಗಾಗಿ ಮರ ಹತ್ತಿ ಸೀತೆಪೇರಲೆ ಹಣ್ಣನ್ನು ಕೊಯ್ದು ಕೊಟ್ಟ. ಮುಂದೆ ಅವರು ಪರಗಿ ಮಟ್ಟಿ ನುಗ್ಗಿ ಪುಟ್ಟ ಪುಟ್ಟ ಪರಗಿ ಹಣ್ಣುಗಳನ್ನು ಒಂದು ಮುಷ್ಟಿಯಾಗುವಷ್ಟು ಸಂಗ್ರಹಿಸಿದರು. ಒಂದೊಂದೇ ಹಣ್ಣನ್ನು ಬಾಯಿಗೆ ಎಸೆದುಕೊಳ್ಳುತ್ತಾ ಅವರು ಕಾಲುದಾರಿಯಲ್ಲಿ ಸಾಗಿದರು. ಒಂದು ದೊಡ್ಡ ಚಂದ್ರಪೇರಲೆ ಹಣ್ಣಿನ ಗಿಡ ಸಿಕ್ಕಿತು. ಮರದ ಮೇಲ್ಗಡೆ ಎತ್ತರದಲ್ಲಿ ಎರಡು ದೋರಗಾಯಿಗಳು ಕಂಡವು. ಸುಮಂತ ಬಡಿಗೆ ಬೀಸಿ ಒಂದನ್ನು ಕೆಡವಿದ. ‘ನಿಂಗಿಲ್ವಲ್ಲೋ?’ ಎಂದ ರಾಜಿಗೆ ‘ಪರ್ವಾಗಿಲ್ಲ, ನೀನು ತಿನ್ನು’ ಎಂದ. ಆದರೂ ರಾಜಿ ತಾನೇ ಬಡಿಗೆ ತಗೊಂಡು ಬೀಸಲಿಕ್ಕೆ ನೋಡಿದಳು. ಆದರೆ ಅವಳು ಎಸೆದದ್ದು ಆ ರೆಂಬೆಯ ಹತ್ತಿರಕ್ಕೂ ಹೋಗಲಿಲ್ಲ. ಸುಮಂತ ರಾಜಿಯನ್ನು ರೇಗಿಸಿದ. ಅದಕ್ಕೆ ರಾಜಿಯ ಮುಖ ಕೆಂಪಾದದ್ದು ಕಂಡು ಸಂಜೆ ತಾನು ಕಪ್ಪಾಗತೊಡಗಿತು.ಇದ್ದಕ್ಕಿದ್ದಂತೆ ಆಗಸದಲ್ಲಿ ಮೋಡಗಳು ಒಡಗೂಡತೊಡಗಿದವು. ಮಳೆಗಾಲದಲ್ಲಿ ನೀರಾಗಿ ಸುರಿದೂ ಅಳಿದುಳಿದಿದ್ದ ಮೋಡಗಳು ಅದ್ಯಾವುದೋ ಮಾಯೆಯ ಗಾಳಿಗೆ ಒತ್ತಿಕೊಂಡು ಸೀದಾ ಇಲ್ಲಿಗೆ ಬಂದಿದ್ದವು. ಆಗಲೇ ಕತ್ತಲಾವರಿಸಲಾರಂಭಿಸಿದ್ದರಿಂದ ಸುಮಂತನಿಗಾಗಲೀ ರಾಜಿಗಾಗಲೀ ಈ ಪರಿಣಾಮ ತಕ್ಷಣ ಗೊತ್ತಾಗಲಿಲ್ಲ. ತಣ್ಣನೆಯ ಗಾಳಿ ಬೀಸಲಾರಂಭಿಸಿದಾಗ ಅವರು ಆಗಸದತ್ತ ನೋಡಿದರು.“ಓಹ್! ಮಳೆ ಬರುವಂತಿದೆ ಕಣೇ ರಾಜೀ..” ಎಂದ ಸುಮಂತ.“ಅಯ್ಯೋ.. ಬೇಗ ಬೇಗ ಮನೆ ಸೇರಿಕೊಳ್ಳೋಣ ಬನ್ನಿ..” ರಾಜಿ ಅವಸರಿಸಿದಳು.ಅವರು ಕಾಡ ತಂಪು, ಹೂಗಳ ಕಂಪು, ಜೀರುಂಡೆಗಾನದ ಇಂಪು ಮತು ಸಂಜೆಯ ಕೆಂಪನ್ನು ಸವಿಯುತ್ತಾ ತುಂಬಾ ಮುಂದೆ ಬಂದುಬಿಟ್ಟಿದ್ದರು. ಈಗ ವಾಪಸು ಹೋಗಲಿಕ್ಕೆ ಕನಿಷ್ಟ ಅರ್ಧಗಂಟೆ ಹಾದಿ ಸವೆಸಬೇಕಿತ್ತು. ನಡೆಯತೊಡಗಿದರು. ಮಿಂಚು-ಗುಡುಗುಗಳು ಶುರುವಾದವು. ರಾಜಿ ಸುಮಂತನ ಕೈ ಹಿಡಕೊಂಡಳು. ಸರಸರನೆ ಹೆಜ್ಜೆ ಹಾಕಿದರು. ಮಳೆ ಹನಿಗಳು ಬೀಳತೊಡಗಿದವು...
* * *
ಪರಿಸರದ ಬಗ್ಗೆ ನಾನು,
ಶ್ರೀನಿಧಿ,
ಅರುಣ್,
ಶ್ರೀನಿವಾಸ್ ಮತ್ತು
ಅನ್ನಪೂರ್ಣ -ಹೀಗೆ ಐವರು ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.
ಇದು ನಮ್ಮೆಲ್ಲರ ಮೊದಲ ಪುಸ್ತಕ. ಇಷ್ಟು ದಿನವೂ ಈ ಬ್ಲಾಗ್‍ಗಳ ಮುಚ್ಚಟೆಯ ಲೋಕದಲ್ಲೇ ಇದ್ದವರು ನಾವು.. ಈ ಪುಸ್ತಕದ ಮೂಲಕ 'ಪುಸ್ತಕ ಲೋಕ'ಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ಮೊದಲ ತೊದಲು... ಹೇಗೋ ಏನೋ ಅರಿಯೆವು... ನೀವೆಲ್ಲ ನಮ್ಮ ಬ್ಲಾಗ್ ಬರಹಗಳಿಗೆ ತೋರಿದ ಪ್ರೀತಿ, ಪ್ರೋತ್ಸಾಹಗಳಿಂದಲೇ ಅರಳಿದ್ದು ನಮ್ಮ ಈ ಪುಸ್ತಕ ಮಾಡುವ ಕನಸು.. ಅಂದುಕೊಳ್ಳುತ್ತಿದ್ದೇನೆ: ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದು, ಈ ಖುಷಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದರೆ ಅದೆಷ್ಟು ಚೆನ್ನ ಅಂತ...
ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ ಸಮಯ: ಬೆಳಗ್ಗೆ 10:30 ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.ನಿಮಗಾಗಿ ಕಾಯುತ್ತಿರುತ್ತೇನೆ.. ಯಾಕೇಂದ್ರೆ, ನೀವು ಬಂದೇ ಬರ್ತೀರಿ ಅಂತ ನಂಗೊತ್ತು...
ಪ್ರೀತಿಯಿಂದ,
-ಸು