Thursday, July 14, 2011

ಕವಿತೆ


ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ
ಬರೆಯುವುದು ಎಂದರೆ ನನಗೆ ಖಯಾಲಿ
ಒಂದೆಲಗ ಬತ್ತಿಸಿದ ನೀರಿಗೆ ಕಾಳು-
ಮೆಣಸು ಜಜ್ಜಿ ಹಾಕಿ ಕುಡಿದೆ
ಮೊಣಕಾಲು ದಾಟುವವರೆಗಿನ ಕುರ್ತಾ
ಧರಿಸಿ ಸಾಹಿತ್ಯ ಸಮಾರಂಭಗಳಿಗೆ ಹೋಗಿಬಂದೆ
ಗೊಂಬೆಗೆ ಉಡಿಸಿದ ಸೀರೆ, ನೀರಲ್ಲಿ ತೇಲಿಬಿಟ್ಟ ದೋಣಿ,
ಮೊದಲ ಮಳೆಯ ಮಣ್ಣ ಘಮ, ಹುಣ್ಣಿಮೆ ರಾತ್ರಿಯ ಚಂದ್ರ-
ಎಲ್ಲ ನನ್ನ ಕವಿತೆಯಲ್ಲಿ ರೂಪಕಗಳಾದವು
ಬೆಟ್ಟದ ಹೂವಿಗೆ ಮಳೆಯ ರಾತ್ರಿ ಬಿದ್ದ ಕನಸಿನಲ್ಲಿ
ದುಂಬಿಯೊಂದು ಕೊಡೆ ಹಿಡಿದು ಬಂದಿತ್ತಂತೆ
ಅಂತೆಲ್ಲ ಬರೆದು ಚಪ್ಪಾಳೆ ಗಿಟ್ಟಿಸಿದೆ
ಶೇವಿಂಗು ಮಾಡ್ಕೊಳೋ ಎಂದ ಅಮ್ಮನಿಗೆ
ಜಿಲೆಟ್ಟಿ ಕಂಪನಿಯ ಲಾಭಕೋರತನದ ಬಗ್ಗೆ ತಿಳಿಹೇಳಿದೆ


ಚಿಕ್ಕವನಿದ್ದಾಗ ನಾನು ಶ್ರುತಿಯ ಕಷ್ಟ ನೋಡಿ
ಟೀವಿಯ ಮುಂದೆ ಅತ್ತದ್ದಿದೆ. ಅಕ್ಟೋಬರಿನ
ಗುಡುಗು-ಸಿಡಿಲಿಗೆ ಹೆದರಿ ಅಮ್ಮನ ಸೆರಗ ಹಿಂದೆ ಬಿಕ್ಕಳಿಸಿದ್ದಿದೆ.
ತಿಳುವಳಿಕೆ ಬಂದಮೇಲೆ ನಾನು ಅತ್ತಿದ್ದೇ ಇಲ್ಲ
ಗಂಡಸರು ಅಳಬಾರದು ಅಂದವರು ಯಾರೋ?
ನಗರಿಯ ಕಟ್ಟಡಗಳ ತುದಿಯಲ್ಲಿ ನನ್ನ ಭಯವನ್ನು ನೂಕಿದೆ
ಅಪಘಾತದ ಸ್ಥಳದಲ್ಲಿ ಸ್ಥಗಿತಗೊಂಡ ಟ್ರಾಫಿಕ್ ಕಂಡು
ಜೋರಾಗಿ ಹಾರನ್ನು ಬಾರಿಸಿದೆ
ಊಟ ಮಾಡಿ ಕೂತು ಕ್ರೈಂಸ್ಟೋರಿಯನ್ನು ರಸವತ್ತಾಗಿ ನೋಡಿದೆ
ಹತನಾದ ಯೋಧನ ಕಥೆ ತೋರಿಸುತ್ತಿದ್ದ ಛಾನೆಲ್
ಫಕ್ಕನೆ ಬದಲಿಸಿ ಕುಣಿಯೋಣು ಬಾರಾ ಎಂದೆ
ಗೆಳೆಯ ಫೋನ್ ಮಾಡಿ ನಾಳೆ ಮನೆ ಶಿಫ್ಟಿಂಗು,
ಸ್ವಲ್ಪ ಹೆಲ್ಪ್ ಮಾಡೋಕೆ ಬಾರಯ್ಯಾ ಎಂದಾಗ
ಎಷ್ಟು ಕೊಡ್ತೀಯ ಅಂತ ಕೇಳಲು ಹೋಗಿ ತಡೆದುಕೊಂಡು
ಬೇರೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡೆ
ಟೆರೇಸಿನಲ್ಲಿನ ಮೌನ ಕಂಡು ಖುಶಿಯಾಗಿ
ಬಾಲ್ಯದ ಹಸಿರಿನ ಸಿರಿಯ ಕುರಿತು ಕವನ ಬರೆದು
ನನಗೆ ನಾನೇ ಐದಾರು ಸಲ ಓದಿಕೊಂಡೆ


ರೈಲಿನ ನೂಕಿನಲ್ಲಿ ನಿಜಗಂಧದ ತರುಣಿ
ತೂರಿ ಬಂದರೆ ಕಾಯಕದ ದಿನವಿಡೀ ಉಲ್ಲಾಸ
ಕೈಯಲ್ಲಿ ಐಫೋನು, ಕಿವಿಯಲ್ಲಿ ಮೊರೆಯುವ ಪಾಪ್-
ಚಿಗುರು ಬೆರಳಿನ ಹುಡುಗಿಗೆ ಟಚ್‌ಸ್ಕ್ರೀನ್ ಫೋನು ಇಷ್ಟ;
ಹಾಗೆಯೇ ಟಚ್‌ಸ್ಕ್ರೀನ್ ಫೋನಿಗೆ ಚಿಗುರು ಬೆರಳಿನ ಹುಡುಗಿ.
ಹೂವಿನ ಚಬ್ಬೆಯ ಮುದುಕಿ ಬಂದಾಗ ಎತ್ತಲೋ
ನೋಡಿದ ನಾನು ಐಫೋನಿನ ಹುಡುಗಿಗೆ
ಪ್ಲೀಸ್ ಸಿಟ್ ಅಂತ ಸೀಟು ಬಿಟ್ಟುಕೊಟ್ಟೆ
ನಯವನ್ನೂ ನಾಜೂಕಿನಲ್ಲಿ ಬಳಸಬೇಕು
ಅಂತ ಮನಸಿನಲ್ಲೇ ಅಂದುಕೊಂಡು ಮುಗುಳ್ನಕ್ಕೆ

ಟ್ವೀಟುಗಳನ್ನು ಸ್ಕ್ರಾಲ್ ಮಾಡುತ್ತಿದ್ದವಳು
ಬ್ಲಾಸ್ಟ್ಸ್ ಅಗೇನ್ ಅಂತ ಕೂಗಿದ್ದೇ ರೈಲಿನಲ್ಲಿ
ಗಲಿಬಿಲಿ ಶುರುವಾಗಿ ಕೆಲವರು ಹೊರಗೆ ಹಾರಿ
ಒಬ್ಬರ ಮೇಲೊಬ್ಬರು ಬಿದ್ದು ಆಕ್ರಂದನಗಳು
ಹೇಷಾರವಗಳಾಗಿ ಅಕೋ ಅಲ್ಲಿ ಓಡಿ ಬರುತ್ತಿರುವ
ರಕ್ತಸಿಕ್ತ ದೇಹವೊಂದು ನನಗೇ ಢಿಕ್ಕಿ ಹೊಡೆದು
ನಾನು ಬೋರಲು ಬಿದ್ದು ಯಾರೋ ತುಳಿದುಕೊಂಡು ಹೋಗಿ
ಮತ್ಯಾರೋ ಬಂದು ಕೈ ಹಿಡಿದೆತ್ತಿ ಹತ್ತಿರದ
ಗೋಡೆಗೆ ಒರಗಿಸಿ ಕೂರಿಸಿ ನೀರು ಕೊಟ್ಟರು.


ಆಗಲೇ ನನಗೆ ಅಳು ಮತ್ತೆ ನೆನಪಾದದ್ದು;
ಕೆಂಪು ಇಂಕಿನ ಪೆನ್ನಿನಿಂದ ಪದ್ಯ ಬರೆದದ್ದು.

Monday, July 11, 2011

ಇದೇ ಈ ಕ್ಷಣಕ್ಕೆ...

ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದೇ
ನಿರಾಳ ಬದುಕಿನ ಯಶೋಸೂತ್ರ ಎಂದವರು
ಸೂರ್ಯನನ್ನೇ ಕರಿಬಟ್ಟೆಯಿಂದ ಮುಚ್ಚಿ
ಮಂದಬೆಳಕಿನ ದೀಪಗಳ ಕೆಳಗೆ
ಮಿಕ್ಸ್ ಮಾಡಲು ಐಸನ್ನೋ ನೀರನ್ನೋ
ಸ್ಪ್ರೈಟನ್ನೋ ಕಾಯುತ್ತ ಕೂತಿದ್ದಾರೆ
ಅವರ ಮಾತನ್ನು ಜಗತ್ತು ಕೇಳುತ್ತಿಲ್ಲ.

ಅತಿಯಾಗಿ ಸಿಟ್ಟು ಮಾಡುವ ಹುಡುಗಿಗೆ
ಉಪ್ಪು ಕಮ್ಮಿ ಹಾಕಿದ ಉಪ್ಪಿಟ್ಟು ತಿನ್ನಿಸಿ
ತುದಿಯಷ್ಟೇ ಕೆಂಪಗಾಗಿರುವ ಮೂಗಿಗೆ
ಅಂಟಿಕೊಂಡಿರುವ ಗುಲಗುಂಜಿ ಒರೆಸುವಾಗ
ತುಟಿ ಬಿರಿದರಳಿ ಮೊಗ ಹೂವಾಗಿದೆ
ಇವರಾಡುವ ಮಾತು ಈ ಲೋಕದ್ದೇ ಅಲ್ಲ.

ಕೆಲವೇ ಗಂಟೆಗಳ ಹಿಂದೆ, ಎತ್ತಿ ಹಿಡಿದ ಪರದೆಯ
ಆಚೀಚೆ ನಿಂತಿದ್ದಾಗ ಸುಲಗ್ನೇ ಸಾವಧಾನ
ಎಂದಿದ್ದ ಪುರೋಹಿತರಿಗೂ ಡೊಳ್ಳುಹೊಟ್ಟೆಯ ಬೀಗರು
ಬಗ್ಗಿ ಬಗ್ಗಿ ಹೇಳುತ್ತಿದ್ದಾರೆ:
ಸಾವಧಾನ, ನಿಧಾನವಾಗಿ ಆಗಲಿ ಊಟ.

ಪಂಕ್ತಿಯ ಕೊನೆಯಲ್ಲಿ ಕುಳಿತಿದ್ದಾನೆ ಒಬ್ಬ ಹುಡುಗ
ಅವರು ಬರುವುದರೊಳಗೆ ಎದ್ದು ಹೋಗಬೇಕು ಅಂತ
ಕಣ್ಣು ಮೂಗು ಕಿವಿಗಳಿಂದಲೂ ತಿನ್ನುತ್ತಿದ್ದಾನೆ
ಅಪಘಾತದಿಂದ ತಪ್ಪಿಸಿಕೊಳ್ಳಲೆಂದೇ ಅವಸರ ಮಾಡುತ್ತಿದ್ದಾನೆ.

ಗಿಜಿಗಿಜಿ ತುಂಬಿದ ಮದುವೆಯ ಮನೆಯಲ್ಲಿ
ಎಲ್ಲರೂ ಅವರವರ ಮಾತು ಆಡುತ್ತಿದ್ದಾರೆ.

ಪಂಕ್ತಿಯ ಮಧ್ಯದಲ್ಲಿ ಒಂದು ಬಾಳೆ ಉಳಿದುಹೋಗಿದೆ
ಹಸಿದ ಬೀಗರು ಎಡೆಶೃಂಗಾರಕ್ಕೆ ಹಾಕಿದ
ಪದಾರ್ಥಗಳನ್ನು ನೋಡುತ್ತ ನಿಂತುಬಿಟ್ಟಿದ್ದಾರೆ.

Sunday, July 03, 2011

ನಡೆಯುವ ಕಪ್ಪೆ


ಅವತ್ತೊಂದು ಮಳೆಗಾಲದ ದಿನ, ಹೀಗೇ ಜೋರು ಮಳೆ.
ನಮ್ಮೂರಿನ ರಸ್ತೆಯ ಪಕ್ಕದಲ್ಲೇ ದೊಡ್ಡ ಕೆರೆ.
ಹುಟ್ಟಿ ಮೂರು ದಿನವಾದ ಕಪ್ಪೆಗಳು ನೀರಿನಿಂದ ಹೊರ-
ಬಂದು ದಂಡೆ ಏರಿ ಕೋಡಿ ಹತ್ತಿಳಿದು ರಸ್ತೆಯನ್ನೂ ದಾಟಿ
ಆಚೆ ಹೋಗುವ ಸರ-
ಭರದಲ್ಲಿ ಚಲಿಸುವ ಜೋರು
ವಾಹನಗಳ ಚಕ್ರಕ್ಕೆ ಸಿಲುಕಿ
ಅಪ್ಪಚ್ಚಿಯಾಗಿ
ಸತ್ತು ಹೋಗುತ್ತಿದ್ದಾಗ

ಇದೊಂದು ಕಪ್ಪೆ ಕುಪ್ಪಳಿಸುವ ಬದಲು
ನಡೆದು ಹೋಗುತ್ತಿತ್ತು.

ಇದನ್ನು ನೋಡಿದ ಒಂದು ಪಿಕಳಾರ ಹಕ್ಕಿ ತಾನು
ಹಾರುವುದರ ಬದಲು ಕುಪ್ಪಳಿಸತೊಡಗಿತು
ಅಲ್ಲಿದ್ದ ನಾಯಿಯೊಂದು ನಡೆಯುವುದು ಬಿಟ್ಟು ಹಾರಿತು
ಕೆರೆಯಿಂದ ಕತ್ತೆತ್ತಿ ನೋಡಿದ ಮೀನುಗಳು
ದಂಡೆಯ ಮೇಲೆ ನಡೆದಾಡತೊಡಗಿದವು
ಹೆಗ್ಗಣಕ್ಕೆ ತಲೆಕೆಟ್ಟು ಕೆರೆಗೆ ಹಾರಿ ಈಜಿತು
ಈ ವಿಚಿತ್ರ ನೋಡುತ್ತ ವಾಹನಗಳೆಲ್ಲ ನಿಂತು
ಬಿಟ್ಟವು. ನಡೆಯುತ್ತಿದ್ದ ಕಪ್ಪೆ ಅರಾಮಾಗಿ ರಸ್ತೆ
ದಾಟಿತು. ನನಗೆ ಏನೂ ಮಾಡಲು ತೋಚದೆ

ಕವನ ಬರೆದೆ.