Friday, December 28, 2007

ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

Tuesday, December 18, 2007

ವಡಪ್ಪೆಯ ಎಡವಟ್ಟುಗಳು!

ಹೌದು, ವಡಪ್ಪೆ ತಿಂದಿದ್ರ ಬಗ್ಗೆ ಬರಿಯಕ್ಕು ನೋಡು ಸಂದೀಪಾ!

ತಿಂದುಂಡಿದ್ರ ಬಗ್ಗೇನೆಲ್ಲ ಏನು ಬರಿಯೋದು, ಮಾಡಿದ್ರ ಬಗ್ಗೆ ಬರೀಬೇಕು. ನಿಜ ಹೇಳಬೇಕೂಂದ್ರೆ, ವಡಪ್ಪೆ ಮಾಡಿದ್ದಷ್ಟೇ, ತಿಂದಿದ್ದು ಅಷ್ಟರಲ್ಲೇ ಇದೆ! ಆದರೆ ಮಾಡಲು ನಾವು ಪಟ್ಟ ಸಾಹಸಗಳಿವೆಯಲ್ಲ, ಅದನ್ನು ಬರೆಯದಿದ್ದರೆ ತಪ್ಪಾದೀತು.

ಅದು ಏನಾಯಿತೆಂದರೆ.... ತಾಳಿ, ಅದನ್ನು ಹೇಳುವ ಮುನ್ನ ಸ್ವಲ್ಪ ಬ್ಯಾಕ್‍ಗ್ರೌಂಡ್ ಹೇಳ್ಕೋಬೇಕು: ನನ್ನ ರೂಂಮೇಟು ವಿನೂಗೆ ಅಡುಗೆ ಮಾಡಿಕೊಂಡು ತಿನ್ನೋದು ಅಂದ್ರೆ ಒಂದು ಕ್ರೇಜು. ಈ ಮಳ್ಗದ್ದೆ ಊರೋರು ಮತ್ತೆ ನಡಳ್ಳಿ ಊರೋರು ತಿನ್ನೋದ್ರಲ್ಲಿ ಎತ್ತಿದ್ ಕೈಯಿ ಅಂತ ಕ್ಯಾಸನೂರು ಸೀಮೆಲೆಲ್ಲ ಹೆಸರುವಾಸಿ. ಅವರು ಎಷ್ಟ್ರ ಮಟ್ಟಿಗೆ ಹೆಸರುವಾಸಿ ಅಂದ್ರೆ, 'ಕ್ಯಾಸನೂರು ಸೀಮೆಯವ್ರು ತಿನ್ನೋದ್ರಲ್ಲಿ ಎತ್ತಿದ್ ಕೈ' ಅಂತ ಬೇರೆ ಸೀಮೆಯವ್ರೆಲ್ಲ ಮಾತಾಡ್ಕೋತಾರೆ! ಐ ಮೀನ್, ನಾ ಹೇಳಿದ್ದು ನಿಮ್ಗೆ ಅರ್ಥ ಆಯ್ತಲ್ಲ? ಮಳಲಗದ್ದೆ ಮತ್ತು ನಡಹಳ್ಳಿ ಊರಿನವರ ಭೋಜನ ಪ್ರಿಯತೆ ಸುತ್ನಾಲ್ಕು ಸೀಮೆಗಳಲ್ಲಿ ಕ್ಯಾಸನೂರು ಸೀಮೆಗೇ ಒಂದು ಹೆಸರನ್ನು ತಂದುಕೊಟ್ಟಿದೆ. ಲಗ್ನದ ಮನೆಗಳಲ್ಲಿ, ಗಂಡು ಅಥವಾ ಹೆಣ್ಣು ಕ್ಯಾಸನೂರು ಸೀಮೆಯದು ಅಂತಾದ್ರೆ ಛತ್ರದ ಅಡುಗೆ ಮನೆಯಲ್ಲಿ ಮಾತುಕತೆ ನಡೆದಿರುತ್ತದೆ: "ಹೋಯ್, ಬಪ್ಪೋರು ಯಾರು ಗೊತಿದಲ, ಕ್ಯಾಸ್ನೂರು ಸೀಮ್ಯೋರು. ಐಟಮ್ಮೆಲ್ಲ ಸ್ವಲ್ಪ್ ಸ್ವಲ್ಪ ಜಾಸ್ತಿ ಮಾಡವು!"

ಉಳಿದೆಲ್ಲ ವಿಷಯಗಳಲ್ಲಿ ಓಕೆಯಾದರೂ, ವಿನೂಗೆ ನಾನು ತಿನ್ನುವ ವಿಷಯದಲ್ಲಿ ಕಂಪನಿ ಅಲ್ಲವೇ ಅಲ್ಲ. ನಾನು ತಿನ್ನುವುದು ಗುಬ್ಬಿ ತಿಂದಂತೆ ತುದೀ ಬೆರಳುಗಳಲ್ಲಿ ನಾಲ್ಕು ಅಗುಳು. ಅವನದೋ ಇಡೀ ಹಸ್ತ ಬಳಸಿ ಬಳುಗಿ, ಸುರಿದು, ಕತ್ತರಿಸಿ ಮಾಡುವ ಊಟ. ಪ್ರತಿ ರಾತ್ರಿ ಊಟ ಮಾಡುವಾಗ ನಮ್ಮನೆಯಲ್ಲಿ ಇದೇ ಕಾರಣಕ್ಕೆ ಮಾತುಗಳು. ಆಫೀಸಿನಿಂದ ಹೊರಡುವುದು ಸ್ವಲ್ಪ ತಡವಾದರೂ ನಾನು ಅವನಿಗೆ ಫೋನ್ ಹಚ್ಚಿ 'ಏಯ್ ಹೋಟ್ಲಲ್ಲೆ ಊಟ ಮಾಡ್ಕೊಂಡು ಹೋಗೋಣ ಮಾರಾಯಾ' ಅನ್ನುತ್ತೇನೆ. ಅವನು ನನ್ನ ಮಾತನ್ನು ಅಲ್ಲೇ ತುಂಡರಿಸಿ 'ಮನೇಲೆ ಅಡುಗೆ ಮಾಡೋಣ ಬಾ. ನೀ ಕಾಯಿ ಹೆರ್ಕೊಡು ಸಾಕು. ನಾನು ಅಡುಗೆ ಮಾಡ್ತೀನಿ' ಅನ್ನುತ್ತಾನೆ. ನಾನು ಸ್ಟ್ರಾಂಗ್ ಕಾಫಿ, ಖಾರದ ಚಿಪ್ಸು, ಚಾಕ್ಲೇಟು, ಬಿಸ್ಕೇಟು, ಕೇಕು ಎಂದೇನೇನೋ ಹಾಳುಮೂಳನ್ನೆಲ್ಲ ತಿಂದುಕೊಂಡು ಓಡಾಡಿಕೊಂಡಿರುತ್ತೇನೆ. ಅವನು ಹಾಲು, ಕಷಾಯ, ಹಣ್ಣು, ಹಂಪಲು ಇತ್ಯಾದಿಗಳಲ್ಲಿ ಮುಳುಗಿರುತ್ತಾನೆ.

ಇಂಥಾ ವಿನೂ 'ಒಂದು ಭಾನ್ವಾರ ತಿಂಡಿಗೆ ವಡಪ್ಪೆ ಮಾಡವಲೇ ಭಟ್ಟಾ' ಅಂತ ಅವಾಗಿವಾಗ ಹೇಳುತ್ತಿದ್ದ. ಆಗೆಲ್ಲ ನಾನು ಆ ವಡಪ್ಪೆ ಮಾಡಲು ಬೇಕಾಗುವ ಸಮಯ, ಶ್ರಮಗಳನ್ನು ನೆನೆಸಿಕೊಂಡೇ ಒಳಗೊಳಗೇ ಹಿಂಜರಿಯುತ್ತಿದ್ದೆ. ಬಹುಶಃ ನನ್ನ ಹಿಂಜರಿಕೆಯನ್ನು ನೋಡೀ ನೋಡಿ ಬೇಸತ್ತ ವಿನು ತಾನೊಬ್ಬನೇ ಕೂತು ಇದಕ್ಕೆ ಪರಿಹಾರ ಏನೆಂದು ಯೋಚಿಸಿದ್ದಾನೆ. ಆಗ ಅವನಿಗೆ ನೆನಪಾದದ್ದೇ ಸಂದೀಪ! ವಿನಾಯಕನಿಗೆ ಸಂದೀಪನಿಗಿಂತ ಬೆಸ್ಟ್ ಪಾರ್ಟನರ್ ಮತ್ತಿನ್ಯಾರು ಸಿಗಲಿಕ್ಕೆ ಸಾಧ್ಯ? ಸರಿ, ಅದೊಂದು ಭಾನುವಾರ ಅವನು ನನ್ನ ಕಣ್ತಪ್ಪಿಸಿ (ಸಾರಿ, ಕಿವಿ) ಸಂದೀಪನಿಗೆ ಫೋನ್ ಮಾಡಿದ್ದಾನೆ. ಇಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ: ವಡಪ್ಪೆ ಮಾಡಲೇಬೇಕು.

ಸಂದೀಪ ಸಂಜೆ ಆರರ ಹೊತ್ತಿಗೆ ನನಗೆ ಫೋನ್ ಮಾಡಿದ: "ಎಲ್ಲಾ ರೆಡಿನನಾ?"
"ಏಂತು?" ನಾನು ಕೇಳಿದೆ.
"ಅದೇ ವಡಪ್ಪೆ"
"ವಡಪ್ಪೆ?!"
"ಹಾಂ, ವಿನಾಯ್ಕ ಹೇಳಲ್ಯಾ? ಇವತ್ ನಿಮ್ಮನೆಲಿ ವಡಪ್ಪೆ ಮಾಡವು ಅಂತ ಆಯ್ದಲಾ.. ನಾ ಬರ್ತಾ ಇದ್ದಿ. ಹಿಟ್ಟು ಕಲ್ಸಿಟ್ಟಿರಿ!"
"!"

ವಿಶೇಷವೆಂದರೆ, ವಡಪ್ಪೆಯ ಬಗ್ಗೆ ಅಷ್ಟೊಂದು ನಿರಾಸಕ್ತಿ ಹೊಂದಿದ್ದ ನಾನೂ ಅದೇಕೋ ಇದ್ದಕ್ಕಿದ್ದಂತೆ ಹುಜುರತ್ತಾಗಿಬಿಟ್ಟೆ! ನಾನೂ-ವಿನು ಹೋಗಿ ಒಂದು ಕೇಜಿ ಅಕ್ಕಿ ಹಿಟ್ಟು ತಂದೆವು. ಈರುಳ್ಳಿ, ಹಸಿಮೆಣಸು, ತೆಂಗಿನಕಾಯಿ, ವಳ್ಳೆಣ್ಣೆ ತಂದು ಸಂದೀಪ ಬರುವ ಹೊತ್ತಿಗೆ ನಾವು ಸಕಲ ಶಸ್ತ್ರಸನ್ನದ್ಧರಾಗಿ ಕೂತಿದ್ದೆವು. ಸಂದೀಪ ಬಂದಮೇಲೆ ಈರುಳ್ಳಿ ಹೆಚ್ಚಲು ಕೂತೆವು. ಸಣ್ಣಕೆ ಹೆಚ್ಚಬೇಕು ಎಂದಾಯಿತು. ವಿನು ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದು ದೊಡ್ಡಕಾತು ಅಂತ ಸಂದೀಪ ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದೂ ದೊಡ್ಡಕಾತು ಅಂತ ನಾ ಹೆಚ್ಚಿದೆ. ನಾ ಹೆಚ್ಚಿದ್ದು ದೊಡ್ಡಕಾತು ಅಂತ ಹೇಳಲು ಯಾರೂ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಕಣ್ಣೀರು ಸುರಿಸುತ್ತ ಪೂರ್ತಿ ಈರುಳ್ಳಿಯನ್ನು ನಾನೇ ಹೆಚ್ಚಬೇಕಾಯಿತು. ಆಮೇಲೆ ಹಸಿಮೆಣಸು ಕತ್ತರಿಸಿ ಹಾಕಿದೆವು. ಕಾಯಿಯನ್ನು ಪುಟ್ಟ ಪುಟ್ಟ ಚೂರುಗಳನ್ನಾಗಿ ಕತ್ತರಿಸಿ ಮಿಕ್ಸ್ ಮಾಡಿದೆವು. ನಂತರ ಸುಮಾರು ಅರ್ಧ ಕೆಜಿ ಹಿಟ್ಟು ಬೇಸಿನ್ನಿಗೆ ಹಾಕಿಕೊಂಡು ಅದಕ್ಕೆ ನೀರು-ಎಣ್ಣೆ ಹಾಕಿ, ಹೆಚ್ಚಿದ್ದ ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಸ್ವಲ್ಪ ಉಪ್ಪು ಎಲ್ಲಾ ಹಾಕಿ ಕಲಸಲು ಶುರು ಮಾಡಿದೆವು. ಸ್ವಲ್ಪ ಗಟ್ಟಿಯಾಯಿತು ಎನಿಸಿತು. ನೀರು ಹಾಕಿದೆವು. ನೀರು ಜಾಸ್ತಿಯಾಯಿತು ಎನ್ನಿಸಿತು. ಹಿಟ್ಟು ಹಾಕಿದೆವು. ಮತ್ತೆ ಗಟ್ಟಿಯಾಯಿತೆನ್ನಿಸಿ ನೀರು ಹಾಕಿದೆವು... ಹೀಗೇ ಜಾಸ್ತಿಯಾಗುತ್ತಾ ಕಮ್ಮಿಯಾಗುತ್ತಾ ಅಂತೂ ಹಿಟ್ಟು ಹದಕ್ಕೆ ಬಂತು ಎನಿಸುವಷ್ಟರಲ್ಲಿ ಹಿಟ್ಟಿನ ಪ್ಯಾಕೆಟ್ಟು ಖಾಲಿಯಾಗಿತ್ತು!

ಸರಿ, ಹಿಟ್ಟೇನೋ ಹದಕ್ಕೆ ಬಂತು, ಈಗ ಅದನ್ನು ತಟ್ಟಿ ಕಾವಲಿಯ ಮೇಲೆ ಹಾಕಬೇಕಲ್ಲ... ತಟ್ಟಲಿಕ್ಕೇನಿದೆ ನಮ್ಮ ಬಳಿ? ಸಂದೀಪನ ಬಳಿ ಬರುವಾಗ ಬಾಳೆ ಎಲೆ ತಗೋಂಬಾ ಎಂದಿದ್ದೆವು. ಎಲ್ಲೂ ಸಿಕ್ಕಲಿಲ್ಲವಂತೆ, ಅವನು ತಂದಿರಲಿಲ್ಲ. ಈಗ ಇರುವುದರಲ್ಲಿಯೇ ಏನರಲ್ಲಾದರೂ ಅಡ್ಜಸ್ಟ್ ಮಾಡಬೇಕಾಯ್ತಲ್ಲ.. ನಾವು ಮೊದಲು ಆಯ್ದುಕೊಂಡದ್ದು ಪ್ಲಾಸ್ಟಿಕ್ ಕವರುಗಳು!

ದಪ್ಪ ಪ್ಲಾಸ್ಟಿಕ್ ಕವರೊಂದನ್ನು ಹುಡುಕಿ, ನೀಟಾಗಿ ಕತ್ತರಿಸಿ ಅದರ ಮೇಲೆ ಒಂದು ಮುಷ್ಟಿ ಹಿಟ್ಟಿಟ್ಟು ತಟ್ಟಿದ್ದಾಯ್ತು. ತಟ್ಟಿದ ವಡಪ್ಪೆಗೆ ನಾಲ್ಕಲ್ಲ, ಐದು ತೂತು ಮಾಡಿದ್ದಾಯ್ತು. ಒಲೆಯ ಮೇಲೆ ಕಾವಲಿ ಕಾಯುತ್ತಿತ್ತು. ಸಂದೀಪ ಎತ್ತಿಕೊಟ್ಟ. 'ಕಾವ್ಲಿ ಮೇಲೆ ಹಾಕ್ತಿದ್ದಾಂಗೆ ಕವರ್ ಎತ್ಕ್ಯಳವು' ಎಂದು ಕಾಶನ್ ಕೊಟ್ಟ. 'ಏಯ್ ಎತ್ತಿರೆ ಸೈ ತಗಳಾ' ಎಂದು ಭಾರೀ ಹುರುಪಿನಿಂದ ನಾನೇ ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಮಗುಚಿಯೇಬಿಟ್ಟೆ! ಆದರೆ ನಾನು ಕವರನ್ನು ಎತ್ತುವುದರೊಳಗೇ ಕಾದಿದ್ದ ಕಾವಲಿಗೆ ಪ್ಲಾಸ್ಟಿಕ್ಕೆಲ್ಲ ಮೆತ್ತಿಕೊಂಡು, ಕರಗಿ, ಹೊಗೆಯೆದ್ದು, ಕಮರು ಅಡುಗೆಮನೆಯನ್ನೆಲ್ಲ ತುಂಬಿಕೊಂಡು, ಸಂದೀಪ-ವಿನಾಯಕರ ಮೂಗು ತಲುಪಿ, ಅದನ್ನವರ ಮೆದುಳು ಪ್ರೊಸೆಸ್ ಮಾಡಿ, ಇದು ಪ್ಲಾಸ್ಟಿಕ್ ಸುಟ್ಟ ವಾಸನೆ ಎಂಬುದವರಿಗೆ ಹೊಳೆದು, 'ಏಯ್ ಎಂಥಾತಾ??' ಎಂದು ಕೇಳುವುದಕ್ಕೂ ನಾನು 'ಅಯ್ಯೋ ಹಿಡ್ಕಂಡೇಬುಡ್ಚ!' ಅನ್ನುವುದಕ್ಕೂ ಸರಿಹೋಯಿತು. ಆದರೂ ಅವರು ಅಡುಗೆಮನೆಗೆ ನುಗ್ಗುವುದರೊಳಗೆ ನಾನು ಹರಸಾಹಸ ಮಾಡಿ ಅಷ್ಟಿಷ್ಟು ಪ್ಲಾಸ್ಟಿಕ್ಕು ಎತ್ತಿ ಮರ್ಯಾದೆ ಉಳಿಸಿಕೊಳ್ಳುವ ಯತ್ನ ಮಾಡಿದೆ. ನಮ್ಮ ಮೊದಲ ವಡಪ್ಪೆ ಹೀಗೆ ವೇಸ್ಟಾಯಿತು. ಆಮೇಲೆ ಕಾವಲಿಯನ್ನು ನೆನೆಸಿ, ಕಾಯಿಸಿ, ಕೆರಚಿ, ವ್ಹಿಮ್ ಹಚ್ಚಿ ಏನೇನೋ ಮಾಡಿ ತೊಳೆದು ಕ್ಲೀನ್ ಮಾಡಿದೆವು.

ನಮ್ಮ ಮುಂದಿನ ಪ್ರಯೋಗಕ್ಕೆ ಕತ್ತರಿಸಲ್ಪಟ್ಟದ್ದು ರಟ್ಟುಗಳು! ಬಟ್ಟೆ ಕಂಪನಿಯವರು ನಮ್ಮ ಅಂಗಿಗಳಿಗೆ ರೇಟ್ ಹೆಚ್ಚಿಸಲು ಮುಚ್ಚಿ ಕೊಟ್ಟಿದ್ದ ಚಂದನೆಯ ಬಾಕ್ಸ್‍ಗಳನ್ನು ಕತ್ತರಿಸಿದೆವು. ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ನಾನು ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಹಾಕಿದೆ. ಆದರೆ ಈ ವಡಪ್ಪೆ ಹಿಟ್ಟಿಗೆ ಈ ಅಂಗಿ ಬಾಕ್ಸಿನ ಮೇಲೆ ಅದೇನೋ ಪ್ರೀತಿಯೋ ಏನೋ, ನಾನೆಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಅದು ರಟ್ಟಿನಿಂದ ಬಿಡಲೇ ಇಲ್ಲ! ಹಾಲಿನಲ್ಲಿ ಕೂತಿದ್ದ ಅವರು 'ಎಂಥಾತಾ ಎಂಥಾತಾ' ಎನ್ನುತ್ತಿದ್ದರು. ನಾನು ರಟ್ಟಿನಿಂದ ಹಿಟ್ಟು ಬಿಡಿಸುವುದರಲ್ಲೇ ಮಗ್ನನಾಗಿದ್ದೆ. ನನ್ನಿಂದ ಯಾವುದೇ ರಿಪ್ಲೇ ಬಾರದಿದ್ದುದನ್ನು ನೋಡಿ ಅವರೇ ಅಡುಗೆಮನೆಗೆ ಬಂದರು. ನನ್ನ ಕಷ್ಟದ ಬಗ್ಗೆ ಸಂತಾಪ ವ್ಯಕ್ತಪಡಿಸುವುದನ್ನು ಬಿಟ್ಟು ಮತ್ತಿನ್ನೇನೋ ಮಾಡುವುದು ಅವರಿಗೂ ಸಾಧ್ಯವಿರಲಿಲ್ಲ. ಹೀಗೆ ನಮ್ಮ ಎರಡನೇ ಪ್ರಯೋಗವೂ ಫೇಲಾಯಿತು.

ನಾವು ಈಗಾಗಲೇ ಹೇಗೆಹೇಗೋ ಅಷ್ಟಿಷ್ಟು ಬೆಂದು ತಯಾರಾಗಿದ್ದ ವಡಪ್ಪೆಯ ಚೂರುಗಳನ್ನು ಮೂವರೂ ಹಂಚಿಕೊಂಡು ತಿಂದಿದ್ದೆವು. ಅದು ಅದೆಷ್ಟು ರುಚಿಯಾಗಿಬಿಟ್ಟಿತ್ತು ಅಂದ್ರೆ, ನಾವು ವಡಪ್ಪೆ ಮಾಡುವುದನ್ನು ಎಟ್ಟೆನಿಕಾಸ್ಟ್ ಮುಂದುವರಿಸಲೇಬೇಕಿತ್ತು.

ಈ ಬಾರಿ ಹೊಸ ಪ್ರಯೋಗಕ್ಕೆ ಮುನ್ನಾಗುವ ಮೊದಲು ನಾವು ಸ್ವಲ್ಪ ಹೊತ್ತು ಯೋಚಿಸಿದೆವು. ಬಟ್ಟೆಯ ಮೇಲೆ ತಟ್ಟುವುದು ನಮ್ಮ ಐಡಿಯಾವಾಗಿತ್ತು. ವಿನಾಯಕನ ಹಳೆಯ ಶಾಲೊಂದನ್ನು ಕಪಾಟಿನಿಂದ ತೆಗೆದೆವು. 'ಮೊನ್ನೆಯಷ್ಟೇ ತೊಳೆದದ್ದು' ಅಂತ ವಿನು ಅಂದ. ನಾವು ನಂಬಿದೆವು. ಕತ್ತರಿಸಿ ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ಎರಡೆರೆಡು ಬಾರಿ ಪ್ರಯೋಗಿಸಿ ಮುಖಭಂಗವಾಗಿದ್ದ ನಾನು ಈ ಬಾರಿ ಮುಗುಮ್ಮಾಗಿ ಪೇಪರ್ರೋದುತ್ತ ಕುಳಿತಿದ್ದೆ. ವಿನು ವಡಪ್ಪೆ ತಟ್ಟಲ್ಪಟ್ಟಿದ್ದ ಬಟ್ಟೆಯನ್ನು ಹಿಡಿದು ಅಡುಗೆಮನೆ ಹೊಕ್ಕ -ನಾನು ಮೊದಲ ಬಾರಿ ಹೊಕ್ಕಷ್ಟೇ ಗತ್ತಿನಿಂದ. ನಾನು ಪೇಪರ್ರನ್ನು ಕೈಯಲ್ಲಿ ಹಿಡಿದಿದ್ದೆನಷ್ಟೇ, ಕಿವಿಯೆಲ್ಲಾ ಇದೀಗ ಅಡುಗೆಮನೆಯಿಂದ ಕೇಳಿಬರಬಹುದಾದ ವಿನಾಯಕನ 'ಛೇ ತೂ' ಗಳನ್ನೇ ನಿರೀಕ್ಷಿಸುತ್ತಿತ್ತು. ಆದರೆ ನಾನು ನಿಬ್ಬೆರಗಾಗುವಂತೆ ವಿನು 'ಆಹಾಹ! ಏನು ಸಲೀಸಾಗಿ ಬಿಡ್ಚಲೇ! ನಾ ಆಗ್ಲೇನೇ ಹೇಳಿದ್ದಿ ಬಟ್ಟೆ ಮೇಲ್ ಹಾಕನ ಅಂತ' ಎನ್ನುತ್ತಾ ಖಾಲಿ ಬಟ್ಟೆಯನ್ನು ಹಿಡಿದು ಬಂದ. ನಾನು ಬೆಪ್ಪನಂತೆ ಮಿಕಿಮಿಕಿ ನೋಡಿದೆ. ಅಂತೂ ನಾವು ಮೂವರು ಗಂಡುಗಲಿಗಳ ಸಾಹಸದಿಂದ ಸುಂದರ ವಡಪ್ಪೆಯೊಂದು ಕಾವಲಿಯ ಮೇಲೆ ಬೆಂದು ಕೆಂಪಾಗಿ ಹೊರಬಂತು. ನಮಗೆ ದ್ರೌಪದಿಯನ್ನೇ ಗೆದ್ದಷ್ಟು ಖುಷಿ!

ಆಮೇಲೆಲ್ಲ ಸುಲಭವಾಯಿತು. ಒಂದರ ಮೇಲೊಂದು ವಡಪ್ಪೆ ತಟ್ಟಿದೆವು. ಐದೇ ನಿಮಿಷದಲ್ಲಿ ಕಾಯಿಚಟ್ನಿ ತಯಾರಾಯಿತು. ಊರಿಂದ ತಂದಿದ್ದ ಜೋನಿ ಬೆಲ್ಲವಂತೂ ಇತ್ತು. ತುಪ್ಪದ ಬಾಟ್ಲಿಯೂ ಇತ್ತು. ಆದರೆ ಪೂರ್ತಿ ವಡಪ್ಪೆ ತಟ್ಟಿಯಾಗಿ, ಅವು ಬೆಂದು, ನಾವು ಪ್ಲೇಟೆಲ್ಲ ಹಾಕಿಕೊಂಡು, ಮಧ್ಯದಲ್ಲಿ ಸಿದ್ಧವಾಗಿದ್ದ ವಡಪ್ಪೆ ಗುಡ್ಡೆ ಇಟ್ಟುಕೊಂಡು ಕೂರುವ ಹೊತ್ತಿಗೆ ಎರಡು ಎಡವಟ್ಟುಗಳಾಗಿದ್ದವು:

ಮಾಡುತ್ತ ಮಾಡುತ್ತಲೇ ನಾವು ಸುಮಾರು ವಡಪ್ಪೆಗಳನ್ನು ತಿಂದುಬಿಟ್ಟಿದ್ದರಿಂದ ನಮ್ಮೆಲ್ಲರ ಹೊಟ್ಟೆಯೂ ತುಂಬಿಹೋಗಿತ್ತು. ಮತ್ತು ಎಂಟು ಗಂಟೆಗೆ ಶುರು ಮಾಡಿದ್ದ ನಮ್ಮ ವಡಪ್ಪೆ ತಯಾರಿಕೆ ಫ್ಯಾಕ್ಟರಿ ಮುಗಿದಾಗ ರಾತ್ರಿ ಹನ್ನೊಂದೂವರೆ ಆಗಿತ್ತು! ಇನ್ನೆಲ್ಲಿಂದ ತಿನ್ನುವುದು? ಒಂದು ಕಡೆಗೆ ನಿದ್ರೆ ಎಳೆಯುತ್ತಿತ್ತು. ಸಂದೀಪ ಜೋಕಿನ ಮೇಲೆ ಜೋಕು ಹೇಳುತ್ತಿದ್ದ. ಚಟ್ನಿ ಬೇರೆ ಖಾರವಾಗಿತ್ತು. ನನಗಂತೂ ನಗುವುದೋ ಅಳುವುದೋ ಒಂದೂ ಗೊತ್ತಾಗದೆ, ತಿಂಗಳಿಗೆ ಕನಿಷ್ಟ ನಾಲ್ಕು ದಿನ ಸ್ವಲ್ಪವೂ ಬೇಸರಿಸಿಕೊಳ್ಳದೆ ಬೆಳಗ್ಗೆ ತಿಂಡಿಗೆ ವಡಪ್ಪೆ ಮಾಡುವ ಅಮ್ಮನನ್ನು ನೆನೆಸಿಕೊಳ್ಳುತ್ತಾ, ಚೂರು ಚೂರೇ ಮುರಿಯುತ್ತ ಮೆಲ್ಲತೊಡಗಿದೆ. ತಲಾ ಎರಡು ವಡಪ್ಪೆ ತಿನ್ನುವುದರೊಳಗೆ ನಾವೆಲ್ಲ ಸುಸ್ತು! 'ನಾಳೆ ತಿಂದ್ರಾತು ತಗಳಾ' ಎಂದು ಗೊಣಗಿಕೊಂಡು ಮಲಗಿದೆವು. ಸಂದೀಪನೂ ಆ ರಾತ್ರಿ ನಮ್ಮನೆಯಲ್ಲೇ ಉಳಿದ.

ಆದರೆ ಬೆಳಗ್ಗೆ ಮತ್ತೆ ಅದೇ ವಡಪ್ಪೆಯನ್ನು ತಿನ್ನುವ ಉತ್ಸಾಹ ಯಾರಿಗೂ ಇರಲಿಲ್ಲ. ಹೀಗಾಗಿ, ಆ ಉಳಿದ ವಡಪ್ಪೆಗಳು ನಮ್ಮನೆ ಗ್ಯಾಸ್ ಕಟ್ಟೆ ಮೇಲೆ ಮೂರ್ನಾಲ್ಕು ದಿನ ಕೂತಿದ್ದು, ಆಮೇಲೆ ಡಸ್ಟ್‍ಬಿನ್ನು ಸೇರಿ, ನಂತರ ಕಸ ಸಂಗ್ರಹಿಸುವವರ ತಳ್ಳುಗಾಡಿ ಹತ್ತಿ, ಆಮೇಲೆ ದೊಡ್ಡದೊಂದು ಲಾರಿಯಲ್ಲಿ ಕೂತು ರಾಜಧಾನಿಯ ಬೀದಿಯಲ್ಲಿ ಮೆರವಣಿಗೆ ಹೋಗಿ, ನಮಗ್ಯಾರಿಗೂ ಗೊತ್ತಿಲ್ಲದ ತಗ್ಗು ಪ್ರದೇಶವೊಂದರಲ್ಲಿ ಅಂತರ್ಧಾನವಾಗಿಹೋದವು.

Thursday, November 22, 2007

ಸಿಡಿಯಲಿರುವ ಪಟಾಕಿ

ಅಪ್ಪ ಪ್ರತಿ ಕವಳವನ್ನೂ ತುಂಬಾ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಹಾಕುತ್ತಿದ್ದ. ಅದು ಅವನ ಬಾಯಲ್ಲಿರುವುದು ಐದೇ ನಿಮಿಷವಿರಬಹುದು, ಆದರೆ ಮೊದಲು ಒಂದಿಡೀ ಕೆಂಪಡಿಕೆ ಕತ್ತರಿಸಿ ನಾಲ್ಕು ಹೋಳು ಮಾಡಿ ಬಾಯಿಗೆ ಹಾಕಿಕೊಂಡು, ಅದು ಹಲ್ಲ ಮಿಕ್ಸರಿಗೆ ಸಿಕ್ಕು ನಲವತ್ನಾಲ್ಕು ಹೋಳಾಗಿ, ನಂತರ ಲೆಕ್ಕಕ್ಕೇ ಸಿಗದಷ್ಟು ಸಂಖ್ಯೆಯಲ್ಲಿ ಪುಡಿಪುಡಿಯಾಗುತ್ತಿರುವಾಗ ಅಪ್ಪ ಒಂದು ಸುಂದರ ಅಂಬಡೆ ಎಲೆಯ ತೊಟ್ಟು ಮುರಿದು, ನಂತರ ಅದರ ಕೆಳತುದಿಯನ್ನು ಮುರಿದು ತಲೆ ಮೇಲೆಸೆದುಕೊಂಡು, ಎಲೆಯ ಹಿಂಬದಿಯ ದಪ್ಪ ಗೀರುಗಳನ್ನು ನಾಜೂಕಾಗಿ ಚರ್ಮದಂತೆ ಬಿಡಿಸಿ ಎಳೆದು ತೆಗೆದು, ನಂತರ ಸುಣ್ಣದ ಕರಡಿಗೆಯಿಂದ ಸುಣ್ಣ ತೆಗೆದು ಎಲೆಯ ಬೆನ್ನಿಗೆ ನೀಟಾಗಿ ಸವರಿ, ಸಾಲಂಕೃತ ಎಲೆಯನ್ನು ಮಡಿಚಿ ಮಡಿಚಿ ಮಡಿಚಿ ಬಾಯಿಗಿಟ್ಟುಕೊಳ್ಳುತ್ತಿದ್ದ. ಅಡಿಕೆಯ ಕೆಂಪು ರಸ ತುಂಬಿದ್ದ ಬಾಯೊಳಗೆ ಈ ಅಂಬಡೆ ಎಲೆ ತನ್ನ ಹಸಿರು ಕಂಪಿನೊಂದಿಗೆ ಬೆರೆತು ಸಾಮ್ರಾಜ್ಯ ಸ್ಥಾಪಿಸುವ ವೇಳೆಯಲ್ಲಿ ಅಪ್ಪ ಕಪ್ಪು ತಂಬಾಕಿನ ಎಸಳಿನಿಂದ ಚೂರೇ ಚೂರನ್ನು ಚಿವುಟಿ ಮುರಿದು, ಅದನ್ನು ಅಂಗೈಯಲ್ಲಿ ಸ್ವಲ್ಪ ಸುಣ್ಣದೊಂದಿಗೆ ತಿಕ್ಕಿ ಸಣ್ಣ ಉಂಡೆ ಮಾಡಿ ಬಾಯಿಗೆಸೆದುಕೊಳ್ಳುತ್ತಿದ್ದ. ಅಪ್ಪನ ಈ ಕವಳ ತಯಾರಿಕಾ ಕ್ರಮವನ್ನೂ, ನಂತರ ಆ ಕವಳ ಅಪ್ಪನನ್ನು ಅನಿರ್ವಚನೀಯ ಬ್ರಹ್ಮಾನಂದದಲ್ಲಿ ಐದಾರು ನಿಮಿಷಗಳ ಕಾಲ ತೇಲಿಸುತ್ತಿದ್ದ ವಿಸ್ಮಯವನ್ನೂ ಕಣ್ಣು ಮಿಟುಕಿಸದೇ ನೋಡುತ್ತಾ ಪಕ್ಕದಲ್ಲಿ ಕೂತಿರುತ್ತಿದ್ದ ನನಗೂ ಅಪ್ಪ ಒಮ್ಮೊಮ್ಮೆ ಪುಟ್ಟ ಸಿಹಿಗವಳ ಮಾಡಿಕೊಡುತ್ತಿದ್ದ. 'ಅವಂಗೆಂತಕೆ ಕವಳ ಮಾಡ್ಕೊಡ್ತಿ? ಕವಳ ಹಾಕಿರೆ ನಾಲ್ಗೆ ದಪ್ಪ ಆಗ್ತು. ಕೊನಿಗೆ ಶಾಲೆಲಿ ಮಗ್ಗಿ ಹೇಳಕ್ಕರೆ ತೊದಲೋ ಹಂಗೆ ಆಗ್ತು ಅಷ್ಟೆ' ಎಂಬ ಅಮ್ಮನ ಅಸಹನೆಯ ಕಿಸಿಮಾತನ್ನು ಅಪ್ಪ ಕವಳ ತುಂಬಿದ ಮುಚ್ಚಿದ ಬಾಯಿಂದಲೇ, ಅದರಿಂದಲೇ ಮೂಡಿಸುತ್ತಿದ್ದ ಮುಗುಳ್ನಗೆ ಬೆರೆತ ಅನೇಕ ಭಾವಸಂಜ್ಞೆಗಳಿಂದಲೇ ಸಂಭಾಳಿಸುತ್ತಿದ್ದ. ಅಪ್ಪ ಮಾಡಿಕೊಟ್ಟ ಸಿಹಿಗವಳ ಹದವಾಗಿರುತ್ತಿತ್ತು, ನನ್ನ ಮೈಯನ್ನು ಬಿಸಿ ಬಿಸಿ ಮಾಡುತ್ತಿತ್ತು.

ಅಪ್ಪ ಸದಾ ನನ್ನನ್ನು ಬೆಚ್ಚಗಿಟ್ಟಿರಲು ಪ್ರಯತ್ನಿಸುತ್ತಿದ್ದ. ಅಥವಾ, ಅಪ್ಪನೊಂದಿಗೆ ನಾನಿರುತ್ತಿದ್ದ ಸಂದರ್ಭವೆಲ್ಲ ಬೆಚ್ಚನೆಯ ಹವೆಯೇ ಸುತ್ತ ಇರುತ್ತಿತ್ತು. ಅಪ್ಪ ನನ್ನ ಚಳಿಗೊಂದು ಕೌದಿಯಂತಿದ್ದ.

ಮಲೆನಾಡಿನ - ಹೊಳೆಯಾಚೆಗಿನ ಊರು ನಮ್ಮದು. ದಟ್ಟ ಕಾಡು - ಬೆಟ್ಟಗಳ ನಡುವಿನ, ಎಂಟೇ ಎಂಟು ಮನೆಗಳ ಪುಟ್ಟ ಊರು. ಒಂದು ಮನೆಗೂ ಮತ್ತೊಂದು ಮನೆಗೂ ಕೂಗಳತೆಯ ಅಂತರ. ಸದಾ ಮಳೆ, ಇಲ್ಲವೇ ಇಬ್ಬನಿ, ಅಪರೂಪಕೊಮ್ಮೆ ಉರಿಬಿಸಿಲು. ದೊಡ್ಡ ಭವಂತಿ ಮನೆಯ ಆಚೆ ಕಡೆ ಕೊಟ್ಟಿಗೆ, ಅದರ ಪಕ್ಕದಲ್ಲೇ ಬಚ್ಚಲುಮನೆ, ನಡುವೆ ಹಾವಸೆಗಟ್ಟಿದ - ಜಾರುವ ಅಂಗಳ. ಅಪ್ಪ-ನಾನು ಕವಳದ ತಬಕು, ಚಿಮಣಿ ಬುರುಡೆಯೊಂದಿಗೆ ಬೆಳಗ್ಗೆ ಎದ್ದಕೂಡಲೇ ಬಚ್ಚಲು ಒಲೆಗೆ ಬೆಂಕಿ ಒಟ್ಟಲು ಹೋಗುತ್ತಿದ್ದೆವು. ಒಟ್ಟು ಕುಟುಂಬವೆಂದಮೇಲೆ ಸ್ನಾನಕ್ಕೆ ಎಷ್ಟು ಬಿಸಿ ನೀರಿದ್ದರೂ ಬೇಕು. ಹಂಡೆಯ ನೀರನ್ನು ಸದಾ ಬಿಸಿಯಾಗಿಡುವ ಕೆಲಸ ಸಾಮಾನ್ಯವಾಗಿ ಅಪ್ಪನದ್ದೇ. ಜಂಬೆಮರದ ಚಕ್ಕೆಯನ್ನು ಒಲೆಯೊಳಗೆ ಕೂಡಿ, ಚಿಮಣಿ ಬುರುಡೆಯಿಂದ ಹಾಳೆಭಾಗ ಅಥವಾ ತೆಂಗಿನ ಗರಿಯ ತುದಿಗೆ ಬೆಂಕಿ ಹತ್ತಿಸಿಕೊಂಡು ಒಲೆಯೊಳಗೆ ಕೂಡುತ್ತಿದ್ದೆವು. ಹಂಡೆಯ ಅಂಡಿನಿಂದ ವಿಸ್ತರಿಸುತ್ತಿದ್ದ ಶಾಖಕ್ಕೆ ಅದರೊಡಲ ನೀರೆಲ್ಲ ಬಿಸಿ ಬಿಸಿ ಬಿಸಿಯಾಗಿ ಕಾಲು ಗಂಟೆಯೊಳಗೆ ಕೊತ ಕೊತ! ಬೆಂಕಿ ಒಟ್ಟಲು ಕೂತ ನನ್ನ ಚಳಿ ಹಾರಿಹೋಗಿ, ಅಡುಗೆಮನೆಗೆ ಓಡಿಬಂದು ತಿಂಡಿ ತಿಂದು ಸ್ನಾನ ಮಾಡಿ ಶಾಲೆಗೆ ಹೊರಡಲು ತಯಾರಾಗುತ್ತಿದ್ದೆ.

ಅಣ್ಣ ಮಹೇಶನನ್ನು ದೊಡ್ಡಪ್ಪ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಶಾಲೆಗೆ ಬಿಟ್ಟು ಹೋಗುತ್ತಿದ್ದ. ನಾನು ಮಾತ್ರ ರೈತರ ಕೇರಿಯ ಹುಡುಗರೊಂದಿಗೆ ನಡೆದೇ ಹೋಗುತ್ತಿದ್ದೆ. ಮಹೇಶನಿಗೆ ಪ್ರತಿವರ್ಷವೂ ಹೊಸ ಯುನಿಫಾರಂ ಹೊಲಿಸುತ್ತಿದ್ದ ದೊಡ್ಡಪ್ಪ. ನನಗೆ ಎರಡು ವರ್ಷಕ್ಕೊಮ್ಮೆ. 'ನಿನ್ ಯುನಿಫಾರ್ಂ ಹೊಸದರಂಗೆ ಚನಾಗೇ ಇದ್ದಲಾ.. ನಮ್ಮನೆ ಮಾಣಿಗೆ ಒಂದು ಬಟ್ಟೆಯೂ ತಡಿಯದಿಲ್ಲೆ.. ಹರಕೈಂದ ನೋಡು' ಎನ್ನುತ್ತ ನನ್ನ ಬಳಿ ಮಹೇಶನ ಬಗ್ಗೆ ಸುಳ್ಳೇ ಸಿಟ್ಟು ವ್ಯಕ್ತಪಡಿಸುತ್ತಿದ್ದ. ಮಹೇಶನ ಈ ವರ್ಷದ ಪಠ್ಯ ಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ. ಪೇಟೆಯಿಂದ ತಂದ ಬಿಸ್ಕೇಟ್ ಪ್ಯಾಕನ್ನು ಮಹೇಶ ಜಗಲಿ ಬಾಗಿಲಿನಲ್ಲೇ ಕಸಿದುಕೊಂಡು ನನಗೆ ಎರಡೇ ಎರಡು ಕೊಟ್ಟು ಉಳಿದಿದ್ದನ್ನು ಅವನೇ ಗುಳುಂ ಮಾಡುತ್ತಿದ್ದ. ಹಾಗಂತ ನನಗೇನು ಮಹೇಶನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ದಿನಾ ಸಂಜೆ ಒಟ್ಟಿಗೇ ಆಡಿಕೊಳ್ಳುತ್ತಿದ್ದೆವು. ಆದರೆ ಎಲ್ಲಾದರೊಮ್ಮೆ ದೊಡ್ಡಪ್ಪ-ದೊಡ್ಡಮ್ಮ ಹೀಗೆ ನನಗೂ-ಅವನಿಗೂ ಮಾಡುತ್ತಿದ್ದ ಆರೈಕೆಯಲ್ಲಿನ ವ್ಯತ್ಯಾಸ ನನ್ನ ಅರಿವಿಗೆ ಬೇಡವೆಂದರೂ ಬರುತ್ತಿತ್ತು.

ಅಮ್ಮ ಪ್ರತಿ ರಾತ್ರಿ ಕೋಣೆಯಲ್ಲಿ ಅಪ್ಪನೊಂದಿಗೆ ಗುಸುಗುಸು ಮಾಡುತ್ತಿದ್ದಳು. 'ಅಕ್ಕಯ್ಯ ಹಂಗೆ ಹಿಂಗೆ. ನಿಮಗೆ ಏನೂ ಗೊತ್ತಾಗ್ತಲ್ಲೆ, ಅಣ್ಣ ಅಂದ್ರೆ ದೇವ್ರು, ಅವ್ರು ಒಳಗಿಂದೊಳಗೇ ದುಡ್ಡು ಮಾಡಿಟ್ಕಳ್ತಿದ್ದ, ಅತ್ತೆಮ್ಮನೂ ಅವ್ರಿಗೇ ಸಪೋರ್ಟು, ಒಂದು ದಿನ ಹಿಸೆ ಮಾಡಿ ನಮ್ಮುನ್ನ ಬರಿಗೈಯಲ್ಲಿ ಹೊರಡುಸ್ತ ಅಷ್ಟೆ' ಇತ್ಯಾದಿ. ನನಗೆ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಆದರೆ ಎಲ್ಲರ ಕಿವಿ ತಪ್ಪಿಸಿ ಅಪ್ಪನ ಬಳಿ ಅಮ್ಮ ಆಡುತ್ತಿದ್ದ ಈ ಗುಸುಗುಸು-ಪಿಸಪಿಸಗಳೇ ನನಗೆ ದೊಡ್ಡಪ್ಪ-ದೊಡ್ಡಮ್ಮ ನಮಗೇನೋ ಮೋಸ ಮಾಡುತ್ತಿದ್ದಾರೆ ಎಂಬಂತಹ ಸೂಚನೆ ಕೊಟ್ಟು, ಅವರೆಡೆಗಿನ ನನ್ನ ನೋಟಕ್ಕೆ ಗುಮಾನಿಯ ಕನ್ನಡಕ ತೊಡಿಸುತ್ತಿತ್ತು. ಅಪ್ಪ ಮಾತ್ರ ಸದಾ ಮೌನಮೂರ್ತಿ. ಅಮ್ಮನ ಈ ರಾತ್ರಿಯ ಗುಸುಗುಸುಗಳಿಗೆ 'ಥೋ ಸಾಕು ಸುಮ್ನಿರೇ. ನಂಗೆಲ್ಲ ಗೊತ್ತಿದ್ದು' ಎಂದು ಸಿಡುಕಿದಂತೆ ಉತ್ತರಿಸಿ ಅತ್ತ ತಿರುಗಿ ಮಲಗುತ್ತಿದ್ದ. ಅಮ್ಮ ಇತ್ತ ತಿರುಗಿ ಮಲಗುತ್ತಿದ್ದಳು. ನಾನು ಕಣ್ಮುಚ್ಚಿ ನಿದ್ರೆ ಹೋಗುತ್ತಿದ್ದೆ.

ಅಪ್ಪ, ಈ ರಾತ್ರಿಯ ಗುಸುಗುಸುಗಳಿಂದ ತಪ್ಪಿಸಿಕೊಂಡಿರಲೇನೋ ಎಂಬಂತೆ, ಅವಕಾಶ ಸಿಕ್ಕಿದಾಗಲೆಲ್ಲ, ಯಕ್ಷಗಾನ - ತಾಳಮದ್ದಲೆ ಎಂದು ಹೋಗಿಬಿಡುತ್ತಿದ್ದ. ನಮ್ಮ ಸೀಮೆಯದೇ ಆದ 'ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಲಿ'ಯಲ್ಲಿ ಅಪ್ಪನೊಬ್ಬ ಮುಖ್ಯ ಭಾಗವತ. ಮರುದಿನ ರಜಾದಿನವಾಗಿದ್ದರೆ ನಾನೂ ಅಪ್ಪನೊಟ್ಟಿಗೆ ಹೋಗುತ್ತಿದ್ದೆ. ತುಮರಿ, ಬ್ಯಾಕೋಡು, ಸುಳ್ಳಳ್ಳಿ, ನಿಟ್ಟೂರು, ಸಂಪೆಕಟ್ಟೆ ಹೀಗೆ ತಿಂಗಳಿಕೆ ನಾಲ್ಕು ಬಯಲಾಟವೋ ತಾಳಮದ್ದಲೆಯೋ ಇದ್ದೇ ಇರುತ್ತಿತ್ತು. ಅಪ್ಪ ತಾಳ ಹಿಡಿದು ಮೈಕಿನ ಮುಂದೆ ಕೂತರೆ ಹಾರ್ಮೋನಿಯಂ ಎದುರು ನಾನು. ಕೈ ಸೋಲುವವರೆಗೆ ಅಥವಾ ನಿದ್ರೆ ಬರುವವರೆಗೆ ಹಾರ್ಮೋನಿಯಂನ ಬಾಟಿ ಎಳೆಯುವುದು. ನನಗೇನು ಯಕ್ಷಗಾನದ ಪದ್ಯಗಳಾಗಲೀ, ಪೂರ್ತಿ ಪ್ರಸಂಗವಾಗಲೀ ಅರ್ಥವಾಗುತ್ತಿತ್ತೆಂದಲ್ಲ, ಆದರೆ ಎಲ್ಲ ಕತೆಯೂ ಗೊತ್ತಿತ್ತು ಮತ್ತು, ಹಾಗೆ ಅಪ್ಪನ ಪಕ್ಕ ಸ್ವೆಟರು - ಜುಬ್ಬ ಹಾಕಿ ಕೂತಾಗ ತುಂಬಾ ಬೆಚ್ಚನೆ ಹಿತಾನುಭವವಾಗುತ್ತಿತ್ತು. ನಾಗೇಶಣ್ಣ ಚಂಡೆಯ ಮೇಲೆ ಆ ಎರಡು ಕಡ್ಡಿಗಳಿಂದ ಆಡುತ್ತಿದ್ದ ಆಟ, ಗಣಪಣ್ಣ ಮೃದಂಗದೊಂದಿಗೆ ತನ್ನ ಬೆರಳುಗಳಲ್ಲೇ ಮೂಡಿಸುತ್ತಿದ್ದ ಮಾಟ, ಸುರೇಶ ಶೆಟ್ಟಿ - ಮಂಜಪ್ಪಣ್ಣರ ಚಕ್ರಮಂಡಿ ಕುಣಿತಗಳೆಡೆಗೆ, ಆಟದ ಮಧ್ಯೆ ಮಧ್ಯೆ ನಮಗೆ ತಂದುಕೊಡುತ್ತಿದ್ದ ಬಿಸಿಬಿಸಿ ಚಹಾದಷ್ಟೇ ವಿಚಿತ್ರ ಸೆಳೆತವಿತ್ತು.

ಅಪ್ಪ ಈ ಯಕ್ಷಗಾನ - ತಾಳಮದ್ದಲೆಗಳಲ್ಲಿ ಸಿಗುತ್ತಿದ್ದ ನೂರು - ಇನ್ನೂರು ರೂಪಾಯಿ ಸಂಭಾವನೆಗಳಿಂದಾಗಿಯೋ ಏನೋ ತನ್ನ ಪಾಡಿಗೆ ತಾನು ನಿರುಮ್ಮಳವಾಗಿದ್ದುಬಿಡುತ್ತಿದ್ದ. ದೊಡ್ಡಪ್ಪ ಒಂದು ಕಡೆಯಿಂದ ಒಪ್ಪವಾಗಿ ನಮ್ಮೆಡೆಗೆ ಹೂಡುತ್ತಿದ್ದ ಸಂಚುಗಳು ಅವನಿಗೆ ತಿಳಿಯುತ್ತಲೇ ಇರಲಿಲ್ಲವೆನಿಸುತ್ತೆ. ಅಮ್ಮನಿಗೆ ತಿಳಿಯುತ್ತಿತ್ತು. ಆದರೆ ನನಗೆ ಮಾತ್ರ ಸದಾ ಅಪ್ಪನ ಮೇಲೆ ಸಿಡುಕುವ ಅವಳ ಬಗ್ಗೆ ಕೋಪವಿತ್ತು. ಅಪ್ಪ ತುಂಬಾ ಪಾಪ ಎನಿಸುತ್ತಿದ್ದ.

ಆ ವರ್ಷ ಜೋರು ಚಳಿಯಿತ್ತು. ಪ್ರತಿವರ್ಷಕ್ಕಿಂತ ಜಾಸ್ತಿಯೇ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಕಾರ್ತೀಕ ಮಾಸ. ಊರಲ್ಲೆಲ್ಲಾ ಅಡಿಕೆ ಸುಗ್ಗಿಯ ಭರಾಟೆ. 'ಮುಂದಿನ ವಾರ ನಮ್ಮನೇಲಿ ಕೊಯ್ಸವು. ಕೊನೆಕಾರಂಗೆ ಹೇಳಿಕ್ ಬೈಂದಿ' ಅಂತ ದೊಡ್ಡಪ್ಪ ಹೇಳುತ್ತಿದ್ದ. ಅವತ್ತು ತುಳಸೀಕಟ್ಟೆ ಕಾರ್ತೀಕವಿತ್ತು. ನಾನು-ಮಹೇಶ-ಅಮ್ಮ-ದೊಡ್ಡಮ್ಮ ಮನೆಮನೆಗೂ ಹೋಗಿ, ತುಳಸೀಕಟ್ಟೆ ಪೂಜೆಯಲ್ಲಿ ಪಾಲ್ಗೊಂಡು, ಮಂಗಳರಾತಿ ಸಮಯದಲ್ಲಿ ಝಾಂಗ್ಟೆ ಬಡಿದು, ಹಣತೆ ದೀಪಗಳ ಬೆಳಕಲ್ಲಿ ಕೋಸಂಬರಿ - ಚೀನಿಕಾಯಿ ಶೀಂಗಳ ಪನಿವಾರ ತಿಂದು, ರಾತ್ರಿ ಒಂಭತ್ತರ ಹೊತ್ತಿಗೆ ಮನೆ ತಲುಪುವಷ್ಟರಲ್ಲಿ ನಮಗೊಂದು ಆಘಾತ ಕಾದಿತ್ತು.

ಅಪ್ಪ ಎದೆನೋವು, ಹೊಟ್ಟೆಲೆಲ್ಲಾ ಸಂಕಟ, ಕರುಳು ಉರೀತಾ ಇದ್ದು ಎಂದೇನೇನೋ ಹೇಳುತ್ತಾ ಕೋಣೆಯಲ್ಲಿ ಮಲಗಿಕೊಂಡಿದ್ದ. ಅಮ್ಮ ಆತಂಕಗೊಂಡು ದೊಡ್ಡಪ್ಪನಿಗೆ ಹೇಳಿ, ಮನೆಯವರೆಲ್ಲಾ ಕೋಣೆಯಲ್ಲಿ ಸೇರಿದ್ದಾಯ್ತು. 'ಗ್ಯಾಸು ಆಗಿಕ್ಕು, ಸುಮ್ನೆ ಹೊಟ್ಟೆ ಮುರ್ವು ಕಾಣ್ತು, ಅದಾಗಿಕ್ಕು ಇದಾಗಿಕ್ಕು' ಅಂತೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಏನೇನೋ ಕಷಾಯ ಅದೂ ಇದೂ ಕಾಸಿ ಬೀಸಿ ಅಪ್ಪನಿಗೆ ಕುಡಿಸಿದರು. ಕೊಲ್ಲೂರು ಮೂಕಾಂಬಿಕೆಗೆ ಕಾಯಿ ತೆಗೆದಿಟ್ಟದ್ದಾಯ್ತು. ಆದರೆ ರಾತ್ರಿ ಹನ್ನೊಂದರ ಹೊತ್ತಿಗೆ ಅಪ್ಪನ ನೋವು-ನರಳಾಟಗಳು ಜಾಸ್ತಿಯಾದವು. ದಡಬಡಾಯಿಸಿ, ಹೊಸಕೊಪ್ಪದಿಂದ ಸುಬ್ಬಣ್ಣನ ಜೀಪು ತರಿಸಿ, ಬ್ಯಾಕೋಡಿನ ಸರ್ಕಾರಿ ಆಸ್ಪತ್ರೆ ಕಾಂಪೌಂಡರಿನ ಬಳಿ ಅಪ್ಪನನ್ನು ಕರೆದೊಯ್ದದ್ದಾಯ್ತು. ದೊಡ್ಡಪ್ಪ, ಪಕ್ಕದಮನೆ ನಾಗೇಶಣ್ಣ, ಅಮ್ಮ, ಅಮ್ಮನನ್ನು ಬಿಟ್ಟಿರದ ನಾನೂ ಜೊತೆಗೆ. ಕಾಂಪೌಂಡರು ಅಲ್ಸರು, ಅಪೆಂಡಿಕ್ಸು ಎಂದೇನೇನೋ ಅಂದರು. ಇಲ್ಲಿ ಆಗುವುದಿಲ್ಲ, ಸಾಗರಕ್ಕೇ ಕರೆದೊಯ್ಯಬೇಕು ಎಂದರು. ಆಪರೇಶನ್ ಆಗಬೇಕು ಎಂದರು. ಸರಿ, ಬೆಳಗಿನ ಮೊದಲ ಲಾಂಚಿಗೇ ಹೋಗುವುದು ಎಂದಾಯಿತು. ಆದರೆ ರಾತ್ರಿ ಮೂರರ ಹೊತ್ತಿಗೆ, ಏನಾಯಿತು ಎಂತಾಯಿತು ಎಂಬುದು ಯಾರಿಗೂ ಸರಿಯಾಗಿ ಅರ್ಥವಾಗುವ ಮೊದಲೇ ಅಪ್ಪ ನರಳಾಡುವುದನ್ನೂ ಹೊರಳಾಡುವುದನ್ನೂ ನಿಲ್ಲಿಸಿ, ಕೊನೆಗೆ ಉಸಿರಾಡುವುದನ್ನೂ ನಿಲ್ಲಿಸಿಬಿಟ್ಟ. ಅಪ್ಪನ ಬಿಸಿ ದೇಹ ತಣ್ಣಗಾಗುತ್ತಾ ಆಗುತ್ತಾ, ಅಳು, ದಿಗ್ಭ್ರಮೆ, ಹೇಳಲಾರದ ನೋವು, ಮುಂದೇನೆಂದೇ ತಿಳಿಯದ ಮುಗ್ಧ-ಮೂಢತೆಯ ಸೂತಕ ನಮ್ಮನ್ನಾವರಿಸಿ, ಘೋರ ಚಳಿಯಂತೆ ಮೈ ಮರಗಟ್ಟಿಸಿಬಿಟ್ಟಿತು. ಅಪ್ಪನ ನಿಶ್ಚೇಷ್ಟಿತ ತಣ್ಣನೆ ದೇಹವನ್ನು ಜೀಪಿನ ಸದ್ದು ಬೆರೆತ ಮೌನದಲ್ಲಿ ಮನೆಗೆ ತಂದಾಗ, ತುಳಸೀಕಟ್ಟೆಯ ಸುತ್ತ ಹಚ್ಚಿಟ್ಟಿದ್ದ ದೀಪಗಳು ಆಗ ತಾನೇ ಆರಿದ್ದವು.

ನಂತರ ದೊಡ್ಡಪ್ಪನ ಯಜಮಾನಿಕೆ ಮತ್ತೂ ಜೋರಾಗಿದ್ದು, ವಿಧವೆ ಅಮ್ಮ ಬಾಯಿ ಬಿಡಲೂ ಆಗದಂತೆ ಕಟ್ಟಿ ಹಾಕಲ್ಪಟ್ಟಿದ್ದು, ಅದೇ ಕಲಕಿದ ವಾತಾವರಣದಲ್ಲೇ ನಾನು ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದು, ಇನ್ನು ಅಲ್ಲಿರಲಾಗದೇ ಈ ಬೆಂಗಳೂರಿಗೆ -ಚಿಕ್ಕ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲಿಕ್ಕೆ ಬಂದದ್ದು ...ಏನೆಲ್ಲ ಆಗಿ ಹೋಯಿತು! ಅಮ್ಮ ಮೊನ್ನೆ ಫೋನ್ ಮಾಡಿದ್ದಳು. 'ನಿನಗೆ ಮುಂದಿನ ತಿಂಗಳಿಗೆ ಹದಿನೆಂಟು ವರ್ಷ ತುಂಬುತ್ತದೆ. ಊರಿಗೆ ಬಾ. ದೊಡ್ಡಪ್ಪನ ಬಳಿ ಮಾತಾಡು. ಒಪ್ಪಲಿಲ್ಲ ಎಂದರೆ ಅವನ ಮೇಲೆ ದಾವೆ ಹೂಡೋಣ. ನಿನ್ನ ದೊಡ್ಡ ಮಾವ ಲಾಯರ್ ಹತ್ರ ಎಲ್ಲಾ ಮಾತಾಡಿದಾನಂತೆ. ಲಾಯರು ಕೇಸು ಗೆದ್ದುಕೋಡೋಣ ಎಂದಿದಾರಂತೆ. ಅಲ್ಲಿ ಇದ್ದು ನೀನು ಸಾಧಿಸೋದು ಅಷ್ಟರಲ್ಲೇ ಇದೆ. ನಮಗೆ ಸೇರಬೇಕಾದ ಆಸ್ತೀನ ನಾವು ಪಡೆದುಕೊಂಡು, ಒಂದು ಮನೆ-ಗಿನೆ ಕಟ್ಟಿಕೊಂಡು ಆರಾಮಾಗಿರೋಣ. ನಮಗೆ ಯಾರ ಹಂಗೂ ಬ್ಯಾಡ...' ಅಮ್ಮ ನಾನಾಗೇ ಫೋನಿಡುವವರೆಗೂ ಮಾತಾಡುತ್ತಲೇ ಇದ್ದಳು.

ಇಲ್ಲಿ ಇವತ್ತು ಮತ್ತೆ ತುಳಸೀಕಟ್ಟೆ ಕಾರ್ತೀಕ. ಅಂದರೆ ಅಪ್ಪ ಸತ್ತು ಇವತ್ತಿಗೆ ಹತ್ತು ವರ್ಷವಾಯ್ತು. ಹೊರಗಿನಿಂದ ಒಂದೇ ಸಮನೆ ಪಟಾಕಿಗಳ ಶಬ್ದ ಕೇಳಿಬರುತ್ತಿದೆ. ಪ್ರತಿ ಮನೆಯ ಎದುರೂ ಬಿರುಸಿನಕುಡಿಕೆಯ ಹೂಕುಂಡಗಳು. ತುಳಸೀಪಾಟಿನ ಸುತ್ತ ದೀಪಗಳು. ಒಂದು ನೆಲ್ಲಿರೆಂಬೆ. ಸುರುಸುರುಬತ್ತಿ ಹಿಡಿದ ಪುಟ್ಟ ಮಕ್ಕಳು... ಸಂಭ್ರಮವೋ ಸಂಭ್ರಮ.

ನಾನು ಯೋಚಿಸುತ್ತಿದ್ದೇನೆ: ಬೆಂಗಳೂರಿಗೆ ಬಂದು ಎರಡು ವರ್ಷವಾಯಿತು. ಇಷ್ಟಿಷ್ಟೇ ದುಡ್ದು ಮಾಡಿಕೊಳ್ಳುತ್ತಾ, ಇಲ್ಲಿ ನನ್ನದೇ ಆದ ಬದುಕೊಂದನ್ನು ರೂಪಿಸಿಕೊಳ್ಳುವ ಛಲ ಮೈದಾಳುತ್ತಿದೆ. ಬೆಂಗಳೂರು ಬದುಕುವುದನ್ನು ಕಲಿಸಿಬಿಟ್ಟಿದೆ. ಇಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುವಷ್ಟು ದೊಡ್ಡವ ನಾನಾದದ್ದಾದರೂ ಹೇಗೆ ಎಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಈ ಇಂತಹ ಸಂದರ್ಭದಲ್ಲಿ ಮತ್ತೆ ಊರಿಗೆ ಹೋಗಿ, ದೊಡ್ಡಪ್ಪನೆದುರು ಮಂಡಿಯೂರಿ ಕೂತು ಹಿಸೆ ಕೇಳುವುದು, ಅವನು ಒಪ್ಪದಿದ್ದರೆ ಅವನ ಮೇಲೇ ದಾವೆ ಹೂಡುವುದು ಎಲ್ಲಾ ಬೇಕಾ? ಜೊತೆಗೇ ಆಟವಾಡುತ್ತಿದ್ದ ಮಹೇಶನ ಜೊತೆಗೂ ಹಲ್ಲು ಮಸೆಯುವಂತಹ ದ್ವೇಷ ಕಟ್ಟಿಕೊಳ್ಳುವುದು ಬೇಕಾ? ಬೇಡವೆಂದು ಬಿಟ್ಟುಬಿಟ್ಟರೆ ಅಮ್ಮನ ಈ ಬೇಗುದಿಗೆ ಬಿಡುಗಡೆಯೆಂದು? ನಾನು ದುಡಿದು ದುಡ್ದು ಮಾಡಿ, ನನ್ನ ಕಾಲಮೇಲೆ ನಾನು ನಿಂತು, ಅಮ್ಮನನ್ನೂ ಸಾಕುವ, ಸಂಸಾರ ಸಂಭಾಳಿಸುವ ಹಂತ ತಲುಪಲಿಕ್ಕೆ ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಇಷ್ಟೆಲ್ಲ ಸ್ವಾಭಿಮಾನ ಮೆರೆದು ಸಾಧಿಸುವುದಾದರೂ ಏನಿದೆ? ನ್ಯಾಯಯುತವಾಗಿ ನನಗೆ ಬರಬೇಕಾದ ಪಾಲನ್ನು ನಾನು ಕೇಳಿ ಪಡೆಯುವುದರಲ್ಲಿ ತಪ್ಪೇನಿದೆ? ಅದಿಲ್ಲದಿದ್ದರೆ ಜನರಿಂದ 'ಮಗನೂ ಅಪ್ಪನಂತೆ ದಡ್ಡ' ಎಂಬ ಹೀಯಾಳಿಕೆಗೆ ಗುರಿಯಾಗಬೇಕಾಗುತ್ತದಲ್ಲವೇ? ಹಾಗಾದರೆ ಈಗ ಊರಿಗೆ ಹೋಗಿ ದೊಡ್ಡಪ್ಪನೆದುರು ಪಟಾಕಿ ಸಿಡಿಸಿಯೇ ಬಿಡಲೇ?

ನಾನು ಸುಮ್ಮನೆ ನಿಂತಿರುವುದನ್ನು ನೋಡಿದ ನಮ್ಮನೆ ಓನರ್ರಿನ ಮೊಮ್ಮಗ ನಿಶಾಂತ್ ಓಡಿ ಬಂದು 'ಅಣ್ಣಾ ನೀನೂ ಪಟಾಕಿ ಹಚ್ಚು ಬಾ' ಎಂದು ಕೈ ಹಿಡಿದು ಎಳೆಯುತ್ತಿದ್ದಾನೆ. 'ನಾನು ಬರಲೊಲ್ಲೆ; ಇವತ್ತು ನನ್ನ ಅಪ್ಪನ ತಿ..' ಎಂದೇನೋ ಹೇಳಹೊರಟವನು ಅಲ್ಲಿಗೇ ತಡೆದು ಸುಮ್ಮನೆ ನಿಶಾಂತ್ ಜೊತೆ ಹೋಗುತ್ತೇನೆ. ಪಟಾಕಿಯ ಬತ್ತಿಯನ್ನು ಚೂರೇ ಸುಲಿದು, ಊದುಬತ್ತಿಯಿಂದ ಕಿಡಿ ತಾಕಿಸುತ್ತೇನೆ. ದೂರ ಬಂದು ನಿಶಾಂತ್ ಜೊತೆ ನಿಲ್ಲುತ್ತೇನೆ. ನಿಶಾಂತ್ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡು ಇನ್ನೇನು ಸಿಡಿಯಲಿರುವ ಆ ಪಟಾಕಿಯನ್ನೇ, ಅದರ ಬತ್ತಿಗುಂಟ ಸಾಗುತ್ತಿರುವ ಬೆಂಕಿಯ ಕಿಡಿಯನ್ನೇ ನೋಡುತ್ತಿದ್ದಾನೆ... ನನಗೆ ಹತ್ತು ವರ್ಷಗಳ ಹಿಂದೆ ಅಪ್ಪನ ಪಕ್ಕ ಹೀಗೇ ನಿಂತಿರುತ್ತಿದ್ದ ನನ್ನ ಚಿತ್ರದ ಕಲ್ಪನೆ ಕಣ್ಣಮುಂದೆ ಬರುತ್ತದೆ...

[ಈ ಕತೆ 'ಮಯೂರ' ಮಾಸಿಕದ ಮೇ 2008ರ ಸಂಚಿಕೆಯಲ್ಲಿ ಪ್ರಕಟವಾಗಿದೆ.]

Wednesday, November 14, 2007

ಆಮೆ-ಮೊಲ

ಮೂರನೇ ಕ್ಲಾಸಿನಲ್ಲೋ ನಾಲ್ಕನೇ ಕ್ಲಾಸಿನಲ್ಲೋ ಇದ್ದ ಈ ನೀತಿಕತೆಯನ್ನು ನಿಮ್ಮ ಕನ್ನಡ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡಿ ಹೇಳಿರುತ್ತಾರೆ. ಮಾಡಿರದಿದ್ದರೂ, ಆ ಪಾಠದೊಂದಿಗಿದ್ದ ಓಡುತ್ತಿದ್ದ ಮೊಲ-ಚಿಪ್ಪಿನೊಳಗಿಂದ ಕತ್ತು ಹೊರಹಾಕಿ ಹಿಂದೆ ನೋಡುತ್ತಿದ್ದ ಆಮೆಯ ಬಣ್ಣ ಬಣ್ಣದ ಚಿತ್ರಗಳು ನಿಮಗೆ ನೆನಪಿರುತ್ತವೆ. ಮರೆತು ಹೋಗಿದ್ದಿದ್ದರೂ ನಾನೀಗ ಹೇಳಿದಮೇಲೆ ನೆನಪಾಗಿರುತ್ತದೆ. ನೀವಿದನ್ನು ಓದಿರದಿದ್ದರೂ ನಿಮ್ಮ ಮಗನೋ, ಪಕ್ಕದ ಮನೆ ಪುಟ್ಟಿಯೋ ಶಾಲೆಯಿಂದ ಬಂದೊಡನೆ 'ಇವತ್ತು ಮಿಸ್ಸು ಆಮೆ-ಮೊಲದ ಕಥೆ ಹೇಳಿದ್ರು.. ಎಷ್ಟು ಚೆನ್ನಾಗಿತ್ತು.. ನಿಂಗೊತ್ತಾ ಅದು?' ಎನ್ನುತ್ತಾ ಮೊಲದಂತೆಯೇ ಮುದ್ದಾಗಿ-ಪೆದ್ದಾಗಿ ಪಿಳಿಪಿಳಿ ಕಣ್ಣು ಬಿಡುತ್ತಾ ಕೇಳಿದಾಗ ನೆನಪಾಗುತ್ತಿತ್ತು. ಮರೆತು ಹೋಗಿದ್ದರೂ, ನಿನಪಿದ್ದರೂ, ಹಿಂದೆಲ್ಲೂ ಕೇಳಿರದಿದ್ದರೂ, ಓದಿರದಿದ್ದರೂ ನೀವೀ ಕತೆಯನ್ನು ಮತ್ತೊಮ್ಮೆ ಓದಲಿಕ್ಕೇನು ಅಡ್ಡಿಯಿಲ್ಲ. ಏಕೆಂದರೆ, ಈ ಕತೆ ತುಂಬಾ ಚೆನ್ನಾಗಿದೆ.

ಆಮೆ ಮತ್ತು ಮೊಲದ ಮಧ್ಯೆ ಒಮ್ಮೆ ಓಟದ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರಿಗೂ ಗೊತ್ತಿರುವಂತೆಯೇ ಮೊಲದ ಓಟಕ್ಕೆ ವೇಗ ಹೆಚ್ಚು. ಆಮೆ ಅಂಗುಲ ಸಾಗಲೂ ಗಂಟೆ ಬೇಕು. ಕಾಡಿನ ಪ್ರಾಣಿಗಳೆಲ್ಲ ಈ ತಮಾಷೆಯನ್ನು ನೋಡಲು ಸೇರಿದ್ದವು. ಸಿಂಹರಾಜನೂ ಬಂದಿದ್ದ. ಮಂತ್ರಿ ನರಿ ಶಿಳ್ಳೆ ಊದುತ್ತಿದ್ದಂತೆಯೇ ಓಟ ಶುರುವಾಯಿತು.

ಮೊಲ ಜೋರಾಗಿ ಓಡಿತು. ಸುಮಾರು ದೂರ ಓಡಿಯಾದ ಮೇಲೆ ಹಿಂದೆ ತಿರುಗಿ ನೋಡಿದರೆ ಆಮೆ ಇನ್ನೂ ಎಷ್ಟೋ ಹಿಂದಕ್ಕೆ ನಿಧಾನವಾಗಿ ಬರುತ್ತಿದೆ. ಮೊಲ ಮುಖದಲ್ಲಿ ಗರ್ವದ ಗಹಗಹ ನಗುವನ್ನು ತಂದುಕೊಂಡು, ಒಮ್ಮೆ ಆಕಳಿಸಿ, 'ಅದು ಇಲ್ಲಿಗೆ ಬರುವುದರೊಳಗೆ ಒಂದು ನಿದ್ರೆ ಮಾಡಿ ತೆಗೆಯುವಾ' ಅಂದುಕೊಂಡು, ಅಲ್ಲೇ ಮರದ ಬುಡದಲ್ಲಿ ಮಲಗಿಬಿಟ್ಟಿತು. ಬಿಸಿಲಿನ ಜಳಕ್ಕೋ ಏನೋ, ಆಲಸಿ ಮೊಲಕ್ಕೆ ಜೋರು ನಿದ್ರೆ ಬಂದುಬಿಟ್ಟಿತು.

ಸುಮಾರು ಹೊತ್ತಿನ ಮೇಲೆ ಚಪ್ಪಾಳೆ, ಶಿಳ್ಳೆಗಳ ಶಬ್ದ ಕೇಳಿದಂತಾಗಿ ಮೊಲಕ್ಕೆ ಎಚ್ಚರಾಗಿ ಕಣ್ತೆರೆದು ನೋಡಿದರೆ ಆಮೆ ಹಾಗೇ ನಿಧಾನವಾಗಿ ನಡೆಯುತ್ತ ಓಡುತ್ತ ಮಲಗಿದ್ದ ಮೊಲವನ್ನು ದಾಟಿ ಮುಂದೆ ಹೋಗಿ ಆಗಲೇ ಗುರಿಯ ಸಮೀಪ ತಲುಪಿಬಿಟ್ಟಿದೆ...! ಮೊಲ ಹೌಹಾರಿ ಎದ್ದೆನೋ ಬಿದ್ದೆನೋ ಎಂಬಂತೆ ಓಡತೊಡಗಿತು. ಆದರೆ ಅದು ಏದುಸಿರು ಬಿಡುತ್ತಾ ಗುರಿ ತಲುಪುವುದರೊಳಗೆ ಆಮೆ ಗೆರೆ ದಾಟಿ ಪಂದ್ಯದಲ್ಲಿ ಗೆದ್ದಾಗಿತ್ತು.

ಈ ಕತೆಯ ನೀತಿ ನಿಮಗೆ ಗೊತ್ತಿದ್ದದ್ದೇ. ಸೋಮಾರಿತನ ಒಳ್ಳೇದಲ್ಲ; ಯಾರನ್ನೂ ಕಡೆಗಣಿಸಬಾರದು; ಕಷ್ಟ ಪಟ್ಟರೆ ಎಂಥವರನ್ನು ಬೇಕಾದರೂ ಸೋಲಿಸಬಹುದು; ಇತ್ಯಾದಿ.

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ. ಈ ಮುಂದುವರಿಕೆಯನ್ನು ನಾನು ಓದಿದ್ದು ವಿಶ್ವೇಶ್ವರ ಭಟ್ಟರ 'ನೂರೆಂಟು ಮಾತು' ಅಂಕಣದಲ್ಲಿ, ನಾಲ್ಕಾರು ವರ್ಷಗಳ ಹಿಂದೆ. ಇಂಗ್ಲೆಂಡಿನಲ್ಲಿ ಬೆಕರ್(?) ಅಂತ ಒಬ್ಬನಿದ್ದಾರಂತೆ. ಬೆಕರ್‌ನ ಕೆಲಸವೆಂದರೆ ಕತೆ ಹೇಳುವುದು. ಜಗತ್ತಿನ ಅತಿರಥ ಮಹಾರಥರೆಲ್ಲ ಈತನ ಸ್ಪೂರ್ತಿ ನೀಡುವ ಕತೆ ಕೇಳಲು ಬರುತ್ತಾರಂತೆ. ಕತೆ ಕೇಳಿ, ಕೇಳಿದಷ್ಟು ಡಾಲರ್ ದುಡ್ಡು ಕೊಟ್ಟು ಹೋಗುತ್ತಾರಂತೆ.

ಬೆಕರ್‌ನ ಬಳಿ ಅಂದು ಲಂಡನ್ನಿನ ದೊಡ್ಡ ಉದ್ಯಮಿಯೊಬ್ಬ ಬಂದಿದ್ದ. ತನ್ನದೇ ಉದ್ಯಮದಲ್ಲಿನ ಮತ್ತೊಂದು ಕಂಪನಿ ತನಗೆ ಕೊಡುತ್ತಿರುವ ಪೈಪೋಟಿಯನ್ನು ಎದುರಿಸಲು ಅವನಿಗೆ ನಾಲ್ಕು ಸ್ಪೂರ್ತಿಭರಿತ ಮಾತು ಬೇಕಿತ್ತು. ಬೆಕರ್ ಇದೇ ಆಮೆ-ಮೊಲದ ಕತೆ ಹೇಳಲು ಶುರು ಮಾಡಿದ. ಈ ಕತೆ ಆ ಉದ್ಯಮಿಗೂ ಗೊತ್ತಿತ್ತು. 'ಅಯ್ಯೋ, ಇದೇನು ಗೊತ್ತಿರೋ ಕತೆಯನ್ನೇ ಹೇಳುತ್ತಿದ್ದಾನಲ್ಲ..' ಅಂದುಕೊಂಡ. ಬೆಕರ್ ಕತೆಯನ್ನು ಮುಂದುವರೆಸಿದ:

ಅವಮಾನಿತ ಮೊಲ ಆಮೆಯನ್ನು ಮತ್ತೊಮ್ಮೆ ಪಂದ್ಯಕ್ಕೆ ಆಹ್ವಾನಿಸುತ್ತದೆ. ಆಮೆ ಒಪ್ಪಿಕೊಳ್ಳುತ್ತದೆ. ಪ್ರಾಣಿಗಳೆಲ್ಲವೂ ಸೇರುತ್ತವೆ. ನರಿ ಶಿಳ್ಳೆ ಊದುತ್ತದೆ. ಓಟ ಶುರುವಾಗುತ್ತದೆ. ಈ ಬಾರಿ ಮೊಲ ಸ್ವಲ್ಪವೂ ಆಲಸ್ಯ ತೋರದೆ, ಯಾವುದೇ 'ಛಾನ್ಸ್' ತೆಗೆದುಕೊಳ್ಳದೆ ಜೋ..ರಾಗಿ ಓಡಿ ಗುರಿ ತಲುಪಿ ಕಿಲೋಮೀಟರುಗಟ್ಟಲೆ ಅಂತರದಿಂದ ಆಮೆಯನ್ನು ಸೋಲಿಸುತ್ತದೆ.

ಈ ಕತೆಯ ನೀತಿಯೆಂದರೆ, ನಮಗಿರುವ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಂಡರೆ ಗೆಲುವು ನಮ್ಮದೇ.

ಕತೆ ಅಷ್ಟಕ್ಕೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ:

ಆಮೆಗೆ ತನ್ನ ಸೋಲನ್ನು ಒಪ್ಪಿಕೊಂಡು ಸುಮ್ಮನಿರುವ ಮನಸ್ಸಿಲ್ಲ. ಅದಕ್ಕೆ ಹೇಗಾದರೂ ಮಾಡಿ ಮೊಲವನ್ನು ಸೋಲಿಸಲೇಬೇಕೆಂಬ ತುಡಿತ. ಅದೊಂದು ಪ್ಲಾನ್ ಮಾಡುತ್ತದೆ. ಮೊಲವನ್ನು ಮತ್ತೆ ಸ್ಪರ್ಧೆಗೆ ಆಹ್ವಾನಿಸುತ್ತದೆ.

ಕಾಡಿನ ಪ್ರಾಣಿಗಳಿಗೆಲ್ಲ ಇದೆಂಥಾ ತಮಾಷೆಯಪ್ಪಾ, ಈ ಆಮೆಗೆ ಬುದ್ಧಿಯಿಲ್ಲ ಅಂತ ಅಪಹಾಸ್ಯ. ಆದರೂ ಎಲ್ಲವೂ ಸೇರುತ್ತವೆ. ಸ್ಪರ್ಧೆ ಶುರುವಾಗುತ್ತದೆ. ಮೊಲ ಓಡತೊಡಗುತ್ತದೆ. ಓಡಿ ಓಡಿ ಓಡಿ ಸುಮಾರು ದೂರ ಬಂದಮೇಲೆ ಅದಕ್ಕೆ ಅರಿವಾಗುತ್ತದೆ: ಓಟದ 'ಟ್ರಾಕ್' ಬದಲಾಗಿಬಿಟ್ಟಿದೆ! ಮಧ್ಯದಲ್ಲೊಂದು ಹೊಳೆ ಅಡ್ಡ ಬಂದುಬಿಟ್ಟಿದೆ! ಈ ಹಿಂದಿನ ಸ್ಪರ್ಧೆಗಳಲ್ಲಿ ಬರೀ ನೆಲದ ಮೇಲೆ ಓಟವಿರುತ್ತಿತ್ತು. ತಾನು ಮೋಸ ಹೋದದ್ದು ಮೊಲಕ್ಕೆ ಅರಿವಾಗುತ್ತದೆ. ಅದು ಇಡೀ ಹೊಳೆಯನ್ನು ದಡದಗುಂಟ ಸುತ್ತುವರೆದು ಓಡಿ ಬಂದು ಗುರಿಯನ್ನು ತಲುಪುವುದರೊಳಗೆ ಆಮೆ ಸಲೀಸಾಗಿ ಹೊಳೆಯನ್ನು ಈಜಿ ಆಚೆ ದಡ ಸೇರಿ ಗುರಿಯನ್ನು ತಲುಪುತ್ತದೆ. ವನ್ಯಮೃಗಗಳೆಲ್ಲ ಆಮೆಯ ಬುದ್ಧಿವಂತಿಕೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡುತ್ತವೆ.

ಈ ಕತೆಯ ನೀತಿಯೆಂದರೆ ಗೆಲ್ಲಲೇಬೇಕು ಎಂದಾದರೆ ಹೇಗಾದರೂ ಗೆಲ್ಲಬಹುದು. ಆಟದಲ್ಲಿ ಮೋಸ ಸಾಮಾನ್ಯ ಮತ್ತು ಕ್ಷಮ್ಯ! ಪ್ರತೀ ಆಟಕ್ಕೂ ಮುಂಚೆ ಅದರ ನಿಯಮಾವಳಿಗಳನ್ನು ಸ್ಪರ್ಧಿಗಳು ಚರ್ಚಿಸಿ ಮನದಟ್ಟು ಮಾಡಿಕೊಂಡಿರಬೇಕು. ಇತ್ಯಾದಿ.

ಕತೆ ಇಲ್ಲಿಗೂ ನಿಲ್ಲುವುದಿಲ್ಲ! ಮತ್ತೂ ಮುಂದುವರೆಯುತ್ತದೆ:

ಮೊಲಕ್ಕೆ ಅರಿವಾಗುತ್ತದೆ, ನಮ್ಮಿಬ್ಬರಿಗೂ ಅವರವರದ್ದೇ ಆದ ಸಾಮರ್ಥ್ಯಗಳಿವೆ. ನಾವಿಬ್ಬರೂ ಹೀಗೆ ಸ್ಪರ್ಧೆ ಮಾಡಿಕೊಂಡು ಇದ್ದರೆ ಒಮ್ಮೆ ನಾನು ಸೋಲುತ್ತೇನೆ, ಇನ್ನೊಮ್ಮೆ ಆಮೆ ಸೋಲುತ್ತದೆ. ಅಷ್ಟೇ ವಿನಃ ಮತ್ತೇನೂ ಪ್ರಯೋಜನವಿಲ್ಲ. ಹೀಗೆ ಯೋಚಿಸಿದ ಮೊಲ ಆಮೆಯ ಮನೆಗೆ ಹೋಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಇಬ್ಬರೂ ಫ್ರೆಂಡ್ಸ್ ಆಗುತ್ತವೆ. ಮತ್ತೆ ತಮ್ಮ ಮಧ್ಯೆ ಸ್ಪರ್ಧೆ ನಡೆಯುತ್ತಿರುವುದಾಗಿ ಕಾಡಿನಲ್ಲಿ ಡಂಗುರ ಸಾರುತ್ತವೆ.

ಇಷ್ಟೊತ್ತಿಗಾಗಲೇ ಆಮೆ-ಮೊಲದ ಓಟದ ಸ್ಪರ್ಧೆ ಕಾಡಿನಲ್ಲೆಲ್ಲಾ ಜನಪ್ರಿಯ (ಪ್ರಾಣಿಪ್ರಿಯ?)ವಾಗಿರುತ್ತದೆ. ಎಲ್ಲಾ ಕಡೆ ಬ್ಯಾನರ್ರು ಕಟ್ಟಲಾಗುತ್ತದೆ. ರಾಜ ಸಿಂಹ ತನ್ನ ಹೆಂಡತಿ ಮಕ್ಕಳ ಸಮೇತ ಬಂದು ಗ್ಯಾಲರಿಯಲ್ಲಿ ಕೂರುತ್ತದೆ. ಟ್ರಾಕಿನ ಇಕ್ಕೆಲಗಳಲ್ಲೂ ಪ್ರಾಣಿಗಳು ಓಟವನ್ನು ವೀಕ್ಷಿಸಲು ನಿಂತಿರುತ್ತವೆ. ಕ್ಷಣಗಣನೆ ಆರಂಭವಾಗುತ್ತದೆ. ನರಿ ವಿಶಲ್ ಊದುತ್ತದೆ.

ಮೊದಲೇ ಗುಪ್ತವಾಗಿ ಮಾತಾಡಿಕೊಂಡಿದ್ದಂತೆ, ಶಿಳ್ಳೆ ಶಬ್ದ ಕೇಳುತ್ತಿದ್ದಂತೆಯೇ ಆಮೆ ಮೊಲದ ಬೆನ್ನೇರಿ ಕೂರುತ್ತದೆ. ಆಮೆ ಜೋರಾಗಿ ಓಡುತ್ತದೆ. ಮಧ್ಯದಲ್ಲಿ ಹೊಳೆ ಬರುತ್ತದೆ. ಆಗ ಆಮೆ ಕೆಳಗಿಳಿದು ತನ್ನ ಬೆನ್ನ ಮೇಲೆ ಮೊಲವನ್ನು ಕೂರಿಸಿಕೊಳ್ಳುತ್ತದೆ. ಹೊಳೆ ದಾಟಿಯಾದ ಮೇಲೆ ಮತ್ತೆ ಮೊಲದ ಬೆನ್ನಮೇಲೆ ಆಮೆ ಕೂರುತ್ತದೆ. ಜೋರಾಗಿ ಓಡಿ, ವೀಕ್ಷಕರೆಲ್ಲ ಬೆಕ್ಕಸ ಬೆರಗಾಗುವಂತೆ, ಸ್ಪರ್ಧೆ ಶುರುವಾದ ಕೆಲವೇ ನಿಮಿಷಗಳಲ್ಲಿ ಆಮೆ-ಮೊಲ ಎರಡೂ ಒಟ್ಟಿಗೇ ಗುರಿ ತಲುಪುತ್ತವೆ.

ಕತೆಯ ನೀತಿಯನ್ನು ಅರಿತ ಲಂಡನ್ನಿನ ಆ ವ್ಯಾಪಾರಿ ವಾಪಸು ತೆರಳಿ ಆ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಎರಡೂ ಕಂಪನಿಗಳೂ ವಿಲೀನವಾಗಿ, ಮುಂದಿನ ವರ್ಷ ದುಪ್ಪಟ್ಟು ಲಾಭ ಗಳಿಸಿ, ಲಂಡನ್ನಿನ ವಿಖ್ಯಾತ ಕಂಪನಿಗಳಾಗುತ್ತವೆ.

ಕತೆ, ಯಕ್ಚುವಲಿ ಇಲ್ಲಿಗೆ ಮುಗಿಯಿತು. ಆದರೆ ನನಗೆ ಇತ್ತೀಚೆಗೊಂದು ಎಸ್ಸೆಮ್ಮೆಸ್ ಬಂದಿತ್ತು. ಈಗ ನೀವು ಈ ಸೀಕ್ವೆಲ್ಲುಗಳನ್ನೆಲ್ಲ ಒಂದು ಕ್ಷಣ ಮರೆತು, ಒರಿಜಿನಲ್ ಆಮೆ-ಮೊಲದ ಕತೆಯನ್ನಷ್ಟೇ ನೆನಪಿಟ್ಟುಕೊಳ್ಳಿ. ನನಗೆ ಬಂದ ಎಸ್ಸೆಮ್ಮೆಸ್ಸು ಹೀಗಿದೆ:

ಆಮೆ ಮತ್ತು ಮೊಲ ಸಿಇಟಿ ಪರೀಕ್ಷೆಗೆ ಕಟ್ಟಿದ್ದವು. ಇಬ್ಬರೂ ಸಮಾನ ಬುದ್ಧಿವಂತರು, ಇಬ್ಬರ ಕೈಯಲ್ಲೂ ಸಮಾನ ಅಂಕಗಳಿದ್ದ ಅಂಕಪಟ್ಟಿಗಳಿದ್ದವು. ಆದರೆ ಕೊನೆಯಲ್ಲಿ, ಆಮೆಗೆ ಸಿಇಟಿಯಲ್ಲಿ ಸೀಟು ಸಿಗುತ್ತದೆ; ಮೊಲಕ್ಕೆ ಸಿಗುವುದಿಲ್ಲ. ಯಾಕೆ?

ಉ: ಯಾಕೇಂದ್ರೆ, ಆಮೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಸೀಟ್ ಸಿಕ್ತು! (ಹಿಂದೆ ಆಮೆ ಓಟದ ಸ್ಪರ್ಧೇಲಿ ಗೆದ್ದಿದ್ದು ನೆನಪಿದೆಯಲ್ವಾ?) :-)

ನನಗೆ ಈ ಎಸ್ಸೆಮ್ಮೆಸ್ಸು ಇಷ್ಟವಾಗಿ ನನ್ನೊಂದಿಷ್ಟು ಗೆಳೆಯ-ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ಅವರಲ್ಲಿ ಒಬ್ಬ ಗೆಳತಿ ರಿಪ್ಲೇ ಮಾಡಿದ್ದಳು:

ಓಹ್ ಅದಕ್ಕೇನಾ ಮೊಲ ಬೇಜಾರಾಗಿ 'ಮುಂಗಾರು ಮಳೆ' ಫಿಲ್ಮಲ್ಲಿ ದೇವದಾಸ್ ಆಗಿ ಗಣೇಶನ ಜೊತೆ ಸೇರಿಕೊಂಡಿದ್ದು..? ಅಂತ!

ಕತೆಯೊಂದು ಮುಂದುವರೆಯುವ ಬಗೆ ಕಂಡು ನನಗೆ ಅಚ್ಚರಿ!

(ಈ 'ಕತೆಗಳ ಕತೆ'ಯನ್ನು ಓದುವಾಗ ನೀವೂ ಮಗುವಾಗಿದ್ದಿರಿ ಅಂತ ನಂಗೊತ್ತು. ನಿಮಗೆ ಮಕ್ಕಳ ದಿನಾಚರಣೆಯ ಶುಭಾಷಯಗಳು!)

Tuesday, November 06, 2007

ದೀಪವಾಗಬೇಕಿದೆ...

ಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...

ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...

ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.

ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."

ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?

ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...

ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...

Thursday, October 25, 2007

ಎರಡು ಚಾಟ್‍ಗಳು ಮತ್ತು ನಾಲ್ಕು ಪ್ರಶ್ನೆಗಳು!!

ದೃಢ ಚಿತ್ತದ ದಡ
ಉತ್ತೇಜನ ಕೊಡದಿದ್ದರೂ ಕೂಡ
ಮತ್ತೆ ಮತ್ತೆ ಯತ್ನಿಸುತ್ತೆ ಕಡಲು
ಮುತ್ತು ಕೊಡಲು

ಡುಂಡೀರಾಜರ ಈ ಪುಟ್ಟ-ಚಂದ ಹನಿ ನನ್ನ status message ಆಗಿತ್ತು ಅವತ್ತು. ನೋಡಿದ ಈ ಹುಡುಗಿ ಫಕ್ಕನೆ ping ಮಾಡಿದ್ದಳು:

"ತುಂಬಾ ಚೆನ್ನಾಗಿದೆ ಸ್ಟೇಟಸ್. ಕಡಲನ್ನು ಚಂಚಲಚಿತ್ತೆ ಅಂತ ಹೇಳಲಿಕ್ಕಾ ಈ ಲೈನು?"

ಒಂದು ಕ್ಷಣ ಬಿಟ್ಟು ಹೇಳಿದ್ದೆ: "ಹಾಂ, ಆದರೆ ಯಾರು ಕಡಲು ಯಾರು ದಡ ಅನ್ನೋದು ಅವರವರ ಪರಾಮರ್ಶೆಗೆ ಬಿಟ್ಟಿದ್ದು!"

"I think ಹುಡುಗರು ದಡ"


"May be. But not in all the cases."


"Most of the cases. ಮತ್ತೆ ಆ ಸಾಲು love is blind ಅಂತಾನು ಹೇಳುತ್ತೆ ಅಲ್ವಾ?"


"ಅಂದ್ರೆ ನೀನನ್ನೋದು ಕಡಲು ಮುತ್ತು ಕೊಡೋಕೆ ಬರೋದೇ ತಪ್ಪು ಅಂತಾನಾ? :O"


"ಹಾಗಲ್ಲ ಕಣೋ.. ದಡ ತನ್ನ ಕಡೆ interest ತೋರಿಸ್ತಾ ಇಲ್ಲ ಅಂತ ಗೊತ್ತಿದ್ದೂ ಕಡಲು ದಡದ ಹತ್ತಿರ ಹೋಗತ್ತಲ್ಲಾ, ಅದ್ಕೇ ಹೇಳ್ದೆ."


"But ದಡ ಕಡಲನ್ನ ತುಂಬಾ ತುಂಬಾ ಪ್ರೀತ್ಸೊತ್ತೆ ಗೊತ್ತಾ?"


"ಇರಬಹುದು.. ಆದ್ರೆ ಅಷ್ಟೊಂದು ದೃಢತೆ ಯಾಕೆ ಸುಶ್ರುತಾ..? ದಡ ಯಾಕೆ ತನ್ನ interestನ್ನ ತೋರ್ಸೋದಿಲ್ಲ?"


"ಯಾಕೇಂದ್ರೆ, ದಡಾನೆ ಎದ್ದು ಕಡಲಿಗೆ ಮುತ್ತು ಕೊಡ್ಲಿಕ್ಕೆ ಹೋದ್ರೆ ಕಡಲು ಉಳಿಯೋಲ್ಲ! ದಡ gives protection to ಕಡಲು. ತನ್ನ ತೆಕ್ಕೆಯಲ್ಲೇ ಬಂಧಿಸಿಟ್ಟುಕೊಂಡು... ಸದಾ ಕಡಲಿನ ಮುತ್ತಿನ ಸುಖವನ್ನು ಅನುಭವಿಸ್ತಾ.. (sorry, ನಾನು ಪ್ರೇಮಕವಿ ಅಲ್ಲ!).. ದಡಕ್ಕೆ ಕಡಲು ಅಂದ್ರೆ ತುಂಬಾ ಇಷ್ಟ.. ಅದಿಲ್ಲಾಂದ್ರೆ ಅದು ಕಡಲಿನೊಂದಿಗೆ ಜಗಳ ಆಡಿರೋದು.. ತನ್ನ ಪಾಡಿಗೆ ತಾನು ಮುತ್ತು ಕೊಡಿಸ್ಕೊಂಡು ಇರಲ್ವಾ? ;)"


"ವ್ಹಾವ್ ವ್ಹಾವ್! ತುಂಬಾ ಚೆನ್ನಾಗಿದೆ ಈ explanation. ಆದ್ರೆ ಹಾಗೆ ಸುಮ್ನೇ ಇದ್ದುಬಿಟ್ರೆ ಕಡಲಿಗೆ ದಡದ ಪ್ರೀತಿ ಅರ್ಥ ಆಗೋದು ಹ್ಯಾಗೆ ಸುಶ್ರುತಾ..?"


"ಚಂಚಲಚಿತ್ತೆ ಕಡಲಿಗೆ ಅದು ಅರ್ಥ ಆಗೋದೂ... ಹ್ಮ್... ಡೌಟ್‌ಫುಲ್! ಆದ್ರೆ ನೋಡು, ದಡದ್ದು ಪ್ರೀತಿಯೆಡೆಗಿನ ಏಕನಿಷ್ಠೆ. ಅದು ಎಂದಿಗೂ ಚಂಚಲವಾದದ್ದಿಲ್ಲ. ಯಾವತ್ತೂ ಕಡಲು ತನ್ನವಳೂಂತ ಅಂದ್ಕೊಂಡು ಅವಳ ಸಿಹಿ (sorry, ಉಪ್ಪು!) ಮುತ್ತಿಗಾಗಿ ಕಾಯ್ತಾ ಬಿದ್ದುಕೊಂಡಿರೊತ್ತೆ.. ಆದ್ರೆ ಬಹುಶಃ ಕಡಲು ದಡವನ್ನ ಗಾಢವಾಗಿ ಪ್ರೀತೀನೇ ಮಾಡೊಲ್ಲ. ಅದು ಒಂದೇ ದಡಕ್ಕೆ ಎಂದೂ ಅಪ್ಪಳಿಸೊಲ್ಲ.. ಆಗಾಗ ಕೊರೆತ ಉಂಟುಮಾಡಿ ದಡವನ್ನೇ ಸೀಳಿಬಿಡೊತ್ತೆ ಕ್ರೂರಿ ಕಡಲು! ತೀರಾ ಕೋಪ ಬಂದ್ರೆ ಸುನಾಮಿಯಾಗಿ ದಡವನ್ನೇ ಮುಳುಗಿಸಿಬಿಡೊತ್ತೆ!! :D"


"ಏಯ್! ಅದು ಕಡಲಿನ ಪ್ರೀತಿಯ ಪರಾಕಾಷ್ಟೆ ಕಣೋ! :P"


"ಹಹ್ಹ! ಸಾಕು ಸುಮ್ನಿರು :D"


* *

ಅದೊಂದು ರಾತ್ರಿ ಊಟ ಮುಗಿಸಿ, ಉಂಡದ್ದು ಜಾಸ್ತಿಯಾದಂತೆ ಅನ್ನಿಸಿದ್ದರಿಂದ ಒಂದು ಬೀಡಾವನ್ನಾದರೂ ಹಾಕಿಕೊಂಡು ಬರೋಣ ಅಂತ ನಾನೂ-ನನ್ನ ರೂಂಮೇಟೂ ಡೋರ್ ಲಾಕ್ ಮಾಡಿಕೊಂಡು ಹೊರ ಹೊರಟೆವು. ಬೀಡಾ ಹಾಕೋಣಾಂತ ನೋಡಿದರೆ ಬೀಡಾ ಅಂಗಡಿಯವನು ವೀಳ್ಯದೆಲೆ ಖಾಲಿಯಾಗಿದೆ ಅಂದ. ಸರಿ ಅಡಿಕೆ ಪುಡಿಯನ್ನಾದರೂ ತಿನ್ನೋಣ ಅಂತ ಇಬ್ರೂ ಒಂದೊಂದು ರಾಜು ಸುಪಾರಿ ತಗೊಂಡು, ಸ್ಯಾಚೆಟ್ ಒಡೆದು, ಬಾಯಿಗೆ ಹಾಕಿಕೊಂಡೆವು. ಅಷ್ಟರಲ್ಲಿ ಮೊಬೈಲು ಪೀಂಗುಟ್ಟಿತು:

[ನೆನಪಿದ್ದಷ್ಟನ್ನು ಇಲ್ಲಿ ಕೊಟ್ಟಿದ್ದೇನೆ. ನೀವು ಸುಮ್ಮನೇ ಓದಿಕೊಂಡು ಹೋಗಿ. ಅಂದಹಾಗೆ, ಮೊದಲಿಗೆ ನನ್ನೊಂದಿಗೆ ಚಾಟ್ ಮಾಡಿದವರೇ ಬೇರೆ; ಇವರೇ ಬೇರೆ. ಆಯ್ತಾ? ;) ]

"‘ದೇವದಾಸ್’ ಮೂವಿ ನೋಡಿದೆ. ಕೋಯೀ ಕಿಸೀ ಸೇ ಇತನಾ ಪ್ಯಾರ್ ಕರ್ ಸಖತಾ ಹೈ ಕೀ ವೋ ಖುದ್ ಮರ್ ಜಾಯೇ?!"

"ಕರ್ ಸಖತಾ ಹೈ!! ಪ್ರೀತಿ ಅನ್ನೋದು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಹರಿಯೋ ನದಿ. ಮನುಷ್ಯ ಪ್ರೀತೀಲಿ ಇರೋಷ್ಟು ದಿನ ಆ ನದಿ ನೀರನ್ನೇ ಅವಲಂಭಿಸಿರ್ತಾನೆ. ಈ ಜಗದ ಪ್ರತಿಯೊಂದನ್ನೂ ಆ ಪ್ರೀತಿನದಿಯ ಮೂಲಕವೇ ನೋಡ್ತಿರ್ತಾನೆ. ಆ ನದಿಯ ಮೀನಾಗಿರ್ತಾನೆ. ಆ ನದಿ ಬತ್ತಿ ಹೋದಾಗ, of course, ಅವನು ಸಾಯ್ತಾನೆ!"


"ಪ್ರೀತಿನದಿಯ ನೀರು ಬತ್ತಿ ಹೋದಾಗ ಅವನು ಸಾಯ್ತಾನೆ, ಸರಿ. ಆದ್ರೆ ಆ ನದಿಯ ಒಂದು ಒರತೆ ತಾನು ಹರಿಯುವ ಮುಖವನ್ನು ತಿರುಗಿಸಿದಾಗ ನದಿಯೇ ಬತ್ತಿಹೋಯಿತು ಅಂದುಕೊಳ್ಳುವುದು ಹುಚ್ಚುತನ ಅಲ್ವಾ? ನಾನು ಅದ್ನೇ ಕೇಳಿದ್ದು: ಯಾರನ್ನಾದ್ರೂ ಸಾಯೋಷ್ಟು ಪ್ರೀತ್ಸೋಕೆ ಸಾಧ್ಯಾನಾ ಅಂತ.. ನದಿಯಲ್ಲಿ ಎಷ್ಟೋ ಒರತೆಗಳು ಇರುವಾಗ..?"


"ಕೆಲವೊಂದು ಮೀನುಗಳಿಗೆ ಹಾಗೇ. ಒಂದೇ ಒರತೆಯನ್ನ ತುಂಬಾ ಹಚ್ಚಿಕೊಂಡು ಬಿಡ್ತವೆ.. ಆ ಒರತೆಯ ನೀರ ಸವಿ ಬೇರೆ ಒರತೆಯಲ್ಲಿ ಸಿಗಲಾರದು.. ಒಂದು ನದಿ ಬತ್ತಿತು ಅಂತ ಬೇರೆ ನದಿಗೆ ವಲಸೆ ಹೋಗುವ ‘ಬುದ್ಧಿವಂತ’ ಮೀನುಗಳ ಬಗ್ಗೆ ನನ್ನ ಮಾತಿಲ್ಲ.. ಆದರೆ ಈ ಭಾವುಕ ಮೀನುಗಳಿದಾವಲ್ಲಾ, ಇವು ತಾವು ಪ್ರೀತಿಸಿದ ನೀರ ನದಿ ಬತ್ತುತ್ತಿದ್ದಂತೆ ತಾವೂ.. .."


"ಭಾವುಕ ಮೀನುಗಳು ಈಗ್ಲೂ ಸಿಗ್ತಾವಾ?"


"ಅಯ್ಯೋ! ಸಿಗ್ತಾವಾ ಏನು, ಅಸಂಖ್ಯ ಇದಾವೆ. ಈಗ್ಲೂ ಪ್ರೀತಿ ಕೈ ಕೊಡ್ತು ಅಂತ ದೇವದಾಸ್ ಆಗೋರು ಸಿಕ್ಕಾಪಟ್ಟೆ ಜನ ಇದಾರೆ.."


"ಆದ್ರೆ ಅದು ಹುಚ್ಚುತನ ಅನ್ಸಲ್ವಾ?"


"ದೇವದಾಸ್ ಆಗೋದು ಹುಚ್ಚಿರಬಹುದು.. ಆದ್ರೆ ದೇವದಾಸ್ ತರಹ ಪ್ರೀತಿ ಮಾಡೋದು ಹೇಗೆ ತಪ್ಪಾಗೊತ್ತೆ? ಪ್ರೀತಿ ಮಾಡಿದ್ರೆ ಸಾಯೋಷ್ಟು ಆಳವಾಗಿಯೇ ಮಾಡ್ಬೇಕು. Or, I mean, that is my view. And I’m going to love my girl like that.. ಆದ್ರೆ ಇನ್ನೂ ಸಿಕ್ಕಿಲ್ಲ ಪೋರಿ..! ಎಲ್ಲಿದಾಳೋ? ;) "


"ನಿನಗೆ ನಿನ್ನ ಪೋರಿ ಬೇಗ ಸಿಗ್ಲಿ. ಆದ್ರೂ ಈ ಸಾಯೋಷ್ಟು ಪ್ರೀತಿ ಮಾಡೋದು... ಊಹೂಂ, ಈ conceptಏ ನಂಗೆ ಅರ್ಥವಾಗಲ್ಲ.. :( "


"Thanx for the wish! ಸಾಯೋಷ್ಟು ಅಂದ್ರೆ.. ಅವಳ ಪ್ರೀತಿ ಕೊಳದಲ್ಲಿ ಮುಳುಗಿ ಹೋಗೋದು.. ಅಲ್ಲೇ ಉಸಿರು ಕಟ್ಟಿ....... ಊಹೂಂ, ಸಾಯೋದಿಲ್ಲ, ಪ್ರೀತಿ ಕೊಳ ನೋಡು, ಮೀನು ಬದುಕಿಕೊಂಡು ಬಿಡೊತ್ತೆ..!"


"ನಿಂಗೆ ಒಳ್ಳೇದಾಗ್ಲಿ. ಈ ಜಗತ್ತು ಮೃಗಜಲ.. ಭ್ರಮಾಲೋಕ.. Be careful.."


"ಹಹಾ! ಎಚ್ಚರಿಕೆಗೂ ಥ್ಯಾಂಕ್ಸ್! ಹಾಗಂತ ನೀನು ಈ ಥರದ ಹುಚ್ಚು ಸಾಹಸಕ್ಕೆ ಕೈ ಹಾಕ್ಲಿಕ್ಕೆ ಹೋಗ್ಬೇಡಪ್ಪಾ.. ಸಿಕ್ಕಾಪಟ್ಟೆ ತಾಳ್ಮೆ ಬೇಕು, ತುಂಬಾ ನಂಬಿಕೆ ಬೇಕು, ಸಾಕಷ್ಟು ನಿಷ್ಠೆ ಬೇಕು.. ಅವೆಲ್ಲಾ ಕಷ್ಟಕ್ಕಿಂತ ಯಾವುದಾದರೂ ಒಂದು ಪುಟ್ಟ ಒಲವಿನ ಚಿಲುಮೆಯಲ್ಲಿ ಮಿಂದು ಪಾವನಳಾಗಿಬಿಡು..! That is better, always..! Good Night."


"ಹ್ಮ್.. ಆ ಒಲವ ಚಿಲುಮೆ ಹುಡುಕಿ ಸಿಗುವವರೆಗೆ ಸಧ್ಯಕ್ಕೆ ಇರೋ ನಲ್ಲಿ ನೀರಲ್ಲೇ ಸ್ನಾನ ಮಾಡೋದು.. ಹಹ್ಹ..! ಶುಭರಾತ್ರಿ.."


* *

ಪ್ರಶ್ನೆಗಳು:

೧) ಹುಡುಗಿಯರು ಚಂಚಲಚಿತ್ತೆಯರು, ಹುಡುಗರು ದೃಢಚಿತ್ತರಂತೆ ಹೌದಾ?
೨) ನಾವೇಕೆ ನಾವು ಪ್ರೀತಿಸುವ ಜೀವದ ಬಗ್ಗೆ ಅಷ್ಟೊಂದು possessive ಆಗ್ತೀವಿ?
೩) ದೇವದಾಸ್ ತರಹ ಪ್ರೀತಿ ಮಾಡೋದು ತಪ್ಪಾ?
೪) ಒಂದು ಪ್ರೀತಿಕೊಳ ಬತ್ತಿ ಹೋದಕೂಡಲೇ ಮತ್ತೊಂದು ಕೊಳಕ್ಕೆ ಈಜಿ ಹೋಗಿಬಿಡುವುದು ಸರಿಯಾ?

[ಇನ್ನೂ ಬಹಳಷ್ಟು ಪ್ರಶ್ನೆಗಳಿವೆ, ಸಧ್ಯಕ್ಕೆ ಇಷ್ಟು ಸಾಕು. :-)]

ಇನ್ನು ನೀವ್ನೀವು ಹೊಡೆದಾಡಿಕೊಳ್ಳಿ. ನನಗಂತೂ ಉತ್ತರಗಳು ಗೊತ್ತಿಲ್ಲ. ಏನೇ ಹೊಡೆದಾಡಿಕೊಂಡರೂ ಕೊನೆಯಲ್ಲಿ ಒಂದು conclusionಗೆ ಬರಲಿಕ್ಕೆ try ಮಾಡಿ. All the best!!!

Wednesday, October 24, 2007

ಹಾಲು ಒಡೆದು ಹೋದುದು

ನಿನ್ನೆ ರಾತ್ರಿ ಹೀಗಾಯಿತು:
ಆಸೆಪಟ್ಟು ಕಾಯಿಸಿಟ್ಟಿದ್ದ ಹಾಲು ಒಡೆದು ಹೋಯಿತು.

ಸ್ವಲ್ಪ ಮೊದಲೇ ಹೆಪ್ಪು ಬಿಟ್ಟಿದ್ದರೆ
ಬೆಳಗಾಗುವಷ್ಟರಲ್ಲಿ ಗಟ್ಟಿ ಮೊಸರಾಗಿರುತ್ತಿತ್ತು.
ಮೊಸರನ್ನು ಕಡೆದಿದ್ದರೆ ಬೆಣ್ಣೆ ಸಿಗುತ್ತಿತ್ತು.
ಬೆಣ್ಣೆಯನ್ನು ಕಾಯಿಸಿದ್ದರೆ 'ಇದು ಹಾಲಿನಿಂದ ಬಂದದ್ದು'
ಎಂಬುದನ್ನೇ ಮರೆಸಬಹುದಾದಷ್ಟು ತಾಜಾ
ತುಪ್ಪವಾಗಿಬಿಡುತ್ತಿತ್ತು.
ತಿಂಗಳುಗಟ್ಟಲೆ ಇಟ್ಟುಕೊಂಡು,
ಇಷ್ಟಿಷ್ಟೇ ಹಚ್ಚಿಕೊಂಡು ತಿನ್ನಬಹುದಿತ್ತು.
ಬಯಕೆಗಳು ಬಹಳವಿದ್ದವು.

ಒಡೆದ ಹಾಲಿನ ದಬರಿಯನ್ನಿಟ್ಟುಕೊಂಡು
ರಾತ್ರಿಯಿಡೀ ಯೋಚಿಸಿದೆ:
ಏನು ಮಾಡಬಹುದು ಇದರಿಂದ ಅಂತ.

ಬೆಳಗಿನ ಹೊತ್ತಿಗೆ ನೆನಪಾಯಿತು:
'ಒಡೆದ ಹಾಲನ್ನು ಕೆನ್ನೆಗೆ ಸವರಿಕೊಂಡರೆ
ಮೊಡವೆಗಳೇಳುವುದಿಲ್ಲ' ಎಂದು ಹಿಂದೆ
ಯಾರೋ ಹೇಳಿದ್ದುದು.

ದಢಕ್ಕನೆ ಹಾಸಿಗೆಯಿಂದೆದ್ದು ಕನ್ನಡಿಯಲ್ಲಿ
ಮುಖವನ್ನು ನೋಡಿಕೊಂಡೆ:
ಒಂದೇ ಒಂದು ಮೊಡವೆಯೂ ಇಲ್ಲ!

'ಹ್ಮ್! ಬಯಕೆಗಳಿದ್ದರೆ ತಾನೇ ಮೊಡವೆಗಳೇಳುವುದು!'
ಎಂಬ ಗೊಣಗು ನನ್ನ ಬಾಯಿಂದ ಹೊರಬೀಳುವ ಮೊದಲೇ
ಹಾಲಿನ ಹುಡುಗ ಹೊಸ ಹಾಲಿನ ಪ್ಯಾಕೆಟ್ಟಿನೊಂದಿಗೆ
ಬಾಗಿಲು ತಟ್ಟುತ್ತಾ 'ಹಾಲು ಬೇಕಾ ಅಣ್ಣಾ?' ಎಂದದ್ದು ಕೇಳಿಸಿತು.

ಕೊಳ್ಳಲೋ ಬೇಡವೋ ಎಂಬ ಗೊಂದಲದೊಂದಿಗೇ
ಬಾಗಿಲಿನತ್ತ ಚಲಿಸಿದೆ.

Friday, September 28, 2007

ದಾರದ ದಾರಿಯ ದೂರ

ರಾತ್ರಿಗೆ ಈಗ ಹನ್ನೆರಡರ ಜಾವ. ಒಂಟಿ ರೂಮಿನಲ್ಲಿ ಒಂಟಿ ನಾನು. ಒಂಟಿ ಹಾಸಿಗೆ. 'ಬಾ, ನನ್ನ ಮೇಲೆ ಮಲಗು' ಎಂದು ಸುತ್ತಿ ಸುತ್ತಿ ಕೂತಿರುವ ಅದು ಕರೆಯುತ್ತಿದೆ ಹತ್ತಿರದಿಂದ. ನನಗೋ ನಿದ್ರೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಈ 'ಯಯಾತಿ' ಎಂಬ ಹೆಸರಿನ ಪುಸ್ತಕವನ್ನು ಹಿಡಿದು ಕುಳಿತುಬಿಟ್ಟಿದ್ದೇನೆ. ಇದೇನು ಕಾದಂಬರಿಯೋ, ಕಥೆಯೋ, ಗ್ರಂಥವೋ ನನಗೆ ಹೆಸರು ಕೊಡಲು ಸಾಧ್ಯವಾಗುತ್ತಿಲ್ಲ. ಅಮರ ಪ್ರೇಮ ಕಾವ್ಯ ಎಂದರೆ ಸರಿಯಾಗಬಹುದೇನೋ. ಯಯಾತಿಯ ದುಃಖ, ಶಮಾಳ ಪ್ರೀತಿ, ಕಚನ ತತ್ವ, ದೇವಯಾನಿಯ ದುರುಳತನ... ಅಬ್ಬ, ಅದು ಹೇಗೆ ಬರೆದಿದ್ದಾರೆ ವಿ.ಎಸ್. ಖಾಂಡೇಕರ್! ಅದೆಷ್ಟು ಅದ್ಭುತವಾಗಿ ಕನ್ನಡಕ್ಕೆ ತಂದಿದ್ದಾರೆ ವಿ.ಎಂ. ಇನಾಂದಾರ್! ಅದರೊಳಗೇ ಮುಳುಮುಳುಗಿ ಹೋಗುತ್ತೇನೆ ನಾನು.. ಮುಳುಗಿನಲ್ಲೇ ತೇಲಿ ಮತ್ತೆಲ್ಲೋ ಏಳುತ್ತೇನೆ..

ದೂರದ ಚರ್ಚಿನಲ್ಲಿ ಘಂಟೆ ಹೊಡೆದ ಸದ್ದು. ಮೇನ್ ರೋಡಿನಲ್ಲಿ ಏರು ಹತ್ತುತ್ತಿರುವ ಲಾರಿಯ ಸದ್ದು. ಬಲಕಿವಿಯ ಕಡೆಯಿಂದ ಶುರುವಾಗಿ ಎಡಕಿವಿಯ ಕೊನೆಯಲ್ಲಿ ಮುಗಿದುಹೋದಂತೆ ಹಾದುಹೋದ ಯಮಾಹಾ ಬೈಕಿನ ರೊಂಯ್ ಸದ್ದು. ಯಯಾತಿಯ ಇನ್ನೂರಾ ಮೂವತ್ತೇಳನೇ ಪುಟದ ಮೇಲ್ಗಡೆ ಎಡತುದಿಯನ್ನು ಕಿವಿಯಂತೆ ಸಣ್ಣಗೆ ಮಡಿಚಿ ಗುರುತು ಮಾಡಿ ಮುಚ್ಚಿಟ್ಟು ನಾನು ಗೂಡಿನಿಂದ ಹೊರಬರುತ್ತೇನೆ.

ಆಕಾಶದ ಅಂಗಳದ ತುಂಬ ಯಾರೋ ಚುಕ್ಕಿಗಳನ್ನಿಟ್ಟು ಹೋಗಿದ್ದಾರೆ. ಯಾರದಿರಬಹುದು ಕೆಲಸ..? ದೂರದಲ್ಲಿ ಚಂದ್ರ ಕಾಣಿಸುತ್ತಾನೆ... ಪೋಲಿ, ಇವನದೇ ಕೆಲಸ ಇದು ಅಂದುಕೊಳ್ಳುತ್ತೇನೆ. ನನ್ನ ಕವಿಕಲ್ಪನೆಗೆ ಚಂದ್ರ ಮುಗುಳ್ನಗುತ್ತಾನೆ.

ತಣ್ಣನೆ ಟೆರೇಸು. ಒಂದು, ಎರಡು, ಮೂರು, ನಾಲ್ಕು ....ಐದನೇ ಹೆಜ್ಜೆ ಇಟ್ಟವನು, ಏನೋ ತಡೆದಂತಾಗಿ ಹಿಂದಡಿಯಿಡುತ್ತೇನೆ. ಏನೋ ತಡೆದಂತಾಯಿತು. ತಂತಿಯಂತಹುದು. ಅಥವಾ ಹಗ್ಗ. ಇನ್ನೆರೆಡು ಹೆಜ್ಜೆ ಹಿಂದಿಟ್ಟು ನಾನು ಕಣ್ಣನ್ನು ಕಿರಿದು ಮಾಡಿ ನೋಡುತ್ತೇನೆ. ಹೌದು, ಹಗ್ಗ. ಒಂದು ದಾರ. ಹೊಲಿಯಲು ಬಳಸುತ್ತಾರಲ್ಲ, ಅಂತಹ ಒಂದು ದಾರ. ನನ್ನ ಎದೆ ಮಟ್ಟದಲ್ಲಿ ಟೆರೇಸಿನಲ್ಲಿ ಅಡ್ಡ ಹೋಗಿದೆ. ನಾನು ಆಚೆ ದಾಟದಂತೆ, ಬೇಲಿಯಂತೆ, ಗಡಿರೇಖೆಯಂತೆ ನನ್ನನ್ನು ತಡೆದು ನಿಲ್ಲಿಸಿದೆ. ಬೆಳದಿಂಗಳ ಬೆಳಕಿಗೆ ಬೆಳ್ಳಗೆ ಹೊಳೆಯುತ್ತಿದೆ. ತಂಬೂರಿಯ ತಂತಿಯಂತೆ ನಾನದನ್ನು ಮೀಟುತ್ತೇನೆ. ಗಾಳಿಯಲ್ಲೊಮ್ಮೆ ತುಯ್ದಾಡುತ್ತದೆ ದಾರ. ಸಂಜೆ ಮನೆಗೆ ಬರುವಾಗ ಇರಲಿಲ್ಲವಲ್ಲ ಈ ದಾರ? ಈಗೆಲ್ಲಿಂದ ಬಂತು ಇದು? ಎಲ್ಲಿಗೆ ಹೋಗಿದೆ? ಯಾರು ಎಳೆದದ್ದು ಇದನ್ನು? ಯಾಕೆ ಎಳೆದದ್ದು?

ನನಗೆ ಏನೋ ನೆನಪಾದಂತಾಗುತ್ತದೆ. ಕ್ಷಣದಲ್ಲೇ ಆ ನೆನಪು ಸ್ಪಷ್ಟವಾಗುತ್ತದೆ. ಚಿಕ್ಕವನಿದ್ದಾಗ ನಾನೂ ಹೀಗೇ ದಾರ ಎಳೆದು ಆಟವಾಡುತ್ತಿದ್ದುದು... ನಾವು ಟೆಲಿಫೋನ್ ಆಟ ಆಡುತ್ತಿದ್ದೆವು. ಒಂದು ಟೂಥ್‍ಪೇಸ್ಟ್ ಡಬ್ಬಿಯನ್ನು ಮಧ್ಯದಲ್ಲಿ ಕತ್ತರಿಸಬೇಕು. ಈಗ ಎರಡು ಪುಟ್ಟ ಪುಟ್ಟ ಡಬ್ಬಿಗಳಾಗುತ್ತವಲ್ಲ, ಒಂದು ಊದ್ದ ದಾರ ತೆಗೆದುಕೊಂಡು ಒಂದು ತುದಿಯನ್ನು ಒಂದು ಡಬ್ಬಿಯ ತುದಿಗೆ ಕಟ್ಟುವುದು. ದಾರದ ಮತ್ತೊಂದು ತುದಿಯನ್ನು ಮತ್ತೊಂದು ಡಬ್ಬಿಯ ತುದಿಗೆ ಕಟ್ಟುವುದು. ಒಂದು ಡಬ್ಬಿಯನ್ನು ಒಬ್ಬರು ಹಿಡಿದುಕೊಂಡು ಇಲ್ಲೇ ನಿಲ್ಲುವುದು. ಮತ್ತೊಬ್ಬರು ದೂರ ದೂರ ಹೋಗುವುದು. ದೂರ ಹೋಗಿ ಸಣ್ಣಗೆ ಮಾತಾಡುವುದು. ಅದು ಈಚೆಗಿರುವವರಿಗೆ ದಾರದ ಮೂಲಕ ಹರಿದು ಬಂದು ಡಬ್ಬಿಯಲ್ಲಿ ಗುನುಗುಗುನುಗಾಗಿ ಕೇಳಿಸುತ್ತದೆ.

ಅಪ್ಪ ಹೇಳಿಕೊಟ್ಟದ್ದು ಅದನ್ನು ನನಗೆ. ಸಾಗರದಿಂದ ತಂದ ಹೊಸ ಕೋಲ್ಗೇಟ್ ಡಬ್ಬಿಯನ್ನು ಕತ್ತರಿಸಿ ನನಗವನು ಮಾಡಿಕೊಟ್ಟಿದ್ದ ಈ ಫೋನು. ಅವನು ಟೆಲಿಫೋನ್ ತಯಾರಿಸುವಾಗ ಪಕ್ಕದಲ್ಲಿ ಕೂತು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ ನಾನು. ತಯಾರಾದಮೇಲೆ ತಾನೊಂದು ತುದಿ ಹಿಡಿದು ಜಗುಲಿಯ ಮೇಲೆ ನಿಂತು ಮತ್ತೊಂದು ತುದಿಯನ್ನು ನನಗೆ ಕೊಟ್ಟು ದೂರಕ್ಕೆ ಹೋಗುವಂತೆ ಹೇಳಿದ. ನಾನು ಡಬ್ಬಿಯನ್ನು ಹಿಡಿದು ಅಂಗಳಕ್ಕೆ ಓಡಿದೆ. ದಾರ ಬರುವವರೆಗೂ ಹೋಗಿ, ದಾರ ಜಗ್ಗುವಂತಾದಾಗ ನನ್ನನ್ನು ಅಲ್ಲೇ ನಿಲ್ಲುವಂತೆ ಹೇಳಿದ ಅಪ್ಪ. 'ಫೋನ್ ಕಿವೀಲಿ ಇಟ್ಕೋ' ಎಂದ. ನಾನು ಕಿವಿಗೆ ಹಿಡಿದೆ. 'ಹಲೋ ಹಲೋ.. ಪಾಪು.. ಕೇಳ್ತಾ ಇದ್ದಾ..?' ಕೇಳಿದ. ಅಪ್ಪನ ಪಿಸುಮಾತು ದಾರದಲ್ಲಿ ಹರಿಹರಿದು ಬಂದು ಈ ಡಬ್ಬಿಯಲ್ಲಿ ಅಪ್ಪನೇ ಹತ್ತಿರ ನಿಂತು ಮಾತಾಡಿದಂತೆ ಕೇಳಿಸಿ ಏನೋ ಒಂಥರಾ ಭಯವಾದಂತಾಗಿ ನನಗೆ ರೋಮಾಂಚನ! 'ಹಲೋ ಹಲೋ.. ಕೇಳ್ತಾ ಇದ್ದಾ..? ನೀನೂ ಮಾತಾಡು..' ಅಪ್ಪ ಹೇಳುತ್ತಿದ್ದ. ನನಗೆ ಕೇಳಿಸುತ್ತಿತ್ತು. 'ಹಾಂ, ಕೇಳ್ತಾ ಇದ್ದು' ಎಂದೆ. 'ಇನ್ನೂ ಮಾತಾಡು..' ಎಂದ. ಆದರೆ ಅಪ್ಪನ ಜೊತೆ ಇನ್ನೂ ಏನು ಮಾತಾಡುವುದು ಅಂತಲೇ ನನಗೆ ಹೊಳೆಯಲಿಲ್ಲ. ಅಚಾನಕ್ಕಾಗಿ ಅಪ್ಪನ ಜೊತೆ, ಅದೂ ಫೋನಿನಲ್ಲಿ ಏನಂತ ಮಾತಾಡುವುದು? ನಾನು-ಅಪ್ಪ ಸಾಧಾರಣವಾಗಿ ಮಾತಾಡಿಕೊಳ್ಳುತ್ತಿದ್ದುದೇ ಕಮ್ಮಿ. ಅಂಥದರಲ್ಲಿ ಈಗ ಫೋನಿನಲ್ಲಿ ಏನು ಮಾತಾಡುವುದು? ಅಲ್ಲದೆ ನಾನು ಅಷ್ಟರೊಳಗೆ ಫೋನಿನಲ್ಲಿ ಮಾತಾಡಿರಲೇ ಇಲ್ಲ. ನಮ್ಮೂರಿನಲ್ಲಿ ಆಗ ಪಾಪಣ್ಣನ ಮನೆಯಲ್ಲಿ ಮಾತ್ರ ಫೋನಿತ್ತು. ವಿಪಿಟಿ ಫೋನು. ಡಾಕ್ಟ್ರ ಮನೆಯಲ್ಲೂ ಇತ್ತು ಅನ್ಸುತ್ತೆ. ನಾನು ಫೋನಿನಲ್ಲಿ ಮಾತಾಡಿರಲೇ ಇಲ್ಲ. ಪಾಪಣ್ಣನ ಮನೆಗೆ ಹೋದಾಗ ಯಾರಾದರೂ ಮಾತಾಡುತ್ತಿರುವುದನ್ನು ನೋಡಿದ್ದೆ ಅಷ್ಟೆ. ಅದು ಬಿಟ್ಟರೆ ಭಾನುವಾರದ ಸಿನಿಮಾಗಳಲ್ಲಿ ನೋಡಿದ್ದೆ. ನನಗಂತೂ ಅಪ್ಪನೊಟ್ಟಿಗೆ ಏನು ಮಾತಾಡುವುದು ಅಂತಲೇ ತಿಳಿಯದೆ, ತೀರಾ ಸಂಕೋಚವಾಗಿ ಸುಮ್ಮನೆ ನಿಂತುಬಿಟ್ಟಿದ್ದೆ.

ಇದೂ ಹಾಗೆಯೇ ಟೆಲಿಫೋನ್ ವ್ಯವಸ್ಥೆಯಾ? ದಾರದಗುಂಟ ನಾನು ಟೆರೇಸಿನ ತುದಿಗೆ ಬರುತ್ತೇನೆ. ನಮ್ಮ ಪಕ್ಕದ ಮನೆಯ ಟೆರೇಸಿನಿಂದ ಉದ್ಭಸಿದಂತೆ ಕಾಣಿಸುತ್ತದೆ ದಾರದ ತುದಿ. ಹೌದಾ? ಏನೋ, ಸರಿಯಾಗಿ ಕಾಣುತ್ತಿಲ್ಲ. ಇವತ್ತು ಹುಣ್ಣಿಮೆಯಾಗಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ. ಈಗಿನ ಕಾಲದಲ್ಲೂ ಹೀಗೆ ದಾರ ಎಳೆದು ಫೋನ್ ಮಾಡಿಕೊಂಡು ಆಟವಾಡುವ ಮಕ್ಕಳಿದ್ದಾರಾ? ಅದೂ ಬೆಂಗಳೂರಿನಲ್ಲಿ? ಚಿಕ್ಕ ಹುಡುಗರ ಕೈಯಲ್ಲೂ ಮೊಬೈಲುಗಳಿರುವಾಗ ಈ ದಾರ ಎಳೆಯುವ ರಿಸ್ಕು ಯಾರು ತಾನೆ ತೆಗೆದುಕೊಂಡಾರು ಎಂದೆನಿಸಿ ನಗು ಬಂತು.

ಹಾಗಾದರೆ ಏನಿದು ದಾರ? ಹಾಂ, ಹೊಳೆಯಿತು. ಇದು ಗಾಳಿಪಟದ ದಾರ. ಹೌದು, ಸಂಜೆ ಹೊತ್ತಿಗೆ ಪಕ್ಕದ ಮನೆ ಟೆರೇಸಿನ ಮೇಲೆ ನಿಂತು ಇಬ್ಬರು ಹುಡುಗರು ಗಾಳಿಪಟ ಹಾರಿಸುತ್ತಿದ್ದರು. ಬಹುಶಃ ಗಾಳಿಪಟ ಯಾವುದೋ ಮರಕ್ಕೋ, ಟವರ್ರಿಗೋ, ದೊಡ್ಡ ಕಟ್ಟಡದ ತುದಿಗೋ ಸಿಕ್ಕಿಕೊಂಡಿರಬೇಕು. ಕತ್ತಲಾದ್ದರಿಂದ ದಾರವನ್ನು ಹಾಗೇ ಬಿಟ್ಟು ಹೋಗಿದ್ದಾರೆ ಹುಡುಗರು.

ಆದರೂ ನನಗೇಕೋ ಅನುಮಾನ.. ಇದು ಗಾಳಿಪಟದ ದಾರವೇ ಹೌದೇ? ಅಥವಾ ನಾನು ಆಗ ಅಂದುಕೊಂಡಂತೆ ಟೆಲಿಫೋನ್ ಲೈನೇ? ಆ ಕಡೆಯ ಮನೆಯಲ್ಲಿ ಒಬ್ಬ ಹುಡುಗ, ಈ ಕಡೆಯ ಮನೆಯಲ್ಲಿ ಒಬ್ಬ ಹುಡುಗಿ ಇರಬಹುದೇ? ಅವರಿಬ್ಬರೂ ಪ್ರೇಮಿಗಳೇ? ರಾತ್ರಿಹೊತ್ತು, ಎಲ್ಲರೂ ಮಲಗಿರಲು, ಇವರಿಬ್ಬರೇ ಟೆರೇಸಿಗೆ ಬಂದು, ಒಬ್ಬರನ್ನೊಬ್ಬರು ದೂರದೂರದಿಂದ ನೋಡಿಕೊಳ್ಳುತ್ತ, ಈ ಫೋನಿನ ಮೂಲಕ ಪಿಸುಮಾತನಾಡಿಕೊಳ್ಳುತ್ತ, ಬೆಳದಿಂಗಳು ಚೆಲ್ಲಿದ ಟೆರೇಸಿನಮೇಲೆ ನಡೆದಾಡುತ್ತಿರುತ್ತಾರೆಯೇ? ಮಾತು ಸಾಕಾಗಿ, ಕಣ್ಣು ನಿದ್ರೆ ಬಯಸಿ, ಕೆಳಗಿಳಿದುಹೋಗುವ ಮುನ್ನ ಇಬ್ಬರೂ ಫ್ಲೈಯಿಂಗ್ ಕಿಸ್ ರವಾನಿಸಿಕೊಂಡು, ಗುಡ್‍ನೈಟ್ ಹೇಳಿ... ಇಲ್ಲ, ನಾನು ಇಷ್ಟೆಲ್ಲ ಕಲ್ಪನೆ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಯೋಚಿಸುತ್ತಿದ್ದೇನೆ. ತಪ್ಪು ಸುಶ್, ತಪ್ಪು.

ಗಾಳಿಪಟ ಏನಕ್ಕೆ ಸಿಲುಕಿಕೊಂಡಿದೆ? ನಾನು ಟೆರೇಸಿನ ಆಚೆ ತುದಿಗೆ ನಡೆಯುತ್ತೇನೆ. ದಾರದ ಮೈಯನ್ನೇ, ಕಣ್ಣು ನಿಲುಕುವವರೆಗೂ ದೃಷ್ಟಿ ಹಾಯಿಸಿ ನೋಡುತ್ತೇನೆ. ಸ್ವಲ್ಪ ದೂರದವರೆಗೆ ಕಾಣುತ್ತದೆ ಅಷ್ಟೆ. ಆಮೇಲೆ ಏನಾಗಿದೆಯೋ ಎಲ್ಲಿಗೆ ಹೋಗಿದೆಯೋ ಹೇಗೆ ಮುಂದುವರೆದಿದೆಯೋ ಗೋಚರಿಸುವುದಿಲ್ಲ. ಬೆಳಗ್ಗೆ ಎದ್ದಕೂಡಲೇ ನೋಡಬೇಕು ಎಂದುಕೊಳ್ಳುತ್ತೇನೆ. ಆಕಳಿಕೆ ಬರುತ್ತದೆ.

ಟಾಯ್ಲೆಟ್ಟಿಗೆ ಹೋಗಿಬಂದು ರೂಮಿನೊಳಸೇರುವಾಗ ಮತ್ತೆ ನೆನಪು ಮುಂದುವರೆಯುತ್ತದೆ: ಅಪ್ಪ ಮಾಡಿಕೊಟ್ಟ ಫೋನು ನನಗೆ ತುಂಬಾ ಇಷ್ಟವಾಗಿಬಿಟ್ಟು, ನಾನು ಊರ ಹುಡುಗರಿಗೆಲ್ಲ ತೋರಿಸಿ, ಕೊನೆಗೆ ನಮ್ಮ ಮನೆಗೂ ಮಧು ಮನೆಗೂ ಒಂದು ಟೆಲಿಫೋನ್ ಲೈನ್ ಎಳೆದಿದ್ದೆವು ನಾವು! ಆದರೆ 'ತಾಂತ್ರಿಕ ಅಡಚಣೆ'ಗಳಿಂದಾಗಿ ನಮ್ಮ ಟೆಲಿಫೋನ್ ವ್ಯವಸ್ಥೆ ಸಕ್ಸಸ್ ಆಗಿರಲಿಲ್ಲ. ಮಧು 'ಕೇಳ್ತಾ ಇದ್ದನಾ?' ಎಂದು ಕೂಗುತ್ತಿದ್ದುದು ನನಗೆ ಡೈರೆಕ್ಟಾಗಿಯೇ ಕೇಳಿಸುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಿದುದಕ್ಕೆ ಇಬ್ಬರ ಮನೆಯಿಂದಲೂ ಪ್ರಶಂಸೆ ಸಿಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡು ಶುರುಮಾಡಿದ್ದ ನಮಗೆ ಒಂದು ಪೂರ್ತಿ ನೂಲಿನುಂಡೆ ವೇಸ್ಟ್ ಮಾಡಿದ್ದಕ್ಕಾಗಿ ಬೈಗುಳದ ಬಹುಮಾನ ಸಿಕ್ಕಿದ್ದು ಬಿಟ್ಟರೆ ಮತ್ತಿನ್ನೇನೂ ಸಿಕ್ಕಿರಲಿಲ್ಲ.

ಹಾಸಿಗೆ ಬಿಚ್ಚಿ ಮಲಗುವ ಮುನ್ನ ಹೊಳೆಯುತ್ತದೆ: ಹೌದು, ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ. ರೊಟೀನ್ ಲೈಫು. ಬೆಳಗ್ಗೆ ಎದ್ದಕೂಡಲೆ ಸ್ನಾನ ಮಾಡಿ ಆಫೀಸಿಗೆ ಹೊರಡುವುದು, ಸಂಜೆಯವರೆಗೂ ಆಫೀಸು, ಆಫೀಸು ಮುಗಿಸಿ, ಮಧ್ಯದಲ್ಲೇ ಎಲ್ಲೋ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬರುವುದು. ಒಂದಷ್ಟು ಹೊತ್ತು ಏನನ್ನಾದರೂ ಓದಿ ಮಲಗಿಬಿಡುವುದು. ಮತ್ತೆ ಮರುದಿನ ಬೆಳಗ್ಗೆ ಆಫೀಸು.

ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ. ಕಂಡುಕೊಳ್ಳಬೇಕಿದೆ: ಮನೆಯಿಂದ ಮನೆಗೆ, ಮನದಿಂದ ಮನಕ್ಕೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇರುವ ದಾರದ ದಾರಿಯ ದೂರ...


[೨೪.೦೫.೨೦೦೫; ರಾತ್ರಿ ೧]

Thursday, September 13, 2007

ಗಣೇಶ ಬಂದು ಹೋದ

ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:

“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”

‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.

ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"

"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.

“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”

“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”

“ಏನದು ಅಧಿಕಾರ ಹಸ್ತಾಂತರ?”

“ಅದೇ ಕುಮಾರಸ್ವಾಮಿ ಇದಾರಲ್ಲಾ..?”

“ಯಾರು ನನ್ನ ಅಣ್ಣಾನಾ?”

“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”

“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”

“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”

“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”

ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.

ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.

ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”

ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..

ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.

ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.

[ಎಲ್ಲರಿಗೂ ಚೌತಿಯ ಶುಭಾಷಯಗಳು.]

Friday, August 24, 2007

ವರಮಹಾಲಕ್ಷ್ಮೀ ವ್ರತ

ಎನ್ನ ಅಜ್ಜಿ ಹೆಸ್ರು ವರಮಹಾಲಕ್ಷ್ಮೀ ಹೇಳಿ. ಅವ್ಳು ವರ್ಮಾಲಕ್ಷ್ಮೀ ಹಬ್ಬದ್ ದಿನ ಹುಟ್ಟಿದ್ರಿಂದ ಆ ಹೆಸ್ರು ಇಟ್ಟಿದ್ದಡ. ಹಂಗಾಗಿ ಇವತ್ತು ಅಜ್ಜಿ ಬರ್ತ್-ಡೇ! ಇದ್ದಿದ್ದಿದ್ರೆ ಫೋನ್ ಮಾಡಿ ವಿಶ್ ಮಾಡ್ಲಾಗಿತ್ತು. ಆದ್ರೆ ತೀರ್ಕ್ಯಂಡು ಒಂದೂವರೆ ವರ್ಷಾತು.

ಅವ್ಳು ಒಂದ್ಸಲ ಎಂಥ ಮಾಡಿದ್ಲಡಪಾ ಅಂದ್ರೆ, ಪ್ಯಾಟಿಗೆ ಹೋಗಿದ್ಲಡ. ಸಾಗ್ರ ಪ್ಯಾಟಿಗೆ. ಅಲ್ಲಿ ಸಾಮಾನೆಲ್ಲ ತಗಂಡು, ಹಂಗೇ ಗಣ್ಪತಿ ದೇವ್‍ಸ್ಥಾನದ್ ರಸ್ತೇಲ್ ಬರ್ತಿರಕ್ಕರೆ ಯಶೋಧ ಹೇಳಿ ಪುರಪ್ಪೆಮನೆ ಊರಿನವ್ಳು ಒಬ್ಳು ಕಂಡ್ಲಡ ಅಜ್ಜಿಗೆ. ಅಜ್ಜಿಗೆ ಅವ್ಳುನ್ನ ಮಾತಾಡಿಸ್ಲಾಗ ಹೇಳಿ ಕಾಣ್ಚಡ. ಎಂಥಕೆ ಹಂಗೆ ಕಾಣ್ಚೇನ ನಂಗೊತ್ತಿಲ್ಲೆ. ಸರಿ, ಈಗ ಯಶೋಧಕ್ಕನಿಂದ ಹೆಂಗಾರು ಮಾಡಿ ತಪ್ಪಿಸ್ಕ್ಯಳವಲಪಾ ಅಂತ ನೋಡ್ತಿರಕ್ಕರೆ, ಯಶೋಧಕ್ಕ ಅಲ್ಲೇ ಯಾವ್ದೋ ಅಂಗಡಿ ಹೊಕ್ಚಡ. ಅವ್ಳು ಅತ್ಲಾಗ್ ಹೊಕ್ಕಿದ್ದೇ ತಡ, ನಮ್ಮನೆ ಅಜ್ಜಿ ಫಾಸ್ಟಾಗಿ ಆ ಅಂಗ್ಡಿ ಕ್ರಾಸ್ ಮಾಡಿ ಮುಂದೆ ಹೋತಡ.

ಇನ್ನೂ ನಾಕು ಹೆಜ್ಜೆ ಇಟ್ಟಿರ್ಲೆ, ಅಷ್ಟೊತ್ತಿಗೆ ಯಶೋಧಕ್ಕ ಇತ್ಲಾಗ್ ತಿರುಗ್ಚಡ, ಅಜ್ಜಿನ ನೋಡ್ಬುಡ್ಚಡ! ಅಜ್ಜಿ ಸ್ಪೀಡಾಗಿ ನೆಡಿತಾ ಇತ್ತಾ, ಯಶೋಧಕ್ಕ ಹಿಂದಕ್ಕಿಂದ "ಹೋಯ್ ವರಮಾಲಕ್ಷ್ಮೀ.. ನಿಂತ್ಕಳೇ.. ಆನು ಯಶೋಧಾ.. ಹೋಯ್ ವರ್ಮಾಲಕ್ಷ್ಮೀ.." ಅಂತ ಜೋರಾಗಿ ಕರದ್ ಕೇಳ್ಚಡ. ಆದ್ರೆ ಅಜ್ಜಿಗೆ ತಿರುಗಿ ನೋಡ್ಲಾಗ ಹೇಳಿ. ಹಂಗಾಗಿ ನಮ್ಮನೆ ಅಜ್ಜಿ ಎಂಥ ಪ್ಲಾನ್ ಮಾಡ್ಚಡ ಗೊತಿದಾ? ಹಂಗೇ ಜೋರಾಗ್ ನೆಡ್ಕೋತ್ಲೇ "ಆಂ? ಆನು ವರಮಾಲಕ್ಷ್ಮೀ ಅಲ್ದೇ!" ಅಂತ ಹೇಳಿ ಮುಂದಕ್ ಹೋಗ್ಬುಡ್ಚಡ!

ಹೆಂಗೆ ನಮ್ಮನೆ ಅಜ್ಜಿ?! ಅವ್ಳು ಹಂಗೇ ಸೈಯಿ, ಏನಾರು ಮಾಡಕ್ಕು ಅಂತ ವ್ರತ ಕೈಗೊಂಡ್ರೆ ಮಾಡಿಯೇ ತೀರೋದು! ಗ್ರೇಟು ಅಲ್ದಾ?!

Friday, August 17, 2007

ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ

ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು... ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, 'ಉಫ್ ಉಫ್' ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ 'ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬರ್ತು.. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..' ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ 'ಏಯ್ ಇನ್ನೂ ನೈವೇದ್ಯ ಆಗಲ್ಲೆ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..' ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...

ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ 'ನಿಮ್ಮನೆ ಪೂಜ್ಯಾತನೇ?' ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...

ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. 'ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತಡ..' ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು.. ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ.. ಅಪ್ಪ ಚುಟುಕಾಗಿ ಪೂಜೆ ಮುಗಿಸಿ, ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.

ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ.. ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು. ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..

ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ 'ಬಿಗಿ ಸಾಕಾ?' ಕೇಳುತ್ತಿದ್ದ. ನಾನು 'ಸಾಕು' ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‍ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು. ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ 'ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ' ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ 'ಇನ್ನೊಂದ್ ಬೆರಳು' ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ 'ಇಶಿಶೀ..!' ಎನ್ನುತ್ತಿದ್ದಳು.

ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ 'ಎಲ್ಲಿ ತುರುಸ್ತು?' ಎಂದು ಕೇಳುತ್ತಾ ತುರುಸಿಕೊಟ್ಟದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.

'ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?' ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ 'ಕೆಂಪೆಲ್ಲಾ ಅಳಿಸಿಹೋದರೇ?' ಅಂತ ಕೈ ತೊಳೆಯಲಿಕ್ಕೆ ಅಂಜಿಕೆ.. 'ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..' ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. 'ಹುಡುಗ್ರಿಗೆ ಇಷ್ಟೇ ಕೆಂಪಾಗದು' ಎಂದವಳಂದಾಗ ಸುಪ್ತ ಸಮಾಧಾನ..

ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು. ಶಾಲೆಯಲ್ಲೂ ಅವತ್ತಿಡೀ 'ನಿಮ್ಮನೆಲಿ ಯಾರು ಬೀಸಿದ್ದು?' 'ಸುಣ್ಣ ಹಾಕಿ ಬೀಸಿದ್ದಿದ್ರಾ?' 'ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು' ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.

ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.

Monday, August 13, 2007

ಮರ, ಬಳ್ಳಿ ಮತ್ತು ಕವಿ

ಆ ಬಳ್ಳಿಯನ್ನು ಮೊದಲ ಬಾರಿ ನೋಡಿದಾಗಲೇ
ಅದು ಮರವೊಂದರೆಡೆಗೆ ವಾಲುತ್ತಿರುವುದು
ನನಗೆ ಗೊತ್ತಾಗುತ್ತಿತ್ತು...

ಅದರ ಎಲೆ-ಕಣ್ಣುಗಳು ಇನ್ನೂ ಎಳೆಯವಿದ್ದವು.
ಪಕ್ಕದ ಮರವೊಂದನ್ನು ಬಿಟ್ಟು ಮತ್ತಿನ್ನೇನೂ ದಕ್ಕುತ್ತಿರಲಿಲ್ಲ
ಅದರ ನೋಟಕ್ಕೆ...

ಮರ ತನಗಾಗಿಯೇ ನೆರಳನ್ನು ಸೂಸುತ್ತಿದೆ,
ಮರ ತನಗಾಗಿಯೇ ಗಾಳಿಯನ್ನು ಬೀಸುತ್ತಿದೆ,
ಮರ ತನಗಾಗಿಯೇ ಪ್ರೇಮಪರ್ಣಗಳನ್ನು ಬೀಳಿಸುತ್ತಿದೆ-
ಎಂದೆಲ್ಲ ಭಾವಿಸಿ, ಮರವನ್ನು ಸಮೀಪಿಸಿತು.

ಮರವನ್ನು ತಾಕಿದಾಗ ಬಳ್ಳಿಗೆ ರೋಮಾಂಚನ.
ಮರದ ಕಾಂಡದ ಒರಟೊರಟು ತೊಗಟೆ,
ಅನುರಾಗದ ಕಂಪ ಹೊತ್ತ ಬೀಸುಗಾಳಿ,
ಆಗಾಗ ಮೈಗೆ ತಾಕುತ್ತಿದ್ದ ಉದುರೆಲೆಗಳು-
ಎಲ್ಲಾ ಬಳ್ಳಿಗೆ ಇಷ್ಟ ಇಷ್ಟ.
ಸಂಚರಿಸುತ್ತಿದ್ದ ಪಿಸುಮಾತಿನ ಸಂದೇಶಗಳು
ಬಳ್ಳಿಯ ಪತ್ರಹರಿತ್ತಿನ ಸಂವಹನ ವೇಗವನ್ನು ಹೆಚ್ಚಿಸುತ್ತಿದ್ದವು.

ಬಳ್ಳಿಗೆ ಗೊತ್ತಿಲ್ಲದ್ದೆಂದರೆ, ಮರದ ಆಚೆ
ಇನ್ನೂ ಅನೇಕ ಬಳ್ಳಿಗಳು ಹಬ್ಬಿರುವುದು,
ಮರ ಎಲ್ಲಾ ಬಳ್ಳಿಗಳಿಗೂ ಇವಿವೇ ರೋಮಾಂಚನ,
ನೆರಳು, ಸುಖ, ಜತೆಗಿರುವ ಅಭಯ, ಭರವಸೆಗಳನಿತ್ತಿರುವುದು.

ಕಾಲ ಸರಿಯುತ್ತಾ, ಬಳ್ಳಿ ಬೆಳೆಯುತ್ತಾ,
ಒಂದು ಕವಲೊಡೆದ ದಾರಿಯ ಬಳಿ ಬಂದಾಗ,
ರೆಂಬೆಯ ತೋಳು ತಪ್ಪಿ ಬೀಳುವಂತಾದಾಗ, ಮುಂದೇನೆಂದು ತಿಳಿಯದೆ,
ಕಾಡಿದ ಅಭದ್ರತೆಗೆ ಹೆದರಿ, ಕೇಳುತ್ತೆ ಅದು ಮರದ ಬಳಿ:
"ನೀನು ನನ್ನ ಪ್ರೀತಿಸ್ತೀಯಲ್ಲ? ನನ್ನನ್ನೆಂದೂ ಬಿಡೋಲ್ಲವಲ್ಲ?"

ಮರ ತಿರಸ್ಕರಿಸೊತ್ತೆ.

"ನನ್ನ ಪಾಡಿಗೆ ನಾನಿದ್ದೆ.
ನೀನಾಗೇ ಬಂದು ನನ್ನ ತಬ್ಬಿದೆ,
ಏನೇನೋ ಪರಿಕಲ್ಪಿಸಿಕೊಂಡೆ,
ಸ್ನೇಹವನ್ನೇ ಪ್ರೇಮವೆಂದು ಭಾವಿಸಿದರೆ,
ನನ್ನ ಸಹಜ ಅಭಿವ್ಯಕ್ತಿಗಳನ್ನೇ ಅನುರಾಗವೆಂದುಕೊಂಡುಬಿಟ್ಟರೆ
ಅದು ನನ್ನ ತಪ್ಪಾ?" ಎಂದೆಲ್ಲಾ ಗೊಣಗಿ
ಕಳ್ಳನಂತೆ ಸುಮ್ಮನಾಗುತ್ತದೆ.

ಬಳ್ಳಿಗೆ ಮರದ ಆಶ್ರಯ ಒಮ್ಮಿಂದೊಮ್ಮೆಲೇ ತಪ್ಪಿಹೋಗಿ,
ಬಾಗಿ, ಕತ್ತರಿಸಿ ಬೀಳುತ್ತದೆ.
ನೋವು ತಾಳಲಾರದೇ ಕಣ್ಣೆಲೆಗಳಿಂದ
ನೀರುದುರಿಸುತ್ತದೆ...
ಬಾಡತೊಡಗುತ್ತದೆ...
ಸಾಯುತ್ತೇನೆನ್ನುತ್ತದೆ...

ಅದರ ಕಷ್ಟವನ್ನು ನೋಡಲಾರದೆ ನಾನದರ ಬಳಿಸಾರುತ್ತೇನೆ...
ಸಮಾಧಾನ ಹೇಳುತ್ತೇನೆ...
ನೀರೆರೆಯುತ್ತೇನೆ...
ಗೊಬ್ಬರ ಹಾಕುತ್ತೇನೆ...
"ಆದದ್ದಾಯ್ತು, ಅದೇ ಮರದ ನೆನಪಲ್ಲಿ ಕೊರಗಬೇಡ,
ನೋಡಲ್ಲಿ, ಪಕ್ಕದಲ್ಲಿನ್ನೂ ಅನೇಕ ಮರಗಳಿವೆ" ಎನ್ನುತ್ತೇನೆ;
ಹೊಸ ಕನಸು ಕಾಣಲು ಪ್ರೇರೇಪಿಸುತ್ತೇನೆ.

"ಸಾಧ್ಯವೇ ಇಲ್ಲ...
ಹೇಗೆ ಮರೆಯಲಿ ಆ ಮರದ ಸ್ಪರ್ಶಸುಖವನ್ನು?
ಹೇಗೆ ಅಲ್ಲಗಳೆಯಲಿ ಅದರ ಸಂದೇಶಗಳಲ್ಲಿ ತುಂಬಿರುತ್ತಿದ್ದ ಅನುರಾಗವನ್ನು?
ಹೇಗೆ ಸುಳ್ಳೆನ್ನಲಿ ಅದು ಪ್ರೇಮವಾಗಿರಲೇ ಇಲ್ಲವೆಂದು?

ಅಥವಾ, ಉಹೂಂ, ಹೇಗೆ ಬಿಟ್ಟಿರಲಿ
ಇಷ್ಟು ದಿನ ಜತೆಗಿದ್ದ ಮರವನ್ನು?"

ಬಳ್ಳಿಯ ಹುಚ್ಚುತನವನ್ನು ನೋಡಿ ಬೇಸತ್ತ ನಾನು
ಒಂದು ನೀಳ ನಿಶ್ವಾಸ ಬಿಟ್ಟು ಈ ನೇವರಿಕೆಯಿಂದ ನಿವೃತ್ತನಾಗುತ್ತೇನೆ.
ಅದರ ಕನವರಿಕೆಗಳನ್ನು ಕಡೆಗಣಿಸುತ್ತೇನೆ.
ಕಾರುಣ್ಯದ ಕಣ್ಣನ್ನು ಕೊಂಚ ಬದಿಗೆ ಸರಿಸುತ್ತೇನೆ.

ಆದರೆ, ಎಂದಿನಂತೆ, ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ:
ಒಂದು ಶುಭದಿನ, ತಾನು ಮತ್ತೆ ಚಿಗುರುತ್ತಿರುವ,
ಚೇತರಿಸಿಕೊಳ್ಳುತ್ತಿರುವ ಸುದ್ದಿಯನ್ನು ಬಳ್ಳಿ ಹೇಳಿಕೊಳ್ಳುತ್ತದೆ.
ನಾನು ಸಂಭ್ರಮಿಸಿ ಅಲ್ಲಿಗೆ ಧಾವಿಸಿ ನೋಡುತ್ತೇನೆ:

ನನ್ನ ಸಾಂತ್ವನದ ನೀರು-ಗೊಬ್ಬರಗಳ ಸಾರ್ಥಕತೆ
ಅಲ್ಲಿ ಕುಡಿಯಾಗಿ ಒಡೆದಿರುವುದು ಗೋಚರಿಸುತ್ತದೆ.
ಹರಿತ್ತಿನ ಹರಿವು, ಬಳ್ಳಿಯ ಹಸಿವು ಎಲ್ಲಾ ಸಹಜವಾಗುತ್ತಿರುವುದು ಕಾಣಿಸುತ್ತದೆ.
ಬಣ್ಣದ ಹೂವರಳಿಸಿಕೊಳ್ಳುವ ಹೊಸ ಕನಸನ್ನು ಬಳ್ಳಿಗೆ ಕೊಟ್ಟು,
ಶುಭ ಹರಸಿ, ಇವನ್ನೆಲ್ಲಾ ಬರೆಯಲು ಕೂತ ನಾನು
ಈ ಕವಿತೆಯ ಕವಿಯಷ್ಟೇ ಆಗಿ ಉಳಿದುಬಿಡುತ್ತೇನೆ.

Thursday, August 09, 2007

ಬೆಳ್ಬೆಳ್ಗೆ ಖುಷಿ!

ಬೆಳ್ಬೆಳ್ಗೆ ಎರಡು ಒಳ್ಳೇ ಬ್ಲಾಗುಗಳನ್ನು ನೋಡಿ, ಮುದುರಿಕೊಂಡಿದ್ದ ಮನಸ ಹೂ ಮತ್ತೆ ಅರಳಿದಂತಾಯಿತು. ಒಂದು, December Stud ಎಂಬ, ಇನ್ನೂ ಯಾರೆಂದು ಕಂಡುಹಿಡಿಯಲಾಗದವರ 'A Paradise for Dreamers' ಬ್ಲಾಗಿನಲ್ಲಿ ಓದಿದ ಹಾಡು. ಇನ್ನೊಂದು, 'ಮೀರಾ ಎಂಬ ನಿಶುವಿನ ಅಮ್ಮ' ಪೋಸ್ಟ್ ಮಾಡಿರುವ ತಮ್ಮ ಮಗನ ಕನ್ನಡ ಅಕ್ಷರಮಾಲೆ ಕಲಿಕೆಯ ಹಾಡು. "ಈಗಲೂ 'ರ' ಹೊರಳದ ಅವನ ನಾಲಿಗೆಯಲ್ಲಿ ಯರಲವ, ಯಲಲವ ಆಗೇ ನಲಿಯೋದು. ಕೆಲವೊಮ್ಮೆ ಅದು ಯಲವಲ-ವೂ ಆಗಿ, ಹಾಗೆ ಆದಾಗಲೆಲ್ಲ 'ಅಯ್ಯೊ ಈ ಕನ್ನಡ ಅಕ್ಷರ ಮಾಲೆ ಎಷ್ಟು ಮುದ್ದಾಗಿದೆಯಲ್ಲ' ಅನ್ನಿಸಿ, ನಿಶುವಿನ ಮೇಲೂ, ಕನ್ನಡದ ಮೇಲೂ ಒಟ್ಟೊಟ್ಟಿಗೇ ಮುದ್ದು ಉಕ್ಕಿ ಬರುವುದೂ ಉಂಟು" ಎಂದು ಅವರು ಬರೆದ ಸಾಲುಗಲೇ ನಿಶುವಿನ ಮೇಲೆ ಮುದ್ದು ತರುವಂತಿವೆ.


ಇವನ್ನು ಓದಿ, ಕೇಳಿ ಖುಷಿ ಪಡುವ ಭಾಗ್ಯ ನಿಮ್ಮದೂ ಆಗಲೀಂತ ಇಲ್ಲಿ ಅವುಗಳ ಲಿಂಕು ಕೊಡುತ್ತಿದ್ದೇನೆ:

Saturday, August 04, 2007

ಹನಿಯ ಅಸಮಾಧಾನ


'ಇನ್ಮೇಲಿಂದ ಏನೂ ಬರೀಬಾರ್ದು. ಬರಿಯೋದಾದ್ರೆ ಜೋಗಿ ಸರ್ ಹಂಗೆ, ರಶೀದ್ ಸರ್ ಹಂಗೆ, ಅಥ್ವಾ ಸಿಂಧು ಅಕ್ಕನ ಹಂಗೆ ಫುಲ್ ಸೀರಿಯಸ್ಸಾಗಿ ಬರೀಬೇಕು.. ನಾನು ಇದುವರೆಗೆ ಬರೆದಿದ್ದೆಲ್ಲ ಜೊಳ್ಳು.. ಓದಿ ಮರೆತುಹೋಗುವಂಥದ್ದು.. ಛೇ! ನಾನು ಇಷ್ಟರೊಳಗೆ ಓದಿದ್ದು ಏನೂ ಅಲ್ಲ.. ಇನ್ನೂ ತುಂಬಾ ಓದೋದಿದೆ.. ಬರೀ ಓದೋದಲ್ಲ, ಸಾಹಿತ್ಯವನ್ನ ಸ್ಟಡಿ ಮಾಡ್ಬೇಕು.. ಈ ಬ್ಲಾಗು, ಗಾಳ, ರೀಡರ್ರು, ಕಾಮೆಂಟು, ಹಿಟ್ಸು.. ಊಹುಂ, ಇನ್ನು ನನ್ ಕೈಲಾಗಲ್ಲ.. ಎಲ್ಲಾ ಬುಲ್‍ಶಿಟ್' ಎಂದು ನಾಲ್ಕು ಕಾಲಿನ ಬಿಳೀ ಪ್ಲಾಸ್ಟಿಕ್ ಖುರ್ಚಿಯ ಮೇಲೆ ಕುಳಿತ ನಾನು ಸಿಟ್ಟುಮಾಡಿಕೊಂಡು ಪೆನ್ನಿನ ಮೂತಿಯನ್ನು ಕ್ಯಾಪಿನಿಂದ ಮುಚ್ಚಿ ಟೇಬಲ್ಲಿನ ಮೇಲೆ ಬೀಸಾಡುತ್ತೇನೆ. ಪೆನ್ನು ಓರಣವಾಗಿ ಜೋಡಿಸಿಡದ ಪುಸ್ತಕವೊಂದಕ್ಕೆ ಬಡಿದು ಬೌನ್ಸ್ ಆಗಿ ನೆಲಕ್ಕೆ ಬಿದ್ದು ಸಣ್ಣ ಸದ್ದು ಮಾಡಿ ಎಡಕ್ಕೆ ವಾಲಿ ಕಪ್ಪು ಬೆಕ್ಕಿನ ಮರಿಯಂತೆ ಮಲಗಿಕೊಳ್ಳುತ್ತದೆ.

ನಾನದನ್ನು ನೋಡುತ್ತೇನೆ. ಏನೇನೂ ಪಾಪ ಮಾಡಿರದ ಪೆನ್ನು.. ಇಷ್ಟರೊಳಗೆ ಎಂದೂ ಕೈಕೊಡದ ಪೆನ್ನು.. ಹಾಳೆಗೆ ತಾಕಿಸಿದರೆ ಸಾಕು, ತನ್ನೊಡಲ ಕಪ್ಪು ಶಾಯಿಯನ್ನು ಧಾರಾಕಾರ ಸುರಿಸುವ ಪೆನ್ನು.. ಬಿಳಿ ಹಾಳೆಯ ಮೈಮೇಲೆಲ್ಲಾ ಓಡಾಡುತ್ತಾ ಕಚಗುಳಿಯಿಡುವ ಪೆನ್ನು.. ಈಗ ಮೇಜಿನ ಕಾಲಬುಡದಲ್ಲಿ ಬೆಕ್ಕಿನ ಮರಿಯಂತೆ ಮುದ್ದಾಗಿ ಬಿದ್ದುಕೊಂಡಿದೆ.. ಅಲ್ಲಿಂದಲೇ 'ನನ್ನನ್ನು ಎತ್ತಿಕೋ.. ಮ್ಯಾಂವ್ ಮ್ಯಾಂವ್..' ಎನ್ನುತ್ತಿದೆ.. ನನಗೆ ಅದರ ಮೇಲೆ ಮೋಹ ಉಕ್ಕಿ ಬರುತ್ತದೆ.. ಬೆಕ್ಕಿನ ಮರಿಯನ್ನು ಎತ್ತಿಕೊಳ್ಳುತ್ತೇನೆ.. ಅದರ ನೀಳ ಕಾಯದ ಮೇಲೆ ಅಲ್ಲಲ್ಲಿ ಹತ್ತಿರುವ ಧೂಳನ್ನು 'ಉಫ್' ಎಂದು ಊದಿ ಹಾರಿಸುತ್ತೇನೆ.. ಮೈ ಸವರುತ್ತೇನೆ.. ಕ್ಯಾಪು ತೆಗೆದು ಕಣ್ಣೆದುರು ಹಿಡಿದು ಅದರ ಚೂಪು ಮೂತಿಯನ್ನು ದುರುಗುಟ್ಟಿ ನೋಡುತ್ತೇನೆ..

ನನ್ನ ಮನಸಿನೊಳಗೆ ಅನೇಕ ದಿನಗಳಿಂದ ಅದೇನೋ ಅಸಮಾಧಾನದ ಹೊಗೆ ತುಂಬಿಕೊಂಡು ಬಿಟ್ಟಿದೆ. ತುಂಬಾ ನೋವು ಕೊಡುತ್ತಿದೆ. ಏನು ಎಂದು ಸಹ ಅರ್ಥವಾಗುತ್ತಿಲ್ಲ ಸರಿಯಾಗಿ.. ಮಾಡುವ ಕೆಲಸಗಳಲ್ಲಿ ಗಮನವಿರಿಸಲು ಆಗುತ್ತಿಲ್ಲ, ಏನನ್ನೂ ಓದಲಾಗುತ್ತಿಲ್ಲ, ಯೋಚಿಸಲಾಗುತ್ತಿಲ್ಲ, ಸುಮ್ಮನೆ ಕುಳಿತಿರಲೂ ಆಗುತ್ತಿಲ್ಲ.. ಚಡಪಡಿಸುತ್ತಿರುವಂತೆ ಮಾಡುವ ಚಡಪಡಿಕೆ.. ಏನಾಗಿದೆ ನನಗೆ? 'ಲವ್ ಫೇಲ್ಯೂರಾ?' ಕೇಳುತ್ತಾರೆ ಗೆಳೆಯರು. 'ಏಯ್ ಸುಮ್ನಿರ್ರೋ' ಸಿಡುಕುತ್ತೇನೆ ನಾನು.

ನನಗೆ ಒಮ್ಮೆ ಈ ಪೆನ್ನಿನ ಮೂತಿಯಿಂದ ಚುಚ್ಚಿಕೊಳ್ಳಬೇಕೆನಿಸುತ್ತಿದೆ. ಚಕ್ಕನೆ ಕೈಯನ್ನು ಮಡಿಚಿ, ಪೆನ್ನನ್ನು ಮುಷ್ಟಿಯಲ್ಲಿ ಹಿಡಿದು, ಮೂತಿಯನ್ನು ನನ್ನ ಕಡೆಗೇ ಮುಖ ಮಾಡಿ, ಕಣ್ಮುಚ್ಚಿಕೊಂಡು, ವೇಗದಿಂದ ಮೈಗೆಲ್ಲೋ ಚುಚ್ಚಿಕೊಳ್ಳುತ್ತೇನೆ.. ಚುಳ್ಳನೆ ನೋವಾಗುತ್ತದೆ.. ಚುಚ್ಚಿದ ಕೈಯನ್ನು ಹಾಗೇ ಹಿಡಿದುಕೊಂಡಿದ್ದೇನೆ.. ಇಲ್ಲ, ಈ ನೋವು ನನ್ನ ಮನದೊಳಡಗಿರುವ ನೋವನ್ನು ಶಮನ ಮಾಡುವಲ್ಲಿ ಸಫಲವಾಗುತ್ತಿಲ್ಲ.. ಜೋರಾಗಿ ಒತ್ತುತ್ತೇನೆ.. ಊಹೂಂ, ಏನೂ ಆಗುತ್ತಲೇ ಇಲ್ಲ.. 'ಒಂದು ನೋವನ್ನು ಕೊಲ್ಲುವುದಕ್ಕೆ ಅದಕ್ಕಿಂತ ದೊಡ್ಡ ನೋವು ಸಾಕು' ಎಂಬ ನನ್ನ ಆಲೋಚನೆ ಸುಳ್ಳಾಗುತ್ತಿದೆ.. ಅಥವಾ ಆ ಒಳಗಿನ ನೋವು ಈ ಬಾಹ್ಯ ನೋವಿಗಿಂತ ಎಷ್ಟೋ ದೊಡ್ಡದಿದೆ.. ಅದರ ಮುಂದೆ ಇದು ಏನೂ ಅಲ್ಲ..

ನನ್ನ ಮುಚ್ಚಿದ ಕಣ್ಣಿನಿಂದ ನೀರು ಒಸರುತ್ತದೆ.. ಹೀಗೆ ಚುಚ್ಚಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಎಂಬ ಅರಿವು ಮೂಡುತ್ತದೆ.. ಕೈಯ ಬಿಗಿಯನ್ನು ಸಡಿಲ ಮಾಡುತ್ತೇನೆ.. ಸುಸ್ತಾದ ಪೆನ್ನು ಜಾರಿ ಮತ್ತೆ ಕೆಳಗೆ ಬೀಳುತ್ತದೆ.. ಕಣ್ಣು ಬಿಡುತ್ತೇನೆ.. ಬಿದ್ದ ಪೆನ್ನಿನ ದೈನ್ಯ ಮುಖವನ್ನು ನೋಡುವ ಆಸೆಯಾಗುವುದಿಲ್ಲ.. ಎಡಗೈಯಲ್ಲಿ ಇನ್ನೂ ಅದರ ಕ್ಯಾಪು ಇದೆ.. ಅದನ್ನು ಮೇಜಿನ ಮೇಲೆ ನಿಧಾನಕ್ಕೆ ಇರಿಸಿ, ಮೊಣಕೈಯನ್ನು ಮೇಜಿಗಾನಿಸಿ, ಬಾಗಿ ಮುಖವಿಟ್ಟು ಮತ್ತೆ ಕಣ್ಮುಚ್ಚಿಕೊಳ್ಳುತ್ತೇನೆ.. ಕನಸು ಬೀಳಿಸಲೆಂದೇ ನಿದ್ರೆ ಬರುತ್ತದೆ..

ಕನಸಿನಲ್ಲಿ ನಾನೊಂದು ನದೀತೀರದತ್ತ ನಡೆದಿದ್ದೇನೆ. ಮೋಡ ಕವಿದ ಮುಗಿಲು.. ಕಾಣದ ಸೂರ್ಯ ಸೂಸುತ್ತಿರುವ ಬೆಳಕು.. ಬೀಸುತ್ತಿರುವ ಮಂದ-ಶೀತಲ-ಮಾರುತ.. ತೀರದಲೊಂದು ಬೋಳು ಮರ.. ನಾನು ಅದರ ಬುಡದಲ್ಲಿ ಕುಕ್ಕರಗಾಲಲ್ಲಿ ಕುಳಿತುಕೊಳ್ಳುತ್ತೇನೆ.. ಅಗಾಧ ವಿಸ್ತಾರದ ಪ್ರಶಾಂತ ನದಿಯನ್ನು ನಿರುಕಿಸುತ್ತೇನೆ.. ಪ್ರಶಾಂತವೆಂಬಂತೆ ಭಾಸವಾಗುತ್ತದೆ ಅಷ್ಟೆ; ಅದರೊಡಲಿನಲ್ಲೂ ಭೋರ್ಗರೆತದ ಮೊರೆತವಿದೆ.. ಪ್ರತಿ ಹನಿಯ ಹೃದಯದಲ್ಲೂ ಓಡಿ ಕನಸಿನ ಸಾಗರವ ಸೇರುವ ಆತುರವಿದೆ.. ಇನ್ನೂ ಎಷ್ಟೋ ದೂರ ಹರಿಯಬೇಕಲ್ಲ ಎಂಬ ಅಸಮಾಧಾನವಿದೆ.. ಆದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಕ್ರಮಿಸುತ್ತಿದೆ ನದಿ.. ಸುಸ್ತಾಯಿತೆನಿಸಿದಾಗ ಮಡುವೊಂದರಲ್ಲಿ ಸ್ವಲ್ಪ ಹೊತ್ತು ನಿಲ್ಲುತ್ತದೆ.. ವಿರಮಿಸಿ ಮತ್ತೆ ಮುಂದುವರೆಯುತ್ತದೆ.. ನನಗೆ ಈ ನದಿಯಿಂದ ಗೊತ್ತಿದ್ದೂ ಗೊತ್ತಿಲ್ಲದಂತಿದ್ದ ಪಾಠವೊಂದನ್ನು ಕಲಿತಂತೆನಿಸುತ್ತದೆ.. ಎಚ್ಚರಾಗುತ್ತದೆ..

ಹರಿಯುತ್ತಿದ್ದರೆ ಮಾತ್ರ ಸೇರಬಹುದು ಸಾಗರವನ್ನು... ನಿಂತರೆ ನಿಂತಲ್ಲೇ ಇರುತ್ತೇವೆ... ಅಲ್ಲಲ್ಲಿ ನಿಂತು ಮತ್ತಷ್ಟು ರಭಸವನ್ನು ಒಡಗೂಡಿಸಿಕೊಂಡು, ಮಧ್ಯೆ ಮಧ್ಯೆ ಇನ್ನಷ್ಟು ನದಿಗಳನ್ನು ಸೇರಿಸಿಕೊಂಡು ಮುಂದುವರೆದಾಗಲೇ ಸಾಕಾರದ ಸಾಗರವ ಸೇರಲು ಸಾಧ್ಯವೆಂಬ ಸಾಕ್ಷಾತ್ಕಾರವಾಗುತ್ತದೆ. ಬಗ್ಗಿ ಮತ್ತೆ ಪೆನ್ನನ್ನು ಎತ್ತಿಕೊಳ್ಳುತ್ತೇನೆ.. ಅವಶ್ಯಕತೆಯೇ ಇಲ್ಲದಿದ್ದ ಈ ಬರಹವನ್ನು ಬರೆಯುತ್ತಾ ನನ್ನ ಮೊಬೈಲಿಗೆ ಹ್ಯಾಂಡ್ಸ್‍ಫ್ರೀ ಸಿಕ್ಕಿಸಿ ಎಫ್ಫೆಮ್ಮನ್ನು ಆನ್ ಮಾಡುತ್ತೇನೆ.. ಸ್ಪೀಕರಿನಿಂದ ಹೊರಟ ಹಾಡು ಕಿವಿಯೊಳಗೆ ಮೊಳಗಿ ಕೊನೆಗೆ ಗುನುಗಾಗಿ ನನ್ನ ಬಾಯಿಂದಲೇ ಹೊರಬರುತ್ತದೆ:

ನನ್ನ ಹಾಡು ನನ್ನದು.. ನನ್ನ ರಾಗ ನನ್ನದು.. ನನ್ನ ತಾಳ ನನ್ನದು..

Friday, July 27, 2007

ಮೀಟಿಂಗ್ ಮುಗಿಸಿದ್ದು

ರಿಸೆಪ್ಷನಿಷ್ಟ್ ರಜೆಯಲ್ಲಿದ್ದಳು. ಇಪಿಎಬಿಎಕ್ಸ್ ನಾನೇ ಹ್ಯಾಂಡ್ಲ್ ಮಾಡುತ್ತಿದ್ದೆ. ಕ್ಲೈಂಟ್ ಜೊತೆ ಬಾಸ್ ಕಾನ್ಫರೆನ್ಸ್ ರೂಮ್‍ನಲ್ಲಿ ಮೀಟಿಂಗಿನಲ್ಲಿದ್ದರು. ಆ ಕ್ಲೈಂಟುಗಳು ಜಾಸ್ತಿ ತಲೆತಿನ್ನುತ್ತಿದ್ದರು ಅಂತ ಕಾಣ್ಸುತ್ತೆ. ಬಾಸ್ ಅಲ್ಲಿಂದಲೇ ನನ್ನ ಮೊಬೈಲಿಗೆ ಎಸ್ಸೆಮ್ಮೆಸ್ ಮಾಡಿದರು: 'Call me on the intercom and tell me that somebody is coming for meeting. I'll tell u to postopone it. U call again after 2 mins and tell me that they r already on the way'.

ಮೆಸೇಜು ಓದಿದಾಕ್ಷಣ ನಗು ಬಂತಾದರೂ ಇಂತಹ ಹಲ್ಕಾ ಕೆಲಸಗಳನ್ನು ಮಾಡಿ ನನಗೆ ರೂಢಿಯಿತ್ತಾದ್ದರಿಂದ ತಕ್ಷಣ ರಿಸೀವರ್ ಎತ್ತಿ ಟೂ ಏಟ್ ಒತ್ತಿದೆ. ಬಾಸ್ ಎತ್ತಿದರು. 'Sir, Mr. Dhyan from GE Countrywide is coming for a meeting' ಅಂದೆ. 'Now? Why isn't it been entered in the dairy? Call him and tell him to come tomorrow.' ರಿಸೀವರ್ ಇಟ್ಟ ಸದ್ದು. ಸದ್ದಾಗದಂತೆ ನಗುತ್ತಾ ನಾನೂ ಫೋನ್ ಇಟ್ಟೆ.

ಎರಡು ನಿಮಿಷ ಬಿಟ್ಟು ರಿಸೀವರ್ ಎತ್ತಿ ಮತ್ತೆ ಟೂ ಏಟ್ ಒತ್ತಿದೆ. 'Sir they have already left from their office' ಅಂದೆ. 'Oh shit! They are on the way is it? Ok... Let them come.. I'll conclude this meeting then..'

ಐದು ನಿಮಿಷದಲ್ಲಿ ಮೀಟಿಂಗ್ ಮುಗಿಯಿತು. ಆರನೇ ನಿಮಿಷದಲ್ಲಿ ಬಾಸ್ ಛೇಂಬರಿನಲ್ಲಿ ಕೇಳಿಬರುತ್ತಿದ್ದ ನನ್ನ-ಅವರ ಜೋರು ನಗೆಗೆ ಹ್ಯಾಂಗ್ ಮಾಡಿದ್ದ ಕೋಟು, ಟೇಬಲ್ ಕ್ಲಾಕು ಮತ್ತು ಡೈರಿಯ ಒಡಲಿನಿಂದ ಇಣುಕುತ್ತಿದ್ದ ಪಾರ್ಕರ್ ಪೆನ್ನಿನ ಮೂತಿ ಕಿವಿಯಾಗಿದ್ದವು.

Tuesday, July 24, 2007

ಕೋಗಿಲೆಯ ವಿಷಾದ

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

* *

ದಟ್ಟಡವಿಯಲೊಂದು ಒಂಟಿ ಒಣಮರ
ರೆಂಬೆಯ ಮೇಲೆ ಕುಳಿತಿದ್ದ ಅವನು
ಕಣ್ಣಲೇನೋ ಅಸಹನೆ..
ನನ್ನಲೇನೋ ಮಿಡಿತ;
ಎದೆಯಲೇನೋ ತುಡಿತ..

ಜೊತೆಗೆ ಕರೆದೊಯ್ದು,
ಹಣ್ಣು ಕೊಟ್ಟು ಸಂತೈಸಿ
ಕಣ್ಣಲಿ ಕಣ್ಣಿಟ್ಟು ಪ್ರೀತಿಬೀಜ ಹುಟ್ಟಿಸಿ
ಅದನವನ ಎದೆಯ ಕವಾಟದಲಿ ಹುದುಗಿಸಿಟ್ಟು
ಅದು ಮೊಳಕೆಯೊಡೆದು ಬಳ್ಳಿಯಾಗಿ
ಕೊನೆಗೆ ನಿವೇದನೆಯ ಹೂವಾಗಿ
ಅವನಿಂದಲೇ ಹೊರಬಂದಾಗ ನನಗೆಷ್ಟು ಸಂಭ್ರಮ..!

ಕಣ್ಣರಳಿಸಿ, ಕಾಲ್ಕೆದರಿ, ಕೊಕ್ಕು ತಿವಿಯುತ್ತಾ
ಮೇಲೆರಗಿ ಬಂದರವನು ನನ್ನ ಮೈಯೆಲ್ಲಾ ಅದುರು.

ಅಂದು ಗೂಡಿನಲ್ಲಿ ಮೈಥುನದ ಆಟ..
ಕಣ್ಮುಚ್ಚಿ, ಕಟಿ ಬಿಗಿದು, ಮೈ ಸೆಟೆದು,
ಸೇರಿ ಬೆರೆತು, ಬೆರೆತು ಬೆವರಿ, ಗಟ್ಟಿಯುಸಿರುಬಿಟ್ಟು
...ಆಟ ಮುಗಿಯುವುದರೊಳಗೆ ರೆಕ್ಕೆಯ ಪುಕ್ಕಗಳೆಲ್ಲಾ ಅಸ್ತವ್ಯಸ್ತ;
ಗೂಡೆಲ್ಲಾ ನುಜ್ಜುಗುಜ್ಜು;
ನೋಡಿ ನಾಚಿ ನಸುನಕ್ಕ ಹಸಿರು ಎಲೆ, ಮಿಣುಕು ಹುಳ...

* *

ಅವನ ಹೃದಯದಲಿ ಇನ್ನೂ ಮೂರು ಕವಾಟಗಳಿವೆ,
ಅದರಲ್ಲಿ ಪ್ರೀತಿಬೀಜ ನೆಡಲು ಬೇರೆ ಹಕ್ಕಿಗಳು ಕಾಯುತಿವೆ
ಎಂಬ ಸತ್ಯ ಸಹ ಗೊತ್ತಿಲ್ಲದ ಮುಗ್ದೆ ನಾನು..
ಅಂದು ಬೆಳಕು ಹರಿಯುವ ಮುನ್ನವೇ ಅವನು
ಹಾರಿ ಪರಾರಿಯಾದಾಗಲೇ ಆದದ್ದು ನನಗೆ ವಾಸ್ತವದ ಅರಿವು..

* *

ಆದರೆ ಅವನ ವೀರ್ಯ ನನ್ನ ರೆಕ್ಕೆ ಮುಚ್ಚಿದ್ದ
ಪುಟ್ಟ ಹೊಟ್ಟೆಯಲ್ಲಿ ಮೊಟ್ಟೆಯಾಗಿ ಬೆಳೆದು
ನಾನದನ್ನು ಹೊತ್ತು ಹಾರಿ, ಹೆಣಗಿ ವಾಯಸನ ಗೂಡರಸಿ
ಕದ್ದು ಪ್ರಸವಿಸಿ ಅಲ್ಲಿಂದ ಎದ್ದು ಹಾರಿ ಬರುವಾಗ
ನಿಟ್ಟುಸಿರು ಬಿಟ್ಟರೂ ತೀರದ ಆಯಾಸ.

* *

ಒಂಟಿ ಒಣಮರದ ಮೇಲೆ ಈಗ ನಾನು..
ಮತ್ಯಾರದೋ ಗೂಡಿನ ಬೆದೆಯಲ್ಲಿ ನನ್ನ ಅವನು..
ಯಾರದೋ ರೆಕ್ಕೆಯಡಿಯ ಕಾವಿಗೆ ಬೆಳೆದು ಹೊರಬರುವ ನನ್ನ ಕಂದಮ್ಮಗಳು..
ರೆಕ್ಕೆ ಬಲಿತು ಹಾರಿ ಎದುರಿಗೇ ಹಾದುಹೋದರೂ
ಮಕ್ಕಳನ್ನೇ ಗುರುತಿಸಲಾಗದ ತಾಯಿಯ ಅಸಹಾಯಕತೆ..
ಹೆತ್ತ ತಾಯಿಯ ಋಣ ದೊಡ್ಡದೋ,
ಕಾವು ಕೊಟ್ಟು ಮರಿ ಮಾಡಿ ಹಾರಾಟ ಕಲಿಸಿದ ಪೋಷಕರ ವಾತ್ಸಲ್ಯ ದೊಡ್ಡದೋ
ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿಲ್ಲ ಉತ್ತರ..
ಎಲೆ ಹಣ್ಣಾಗಿ ಬೀಳುತ್ತದೆ; ಮಿಣುಕು ಹುಳ ನಿದ್ರೆ ಹೋಗುತ್ತದೆ..

ಮತ್ತೆ ವಸಂತ.. ಚಿಗುರುವ ಮಾವು..
ಹಾಡಲೇಬೇಕಾದ ನನ್ನ ಅನಿವಾರ್ಯತೆ...

* *

ನನ್ನ ಹಾಡೆಂದರೆ ಎಲ್ಲರಿಗೂ ಇಷ್ಟ
ನನಗಷ್ಟೇ ಗೊತ್ತು ನನ್ನ ಕಷ್ಟ

Monday, July 16, 2007

ಚುಂಚು ಎಂಬ ಮರಿಹಕ್ಕಿ

(ಹಕ್ಕಿ ಕತೆ ಮುಂದುವರೆದುದು...)

ಮರಿಹಕ್ಕಿಗಳ ಹಾರಾಟದ ಕಲಿಕೆ ಅವ್ಯಾಹತವಾಗಿ ನಡೆದಿತ್ತು. ಅಪ್ಪಹಕ್ಕಿ ಈಗ ಆಹಾರ ತರಲಿಕ್ಕೆ ಬೆಳಿಗ್ಗೆ ಸ್ವಲ್ಪ ತಡವಾಗಿ ಹೊರಡುತ್ತಿತ್ತು. ಕರೆಯಲು ಬಂದ ಗೆಳೆಯರನ್ನು 'ನೀವು ಮುಂದೆ ಹೋಗಿ, ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ' ಎಂದು ಹೇಳಿ ಮುಂದೆ ಕಳುಹಿಸಿ ತಾನು ಮಕ್ಕಳನ್ನು ಎಬ್ಬಿಸಿ ಹಾರಾಟ ಕಲಿಸುತ್ತಿತ್ತು. ಮರಿಗಳಿಗೆ ಅಷ್ಟು ಮುಂಚೆ ಏಳುವುದಕ್ಕೆ ಸೋಮಾರಿತನ... ಇನ್ನೂ ಮುಗಿಯದ ನಿದ್ದೆ... ಆದರೂ ಏಳುತ್ತಿದ್ದವು. ನನಗಂತೂ ಈ ಹಾರಾಟದ ಪ್ರಾಕ್ಟೀಸ್ ನೋಡುವುದೇ ಸಂಭ್ರಮವಾಗಿಬಿಟ್ಟಿತ್ತು. ಎಷ್ಟು ಖುಷಿಯಿಂದ ಅಪ್ಪಹಕ್ಕಿ ಹೇಳಿಕೊಡುತ್ತಿತ್ತು.. ಮರಿಹಕ್ಕಿಗಳು ಎಷ್ಟು ಶ್ರದ್ಧೆಯಿಂದ ಅದನ್ನು ಕಲಿಯುತ್ತಿದ್ದವು.. ಹಾರುವುದಕ್ಕೆ ಹೇಗೆ ದೇಹವನ್ನು ಅಣಿಗೊಳಿಸಿಕೊಳ್ಳಬೇಕು, ಒಮ್ಮೆಲೇ ಕಾಲಿನ ಮೇಲೆ ಭಾರ ಹಾಕಿ, ತಕ್ಷಣ ರೆಕ್ಕೆ ಬಿಚ್ಚಿ, ಪಟಪಟನೆ ಬಡಿದು ಮೇಲಕ್ಕೇರಬೇಕು... ಹಾಗೇ ಗಾಳಿಯಲ್ಲಿ ತೇಲುವಂತೆ ರೆಕ್ಕೆಯನ್ನು ಬಿಚ್ಚಿಟ್ಟುಕೊಂಡಿರಬೇಕು... ಕೆಳಗಿಳಿಯಬೇಕೆಂದರೆ ತಲೆಯನ್ನು ಬಗ್ಗಿಸಬೇಕು... ಮತ್ತೆ ಮೇಲೇರಬೇಕೆಂದರೆ ರೆಕ್ಕೆ ಬಡಿಯಬೇಕು... ಎಲ್ಲವನ್ನೂ ಹೇಳಿಕೊಡುತ್ತಿತ್ತು. ಮರಿಗಳಿಗೆ ಸ್ವಲ್ಪ ಹೊತ್ತು ರೆಕ್ಕೆ ಬಡಿದರೂ ಸಾಕು ಬಳಲಿ ಬಂದುಬಿಡುತ್ತಿತ್ತು. ಆಗ ಅಪ್ಪ 'ಈಗ ರೆಸ್ಟ್!' ಅಂತ ಘೋಷಿಸುವುದು. ಮರಿಗಳು ಒಳಗೆ ಹೋಗಿ ಅಮ್ಮ ಮಾಡಿದ್ದ ತಿಂಡಿ ತಿಂದು, ನೀರು ಕುಡಿದು ಮತ್ತೆ ಹೊರಬರುವುದು. ಮತ್ತೆ ಉತ್ಸಾಹದಿಂದ ರೆಕ್ಕೆ ಬಡಿಯುವುದು... ಮೇಲಿನಿಂದಲೇ ಆಹಾರವನ್ನು ಗುರ್ತಿಸುವುದು ಹೇಗೆ, ಬೇರೆ ಹಕ್ಕಿಗಳ ಕಣ್ಣಿಗೆ ಅದು ಬೀಳುವುದರೊಳಗೆ ಡೈವ್ ಹೊಡೆದು ಹೋಗಿ ಅದನ್ನು ಕಬಳಿಸುವುದು ಹೇಗೆ, ಕೊಕ್ಕಿನಲ್ಲಿ ಕಚ್ಚಿ ಹಿಡಿದುಕೊಂಡು ಗೂಡಿಗೆ ಮರಳುವುದು ಹೇಗೆ... ಎಲ್ಲವನ್ನೂ ಕಲಿಸಿಕೊಡುತ್ತಿತ್ತು ಅಪ್ಪಹಕ್ಕಿ. ಮರಿಗಳು ಬಲುಬೇಗನೆ ಎಲ್ಲವನ್ನೂ ಕಲಿತವು. ನಾನು ಗೆಳೆಯರಿಗೆ ಮೆಸೇಜಿಸಿದೆ:

ಮರಿಹಕ್ಕಿಗಳು ಈಗ ಸುಮಾರಿಗೆ ಹಾರಲು ಕಲಿತಿವೆ. ಹತ್ತಿರದ ಮರದ ರೆಂಬೆಗಳಿಗೆಲ್ಲ ಇವನ್ನು ತಮ್ಮ ಮೇಲೆ ಕೂರಿಸಿಕೊಂಡು ತೂಗುವ ಸಂಭ್ರಮ. ನಾನು ಮನೆಯಲ್ಲಿದ್ದರೆ ಇವು ಬಂದು ಕಿಟಕಿ ಸರಳ ಮೇಲೆ ಕೂತು ಪಟ್ಟಾಂಗ ಹೊಡೆಯುತ್ತವೆ..
'ಏನೋ ಮಾಡ್ತಿದೀಯಾ?' -ಕೇಳುತ್ತೆ ಮರಿ.
'ಕತೆ ಓದ್ತಿದೀನಿ'
'ನಮ್ಗೂ ಹೇಳು ಕತೆ..'
ಈ ಪುಟ್ಟ ಹಕ್ಕಿಗಳಿಗೆ ಯಾವ ಕತೆ ಹೇಳುವುದಪ್ಪಾ ಅಂತ ಯೋಚಿಸ್ತೇನೆ.. ಮತ್ತು ಶುರು ಮಾಡ್ತೇನೆ:
'ಒಂದು ಊರಲ್ಲಿ ಒಬ್ಬ ರಾಜ ಇದ್ನಂತೆ...'
ಏನು ನಿದ್ರೆ ಬರ್ತಿದೆಯಾ? ಹ್ಮ್, ಅಭ್ಯಾಸ ಬಲ! ಹಹ್ಹ! ಮಲಗಿ..

ನಮಗೆಲ್ಲಾ ಹಾಗೇ ಅಲ್ವಾ ಚಿಕ್ಕವರಿದ್ದಾಗ? ಅಜ್ಜನೋ ಅಜ್ಜಿಯೋ ಅಮ್ಮನೋ ಅತ್ತೆಯೋ ಕತೆ ಶುರು ಮಾಡುತ್ತಿದ್ದರು.. ಆ ಕತೆಗಳೆಲ್ಲ ಶುರುವಾಗುತ್ತಿದ್ದುದು 'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ...' ಅಂತಲೇ! ಸ್ವಲ್ಪ ಹೊತ್ತು ಕೇಳುತ್ತಿದ್ದಂತೆಯೇ ನಿದ್ರೆ ಬರುತ್ತಿತ್ತು.. ಮರುದಿನ ಮತ್ತೆ ಅದೇ ಕತೆ ಮುಂದುವರೆಯುತ್ತಿತ್ತು.. ಅದೊಂಥರ ಎಂದೂ ಮುಗಿಯದ ಕತೆ. ಅದಕ್ಕೇ ನೋಡಿ, ಅದು ಎಂದೂ ಮರೆಯದ ಕತೆ..!

ಈ ಮರಿಹಕ್ಕಿಗಳಲ್ಲಿ ಒಂದು ಮರಿ ಭಾರೀ ಜೋರಿದೆ. 'ಚುಂಚು' ಅಂತ ಅದರ ಹೆಸರು. ಇವತ್ತು ಅದು ಕೇಳ್ತು: 'ನಿಂಗೆ ಲವ್ ಮಾಡಿ ಗೊತ್ತಿದ್ಯೇನೋ?' ಅಂತ! ನಾನು ಫುಲ್ ಶಾಕು! ಇಷ್ಟು ಚಿಕ್ಕ ಮರಿ ಆಡೋ ಮಾತಾ ಇದು? 'ಏಯ್ ಲವ್ ಅಂದ್ರೆ ಏನು ಅಂತನಾದ್ರೂ ಗೊತ್ತಿದ್ಯೇನೇ ನಿಂಗೆ?' ಗದರಿಸಿದೆ ನಾನು. ಅದಕ್ಕಿ ಮರಿ ಅಂತು: 'ಆಗ್ಲೆ ಪಾರ್ಕಿಗೆ ಹೋಗಿದ್ನಲ್ಲ, ಅಲ್ಲಿ ಒಂದು ಹುಡುಗ-ಹುಡುಗಿ ಲವ್ ಮಾಡೋದು ನೋಡ್ದೆ.. ಕೈ ಕೈ ಹಿಡ್ಕೊಂಡು.. ಅದೇನು ಮಾತಾಡ್ತಿದ್ರು ಅಂತೀಯಾ? ಬರೀ ಚ್ವೀತ್ ನಥಿಂಗ್ಸ್! ಸಕ್ಕತ್ತಾಗಿತ್ತು! ನೀನು ಯಾರನ್ನಾದ್ರೂ ಲವ್ ಮಾಡೋ.. ಮಜಾ ಇರೊತ್ತೆ..! ನಮ್ಗೂ ಅತ್ಗೆ ಜೊತೆ ಆಟ ಆಡ್ಬಹುದು..!' ನನಗೆ ನಗು ಬಂತು.. ಜತೆಗೇ ಕನಸ ತೇರು ತೇಲಿ ಬಂತು.. 'ಆಕೆ' ಕುಳಿತಿದ್ದಳು ರಥದಲ್ಲಿ..

ನಾನು ಈ ಮೆಸೇಜಿಂಗನ್ನು ಶುರು ಮಾಡಿದ್ದಾಗ ಎಲ್ಲರೂ ಇದನ್ನು ನಾನು ನನ್ನ ಕನಸ ತೇರ ಸಾರಥಿಗಾಗಿಯೇ ಸೃಷ್ಟಿಸುತ್ತಿರುವುದು ಎಂದು ತಿಳಿದಿದ್ದರು. ಕೆಲವರು ಫೋನಿಸಿ ಕೇಳಿದರು ಕೂಡ: 'ಏನೋ ಯಾವ್ದೋ ಹುಡುಗಿಗೆ ಬಲೆ ಬೀಸ್ತಿರೋ ಹಾಗಿದೆ?' ಅಂತ! 'ಏನ್ಸಾರ್ ಮಾಡೋದು? ಏನಾದ್ರೂ ಮಾಡ್ಬೇಕಲ್ಲ... ಲೈಫು..!!' ಅಂತಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮನಾಗಿಸಿದ್ದೆ. ನಾನು ಯಾವ ಉದ್ಧೇಶ ಇಟ್ಟುಕೊಂಡು ಶುರುಮಾಡಿದ್ದೆನೋ, ಈಗಂತೂ ಅದು ಅನೇಕ ಮನಸುಗಳ ನಡುವೆ ಹರಿದಾಡುವ, ಯಾರದೋ ಭಾವಕೋಶಕ್ಕೆ ಲಗ್ಗೆಯಿಡುವ, ಮತ್ಯಾರದೋ ಮನದ ಸುನೀತ ತಂತಿಯನ್ನು ಮೀಟುವ ಬೆರಳ ತುದಿಯ ಲಹರಿಯಾಗಿಬಿಟ್ಟಿತ್ತು.

ನನಗೆ ಈ ಮರಿಗಳನ್ನು ಮತ್ತಷ್ಟು ಪರಿಚಯ ಮಾಡಿಸಬೇಕು ಅನ್ನಿಸಿತು: ನಿಮಗೆ ಈ ಮರಿಗಳ ಬಗ್ಗೆ ಸ್ವಲ್ಪ ಹೇಳ್ಬೇಕು. ಚುಂಚುವಿನ ಅಕ್ಕನ ಹೆಸರು ಮಿಂಚು. ತಮ್ಮ ಡಿಂಚು. ಅಕ್ಕ ತುಂಬಾ ಗಂಭೀರೆ. ತಮ್ಮ ನನ್ನಂತೆಯೇ ಮೌನಿ. ಈ ಮಧ್ಯದ ಚುಂಚು ಮಾತ್ರ ಸಿಕ್ಕಾಪಟ್ಟೆ ತರ್ಲೆ! ತಲೆ ಚಿಟ್ ಹಿಡೀಬೇಕು, ಅಷ್ಟು ಮಾತಾಡತ್ತೆ. ಆಗ್ಲೆ ಸಂಜೆ ಮಳೆ ಬರ್ತಿತ್ತಲ್ಲ, ತರಕಾರಿ ತರಲಿಕ್ಕೇಂತ ನಾನು ಕೊಡೆ ಹಿಡಿದು ಹೊರಟೆ. ಗೂಡಿನಿಂದ ಪುರ್ರನೆ ಹಾರಿಬಂದ ಇದು ನನ್ನ ಹೆಗಲ ಮೇಲೆ ಕೂರ್ತು. ದಾರೀಲಿ ಹುಡುಗೀರು ಕಂಡ್ರೆ ಸಾಕು, 'ಏಯ್ ಇವ್ಳಿಗೆ ಕಾಳು ಹಾಕೋ' ಅನ್ನೋದು ನನ್ ಹತ್ರ! (ಈ ಮೇಸೇಜು ಓದಿ ಕೆಲ ಹುಡುಗಿಯರು ತಮ್ಮನ್ನು ಚುಂಚುವಿಗೆ ಹೋಲಿಸಿಕೊಂಡರು!)

ಚುಂಚು ಹೀಗೆ ತರಲೆ ಮಾಡಿದಾಗಲೆಲ್ಲ ನಾನು ಬೈದು ಸುಮ್ಮನಾಗಿಸುತ್ತಿದ್ದೆ. ಆದರೆ ಈ ಮಾತು-ಕತೆಗಳಿಂದಾಗಿ ಚುಂಚು ನಂಗೆ ತುಂಬಾ ಆತ್ಮೀಯವಾಗಿಬಿಟ್ಟಿತ್ತು. ಪುಟ್ಟ ತಂಗಿಯಂತೆ ಕಾಣಿಸುತ್ತಿತ್ತು. ಏನಾದರೂ ಹಣ್ಣು ತಂದರೆ ತಪ್ಪದೇ ಅದಕ್ಕೆ ಒಂದು ಪಾಲು ಎಟ್ಟಿರುತ್ತಿದ್ದೆ. ಶನಿವಾರ, ಭಾನುವಾರಗಳ ಸಂಜೆ ವಿಹಾರಕ್ಕೆ ಚುಂಚುವನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೆ:

'ಚುಂಚೂ ಚುಂಚೂ' -ಗೂಡಿನ ಕೆಳಗೆ ನಿಂತು ಕರೆದೆ ನಾನು. 'ಯಾರೂ?' ಎನ್ನುತ್ತಾ ಬಸುರಿ ಹಕ್ಕಿ ಗೂಡಿನಿಂದ ಹೊರಬಂತು. 'ಚುಂಚು ಇಲ್ವಾ?' -ಕೇಳಿದೆ. 'ಡ್ರೆಸ್ ಮಾಡ್ಕೊಳ್ತಾ ಇದಾಳೆ.. ತಾಳಿ, ಕರೀತೀನಿ.. ಏಯ್ ಚುಂಚೂ.. ಅಣ್ಣ ಕರೀತಿದಾನೆ ನೋಡೇ..' -ಅಮ್ಮನ ಕರೆಗೆ 'ಬಂದೇಮ್ಮಾ..' ಎನ್ನುತ್ತಾ ಚುಂಚು ಹೊರಬಂತು.
ಜುಟ್ಟಿಗೆ ರಿಬ್ಬನ್, ಹಣೆಯ ಮೇಲೊಂದು ಬಿಂದಿ, ಕಣ್ ಹುಬ್ಬಿಗೆ ಕಪ್ಪು, ಕೊಕ್ಕಿಗೆ ಲಿಪ್‍ಸ್ಟಿಕ್ -ಸಿಂಗರಿತ ಪುಟ್ಟ ಮರಿ 'ಏನೋ ಚುಚ್ಚುತಾ..?' ಎನ್ನುತ್ತಾ ಗೂಡಿನಿಂದ ಹೊರಬಂತು. 'ಚಂದ ಕಾಣ್ತಿದೀಯ!' ಎಂದೆ. ಮುಖ ಕೆಂಪೇರಿತು. 'ಥ್ಯಾಂಕ್ಸ್' -ಉಲಿ. 'ಬಾ ಸುತ್ತಾಡಿ ಬರೋಣ' -ನಾನು ಕರೆದು ಮುಗಿಯುವುದರ ಒಳಗೇ ಹೆಗಲ ಮೇಲಿತ್ತು ಚುಂಚು.
ಕೆಂಪು ಸಂಜೆ, ಬಿಸಿ ಗಾಳಿ, ಮುಳುಗೋ ಸೂರ್ಯ, ಚುಂಚು ಮಾತು, ನನ್ನ ಮೌನ...

...ಹಕ್ಕಿ ಕತೆ ಮುಂದುವರೆಯುತ್ತದೆ...!

Monday, July 09, 2007

ಗಂಗಮ್ಮನ ಜೀರಿಗೆ

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಓದಿ: ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‍ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನಿತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. 'ಹುಚ್ಚಾಪಟ್ಟೆ ಗಾಳಿ ಸಹ' ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು 'ಈ ವರ್ಷ ಗಂಗಮ್ಮನ ಜೀರಿಗೆ ಫಸಲು ಬಂದಿದೆಯಾ?' ಎಂದು ಕೇಳಲು ಮರೆಯಲಿಲ್ಲ. ಈ ಗಂಗಮ್ಮನ ಜೀರಿಗೆ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ. ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆ, ಬಂದ ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ. ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

ನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ. ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಗಂಗಮ್ಮನ ಜೀರಿಗೆ ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಗಂಗಮ್ಮನ ಜೀರಿಗೆ ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ. ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. 'ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‍ಕಾಯಿ ಜೊತಿಗೆ ಸೇರುಸ್ತಿದ್ದಿ' ಎಂದ ಸರೋಜಕ್ಕನಿಂದ ಹಿಡಿದು 'ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ...' ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ 'ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ' ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಗಂಗಮ್ಮನ ಜೀರಿಗೆಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ 'ಊರಲ್ಲಿ ಗಾಳಿಮಳೆ' ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಗಂಗಮ್ಮನ ಜೀರಿಗೆ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು. ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‍ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! 'ಏನೋ? ಸಿಕ್ಚನೋ?' ಎಂದ ಮಾಬ್ಲಗಿರಣ್ಣನಿಗೆ 'ಇಲ್ಯಾ, ಎರಡೇ ಸಿಕ್ಕಿದ್ದು' ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಗಂಗಮ್ಮನ ಜೀರಿಗೆ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಗಂಗಮ್ಮನ ಜೀರಿಗೆಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ.

[ಈ ಲೇಖನ, ದಿನಾಂಕ ೨೬.೦೮.೨೦೦೭ರ ವಿಜಯ ಕರ್ನಾಟಕ - ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದೆ.]

Thursday, July 05, 2007

ಹಕ್ಕಿ ಕಥೆ ಮುಂದುವರೆದುದು...!

ಶ್ರೀನಿಧಿಯ ಬ್ಲಾಗಿನಿಂದ ಮುಂದುವರೆದುದು...

ಹಾಗೆ ದಾರಿ ತಪ್ಪಿ ಹೋಗಿದ್ದ ಹಕ್ಕಿಗೆ ಶ್ರೀನಿಧಿ ದಾರಿ ತೋರಿಸಿ ಒಳ್ಳೇ ಕೆಲಸ ಮಾಡಿದ. ಗೂಡಿಗೆ ಹಕ್ಕಿ ಮರಳಿದಾಗ ಹೆಂಡತಿ-ಮಕ್ಕಳಿಗೆ ಆದ ಖುಷಿ ಅಷ್ಟಿಷ್ಟಲ್ಲ.. ನನಗೂ ಪರೀಕ್ಷೆ ಬರೆಯಲು ನೆಮ್ಮದಿಯಾಯ್ತು.. ಹಿಂದಿನ ರಾತ್ರಿ ನಾನು ಕಳುಹಿಸಿದ್ದ ಈ ಮೆಸೇಜನ್ನು ಓದಿ ನನ್ನ ಅನೇಕ ಗೆಳೆಯರು ಟೆನ್ಷನ್ನಿಗೆ ಒಳಗಾಗಿದ್ದರು. ಬೆಳಗಿನಿಂದಲೇ ಕೆಲವರು ಮೆಸೇಜು ಮಾಡಿ 'ಹಕ್ಕಿ ವಾಪಾಸ್ ಬಂತಾ?' ಎಂದೆಲ್ಲ ಕೇಳಿದ್ದರು. ಅಂದು ರಾತ್ರಿ ಎಲ್ಲರಿಗೂ ಮೆಸೇಜು ಕಳುಹಿಸಿದೆ:

ಹಕ್ಕಿ ವಾಪಸಾಗಿದೆ. ಪಾಪ, ದಾರಿ ತಪ್ಪಿ ಹೋಗಿತ್ತಂತೆ ನಿನ್ನೆ, ನನ್ನ ಗೆಳೆಯನೊಬ್ಬ ವಿಳಾಸ ಕೊಟ್ಟು ಕಳುಹಿಸಿದ್ದಾನೆ. ಇವತ್ತು ಗೂಡಿನಲ್ಲಿ ಸಂಭ್ರಮ.. ಸಂಭ್ರಮಕ್ಕೆ ಮತ್ತೂ ಒಂದು ಕಾರಣವಿದೆ: ಇವತ್ತು ಮೊದಲನೇ ಮರಿಯ ಹುಟ್ಟುಹಬ್ಬ! ಸಂಜೆ ಹೊತ್ತು ನಾನು ಅವರೊಟ್ಟಿಗೆ ಸೇರಿ ಸಿಡಿಸಿದ ಪಟಾಕಿ ಸದ್ದು ಕೇಳಿಸಿರ್ಬೇಕಲ್ಲ ನಿಂಗೂ? ಹಾರಿಸಿದ ರಾಕೆಟ್ಟು ಉದುರಿಸಿದ ನಕ್ಷತ್ರಗಳು ಕಾಣಿಸಿರಬೇಕಲ್ಲ ನಿಂಗೂ? ಆ ನಕ್ಷತ್ರಗಳೇ ಗುಡ್ ನೈಟ್ ಎಂದು ರಂಗೋಲಿ ಎಳೆದದ್ದೂ?

ಈ ಮೆಸೇಜು ಅನೇಕರನ್ನು ಸಮಾಧಾನಗೊಳಿಸ್ತು ಅನ್ಸುತ್ತೆ. ತಕ್‍ತಕ್ಷಣ ಸುಮಾರು ರಿಪ್ಲೇಗಳು ಬಂದ್ವು. 'ಹಕ್ಕಿಯ ಮನೆಯಲ್ಲಿ ದೀಪಾವಾಳಿಯೇ? ಹೌದೇ ಹೌದು. ಚಂದ್ರನ ಬಳಿಯಿದ್ದ ನಕ್ಷತ್ರವೂ ಸಂಭ್ರಮಿಸಿ ಸಾಕ್ಷಿ ನುಡಿಯುತ್ತಿದೆ..!' ಅಂತ ನಯ್ನಿ ರಿಪ್ಲೇ ಮಾಡಿದ್ದಳು. ಅವಳು ಹಾಗ್ಯಾಕೆ ಅಂದ್ಲು ಅಂದ್ರೆ, ಅವತ್ತು ಶುಕ್ರಗ್ರಹ ಚಂದ್ರನ ತುಂಬ ಸಮೀಪ ಬಂದಿತ್ತು. ಶ್ರೀ ಮಾಡಿದ ರಿಪ್ಲೇ ಸಹ ಹೆಚ್ಚುಕಮ್ಮಿ ಹಾಗೇ ಇತ್ತು: 'ನಿಧಿ ಹೇಳಿದ, ಹಕ್ಕಿ ವಾಪಾಸ್ ಕಳುಹಿಸಿದೆ ಅಂತ. ಇವತ್ತು ಶುಕ್ರ-ಚಂದ್ರ ಮೀಟ್ ಆಗಿದ್ದು ಇದೇ ಹಕ್ಕಿ ಸುದ್ದಿ ಮಾತಾಡ್ಲಿಕ್ಕೇ ಅಂತೆ? ಒಳ್ಳೇದಾಯ್ತು ಬಿಡು.. ಹಕ್ಕಿ ಸಂಸಾರಕ್ಕೂ ನಿಂಗೂ ಗುಡ್ ನೈಟ್!'

ತಂಗಿ ರಂಜನಾ ಮಾತ್ರ ಸ್ವಲ್ಪ ಜಾಸ್ತೀನೇ ಎಕ್ಸೈಟ್ ಆದವಳಂತೆ ಕಂಡಳು. ಅವಳದೊಂಥರಾ ಹುಚ್ಚು ಕಾಳಜಿ ಎಲ್ಲರ ಬಗ್ಗೆಯೂ, ಎಲ್ಲದರ ಬಗ್ಗೆಯೂ. ಆ ಕಾಳಜಿಯ ನೆರಳು ಹಕ್ಕಿ ಸಂಸಾರದ ಮೇಲೂ ಬೀಳಲಿ ಅಂತ ಬಯಸಿದಳೇನೋ? 'ಆ ಗರ್ಭಿಣಿ ಹಕ್ಕೀನ ಡಾಕ್ಟರ್ ಹತ್ರ ಚೆಕ್ ಅಪ್ ಮಾಡಸ್ತಾ ಇದಾರೋ ಇಲ್ವೋ ವಿಚಾರ್ಸು.. ಯಾವುದೇ ಕಾರಣಕ್ಕೂ ನಿನ್ನ ಸೆಲ್‍ನ ಸೈಲೆಂಟ್ ಮೋಡ್‍ನಲ್ಲಿ ಇಡ್ಬೇಡ. ರಾತ್ರಿ ಏನಾದ್ರು ಹೆಚ್ಚು-ಕಮ್ಮಿ ಆದ್ರೆ ಅವಕ್ಕೆ ಮತ್ಯಾರೂ ಇಲ್ಲ.. ಶ್ರೀನಿಧಿ ಬೇರೆ ತುಂಬಾ ದೂರ.. ಆ ಹಕ್ಕಿ ಹತ್ರ ಕಿವಿಗೆ ಹತ್ತಿ ಇಟ್ಕೊಂಡು ಬೆಚ್ಚಗಿರಲಿಕ್ಕೆ ಹೇಳು.. ಸ್ವೆಟರ್ ಹಾಕ್ಕೊಂಡು ಹುಷಾರಾಗಿರ್ಲಿಕ್ಕೆ ಹೇಳು.. ಬೇಕಿದ್ರೆ ನನ್ನ ಸೆಲ್ ನಂಬರ್ ಕೊಡು..' ಎಂದೆಲ್ಲ ತುಂಬಾ ಆಸ್ಥೆಯಿಂದ ರಿಪ್ಲೇ ಮಾಡಿದ್ದಳು.

ನನ್ನ ಡಿಪ್ಲೋಮಾ ಮುಗಿದಮೇಲೆ ಕೆಲಸಕ್ಕೆ ಸೇರಿಕೊಂಡುಬಿಟ್ಟೆನಲ್ಲ? ಆಮೇಲೆ ಅದೇನೇನೋ ಕೋರ್ಸುಗಳನ್ನು ಮಾಡುತ್ತಾ ಸಮಯ ಕಳೆದೆ. ಈಗ, ತೀರಾ ಪುರುಸೊತ್ತು ಮಾಡಿಕೊಂಡು 'ಒಂದು ಡಿಗ್ರಿ ಸರ್ಟಿಫಿಕೇಟ್ ತಗಳುವಾ' ಅಂತ ಮನಸು ಮಾಡಿದೆ. ಪರೀಕ್ಷೆಗೆ ಕಟ್ಟಿದೆ. ಕ್ಲಾಸಿಗೆ ಹೋಗಿ ಕೂತು ಕೇಳುವಷ್ಟು ವ್ಯವಧಾನ ನನ್ನಲ್ಲಿ ಉಳಿದಿದ್ದಂತೆ ಕಾಣಲಿಲ್ಲವಾದ್ದರಿಂದ ಕರೆಸ್ಪಾಂಡೆನ್ಸ್ ಕೋರ್ಸು ತಗೊಂಡಿದ್ದೆ. ಓದಲಿಕ್ಕೆ ಮೂಡಂತೂ ಸ್ವಲ್ಪವೂ ಇರಲಿಲ್ಲ.. ಆದರೂ ಎಕ್ಸಾಮಿಗೆ ಎರಡು ದಿನವಿರಬೇಕಾದರೆ ಜ್ಞಾನೋದಯವಾದಂತಾಗಿ ಓದಲು ಶುರು ಮಾಡಿದ್ದೆ. ಎಲ್ಲೆಲ್ಲೋ ಹರಿದು ಹೋಗುತ್ತಿದ್ದ ಮನಸ ಕುದುರೆಯನ್ನು ಕಡಿವಾಣ ಹಾಕಿ ನಿಲ್ಲಿಸುವುದೇ ಒಂದು ಸವಾಲಾಗಿತ್ತು. ಮಧ್ಯದಲ್ಲಿ ಪೀಂಗುಟ್ಟುವ ಮೊಬೈಲು ಬೇರೆ! ಓದಲು ಬಹಳ ಇದ್ದುದರ ಟೆನ್ಷನ್ನಿಗೆ ನನಗೆ ನಿದ್ರೆ ಬರುತ್ತಿರಲಿಲ್ಲ. ಹೀಗಾಗಿ ಅವತ್ತು ರಾತ್ರಿ ಸುಮ್ನೇ ಮೊಬೈಲು ಕೈಗೆತ್ತಿಕೊಂಡು ಹೊರಗಡೆ ಹೋದೆ. ಅಲ್ಲಿ ಮರದಲ್ಲಿ ಒಂದು ಹಕ್ಕಿ ಗೂಡು ಕಾಣ್ತು. ಹೊಳೆದ ಏನೋ ಲಹರಿಯನ್ನು ಹಾಗೇ ಟೈಪಿಸಿ ಗೆಳೆಯರಿಗೆಲ್ಲ ಕಳುಹಿಸಿದ್ದೆ. ಆ ಅಂತಹ ಮೆಸೇಜೊಂದು ಹೀಗೆ ಬೆಳೆಯುತ್ತಿರುವ ಸೊಗ ಕಂಡು ನನಗೆ ಅಚ್ಚರಿ...

ಹಕ್ಕಿ ಕತೆಯನ್ನು ಮುಂದುವರಿಸಲೇಬೇಕಿತ್ತು. ಮರುದಿನ ರಾತ್ರಿ ಎಲ್ಲರಿಗೂ ಕಳುಹಿಸಿದೆ:

ಆ ಗಂಡುಹಕ್ಕಿ ಹೆಂಡತಿಯನ್ನು ಎಷ್ಟು ಪ್ರೀತಿ ಮಾಡುತ್ತೆ ಗೊತ್ತಾ? ತನ್ನ ರೆಕ್ಕೆ ಚಾದರ ಹೊದಿಸಿ ಹೆಂಡತಿಯನ್ನು ಮುಚ್ಚಿ ಮುದ್ದಿಸುವುದನ್ನು ನೀವೊಮ್ಮೆ ನೋಡಬೇಕು.. ಆಗ ಮರಿಗಳೆಲ್ಲ 'ಅಮ್ಮ ಎಲ್ಲಿ?' ಅಂತ ಅರೆಕ್ಷಣ ಗಾಭರಿಯಾಗುತ್ತವೆ.. ಗೂಡಿನಲ್ಲಿ ಅರಸುತ್ತವೆ ಅವು: ಅಡುಗೆ ಮನೆ, ದೇವರ ಕೋಣೆ, ಮೇಲ್ಮೆತ್ತು, ಎಲ್ಲ... 'ಅಪ್ಪಾ ನೀನು ನೋಡಿದ್ಯಾ?' ಎಂದರೆ ಅಪ್ಪ ಗಂಭೀರವಾಗಿ 'ಇಲ್ವಲ್ಲ!' ಎನ್ನುತ್ತಾನೆ. ಕೊನೆಗೆ ಅವು ಗೂಡಿನಿಂದ ಹೊರಗಿಣುಕುತ್ತವೆ. ಕಂಡ ನನ್ನ ಬಳಿ 'ನೀ ನೋಡಿದ್ಯಾ?' ಅಂತ ಕೇಳ್ತವೆ...

ಅಷ್ಟು ಕಳುಹಿಸಿದ್ದಷ್ಟೇ. ರಂಜು ರಿಪ್ಲೇ ಮಾಡಿದ್ಲು: 'ಅಣ್ಣಾ, ಆಮೇಲೆ ಮುಂದೆ ಹೇಳು: ನಿಂಗೆ ಗೊತ್ತಿದ್ರೂ 'ಇಲ್ಲ' ಅಂತ ಹೇಳ್ತೀಯ.. ನಿನಗೂ ನಿನ್ನವಳು ನೆನಪಾಗ್ತಾಳೆ...'

ಹೌದಲ್ಲ, ನನಗೆ ನನ್ನವಳೇ ನೆನಪಾಗ್ತಾಳೆ... ಹೀಗೇ ಅಲ್ವಾ ನಾನು ಅವಳಿಗೆ ಬೆಚ್ಚನೆ ಚಾದರ ಹೊದಿಸಿ, ಚುಕ್ಕು ತಟ್ಟಿ, ಮುಂಗುರುಳು ಹಿಂದಕ್ಕೆ ಸರಿಸಿ... ಹೌದೌದು... ನನಗೆ ಅವಳೇ ನೆನಪಾಗ್ತಾಳೆ... ಹಕ್ಕಿ ಹಾಡುತ್ತಿದ್ದರೆ ಅವಳ ಹಾಡು, ಹಕ್ಕಿ ಹಾರುತ್ತಿದ್ದರೆ ಅವಳ ನಡೆ, ಹಕ್ಕಿ ಗುಟುಕು ನೀಡುತ್ತಿದ್ದರೆ, ಹಕ್ಕಿ ನಿದ್ರೆ ಮಾಡುತ್ತಿದ್ದರೆ, ಹಕ್ಕಿ ಗೂಡಿಗೆ ಬಾರದಿದ್ದರೆ... ಏನೇ ಮಾಡಿದರೂ, ಏನೇ ಆದರೂ ಅವಳೇ ನೆನಪಾಗ್ತಾಳೆ... ಏನೂ ಆಗದಿದ್ದರೂ ಅವಳೇ ನೆನಪಾಗ್ತಾಳೆ... ಕನಸಲ್ಲ, ನಿಜ; ನಿಜವಲ್ಲ, ಕನಸು...

ಮರುದಿನ ಒಂದು ಪುಟ್ಟ ಅಪಘಾತವಾಯ್ತು. 'ಇವತ್ತೊಂದು ಪುಟ್ಟ ಅವಘಢವಾಯ್ತು. ಮಳೆ ಬರುವ ಸೂಚನೆ ಇದ್ದುದರಿಂದ ಗಂಡುಹಕ್ಕಿ ಹೊರಗಡೆ ಹೋಗದೆ ಗೂಡಿನಲ್ಲೇ ಇದ್ದುಕೊಂಡು ಮರಿಗಳಿಗೆ ಹಾರಾಟ ಪ್ರಾಕ್ಟೀಸ್ ಮಾಡಿಸುತ್ತಿತ್ತು. ಸಂಜೆ ಮಳೆ ಬಿತ್ತಲ್ಲ, ರೆಂಬೆಯೆಲ್ಲ ಒದ್ದೆಯಾಗಿತ್ತು.. ಜಾರುತ್ತಿತ್ತು.. ಅದೇನೋ ಹೆಚ್ಚುಕಮ್ಮಿಯಾಗಿ ಮರಿಹಕ್ಕಿಯೊಂದು ಜಾರಿ ಬಿದ್ದುಬಿಟ್ಟಿತ್ತು!! ಇಲ್ಲ, ಭಯ ಪಡಬೇಕಿಲ್ಲ. ಸ್ವಲ್ಪ ತರಚು ಗಾಯ ಆಗಿದೆ ಅಷ್ಟೇ. ಸೊಪ್ಪಿನ ರಸ ಬಿಟ್ಟಿದ್ದೇವೆ. ಉರಿ ಕಮ್ಮಿಯಾಗಿದೆಯಂತೆ.. ನಗುನಗ್ತಾ ಎಲ್ರಿಗೂ ಗುಡ್ ನೈಟ್ ಹೇಳಿದೆ ಮರಿಹಕ್ಕಿ.. ಮಲಗಿ ನೀವು..'

ಹಕ್ಕಿ ಕತೆ ಅನೇಕರನ್ನು ಮೋಡಿ ಮಾಡಿದ್ದು ಅವರ ರಿಪ್ಲೇಗಳಿಂದಲೇ ಗೊತ್ತಾಗುತ್ತಿತ್ತು. ರಂಜನಾ ಹೇಳಿದ್ಲು 'ಅಣ್ಣಾ ನಂಗೆ ಆ ಹಕ್ಕೀನ ನೋಡ್ಬೇಕು ಅನ್ನಿಸ್ತಿದೆ..' ಅಂತ. ನಾನೆಂದೆ 'ನಮ್ಮನೆಗೆ ಬಾ, ತೋರಿಸ್ತೀನಿ.. 'ನನ್ ತಂಗಿ' ಅಂತ ಪರಿಚಯ ಮಾಡಿ ಕೊಡ್ತೀನಿ.. ಹೆಣ್ಣು ಹಕ್ಕಿ ನಿಂಗೆ ಕಣ ಕೊಟ್ಟು, ಕುಂಕುಮ ಹಚ್ಚಿ ಕಳ್ಸುತ್ತೆ..' ಅಂತ. 'ಏಯ್ ನಂಗೆ ಆಸೆ ಜಾಸ್ತಿ ಮಾಡ್ಬೇಡ ಪ್ಲೀಸ್' -ಆ ಕಡೆಯಿಂದ ರಿಪ್ಲೇ. ಸಮಾಧಾನ ಮಾಡಿದೆ ನಾನು: 'ಮಲ್ಕೋ.. ಆ ಹಕ್ಕಿ ಬಂದು ತನ್ನ ರೆಕ್ಕೆ ಚಾಮರದಿಂದ ನಿಂಗೆ ಗಾಳಿ ಬೀಸ್ತಾ ಜೋಗುಳ ಹಾಡ್ತಾ ಇದೆ ಅಂತ ಕಲ್ಪಿಸಿಕೋ.. ಹಾಯಾಗಿ ನಿದ್ರೆ ಬರುತ್ತೆ' ಅಂತ. ಅದ್ಕೆ ಅವಳಂದ್ಲು: 'ಥ್ಯಾಂಕ್ಸ್.. ಆದ್ರೆ ಬೇಡ, ಆ ಹಕ್ಕಿಗೆ ಆಹಾರ ಹುಡುಕಿ ಸುಸ್ತಾಗಿರೊತ್ತೆ. ಪಾಪ, ನಂಗೆ ಗಾಳಿ ಬೀಸ್ತಾ ಕೂತ್ರೆ ಮತ್ತೂ ಸುಸ್ತಾಗತ್ತೆ.. ಅದು ತನ್ನ ಹೆಂಡತಿ ಒಟ್ಟಿಗೆ ಹಾಯಾಗಿ ನಿದ್ರೆ ಮಾಡ್ಲಿ. ಬೇಕಾದ್ರೆ ನಾನೇ ಗಂಡ, ಹೆಂಡತಿ, ಮಕ್ಕಳಿಗೆಲ್ಲ ಗಾಳಿ ಬೀಸಿ ನಿದ್ರೆ ಮಾಡಿಸ್ತೀನಿ' ಅಂತ.

ಬದಲಾದ ಬೆಂಗಳೂರಿನ ಹವೆ ಪಕ್ಷಿ ಸಂಕುಲದ ಮೇಲೂ ಪರಿಣಾಮ ಬೀರಿದ್ದು ಸುಳ್ಳಲ್ಲ! ಮರುದಿನದ ನನ್ನ ಮೆಸೇಜಿನಲ್ಲಿ ಅದು ಕಾಣಿಸಿಕೊಂಡಿತ್ತು: ಬಸುರಿ ಹಕ್ಕಿಗೆ ಸಣ್ಣಗೆ ಜ್ವರ ಬಂದಿದೆ. ಗಂಡಹಕ್ಕಿ ಇವತ್ತೂ ಮನೆಯಲ್ಲೇ ಉಳಿದಿದೆ. ಬಿಸಿಬಿಸಿ ಮೆಣಸಿನ ಸಾರು ಮಾಡಿದೆ ಅಡುಗೆಗೆ. 'ದಿನಾ ನೀವು ಮನೆಯಲ್ಲೇ ಇದ್ರೆ ಊಟದ ಗತಿ ಏನು?' ಎಂದು ಆತಂಕ ವ್ಯಕ್ತಪಡಿಸಿದ ಅಮ್ಮನಿಗೆ ಮರಿಹಕ್ಕಿಗಳು 'ನಾವು ಹೋಗಿ ಆಹಾರ ತರ್ತೀವಿ ಬಿಡಮ್ಮಾ' ಎಂದಿದ್ದಾವೆ.. ಭಾವುಕನಾದ ಅಪ್ಪ ಮರಿಗಳನ್ನೆಲ್ಲಾ ಒಮ್ಮೆ ತಬ್ಬಿ 'ಇನ್ನೂ ಚೆನ್ನಾಗಿ ಹಾರೋದನ್ನ ಕಲೀಬೇಕು ನೀವು.. ನನ್ನ ಜೊತೆ ಬಂದು ಕಾಡಿನ ಪರಿಚಯ ಮಾಡ್ಕೋಬೇಕು.. ಆಮೇಲೆ ನೀವು ಸ್ವತಂತ್ರವಾಗಿ ಹಾರಾಡಬಹುದು' ಎಂದಿದ್ದಾನೆ...

ನಮ್ಮೆಲ್ಲರ ಆರೈಕೆಯಿಂದಾಗಿ ಬಸುರಿ ಹಕ್ಕಿ ಬಲುಬೇಗನೆ ಚೇತರಿಸಿಕೊಂಡಿತು. ನಮ್ಮ ಆರೈಕೆ ಅನ್ನುವುದಕ್ಕಿಂತ ಗಂಡಹಕ್ಕಿಯ ಪ್ರೀತಿ ಎಂದರೇ ಹೆಚ್ಚು ಸೂಕ್ತವೇನೋ? ಮರುದಿನ ಗೆಳೆಯರಿಗೆ ನಾನು ಹಕ್ಕಿ ಅರಾಮಾಗಿರುವ ಸುದ್ದಿಯನ್ನು ಮೆಸೇಜಿಸಿದೆ: ಬಸುರಿ ಹಕ್ಕಿಯ ಜ್ವರ ಕಮ್ಮಿಯಾಗಿದೆ. ಆದ್ರೂ ಕಾದಾರಿದ ನೀರನ್ನೇ ಕುಡಿಯುವಂತೆ ಹೇಳಿದ್ದೇವೆ ನಾವೆಲ್ಲ. ಈಗ ಹೀಗೇ ಹೊರಗಡೆ ಹೋಗಿದ್ನಲ್ಲ, ಗೂಡಿನಿಂದ ಪಿಸುಮಾತು ಕೇಳಿಸುತ್ತಿತ್ತು: 'ಹುಟ್ಟುವ ಮರಿಗೆ ಏನಂತ ಹೆಸರಿಡೋಣ?' 'ಅದು ಹೆಣ್ಣೋ ಗಂಡೋ ಎಂಬುದೇ ಇನ್ನೂ ಗೊತ್ತಿಲ್ಲ..!' 'ನಾ ಹೇಳ್ತೀನಿ, ಈ ಸಲ ಹೆಣ್ಣೇ ಆಗೋದು..' 'ಅದು ಹ್ಯಾಗೆ ಹೇಳ್ತೀಯಾ?' 'ನಿನ್ನ ಮುಖದಲ್ಲಿನ ಕಳೆಯೇ ಹೇಳ್ತಿದೆ, ಹೊಟ್ಟೆಯೊಳಗಿನ ಮೊಟ್ಟೆಯೊಳಗಿಂದ ಹೊರಬರಲಿರುವ ಜೀವ ಹೆಣ್ಣು ಅಂತ' (ತುಂಟ ನಗು) 'ಥೂ! ಸಾಕು, ಮಲಗಿ..!' 'ಹಹ್ಹ! ಗುಡ್ ನೈಟ್'

ಎಲ್ಲಾ ಕಲ್ಪನೆಯಷ್ಟೇ ಎನ್ನಬೇಡಿ.. ಹಕ್ಕಿಗಳ ಲೋಕದಲ್ಲಿ ಹೀಗೆಲ್ಲಾ ಆಗೊತ್ತಾ ಅನ್ಬೇಡಿ.. ಹಕ್ಕಿ ಹೊಟ್ಟೆಯಲ್ಲಿ ಒಂದಲ್ಲ, ಎರಡ್ಮೂರು ಮೊಟ್ಟೆಗಳೂ ಇರಬಹುದು ಎಂದು ವಿಜ್ಞಾನದ ಮಾತಾಡ್ಬೇಡಿ.. ಎಲ್ಲಾ ಸಾಧ್ಯತೆಯಿದೆ.. ನೋಡುವ ಕಣ್ಣಿದ್ದರೆ.. ಕೇಳುವ ಕಿವಿಯಿದ್ದರೆ.. ಅನುಭವಿಸುವ ಹೃದಯವಿದ್ದರೆ.. ಶ್ರೀ ಅವತ್ತೆಲ್ಲೋ ರಿಪ್ಲೇನಲ್ಲಿ ಹೇಳಿದ್ದಳು: 'ಈ ಹಕ್ಕಿ ಸಂಸಾರದಿಂದಾಗಿ ಬದುಕೆಷ್ಟು ಸುಂದರ!' ಅಂತ. ಹೌದಲ್ವಾ? ಎಷ್ಟೊಂದು ಸುಂದರ ಅಲ್ವಾ?

ಹೀಗೆ, ಅಸ್ತಿತ್ವದಲ್ಲೇ ಇಲ್ಲದ ಹಕ್ಕಿಯೊಂದು ಭಾವಜೀವಿಗಳ ಮೊಬೈಲಿನಿಂದ ಮೊಬೈಲಿಗೆ ಎಸ್ಸೆಮ್ಮೆಸ್ಸಾಗಿ ಹಾರಾಡುತ್ತಿದೆ.. 'ಅಸ್ತಿತ್ವದಲ್ಲಿ ಇಲ್ಲ' ಅಂತ ಹೇಳೋದೂ ತಪ್ಪೇ! ಯಾಕಿಲ್ಲ? ಖಂಡಿತ ಇದೆ ಆ ಹಕ್ಕಿ.. ನೋಡಿ, ನಿಮ್ಮ ಕಣ್ಣೆದುರೂ ಹಾರಾಡ್ತಾ ಇಲ್ವಾ ಅದು ಈಗ..? ನಿಜ ಹೇಳಿ..? :)

...ಹಕ್ಕಿ ಕತೆ ಮುಂದುವರೆಯುತ್ತದೆ...!

Monday, July 02, 2007

ಬೆನ್ನ ಮೇಲಿನ ಮಚ್ಚೆ

ನನ್ನ ರೂಂಮೇಟ್ ಹೇಳಿದ:
'ನಿನ್ನ ಬೆನ್ನಲ್ಲೊಂದು ಮಚ್ಚೆಯಿದೆ.'

ಇಷ್ಟರೊಳಗೆ ನಾನು ನನ್ನ ಬೆನ್ನನ್ನು ನೋಡಿಕೊಂಡೇ ಇಲ್ಲ ನೋಡಿ,
ಹಾಗಾಗಿ ಗೊತ್ತೇ ಇರಲಿಲ್ಲ ನನಗೆ ಇದು...
ಹಾಗಂತ ಅವನು ಹೇಳಿದ್ದನ್ನು ನಾನು ತಕ್ಷಣ ನಂಬಲಿಲ್ಲ;
'ಸಾಕ್ಷ್ಯ ಬೇಕು, ಪುರಾವೆ ಬೇಕು, ಹಾಗೆಲ್ಲ ಸುಲಭಕ್ಕೆ
ಏನನ್ನೂ ನಂಬುವುದಿಲ್ಲ ನಾನು' ಎಂದೆಲ್ಲ ದೊಡ್ಡದಾಗಿ ಹೇಳಿದೆ.

ನನ್ನನ್ನು ಒಂದು ನಿಲುವುಗನ್ನಡಿಯ ಮುಂದೆ ಅಂಗಿ ಬಿಚ್ಚಿ ನಿಲ್ಲಿಸಿದ ಅವನು
ಹಿಂದಿನಿಂದ ಮತ್ತೊಂದು ಕನ್ನಡಿ ಹಿಡಿದು ಏನೇನೋ ಕಸರತ್ತು ಮಾಡಿ
ನನಗೆ ನನ್ನ ಬೆನ್ನ ಮಚ್ಚೆಯನ್ನು ತೋರಿಸಲಿಕ್ಕೆ ಪ್ರಯತ್ನಿಸಿದ.
ಏನೇ ಮಾಡಿದರೂ ನನಗೆ ಕಾಣಿಸಲಿಲ್ಲ ಮಚ್ಚೆ.

ಬಗೆಬಗೆಯಾಗಿ ಅವನನ್ನು ಪ್ರಶ್ನಿಸಿ ಪೀಡಿಸಿದೆ:
'ಹೇಗಿದೆ ಅದು? ಎಷ್ಟು ಅಗಲಕ್ಕಿದೆ? ಬಣ್ಣ ಕಪ್ಪಾ? ಅಥವಾ ಜೇನು ಬಣ್ಣವಾ?
ಆಕಾರ ಯಾವುದು? ಎಲ್ಲಿದೆ ಮುಟ್ಟಿ ತೋರಿಸು..' ಇತ್ಯಾದಿ ಇತ್ಯಾದಿ.
'ತಾಳು ಮಾರಾಯ, ಒಂದು ಉಪಾಯ ಮಾಡ್ತೀನಿ' ಎಂದ ಅವನು
ತನ್ನ ಮೊಬೈಲ್ ಕೆಮೆರಾದಿಂದ ನನ್ನ ಬೆನ್ನಿನದೊಂದು ಫೋಟೋ ತೆಗೆದು
ನನ್ನ ಮುಂದೆ ಹಿಡಿದ.

ಹೇಳಿದೆನಲ್ಲ, ನಾನು ಹಾಗೆಲ್ಲಾ ಸುಲಭಕ್ಕೆ ಏನನ್ನೂ ನಂಬುವುದಿಲ್ಲ ಎಂದು,
ಹಾಗೆಯೇ ಇದನ್ನೂ ನಂಬಲಿಲ್ಲ..!
'ಇದು ನನ್ನ ಬೆನ್ನೇ ಅಲ್ಲ' ಎಂದು ವಾದಿಸಿದೆ.
ರೂಂಮೇಟ್‍ಗೆ ಸಿಟ್ಟು ಬಂತು:
'ನನ್ನ ಮೇಲೆ ಇಷ್ಟು ಅನುಮಾನವಾ ನಿಂಗೆ?
ನಾನ್ಯಾಕೆ ಸುಮ್ಮನೇ ಸುಳ್ಳು ಹೇಳಲಿ?
ಏನಾದರೂ ಮಾಡಿಕೊಂಡು ಸಾಯಿ' ಎಂದೆಲ್ಲಾ ಬೈದು
ಉಪ್ಪಿಟ್ಟಿಗೆ ಉಪ್ಪು ಜಾಸ್ತಿ ಹಾಕಿಟ್ಟು ಆಫೀಸಿಗೆ ಹೋಗಿಬಿಟ್ಟ.

'ಸರಿ ಬಿಡಪ್ಪ, ನಂಬ್ತೀನಿ' ಎಂದು
ರಾತ್ರಿ ಮನೆಗೆ ಮರಳಿದ ಅವನನ್ನು ಸಮಾಧಾನ ಮಾಡಿದೆ.
ಹಾಗಂತ ನಾನೇನು ನಂಬಲಿಲ್ಲ, ನಂಬಿದಂತೆ ನಟಿಸಿದೆ ಅಷ್ಟೆ!

ಇದೆಲ್ಲಾ ಆಗಿದ್ದು ಈಗ ಆರು ತಿಂಗಳ ಹಿಂದೆ.
ಮೊನ್ನೆ ಯಾರೋ ಯಾರ ಬಗ್ಗೆಯೋ 'ಅವನು ಹೇಗೆ?' ಅಂತ ಕೇಳಿದರು ನೋಡಿ,
ನನ್ನ ಬೆನ್ನ ಮೇಲಿನ ಮಚ್ಚೆಯ ಬಗ್ಗೆಯೇ ಗೊತ್ತಿಲ್ಲದ ನಾನು
ಇನ್ಯಾರದೋ ಬಗ್ಗೆ 'ಅವನು ಹೀಗೇ' ಅಂತ ಹೇಗೆ ಹೇಳಲಿ,
ಅಥವಾ ನಾನು ಹೇಳಿದರೂ ಅದನ್ನು ಅವರು ನಂಬುತ್ತಾರೆಯೇ,
ನಂಬದಿದ್ದರೆ ನನಗೆ ಖಂಡಿತ ಸಿಟ್ಟು ಬರುತ್ತದಲ್ಲವೇ,
-ಎಂದೆಲ್ಲಾ ಎನಿಸಿ, ಇದೆಲ್ಲಾ ನೆನಪಾಗಿ ಕಾಡಿ,
ಅನಿರ್ವಚನನಾಗಿ ನಿಂತುಬಿಟ್ಟೆ.

ಹೋಗಲಿ ಬಿಡಿ, ನೀವೂ ಇದನ್ನೆಲ್ಲ ನಂಬಲೇಬೇಕೆಂದೇನು ಇಲ್ಲ.

Thursday, June 21, 2007

ಹತ್ ಗಂಟೆ ಕರೆಂಟು

ಕಾದಂಬರಿ ಓದುತ್ತಿರುವ ಅಪ್ಪ, ಬತ್ತಿ ಹೊಸೆಯುತ್ತಿರುವ ಅಮ್ಮ, ಟೀವಿ ನೋಡುತ್ತಿರುವ ಅಜ್ಜಿ, ಹೋಮ್‍ವರ್ಕ್ ಮಾಡುತ್ತಿರುವ ನಾನು -ಎಲ್ಲರೂ ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಸ್ಥಬ್ಧವಾಗುತ್ತಿದ್ದೆವು. ಸರಿಯಾಗಿ ಹತ್ತು ಗಂಟೆಗೆ ಕರೆಂಟ್ ಹೋಗುತ್ತಿತ್ತು ನಮ್ಮಲ್ಲಿ! ಅದು ಹಾಗೆ ಹೋದಕೂಡಲೇ "ಓಹ್! ಹತ್ ಗಂಟೆ ಕರೆಂಟು.. ಎಲ್ಲಾ ಕೂತಲ್ಲೇ ಕೂತಿರಿ.. ಇನ್ನೊಂದು ನಿಮ್ಷಕ್ಕೆ ಬರ್ತು!" ಅಂತ ಅಜ್ಜಿ ಹೇಳುತ್ತಿದ್ದಳು. ಹೋದ ಕರೆಂಟು ಒಂದರಿಂದ ಎರಡು ನಿಮಿಷಗಳಲ್ಲಿ ವಾಪಸು ಬರುತ್ತಿತ್ತು. ಅಷ್ಟು ಬೇಗ ಅದೆಲ್ಲಿಗೆ ಹೋಗಿ ಬರುತ್ತಿತ್ತೋ ಅದು, ದೇವರೇ ಬಲ್ಲ! ಆದರೆ ಆ ಒಂದು ನಿಮಿಷದ ಅವಧಿಯಲ್ಲಿ, ನನಗೆ ನೆನಪಿದ್ದಂತೆ, ನಾವೆಲ್ಲಾ ಒಂದು ತೀರಾ ಆಪ್ತ ವಾತಾವರಣದಲ್ಲಿರುತ್ತಿದ್ದೆವು.

ಮನೆಯನ್ನೆಲ್ಲಾ ಧುತ್ ಎಂದು ಆವರಿಸಿರುವ ಕತ್ತಲೆ. ಓದುತ್ತಿದ್ದ ಕಾದಂಬರಿ ಆಗತಾನೇ ಪಡೆದುಕೊಳ್ಳ ಹೊರಟಿದ್ದ ಹೊಸ ತಿರುವು, ಹೊಸೆಯುತ್ತಿದ್ದ ಬತ್ತಿಯಲ್ಲಿದ್ದ ದೇವರೆಡೆಗಿನ ಭಕ್ತಿ, ಉರಿಯುತ್ತಿದ್ದ ಟೀವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಮಾಡುತ್ತಿದ್ದ ಹೋಮ್‍ವರ್ಕ್‍ನೆಡೆಗಿನ ನನ್ನ ಶ್ರದ್ಧೆ -ಎಲ್ಲವೂ ಮಾಯವಾಗಿ ಸೀದಾ ವಾಸ್ತವಕ್ಕೆ ಬಂದಿಳಿಯುತ್ತಿದ್ದೆವು ನಾವೆಲ್ಲರೂ. ಇನ್ನೆರೆಡು ನಿಮಿಷಗಳಲ್ಲಿ ಕರೆಂಟು ಬಂದೇ ಬರುತ್ತದೆಂಬ ವಿಶ್ವಾಸ. ಲಾಟೀನು ಹಚ್ಚಲು ಏಳಲಿಕ್ಕೆ ಎಲ್ಲರಿಗೂ ಸೋಮಾರಿತನ. ಆ ಎರಡು ನಿಮಿಷ ನಾವು ಕತ್ತಲೆಯಲ್ಲಿ, ನಮ್ಮ ನಮ್ಮ ಜೊತೆ ಮಾತಾಡಿಕೊಳ್ಳುತ್ತಾ, ಏನೆಂದರೆ ಏನೂ ಮಾಡದೆ, ಶಪಿತ ಗಂಧರ್ವರಂತೆ ಸುಮ್ಮನೆ ಕುಳಿತಿರುತ್ತಿದ್ದೆವು.

ನನಗೆ ಆಗಲೇ ನಿದ್ರೆ ಬರುತ್ತಿರುತ್ತಿತ್ತು. ಬೇಗ ಕರೆಂಟ್ ಬಂದು ಬೇಗ ಹೋಮ್‍ವರ್ಕ್ ಮುಗಿಸಿ ಮಲಗುವ ಆತುರದಲ್ಲಿರುತ್ತಿದ್ದೆ. ಅಪ್ಪನಿಗೆ ಕತೆ ಮುಂದೇನಾಗುವುದೋ ಎಂಬ ಕುತೂಹಲ. ಅಮ್ಮನ ಕೈಗಳಿಗೆ ಬತ್ತಿ ಹೊಸೆದೂ ಹೊಸೆದೂ ಅಭ್ಯಾಸವಾಗಿಬಿಟ್ಟಿದ್ದರಿಂದ, ಹತ್ತಿಯನ್ನು ಬಿಡಿಸುವುದಕ್ಕಾಗಲೀ, ಮಣೆಯ ಮೇಲಿಟ್ಟು ಹೊಸೆಯುವುದಕ್ಕಾಗಲೀ ಬೆಳಕಿನ ಅಗತ್ಯವೇ ಇರಲಿಲ್ಲ. ಅವಳು ತನ್ನ ಪಾಡಿಗೆ ತಾನು ತನ್ನ ಕಾಯಕವನ್ನು ಮುಂದುವರೆಸಿರುತ್ತಿದ್ದಳಾದರೂ ಅಳತೆ ಸರಿಯಾಗಿ ಬರುತ್ತಿದೆಯಾ ಇಲ್ಲವಾ ಎಂಬ ಆತಂಕ. ಅಜ್ಜಿಗೆ ಕರೆಂಟ್ ಹೋದ ಸಂದರ್ಭದಲ್ಲಿ ಧಾರಾವಾಹಿ ಮುಂದೆ ಹೋಗಿಬಿಡುತ್ತದಲ್ಲಾ ಎಂಬ ಚಿಂತೆ: ಯಾರೋ ಬಾಗಿಲು ತಟ್ತಾ ಇದ್ದಿದ್ರು... ಇವಳು 'ಬಂದೇ' ಎನ್ನುತ್ತಾ ಬಾಗಿಲಿನತ್ತ ಧಾವಿಸುತ್ತಿದ್ದಳು... ಸರಿಯಾಗಿ ಅಷ್ಟೊತ್ತಿಗೆ ಹೋಗಬೇಕಾ ಕರೆಂಟು! ಇನ್ನು ಕರೆಂಟು ಬರುವುದರೊಳಗೆ ಏನೇನಾಗಿ ಹೋಗಿರುತ್ತದೋ ಏನೋ? ಛೇ!

ಆದರೆ ಅಜ್ಜಿಯ ಈ ಚಿಂತೆ ಅರ್ಥವಿಲ್ಲದ್ದಾಗಿ ಕಾಣುತ್ತಿತ್ತು ನನಗೆ. ನನ್ನ ಅಜ್ಜಿಗೆ ಟೀವಿ ಹುಚ್ಚು. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲವಾದರೂ ಅವಳು ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನೂ ನೋಡುತ್ತಿದ್ದಳು. ಆಕೆಗೆ ಛಾನೆಲ್ ಬದಲಿಸಲಿಕ್ಕಾಗಲೀ, ರಿಮೋಟ್ ಬಳಸಲಿಕ್ಕಾಗಲೀ ಗೊತ್ತಾಗುತ್ತಿರಲಿಲ್ಲ. ಟೀವಿ ಹಾಕಿಕೊಳ್ಳಲಿಕ್ಕೆ ಮಾತ್ರ ಬರುತ್ತಿತ್ತು. ಹೀಗಾಗಿ, ಟೀವಿ ಹಾಕಿದಾಗ ಯಾವ ಛಾನಲ್ ಬರುತ್ತಿರುತ್ತದೋ ಅದನ್ನೇ ನೋಡುತ್ತಾ ಕೂರುತ್ತಿದ್ದಳು. ಈ ಧಾರಾವಾಹಿಗಳ ವಿಷಯದಲ್ಲಂತೂ ಅವಳು ಸಾಕಷ್ಟು ಕನ್‍ಫ್ಯೂಶನ್ನುಗಳಿಗೆ ಒಳಗಾಗುತ್ತಿದ್ದಳು. ಈ ಛಾನಲ್ಲುಗಳವರು ಒಂದಾದ ನಂತರ ಒಂದು ಧಾರಾವಾಹಿ ಹಾಕುತ್ತಾರೆ. ಅಲ್ಲದೇ ಒಂದು ಧಾರಾವಾಹಿಯಲ್ಲಿನ ತಾರೆಗಳೇ ಮತ್ತೊಂದು ಧಾರಾವಾಹಿಯಲ್ಲೂ ಇರುತ್ತಾರೆ. ಹೀಗಾಗಿ, ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳನ್ನು ನೋಡುತ್ತಿದ್ದ ನನ್ನ ಅಜ್ಜಿ, ಅವೆಲ್ಲವನ್ನೂ ಸೇರಿಸಿ ಏನೋ ಒಂದು ಅರ್ಥ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ, ಕರೆಂಟ್ ಹೋದಾಗ ಧಾರಾವಾಹಿ ಮುಂದುವರೆದುದಕ್ಕೆ ಅಜ್ಜಿ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವಳಿಗೆ ಸಿನಿಮಾಗಳಲ್ಲಿ ಬರುವ ಫ್ಲಾಶ್‍ಬ್ಯಾಕುಗಳಂತೂ ದೇವರಾಣೆ ಅರ್ಥವಾಗುತ್ತಿರಲಿಲ್ಲ. 'ಈಗ ವಿಷ್ಣುವರ್ಧನ್ ಇದ್ದಿದ್ನಲ, ಅವ ಸಣ್ಣಕಿದ್ದಾಗ ಹೆಂಗಿದ್ದಿದ್ದ ಅಂತ ತೋರುಸ್ತಾ ಇದ್ದ' ಎಂದು ನಾವು ಎಕ್ಸ್‍ಪ್ಲನೇಶನ್ ಕೊಟ್ಟರೆ, 'ಹೂಂ ಸುಮ್ನಿರು! ಅಷ್ಟು ದೊಡ್ಡಕಿದ್ದ ಅಂವ ಅದು ಹೆಂಗೆ ಅಷ್ಟು ಸಣ್ಣಕಾಗಕ್ಕೆ ಸಾಧ್ಯ?' ಎನ್ನುತ್ತಿದ್ದಳು. ಅವಳ ಪ್ರಕಾರ ಆ ಹುಡುಗ ಬೇರೆಯವನು, ವಿಷ್ಣುವರ್ಧನ್ ಅಲ್ಲ! ಎಲ್ಲಾದರೂ ಮದುವೆಯ ಸೀನ್ ಬಂದರೆ ಅಡುಗೆಮನೆಯಲ್ಲಿರುತ್ತಿದ್ದ ನನ್ನ ಅಮ್ಮನನ್ನು ಕರೆಯುತ್ತಿದ್ದಳು: 'ಗೌರೀ ಬಾರೇ, ಮದ್ವೆ ತೋರುಸ್ತಾ ಇದ್ದ...!' ಅಂತ. ಅವಳಿಗೆ ಟೀವಿಯಲ್ಲಿ ಮದುವೆ-ಗಿದುವೆ ನೋಡುವುದೆಂದರೆ ಇನ್ನಿಲ್ಲದ ಸಂಭ್ರಮ. ಪುಣ್ಯಕ್ಷೇತ್ರಗಳನ್ನಾಗಲೀ, ವಿದೇಶವನ್ನಾಗಲೀ, ಬೆಂಗಳೂರಿನ ಟ್ರಾಫಿಕ್ಕನ್ನಾಗಲೀ ನೋಡಿ ತಾನೇ ಅಲ್ಲಿಗೆ ಹೋಗಿಬಂದಷ್ಟು ಖುಷಿ ಪಡುತ್ತಿದ್ದಳು. 'ಕಾಶಿಯೂ ಬ್ಯಾಡ ಏನೂ ಬ್ಯಾಡ. ಎಲ್ಲಾ ಇಲ್ಲೇ ಕೂತ್ಕಂಡು ನೋಡ್ಯಾತು ತಗ!' ಎನ್ನುತ್ತಿದ್ದಳು ಅಪ್ಪನ ಬಳಿ.

ನಾವು ಈ ಹತ್ತು ಗಂಟೆ ಕರೆಂಟಿಗೆ ಅದೆಷ್ಟು ಅಡಿಕ್ಟ್ ಆಗಿದ್ದೆವು ಅಂದ್ರೆ, ಒಂದು ದಿನ ಹತ್ತು ಗಂಟೆಗೆ ಕರೆಂಟ್ ಹೋಗಲಿಲ್ಲವೆಂದರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು. ಪ್ರತಿ ಮುಂಜಾನೆಯೂ ಬರುವ ಪೇಪರು ಒಂದು ದಿನ ಬಾರದೇ ಹೋದರೆ ಹೇಗಾಗುತ್ತದೋ ಹಾಗೆ, ಅಥವಾ ದಿನವೂ ಬರುವ ಹಾಲಿನವಳು ಇಂದು ಬಾರದಿದ್ದರೆ ಹೇಗಾಗುತ್ತದೋ ಹಾಗೆ, ಅಥವಾ ಪ್ರತಿದಿನ ಊಟದ ಸಮಯಕ್ಕೆ ಸರಿಯಾಗಿ 'ಮ್ಯಾಂವ್ ಮ್ಯಾಂವ್' ಎನ್ನುತ್ತಾ ಹಾಜರಾಗುತ್ತಿದ್ದ ಬೆಕ್ಕು ಇಂದು ಕಾಣಿಸಿಕೊಳ್ಳದಿದ್ದರೆ ಹೇಗಾಗುತ್ತದೋ ಹಾಗೆ -ನಾವು ಹತ್ ಗಂಟೆಗೆ ಕರೆಂಟ್ ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ವ್ಯಥೆ ಪಡುತ್ತಿದ್ದೆವು.

ಬಹುಶಃ ಈ ಕರೆಂಟು ಹೋದ ಘಳಿಗೆಯಲ್ಲಿ ಆವರಿಸಿಕೊಳ್ಳೂತ್ತಿದ್ದ ಕತ್ತಲೆಯಲ್ಲಿ ನಮಗೇ ತಿಳಿಯದಂಥ ಅದೇನೋ ಮೋಡಿಯಿರುತ್ತಿತ್ತು. ಆಗ ಚಂದ್ರ ಬೆಳದಿಂಗಳಾಗಿ ಮನೆಯೊಳಗೆ ಬರುತ್ತಿದ್ದ. ಆ ಹಿತವಾದ ಮಂದ ತಿಂಗಳ ಬೆಳಕು ಕಿಟಕಿಯ ಸರಳುಗಳ ಚಿತ್ರವನ್ನು ನೆಲದ ಮೇಲೆ ಮೂಡಿಸುತ್ತಿತ್ತು. ನೆಲದ ಮೇಲೆ ಮೂಡಿದ ಆ ಬೆಳಕ ಚಿತ್ತಾರವೇ ಇಡೀ ಮನೆಗೆ ದೀಪವಾಗುತ್ತಿತ್ತು. ಆ ಬೆಳಕಿನಲ್ಲಿ ಅಮ್ಮನ ಮಂದಹಾಸಮಯ ಮುಖದಲ್ಲಿನ ಭಕ್ತಿ, ಅಜ್ಜಿಯ ಸುಕ್ಕುಗಟ್ಟಿದ ಮುಖದಲ್ಲಿನ ಚಡಪಡಿಕೆ, ಅಪ್ಪನ ಶೇವ್ ಮಾಡದ ಮುಖದಲ್ಲಿನ ಕುತೂಹಲ ನನಗೆ ಕಾಣಿಸುತ್ತಿತ್ತು.

ಒಮ್ಮೊಮ್ಮೆ, ತೀರಾ ಒಮ್ಮೊಮ್ಮೆ, ಹೀಗೆ ಹತ್ತು ಗಂಟೆಗೆ ಹೋದ ಕರೆಂಟು ಎಷ್ಟು ಹೊತ್ತಾದರೂ ಬರುತ್ತಲೇ ಇರಲಿಲ್ಲ. ಆಗ ನಮ್ಮಲ್ಲಿ ಯಾರಾದರೂ ಒಬ್ಬರು ಲಾಟೀನು ಹಚ್ಚಲಿಕ್ಕೆ ಏಳುವುದು ಅನಿವಾರ್ಯವಾಗುತ್ತಿತ್ತು. ತಡಕಾಡಿಕೊಂಡು ಹೋಗಿ ಲಾಟೀನು ತಂದು, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಗ್ಲಾಸೇರಿಸಿ, ಬತ್ತಿಯ ಕಿಟ್ಟ ತೆಗೆದು... ಹಚ್ಚಿ ಗ್ಲಾಸು ಇಳಿಸಿದರೆ ಮನೆಯನ್ನೆಲ್ಲಾ ತುಂಬಿಕೊಳ್ಳುತ್ತಿದ್ದ ಹಳದಿ ಬೆಳಕು... ಬೆಳದಿಂಗಳ ಬೆಳ್ಳಿ ಬೆಳಕಿನೊಂದಿಗೆ ಬೆರೆಯುತ್ತಿದ್ದ ಈ ಸ್ವರ್ಣವರ್ಣದ ಬೆಳಕು ಅಮ್ಮನ ಮೂಗುತಿಯನ್ನೂ ಅಜ್ಜಿಯ ಕೈಬಳೆಯನ್ನೂ ಹೊಳೆಸುತ್ತಿತ್ತು.

ಇನ್ನು ಮಾಡಲಿಕ್ಕೇನೂ ಕೆಲಸವಿಲ್ಲ. ಎಲ್ಲಾ ಹಾಸಿಗೆ ಬಿಚ್ಚಿ ಮಲಗಿದರಾಯಿತು. ಮಲಗುವ ಮುನ್ನ ಅಮ್ಮ ಹಾಲಿಗೆ ಹೆಪ್ಪು ಹಾಕಬೇಕಿದೆ, ಅಜ್ಜಿ ಲ್ಯಾಟ್ರೀನಿಗೆ ಹೋಗಿ ಬರಬೇಕಿದೆ, ಅಪ್ಪ ಉಚ್ಚೆ ಹೊಯ್ದು ಬರಬೇಕು ಮತ್ತು ನಾನು ಅಮ್ಮ ತಂದುಕೊಟ್ಟ ಹಾಲನ್ನು ಕುಡಿಯಬೇಕು. ಆದಷ್ಟೂ ವೇಗದಲ್ಲಿ ಮಾಡುತ್ತಿದ್ದೆವು ನಾವು ಆ ಕೆಲಸಗಳನ್ನು... ಎಲ್ಲಾ ಮಾಡಿ ಮುಗಿಸಿ, ನಾನು ಪುಸ್ತಕವನ್ನೆಲ್ಲಾ ಮುಚ್ಚಿಟ್ಟು, ಇನ್ನೇನು ಮಲಗಲು ಹೊರಡಬೇಕು; ಅಷ್ಟರಲ್ಲಿ ಬರುತ್ತಿತ್ತು ಹಾಳು ಕರೆಂಟು! ಆಗ ಕರೆಂಟು ಹೋದುದಕ್ಕೆ ಬೈದುಕೊಂಡಿದ್ದ ನಾವು ಈಗ ಕರೆಂಟು ಬಂದುದಕ್ಕೆ ಶಪಿಸುತ್ತಿದ್ದೆವು ಮನಸಿನಲ್ಲೇ. ಏಕೆಂದರೆ, ಕರೆಂಟು ಬಾರದೇ ಇದ್ದರೆ ನಾವೆಲ್ಲಾ ಹಾಸಿಗೆ ಬಿಚ್ಚಿ ಹಾಯಾಗಿ ಮಲಗಿರುತ್ತಿದ್ದೆವು. ಆದರೆ ಈಗ ಕರೆಂಟು ಬಂದುಬಿಟ್ಟಿದ್ದರಿಂದ ಮತ್ತೆ ನಮ್ಮ ನಮ್ಮ 'ಕೆಲಸ'ಗಳಿಗೆ ವಾಪಸಾಗುವುದು ಅನಿವಾರ್ಯವಾಗಿತ್ತು. ಬಂದ ಕರೆಂಟನ್ನು ಮನದಲ್ಲೇ ಶಪಿಸುತ್ತಾ ಆದರೂ ಬಾಯಲ್ಲಿ 'ಅಬ್ಬ ಸಧ್ಯ! ಬಂತು!' ಎನ್ನುತ್ತಾ ಹುಸಿನಗೆಯಾಡುತ್ತಿದ್ದೆವು. ಮತ್ತೆ ಎಲ್ಲವೂ ಮುಂದುವರೆಯುತ್ತಿದ್ದವು: ಕಾದಂಬರಿ, ಧಾರಾವಾಹಿ, ಬತ್ತಿ ಹೊಸೆಯುವಿಕೆ ಮತ್ತು ಹೋಮ್‍ವರ್ಕ್!

[ನನ್ನ ಬ್ಲಾಗಿನ ಹಿಟ್ಟನ್ನು ಹತ್ತು ಸಾವಿರದ ಗಡಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ತುಂಬಾ ಪ್ರೀತಿಯ ಧನ್ಯವಾದಗಳು.]

Tuesday, June 19, 2007

ಬದುಕು ಸುಂದರವಾಗಿದೆಯೇ??

ಲಹರಿಯ ಝರಿಯಲಿ ಮಿಂದವರು ಎಂದರು:
ಬದುಕು ಸುಂದರವಾಗಿದೆ; ಎಲ್ಲಾ ನೋಡುವ ಕಣ್ಣಿನಲ್ಲಿದೆ.
ನಾನೂ ಹೌದೆಂದುಕೊಂಡುಬಿಟ್ಟೆ.
ದೃಷ್ಟಿದೋಷ ಬಂದಿರಬೇಕೆಂದುಕೊಂಡು
ಕನ್ನಡಕದಂಗಡಿಯತ್ತ ತೆರಳಿದೆ.

'ಹೂ ಕೂತಿದೆ, ಪಾಯಿಂಟು ಬಂದಿದೆ, ಅದಾಗಿದೆ, ಇದಾಗಿದೆ'
ಎಂದಿತ್ಯಾದಿ ಪಾಯಿಂಟು ಹಾಕಿದ ಅಂಗಡಿಯವ
ಸರಿಯಾಗಿ ದುಡ್ಡಿಸಕೊಂಡು, ದಪ್ಪ ಗಾಜಿನ,
ತೆಳು-ಚಂದ ಫ್ರೇಮಿನ ಮಸೂರ ತೊಡಿಸಿ
ನನ್ನನ್ನು ಕಳುಹಿಸಿದ.

ಪರಿಣಾಮವೂ ಆಯಿತು; ಆದರೆ ಉಲ್ಟಾ ಅಷ್ಟೇ!
ಇಷ್ಟು ಹೊತ್ತು ಮಂಜುಮಂಜಾಗಿ ಕಾಣುತ್ತಿದ್ದ ಚಿತ್ರಗಳೆಲ್ಲ
ಈಗ ಸ್ಪಷ್ಟವಾಗಿ ಕಾಣಿಸತೊಡಗಿದವು:

ದಾರಿಯಲೊಂದು ಭಿಕ್ಷುಕನ ಮಗು.
ಯಾರೋ ತಿನ್ನುತ್ತಿದ್ದ, ಅರ್ಧ ಮುಗಿದಿದ್ದ ಐಸ್‍ಕ್ಯಾಂಡಿಯನ್ನು
ತಾನು ಬೇಡಿ ಪಡೆದು ಚೀಪತೊಡಗಿತು.
ಚೀಪಿ ಮುಗಿಯುವ ಮೊದಲೇ,
ಐಸು ಕರಗಿ ಖಾಲಿಯಾಗುವ ಮೊದಲೇ
ಕಡ್ಡಿಯಿಂದ ಜಾರಿದ ಕ್ಯಾಂಡಿಯ ತುಂಡು
ಫುಟ್‍ಪಾತಿನ ಸಣ್ಣ ಕಿಂಡಿಯಿಂದಲೂ ತೂರಿ
ಚರಂಡಿ ಸೇರಿಬಿಟ್ಟಿತು.
ಭಿಕ್ಷುಕನ ಮಗುವಿನ ದಾಹವನ್ನೂ ತಣಿಸಲಾಗದ
ಆ ಕೆಂಪು ಐಸ್‍ಕ್ಯಾಂಡಿಯ ತುಂಡು
ಮುಂದೆ ನನ್ನ ಮನಸಿನಲ್ಲಿ ಕರಗತೊಡಗಿತು.

ಮುಂದೊಂಡು ಪ್ರತಿಭಟನೆ.
ಸುಮಾರು ಮೂವತ್ತು-ನಲವತ್ತು ಜನ ರೈತರು
ತಾವು ಬೆಳದ, ರೇಟಿಲ್ಲವಾದ ಟೊಮಾಟೋ ತಂದು
ರಸ್ತೆಯಲ್ಲಿ ಸುರಿದು ಧಿಕ್ಕಾರ ಕೂಗುತ್ತಿದ್ದರು.
ಜನರೆಲ್ಲಾ ನೋಡನೋಡುತ್ತಿದ್ದಂತೆಯೇ
ಅವರಲ್ಲೊಬ್ಬ ಒಂದು ಕ್ಯಾನು ಪೆಟ್ರೋಲನ್ನು ಮೈಗೆಲ್ಲಾ ಸುರಿದುಕೊಂಡು,
ಕಡ್ಡಿ ಗೀರಿ ಬೆಂಕಿಯಿಟ್ಟುಕೊಂಡುಬಿಟ್ಟ.
ಏನಾಗುತ್ತಿದೆಯೆಂದು ಮಂದಿಗೆ ಸರಿಯಾಗಿ ಅರ್ಥವಾಗುವ ಮೊದಲೇ
ಹೊತ್ತಿ ಉರಿಯತೊಡಗಿದ ಬೆಂಕಿಯಲ್ಲಿ ಆತ ಭೂತದಂತೆ
ತೂರಾಡುತ್ತಿರಲು, ಜನರೆಲ್ಲಾ ಹೆದರಿ ದೂರ ಸರಿದರು.
ವಿಕಾರ ಶಬ್ದ ಮಾಡುತ್ತಾ ಬಂದ ಫಯರ್ ಎಂಜಿನ್
ಬೆಂಕಿ ನಂದಿಸಿ, ತನ್ನ ಹಿಂದೆಯೇ ಬಂದ ಕುರೂಪಿ
ಆಂಬುಲೆನ್ಸಿನಲ್ಲಿ ಕಪ್ಪು-ಕೆಂಪು ಮಾಂಸದ ತುಂಡುಗಳನ್ನು
ಹೇರಿ ಕಳುಹಿಸಿತು.
ಬೆಂಕಿ ಉರಿಯುವ ಚಿತ್ರ ಮಾತ್ರ ನನ್ನ ಮನಸಿನೊಳಗೆ ಸೇರಿಕೊಂಡು
ಈಗಾಗಲೇ ಅಲ್ಲಿ ಕರಗಿದ್ದ ಐಸಿನ ನೀರನ್ನು ಕುದಿಸತೊಡಗಿತು.

ಮನೆ ಬಾಗಿಲು ಮುಟ್ಟಿದಾಗ ಸಂಜೆ ಐದು.
ನಮ್ಮ ಮನೆಯ ಓನರ್ರಿನ ಹೆಂಡತಿ ವಾಕಿಂಗಿಗೆ
ಹೋಗಲೆಂದು ಮಲಗಿದ್ದ ಗಂಡನನ್ನು ಎಬ್ಬಿಸಲು ನೋಡಿದಾಗ
'ಅವರಿನ್ನು ಏಳುವುದೇ ಇಲ್ಲ' ಎಂಬ ಸತ್ಯದ ಅರಿವಾಗಿ
ಕಿಟಾರನೆ ಕಿರುಚಿಕೊಂಡ ಸದ್ದಿಗೆ
ಮೆಟ್ಟಿಲು ಹತ್ತುತ್ತಿದ್ದ ನಾನು ಬೆಚ್ಚಿಬಿದ್ದು,
ನನ್ನ ಕನ್ನಡಕ ಜಾರಿಬಿದ್ದು, ಗಾಜು ಒಡೆದುಹೋಗಿ,
ನಾನದನ್ನು ಮೆಟ್ಟಿ, ಅಂಗಾಲಿನಿಂದ ರಕ್ತ ಒಸರತೊಡಗಿತು.

ಆ ಕೆಂಪು-ಉಪ್ಪು ರಕ್ತವನ್ನು ನನ್ನ ಮನಸಿನಲ್ಲಿ ಕುದ್ದು
ತಯಾರಾಗಿದ್ದ ಐಸಿನ ನೀರಿನೊಂದಿಗೆ ಬೆರೆಸಿ
'ರುಚಿ ನೋಡಿರೆಂದು' ಹಂಚಲು ಹೋದರೆ
ಲಹರಿಯ ಝರಿಯಲಿ ಕೊಚ್ಚಿ ಹೋದವರಾದಿಯಾಗಿ
ಯಾರೂ ನನ್ನ ಹತ್ತಿರ ಬರಲೇ ಇಲ್ಲ...!!!

Friday, June 01, 2007

ಈ ಮಳೆಯೊಳಗೆ...

ಮಳೆ ಮಳೆ ಮಳೆ ಮಳೆ ಮಳೆ... ಎಷ್ಟು ಮಳೆ..? ಹನಿ ಹನಿ ಹನಿ ಹನಿ ಹನಿ ಹನಿ... ಎಷ್ಟು ಹನಿ..? ಸುರಿ ಸುರಿ ಸುರಿ ಸುರಿ ಸುರಿ... ಅರೆ ಅರೆ, ಇದೇನಿದು ಸುರಿಯುತ್ತಲೇ ಇದೆಯಲ್ಲ? ಮಳೆಗಾಲ ಶುರುವಾಗಿ ಹೋಯಿತಾ? ಹೌದಲ್ಲಾ, ಬಿಸಿಲೇ ಇಲ್ಲ.. ರಜೆ ತೆಗೆದುಕೊಂಡಿತಾ ಹೇಗೆ? ರಸ್ತೆಯ ಮೇಲೆ ಹರಿಯುತ್ತಿರುವುದೇನದು ನದಿಯಾ? ಮನೆಯ ಸೂರಿನಿಂದ, ಕಾರಿನ ವೈಪರಿನಿಂದ, ಸ್ಕೂಟರ್‌ವಾಲಾನ ರೈನ್‍ಕೋಟಿನಿಂದ, ಅಜ್ಜನ ಛತ್ರಿಯಿಂದ, ಮರದ ಎಲೆಯಿಂದ... ಎಲ್ಲೆಲ್ಲಿಂದಿಲೂ ತೊಟ್ಟಿಕ್ಕುತ್ತಿದೆಯಲ್ಲ ಹನಿ ಹನಿ ಹನಿ ಹನಿ... ಇದ್ಯಾವ ಮೋಡದ ಮಾಯೆ? ಮುಂಗಾರು ಮಳೆಯ ಹನಿಗಳ ಲೀಲೆ?

ಒಳಗೆಲ್ಲೋ ನಾಗಂದಿಗೆಯ ಮೇಲೆ ಮಡಚಿಟ್ಟಿದ್ದ ಛತ್ರಿಯನ್ನು ನಾನು ಕೆಳಗಿಳಿಸುತ್ತೇನೆ. ಧೂಳು ಕೊಡವಿ ಅದನ್ನು ಬಿಡಿಸಿದರೆ ಮೇಲೆ ನನ್ನ ನೀಲಾಕಾಶ ಮುಚ್ಚಿಹೋಗಿದೆ. ಮೇಲೇನು ನಡೆಯುತ್ತಿದೆ? ನನಗೆ ತಿಳಿಯುತ್ತಿಲ್ಲ... ಮೇಲಿನ ಕತೆ ಹಾಳಾಯ್ತು; ಮುಂದೇನು ಎಂದು ಸಹ ಕಾಣುತ್ತಿಲ್ಲ. ಅಷ್ಟು ಜೋರು ಮಳೆ. ಮೋಡ ಕವಿದ ದಿಗಂತ. ಕೇವಲ ಹತಾಶೆಯ ಕೆಸರನ್ನಷ್ಟೇ ಎರಚುತ್ತಿರುವ ರಸ್ತೆಯ ವಾಹನಗಳು. ಏಕೆ ಹೀಗಾಯ್ತು? ನನ್ನ ಮುಂದಿನ ದಾರಿಯೇನು?

ಇವತ್ತು ನನಗೆ ಕೆಲಸಕ್ಕೆ ಹೋಗಲು ಮನಸಿಲ್ಲ. ಮನೆಯಲ್ಲೇ ಕುಳಿತಿದ್ದೇನೆ. ಏಕೆಂದರೆ, ಇವತ್ತು ಜೂನ್ ೧. ಶಾಲೆಗಳು ಶುರುವಾಗುತ್ತಿವೆ. ನನ್ನೆಲ್ಲ ಗೆಳೆಯರೂ ಪಾಟಿಚೀಲ ಬೆನ್ನಿಗೇರಿಸಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾನು ಮಾತ್ರ ಹೋಗುವಂತಿಲ್ಲ. ನನ್ನ ಏಳನೇ ತರಗತಿಯ ಪರೀಕ್ಷೆಯ ಫಲಿತಾಂಶ ಕೈಕೊಟ್ಟುಬಿಟ್ಟಿತು. ನಾನೇನು ಪರೀಕ್ಷೆಗೆ ಓದಿರಲಿಲ್ಲವೆಂದಲ್ಲ. ಚೆನ್ನಾಗಿಯೇ ಓದಿದ್ದೆ. ಆದರೆ ಪರೀಕ್ಷೆಗೆ ನಾಲ್ಕು ದಿನ ಮುಂಚೆ ಬಂದು ಒಕ್ಕರಿಸಿದ ಜ್ವರ ನನ್ನ ಭವಿಷ್ಯವನ್ನೇ ಹಾಳು ಮಾಡಿಬಿಟ್ಟಿತು. ಮೊದಲೆರಡು ಪರೀಕ್ಷೆಗಳಿಗೆ ಹೋಗಲಿಕ್ಕೇ ಆಗಲಿಲ್ಲ. ಹಾಗಂತ ನಾನು ಪರೀಕ್ಷೆಯನ್ನು ಬರೆದು ಪಾಸಾಗಿದ್ದರೂ ನನ್ನ ಅಪ್ಪ ನನ್ನನ್ನು ಮುಂದೆ ಓದಿಸುತ್ತಿದ್ದುದು ಸಂದೇಹ. ಅದಕ್ಕೇ ಅವನು ನನ್ನನ್ನು ಈ ಬೇಸಿಗೆ ರಜೆಯಲ್ಲೇ ಗ್ಯಾರೇಜಿಗೆ ಸೇರಿಸಿಬಿಟ್ಟ. ಒಂದು ವಾರದಲ್ಲಿ ಅಜ್ಜನ ಮನೆ, ಅತ್ತೆ ಮನೆ, ಎಲ್ಲಾ ಸುತ್ತಿಕೊಂಡು ಬಂದು ಆಮೇಲೆ ಗ್ಯಾರೇಜಿಗೆ ಸೇರಿದ್ದು. ಮೊದಮೊದಲು ದೊಡ್ಡ ಬೈಕಿನ ಟೈರು ಕಳಚಲು ಶಕ್ತಿಯೇ ಸಾಲುತ್ತಿರಲಿಲ್ಲ. ಈಗೀಗ ಎಲ್ಲಾ ಸಲೀಸಾಗಿದೆ. ನನ್ನ ಕೈಗಳು ತಾವೇ ತಾವಾಗಿ ಸ್ಪ್ಯಾನರಿನಿಂದ ನಟ್ಟು ಬೋಲ್ಟುಗಳನ್ನು ತಿರುಗಿಸುತ್ತವೆ. ಎರಡು ತಿಂಗಳಲ್ಲೇ ಎಲ್ಲವನ್ನೂ ಕಲಿತಿದ್ದೇನೆ.

ನನ್ನ ಕೈಗೆ ಬಳಿದಿರುವ ಮಶಿ, ಕವಿದಿರುವ ಮುಂಗಾರು ಮಳೆಯ ಮೋಡಕ್ಕಿಂತ ಕಪ್ಪಿದೆ. ಊಟ ಮಾಡುವ ಮುನ್ನ ಎಷ್ಟು ತೊಳೆದರೂ ಹೋಗುವುದಿಲ್ಲ. ಮೊದಮೊದಲು ಇದೇ ಕೈಯಲ್ಲಿ ಊಟ ಮಾಡುವುದಕ್ಕೆ ಹೇಸಿಗೆಯಾಗುತ್ತಿತ್ತು. ಗ್ರೀಸಿನ ಕಂಪಿಗೆ ವಾಂತಿ ಬಂದಂತಾಗುತ್ತಿತ್ತು. ಈಗ ಎಲ್ಲವೂ ಅಭ್ಯಾಸವಾಗಿದೆ. ಹಸಿದ ಹೊಟ್ಟೆಗೆ ತನ್ನೊಳಗೆ ಆಹಾರವನ್ನು ತುರುಕುತ್ತಿರುವ ಕೈಯ ಬಣ್ಣದ ಪರಿಚಯವೇ ಇರುವುದಿಲ್ಲ. ಹೀಗಾಗಿ, ಅದು ಏನನ್ನು ಹಾಕಿದರೂ ಜೀರ್ಣ ಮಾಡುತ್ತದೆ.

ಈಗ ಹೊರಗೆ ಮಳೆ ಸ್ವಲ್ಪ ತೆರವು ಮಾಡಿಕೊಟ್ಟಿದೆ. ಸುಮ್ಮನೇ ಮನೆಯಲ್ಲಿ ಕುಳಿತಿರಲು ಬೇಸರವಾಗಿ ನಾನು ನಮ್ಮೂರ ಪ್ರೈಮರಿ ಶಾಲೆಯತ್ತ ಹೆಜ್ಜೆ ಹಾಕುತ್ತೇನೆ. ಇಲ್ಲ, ನನಗೆ ನಮ್ಮೂರ ಮುಖ್ಯದಾರಿಯಲ್ಲಿ ಓಡಾಡುವಷ್ಟು ಧೈರ್ಯವಿಲ್ಲ. ಕಟ್ಟೆಯ ಮೇಲೆ ಕುಳಿತ ಜನ ಕೇಳುತ್ತಾರೆ: 'ಏನೋ, ಇವತ್ತು ಕೆಲಸಕ್ಕೆ ಹೋಗಿಲ್ಲವೇನೋ? ಯಾಕೋ?' ಈ ಜನಗಳ ನಿಜವಾದ ಬಣ್ಣ ಗೊತ್ತಾಗುವುದು ನಾವು ಸೋತಾಗಲೇ ನೋಡಿ. ಕಟ್ಟೆಯ ಮೇಲೆ ಕುಳುತು ಕುಳಿತೇ ಇವರ ಅಂಡು ಸವೆದಿದ್ದರೂ ರಸ್ತೆಯ ಮೇಲೆ ಹೋಗಿಬರುವ ಜನಗಳನ್ನು ಹೀಯಾಳಿಸುವುದು ಬಿಡುವುದಿಲ್ಲ. ಅವರಿಗೆ ಅದರಲ್ಲೇ ಮನಸ್ಸಂತೋಷ. ಯಾರ್‍ಯಾರ ಮನೆಯಲ್ಲಿ ಏನೇನಾಯಿತು? ಯಾರ ಮನೆಯ ಹೆಣ್ಣು ಮಗಳು ತೌರಿಗೆ ವಾಪಸು ಬಂದಳು? ಯಾರ ಮನೆಯಲ್ಲಿ ಹಿಸೆ ಪಂಚಾಯಿತಿ? ಅತ್ತೆ-ಸೊಸೆ ಜಗಳ? ಇಸ್ಪೀಟಿನಲ್ಲಿ ಸೋತು ಪಾಪರ್ ಆದ್ನಂತೆ ಅವ್ನು ಹೌದಾ? ಛೇ! ಇವರಿಗೆ ತಮ್ಮ ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟೋವ್ ತುಕ್ಕು ಹಿಡಿದಿದ್ದರೂ ಪರವಾಗಿಲ್ಲ; ಬೇರೆಯವರ ಮನೆಯ ಪಾತ್ರೆ ಕಂದಿದರೂ ಅದು ಹಾಸ್ಯಕ್ಕೆ ವಸ್ತು. ನನಗೆ ಇಂಥವರ ಪ್ರಶ್ನೆಗಳಿಗೆ ಆಹಾರವಾಗಲಿಕ್ಕೆ ಇಷ್ಟವಿಲ್ಲ. ಅದಕ್ಕೇ ನಾನು ಹಿತ್ತಿಲ ದಾರಿ ಹಿಡಿದು, ಬೇಲಿ ಹಾರುತ್ತಾ ಶಾಲೆಯ ಹಿಂಭಾಗವನ್ನು ಸೇರುತ್ತೇನೆ.

ಈಗ ತಾನೇ ಮೇಷ್ಟ್ರು ಬಂದಿದ್ದಾರೆ. ಹುಡುಗನೊಬ್ಬನನ್ನು ಕರೆದು ಬೆಲ್ ಹೊಡೆಸಿದ್ದಾರೆ. ಟಿಣ್ ಟಿಣ್ ಟಿಣ್ ಟಿಣ್ ಟಿಣ್... ಮಕ್ಕಳೆಲ್ಲಾ ಹೊರಗೆ ಬಂದು ಕಟ್ಟೆಯ ಮೇಲೆ ಸಾಲಾಗಿ 'ಹೈಟ್ ಪ್ರಕಾರ' ನಿಂತಿದ್ದಾರೆ. 'ಸಾವಧಾನ್! ನಾಡಗೀತೆ ಶುರೂಕರ್!' ಈಗ ಪ್ರಾರ್ಥನೆ ಪ್ರಾರಂಭವಾಗಿದೆ... 'ಜೈ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ.. ಜೈ ಸುಂದರ ನದಿವನಗಳ ನಾಡೇ.. ಜಯಹೇ...' ಶಾಲೆಯ ಹಿಂದಿನ ಬೇಲಿಯ ಮರೆಯಲ್ಲಿ ನಿಂತ ನಾನೂ ಇಲ್ಲೇ ನೇರವಾಗಿ ನಿಂತು ಸಣ್ಣಗೆ ನಾಡಗೀತೆಯನ್ನು ಗುನುಗುತ್ತೇನೆ.. 'ಭೂದೇವಿಯ ಮಕುಟದ ನವಮಣಿಯೇ...' ಸಾಲಿನಲ್ಲಿ ನಿಂತ ಹುಡುಗರಲ್ಲಿ ಇನ್ನೂ ರಜೆಯ ತೂಕಡಿಕೆ ಇದೆ. ಅಗೋ, ಮೂರನೇ ಸಾಲಿನ ನಾಲ್ಕನೇ ಹುಡುಗ ಶಶಾಂಕ ಆಕಳಿಸುತ್ತಿದ್ದಾನೆ.. ನನಗೆ ನಗು ಬರುತ್ತಿದೆ.. ಈ ವರ್ಷ ಹೊಸದಾಗಿ ಒಂದನೇ ಕ್ಲಾಸಿಗೆ ಸೇರಿದ ಮಕ್ಕಳಿಗೆ ಪ್ರಾರ್ಥನೆ ಸರಿಯಾಗಿ ಬರುವುದಿಲ್ಲ. ಅವರು ಅಕ್ಕಪಕ್ಕದವರ ಬಾಯಿ ನೋಡುತ್ತಿದ್ದಾರೆ. ಮೇಷ್ಟ್ರು ಕಣ್ಣಲ್ಲೇ 'ನೀವೂ ಹಾಡಿ' ಎನ್ನುತ್ತಿದ್ದಾರೆ. ಕೆಲ ಮಕ್ಕಳು ಸುಮ್ಮನೇ ಬಾಯಿ ಪಿಟಿಗುಡುಸಿತ್ತಿದ್ದಾರೆ. ಎದಿರುಗಡೆ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿದ್ದಾಳೆ ಕಲ್ಪನ.. ಹೊರಡುವುದು ತಡವಾದ್ದರಿಂದ ತನ್ನ ಜೊತೆ ಅಪ್ಪನನ್ನೂ ಕರೆದುಕೊಂಡು ಬಂದಿರುವ ನಟರಾಜ ಆಗಲೇ ಶುರುವಾಗಿರುವ ಪ್ರಾರ್ಥನೆಯಲ್ಲಿ ಸೇರಿಕೊಳ್ಳುವುದೋ ಬಿಡುವುದೋ ಅರ್ಥವಾಗದೇ ಹಾಗೇ ದೂರದಲ್ಲಿ ನಿಂತಿದ್ದಾನೆ... ಪ್ರಾರ್ಥನೆ ಮುಗಿಯುತ್ತಿದೆ: '...ಕನ್ನಡ ತಾಯಿಯ ಮಕ್ಕಳ ಗೇಹ'.. ಕೊನೆಯಲ್ಲಿ ಎಲ್ಲರೂ 'ಜೈಹಿಂದ್' ಹೇಳಿ ಶಾಲೆಯ ಒಳನಡೆದಿದ್ದಾರೆ. ಈಗ ಆಗಸದಲ್ಲಿ ಮತ್ತೆ ಮಳೆಮೋಡಗಳು ಒಟ್ಟಾಗುತ್ತಿವೆ... ನಾನು ಕೈಯಲ್ಲಿರುವ ಛತ್ರಿಯ ಬಟ್ಟೆಯನ್ನೊಮ್ಮೆ ಸವರುತ್ತೇನೆ... ನನ್ನ ಮೆಡ್ಲಿಸ್ಕೂಲಿನ ದಿನಗಳ ನೆನಪಿಗೆ ಜಾರುತ್ತೇನೆ...

ನಾನು ನಾಲ್ಕನೇ ಕ್ಲಾಸು ಮುಗಿಸಿದ ಮೇಲೆ ಮುಂದೆ ಯಾವ ಶಾಲೆ ಎಂಬ ಗೊಂದಲವೇ ಇರಲಿಲ್ಲ ನಮ್ಮ ಮನೆಯಲ್ಲಿ. ಸೀದಾ ಹೋಗಿ ಉಳವಿಯ ಸರ್ಕಾರೀ ಶಾಲೆಗೆ ಸೇರಿಸಿದ್ದು ಅಪ್ಪ. ಸ್ವಲ್ಪ ಭಯವಿತ್ತು: ಹೊಸ ಶಾಲೆ, ಹೊಸ ಮೇಷ್ಟ್ರುಗಳು, ಹೊಸ ಗೆಳೆಯರು... ಈ ವರ್ಷದಿಂದ ಇಂಗ್ಲೀಷು ಬೇರೆ ಕಲಿಯಬೇಕಲ್ಲಪ್ಪಾ ಅಂತ.. ಒಂದು ತಿಂಗಳಲ್ಲಿ ಹೊಂದಿಕೊಂಡೆ. ಗೆಳೆಯರೆಲ್ಲರೂ ಒಳ್ಳೆಯವರಿದ್ದರು. ಒಳ್ಳೆಯವರು ಎಂದರೇನು? ನನ್ನಷ್ಟೇ ದಡ್ಡರೂ ನನ್ನಷ್ಟೇ ಬುದ್ಧಿವಂತರೂ ಆಗಿದ್ದರು ಅಂತ! ನಮಗಿಂತ ದಡ್ಡರು ನಮ್ಮ ಜೊತೆ ಸೇರುವುದೇ ಇಲ್ಲ; ನಮಗಿಂತ ಬುದ್ಧಿವಂತರು ನಮ್ಮನ್ನು ಸೇರಿಸಿಕೊಳ್ಳಲಿಕ್ಕೇ ಹಿಂಜರಿಯುತ್ತಾರೆ.. ಇಲ್ಲಿ ಹಾಗಿರಲಿಲ್ಲ. ಟೆಸ್ಟಿನಲ್ಲಿ ಒಬ್ಬರಿಗೊಬ್ಬರು ತೋರಿಸಿಕೊಂಡು, ಸನ್ನೆ-ಗಿನ್ನೆ ಮಾಡಿಕೊಂಡು, ಕಾಪಿಚೀಟಿ ವರ್ಗಾಯಿಸಿಕೊಂಡು ನಾವು ಅನ್ಯೋನ್ಯವಾಗಿದ್ದೆವು.

ಊರಿನಿಂದ ಎರಡು ಮೈಲು ನಡೆದೇ ಹೋಗುತ್ತಿದ್ದುದು ನಾನು. ನನ್ನ ಜೊತೆ ಅಣ್ಣಪ್ಪ, ಭೈರಪ್ಪ, ಗಿರೀಶ ಇತ್ಯಾದಿ ಗೆಳೆಯರು ಇರುತ್ತಿದ್ದರು. ಹೊರಬೈಲು ಬೋರ್ಡ್‍ಗಲ್ಲಿನಲ್ಲಿ ನಾಗಶ್ರೀ, ಹಾಲಮ್ಮರೂ ಸೇರಿಕೊಳ್ಳುತ್ತಿದ್ದರು. ಸುರಿಯುವ ಮಳೆಯಲ್ಲಿ ಛತ್ರಿ ಹಿಡಿದ ನಾವು ಒಬ್ಬರಿಗೊಬ್ಬರು ನೀರು ಹಾರಿಸಿಕೊಳ್ಳುತ್ತಾ, ರಸ್ತೆ ಪಕ್ಕದ ಬುಕ್ಕೆ ಮಟ್ಟಿಗಳನ್ನು ಶೋಧಿಸುತ್ತಾ, ಸಿಕ್ಕ ಕಲ್ಲುಗಳನ್ನು ಲೈಟುಕಂಬಗಳಿಗೆ ಎಸೆಯುತ್ತಾ ಸಾಗುತ್ತಿದ್ದೆವು. ಎದುರಿಗೆ ಬಂದ ಮಲ್ಲಿಕಾರ್ಜುನ ಬಸ್ಸಿನ ಡ್ರೈವರ್ರಿಗೆ ಕೈ ಮಾಡುತ್ತಿದ್ದೆವು. ಅದಕ್ಕೆ ಪ್ರತಿಯಾಗಿ ಡ್ರೈವರು ಹಾರನ್ನು ಮಾಡಿದರೆ ನಮಗೆ ಖುಷಿಯಾಗುತ್ತಿತ್ತು. ಏನೇನೋ ಮಾತು ಏನೇನೋ ಮಾತು... ದಾರಿ ಖರ್ಚಿಗೆ ಇಂಥದ್ದೇ ಬೇಕೆಂದೇನಿಲ್ಲವಲ್ಲ? ಮಾತಾಡುತ್ತಿದ್ದರೆ ಶಾಲೆ ಬೇಗ ಬರುತ್ತದೆ ಅಷ್ಟೆ.

ಶಾಲೆಯಲ್ಲಿ ಛತ್ರಿ ನೇತುಹಾಕಲಿಕ್ಕೆಂದೇ ಹೊರಗಡೆ ಒಂದು ಊದ್ದ ದಬ್ಬೆಯನ್ನು ಹೊಡೆದಿದ್ದರು. ನಾವೆಲ್ಲಾ ನಮ್ಮ ಛತ್ರಿಯನ್ನು ಮಡಚಿ, ಕೊಡವಿ ಅದಕ್ಕೇ ನೇತುಹಾಕುತ್ತಿದ್ದುದು. ಮೇಷ್ಟ್ರುಗಳೂ ತಮ್ಮ ಛತ್ರಿಯನ್ನು ಇಲ್ಲೇ ಇಡುತ್ತಿದ್ದುದು. ನಮ್ಮ ಕನ್ನಡ ಮೇಷ್ಟ್ರ ಉದ್ದ ಕೋಲಿನ ಛತ್ರಿ ಮಾತ್ರ ಯಾವಾಗಲೂ ನ್ಯಾಲೆಯ ಮೊದಲನೆಯದಾಗಿರುತ್ತಿತ್ತು. ನಮ್ಮ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಇತ್ತು. ಒಂದನೇ ತರಗತಿಗೆ ಪಾಠ ಮಾಡಲು ಬರುತ್ತಿದ್ದುದು ಒಬ್ಬ ಮೇಡಂ. ಅನಿತಾ ಮೇಡಂ ಅಂತ. ಅವರು ಮಾತ್ರ ತಮ್ಮ ಛತ್ರಿಯನ್ನು ಇಲ್ಲಿ ನೇತುಹಾಕುತ್ತಿರಲಿಲ್ಲ. ಅವರ ಛತ್ರಿಗೆ ಮೂರು ಫೋಲ್ಡುಗಳು! ಅದನ್ನು ಅವರು ಒದ್ದೆಯಿದ್ದರೂ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದುದು. ಅದೆಷ್ಟು ಒಳ್ಳೇ ಮೇಡಂ ಅಂತೀರಾ ಅವರು? ಒಮ್ಮೆ ನಾವು ಐದನೇ ತರಗತಿಯ ಹುಡುಗರಿಗೆ ಅವರು ಕ್ಲಾಸು ತೆಗೆದುಕೊಂಡಿದ್ದರು. ಪಾಠ ಇಲ್ಲವೇ ಇಲ್ಲ! ಬರೀ ಹಾಡು, ಕಥೆ, ಆಟ... ಏನೇನೋ ಆಡಿಸಿದ್ದು... ಅವರ ಕಂಠ ಎಷ್ಟು ಚೆನ್ನಾಗಿದೆ ಅಂತೀರಾ? ನನ್ನ ಅಮ್ಮನನ್ನು ಬಿಟ್ಟರೆ ಅಷ್ಟು ಚಂದ ಹಾಡುವವರು ಅನಿತಾ ಮೇಡಮ್ಮೇ ಸರಿ ಅಂತ ನಾನು ತೀರ್ಮಾನಿಸಿದ್ದೆ.

ಈಗ ಮಳೆಹನಿ ಬೀಳತೊಡಗಿದೆ... ಜೋರಾಗುತ್ತಿದೆ... ಶಾಲೆಯಿಂದ ಬರುತ್ತಿರುವ 'ಎರಡೊಂದ್ಲೆ ಎರಡು, ಎರಡೆರಡ್ಲೆ ನಾಕು, ಎರಡ್ಮೂರ್ಲೆ ಆರು..' ಮಗ್ಗಿಯ ಪ್ರಾಕ್ಟೀಸ್, ಮಳೆಯ ಹಾಡಿನೊಂದಿಗೆ ಬೆರೆಯುತ್ತಿದೆ... 'ಇನ್ನೂ ಜೋರಾಗಿ ಹೇಳ್ರೋ' ಮೇಷ್ಟ್ರು ಕೂಗಿದ್ದು ಕೇಳಿಸುತ್ತಿದೆ... ಛತ್ರಿ ಅಗಲಿಸಿ ನಿಂತಿರುವ ನಾನು ನಿಧಾನಕ್ಕೆ ಮನೆಯತ್ತ ವಾಪಸು ಹೆಜ್ಜೆ ಹಾಕುತ್ತೇನೆ...

ಮೆಡ್ಲಿಸ್ಕೂಲಿನ ದಿನಗಳು ತುಂಬಾ ಚೆನ್ನಾಗಿದ್ದವು. ಐದು-ಆರನೇ ಕ್ಲಾಸಿನ ಪರೀಕ್ಷೆಗಳನ್ನು ಪಾಸು ಮಾಡುವುದು ನಮಗೆ ತಲೆನೋವೇ ಆಗಲಿಲ್ಲ. ಪ್ರಶ್ನೆಪತ್ರಿಕೆಗಳು ಬಹಳ ಸುಲಭ ಇದ್ದವು. ಆರನೇ ಕ್ಲಾಸಿನಲ್ಲಿ ಕನ್ನಡ ಮತ್ತು ಸಮಾಜ ವಿಷಯಗಳಲ್ಲಿ ನನಗೇ ಹೈಯೆಸ್ಟ್ ಮಾರ್ಕ್ಸ್! ನನಗೆ ಅವು ಇಷ್ಟದ ವಿಷಯಗಳಾಗಿದ್ದವು. ಮತ್ತೇನಪ್ಪ ಅಂದ್ರೆ, ಕನ್ನಡ ಮತ್ತು ಸಮಾಜ -ಎರಡೂ ವಿಷಯಕ್ಕೆ ಪಾಠಕ್ಕೆ ಬರುತ್ತಿದ್ದವರು ಶಂಕ್ರಪ್ಪ ಮೇಷ್ಟ್ರು. ಎಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ನನಗೆ ಮನೆಗೆ ಹೋಗಿ ಓದುವ ಪ್ರಮೇಯವೇ ಬರುತ್ತಿರಲಿಲ್ಲ. ಅವರಿಗೂ ನನ್ನನ್ನು ಕಂಡರೆ ಏನೋ ಅಕ್ಕರೆ. 'ಬಡವರ ಮನೆ ಹುಡುಗ... ನೀನು ಓದಿ ಹೆಸರು ಮಾಡಬೇಕು... ಎಷ್ಟು ಖರ್ಚಾದರೂ ಸರಿ, ನಿನ್ನ ಅಪ್ಪನಿಗೆ ಓದಿಸಲಿಕ್ಕೆ ನಾನು ಹೇಳುತ್ತೇನೆ...' ಎಂದಿದ್ದರು. ನಮ್ಮ ಆರನೇ ಕ್ಲಾಸು ಮುಗಿಯುವಷ್ಟರಲ್ಲಿ ವರ್ಗವಾಗಿ ಹೋದರು. ಈಗ ಎಲ್ಲಿದ್ದಾರೋ? ಇಲ್ಲೇ ಇದ್ದಿದ್ದರೆ ನಾನು ಮತ್ತೊಮ್ಮೆ ಏಳನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿ, ಪಾಸು ಮಾಡಿಕೊಂಡು, ಹೈಸ್ಕೂಲಿಗೆ...... ಹುಂ! ಎಲ್ಲಾ ಭ್ರಮೆಯಷ್ಟೆ.

ಹಿತ್ತಿಲ ಹಾದಿಯಲ್ಲಿ ನಡೆಯುವಾಗ ಎಲ್ಲಾ ನೆನಪಾಗುತ್ತದೆ... ಈ ಮಳೆಯೇ ಹಾಗೆ: ಮಧುರ ಸ್ಮೃತಿಗಳನ್ನು ಸುರಿಸುತ್ತದೆ... ಏನೇನೋ ಭಾವನೆಗಳನ್ನು ಸ್ಪುರಿಸುತ್ತದೆ... ಹೊಸ ಸ್ವಪ್ನಲೋಕದ ತೆರೆಯನ್ನು ಸರಿಸುತ್ತದೆ... ನನ್ನನ್ನು ಹೊಸ ಕನಸುಗಳು ಆವರಿಸುತ್ತವೆ: ಇದೇ ಗ್ಯಾರೇಜಿನಲ್ಲಿ ನಾಳೆಯಿಂದ ಇನ್ನೂ ಜಾಸ್ತಿ ಕೆಲಸ ಮಾಡಿ, ಎಲ್ಲವನ್ನೂ ಕಲಿತು, ಮುಂದೊಂದು ದಿನ ನಾನೇ ಗ್ಯಾರೇಜು ತೆರೆಯುತ್ತೇನೆ.. ದುಡ್ಡು ಮಾಡುತ್ತೇನೆ.. ಊರ ಜನರೆದುರು ತಲೆಯಿತ್ತಿ ನಿಲ್ಲುತ್ತೇನೆ.. ಶಾಲೆ ಬಿಡಿಸಿದ ಅಪ್ಪನಿಗೇ ಅಚ್ಚರಿಯಾಗುವಂತೆ ಬೆಳೆದು ನಿಲ್ಲುತ್ತೇನೆ...

ಮನೆ ಸಮೀಪಿಸುತ್ತಿದೆ. ಅಮ್ಮ ಒಲೆಯ ಬುಡದಲ್ಲಿ ಕುಳಿತು ಇವತ್ತು ಮನೆಯಲ್ಲೇ ಇರುವ ಮಗನಿಗಾಗಿ ಹಪ್ಪಳ ಕರಿಯುತ್ತಿದ್ದಾಳೆ. ಈ ಮಳೆಯ ಜೊತೆ ಹಲಸಿನ ಕಾಯಿ ಹಪ್ಪಳ, ಅದರಲ್ಲೂ ನನ್ನಲ್ಲಿ ಸದಾ ಹೊಸ ಸ್ಪೂರ್ತಿ ತುಂಬುವ ಅಮ್ಮ ಕರಿದುಕೊಟ್ಟ ಹಪ್ಪಳ.. ಆಹ್! ಅದರ ರುಚಿಯೇ ರುಚಿ! ಛತ್ರಿಯನ್ನು ಕಟ್ಟೆಯ ಬದಿಯಲ್ಲಿ ಸಾಚಿ, ಸೂರಿನ ಒಗದಿಯಿಂದ ಬೀಳುತ್ತಿರುವ ನೀರಿಗೆ ನನ್ನ ಕಪ್ಪು ಬಳಿದ ಕೈಯೊಡ್ಡುತ್ತೇನೆ. ಬೊಗಸೆ ತುಂಬಾ ಶುದ್ದ, ಬಣ್ಣರಹಿತ, ಅಹಂಕಾರರಹಿತ, ಸ್ವಾಧಭರಿತ, ಭಾವಸಹಿತ ನೀರು ತುಂಬಿಕೊಳ್ಳುತ್ತದೆ... ನಾನು ಆ ನೀರಿನಲ್ಲಿ ನನ್ನ ಮುಖವನ್ನೇ ನೋಡಿಕೊಳ್ಳುತ್ತೇನೆ... ಹಿಂದಿನಿಂದ ಬಂದ ಅಮ್ಮ 'ಒಳಗಡೆ ಕನ್ನಡಿ ಇದೆ ಬಾ... ಹಪ್ಪಳ ತಿಂತಾ ನೋಡ್ತಾ ಕೂರುವಂತೆ..!' ಎಂದು ನಗುತ್ತಾಳೆ. ನಾನೂ ನಗುತ್ತಾ ಅಮ್ಮನ ಜೊತೆ ಒಳನಡೆಯುತ್ತೇನೆ.

ಸುರಿ ಸುರಿ ಸುರಿ ಸುರಿ ಸುರಿ ಮಳೆ... ಗರಿ ಗರಿ ಗರಿ ಗರಿ ಗರಿ ಹಪ್ಪಳ...