ಹೇ ಕಳ್ಳಾ...!
ಕಳ್ಳ ಅನ್ನದೇ ಮತ್ತೇನೋ ಅನ್ಲಿ? ಹೇಳ್ದೇ ಕೇಳ್ದೆ ಮೊದಲ ನೋಟದಲ್ಲೇ ನನ್ನ ಹೃದಯಕ್ಕೆ ಲಗ್ಗೆಯಿಟ್ಟೆ. ಗೊತ್ತೇ ಇಲ್ಲದಿದ್ದ ಹೊಸ ಹೊಸ ಭಾವಗಳ ಅಲೆ ಎಬ್ಬಿಸಿದೆ. ಆಸೆಗಳ ಕೆರಳಿಸಿದೆ. ನನ್ನ ಹೃದಯವನ್ನೇ ಕದ್ದೆ. ಈಗ ನೋಡು, ನೂರಾರು ಮೈಲಿ ದೂರದಲ್ಲಿದ್ದರೂ ನನ್ನ ಮನಸಿನ ಮೂಲೆಯಲ್ಲೆಲ್ಲೋ ಅವಿತು ಕುಳಿತೇ ಇದ್ದೀಯ. ನಿನ್ನನ್ನ ಸುಮ್ನೆ ಬಿಡಲ್ಲ ಕಣೋ, ಮದ್ವೆ ಮದುವೆ ಆಗ್ಬಿಡ್ತೀನಿ!
ಮೊನ್ನೆ ಬಸವನಗುಡಿಯಲ್ಲಿ ಒಂದು ಪ್ರೋಗ್ರಾಂ ಇತ್ತು. ನನ್ನಿಷ್ಟದ ಪ್ರೇಮಕವಿ ಕೆ.ಎಸ್.ನ.ಗೆ ಕವನ ನಮನ ಕಾರ್ಯಕ್ರಮ. ಜೊತೆಗೆ ಡಾ| ರಾಜ್‍ಕುಮಾರ್ ನೆನಪು. ನಾನು ಹೋಗೋಷ್ಟರಲ್ಲಿ ಅಪರ್ಣಾ ಮೈಕ್ ಹಿಡಿದು ನಿರೂಪಣೆ ಶುರು ಮಾಡಿಬಿಟ್ಟಿದ್ಲು. ರಾಜ್‍ರ ಫೋಟೋಗೆ ಹೂವು ಹಾಕೋದರ ಮೂಲಕ ಕಾರ್ಯಕ್ರಮವನ್ನ ಮೂಡಲಮನೆ ಕೆ.ಎಸ್.ಎಲ್. ಸ್ವಾಮಿ ಉದ್ಘಾಟನೆ ಮಾಡಿದ್ರು. ರಾಷ್ಟ್ರಕವಿ ಜಿ.ಎಸ್.ಎಸ್. ಮೆಲುದನಿಯಲ್ಲಿ ಪ್ರೇಮಕವಿಯ ಕವನವೊಂದನ್ನು ಓದಿದರು. ಆಮೇಲೆ ಒಬ್ಬೊಬ್ರಾಗಿ ಕವನ ಓದಿದ್ದು. ಮುಖ್ಯಮಂತ್ರಿ ಚಂದ್ರು, ಬಿಆರೆಲ್, ಮಾಸ್ಟರ್ ಕಿಶನ್ (ನೀನು ಚಿಕ್ಕವ್ನಿದ್ದಾಗ ಅವ್ನಂಗೆ ಇದ್ದೆ ಕಣೋ, ಈಗ ನೆನಪಾಗ್ತಿದೆ), ನಾಗಾಭರಣ, ಡಾ. ಪೂರ್ಣಿಮಾ.... ಇನ್ನೂ ಯಾರ್‍ಯಾರೋ.. ರವಿ ಬೆಳಗೆರೆ ಒಂದಷ್ಟು ಡೈಲಾಗ್ ಹೊಡ್ದು ಚಪ್ಪಾಳೆ ಗಿಟ್ಟಿಸಿದ.. ಮತ್ತೇನು ಗೊತ್ತಾ? ಕೆ.ಎಸ್.ನ. ಅಜ್ಜನ ಹೆಂಡತಿ ವೆಂಕಮ್ಮ ಅವ್ರೂ ಬಂದಿದ್ರು ಪ್ರೋಗ್ರಾಮಿಗೆ. ನಂಗೆ ಅವ್ರುನ್ನ ನೋಡಿದಾಗಲೆಲ್ಲ ಕಲ್ಪನಾಲೋಕದಲ್ಲಿ ವಯಸ್ಸಾದ ನನ್ನ ಚಿತ್ರ, ಪಕ್ಕದಲ್ಲಿ ಹಣ್‍ಹಣ್ಣು ಮುದುಕ ನಿನ್ನ ಚಿತ್ರ ತೇಲಿಬರುತ್ತೆ.. ಆಮೇಲೆ ಸಿ. ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಶಂಕರ್ ಶಾನ್‍ಭಾಗ್, ಅಜಯ್ ವಾರಿಯಾರ್ ಎಲ್ರಿಂದ ಹಾಡೂ ಹಾಡು! ಪ್ರೇಮಗೀತೆಯ ಗುಂಗಿನಲ್ಲಿ ನಾನು ಮುಳುಗಿ ಹೋಗಿದ್ದೆ... ಕುಂತಲ್ಲೇ ಕನಸತೊಡಗಿದ್ದೆ. ಕನಸಿನೊಳಗೊಂದು ಕನಸು. ಆ ಒಂದಿರುಳ ಕನಸಿನಲಿ ನಾನೇ ನಿನ್ನನ್ನ ಕೇಳ್ತಾ ಇದ್ದೆ: ನಮ್ಮೂರು ಚಂದವೋ ನಿಮ್ಮೂರು ಚಂದವೋ ಹೇಳೋ ಹಳ್ಳಿಮುಕ್ಕಾ ಅಂತ.. ಉತ್ತರವನ್ನೇ ಕೊಡದೆ ನೀನು ಗೇರು ಮರ ಹತ್ತಿ ನನಗಾಗಿ ಹಣ್ಣುದುರಿಸುತ್ತಿದ್ದೆ..
ಹಾಗೇ ಕನಸು ಕಾಣುತ್ತಾ ಕಹಳೆ ಬಂಡೆಯ ಮೇಲೆ ಕುಳಿತಿದ್ದುಬಿಡುತ್ತಿದ್ದೆನೇನೋ? ನಿನ್ನ ನೆನಪಿನ ಮಳೆಯಲ್ಲಿ ತೋಯುತ್ತಾ? ಆದರೆ ಅಷ್ಟರಲ್ಲಿ ನಿಜವಾದ ಮಳೆ ಶುರುವಾಗಿಬಿಟ್ಟಿತು. ಮಳೆಯ ಮೇಲೆ ಮಳೆ. ಹಾಡುವವರೆಲ್ಲಾ ದಿಕ್ಕಾಪಾಲು. ಆಮೇಲೆಲ್ಲಾ ಮಳೆಯ ಹಾಡು. ಮಣ್ಣ ವಾಸನೆ. ನೆನೆಯುವ ನನ್ನ ಹುಚ್ಚು. ಆ ಕಹಳೆ ಬಂಡೆ ಪಾರ್ಕ್ ಇದೆಯಲ್ಲಾ? ಅಲ್ಲಿ ಸಂಜೆ ಹೊತ್ತಿಗೆ ನೀನೊಮ್ಮೆ ಹೋಗಿ ನೋಡ್ಬೇಕು: ಅದೆಷ್ಟು ಹಕ್ಕಿಗಳಿವೆ ಮಾರಾಯ ಅಲ್ಲಿ...! ನಾನು ಹೋದಾಗ ಅದಿನ್ಯಾವಥರ ಚಿಲಿಪಿಲಿಚಿಲಿಪಿಲಿ ಅಂತ ಕಲರವ ಮಾಡ್ತಿದ್ವು ಅಂತೀಯಾ? ಬೆಂಗಳೂರಿನಲ್ಲೂ ಇಂಥದ್ದೊಂದು ಜಾಗ ಇದೆಯಲ್ಲಪ್ಪಾ ಅಂತ ನಂಗೆ ಆಶ್ಚರ್ಯ.. ಆದ್ರೆ ವಾಪಸು ಹೋಗುವಾಗ ಸ್ವಲ್ಪಾನೂ ಶಬ್ದ ಕೇಳಿಸ್ತಿರಲಿಲ್ಲ.. ಆ ಪರಿಯ ಮಳೆ ಬಂದಿತ್ತಲ್ಲ? ಏನಾದ್ವೋ ಏನೋ ಅಂತ ನಂಗೆ ಕಳವಳ.. ಮಳೆಯಲ್ಲಿ ನೆಂದು ಮರಿಹಕ್ಕಿಗಳಿಗೆ ಜ್ವರ-ಗಿರ ಬಂತೋ ಏನೋ? ಮನೆ ಮುಟ್ಟುವವರೆಗೂ ಅದನ್ನೇ ಯೋಚಿಸುತ್ತಿದ್ದೆ..
ನನಗೆ ಹೀಗೆ ಪ್ರಕೃತಿಯ ಬಗ್ಗೆ, ಹಕ್ಕಿಗಳ ಬಗ್ಗೆ, ಹೂವುಗಳ ಬಗ್ಗೆ, ಹಣ್ಣುಗಳ ಬಗ್ಗೆ ಆಸಕ್ತಿ ಕೆರಳುವಂತೆ ಮಾಡಿದ್ದೇ ನೀನು. ಆಗಿನ್ನೂ ನಾನು ಊರಲ್ಲಿದ್ದೆ. ಒಂಭತ್ತನೇ ತರಗತಿಯ ಪರೀಕ್ಷೆಗಳು ಮುಗಿದು, ರಿಸಲ್ಟ್ ಬಂದು, ನಾನು ಪೂರ್ತಿ ನೈಂಟಿಸಿಕ್ಸ್ ಪರ್‍ಸೆಂಟ್ ತಗೊಂಡು ಪಾಸಾಗಿ, ಖುಷಿಗೆ ಅಮ್ಮ ಮಾಡಿದ್ದ ಕೊಬ್ರಿ ಮಿಠಾಯಿ ಪ್ಯಾಕ್ ಮಾಡ್ಕೊಂಡು ಸೀದಾ ಅಜ್ಜನ ಮನೆಗೆ ಬಂದಿದ್ದೆ. ಪ್ರತಿ ಬೇಸಿಗೆ ರಜೆಯನ್ನೂ ಹೆಚ್ಚುಪಾಲು ನಾನು ಕಳೆಯುತ್ತಿದ್ದುದು ಅಜ್ಜನ ಮನೆಯಲ್ಲೇ. ಯಾಕೇಂದ್ರೆ ಅಲ್ಲಿ ನನಗೆ ಆಡಲಿಕ್ಕೆ ಮಾವನ ಮಗಳು ಪಲ್ಲವಿ ಇದ್ಲು. ಅಲ್ದೇ ಮನೇಲಿದ್ರೆ ಅದೂ ಇದೂ ಅಮ್ಮಂಗೆ ಕೆಲ್ಸ ಮಾಡಿಕೊಡ್ತಾ, 'ಹೋಮ್‍ವರ್ಕ್ ಮಾಡ್ಕೊಳೇ' ಅನ್ನೋ ಬೆದರಿಕೆಯನ್ನ ದಿನಕ್ಕೆ ನಾಲ್ಕು ಸಲ ಕೇಳಿಸಿಕೊಳ್ತಾ ಇರಬೇಕು. ಅಜ್ಜನ ಮನೇಲಾದ್ರೆ ಹಾಗಲ್ಲ. ಒಂದು ಏರ್‌ಬ್ಯಾಗ್ ತುಂಬಾ ಬಟ್ಟೆ ತುಂಬ್ಕೊಂಡು ಬಂದುಬಿಟ್ರೆ ಮುಗೀತು. ನಾನೂ ಪಲ್ಲವಿ ಗಲಾಟೆಯ ಸಾಮ್ರಾಜ್ಯವನ್ನೇ ಸ್ಥಾಪಿಸಿಬಿಡುತ್ತಿದ್ದೆವು. ಆಟ ಆಟ ಆಟ! ಆಮೇಲೇ, ಅಜ್ಜನ ಮನೇಲಿ ಸಿಗೋಷ್ಟು ಹಣ್ಣುಗಳು, ತಿರುಗಾಡೋಕೆ ಗದ್ದೆ, ತೋಟ, ಗುಡ್ಡಗಳು ನಮ್ಮೂರಲ್ಲಿ ಇಲ್ವೇ ಇಲ್ಲ. ನಾವು ಬೇಸಿಗೆ ರಜೆಯ ಆ ಎರಡು ತಿಂಗಳು ಪೂರ್ತಿ ಕಾಡು ಸುತ್‍ತಾ ಇದ್ದುಬಿಡ್ತಿದ್ವಿ. ಕಚಗಟ್ಟೆ ಪೇರಲೇಕಾಯಿಯಲ್ಲೂ ಪರಮ ರುಚಿ!
ಆ ವರ್ಷದ ರಜೆಯಲ್ಲಿ ನೀನು ಸಿಕ್ಕಿದೆ. ಅಜ್ಜನ ಮನೆ ಪಕ್ಕದ ಮನೆ ಗಣಪತಣ್ಣನಿಗೆ ಮಗನೊಬ್ಬನಿದ್ದಾನೆ, ದಾವಣಗೆರೆಯಲ್ಲಿ ಓದ್ತಾ ಇದಾನೆ, ಇಷ್ಟೊಂದು ಸ್ಮಾರ್ಟು, ಇಷ್ಟೊಂದು ಕ್ಯೂಟು, ಇಷ್ಟೊಂದು ಹ್ಯಾಂಡ್‍ಸಮ್ಮು ಅಂತೆಲ್ಲ ನಂಗೆ ಗೊತ್ತೇ ಇರ್ಲಿಲ್ಲ. ಊಹುಂ, ಗೊತ್ತಿತ್ತು; ಆದ್ರೆ ಮರೆತುಹೋಗಿತ್ತು. ನೀನು ಚಿಕ್ಕವನಿದ್ದಾಗ ನಾನು ನೋಡಿದ್ದೆ ಅಷ್ಟೇ. ನಾವಿಬ್ರೂ ಆಟಾನೂ ಆಡಿದ್ವಿ. ಆದರೆ ಆಮೇಲೆ ನೀನು ನಿನ್ನ ಅಜ್ಜನ ಮನೇಲಿ ಓದ್ಲಿಕ್ಕೆ ಅಂತ ಹೋದೆ. ಅಲ್ಲಿಂದ ದಾವಣಗೆರೆಗೆ. ನನ್ನ ಸ್ಮೃತಿಪಟಲದಿಂದ ಹೆಚ್ಚೂಕಮ್ಮಿ ಅಳಿಸಿಯೇ ಹೋಗಿತ್ತು ನಿನ್ನ ಚಿತ್ರ. ಆದರೆ ಎಲ್ಲವನ್ನೂ ಮತ್ತೆ ಎದುರಿಗೇ ತಂದು ನಿಲ್ಲಿಸಿಬಿಟ್ಟೆಯಲ್ಲೋ ಮನ್ಮಥಾ... ಇಷ್ಟು ವರ್ಷ ರಜೆಯಲ್ಲೂ ಯಾಕೋ ಮನೆಗೆ ಬರಲಿಲ್ಲ? ಈಗ ಯಾಕೋ ಬಂದೆ? ಬಂದವನೇ ಏಕೆ ಹೀಗೆ ನನ್ನ ಭಾವನೆಗಳ ಮೇಲೆ ದಾಳಿ ಮಾಡಿದೆಯೋ? ಇಲ್ಲ, ಏನನ್ನೂ ಕೇಳಲಿಲ್ಲ ನಿನ್ನ ಬಳಿ. ನೀನು ಚಿಕ್ಕವನಿದ್ದಾಗ ಇದ್ದ ಗಣಪತಣ್ಣನ ಮಗ ಮಹೇಶನಾಗಿ ಉಳಿದಿರಲೇ ಇಲ್ಲ. ಈಗ ನಿನ್ನನ್ನು ನೋಡಿದಾಕ್ಷಣ ಎಲ್ಲಿಂದಲೋ ನನ್ನಲ್ಲಿ ಉದ್ಭವಿಸಿದ ನಾಚಿಕೆಗೆ ಮಾತೆಲ್ಲಾ ಇಂಗಿಹೋಗಿದ್ದವು.
ಆ ವರ್ಷದ ರಜೆಯಲ್ಲಿ ಕಾಡು ಸುತ್ತಲಿಕ್ಕೆ ನನ್ನ-ಪಲ್ಲವಿ ಜೊತೆ ನೀನೂ ಇದ್ದೆ. ನೀನು ಕೊಯ್ದು ಕೊಡುತ್ತಿದ್ದ ಬಿಳಿಬಿಳೀ ಮುಳ್ಳು ಹಣ್ಣುಗಳಿಗೆ ಇಷ್ಟು ವರ್ಷಕ್ಕಿಂತ ವಿಶೇಷವಾದ ರುಚಿ ಪ್ರಾಪ್ತವಾಗಿತ್ತು. ಗೇರುಹಣ್ಣುಗಳಲ್ಲಿ ಜಾಸ್ತಿ ರಸ ತುಂಬಿತ್ತು. ಹಲಗೆ ಹಣ್ಣಿನ ಸಿಹಿ ಹೆಚ್ಚಿತ್ತು. ಈ ಕೌಳಿ ಹಣ್ಣುಗಳು ಮಾತ್ರ ಖೋಡಿ, ನನ್ನಲ್ಲಿ ಹುಚ್ಚು ಲಹರಿಯನ್ನೇ ಹುಟ್ಟಿಸಿದ್ದವು. ಮಾವಿನ ಕಾಯಿ ಕೊಯ್ದು ತಂದು ಅತ್ತೆ ಹತ್ರ ಉಪ್ಪು-ಖಾರ ಮಾಡಿಸ್ಕೊಂಡು ದೊಡ್ಡ ತಟ್ಟೆಯಲ್ಲಿಟ್ಟುಕೊಂಡು ತಿನ್ನುವಾಗ ನನ್ನ ಕೈ ನಿನ್ನ ಕೈಗೆ ತಾಗಿ ರೋಮಾಂಚನ.
ಪಲ್ಲವಿಗೆ ನಾನು ಹೇಳುವ ಮೊದಲೇ ಎಲ್ಲಾ ಅರ್ಥ ಆಗಿಬಿಟ್ಟಿತ್ತು. 'ಅಮೃತಾ ಯಾಕೋ ಭಾರೀ ಖುಷಿಯಾಗಿದ್ದಂಗೆ ಕಾಣ್ಸುತ್ತಲಾ?' ಅನ್ನುತ್ತಾ ಛೇಡಿಸುತ್ತಿದ್ದಳು. ನಿಜ ಹೇಳಬೇಕೆಂದರೆ ನಿನ್ನಲ್ಲಿ ನಾನು ಮೆಚ್ಚಿದ್ದು ಸ್ಮಾರ್ಟ್‍ನೆಸ್ಸನ್ನಲ್ಲ. ನೀನು ಹ್ಯಾಂಡ್‍ಸಮ್ ಅಂತ ಅಲ್ಲ. ನಂಗಿಷ್ಟವಾದದ್ದು ಪ್ರಕೃತಿಯೆಡೆಗೆ ನಿನಗಿದ್ದ ವ್ಯಾಮೋಹ ಮತ್ತು ನಿನ್ನ ಭಾವಲೋಕ. ಅದಾಗಲೇ ಸಾಹಿತ್ಯದಲ್ಲಿ ನಿನಗಿದ್ದ ಅಪಾರ ಜ್ಞಾನ. ನೀನೇ ಗೀಚುತ್ತಿದ್ದ ಪುಟ್ಟ ಪುಟ್ಟ ಹನಿಗವನಗಳು. ಸೋಗೆ ಅಟ್ಲಿನ ಬಳಿ ಸಿಕ್ಕಿದ ಗಾಯಗೊಂಡ ಮರಿಗಿಣಿಯನ್ನು ನೀನು ತಂದು ಗೂಡಿನಲ್ಲಿಟ್ಟು ಅದೆಷ್ಟು ಚೆನ್ನಾಗಿ ಆರೈಕೆ ಮಾಡಿದ್ದೆ... 'ಓದ್ತೀನಿ. ಆದ್ರೆ ಎಲ್ಲರ ಹಂಗೆ ಬೆಂಗ್ಳೂರಿಗೆ ಹೋಗಿ ಕೆಲಸ ತಗೊಂಡು ಜೀವಮಾನ ಇಡೀ ಅಲ್ಲೇ ಇರಲ್ಲ. ನಂಗೆ ಈ ಊರು ಇಷ್ಟ...' ಅಂತ ಎಷ್ಟು ಸ್ಪಷ್ಟವಾಗಿ ಹೇಳಿದ್ದೆ...
ಈಗ ನೋಡು, ಎಸ್ಸೆಸೆಲ್ಸಿ ಮುಗಿದು, ನಾನು ಡಿಸ್ಟಿಂಗ್ಶನ್‍ನಲ್ಲಿ ಪಾಸಾಗಿ, ನಾನು ಎಷ್ಟೇ ಇಷ್ಟವಿಲ್ಲ ಎಂದರೂ ಬಿಡದೇ 'ಇಲ್ಲೀ ಕಾಲೇಜುಗಳು ಒಂದೂ ಚೆನ್ನಾಗಿಲ್ಲ. ನೀನು ಬೆಂಗಳೂರಿಗೆ ಹೋಗು. ಚಿಕ್ಕಪ್ಪನ ಮನೇಲಿ ಇದ್ಕೊಂಡು ಓದು' ಅಂತ ಬಲವಂತ ಮಾಡಿ ಇಲ್ಲಿಗೆ ತಂದು ಸೇರಿಸಿದ್ದಾರೆ. ಏನಿದೆ ಗೆಳೆಯಾ ಇಲ್ಲಿ..? ಟ್ರಾಫಿಕ್ಕೊಂದು ಬಿಟ್ಟು? ಹೀಗೆ ಅಪರೂಪಕ್ಕೆ ಸಿಗುವ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಬಿಟ್ಟು? ದೂರಕ್ಕೊಂದು ಕಾಣುವ ಪಾರ್ಕುಗಳನ್ನು ಬಿಟ್ಟು? ಇಂದು ಇಲ್ಲಿ ಸಿಕ್ಕ ಹಕ್ಕಿ ಕಲರವ ನನಗೆ ಗೊತ್ತಿದ್ದಂತೆ ಮತ್ತೆಲ್ಲೂ ಇಲ್ಲ ಬೆಂಗಳೂರಿನಲ್ಲಿ... ಯಾಕಿರಬೇಕು ಹೇಳು ಇಲ್ಲಿ?
ನೀನು ಹೇಳಿದ್ದೇ ಸರಿ. ಹಳ್ಳಿಯೇ ಚಂದ. ನನಗಿನ್ನು ಕೇವಲ ಒಂದು ಎಕ್ಸಾಮ್ ಇದೆ. ಆಮೇಲೆ ಎರಡೂ ವರೆ ತಿಂಗಳು ರಜ. ಸೀದಾ ಊರಿಗೆ ಬರುತ್ತೇನೆ. ಅಲ್ಲಿಂದ ಅಜ್ಜನ ಮನೆಗೆ. ನೀನೂ ಬರುತ್ತಿದ್ದೀಯಾ ತಾನೆ? ನಿಂಗೆ ದಾವಣಗೆರೆಯಲ್ಲಿ ಇದೇ ಕೊನೆ ವರ್ಷ ಅಲ್ವಾ? ಆಮೇಲೆ ಏನು ಮಾಡುತ್ತೀ? ತಾಳು, ಊರಲ್ಲಿ ಸಿಕ್ಕಾಗ ಎಲ್ಲಾ ಮಾತಾಡೋಣ. ಈ ಸಲದ ಬೇಸಿಗೆ ರಜವನ್ನು ಕನಸು ಕಟ್ಟಲಿಕ್ಕೇ ಮೀಸಲಿಡೋಣ. ಪಲ್ಲವಿಗೆ ಸುಮ್ಮನೆ ಮನೆಯಲ್ಲಿರಲು ಹೇಳಿ ನಾವಿಬ್ಬರೇ ಕಾಡು ಸುತ್ತೋಣ. ಆಯ್ತಾ?
ಊಂಪ್ಚ್! ಅದು ಮುತ್ತು. ಸಿಗೋವರಿಗೆ ಇಟ್ಕೋ ಅಂತ ಕೊಟ್ಟೆ. ಮಜಾ ಮಾಡು...! ಸೀ ಯೂ..
-ಅಮೃತಾ
[ ದಟ್ಸ್‍ಕನ್ನಡ.ಕಾಂ ನಲ್ಲಿ ಪ್ರಕಟಿತ ] Related article: ನಲ್ಮೆಯ ನಮನ
Showing posts with label ಪ್ರೇಮಪತ್ರ. Show all posts
Showing posts with label ಪ್ರೇಮಪತ್ರ. Show all posts
Saturday, April 14, 2007
Tuesday, February 13, 2007
ಒಂದು ಪ್ರೇಮಪತ್ರವು...
ಬೊಗಸೆ ಕಣ್ಗಳ ಹುಡುಗೀ,
ನಿನಗೆ ಸಾವಿರ ಸಿಹಿಮುತ್ತುಗಳು.
ಇಲ್ಲೊಂದು ಸುಂದರ ಸಂಜೆ. ಇವತ್ತು ಬೆಂಗಳೂರಿಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.
ಕಳೆದ ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.
ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:
ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..

ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..
ದೂರ ನಾಡಿನ ಹಕ್ಕಿ
ಹಾರಿ ಬಾ ಗೂಡಿಗೆ..
ಗೂಡು ತೂಗ್ಯಾವ ಗಾಳೀಗೆ..
ಸುವ್ವಿ ಸುವ್ವಾಲೆ ಸುವ್ವಿ..
ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.
ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.
ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.
ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?
ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?
ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?
ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?
ಹ್ಯಾಪಿ ವ್ಯಾಲೆಂಟೈನ್ಸ್ ಡೇ...!
-ನಿನ್ನವನು
[12.02.2007]

Subscribe to:
Posts (Atom)