Monday, November 14, 2016

ವಾಗತಿ

ಇಲ್ಲರಳಿದ್ದಲ್ಲರಳದೇ ಎಂದವರು ಕಿತ್ತು
ಕೊಟ್ಟಿದ್ದ ಸೇವಂತಿಗೆ ಗಿಡದ ಹಿಳ್ಳು
ಯಾಕೋ ಮುದುಡಿದೆ ಕೊಟ್ಟೆಯಲ್ಲಿ
ವಾಗತಿಯೆಲ್ಲಾ ಮಾಡಿಯಾಗಿತ್ತು ಸರಿಯಾಗಿಯೇ
ಸುಡಿಮಣ್ಣು, ಎರೆಗೊಬ್ಬರ, ಹೊತ್ತೊತ್ತಿಗೆ ನೀರು
ಕಮ್ಮಿ ಮಾಡಿರಲಿಲ್ಲ ಏನೂ
ಆದರೂ ಜೋತಿದೆ ನೆಲದತ್ತ ಬಾಡಿ
ಬಿಟ್ಟುಕೊಟ್ಟಂತೆ ಬದುಕುಳಿವ ಆಸೆ

ಹೀಗಾಗಿದ್ದು ಇದೇ ಮೊದಲೇನಲ್ಲ
ಹಾಗಂತ ಯಾರ ಮೇಲೂ ಆರೋಪವಿಲ್ಲ
ಎಲ್ಲೆಲ್ಲಿಂದಲೋ ಬಂದು ಬೇರೂರಿದವರೇ ತುಂಬಿದ
ಸರ್ವಪ್ರಬೇಧದ ಶಾಂತಿಯ ಅಂಗಳವಿದು
ಇನ್ನೇನು ಹೊರಡುವ ಹೊತ್ತಿಗೆ ಅತ್ತೆ ಕಿತ್ತುಕೊಟ್ಟ
ಗೆಂಟೆಹೂವು, ಬೇಡ ಎಂದರೂ ಕೇಳದೆ ಶಾಂತಕ್ಕ
ಹೆರೆ ಮುರಿದುಕೊಟ್ಟ ಕೆಂಪು ದಾಸವಾಳ,
ಭಾರೀ ಆಸೆಪಟ್ಟು ಅಮ್ಮ ತವರಿಂದ ತಂದ
ತಿಳಿಹಳದಿ ಲಿಲ್ಲಿ... ಇಲ್ಲಿ ಚಿಗುರಿ ನಳನಳಿಸುತ್ತಿದೆ.

ತಂದುಕೊಟ್ಟದ್ದಿದೆ ನಾನೂ- ಗುಂಡಿಯಿಂದೆತ್ತಿ ಗೊಬ್ಬರ
ಹಾಯಿಸಿದ್ದಿದೆ ನೀರು- ಟ್ಯಾಂಕಿನಿಂದೆಳೆದು ಪೈಪು
ಕುಳಿತದ್ದೂ ಇದೆ- ಗಿಡ ಅಡ್ಡಟಿಸಿಲೊಡೆವ ಬೆರಗ ನೋಡುತ
ಭಾವಿಸಿದ್ದಿದೆ- ಅರಳಿದ ಹೂಗಳೆಲ್ಲ ಅಮ್ಮನ
ಕಣ್ಣಿಂದ ಹೊರಟ ಸಂಭ್ರಮದ ಕಿರಣಗಳೇ ಎಂದು
ದುಃಖಿಸಿದ್ದಿದೆ ಕ್ಷಣ ನಗರದ ಗಿಜಿಗಿಜಿಯಲ್ಲಿ ಕೂತು
ಊರ ಮನೆಯಂಗಳದ ಸೊಬಗ ನೆನೆದು

ಇವತ್ತಿಲ್ಲಿ ಮತ್ತೊಂದು ಬೆಳಗು
ನಾಲ್ಕು ದಿನ ತುಳಸೀಗಿಡಕ್ಕೆ ನೀರು ಹಾಕಲು ಹೇಳಿ ಹೋಗಿದ್ದಾರೆ
ಪ್ರವಾಸ ಹೊರಟ ಪಕ್ಕದ ಮನೆಯವರು
ಊರಿಂದ ಬಂದ ಅಮ್ಮ ಬಗ್ಗಿಬಗ್ಗಿ ಹನಿಸುತ್ತಿದ್ದಾಳೆ ಪಾಟಿಗೆ
ಅಲ್ಲಿ ಅಂಗಳದಲ್ಲಿ ತಾನೂರಿಬಂದ ಡೇರೆಗಿಡದ ಕೊಟ್ಟೆಗಳಿಗೆ
ಅಪ್ಪ ಬೆಳಿಗ್ಗೆ ನೀರು ಹಾಕಿದರೋ ಇಲ್ಲವೋ ಎಂದು ಯೋಚಿಸುತ್ತ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಚಿತ್ರ

ಅಂಗಡಿಗೆ ಹೊದಿಸಿದ ಗಾಜು
ಹೋಟೆಲಿನ ಟೇಬಲ್ಲಿನ ಮೇಲಿನ ಗಾಜು
ತುಂಬ ದಿನದಿಂದ ಚಲಿಸದೆ ನಿಂತ ಕಾರಿನ ಗಾಜು-
ಗಳ ಮೇಲೆ ಕೂತ ಧೂಳಿನ ಮೇಲೆಯೇ
ಚಿತ್ರ ಬಿಡಿಸುವ ವ್ಯಕ್ತಿಯೊಬ್ಬನನ್ನು ಮೊನ್ನೆ ನೋಡಿದೆ.

ಬಹಳ ಆಸಕ್ತಿಕರ ಎನಿಸಿ ಹಿಂಬಾಲಿಸಿದೆ.
ಆತ ಗಾಜುಹೊದಿಕೆಗಳ ಹುಡುಕಿಕೊಂಡು ಹೋಗುವುದೇ
ಕುತೂಹಲಕಾರಿಯಾಗಿತ್ತು. ಸುಮಾರು ದಿನದಿಂದ
ಒರೆಸದ ಗಾಜುಗೋಡೆಗಳು, ಚಾಲಕನಿಲ್ಲದೆ ಸುಮ್ಮನೆ ನಿಂತ
ಕಾರುಗಳು, ಕಛೇರಿಯೊಂದರ ಮೂಲೆಗಿರಿಸಿದ ಅಲಕ್ಷಿತ
ಟೀಪಾಯಿ, ಪಬ್ಲಿಕ್ ಟಾಯ್ಲೆಟ್ಟಿನ ಸಿಂಕಿನ ಮೇಲಿನ ಕನ್ನಡಿ,
ಕೆಲವೊಮ್ಮೆ, ಮುಚ್ಚಿದ ಮನೆಯ ಕಿಟಕಿಯ ಗಾಜು-
ಧೂಳು ಕೂತ ಯಾವ ನುಣ್ಣನೆ ವಸ್ತು ಕಂಡರೂ
ಇವನ ಮುಖ ಫಳಫಳ ಅರಳುತ್ತಿತ್ತು.
ಸುತ್ತಮುತ್ತ ಯಾರೂ ಇಲ್ಲದ ಸಮಯ ನೋಡಿ
ಕಳ್ಳನಂತೆ ಹೆಜ್ಜೆಯಿಡುತ್ತ ಧೂಳಾಕ್ರಮಿತ ವಸ್ತುವಿನ ಬಳಿ ಸಾಗಿ
ಅತ್ತಿತ್ತ ಮತ್ತೊಮ್ಮೆ ನೋಡಿ ಎಲ್ಲ ಪೂರ್ವನಿರ್ಧಾರಿತವೋ,
ಲೆಕ್ಕಾಚಾರ-ತಯಾರಿಯೆಲ್ಲಾ ಮನಸಲ್ಲೇ ಆಗಿತ್ತೋ ಎಂಬಂತೆ
ತನ್ನ ನಿಪುಣ ಬೆರಳುಗಳಿಂದ ಪಟಪಟನೆ ಚಿತ್ರ ಬರೆದು
ಅಲ್ಲಿಂದ ಪರಾರಿಯಾಗುತ್ತಿದ್ದ. ಕೆಲ ಚಿತ್ರಗಳ ಕೆಳಗೆ
ಅಡಿಬರಹವನ್ನೂ ಬರೆಯುತ್ತಿದ್ದ.

ಒಂದು ದಿವಸ ಇವನನ್ನು ಹಿಡಿದು ನಿಲ್ಲಿಸಿ ವಿಚಾರಿಸಿದೆ.
ಅವನು ಏನು ಹೇಳಿದ ಎಂದು ನಿಮಗೆ ಹೇಳುವುದಿಲ್ಲ.
ಆದರೆ ಮರುದಿನದಿಂದ ನಾನವನ ಹಿಂಬಾಲಿಸಲಿಲ್ಲ.

ಬದಲಿಗೆ, ಅವ ಬಿಡಿಸಿ ಬಿಟ್ಟುಹೋದ ಚಿತ್ರಗಳ ಬಳಿ
ಮರೆಯಾಗಿ ನಿಂತು ಕಾಯತೊಡಗಿದೆ.
ಮೊದಲ ದಿನ ಮಳೆ ಬಂದು ಗಾಜುಗೋಡೆಯ ಮೇಲಣ ಚಿತ್ರ
ತೊಳೆದುಹೋಯಿತು. ಇನ್ನೊಂದು ದಿನ ಕಾರಿನ ಹಿಂದೆ ನಿಂತು ಕಾದೆ.
ಅದರ ಚಾಲಕ ಆ ಚಿತ್ರದೆಡೆ ಕಣ್ಣೂ ಹಾಯಿಸದೆ
ಕಾರೇರಿ ಬುರ್ರನೆ ಹೊರಟುಹೋದ.
ಹೋಟೆಲಿನ ಮೂಲೆಟೇಬಲಿನಿಂದ ಅನತಿದೂರದಲ್ಲಿ ಕೂತು
ನಿರೀಕ್ಷಿಸತೊಡಗಿದೆ. ಕ್ಲೀನರ್ ಹುಡುಗ ಎತ್ತಲೋ ನೋಡುತ್ತ
ಇದನೊರೆಸಿಬಿಟ್ಟ. ತಡೆಯಬೇಕೆಂದು ಕೈಚಾಚಿದರೆ
ಏನ್ಕೊಡ್ಲಿ ಸಾರ್ ಅಂತ ನನ್ನ ಬಳಿಯೇ ಬಂದ.

ಅರಸುವಾಸೆಯನ್ನಿನ್ನೇನು ಬಿಡಬೇಕೆನ್ನುವಷ್ಟರಲ್ಲಿ
ಮನೆಯಿಂದ ಹೊರಬಂದ ಯುವತಿಯೊಬ್ಬಳು
ಕಿಟಕಿಯ ತಿಳಿಧೂಳ ಮೇಲಣ ರೇಖೆಗಳ ಅಳಿಸಲು ಹಿಂಜರಿದು
ಕೈಬಟ್ಟೆ ಸಮೇತ ನಿಂತದ್ದು ಕಾಣಿಸಿತು. ಕಾದೆ.
ಏನನಿಸಿತೋ, ಸ್ವಲ್ಪ ಹೊತ್ತಲ್ಲಿ ಆ ರೇಖೆಗಳಿಗೆ ಇನ್ನಷ್ಟು ಸೇರಿಸಿ
ಚಿತ್ರವನ್ನೇ ಬದಲಿದಳು. ಆಮೇಲಾಕೆ ಒಳಹೋಗಿ ಆ ರೇಖೆಗಳಿಂದ
ಒಳತೂರುವ ಬೆಳಕು ನೆಲಹಾಸಿನ ಮೇಲೆ ಮೂಡಿಸಿದ
ಚಿತ್ತಾರ ನೋಡುತ್ತ ಕೂತಳೆಂದು ನಾನು ಕಲ್ಪಿಸಿದೆ.

ಅಂದು ನಾನು ಮನೆಗೆ ತೆರಳಿ ಆ ಹುಡುಗಿ
ಬೆಳಕು ಮೂಡಿಸಿದ ಚಿತ್ರವನ್ನೇ ತನ್ನ ಬೆರಳುಗಳಿಂದ
ಬದಲಿಸಲು ಯತ್ನಿಸುತ್ತಿರುವ ಚಿತ್ರ ಬಿಡಿಸಿದೆ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಏಯ್ತ್ ಮೇನ್

ಅಲ್ಲೇ ನಮಗೆಲ್ಲ ಎಚ್ಚರಾದದ್ದು
ಕ್ಲೀನರಿನ ಕೂಗಿಗೆ ದಡಬಡಾಯಿಸಿ ಎದ್ದಿದ್ದು
ಕಣ್ಣೊರಿಸಿಕೊಂಡು ಕಿಟಕಿಯಿಂದಾಚೆ ನೋಡಿದ್ದು
ಹೊಸದೇ ಲೋಕ ತಲುಪಿದ ಬೆರಗಲ್ಲಿ
ಹೊಸದೇನೋ ಇಲ್ಲಿಂದಲೇ ತೆರೆದುಕೊಳ್ಳುವುದೆಂಬ ಭ್ರಮೆಯಲ್ಲಿ
ಹೊಸಬದುಕಿಗಿದೆ ಹೆಬ್ಬಾಗಿಲೆಂಬ ಹುಸಿಖುಷಿಯಲ್ಲಿ
ಕಣ್ಕಣ್ಬಿಟ್ಟು ನೋಡಿದ್ದು ಹೊಸ ಬೆಳಗನ್ನು
ಹೊಚ್ಚಹೊಸದೇ ಆದ ಭಯದಲ್ಲಿ

ಕೈಚಾಚಿದರೆ ಸಿಗುವಷ್ಟು ಸಮೀಪ ಚಲಿಸುವ ವಾಹನಗಳು
ತಲೆಯೆಷ್ಟೆತ್ತಿದರೂ ದಿಟ್ಟಿಗೆ ನಿಲುಕದಷ್ಟೆತ್ತರದ ಕಟ್ಟಡಗಳು
ತಿರುತಿರುಗಿ ಎಣಿಸಿದರೂ ಲೆಕ್ಕ ಸಿಗದಷ್ಟು ಜನಗಳು-
ತುಂಬಿದ ನಗರಿಗೆ ಬಂದು ತಲುಪಿಯೇಬಿಟ್ಟ ದಿಗ್ಭ್ರಾಂತಿಯಲ್ಲಿ
ಕೂತ ಬಸ್ಸಿನ ಸೀಟಲ್ಲೇ ಚಡಪಡಿಸಿದ್ದು
ಎಲ್ಲ ತಿಳಿದವನ ಗತ್ತಲ್ಲಿ ಪಕ್ಕ ಕೂತಿದ್ದ ಅಪರಿಚಿತನಿಗೆ
ಈ ತಳಮಳ ತಿಳಿಯದಂತೆ ಎಚ್ಚರ ವಹಿಸಿದ್ದು, ಒಣನಗೆ ಬೀರಿದ್ದು

ಯಾರ ಉನ್ಮಾದವನ್ನೂ ಹುಸಿ ಮಾಡದು ನಗರ
ಸೋಗೆಯಟ್ಟಲ ಕೆಳಗಿನ ಹಕ್ಕಿಮರಿಯನ್ನು ಕುಕಿಲಕರೆಯಲ್ಲೇ
ತನ್ನ ಐಷಾರಾಮಿ ಗೂಡಿಗೆ ಸೆಳೆದುಕೊಂಡ ನಗರ
ಗುಣಮಟ್ಟದ ಗುಟುಕನ್ನೇ ಕೊಟ್ಟು ಪೊರೆಯಿತು
ಹೊಟ್ಟೆ ತುಂಬತೊಡಗಿದಂತೆ ಗುಟುಕಿನ ಲೆಕ್ಕ ಮರೆಯಿತು
ಏಯ್ತ್ ಮೇನಿನ ನಂತರದ ಮೇನುಗಳು ಏನಾದವು?
ಇಳಿಯುವವರು ಘನಗಾಂಭೀರ್ಯದಿಂದ ಅವರವರ
ನಿಲ್ದಾಣದಲ್ಲಿಳಿಯುತ್ತಿದ್ದರು, ಲಗೇಜೆಲ್ಲ ಸರಿಯಿದೆಯೇ
ಎಂದು ಮತ್ತೊಮ್ಮೆ ನೋಡಿ ಖಚಿತಪಡಿಸಿಕೊಂಡು
ಹೊಸ ನಿಲ್ದಾಣಗಳು ಹೊಸ ಮುಖಗಳು ಹೊಸ ಹೆಸರುಗಳು
ಎಂಥ ಪುಳಕವಿತ್ತು ಹೊಸ ಅನುಭವಕೆ ಒಳಗಾಗುವುದರಲ್ಲಿ
ಗೂಡೊಳಗಿನ ತಂಪು-ಬಿಸಿಗಳ ಹದವರಿತ ಹವೆಗೆ
ಎಂಥ ಮೈಮರೆಸುವ ತಾಕತ್ತಿತ್ತು-
ತಪ್ಪಿಸುವಂತೆ ಉರುಳಿದ ದಿನಗಳ ಎಣಿಕೆ

ಆಮೇಲೆ ಅದೆಷ್ಟು ಸಲ ಊರಿಂದ ಬರುತ್ತ
ಇದೇ ಏಯ್ತ್ ಮೇನನ್ನು ಬೈದುಕೊಂಡಿದ್ದು
ಕೊನೆಯಿರದಿರಲಿ ಎಂದುಕೊಂಡಿದ್ದ ರಾತ್ರಿ
ಅನವರತವಿರಲಿ ಎಂದುಕೊಂಡಿದ್ದ ಪಯಣ
ಮುಗಿದೇಹೋದದ್ದಕ್ಕೆ ಕ್ರುದ್ಧನಾದದ್ದು

ತಮ್ಮ ಫೋನ್ ಮಾಡಿದ್ದ
ಟೆಲಿಫೋನಿಕ್ ಇಂಟರ್ವ್ಯೂನಲ್ಲೇ ಆಯ್ಕೆಯಾಗಿದೆ,
ಕಾಲ್ ಲೆಟರ್ ಬಂದಿದೆ, ನಾನೂ ಬರ್ತಿದ್ದೀನಿ ಅಣ್ಣಾ ಸಿಟಿಗೆ-
ಎಂದವನ ದನಿಯ ತುಂಬ ಉಕ್ಕುವುತ್ಸಾಹವಿತ್ತು.
ಅಲಾರ್ಮ್ ಕೂಗಿ ಹೇಳುತ್ತಿದೆ ಬೆಳಗಾಯಿತೆಂದು
ಇಷ್ಟೊತ್ತಿಗೆ ಅವನ ಬಸ್ಸೂ ಏಯ್ತ್ ಮೇನಿನ ಬಳಿ ಬಂದಿರುತ್ತೆ
ಕ್ಲೀನರ್ ಹುಡುಗ ಕೂಗಿ ಎಬ್ಬಿಸಿರುತ್ತಾನೆ
ಧಿಗ್ಗನೆದ್ದು ಕೂತ ಅವನು ಕಣ್ಣೊರೆಸಿಕೊಳ್ಳುತ್ತ
ಮೊಬೈಲ್ ಹೊರತೆಗೆದು ನನಗೆ ಡಯಲ್ ಮಾಡುತ್ತಾನೆ
ಅಣ್ಣಾ, ನಾನು ಬಂದೇಬಿಟ್ಟೆ, ಬಾ ಪಿಕ್ ಮಾಡಲು.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ]

ಕಲ್ಲುಗಳು

ಮೊದಲು ಇಡೀ ಭೂಮಿಯೇ ಸೂರ್ಯನಿಂದ ಸಿಡಿದು ಬಂದ
ಒಂದು ದೊಡ್ಡ ಕಲ್ಲುಬಂಡೆಯಾಗಿತ್ತಂತೆ
ಆಮೇಲೆ ಅದೇನಾಯಿತೋ, ಸೃಷ್ಟಿಗೌಪ್ಯ,
ನದಿ ಸಮುದ್ರ ಗಿಡ ಮರ ಪ್ರಾಣಿ ಪಕ್ಷಿ
ಬೆಟ್ಟ ಬಯಲು ಹಿಮ ಮರಳು ಕೊನೆಗೊಬ್ಬ ಮನುಷ್ಯ
ಈ ಕಲ್ಲುಗಳೇನು ಪೂರ್ತಿ ಕರಗಿದವೇ?
ಕೆಲವು ದೊಡ್ಡ ಬಂಡೆಗಳು ಹಾಗೇ ಉಳಿದವು
ಇನ್ನು ಕೆಲವು ಹದಾ ಸೈಜಿಗೆ ಬಂದು ಉರುಳಿದವು
ಮತ್ತೆ ಹಲವು ಸಣ್ಸಣ್ಣ ಚೂರಾಗಿ ಮರಳಾಗಿ ಮಣ್ಣಾಗಿ
ಗುರುತೇ ಸಿಗದಂತೆ ಬದಲಾಗಿಹೋದವು
ಬದಲಾವಣೆಗೆ ಜಗ್ಗದ ಕೆಲ ಕಲ್ಲುಗಳು
ಏಕಶಿಲಾಪರ್ವತ ಅಂತೆಲ್ಲ ಹೆಸರು ಮಾಡಿದವು

ಈ ಮನುಷ್ಯನೊಬ್ಬ ಅಸಾಮಾನ್ಯ ಪ್ರಾಣಿಯಾಗಿಬಿಟ್ಟ
ಕಲ್ಲುಗಳನ್ನು ಕಡಿದು ಕೆತ್ತಿ ಆಕಾರವೊಂದಕ್ಕೆ ತಂದು
ಕಲ್ಲ ಮೇಲೆ ಕಲ್ಲಿಟ್ಟು ಕಟ್ಟಡಗಳನ್ನು ಕಟ್ಟಿದ
ದೊಡ್ಡ ಕಲ್ಲ ಮೇಲೆ ಸಣ್ಣ ಕಲ್ಲಿಂದ ಜಜ್ಜಿ ಮಸಾಲೆಯರೆದ
ಕಲ್ಲನೊಡೆಯಲೆಂದೇ ಡೈನಮೈಟುಗಳನ್ನು ಕಂಡುಹಿಡಿದ
ದೊಡ್ಡ ಕಲ್ಲುಗಳಿಂದ ದೊಡ್ಡ ಮೂರ್ತಿಗಳನ್ನು ಕೆತ್ತಿದ
ಸಣ್ಣ ಕಲ್ಲುಗಳಿಗೆ ಉಳಿಪೆಟ್ಟು ಕೊಟ್ಟು ಸಣ್ಣಮೂರ್ತಿಗಳನಾಗಿಸಿದ
ಅವುಗಳನ್ನು ದೇವರು ಅಂತಲೂ ಕರೆದ, ಸೃಷ್ಟಿಕರ್ತನೇ ಇವನೆಂದ

ಕಲ್ಲುಗಳಿಂದಲೇ ನೆಲಹಾಸು, ಕಲ್ಲುಗಳಿಂದಲೇ ಬಚ್ಚಲಿಗೆ ಚಪ್ಪಡಿ,
ಕಲ್ಲಿನಿಂದಲೇ ಜಲ್ಲಿ, ಕಲ್ಲಿನಲೇ ಕೊರೆದ ನಾಮಫಲಕ
ಕೊನೆಕೊನೆಗೆ ಏನೋ ಮಾಡಲು ಹೋಗಿ ಏನೇನೋ ಆಗಿ
ಎಲ್ಲಾ ಗೊಂದಲಕ್ಕೊಳಗಾಗಿ ತಲೆಬಿಸಿಯಾಗಿ ಮುಂದೇನೆಂದರಿಯದೆ
ನೆಮ್ಮದಿಯರಸಿ ಸಾವನದುರ್ಗದ ನೆತ್ತಿಗೆ ಚಾರಣ ಹೊರಟ

ಮೊನ್ನೆ ಆ ಪ್ರತಿಭಟನೆ ನಡೆದ ಸ್ಥಳಕ್ಕೆ ಹೋಗಿದ್ದೆ
ರಸ್ತೆ ತುಂಬಾ ಸಣ್ಣ ಸಣ್ಣ ಕಲ್ಲುಗಳು
ತಲೆಯೆತ್ತಿ ನೋಡಿದರೆ ಒಡೆದ ಕಿಟಕಿಗಾಜುಗಳು
ಎತ್ತಲಿಂದಲೋ ಕಲ್ಲೊಂದು ತೂರಿಬಂತು
ಎಲ್ಲಿಯವನೋ ನೀನು ಅಂತೇನೋ ಬೈಗುಳ..
ಜೀವ ಉಳಿದರೆ ಸಾಕೆಂದು ಓಡಿಬಂದೆ.

[ವಿಶ್ವವಾಣಿಯ 'ವಿರಾಮ'ದಲ್ಲಿ ಪ್ರಕಟಿತ.]

Monday, October 10, 2016

ಗಮನ

ಇದೊಂದು ತಕ್ಷಣಕ್ಕೆ ನಮ್ಮ ಗಮನಕ್ಕೆ ಬರಲೇ ಇಲ್ಲ:
ಚಿಲಿಪಿಲಿಗುಡುತ್ತಾ ಪುಟುರ್ರನೆ ರೆಕ್ಕೆಬಡಿಯುತ್ತಾ
ಮನೆಯೊಳಕ್ಕೂ ಹೊರಕ್ಕೂ ಹಾರುತ್ತಿದ್ದ ಗುಬ್ಬಿಗಳು
ನಿಧಾನಕ್ಕೆ ಕಮ್ಮಿಯಾಗುತ್ತಾ ಕೊನೆಗೆ ನಿಶ್ಶೇಷವಾದದ್ದು.

ಗುಬ್ಬಿಗಳು ಏಕೆ ಕಾಣೆಯಾದವೆಂದು ಯಾರಿಗೂ ಗೊತ್ತಾಗಲಿಲ್ಲ.
ಕೆಲವರು ಮೊಬೈಲ್ ಸಿಗ್ನಲುಗಳೇ ಕಾರಣವೆಂದರು
ಕೆಲವರು ಸಿಮೆಂಟ್ ಕಟ್ಟಡದಲ್ಲವಕ್ಕೆ ಗೂಡು ಕಟ್ಟಲಾಗದೆಂದರು
ಇನ್ನು ಕೆಲವರು ಇಲೆಕ್ಟ್ರಿಕ್ ತಂತಿಗಳದೇ ದೋಷವೆಂದರು
ಮತ್ತೆ ಕೆಲವರಂದರು: ಅವಕ್ಕೆ ತಿನ್ನಲಿಕ್ಕೇ ಆಹಾರವಿಲ್ಲೆಂದು
ನಿಖರ ಕಾರಣ ಮಾತ್ರ ಕೊನೆಗೂ ತಿಳಿಯಲಿಲ್ಲ

ವಾಸ್ತುಬಾಗಿಲ ಮೇಲಣ ಬಾಗುಫೋಟೋಗಳ ಹಿಂದೆ
ಅವು ಪೇರಿಸುತ್ತಿದ್ದ ಹುಲ್ಲಕಡ್ಡಿಗಳು ಬಿದ್ದು ಆಗುತ್ತಿದ್ದ ಕಸ
ಕಮ್ಮಿಯಾದುದಕ್ಕೆ ಅಮ್ಮ ಖುಷಿಪಟ್ಟಳು
ಗಂಟೆಗೊಮ್ಮೆ ಗುಡಿಸೋದು ತಪ್ಪಿತು ಎಂದಳು
ಕಿಚಪಿಚ ಗಲಾಟೆ ಇಲ್ಲದೆ ಟೀವಿ ನೋಡಲು
ಅನುಕೂಲವಾದುದಕ್ಕೆ ಅಜ್ಜಿಗೆ ಸಂತೋಷವಾಯಿತು
ಒಳಮನೆಯ ಕತ್ತಲಲ್ಲವು ಹಾಕಿದ ಪಿಷ್ಟಿ ಅಕಸ್ಮಾತ್ ಮೆಟ್ಟಿ
ಥೋಥೋಥೋ ಎನ್ನುತ್ತಾ ಬಚ್ಚಲಿಗೋಡುತ್ತಿದ್ದ ಅಪ್ಪ
ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟ
ಗುಬ್ಬಿಗಳು ಇಲ್ಲವಾದುದಕ್ಕೆ ಎಲ್ಲರೂ ನಿರಾಳವಾದಂತಿತ್ತು

ಇನ್ನೊಂದು ನಾವು ಗಮನಿಸಿರಲೇ ಇಲ್ಲ:
ಈ ಧುತ್ತನೆ ಆವರಿಸಿದ ಮೌನಕ್ಕೆ ಗುಬ್ಬಿಗಳೊಂದಿಗೇ ಜತೆಯಾದದ್ದು
ಸಾಯುವ ಮುನ್ನ ಚಿಕ್ಕಪ್ಪ ತಾನೇ ಕೈಯಾರೆ ಮಾಡಿ
ಜಗುಲಿ ಬಾಗಿಲಲ್ಲಿ ನೇತು ಬಿಟ್ಟಿದ್ದ ಗಾಳಿಘಂಟೆಗಳು.
ಗಾಳಿ ಬಂದಾಗ ಟಿಂಟಿಣಿಗುಡಲೆಂದೇ ಅದನ್ನಾತ ತಯಾರಿಸಿದ್ದರೂ
ಅದರಿಂದ ಸದ್ದು ಮೀಟುತ್ತಿದ್ದುದು ಮಾತ್ರ ಗುಬ್ಬಿಗಳು
ಚಿಕ್ಕಪ್ಪ ಇಲ್ಲವಾದಮೇಲೆ ಅವನ ಮೆಲುದನಿಯನ್ನೇ ಅನುಕರಿಸುವಂತೆ
ಗುಬ್ಬಿಗಳ ಕಾಲು-ರೆಕ್ಕೆಗಳ ಸ್ಪರ್ಶಕ್ಕೆ ದನಿ ಹೊಮ್ಮಿಸುತ್ತಿದ್ದ
ಗಾಳಿಘಂಟೆಗಳು ಚಿಕ್ಕಮ್ಮನೆದೆ ತಂತಿಯನ್ನೂ ಝಲ್ಲೆನಿಸುತ್ತಿದ್ದವಿರಬೇಕು

ನಿಜ, ಇದೊಂದನ್ನು ನಾವು ಗಮನಿಸಿರಲೇ ಇಲ್ಲ:
ಗುಬ್ಬಿಗಳು ಅದೃಶ್ಯವಾಗುತ್ತ ಹೋದಂತೆ ಚಿಕ್ಕಮ್ಮನೂ
ಮೌನಿಯಾಗುತ್ತಾ ಹೋದಳು ಎಂಬುದು.
ಕೋಣೆಯ ಕಿಟಕಿ ಬಳಿ ಕೂತು ಅವಳು
ಗುಬ್ಬಿಗಳಿಗಾಗಿ ಕಾಯುತ್ತಿದ್ದಳು ಎಂಬುದು.
ಅವುಗಳ ಸ್ಪರ್ಶಮಾತ್ರದಿಂದ ಹೊಮ್ಮುವ
ಘಂಟೆನಿನಾದಕ್ಕೆ ಕಿವಿಯಾಗಿದ್ದಳು ಎಂಬುದು.
ಆಹ್ಲಾದದ ಸಿಹಿಗಾಳಿಯಾದರೂ ನೂಕಿದರೆ
ಘಂಟೆಗಳು ಟಿಂಟಿಣಿಗುಟ್ಟಬಹುದೆಂದು ನಿರುಕಿಸುತ್ತಿದ್ದಳು ಎಂಬುದು.

ಹೌದು, ಇದು ನಮ್ಮ ಗಮನಕ್ಕೆ ಬಂದಿರಲೇ ಇಲ್ಲ:
ಗುಬ್ಬಿಗಳ ನಿರ್ಗಮನದೊಂದಿಗೆ ಚಿಕ್ಕಮ್ಮನ
ಸಣ್ಣ ಸಂತಸವೂ ಸಹಗಮನ ಮಾಡಿತ್ತೆಂಬುದು.