Monday, April 13, 2015

ಮೇಲುಕೋಟೆಯಲ್ಲಿ...

ಮೇಲುಕೋಟೆಯ ದಾರಿಯಿಕ್ಕೆಲದಲ್ಲಿ ಉಸಿರು ಬೀರುವ ಹಸಿರ ಹೊಲ
ಕಲ್ಲಕಮಾನು ಸ್ವಾಗತಕ್ಕೆ, ಬಿರಿಬಿಡದ ಗಟ್ಟಿಯೊಣನೆಲ ಕೆಂಪಗೆ ಆಕಾಶ ನೋಡುತ್ತ.
ಟವೆಲು ಸುತ್ತಿದ ಮುದುಕ ಕಟ್ಟೆ ಮೇಲೆ, ಹೂಬುಟ್ಟಿಯಜ್ಜಿ ದಾರಿಬದಿಗೆ
ಮರದ ತೇರಿನ ಗಾಲಿಗೆ ವರಲೆ ಹುಳುಗಳ ಮುತ್ತಿಗೆ
ಒಡೆದ ತೆಂಗಿನ ಚಿಪ್ಪಿನೊಡಕು ಗರುಡಗಂಬದ ನೆತ್ತಿ ಮೇಲಿನ ಹಸಿದ ಹೊಟ್ಟೆಯ ಕಾಗೆಗೆ
ತಳ್ಳುಗಾಡಿಯ ಗಾಜುಕವಚದ ಹಿಂದೆ ದೊನ್ನೆಕಲಶದ ಗೋಪುರ
ಚೆಲುವನಾರಾಯಣನ ಕತ್ತಲ ಮೂರುತಿಗೆ ಪುಳಿಯೊಗರೆ ಪರಿಮಳದಭಿಷೇಕ

ಸದ್ದಿಲ್ಲದೆ ಬಂದ ನಲ್ಲಿನೀರು ಸಿಂಕಿನಲ್ಲಿದ್ದ ಪಾತ್ರೆಯನ್ನೆಲ್ಲ ತಾನೇ ತೊಳೆದಂತೆ,
ಮೇಲುಕೋಟೆಯಲ್ಲಿದ್ದಾಗ ಮಳೆ ಬರಬೇಕು ಅಂತೊಂದು ಅವ್ಯಕ್ತ ಆಸೆ..
ಅಲ್ಲಲ್ಲಿ ಎದ್ದ ಧೂಳನ್ನೆಲ್ಲ ತೆಪ್ಪಗಾಗಿಸಿ ಕರಗಿಸಿ ಹರಿವ ಕೆಂಪು ನೀರು
ಬಂಡೆಗಳ ಮೇಲೆ ಚಿತ್ರ ಬಿಡಿಸುವುದು. ಕಿವಿರುಗಳಿಗೆ ತಾಕಿದ ಹೊಸನೀರಿಗೆ
ಕಲ್ಯಾಣಿಯಲ್ಲಿನ ಮೀನು ಪುಳಕಗೊಳ್ವುದು. ಸೂರಂಚಿನ ದೋಣಿಗೆ ಬೊಗಸೆಯೊಡ್ಡಿ ನಿಂತ
ಹುಡುಗನ ಕೈ ದಣಿಯುವುದು, ಸಂಜೆಬೆಳಕಲ್ಲೂ ಚಳ್ಳನೆ ಹೊಳೆದ ಕೋಲ್ಮಿಂಚಿಗೆ
ಮೈ ನಡುಗುವುದು.  ತೋಯುತ್ತಲೇ ನಡೆಯುತ್ತಿರುವ
ಬೈರಾಗಿಗಳ ಕಮಂಡಲದೊಳಗಿನ ತೀರ್ಥದ ಮಟ್ಟ ಹೆಚ್ಚುವುದು.

ಟೆರಕೋಟಾ ಒಡವೆ ಧರಿಸಿದ ಹುಡುಗಿ ಈ ಮಳೆಯಲ್ಲಿ ನೆನೆಯುವುದಿಲ್ಲ.
ಕಿವಿಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡವಳು ಕಲ್ಲ ಮಂಟಪದತ್ತ ಓಡುವಳು.
ತಾರಸಿಯ ಚಿತ್ತಾರದಿಂದೊಸರುವ ನೀರು, ಅಡ್ಡಗಾಳಿಗೆ ಸಿಕ್ಕು ತನ್ನತ್ತಲೇ ಧಾವಿಸುವ
ತುಂತುರುಗಳಿಗೂ ಆಕೆ ಹೆದರುವಳು. ಚೂರೇ ಎತ್ತಿದ ಚೂಡಿಯ ತುದಿಗೆ ತಾಕಿದ ಕೆಸರನ್ನಾಕೆ
ಈಗ ತೊಳೆದು ಸ್ವಚ್ಛಗೊಳಿಸಳು.  ಸರಕ್ಕನೆ ಮಂಟಪ ಹೊಕ್ಕ ಬಿಳಿ ಹಕ್ಕಿ
ರೆಕ್ಕೆ ಕೊಡವದಿರಲೆಂದು ಪ್ರಾರ್ಥಿಸುವಳು.

ನಗರದವರೆಗೂ ಚಾಚಿದೆ ಮೇಲುಕೋಟೆಯುಟ್ಟ ಸೀರೆಯ ಸೆರಗಿನಂಥ
ಕಪ್ಪು ಟಾರು ರಸ್ತೆ.  ಗಾಳಿಗೆ ಅಡ್ಡಬಿದ್ದ ದೊಡ್ಡ ಮರದಿಂದ ದಾರಿಯಲ್ಲಿ ಸಿಲುಕಿರುವ
ಚುಪುರು ಗಡ್ಡದ ಹುಡುಗ ನಿಂತಲ್ಲೇ ಚಡಪಡಿಸುತ್ತಿದ್ದಾನೆ.
ಆ ಮರದ ಬಾಗುಕೊಂಬೆಯಲ್ಲಿದ್ದ ಗೂಡೂ ಕಳಚಿಬಿದ್ದು ಮೊಟ್ಟೆಗಳೊಡೆದಿವೆ.
ಇಳಿಯುತ್ತಿರುವ ಕತ್ತಲೆಯ ನೋಡುತ್ತ ಕಲ್ಲುಮಂಟಪದಡಿ ನಿಂತಿರುವ ಹುಡುಗಿಯ
ಬೆದರುಗಣ್ಣುಗಳು ಬಿಳಿಹಕ್ಕಿಗೆ ತನ್ನ ಮೊಟ್ಟೆಗಳಂತೆ ಕಾಣುತ್ತಿವೆ.
ಕವಿಮನೆಯೊಳಗಿನ ಅಲಮಾರಿನಲ್ಲಿ ಜೋಡಿಸಿಟ್ಟ ಪುಸ್ತಕದಲ್ಲಿನ ಕವಿತೆಯೊಂದು
ಪಿಸುಗುಡುತ್ತಿದೆ: ಇಂದಿನೀ ಮಳೆ ಕಮ್ಮಿಯಾಗಲಿ, ಹನಿ ಕಡಿಯಲಿ.

Wednesday, April 01, 2015

ಮೊಗ್ಗಿನ ಜಡೆಯ ಫೋಟೋ

ಫೋಟೋಗ್ರಾಫರ್ ಆಗಬೇಕು ಅಂತ ನಾನು ಕನಸು ಕಂಡಿರಲಿಲ್ಲವಾದರೂ ಕನಿಷ್ಟ ಒಂದು ಕ್ಯಾಮರಾ ನನ್ನ ಬಳಿ ಇರಬೇಕು ಅಂತ ಅಂದುಕೊಂಡಿದ್ದು ಸುಳ್ಳಲ್ಲ.  ಮದುವೆ-ಉಪನಯನಗಳಂತಹ ಶುಭ ಕಾರ್ಯಗಳಲ್ಲೋ, ಸಭೆ-ಸಮಾರಂಭಗಳಲ್ಲೋ ಅಥವಾ ನಮ್ಮ ಶಾಲೆಯ ವಾರ್ಷಿಕೋತ್ಸವಗಳಲ್ಲೋ ಹಾಜರಿರುತ್ತಿದ್ದ ಕ್ಯಾಮರಾಮನ್‌ಗಳ ಸುತ್ತ ನಾವು ಹುಡುಗರ ದಂಡೇ ಇರುತ್ತಿತ್ತು.  ಊರಲ್ಲಿ ಯಾರ ಕೈಯಲ್ಲಾದರೂ ಕ್ಯಾಮರಾ ಇರುವುದು ಕಂಡರೆ ನಾನು ಅವರ ಹಿಂದೆಯೇ ಸುತ್ತುತ್ತಿರುತ್ತಿದ್ದೆ.  ಈ ಕ್ಯಾಮರಾ ಹಿಡಿದವರೆಲ್ಲ ನನಗೆ ನಿಜಕ್ಕೂ ಜಾದೂಗಾರರಂತೆಯೇ ಕಾಣುತ್ತಿದ್ದರು. ಅವರ ಕೊರಳಲ್ಲಿ ನೇತಾಡುವ ಕಪ್ಪು ಬಣ್ಣದ ಕ್ಯಾಮರಾ, ಕೊಕ್ಕರೆಯ ತಲೆಯಂತೆ ಮೇಲೆ ಹೋಗಿ ಬಾಗಿದ್ದ ದೊಡ್ಡ ಫ್ಲಾಶು, ಕಿಸೆಯಿಂದಲೋ ಅಥವಾ ಹೆಗಲ ಚೀಲದಿಂದಲೋ ಅವರು ಆಗಾಗ ತೆಗೆದು ಬದಲಾಯಿಸುತ್ತಿದ್ದ ರೋಲುಗಳು, ಹಾಂಗೆ ಚೂರು ಬಗ್ಗಿ ಒಂದೇ ಕಣ್ಣಲ್ಲಿ ಕ್ಯಾಮರಾ ಮೂಲಕ ಅವರು ನಮ್ಮನ್ನೇ ನೋಡುತ್ತಿದ್ದ ರೀತಿ, ‘ಇದೇ, ಇಲ್ನೋಡಿ, ರೆಡೀ, ಸ್ಮೈಲ್’ ಎಂದು ಹೇಳಿ ಎಂಥಾ ನಗದವರನ್ನೂ ನಗಿಸುತ್ತಿದ್ದ ಅವರ ಪರಿ, ‘ಕ್ಲಿಕ್’ ಎಂಬ ಸದ್ದಿನೊಂದಿಗೆ ಮಿಂಚು ಹೊರಡಿಸುವ ಅವರ ಕ್ಯಾಮರಾ, ಆಮೇಲೆ ವಾರವೋ ತಿಂಗಳೋ ಆದಮೇಲೆ ಅವರು ತಂದು ಕೊಡುತ್ತಿದ್ದ ಫೋಟೋಗಳು, ಫ್ಲಾಶಿನ ಬೆಳಕು ನೋಡಲಾಗದೆ ಕಣ್ಮುಚ್ಚಿದ ಅಥವಾ ಅಗತ್ಯಕ್ಕಿಂತ ಜಾಸ್ತಿ ನಕ್ಕ ಅಥವಾ ವಿಚಿತ್ರ ಗಾಂಭೀರ್ಯದ-ಗಂಟು ಮೋರೆಯ ನಮ್ಮ ಪೆದ್ದು ಪೋಸನ್ನು ಹಾಗ್ಹಾಗೇ ಸೆರೆಹಿಡಿದಿರುತ್ತಿದ್ದ ಆ ಫೋಟೋಗಳು... ಇವೆಲ್ಲ ಯಾರ ಮನಸನ್ನು ತಾನೇ ಸೆಳೆಯದಿರಲು ಸಾಧ್ಯ? ಆ ಫೋಟೋಗ್ರಾಫರಿನ, ಆ ಕಪ್ಪು ಕ್ಯಾಮರಾದ, ಆ ಕನಸಿನ ಮೋಡಿ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಪೇಪರಿನಲ್ಲಿಯೇ ಕ್ಯಾಮರಾ ಮಾಡಿ, ‘ಕ್ಲಿಕ್’ ‘ಕ್ಲಿಕ್’ ಎಂದು ಬಾಯಲ್ಲಿ ಸದ್ದು ಮಾಡುತ್ತ ಅಪ್ಪ, ಅಮ್ಮ, ಅಜ್ಜಿಯರೆಲ್ಲರ ಫೋಟೋಗಳನ್ನೆಲ್ಲ ಆ ಕಾಲದಲ್ಲೇ ತೆಗೆದಿದ್ದೆ. ತೊಳೆದು ಪ್ರಿಂಟ್ ಹಾಕುವ ಲ್ಯಾಬ್ ಮಾತ್ರ ಈ ಜಗತ್ತಿನಲ್ಲಿರಲಿಲ್ಲ ಅಷ್ಟೇ.

ನನಗಷ್ಟೇ ಅಲ್ಲದೇ ನನ್ನ ಅಜ್ಜಿಗೂ ಫೋಟೋಗಳಿಗೆ ಪೋಸು ಕೊಡುವುದೆಂದರೆ ಬಹಳ ಆಸೆ. ಅಪ್ಪ-ಅಮ್ಮನ ಮದುವೆಯ ಅಲ್ಬಮ್ಮಿನ ಭಾಗಶಃ ಫೋಟೋಗಳಲ್ಲಿ ಆಕೆ ಅದು ಹೇಗೋ ಬಂದು ಸೇರಿಕೊಂಡಿದ್ದಾಳೆ. ಊರಲ್ಲೂ ಯಾರ ಮನೆಯಲ್ಲೇ ಶುಭಕಾರ್ಯವಾಗಿ ಫೋಟೋಗ್ರಾಫರ್ ಕರೆಸಿದರೂ ಅಜ್ಜಿ ಅಲ್ಲಿಗೆ ಧಾವಿಸುತ್ತಿದ್ದಳು. ಆ ಶುಭಕಾರ್ಯವಾಗಿ ಸ್ವಲ್ಪ ದಿನಗಳ ನಂತರ, ಅದರ ಫೋಟೋಗಳು ಪ್ರಿಂಟಾಗಿ ಬಂದಮೇಲೆ ಒಂದು ದಿನ ಊರವರನ್ನೆಲ್ಲ ಫೋಟೋ ಅಲ್ಬಮ್ ನೋಡಲೆಂದು ಸಾಮಾನ್ಯವಾಗಿ ಕರೆಯುತ್ತಿದ್ದರು. ಆಗ ತಾನು ಸುಮಾರು ಫೋಟೋಗಳಲ್ಲಿ ಕಾಣಿಸಿಕೊಂಡಿರುವುದನ್ನು ಕಂಡು ಅಜ್ಜಿ ಖುಷಿಯಾಗಿ ಬರುತ್ತಿದ್ದಳು. ‘ಅಯ್ಯೋಯೋಯೋ! ವರಮಾಲಕ್ಷ್ಮಕ್ಕಂತು ಎಲ್ಲಾ ಫೋಟೋದಗೂ ಇದ್ಲೇ!’ ಅಂತ ಯಾರಾದರೂ ಹೇಳಿದರೆ ಅಜ್ಜಿಗೆ ಇನ್ನೂ ಖುಷಿ!  ಇನ್ನು ನಾವು ಹುಡುಗರಂತೂ, ಫೋಟೋಗ್ರಾಫರ್ ಇನ್ನೇನು ಫೋಟೋ ಕ್ಲಿಕ್ ಮಾಡಬೇಕು ಎನ್ನುವಷ್ಟರಲ್ಲಿ ಹೋಗಿ ಅಡ್ಡ ನಿಂತಿರುತ್ತಿದ್ದರಿಂದ, ಬಹಳಷ್ಟು ಫೋಟೋಗಳಲ್ಲಿ ಅವಲಕ್ಷಣದಂತೆ ನಮ್ಮ ಪೆಕರ ಮೋರೆ ಇದ್ದೇ ಇರುತ್ತಿತ್ತು.

ಅಪ್ಪ ಒಮ್ಮೆ ಪಕ್ಕದೂರಿನವರೊಬ್ಬರಿಂದ ಒಂದು ಕ್ಯಾಮರಾ ಇಸಕೊಂಡು ಬಂದಿದ್ದ. ಜೇನು ಸಾಕಣೆ ಶಿಬಿರದ ಸಂಚಾಲಕನಾಗಿದ್ದ ಅಪ್ಪ, ಆಗ ತನಗೆ ವಹಿಸಿದ್ದ ಪ್ರಾಜೆಕ್ಟಿಗಾಗಿ ಕೆಲವು ಫೋಟೋಗಳನ್ನು ತೆಗೆಯುವುದಿತ್ತು. ಆ ಕ್ಯಾಮರಾ ನನ್ನ ಕೈಗೆ ಸಿಗದಂತೆ ಅಪ್ಪ ಗಾಡ್ರೇಜಿನಲ್ಲಿ ಇಟ್ಟಿದ್ದರೂ ಡಿಟೆಕ್ಟಿವ್ ಕೆಲಸ ಮಾಡಿದ ನಾನು ಅದನ್ನು ಪತ್ತೆಹಚ್ಚಿಯೇಬಿಟ್ಟೆ. ಆ ಕ್ಯಾಮರವನ್ನು ಅಪ್ಪ ಇಲ್ಲದಿದ್ದಾಗ ಹೊರಗೆ ತೆಗೆದು, ಅಮ್ಮ-ಅಜ್ಜಿಯರ ಫೋಟೋ, ಸುಮಾರಷ್ಟು ಹೂಗಳ, ದನಕರುಗಳ, ನಮ್ಮೂರ ಕೆರೆಯ, ತೋಟದ ಫೋಟೋಗಳನ್ನೆಲ್ಲ ತೆಗೆದೆ. ಬಹಳ ಹುಮ್ಮಸ್ಸಿನಿಂದ ಹಿಂದೆಮುಂದೆ ಯೋಚಿಸದೆ ಕ್ಯಾಮರಾ ಕದ್ದು ಬಳಸಿದ್ದ ನನಗೆ, ಮೂವತ್ತಾರು ಫೋಟೋಗಳ ರೋಲ್ ಮುಗಿದಮೇಲೆ ಏನು ಮಾಡಬೇಕು ಅಂತ ಹೊಳೆಯಲೇ ಇಲ್ಲ. ಅಪ್ಪನಿಗೆ ಗೊತ್ತಾಗದಂತೆ ಅದನ್ನು ಡೆವಲಪ್ ಮಾಡಿಸಲಿಕ್ಕಂತೂ ಸಾಧ್ಯವಿರಲಿಲ್ಲ. ಹಾಗಾಗಿ, ಸುಮ್ಮನೆ ಆ ರೋಲನ್ನು ರಿವೈಂಡ್ ಮಾಡಿ ಏನೂ ಆಗದವನಂತೆ ಕ್ಯಾಮರಾವನ್ನು ಮೊದಲಿದ್ದ ಜಾಗದಲ್ಲೇ ತಂದು ಇಟ್ಟುಬಿಟ್ಟೆ.  ಅಪ್ಪ ನಂತರ ಅದನ್ನು ತನ್ನ ಪ್ರಾಜೆಕ್ಟಿಗೆಂದು ಒಯ್ದು ಸುಮಾರಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಂದ. ಆಮೇಲದನ್ನು ಡೆವಲಪ್ ಮಾಡಿಸಲು ನೆಗೆಟಿವ್ ಹಾಕಿಸಿದರೆ, ಸ್ಟುಡಿಯೋದವನು ‘ಒಂದೂ ಫೋಟೋ ಸರಿ ಬಂದಿಲ್ಲ ಸರ್. ಎಲ್ಲಾ ಡಬಲ್ ಇಂಪ್ರೆಶನ್ ಬಂದಂಗಿದೆ’ ಅಂದನಂತೆ. ಅಪ್ಪನಿಗೆ ಏನಂತ ಅರ್ಥವಾಗಲಿಲ್ಲ. ಮನೆಗೆ ಬಂದವ ‘ಪ್ರಾಜೆಕ್ಟ್ ಎಲ್ಲಾ ಹಾಳಾಯಿತು, ಯಾಕೆ ಹೀಗಾಯ್ತು ಗೊತ್ತಾಗ್ತಿಲ್ಲ’ ಅಂತ ದುಸುದುಸು ಮಾಡಿದ. ನಾನು ಏನೂ ತಿಳಿಯದವನಂತೆ ಇದ್ದೆ.  ಆದರೆ ಅಮ್ಮ ಬಾಯಿಬಿಟ್ಟುಬಿಟ್ಟಳು: ‘ಅಯ್ಯೋ ಫೋಟನಾ? ಅಪ್ಪಿ ಆ ಕ್ಯಾಮರಾ ಹಿಡ್ಕಂಡು ಎಂತೋ ಆಟ ಆಡ್ತಿದಿದ್ದ ನೋಡಿ’ ಅಂತ. ಆಮೇಲೆ ಏನಾಯಿತು ಅಂತ ನಾನು ಹೇಳಬೇಕಿಲ್ಲವಲ್ಲ.

ನಮ್ಮ ಮನೆಯಲ್ಲಿ ಬಹಳ ಕಾಲದವರೆಗೂ ಎರಡು ಅಲ್ಬಮ್ಮುಗಳು ಇದ್ದವು. ಒಂದು, ‘ಅಪ್ಪ-ಅಮ್ಮನ ಮದುವೆಯ ಅಲ್ಬಮ್’.   ಇನ್ನೊಂದು, ‘ಇತ್ಯಾದಿ ಅಲ್ಬಮ್’.  ಮೊದಲನೆಯ ಅಲ್ಬಮ್ಮಿನಲ್ಲಿ ಅಪ್ಪ-ಅಮ್ಮನ ಮದುವೆಯ ಬ್ಲಾಕ್ ಅಂಡ್ ವ್ಹೈಟ್ ಫೋಟೋಗಳು. ಅದರಲ್ಲಿದ್ದ ಸುಮಾರು ಇಪ್ಪತ್ತು ಫೋಟೋಗಳಲ್ಲಿ ನಾಲ್ಕು ಮಾತ್ರ ಕಲರ್ ಫೋಟೋಗಳು. ಆಗ ಕಲರ್ ಫೋಟೋ ಪ್ರಿಂಟ್ ಹಾಕಿಸುವುದು ಭಯಂಕರ ದುಬಾರಿಯಾಗಿದ್ದರಿಂದ ನಾಲ್ಕನ್ನು ಮಾತ್ರ ಕಲರ್ ಮಾಡಿಸಿ ಇನ್ನುಳಿದದ್ದೆಲ್ಲ ಬ್ಲಾಕ್ ಅಂಡ್ ವ್ಹೈಟಿನಲ್ಲೇ ತೆಗೆಸಿದ್ದಾಗಿತ್ತಂತೆ. ಆ ಫೋಟೋಗಳಲ್ಲೆಲ್ಲ ಯವ್ವನದ ಹುರುಪಿನ ಅಪ್ಪ, ಇನ್ನೂ ಹುಡುಗಿಯಂತಿರುವ ನಾಚಿಕೆಯ ಅಮ್ಮ, ಹಾಗೂ ಇನ್ನೂ ಮಂಡೆ ಹಣ್ಣಾಗದ ಅಜ್ಜ-ಅಜ್ಜಿಯರು ಪೋಸು ಕೊಟ್ಟಿರುವರು.  ಇನ್ನು ಈ ‘ಇತ್ಯಾದಿ ಅಲ್ಬಮ್’ನಲ್ಲಿ ಹೆಚ್ಚಿಗೆ ಇರುವುದು ನನ್ನ ಫೋಟೋಗಳು. ನಾನು ಅಂಬೆಗಾಲಿಕ್ಕುವ ಪಾಪುವಾಗಿರುವ ಫೋಟೋದಿಂದ ಕಾಲೇಜಿನ ಟೂರ್ ಫೋಟೊಗಳವರೆಗೆ ಎಲ್ಲ ಒಂದೇ ಅಲ್ಬಮ್ಮಿನಲ್ಲಿ.  ಮತ್ತೆ ಅದರಲ್ಲಿ, ನಾನು ವೇಷಧಾರಿಯಾಗಿರುವ ಫೋಟೋಗಳೇ ಹೆಚ್ಚಿರುವುದು. ಶಾಲೆಯ ವಾರ್ಷಿಕೋತ್ಸವಗಳಲ್ಲಿ ಅರ್ಜುನನಾಗಿಯೋ, ಧರ್ಮರಾಯನಾಗಿಯೋ, ವೀರ ಅಭಿಮನ್ಯುವಾಗಿಯೋ, ಪರಶುರಾಮನಾಗಿಯೋ ಇರುವ ಫೋಟೋಗಳು. ಅದು ಬಿಟ್ಟರೆ ನಾನು ಗಣ್ಯ ಅತಿಥಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋಗಳು, ಶಾಲೆ-ಕಾಲೇಜುಗಳ ನನ್ನ ಬ್ಯಾಚಿನವರೊಂದಿಗಿನ ಗ್ರೂಪ್ ಫೋಟೋಗಳು. ಈ ಫೋಟೋಗಳನ್ನು ನೋಡಿದಾಗಲೆಲ್ಲ ನಾನು ಅಭಿನಯಿಸಿದ ಆ ಪಾತ್ರಗಳೂ, ಅವುಗಳ ಡೈಲಾಗುಗಳೂ ಅಥವಾ ಮಾಡಿದ ಭಾಷಣಗಳೂ ನೆನಪಿಗೆ ಬರುವವು.  ಆ ಅಲ್ಬಮ್ಮಿನ ಖಾಲಿ ಉಳಿದ ಕೊನೆಯ ಕೆಲ ಖಾನೆಗಳಲ್ಲಿ ನನ್ನ ಅತ್ತೆ-ಅತ್ತಿಗೆಯರ ಕೆಲ ಫೋಟೋಗಳೂ ಜಾಗ ಪಡೆದುಕೊಂಡಿವೆ.

ಒಂದು ಸಲ ಸರ್ಕಾರದ ಯಾವುದೋ ಯೋಜನೆಯಡಿ, ಪ್ರತಿ ಮನೆಗೂ ಶೌಚಾಲಯ ನಿರ್ಮಾಣಕ್ಕೆ ಹಣ ಕೊಡುತ್ತಾರೆ ಅಂತ ಆಯಿತು. ಗ್ರಾಮ ಪಂಚಾಯತಿ ಆಫೀಸಿನಲ್ಲಿ ಪೈಪು-ಕಮೋಡುಗಳನ್ನು ಕೊಡುತ್ತಾರೆ ಅಂತಲೂ, ಅದನ್ನು ಬಳಸಿ ನಾವು ಶೌಚಾಲಯ ಕಟ್ಟಿಸಬೇಕೆಂದೂ, ಆ ನಂತರ ಅದರದೊಂದು ಫೋಟೋ ಕೊಟ್ಟರೆ ನಿರ್ಮಾಣದ ಖರ್ಚಿನ ಲೆಕ್ಕಕ್ಕೆ ಮೂರು ಸಾವಿರ ರೂಪಾಯಿ ಕೊಡುತ್ತಾರೆಂದೂ ಆಯಿತು.  ಆದರೆ ನಮ್ಮೂರು ಅದಾಗಲೇ ಸಾಕಷ್ಟು ಮುಂದುವರೆದ ಸಾಕ್ಷರರ ಊರಾಗಿದ್ದರಿಂದ ಹೆಚ್ಚುಕಮ್ಮಿ ಎಲ್ಲರ ಮನೆಯಲ್ಲೂ ಶೌಚಾಲಯಗಳಿದ್ದವು.  ಆದರೂ ಸರ್ಕಾರದಿಂದ ಎಲ್ಲೋ ಅಪರೂಪಕ್ಕೆ ಹಣ ಬರುತ್ತದೆ ಎಂದಾಗ ಬಿಡಲಿಕ್ಕಾಗುತ್ತದೆಯೇ? ಹೀಗಾಗಿ, ಊರವರೆಲ್ಲ ಒಂದು ಪ್ಲಾನು ಮಾಡಿದರು. ಮೊದಲು ಎಲ್ಲರೂ ಪಂಚಾಯತಿಗೆ ಹೋಗಿ ಸೈನು ಮಾಡಿ ಕಮೋಡು ಎತ್ತಿಕೊಂಡು ಬರುವುದು, ನಂತರ ತಮ್ಮ ಮನೆಯಲ್ಲಿ ಅದಾಗಲೇ ಇರುವ ಶೌಚಾಲಯಕ್ಕೆ ಬಣ್ಣ ಬಳಿಸಿಯೋ, ಸ್ವಚ್ಛ ಮಾಡಿಯೋ, ಹೊಸ ಹೆಂಚು ಹೊದಿಸಿದಂತೆಯೋ ಮಾಡಿ, ಅದರ ಪಕ್ಕದಲ್ಲಿ ತಾವು ನಿಂತು ಫೋಟೋ ತೆಗೆಸಿಕೊಳ್ಳುವುದು! ಈ ಪ್ಲಾನಿಗೆ ಎಲ್ಲರೂ ಒಪ್ಪಿ, ಹಾಗೆಯೇ ಮಾಡಿ, ಒಂದು ದಿನ ಪೇಟೆಯಿಂದ ಫೋಟೋಗ್ರಾಫರ್ ಒಬ್ಬನನ್ನು ಕರೆಸಿ, ಎಲ್ಲ ಮನೆಯ ಯಜಮಾನರುಗಳು ತಮ್ಮತಮ್ಮ ಮನೆಯ ಟಾಯ್ಲೆಟ್ಟಿನ ಪಕ್ಕ ನಿಂತು ಫೋಟೋ ತೆಗೆಸಿಕೊಂಡರು. ವಾರದ ನಂತರ ಆ ಫೋಟೋಗ್ರಾಫರು ವಾಪಸು ಬಂದು ಎಲ್ಲರಿಗೂ ಆ ಫೋಟೋಗಳ ಎರಡೆರೆಡು ಪ್ರತಿ ಕೊಟ್ಟುಹೋದ. ‘ಒಂದೇ ಕಾಪಿ ಸಾಕಿತ್ತಲ್ಲಯ್ಯಾ?’ ಅಂದವರಿಗೆ, ‘ಇರ್ಲಿ ಇಟ್ಕಳಿ ಸಾರ್! ಅಪರೂಪದ ಫೋಟೋ ಇದು’ ಅಂತ ಹೇಳಿದ. ಹಾಗೆ ತೆಗೆಸಿದ ಅಪ್ಪನ ಒಂದು ಫೋಟೋ ಸಹ, ಅಪ್ಪ-ಅಮ್ಮನ ಮದುವೆಯ ಅಲ್ಬಮ್ಮಿನ ಕೊನೆಯ ಖಾನೆಗಳಲ್ಲಿ ಸೇರಿಕೊಂಡಿತು. ಮನೆಗೆ ಯಾರಾದರೂ ಹೊಸ ನೆಂಟರು ಬಂದಾಗ ಅವರಿಗೆ ಅಲ್ಬಮ್ ನೋಡಲೆಂದು ಕೊಟ್ಟರೆ, ಒಳ್ಳೆಯ ಮೂಡಿನಲ್ಲಿ ನಗುಮೊಗದಿಂದ ಫೋಟೋಗಳನ್ನು ನೋಡುತ್ತಿರುತ್ತಿದ್ದ ಅವರು, ಕೊನೆಯಲ್ಲಿ ಅಪ್ಪ ಬಕೀಟು ಹಿಡಿದು ಸಂಡಾಸಿನ ಪಕ್ಕ ನಿಂತಿರುವ ಫೋಟೋ ಕಂಡು ಕಕ್ಕಾಬಿಕ್ಕಿಯಾಗುತ್ತಿದ್ದರು.

ಕ್ಯಾಮರಾಗಳ ತಂತ್ರಜ್ಞಾನ ನಾವು ಊಹಿಸದಷ್ಟು ವೇಗದಲ್ಲಿ ಬೆಳೆಯಿತು. ರೋಲ್ ಕ್ಯಾಮರಾಗಳು ಹೋಗಿ ಡಿಜಿಟಲ್ ಕ್ಯಾಮರಾಗಳು ಬಂದವು. ಒಂದು ರೋಲಿನಲ್ಲಿ ಕೇವಲ ಮೂವತ್ತಾರು ಚಿತ್ರಗಳನ್ನು ತೆಗೆಯಬಹುದಾಗಿದ್ದ ಆ ಕಾಲದಿಂದ, ಒಂದು ಪುಟ್ಟ ಮೆಮರಿ ಕಾರ್ಡಿನಲ್ಲಿ ಖರ್ಚೇ ಇಲ್ಲದೆ ಸಾವಿರಾರು ಫೋಟೋ ಕ್ಲಿಕ್ಕಿಸಿ ಇಡಬಹುದಾದ ಕಾಲ ಬಂತು. ನಾವು ತೆಗೆದ ಫೋಟೋ ಹೇಗೆ ಬಂದಿದೆ ಅಂತ ನೋಡಲು ಗ್ರೀನ್‌ರೂಮಿಗೆ ಹೋಗಿ ಡೆವಲಪ್ ಆಗುವವರೆಗೆ ಕಾಯಬೇಕಿದ್ದ ಆ ಕಾಲದಿಂದ,  ಸೆರೆಹಿಡಿದ ಚಿತ್ರವನ್ನು ಮರುಕ್ಷಣವೇ ಪರದೆಯಲ್ಲಿ ನೋಡಬಹುದಾದ ಕಾಲ ಬಂತು. ಮೆಗಪಿಕ್ಸಲ್‌ಗಳು ಅಗಲವಾದವು, ಜೂಮುಗಳು ಉದ್ದವಾದವು, ಅಪರ್ಚರ್, ಎಕ್ಸ್‌ಪೋಶರ್, ವ್ಹೈಟ್ ಬ್ಯಾಲೆನ್ಸ್, ಐ‌ಎಸ್‌ಓ ಎಲ್ಲವನ್ನೂ ಸುಲಭವಾಗಿ ಸೆಟ್ ಮಾಡಬಲ್ಲ ಮಾಡರ್ನ್ ಕ್ಯಾಮರಾಗಳು ಬಂದವು. ಸೂಪರ್ ಶಾರ್ಪ್ ಲೆನ್ಸುಗಳು ಬಂದವು. ಮೊಬೈಲುಗಳಲ್ಲೇ ಕ್ಯಾಮರಾಗಳು ಬಂದು, ತಮ್ಮ ಇಷ್ಟದ ಅಥವಾ ಅವಶ್ಯದ ಕ್ಷಣವನ್ನು ಎಲ್ಲಿ, ಯಾರು, ಯಾವಾಗ ಬೇಕಾದರೂ ಸೆರೆಹಿಡಿಯಬಹುದಾದಂತ ಸೌಲಭ್ಯ ದೊರಕಿತು. ತೆಗೆದ ಫೋಟೋಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದಕ್ಕೆ ಪಿಕಾಸಾ, ಫ್ಲಿಕರ‍್ನಂತಹ ತಾಣಗಳು ಸಿಕ್ಕವು. ಆರ್ಕುಟ್, ಫೇಸ್‌ಬುಕ್, ಗೂಗಲ್ ಪ್ಲಸ್‌ನಂತಹ ಸಾಮಾಜಿಕ ಜಾಲತಾಣಗಳು ನಮ್ಮ ಫೋಟೋಗ್ರಫಿಯ ಉಚಿತ ಪ್ರದರ್ಶನಕ್ಕೆ ವೇದಿಕೆಯಾದವು. ಸೆಲೆಬ್ರಿಟಿಗಳು ತೆಗೆದುಕೊಂಡ ಸೆಲ್ಫೀಗಳು ಎಲ್ಲೆಡೆ ರಾರಾಜಿಸಿದವು.

ಹೇಳೀಕೇಳೀ ಜಗದ್ವಿಖ್ಯಾತ ಛಾಯಾಗ್ರಾಹಕ ಡಾ| ಡಿ.ವಿ. ರಾವ್ ಅವರ ಊರಿನಲ್ಲಿ ಹುಟ್ಟಿದವನು ನಾನು, ನನಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಬಾರದೆ ಇರುತ್ತದೆಯೇ? ಚಿಕ್ಕವನಿದ್ದಾಗ ನನಗೆ ಕ್ಯಾಮರಾ ಬಗೆಗಿದ್ದುದು ‘ನಾನೂ ಫೋಟೋ ತೆಗೆಯಬೇಕು’ ಎಂಬ ಆಸೆಯಷ್ಟೇ.  ಆದರೆ ಬುದ್ಧಿ ಬಲಿತಮೇಲೆ ಶುರುವಾದದ್ದು ‘ನಾನೂ ಫೋಟೋಗ್ರಫಿ ಮಾಡಬೇಕು’ ಎಂಬ ಆಸಕ್ತಿ. ನಾನೂ ಕೆಲಸ ಹಿಡಿದು ದುಡಿಯುವವನಾದಮೇಲೆ, ಸಂಬಳದಲ್ಲಿ ಉಳಿಸಿದ ಹಣದಿಂದ ಒಂದು ಪಾಯಿಂಟ್-ಅಂಡ್-ಶೂಟ್ ಕ್ಯಾಮರಾ ಕೊಂಡುಕೊಂಡೆ. ಆಮೇಲೆ ಎಲ್ಲಿಗೆ ಹೋಗಬೇಕಾದರೂ ಆ ಕ್ಯಾಮರಾ ಹಿಡಿದುಕೊಂಡು ಹೋಗುವುದು ಚಟವಾಯಿತು. ಅದೃಷ್ಟವೋ ದುರಾದೃಷ್ಟವೋ, ನಾನು ಪ್ರೀತಿಸಿದ ಹುಡುಗಿಯೂ ಫೋಟೋ ಹುಚ್ಚಿನವಳು. ಹೀಗಾಗಿ ನನ್ನ ಕ್ಯಾಮರಾಗೆ ಮತ್ತು ನನ್ನ ಫೋಟೋಗ್ರಫಿಯ ಪ್ರಯೋಗಗಳಿಗೆ ಖಾಯಂ ರೂಪದರ್ಶಿ ಸಿಕ್ಕಂತಾಯಿತು. ಅವಳು ಹೆಂಗೆಂಗೋ ನಿಂತು ಫೋಟೋ ತೆಗಿ ಅಂತ ಹೇಳುವುದೂ, ಅವಳನ್ನು ಹಂಗಂಗೇ ತೆಗೆಯಲು ನಾನು ಒದ್ದಾಡುವುದೂ ಶುರುವಾಯಿತು. ಆಮೇಲೆ ಆ ಫೋಟೋಗೆ ಇನ್ನಷ್ಟು ಮೆರುಗು ಕೊಡಲು ಕಂಪ್ಯೂಟರಿನಲ್ಲಿ ಹೆಣಗಾಡುವುದು, ‘ಒಂಚೂರೂ ಚನಾಗ್ ತೆಗ್ದಿಲ್ಲ ನೀನು’ ಅಂತ ಅವಳು ದೂರುವುದು, ‘ನೀನ್ ಇದ್ದಂಗ್ ಬಿದ್ದಿದೆ’ ಅಂತ ನಾನು ಸಮರ್ಥಿಸಿಕೊಳ್ಳುವುದು, ಹೀಗೆ ಆ ಕ್ಯಾಮೆರಾ ಮತ್ತು ಅದರಲ್ಲಿ ತೆಗೆದ ಫೋಟೋಗಳು ನಮ್ಮ ನಡುವಿನ ಸಾಮರಸ್ಯಕ್ಕೆ ಪೂರಕವಾಗಿ ಕೆಲಸ ಮಾಡತೊಡಗಿದವು.

ನನ್ನ ಫೋಟೋಹುಚ್ಚಿನ ಹುಡುಗಿಯೊಂದಿಗೆ ಮದುವೆ ನಿಶ್ಚಯವಾದಮೇಲೆ, ಮದುವೆಯ ಫೋಟೋಗ್ರಫಿಗೆ ಯಾರನ್ನು ಕರೆಸಬೇಕು ಅಂತ ಮನೆಯಲ್ಲಿ ಚರ್ಚೆಯಾಯಿತು.  ಹೆಚ್ಚು ವೋಟ್ ಬಂದಿದ್ದು ಬೆಳೆಯೂರು ಸದಾಶಿವಣ್ಣನಿಗೇ. ಈ ಬೆಳೆಯೂರು ಸದಾಶಿವಣ್ಣ ನಮ್ಮ ಭಾಗದಲ್ಲೆಲ್ಲ ಬಹು ಜನಪ್ರಿಯರಾಗಿರುವ ಇವೆಂಟ್ ಫೋಟೋಗ್ರಾಫರ್. ನನ್ನ ಅಪ್ಪ-ಅಮ್ಮನ ಮದುವೆಯ ಫೋಟೋಗಳನ್ನು ತೆಗೆದವರೂ ಅವರೇ.  ನಾನು ಮಗುವಾಗಿದ್ದಾಗಿನ ಸುಮಾರು ಫೋಟೋಗಳು, ಶಾಲೆಯ ಯೂನಿಯನ್‌ಡೇಗಳಲ್ಲಿನ ವಿವಿಧ ವೇಷದ ಫೋಟೋಗಳು, ಹೈಸ್ಕೂಲ್ ಬಿಡುವಾಗಿನ ಬ್ಯಾಚ್‌ಫೋಟೋ... ಹೀಗೆ ನಮ್ಮ ಕುಟುಂಬದ ಬಹುತೇಕ ಫೋಟೋಗಳನ್ನು ಆ ಕಾಲದಿಂದ ತೆಗೆಯುತ್ತ ಬಂದವರು ಸದಾಶಿವಣ್ಣ.  ನಮ್ಮ ಭಾಗದ ಬಹಳಷ್ಟು ಕುಟುಂಬಗಳ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತ, ಆ ಕುಟುಂಬಗಳ ಸದಸ್ಯರ ಬೆಳವಣಿಗೆಗಳನ್ನು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ನೋಡುತ್ತಾ ಬಂದವರು ಅವರು. ಆದರೆ ಅಪ್ಪ, ತನಗೆ ಇತ್ತೀಚೆಗೆ ಮತ್ತೊಬ್ಬ ಫೋಟೋಗ್ರಾಫರ್ ಪರಿಚಿತನಾಗಿದ್ದಾನೆಂದೂ, ಆತ ಬಹಳ ಚೆನ್ನಾಗಿ ಫೋಟೋ ತೆಗೆಯುತ್ತಾನೆ ಅಂತಲೂ, ಅವನ ಬಳಿ ಈಗಾಗಲೇ ಮಾತಾಡಿರುವುದರಿಂದ ಅವನಿಗೇ ವಹಿಸುವುದು ಅಂತ ತೀರ್ಮಾನವಾಯಿತು.  ಆ ಫೋಟೋಗ್ರಾಫರ್ ನಮ್ಮ ಮದುವೆಯ ಹಿಂದಿನ ದಿನ ಮನೆಗೆ ಬಂದ. ನೋಡಲು ತುಂಬಾ ಕಪ್ಪಗಿದ್ದ ಅವನನ್ನು ನೋಡಿ ಅಮ್ಮ ನನ್ನನ್ನೂ ಅಪ್ಪನನ್ನೂ ಒಳಗೆ ಕರೆದು ಸಣ್ಣ ದನಿಯಲ್ಲಿ “ಇಷ್ಟ್ ಕೆಟ್ಟದಾಗಿದಾನೆ. ಇಂವ ಎಂಥಾ ಫೋಟೋಗ್ರಾಫರ್ ಅಂತ ಕರೆಸಿದೀರಿ?” ಅಂತ ಕೇಳಿದಳು.  “ಅಂವ ನೋಡಕ್ಕೆ ಹೆಂಗಿದ್ರೆ ಏನು, ಅವನು ತೆಗೆಯೋ ಫೋಟೋಗಳು ಚನಾಗಿದ್ರೆ ಆಯ್ತಲ್ವಾ?” ಅಂತ ಹೇಳಿ ನಾವು ಅಮ್ಮನಿಗೆ ಸಮಾಧಾನ ಮಾಡಿದ್ದಾಯ್ತು.

ಅಂತೂ ನಮ್ಮ ಮದುವೆಯ ಫೋಟೋಗಳನ್ನು ಅದೇ ಫೋಟೋಗ್ರಾಫರ್ ತೆಗೆದ. ನಮ್ಮ ಮದುವೆಯ ಪ್ರತಿ ಸಂಪ್ರದಾಯದ, ಉಡುಗೊರೆ ಕೊಡುವ-ತೆಗೆದುಕೊಳ್ಳುವ ಫೋಟೋಗಳನ್ನೆಲ್ಲ ಆತ ತೆಗೆದ.  ಅಥವಾ, ಇನ್ನೊಂದರ್ಥದಲ್ಲಿ, ಆತ ಹೇಗೆ ಪೋಸ್ ಕೊಡಿ ಅಂತ ಹೇಳಿದನೋ ಹಾಗೆಲ್ಲ ನಾವು ಸಂಪ್ರದಾಯವನ್ನು ಆಚರಿಸಿದೆವು.  ಮದುವೆಯಾಗಿ ಹದಿನೈದು ದಿನಗಳ ನಂತರ ಆತ ದೊಡ್ಡ ಕರಿಷ್ಮಾ ಅಲ್ಬಮ್ಮನ್ನೂ, ಅದರಷ್ಟೇ ಭಾರದ ಬಿಲ್ಲನ್ನೂ ತಂದುಕೊಟ್ಟ.  ಆದರೆ ನಮ್ಮ ನೂರಾರು ಹಲ್ಕಿರಿದ ಫೋಟೋಗಳನ್ನು ತೆಗೆದಿದ್ದ, ಹೆಚ್ಚುಕಮ್ಮಿ ಎಲ್ಲ ಸಂದರ್ಭಗಳನ್ನೂ ಸೆರೆಹಿಡಿದಿದ್ದ ಅವನು ಎರಡು ದೊಡ್ಡ ತಪ್ಪು ಮಾಡಿದ್ದ: ಒಂದು, ನಾನು ನನ್ನ ಹೆಂಡತಿಗೆ ತಾಳಿ ಕಟ್ಟುವ ಫೋಟೋನೇ ಮಿಸ್ ಆಗಿತ್ತು; ಇನ್ನೊಂದು, ನನ್ನ ಹೆಂಡತಿಯ ಮೊಗ್ಗಿನ ಜಡೆಯ ಫೋಟೋ ಇರಲಿಲ್ಲ! ಮಜಾ ಎಂದರೆ, ಈ ಫೋಟೋಗ್ರಾಫರ್‌ನ ಜೊತೆ, ನಮ್ಮ ಮದುವೆಯ ದಿನ ಅಷ್ಟೊಂದು ಗೆಳೆಯರು ಮತ್ತು ನೆಂಟರು ತಮ್ಮ ಕ್ಯಾಮರಾ, ಮೊಬೈಲುಗಳಲ್ಲಿ ಫೋಟೋ ತೆಗೆದುಕೊಂಡಿದ್ದರಾದರೂ, ನಂತರ ಆ ಎಲ್ಲರಿಂದ ಫೋಟೋಗಳನ್ನು ತರಿಸಿಕೊಂಡು ನೋಡಿದರೂ ಯಾರ ಬಳಿಯೂ ಈ ಎರಡು ಫೋಟೋಗಳು ಇರಲಿಲ್ಲ!  ಇಷ್ಟೊಂದು ಕ್ಯಾಮರಾಗಳಿದ್ದೂ ಹೀಗಾಗಿದ್ದು ಈ ಕಾಲ, ಆಧುನಿಕತೆ ಮತ್ತು ವ್ಯವಸ್ಥೆಯ ವ್ಯಂಗ್ಯದಂತಿತ್ತು.

ಇದರಿಂದ ಎಲ್ಲಕ್ಕಿಂತ ಹೆಚ್ಚು ವ್ಯಘ್ರಳಾದದ್ದು ನನ್ನ ಹೆಂಡತಿ: “ಅಂವ ಎಂಥಾ ವೇಸ್ಟ್ ಫೋಟೋಗ್ರಾಫರ್ರು! ಇಡೀ ಮದುವೇಲಿ ಮುಖ್ಯವಾಗಿರೋದೇ ತಾಳಿ ಕಟ್ಟೋದು, ಅದರ ಫೋಟೋನೇ ತೆಗೆದಿಲ್ವಲ್ಲಾ! ನಾನು ಮೊಗ್ಗಿನ ಜಡೆ ಹಾಕ್ಕೊಂಡು ಎಷ್ಟ್ ಚನಾಗ್ ತಯಾರಾಗಿದ್ದೆ!  ಹಿಂದುಗಡೆಯಿಂದ ಒಂದು ಫೋಟೋ ತೆಗೀಬೇಕು ಅಂತ ಅವನಿಗೆ ತಿಳೀಲಿಲ್ವಾ ಹಾಗಾದ್ರೆ? ನಾವೇನು ಇನ್ನೊಂದ್ಸಲ ಇಷ್ಟು ಗ್ರಾಂಡಾಗಿ ತಯಾರಾಗಿ, ಇಷ್ಟು ಜನರ ನಡುವೆ, ಮಂಟಪದ ಕೆಳಗೆ ಮತ್ತೆ ತಾಳಿ ಕಟ್ಟಲಿಕ್ಕೆ ಆಗತ್ತಾ?  ಹೋಗ್ಲಿ, ಮಾಂಗಲ್ಯಧಾರಣೆಯ ಫೋಟೋ ಇಲ್ದಿದ್ರೆ ಪರ್ವಾಗಿಲ್ಲ, ನೀನು ತಾಳಿ ಕಟ್ಟಿದೀಯ ಅನ್ನೋಕೆ ಸಾಕ್ಷಿಯಾಗಿ ನನ್ನ ಕೊರಳಲ್ಲಿ ತಾಳಿ ಇದೆ, ಆದ್ರೆ ನನ್ನ ಮೊಗ್ಗಿನ ಜಡೆಯ ಫೋಟೋ? ಮುಂದೆ ಯಾವತ್ತೂ ನಂಗೆ ಮೊಗ್ಗಿನ ಜಡೆ ಹಾಕ್ಕೊಳ್ಳೋ ಅವಕಾಶವೂ ಇಲ್ಲ. ಮೊಗ್ಗಿನ ಜಡೇಲಿ ನಾ ಹೆಂಗೆ ಕಾಣ್ತಿದ್ದೆ ಅಂತ ಈಗ ನೋಡ್ಕೊಳ್ಳೋಣ ಅಂದ್ರೂ ಒಂದು ಫೋಟೋ ಇಲ್ಲ. ಅದರ ಫೋಟೋ ಫೇಸ್‌ಬುಕ್ಕಲ್ಲಿ ಹಾಕಿದ್ರೆ ಎಷ್ಟು ಲೈಕ್ಸ್ ಬರ್ತಿತ್ತು.. ಎಲ್ಲಾ ಲಾಸು..” ಅಂತೆಲ್ಲ ಹಪಹಪಿಸಿದಳು. ಫೇಸ್‌ಬುಕ್ಕಿನ ಲೈಕುಗಳ ನಷ್ಟಕ್ಕಿಂತ ದೊಡ್ಡ ನಷ್ಟ ಈ ಜಗತ್ತಿನಲ್ಲಿ ಮತ್ತೊಂದಿಲ್ಲವಾದ್ದರಿಂದ, ಅವಳನ್ನು ಸಮಾಧಾನ ಮಾಡಲು ನನಗೂ ತಿಳಿಯಲಿಲ್ಲ.  ಆದರೂ “ಮುಂದೆ ಯಾವತ್ತಾದರೂ ಒಂದು ದಿನ ನಿನಗೆ ಮೊಗ್ಗಿನ ಜಡೆ ತಂದು ಮುಡಿಸಿ ಫೋಟೋ ತೆಗೆದುಕೊಡುತ್ತೇನೆ” ಅಂತ ಹೇಳಿ ನಂಬಿಸಲು ಯತ್ನಿಸಿದೆ. ಅದಕ್ಕಾಕೆ, “ಇನ್ನೂ ಮದುವೆ ಆಗಿ ಹದಿನೈದು ದಿನ ಆಗಿದೆ, ಹೆಂಡತೀನ ಓಲೈಸೋಕೆ ಸುಳ್ಳು ಹೇಳೋ ಟೆಕ್ನಿಕ್ಕು ಆಗಲೇ ಶುರುಮಾಡಿಕೊಂಡೆ” ಅಂತ ಬೈದಳು.

ನಾನು ಇತ್ತೀಚೆಗೊಂದು ಡಿ‌ಎಸ್ಸೆಲ್ಲಾರ್ ಕ್ಯಾಮರಾ ಕೊಂಡುಕೊಂಡೆ. ದುಬಾರಿ ಬೆಲೆಯ ವಸ್ತು ಕೊಳ್ಳುವಾಗ ಸಾಮಾನ್ಯವಾಗಿ ಆಕ್ಷೇಪಿಸುವ ಹೆಂಡತಿ ಈ ಸಲ ಏನೂ ಅನ್ನಲಿಲ್ಲ. “ಈ ಕ್ಯಾಮರಾದಲ್ಲಿ ನಿನ್ ಫೋಟೋ ತೆಗ್ದು ಫೇಸ್‌ಬುಕ್ಕಿಗೆ ಹಾಕಿದ್ರೆ ಅರ್ಧ ಗಂಟೆಯೊಳಗೆ ನೂರು ಲೈಕ್ಸ್ ಬರುತ್ತೆ ನೋಡು” ಎಂಬ ನನ್ನ ಆಮಿಷಕ್ಕೆ ಬಲಿಯಾದ ಅವಳು ಹಿಂದೆಮುಂದೆ ಸಹ ಯೋಚಿಸದೆ ಓಕೇ ಎಂದುಬಿಟ್ಟಳು. ‘ಡಿ‌ಎಸ್ಸೆಲ್ಲಾರ್ ಹಿಡಿದ ಪ್ರತಿ ಕೋತಿಯೂ ತಾನು ದೊಡ್ಡ ಫೋಟೋಗ್ರಾಫರ್ ಅಂದುಕೊಳ್ಳುತ್ತದೆ’ ಎಂಬ ಮಾತನ್ನು ಸುಳ್ಳು ಮಾಡದಿರಲು ನಾನೂ ನನ್ನ ಪ್ರೊಫೈಲಿನಲ್ಲಿ, ಬ್ಲಾಗರ್, ರೈಟರ್ ಇತ್ಯಾದಿಗಳ ಜತೆ ‘ಫೋಟೋಗ್ರಾಫರ್’ ಅಂತ ಸೇರಿಸಿದೆ.

ದುಬಾರಿ ಬೆಲೆಯ ಕ್ಯಾಮರಾ ಹಿಡಿದ ಈ ಹೊಸ ಫೋಟೋಗ್ರಾಫರನಿಗೆ ಮೊದಲ ಅಸೈನ್‌ಮೆಂಟ್ ಬರುವುದೂ ತಡವಾಗಲಿಲ್ಲ. ಮೊನ್ನೆ ಹಬ್ಬಕ್ಕೆಂದು ಮಾವನ ಮನೆಗೆ ಹೋಗಿದ್ದಾಗ, ನನ್ನ ನಾದಿನಿಗೆ ವರ ಹುಡುಕಲು ಸಧ್ಯದಲ್ಲೇ ಶುರುಮಾಡುವುದಾಗಿಯೂ, ಅವಳ ಜಾತಕದೊಂದಿಗೆ ಕೊಡಲು ಒಂದಷ್ಟು ಫೋಟೋಗಳು ಬೇಕು ಅಂತಲೂ, ಒಳ್ಳೇ ಸ್ಟುಡಿಯೋಗೆ ಹೋಗಿ ತೆಗೆಸಬೇಕು ಅಂತಲೂ ನನ್ನ ಅತ್ತೆ-ಮಾವ ಹೇಳಿದರು.  ಅಲ್ಲೇ ಇದ್ದ ನನ್ನ ಹೆಂಡತಿ, “ಅಯ್ಯೋ, ಮನೇಲೇ ಫೋಟೋಗ್ರಾಫರ್ರನ್ನ ಇಟ್ಕೊಂಡು ಸ್ಟುಡಿಯೋಗೆ ಯಾಕೆ ಹೋಗ್ಬೇಕು? ನಿಮ್ ಅಳಿಯಾನೇ ಎಷ್ಟ್ ಫೋಟೋ ಬೇಕಾದ್ರೂ ತೆಕ್ಕೊಡ್ತಾನೆ” ಅಂದಳು.  ನಾನು ಹೌದೌದೆಂದು ತಲೆಯಾಡಿಸಿದೆ.  ಜತೆಗೆ ನಾದಿನಿಗೆ ಒಂದು ಷರತ್ತನ್ನೂ ಹಾಕಿದೆ: “ಒಳ್ಳೊಳ್ಳೇ ಫೋಟೋಸ್ ತೆಕ್ಕೊಡ್ತೀನಿ. ಆದ್ರೆ ನಿನ್ ಮದುವೆ ದಿವಸ ನಿನ್ನ ಮೊಗ್ಗಿನ ಜಡೆಯನ್ನ ಹತ್ತು ನಿಮಿಷದ ಮಟ್ಟಿಗೆ ನಂಗೆ ಕೊಡಬೇಕು” ಅಂತ.  ಕಕ್ಕಾಬಿಕ್ಕಿಯಾದ ಅವಳು “ಅದ್ಯಾಕೆ ಭಾವಾ?” ಅಂತ ಕೇಳಿದಳು. “ಅದೆಲ್ಲಾ ಆಮೇಲ್ ಹೇಳ್ತೀನಿ” ಅಂತ ಜಾರಿಕೊಂಡೆ.   ಸರಿ, ನಾದಿನಿ ಚಂದದ ಸೀರೆಯುಟ್ಟು ಹತ್ತಿರದ ಪಾರ್ಕಿನಲ್ಲಿ ವಿವಿಧ ಭಂಗಿಗಳಲ್ಲಿ ನಿಂತು ಒಂದಷ್ಟು ಪೋಸ್ ಕೊಟ್ಟಳು. ನಾನು ಸೆರೆಹಿಡಿದೆ. ಅವನ್ನೆಲ್ಲ ಅದೇ ಊರಿನ ಲ್ಯಾಬ್ ಒಂದಕ್ಕೆ ಹೋಗಿ ಪ್ರಿಂಟ್ ಹಾಕಲು ಕೊಟ್ಟೆ. ಆ ಫೋಟೋಗಳನ್ನು ಕಂಪ್ಯೂಟರ್ ಪರದೆಯಲ್ಲಿ ನೋಡಿದ ಲ್ಯಾಬಿನವನು “ನೀವು ಫೋಟೋಗ್ರಾಫರ್ರಾ ಸಾರ್? ಎಷ್ಟ್ ಒಳ್ಳೊಳ್ಳೇ ಫೋಟೋಸ್ ತೆಗ್ದಿದೀರಾ ಸಾರ್.. ಗ್ರೇಟ್ ಸಾರ್” ಅಂದ.  ತಿರುವಲಾಗದಂತೆ ಅವತ್ತು ಬೆಳಗ್ಗೆಯಷ್ಟೇ ಮೀಸೆ ಟ್ರಿಮ್ ಮಾಡಿಕೊಂಡಿದ್ದಕ್ಕೆ ಅರೆಕ್ಷಣ ಬೇಸರವಾಯಿತು.

ಈಗ ನಾನು ತೆಗೆದ ಆ ಫೋಟೋಗಳು ಪ್ರಿಂಟಾಗಿ ಬಂದು, ನಾದಿನಿಯ ಜಾತಕದೊಂದಿಗೆ ಸೇರಿ ಹಂಚಲ್ಪಟ್ಟು, ಅವಳಿಗೊಂದು ಮದುವೆ ನಿಶ್ಚಯವಾಗಿ, ಮದುವೆಯ ದಿನ ಸ್ವಲ್ಪ ಸಮಯಕ್ಕಾದರೂ ಅವಳ ಮೊಗ್ಗಿನ ಜಡೆಯನ್ನು ಇಸಕೊಂಡು ಬಂದು, ನನ್ನ ಹೆಂಡತಿಗೆ ಮುಡಿಸಿ, ಅದರ ಫೋಟೋ ತೆಗೆದು, ಹೇಗಾದರೂ ನಮ್ಮ ಮದುವೆಯ ಅಲ್ಬಮ್ಮಿಗೆ ಸೇರಿಸುವ, ಹಾಗೇ ಫೇಸ್‌ಬುಕ್ಕಿಗೆ ಅಪ್‌ಲೋಡ್ ಮಾಡಿ ಸಾವಿರಾರು ಲೈಕುಗಳನ್ನು ಪಡೆಯುವ ಕನಸು ಕಾಣುತ್ತಿದ್ದೇನೆ.  ಬ್ಯಾಗಿನಲ್ಲಿ ಉದ್ದಕೆ ಮಲಗಿರುವ ಕ್ಯಾಮರಾ ತಾನು ರೆಡಿ ಅಂತ ಲೆನ್ಸಿನ ಕಣ್ಣು ಮಿಟುಕಿಸುತ್ತಿದೆ.

[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ.]