ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.
ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್‌ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.
ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್‌ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್‌ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್‌ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್‌ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.
ಈಗ ಕೆಲ ದಿನಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್‌ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.
ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್‌ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.
ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.
ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.
Showing posts with label Diwali. Show all posts
Showing posts with label Diwali. Show all posts
Friday, October 16, 2009
Thursday, October 23, 2008
ಆಕಾಶಬುಟ್ಟಿ
ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.
ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.
'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!
'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!
ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..
'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!
ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..
ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..
ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.
ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!
ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.
ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.
* *
ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.
ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.
'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!
'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!
ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..
'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು. 'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!
ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..
ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..
ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.
ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!
ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.
ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.
ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.
* *
ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.
Tuesday, November 06, 2007
ದೀಪವಾಗಬೇಕಿದೆ...
ರಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...
ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...
ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.
ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."
ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?
ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?
ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...
ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...
ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...
ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."
ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?
ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?
ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...
ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...
Wednesday, October 18, 2006
ದೀಪಾವಳಿಗೆ ಒಂದಷ್ಟು ಪ್ರಣತಿಗಳು
ಗೋಪೂಜೆ ಮಾಡಬೇಕಿದೆ..
ಇದು ಈ ವರ್ಷ ತಂದ ಹೊಸ ದನ..
ಕಳೆದ ವರ್ಷ ಇತ್ತಲ್ಲ, ಆ ದನ
ಕೆಚ್ಚಲುಬಾವು ಬಂದು ಮಧ್ಯದಲ್ಲೇ ಹಾಲು
ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ನಮಗ್ಯಾಕಿದ್ದೀತು ರಗಳೆ ಎಂದು ಆಲೋಚಿಸಿ
ಒಳ್ಳೆಯ ರೇಟು ನೋಡಿ ಮಾರಿಬಿಟ್ಟೆವು.
ಈಗ ಆ ದನ ಎಲ್ಲಿದೆಯೋ ಗೊತ್ತಿಲ್ಲ
ಅದಕ್ಕೆ ಸರಿಯಾಗಿ ಅಕ್ಕಚ್ಚು, ಹಿಂಡಿ
ಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ
ಮೇಯಲು ಹೊರಗೆ ಬಿಡುತ್ತಾರೊ
ಅಥವಾ ಅವರೇ ಹುಲ್ಲು ಕೊಯ್ದು
ತಂದು ಹಾಕುತ್ತಾರೋ ಗೊತ್ತಿಲ್ಲ
ಅಪ್ಪನನ್ನು ಕೇಳಿದರೆ
'ಕೊಟ್ಟ ದನ ಕೊಟ್ಟಿಗೆಗೆ ಹೊರಗೆ,
ಸುಮ್ಮನಿರು' ಅನ್ನುತ್ತಾನೆ.
ಗೋಪೂಜೆ ಮಾಡಬೇಕಿದೆ..
ಕಳೆದ ವರ್ಷದ ದೀಪಾವಳಿಯಲ್ಲಿ
ಕೆಂಪು-ಹಸಿರು ಬಣ್ಣಗಳನ್ನು ಕೊಂಬು,
ಮೈಗೆಲ್ಲ ಸವರುವಾಗ ಆ ದನ
ಸ್ವಲ್ಪವೂ ತಿರುಗಾಡದೆ, ಹಾಯದೆ, ಒದೆಯದೆ
ನಿಂತಿರುತ್ತಿತ್ತು. ಅದರ ಕರು ಮಾತ್ರ ಚಿಗರೆಮರಿ.
ನನ್ನ ಹುಡುಗಿಗಿಂಥಾ ಜೋರು ಹಾರಾಟ-ಕುಣಿದಾಟ
-ಗುದ್ದುಮುರಿಯಾಟಗಳಲ್ಲಿ.
ಗೋಪೂಜೆ ಮಾಡಬೇಕಿದೆ..
ನನಗೋ ಹಳೆಯ ಗೋವಿನದೇ ನೆನಪು
ಈ ವರ್ಷ ಅದನ್ನು ಹಿಡಿದು ಕಟ್ಟಿ,
ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಣ್ಣ ಹಚ್ಚಿ,
ಹೊಸ ಕಣ್ಣಿ ಕಟ್ಟಿ, ಪೂಜೆ ಮಾಡಿ,
ಗೋಗ್ರಾಸ ಕೊಟ್ಟು, ಕೊನೆಗೆ ಮರುದಿನ
ದೃಷ್ಟಿ ತೆಗೆದು... ಅದನ್ನೆಲ್ಲಾ ಮಾಡುವವರು ಯಾರು?
ಗೋಪೂಜೆ ಮಾಡಬೇಕಿದೆ..
ಅಪ್ಪನ ಬಳಿ ಹೇಳುತ್ತೇನೆ:
'ಅಪ್ಪಾ, ನಂಗ್ಯಾಕೋ ಆಗುತ್ತಿಲ್ಲ,
ನೀನೇ ಮಾಡು..'
***

ನನಗೆ ಹಾಗೇ, ಒಂಥರಾ ತಿಕ್ಕಲು.
ದೀಪ ಹಚ್ಚುವಾಗ
ಹಣತೆ ಮಾಡಿದ ಕೈಗಳು
ಬತ್ತಿ ಹೊಸೆಯುವಾಗ
ಹತ್ತಿಯನ್ನು ಬೀಜದಿಂದ ಬಿಡಿಸಿದ ಕೈಗಳು
ಹಣತೆಗೆ ಎಣ್ಣೆ ಎರೆಯುವಾಗ
ಆ ಎಣ್ಣೆಯನ್ನು ತಯಾರಿಸಿದ ಕೈಗಳು
ಹೋಳಿಗೆಗೆ ಉಂಡೆ ಕಟ್ಟಿಕೊಡುವಾಗ
ಬೇಳೆ ಬೆಳೆದವನ ಕೈಗಳು
ಹೊಸ ಕಣ್ಣಿಯನ್ನು ಕಟ್ಟುವಾಗ
ಅದನ್ನು ಹೊಸೆದ ಕೈಗಳು
ಪಟಾಕಿ ಹಚ್ಚುವಾಗ
ಅದರೊಳಗೆ ಮದ್ದು ತುಂಬಿದ ಕೈಗಳು
.....ಬಿಡದೇ ಕಾಡುತ್ತವೆ.
ಮಂದಿಯ ಪ್ರಕಾರ ನಾನು
ನಾಟ್ ಪ್ರಾಕ್ಟಿಕಲ್ಲು.
ನನಗೆ ಹಾಗೇ, ಒಂಥರಾ ತಿಕ್ಕಲು!
***
ಆದರೆ ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ ನೋಡಿ
ಹಣತೆ ಎಲ್ಲಿದೆ ಹುಡುಕಬೇಕು
ಬೆಂಕಿಪೊಟ್ಟಣವಂತೂ ಇಟ್ಟಲ್ಲಿ ಇರುವುದಿಲ್ಲ
ಹಣತೆಯಲ್ಲಿ ನಿನ್ನೆ ಸುರಿದಿಟ್ಟಿದ್ದ ಎಣ್ಣೆ ಆರಿಹೋಗಿದೆ
ಬತ್ತಿ ಕಟ್ಟು ಎಲ್ಲಿದೆ...?
ಓಹ್! ದೇವರ ಗೂಡಿನ ಮೇಲಿದೆ
ಎಲ್ಲವನ್ನೂ ಹುಡುಕಿ ತಂದು,
ಹಣತೆಗೆ ಎಣ್ಣೆ ಸುರಿದು,
ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ,
ಕಡ್ಡಿ ಗೀರಿ "ಚೊರ್ರ್"... ಬೆಳಕು.
ಹಾಗೆಲ್ಲಾ ಒಂದೇ ಕಡ್ಡಿಯಲ್ಲಿ ಹಚ್ಚಲಾಗುವುದಿಲ್ಲ
(ಇದೇನು ಸಿಗರೇಟಾ?)
ಮತ್ತೊಂದು ಕಡ್ಡಿ ಗೀರಬೇಕು.
ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ.
ಗಾಳಿಯಿದ್ದರಂತೂ ಮತ್ತೂ ಕಷ್ಟ.
***
ನಾನು ಚಿಕ್ಕವನಿದ್ದಾಗ
ಪಟಾಕಿ ಹಚ್ಚುವುದಕ್ಕೆ ಹೆದರುತ್ತಿದ್ದೆ.
ಈಗ ಏನಕ್ಕೂ ಹೆದರುವುದಿಲ್ಲ.
***
ದೀಪಾವಳಿಯೆಂದರೆ ದೀಪಗಳ ಹಬ್ಬ
ಅನ್ನುತ್ತಾರೆ.
ನಾನೀಗ ಕಷ್ಟ ಪಟ್ಟು
ಎರಡು ದೀಪಗಳನ್ನು ಹಚ್ಚಿಟ್ಟಿದ್ದೇನೆ.
ಅವು ಪರಸ್ಪರ ಮಾತಾಡಿಕೊಳ್ಳುತ್ತಿವೆ:
"ಹೇ, ನೀನು ಈಗ ಕಾಣಿಸುತ್ತಿದ್ದೀಯ"
"ಹೇ, ನೀನಿವತ್ತು ಚಂದ ಕಾಣಿಸುತ್ತಿದ್ದೀಯ".
"ಹೂಂ, ಇವತ್ತು ಹಬ್ಬ ಅಲ್ವಾ?"
"ಏನ್ ಹಬ್ಬ?"
"ದೀಪಾವಳಿ, ನಮ್ಮ ಹಬ್ಬ"
ಹಣತೆ ಹಣತೆಯನ್ನು ನೋಡುವುದಕ್ಕೂ
ಬೆಳಕು ಬೇಕು ನೋಡಿ.
***
ದೀಪದ ಬೆಳಕಿನಲ್ಲಿ ಕಂಡಷ್ಟು ಚಂದ
ಬೆಂಕಿಯ ಬೆಳಕಿನಲ್ಲಿ ಕಾಣುವುದಿಲ್ಲ
ನಲ್ಲೆಯ ಮುಖಾರವಿಂದ.
*** *** *** ***
ಎಲ್ಲೋ ಇರುವ ಆ ದನಕ್ಕೆ ಈ ವರ್ಷವೂ ಗೋಗ್ರಾಸ ಸಿಗಲಿ. ಎಲ್ಲೋ ಇದ್ದೂ ಇಲ್ಲಿ ನೆನಪಾಗುವ ಎಲ್ಲಾ ಕಷ್ಟಜೀವಿಗಳ ಅಗೋಚರ ಕೈಗಳು ಬೆಚ್ಚಗಿರಲಿ. ಕತ್ತಲೆಯಲ್ಲಿರುವವರಿಗೆ ದೀಪ ಬೇಗ ಸಿಗಲಿ. ಒಂದೇ ಬೆಂಕಿಕಡ್ಡಿಯಿಂದ ದೀಪ ಹತ್ತಿಕೊಳ್ಳಲಿ. ಪಟಾಕಿಯ ಸದ್ದಿಗೆ ಮಲಗಿದ ಮಗು ಎಚ್ಚರಗೊಳ್ಳದಿರಲಿ. ಹಣತೆಗಳು ಸದಾ ಮಾತಾಡಿಕೊಳ್ಳುತ್ತಿರಲಿ. ನಲ್ಲೆಯ ಮುಖದಲ್ಲಿ ದೀಪದ ಬೆಳಕು ಸದಾ ಲಾಸ್ಯವಾಡುತ್ತಿರಲಿ. ಮತ್ತು ದೀಪ ಎಂದೂ ಬೆಂಕಿಯಾಗದಿರಲಿ.
ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.

Subscribe to:
Posts (Atom)