Friday, December 20, 2019
ಅಟ್ಟಣಿಗೆ
ಮನೆ ಮುಟ್ಟಿದರೆ ಮೊಬೈಲ್ ಹಿಡಿದಿದ್ದ ರೇಖಾ ಯಾವುದೋ ಶಾಪಿಂಗ್ ಸೈಟಿನಲ್ಲಿ ಒಂದಷ್ಟು ವಸ್ತುಗಳನ್ನು ಕಾರ್ಟಿಗೆ ಹಾಕಿಕೊಂಡು ‘ನೋಡು ಪ್ರಶ್, ಈ ಕಲರ್ ಟಾಪ್ ನಂಗೆ ಒಪ್ಪುತ್ತಾ?’ ಅಂದಳು. ‘ಏ.. ಹೊತ್ತುಗೊತ್ತು ಇಲ್ವಾ ನಿಂಗೆ? ಯಾವಾಗ ನೋಡಿದ್ರೂ ಶಾಪಿಂಗು. ತಗೊಂಡಾದ್ರೂ ತಗೊಳ್ತೀಯಾ? ಅದೂ ಇಲ್ಲ. ಕಾರ್ಟಿಗೆ ಹಾಕೋದು, ಕೊನೆಗೆ ರಿಮೋವ್ ಮಾಡೋದು.. ಇಪ್ಪತ್ನಾಲ್ಕು ಗಂಟೆ ಆ ಮೊಬೈಲ್ ಹಿಡ್ಕಂಡಿರ್ತೀಯ. ಮೊದ್ಲು ತೆಗ್ದು ಪಕ್ಕಕ್ಕಿಡು ಅದನ್ನ’ ರೇಗಿದ. ಗಂಡನ ಮೂಡು ಸರಿಯಿಲ್ಲ ಎಂಬುದು ಹೆಂಡತಿಗೆ ಅರ್ಥವಾಯಿತು. ಜತೆಗೇ ಬೆಳಿಗ್ಗೆ ನಡೆದ ಘಟನೆಯೂ ನೆನಪಾಯಿತು. ‘ಸಾರಿ, ಹೋದ ಕೆಲಸ ಏನಾಯ್ತು? ಅಡ್ಮಿಟ್ ಮಾಡ್ಕೊಂಡ್ರಾ? ಹೆಚ್ಚಿಗೆ ಏನೂ ಪೆಟ್ಟು ಆಗಿಲ್ವಂತಾ?’ ಕೇಳಿದಳು. ‘ಮಾಡ್ಕೊಂಡ್ರು. ತುಂಬಾ ನೋವು ಅನುಭವಿಸ್ತಿರೋದು ನೋಡಿದ್ರೆ ಸ್ಪೈನಲ್ ಕಾರ್ಡಿಗೆ ಏಟು ಬಿದ್ದಿದೆಯಾ ಟೆಸ್ಟ್ ಮಾಡ್ಬೇಕು. ಮೊದಲು ಇಷ್ಟು ಟೆಸ್ಟ್ ಮಾಡಿಸಿ ಅಂತ ಎಕ್ಸರೇ, ಸ್ಕಾನಿಂಗ್, ಬ್ಲಡ್ ಟೆಸ್ಟ್ ಅಂತ ಸುಮಾರೆಲ್ಲ ಪಟ್ಟಿ ಬರ್ಕೊಟ್ರು. ಮೊದಲಿಗೆ ಹತ್ತು ಸಾವಿರ ರೂಪಾಯಿ ಕಟ್ಟಬೇಕು ಅಂದ್ರು. ಅಷ್ಟರಲ್ಲಿ ಅವನ ಸಂಬಂಧಿಕರೋ-ಊರವರೋ ಯಾರೋ ಮೂರ್ನಾಲ್ಕು ಜನ ಬಂದ್ರು. ಅವರೆಲ್ಲ ಹೊಂಚಿ ಕಲೆ ಹಾಕಿದರೂ ಒಟ್ಟು ಆರು ಸಾವಿರ ಇತ್ತು ಅವರ ಬಳಿ. ಅವನ ಹೆಂಡತಿ ಒಂದೇ ಸಮನೆ ಅಳ್ತಾ ಇದ್ಲು. ಪಾಪ ಅನ್ನಿಸ್ತು. ಮತ್ತೇನ್ ಮಾಡೋದು? ನಾನೇ ಇನ್ನು ನಾಲ್ಕು ಸಾವಿರಕ್ಕೆ ಕಾರ್ಡ್ ಸ್ವೈಪ್ ಮಾಡಿ ಬಂದೆ’ ಅಂತ ಹೇಳಿದ. ‘ನಾಲ್ಕು ಸಾವಿರ ಕೊಟ್ಯಾ? ಇಟ್ಸ್ ಅ ಬಿಗ್ ಅಮೌಂಟ್!’ ಅಂದ ರೇಖಾಗೆ, ‘ಆ ಪಕ್ಕದಮನೆ ಓನರ್ ಬರ್ಲಿ ಬಡ್ಡಿಮಗ, ಜಬರದಸ್ತಿ ಮಾಡಿಯಾದ್ರೂ ವಸೂಲಿ ಮಾಡ್ತೀನಿ’ ಅಂದ.
ಹಣ ಹಾಗೆ ಖರ್ಚಾದುದಕ್ಕೆ ತಲೆಬಿಸಿಯಾಗಿದ್ದಕ್ಕಿಂತಲೂ ಪ್ರಶಾಂತನಿಗೆ ಬೆಳಗಿನ ಆ ಘಟನೆಯ ಶಾಕ್‌ನಿಂದ ಹೊರಬರಲು ಆಗಲೇ ಇಲ್ಲ. ರೂಮಿಗೆ ಹೋಗಿ ಬಟ್ಟೆ ಬದಲಿಸಿದ. ಆಫೀಸಿಗೆ ಬರೋದಿಲ್ಲ ಅಂತ ಮ್ಯಾನೇಜರಿಗೆ ಮೆಸೇಜು ಮಾಡಿದ. ರೇಖಾ ತಿಂಡಿ ಕೊಡಲು ಬಂದರೆ ಹಸಿವಿಲ್ಲ ಅಂತ ತಟ್ಟೆಯನ್ನು ದೂರ ತಳ್ಳಿದ. ‘ಕಮಾನ್ ಪ್ರಶ್.. ಎವೆರಿಥಿಂಗ್ ವಿಲ್ ಬಿ ಆಲ್ರೈಟ್.. ಅವನು ಹುಷಾರಾಗಿ ವಾಪಸ್ ಬರ್ತಾನೆ. ಯಾರೋ ನಮಗೆ ಸಂಬಂಧವಿಲ್ಲದವರಿಗೆ ಏನೋ ಆಗಿದ್ದಕ್ಕೆ ಇಷ್ಟೊಂದು ತಲೆ ಹಾಳು ಮಾಡ್ಕೊಂಡಿದೀಯಲ್ಲ.. ಆ ಸಮಯದಲ್ಲಿ ಏನು ಮಾಡಬಹುದಿತ್ತೋ ಅದನ್ನ ನಾವು ಮಾಡಿದೀವಿ. ಹೌದು, ಅದು ಕರ್ತವ್ಯ, ಮಾನವೀಯತೆ. ಸಹಾಯ ಮಾಡಿದ್ವಿ. ಅದಕ್ಕಿಂತ ಜಾಸ್ತಿ ನಾವು ಇನ್ನೇನೂ ಮಾಡೋಕೆ ಸಾಧ್ಯ ಇರ್ಲಿಲ್ಲ..’ ಅಂತೆಲ್ಲ ರೇಖಾ ಸಮಾಧಾನ ಮಾಡಿದರೂ, ಬೆಳಿಗ್ಗೆ ಕೇಳಿದ ಆ ‘ಧಡಾರ್’ ಶಬ್ದ ಪ್ರಶಾಂತನ ತಲೆಯಿಂದ ಇಳಿಯಲಿಲ್ಲ.
ಆದದ್ದಿಷ್ಟು: ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ತಯಾರಾದ ಪ್ರಶಾಂತನಿಗೆ ಹೆಂಡತಿ ತಟ್ಟೆಯಲ್ಲಿ ಪಾಸ್ತಾ ತಂದುಕೊಟ್ಟಳು. ತಟ್ಟೆಯನ್ನು ಟೇಬಲ್ಲಿನ ಮೇಲಿಟ್ಟುಕೊಂಡು, ಒಂದು ಕೈಯಲ್ಲಿ ಮೊಬೈಲು ಇನ್ನೊಂದು ಕೈಯಲ್ಲಿ ಚಮಚ ಹಿಡಿದು ತಿಂಡಿಯ ಶಾಸ್ತ್ರ ನಡೆಸುತ್ತಿದ್ದಾಗ ಹೊರಗಿನಿಂದ ಧಡಾರನೆ ಶಬ್ದ ಕೇಳಿಸಿತು. ಇಬ್ಬರೂ ಹೊರಹೋಗಿ ಬಗ್ಗಿ ಕೆಳಗೆ ನೋಡಿದರೆ, ವ್ಯಕ್ತಿಯೊಬ್ಬ ಹೋ ಅಂತ ನರಳುತ್ತಿದ್ದ. ಪಕ್ಕದ ಸೈಟಿನಲ್ಲಿ ಮನೆ ಕಟ್ಟುತ್ತಿದ್ದ ಮೇಸ್ತ್ರಿಗಳು ಎರಡನೇ ಫ್ಲೋರಿನ ಸೆಂಟ್ರಿಂಗ್ ಹಾಕಲು ಅಟ್ಟಣಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ತಮಿಳಿನಲ್ಲಿ ದೊಡ್ಡ ದನಿಯಲ್ಲಿ ಮಾತಾಡಿಕೊಳ್ಳುತ್ತಾ, ಕರಣೆ-ಬಾಣಲಿ-ಇನ್ನಿತರ ಸಲಕರಣೆಗಳಿಂದ ಸದ್ದು ಮಾಡುತ್ತಾ, ಎರಡು ತಿಂಗಳಿನಿಂದ ಅಲ್ಲೇ ಕೆಳಗಡೆ ಹಾಕಿಕೊಂಡಿದ್ದ ಸಣ್ಣದೊಂದು ಬಿಡಾರದಲ್ಲಿ ಮೂರ್ನಾಲ್ಕು ಜನರ ಸಂಸಾರ ವಾಸವಾಗಿತ್ತು. ‘ಬೆಳಗಾದರೆ ಇವರದ್ದೊಂದು ರಗಳೆ’ ಅಂತ ಎಷ್ಟೋ ದಿನ ರೇಖಾ ಸಿಡಿಮಿಡಿ ಮಾಡುವುದೂ ಇತ್ತು. ಇಷ್ಟೇ ಸಣ್ಣ ಜಾಗದಲ್ಲಿ ಮರಳು-ಸಿಮೆಂಟು-ಇಟ್ಟಿಗೆಗಳನ್ನು ಸಾಗಿಸುತ್ತಾ, ಅಷ್ಟೆತ್ತರದಲ್ಲಿ ಅಟ್ಟಣಿಗೆಗಳನ್ನು ಹಾಕಿಕೊಂಡು ಅವರು ಕಟ್ಟಡ ಕಟ್ಟಲು ಮಾಡುವ ಸಾಹಸ ಯಾವ ಸರ್ಕಸ್ಸಿಗೂ ಕಮ್ಮಿಯಿರಲಿಲ್ಲ. ಆದರೆ ಈ ದಿನ ಬೆಳಗ್ಗೆ ಅದು ಹೇಗೋ ಅಟ್ಟಣಿಗೆಯ ಕಂಬವೊಂದು ಮುರಿದುಕೊಂಡು, ಅಷ್ಟು ಎತ್ತರದಿಂದ ಆ ಮೇಸ್ತ್ರಿ ಆಯ ತಪ್ಪಿ ಬಿದ್ದಿದ್ದಾನೆ. ಹೊರಗೋಡಿ ಬಂದ ರೇಖಾ-ಪ್ರಶಾಂತರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಬಿದ್ದವನು ಒಂದೇ ಸಮನೆ ಹೊಯ್ದುಕೊಳ್ಳುತ್ತಿದ್ದ. ಅವನ ಹೆಂಡತಿಯೂ-ಸಹಕೆಲಸಗಾರರು ಅಯ್ಯಯ್ಯೋ ಅಂತ ಬಾಯಿ ಬಡಿದುಕೊಂಡು ಅಳತೊಡಗಿದರು. ಕೆಳಗಡೆ ಒಂದಷ್ಟು ಜನ ಸೇರಿದರು. ರೇಖಾ-ಪ್ರಶಾಂತರೂ ಕೆಳಗಿಳಿದು ಹೋದರು. ಯಾರೋ ‘ಆಂಬುಲೆನ್ಸಿಗೆ ಫೋನ್ ಮಾಡ್ರೀ ಆಂಬುಲೆನ್ಸಿಗೆ ಫೋನ್ ಮಾಡ್ರೀ’ ಅಂದರು. ಎಲ್ಲರೂ ಮುಖಮುಖ ನೋಡಿಕೊಂಡರು. ‘ವನ್ ಜೀರೋ ಏಟ್ ಕಣ್ರೀ.. ಬೇಗ ಮಾಡ್ರೀ’ ಅಂದರು ಮತ್ಯಾರೋ. ‘ಓನರ್ ಕರೆಸ್ರೀ.. ನಂಬರ್ ಇದೆಯೇನ್ರೀ ಯಾರ ಹತ್ರನಾದ್ರೂ.. ಕಾಂಟ್ರಾಕ್ಟರ್‌ಗೆ ಹೇಳ್ಬೇಕು’ ಅಂತೆಲ್ಲ ಕೆಲವರು ಬಡಬಡಿಸುತ್ತಿದ್ದರು. ಪ್ರಶಾಂತ ತನ್ನ ಮೊಬೈಲಿನಿಂದ ಆಂಬುಲೆನ್ಸಿಗೆ ಫೋನು ಮಾಡಿದ. ಅವರು ಯಾವ ಏರಿಯಾ ಅಂತ ಕೇಳಿಕೊಂಡು ‘ಹತ್ತಿರದ ಆಂಬುಲೆನ್ಸಿಗೆ ಕನೆಕ್ಟ್ ಮಾಡ್ತೀವಿ, ಲೈನಿನಲ್ಲೇ ಇರಿ’ ಅಂದರು. ಮೂರ್ನಾಲ್ಕು ನಿಮಿಷ ಆದರೂ ಕನೆಕ್ಟ್ ಆದಹಾಗೆ ಕಾಣಲಿಲ್ಲ. 'ಆಂಬುಲೆನ್ಸ್ ಬರೋತನಕ ಕಾಯಕ್ಕಾಗತ್ತೇನ್ರೀ? ಯಾವುದಾದ್ರೂ ಆಟೋ ಬಂದ್ರೆ ಹತ್ತಿರದ ಆಸ್ಪತ್ರೆಗೆ ಒಯ್ದು ಬಿಡೋಕೆ ಹೇಳ್ಬಹುದಿತ್ತು’ ಅಂದರು ಮತ್ಯಾರೋ. ಅಲ್ಲಿದ್ದವರ್ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವಂತೆ ಕಾಣಲಿಲ್ಲ. ತಮಗ್ಯಾಕೆ ಇಲ್ಲದ ಉಸಾಬರಿ ಅಂತ ಎಲ್ಲರೂ ಹೆದರಿಕೊಂಡಂತೆ ಕಂಡರು. ಪ್ರಶಾಂತನ ತಾಳ್ಮೆ ಮೀರುತ್ತಿತ್ತು. ರೇಖಾಳ ಬಳಿ ‘ಮೇಲೆ ಹೋಗಿ ಕಾರ್ ಕೀ ಬೀಸಾಕು’ ಅಂದವನೇ, ಅಲ್ಲಿದ್ದವರೊಂದಿಗೆ ಕೈ ಜೋಡಿಸಿ, ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೊತ್ತುತಂದು ತನ್ನ ಕಾರಿನ ಹಿಂದಿನ ಸೀಟಲ್ಲಿ ಮಲಗಿಸಿದ. ಮೇಸ್ತ್ರಿಯ ಹೆಂಡತಿಯೂ ಮತ್ತೊಂದಿಬ್ಬರು ಕೆಲಸಗಾರರೂ ಕಾರು ಹತ್ತಿ ಮುದುಡಿ ಕುಳಿತುಕೊಂಡರು. ವ್ಯಕ್ತಿ ನರಳುತ್ತಲೇ ಇದ್ದ. ಹತ್ತಿರದ ಆಸ್ಪತ್ರೆಗೆ ಕರೆತಂದು, ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಸ್ಟ್ರೆಚರಿನಲ್ಲಿ ಎಮರ್ಜೆನ್ಸಿ ವಾರ್ಡಿಗೆ ಸೇರಿಸುವಷ್ಟರಲ್ಲಿ ಪ್ರಶಾಂತ ಪೂರ್ತಿ ಬೆವರಿಹೋಗಿದ್ದ.
ಹಾಗೆ ಸೇರಿಸುವಾಗ ಅದೊಂದು ದುಬಾರಿ ಆಸ್ಪತ್ರೆ ಎಂಬುದೂ, ಅಲ್ಲಿಗೆ ಸೇರಿಸಿದರೆ ಅಲ್ಲಾಗುವ ವೆಚ್ಛವನ್ನು ಈ ಬಡ ಕೂಲಿ ಕಾರ್ಮಿಕರಿಗೆ ಭರಿಸಲು ಆಗುತ್ತದಾ ಎಂಬುದೂ ಪ್ರಶಾಂತನಿಗೆ ಹೊಳೆಯಲಿಲ್ಲ. ಹೊಳೆದಿದ್ದರೂ ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆ ಹುಡುಕಿಕೊಂಡು ಅಲೆಯುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಅವರ ಬಳಿ ಹಣ ಕಮ್ಮಿ ಬಿದ್ದಾಗ ಇದು ತನ್ನದೇ ಜವಾಬ್ದಾರಿಯೇನೋ ಎಂಬಂತೆ ಹಿಂದೆಮುಂದೆ ನೋಡದೇ ಕಾರ್ಡ್ ಉಜ್ಜಿ ಬಂದಿದ್ದ.
ಪ್ರಶಾಂತನಿಗೆ ಬೆಳಗಾಮುಂಚೆ ನಡೆದ ಆ ಘಟನೆಯಿಂದ ಅದೆಷ್ಟು ಆಘಾತವಾಯಿತು ಎಂದರೆ, ದಿನವಿಡೀ ಹುಚ್ಚುಚ್ಚಾಗಿ ಮನೆಯಿಡೀ ಓಡಾಡುತ್ತಾ ಇದ್ದುಬಿಟ್ಟ. ತಾನು, ತನ್ನ ಸಂಸಾರ, ಕೈತುಂಬ ಸಂಬಳ ಬರುವ ಕೆಲಸ, ವೀಕೆಂಡು ಬಂತೆಂದರೆ ಪಾರ್ಟಿ-ಸಿನೆಮಾ-ಶಾಪಿಂಗ್ ಎಂದು ನಗರವನ್ನು ಸುತ್ತುವ ಚಾಳಿ, ಬಿಡುಗಡೆಯಾದ ಹೊಸ ಫೋನುಗಳನ್ನು ಕೊಳ್ಳುವ ರೀತಿ, ನೆಟ್ಫ್ಲಿಕ್ಸು-ಹಾಟ್ಸ್ಟಾರ್ ಅಂತ ಇದ್ದಬದ್ದ ಪ್ಯಾಕೇಜುಗಳನ್ನು ಹಾಕಿಕೊಂಡು ದಿನಕ್ಕೊಂದು ಸಿನೆಮಾ ನೋಡುವ ಸೌಲಭ್ಯ, ಬೇಕಾದ ಪುಸ್ತಕಗಳನ್ನು ಖರೀದಿಸಿಯೇ ಓದುವ ಗತ್ತು... ಹೀಗೆ ಹಣದಿಂದ ಕೊಳ್ಳಲಾಗುವ ಸುಖವನ್ನೆಲ್ಲ ಖರೀದಿಸಿ ಅನುಭವಿಸುತ್ತಿರುವ ತಾನು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಮುಗಿಲೆತ್ತರದ ಅಟ್ಟಣಿಗೆಯ ಮೇಲೆ ಸರ್ಕಸ್ ಮಾಡುವ ಆ ಮೇಸ್ತ್ರಿ –ಎಷ್ಟೊಂದು ವ್ಯತ್ಯಾಸ ನಮ್ಮ ನಡುವೆ! ನನಗೆ ಇಂತಹದ್ದೇನಾದರೂ ಅಪಘಾತವಾಗಿ ಆಸ್ಪತ್ರೆ ಸೇರಿದ್ದರೆ ಕಂಪನಿ ಆಸ್ಪತ್ರೆಯ ಅಷ್ಟೂ ವೆಚ್ಛವನ್ನು ಭರಿಸುತ್ತಿತ್ತು. ಅಷ್ಟರ ಮಟ್ಟಿನ ಲೈಫ್ ಸೆಕ್ಯುರಿಟಿ ತನಗಿದೆ. ಆದರೆ ಆ ಮೇಸ್ತ್ರಿಗೆ?
ಪ್ರಶಾಂತನಿಗೆ ತಾನು ಬದುಕುತ್ತಿರುವ ರೀತಿಯೇ ಸರಿಯಿಲ್ಲ ಎನ್ನಿಸಿಬಿಟ್ಟಿತು. ಆಸ್ಪತ್ರೆಯ ವೆಚ್ಛವನ್ನೂ ಭರಿಸಲಾಗದ ಆ ಮೇಸ್ತ್ರಿಯ ಕುಟುಂಬಕ್ಕೆ ತನ್ನ ಆಡಂಬರದ ಜೀವನಶೈಲಿಯಿಂದ ಅವಮಾನ ಮಾಡುತ್ತಿದ್ದೇನೆ ಅನ್ನಿಸಿತು. ಥಳಥಳ ಹೊಳೆವ ನೆಲದ ಡಬಲ್ ಬೆಡ್ರೂಮ್ ಫ್ಲಾಟಿನ ತನ್ನ ಮನೆಯ ಪಕ್ಕದಲ್ಲಿ ಇಷ್ಟೇ ಸಣ್ಣ ಗೂಡಿನಲ್ಲಿ ಮತ್ತೊಂದು ಕುಟುಂಬವೂ ಬಾಳುತ್ತಿರುವುದು ಈ ಮಹಾನಗರದ ವ್ಯಂಗ್ಯದಂತೆ ಭಾಸವಾಯಿತು. ಎಫ್ಫೆಮ್ಮಿನ ಆರ್ಜೆ ಹೇಳುತ್ತಿದ್ದುದು ನೆನಪಾಯ್ತು: ನನ್ನ ಜೀವನಶೈಲಿ ಬದಲಿಸಿಕೊಳ್ಳಬೇಕಾ ಹಾಗಾದರೇ?
ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಪ್ರಶಾಂತ, ಕಾರು ಹತ್ತಿ ನೇರ ಆಸ್ಪತ್ರೆಯೆಡೆಗೆ ಧಾವಿಸಿದ. ಯಾವ ವಾರ್ಡಿನಲ್ಲಿದ್ದಾರೆಂದು ವಿಚಾರಿಸೋಣವೆಂದರೆ ಆ ಮೇಸ್ತ್ರಿಯ ಹೆಸರೂ ಕೇಳಿಕೊಂಡಿರಲಿಲ್ಲ. ರಿಸೆಪ್ಷನ್ನಿನಲ್ಲಿ ಹೀಗೆ ನಿನ್ನೆ ಎಮರ್ಜನ್ಸಿಯೆಂದು ತಾನು ಒಬ್ಬನನ್ನು ತಂದು ಸೇರಿಸಿದ್ದಾಗಿ ಹೇಳಿಕೊಂಡಾಗ ಆ ರಿಸೆಪ್ಷನಿಸ್ಟ್, ‘ಓಹ್ ಅವರಾ? ಅವರು ನಿನ್ನೆಯೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋದ್ರಲ್ಲಾ.. ಇಲ್ಲಿ ನಮಗೆ ಆಗಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗ್ತೇವೆ ಅಂತ ಹೇಳಿ ಸಂಜೆಯೇ ಹೊರಟುಹೋದರು’ ಅಂದಳು. ಪ್ರಶಾಂತನಿಗೆ ನಿರಾಶೆಯಾಯಿತು. ಯಾವ ಆಸ್ಪತ್ರೆಗೆ ಹೋದರೋ ಏನೋ, ಹುಡುಕಿಕೊಂಡು ಹೋಗುವುದಂತೂ ಸಾಧ್ಯವಿರಲಿಲ್ಲ. ಸುಮ್ಮನೆ ಮನೆಗೆ ಮರಳಿದ.
ಇಷ್ಟೆಲ್ಲ ಆದರೂ ಆ ಪಕ್ಕದ ಮನೆಯ ಮಾಲೀಕನಾಗಲೀ, ಗುತ್ತಿಗೆದಾರನಾಗಲೀ ಈ ಕಡೆ ಸುಳಿದಿರಲಿಲ್ಲ. ತನ್ನೆದುರೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಈಗ ಎಲ್ಲಿದ್ದಾನೆಂಬುದೂ ತಿಳಿಯುವಂತಿರಲಿಲ್ಲ. ಪ್ರಶಾಂತನಿಗೆ ಎಲ್ಲವೂ ಖಾಲಿಖಾಲಿ, ಯಾವುದಕ್ಕೂ ಅರ್ಥವಿಲ್ಲ ಎನಿಸಿತು. ರೇಖಾ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಪ್ರಶಾಂತ ಸರಿಯಾಗಲಿಲ್ಲ.
ಸುಮಾರು ಹದಿನೈದು ದಿನ ಕಳೆದಮೇಲೆ, ಸ್ಥಗಿತವಾಗಿದ್ದ ಪಕ್ಕದ ಕಟ್ಟಡದ ಕೆಲಸಗಳು ಮತ್ತೆ ಶುರುವಾದ ಸೂಚನೆಯಂತೆ ಟಣಟಣ ಸದ್ದುಗಳು ಬೆಳಗ್ಗೆಯೇ ತೇಲಿಬರತೊಡಗಿದವು. ಲಘುಬಗೆಯಿಂದ ಎದ್ದ ಪ್ರಶಾಂತ ಹೊರಹೋಗಿ ನೋಡಿದ. ಮೇಸ್ತ್ರಿಗಳು ಮುರಿದುಬಿದ್ದಿದ್ದ ಅಟ್ಟಣಿಗೆಯನ್ನು ಮತ್ತೆ ಜೋಡಿಸುತ್ತಿದ್ದರು. ಅಂದು ಬಿದ್ದು ಪೆಟ್ಟುಮಾಡಿಕೊಂಡಿದ್ದ ಆ ಮೇಸ್ತ್ರಿಯೂ ಅಲ್ಲಿದ್ದ. ಅವನ ಬಲಗೈಗೆ ಬೆಳ್ಳನೆ ಬ್ಯಾಂಡೇಜ್ ಇತ್ತು. ಇವನನ್ನು ಕಂಡವನೇ, ‘ಸಾರ್.. ನಮಸ್ಕಾರ ಸಾರ್.. ನೀವು ಅವತ್ತು ಎಂಥಾ ಉಪಕಾರ ಮಾಡಿದ್ರಿ ಸಾರ್.. ನೀವು ಟೇಮಿಗೆ ಸರಿಯಾಗಿ ಕಾರಲ್ಲಿ ಕರ್ಕಂಡ್ ಹೋಗದಿದ್ರೆ ನನ್ ಕಥೆ ಏನಾಗ್ತಿತ್ತೋ ಏನೋ.. ತುಂಬಾ ಹೆಲ್ಪ್ ಆಯ್ತು ಸಾರ್.. ತುಂಬಾ ಥ್ಯಾಕ್ಸ್ ಸಾರ್’ ಅಂತ ಒಂದೇ ಸಮನೆ ಹೇಳಿದ. ಅವನ ಹೆಂಡತಿಯೂ ಕಣ್ಣೀರು ಸುರಿಸುತ್ತಾ ತಮಿಳಿನಲ್ಲಿ ಏನೇನೋ ಹೇಳಿದಳು. ‘ಅಲ್ಲಪ್ಪಾ, ನಾನು ಅಷ್ಟೆಲ್ಲಾ ಮಾಡಿ ಆ ಆಸ್ಪತ್ರೆಗೆ ಸೇರಿಸಿದ್ರೆ ನೀವು ಹೇಳದೇಕೇಳದೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋಗಿಬಿಟ್ಟಿದೀರಲ್ಲಪ್ಪಾ.. ನಾನು ಮರುದಿನ ಹೋಗಿ ವಿಚಾರಿಸಿದ್ರೆ ನೀವು ಅಲ್ಲಿಲ್ಲ’ ಕೇಳಿದ ಪ್ರಶಾಂತ. ‘ಅಯ್ಯೋ ಅಂಥಾ ಆಸ್ಪತ್ರೆಲೆಲ್ಲಾ ನಮ್ಮಂತೋರು ಇರಕ್ಕಾಯ್ತದಾ ಸಾರ್.. ಅದುಕ್ಕೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೇರ್ಕಂಡ್ವಿ. ಅಲ್ಲಿ ಎಲ್ಲಾ ಫ್ರೀ ಸಾರ್.. ನಮ್ದು ಕಾರ್ಡ್ ಇರ್ತದಲ್ಲಾ, ಪಿಎಂದು ಅದೆಂಥದೋ ಸ್ಕೀಮಿಂದು, ಅದ್ರಲ್ಲಿ ಎಲ್ಲಾ ಫ್ರೀಯಾಗಿ ಆಯ್ತು ಸಾರ್. ದೇವ್ರು ದೊಡ್ಡೋನು ಸಾರ್.. ಅಷ್ಟು ಎತ್ರದಿಂದ ಬಿದ್ರೂ ಕೈ ಒಂದು ಮುರ್ದಿದ್ದು ಬಿಟ್ರೆ ಮತ್ತೇನೂ ಆಗ್ಲಿಲ್ಲ’ ಅಂದ ಮೇಸ್ತ್ರಿ.
ಪ್ರಶಾಂತನಿಗೆ ಸ್ವಲ್ಪ ನಿರಾಳವಾಯಿತು. ಅಟ್ಟಣಿಗೆಯ ಅಡ್ಡಗಂಬಗಳ ನಡುವಿಂದ ತಂಗಾಳಿ ತೇಲಿಬಂತು. ಮನೆಯೊಳಗೆ ಬಂದು ಉಲ್ಲಾಸದಿಂದ ಅತ್ತಿತ್ತ ಓಡಾಡಿದ. ಸುಮಾರು ದಿನಗಳ ನಂತರ ಪಾಸ್ತಾ ರುಚಿಯೆನಿಸಿತು. ರೇಖಾ ಅವನ ಭುಜ ತಟ್ಟಿ, ಕಿಟಕಿಯಿಂದ ಹೊರಗಡೆ ನೋಡು ಅಂತ ಸೂಚಿಸಿದಳು. ಅಲ್ಲಿ ಆ ಮೇಸ್ತ್ರಿ ಅಟ್ಟಣಿಗೆಯ ಮೇಲೆ ನಿಂತುಕೊಂಡು, ಬ್ಯಾಂಡೇಜು ಸುತ್ತಿದ ಒಂದು ಕೈಯನ್ನು ಗೋಡೆಗೆ ಆನಿಸಿಕೊಂಡು, ಇನ್ನೊಂದು ಕೈಯಲ್ಲಿ ಫೋನು ಹಿಡಕೊಂಡು ಯಾವುದೋ ವೀಡಿಯೋ ನೋಡುತ್ತಿದ್ದ. ಗಮನಿಸಿದರೆ ಅದೊಂದು ಒಳ್ಳೆಯ ಹೊಸ ಸ್ಮಾರ್ಟ್‌ಫೋನ್ ಹಾಗೆ ಕಾಣುತ್ತಿತ್ತು. ಪ್ರಶಾಂತನಿಗೆ ಕುತೂಹಲ ತಡೆಯಲಾಗದೆ ಹೊರಗಡೆ ಹೋಗಿ, ‘ಏನಪ್ಪಾ, ಹೊಸ ಫೋನ್ ತಗಂಡಂಗಿದೆ?’ ಅಂತ ಕೇಳಿದ. ‘ಹೌದೂ ಸಾರ್. ಆಸ್ಪತ್ರೆಗೆ ನೋಡಕ್ಕೆ ಬರ್ತಾರಲ್ಲ ಸಾರ್ ತುಂಬಾ ಜನ, ಅವ್ರೆಲ್ಲ ಅಷ್ಟಿಷ್ಟು ಕಾಸು ಕೊಡ್ತಾರೆ ಸಾರ್.. ನಾನು ಅಡ್ಮಿಟ್ ಆಗಿದ್ದಾಗ ಯಾರೋ ದೊಡ್ ಮನುಸ್ರು ಬಂದು ಐದು ಸಾವ್ರ ಕೊಟ್ರು ಸಾರ್.. ಎಲ್ಲಾ ಸೇರಿ ಹತ್ತನ್ನೆರ್ಡ್ ಸಾವ್ರ ಆಯ್ತು ಸಾರ್.. ಈಗ ಕೈಗೆ ಸುತ್ತಿರೋ ಬ್ಯಾಂಡೇಜ್ ಬಿಚ್ಚಗಂಟ ಕೆಲ್ಸ ಮಾಡ್ದೇ ಸುಮ್ನೇ ಕೂತಿರ್ಬೇಕಲ್ಲ ಸಾರ್, ಅದ್ಕೇ ಮೊಬೈಲಾಗೆ ವೀಡ್ಯ ಆದ್ರೂ ನೋಡನ ಅಂತ ತಗಂಡೆ ಸಾರ್.. ನಮ್ ಹೆಂಗುಸ್ರು ಬೈದ್ರು ಸಾರ್, ಆದ್ರೂ ನಾನು ತಗಂಡೆ ಸಾರ್’ ಅಂದ. ಪ್ರಶಾಂತ ಮನಸಿನಲ್ಲೇ ‘ಎಲಾ ಇವನಾ!’ ಅಂದುಕೊಂಡ. ತಾನು ಆವತ್ತು ಇವನ ಹೆಸರಲ್ಲಿ ಹಣ ಕಟ್ಟಿದ್ದು ತಪ್ಪಾಯಿತಾ, ಇವನು ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲವಲ್ಲ, ಅಥವಾ ಇವನಿಗೆ ಅದು ಗೊತ್ತೇ ಇಲ್ಲವಾ.. ಏನಾದರಾಗಲಿ, ನಾನಾಗೇ ಕೇಳಿ ಸಣ್ಣವನಾಗುವುದು ಬೇಡ ಅಂತ ಪ್ರಶಾಂತ ಸುಮ್ಮನಾದ.
ಒಳಬಂದಾಗ ರೇಖಾ ಹೇಳಿದಳು: ‘ಗೊತ್ತಾಯ್ತಾ ಪ್ರಶ್, ಇಷ್ಟೇ ಲೈಫು. ನಾವು ಸುಮ್ಮನೇ ಏನೇನೋ ತಲೆಕೆಡಿಸ್ಕೊಂಡು ಕೂತ್ಕೋತೀವಿ. ನಮಗಿರೋದು ಅವರಿಗಿಲ್ಲ, ನಾವು ಹೀಗಿರೋದು ತಪ್ಪು ಅಂತೆಲ್ಲ. ಆದ್ರೆ ಎವೆರಿವನ್ ಎಂಜಾಯ್ಸ್ ಲಕ್ಷುರಿ ಇನ್ ದೇರ್ ಓನ್ ಲಿಮಿಟ್ಸ್.. ನಮಗೆ ಇದು ಲಕ್ಷುರಿ, ಅವರಿಗೆ ಅದು ಲಕ್ಷುರಿ. ಎಲ್ಲರದ್ದೂ ಜೀವನ ಹೇಗೋ ಸಾಗುತ್ತೆ. ಅವನು ಅಟ್ಟಣಿಗೆಯಲ್ಲಿ ನಿಂತು ಮೊಬೈಲು ನೋಡ್ತಾನೆ, ನಾವು ಸೋಫಾದಲ್ಲಿ ಕೂತು ನೋಡ್ತೀವಿ; ಅಷ್ಟೇ ವ್ಯತ್ಯಾಸ. ಎಲ್ಲರೂ ಒಂದು ಎತ್ತರದಲ್ಲಿ ಬದುಕ್ತಾರೆ. ನಾಳೆ ನಿನ್ನ ಕೆಲಸ ಹೋದ್ರೆ ನಾವೂ ಈ ಅಟ್ಟಣಿಗೆಯಿಂದ ಕೆಳಗೆ ಬೀಳ್ತೀವಿ. ಸೋ, ತುಂಬಾ ಯೋಚನೆ ಮಾಡೋಕೆ ಹೋಗಬಾರದು.’
ಯಾವಾಗ ನೋಡಿದರೂ ಶಾಪಿಂಗು, ಕಿಟ್ಟಿಪಾರ್ಟಿ, ನೇಲ್‌ಪಾಲೀಶಿನ ಶೇಡುಗಳಲ್ಲಿ ಮುಳುಗಿರುವ ರೇಖಾ ಇವತ್ತು ದೊಡ್ಡ ದಾರ್ಶನಿಕಳಂತೆ ಭಾಸವಾದಳು. ಪ್ರಶಾಂತ ಅವಳನ್ನು ಅಭಿಮಾನದಿಂದ ನೋಡಿದ. ಫೇಸ್‌ಬುಕ್ಕಿನ ಇವೆಂಟ್ ರಿಮೈಂಡರ್ ಇವತ್ತಿನಿಂದ ‘ಬೆಂಗಳೂರು ಪುಸ್ತಕ ಪರಿಷೆ ಶುರು’ ಅಂತ ತೋರಿಸುತ್ತಿತ್ತು. ಒಬ್ಬನೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದ. ಸಾವಿರ ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಮಳಿಗೆಯೊಂದಕ್ಕೆ ನುಗ್ಗಿದವನೇ ಹೊಸದಾಗಿ ಬಂದ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಅತ್ಯಾದರದಿಂದ ಅದರ ಮುಖಪುಟವನ್ನು ಸವರಿ, ಹಣದ ಚೀಟಿಯತ್ತ ನೋಡದೇ ವ್ಯಾಲೆಟ್ಟಿಗೆ ಕೈ ಹಾಕಿದ.
[ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]
Monday, December 01, 2014
ಹೋಮ್ ನರ್ಸ್
ಆದರೆ ಕೆರೆಹಳ್ಳಿ ವೆಂಕಟೇಶ ಇವತ್ತು ಯಾವುದೋ ತರಾತುರಿಯಲ್ಲಿದ್ದಂತೆ ಕಂಡ. ‘ಏನೋ ವೆಂಕಿ, ಭಾರೀ ಅರ್ಜೆಂಟಲ್ಲಿ ಇದ್ದಂಗೆ ಕಾಣ್ತು?’ ಅಂತ ಕೇಳಿದ ತ್ರಯಂಬಕನಿಗೆ ವೆಂಕಟೇಶ, ‘ಇಲ್ಲೆ ಇಲ್ಲೆ. ನಿನ್ನನ್ನೇ ಕಾಣನ ಅಂತ ಬಂದಿ. ಎಂಥಾತು ಅಂದ್ರೆ, ನಿನ್ನೆ ಯಾವುದೋ ಮದುವೆಮನೆಗೆ ಹೋಗಿದ್ದವಾಗ ಭಾಗವತ್ ನರ್ಸಿಂಗ್ ಹೋಮಿನ ಡಾಕ್ಟ್ರು ಸಿಕ್ಕಿದ. ನಿಂಗೆ ಗೊತ್ತಿದಲ, ನಮಗೆ ಅವರು ದೂರದಿಂದ ನೆಂಟರು. ನಾನು ಸರಿಯಾದ ಕೆಲಸ ಇಲ್ದೇ ಸಾಗರದಲ್ಲಿ ಪ್ಯಾಟೆ ಅಲೆಯೋದು ಅವರಿಗೂ ಗೊತ್ತಿದ್ದು. ಅವರು ನನ್ನನ್ನ ಒಬ್ಬವನ್ನೇ ಹೊರಗಡೆ ಕರ್ಕಂಡ್ ಹೋಗಿ, ಒಂದು ಕೆಲಸದ ವಿಷಯ ಹೇಳಿದ...’ ತ್ರಯಂಬಕ ಕುತೂಹಲಗೊಂಡ. ಭಾಗವತ್ ನರ್ಸಿಂಗ್ ಹೋಮಿನ ಡಾಕ್ಟ್ರು ವೆಂಕಟೇಶನಿಗೆ ಹೇಳಿದ ಉದ್ಯೋಗದ ವಿವರ ಹೀಗಿತ್ತು:
ಸಾಗರದಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಉಳ್ಳೂರಿನಲ್ಲಿ ಬಸವೇಗೌಡರು ಎಂಬುವವರಿದ್ದಾರೆ. ಅವರಿಗೆ ಒಬ್ಬ ಮಗ - ಒಬ್ಬ ಮಗಳು. ಮಗಳಿಗೆ ಮದುವೆಯಾಗಿ ಬೆಂಗಳೂರು ಸೇರಿದ್ದರೆ ಮಗ ಓದಿಕೊಂಡು ಅಮೆರಿಕಾ ಹಾರಿದ್ದಾನೆ. ಹೆಂಡತಿ ತೀರಿಕೊಂಡು ಆರೇಳು ವರ್ಷವಾಯ್ತು. ಬಸವೇಗೌಡರು ತಮ್ಮ ಮನೆಯಲ್ಲಿ ಒಬ್ಬರೇ ಇರುತ್ತಾರೆ. ಅವರಿಗೆ ದಮ್ಮಿನ ಖಾಯಿಲೆ ಮತ್ತು ಡಯಾಬಿಟೀಸ್. ಅದಕ್ಕಂಟಿಕೊಂಡಂತೆ ದಿನಕ್ಕೊಂದು ಕಾಣಿಸಿಕೊಳ್ಳುವ ವೃದ್ಧಾಪ್ಯದ ತೊಂದರೆಗಳು. ಮಗಳು ಮನೆಗೆಲಸಕ್ಕೆ ಅಂತ ಅದೇ ಊರಿನ ಒಬ್ಬ ಹೆಂಗಸನ್ನು ನೇಮಿಸಿ ಹೋಗಿದ್ದಾಳೆ. ಆ ಹೆಂಗಸು ಪ್ರತಿದಿನ ಬೆಳಿಗ್ಗೆ ಬಂದು ಮನೆ ಸ್ವಚ್ಛಗೊಳಿಸಿ, ಅಡುಗೆ ಮಾಡಿಟ್ಟು ಹೋಗುತ್ತಾಳೆ. ಆದರೆ ಬಸವೇಗೌಡರಿಗೆ ದಿನೇದಿನೇ ಶಕ್ತಿ ಕುಂದುತ್ತಿರುವುದರಿಂದ ಎದ್ದು ಓಡಾಡುವುದೂ ಕಷ್ಟವಾಗುತ್ತಿದೆ. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲೂ ಆಗದಂತಹ ಪರಿಸ್ಥಿತಿ. ಮಗಳು ತಂದೆಯನ್ನು ಬೆಂಗಳೂರಿನ ತಮ್ಮ ಮನೆಗೇ ಬಂದು ಇರಲು ಎಷ್ಟೇ ಒತ್ತಾಯ ಮಾಡಿದರೂ ಹುಟ್ಟಿ ಬೆಳೆದ ಮನೆ ಬಿಟ್ಟು ಬರಲು ಗೌಡರು ಒಪ್ಪರು. ಮಗನಂತೂ ಇವರ ಬೇಕುಬೇಡಗಳನ್ನು ವಿಚಾರಿಸಿಕೊಳ್ಳಲೂ ಆಗದಷ್ಟು ದೂರವಿದ್ದಾನೆ. ವಾರಕ್ಕೊಮ್ಮೆ ಫೋನ್ ಮಾಡಿದರೆ ಅದೇ ದೊಡ್ಡದು.
ಬಸವೇಗೌಡರಿಗೆ ಭಾಗವತ್ ಆಸ್ಪತ್ರೆಯ ಡಾಕ್ಟರು ಫ್ಯಾಮಿಲಿ ಡಾಕ್ಟರ್. ಗೌಡರು ಶುಗರು, ಬೀಪಿ ಪರೀಕ್ಷೆ ಮಾಡಿಸಲು ಭಾಗವತ್ ಆಸ್ಪತ್ರೆಗೇ ಹೋಗುವರು. ಆದರೆ ಇತ್ತೀಚಿಗೆ ಆಟೋ ಮಾಡಿಸಿಕೊಂಡು ಸಾಗರಕ್ಕೆ ಬಂದು ಟೆಸ್ಟ್ ಮಾಡಿಸಿಕೊಂಡು ಹೋಗಲಾಗದೇ ಇರುವುದರಿಂದ ಭಾಗವತ್ ಡಾಕ್ಟ್ರು ಗೌಡರ ಮನೆಗೇ ತಮ್ಮ ಜೂನಿಯರ್ ಒಬ್ಬರನ್ನು ಕಳುಹಿಸುತ್ತಿದ್ದಾರೆ. ಆದರೆ ಬಸವೇಗೌಡರ ಆರೈಕೆಗೆ ಒಬ್ಬ ಖಾಯಂ ವೈದ್ಯರ ನೆರವು ಬೇಕಾಗಿದೆ. ಮುದುಕರಿಗೆ ಆಹಾರದಲ್ಲಿ ಪಥ್ಯ ಮಾಡುವುದು ಆಗುವುದಿಲ್ಲ. ಹಠ ಮಾಡುತ್ತಾರೆ. ಕೆಲಸದವಳ ಬಳಿ ಸಿಹಿತಿಂಡಿ, ಕುರುಕಲು ತಿಂಡಿ ಮಾಡಿಸಿಕೊಂಡು ತಿಂದುಬಿಡುತ್ತಾರೆ. ಆಮೇಲೆ ತೊಂದರೆಯಾಗಿ ಒದ್ದಾಡುತ್ತಾರೆ. ಅವರಿಗೆ ಈಗ ಪ್ರತಿದಿನ ಇಂಜೆಕ್ಷನ್ ಕೊಡಬೇಕಾದ ಪರಿಸ್ಥಿತಿ ಇದೆ. ಅವರನ್ನು ನೋಡಿಕೊಳ್ಳಲು ಒಬ್ಬರು ವೈದ್ಯಕೀಯ ಪರಿಣಿತಿ ಇರುವವರು ಬೇಕು.
‘ಬಸವೇಗೌಡರ ಮಗಳು ಹೋದವಾರ ಬಂದು ತನ್ನಪ್ಪನಿಗೆ ಒಬ್ಬ ಹೋಮ್ ನರ್ಸ್ ನೇಮಿಸಿಕೊಡಿ ಅಂತ ಕೇಳಿಕೊಂಡಿದ್ಲು. ನಿನ್ನನ್ನ ನೋಡ್ತಿದ್ದ ಹಾಗೇ ನೆನಪಾಯ್ತು. ನೀನು ಬಸವೇಗೌಡರ ಮನೆಗೆ ಹೋಗಿ ಇರು. ಮನೆ ಕೆಲಸ ಏನೂ ನೀನು ಮಾಡ್ಬೇಕಿಲ್ಲ, ಅದಕ್ಕೆ ಕೆಲಸದವರು ಇದಾರೆ. ಗೌಡರ ಆರೋಗ್ಯ ನೋಡಿಕೊಂಡರೆ ಆಯ್ತು. ನಾವು ಎಲ್ಲಾ ಹೇಳಿಕೊಡ್ತೀವಿ: ಅವರಿಗೆ ಕೊಡಬೇಕಾದ ಮೆಡಿಕೇಶನ್ಸ್, ಆಹಾರ ಕ್ರಮ, ವಾಕಿಂಗ್ ಕರೆದುಕೊಂಡು ಹೋಗೋದು, ಎಲ್ಲಾ. ಮೊದಲು ಒಂದಷ್ಟು ದಿನ ನಮ್ಮ ಆಸ್ಪತ್ರೆಯ ಡಾಕ್ಟರೇ ಬಂದು ಹೋಗ್ತಾರೆ. ಆಮೇಲೆ ನಿನಗೇ ಇಂಜೆಕ್ಷನ್ ಕೊಡೋದನ್ನೂ ಹೇಳಿಕೊಡ್ತಾರೆ. ನೋಡು, ನಿಂಗೂ ಒಂದು ಕೆಲಸ ಅಂತ ಆಗುತ್ತೆ. ಒಳ್ಳೆಯ ಸಂಬಳ ಕೊಡಿಸ್ತೇನೆ. ನಿನ್ನ ಊಟಾನೂ ಕಳೆಯೊತ್ತೆ. ಯೋಚನೆ ಮಾಡು, ನಾಳೆ-ನಾಡಿದ್ದರಲ್ಲಿ ಆಸ್ಪತ್ರೆಗೆ ಬಂದು ಹೇಳು’ ಅಂತ ಭಾಗವತ್ ಡಾಕ್ಟರು ಹೇಳಿದ್ದಾಗಿ ವೆಂಕಟೇಶ ಹೇಳಿದ.
‘ಓಹ್, ಚೊಲೋನೇ ಆತಲ? ಈಗ ಎಂಥ ಮಾಡ್ತೆ? ಒಪ್ಗೆ ಕೊಟ್ಯಾ?’ ಕೇಳಿದ ತ್ರಯಂಬಕ.
‘ನಾನೂ ಯೋಚನೆ ಮಾಡಿದಿ. ನಂಗೇನೋ ಅಡ್ಡಿಲ್ಲೆ ಅನ್ನಿಸ್ಚು. ಆದ್ರೆ ಮನೇಲಿ ಒಪ್ಪಲ್ಲೆ. ಅಪ್ಪಯ್ಯ ಬೈದ. ಬಾಹ್ಮಣ ಆಕ್ಯಂಡು ಗೌಡ್ರು ಮನೇಲಿ ಹೋಗಿ ಇರ್ತ್ಯಾ? ಬೇರೆ ಜಾತಿಯೋರ ಸೇವೆ ಮಾಡ್ತ್ಯಾ? ಆ ಮುದುಕಂಗೆ ನಾಳೆ ಖಾಯಿಲೆ ಜೋರಾತು ಅಂದ್ರೆ ಅವನ ಹೇಲು-ಉಚ್ಚೇನೂ ನೀನೇ ಬಳಿಯಕ್ಕಾಗ್ತು, ಮಾಡ್ತ್ಯಾ? -ಅಂತ ಕೇಳಿದ. ಕೊನಿಗೆ ನಂಗೂ ಯಾಕೋ ಇದೆಲ್ಲಾ ನನ್ ಕೈಯಲ್ಲಿ ಆಪ್ದಲ್ಲ ಅನ್ನಿಸ್ಚು. ಅದಕ್ಕೇ ನಿಂಗೆ ಒಂದು ಮಾತು ಹೇಳನ ಅಂದ್ಕಂಡಿ. ನೋಡು, ನಿಂಗೆ ಅಡ್ಡಿಲ್ಲೆ ಅಂದ್ರೆ ಭಾಗವತ್ ಡಾಕ್ಟ್ರ ಹತ್ರ ಕರ್ಕಂಡ್ ಹೋಗ್ತಿ’ ಹೇಳಿದ ವೆಂಕಟೇಶ.
ತ್ರಯಂಬಕ ಯೋಚಿಸಿದ. ಕೆಲಸವೇನೂ ಕಷ್ಟದ್ದಲ್ಲ ಎನಿಸಿತು. ಶ್ರೀಮಂತರು, ಮಕ್ಕಳು ಹೊರಗಡೆ ಇರುವವರು ಅಂದಮೇಲೆ ತಿಂಗಳಿಗೆ ನಾಲ್ಕೈದು ಸಾವಿರ ಸಂಬಳಕ್ಕಂತೂ ಮೋಸವಿಲ್ಲ. ಆದರೆ ಮನೆ, ಹೆಂಡತಿ, ಮಗಳನ್ನು ಬಿಟ್ಟು ಇರಬೇಕಲ್ಲಾ ಅಂತ ಯೋಚನೆಯಾಯಿತು. ಯಾವುದಕ್ಕೂ ಹೆಂಡತಿಯನ್ನು ಒಂದು ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳೋಣ ಎನಿಸಿ, ವೆಂಕಟೇಶನಿಗೆ ನಾಳೆ ತಿಳಿಸುವುದಾಗಿ ಹೇಳಿ, ತ್ರಯಂಬಕ ಊರಿಗೆ ವಾಪಸಾದ.
* * *
ಹಾಗೆ ನೋಡಿದರೆ, ತ್ರಯಂಬಕನಿಗೆ ಹೀಗೆ ಹೊಸ ಸಾಹಸಗಳನ್ನು ಮೈಮೇಲೆಳೆದುಕೊಳ್ಳುವುದು ಹೊಸದೇನಲ್ಲ. ವರ್ಷದ ಅಡಿಕೆ ಫಸಲಿನ ಆದಾಯ ಮಂಡಿಯಿಂದ ಸಿಕ್ಕ ತಿಂಗಳೊಳಗೇ ಓಸಿ ಆಟಕ್ಕೋ ಅಥವಾ ಮತ್ತಿನ್ಯಾವುದೋ ಕೈಂಕರ್ಯಕ್ಕೋ ಖರ್ಚಾಗಿಹೋಗಿ ಇನ್ನುಳಿದ ಹನ್ನೊಂದು ತಿಂಗಳಿಗೆ ಹಣ ಹೊಂದಿಸುವುದಕ್ಕೆ ಏನಾದರೂ ಒಂದು ಕಸರತ್ತು ನಡೆಸುವುದು ಅವನಿಗೆ ಅಭ್ಯಾಸವಾಗಿಹೋಗಿತ್ತು. ಪ್ರತಿಸಲ ಓಸಿ ಆಟದಲ್ಲಿ ಹಣ ಬಂದಾಗ ಇನ್ನು ಮತ್ತೆ ಕಟ್ಟಬಾರದು ಎಂದು ಗಟ್ಟಿ ಮನಸು ಮಾಡಿಕೊಂಡರೂ ಪೇಟೆಗೆ ಹೋಗಿ ಜೋಗಪ್ಪನ ಅಂಗಡಿ ಮುಂದೆ ನಿಲ್ಲುವ ಹೊತ್ತಿಗೆ ಆ ನಿರ್ಧಾರ ಮಧುರಾ ಹೋಟಿಲಿನ ಮೃದು ದೋಸೆಯಂತೆ ಕರಗಿಹೋಗಿರುತ್ತಿತ್ತು. ಹಿಂದಿನ ರಾತ್ರಿ ಬಿದ್ದ ಕನಸು, ಬೆಳಿಗ್ಗೆ ನ್ಯೂಸ್‍ಪೇಪರಿನಲ್ಲಿ ನೋಡಿದ್ದ ವ್ಯಂಗ್ಯಚಿತ್ರ, ದಾರಿಯಲ್ಲಿ ಕಂಡ ದೃಶ್ಯಗಳು -ಎಲ್ಲವೂ ತೋರುತ್ತಿದ್ದ ಅದೇನೋ ಸಂಜ್ಞೆ ತ್ರಯಂಬಕನನ್ನು ಜೂಜಿನ ಮಾಯಾಲೋಕದೊಳಗೆ ಅನಾಯಾಸ ಸೆಳೆದೊಯ್ಯುತ್ತಿದ್ದವು.
ತ್ರಯಂಬಕನ ಈ ಚಾಳಿ ಅವನ ಹೆಂಡತಿ ಭಾರತಿಗೆ ನುಂಗಲಾರದ ತುತ್ತೇನು ಆಗಿರಲಿಲ್ಲ. ದುಡ್ಡೆಲ್ಲ ಕಳೆದುಕೊಂಡು ದಿನಸಿ ಸಾಮಗ್ರಿ ತರಲೂ ಆಗದಷ್ಟು ಬರಿಗೈ ದಾಸನಾಗಿ ಗಂಡ ಮನೆಗೆ ಮರಳಿದಾಗ ಮಾತ್ರ ಗಂಟಲೇರಿಸಿ -ಆದರೂ ಅಕ್ಕಪಕ್ಕದ ಮನೆಗೆ ಕೇಳದಷ್ಟು ಗಟ್ಟಿಯಾಗಿ- ನಾಲ್ಕು ಮಾತಾಡುತ್ತಿದ್ದಳಾದರೂ ತ್ರಯಂಬಕ ಅಂತಹ ಸನ್ನಿವೇಶಗಳಿಗೆ ಹೆಚ್ಚಾಗಿ ಸಿಲುಕಿದವನಲ್ಲ. ಸಂಸಾರ ತೂಗಿಸಲು ಸಾಕಾಗುವಷ್ಟು ಹಣ ಅದು ಹೇಗೋ ಹೊಂದಿಸುವುದು ಅವನಿಗೆ ಕರಗತವಾಗಿಬಿಟ್ಟಿತ್ತು. ಅಲ್ಲದೇ ಓಸಿಯಾಟದಲ್ಲಿ ಹಣ ಜಾಸ್ತಿ ಬಂದಾಗ ಮನೆಗೂ ಮಡದಿಗೂ ಒಪ್ಪುವಂತೆ ಆಡಂಬರದ ಸಾಮಗ್ರಿಗಳನ್ನು ತಂದುಬಿಡುತ್ತಿದ್ದ ಅಥವಾ ಭಾರತಿಗೆ ‘ಇವತ್ತು ಇಷ್ಟು ಬಂತು ತಗಳೇ’ ಅಂತ ತನ್ನ ಕೈಯಾರೆ ಒಂದು ಮೊತ್ತದ ಕಂತೆ ಕೊಟ್ಟುಬಿಡುತ್ತಿದ್ದ. ಹೀಗಾಗಿ ಗಂಡ ಆಡುತ್ತಿರುವ ಆಟ, ನಡೆಯುತ್ತಿರುವ ದಾರಿ ಸರಿಯೋ ತಪ್ಪೋ ಎಂದು ಹೇಳುವ ಧೈರ್ಯವಾಗಲೀ ವಿವೇಚನೆಯಾಗಲೀ ಭಾರತಿಗೆ ಬರಲೇ ಇಲ್ಲ. ಇನ್ನು ಹೈಸ್ಕೂಲಿಗೆ ಹೋಗುವ ಮಗಳು ಶಾಲಿನಿ ತನ್ನದೇ ಕನಸಿನ ಲೋಕದಲ್ಲಿ ತೇಲುತ್ತ, ಹೊಸ ಚೂಡಿದಾರಿನ ಡಿಸೈನಿನ ವೈಯಾರದಲ್ಲಿ ಮಾಗುತ್ತ ಇದ್ದುಬಿಡುತ್ತಿದ್ದಳು. ಅವಳ ಖರ್ಚಿಗಾಗುವಷ್ಟು ಹಣ ಅಮ್ಮನಿಂದ ಅವಳಿಗೆ ಸಿಕ್ಕೇ ಸಿಗುತ್ತಿತ್ತು.
ತ್ರಯಂಬಕ, ತನ್ನ ಈ ಮುಗ್ಧ ಸಂಸಾರದ ಲಾಭವನ್ನು ಅನುಭವಿಸುತ್ತಲೇ ತನ್ನ ಬಹುತರವಾದ ಖರ್ಚುಗಳನ್ನು ನಿಭಾಯಿಸಲು ಹೊಸ ಹೊಸ ಉದ್ಯೋಗಗಳನ್ನೂ ಕಾರ್ಯತಂತ್ರಗಳನ್ನೂ ಹುಡುಕುತ್ತಿರುತ್ತಿದ್ದ. ಅಣಬೆ ಬೇಸಾಯ, ನ್ಯೂಸ್?ಪೇಪರ್ ಏಜೆನ್ಸಿ, ದೊನ್ನೆ ತಯಾರಿಕೆ, ಏಲಕ್ಕಿ ವ್ಯಾಪಾರ, ಹೀಗೆ ತರಹೇವಾರಿ ಖಾತೆಗಳನ್ನು ನಿಭಾಯಿಸಲು ಪ್ರಯತ್ನಿಸಿದರೂ ಯಾಕೋ ಯಾವುದೂ ಅವನ ಕೈ ಹಿಡಿಯಲಿಲ್ಲ. ಅವನು ಪ್ರತಿ ಪ್ರಯತ್ನದಲ್ಲಿ ಸೋತಾಗಲೂ ಊರ ಜನ ‘ಈ ತ್ರಯಂಬಕಂಗೆ ಮಳ್ಳು. ಒಂದು ಕೆಲಸನೂ ಸರಿಯಾಗಿ ಮಾಡಕ್ಕೆ ಬರದಿಲ್ಲೆ’ ಎಂದು ಮಾತಾಡಿಕೊಳ್ಳುವರು.
ಇಂತಹ ತ್ರಯಂಬಕ, ಅಂದು ಸಂಜೆಗೂ ಮುಂಚಿನ ಬಸ್ಸಿಗೇ ಮನೆಗೆ ವಾಪಸಾಗಿ, ಕೆರೆಹಳ್ಳಿ ವೆಂಕಟೇಶ ಹೇಳಿದ ಹೊಸ ಉದ್ಯೋಗದ ಬಗ್ಗೆ ಹೇಳಿಕೊಂಡಾಗ, ಭಾರತಿಗೆ ಅದು ಮಾಡಬಾರದ ಕೆಲಸವೆಂದೇನೆನಿಸಲಿಲ್ಲ. ಇನ್ನು ಗಂಡ ಮನೆ ಬಿಟ್ಟು ಇರುವುದು ಅವಳಿಗೆ ಹೊಸದೂ ಅಲ್ಲ. ಪ್ರತಿದಿನ ಬೆಳಗ್ಗೆ ಹತ್ತು ಗಂಟೆಯಾದರೆ ಮನೆ ಬಿಡುವ ಗಂಡ ಮರಳಿ ಮನೆ ಸೇರುತ್ತಿದ್ದುದು ರಾತ್ರಿ ಎಂಟರ ಮೇಲೆ. ರಾತ್ರಿ ಧೈರ್ಯಕ್ಕೆ ಒಬ್ಬರಿರುತ್ತಾರೆ ಎಂಬುದನ್ನು ಬಿಟ್ಟರೆ ಗಂಡನಿಲ್ಲದೇ ಹೇಗಪ್ಪಾ ಎಂದು ಚಿಂತೆಗೊಳಗಾಗುವಂತಹ ಪ್ರಮೇಯವೇನು ಭಾರತಿಗಿರಲಿಲ್ಲ. ಅಲ್ಲದೇ ಒಳ್ಳೆಯ ಆದಾಯ ಬರುವ ಉದ್ಯೋಗವೊಂದು ತಮ್ಮನ್ನೇ ಹುಡುಕಿಕೊಂಡು ಬಂದಿರುವಾಗ ಅವಳಿಗೆ ಇಲ್ಲ ಎನ್ನುವ ಮನಸಾಗಲಿಲ್ಲ. ‘ನೋಡಿ, ಒಂದೆರಡು ತಿಂಗಳು ಮಾಡಿ. ನಿಮಗೆ ಒಗ್ಗಿರೆ ಮುಂದುವರೆಸಿ, ಇಲ್ಲೇಂದ್ರೆ ಆಗದಿಲ್ಲೆ ಅಂತ ಭಾಗವತ್ ಡಾಕ್ಟ್ರಿಗೆ ಹೇಳಿದ್ರಾತು. ಸುಗ್ಗಿಯಂತೂ ಮುಗದ್ದು. ಮನೆ ಬದಿಗಂತು ಎಂತೂ ಕೆಲಸ ಇಲ್ಲೆ’ ಎಂದು ಭಾರತಿ ತನ್ನ ಒಪ್ಪಿಗೆ ಕೊಟ್ಟಳು.
ಮರುದಿನವೇ ತ್ರಯಂಬಕ ವೆಂಕಟೇಶನೊಂದಿಗೆ ಭಾಗವತ್ ಡಾಕ್ಟರನ್ನು ಕಂಡು, ಕೆಲಸವನ್ನು ಒಪ್ಪಿ ಪಡೆದುಕೊಂಡ. ಭಾಗವತ್ ಡಾಕ್ಟರೇ ತ್ರಯಂಬಕನನ್ನು ತಮ್ಮ ಕಾರಿನಲ್ಲಿ ಉಳ್ಳೂರಿಗೆ ಕರೆದುಕೊಂಡು ಹೋಗಿ ಬಸವೇಗೌಡರನ್ನು ಪರಿಚಯಿಸಿಕೊಟ್ಟರು. ಅವರಿಗೆ ದಿನವೂ ಕೊಡಬೇಕಾದ ಮಾತ್ರೆ, ಔಷಧಿ, ಮಾಡಿಸಬೇಕಾದ ಪಥ್ಯಗಳ ಕ್ರಮ ಹೇಳಿಕೊಟ್ಟರು. ತಿಂಗಳಿಗೆ ನಾಲ್ಕೂವರೆ ಸಾವಿರ ರೂಪಾಯಿ ಸಂಬಳ ಕೊಡಿಸುವುದಕ್ಕೂ ಗೌಡರ ಮಗಳಿಗೆ ಅಲ್ಲಿಂದಲೇ ಫೋನ್ ಮಾಡಿ ಒಪ್ಪಿಸಿದರು. ತ್ರಯಂಬಕ ಮರುದಿನ ತನ್ನ ಸಣ್ಣದೊಂದು ಚೀಲದೊಂದಿಗೆ ಗೌಡರ ಮನೆಗೆ ಬಂದು ಸೇರಿಕೊಂಡ.
* * *
ಬಸವೇಗೌಡರ ಮನೆಯ ಹಜಾರದ ಗೋಡೆಗೆ ನೇತುಬಿಟ್ಟಿದ್ದ ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋ, ಪತ್ನಿಯ ಪಕ್ಕ ನಿಂತಿದ್ದ ಮುಂಡಾಸದ ಗೌಡರ ಮುಖದಲ್ಲಿನ ಆರೋಗ್ಯವನ್ನೂ, ಕಟ್ಟುಮಸ್ತಾಗಿದ್ದ ಅವರ ದೇಹವನ್ನೂ, ಗಡುಸಾಗಿದ್ದ ಹುರಿಮೀಸೆಯನ್ನೂ ತೋರಿಸುತ್ತಿತ್ತು. ಗೌಡರು ತಮ್ಮ ತಂದೆ ತೀರಿಕೊಂಡಮೇಲೆ ಅಣ್ಣ-ತಮ್ಮಂದಿರು ಬೇರಾಗಿ, ತಾವು ಸ್ವತಃ ಈ ಮನೆ ಕಟ್ಟಿಕೊಂಡು, ಪಾಲಿಗೆ ಬಂದ ಆರು ಎಕರೆ ಜಮೀನನ್ನು ಉಳುಮೆ ಮಾಡಿಕೊಂಡು ಚಿನ್ನ ಬೆಳೆದುದನ್ನೂ, ಒಂದು ಎಕರೆ ಒತ್ತುವರಿಯಲ್ಲಿ ಅಡಿಕೆಯನ್ನೂ ಹಾಕಿ ಫಲ ಕಂಡುದನ್ನೂ, ಓದಿಸಿದ ಮಕ್ಕಳು ಈಗ ಕೈಗೆ ಸಿಗದಂತಾದುದ್ದನ್ನೂ ತ್ರಯಂಬಕನ ಬಳಿ ಹೇಳಿಕೊಂಡರು. ‘ಮಗನ ಹತ್ರ ವಾಪಾಸ್ ಮನೆಗೆ ಬಂದಿರು ಅಂತಂದ್ರೆ ನಗ್ತಾನೆ. ಮಗಳ ಮನೆಗೆ ಹೋಗಿರಕ್ಕೆ ನಂಗೆ ಮನಸಿಲ್ಲ. ಗದ್ದೆ ಮಾಡೋದನ್ನೂ ಈಗ ಬಿಟ್ಟಿದೀನಿ. ತೋಟದಿಂದ ಬರೋ ಆದಾಯಾನೇ ಸಾಕು ನನ್ನ ಜೀವನಕ್ಕೆ. ಇನ್ನೂ ಬೇಕಂದ್ರೆ ಮಕ್ಳುನ್ನ ಕೇಳಿದ್ರೆ ಇಲ್ಲಾ ಅನ್ನಲ್ಲ. ಈಗೀಗ ತೋಟಕ್ಕೆ ಹೋಗ್ಬರಕ್ಕೂ ಆಗಲ್ಲ ನನ್ ಕೈಲಿ. ಧರೆ ಹತ್ಬೇಕಾದ್ರೆ ಉಸಿರು ಕಟ್ತದೆ’ ಅಂತ ಹೇಳುವಾಗ ಗೌಡರ ಉಸಿರು ನಿಡಿದಾಗಿತ್ತು.
ತ್ರಯಂಬಕ ಬಸವೇಗೌಡರನ್ನು ಚೆನ್ನಾಗಿಯೇ ನೋಡಿಕೊಂಡ. ಹೊತ್ತುಹೊತ್ತಿಗೆ ಊಟ ಮಾಡಿಸಿದ. ಔಷಧಿಗಳನ್ನು ಕೊಟ್ಟ. ಆಸ್ಪತ್ರೆಯಿಂದ ಬರುವ ಡಾಕ್ಟರ ಬಳಿ ಇಂಜೆಕ್ಷನ್ ಕೊಡುವುದನ್ನು ಕಲಿತುಕೊಂಡ. ಗೌಡರು ‘ಅಯ್ಯೋ, ನೋಯುತ್ತೆ, ಇವತ್ತು ಬೇಡವೋ’ ಎಂದರೆ, ನಗುತ್ತಲೇ ಅವರನ್ನು ಸಂಭಾಳಿಸಿ ನೋವಾಗದಂತೆ ಸೂಜಿ ಚುಚ್ಚಿದ. ಮನೆ ಕೆಲಸಕ್ಕೆ ಬರುವ ಹೆಂಗಸಿಗೆ ಬೇಡವೆಂದು ಹೇಳಿ ತಾನೇ ಮನೆ ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಮಾಡತೊಡಗಿದ. ಅವಳಿಗೆ ಕೊಡುವ ಸಂಬಳವನ್ನು ತನಗೇ ಕೊಡಿ ಅಂತ ಗೌಡರ ಮಗಳ ಬಳಿ ಕೇಳಿಕೊಂಡ. ತೋಟಕ್ಕೆ ಹೋಗಿ ಅಡಿಕೆ ಹೆಕ್ಕಿಕೊಂಡು ಬಂದ. ಹಾಗೆ ಹೆಕ್ಕಿಕೊಂಡು ಬಂದ ಅಡಿಕೆಯಲ್ಲಿ ಒಂದೆರಡು ಕೇಜಿಯನ್ನು ಸುಮ್ಮನೆ ಚೀಲದಲ್ಲಿಟ್ಟುಕೊಂಡು, ಗೌಡರಿಗೆ ಇನ್ನೆರಡು ತಾಸಿನಲ್ಲಿ ಬರುವುದಾಗಿ ಹೇಳಿ ಸಾಗರಕ್ಕೆ ಓಡಿ, ಚಿಲ್ಲರೆ ಸಾಬರಿಗೆ ಆ ಅಡಿಕೆಯನ್ನು ಮಾರಿ, ಬಂದ ಹಣವನ್ನು ಓಸಿ ನಂಬರಿಗೆ ಕಟ್ಟಿ, ಕೈ ತೊಳೆದುಕೊಂಡು ಬಂದ. ಗೌಡರ ಮನೆಗೆ ಯಾರಾದರೂ ಬಂದು ನೀವ್ಯಾರು ಅಂತ ಕೇಳಿದರೆ, ‘ನಾನು ಬಸವೇಗೌಡರ ಹೋಮ್ ನರ್ಸ್’ ಅಂತ ಬಿಗುಮಾನದಿಂದ ಹೇಳಿದ. ಆಳುಗಳನ್ನು ಕರೆಸಿ ಹಿತ್ತಿಲಿನ ಬೇಲಿ ಸರಿ ಮಾಡಿಸಿದ, ತೋಟದ ಕಾದಿಗೆ ತೆಗೆಸಿದ.
ಗೌಡರಿಗೂ ತ್ರಯಂಬಕ ಹಿಡಿಸಿದ. ಮನೆಯ ಎಲ್ಲಾ ಕೆಲಸವನ್ನೂ ಅವನೇ ನಿಭಾಯಿಸುವುದನ್ನು ನೋಡಿ ಅವರಿಗೆ ಅಭಿಮಾನ ಮೂಡಿತು. ಒಮ್ಮೊಮ್ಮೆ ಗೌಡರಿಗೆ ವಿಪರೀತ ಕೆಮ್ಮು ಬಂದು ಗಂಟೆಗಟ್ಟಲೆ ಕೆಮ್ಮುತ್ತಾ ಕೂತುಬಿಡುತ್ತಿದ್ದರು. ಆಗ ಅವರ ಪಕ್ಕದಲ್ಲೇ ಕೂತು ತ್ರಯಂಬಕ ಅವರಿಗೊಂದು ತಟ್ಟೆ ಕೊಟ್ಟು ಅದರಲ್ಲೇ ಕಫ ಉಗುಳುವಂತೆ ಹೇಳುತ್ತಿದ್ದ. ಆಮೇಲೆ ಆ ತಟ್ಟೆಯನ್ನೂ ಅವನೇ ತೊಳೆಯುತ್ತಿದ್ದ. ಗೌಡರಿಗೆ ಪ್ರಿಯವಾಗುವಂತೆ ಒಂದೆರಡು ಸಲ ಸಾಗರದಿಂದ ರುಚಿರುಚಿಯಾಗಿ ಖಾರಾ-ಮಂಡಕ್ಕಿ ಕಟ್ಟಿಸಿ ತಂದು ಕೊಟ್ಟ. ಆಮೇಲೆ ರಾತ್ರಿಯಿಡೀ ಉಸಿರು ಸೊಂಯ್‍ಗುಡಿಸುತ್ತಾ ಅವರು ಹಾಸಿಗೆಯಲ್ಲಿ ಎದ್ದು ಕೂತಿರುವುದನ್ನು ಇವನು ಕಾಯಬೇಕಾಯಿತು. ಗೌಡರ ಮಗ-ಮಗಳು ಫೋನ್ ಮಾಡಿ ವಿಚಾರಿಸಿದಾಗ ‘ಏನೂ ತೊಂದ್ರೆ ಇಲ್ಲ. ನೀವೇನೂ ಕಾಳಜಿ ಮಾಡ್ಬೇಡಿ. ನಾನೆಲ್ಲ ನೋಡ್ಕೋತೇನೆ’ ಎಂದು ಭರವಸೆ ನೀಡಿದ. ತಮ್ಮನ್ನು ಇಷ್ಟೆಲ್ಲ ನಿಷ್ಟೆಯಿಂದ ನೋಡಿಕೊಳ್ಳುತ್ತಿರುವ ತ್ರಯಂಬಕನ ಬಗ್ಗೆ ಗೌಡರಿಗೆ ಸಹಜವಾಗಿಯೇ ಪ್ರೀತಿಯಾಯಿತು. ಅವನು ಮಾಡುತ್ತಿದ್ದ ಸಣ್ಣಪುಟ್ಟ ಖದೀಮತನದ ಅರಿವೇನು ಗೌಡರಿಗೆ ಆಗುತ್ತಿರಲಿಲ್ಲವಷ್ಟೇ? ‘ಯಾವ ಜನ್ಮದ ಮಗನೋ ಏನೋ, ಎಷ್ಟೆಲ್ಲ ಸೇವೆ ಮಾಡ್ತೀಯ ನಂಗೆ’ ಅಂತ ಗೌಡರು ಒಂದು ದಿನ ಕಣ್ತುಂಬಿಕೊಂಡು ಹೇಳಿದರು. ಗೌಡರ ಮಗಳು ತಿಂಗಳ ಕೊನೆಯಲ್ಲಿ ಬಂದು, ತಂದೆಯನ್ನು ಮಾತಾಡಿಸಿಕೊಂಡು, ತ್ರಯಂಬಕನಿಗೆ ಕೊಡಬೇಕಾದ ಸಂಬಳವನ್ನು ಕೊಟ್ಟು ಹೋದಳು. ಆಳುಗಳಿಗೆ ಕೊಡಬೇಕಿದ್ದ ಕೂಲಿಯ ಹಣವನ್ನೂ ಅವರ ಬಳಿ ಇಸಿದುಕೊಳ್ಳುವಾಗ ಲೆಕ್ಕದಲ್ಲಿ ಸ್ವಲ್ಪ ಜಾಸ್ತಿ ಸೇರಿಸುವುದನ್ನು ತ್ರಯಂಬಕ ಮರೆಯಲಿಲ್ಲ.
ಹೀಗಿರುವಾಗ, ಒಂದು ದಿನ ಅಮೆರಿಕೆಯಿಂದ ಬಂದ ಗೌಡರ ಮಗ ಎರಡು ದಿವಸ ಮನೆಯಲ್ಲಿ ಇದ್ದು ಹೋದ. ಅವನು ಅತ್ತ ಹೋದಮೇಲೆ ತ್ರಯಂಬಕನಿಗೆ ಅಚಾನಕ್ಕಾಗಿ ಒಂದು ವಿಚಾರ ತಲೆಗೆ ಬಂತು: ಗೌಡರ ಮಗ, ತಂದೆಯನ್ನು ವಿಚಾರಿಸಿಕೊಂಡು ಹೋಗುವುದು ಒಂದು ಕರ್ತವ್ಯ ಎಂಬಂತೆ ನಡೆದುಕೊಂಡನೇ ಹೊರತು ತಂದೆಯ ಬಗ್ಗೆ ವಿಶೇಷ ಕಾಳಜಿಯೇನು ಅವನಿಗೆ ಇದ್ದಂತೆ ಕಾಣಲಿಲ್ಲ. ಗೌಡರಿಗೂ ಮಗನ ಬಗ್ಗೆ ಅಂತಹ ಮಮಕಾರ ಯಾವತ್ತೂ ಕಂಡಿಲ್ಲ. ಇನ್ನು ಮಗಳು, ಮದುವೆಯಾದವಳು, ಅವಳ ಸಂಸಾರ-ತಾಪತ್ರಯ ಅವಳಿಗೆ, ಅವಳ ಬಗ್ಗೆಯೂ ಗೌಡರಿಗೆ ವಿಪರೀತ ಪ್ರೀತಿಯಿದ್ದಂತೆ ಅನಿಸಲಿಲ್ಲ. ಮತ್ತೆ ಈ ಮಗನಾಗಲೀ-ಮಗಳಾಗಲೀ, ಊರಿಗೆ ಬಂದಾಗ ತೋಟ-ಗದ್ದೆಗಳ ಕಡೆ ತಲೆ ಹಾಕುವುದಿರಲಿ, ತೋಟದಿಂದ ಎಷ್ಟು ಆದಾಯ ಬಂತು, ಕೃಷಿ ಕತೆ ಏನು, ನೀರು-ಗೊಬ್ಬರ ಸರಿಯಾಗಿ ಹಾಕಲಾಗುತ್ತಿದೆಯಾ ಅಂತ ವಿಚಾರಿಸುವ ಗೊಡವೆಗೂ ಹೋಗಲಿಲ್ಲ. ತ್ರಯಂಬಕ ಹೇಳಿದ್ದನ್ನು ಕೇಳಿಕೊಂಡು, ತಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ, ಅನಾಸಕ್ತರಾಗಿ ಹೋದರು. ಅವರುಗಳಿಗೆ ಇವ್ಯಾವುವೂ ಬೇಡವಾಗಿದೆ ಎಂಬುದು ತ್ರಯಂಬಕನಿಗೆ ಅರ್ಥವಾಯಿತು.
ಹಾಗಾದರೆ ಗೌಡರು ಹೋದಮೇಲೆ ಇವೆಲ್ಲಾ ಯಾರಿಗೆ? ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುವ ತೋಟ, ಸರಿಯಾಗಿ ಕೃಷಿ ಮಾಡಿದರೆ ಒಳ್ಳೆಯ ಬೆಳೆ ಕೊಡಬಹುದಾದ ಗದ್ದೆ, ಹಳೆಯದಾಗಿದ್ದರೂ ಗಟ್ಟಿಮುಟ್ಟಾಗಿಯೇ ಇರುವ ಮನೆ -ಎಲ್ಲಾ ಅನಾಥವಾಗುತ್ತದೆ. ಪರಿಸ್ಥಿತಿ ನೋಡಿದರೆ ಗೌಡರು ಸದ್ಯದಲ್ಲೇ ಕೈಲಾಸ ಸೇರುವುದಂತೂ ಖಚಿತ. ಆಮೇಲೆ ಆ ಮಗನಂತೂ ಮನೆಗೆ ಬಂದು ಇರುವವನಲ್ಲ. ಮಗಳಿಗೆ ಅವಳ ಗಂಡನ ಮನೆಯಲ್ಲೇ ಸಾಕಷ್ಟಿದೆ. ಅವರುಗಳಿಗೆ ಇತ್ತ ಕಡೆ ಏನಾಗುತ್ತಿದೆ ಎಂದೂ ತಿಳಿಯದು. ತನ್ನನ್ನು ಸಂಪೂರ್ಣ ನಂಬಿದ್ದಾರೆ. ಗೌಡರನ್ನು ಹೇಗಾದರೂ ಪುಸಲಾಯಿಸಿ ಮನವೊಲಿಸಿ ಇವನ್ನೆಲ್ಲಾ ತನ್ನ ಹೆಸರಿಗೇ ಬರೆಸಿಕೊಂಡುಬಿಟ್ಟರೆ ಹೇಗೆ?
ಈ ಯೋಚನೆ ಬಂದದ್ದೇ ತ್ರಯಂಬಕನಿಗೆ ಮೈ ಜುಮ್ಮೆಂದಿತು. ಪರರ ಆಸ್ತಿ ತನಗ್ಯಾಕೆ ಎಂದು ಅನಿಸಿತಾದರೂ ಮಗ್ಗುಲಲ್ಲೇ ತನ್ನ ಮನೆ, ಸಂಸಾರ, ಆರ್ಥಿಕ ಸ್ಥಿತಿ ಎಲ್ಲವೂ ನೆನಪಾಯಿತು. ಗೌಡರ ಮಕ್ಕಳಿಗೆ ಈ ಆಸ್ತಿಯಿಂದ ಬರುವ ಆದಾಯದಿಂದ ಆಗಬೇಕಾದ್ದು ಏನೂ ಇಲ್ಲ. ಸಮುದ್ರಕ್ಕೆ ಒಂದು ಬಕೆಟ್ ನೀರು ಸುರಿದರೆ ಏನು ಮಹಾ ವ್ಯತ್ಯಾಸವಾಗುತ್ತದೆ? ಯಾರಿಗೂ ಬೇಡವಾದದ್ದನ್ನು ತಾನು ಪಡೆದುಕೊಂಡರೆ ಅದರಲ್ಲಿ ತಪ್ಪೇನಿದೆ? ಬಡವನೊಬ್ಬನ ಉದ್ಧಾರವಾದಂತಾಗುತ್ತದೆ. ಅಲ್ಲದೇ ಸ್ವಂತ ತಂದೆಗಿಂತ ಹೆಚ್ಚಾಗಿ ಇಷ್ಟು ದಿನ ಇವರನ್ನು ನೋಡಿಕೊಂಡಿದ್ದಕ್ಕೆ ಅಷ್ಟು ಸಂಭಾವನೆಯಾದರೂ ಬೇಡವೇ? ಆದರೆ ಗೌಡರ ಬಳಿ ಹೀಗಂತ ಹೇಳಿ ತನ್ನ ಹೆಸರಿಗೇ ಆಸ್ತಿ ಬರೆದುಕೊಡಿ ಅಂತ ಕೇಳಲಿಕ್ಕಾಗದು. ತಾನು ಅದೆಷ್ಟೇ ಅವರಿಗೆ ಪ್ರಿಯನಾಗಿದ್ದರೂ ಗೌಡರು ತಾವಾಗಿಯೇ ಹಾಗೆ ಮಾಡುವುದಂತೂ ಸುಳ್ಳು. ಅವರಿಗೆ ಆ ಬಗ್ಗೆ ಯೋಚನೆಯೂ ಬಂದಿರಲಾರದು. ಹಾಗಾದರೆ ಏನು ಮಾಡುವುದು?
ತ್ರಯಂಬಕನಿಗೆ ಇದು ತಲೆಗೆ ಹತ್ತಿದಾಗಿನಿಂದ ನಿಂತಲ್ಲಿ ನಿಲ್ಲಲಾಗಲಿಲ್ಲ, ಕೂತಲ್ಲಿ ಕೂರಲಾಗಲಿಲ್ಲ. ಇದನ್ನು ಯಾರ ಬಳಿ ಹೇಳಿಕೊಳ್ಳುವುದು ಅಂತಲೂ ತಿಳಿಯಲಿಲ್ಲ. ಮತ್ತೆ ಇದು ಎಲ್ಲರ ಬಳಿ ಹೇಳುವ ವಿಷಯವೂ ಆಗಿರಲಿಲ್ಲ. ಕೊನೆಗೆ ತನ್ನ ಗೆಳೆಯ ಕೆರೆಹಳ್ಳಿ ವೆಂಕಟೇಶನೇ ಇದಕ್ಕೆ ಸೂಕ್ತ, ನಂಬಿಕಸ್ತ ವ್ಯಕ್ತಿ ಎನಿಸಿತು.
ಸಾಗರದ ಮಧುರಾ ಹೋಟೆಲಿನಲ್ಲಿ ಬೈಟೂ ಕಾಫಿ ಕುಡಿಯುತ್ತ ತ್ರಯಂಬಕ ವೆಂಕಟೇಶನಿಗೆ ಈ ಗುಟ್ಟು ಹೇಳಿದ. ತಾನೇ ಉದ್ಯೋಗ ಹುಡುಕಿಕೊಟ್ಟ ತನ್ನ ಗೆಳೆಯ ಅಲ್ಲಿಯೇ ಇದ್ದು ಮಸಲತ್ತು ಮಾಡಿ ಲಕ್ಷಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಹೊಂಚು ಹಾಕಿರುವುದು ತಿಳಿದು ವೆಂಕಟೇಶ ನಿಬ್ಬೆರಗಾದನಾದರೂ ತ್ರಯಂಬಕನೆದುರಿಗೆ ತೋರಿಸಿಕೊಳ್ಳಲಿಲ್ಲ. ‘ಬಸವೇಗೌಡರಿಗೆ ತಿಳಿಯದಂತೆ ಅವರಿಂದ ನಿನ್ನ ಹೆಸರಿಗೆ ಒಂದು ವಿಲ್ ಬರೆಸಿ ಸೈನ್ ಮಾಡ್ಸಿದ್ರೆ ಎಲ್ಲಾ ನಿಂದೇ ಆಗ್ತು ಅನ್ನಿಸ್ತು. ನಂಗೂ ಸರಿಯಾಗಿ ಗೊತ್ತಿಲ್ಲೆ. ಒಂದ್ಸಲ ಯಾವುದಾದ್ರೂ ಲಾಯರ್ ಕಾಣು. ಆದ್ರೆ ಉಳ್ಳೂರಿನ ಆಸುಪಾಸಿನವರು ಯಾರೂ ಬ್ಯಾಡ. ಗೌಡರ ಪರಿಚಯ ಇರೋವ್ರು ಆದ್ರೆ ಅವರೇ ಪಿತೂರಿ ಮಾಡೋ ಛಾನ್ಸ್ ಇರ್ತು. ನೀನು ಒಂದು ಕೆಲಸ ಮಾಡು, ಗೌಡರನ್ನ ನಿಮ್ಮೂರಿಗೆ ಕರ್ಕಂಡು ಹೋಗು. ಒಂದು ನಾಲ್ಕು ದಿನ, ಹವಾ ಬದಲಾದ್ರೆ ನಿಮಗೆ ಒಳ್ಳೇದಾಗತ್ತೆ ಅಂತ ಹೇಳಿ ಅವರನ್ನ ಒಪ್ಸು. ಆಮೇಲೆ ಅಲ್ಲೇ ಯಾವ್ದಾದ್ರೂ ಲಾಯರ್ ಹಿಡಿದು ನಿನ್ ಕೆಲಸ ಮಾಡಿಸ್ಕೋ’ ಅಂತ ವೆಂಕಟೇಶ ತ್ರಯಂಬಕನಿಗೆ ಉಪಾಯ ಹೇಳಿದ.
ಮುಂದಿನ ಒಂದೆರಡು ವಾರಗಳಲ್ಲಿ, ವೆಂಕಟೇಶ ಹೇಳಿದಂತೆಯೇ ಮಾಡಿ, ‘ಒಂದು ನಾಲ್ಕು ದಿನ ಅಷ್ಟೇ ಗೌಡ್ರೇ, ಮತ್ತೆ ಇಲ್ಲಿಗೇ ಬಂದುಬಿಡುವಾ’ ಅಂತ ಪುಸಲಾಯಿಸಿ ಗೌಡರನ್ನು ಒಪ್ಪಿಸಿದ ತ್ರಯಂಬಕ. ಗೌಡರ ಮಗಳಿಗೂ ಫೋನಿನಲ್ಲಿ ಹೇಳಿದ. ಹೆಂಡತಿಗೆ ಫೋನ್ ಮಾಡಿ, ‘ಎಂಥಕ್ಕೆ ಏನು ಅಂತ ಕೇಳಡ. ಗೌಡರನ್ನ ಕರ್ಕಂಡು ಬರ್ತಾ ಇದ್ದಿ. ನಾಕು ದಿನ ನಮ್ಮನೇಲೆ ಇರ್ತ. ನೀನೇನು ಅವರ ಸೇವೆ ಮಾಡದು ಬೇಕಾಗಿಲ್ಲೆ. ನಾ ಎಲ್ಲಾ ನೋಡ್ಕ್ಯಳ್ತಿ’ ಅಂತ ಹೇಳಿದ. ಗೌಡರ ಬಟ್ಟೆ, ಔಷಧಿಗಳನ್ನು ಒಂದು ಚೀಲಕ್ಕೆ ತುಂಬಿಕೊಂಡು, ಅಂದು ಬೆಳಗಾಮುಂಚೆ ಅವರನ್ನೆಬ್ಬಿಸಿ ಹೊರಟುಬಿಟ್ಟ.
ಊರ ಬಸ್‍ಸ್ಟಾಂಡಿನಲ್ಲಿ ಮುದುಕರನ್ನು ಇಳಿಸಿಕೊಂಡು, ಮಣ್ಣ ರಸ್ತೆಯಲ್ಲಿ ನಿಧಾನಕ್ಕೆ ಇಳಿಜಾರಿನಲ್ಲಿ ನಡೆಸುವಾಗ, ಇನ್ನು ಯಾವ ಲಾಯರನ್ನು ಕಾಣುವುದು ಅಂತ ತ್ರಯಂಬಕ ಯೋಚಿಸಿದ. ಮತ್ತಿಮನೆ ರಾಮಣ್ಣನೇ ಇದಕ್ಕೆಲ್ಲ ಲಾಯಕ್ಕು ಅಂತ ಹೊಳೆಯಿತು. ಮನೆಯಲ್ಲಿ ಭಾರತಿಯೂ ಹೆಚ್ಚು ಅಸಹನೆ ತೋರದೆ ಇವರನ್ನು ಸ್ವಾಗತಿಸಿದಳು. ಹೆಂಡತಿಯನ್ನು ಕೋಣೆಗೆ ಕರೆದು ಗುಟ್ಟಾಗಿ ವಿಷಯವನ್ನು ಇವನು ಹೇಳಿದ ಮೇಲಂತೂ ಗೌಡರನ್ನು ಅವಳು ಹೆಚ್ಚಾಗೇ ಉಪಚರಿಸತೊಡಗಿದಳು.
ಮರುದಿನದ ಹೊತ್ತಿಗೆ ಗೌಡರಿಗೆ ಪ್ರಯಾಣದ ಆಯಾಸ ಮತ್ತು ವಾತಾವರಣದ ಬದಲಾವಣೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು. ಒಂದೇ ಸಮನೆ ಕೆಮ್ಮುತ್ತಿದ್ದರು. ಸೊಂಯ್ ಸೊಂಯ್ ಎಂದು ದೊಡ್ಡದಾಗಿ ಉಸಿರು ಬಿಡುತ್ತಿದ್ದರು. ಆದರೂ ತ್ರಯಂಬಕ ಭಾರತಿಯ ಬಳಿ ಹುಷಾರಾಗಿ ನೋಡಿಕೊಳ್ಳಲು ಹೇಳಿ ಸಾಗರಕ್ಕೆ ಹೊರಟ. ಕೋರ್ಟಿನ ಬಳಿ ಮತ್ತಿಮನೆ ರಾಮಣ್ಣನನ್ನು ಕಂಡು, ತನ್ನ ಪರಿಚಯದವರೊಬ್ಬರು ತಮ್ಮ ಆಸ್ತಿಯನ್ನೆಲ್ಲ ತನ್ನ ಹೆಸರಿಗೇ ಬರೆಯಲಿಕ್ಕೆ ಇಚ್ಛಿಸುತ್ತಿರುವುದಾಗಿಯೂ, ಅದಕ್ಕೆ ಒಂದು ವಿಲ್ ತಯಾರಿಸಿಕೊಡಬೇಕಾಗಿಯೂ ಕೇಳಿಕೊಂಡ. ಲಾಯರ್ ರಾಮಣ್ಣ ಒಪ್ಪಿದರು. ಅವರೊಂದಿಗೆ ತಹಶೀಲ್ದಾರ್ ಆಫೀಸಿಗೆ ಹೋಗಿ ವಿಚಾರಿಸಿ ಆಸ್ತಿಗೆ ಸಂಬಂಧಿಸಿದ ಪಹಣಿ ಪ್ರತಿಗಳನ್ನು ತೆಗೆಸಿದ. ಆದರೆ ಡಾಕ್ಯುಮೆಂಟ್ ಪೇಪರ್ ಮೇಲೆ ಸ್ಟಾಂಪ್ ಪಡೆಯಲು ಸಬ್-ರಿಜಿಸ್ಟ್ರಾರ್ ಆಫೀಸಿಗೆ ಹೋದಾಗ ಅವರಿಗೆ ಒಂದು ಆಘಾತ ಕಾದಿತ್ತು:
‘ನೋಡ್ರೀ, ಈ ಆಸ್ತಿ ಮೇಲೆ ಏನಾದ್ರೂ ಎನ್‍ಕಂಬ್ರೆನ್ಸ್ ಇದೆಯಾ ಅಂತ’ ಎಂದು ಲೋಕಾಭಿರಾಮವಾಗಿ ಲಾಯರ್ ರಾಮಣ್ಣ ಸಬ್-ರಿಜಿಸ್ಟ್ರಾರ್ ಮುಂದೆ ಪಹಣಿಗಳನ್ನು ಇಟ್ಟಿದ್ದೇ, ಅವರು ‘ಅರೇ! ಇದು ಉಳ್ಳೂರು ಬಸವೇಗೌಡರದ್ದು ಅಲ್ಲವೇ? ಮೊನ್ನೆಯಷ್ಟೇ ಅವರು ಬಂದು ತಮ್ಮ ಅಷ್ಟೂ ಆಸ್ತಿ ಮಗ ಮತ್ತು ಮಗಳ ಹೆಸರಿಗೆ ಸೇರುವಂತೆ ವಿಲ್ ಮಾಡಿಸಿ ರಿಜಿಸ್ಟ್ರು ಸಹ ಮಾಡ್ಸಿ ಹೋದ್ರಲ್ಲಾ? ಈಗೇನು ನೀವು ಬಂದ್ರಿ?’ ಎಂದು ಕೇಳಿದರು.
ತ್ರಯಂಬಕನಿಗೆ ಶಾಕ್ ಹೊಡೆದಂತಾಯಿತು. ‘ಗೌಡ್ರು ಇಲ್ಲಿಗೆ ಬಂದಿದ್ರಾ? ಏನು ಹೇಳ್ತಿದೀರಿ ನೀವು? ಅವರಿಗೆ ಒಬ್ಬರಿಗೇ ಓಡಾಡಲಿಕ್ಕೇ ಆಗಲ್ಲ’ ಅಂತ ದಡಬಡಿಸಿದ.
‘ಒಬ್ಬರೇ ಬಂದಿರ್ಲಿಲ್ರೀ. ಅದ್ಯಾರೋ ವೆಂಕಟೇಶ್ ಅಂತ, ಕೆರೆಹಳ್ಳಿಯವರು, ಮೊನ್ನೆ ಮಂಗಳವಾರ ಕರ್ಕೊಂಡ್ ಬಂದಿದ್ರು. ನೀವೇ ವಿಲ್ ಬರೆಸಿಕೊಡಿ ಅಂದ್ರು. ನಾನು ನಮ್ಮದೇ ರೈಟರ್ಸ್ ಹತ್ರ ಬರೆಸಿ, ರಿಜಿಸ್ಟರ್ ಮಾಡಿ ಕೊಟ್ಟೆ’ ಎಂದು ಸಬ್-ರಿಜಿಸ್ಟ್ರಾರ್ ದೃಢಪಡಿಸಿದರು.
ತ್ರಯಂಬಕನಿಗೆ ಮತ್ತೂ ಶಾಕ್ ಆಯಿತು. ತನ್ನ ಗೆಳೆಯ ವೆಂಕಟೇಶ ಇಂತಹ ಕೆಲಸ ಮಾಡುವವನೇ? ಮೊನ್ನೆ ಮಂಗಳವಾರ ಭಾಗವತ್ ಡಾಕ್ಟರು ಬರೆದುಕೊಟ್ಟಿದ್ದ ಔಷಧಿ ತರಲು ತಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಬಂದು ಇಷ್ಟು ಕೆಲಸ ಮಾಡಿದ್ದಾನೆ. ನಯವಂಚಕ. ವಿಶ್ವಾಸದ್ರೋಹಿ. ಆದರೆ ಗೌಡರೂ ಈ ವಿಷಯವನ್ನು ತನ್ನ ಬಳಿ ಬಾಯಿ ಬಿಡಲಿಲ್ಲವಲ್ಲಾ? ಇಷ್ಟು ದಿನ ತಾನು ಅವರ ಸೇವೆ ಮಾಡಿ, ನಂಬಿಕೆ ಗಿಟ್ಟಿಸಿದ್ದೆಲ್ಲ ದಂಡವಾಯಿತೇ? ತನಗೆ ಒಂದು ಮಾತು ಹೇಳಬಹುದಿತ್ತು. ಇಲ್ಲ, ಇನ್ನು ಅವರ ಬಳಿ ಕೆಲಸ ಮಾಡುವುದಿಲ್ಲ. ಆ ಮುದುಕನ ಹೇಲು ಬಳಿಯುವುದಿಲ್ಲ. ಸೇವೆ ಮಾಡುವವರಿಲ್ಲದೇ ಸಾಯಲಿ. ಆದರೆ, ಅರೆ! ಅವರಿಗೆ ಇವೆಲ್ಲ ಗೊತ್ತಿದ್ದೂ ತನ್ನ ಜೊತೆ ಊರಿಗೆ ಬಂದರೇ? ವೆಂಕಟೇಶ ಏನೇನು ಹೇಳಿದ್ದಾನೋ? ಈಗ ಅವರಿಗೆ ತಾನು ಹೇಗೆ ಮುಖ ತೋರಿಸುವುದು? ತ್ರಯಂಬಕನಿಗೆ ತಿಳಿಯಲಾರದ ಗೊಂದಲವಾಯಿತು.
ಲಾಯರ್ ರಾಮಣ್ಣನವರಿಗೆ ಏನೋ ಸಬೂಬು ಹೇಳಿ ಫೀಸು ಕೊಟ್ಟು ತಪ್ಪಿಸಿಕೊಂಡು, ಸಿಕ್ಕಿದ ಬಸ್ಸು ಹತ್ತಿ ಊರಿಗೆ ಬಂದ. ನಿರಾಸೆ, ಸಿಟ್ಟು, ಅವಮಾನ, ಗೊಂದಲ ಎಲ್ಲಾ ಸೇರಿಕೊಂಡು ತ್ರಯಂಬಕನ ಮುಖ ಕೆಂಪಾಗಿತ್ತು. ಮನೆಯ ಬಳಿ ಬಂದು ನೋಡಿದರೆ ಊರವರೆಲ್ಲ ಸೇರಿದ್ದರು. ತ್ರಯಂಬಕನ ಕಳವಳ ಮತ್ತೂ ಜಾಸ್ತಿಯಾಗಿ, ಜನರನ್ನು ಸರಿಸಿಕೊಂಡು ಮನೆಯೊಳಗೆ ನುಗ್ಗಿದ. ಬಸವೇಗೌಡರು ಅಲ್ಲಿ ಕೊನೆಯುಸಿರೆಳೆದಿದ್ದರು.
‘ಈ ತ್ರಯಂಬಕಂಗೆ ಇವೆಲ್ಲಾ ಎಂಥಕ್ಕೆ ಬೇಕಿತ್ತು? ತಮ್ಮೂರಲ್ಲಿ ಅರಾಮಾಗಿ ಇದ್ದಿದ್ದ ಗೌಡರನ್ನ ಇಲ್ಲಿಗೆ ಕರ್ಕಂಡು ಬಂದು, ಅವರಿಗೆ ಉಸಿರಾಟದ ತೊಂದರೆ ಜಾಸ್ತಿಯಾಗಿ, ಇಲ್ಲಿ ಪ್ರಾಣ ಬಿಡಹಂಗೆ ಮಾಡಿದ’, ‘ಇನ್ನು ಅವರ ಮಕ್ಕಳಿಗೆ ಫೋನ್ ಮಾಡಿ ಕರೆಸೋದು ಹೆಂಗೆ, ಅವರಿಗೆ ಏನು ಹೇಳೋದು, ಉಳ್ಳೂರಿಗೆ ವಾಪಸ್ ಕರ್ಕಂಡ್ ಹೋಗೋದು ಯಾವಾಗ.. ಈ ತ್ರಯಂಬಕ ಇಲ್ದೇ ಇರೋ ಉಸಾಬರಿ ಮೈಮೇಲೆ ಎಳಕಂಡ’, ‘ಒಂದು ನಾಲ್ಕು ಕಾಸು ಸಂಪಾದನೆ ಆಗ್ತಿತ್ತು, ಅದನ್ನೂ ಕಳ್ಕಂಡ...’ -ಜನ ತರಹೇವಾರಿ ಮಾತಾಡಿಕೊಳ್ಳುತ್ತಿದ್ದರು. ಜಗುಲಿಯಲ್ಲಿ ಊದ್ದಕೆ ಮಲಗಿದ್ದ ಬಸವೇಗೌಡರ ಪಾರ್ಥಿವ ಶರೀರದೆದುರು ತ್ರಯಂಬಕ ಕುಸಿದು ಕುಳಿತ.
[30.11.2014ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]
Wednesday, December 01, 2010
ಕಾರಿರುಳೊಳಾಗಸದಿ ತಾರೆ ನೂರಿದ್ದೇನು..
“ಅಯಾಮ್ ಫೈನ್ ಮ್ಯಾನ್.. ಇವತ್ತು ಬೆಳಗ್ಗೆ ನ್ಯೂಸ್‌ಪೇಪರಲ್ಲಿ ನಿನ್ನ ಹೆಸರು ನೋಡ್ತಿದ್ದ ಹಾಗೇ ನೆನಪಾಯ್ತು.. ಹಾಗೇ ಕಾಲ್ ಮಾಡ್ಬಿಟ್ಟೆ” ಅಂದ.
‘ನ್ಯೂಸ್‌ಪೇಪರಲ್ಲಿ? ನನ್ ಹೆಸರು??’ ಎರಡು ಕ್ಷಣದ ಮೇಲೆ ಹೊಳೆಯಿತು, ಓಹ್, ಈ ವಾರದ ಸಾಪ್ತಾಹಿಕದಲ್ಲಿ ನನ್ನ ಕತೆ ಬರುತ್ತೆ ಅಂತ ಸಂಪಾದಕರು ಮೇಲ್ ಮಾಡಿದ್ದರು. ಪಬ್ಲಿಷ್ ಆಗಿರಬೇಕು ಹಾಗಾದರೆ. “ಓಹ್ ಫೈನ್.. ನಿಜ ಹೇಳ್ಬೇಕೂಂದ್ರೆ ಇನ್ನೂ ನಾನೇ ನೋಡಿಲ್ಲ ಅದನ್ನ.. ಸಂಡೇ ಅಲ್ವಾ? ಈಗಷ್ಟೇ ಎದ್ದೆ. ಹೆಹ್ಹೆ! ಕತೆ ಬಂದಿದ್ಯಾ? ಓಕೆ ಓಕೆ..” ಮಾತಾಡುತ್ತಲೇ ವರಾಂಡಕ್ಕೆ ನಡೆದು, ಕಿಟಕಿ ಬಳಿ ಬಿದ್ದಿದ್ದ ಪೇಪರ್ ಎತ್ತಿಕೊಂಡೆ.
“ಯಾ.. ನಿನ್ನ ಬ್ಲಾಗ್ ನೋಡ್ತಿರ್ತೀನಿ ನಾನು.. ಆದ್ರೆ ನಮ್ ಆಫೀಸಲ್ಲಿ ಕಮೆಂಟ್ ಮಾಡ್ಲಿಕ್ಕೆ ಆಗಲ್ಲ.. ಅದೇನೋ, ಐಪಿ ಬ್ಲಾಕ್ ಮಾಡ್ಬಿಟ್ಟಿದಾರೆ. ತುಂಬಾ ದಿನದಿಂದ ಕಾಲ್ ಮಾಡ್ಬೇಕೂ ಅಂದ್ಕೋತಿದ್ದೆ; ಅಂತೂ ಇವತ್ತು ಮುಹೂರ್ತ ಸಿಗ್ತು” ನಗಾಡಿದ.
“ಇವತ್ತಾದ್ರೂ ಸಿಕ್ತಲ್ಲ!” ನಾನೂ ನಕ್ಕೆ.
“ಹೇ, ಇವತ್ತು ಏನ್ ಪ್ರೋಗ್ರಾಂ ನಿಂದು? ಏನೂ ಇಲ್ಲಾಂದ್ರೆ ವೈ ಕಾಂಟ್ ವಿ ಮೀಟ್ ಟುಡೇ ಫಾರ್ ಲಂಚ್? ಎಲ್ಲಾದ್ರೂ ಇಬ್ರಿಗೂ ಹತ್ರ ಆಗೋಂತ ಪ್ಲೇಸಲ್ಲಿ? ಯಾಕೋ ತುಂಬಾ ಮಾತಾಡ್ಬೇಕು ಅನ್ನಿಸ್ತಿದೆ ನಿನ್ ಹತ್ರ” ಕೇಳಿದ.
ಇವತ್ತು ಏನು ಪ್ರೋಗ್ರಾಂ ಇದೆ ಅಂತ ಯೋಚಿಸಿದೆ, ಏನೂ ಹೊಳೆಯಲಿಲ್ಲ. ಓಂಪಿಗೆ ಸಿಗುವುದರಿಂದ ಏನಾದ್ರೂ ತೊಂದರೆ ಇದೆಯಾ ಅಂತ ಯೋಚಿಸಿದೆ, ಏನೂ ಇಲ್ಲ ಅನ್ನಿಸಿತು. “ಪ್ರೋಗ್ರಾಂ ಏನೂ ಇದ್ದಂತಿಲ್ಲ. ಯಾವ್ದಕ್ಕೂ ನಾನು ನಿಂಗೆ ಮೆಸೇಜ್ ಮಾಡ್ತೇನೆ. ಸಿಗೋದಾದ್ರೆ ಎಷ್ಟೊತ್ತಿಗೆ, ಎಲ್ಲಿ ಅಂತ. ರೈಟ್?” ಹೇಳಿದೆ.
“ಆಲ್ ರೈಟ್! ಸೀ ಯೂ ದೆನ್” ಅಂತಂದು ಕಾಲ್ ಡಿಸ್‌ಕನೆಕ್ಟ್ ಮಾಡಿದ.
ಈ ಓಂಪ್ರಕಾಶ್ ನನ್ನ ಎಕ್ಸ್-ಕಲೀಗು. ಮಂಗಳೂರಿನ ಹುಡುಗ. ಹಳೆಯ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಹಂಚಿಕೊಂಡವ. ಪ್ರತಿ ತಿಂಗಳು ಇಪ್ಪತ್ತೈದನೇ ತಾರೀಖಿನ ಹೊತ್ತಿಗೆ ವ್ಯಾಲೆಟ್ಟು ಖಾಲಿ ಮಾಡಿಕೊಂಡು “ಅಂಶು, ಇನ್ನು ಸಂಬಳ ಆಗೋವರೆಗೆ ನೀನೇ ನನ್ನ ದೈವ” ಎಂದು ಕೈಚಾಚಿ ಕೂರುತ್ತಿದ್ದವ. “ಸಂಬಳ ಲೇಟಾಗಿ ಆದಷ್ಟೂ ಒಳ್ಳೇದು ನೋಡು. ಜಾಸ್ತಿ ದಿನಕ್ಕೆ ಬರುತ್ತೆ. ಅದಿಲ್ಲಾ, ಒಂದನೇ ತಾರೀಖೇ ಆಗಿಬಿಟ್ರೆ, ಹೀಗೆ ಮಂತ್ ಎಂಡ್ ಹೊತ್ತಿಗೆ ಕೈ ಖಾಲಿಯಾಗಿಬಿಡತ್ತೆ!” ಎನ್ನುತ್ತ ಪೇಲವ ನಗೆ ನಗುತ್ತಿದ್ದವ.
“ಅದು ಹ್ಯಾಗೆ ಓಂಪಿ? ನಮಗೆಲ್ಲ ತಿಂಗಳು ಅಂದ್ರೆ ಸಂಬಳದ ದಿನದಿಂದ ಸಂಬಳದ ದಿನದವರೆಗೆ. ಐದನೇ ತಾರೀಖು ಸಂಬಳ ಕೊಟ್ಟರೆ ಮುಂದಿನ ತಿಂಗಳ ಐದರವರೆಗೆ ತಿಂಗಳು; ಏಳನೇ ತಾರೀಖು ಕೊಟ್ಟರೆ ಮುಂದಿನ ಏಳರವರೆಗೆ ತಿಂಗಳು! ಒಂದನೇ ತಾರೀಖಿನಿಂದ ಮೂವತ್ತೊಂದು ಅನ್ನೋದು ಕ್ಯಾಲೆಂಡರಿನಲ್ಲಿ ಅಷ್ಟೇ” ನಾನು ವಾದಿಸುತ್ತಿದೆ.
“ಅದು ಹಾಗಲ್ಲ ಅಂಶು.. ನನ್ನ ಫ್ರೆಂಡ್ಸ್ ಎಲ್ಲರೂ ಸಾಫ್ಟ್‌ವೇರು-ಐಟಿಗಳಲ್ಲಿ ಕೆಲಸ ಮಾಡೋರು. ಅವರಿಗೆಲ್ಲ ಪ್ರತಿ ತಿಂಗಳೂ ಮೂವತ್ತನೇ ತಾರೀಖೇ ಸಂಬಳ ಅಕೌಂಟಿಗೆ ಕ್ರೆಡಿಟ್ ಆಗಿಬಿಡತ್ತೆ. ತಿಂಗಳ ಮೊದಲ ವೀಕೆಂಡು ಫುಲ್ ಪಾರ್ಟಿ. ನನ್ನೂ ಕರೀತಾರೆ, ಹೋಗದೇ ಇರ್ಲಿಕ್ಕೆ ಆಗಲ್ಲ. ಹೋದ್ರೆ ದುಡ್ಡು ಖರ್ಚಾಗತ್ತೆ. ಅದೇ ಸಂಬಳವೇ ಆಗಿರ್ಲಿಲ್ಲ ಅಂದ್ರೆ, ‘ನನ್ ಸ್ಯಾಲರಿ ಇನ್ನೂ ಇನ್ನೂ ಆಗಿಲ್ಲಪ್ಪ’ ಅಂತಂದು ಜಾರಿಕೊಳ್ಳಬಹುದು. ಅಷ್ಟು ದುಡ್ಡಾದ್ರೂ ಉಳಿಯುತ್ತೆ” ಅಂತ ತರ್ಕ ಮುಂದಿಡುತ್ತಿದ್ದ.
ಈ ವಕೀಲಿ ವೃತ್ತಿಯೇ ಹೀಗೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಒಳ್ಳೆಯ ಸಂಬಳದ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತ ಇರುವವರು, ದುಡ್ಡುಮಾಡಬೇಕು ಅಂತ ಇರುವವರು ಈ ಫೀಲ್ಡಿಗೆ ಬರಲೇಬಾರದು. ತಂದೆಯೋ ತಾಯಿಯೋ ಲಾಯರ್ರೇ ಆಗಿದ್ದರೆ ಸರಿ; ಅದಿಲ್ಲದಿದ್ದರೆ ಯಾರೋ ಸೀನಿಯರ್ ಕೆಳಗೆ ಸೇರಿಕೊಂಡು, ಕೋಟ್ ಹಾಕಿಕೊಂಡು ಅವರ ಹಿಂದೆ ಪ್ರತಿದಿನ ಫೈಲ್ಸ್ ಹಿಡಿದು ಹೋಗುವುದಿದೆಯಲ್ಲ, ಥೇಟ್ ನಾಯಿ ಪಾಡು ಅದು. ತಿಂಗಳ ಕೊನೆಗೆ ಅವರು ಕೊಡುವ ಒಂದಿಷ್ಟು ದುಡ್ಡು -ಅದು ಈ ಬೆಂಗಳೂರಿನ ಬದುಕಿಗೆ ಒಂದು ವಾರಕ್ಕೂ ಸಾಲುವುದಿಲ್ಲ. ನಾವೂ ಒಂದಷ್ಟು ಕ್ಲೈಂಟುಗಳನ್ನು ಸಂಪಾದಿಸಿ, ಕೈಲೊಂದಿಷ್ಟು ಕಾಸು ಮಾಡಿಕೊಂಡು, ಸ್ವಂತ ಆಫೀಸು-ಗೀಫೀಸು ಅಂತ ಮಾಡಿಕೊಳ್ಳುವ ಹೊತ್ತಿಗೆ ಮೀಸೆ ಹಣ್ಣಾಗಿರುತ್ತೆ. ಆಮೇಲೆ ಎಷ್ಟು ಸಂಪಾದಿಸಿದರೆ ಏನು ಪ್ರಯೋಜನ?
ಆದರೆ ಈ ಕೆಲಸ ಬಿಟ್ಟು ಎಲ್‌ಪಿಒ ಒಂದಕ್ಕೆ ಸೇರಿಕೊಂಡಮೇಲೆ ಓಂಪಿಯ ರಿವಾಜೇ ಬದಲಾಗಿಹೋಯ್ತು. ನಾನು ತೆಗೆದುಕೊಳ್ಳುತ್ತಿದ್ದ ಸಂಬಳದ ಎರಡರಷ್ಟು ಅವನಿಗೆ ಅಲ್ಲಿ ಸೇರುವಾಗಲೇ ಸಿಕ್ಕಿಬಿಟ್ಟಿತು. ಮೊದಲ ಸಂಬಳದಲ್ಲಿ ಒಳ್ಳೆಯದೊಂದು ರೆಸ್ಟುರೆಂಟಿನಲ್ಲಿ ತನ್ನೆಲ್ಲ ಐಟಿ ಫ್ರೆಂಡುಗಳನ್ನೂ ಕರೆದು ಪಾರ್ಟಿ ಕೊಟ್ಟ. ಪಾರ್ಟಿ ತುಂಬ ಹುರುಪಿನಿಂದ ಓಡಾಡುತ್ತಿದ್ದ ಓಂಪಿಯನ್ನು ನೋಡಿ ‘ಬಚಾವಾಗಿಬಿಟ್ಟ ಹುಡುಗ’ ಅಂತ ಅಂದುಕೊಂಡೆ. ಆಮೇಲೆ ಒಂದೆರಡು ತಿಂಗಳು ಆಗೀಗ ಕಾಲ್ ಮಾಡ್ತಿದ್ದ. ಆರೇಳು ತಿಂಗಳ ನಂತರ ನಾನೇ ಒಮ್ಮೆ ಫೋನಿಸಿದರೆ, ರಿಸೀವ್ ಮಾಡದೇ ಕಟ್ ಮಾಡಿ, ‘ಡೆಲ್ಲಿಯಲ್ಲಿದ್ದೀನಿ. ರೋಮಿಂಗ್. ವಾಪಸ್ ಬಂದಮೇಲೆ ಕಾಲ್ ಮಾಡ್ತೀನಿ’ ಅಂತ ಎಸ್ಸೆಮ್ಮೆಸ್ ಮಾಡಿದ. ಆಮೇಲೆ ಅದೇನಾನಿಯಿತೋ, ಅವನೂ ಕಾಲ್ ಮಾಡಲಿಲ್ಲ, ನನಗೂ ಆಗಲಿಲ್ಲ; ಓಂಪಿಯೊಂದಿಗಿನ ಸಂಪರ್ಕವೇ ಕಡಿದುಹೋಗಿತ್ತು.
ಈಗ ಹೆಚ್ಚುಕಮ್ಮಿ ಎರಡು ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಫೋನ್ ಮಾಡಿ ಊಟಕ್ಕೆ ಸಿಗೋಣ ಅಂತ ಕರೆದಿದ್ದ ಅವನ ಆಮಂತ್ರಣವನ್ನು ಯಾಕೋ ಬೇಡ ಅನ್ನಲಾಗಲಿಲ್ಲ. ಪತ್ರಿಕೆಯವರು ನಾನು ಕಳುಹಿಸಿದ್ದ ಕತೆಯನ್ನು ಎಲ್ಲೆಲ್ಲೋ ಎಡಿಟ್ ಮಾಡಿ ಪ್ರಕಟಿಸಿದ್ದರು. ಇವರಿಗೆ ಕಳುಹಿಸುವುದಕ್ಕಿಂತ ಸುಮ್ಮನೆ ಬ್ಲಾಗಿನಲ್ಲಿ ಹಾಕಿಕೊಳ್ಳುವುದು ಬೆಸ್ಟು ಅಂತ ಬೈದುಕೊಳ್ಳುತ್ತ ಪೇಪರನ್ನು ಟೀಪಾಯ್ ಮೇಲೆ ಎಸೆದೆ. ‘ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟ್, ಕನ್ನಿಂಗ್‌ಹ್ಯಾಂ ರೋಡ್’ ಅಂತ ಓಂಪಿಗೆ ಎಸ್ಸೆಮ್ಮೆಸ್ ಮಾಡಿದೆ.
* * *
ರೆಸ್ಟುರೆಂಟಿನ ರೂಫ್ ಗಾರ್ಡನ್ನಿನ ಅಂಗಣದಲ್ಲಿ ಗಿಜಿಗಿಜಿಯಿತ್ತು. ಪುಟ್ಟ ಪುಟ್ಟ ದ್ವೀಪಗಳಂತೆ ಅಲ್ಲಲ್ಲಿರಿಸಿದ ರೌಂಡ್ ಟೇಬಲ್ಲುಗಳ ಸುತ್ತ ಕೂತು ಅವರವರದೇ ಮಾತು-ನಗೆ-ತಿಂಡಿ-ತೀರ್ಥಗಳಲ್ಲಿ ಮುಳುಗಿದ್ದ ಕುಟುಂಬಗಳು, ಜೋಡಿಗಳು, ಗೆಳೆಯರ ಗುಂಪುಗಳು. ಹೊರಗೆ ಮಧ್ಯಾಹ್ನದ ಬಿಸಿಲಿದ್ದರೂ ಒಳಗೆ ಕತ್ತಲೆ ಸೃಷ್ಟಿಸಿ ದೀಪಗಳನ್ನು ಉರಿಸಿದ್ದರು. ಮೂಲೆಯಲ್ಲೆಲ್ಲೋ ಕೂತಿದ್ದ ಓಂಪಿ ಎದ್ದು ನಿಂತು ‘ಇಲ್ಲಿದ್ದೀನಿ’ ಅಂತ ಕೈ ಮಾಡಿದ. ಅತ್ತಲೇ ಹೋದೆ.
“ಸಾರಿ, ನಾನು ಬಂದು ಆಗಲೇ ಅರ್ಧ ಗಂಟೆ ಆಯ್ತು. ಸುಮ್ನೆ ಕೂರೋಕೆ ಆಗದೇ ಮುಂದುವರೆಸಿಬಿಟ್ಟೆ!” ಅಂತ, ಟೇಬಲ್ಲಿನ ತುದಿಯಲ್ಲಿದ್ದ ಎರಡು ಖಾಲಿ ಬಿಯರ್ ಬಾಟಲಿಗಳನ್ನು ತೋರಿಸಿದ.
“ಹೇ, ಸರಿಯಾಯ್ತು ಬಿಡು. ಮನೆ ಕ್ಲೀನ್ ಮಾಡ್ತಾ ಕೂತೆ, ಹೊರಡೋದು ಲೇಟ್ ಆಯ್ತು” ಎಂದು ಕೈ ಕುಲುಕಿದೆ.
“ಸೋ? ಬಿಯರ್?” ಕೇಳಿದ.
ಮಧ್ಯಾಹ್ನದ ಹೊತ್ತಿಗೆಲ್ಲಾ ಬಿಯರ್ ಕುಡಿಯುವುದು ನನಗೆ ಸಹ್ಯವೇ ಅಲ್ಲದಿದ್ದರೂ, ಕುಡಿಯದಿದ್ದರೆ ಓಂಪಿಯೊಂದಿಗೆ ಸರಿಯಾಗಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲವೇನೋ ಎನ್ನಿಸಿ, “ಪಿಂಟ್ ಸಾಕು” ಎಂದೆ.
“ಎಂಥಾ ಪಿಂಟ್? ಒಂದು ಬಿಯರ್ ಕುಡಿ, ಏನೂ ಆಗಲ್ಲ” ಅಂತಂದು, ಅವನೇ ವೆಯ್ಟರ್‌ನನ್ನು ಕರೆದು ಆರ್ಡರ್ ಮಾಡಿದ. ಮೌನ ಕವಿಯಿತು.
“ಸೂಪರ್. ಇವತ್ತಿನ ಕತೆ ಚೆನ್ನಾಗಿತ್ತು” ಅವನೇ ಮಾತಿಗೆ ಶುರು ಮಾಡಿದ. “ನೀನು ಬರೀತಿರೋದು ನಂಗೆ ತುಂಬಾ ಖುಶಿ ನೋಡು.. ಆವಾಗ ನಾನು-ನೀನು ಒಟ್ಟಿಗೆ ಕೆಲಸ ಮಾಡ್ತಿರಬೇಕಾದ್ರೆ ನೀನು ಬರೀತಿರ್ಲಿಲ್ಲ ಅಲ್ವಾ? ತುಂಬಾ ಓದ್ತಿದ್ದೆ, ಅದು ನಂಗೊತ್ತು. ಮಾತಾಡ್ಬೇಕಾದ್ರೂ ಒಂಥರಾ ಸಾಹಿತಿ ಥರ ಮಾತಾಡ್ತಿದ್ದೆ. ಕೆಲವರು ವೇದಿಕೆಯಲ್ಲಿ ಬರೆದುಕೊಂಡು ಬಂದ ಭಾಷಣಾನಾ ಓದ್ತಾರಲ್ಲ, ಹಹ್ಹ, ಹಾಗೆ. ಆದ್ರೂ ಮಜಾ ಇತ್ತು ಆ ದಿನಗಳು.. ಕೈಯಲ್ಲಿ ಕಾಸಿಲ್ದಿದ್ರೂ ತುಂಬಾ ಖುಶಿಯಾಗಿ ಇರ್ತಿದ್ವಿ, ಅಲ್ವಾ?”
ವೇಯ್ಟರ್ ಬಂದು ನನ್ನ ಮುಂದೊಂದು ಗ್ಲಾಸ್ ಇಟ್ಟು ಬಿಯರ್ ಬಗ್ಗಿಸಿ ಹೋದ. ತಣ್ಣಗಿತ್ತು. ಓಂಪಿಯ ಬಿಯರು ಆಗಲೇ ಕೆಲಸ ಮಾಡುತ್ತಿತ್ತು, ಅವನು ಮುಂದುವರೆಸಿದ: “ಬದುಕು ಹೇಗೆಲ್ಲ ಬದಲಾಗಿಹೋಗತ್ತೆ ಅಂತ ಯೋಚಿಸಿದರೆ ಆಶ್ಚರ್ಯ ಆಗುತ್ತೆ ಅಲ್ವಾ ಅಂಶು..? ನಾನು ನಿನ್ ಜೊತೆ ಕೆಲಸ ಮಾಡ್ತಿರಬೇಕಾದ್ರೆ ಲೋಕಲ್ ಬಾರಿಗೆ ಹೋಗಲಿಕ್ಕೆ ದುಡ್ಡು ಇರ್ತಿರಲಿಲ್ಲ. ಸಾಲ ಮಾಡ್ತಿದ್ದೆ ನಿನ್ನ ಹತ್ರ. ಈಗ ನೋಡು, ದುಬಾರಿ ರೆಸ್ಟುರೆಂಟಿನಲ್ಲಿ ಕೂತಿದೀನಿ. ಕಾರು ಇದೆ, ಸ್ವಂತ ಫ್ಲಾಟ್ ಖರೀದಿ ಮಾಡಿದೀನಿ, ಇನ್ನು ಎರಡು ವರ್ಷ: ನನ್ನದೇ ಕಂಪನಿ ಶುರು ಮಾಡ್ತೀನಿ..” ಓಂಪಿ ಹೇಳುತ್ತ ಹೋದ.
ಯೋಚಿಸುತ್ತಿದ್ದೆ: ತಪ್ಪುತಪ್ಪು ಇಂಗ್ಲೀಷ್ ಬಳಸುತ್ತಿದ್ದ, ಬಾಸ್ ಬಳಿ ಮಾತಾಡಲು ಹೆದರುತ್ತಿದ್ದ, ರೆಸ್ಯೂಮ್ ಮಾಡಿಕೊಡು ಅಂತ ನನ್ನ ಬಳಿ ದುಂಬಾಲು ಬೀಳುತ್ತಿದ್ದ, ತನ್ನ ಕಾಲೇಜ್ ದಿನಗಳ ಹುಡುಗಿಯನ್ನು ನೆನೆದು ಭಾವುಕನಾಗುತ್ತಿದ್ದ ಓಂಪಿ ಇವನೇನಾ ಅಂತ. ಹಣ ಕೊಡುವ ಆತ್ಮವಿಶ್ವಾಸ ಎಂದರೆ ಇದೇ ಇರಬೇಕು. ತನ್ನ ಅಪ್ಪ-ಅಮ್ಮನ ಬಗ್ಗೆ ನನ್ನೊಡನೆ ಹಂಚಿಕೊಂಡಿದ್ದ ಓಂಪಿ. ತನಗೊಬ್ಬ ತಂಗಿಯಿರಬೇಕಿತ್ತು ಅಂತ ಆಶೆ ಪಟ್ಟಿದ್ದ ಓಂಪಿ. ಪತ್ರಿಕೆಯೊಂದರಲ್ಲಿ ಬರುತ್ತಿದ್ದ ಪ್ರೇಮಪತ್ರದ ಅಂಕಣವನ್ನೆಲ್ಲ ಕತ್ತರಿಸಿ ಇಟ್ಟುಕೊಂಡಿದ್ದ ಓಂಪಿ. ತನ್ನ ರೂಂಮೇಟ್ಸ್‌ಗೆ ಹೇಗೆ ಅಡುಗೆ ಮಾಡಲಿಕ್ಕೇ ಬರುವುದಿಲ್ಲ ಅಂತ ಹೇಳಿಕೊಂಡು ನಗುತ್ತಿದ್ದ ಓಂಪಿ. ತಾನು ದುಡಿದ ದುಡ್ಡಲ್ಲಿ ಕೊಂಡ ಮೊಬೈಲನ್ನು ಅತ್ಯಂತ ಅಕ್ಕರಾಸ್ಥೆಯಿಂದ ಸವರಿದ್ದ ಓಂಪಿ. ಹಾಗಾದರೆ, ಶ್ರೀಮಂತನಾದ ನಿಟ್ಟಿನಲ್ಲಿ ಆ ದಿನಗಳ ಆ ಭಾವುಕತೆಯನ್ನೆಲ್ಲ ಕಳಕೊಂಡುಬಿಟ್ಟಿದ್ದಾನಾ ಇವನು ಅಂತ ನಾನು ಆಲೋಚಿಸುತ್ತಿರುವಾಗಲೇ ಓಂಪಿ ನನ್ನಾಲೋಚನೆಯನ್ನು ತುಂಡು ಮಾಡಿದ:
“ಆದರೆ ನಾನು ಮೊದಲಿನಷ್ಟು ಖುಶಿಯಾಗಿಲ್ಲ ಅನ್ನಿಸ್ತಿದೆ ಅಂಶು.. ಮೊದಲಾದರೆ ಸ್ಯಾಲರಿ ಯಾವಾಗ ಬರುತ್ತೆ ಅಂತ ಕಾಯಬೇಕಿತ್ತು. ಬರ್ತಿದ್ದ ಸ್ವಲ್ಪ ದುಡ್ಡಲ್ಲಿ ಲೈಫನ್ನ ಅಡ್ಜಸ್ಟ್ ಮಾಡೋದ್ರಲ್ಲಿ ಏನೋ ಥ್ರಿಲ್ ಇರ್ತಿತ್ತು. ಅವರಿವರ ಹತ್ರ ಸಾಲ ಮಾಡ್ಕೊಂಡು, ಅವರು ವಾಪಸ್ ಕೇಳ್ದಾಗ ‘ಕೊಡ್ತೀನಿ ಕೊಡ್ತೀನಿ’ ಅಂತ ಮುಂದಿನ ತಿಂಗಳವರೆಗೆ ಸಾಗಹಾಕೋದರಲ್ಲಿ ಮಜಾ ಇರ್ತಿತ್ತು. ರೂಂಮೇಟ್ಸ್ ಜೊತೆ ಜಗಳ ಮಾಡೋದರಲ್ಲಿ, ಭಿಕಾರಿಗಳ ಥರ ಕುಡಿದು ಬೀಳೋದರಲ್ಲಿ ವಿಲಕ್ಷಣ ಸುಖ ಇತ್ತು. ನೆನಪಿದೆಯಲ್ಲ ನಿಂಗೆ, ಬಿಎಂಟಿಸಿ ಬಸ್ಸಿಗೆ ಬಂದ್ರೆ ದುಡ್ಡು ಖರ್ಚಾಗುತ್ತೆ ಅಂತ, ವೈಯಾಲಿಕಾವಲ್‌ನಿಂದ ಆಫೀಸಿಗೆ ಮೂರು ಕಿಲೋಮೀಟರ್ ನಡೆದೇ ಬರ್ತಿದ್ದೆ. ಬೆಳಗ್ಗೆ ಬೇಗ ಹೊರಟು, ಲೇಟಾಯ್ತು ಅಂತ ಸರಸರ ಹೆಜ್ಜೆ ಹಾಕಿ ಬರೋದರಲ್ಲಿ ಎಂಥಾ ಟೆನ್ಷನ್ ಇರ್ತಿತ್ತು.. ಬಾಸ್ ಬೈದರೆ ಅನ್ನೋ ಹೆದರಿಕೆ..
“ಆದರೆ ಈಗ ನೋಡು, ದುಡ್ಡು ನಂಗೊಂದು ತಲೆಬಿಸಿಯ ಸಂಗತಿಯೇ ಅಲ್ಲ. ಸಂಬಳ ಯಾವತ್ತೋ ಅಕೌಂಟಿಗೆ ಕ್ರೆಡಿಟ್ ಆಗಿರುತ್ತೆ, ನನಗೆ ಅತ್ತಕಡೆ ಗಮನಿಸುವ ಗೋಜೂ ಇಲ್ಲ. ಜೇಬಲ್ಲಿ ಹಣ ಇಲ್ಲ ಅಂದಾಗ ಎಟಿಎಂಗೆ ಹೋಗಿ ಡ್ರಾ ಮಾಡ್ಕೋತೀನಿ. ಶಾಪಿಂಗ್ ಮಾಡ್ಬೇಕು ಅಂದ್ರೆ ಕಾರ್ಡುಗಳಿವೆ. ಅಷ್ಟು ದೊಡ್ಡ ಫ್ಲಾಟಲ್ಲಿ ನಾನು ಒಬ್ಬನೇ ಇರ್ತೀನಿ. ವೀಕೆಂಡುಗಳಲ್ಲಿ ಕಲೀಗುಗಳು, ಬ್ಯುಸಿನೆಸ್ ಪಾರ್ಟ್‌ನರ್‌ಗಳ ಜೊತೆ ಐಶಾರಾಮಿ ಕ್ಲಬ್ಬುಗಳಲ್ಲಿ ಪಾರ್ಟಿ. ಕುಡಿದದ್ದು ಜಾಸ್ತಿಯಾದರೆ ಡ್ರೈವರ್ ಇದಾನೆ, ಕಾರು ಮನೆ ಮುಟ್ಟಿಸುತ್ತೆ. ಒಂಥರಾ ವಿಚಿತ್ರ ನಿರಾಳತೆ.. ತಾಳು, ನಿಂಗೆ ಇನ್ನೊಂದು ಬಿಯರ್ ಹೇಳ್ತೀನಿ” ಓಂಪಿ ಮಾತಾಡಲಿಕ್ಕೇ ಬಂದವನಂತಿದ್ದ.
ನನಗೆ ಇಲ್ಲಿಗೆ ಬರುವ ಮುನ್ನ, ಓಂಪಿಯನ್ನು ಬಾಹ್ಯವಾಗಿ ಎದುರಿಸುವ ಮುನ್ನ ಕೊಂಚ ಹಿಂಜರಿಕೆಯಿತ್ತು. ಅದೇ ಆಫೀಸು, ಅದೇ ಮನೆ, ಓಂಪಿಗೆ ಯಾವ ರೀತಿಯಲ್ಲೂ ಸರಿಸಮವಲ್ಲದ ದುಡಿಮೆ, ಒಂದೇ ತರಹದ ಜೀವನಕ್ರಮ, ಅವವೇ ಕನಸುಗಳು, ಹುಚ್ಚುಚ್ಚು ಧ್ಯೇಯಗಳು, ನೂರಾರು ಗೊಂದಲಗಳನ್ನಿಟ್ಟುಕೊಂಡು ಬಾಳ್ವೆ ಮಾಡುತ್ತಿರುವ ನಾನು, ಈಗ ಪೂರ್ತಿ ಬದಲಾಗಿರಬಹುದಾದ ಓಂಪಿಯನ್ನು ಹೇಗೆ ಸ್ವೀಕರಿಸಲಿ ಎಂಬ ಅಳುಕಿತ್ತು. ಭವಿಷ್ಯದ ಬಗ್ಗೆ ಸ್ವಲ್ಪವೂ ಮುಂದಾಲೋಚನೆ ಇಲ್ಲದೆ, ನಾಳೆ ಬೆಳಗಾದರೆ ಏನು ಎಂಬ ಬಗ್ಗೆ ಕಲ್ಪನೆ ಸಹ ಇಲ್ಲದೆ, ಬದುಕು ಹೇಗೆ ಬರುತ್ತದೋ ಹಾಗೆ ಎದುರಿಸುವ ತೀರ್ಮಾನದೊಂದಿಗೆ ದಿನಗಳನ್ನು ಕಳೆಯುತ್ತಿರುವ ನಾನು, ಈಗ ಸುಭದ್ರ ನೆಲೆಯ ಮೇಲೆ ನಿಂತಿರಬಹುದಾದ, ಸ್ಪಷ್ಟ ನಿರ್ಧಾರಗಳ, ಪೂರ್ತಿ ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡಿರಬಹುದಾದ ಓಂಪ್ರಕಾಶನೊಂದಿಗೆ ಏನು ಮಾತನಾಡಿಯೇನು ಎಂಬ ಆತಂಕವಿತ್ತು. ‘ಅರೆ ನೀನೇನೋ, ಇನ್ನೂ ಹಾಗೇ ಇದೀಯ?’ ಅಂತ ಅವನು ಕೇಳಿಬಿಟ್ಟರೆ ಕೊಡಲಿಕ್ಕೆ ನನ್ನ ಬಳಿ ಗಟ್ಟಿಯಾದ ಉತ್ತರ ಸಹ ಇರಲಿಲ್ಲ. ಆದರೆ ಓಂಪಿ, ಆರ್ಥಿಕ ಸ್ವಾತಂತ್ರ್ಯ ಗಳಿಸಿರುವುದೊಂದನ್ನು ಹೊರತುಪಡಿಸಿದರೆ, ನನ್ನ ತರಹುದೇ ಗೊಂದಲಗಳಿಂದ ಬಳಲುತ್ತಿರುವ ಮನುಷ್ಯನಂತೆ ಕಾಣತೊಡಗಿದ. ದೆಸೆಯಿಲ್ಲದ, ಅಂತ್ಯ ಗೋಚರಿಸದ ಸಾಗರದಲ್ಲಿ ದಿಕ್ಕುತಪ್ಪಿದ ಒಂಟಿದೋಣಿಯ ಅಂಬಿಗರೇ ಎಲ್ಲರೂ? ಬಿಯರ್ ಕಹಿ ಕಳೆದುಕೊಳ್ಳತೊಡಗಿತು.
“ಅಮೃತಾಗೆ ಮದುವೆ ಆಯ್ತು” ಥಟ್ಟನೆ ಹೇಳಿದ ಓಂಪಿ, “ಯು ಸೀ, ಈಗ ಕತೆ ಬರೀಬಹುದು ನೀನು ನನ್ನ ಲೈಫ್ ಬಗ್ಗೆ, ಹಹಹಾ, ಕತೆ!” ಬಿಯರಿಗೆ ಕಹಿ ಮರುಕಳಿಸಿತು. ಜೊತೆಗೆ ಕೆಲಸ ಮಾಡಬೇಕಾದರೆ ದಿನಕ್ಕೊಮ್ಮೆಯಾದರೂ ಪ್ರಸ್ತಾಪವಾಗುತ್ತಿದ್ದ ವಿಷಯ. ಕಾಲೇಜು ದಿನಗಳಿಗೆ ಅವನನ್ನು ಸವಿಸವಿ ನೆನಪಿನ ಮೆರವಣಿಗೆಯಲ್ಲಿ ಒಯ್ಯುತ್ತಿದ್ದ ವಿಷಯ. ಆಫೀಸಿನ ಬಿಜಿಯ ನಡುವೆ, ಟೀಯೊಂದಿಗಿನ ಸಿಹಿಸಿಹಿ ಬಿಸ್ಕೇಟಾಗುತ್ತಿದ್ದ ವಿಷಯ. ಗಿಜಿಗಿಜಿಗುಡುವ ಧಗೆಯ ಸಂತೆಯಲ್ಲಿ ಇದ್ದಕ್ಕಿದ್ದಂತೆ ಮಧುರ ಮಳೆಯೊಂದು ಸುರಿಯತೊಡಗಿ ಎಲ್ಲರನ್ನೂ ಇದ್ದಲ್ಲೆ ಮೋಹಕರನ್ನಾಗಿ ಮಾಡುವಂತೆ, ಓಂಪಿ ತನ್ನ ಹುಡುಗಿಯ ನೆನಪಾದೊಡನೆ ಈಗಷ್ಟೆ ಅರಳಿದ ಹೂವಾಗುತ್ತಿದ್ದ. ನನ್ನ ಬಳಿ ಕತೆ ಹೇಳುತ್ತಿದ್ದ. ಹೇಗಾದ್ರೂ ಮಾಡಿ ಫೋನ್ ನಂಬರ್ ಪತ್ತೆ ಮಾಡಿಕೊಡು ಅಂತ ದುಂಬಾಲು ಬೀಳುತ್ತಿದ್ದ.
ಅಮೃತಾ ಇವನ ಕಾಲೇಜಿನ ಕ್ಲಾಸ್‌ಮೇಟು. ಥೇಟು ಸಿನಿಮಾ ಶೈಲಿಯಲ್ಲಿತ್ತು ಪ್ರೇಮದ ಕತೆ. ಈ ಪ್ರೀತಿಯಲ್ಲಿ ನೋಡಿದ ತಕ್ಷಣ ಇಷ್ಟವಾಗಿಬಿಡುವುದು ಅಂತೊಂದು ಇರುತ್ತದಲ್ಲ, ಹಾಗೇ ಆಗಿತ್ತು ಓಂಪಿಗೂ. ತಾನು ಇಷ್ಟಪಟ್ಟಿದ್ದ, ಮನಸಲ್ಲೇ ಆರಾಧಿಸಿದ್ದ ಹುಡುಗಿಯನ್ನೇ ಗೆಳೆಯರು ಎತ್ತಿಕಟ್ಟಿದ್ದರು ಕಾಲೇಜಿನ ಗೆಟ್-ಟುಗೆದರ್ ಸಮಾರಂಭದಂದು. ಆವತ್ತು ಕಾಲೇಜಿನಲ್ಲಿ ಬಣ್ಣಬಣ್ಣದ ಸೀರೆಗಳ ಸರಭರ. ಎಷ್ಟೇ ಬೇಡವೆಂದರೂ ಕಣ್ಸೆಳೆವ ತರಳೆಗಳ ನಡುವೆ ಈ ಹಂಸಬಿಳುಪಿನ ಸೀರೆಯ ಹುಡುಗಿ ಸ್ಟೇಜಿಗೆ ಹೋದಳು. ಗಾನದೇವತೆ ಒಲಿದು ಬಂದಂತೆ, ದೂರದಲ್ಲಿ ಕೂತಿದ್ದ ಓಂಪಿ ಪರವಶನಾಗುವಂತೆ ಹಾಡಿದಳು:
ಕೋಟಿಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||
ಅಚಾನಕ್ ಎಂಬಂತೆ, ಪಕ್ಕದಲ್ಲಿದ್ದ ಹುಡುಗ ಇವನ ಕಿವಿಯಲ್ಲಿ ಉಸುರಿಬಿಟ್ಟ: “ಹೇ ನೋಡು, ನಾ ಹೇಳ್ತಿರ್ತಿದ್ದೆನಲ್ಲ, ನಿನ್ ಹಾಗೇ ಇದಾಳೆ ಪಕ್ಕದ ಡಿಪಾರ್ಟ್‌ಮೆಂಟಿನ ಹುಡುಗಿ ಒಬ್ಬಳು ಅಂತ, ಇವಳೇ ಅದು. ಫೇಸ್‌ಕಟ್ಟು, ನಡೆಯೋ ಸ್ಟೈಲು, ಮಾತಾಡೋ ರೀತಿ -ಎಲ್ಲಾ, ಥೇಟ್ ನಿನ್ ಥರಾನೇ. ನಿಂಗೆ ಹಾಗನ್ಸಲ್ವಾ?” ಹೌಹಾರಿಬಿಟ್ಟ ಓಂಪಿ. ಇಷ್ಟು ದಿನ ಯಾವ ಹುಡುಗಿಯನ್ನು ಮನಸಲ್ಲೇ ಅರಸಿಯಂತೆ ಭಾವಿಸಿ ಅರ್ಚಿಸಿದ್ದೆನೋ ಅವಳನ್ನೇ ಗೆಳೆಯರು ಸೇರಿ ತನಗೆ ಎತ್ತಿ ಕಟ್ಟಿದ್ದು ಕಂಡು ಓಂಪಿ ರೋಮಾಂಚಿತನಾದ. ಆಗ ಹೊಳೆದ ಅವನ ಕಣ್ಣ ಮಿಂಚೇ ಸಾಕಾಯಿತು ಕಾಲೇಜೆಲ್ಲ ಹಬ್ಬಲು: ಓಂಪ್ರಕಾಶ್-ಅಮೃತಾ ಪೂಜಾರ್ ಸೂಪರ್ ಜೋಡಿ. ಸ್ವಲ್ಪೇ ದಿನಗಳಲ್ಲಿ ಅದು ಅವಳಿಗೂ ಗೊತ್ತಾಯಿತು. ಮತ್ತಿನ್ನೇನು- ಕಣ್ಣ ಇಷಾರೆ, ಮಾತು, ಸಂಚಲನ, ಸುತ್ತಾಟ, ಪಬ್ಬಾಸ್ ಪಾರ್ಲರಿನಲ್ಲಿ ಐಸ್‌ಕ್ರೀಮು. ಮಂಗಳೂರಿನ ಪ್ರತಿ ಬೀಚಿನ ಮರಳ ಮೇಲೆ ಇವರು ಪರಸ್ಪರರ ಹೆಸರು ಬರೆದರು. ತೆರೆ ಬಂದು ಅಳಿಸಿ ಹೋದಂತೆ ಮತ್ತೆ ಮತ್ತೆ ಬರೆದರು.
“ಈಗಲೂ ನೆನಪಾಗ್ತಾಳೆ ಅಂಶು.. ಹಾಳಾದವಳು, ಯಾರನ್ನೋ ಮದುವೆ ಮಾಡ್ಕೊಂಡು ಹಾಯಾಗಿದಾಳೆ. ಐಟಿ - ಐಟಿ ಹುಚ್ಚಲ್ಲ ನಮ್ಮ ಜನಕ್ಕೆ- ಯಾರೋ ಸಾಫ್ಟ್‌ವೇರ್ ಇಂಜಿನಿಯರನ್ನೇ ಮದುವೆ ಆದಳು. ಆಗಷ್ಟೆ ಎಲ್‌ಎಲ್‌ಬಿ ಮುಗಿಸಿ ಎರಡು ಸಾವಿರ ರೂಪಾಯಿ ಸಂಬಳಕ್ಕೆ ಯಾರೋ ಸೀನಿಯರ್ ಕೆಳಗೆ ಚಾಕರಿ ಮಾಡ್ತಿರೋ ಬಡ ಲಾಯರ್‌ನ ಯಾರು ಒಪ್ತಾರೆ? ನೋ ನೋ, ಐ ಹ್ಯಾವ್ ನೋ ಕಂಪ್ಲೇಂಟ್ಸ್, ಸರಿಯಿತ್ತು ಅವಳು ಮಾಡಿದ್ದು ಆಗಿನ ಸಮಯಕ್ಕೆ. ಅಪ್ಪನ ದಬಾಯಿಸುವಿಕೆಯ ನಡುವೆ, ಅಳೋ ಅಮ್ಮನ ಮುಂದೆ ಯಾವ ಹುಡುಗಿಯೂ ಕಾನ್ಫಿಡೆನ್ಸ್ ಸಹ ಇಲ್ಲದ ಹುಡುಗನನ್ನ ನೆಚ್ಚಿಕೊಂಡು ಕನಸು ಕಾಣ್ತಾ ಕೂರಲ್ಲ. ಶಿ ವಾಸ್ ರೈಟ್. ಸರಿಯಿತ್ತು ಅವಳ ನಿರ್ಧಾರ. ಆದರೆ ಈಗ ಸಮಸ್ಯೆಯೇನಿದ್ರೂ ನಂದು ಅಷ್ಟೆ: ಇಷ್ಟೆಲ್ಲ ದುಡಕೊಂಡು ನಾನೇನು ಮಾಡ್ಲಿ ಅನ್ನೋದು” ಓಂಪಿಗೆ ನಾನು ಕತೆ ಬರೆಯಬೇಕಿತ್ತು, ಸಿಪ್ಪಿಗೊಂದು ಬಿಕ್ಕಿನ ಕತೆ ಹೇಳಿದ. ನನಗೆ ಹೇಳಬೇಕೆನಿಸುತ್ತಿತ್ತು: ‘ಇಲ್ಲ ಅಂಶೂ.. ಇವಿಷ್ಟನ್ನೇ ಇಟ್ಟುಕೊಂಡು ನಂಗೆ ಕತೆ ಬರೀಲಿಕ್ಕೆ ಆಗಲ್ಲ.. ಜಗತ್ತಿನ ತೊಂಬತ್ತು ಪ್ರತಿಶತ ಪ್ರೇಮವೈಫಲ್ಯದ ಕತೆಗಳೂ ಹೀಗೇ ಇರ್ತವೆ. ಅವನ್ನಾದರೂ ಎಷ್ಟು ಅಂತ ಓದ್ತಾರೆ ಜನ? ಪ್ರೀತಿಯ ಕತೆಗಳನ್ನ ನೋಡಿದರೆ ಸಾಕು, ವಾಕರಿಕೆ ಬರುತ್ತೆ -ಅಷ್ಟೊಂದು ಕತೆಗಳಾಗಿದಾವೆ ಆಗಲೇ. ಐ ಕಾಂಟ್ ರೈಟ್..’ ಊಹುಂ, ಆದರೆ ಓಂಪಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಸಧ್ಯ, ಅವನೇ ವಿಷಯ ಬದಲಿಸಿದ:
“ಹೋಗಲಿ, ಸಾರಿ, ನಿನ್ನ ಕತೆ ಹೇಳು. ಬಾಸ್ ಸರಿಯಾಗಿ ಸಂಬಳ ಕೊಡ್ತಿದಾರಾ? ಕ್ಲೈಂಟೇಲ್ ಹೇಗಿದೆ? ಹೇ, ಯಾವುದಾದರೂ ಹುಡುಗೀನ ಲವ್-ಗಿವ್ ಮಾಡಿದ್ಯೇನೋ? ನಿನ್ನ ಆರ್ಕುಟ್ ಫ್ರೆಂಡ್‌ಲಿಸ್ಟ್ ನೋಡಿದೆ.. ಬರೀ ಹುಡುಗೀರೇ ತುಂಬಿಕೊಂಡಿದಾರೆ. ಬಿಟ್ಟಿರಲ್ಲ ನೀನು, ಯಾರನ್ನಾದ್ರೂ ಸೆಟ್ ಮಾಡ್ಕೊಂಡಿರ್ತೀಯಾ. ಈಗಂತೂ ಸಾಹಿತಿ ಬೇರೆ, ಎರಡು ಕವಿತೆಯ ಸಾಲು ಹೇಳಿದ್ರೆ ಸಾಕು, ಹುಡುಗೀರು ಬಿದ್ದುಹೋಗ್ತಾರೆ. ಟೆಲ್ ಮಿ, ಏನು ವಿಷಯ?”
ಸಡನ್ನಾಗಿ ನನಗೆ ಸಿಕ್ಕ ಈ ಮಾತನಾಡುವ ಅವಕಾಶದಿಂದಾಗಿ ಅರೆಕ್ಷಣ ತಬ್ಬಿಬ್ಬಾದೆ. ಹೇಳಬೇಕಿನಿಸಿತು, ಹೇಳಿಬಿಟ್ಟೆ: “ನಿಜ ಹೇಳ್ತೀನಿ ಓಂಪಿ, ನಂಗೆ ಪ್ರೀತಿ-ಪ್ರೇಮಗಳಲ್ಲಿ ಒಂಥರಾ ನಂಬಿಕೆಯೇ ಹೊರಟುಹೋಗಿದೆ. ನನ್ನ ಫ್ರೆಂಡ್ಸ್ ಸರ್ಕಲ್ಲಿನಲ್ಲೇ ಅದೆಷ್ಟು ಲವ್ ಫೇಲ್ಯೂರ್ ಕೇಸುಗಳನ್ನ ನೋಡಿಬಿಟ್ಟೆ ಅಂದ್ರೆ, ಬಹುಶಃ ನಾನಿನ್ನು ಬದುಕಿನಲ್ಲಿ ಯಾರನ್ನಾದರೂ ಪ್ರಾಮಾಣಿಕವಾಗಿ-ಮನಸಾರೆ ಪ್ರೀತಿಸಿಯೇನಾ ಅಂತ ಅನುಮಾನ ಶುರುವಾಗಿಬಿಟ್ಟಿದೆ! ಈ ‘ಲವ್ ಆಗೋದು’, ‘ಫಾಲಿಂಗ್ ಇನ್ ಲವ್’ ಅನ್ನೋದೆಲ್ಲ ಮೀನಿಂಗ್‌ಲೆಸ್. ಆ ಥರ ಎಲ್ಲ ಏನೂ ಇಲ್ಲ. ಈಗಿನ ಕಾಲದ ಯಾವ ಹುಡುಗಿಯೂ ಹುಡುಗನ ರೂಪ, ಹಣ, ಕೆಲಸ, ಬ್ಯಾಕ್‌ಗ್ರೌಂಡು, ಆಸಕ್ತಿಗಳನ್ನ ಸ್ಟಡೀ ಮಾಡದೆ ಪ್ರೀತಿಸಲಿಕ್ಕೆ ಶುರು ಮಾಡಲ್ಲ. ಹುಡುಗನೂ ಅಷ್ಟೇ, ಇವಳು ನನಗೆ ತಕ್ಕ ಜೋಡಿಯಾ, ಮನೆಗೆ ತಕ್ಕ ಸೊಸೆಯಾ, ನನ್ನ ಅಭಿರುಚಿಗಳಿಗೆ ಸರಿಸಾಟಿಯಾ ಅಂತೆಲ್ಲ ಯೋಚಿಸದೆ ಮುಂದುವರೆಯುವುದಿಲ್ಲ. ಮತ್ತೆ ಏನು ಗೊತ್ತಾ? ನಮಗೆಲ್ಲ ‘ಅಡ್ಜಸ್ಟ್‌ಮೆಂಟ್ಸ್’ ಅನ್ನೋ ಕಾನ್ಸೆಪ್ಟೇ ಇಲ್ಲವಾಗಿದೆ. ಅದು ಏನೇ ಇರ್ಲಿ, ಸ್ವಲ್ಪ ಸರಿಯಾಗ್ಲಿಲ್ಲ ಅಂದ್ರೂ ಬಿಸಾಕಿಬಿಡ್ತೀವಿ. ಪ್ರೀತಿ-ಬಾಂಧವ್ಯಗಳಿಗೂ ಅನ್ವಯಿಸುತ್ತೆ ಅದು. ಹುಡುಗ - ಹುಡುಗಿ ಇಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಅನ್ನೋದು ಸಿಕ್ಕಿರುವಾಗ, ಪರಸ್ಪರ ಅವಲಂಬನೆಯ ಅವಶ್ಯಕತೆ ಇಲ್ಲದಿರುವಾಗ, ಇವನಿಲ್ಲದಿದ್ದರೆ ಮತ್ತೊಬ್ಬ ಅನ್ನೋ ಜಾಯಮಾನ ಬಂದುಬಿಟ್ಟಿದೆ ಅನ್ನಿಸುತ್ತೆ ನಂಗೆ..”
“ಯೆಸ್, ಯೂ ಆರ್ ಹಂಡ್ರೆಡ್ ಪರ್ಸೆಂಟ್ ರೈಟ್. ದಿಸ್ ಥಾಟ್ ಆಫ್ ಯುವರ್ಸ್ ಡಿಮಾಂಡ್ಸ್ ಒನ್ ಮೋರ್ ಚಿಯರ್ಸ್!” ಅಂತಂದು ನನ್ನ ಗ್ಲಾಸಿಗೆ ತನ್ನ ಗ್ಲಾಸು ತಂದು ಕುಟ್ಟಿದ ಓಂಪಿ. ನಾನೂ “ಚಿಯರ್ಸ್” ಎಂದೆ ನಗುತ್ತ.
ಎರಡು ನಿಮಿಷ ಇಬ್ಬರೂ ಮಾತಾಡಲಿಲ್ಲ. ನಮ್ಮ ಹಿಂದಿನ ಟೇಬಲ್ಲಿನವರು ಊಟ ಮುಗಿಸಿ ಹೊರಟಿದ್ದರು. ವೇಯ್ಟರ್ ಬಂದು ನಮಗೆ ಫುಡ್‌ಗೆ ಆರ್ಡರ್ ತೆಗೆದುಕೊಂಡು ಹೋದ. ಓಂಪಿ ಮುಂದುವರೆಸಿದ: “ಆದರೆ, ಇಷ್ಟೆಲ್ಲ ಆಧುನಿಕವಾಗಿರೋ - ಹಣವೊಂದಿದ್ದರೆ ಏನು ಬಯಸ್ತೀವೋ ಅದನ್ನು ಪಡೆಯುವ ವ್ಯವಸ್ಥೆಯಿರುವ ಈ ದಿನಗಳಲ್ಲಿ ಸಹ ಮನುಷ್ಯ ಅಂತರಾಳದಲ್ಲಿ ತುಂಬಾ ಡೆಲಿಕೇಟ್ ಆಗಿದಾನೆ ಅಂತ ನಂಗೆ ಅನ್ಸುತ್ತೆ. ನಾನು ನಿಂಗೆ ಮತ್ತೊಂದು ಘಟನೆ ಹೇಳ್ತೀನಿ, ತುಂಬಾ ಪರ್ಸನಲ್ ಆದದ್ದು. ಓಂಪಿ ಪೂರ್ತಿ ಹಾಳಾಗಿಹೋಗಿದಾನೆ ಅಂತ ಅಂದ್ಕೋಬೇಡ. ಈಗ ಮೂರು ತಿಂಗಳ ಹಿಂದೆ ನಾನು ಒಬ್ಬ ಹುಡುಗಿಯ ಪರಿಚಯ ಮಾಡ್ಕೊಂಡೆ. ಇಟ್ ವಾಸ್ ಫಾರ್ ಸೆಕ್ಸ್. ಎಲ್ಲಾ ಇಂಟರ್‌ನೆಟ್‌ನಲ್ಲಿ ಆಗಿದ್ದು ವ್ಯವಹಾರ. ಜ್ಯೋತಿ ಅಂತ ಅವಳ ಹೆಸರು. ಸೆಕ್ಸ್‌ಗಾಗಿ ಅಂತಲೇ ಮೀಟ್ ಆದ್ವಿ. ಅದು ಮೂರ್ನಾಲ್ಕು ವೀಕೆಂಡುಗಳಿಗೆ ಮುಂದುವರೀತು. ಕೇಳು, ಅವಳೊಬ್ಬ ಪ್ರೊಫೆಶನಲ್ ಎಸ್ಕಾರ್ಟ್ ಮತ್ತು ನಂಗೆ, ಲೆಟ್ ಮಿ ಬಿ ಫ್ರಾಂಕ್, ಇಟ್ ವಾಸ್ ನಾಟ್ ಮೈ ಫಸ್ಟ್ ಟೈಮ್. ಅಂತಹವಳ ಜೊತೆ, ಯು ಬಿಲೀವ್ ಮಿ, ನಂಗೆ ಪ್ರೀತಿ ಆಗಿಹೋಯ್ತು! ನಾನು ಅವಳನ್ನ ಮಿಸ್ ಮಾಡಲಿಕ್ಕೆ ಶುರು ಮಾಡಿದೆ. ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅವಳನ್ನ ಅಂದ್ರೆ, ಅವಳಿಗೆ ಈ ಮೊದಲೇ ಮದುವೆ ಆಗಿತ್ತು, ಈಗ ಡೈವೋರ್ಸ್ ಪ್ರೊಸೀಜರ್ ನಡೀತಾ ಇದೆ ಅಂತ ಗೊತ್ತಾದಮೇಲೂ, ನಂಗೆ ಅವಳನ್ನ ಬಿಟ್ಟಿರಲಿಕ್ಕೆ ಆಗಲಿಲ್ಲ. ಅಷ್ಟು ದಿನ ಮರೆತುಹೋಗಿದ್ದ ಆದರ್ಶಗಳೆಲ್ಲ ಮೈಮೇಲೆ ಅಡರಿಕೊಂಡವು. ಸೆಕೆಂಡ್ ಮ್ಯಾರೇಜು, ಇಂಥವಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು, ಬಾಳು ಕೊಡುಬೇಕು ಅಂತೇನೇನೋ ಚಿಂತನೆಗಳು! ಕೊನೆಗೆ ಅವಳೇ ಸಮಾಧಾನ ಮಾಡಿದಳು: ‘ನಿಂಗೆ ವಯಸ್ಸಾದ ಅಪ್ಪ-ಅಮ್ಮ ಇದಾರೆ.. ನಿನ್ನ ಕಂಪನಿಯಲ್ಲಿ, ನಿನ್ನ ಸ್ನೇಹವಲಯದಲ್ಲಿ, ನೀನು ವಾಸಿಸೋ-ವ್ಯವಹರಿಸೋ ಸಮಾಜದಲ್ಲಿ ನಿಂಗೊಂದು ಹೆಸರು ಇದೆ. ನಿಂಗೊಂದು ಬದುಕು-ಭವಿಷ್ಯ ಇದೆ, ಕನಸುಗಳು ಇವೆ. ಆದರೆ ನನಗೆ ಅದ್ಯಾವುದೂ ಇಲ್ಲ ಮತ್ತೆ ನಾನು ನಿನಗೆ ಯಾವ ಥರದಲ್ಲೂ ಜೋಡಿಯಾಗಲ್ಲ. ನಾನು ಇನ್ನು ಯಾವ ಸಂಬಂಧದ ಜೊತೆಗೂ ಬಾಳುವುದಿಲ್ಲ ಅಂತ ತೀರ್ಮಾನಿಸಿಯೇ ಈ ಗಂಡನಿಗೆ ಡೈವೋರ್ಸ್ ಕೊಡ್ತಿರೋದು... ನಾನು ಇಷ್ಟರೊಳಗೆ ನಿನ್ನೊಂದಿಗೆ ಹೇಳಿಕೊಂಡಿರುವ ನನ್ನ ಬಗೆಗಿನ ಬಹಳಷ್ಟು ಸಂಗತಿಗಳು ಸುಳ್ಳು. ನನ್ನ ನಿಜವಾದ ಹೆಸರು ಜ್ಯೋತಿ ಸಹ ಅಲ್ಲ’ ಅಂತೆಲ್ಲ ಕಪಾಳಕ್ಕೆ ಹೊಡೆದಂತೆ ಹೇಳಿ, ಆಮೇಲೆ ನನ್ನ ಸಂಪರ್ಕಕ್ಕೂ ಸಿಗದಹಾಗೆ ತಪ್ಪಿಸಿಕೊಂಡು ಹೋಗಿಬಿಟ್ಳು. ಹೆಹೆ, ಅದಿಲ್ಲದಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರ್ತಿದ್ದೆನೋ?” ನಕ್ಕ ಓಂಪಿ. ಕ್ಷಣ ಬಿಟ್ಟು ಕೇಳಿದ: “ನಿಂಗೇನನ್ಸುತ್ತೆ ಇದನ್ನ ಕೇಳಿದಾಗ? ಹಹ್ಹಹ್ಹಾ, ಕತೆಗಾರ, ಹೇಳೋ ಫ್ರೆಂಡ್.. ನಿಂಗೇನಾದರೂ ಆಗಿದೆಯಾ ಇಂಥಾ ಅನುಭವ?”
ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ನಾವು ಕುಳಿತಿದ್ದ ಟೇಬಲ್‌ನ ಪಕ್ಕದಲ್ಲೊಂದು ಕಿಟಕಿಯಿತ್ತು. ಅದರಿಂದ ಬೆಳಕು ಒಳಬರದಂತೆ ಪೂರ್ತಿ ದಪ್ಪ ಪರದೆ ಮುಚ್ಚಿದ್ದರು. ಕಿಟಕಿಯ ಕಟ್ಟೆಯ ಮೇಲೊಂದು ಹೂದಾನಿ. ಅದರೊಳಗೆ ನೀರಿರಬಹುದೇನೋ ಎಂಬ ಭ್ರಮೆ. ಅದರಲ್ಲಿಟ್ಟಿರುವ ಅರೆಗೆಂಪು ಗುಲಾಬಿ ನಿಜವಾದ್ದೋ ಪ್ಲಾಸ್ಟಿಕ್ಕಿನದೋ ಗುಮಾನಿ. ಆ ಹೂವಿನ ಮೇಲಿರುವ ನೀರಹನಿ ತಾಜಾನೋ ಅಥವಾ ಕೃತಕವಾದ್ದೋ -ಈ ಮತ್ತ ಕಣ್ಣುಗಳಿಂದ ಪತ್ತೆ ಹಚ್ಚಲಿಕ್ಕಾಗುತ್ತಿಲ್ಲ..
“ಓಕೆ. ಈಗ ಬಹಳ ಇಂಪಾರ್ಟೆಂಟ್ ಆದ ವಿಷಯ ಹೇಳ್ತೇನೆ ನಿಂಗೆ..” ಓಂಪಿ ಎಚ್ಚರಿಸಿದ, “ಈಗ ಒಂದು ತಿಂಗಳ ಕೆಳಗೆ ನನಗೆ ಆರ್ಕುಟ್ಟಿನಿಂದ ಒಬ್ಬ ಹುಡುಗಿ ಪರಿಚಯ ಆದ್ಲು. ವಿನಿಷಾ ಅಂತ ಹೆಸರು. ನನ್ನ ಪ್ರೊಫೈಲ್ ನೋಡಿ, ‘ನಿನ್ನ ಆಸಕ್ತಿಗಳು ಮತ್ತು ನನ್ನ ಆಸಕ್ತಿಗಳು ತುಂಬಾ ಸಿಮಿಲರ್ ಇವೆ ಅನ್ನಿಸ್ತು, ಅದಕ್ಕೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ’ ಅಂತ ಅಂದ್ಲು. ಚಾಟ್‌ನಲ್ಲಿ ಸಿಕ್ಕಾಗ ಏಕದಂ ಕ್ಲೋಸ್ ಆಗಿ ಮಾತಾಡಲಿಕ್ಕೆ ಶುರುವಿಟ್ಟಳು. ಎಷ್ಟರ ಮಟ್ಟಿಗೆ ಅಂತೀಯ, ತನ್ನ ಪೂರ್ವಾಪರಗಳನ್ನೆಲ್ಲ ನನ್ನ ಬಳಿ ಹೇಳಿಕೊಂಡುಬಿಟ್ಟಳು. ಅವಳ ಫ್ಯಾಮಿಲಿ ಬಗ್ಗೆ, ಅವಳ ಕೆಲಸದ ಬಗ್ಗೆ, ಆಸಕ್ತಿಗಳ ಬಗ್ಗೆ, ಈಗ ಇರೋ ಪಿಜಿಯ ಗೆಳತಿಯರ ಬಗ್ಗೆ, ನೋಡಿದ ಸಿನಿಮಾ ಬಗ್ಗೆ... ಏನೆಲ್ಲ. ಆದರೆ ನಾನು ಅವಳನ್ನ ನಂಬಲಿಲ್ಲ. ಅವಳು ಹೇಳ್ತಿರೋದು ನಿಜವೋ ಸುಳ್ಳೋ ಯಾರಿಗ್ಗೊತ್ತು? ಸುಳ್ಳೇ ನನ್ನ ಜೊತೆ ಫ್ಲರ್ಟ್ ಮಾಡ್ತಿರಬಹುದು. ಅಥವಾ ಅವಳಿಗೆ ಈಗ ಟೈಮ್‌ಪಾಸ್‌ಗೆ, ಜೊತೆಗೆ ಚಾಟ್ ಮಾಡೋಕೆ ಯಾರಾದರೂ ಬೇಕಿರಬಹುದು. ನನ್ನನ್ನ ಈ ಕಾರ್ಯಕ್ಕೆ ಬಳಸಿಕೊಳ್ತಿರಬಹುದು. ನಾನು ಈ ಸಲವೂ ಪೆಗ್ಗು ಬೀಳಬಾರದು ಅಂತ ಗಟ್ಟಿ ಮಾಡಿಕೊಂಡೆ. ಆದರೂ ಅವಳ ಜೊತೆ ಮೃದುವಾದಂತೆ ನಟಿಸಿದೆ. ನನ್ನ ಕತೆಗಳನ್ನೂ ಹಂಚಿಕೊಂಡಂತೆ ಮಾಡಿದೆ.
“ಆದರೆ ಈಗ ಒಂದು ವಾರದಿಂದ ಅನ್ನಿಸ್ತಿದೆ, ಅವಳದು ಸುಮ್ಮನೆ ಫ್ಲರ್ಟಿಂಗ್ ಅಲ್ಲ, ನಿಜವಾಗಿಯೂ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ ಅಂತ. ನಾನು ಚೆನ್ನಾಗಿ ಮಾತಾಡಿದ ದಿನ ಅವಳೂ ಖುಶಿಯಾಗಿರ್ತಾಳೆ. ನಾನು ಅಲಕ್ಷ್ಯ ಮಾಡಿದ ದಿನ ಬೇಜಾರಾಗಿರ್ತಾಳೆ. ಅವಳ ಸ್ಟೇಟಸ್ ಮೆಸೇಜುಗಳೆಲ್ಲ ನನಗಾಗಿಯೇನೇನೋ ಅಂತ ಅನ್ನಿಸುವಂತಿರುತ್ತೆ. ಹೊರಗೆ ಮೋಡ ಕಟ್ಟಿದ್ದರೆ ಅಲ್ಲಿ ‘ಗರಿಬಿಚ್ಚಿದ ನವಿಲಾಗಿದೀನಿ.. ಮಳೆ ಬಾರದಿದ್ದರೂ ನೀ ಬಾ’ ಅಂತ ಇರುತ್ತೆ, ಜೋರುಮಳೆ ಬಂತೆಂದರೆ ‘ನಿನ್ನ ಪ್ರೀತಿಮಳೆಯ ಮುಂದೆ ಇದು ತುಂತುರು’ ಅಂತ ಇರುತ್ತೆ, ನಾನು ಇನ್ವಿಸಿಬಲ್ ಆದರೆ ಸಾಕು, ‘ಸಣ್ಣ ಕಲ್ಲುಗಳ ಡೊಗರೇ, ಬಚ್ಚಿಟ್ಟುಕೊಳ್ಳುವ ಮೀನಿಗೆ ಏನು ಶಿಕ್ಷೆ?’ ಅಂತ ಹಾಕಿಕೊಂಡಿರುತ್ತಾಳೆ. ‘ನಂಗೆ ಆ ಮೂವಿಗೆ ಹೋಗಬೇಕು, ಒಬ್ಬಳೇ ಹೋಗಲಿಕ್ಕೆ ಆಗಲ್ಲ, ಕರ್ಕೊಂಡು ಹೋಗು’ ಅಂತ ಹೇಳ್ತಾಳೆ. ‘ನಿಂಗೆ ನನ್ನ ಬಗ್ಗೆ ಸ್ವಲ್ಪಾನೂ ಕೇರೇ ಇಲ್ಲ’ ಅಂತ ಕಂಪ್ಲೇಂಟ್ ಮಾಡ್ತಾಳೆ. ‘ಯಾಕೆ ನೀನು ನನ್ನನ್ನ ಅವಾಯ್ಡ್ ಮಾಡ್ತಿದೀಯಾ? ನಾವು ಮೀಟ್ ಆಗೋದು ನಿಂಗೆ ಇಷ್ಟ ಇಲ್ವಾ?’ ಅಂತೆಲ್ಲ ಥೇಟು ಸಿನೆಮಾ ಶೈಲಿಯಲ್ಲಿ ಕೇಳ್ತಿದಾಳೆ. ಆದರೆ ನನಗೆ ಇದು ನನ್ನ ಬದುಕಿನ ಮತ್ತೊಂದು ಸಿನಿಮಾ ಕತೆ ಆಗಲಿಕ್ಕೆ ಇಷ್ಟ ಇಲ್ಲ.
“ಈಗ ನೀನು ಹೇಳು ಅಂಶು, ನಾನೇನು ಮಾಡಲಿ? ಡು ಯು ಥಿಂಕ್ ಐ ಶುಡ್ ಗೋ ಅಹೆಡ್? ಹೇಳು ನೀನು.. ಇಂಥವನ್ನೆಲ್ಲ ನೀನು ಕರೆಕ್ಟಾಗಿ ಜಡ್ಜ್ ಮಾಡ್ತೀಯ. ಆವಾಗ ಒಟ್ಟಿಗಿದ್ದಾಗ ಹೀಗೆ ನಾನು ಸಮಸ್ಯೆ ಹೇಳ್ಕೊಂಡಾಗಲೆಲ್ಲ ಏನಾದರೂ ಪರಿಹಾರ ಹೇಳ್ತಿದ್ದೆ.. ಕಮಾನ್, ಏನು ಮಾಡಲಿ ನಾನೀಗ?”
ಒಂದು ಕೈಯಲ್ಲಿ ಕೊನೆಯ ಅರ್ಧ ಗ್ಲಾಸು ಬಿಯರು, ಇನ್ನೊಂದು ಕೈಯಲ್ಲಿ ಈಗಷ್ಟೆ ಸರ್ವರ್ ಬಡಿಸಿ ಹೋಗಿದ್ದ ಜೀರಾ ರೈಸ್ ತುಂಬಿದ್ದ ಚಮಚ ಹಿಡಿದು ನನ್ನೆದುರು ಮ್ಲಾನವಾಗಿ ಕೂತಿದ್ದ ಓಂಪ್ರಕಾಶನ ಮುಖವನ್ನೇ ನೋಡಿದೆ. ಮೂರು ವರ್ಷದ ಹಿಂದೆ ಒಂದು ಫೈಲ್ ಹಿಡಿದು ಇಂಟರ್‌ವ್ಯೂಗೆಂದು ನಮ್ಮ ಆಫೀಸಿಗೆ ಬಂದಿದ್ದ ಓಂಪಿ, ಕೆಲಸದ ಮೊದಲ ದಿನ ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಓಂಪಿ, ಊಟಕ್ಕೆ ದುಡ್ಡು ಜಾಸ್ತಿಯೆಂದು ರೈಸ್‌ಬಾತ್ ತಿನ್ನುತ್ತಿದ್ದ ಓಂಪಿ, ಕೈಕೊಟ್ಟ ಹುಡುಗಿಯ ಕತೆ ಹೇಳುತ್ತ ಕಣ್ತುಂಬಿಸಿಕೊಂಡಿದ್ದ ಓಂಪಿ, ದೊಡ್ಡ ಸಂಬಳದ ಕೆಲಸ ಸಿಕ್ಕಾಗ ಖುಶಿಯಿಂದ ನನ್ನನ್ನು ತಬ್ಬಿಕೊಂಡಿದ್ದ ಓಂಪಿ -ಈಗ ಹಣವಂತ, ಸಕಲ ಸೌಕರ್ಯಗಳನ್ನೂ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವ, ಕಾರಿನಲ್ಲಿ ಜಮ್ಮಂತ ಓಡಾಡುವವ, ಐಷಾರಾಮಿ ಪಬ್ಬುಗಳಲ್ಲಿ ವೀಕೆಂಡುಗಳನ್ನು ಹರವಿಕೊಂಡವ... ಕೊನೆಗೂ ಹಂಬಲಿಸುತ್ತಿರುವುದು ಹಿಡಿ ಪ್ರೀತಿಗಾಗಿಯೇ? ಡಿವಿಜಿಯವರ ಮಂಕುತಿಮ್ಮನ ಕಗ್ಗ ನೆನಪಾಯಿತು.. ಏನ ಹೇಳಲಿ ಇವನಿಗೆ..? ‘ಪ್ರೀತಿ-ಪ್ರೇಮಗಳಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ’ ಅಂತ ಕೇವಲ ಅರ್ಧ ಗಂಟೆ ಮುಂಚೆ ಹೇಳಿದ್ದ ನಾನು ಈಗ ಹೇಗೆ ಇವನಿಗೆ ಸಮಾಧಾನ ಮಾಡಲಿ? ಕೊನೆಗೂ ಜಗತ್ತಿನ ಕಟ್ಟಕಡೆಯ ಜೀವಿಯ ಹೃದಯವೂ ತುಡಿಯುವುದು ಪ್ರೀತಿಸಖ್ಯವೊಂದರ ಸಾಂಗತ್ಯಕ್ಕಾಗಿಯೇ?
“ಎಕ್ಸ್‌ಕ್ಯೂಸ್ ಮಿ..” ಸಕಾಲಕ್ಕೆಂಬಂತೆ ಬಂದ ಯಾವುದೋ ಮೊಬೈಲ್ ಕಾಲ್ ಅಟೆಂಡ್ ಮಾಡಲೆಂದು ಓಂಪಿ ಎದ್ದು ರೆಸ್ಟ್‌ರೂಮ್ ಕಡೆ ನಡೆದ. ನಾನು ನೀಳ ನಿಟ್ಟುಸಿರು ಬಿಟ್ಟೆ. ಗ್ಲಾಸುಗಳು ಮುಗಿದಿದ್ದವು. ಕ್ಲೀನರ್ ಬಂದು ಖಾಲಿ ಬಾಟಲುಗಳನ್ನು ಎತ್ತಿಕೊಂಡು ಹೋದ. ಟೇಬಲ್ಲಿನ ತುಂಬ ಇದ್ದ ಗೋಬಿ ಮಂಚೂರಿ, ಚಿಕನ್ ಟಿಕ್ಕ, ಜೀರಾ ರೈಸ್, ಆಲೂ ಚಿಪ್ಸ್‌ಗಳ ಸಶೇಷಗಳ ಪ್ಲೇಟುಗಳು, ನೀರಿನ ಗ್ಲಾಸುಗಳು, ತಳದಲ್ಲಿ ಚೂರೇ ಉಳಿದಿದ್ದ ಬಿಯರಿನ ಗ್ಲಾಸುಗಳು, ಪುಟ್ಟ ಆಶ್ ಟ್ರೇ, ನಿಂಬೆಹಣ್ಣಿನ ಚೂರು ತೇಲುತ್ತಿದ್ದ ಫಿಂಗರ್‌ಬೌಲ್, ಈಗಷ್ಟೆ ತಂದಿಟ್ಟುಹೋಗಿದ್ದ ಬಿಲ್ ಕೆಳಗಿನ ಬಡೇಸೋಪಿನ ಬಟ್ಟಲು.. ಎಲ್ಲವುಗಳಲ್ಲಿ ಓಂಪಿ ಕೇಳಿದ ಪ್ರಶ್ನೆಗಳಿದ್ದವು. ಇವನ್ನೆಲ್ಲ ಇಲ್ಲೇ ಬಿಟ್ಟುಹೋಗಿಬಿಡಬಹುದು; ಆದರೆ ಪ್ರಶ್ನೆಗಳು? ಅಕ್ಕ-ಪಕ್ಕ-ಹಿಂದೆ-ಮುಂದಿನ ಟೇಬಲ್ಲುಗಳಲ್ಲಿ ಈಗ ಬೇರೆ ಬೇರೆ ಗುಂಪುಗಳು-ಜೋಡಿಗಳು ಕೂತು ಅವರವರದೇ ಲೋಕಗಳಲ್ಲಿ ಅವರವರದೇ ಸತ್ಯ-ಸುಳ್ಳುಗಳ ವಿನಿಮಯದಲ್ಲಿ ಮುಳುಗಿದ್ದರು. ಕೈ ಬೀಸಿ ನಡೆದ ಅಮೃತಾ, ಬುದ್ಧಿ ಹೇಳಿ ಹೋದ ಜ್ಯೋತಿ, ಪ್ರೀತಿಸು ಎನ್ನುತ್ತಿರುವ ವಿನಿಷಾ.. ಇವರೆಲ್ಲ ಏನು ಮಾಡುತ್ತಿರಬಹುದು ಇವತ್ತಿನ ಈ ಕ್ಷಣದಲ್ಲಿ?
“ಅಮ್ಮ ಫೋನ್ ಮಾಡಿದ್ದಳು.. ನೋಡದೆ ತಿಂಗಳಾಯ್ತು, ಊರಿಗೆ ಬಾ ಅಂತಿದಾಳೆ. ಇವತ್ತು ಸಂಜೆ ಬೇರೆ ವಿನಿಷಾಗೆ ಸಿಗಬೇಕು. ರಾತ್ರಿ ಬಸ್ಸಿಗೆ ಹೋಗಿಬಿಡಲಾ ಅಂತ ನೋಡ್ತಿದ್ದೇನೆ ಮಂಗಳೂರಿಗೆ.. ಈಗ ವಿನಿಷಾ-ಗಿನಿಷಾ ಅಂತ ಸುದ್ದಿ ಎತ್ತಿದ್ರೆ ಸಾಕು, ಹಾಂ, ಅವ್ಳುನ್ನೇ ಮದುವೆ ಮಾಡ್ಕೋ ಅಂತಾಳೆ! ಏಯ್, ಏನೋ ಯೋಚಿಸ್ತಾ ಕೂತಿದೀಯಾ? ನೀನು ತಲೆ ಕೆಡಿಸಿಕೋಬೇಡವೋ, ನಂಗೊತ್ತು, ನನ್ನ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲ ಅಂತ. ಏನು ಹ್ಯಾಗೆ ಬರುತ್ತೋ ಹಾಗೆ ಸ್ವೀಕರಿಸೋದು. ಆ ಕ್ಷಣಕ್ಕೆ ಏನು ಅನ್ನಿಸುತ್ತೋ ಹಾಗೆ ಮಾಡೋದು. ಕಮಾನ್, ಲೆಟ್ಸ್ ಗೆಟ್ ಔಟ್ ಆಫ್ ಹಿಯರ್..” ಅಂತಂದು, ವೇಯ್ಟರಿಗೆ ಬಿಲ್ ಹಣ-ಟಿಪ್ಸು ಕೊಟ್ಟು, ನನ್ನ ಹೆಗಲ ಮೇಲೆ ಕೈ ಹಾಕಿ ಎಳೆದುಕೊಂಡು, ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ಮೆಟ್ಟಿಲುಗಳನ್ನು ಇಳಿಸತೊಡಗಿದ ಓಂಪಿ. ಓಂಪ್ರಕಾಶನನ್ನು ಈ ಭುವಿಗೆ - ಸಾಮಾನ್ಯ ಸ್ಥಿತಿಗೆ ತರಬಲ್ಲ ಏಕೈಕ ವ್ಯಕ್ತಿಯಾಗಿ ಅಲ್ಲೆಲ್ಲೋ ಇರುವ ಅವನ ಅಮ್ಮ ಕಂಡಳು ನನಗೆ.
“ಕಾರು ಎಲ್ಲಿ ಪಾರ್ಕ್ ಮಾಡಿದೀಯಾ?” ಕೇಳಿದೆ.
“ಕಾರ್ ತರ್ಲಿಲ್ಲ. ಈ ಟ್ರಾಫಿಕ್ಕಲ್ಲಿ ಯಾರು ಡ್ರೈವ್ ಮಾಡ್ತಾರೆ ಮಾರಾಯಾ.. ಅಲ್ಲದೇ ಇವತ್ಯಾಕೋ ಹಿಂದಿನ ಥರ ಬಸ್ಸಲ್ಲಿ ಓಡಾಡೋಣ ಅನ್ನಿಸ್ತು, ಅದಕ್ಕೇ ಮಿಲ್ಲರ್ಸ್ ರೋಡ್‌ವರೆಗೆ ಬಸ್ಸಲ್ಲಿ ಬಂದು, ಅಲ್ಲಿಂದ ವಾಕ್ ಮಾಡ್ಕೊಂಡು ಬಂದೆ. ಕಾರಿನಲ್ಲಿ ಗ್ಲಾಸುಗಳನ್ನೆಲ್ಲ ಏರಿಸಿ ಕೂತಿದ್ದರೆ ನಾನು ತೀರ ಒಂಟಿ ಅನ್ನಿಸಲಿಕ್ಕೆ ಶುರು ಆಗುತ್ತೆ. ಆದರೆ ಇಲ್ಲಿ ರಸ್ತೆಯಲ್ಲಿ ನೂರಾರು ಜನರ ಮಧ್ಯೆ ನಡೀತಿದ್ರೆ ನಾನೂ ಎಲ್ಲರ ಹಾಗೆ ಅನ್ನೋ ಥರದ ಫೀಲು.. ಕಳೆದುಹೋಗಲಿಕ್ಕೊಂದು ಅವಕಾಶವೂ ಸಿಗತ್ತೆ ನೋಡು..!” ಅಂದು ಪೇಲವವಾಗಿ ನಕ್ಕ.
ಮನದುಂಬಿ ಬಂದಂತಾಗಿ ಓಂಪಿಯನ್ನು ತಬ್ಬಿಕೊಂಡೆ. “ತುಂಬಾ ಖುಶಿಯಾಯ್ತು, ಇಷ್ಟು ಕಾಲದ ನಂತರ ನಿನ್ನನ್ನ ಮೀಟ್ ಮಾಡಿ.. ಥ್ಯಾಂಕ್ಸ್, ಬಂದಿದ್ದಕ್ಕೆ..” ಅಂದವನು, “ಹೇ, ನೋಡು, ನೀನು ನನ್ನ ಮೇಲೆ ಕತೆ ಬರೆದರೆ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡು. ಬೇಕಿದ್ರೆ ವಿನಿಷಾಳನ್ನೇ ಮದುವೆ ಆಗಿ ಆಮೇಲೆ ಸುಖವಾಗಿದ್ದ ಅಂತ ಬರೆ. ಐ ಲೈಕ್ ಸ್ಟೋರೀಸ್ ವಿತ್ ಹ್ಯಾಪಿ ಎಂಡಿಂಗ್!” ಅಂತಂದು ಕಣ್ಣು ಹೊಡೆದ. ಮತ್ತೊಮ್ಮೆ ಕೈ ಕುಲುಕಿದವನು, ಹಿಂದೆ ಸರಿದು ವೇವ್ ಮಾಡಿ, ಸೀದಾ ಫುಟ್‌ಪಾತ್‌ಗುಂಟ ಬಿರಬಿರನೆ ನಡೆಯತೊಡಗಿದ. ನೋಡನೋಡುತ್ತಿದ್ದಂತೆಯೇ ಕನ್ನಿಂಗ್‌ಹ್ಯಾಂ ರಸ್ತೆಯ ಜನಜಂಗುಳಿಯ ನಡುವೆ ಕರಗಿಹೋದ.
[2010ರ 'ಅಕ್ಕ' ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ 'ದೀಪ ತೋರಿದೆಡೆಗೆ' ಸಂಕಲನದಲ್ಲಿ ಸೇರಿಕೊಂಡಿರುವ ನನ್ನ ಕತೆ.]
Monday, July 28, 2008
ಪಯಣ
"ಮ್?"
"ಚಂದ್ರನಿಗೆ ಶಶಾಂಕ ಅಂತ ಯಾಕೆ ಹೆಸರು ಗೊತ್ತಾ?"
"ಇಲ್ಲ, ಗೊತ್ತಿಲ್ಲ"
"ಶಶ ಅಂದ್ರೆ ಮೊಲ. ಚಂದ್ರನ ಮೇಲೆ ಮೊಲದ ಚಿತ್ರದ ಅಂಕ -ಅಂದ್ರೆ ಸೈನ್- ಇದೆ ಅಲ್ವಾ, ಅದಕ್ಕೇ ಅವನನ್ನ ಶಶಾಂಕ ಅಂತ ಕರೀತಾರೆ"
"ಓಹ್! ಗೊತ್ತೇ ಇರ್ಲಿಲ್ಲ ನಂಗೆ... ಥ್ಯಾಂಕ್ಯೂ ವೆರಿ ಮಚ್ ಫಾರ್ ದಿ ಇನ್‌ಫಾರ್ಮೇಶನ್ ಮಿ. ಶಶಾಂಕ್! ಆದ್ರೆ ನಿಮಗೆ ಎಲ್ಲಿ ಮೊಲದ ಗುರುತು ಇದೆ ಅಂತ ಕೇಳಬಹುದಾ?"
"ಅಗತ್ಯವಾಗಿ ಕೇಳಬಹುದು. ಆದ್ರೆ ನಾನು ಮಾತ್ರ ಹೇಳಲ್ಲ! ಯಾಕೇಂದ್ರೆ ನಂಗೆ ಎಲ್ಲೂ ಮೊಲದ ಗುರುತಿನ ಮಚ್ಚೆ ಇಲ್ಲ!"
"ಮತ್ಯಾಕಪ್ಪಾ ನೀನು ಶಶಾಂಕ ಅಂತ ಹೆಸರಿಟ್ಕೊಂಡಿದೀಯಾ?"
"ಏಯ್... ನಾನಾ ಇಟ್ಕೊಂಡಿರೋದು? ಅಪ್ಪ ಇಟ್ಟಿದ್ದಪ್ಪ"
"ಹ್ಮ್... ಅದು ನಿಜ... ಶಶೂ, ಈಗ ಹೀಗೆ ನಮ್ಮಿಬ್ರುನ್ನೂ ಒಟ್ಟಿಗೇ ನೋಡಿದ್ರೆ ನಿಮ್ಮಪ್ಪ ಹೇಗೆ ರಿಸೀವ್ ಮಾಡ್ಬಹುದು?"
"ಹೆದರಬೇಡ್ವೋ... ಅಪ್ಪ ತುಂಬಾ ಸೋಶಿಯಲ್ ಅಂಡ್ ಪ್ರಾಕ್ಟಿಕಲ್... ಮೊದಲಿಗೆ ಶಾಕ್ ಆಗ್ತಾರೆ... ಆಮೇಲೆ ತಿಳಿಸಿ ಹೇಳಿದ್ರೆ ಒಪ್ಕೋತಾರೆ"
"ಆದ್ರೂ ನಂಗ್ಯಾಕೋ ತುಂಬಾ ಭಯ ಆಗ್ತಿದೆ ಶಶೂ..."
ಮಿನುಗು ನನ್ನ ಎದೆಗೆ ಒರಗಿದಳು. ಅವಳು ಅಷ್ಟೊಂದು ಭಯ ಪಡಬೇಕಾದ ಅವಶ್ಯಕತೆಯೇ ಇಲ್ಲ ಎನಿಸಿ, ಅವಳ ಬೆನ್ನ ಮೇಲಿಂದ ಕೈ ಹಾಕಿ ಬಳಸಿ ಮತ್ತಷ್ಟು ಬಿಗಿಯಾಗಿ ನನ್ನೆದೆಗೆ ತಬ್ಬಿಕೊಂಡೆ.
ನಾವು ಕುಳಿತಿದ್ದ ವೋಲ್ವೋ ಬಸ್ಸು 'ಸುಂಯ್' ಸದ್ದು ಮಾಡುತ್ತಾ ಓಡುತ್ತಿತ್ತು. ಕಿಟಕಿಗೆ ಇಳಿಬಿಟ್ಟಿದ್ದ ಪರದೆಯನ್ನು ನಾನು ಪಕ್ಕಕ್ಕೆ ಸರಿಸಿದ್ದೆನಾದ್ದರಿಂದ ಚಂದ್ರ ಒಳಬಂದು ನಮ್ಮಿಬ್ಬರ ಮೇಲೂ ಬೆಳದಿಂಗಳ ಹೊದಿಕೆ ಹೊಚ್ಚಿದ್ದ. ಮಿನುಗು ಕಣ್ಣು ಮುಚ್ಚಿಕೊಂಡಿದ್ದಳು. ನಾನು ಅವಳ ಮುಖವನ್ನೇ ನೋಡಿದೆ. ಅವಳ ಬಲಕಿವಿಯ ಲೋಲಕ್‌ನ ತುದಿ ಈಗ ಕೆನ್ನೆಯ ಮೇಲಿತ್ತು. ಮುಂಗುರುಳೊಂದು ಅದರ ಪಕ್ಕ. ನಾನು ಅದನ್ನು ಅವಳ ಕಿವಿಯ ಹಿಂದೆ ಸರಿಸಿದೆ. ಅವಳ ನುಣುಪು ಕೆನ್ನೆ, ಮೂಗು, ಅರ್ಧವಷ್ಟೇ ಕಾಣುತ್ತಿದ್ದ ತುಟಿಗಳು, ಗರಿಗರಿ ಚೂಡಿಯನ್ನು ಬಳಸಿದ್ದ ಮಿದು ಸ್ವೆಟರ್... ಎಲ್ಲಾ ಈ ಬೆಳದಿಂಗಳ ಬೆಳಕಿನಲ್ಲಿ ಹಿತವಾಗಿ ಬ್ಲಾಕ್ ಅಂಡ್ ವೈಟ್ ಚಿತ್ರಗಳಂತೆ ಕಾಣುತ್ತಿದ್ದವು. ನಾನು ನಮ್ಮೊಂದಿಗೇ ಓಡಿ ಬರುತ್ತಿದ್ದ ಚಂದ್ರನತ್ತ ದೃಷ್ಟಿ ಹೊರಳಿಸಿದೆ.
ಈ ಚಂದಿರನೊಬ್ಬ ಅಂದಿನಿಂದ ಇಂದಿನವರೆಗೂ ನನ್ನೊಂದಿಗೇ ಬರುತ್ತಿದ್ದಾನೆ. ಎಲ್ಲರಿಗೂ ಚಂದಿರ ಸದಾ ಹಸನ್ಮುಖಿಯಂತೆ ಕಾಣುತ್ತಾನಂತೆ. ನನಗೆ ಮಾತ್ರ ಹಾಗಲ್ಲ. ಆತ ನನ್ನ ಪರಿಸ್ಥಿತಿಗಳ ಅಭಿವ್ಯಕ್ತಿಯಂತೆ ಕಾಣಿಸುತ್ತಾನೆ ನನಗೆ. ನಾನು ಬೇಸರದಲ್ಲಿದ್ದರೆ ಚಂದ್ರನ ಮುಖ ಬಾಡಿರುತ್ತದೆ, ನಾನು ಕೋಪದಲ್ಲಿದ್ದರೆ ಚಂದ್ರನ ಮುಖ ಗಂಟಿಕ್ಕಿಕೊಂಡಿರುತ್ತದೆ, ನಾನು ಆತಂಕದಲ್ಲಿದ್ದರೆ ಚಂದಿರನ ಮುಖವೂ ಚಿಂತೆಯಲ್ಲಿದ್ದಂತೆ ಗೋಚರಿಸುತ್ತದೆ, ನಾನು ನಗುತ್ತಿದ್ದರೆ, ಅಫ್ ಕೋರ್ಸ್, ಚಂದಿರನೂ ನಗುತ್ತಿರುತ್ತಾನೆ. ಏಕೆಂದರೆ ಚಂದಿರ ನನ್ನ ಗೆಳೆಯ. ಅಲ್ಲ, ಚಂದಿರ ಎಂದರೆ ನಾನೇ.
ಮಿನುಗು ನನ್ನ ಪ್ರಪೋಸಲ್ಲನ್ನು ಒಪ್ಪಿಕೊಳ್ಳುವ ಮುನ್ನ ರೇಗಿಸುತ್ತಿದ್ದಳು. "ಹೇಳೀ ಕೇಳೀ ನೀನು ಶಶಾಂಕ, ಅದೆಷ್ಟು ನಕ್ಷತ್ರಗಳು ಪ್ರೀತಿಸ್ತಿದಾವೇನೋ? ನೀನು ಎಷ್ಟು ನಕ್ಷತ್ರಗಳಿಗೆ ಲೈನು ಹಾಕಿ ಕಾಯ್ತಿದೀಯೇನೋ? ನಿನ್ನಂಥವನನ್ನು ನಂಬುವುದು ಹೇಗೆ ಮಾರಾಯಾ...?" ಆದರೆ ಅವಳು ನನ್ನನ್ನೇ ನಂಬಿರುವುದು, 'ಗುಪ್ತ್ ಗುಪ್ತ್' ಆಗಿ ನನ್ನನ್ನೇ ಪ್ರೀತಿಸುತ್ತಿರುವುದು ಅವಳ ಚಹರೆಯಲ್ಲೇ ಗೊತ್ತಾಗುತ್ತಿತ್ತು. ಸುಮ್ಮನೆ ನಕ್ಕು ಹೇಳಿದ್ದೆ: "ಕಾಯ್ತಿರಬಹುದು... ಆದರೆ ನಿನ್ನಂತಹ 'ಮಿನುಗು'ತಾರೆಯನ್ನು ಕಂಡಮೇಲೆ ಈ ಶಶಾಂಕನ ಕಣ್ಣೇ ಮಂಕಾಗಿಹೋಗಿದೆ ದೇವೀ...! ನನ್ನ ಪೋಷಕ ಸೂರ್ಯನಿಗಿಂತ ಪ್ರಖರ ನಿನ್ನ ಪ್ರಭೆ... ಎಷ್ಟೋ ಬಾರಿ ಅನಿಸುತ್ತದೆ: ನನ್ನ ಬಾಹ್ಯ ರೂಪ ಮಾತ್ರ ಭೂಮಿಯನ್ನು ಸುತ್ತುತ್ತಿರುವುದು; ಮನಸು ಸದಾ ಈ ಮಿನುಗು ಅನ್ನೋ ನಕ್ಷತ್ರವನ್ನು ಸುತ್ತುತ್ತಿರುತ್ತೆ ಅಂತ. ಈ ಬಡ ಚಂದ್ರನ ಪ್ರೀತಿಯನ್ನು ಒಪ್ಪಿಕೋ ತಾರೇ..." ಮಿನುಗುವಿನ ಕಣ್ಣಲ್ಲಿ ಎಂಥಾ ನಕ್ಷತ್ರ ಮಿನುಗಿತ್ತು ಆ ಕ್ಷಣದಲ್ಲಿ...!
ಬಹುಶಃ ಅದು ನನ್ನ ಬಾಳಿನ ಇದುವರೆಗಿನ ಅದ್ಭುತ ಘಳಿಗೆ ಮತ್ತು ದಿನ. ಆಗಸದ ಮುಖ ಕೆಂಪೇರಿದ್ದು ಸಂಜೆಯಾದ್ದರಿಂದಲೋ ಅಥವಾ ಈ ಕಿನ್ನರ ಜೀವಿಗಳ ಪ್ರೇಮ ಸಾಕಾರವಾಗುತ್ತಿರುವ ಪರಿಯನ್ನು ನೋಡುತ್ತಾ ನಾಚಿದ್ದರಿಂದಲೋ ಹೇಳಲಾಗುತ್ತಿರಲಿಲ್ಲ. ಸೂರ್ಯ ಸಹ 'ಇವಳು ಒಪ್ಪುತ್ತಾಳೋ ಇಲ್ಲವೋ ನೋಡಿಕೊಂಡೇ ಮುಳುಗೋಣ' ಎಂದು ನಿರ್ಧರಿಸಿದವನಂತೆ ನಿಧನಿಧಾನವಾಗಿ ಕೆಳಗೆ ಸರಿಯುತ್ತಿದ್ದ. ಮಿನುಗು ಒಪ್ಪಿದಳು. ಇಲ್ಲ, ಮಿನುಗು ಒಪ್ಪದಿರಲಿಕ್ಕೆ ಸಾಧ್ಯವೇ ಇರಲಿಲ್ಲ. 'ಇಂದು ಬಾನಲ್ಲಿ ಚಂದಿರ ಮೂಡುವ ಮೊದಲು ಮಿನುಗುವಿನ ಬಾಳಲ್ಲಿ ಈ ಶಶಾಂಕನ ಪ್ರೀತಿಗೆ ಅಧಿಕೃತ ಒಪ್ಪಿಗೆ ಸಿಕ್ಕಿರುತ್ತೆ' ಅಂತ ಬೆಳಗ್ಗೆ ಎದ್ದು ಟೆರೇಸಿಗೆ ಬಂದಾಗಲೇ ನಾನು ತೀರ್ಮಾನಿಸಿದ್ದೆ. ಎದುರಿನ ಸಿತಾಳೆ ಮರದ ಗೆಲ್ಲ ಮೇಲೆ ಕೂತಿದ್ದ ಹಕ್ಕಿಯೊಂದು ಹಾರಿ ಎಲೆಯ ಮೇಲೆಲ್ಲ ನಿಂತಿದ್ದ ಇಬ್ಬನಿ ಹನಿಗಳು ತಟತಟನೆ ಭಾಷ್ಪವಾಗಿ ನನ್ನ ತೀರ್ಮಾನಕ್ಕೆ ಅಸ್ತು ಅಸ್ತು ಎಂದಿದ್ದವು. ಹಾಗೆ ಬಿದ್ದ ಹನಿಗಳು- ಆವಿಯಾಗಿ ಹೋಗಿ ಹಿಮಗಟ್ಟಿ ಉದುರಿದ ಪಾವನ ಯಮುನೆಯ ನೀರೇ ಇರಬೇಕು -ಎಂದುಕೊಂಡೆ.
ನನಗೇ ನಂಬಲಾಗುವುದಿಲ್ಲ; ನಾನೇನಾ ಈ ಮಿನುಗುವನ್ನು ಒಲಿಸಿಕೊಂಡದ್ದು? ಮಥುರೆಯನ್ನು ಜಯಿಸಿಕೊಂಡದ್ದು? ಬದುಕನ್ನು ಕಟ್ಟಿಕೊಂಡದ್ದು? ಈಗ ಹೀಗೆ ಈಕೆಯನ್ನು ಕರೆದುಕೊಂಡು ಹೋದರೆ 'ಇಲ್ಲ' ಎನ್ನಲಾಗದೆ ಒಪ್ಪಿಕೊಳ್ಳುವಂತೆ ಅಪ್ಪನನ್ನೂ ಮಾನಸಿಕವಾಗಿ ಮಾರ್ಪಡಿಸಿದ್ದು? ಊರು, ಬಂಧುಗಳು, ಸನ್ಮಿತ್ರರನ್ನೆಲ್ಲಾ ಎದುರು ಹಾಕಿಕೊಂಡಾದರೂ -ಇಲ್ಲ, ಅವರೆಲ್ಲ ಭಯ-ವಿಸ್ಮಯ-ಮಿಶ್ರಿತ ನಗೆಯೊಂದಿಗೆ ಮಹಾವಿಶ್ವಾಸಿಗಳಂತೆ ಮೆಲು ನಗೆಯಾಡುತ್ತಾ ಕೈಕುಲುಕುವಂತೆ ಮಾಡಿಕೊಂಡು- ಈಕೆಯನ್ನು ಮದುವೆಯಾಗುವೆನೆಂಬ ಧೈರ್ಯ ಒಡಗೂಡಿಸಿಕೊಂಡದ್ದು? ಅದೇ ಊರ ಜನ, ಬಂಧುಗಳು, ಮಿತ್ರರು ಎಲ್ಲರೂ 'ಶಶಾಂಕ ಹಕ್ಲ್ ಹತ್ತಿ ಹೋದ ತಗ... ಮುಗತ್ತು ಇನ್ನು ಅವನ್ ಕಥೆ!' ಎಂದು ಮಾತಾಡಿಕೊಳ್ಳುವುದು ಕಿವಿಗೆ ಬಿದ್ದಾಗ ಭುಗಿಲೆದ್ದಿದ್ದ ಈ ಛಲದ ಬೆಂಕಿ ಇನ್ನೂ ಉರಿಯುತ್ತಲೇ ಇರುವುದು... ಆಹ್! ಎಲ್ಲಡಗಿತ್ತು ಈ ಆತ್ಮವಿಶ್ವಾಸ ನನ್ನಲ್ಲಿ ಮುಂಚೆ?
ಊರು ಬಿಟ್ಟು ಹೊರಟ ಆ ಕಾವಳದ ರಾತ್ರಿ... ಅಪ್ಪ ಬಸ್‌ಸ್ಟ್ಯಾಂಡಿನವರೆಗೆ ಬ್ಯಾಟರಿ ಹಿಡಿದು ಬಂದಿದ್ದ. "ಅಲ್ಲ ಪಾಪು, ಹೋಗ್ಲೇಬೇಕಾ?" ಎಷ್ಟು ಸಣ್ಣ ದನಿಯಲ್ಲಿ ಕೇಳಿದ್ದ! ಆ ದನಿಯ ತಗ್ಗಿನಲ್ಲಿ ಅದೆಷ್ಟು ಪಶ್ಚಾತ್ತಾಪವಿತ್ತು! 'ಇಲ್ಲ ಮಗನೇ, ಇನ್ನೊಂದು ಸಲ ಹಾಗೆಲ್ಲ ಮಾತಾಡೊಲ್ಲ... ನೀನು ಮನೆ ಬಿಟ್ಟು ಹೊರಡುವಷ್ಟು ಕಠಿಣ ತೀರ್ಮಾನ ತೆಗೆದುಕೊಳ್ತೀಯಾ ಅಂತ ಗೊತ್ತಿದ್ರೆ ಹಾಗೆ ಹೇಳ್ತಿರಲಿಲ್ಲ... ನೀನು ಇಷ್ಟೊಂದು ಗಂಭೀರವಾಗಿ ಪರಿಗಣಿಸ್ತೀಯಾ ಅಂದುಕೊಂಡಿರಲಿಲ್ಲ... ನೀನೀಗ ಹೋಗೋದಿಲ್ಲ ಅಂತಾದ್ರೆ ಬೇಕಾದ್ರೆ ತಪ್ಪಾಯ್ತು ಅಂತ ಕೇಳ್ತೀನಿ... ನನಗೂ ವಯಸ್...' ಹೌದು, ಅಪ್ಪ ಅದನ್ನೆಲ್ಲ ಹೇಳಬಯಸಿದ್ದ. ನನಗದು ಗೊತ್ತಾಗುತಿತ್ತು. ಆಗಾಗ ಬೆಳಗುತ್ತಿದ್ದ ಬ್ಯಾಟರಿಯ ಬೆಳಕಿನಲ್ಲಿ ಕಾಣುತ್ತಿದ್ದ ಅಪ್ಪನ ಮುಖ ಪೂರ್ತಿ- ಪೂರ್ತಿ ಕುಗ್ಗಿಹೋಗಿತ್ತು. ಅಪ್ಪನನ್ನು ಸಮೀಪಿಸಿ, ಅವನ ಕೈಮುಟ್ಟಿ ಹೇಳಿದ್ದೆ: "ಬೇಜಾರಾಗಡ... ನೀ ಹೇಳಿದೆ ಅಂತ ಅಲ್ಲ ನಾ ಹೋಗ್ತಾ ಇರೋದು... ನೀನಷ್ಟೇ ಅಲ್ಲ; ಇಡೀ ಊರೇ ಮಾತಾಡಿಕೊಳ್ತಾ ಇದ್ದು ಕದ್ದು ಮುಚ್ಚಿ ಒಳಗೊಳಗೇ ನಗ್ತಾ.. 'ತಾಯಿ ಒಂದು ಹೋದ್ಮೇಲೆ ವಿನಾಯಕಣ್ಣನ ಮನೆ ಮಾಣಿ ಉಂಡಾಡಿಯಾಗಿಹೋತು... ಅದು ಇರೋ ತನಕ ಹಿಡಿತದಲ್ಲಿದ್ದ ಅಂವ... ಈಗಂತು ಯಾರ ಕೈಗೂ ಸಿಗದಿಲ್ಲೆ...' ಅವ್ರಿಗೆಲ್ಲ ಒಂದು ಉತ್ತರ ಹೇಳೋದು ಬ್ಯಾಡದಾ ಅಪ್ಪಾ? ತೋರುಸ್ತಿ ಅಪ್ಪಾ ನಾ ಯಾರು ಅಂತ..." ಅಪ್ಪನ ಕೈ ತಣ್ಣಗಿತ್ತು.
ಬೆಂಗಳೂರಿನ ಬಸ್ಸು ಹತ್ತಿದಾಗ ಏನಿತ್ತು ನನ್ನ ಕೈಯಲ್ಲಿ? ಮೂರು ವರ್ಷ ಟೆಕ್ಸ್‌ಟೈಲ್ ಡಿಪ್ಲೋಮಾ ಮಾಡಿದ್ದಕ್ಕೆ ಕುರುಹಾಗಿ ಒಂದಷ್ಟು ಸರ್ಟಿಫಿಕೇಟುಗಳು... ಕಿರಣನ ಅಂಗಡಿಯಲ್ಲಿ ಕೂತು ನ್ಯೂಸ್‌ಪೇಪರುಗಳನ್ನು ತಡಕಾಡಿ ಗೀಚಿಕೊಂಡು ಇಟ್ಟುಕೊಂಡಿದ್ದ ಒಂದಷ್ಟು ಜಾಹೀರಾತುಗಳು, ಕಂಪನಿಗಳ ವಿಳಾಸಗಳು... ಎರಡು ವರ್ಷದ ಹಿಂದೆ ಯಾವುದೋ ಕೆಲಸದ ಮೇಲೆ ಹೋಗಿ ಓಡಾಡಿಕೊಂಡು ದಿಗಿಲಿನ ಕಣ್ಣಲ್ಲಿ ನೋಡಿಕೊಂಡು ಬಂದಿದ್ದ ಬೃಹತ್ ಬೆಂಗಳೂರಿನ ಸೆಳೆತ... 'ಏನಕ್ಕಾದ್ರೂ ಬೇಕಾಗ್ತು ಇಟ್ಗ... ಹಂಗೆಲ್ಲ ತೀರಾ ಭಂಡತನ ಮಾಡ್ಲಾಗ' ಎಂದು ಅಪ್ಪ ಕೊನೆಯ ಘಳಿಗೆಯಲ್ಲಿ ಜೇಬಿಗೆ ತುರುಕಿದ್ದ ಸಾವಿರದಿನ್ನೂರು ರೂಪಾಯಿ ಎಣಿಸುವ ನೋಟುಗಳು... ಅಷ್ಟೇ, ಅಷ್ಟೇ ನನ್ನ ಬಳಿ ಇದ್ದದ್ದು.
ಆದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಇದ್ದದ್ದು ಛಲ! ತಲೆಯೊಳಗೆ ತುಂಬಿಕೊಂಡು ಕೊರೆಯುತ್ತಿದ್ದ -ಅಪ್ಪ ಬೆಳಿಗ್ಗೆ ಕಣದಲ್ಲಿ ಅಡಿಕೆ ಹರವುತ್ತಿದ್ದಾಗ ಹೇಳಿದ್ದ ಮಾತುಗಳು... "ಅಡಿಕೆ ಹರವಿಕ್ಕೆ, ಕೃಷ್ಣಾ ಬಸ್ಸಿಗೆ ಒಂಚೂರು ಸಾಗರಕ್ಕೆ ಹೋಗ್ಬರ್ತಿ ಅಪ್ಪಾ... ಕೆಲ್ಸಿದ್ದು" ಎಂದು ನಾನು ಅಲಕ್ಷ್ಯದಿಂದ ಹೇಳಿದ್ದೆ ತಡ, ಅಪ್ಪ ತಿರುಗಿಬಿದ್ದವನಂತೆ ಕೂಗಿದ್ದ: "ಸಾಕು! ಅದೆಂಥಕೆ ಸಾಗರಕ್ಕೆ ಹೋಗವು ಈಗ? ಏನು ಕೆಲ್ಸಿದ್ದು? ಅಲ್ಲಿ ಆ ಕಿರಣನ ಅಂಗಡೀಲಿ ಕುಂತ್ಗಂಡು ಕತೆ ಹೊಡಿಯಕ್ಕಾ? ಎದ್ರಿಗೆ ಕಾಲೇಜ್ ಹುಡ್ಗೀರ್ ಹೋದಕೂಡ್ಲೆ ಡೈಲಾಗ್ ಹೊಡ್ಕೋತ ನಿಗ್ಯಾಡಕ್ಕಾ? ಮತ್ತೆ ಹತ್ತು ಪ್ಯಾಕೆಟ್ ಗುಟ್ಕಾ ತಿನ್ನಕ್ಕಾ? ಊರೋರೆಲ್ಲ ನಿನ್ ಬಗ್ಗೆ ಏನೇನ್ ಮಾತಾಡಿಕೊಳ್ತ ಗೊತ್ತಿದ್ದಾ ನಿಂಗೆ? ನಿನ್ ಕಾಲದಲ್ಲಿ ನಂಗೂ ಮರ್ಯಾದಿ ಇಲ್ಲೆ. ಎಲ್ಲಿಗೆ ಹೋಪ್ದೂ ಬ್ಯಾಡ. ನಾನಂತೂ ಒಂದ್ರುಪಾಯ್ ಕೊಡದಿಲ್ಲೆ. ತ್ವಾಟಕ್ ಹೋಗಿ ಸ್ವಾಂಗೆ ಸಾಚಿಕ್ ಬಾ. ಒಂದು ರೌಂಡ್ ಬ್ಯಾಣಕ್ ಹೋಗ್ಬಾ. ಸ್ವಲ್ಪನಾದ್ರೂ ಜವಾಬ್ದಾರಿ ಇದ್ದನಾ ನಿಂಗೆ? ದಿನಾ ಪೆನ್ಸಿಲ್ಲು, ಬಣ್ಣ ಇಟ್ಗಂಡು ಏನೇನೋ ಚಿತ್ರ ಬಿಡಿಸ್ತಾ ಕೂತ್ರೆ ಆಗಲ್ಲೆ. ಹಿಂಗೇ ಮಳ್ ಹರಕೋತ ಮನೇಲಿದ್ರೆ ಹೆಣ್ಣು ಕೊಡ್ತ್ವಲ್ಲೆ ನಿಂಗೆ, ತಿಳ್ಕ!" ಅಪ್ಪ ಬಾಯಿಬಿಟ್ಟು ನನ್ನನ್ನು ಒಮ್ಮೆಯೂ ಹೀಗೆ ಬೈದವನಲ್ಲ. ನಾನು ಮನೆಯಲ್ಲಿರುವುದರ ಬಗ್ಗೆ ಅವನಿಗೆ ಅಂತಹ ಅಸಮಾಧಾನವೂ ಇರಲಿಲ್ಲ. ಅಮ್ಮ ತೀರಿಕೊಂಡಮೇಲೆ ಒಂಟಿಯಾಗಿಹೋದೆನೇನೋ ಎಂಬಂತೆ ಚಡಪಡಿಸುತ್ತಿದ್ದ ಅಪ್ಪನಿಗೆ ಮಗ ಜೊತೆಯಲ್ಲಿರುವುದು ಹಿತವಾಗಿಯೇ ಇತ್ತು. ಅದಿಲ್ಲವೆಂದರೆ ಮನೆಯಲ್ಲಿ ತಾನೊಬ್ಬನೇ... ಏನಂತ ಮಾಡುವುದು?
ಆದರೆ ಅಪ್ಪ ಇವತ್ತು ಹೀಗೆ ಬೆಳಬೆಳಗ್ಗೆ ಸಿಟ್ಟಿಗೆದ್ದವನಂತೆ ಕೂಗಿಕೊಂಡದ್ದು -ಅದೂ ಕಣದಲ್ಲಿ, ಅಕ್ಕಪಕ್ಕದ ಮನೆಯವರಿಗೆಲ್ಲ ಕೇಳುವಂತೆ -ನನಗೆ ಕೆರಳಿಹೋಗಿತ್ತು. "ನೀನೇನು ನಂಗೆ ದುಡ್ಡು ಕೊಡೋದು ಬ್ಯಾಡ. ನಾ ಸಾಗರಕ್ಕೆ ಹೋಗವು ಅಂದ್ಮೇಲೆ ಹೋಗವು. ಹೆಂಗಾದ್ರೂ ಹೋಗ್ಬರ್ತಿ" ಅಂತಂದು, ಅರ್ಧ ಹರವಿದ್ದ ಅಡಿಕೆ ಚಾಪೆಯನ್ನು ಹಾಗೆಯೇ ಬಿಟ್ಟು ಒಳಬಂದು, ಪ್ಯಾಂಟು ಹಾಕಿ ಹೊರಟಿದ್ದೆ. ಜೇಬಲ್ಲಿ ನೂರಿನ್ನೂರು ರೂಪಾಯಿಯಂತೂ ಇತ್ತು. ಸಾಗರಕ್ಕೆ ಬಂದು, ಕಿರಣನ ಅಂಗಡಿಯಲ್ಲಿ ಚಡಪಡಿಸುತ್ತಾ ಕೂತಿದ್ದಾಗ ಕಿರಣ "ಏಯ್ ನಿಂದು ಡಿಪ್ಲೋಮಾ ಆಯ್ದಲಾ ಮಾರಾಯಾ... ನನ್ನ ಹಾಗಲ್ಲ. ಬೆಂಗಳೂರಲ್ಲಿ ಒಂದಲ್ಲಾ ಒಂದು ಕೆಲಸ ಸಿಗ್ತು. ಸುಮ್ನೆ ಊರಲ್ಲಿದ್ದು ಹಿಂಗೆ ದಿನಾ ಒಬ್ಬೊಬ್ರ ಹತ್ರ ಏನು ಹೇಳಿಸ್ಕ್ಯಳ್ತೆ? ಹೋಗ್ಬುಡು. ಏನಾದ್ರೂ ಮಾಡ್ಲಕ್ಕು. ಅಲ್ಲಿ ನಿನ್ನನ್ನ ಯಾರೂ ಕೇಳೋರು ಇರೋದಿಲ್ಲೆ. ಜನ ಒಂದಷ್ಟು ದಿನ ಆಡಿಕೊಳ್ತ. ಆಮೇಲೆ ನಿಂಗೂ 'ಜೆಸ್' ತಿರುಗಿ ಏನಾದ್ರೂ ದುಡ್ಡು-ಗಿಡ್ಡು ಮಾಡಿಕೊಂಡು ಬಂದ್ರೆ ಅದೇ ಜನ ನಿನ್ನನ್ನ ಹೆಂಗೆ ಮಾತಾಡಿಸ್ತ ನೋಡ್ಲಕ್ಕಡ" ಎಂದಿದ್ದ. ಅದೇನು ನಾನೂ ಯೋಚಿಸದ ಪರಿಹಾರವಲ್ಲ. ಕಿರಣ ನನ್ನ ಬಳಿ ಹೀಗೆ ಹೇಳುತ್ತಿದ್ದುದೂ ಮೊದಲನೇ ಸಲವಲ್ಲ. ಆದರೆ ಆವತ್ತು ನಿರ್ಧರಿಸಿಬಿಟ್ಟೆ. 'ಮನೆಯಲ್ಲಿದ್ದರೆ ಹೆಣ್ಣು ಸಹ ಸಿಕ್ಕುವುದಿಲ್ಲ!' -ಆಹ್, ಅದು ಒತ್ತಟ್ಟಿಗಿರಲಿ, ಇನ್ನು ಊರಲ್ಲಿದ್ದರೆ ನಾನು ಕೊಳೆತೇಹೋಗುತ್ತೇನೆ ಎಂಬುದಂತೂ ವಿಧಿತವಿತ್ತು. ಕಿರಣನಿಂದ ಒಂದು ಸಾವಿರ ರೂಪಾಯಿ ತೆಗೆದುಕೊಂಡೆ. ವಾಪಸು ಮನೆಗೆ ಬರುವಷ್ಟರಲ್ಲಿ ನನ್ನ ನಿರ್ಧಾರ ದೃಢವಾಗಿತ್ತು. ಬಟ್ಟೆಯನ್ನೆಲ್ಲಾ ಬ್ಯಾಗಿಗೆ ತುರುಕಿಕೊಂಡು ಅಪ್ಪನ ಬಳಿ ನನ್ನ ತೀರ್ಮಾನ ಹೇಳಿದಾಗ ಅಪ್ಪ ಇದ್ದಕ್ಕಿದ್ದಂತೇ ಕುಸಿದುಹೋದ. ಏನೂ ಹೇಳಲಿಲ್ಲ.
ಅವತ್ತೂ ಚಂದ್ರ ಇದ್ದ ನನ್ನ ಜೊತೆ: ಬಸ್ಸ ಕಿಟಕಿಯಾಚೆ, ನನ್ನೊಂದಿಗೇ ಬರುತ್ತಾ. ಮುಗುಳ್ನಗುತ್ತಾ. ಆತ್ಮವಿಶ್ವಾಸ ತುಂಬುತ್ತಾ. ಹಾಗೆ ಆ ಚಂದ್ರನೊಂದಿಗೆ ಶುರುವಾದ ನನ್ನ ಪಯಣ ಆಹಾ, ಇದೆಲ್ಲಿಗೆ ತಂದು ಮುಟ್ಟಿಸಿತು ನನ್ನ? ಇಲ್ಲ, ಮುಟ್ಟಿಸಿಲ್ಲ, ಮುಂದುವರೆಯುತ್ತಲೇ ಇದೆ... ನಿಲ್ಲಲಾರದು ಚಂದಿರನಿರುವವರೆಗೆ.
ಮಿನುಗು ಸಣ್ಣಗೆ ಮಿಸುಕಿದಳು.
"ನಿದ್ರೆ ಬಂತಾ ಮಿನು?" -ಕೇಳಿದೆ.
"ಹುಂ" -ನನ್ನ ಮೈಗೊತ್ತಿ.
ಒಂದು ತಿಂಗಳು ಹಿಡಿಯಿತು ಕೆಲಸವೊಂದು ಸಿಗಲಿಕ್ಕೆ: "ಟೆಕ್ಸ್‌ಟೈಲಲ್ಲಿ ಬರೀ ಡಿಪ್ಲೋಮಾ ಮಾಡಿಕೊಂಡ್ರೆ ಸಾಕಾಗಲ್ಲಪ್ಪಾ... ವಿ ಆರ್ ಲುಕಿಂಗ್ ಫಾರ್ ಗ್ರಾಜುಯೇಟ್ಸ್!" "ಯು ಆರ್ ವೆರಿ ಪೂರ್ ಇನ್ ಇಂಗ್ಲಿಷ್" "ಕಂಪ್ಯೂಟರ್ ಲಿಟರಸಿ ಇಸ್ ಮಸ್ಟ್" -ಎಲ್ಲಾ ಮುಗಿದು, ಕೊನೆಗೆ ಯಾವುದೋ ಕಂಪನಿಯಲ್ಲಿ ಸಿಕ್ಕಿದ ಎರಡೂವರೆ ಸಾವಿರ ರೂಪಾಯಿಯ ಕೆಲಸ. ನಾನು ನಿರಾಳ ನಿಟ್ಟುಸಿರು ಬಿಟ್ಟಿದ್ದೆ. ನನಗೆ ಸಹಾಯಕವಾದದ್ದು ಅದೇ ನನ್ನ ಚಿತ್ರ ಬಿಡಿಸುವ ಕಲೆ. ಡಿಸೈನಿಂಗ್ ವಿಭಾಗದಲ್ಲಿ ನನಗೆ ಕೆಲಸ. ಚಂದಿರನಿಗೆ ಥ್ಯಾಂಕ್ಸ್ ಹೇಳಿದ್ದೆ. ಕಲಿತೆ, ನಿಧಾನವಾಗಿ; ಕಲಿಸಿತು ಬೆಂಗಳೂರು, ಬದುಕು, ಛಲ: ಇಂಗ್ಲೀಷು, ಕಂಪ್ಯೂಟರು, ಡಿಸೈನಿಂಗು, ಎಲ್ಲ. ಅದೊಂದು ದಿನ 'ನಮ್ಮ ಕಂಪನಿಯ ಮುಖ್ಯ ಕಚೇರಿಯಿರುವ ಮಥುರೆಗೆ ನೀನು ಹೋಗುತ್ತೀಯಾ?' ಎಂದು ಎಂ.ಡಿ. ಕೇಳಿದಾಗ ಒಂದೇ ಕ್ಷಣದಲ್ಲಿ ಒಪ್ಪಿಕೊಂಡಿದ್ದೆ. ಬದುಕ ಪಯಣಕ್ಕೆ ಸಿದ್ಧಗೊಂಡು, ಮೇಣದಂತೆ ಅಂಟಿಕೊಂಡಿದ್ದ ಊರಿನ ಜಾಡ್ಯವನ್ನೇ ಬಿಡಿಸಿಕೊಂಡು ಹೊರಟಿದ್ದವನಿಗೆ ಬೆಂಗಳೂರಾದರೇನು, ಮಥುರೆಯಾದರೇನು? ಮನೆಗೆ ಫೋನ್ ಮಾಡಿ ಹೇಳಿದೆ. ಅಪ್ಪ ಮನವಿಯೇನೋ ಎಂಬಂತೆ ಹೇಳಿದ: "ಹೋಗ್ಲಕ್ಕಡ... ಒಂದ್ಸಲ ಮನೆಗೆ ಬಂದು ಹೋಗಾ ಅಪ್ಪೀ.. ನೋಡದೇ ಬ್ಯಾಸರ ಆಗಿಹೋಯ್ದು..." ತಿರಸ್ಕರಿಸಲಾಗಲಿಲ್ಲ. ಒಂದು ವಾರ ಸಮಯ ಕೇಳಿಕೊಂಡು ಊರಿಗೆ ಬಂದೆ.
ಊರು ಹಾಗೆಯೇ ಇತ್ತು. ಆದರೆ ಜನ ಬದಲಾಗಿಹೋಗಿದ್ದರು. ಕನಿಷ್ಟ ನನ್ನ ಪಾಲಿಗೆ! "ಅದೆಲ್ಲೋ ಫಾರಿನ್ನಿಗೆ ಹೋಗ್ತಾ ಇದ್ಯಡ?" -ಕೇಳಿಕೊಂಡು ಬಂದ ವಿಶ್ವೇಶ್ವರಣ್ಣ. 'ಫಾರಿನ್ನಿಗಲ್ಲ ಮಾರಾಯಾ.. ಭಾರತಾನೇ! ಮಥುರೆ. ಯು.ಪಿ.' -ನಾನು ಸರಿ ಮಾಡಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಬೆಂಗ್ಳೂರಗೆ ಸೈಟ್ ತಗಂಡ್ಯಡ, ಹೌದೇ?" -ವಿಚಾರಿಸುವ ಕೋಮಲಕ್ಕ. 'ಇನ್ನೂ ತಗಳಲ್ಲೆ ಮಾರಾಯ್ತಿ... ಹಾಗಂತ ತಗಳದೇನೂ ದೂರ ಇಲ್ಲೆ!' -ನಾನು ಹೇಳಲು ಹೋಗಲಿಲ್ಲ. ನಕ್ಕೆ ಅಷ್ಟೇ. "ಮಾಣಿಗೆ ಮದುವೆ ಮಾಡ್ತ್ರನಾ ಈ ವರ್ಷ? ಅಲ್ಲ, ಎನ್ನ ಭಾವನ ಮಗಳೂ ಓದಿಕೊಂಡಿದ್ದು. ಬೆಂಗ್ಳೂರಗ್ ಇಪ್ಪೋರೇ ಬೇಕು ಹೇಳಿ ಹಟ ಅದ್ರುದ್ದು..." -ನನಗೆ ಕೇಳಿಸುವಂತೆ ಸುಬ್ಬಣ್ಣನ ಮಾತು ಅಪ್ಪನ ಬಳಿ. ಅಪ್ಪ ನನ್ನ ಕಡೆ ನೋಡಿದ್ದು ಗೊತ್ತಾದರೂ ನಾನು ಮಾತಾಡಲಿಲ್ಲ. ನಕ್ಕೆ ಅಷ್ಟೇ.
ಅಪ್ಪ ಈಗ ಗಟ್ಟಿ ಕೂತಿದ್ದ ತನ್ನ ಕುರ್ಚಿಯ ಮೇಲೆ. ಮಗ... ತನ್ನ ಮಗ... ಏನು ಮಾತಾಡುವುದು ಅವನ ಬಳಿ? ಈಗವನು ಪೂರ್ತಿ ಗಂಭೀರನಾಗಿದ್ದಾನೆ. ಅವನಿಗೆ ಬೈಯುವಂತಿಲ್ಲ. ಏನಾದರೂ ಕೆಲಸ ಹೇಳಲಿಕ್ಕೂ ಹಿಂಜರಿಕೆ. ಯಾವುದಾದರೂ ವಿಷಯ ಪ್ರಸ್ತಾಪಿಸಲೂ ಭಯ. ಆದರೆ ಅಪ್ಪನಿಗೂ ಅದೇ ಬೇಕಿತ್ತು ಎನಿಸುತ್ತೆ. ಅವನು ನನ್ನ ಅಭ್ಯುದಯವನ್ನು ಮನಸಾರೆ ಸವಿಯುತ್ತಿದ್ದಂತೆನಿಸಿತು. ಊರಲ್ಲಿ, ನೆಂಟರಲ್ಲಿ ಇದಾಗಲೇ ಮಗನಿಂದ ಮರುಪ್ರಾಪ್ತವಾಗಿದ್ದ ಗೌರವ ಅವನಿಗೆ ಚೂರು ಗರ್ವವನ್ನೂ ತಂದುಕೊಟ್ಟಿತ್ತಿರಬೇಕು. ಅಪ್ಪ ಒಂದು ವಿಚಿತ್ರ ಸಂಭ್ರಮದಲ್ಲಿದ್ದ. ಸಂಭ್ರಾಂತಿಯಲ್ಲಿದ್ದ. ಮಗನೊಂದಿಗೆ ಎಂದೂ ಹೆಚ್ಚು ಮಾತನಾಡದ ಅವನು ಈಗ ಮಗ ಏನು ಹೇಳಿದರೂ 'ಹಾಂ ಸರಿ ಸರಿ' ಅಂತ ಒಪ್ಪಿಕೊಂಡುಬಿಡುತ್ತಾನೇನೋ ಎಂಬಂತೆ ಕಾಣುತ್ತಿದ್ದ. ಮಗ, ಬಹುಶಃ ಈಗ ಅವನಿಗೆ, ದೊಡ್ಡವನಾದಂತೆ ಕಾಣುತ್ತಿದ್ದ. ಅಪ್ಪ ನನ್ನನ್ನು ಅದು ಎಷ್ಟರ ಮಟ್ಟಿಗೆ ಒಪ್ಪಿಕೊಂಡುಬಿಟ್ಟಿದ್ದನೆಂದರೆ, ನಾನು ಹಿತ್ತಿಲಿಗೆ ಹೋಗಿ ಸಿಗರೇಟ್ ಸೇದುತ್ತಿದ್ದಾಗ ಅಲ್ಲಿಗೆ ಬಂದು, "ಅದೆಂತಕೆ ಇಲ್ಲಿಗ್ ಬರ್ತೆ ಸಿಗರೇಟ್ ಸೇದಕ್ಕೆ? ಮನೇಲೇ ಸೇದು" ಎಂದಿದ್ದ. ಇಷ್ಟು ದೊಡ್ಡವನಾಗಿರುವ ಮಗನಿಗೆ ಬೈಯಬಾರದು ಎಂದುಕೊಂಡನೇ? ಅಥವಾ ತಾನೂ ಸಿಗರೇಟು ಸೇದುವವನಾಗಿ ಮಗನಿಗೆ ಬೈದರೆ ಅವನು ತಿರುಗಿ ಹೇಳಿಯಾನು ಎಂದು ಹಿಂಜರಿದನೇ? ಗೊತ್ತಿಲ್ಲ.
ಚಂದಿರ ಕೈಬಿಡಲಿಲ್ಲ. ನನ್ನ ಜೊತೆ ಮಥುರೆಗೂ ಬಂದ: ರೈಲಿನ ಕಿಟಕಿಯಲ್ಲಿ. ಕೃಷ್ಣ ಹುಟ್ಟಿದ ಭೂಮಿ ಮಥುರೆ. ಕೃಷ್ಣ ಆಡಿ ನಲಿದ ಧರೆ ಮಥುರೆ. ಕೃಷ್ಣ ಈಜಾಡಿದ ಯಮುನೆಯ ತಟದಲ್ಲಿನ ಊರು ಮಥುರೆ. ಕೃಷ್ಣ ಬೆಣ್ಣೆ ಕದ್ದು ಜಾರಿ ಬಿದ್ದು ಮೊಣಕಾಲೂದಿಸಿಕೊಂಡಾಗಿನ ಸ್ಪರ್ಶದ ನೆನಪಿರುವ ನೆಲ ಮಥುರೆ. ಕೃಷ್ಣನ ಕೊಳಲ ದನಿಯನ್ನು ಇನ್ನೂ ಪ್ರತಿಧ್ವನಿಸುವ ಬೃಂದಾವನೀ ಮಥುರೆ. ಮಥುರೆ ನನ್ನನ್ನು ಮೊದಲ ನೋಟದಲ್ಲೇ ಸೆಳೆದುಬಿಟ್ಟಿತು. ಕೆಲಸ, ಹವೆ ಒಗ್ಗಿಕೊಂಡಿತು.
ಒಂದು ರವಿವಾರದ ಶ್ಯಾಮಲ ಸಂಜೆ. ಯಮುನೆಯ ತಟದಲ್ಲಿ, ಬೆಂಚೊಂದರಲ್ಲಿ ಕೂತು, ನನ್ನಿಷ್ಟದ ಹವ್ಯಾಸವಾದ ಚಿತ್ರ ಬಿಡಿಸುತ್ತಿದ್ದೆ. ಕಿಲ್ಲ ನಗುವಿನೊಂದಿಗೆ ಹುಡುಗಿಯರ ಗುಂಪೊಂದು ಬಂತು. ತಲೆಯೆತ್ತಿ ನೋಡಿದೆ. ಮಧ್ಯದಲ್ಲೊಂದು ಮಿನುಗುತಾರೆ. ತಟ್ಟನೆ ನನ್ನತ್ತ ನೋಡಿದ ತಾರೆಯ ಕಣ್ಣುಗಳು. ಮಥುರೆಯಂತೆಯೇ ಸೆಳೆವ ನೋಟ. ಬಾಯ್ಕಳೆದು ನೋಡುತ್ತಿದ್ದ ನನ್ನನ್ನು ದಾಟುವಾಗ ತೊಡೆಯ ಮೇಲಿದ್ದ ಅರ್ಧ ಬಿಡಿಸಿದ್ದ ಚಿತ್ರದೆಡೆಗೆ ಬಿದ್ದ ದೃಷ್ಟಿ. ಸೂರೆ ಹೋದ ಮನಸು. ಪೂರ್ತಿಯಾಗದ ಆ ಚಿತ್ರ; ನಿದ್ರೆಯಿಲ್ಲದ ಆ ರಾತ್ರಿ ಕ್ಯಾನ್ವಾಸಿನಲ್ಲಿ ಮೂಡಿ ನಿಂತ ಅದೇ ಹುಡುಗಿಯ ಚಿತ್ರ. ಚಿತ್ರದ ಕೆಳಗೆ 'ಮಿನುಗುತಾರೆ' ಅಂತ ಬರೆದು, ದಿನಾಂಕ, ಸಹಿ ಹಾಕಿ ಎದುರಿಗಿಟ್ಟುಕೊಂಡು ಅದನ್ನೇ ನೋಡುತ್ತಾ ಮಲಗಿದೆ.
ಮರುವಾರ ಸಂಜೆ ಆ ಚಿತ್ರ ಹಿಡಿದು ಯಮುನೆಯ ತಟದ ಅದೇ ಬೆಂಚಿನಲ್ಲಿ ಕೂತಿದ್ದೆ. ನನ್ನ ಎಣಿಕೆ ಸುಳ್ಳಾಗಲಿಲ್ಲ: ಮಿನುಗು ಬಂದಳು. ತನ್ನೊಬ್ಬಳೇ ಗೆಳತಿಯೊಂದಿಗೆ, ನನ್ನೆಡೆಗೆ ಕಳ್ಳನೋಟ ಬೀರುತ್ತಾ. ಆಕೆ ಹಾಗೆ ನಡೆದು ಬರುತ್ತಿದ್ದರೆ, ಸಖಿಯೊಂದಿಗೆ ಕೃಷ್ಣನೆಡೆಗೆ ನಡೆದು ಬರುತ್ತಿರುವ ರಾಧೆಯಂತೆ ಕಾಣುತ್ತಿದ್ದಳು.
ಮಿನುಗು ನನಗಾಗಿಯೇ ಬಂದಿದ್ದಳು. ನನ್ನ ತೊಡೆಯ ಮೇಲಿದ್ದ ತನ್ನದೇ ಚಿತ್ರ ನೋಡಿದಳು. ತಡೆದು ನಿಂತಳು. ನಾನೂ ಎದ್ದು ನಿಂತೆ. "ದಿಸಿಸ್ ಫಾರ್ ಯೂ, ಇಫ್ ಯು ಡೋಂಟ್ ಮೈಂಡ್..." ಚಿತ್ರವನ್ನು ಆಕೆಯತ್ತ ಚಾಚಿದೆ, ನಡುಗುವ ಕೈಯಿಂದ. ಮಿನುಗು ಅದನ್ನು ತೆಗೆದುಕೊಂಡಳು. "ಏನಿದು ಕೆಳಗಡೆ ಬರೆದಿರುವುದು?" ಓದಲು ಬಾರದ ಕನ್ನಡ ಅಕ್ಷರಗಳನ್ನು ಬೆರಳಲ್ಲಿ ಸವರುತ್ತಾ ಕೇಳಿದಳು, ಇಂಗ್ಲೀಷಿನಲ್ಲಿ. "ಮಿನುಗುತಾರೆ ಅಂತ ಬರೆದಿದ್ದೇನೆ. ಅಂದ್ರೆ ಬ್ಲಿಂಕಿಂಗ್ ಸ್ಟಾರ್. ನಿಮ್ಮನ್ನು ನಾನು ಮೊದಲ ಬಾರಿ ನೋಡಿದಾಗ ನೀವು ನಂಗೆ ಗೋಚರಿಸಿದ್ದೇ ಹಾಗೆ. ನಿಮ್ಮನ್ನ ಮಿನುಗು ಅಂತ ಕರೆದರೆ ಬೇಜಾರಿಲ್ವಲ್ಲ?" ಕಣ್ಣನ್ನೇ ನೋಡುತ್ತಾ ಕೇಳಿದೆ. "ಹಹ್ಹ..! ಚೆನ್ನಾಗಿದೆ. ಇಷ್ಟವಾಯ್ತು. ನನಗೆ ಚಿತ್ರಕಲೆ ಅಂದ್ರೆ ತುಂಬಾ ಇಷ್ಟ. ನೀವೊಬ್ಬ ಒಳ್ಳೆಯ ಆರ್ಟಿಸ್ಟ್" -ಹೊಳೆಯುವ ಕಂಗಳಲ್ಲಿ ತುಂಬಿದ್ದ ಹೊಗಳಿಕೆ. "ಥ್ಯಾಂಕ್ಸ್" -ಕಾರ್ಡ್ ಕೊಟ್ಟೆ.
ನಂತರದ ರವಿವಾರದ ಸಂಜೆ ಆ ಬೆಂಚು ನಮ್ಮಿಬ್ಬರನ್ನೂ ಅಕ್ಕಪಕ್ಕದಲ್ಲಿ ಕೂರಿಸಿಕೊಂಡಿತ್ತು. ಮಿನುಗು ನನ್ನನ್ನು ತಮ್ಮ ಮನೆಗೆ ಕರೆದೊಯ್ದಳು. ತಂದೆ- ತಾಯಿಯರಿಗೆ ಪರಿಚಯಿಸಿದಳು. ತನ್ನ ಕೋಣೆಗೆ ಕರೆದೊಯ್ದು ತಾನು ಮಾಡಿದ್ದ ಪೇಂಟಿಂಗ್‌ಗಳನ್ನು ತೋರಿಸಿದಳು. ಅವಳ ತಂದೆ ಕಾನ್ಪುರದ ದೊಡ್ಡ ಚಪ್ಪಲಿ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿದ್ದರು. ಅಮ್ಮ ಮನೆಯಲ್ಲಿ. ಮಿನುಗು ಹುಟ್ಟಿ ಬೆಳೆದದ್ದೆಲ್ಲಾ ಮಥುರೆಯಲ್ಲಿ. ಆರ್ಟ್ ಸ್ಕೂಲ್ ಒಂದರಲ್ಲಿ ಕಲಿಯುತ್ತಿದ್ದಳು. ನಮ್ಮ ಸ್ನೇಹಕ್ಕೆ ಅವಳ ಮನೆಯಲಿ ಯಾವ ಅಡ್ಡಿಯೂ ಬರಲಿಲ್ಲ. ಅದು ಸ್ನೇಹವಷ್ಟೇ ಅಲ್ಲ ಎಂಬುದು ತಿಳಿದೂ, ಮಿನುಗುವಿನ ಅಮ್ಮ ನಾನು ಹೋದಾಗಲೆಲ್ಲ ಚೆನ್ನಾಗಿ ಉಪಚರಿಸುತ್ತಿದ್ದರು.
ನನ್ನ ಕಂಪನಿಯ ವತಿಯಿಂದ ಒಮ್ಮೆ ಬ್ಯಾಂಕಾಕಿಗೆ ಹೋಗಬೇಕಾಗಿ ಬಂತು. ಒಂದು ವಾರದ ಟ್ರಿಪ್. ವಾಪಸು ಬಂದವನೇ ಊರಿಗೆ ಹೋದೆ. ಅಪ್ಪನಿಗೆಂದು ತಂದಿದ್ದ ಕ್ವಾರ್ಟ್ಸ್ ವಾಚು ಕೊಟ್ಟೆ. ಜತೆಗೇ, ಹಿಂಜರಿಯುತ್ತಲೇ, ಎರಡು ವಿದೇಶಿ ಸಿಗರೇಟ್ ಪ್ಯಾಕು, ಒಂದು 'ಥಾಯಿ ವೈನ್' ಬಾಟಲು ಕೊಟ್ಟೆ. ಅಪ್ಪ ಏನೆಂದರೆ ಏನೂ ಹೇಳಲಿಲ್ಲ. ಅರೆಕ್ಷಣ ನನ್ನನ್ನೇ ನೋಡಿ, ಆ ಬಾಟಲು, ಪ್ಯಾಕುಗಳನ್ನು ಒಳಗೆ ತೆಗೆದುಕೊಂಡು ಹೋದ. ನನಗೆ ಆ ನೋಟದಲ್ಲಿದ್ದ ಭಾವವನ್ನು ಗ್ರಹಿಸಲಾಗಲಿಲ್ಲ. ಮರುದಿನ ಅಟ್ಟದ ಮೆಟ್ಟಿಲ ಬಳಿ ಖಾಲಿ ಬಾಟಲಿ ಇದ್ದುದು ನೋಡಿ ರಾತ್ರಿ ತನ್ನ ಕೋಣೆಯಲ್ಲಿ ಕೂತು ಕುಡಿದಿರಬಹುದು ಎಂದುಕೊಂಡೆ. ಆಮೇಲೂ ಅಪ್ಪ ಆ ವಿಷಯವಾಗಿ ಒಂದೇ ಒಂದು ಮಾತು ಸಹ ಎತ್ತಲಿಲ್ಲ, ಬೇರೆ ಏನೇನೋ ಮಾತಾಡಿದ: ನನ್ನ ದುಗುಡವನ್ನು ಕಮ್ಮಿ ಮಾಡುವಂತೆ.
ಮೊದಲೆಲ್ಲಾ ನಾನು-ಅಪ್ಪ ಅಷ್ಟೆಲ್ಲಾ ಮಾತೇ ಆಡಿಕೊಳ್ಳುತ್ತಿರಲಿಲ್ಲ. ಆದರೆ ನಾನು ಹೊರ ಹೊರಟಮೇಲೆ, ನನ್ನ ಕಾಲ ಮೇಲೆ ನಿಂತಮೇಲೆ, ನನಗೂ ನನ್ನದೇ ಆದ 'ಐಡೆಂಟಿಟಿ'ಯೊಂದು ಸಿಕ್ಕಮೇಲೆ, ಅಪ್ಪನಿಗೆ ಆಗಾಗ ಫೋನ್ ಮಾಡುವುದು, ಅವನ ಹುಟ್ಟಿದ ದಿನ, ಫಾದರ್ಸ್ ಡೇ, ಇತ್ಯಾದಿ ದಿನಗಳಂದು ಶುಭಾಶಯ ಹೇಳುವುದು -ಹೀಗೆ ನನಗೂ ಅಪ್ಪನಿಗೂ ನಡುವೆ ಈಗ ಒಂದು ಬೇರೆಯದೇ ತೆರನಾದ ಸಂಬಂಧ ಸೃಷ್ಟಿಯಾಗಿಬಿಟ್ಟಿತ್ತು.
ಬದುಕು ನನ್ನನ್ನು ಎಲ್ಲೆಲ್ಲಿಗೋ ಕಳುಹಿಸಿತು, ಏನೇನನ್ನೋ ಕಲಿಸಿತು. ನನ್ನನ್ನು ಬದಲಿಸಿತು. ಆದರೆ ಅಪ್ಪ ಹೇಗೆ ಬದಲಾದ? ಈ ಕಾಲಕ್ಕೆ ಹೊಂದಿಕೊಂಡ? ಅವನನ್ನು ನಾನು ಬದಲಾಯಿಸಿದೆನೇ? ಎಷ್ಟೆಲ್ಲ ಪಯಣ ಮಾಡಿದೆ ನಾನು... ಆದರೆ ಅಪ್ಪ ಅಲ್ಲೇ ಇದ್ದುಕೊಂಡು ಎಲ್ಲೆಲ್ಲಿಗೋ ಹೋದ: ಚಂದಿರನಂತೆ. ನನ್ನೊಂದಿಗೇ ಬಂದ. ಹಿಂದುಳಿಯಲಿಲ್ಲ. ಕಾಲ-ದೇಶಗಳ ಬಗ್ಗೆ ಚಕಾರವೆತ್ತಲಿಲ್ಲ. ಇದು ಅಪ್ಪನ ಮೇಲಿನ ನನ್ನ ಪ್ರಭಾವವಾ? ಅಥವಾ ಅಪ್ಪನ ಬಯಕೆಯೇ ನಾನು ಹೀಗಾಗಬೇಕು ಎಂಬುದಾಗಿತ್ತಾ?
ಬಸ್ಸು ಡಾಬಾವೊಂದರ ಬಳಿ ನಿಂತಿತು. ಮಿನುಗುವಿಗೂ ಎಚ್ಚರವಾಯಿತು. "ಕೆಳಗೆ ಹೋಗಬೇಕಾ?" -ಕೇಳಿದೆ. ಇಲ್ಲವೆಂದಳು. "ಏನಾದ್ರೂ ತರಬೇಕಾ?" -ಕೇಳಿದೆ. ಬೇಡವೆಂದಳು. ನಾನೊಬ್ಬನೇ ಕೆಳಗಿಳಿದು ಹೋದೆ.
ರಸ್ತೆ ದಾಟಿ ಹೋಗಿ ನಿಂತು, ದಿಗಂತದ ಕತ್ತಲೆಯಲ್ಲಿ ತೂಕಡಿಸುತ್ತಿದ್ದ ಬಿಳಿ ಬಿಳೀ ನಕ್ಷತ್ರಗಳನ್ನು ನೋಡುತ್ತಾ, ಉಚ್ಚೆ ಹೊಯ್ದೆ. ನಿರಾಳವಾದಂತೆನಿಸಿತು. ಪ್ಯಾಂಟಿನ ಜಿಪ್ಪೆಳೆದು ಇತ್ತ ತಿರುಗಿದೆ. ಅನತಿ ದೂರದಲ್ಲಿ ಕಿಟಕಿ ಕಿಟಕಿ ಕಿಟಕಿಗಳಲ್ಲಿ ಒಳಗಿನ ಬೆಳಕನ್ನು ತೋರುತ್ತಾ ನಿಂತಿದ್ದ ನಮ್ಮ ಬಸ್ಸು ಒಂದು ದೊಡ್ಡ ರೇಡಿಯೋ ಪೆಟ್ಟಿಗೆಯಂತೆ ಕಂಡಿತು. ಹೌದು, ಅಲ್ಲಿ ಕೂತಿರುವ ಒಂದೊಂದು ಜೀವವೂ ಒಂದೊಂದು ಛಾನೆಲ್ಲಿನಂತೆ. ಸ್ವಲ್ಪ ಟ್ಯೂನ್ ಮಾಡಿದರೆ ಸಾಕು, ಶುರು ಹಚ್ಚಿಕೊಳ್ಳುತ್ತವೆ ಅವು ತಮ್ಮ ತಮ್ಮದೆ ಹಾಡು, ವಾರ್ತೆ, ವರದಿ, ಸುದ್ದಿ, ಪ್ರವಾಸ ಕಥನ. ಪ್ರತಿ ಜೀವಕ್ಕೂ ತನ್ನದೇ ಅನುಭವಗಳು, ಅಭಿಪ್ರಾಯಗಳು, ತುಮುಲಗಳು, ಪ್ರಶ್ನೆಗಳು, ನೀತಿ ಸಂಹಿತೆಗಳು, ಪಯಣದ ಸುಸ್ತು. ಇವರೆಲ್ಲರ ಜೊತೆ ಮಿನುಗು, ನಾನು. ದೂರದಲ್ಲಿ ಅಪ್ಪ. ಮೇಲೆ ಚಂದ್ರ.
ವಾಪಸು ಬಸ್ಸು ಹತ್ತಿ ಸೀಟಿನಲ್ಲಿ ಕೂತೆ. ಪಕ್ಕದ ಸೀಟಿನವರು ಬಿಡಿಸುತ್ತಿದ್ದ ಕಿತ್ತಳೆ ಹಣ್ಣಿನ ಪರಿಮಳ ಅಲ್ಲೆಲ್ಲ ಇತ್ತು. ಪೂರ್ತಿ ಎಚ್ಚರಾಗಿದ್ದ ಮಿನುಗು ಈಗ ಕಿಟಕಿಯಾಚೆ ನೋಡುತ್ತಿದ್ದಳು.
"ಮಿನೂ, ನಾನು ಮೊದಲಿಂದಲೂ ಇಂಟಲಿಜೆಂಟ್ ಇದ್ದೆ. ಅಪ್ಪ ಅದನ್ನು ಗಮನಿಸಿಯೇ ನನ್ನ ಬಗ್ಗೆ ಕನಸು ಕಟ್ಟಿದ್ದ ಅನ್ನಿಸುತ್ತೆ. ಅವನಿಗೂ ಆ ಊರು, ಆ ಏಕತಾನತೆ, ಜನಗಳ ಸಂಕುಚಿತ ಮನೋಭಾವ, ಸಣ್ಣದನ್ನೂ ಆಡಿಕೊಂಡು ಒಳಗೊಳಗೇ ನಗಾಡುವ ರೀತಿ, ಎಲ್ಲಾ ಬೇಸರ ತಂದಿರಬೇಕು. ಎಲ್ಲರ ಮಕ್ಕಳೂ 'ಏನೇನೋ' ಆಗುವುದನ್ನು, ಹೆಸರು ಮಾಡುತ್ತಿರುವುದನ್ನು ನೋಡುತ್ತಾ ಅವನಿಗೆ ಸುಮ್ಮನಿರಲಿಕ್ಕಾಗುತ್ತಿರಲಿಲ್ಲ. ಅವನಿಗೆ ತನ್ನ ಮಗ 'ಏನೋ' ಆಗಬೇಕಿತ್ತು. ತನಗೆ ಸ್ವತಃ ಗಳಿಸಲಾಗದ 'ಐಡೆಂಟಿಟಿ'ಯೊಂದನ್ನು ಪಡೆಯಲಿಕ್ಕೆ ಅವನು ಮಗನನ್ನು ಆಶ್ರಯಿಸಿದ ಅನ್ನಿಸುತ್ತೆ. ಅಪ್ಪ ಆ ವಿಷಯದಲ್ಲಿ ತುಂಬಾ ಪ್ಯಾಶನೇಟ್!" ಹೇಳಿದೆ.
"ಹೀಗೇ ಅಂತ ಹೇಗೆ ಹೇಳ್ತೀಯಾ ಶಶೂ...? ನಿನ್ನ ಅಪ್ಪನ ಮನಸು ಓದೋದಕ್ಕೆ ಸಾಧ್ಯವಾ ನಿಂಗೆ? ಅದು ಚಂದ್ರನನ್ನು ನೋಡಿ ಏನೇನೋ ಅಂದಂತೆ. ಅವನೊಡಲೊಳಗಾಗುವ ತಳಮಳಗಳೇನೋ, ಭೂಕಂಪಗಳೇನೋ? ನಮಗೇನು ಕಾಣುತ್ತೆ? ನಮಗೆ ಕಾಣುವುದು ಚಂದ ಮೇಲ್ಮೈ ಅಷ್ಟೇ. ಅದನ್ನೇ ನೋಡಿ ಏನೇನೋ ಕಲ್ಪಿಸಿಕೊಂಡು ಆಡುತ್ತೇವೆ..."
ಮಿನುಗು ಕವಿಯಂತೆ, ದಾರ್ಶನಿಕಳಂತೆ ಮಾತಾಡುತ್ತಿದ್ದಳು. ನಾನು ನಿರ್ಧರಿಸಿದೆ: ವಾಪಸು ಹೋಗುವಾಗ ಅಪ್ಪನನ್ನೂ ಕರೆದುಕೊಂಡು ಹೊರಡಬೇಕು. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ ಆಯೋಜಿಸಿರುವ ನನ್ನ ಚಿತ್ರಗಳ ಪ್ರದರ್ಶನದಲ್ಲಿ ಅಪ್ಪ ಇರಬೇಕು. ಹೊಸ ಪಂಚೆ, ಗರಿ ಗರಿ ಜುಬ್ಬಾ ಧರಿಸಿದ ಅಪ್ಪ ಒಂದು ಶಲ್ಯ ಹೊದ್ದು ಹಾಲಿನಲ್ಲಿ ಓಡಾಡುತ್ತಾ ನನ್ನ ಚಿತ್ರಗಳನ್ನೆಲ್ಲಾ ಮೆಚ್ಚುಗೆಯ ಕಣ್ಣಲ್ಲಿ ನೋಡಬೇಕು. ಪ್ರದರ್ಶನ ಉದ್ಘಾಟಿಸಲು, ವೀಕ್ಷಿಸಲು ಬರುವ ಗಣ್ಯರಿಗೆ ಅಪ್ಪನನ್ನು ಪರಿಚಯಿಸಿಕೊಡಬೇಕು. ಅವರು ಚಿತ್ರ ನೋಡಿ ನನ್ನ ಹೆಗಲು ತಟ್ಟುವಾಗ ಅಪ್ಪ ಸೆರೆಯುಬ್ಬಿ ಬಂದ ಕೊರಳಲ್ಲಿ ಬೀಗಬೇಕು. ಹೌದು, ಅಪ್ಪನಿಗೆ ಅವೆಲ್ಲ ಇಷ್ಟ. ಮತ್ತು ಅಪ್ಪ ಅವಕ್ಕೆಲ್ಲ ಅರ್ಹ.
ಡ್ರೈವರ್ ಹತ್ತಿ ಹಾರ್ನ್ ಮಾಡಿದ. ಕಂಡಕ್ಟರ್ ಒಮ್ಮೆ ಕೊನೆಯ ಸೀಟಿನವರೆಗೂ ಹೋಗಿ ಎಲ್ಲರೂ ಬಂದಿದ್ದಾರಾ ನೋಡಿಕೊಂಡು ಬಂದ. ಬಸ್ ಸ್ಟಾರ್ಟ್ ಆಯಿತು. ಹೆಡ್‌ಲೈಟ್ ಬೆಳಕಿನಲ್ಲಿ ಎದುರಿನ ದಾರಿ ಕೋರೈಸತೊಡಗಿತು. ಹೊಸ ಹುರುಪಿನೊಂದಿಗೆ ಓಡತೊಡಗಿತು ಬಸ್ಸು.
['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]
Friday, May 02, 2008
ಅಡ್ಜಸ್ಟ್‌ಮೆಂಟ್ಸ್
ಸ್ಯಾಂಕಿಯ ವಿಶಾಲ ನೀರ ಮೇಲ್ಮೈಯಿಂದ ಬೀಸಿ ಬರುತ್ತಿದ್ದ ತಂಪು ಗಾಳಿಗೆ ಮೈಯೊಡ್ಡಿ ನಾನು ಸ್ವಲ್ಪ ಹೊತ್ತು ಹಾಗೇ ನಿಂತೆ. ಕೆಲ ಕ್ಷಣಗಳುರುಳಿದ ಮೇಲೆ, ಹತ್ತಿರದ ಬೆಂಚೊಂದರಲ್ಲಿ ಕೂತಿದ್ದ 'ಜೋಡಿಹಕ್ಕಿ'ಗಳಿಗೆ ನನ್ನ ಇರುವಿನಿಂದ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿ, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮುಂದೆಲ್ಲಾದರೂ ನಿಲ್ಲೋಣವೆಂದು ಹುಡುಕಿದರೆ ಎಲ್ಲ ಬೆಂಚುಗಳಲ್ಲೂ ಜೋಡಿಹಕ್ಕಿಗಳೇ ಇದ್ದವು. ನಾನು ಎಲ್ಲಿ ನಿಂತರೂ ಮತ್ತೊಬ್ಬರಿಗೆ ಕಿರಿಕಿರಿಯೇ ಎಂದೆನಿಸಿ, ಮದುವೆಯಾದ ಹೊಸತರಲ್ಲಿ ನನಗೂ ಹಾಗೇ ಅನ್ನಿಸುತಿತ್ತು ಎಂಬುದನ್ನು ಜ್ಞಾಪಕ ಮಾಡಿಕೊಂಡು, ಪಾರ್ಕುಗಳಿಗೆ ಒಂಟೊಂಟಿ ಬರುವುದಕ್ಕಿಂತ ಅನಾಥ ಭಾವ ಮತ್ತೊಂದಿಲ್ಲ ಎಂದುಕೊಳ್ಳುತ್ತ ಅಲ್ಲಿಂದ ಹೊರಬಿದ್ದು, ಹತ್ತಿರದ ಹೋಟೆಲೊಂದರಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆ. ಅಷ್ಟೊತ್ತಿನ ತನಕ ತುಟಿ ಕಚ್ಚಿ ತಡೆದುಕೊಂಡಿದ್ದ ಮೋಡಗಳು ಈಗ ಮಳೆ ಸುರಿಸತೊಡಗಿದವು. ಜತೆಗೇ, ನಾಲ್ಕು ವರ್ಷಗಳ ಹಿಂದಿನ ನನ್ನ ಪೇಯಿಂಗ್ ಗೆಸ್ಟ್ ಹೌಸಿನ ದಿನಗಳು ನೆನಪ ಕೋಶದಿಂದ ಹೊರಬಂದು, ಕಂಪ್ಯೂಟರ್ ಮುಂದೆ ಕೂತ ನನ್ನೆದುರು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡುಬಿಟ್ಟವು.
***
ಹಾಗೆ ಹರಡಿಕೊಂಡ ಚೂರುಗಳಲ್ಲೊಂದು, ನಾನಾಗ ಭೇಟಿ ಮಾಡಿದ ಸೂರಿ. ಸೂರಿ ಎಂದರೆ ಸುರೇಂದ್ರನ್. ಎಂದಿನಂತಹುದೇ ಒಂದು ಇಳಿಸಂಜೆ, ನಾನು ಆಫೀಸಿನಿಂದ ಬಂದು ಪ್ಯಾಂಟ್ ಬಿಚ್ಚಿ ಹಾಕಿ ಬರ್ಮುಡಾ ತೊಟ್ಟುಕೊಳ್ಳುತ್ತಿದ್ದಾಗ ರೂಮಿಗೆ ನುಗ್ಗಿದ ಈತ "ಹಾಯ್, ಐಯಾಮ್ ಸುರೇಂದ್ರನ್" ಎನ್ನುತ್ತಾ ಕೈ ಚಾಚಿದ್ದ. ಒಂದು ಕೈಯಲ್ಲಿ ಬರ್ಮುಡಾದ ಕಸೆ ಹಿಡಿದುಕೊಂಡು ಇನ್ನೊಂದು ಕೈಯನ್ನು ಅವನಿಗೆ ಕೊಟ್ಟು ಕುಲುಕಲು ಬಿಟ್ಟಿದ್ದೆ. "ತುಮಾರಾ ನಾಮ್ ನಹೀ ಬತಾಯಾ?" -ಅವನು ಎಚ್ಚರಿಸಿದ. ನಾನು ಚಡ್ಡಿ ಕಳಚಿ ಬೀಳದಂತೆ ಎಚ್ಚರ ವಹಿಸುವುದರಲ್ಲೇ ಮಗ್ನನಾಗಿದ್ದೆ. "ಓಹ್ ಸಾರಿ! ಐಯಾಮ್ ಅಂಶು. ಅಂಶುಮಂತ್. ಫ್ರಮ್ ಶಿಮೊಗಾ" ಇನ್ನೂ ಅವನ ವಶದಲ್ಲೇ ಇದ್ದ ನನ್ನ ಕೈಯನ್ನು ಬಿಡಿಸಿಕೊಳ್ಳುತ್ತಾ ಹೇಳಿದೆ. "ಶೀಮೋವಾ? ವ್ಹೇರೀಸ್ ದಟ್? ವ್ಹಿಚ್ ಸ್ಟೇಟ್?" -ಕೇಳಿದ. "ನಾಟ್ ಶೀಮೋವಾ ಮ್ಯಾನ್, ಶಿವಮೊಗ್ಗ. ಇಟ್ಸ್ ಇನ್ ಕರ್ನಾಟಕ ಓನ್ಲೀ. ಇನ್ ಫ್ಯಾಕ್ಟ್, ವ್ಹೇರ್ ಆರ್ ಯೂ ಫ್ರಮ್?" ಚಡ್ಡಿ ಹಾಕಿಕೊಂಡಾಗಿತ್ತಾದ್ದರಿಂದ ನಾನೂ ಸ್ವಲ್ಪ ಗಟ್ಟಿಯಾಗೇ ಕೇಳಿದೆ. "ಓಹ್.. ಕರ್ನಾಟಕ ಇಟ್ಸೆಲ್ಫ್? ಹಾಗಾದ್ರೆ ನಾನು ನಿಂಜೊತೆ ಕನ್ನಡದಲ್ಲೇ ಮಾತಾಡ್ಬಹುದು. ನಾನು ಕೇರಳದಿಂದ ಬಂದಿರೋದು.. ಕ್ಯಾಲಿಕಟ್ ಗೊತ್ತಾ? ಹಾಂ, ಕ್ಯಾಲಿಕಟ್ಟಿನ ಪುಟ್ಟ ಹಳ್ಳಿಯೊಂದರಿಂದ ಬಂದಿದ್ದೇನೆ.. ಇನ್ಶುರೆನ್ಸ್, ಮ್ಯೂಚುವಲ್ ಫಂಡ್ಸ್ ಏಜೆನ್ಸಿ ಮಾಡ್ತೇನೆ.. ಊರಲ್ಲಿ ನಮ್ಮ ಪಕ್ಕದ ಮನೆಯವರು ಕನ್ನಡದವರು.. ಹೀಗಾಗಿ, ನಂಗೂ ಕನ್ನಡ ಅಭ್ಯಾಸ ಆಗಿದೆ!" -ಅವನು ಹೇಳಿದ. "ಕೂಲ್! ನಾನು ಸಿ.ಎ. ಮಾಡ್ತಿದ್ದೇನೆ. ಇಂಟರ್‌ಮೀಡಿಯೇಟ್ ಮುಗಿದಿದೆ. ಈಗ ಫೈನಲ್" -ಅಷ್ಟಂದು ನಾನು ಕಾಲು ತೊಳೆಯಲೆಂದು ಬಾತ್ ರೂಮ್ ಕಡೆ ಹೊರಟೆ.
ನಾನು ಈ ಪೀಜಿಯಲ್ಲಿ ವಾಸಿಸುತ್ತಾ ಹತ್ತತ್ತಿರ ಮೂರು ತಿಂಗಳಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ನಾನು ಕಲಿತಿದ್ದ ದೊಡ್ಡ ಪಾಠವೆಂದರೆ ಯಾರನ್ನೂ ಹೆಚ್ಚಿಗೆ ಹಚ್ಚಿಕೊಳ್ಳಲು ಹೋಗಬಾರದು ಎಂಬುದು. ದಿನಾ ಒಬ್ಬೊಬ್ಬರು ಹೊಸಬರು ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಬೆಂಗಳೂರಿನ ಪ್ರತಿ ಗಲ್ಲಿಗೊಂದರಂತೆ ತೆರೆದು ನಿಂತಿರುವ ಪೇಯಿಂಗ್‌ಗೆಸ್ಟ್ ಹೌಸ್‌ಗಳೆಂಬ ಈ ವಸತಿ ಗೃಹಗಳು ಬ್ಯಾಚುಲರುಗಳ ಪಾಲಿಗೆ ಸ್ವರ್ಗವೇ ಆಗಿದ್ದರೂ ಇವು ವ್ಯವಹರಿಸುವ ರೀತಿ, ಇಲ್ಲಿನ ವ್ಯವಸ್ಥೆಗಳಂತೂ ನರಕ ಸದೃಶ. ಯಾರೇ ಬರಲಿ; ಎರಡು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಕೊಟ್ಟುಬಿಟ್ಟರೆ ಸಾಕು, ಮಾಲೀಕ ಅವರನ್ನು ಒಳಬಿಟ್ಟುಕೊಳ್ಳುತ್ತಾನೆ. ಬಂದ ವ್ಯಕ್ತಿಗೆ ಒಂದು ಕಪಾಟು ಅಥವಾ ಗಾಡ್ರೇಜಿನಲ್ಲಿ ಒಂದು ಖಾನೆ, ಮಲಗಿಕೊಳ್ಳಲಿಕ್ಕೆ ಒಂದು ಮಂಚ ಗೊತ್ತುಮಾಡಿಕೊಟ್ಟು ಹೋಗಿಬಿಡುತ್ತಾನೆ ಮಾಲೀಕ. ಹಾಗೆ ಬಂದ ಪ್ರತಿ ವ್ಯಕ್ತಿಯೂ ತನ್ನ ಏರ್‌ಬ್ಯಾಗಿನಲ್ಲಿನ ಬಟ್ಟೆಗಳನ್ನು ತೆಗೆದು ಕಪಾಟಿನಲ್ಲಿ ನೀಟಾಗಿ ಹ್ಯಾಂಗರಿಗೆ ನೇತುಹಾಕುತ್ತಾನೆ. ನಂತರ ಆ ಬ್ಯಾಗಿನಿಂದ ಹೊರಬೀಳುತ್ತವೆ ಅವನದೇ ಸೋಪು, ಟೂತ್ ಬ್ರಶ್ಶು, ಪೇಸ್ಟು, ಶ್ಯಾಂಪೂ, ಶೇವಿಂಗ್ ಕಿಟ್ಟು, ಅಮ್ಮ ಕಳುಹಿಸಿಕೊಟ್ಟ ಸಣ್ಣ ಉಪ್ಪಿನಕಾಯಿ ಬಾಟಲಿ, ಪುಟ್ಟ ದೇವರ ಫೋಟೋ... ಪ್ರತಿ ವ್ಯಕ್ತಿಗೂ ಅವನದೇ ದೇವರು, ಜಾತಿ, ಧರ್ಮ, ಭಾಷೆ, ರುಚಿ, ಕೆಲಸ, ಊರ ನೆನಪು, ರಾತ್ರಿಯ ಕನಸಲ್ಲಿ ಬರುವ ಅವನದೇ ಹುಡುಗಿ... ಇಷ್ಟೆಲ್ಲ ಖಾಸಗಿತನ ಇರುವ ಒಬ್ಬ ಬೇರೆಯದೇ ಆದ ವ್ಯಕ್ತಿ ಇಲ್ಲಿ ಹೀಗೆ ಈ ಪೀಜಿಯ ಚಿಕ್ಕ ಜಾಗದಲ್ಲಿ ತನ್ನ ಬದುಕನ್ನು ಪುಟ್ಟದಾಗಿ-ಒಪ್ಪವಾಗಿ ಜೋಡಿಸಿಟ್ಟುಕೊಂಡು ಎಲ್ಲರೊಂದಿಗೆ ಬದುಕಲು ಶುರುಮಾಡುತ್ತಾನೆ.
ನಾನು ಈ ಪೀಜಿಗೆ ಬಂದಾಗ ಇದಿನ್ನೂ ಆಗ ತಾನೇ ಶುರುವಾಗಿದ್ದ ಪೀಜಿಯಾಗಿತ್ತು. ಎಲ್ಲಾ ಹೊಸದಾಗಿತ್ತು, ಸ್ವಚ್ಚವಾಗಿತ್ತು, ಒಂದಿಬ್ಬರು ಹುಡುಗರು ಮಾತ್ರ ಇದ್ದರು. ನಂತರ ಇದರ ಮಾಲೀಕ ಜನಗಳನ್ನು ತುರುಕುತ್ತಾ ಬಂದ. ಬರುಬರುತ್ತಾ ನನಗೆ ಇದೊಂದು ದನದ ದೊಡ್ಡಿಯಂತೆ ಭಾಸವಾಗತೊಡಗಿತು. ಬರುವವರಿಗೆ ಯಾವ ಕಟ್ಟಳೆಗಳೂ ಇರಲಿಲ್ಲವಾದ್ದರಿಂದ ಕುಡಿದುಕೊಂಡು ಬಂದು ಬಾಗಿಲಲ್ಲಿ ಕಾರಿಕೊಳ್ಳುವವರು, ಮಾತನಾಡಿಸಿದರೆ ಮೈಮೇಲೇ ಬರುವವರು, ರಾತ್ರಿಯಿಡೀ ದೊಡ್ಡದಾಗಿ ಟೀವಿ ಹಾಕಿಕೊಂಡು ಕೂರುವವರು, ಮೊಬೈಲಿನಲ್ಲಿ ಕಿರುಚಾಡುತ್ತಲೇ ಇರುವವರು, ರೌಡಿಗಳು ಎಲ್ಲಾ ಪೀಜಿಯೊಳಗೆ ಸೇರಿಕೊಂಡರು. ಕೆಲಸದವಳು ಬೇರೆ ಪ್ರತಿದಿನ ಬಂದು ಸರಿಯಾಗಿ ಗುಡಿಸಿ ಸ್ವಚ್ಚ ಮಾಡುತ್ತಿರಲಿಲ್ಲ, ಮನೆ ತುಂಬಾ ಕಸ ತುಂಬಿಕೊಂಡಿರುತ್ತಿತ್ತು. ಬಾತ್‌ರೂಮು, ಟಾಯ್ಲೆಟ್ಟುಗಳ ಕಡೆಯಂತೂ ತಲೆ ಹಾಕುವುದಕ್ಕೂ ಹೇಸಿಗೆಯಾಗುವಂತಹ ಪರಿಸ್ಥಿತಿ ಬಂದಮೇಲೆ ನಾನೊಂದು ದಿನ ಮಾಲೀಕರ ಬಳಿ ಜಗಳ ಮಾಡಿಕೊಂಡು ಈ ಪೀಜಿ ಬಿಟ್ಟು, ಬೇರೆ ಏರಿಯಾದಲ್ಲಿ ಒಂದು ಸಿಂಗಲ್ ರೂಮ್ ಬಾಡಿಗೆ ತಗೊಂಡು ಇರತೊಡಗಿದೆ. ನಾನು ಹಾಗೆ ಏಕಾಏಕೀ ಬಿಟ್ಟಿದ್ದರಿಂದ ಅದಾಗಲೇ ಆಪ್ತರಾಗಿದ್ದ ಕೆಲ ರೂಂಮೇಟುಗಳಿಗೆ ಹೇಳಲೂ ಆಗಿರಲಿಲ್ಲ. ಆಮೇಲೂ ಬೇರೆ ಏನೇನೋ ಕೆಲಸಗಳ ಬ್ಯುಸಿಯಲ್ಲಿ ಸಿಲುಕಿಕೊಂಡು ಫೋನ್ ಸಹ ಮಾಡಲಾಗದೇ ಅವರಲ್ಲನೇಕರ ಸಂಪರ್ಕವೇ ಕಡಿದುಹೋಗಿಬಿಟ್ಟಿತು. ಅಕಸ್ಮಾತ್ ಎದುರಿಗೆ ಸಿಕ್ಕಿದರೆ ಕೈಕುಲುಕಿ 'ಏನಪ್ಪಾ.. ನೀವೆಲ್ಲ ದೊಡ್ ಮನುಷ್ಯರಾಗಿಬಿಟ್ಟಿದೀರಿ.. ನಾವೆಲ್ಲ ಎಲ್ಲಿ ಕಾಣ್ತೀವೀ..' ಎಂದೇನೇನೋ ಹೇಳುತ್ತಿದ್ದರು ಅವರು.
ಆದರೆ ಸುರೇಂದ್ರನ್ ಜೊತೆ ನಾನು ಸಂಪರ್ಕದಲ್ಲೇ ಇದ್ದೆ. ಆಗೊಮ್ಮೆ ಈಗೊಮ್ಮೆ ಮಲ್ಲೇಶ್ವರಂ ಏಯ್ತ್ ಕ್ರಾಸಿನಲ್ಲಿ 'ಹಕ್ಕಿ'ಗಳನ್ನು ನೋಡುತ್ತಾ ನಾನು ನಡೆಯುತ್ತಿರಬೇಕಾದರೆ ಸೂರಿ ಒಡಾಯುತ್ತಿದ್ದ. 'ಏಯ್ ಸ್ಲೋ ಮ್ಯಾನ್.. ಎದುರುಗಡೆ ನೋಡ್ಕೊಂಡು ನಡಿ..!' ಅಂತಿದ್ದ. ನಗುತ್ತಿದ್ದೆವು. ಆಮೇಲೆ ಜನತಾ ಹೋಟೆಲಿನಲ್ಲೊಂದು ಮಸಾಲೆ ದೋಸೆ-ಕಾಫಿ ಅಥವಾ ಆಶಾ ಸ್ವೀಟ್ಸ್‌ನಲ್ಲಿ ಡ್ರೈ ಜಾಮೂನ್-ಬಾದಾಮ್ ಮಿಲ್ಕ್ ಆಗುತ್ತಿತ್ತು. ಬ್ಯುಸಿನೆಸ್ ಹೇಗೆ ನಡೀತಿದೆ, ಕಂಪನಿ ಬದಲಿಸಬೇಕೆಂದಿರುವುದು, ಸೆನ್‌ಸೆಕ್ಸು, ನೋಡಿದ ಹೊಸ ಸಿನೆಮಾ, ಸಿ.ಎ. ಫೈನಲ್ ಎಕ್ಸಾಮಿಗೆ ನನ್ನ ತಯಾರಿ... ಮಾತಿಗೆ ಆಹಾರವಾಗುತ್ತಿದ್ದ ಕೆಲ ವಿಷಯಗಳು. ಸೂರಿಯ ನಿಷ್ಕಲ್ಮಶ ನಗೆ ನನಗೆ ತುಂಬಾ ಇಷ್ಟ. ಅದಕ್ಕೇ, ನನಗೆ ಸೂರಿ ಇಷ್ಟ.
ಪೀಜಿಗೆ ಬರುತ್ತಿದ್ದ ಹತ್ತಾರು ಹುಡುಗರ ನಡುವೆ ಸೂರಿ ನನಗೆ ಹತ್ತಿರಾಗುವುದಕ್ಕೆಕಾರಣ ಆ ದಿನ ನಡೆದ ಘಟನೆಯೇ ಇರಬೇಕು. ನನ್ನ ರೂಮಿನಲ್ಲಿ ಮತ್ತೊಬ್ಬ ಹುಡುಗನಿದ್ದ: ರೆಡ್ಡಿ ಅಂತ. ಅವನ ಪೂರ್ತಿ ಹೆಸರು ಸೋಮಶೇಖರ ರೆಡ್ಡಿಯೋ ಏನೋ ಇರಬೇಕು. ಆದರೆ ನಾವೆಲ್ಲ ಅವನನ್ನು ಕರೆಯುತ್ತಿದ್ದುದು ಬರೀ ರೆಡ್ಡಿ ಅಂತ. ಬಳ್ಳಾರಿಯವನು. ರಾಜಕೀಯ ಪಡಸಾಲೆಗೆ ಸೇರಿದವನು. ತನ್ನ ಕ್ಷೇತ್ರದ ಯಾವುದೋ ಎಂಪಿ ತನಗೆ 'ಭಾಳಾ ಕ್ಲೋಸು' ಅಂತಲೂ, ಅವರು ತಮ್ಮ ಕ್ವಾರ್ಟರ್ಸಿನಲ್ಲಿಯೇ ಇರಲು ಹೇಳುತ್ತಾರಾದರೂ ತಾನು ಬೇಡವೆಂದು ಇಲ್ಲಿದ್ದೇನೆಂದೂ ಹೇಳುತ್ತಿದ್ದ. ನಮ್ಮ ಅರಿವಿನಾಚೆಗೇ ಉಳಿಯುವ ವಿಧಾನಸೌಧದ ಒಳಗಿನ ಅದೆಷ್ಟೋ ವರ್ಣರಂಜಿತ ಸುದ್ದಿಗಳನ್ನು ನಿದ್ರೆ ಬರುವವರೆಗೂ ಹೇಳುತ್ತಿದ್ದ. "ಪಾರ್ಟನರಾ, ನಿಮ್ಮುನ್ ಒಂದ್ಸಲ ವಿಧಾನಸೌಧಕ್ ಕರ್ಕೊಂಡ್ ಹೋಗ್ತೇನ್ರೀ.. ನಿಮ್ ಮಂತ್ರಿಗ್ಳು ನಿಮ್ಮೂರಿಗೆ ಬಂದಾಗ ಇರ್ತಾರಲಾ, ಅದಕ್ಕೆ ಪೂರಾ ಡಿಫರೆಂಟಾಗಿರೋ ಅದೇ ಮಂತ್ರಿಗ್ಳನ್ನ ನೀವಿಲ್ಲಿ ಕಾಣ್ಬಹುದು..!" ಅಂತಿದ್ದ.
ಇಂಥಾ ರೆಡ್ಡಿಗೆ ಆಗಾಗ ಕುಡಿಯುವ ಖಯಾಲಿ ಇತ್ತು. ಒಳ್ಳೆಯ ರೆಸ್ಟೊರೆಂಟಿಗೆ ಹೋಗಿ, ತುಂಬಾ ಪ್ಯಾಶನೇಟ್ ಆಗಿ ಕುಡಿಯುತ್ತಿದ್ದ. ಆವತ್ತೊಂದು ದಿನ ದಾರಿಯಲ್ಲಿ ಸಿಕ್ಕ ಸೂರಿಯನ್ನೂ ಕರೆದುಕೊಂಡು ಹೋಗಿದ್ದಾನೆ. ಸೂರಿ ಕುಡಿಯುವವನಲ್ಲ. ಆದರೆ 'ಪಿಯೋ ಪಿಯೋ.. ಕುಚ್ ನಹೀ ಹೋಗಾ..' ಎಂದ ರೆಡ್ಡಿಯ ಒತ್ತಾಯಕ್ಕೆ ಮಣಿದಿದ್ದಾನೆ. ಆ ರೆಸ್ಟೊರೆಂಟಿನ ಮಬ್ಬುಗತ್ತಲೆಯ ಭೂಮಿಕೆ, ತೇಲಿ ಬರುತ್ತಿದ್ದ ಬೆಳ್ಳಿತೆರೆಯ ಹಾಡು, ಗಾಳಿಯಲ್ಲಿ ಲೀನವಾಗುತ್ತಿದ್ದ ಸಿಗರೇಟಿನ ಹೊಗೆ ಸೂರಿಯನ್ನು ಭಾವನಾಲೋಕದಲ್ಲಿ ತೇಲುವಂತೆ ಮಾಡುವಲ್ಲಿ, ನೆನಪ ಬಂಡಿಹಾದಿಯಲ್ಲಿ ಹಿಂದಕ್ಕೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.
ರಾತ್ರಿ ಹನ್ನೊಂದೂವರೆ ಆಗುತ್ತಿತ್ತು. ಯಾವುದೋ ಪುಸ್ತಕ ಹಿಡಿದು ಕೂತಿದ್ದೆ. "ಪಾರ್ಟನರಾ.. ಹೊರಾಗ್ ಬರ್ರೀ.. ಈಗ ಸುರೇಂದ್ರನ್ ಹಾಡ್ತಾರಾ.. ಇಲ್ಲೇ ಹಾಲಿಗ್ ಬರ್ರೀ.." ರೆಡ್ಡಿ ರೂಮಿನ ಬಾಗಿಲು ತಟ್ಟಿ ಕರೆಯುತ್ತಿದ್ದ. ಸೀರಿಯಸ್ಸಾಗಿ ಓದುತ್ತಿದ್ದೆನಾದಾರೂ ಒಲ್ಲದ ಮನಸ್ಸಿನಿಂದಲೇ ಹೊರಬಂದೆ.
ಸೂರಿ ಕುಡಿದಿದ್ದ. ನನ್ನ ಮುಖ ಕಂಡವನೇ ವಿಚಿತ್ರವಾಗಿ ನಕ್ಕ. 'ಬರ್ರೀ' 'ಬರ್ರೀ' ಎನ್ನುತ್ತಾ ರೆಡ್ಡಿ ಎಲ್ಲ ರೂಮುಗಳ ಬಾಗಿಲು ತಟ್ಟುತ್ತಿದ್ದ. ಪೀಜಿಯಲ್ಲಿದ್ದ ಹನ್ನೆರಡು ಚಿಲ್ಲರೆ ಹುಡುಗರೆಲ್ಲ ತಾವು ಧರಿಸಿದ್ದ ಚಡ್ಡಿ, ಲುಂಗಿ, ನೈಟ್ ಟ್ರಾಕುಗಳ ಮೇಲೇ, ಕಿವಿಗೆ ಸಿಕ್ಕಿಸಿಕೊಂಡಿದ್ದ ಎಫ್ಫೆಮ್ಮುಗಳ ಸಮೇತ ಹೊರಬಂದರು. ಹಾಲಿನಲ್ಲಿ ಉರಿಯುತ್ತಿದ್ದ ಟೀವಿಯ ದನಿಯನ್ನು ಮ್ಯೂಟ್ ಮಾಡಲಾಯಿತು. ಸೂರಿಯನ್ನು ಹಾಲಿನ ಮಧ್ಯದಲ್ಲಿದ್ದ ಸೋಫಾದ ಮೇಲೆ ಕೂರಿಸಲಾಯಿತು. ಎಲ್ಲರೂ ಸೂರಿಯನ್ನೇ ನೋಡುತ್ತಿದ್ದರು. "ಹೂಂ, ಶುರೂ ಕರೋ!" ರೆಡ್ಡಿ ಚಲಾವಣೆ ಕೊಟ್ಟ. ಸೂರಿ ಹಾಡತೊಡಗಿದ:
ಮೇರೇ ನಯನಾ, ಸಾವನ್ ಭಾದೋ
ಫಿರ್ ಭೀ ಮೇರಾ ಮನ್ ಪ್ಯಾಸಾ...
ಹೊರಗೆ ನಿಶ್ಯಬ್ದವನ್ನಾಳುತ್ತಾ ಧೋ ಸುರಿಯುತ್ತಿದ್ದ ಕತ್ತಲೆ. ಒಳಗೆ ಕಿಶೋರ್! ಸೂರಿ ಜೋಶಿನಲ್ಲಿದ್ದ. ಪೀಜಿಯ ಅಷ್ಟೂ ಹುಡುಗರೂ ಅಲ್ಲಾಡದೇ ನಿಂತು ಆಲಿಸುತ್ತಿದ್ದರು. ಸ್ಟ್ಯಾಂಡಿನ ಫೋಟೋದಲ್ಲಿದ್ದ ಹಸನ್ಮುಖಿ ದೇವರು, ಗೂಡಿನಲ್ಲಿ ಮುಚ್ಚಳ ತೆರೆಯುವುದನ್ನೇ ಕಾಯುತಿದ್ದ ಟಿಫಿನ್ ಕ್ಯಾರಿಯರ್, ಮೂಲೆಯಲ್ಲಿ ಸುಸ್ತಾರಿಸಿಕೊಳ್ಳುತ್ತಿದ್ದ ಚಪ್ಪಲಿಗಳು, ಮ್ಯೂಟಾಗಿದ್ದ ಟೀವಿಯಲ್ಲಿ ಚಲಿಸುತ್ತಿದ್ದ ಚಿತ್ರಗಳು... ಎಲ್ಲವೂ ಹಾಡು ಕೇಳಿದವು. ಸೂರಿ ದನಿಯೇರಿಸಿದಾಗೆಲ್ಲ ಹುಡುಗರು 'ವ್ಹಾವ್ ವ್ಹಾವ್!' ಎನ್ನುತ್ತಿದ್ದರು. ಸೂರಿ ಇಲ್ಲಿರಲೇ ಇಲ್ಲ. ನಾವೂ!
ಹಾಡು ಮುಗಿಯುತ್ತಿದ್ದಂತೆ ಟೆರೇಸು ಹಾರಿ ಹೋಗುವಂತೆ ಚಪ್ಪಾಳೆ. ನಾನೂ ಚಪ್ಪಾಳೆ ತಟ್ಟಿದೆ. ಸೂರಿಗೆ ಇಷ್ಟೊಳ್ಳೆ ಕಂಠವಿರಬಹುದೆಂದು ನಾನು ಊಹಿಸಿರಲೂ ಇಲ್ಲ. 'ಬಹುತ್ ಅಛ್ಛಾ ಗಾಯಾ..' 'ಸುರೇಂದ್ರನ್, ಒನ್ ಮೋರ್' ಇತ್ಯಾದಿ ಪ್ರಶಂಸೆ, ಮೊರೆ, ಗದ್ದಲ. ಸೂರಿ ಕರಗಿಹೋಗಿದ್ದ. ಕಳೆದುಹೋಗಿದ್ದ. ತನಗೆ ಇದ್ದಕ್ಕಿದ್ದಂತೆ ಲಭಿಸಿದ ಜನಪ್ರಿಯತೆ, ಬೇಡಿಕೆ, ಕ್ಷಣದಲ್ಲಿ ತಾನು ಪೀಜಿಯ ಹುಡುಗರ ಕಣ್ಣಲ್ಲಿ ಹೀರೋ ಆಗಿಹೋದ ವಿಸ್ಮಯಕ್ಕೆ ಅವನ ಹೃದಯ ಅವನನ್ನು ಮತ್ತಷ್ಟು ಭಾವುಕನನ್ನಾಗಿ ಮಾಡಿಬಿಟ್ಟಿತ್ತು. ಸೂರಿ ಹಾಡುವುದರ ಬದಲು ಅಳಲಿಕ್ಕೆ ಶುರುಮಾಡಿದ.
"ಯು ಆರ್ ಮೈ ಗಾಡ್ಸ್.. ಐ ಲವ್ ಯು ಆಲ್.." ಎಂದೇನೇನೋ ಅನ್ನುತ್ತಾ ಬಿಕ್ಕತೊಡಗಿದ. "ಸ್ವಲ್ಪ ಕುಡಿಸೇನ್ರೀ.. ಅದ್ಕೇ ಇಷ್ಟು ಟೈಟ್ ಆಗ್ಯಾನ..!" ರೆಡ್ಡಿ ನನ್ನ ಕಿವಿಯಲ್ಲಿ ಉಸುರಿದ. ಎಲ್ಲರೂ ಸೂರಿಯ ಬೆನ್ನು ತಟ್ಟಿ 'ಏ ಕಮಾನ್ ಸುರೇಂದ್ರನ್.. ಇಟ್ಸ್ ಓಕೇ.. ಚಲೋ, ಏನಾದ್ರೂ ತಿಂದು ಮಲ್ಕೋ' ಎನ್ನುತ್ತಾ ಸಮಾಧಾನ ಮಾಡಲು ಯತ್ನಿಸುತ್ತಿದ್ದರು. ಸೂರಿಯ ಅಳು ನಿಲ್ಲಲೇ ಇಲ್ಲ. ಬದಲಿಗೆ, ಆ ಅಳುವಿನೊಂದಿಗೆ, ಹಳೆಯ ಮಧುರ ದಿನಗಳ ವಿಷಾದದ ಕತೆ, ಸೂರಿಯ ಬಾಯಿಂದ ಬಿಕ್ಕು ಬಿಕ್ಕಾಗಿ ಹೊರಬರತೊಡಗಿತು.
ಸೂರಿ, ಕೇರಳದ ಕ್ಯಾಲಿಕಟ್ ಜಿಲ್ಲೆಯ ತುಷಾರಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವನು. ಅಪ್ಪನನ್ನು ನೋಡಿದ ನೆನಪಿಲ್ಲ. ಇವನಿಗೆ ವರುಷ ಮೂರಾಗುವುದರೊಳಗೇ ಸಾಬೂನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತ ದುರಂತವೊಂದರಲ್ಲಿ ಕೊನೆಯುಸಿರೆಳೆದಿದ್ದ. ಅಮ್ಮನ ಆರೈಕೆಯಲ್ಲೇ ಅಕ್ಕನೊಂದಿಗೆ ಆಟವಾಡುತ್ತಾ ಬೆಳೆದವನು ಸೂರಿ. ತುಷಾರಗಿರಿಯಲ್ಲಿ ಒಂದು ಜಲಾಪಾತವಿದೆ. ಅಷ್ಟೇನು ದೊಡ್ಡದಲ್ಲದಿದ್ದರೂ ತಕ್ಕ ಮಟ್ಟಿಗೆ ಜನಪ್ರಿಯವಾಗಿರುವ ಜಲಪಾತ ಅದು. ಮನೆಯಲ್ಲಿ ತೀರಾ ಬಡತನವೇನು ಇರಲಿಲ್ಲ. ಅಪ್ಪ ಸತ್ತಮೇಲೆ, ತುಷಾರಗಿರಿಗೆ ಬರುವ ಪ್ರವಾಸಿಗರಿಗಾಗಿ ಮನೆಯಲ್ಲೇ ಒಂದು ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾಳೆ ಅಮ್ಮ. ಕಾರ್ಖಾನೆಯಿಂದ ಗಂಡನ ಹೆಸರಲ್ಲಿ ಬರುತ್ತಿದ್ದ ಹಣ ಮತ್ತು ಈ ಅಂಗಡಿಯಿಂದ ಬರುತ್ತಿದ್ದ ಅಷ್ಟಿಷ್ಟು ಲಾಭಗಳಿಂದ ಅಮ್ಮ ಸಲೀಸಾಗಿಯೇ ಸಂಸಾರವನ್ನು ತೂಗಿಸುತ್ತಿದ್ದಳು. ಹುಡುಗರನ್ನು ಶಾಲೆಗೆ ಕಳುಹಿಸುತ್ತಿದ್ದಳು. ಈ ಅಕ್ಕ-ತಮ್ಮ ಶಾಲೆಯಿಂದ ಬಂದೊಡನೆ ಪಕ್ಕದ ಮನೆಗೆ ಟೀವಿ ನೋಡಲು ಹೋಗುತ್ತಿದ್ದುದಂತೆ. ಅಕ್ಕನಿಗೆ ಹಾಡುಗಳು ಜಾಸ್ತಿ ಇರುವ ಸಿನೆಮಾ ಇಷ್ಟವಾದರೆ ತಮ್ಮನಿಗೆ ಫೈಟಿಂಗ್ ಇರುವ ಸಿನೆಮಾ. ಪ್ರತಿರಾತ್ರಿ ನಿದ್ರೆ ಬರುವವರೆಗೂ ಅಕ್ಕ-ತಮ್ಮ ಅಂತ್ಯಾಕ್ಷರೀ ಆಡುತ್ತಿದ್ದರಂತೆ. ಅಕ್ಕನಿಗೆ ಎಷ್ಟು ಹಾಡು ಬರುತ್ತಿದ್ದವು...! ಅಕ್ಕ ಹಾಕಿದ ಸವಾಲಿಗೆ ತಮ್ಮನಿಗೆ ಹಾಡು ತಿಳಿಯದೇ 'ಸೋತೆ' ಎಂದು ಒಪ್ಪಿಕೊಳ್ಳುವಂತಹ ಸಂದರ್ಭ ಬಂದಾಗ ಅಡುಗೆ ಮಾಡುತ್ತಿರುತ್ತಿದ್ದ ಅಮ್ಮ ಹಾಡು ಹೇಳಿಕೊಡುತ್ತಿದ್ದರಂತೆ. ಅವರು ಯಾವಾಗಲೂ ಮಗನ ಪರ. ಅಕ್ಕ ಅದಕ್ಕೇ ಸಿಟ್ಟಾಗಿ ಅಮ್ಮನ ಬಳಿ ಜಗಳಕ್ಕೆ ಹೋಗುತ್ತಿದ್ದುದಂತೆ. ಆಗ ಅಮ್ಮ ಅವಳಿಗೆ ಸಮಾಧಾನ ಮಾಡಿ, ಮಕ್ಕಳಿಬ್ಬರಿಗೂ ಹಾಲು ಕೊಟ್ಟು ಮಲಗಿಸುತ್ತಿದ್ದುದಂತೆ.
ಸೂರಿಗೊಬ್ಬ ಪ್ರೇಯಸಿಯಿದ್ದಳು. ತುಷಾರಗಿರಿ ಹತ್ತಿರದ ತಾಮರಶ್ಶೇರಿ ಎಂಬ ಊರಿನವಳು. ಡಿಗ್ರಿ ಓದುತ್ತಿದ್ದಾಗಿನ ಕ್ಲಾಸ್‌ಮೇಟು. ಅವಳನ್ನು ಹೋಲಿಸಲು ಹೊಸ ಉಪಮೆಗಳೂ ಇಲ್ಲ, ಹಳೆಯದನ್ನೇ ಬಳಸಲು ನನಗೆ ಇಷ್ಟವಿಲ್ಲ; ಅಷ್ಟು ಚೆನ್ನಾಗಿದ್ದಳಂತೆ ಆಕೆ! ಅವಳು ತುಂಬಾ ಕೀಟಲೆ ಮಾಡುವ, ಮಾತುಕೋರ ಹುಡುಗಿ. ಆಕೆಯ ಕಣ್ಣಲ್ಲೊಂದು ಕ್ರಿಯಾಶೀಲತೆಯ ಹೊಳಪಿತ್ತಂತೆ, ಝಳಪಿತ್ತಂತೆ. ಆಕೆಗೆ ತಾನೊಬ್ಬ ಮಾಡೆಲ್ ಆಗಬೇಕೆಂಬ ಆಸೆ ಇತ್ತಂತೆ. 'ಈ ಪ್ರಪಂಚವನ್ನೆಲ್ಲ ಒಮ್ಮೆ ಬೈಕಲ್ಲಿ ಸುತ್ತಿಬರಬೇಕು. ಬದುಕಿನಲ್ಲಿ ಥ್ರಿಲ್ ಇರಬೇಕು ಕಣೋ..' ಎನ್ನುತ್ತಿದ್ದಳಂತೆ. ಆದರೆ ಸೂರಿ ತುಂಬಾ ಮುಗ್ಧ, ಸಭ್ಯ ಸ್ವಭಾವದ, ಮೌನವನ್ನೇ ನೆಚ್ಚಿಕೊಂಡ ವ್ಯಕ್ತಿ. ಇಂಥವನ ಪ್ರೀತಿಯನ್ನು ಆ ಹುಡುಗಿ ಹೇಗೆ ಒಪ್ಪಿಕೊಂಡಳು?
ಸೂರಿಯ ಪ್ರಕಾರ, ಆಕೆ ಅವನ ಮುಗ್ಧತೆಯನ್ನು ನೋಡಿಯೇ ಒಪ್ಪಿಕೊಂಡಳು. ಸೂರಿ ಪ್ರಪೋಸ್ ಮಾಡಿದಾಗ ಅವನ ಕಣ್ಣಲ್ಲಿದ್ದ ನಿರ್ಮಲ ಪ್ರೀತಿ, 'ಹುಡುಗೀ ದಯವಿಟ್ಟು ನೀನು ನನ್ನ ಪ್ರೀತಿಯನ್ನು ಒಪ್ಪಿಕೋ... ಇಲ್ಲವೆನ್ನಬೇಡ' ಎಂಬ ಯಾಚನೆಯನ್ನು ತಿರಸ್ಕರಿಸಲಾಗದೇ ಒಪ್ಪಿಕೊಂಡಳು. ಸೂರಿಯ ಒಳ್ಳೆಯತನ, ನಿಷ್ಠೆ, ಕಪಟವೆಂದರೇನೆಂಬುದನ್ನೇ ಅರಿಯದ ಅವನ ಮನಸು ಮತ್ತು ಅವನಿಗೆ ತನ್ನೆಡೆಗಿದ್ದ ಆರಾಧನೆಯಂತಹ ಪ್ರೀತಿ ಎಲ್ಲಾ ಅವಳಿಗೂ ಇಷ್ಟವಾಗುತ್ತಿದ್ದವು.
"ಆದರೆ ಈ ಒಳ್ಳೆಯತನ, ಮೃದುತ್ವ, ಮುಗ್ಧತೆ ಎಲ್ಲಾ ಸ್ವಲ್ಪ ದಿನಕ್ಕೇ ಆಕೆಗೆ ಬೇಸರ ಉಂಟುಮಾಡ್ತು. ನಾವೂ ಎಲ್ಲರಂತೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಂಡು, ನಂತರ ಅವರು ಶಾಲೆಯಲ್ಲಿ ಮೇಡಂ ಹೇಳಿಕೊಟ್ಟದ್ದನ್ನೆಲ್ಲಾ ಚಾಚೂ ತಪ್ಪದೆ ನಮ್ಮೆದುರು ಒಪ್ಪಿಸುವಾಗ ಅವರ ಸಿಂಬಳ ಒರೆಸುತ್ತಾ ಉಜ್ವಲ ಭವಿಷ್ಯದ ಕನಸನ್ನು ಕಾಣುವುದು -ಎಲ್ಲಾ ಅವಳ ಪ್ರಕಾರ ಸಿಲ್ಲಿ ಅಂತೆ, ಸ್ಟುಪಿಡ್ ಅಂತೆ. ಅದೊಂದು ದಿನ ಆಕೆ ತನಗೆ ಟೀವಿ ಚಾನೆಲ್ಲೊಂದರಲ್ಲಿ ನಿರೂಪಕಿಯಾಗಲು ಕರೆ ಬಂದಿದೆಯೆಂದೂ, ತಾನು ಹೈದರಾಬಾದಿಗೆ ಮೂರು ತಿಂಗಳ ತರಬೇತಿಗಾಗಿ ಹೋಗುತ್ತಿರುವುದಾಗಿಯೂ ಹೇಳಿ ಟಾಟಾ ಮಾಡಿ ಹೋಗಿಬಿಟ್ಟಳು. ಆಮೇಲೆ ಅವಳ ಬದುಕೇ ಬದಲಾಗಿಬಿಟ್ಟಿತು. ತುಷಾರಗಿರಿ-ತಾಮರಶ್ಶೇರಿಯಂತಹ ಪುಟ್ಟ ಪರಿಸರದಲ್ಲಿ ಬದುಕಿದ್ದ ಅವಳಿಗೆ, ಹೈದರಾಬಾದು ಪ್ರಪಂಚದ ವೈಶಾಲ್ಯತೆಯನ್ನು ಪರಿಚಯ ಮಾಡಿಸಿಕೊಟ್ಟಿತು. ಪ್ರಪಂಚ ವಿಶಾಲವಾಗಿದೆ ಎಂದಾದಾಗ ಸೂರಿಯಂತಹ ಒಬ್ಬ ಸಾಮಾನ್ಯ ಹಳ್ಳಿಯ ಹುಡುಗ, ಮುಂದೆ ಏನೋ ಡಿಗ್ರಿ-ಪಗ್ರಿ ಮಾಡಿಕೊಂಡು ಸಣ್ಣದೊಂದು ಕೆಲಸ ಹಿಡಿದು ಹೊಟ್ಟೆ ಹೊರೆದುಕೊಳ್ಳಲಿರುವ ಹುಡುಗ, ಎಲ್ಲೋ ಒಂದೆರಡು ವರ್ಷ ಇಷ್ಟದಿಂದ ಜತೆಗೆ ಓಡಾಡಿಕೊಂಡಿದ್ದ ಹುಡುಗ, ಸಾಧಾರಣವಾಗಿಯೇ ಕ್ಷುಲ್ಲಕವಾಗಿ ಕಾಣುತ್ತಾನೆ. ಹುಡುಗಿ ನನ್ನೊಂದಿಗಿನ ಸಂಬಂಧವನ್ನು ಕಡಿದುಕೊಂಡಳು. 'ಪ್ರೀತಿ-ಪ್ರೇಮ-ಮದುವೆಗಿಂತ ದೊಡ್ಡದಾದ್ದು ಈ ಪ್ರಪಂಚದಲ್ಲಿ ತುಂಬಾ ಇದೆ ಕಣೋ ಸುರೇನ್.. ಎಕ್ಸ್‌ಪ್ಯಾಂಡ್ ಯುವರ್ ವ್ಯೂ..' ಎಂದೆಲ್ಲ ಉಪದೇಶ ಮಾಡಿದಳು. ಇರಬಹುದು ಪ್ರಪಂಚದಲ್ಲಿ ಪ್ರೀತಿಗಿಂತ ಮಿಗಿಲಾದ್ದು; ಆದರೆ ಆಕೆಯನ್ನು ಪ್ರಪಂಚಕ್ಕಿಂತಲೂ ಮಿಗಿಲಾಗಿ ಪ್ರೀತಿಸ್ತಿದ್ದ ನಾನು ಮಾತ್ರ ಛಿದ್ರವಾಗಿಹೋದೆ" -ಸೂರಿ ಅಲವತ್ತುಕೊಂಡ.
ಸೂರಿಯ ಪ್ರಲಾಪನೆಯಂತಹ ಕತೆಯನ್ನು ಕೇಳುತ್ತಿದ್ದ ಪೀಜಿಯ ಹುಡುಗರು ಸ್ವಲ್ಪ ಹೊತ್ತಿನ ಬಳಿಕ ಆಕಳಿಸುತ್ತಾ ನಿದ್ರೆ ಬರುತ್ತಿದೆಯೆಂದು ಒಬ್ಬೊಬ್ಬರೇ ರೂಮು ಸೇರಿ ಬಾಗಿಲು ಹಾಕಿಕೊಂಡರು. ಕುಡಿದಿದ್ದ ರೆಡ್ಡಿಯೂ ಸದ್ದು ಮಾಡದೇ ಹೋಗಿ ಮಲಗಿಕೊಂಡ. ಕೊನೆಗೆ ನಾನೊಬ್ಬನೇ ಉಳಿದಿದ್ದರಿಂದ ಅನಿವಾರ್ಯವಾಗಿ, ಮತ್ತು ಇಂತಹ ಸಂದರ್ಭಗಳಲ್ಲಿ 'ಜಾರಿಕೊಳ್ಳುವ ನಾಜೂಕು' ಅರಿಯದ ನಾನು, ಯಾವಾಗಲೂ ಆಗುವಂತೆ ಈಗಲೂ ಸಿಲುಕಿಕೊಂಡೆ. ಸೂರಿಯ ಕತೆ ಮುಗಿಯುವವರೆಗೂ ಪಕ್ಕದಲ್ಲೇ ಕೂತೆ.
ಡಿಗ್ರಿ ಮುಗಿಸಿದ ಸೂರಿ ದುಡಿಮೆಗೊಂದು ಕೆಲಸವನ್ನರಸಿಕೊಂಡು ಬೆಂಗಳೂರಿಗೆ ಬಂದ. ಸ್ಟಾಕ್ ಬ್ರೋಕರಿಂಗ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಇನ್ಶುರೆನ್ಸ್ ಏಜೆಂಟಾದ. ಮ್ಯೂಚುವಲ್ ಫಂಡ್‌ಗಳನ್ನು ಡೀಲ್ ಮಾಡಿದ. ಏನೇನೋ ಮಾಡಿದ, ನಾನಾ ವಿಧದಲ್ಲಿ ದುಡಿದ. 'ಮನೆಗೇನು ಹಣ ಕಳುಹಿಸುವುದು ಬೇಡ, ನೀನು ನಿನ್ನ ಕಾಲ ಮೇಲೆ ನಿಂತುಕೋ ಸಾಕು' ಎಂದು ಅಮ್ಮ ಹೇಳಿಬಿಟ್ಟಿದ್ದಳು. "ನಾನೀಗ ದುಡೀತಿದೀನಿ. ದುಡ್ಡು ಮಾಡೋದು ಹೇಗೇಂತ ಕಲ್ತಿದೀನಿ. ಬೆಂಗಳೂರು ಹೈದರಾಬಾದಿಗಿಂತ ದೊಡ್ಡದಿದೆ. ಪ್ರಪಂಚ ವಿಶಾಲವಾಗಿರುವುದರ ಅರಿವನ್ನು ನನಗೂ ಇದು ಮಾಡಿಕೊಟ್ಟಿದೆ. ದಿನೇದಿನೇ ಬ್ಯುಸಿನೆಸ್ ಮೈಂಡೆಡ್ ಆಗ್ತಿದೀನಿ. ಆದ್ರೆ ಸ್ಟಿಲ್, ನಾನಿನ್ನೂ ಆ ಮುಗ್ಧತೆ, ಒಳ್ಳೆಯತನ, ಸಂಕೋಚದ ಸ್ವಭಾವಗಳಿಂದ ಹೊರಬರಲಿಕ್ಕೆ ಸಾಧ್ಯವಾಗಿಲ್ಲ ಅಂಶುಮಂತ್... ಯು ನೋ ವ್ಹಾಟ್, ಅವಳು ಈಗ ಟೀವಿ ಚಾನೆಲ್ಲೊಂದರಲ್ಲಿ ಆಂಕರ್. ಪ್ರತಿದಿನ ಟೀವಿಯಲ್ಲಿ ಬರ್ತಾಳೆ. ಅದಕ್ಕೇ ನಾನು ಆ ಚಾನೆಲ್ ನೋಡೋದೇ ಇಲ್ಲ. ಆದರೂ ಎಲ್ಲಾದರೂ ಚಾನೆಲ್ ಬದಲಿಸುವಾಗ ಅರೆಕ್ಷಣ ಆಕೆ ಕಾಣಿಸ್ತಾಳೆ. ನನ್ನೆದೆಗೇ, ಯು ನೋ, ನನ್ನ ಎದೆಗೇ ನೈಫ್ ಹಾಕಿದ ಹಾಗೆ ಆಗತ್ತೆ... ನಂಗೆ ಅಳೂನೇ ಬರುತ್ತೆ... ಐ ನೋ, ಆಕೆ ನನಗೆ ಸಿಗೋದಿಲ್ಲ... ಆದ್ರೆ ಅವಳಲ್ದೇ ನಾನು ಬೇರಿನ್ಯಾರ ಜತೆಗೂ ಪ್ರೀತಿ, ಪ್ರೇಮ, ಮದುವೆಗಳ ಕನಸನ್ನ ಕಟ್ಟಲಾರೆ..." ಸೂರಿಯ ಬಿಕ್ಕು ಮುಂದುವರೆದಿತ್ತು.
ಅಷ್ಟೊತ್ತಿಗೆ ಮನೆಯ ಮಾಲೀಕರು ಬಂದು, ರಾತ್ರಿ ಒಂದು ಗಂಟೆಯಾದರೂ ಇನ್ನೂ ಲೈಟು ಉರಿಸಿಕೊಂಡು ಗಲಾಟೆ ಮಾಡುತ್ತಿರುವುದಕ್ಕಾಗಿ ಸರಿಯಾಗಿ ಬೈದರು. ಕೊನೆಗೆ ನಾನು ಹೇಗೆ- ಹೇಗೋ ಮಾಡಿ ಸೂರಿಗೆ ಸಮಾಧಾನ ಮಾಡಿ, ಕ್ಯಾರಿಯರ್‌ನಲ್ಲಿದ್ದ ಊಟ ಮಾಡಿಸಿ, ಮಲಗಿಸಿದೆ.
ನಂತರ ರೂಮಿಗೆ ಹೋಗಿ ಮಲಗಿದರೆ ನನಗೆ ನಿದ್ರೆಯೇ ಬರುತ್ತಿರಲಿಲ್ಲ. ಅಂದು ಸಂಜೆ ಬಂದು ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಸೂರಿ, ಇಂದು ಕುಡಿದು ಬಂದಾಗ ಹೊಸಬನಂತೆ ಕಾಣುತ್ತಿದ್ದ ಸೂರಿ, ಮತ್ತಿನ ಖುಷಿಯಲ್ಲಿ ದನಿಯೆತ್ತಿ ಹಾಡಿದ ಸೂರಿ, ನಂತರ ಹಳೆಯದನ್ನು ನೆನಪಿಸಿಕೊಂಡು ಚಿಕ್ಕ ಮಗುವಿನಂತೆ ಅಳತೊಡಗಿದ್ದ ಸೂರಿ, ಕೇವಲ ಒಂದು ತಿಂಗಳಿಂದ ಪರಿಚಯವಿರುವ ನನ್ನ ಬಳಿ ಅತ್ಯಾಪ್ತ ಗೆಳೆಯನ ಬಳಿ ಹೇಳಿಕೊಳ್ಳುವಂತೆ ತನ್ನ ಕತೆಯನ್ನೆಲ್ಲಾ ಹೇಳಿಕೊಂಡ ಸೂರಿ... ಊಹುಂ, ನನಗೆ ಆ ರಾತ್ರಿ ನಿದ್ರೆ ಬರಲೇ ಇಲ್ಲ...
***
ಹೊರಗೆ ಮಳೆ ನಿಂತಂತೆನಿಸುತ್ತದೆ. ಯಾವುದೋ ಕಂಪನಿಯ ಬ್ಯಾಲೆನ್ಸ್ ಶೀಟ್ ಮಾಡಲು ಕಂಪ್ಯೂಟರ್ ಮುಂದೆ ಕೂತ ನಾನು, ಏನೂ ಮಾಡದೇ ಹಳೆಯ ನೆನಪುಗಳಲ್ಲೇ ಮಗ್ನನಾಗಿ, ಯೋಚಿಸುತ್ತಾ ಅದರಲ್ಲೇ ಮುಳುಗಿಹೋಗಿಬಿಟ್ಟಿದ್ದೆ. ಬಾಗಿಲು ತೆರೆದು ಟೆರೇಸಿಗೆ ಬಂದು ಸಿಗರೇಟ್ ಹಚ್ಚಲು ಕಡ್ಡಿ ಗೀರಿದೆ. ಥೂ ಗಾಳಿ! ಕಡ್ಡಿ ಆರಿಹೋಯಿತು. ನಾನಿನ್ನೂ ಈ ಸಿಗರೇಟು ಸೇದಲು ಶುರು ಮಾಡಿ ಒಂದು ವಾರವಾಯಿತು. 'ಮೊದಮೊದಲು ಹೀಗೆಯೇ. ಆಮೇಲೆ ಫ್ಯಾನಿನ ಗಾಳಿಯ ಕೆಳಗೂ ಹಚ್ಚಬಹುದು!' ಗೆಳೆಯ ಹೇಳಿದ್ದು ನೆನಪಾಗಿ ಮತ್ತೊಂದು ಕಡ್ಡಿ ಗೀರಿದೆ. ಹೊತ್ತಿಕೊಂಡ ಸಿಗರೇಟಿನೊಡಲ ತಂಬಾಕಿನ ಹೊಗೆ ಫಿಲ್ಟರ್ ಆಗಿ ನನ್ನ ಬಾಯಿ, ಗಂಟಲ ನಾಳ, ಶ್ವಾಸಕೋಶವನ್ನೆಲ್ಲ ಆವರಿಸಿ, ಮೈ ಬೆಚ್ಚಗೆ ಮಾಡಿತು. ನೆನಪು, ಯೋಚನೆ ಮುಂದುವರೆಯಿತು.
ಆ ದಿನದ ಆ ಘಟನೆಯ ನಂತರ ಸೂರಿ ನನಗೆ ಆಪ್ತನಾಗಿ ಹೋದ. ನಾನೊಮ್ಮೆ ತುಷಾರಗಿರಿಗೆ ಪ್ರವಾಸ ಹೋಗಿದ್ದಾಗ ಸೂರಿಯ ಮನೆಗೆ ಹೋಗಿ ಬಂದಿದ್ದೆ. ಸೂರಿಯ ಅಮ್ಮ ನನ್ನ ಅಮ್ಮನಂತೆಯೇ ಕಂಡಿದ್ದಳು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸೂರಿಯ ಅಕ್ಕ, ಸೇವಾಸಾಗರದಲ್ಲಿ ಟೀಚರ್ ಆಗಿ ಕೆಲಸ ಮಾಡುವ ನನ್ನ ಅಕ್ಕನಿಗಿಂತ ಭಿನ್ನಳೆಂದು ಎನಿಸಲೇ ಇಲ್ಲ. 'ಈ ವರ್ಷ ಅಕ್ಕನಿಗೆ ಮದುವೆ ಮಾಡ್ಬೇಕು ಮಾರಾಯಾ' ಎಂದು ಸೂರಿ ಹೇಳುವಾಗ, ನನ್ನ ಮೇಲಿರುವ ಜವಾಬ್ದಾರಿಯ ನೆನಪಾಗುತ್ತಿತ್ತು.
ನಾನು ಪೀಜಿ ಬಿಟ್ಟು, ಸೂರಿಯ ಮೊಬೈಲು - ಜತೆಗೇ ನನ್ನ ನಂಬರು ಕಳೆದುಹೋಗಿ, ಅವನು ಬೇರೆ ನಂಬರು ತಗೊಂಡಿದ್ದರಿಂದ ಮತ್ತು, ನನ್ನದೂ ಸಿ.ಎ. ಫೈನಲ್ ಮುಗಿದು, ಭರ್ಜರಿ ಫಲಿತಾಂಶದೊಂದಿಗೇ ಪಾಸಾಗಿ, ನಂತರ ನನ್ನದೇ ಸ್ವಂತ ಆಫೀಸು ಎಂದೆಲ್ಲ ಮಾಡಿಕೊಂಡು, ಬೇರೆ ಕಡೆ ಮನೆ ಮಾಡಿಕೊಂಡು, ಸೂರಿ ಓಡಾಡುವ ಜಾಗಗಳೂ ನನ್ನ ವ್ಯವಹಾರ ಕಕ್ಷೆಯೂ ಬದಲಾಗಿಹೋದ್ದರಿಂದ ನನಗವನ ಸಂಪರ್ಕವೇ ಕಡಿದುಹೋಯಿತು. ಆದರೆ ನನಗೆ 'ಮೇರೇ ನಯನಾ...' ಹಾಡು ಕೇಳಿದಾಗಲೆಲ್ಲ ಸೂರಿ ನೆನಪಾಗುತ್ತಿದ್ದ. ಆ ರಾತ್ರಿ ನೆನಪಾಗುತ್ತಿತ್ತು. ನನ್ನನ್ನು ಪೀಜಿಯ ಆ ದಿನಗಳಿಗೆ ದಿಗ್ಗನೆ ಒಯ್ದು ಬಿಟ್ಟುಬಿಡಬಲ್ಲ ನೌಕೆಯಂತಾಗಿತ್ತು ಆ ಹಾಡು.
ಆಮೇಲೆ ನನ್ನ ಅಕ್ಕನ ಮದುವೆಯಾಯಿತು. ಈಗ ವರುಷದ ಹಿಂದೆ ನನ್ನ ಮದುವೆಯೂ ಆಯಿತು. ನನ್ನ ಹೆಂಡತಿ ಸಾಫ್ಟ್‌ವೇರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಾಳೆ. ಪ್ರತಿದಿನ ಕ್ಯಾಬ್ ಬಂದು ಅವಳನ್ನು ಕರೆದುಕೊಂಡು ಹೋಗುತ್ತದೆ, ವಾಪಸು ತಂದು ಬಿಡುತ್ತದೆ. ಬೆಳಗ್ಗೆ ಏಳಕ್ಕೆ ಹೋದವಳು ರಾತ್ರಿ ಎಂಟರ ಹೊತ್ತಿಗೆ ಸುಸ್ತಾಗಿ ಮನೆ ಸೇರುತ್ತಾಳೆ. ಒಮ್ಮೊಮ್ಮೆ ನೈಟ್ ಶಿಫ್ಟು ಬೇರೆ.
ಅವಳು ಕೆಲಸಕ್ಕೆ ಹೋಗುವುದು ನನ್ನ ಅಭಿಲಾಷೆಯೇನೂ ಆಗಿರಲಿಲ್ಲ. ಅವಳು ಮನೆಯಲ್ಲೇ ಅಡುಗೆ ಮಾಡಿಕೊಂಡು ಇದ್ದರೆ ಸಾಕು ಅಂತ ಇತ್ತು. ಆದರೆ ಆಕೆಯೇ ಇಷ್ಟಪಟ್ಟು, ಹಟ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು. 'ಮನೇಲಿ ಕೂತು ಏನ್ ಮಾಡ್ಲಿ? ಓದಿದ್ದೆಲ್ಲ ಸುಮ್ನೇನಾ? ಬರೀ ನಿಂಗೆ ಹೆಂಡತಿಯಾಗಿ ಇರಲಿಕ್ಕಾ?' ಅಂತ ಕೇಳಿದ ದಿನ ಜೀನ್ಸ್ ಪ್ಯಾಂಟು-ಟೈಟ್ ಟಾಪಿನಲ್ಲಿದ್ದ ಅವಳು ನನ್ನೆದುರಿಗೆ ದಿಟ್ಟವಾಗಿ ನಿಂತಿದ್ದಳು. ಅವಳಿಗೆ ಉತ್ತರಿಸಲಾಗದೇ ನಾನು ತತ್ತರಿಸಿದ್ದೆ.
ಅಂದು ನಾನೊಬ್ಬನೇ ಕೂತು ಚಿಂತಿಸಿದ್ದೆ: ಹೆಂಡತಿ ಕೆಲಸಕ್ಕೆ ಹೋಗಬಾರದೆಂದು ನಾನು ಬಯಸುತ್ತಿರುವುದಕ್ಕೆ ಕಾರಣ ನನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯೇ ಎಂದು. ನಾನು ಹುಟ್ಟಿದ, ಬೆಳೆದ ಪರಿಸರವೇ ಹಾಗಿತ್ತು. ಅಪ್ಪನಿಲ್ಲದೇ, ಅಮ್ಮನ ಆಜ್ಞಾರಾಧಕನಾಗಿಯೇ ಬೆಳೆದವ ನಾನು. ಮನೆಯಲ್ಲಿ ಬಡತನವಿದ್ದುದರಿಂದ ಮತ್ತು ಸಮಾಜ ನಮ್ಮನ್ನು ಬೇರೆಯೇ ಆಗಿ ನೋಡುತ್ತಿದ್ದುದರಿಂದ ನನಗೆ ಅಷ್ಟಾಗಿ ಜನಗಳ ಸಂಪರ್ಕವಿರಲಿಲ್ಲ. ನನ್ನ ಅಕ್ಕನನ್ನು ನೋಡಿ, ಓಹ್ ಹೆಣ್ಣುಮಕ್ಕಳೆಂದರೆ ಹೀಗಿರಬೇಕು ಎಂದುಕೊಂಡಿದ್ದೆ. ಕಷ್ಟಪಟ್ಟು, ನಿದ್ದೆಗೆಟ್ಟು ಓದಿ ಸಿ.ಎ. ಮುಗಿಸಿಕೊಂಡಿದ್ದೆ. ಸಿ.ಎ.ಯನ್ನು ಮೊದಲನೇ ಪ್ರಯತ್ನದಲ್ಲೇ ಪಾಸ್ ಮಾಡಿಕೊಳ್ಳಲಿಕ್ಕೆ ತಪಸ್ಸು ಬೇಕು. ನಾನದನ್ನು ಸಾಧಿಸಿದ್ದೆ. ಈಗ ನನ್ನದೇ ಆಫೀಸು ಮಾಡಿಕೊಂಡು, ನನಗೂ ಕ್ಲೈಂಟುಗಳು ಸಿಗತೊಡಗಿ, ಬದುಕಿನಲ್ಲಿ ಭದ್ರವಾಗಿ ನೆಲೆಯೂರಿ ನಿಲ್ಲಬೇಕು ಎಂದುಕೊಂಡು, ನಾನೂ ದುಡ್ಡು ಮಾಡತೊಡಗಿ... ಲೆಕ್ಕಾಚಾರದಿಂದ ಬದುಕುವುದೇ ಸರಿ ಎಂದುಕೊಳ್ಳುತ್ತಾ, ಟೂರು, ಪಾರ್ಟಿ, ಸಿನೆಮಾ, ಶಾಪಿಂಗು ಎಂದೆಲ್ಲ ದುಂದು ಮಾಡುವುದು ತಪ್ಪು ಎಂದೆಲ್ಲ ನನಗೆ ನಾನೇ ಅಂದುಕೊಂಡು...
ಆದರೆ ನನ್ನ ಹೆಂಡತಿ ನನಗೆ ತದ್ವಿರುದ್ಧ ಸ್ವಭಾವದವಳು. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ಒಬ್ಬಳೇ ಮಗಳಾದ್ದರಿಂದ ತಂದೆ-ತಾಯಿ ಅವಳಿಗೆ ಯಾವುದೇ ರೀತಿಯಲ್ಲಿ ಕಡಿವಾಣ ಹಾಕಿರಲಿಲ್ಲ. ಶಾಲೆ, ಕಾಲೇಜು, ಓಡಾಟ, ಓದು, ಖರ್ಚು ಇತ್ಯಾದಿಗಳ್ಯಾವುದಕ್ಕೂ 'ಕೇರ್' ಮಾಡದೇ, ತನಗೆ ಹೇಗೆ ಇಷ್ಟ ಬಂತೋ ಹಾಗೆ ಬದುಕಿದವಳು, ಬೆಳೆದವಳು. ನಮ್ಮ ಮದುವೆಯಾಗಿ ಒಂದು ವಾರವೂ ಕಳೆದಿರಲಿಲ್ಲ; ಅದೊಂದು ರಾತ್ರಿ ಆಕೆ 'ಏಯ್ ನಾವು ನಮ್ ನಮ್ಮ ಫಸ್ಟ್ ಲವ್‌ಗಳ ಬಗ್ಗೆ ಮಾತಾಡೋಣ್ವಾ ಇವತ್ತು?' ಅಂತ ಕೇಳಿದ್ದಳು. ಅವಳಿಗೆ ಹೈಸ್ಕೂಲಿನಲ್ಲೇ ಮೊದಲ ಪ್ರೇಮವಾಗಿತ್ತಂತೆ. ನಂತರ ಕಾಲೇಜಿನಲ್ಲಂತೂ ಇವಳಿಗೆ ಪ್ರಪೋಸ್ ಮಾಡಿದ್ದ ಹುಡುಗರ ಸಂಖ್ಯೆ ಲೆಕ್ಕಕ್ಕಿಲ್ಲವಂತೆ. ಇವಳೂ ಅವರಲ್ಲಿ ಸುಮಾರು ಹುಡುಗರ ಬಳಿ ಫ್ಲರ್ಟ್ ಮಾಡುತ್ತಾ ಸುತ್ತಾಡಿಕೊಂಡಿದ್ದಳಂತೆ. ಆದರೆ ನನ್ನ ಶಾಲೆ-ಕಾಲೇಜಿನ ದಿನಗಳಲ್ಲಿ ಇಂತಹ ಯಾವುದೇ ಅನುಭವಗಳಿಗೆ ನಾನು ಒಳಗಾಗಲೇ ಇಲ್ಲ. ಓದುವುದಕ್ಕಾಗಿಯೇ ಕಾಲೇಜಿಗೆ ಹೋಗುವುದು ಎಂದುಕೊಳ್ಳುತ್ತಿದ್ದೆ ಮತ್ತು ನಾನು ಸದಾ ನನ್ನ ಬಗ್ಗೆ ಕೀಳರಿಮೆಯಿಂದ ನರಳುತ್ತಿರುತ್ತಿದ್ದೆ.. 'ನಂಗೆ ಆ ಥರ ಫಸ್ಟ್ ಲವ್ವು ಸೆಕೆಂಡ್ ಲವ್ವು ಅಂತೆಲ್ಲ ಯಾರೂ ಇರ್ಲಿಲ್ಲ ಕಣೇ' ಎಂದು ನಾನೆಂದಾಗ 'ಥೂ! ಯು ಆರ್ ಎ ಟೇಸ್ಟ್‌ಲೆಸ್ ಫೆಲೋ!' ಎಂದು ದೂರಿದ್ದಳು ಆಕೆ. ಆಕೆಯ ಕನಸಿನ ಹುಡುಗ ಸಿಗರೇಟ್ ಸೇದುವವನಾಗಿದ್ದನಂತೆ, ಪಾರ್ಟಿಗಳಿಗೆ ತನ್ನನ್ನು ಕರೆದುಕೊಂಡು ಹೋಗಿ ಕುಡಿಯುತ್ತಿದ್ದನಂತೆ, ರಾಕ್ ಮ್ಯೂಸಿಕ್ಕಿಗೆ ಡಾನ್ಸ್ ಮಾಡುತ್ತಿದ್ದನಂತೆ.. 'ಮತ್ತೆ ಇದ್ಯಾವುದೂ ಇಲ್ಲದ ನನ್ನನ್ಯಾಕೆ ಮದುವೆಯಾಗಲಿಕ್ಕೆ ಒಪ್ಪಿದೆ?' ಅಂತ ನಾನು ಕೇಳಿದ್ದಕ್ಕೆ 'ನಾನೇನೂ ಮನಃಪೂರ್ವಕವಾಗಿ ಒಪ್ಪಿದ್ದಲ್ಲ. ಅಪ್ಪ-ಅಮ್ಮ ಹಟ ಮಾಡಿದರು ಅಂತ ಒಪ್ಪಿದೆ. ಅಲ್ಲದೇ ನೀನು ಇಷ್ಟೊಂದು ಪೇಲವ ವ್ಯಕ್ತಿತ್ವದ ಹುಡುಗ ಅಂತ ಗೊತ್ತಿರಲೂ ಇಲ್ಲ' ಎಂದು ಮುನಿದು ನುಡಿದಿದ್ದಳು.
ಆವೊತ್ತು ನನಗೆ ಸೂರಿ ತುಂಬಾ ತುಂಬಾ ನೆನಪಾಗಿದ್ದ.. ಅವಳಿಗೆ ನಿದ್ರೆ ಬಂದಮೇಲೆ ನಾನೊಬ್ಬನೇ ಎದ್ದು ಹೋಗಿ ಸೀಡಿ ಹುಡುಕಿ ಪ್ಲೇಯರಿಗೆ ಹಾಕಿ 'ಮೇರೇ ನಯನಾ' ಹಾಡು ಮತ್ತೊಮ್ಮೆ ಕೇಳಿದ್ದೆ. ಸಣ್ಣಕೆ ಬಿಕ್ಕಿದ್ದೆ, ಬೆಚ್ಚಿದ್ದೆ. ನಾನೊಬ್ಬ 'ಅಭಿರುಚಿಗಳೇ ಇಲ್ಲದ ಹುಡುಗ', 'ಪೇಲವ ವ್ಯಕ್ತಿತ್ವದ ಹುಡುಗ' ಎಂಬ ಅವಳ ಚುಚ್ಚುಮಾತು ಆಮೇಲಿಂದ ನನ್ನನ್ನು ಕೊರೆಯಲಾರಂಭಿಸಿತು. ಅಭಿರುಚಿಗಳನ್ನು ಹೇಗೆ ಬೆಳೆಸಿಕೊಳ್ಳುವುದು ಅರ್ಥವಾಗಲಿಲ್ಲ. ಆಮೇಲೆ ಅನ್ನಿಸಿತು: ಅವಳ ಕಾಲ್‌ಸೆಂಟರ್ ಕೆಲಸ, ಶಿಫ್ಟುಗಳು, ವಿದೇಶೀ ಜನಗಳೊಂದಿಗೆ ದಿನವೂ ಮಾತು-ವ್ಯವಹಾರ, ತರಹೇವಾರಿ ಗೆಳೆಯರು, ಡ್ರೆಸ್‌ಕೋಡ್, ಪಾರ್ಟಿ-ಔಟಿಂಗ್ ಅಂತ ಹೋಗುವುದು... ನನ್ನದೋ, ಪುಟ್ಟ ಆಫೀಸು, ಇದೇ ಬೆಂಗಳೂರಿನ ಅಷ್ಟಿಷ್ಟು ಸಣ್ಣ-ಪುಟ್ಟ ಕಂಪನಿಗಳ ಕ್ಲೈಂಟುಗಳು, ಇದೇ ಅಕೌಂಟ್ಸು, ಬಂದು-ಹೋಗುವ ಕನ್ನಡದಲ್ಲೇ ಮಾತನಾಡುವ ಜನಗಳು, ನೆಗಡಿಯಾದರೆ ಕಷಾಯ ಕುಡಿಯುವ ನಾನು... ಹೀಗೆ ಅವಳ ಪ್ರಪಂಚವೇ ಬೇರೆ, ನನ್ನ ಪ್ರಪಂಚವೇ ಬೇರೆ. ಆಕೆ ಮತ್ತು ನಾನು ಸಂಪೂರ್ಣ ಬೇರೆಯದೇ ಆದ ಅಭಿರುಚಿಗಳುಳ್ಳ, ನೆಲೆಗಳುಳ್ಳ, ದಾರಿಗಳುಳ್ಳ, ಕನಸುಗಳುಳ್ಳ ವ್ಯಕ್ತಿಗಳು-ಎಂದು. ಆದರೂ... ಆದರೂ... ನಾನೊಬ್ಬ ಅಭಿರುಚಿಗಳೇ ಇಲ್ಲದವನು, ಪೇಲವ ವ್ಯಕ್ತಿತ್ವದವನು ಎಂಬ ಅವಳ ಆಕ್ಷೇಪಣೆಗಳಿಗೆ ನಾನು ಎದುರುತ್ತರ ಹೇಳಲಾರದೇ ಹೋಗಿದ್ದೇನೆ. ನಾನು ಬದಲಾಗಬೇಕೆಂದು ತೀರ್ಮಾನಿಸಿದ್ದೇನೆ. ಆದರೆ ಆ ನನ್ನ ತೀರ್ಮಾನ ಸರಿಯೇ ತಪ್ಪೇ ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿದ್ದೇನೆ.
ಅವಳಿಗಾಗಿ ಬದಲಾಗಬೇಕೆಂದು ನಾನೇಕೆ ಹಂಬಲಿಸುತ್ತಿದ್ದೇನೆ? ನಾನೇಕೆ ಸಿಗರೇಟು ಸೇದುವುದನ್ನು ಕಲಿಯುತ್ತಿದ್ದೇನೆ? ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನನಗಿಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ನನ್ನ ಆದರ್ಶಗಳನ್ನು ಬಲಿ ಕೊಡುವುದು -ಇದೇ ನನ್ನ ಬದುಕಾಗಿ ಹೋಯಿತೇ?
ಸೂರಿ ಹೇಗೆ ಬದುಕಿನೊಂದಿಗೆ ರಾಜಿ ಮಾಡಿಕೊಂಡ? 'ಅವಳಿಲ್ಲದೆ ಬದುಕಿಲ್ಲ' ಎನ್ನುತ್ತಿದ್ದ ಸೂರಿ ಈಗ ಮತ್ಯಾವುದೋ ಹುಡುಗಿಯನ್ನು ಮದುವೆ ಮಾಡಿಕೊಂಡು, ಆಕೆಯೊಂದಿಗೆ ಪ್ರಪಂಚ ಸುತ್ತುತ್ತಾ, ಕೇಳಿದವರಿಗೆ 'ಮೈ ವೈಫ್' ಎಂದು ಪರಿಚಯಿಸಿಕೊಳ್ಳುವಷ್ಟರ ಮಟ್ಟಿಗೆ ಹೇಗೆ ಬದಲಾದ? ಹಾಗೆ ತನ್ನ ಮನಸ್ಸನ್ನು ಪರಿವರ್ತಿಸಿಕೊಳ್ಳಲು ಅವನು ಪಟ್ಟಿರಬಹುದಾದ ಪಾಡುಗಳೇನು? ಅಥವಾ ಯಾವುದೋ ಅನಿವಾರ್ಯತೆಗೆ ಸಿಕ್ಕಿ ಹೀಗಾದನೇ? ಬದುಕಿನಲ್ಲಿ ನಾವಂದುಕೊಂಡದ್ದು ಆಗದೇ ಮತ್ತಿನ್ನು ಹೇಗೋ ಬದುಕುವ ಸಂಭವ ಬಂದಾಗಲೆಲ್ಲ 'ಅಡ್ಜಸ್ಟ್‌ಮೆಂಟ್ಸ್ ಮ್ಯಾನ್' ಎಂದು ಹೇಳಿ ನುಣುಚಿಕೊಳ್ಳುವುದು ಬುದ್ಧಿವಂತಿಕೆಯಾ? ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುತ್ತ ಸಾಗುವುದೇ ಬದುಕಾ? ಪರಿಸ್ಥಿತಿಗೆ ತಕ್ಕಂತೆ ನಮ್ಮ ಜೀವನಶೈಲಿಯನ್ನು, ಕನಸುಗಳನ್ನು, ಆದರ್ಶಗಳನ್ನು ಬದಲಾಯಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ ಹೋಗುವುದೇ ಸರಿಯಾ? ಈಗ ನಾನೂ ಸೂರಿಯಂತೆ ಬದಲಾಗಬೇಕಿದೆಯಾ?
ಗೊತ್ತಿಲ್ಲ... ಸೂರಿಯೊಂದಿಗೇ ಕೂತು ಮಾತಾಡಬೇಕು ಈ ವಿಷಯವಾಗಿ. ಮುಂದಿನ ಭಾನುವಾರ ಅವನ ಮನೆಗೆ ಹೋಗಬೇಕು. ಅವರ ಮದುವೆಗೆ ಹೋಗಲಾಗದ್ದಕ್ಕೆ ಏನಾದರೂ ಉಡುಗೊರೆ ಒಯ್ಯಬೇಕು. ಆ ದಂಪತಿಗಳನ್ನು ನಮ್ಮ ಮನೆಗೆ ಕರೆಯಬೇಕು. ಅವನ ಬಳಿ ಇನ್ನೊಮ್ಮೆ ಆ ಹಾಡು ಹಾಡಿಸಬೇಕು...
ಮುಗಿಯಲು ಬಂದಿದ್ದ ಸಿಗರೇಟನ್ನು ಕಾಲಲ್ಲಿ ಹೊಸಕಿ ಹಾಕುತ್ತೇನೆ. ಮೊಬೈಲಿನ ರಿಮೈಂಡರಿನಲ್ಲಿ ಭಾನುವಾರದ ದಿನಾಂಕಕ್ಕೆ 'ವಿಸಿಟ್ ಸೂರಿ ಮನೆ' ಎಂದು ನೋಟ್ ಮಾಡಿಕೊಳ್ಳುತ್ತೇನೆ. ತಡವಾಗಿ ಬರುವ ಅವಳಿಗೆ ಅನುಕೂಲವಾಗಲೆಂದು ಮುಂಬಾಗಿಲನ್ನು ಕೀಯಿಂದ ಲಾಕ್ ಮಾಡಿ, ರೂಮಿಗೆ ಬಂದು ಹಾಸಿಗೆಯಲ್ಲಿ ಪವಡಿಸುತ್ತೇನೆ.
['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]
