Thursday, December 14, 2006

ಸುಗ್ಗಿ ವ್ಯಾಳ್ಯಾಗ...

ಅಹಹಹ ಚಳಿ...! ಮೈ ಕೊರೆಯುವ ಚಳಿ. ಗಡಗಡ ನಡುಗಿಸುವ ಚಳಿ. ಹಲ್ಲುಗಳನ್ನು ಕಟಕಟ ಅನ್ನಿಸುವ ಚಳಿ. ಮಾಘಿ ಚಳಿ. ಚಳಿ ಚಳಿ! ಬೆಂಗಳೂರಿನಲ್ಲಿ ಕಮ್ಮಗೆ ಚಳಿ ಬಿದ್ದಿದೆ.

ಊರಿನಲ್ಲಿ ಸುಗ್ಗಿ ಶುರುವಾಗಿದೆಯಂತೆ. ಪ್ರತಿ ವರ್ಷವೂ ಹೀಗೆಯೇ. ಚಳಿ ಬೀಳುತ್ತಿದ್ದಂತೆಯೇ ಸುಗ್ಗಿಯೂ ಶುರುವಾಗುತ್ತದೆ. ಚಳಿಗಾಲ ಶುರುವಾಗುತ್ತಿದ್ದಂತೆಯೇ ಅಡಿಕೆಕಾಯಿಗಳು ಬೆಳೆದು ಹಣ್ಣಾಗಿ ಉದುರಲಾರಂಭಿಸುತ್ತವೆ. ಚಾಲಿ ಮಾಡುವ ಆಲೋಚನೆ ಇದ್ದವರು ಸ್ವಲ್ಪ ತಡವಾಗಿ ಕೊನೆ ಕೊಯ್ಲು ಶುರುಮಾಡುತ್ತಾರೆ. ಕೆಂಪಡಿಕೆ ಮಾಡುವವರು, ಚಳಿ ಬೀಳುತ್ತಿದ್ದಂತೆಯೇ, ಒಂದೆರಡು ಮರಗಳಲ್ಲಿ ಹಣ್ಣಡಿಕೆಗಳು ಉದುರಲು ಶುರುವಿಡುತ್ತದ್ದಂತೆಯೇ, ಅಡಿಕೆ ಬೆಳೆದದ್ದು ಗೊತ್ತಾಗಿ ಕೊನೆಕಾರನಿಗೆ ಬರಲು ಹೇಳಿಬಿಡುತ್ತಾರೆ.

ಈಗ ಚಾಲಿ ಅಡಿಕೆಗೆ ರೇಟ್ ಇಲ್ಲವಾದ್ದರಿಂದ ಕೆಂಪಡಿಕೆ ಮಾಡುವವರೇ ಜಾಸ್ತಿ. ಅಲ್ಲದೇ, ಅಡಿಕೆ ಹಣ್ಣಾಗಿ, ಆಮೇಲೆ ಅದನ್ನು ಒಣಗಿಸಿ, ಆಮೇಲೆ ಸುಲಿಸಿ, ಮಂಡಿಗೆ ಒಯ್ದು ಹಾಕಿ... ಅಷ್ಟೆಲ್ಲಾ ಆಗಲಿಕ್ಕೆ ಮತ್ತೆರಡು-ಮೂರು ತಿಂಗಳು ಕಾಯಬೇಕು. ಅಲ್ಲಿಯವರೆಗೆ ಕಾಯುವ ಚೈತನ್ಯವಿದ್ದವರು ಕಾಯುತ್ತಾರೆ. ಆದರೆ ಅರ್ಧ-ಒಂದು ಎಕರೆ ತೋಟ ಇರುವವರಿಗೆ ಅಷ್ಟೊಂದು ಕಾಯಲಿಕ್ಕೆ ಆಗುವುದಿಲ್ಲ. ಏಕೆಂದರೆ ಈಗಾಗಲೇ 'ಕೈ' ಖಾಲಿಯಾಗಿರೊತ್ತೆ. ಮಂಡಿಯವರು 'ಇನ್ನು ಅಡಿಕೆ ತಂದು ಹಾಕುವವರೆಗೂ ದುಡ್ಡು ಕೊಡುವುದಿಲ್ಲ' ಅಂದಿರುತ್ತಾರೆ. ಆದ್ದರಿಂದ, ಅಡಿಕೆ ಬೆಳೆಯುತ್ತಿದ್ದಂತೆಯೇ ಕೊಯ್ಲು ಮಾಡಿ, ಕೆಂಪಡಿಕೆ ಮಾಡಿ, ಮಂಡಿಗೆ ಸಾಗಿಸಿ, ಸುಗ್ಗಿ ಮುಗಿಸಿಕೊಂಡುಬಿಡುತ್ತಾರೆ ಬಹಳಷ್ಟು ಬೆಳೆಗಾರರು.

ಸುಗ್ಗಿ ಸಾಮಾನ್ಯವಾಗಿ ದೀಪಾವಳಿಯ ಎಡ-ಬಲಕ್ಕೆ ಬರುತ್ತದೆ. ಅಂಗಳದಲ್ಲಿ ಬೆಳೆದಿದ್ದ ಕಳೆ-ಜಡ್ಡನ್ನೆಲ್ಲಾ ಕೆತ್ತಿಸಿ ಚೊಕ್ಕು ಮಾಡಿ 'ದೊಡ್ಡಬ್ಬಕ್ಕೂ ಆತು - ಸುಗ್ಗಿಗೂ ಆತು' ಅನ್ನುವುದರೊಂದಿಗೆ ಸುಗ್ಗಿಯ ಪೂರ್ವಭಾವಿ ಸಿದ್ಧತೆಗಳು ಆರಂಭವಾಗುತ್ತವೆ. ತೋಟದಲ್ಲಿ ಗೋಟಡಿಕೆಗಳು ಬೀಳುವುದು ಶುರುವಾಯಿತೆಂದರೆ ಅಪ್ಪ ಕೊನೆಕಾರನಿಗೆ ಹೇಳಿ ನಮ್ಮ ಮನೆಯ ಕೊಯ್ಲಿನ 'ಡೇಟ್ ಫಿಕ್ಸ್' ಮಾಡಿಕೊಂಡು ಬರುತ್ತಾನೆ. ಸರಿ, ಹೇಳಿದ ದಿನ ಕೊನೆಕಾರ ತನ್ನ ಊದ್ದನೆಯ ದೋಟಿ, ನೇಣಿನ ಹಗ್ಗ, ಕಡಿಕೆ ಮಣೆ.. ಎಲ್ಲಾ ಹಿಡಿದುಕೊಂಡು, ತನ್ನ ಸೈಕಲ್ಲನ್ನು ತಳ್ಳಿಕೊಂಡು, ತನ್ನ ಜೊತೆ ಮತ್ತೆ ನಾಲ್ಕಾರು ಜನ ಆಳುಗಳನ್ನು ಕರೆದುಕೊಂಡು ಬೆಳಗ್ಗೆ ೮.೩೦ಕ್ಕೆಲ್ಲ ಬಂದುಬಿಡುತ್ತಾನೆ. ಆಳುಗಳಲ್ಲಿ ಹೆಣ್ಣಾಳು-ಗಂಡಾಳು ಇಬ್ಬರೂ ಇರುತ್ತಾರೆ. ಕೆಲವೊಮ್ಮೆ ಕೊನೆಕಾರ ತನ್ನ ಮಕ್ಕಳನ್ನೂ ಕರೆತರುವುದುಂಟು. ಈ ಮಕ್ಕಳು ತಮ್ಮ ತಾಯಂದಿರ ಜೊತೆ ಕೊನೆಕಾರ ಉದುರಿಸಿದ ಅಡಿಕೆಗಳನ್ನು ಒಟ್ಟುಮಾಡುತ್ತಾರೆ. ದೊಡ್ಡವರು, ಗಂಡಸರು ಕೊನೆಯನ್ನು ಕಲ್ಲಿ / ಹೆಡಿಗೆಯಲ್ಲಿ ತುಂಬಿ ತೋಟದಿಂದ ಮನೆಯ ಅಂಗಳಕ್ಕೆ ಹೊತ್ತು ತಂದು ಹಾಕುತ್ತಾರೆ. ಇವರಲ್ಲೇ ಒಬ್ಬ ನೇಣು (ಮಿಣಿ) ಹಿಡಿಯುತ್ತಾನೆ.

ಕೊನೆಕಾರ ತನ್ನ ಬಟ್ಟೆಗಳನ್ನೆಲ್ಲಾ ಕಳಚಿ, ಕೇವಲ ಲಂಗೋಟಿ, ಹಾಳೆಟೊಪ್ಪಿ ಮತ್ತು ಕೊರಳಿಗೊಂದು ಹಾಳೆಯ ಪಟ್ಟಿಯನ್ನು ನೇತುಬಿಟ್ಟುಕೊಂಡು ಮರ ಹತ್ತುತ್ತಾನೆ. ಒಮ್ಮೆ ಬೀಡಿ ಎಳೆದು ಮರ ಹತ್ತಿದನೆಂದರೆ ಸುತ್ತಮುತ್ತಲಿನ ಎಲ್ಲಾ ಮರಗಳ ಕೊನೆಗಳನ್ನೂ, ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುತ್ತಾ, ಕೊಯ್ದು ಮುಗಿಸಿಬಿಡುತ್ತಾನೆ.

ಅಪ್ಪ, ಹತ್ತೂ ವರೆ ಹೊತ್ತಿಗೆ, ಅಮ್ಮನ ಬಳಿ ಚಹ ಮಾಡಿಸಿಕೊಂಡು ಒಂದು ಗಿಂಡಿಯಲ್ಲಿ ತುಂಬಿಕೊಂಡು, ಒಂದು ದೊಡ್ಡ ಕ್ಯಾನಿನಲ್ಲಿ ನೀರು ತುಂಬಿಕೊಂಡು, ಸ್ವಲ್ಪ ಬೆಲ್ಲವನ್ನೂ ತಗೊಂಡು, ತೋಟಕ್ಕೆ ಧಾವಿಸುತ್ತಾನೆ. ಅಪ್ಪನ ಜೊತೆ, ಮೂರನೇ ಕ್ಲಾಸಿಗೆ ಹೋಗುವ ಪುಟ್ಟನೂ ಬರುತ್ತಾನೆ. ಈ ಪುಟ್ಟ 'ಇವತ್ತು ಕೊನೆಕೊಯ್ಲು' ಅಂತ ಹೇಳಿ ಮೇಷ್ಟ್ರಿಂದ ರಜೆ ಪಡೆದು ಬಂದಿದ್ದಾನೆ. ಅಪ್ಪ, 'ಕೊನೆ ಕೊಯ್ಯದು ಅವ್ವು, ಇಲ್ಲಿ ಅಡುಗೆ ಮಾಡದು ಅಮ್ಮ, ನಿಂಗೆಂತಾ ಕೆಲ್ಸ? ಸುಮ್ನೇ ಶಾಲಿಗೆ ಹೋಗದು ಬಿಟ್ಟು.. ಸರಿ, ಬಾ ತೋಟಕ್ಕೆ, ಒಂದು ಹೆಡಿಗೆ ಹೊರುಸ್ತಿ, ಹೊತ್ಕಂಡು ಬರ್ಲಕ್ಕಡ..' ಅನ್ನುತ್ತಲೇ ಮಗನನ್ನೂ ಕರೆದುಕೊಂಡು ತೋಟಕ್ಕೆ ಹೊರಟಿದ್ದಾನೆ. 'ಅಪ್ಪ ತಮಾಷೆಗೆ ಹೇಳ್ತಿದ್ದಾನೆ' ಅಂತ ಗೊತ್ತಿದ್ದರೂ ಪುಟ್ಟನಿಗೆ ಒಳಗೊಳಗೇ ಭಯ. ಅಂವ ಸುಮ್ಮನೆ ಅಪ್ಪನನ್ನು ಹಿಂಬಾಲಿಸಿದ್ದಾನೆ. ಸಾರ ದಾಟುವಾಗ, ಕೆಳಗೆ ಹರಿಯುತ್ತಿದ್ದ ನೀರಿನಲ್ಲಿ ಮೀನು ನೋಡಲು ಹೋಗಿ, ಒಮ್ಮೆ ಓಲಾಡಿ, ಮೈಯೆಲ್ಲಾ ನಡುಗಿ, ಅಪ್ಪನ ಕೈ ಹಿಡಕೊಂಡಿದ್ದಾನೆ.

'ನಿಧಾನಕ್ಕೆ ಕಾಲ್ಬುಡ ನೋಡ್ಕ್ಯೋತ ಬಾ, ಹಾವು-ಹುಳ ಇರ್ತು... ಮೇಲೆ ನೋಡಡ, ಕಣ್ಣಿಗೆ ಕಸ ಬೀಳ್ತು' ಎಂದೆಲ್ಲಾ ಪುಟ್ಟನಿಗೆ ಅಪ್ಪ 'ಇನ್‍ಸ್ಟ್ರಕ್ಷನ್ಸ್' ಕೊಡುತ್ತಾ ಬರುತ್ತಿದ್ದಾನೆ. ಕೊನೆ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದಂತೆಯೇ ನೇಣು ಹಿಡಿಯುತ್ತಿದ್ದ ಮಾದೇವ 'ಓಹೋ.. ಸಣ್ ಹೆಗಡೇರು ಬಂದ್ಬುಟ್ಯಾರೆ.. ಏನು ಸಾಲಿಗೆ ಹೋಗ್ನಲ್ಲಾ?' ಎಂದಿದ್ದಾನೆ. ಪುಟ್ಟ ಮೇಲೆ ನೋಡಿದರೆ ಕೊನೆಕಾರ ಒಂದು ಕೋತಿಯಂತೆ ಕಾಣಿಸುತ್ತಾನೆ. ಅಂವ ಒಂದು ಮರದಿಂದ ಒಂದು ಮರಕ್ಕೆ ಹಾರಿದಾಕ್ಷಣ ಮರ ಸುಂಯ್ಯನೆ ತೂಗುತ್ತಾ ವಾಪಸು ಬರುವುದನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಅಪ್ಪ ಈಗಾಗಲೆ ಎಷ್ಟು ಕೊಯ್ದಾಗಿದೆ, ಆಚೆ ತುಂಡಿಗೆ ಹೋಗಲಿಕ್ಕೆ ಇನ್ನೂ ಎಷ್ಟು ಹೊತ್ತು ಬೇಕು, ಇವತ್ತು ಆಚೆ ಬಣ್ಣ ಮುಗಿಯಬಹುದೇ, ಈ ವರ್ಷ ಕೊನೆಯಲ್ಲಿ 'ಹಿಡಿಪು' ಇದೆಯೇ, ಅಥವಾ ಪೀಚೇ? -ಅಂತೆಲ್ಲಾ ನೋಡಿಕೊಂಡು, ಲೆಕ್ಕ ಹಾಕಿಕೊಂಡು, ಪುಟ್ಟನೊಂದಿಗೆ ಮನೆಗೆ ಮರಳುತ್ತಾನೆ. ಅದಾಗಲೇ ಮನೆಯ ಅಂಗಳದಲ್ಲಿ ಕೊನೆ, ಉದುರಡಿಕೆಗಳನ್ನು ತಂದು ಸುರಿದು ಅಂಗಳದ ತುಂಬಾ ಸುಗ್ಗಿಯ ಕಳೆ ತುಂಬಿರುತ್ತದೆ.

ಅಮ್ಮ ಕೊನೆಕೊಯ್ಲಿನವರಿಗಾಗಿಯೇ ಇವತ್ತು ಚಿತ್ರಾನ್ನ ಮಾಡುತ್ತಾಳೆ. ರವೆ ಉಂಡೆ ಮಾಡುತ್ತಾಳೆ. ಅಪ್ಪ ನಾಲ್ಕು ಬಲಿಷ್ಟ ಕೊನೆಗಳನ್ನು ತಂದು ದೇವರ ಮುಂದಿಟ್ಟು, ತನಗಿನ್ನೂ ಸ್ನಾನವಾಗದೇ ಇದ್ದುದರಿಂದ 'ಆನು ಇವತ್ತು ಸಂಜೆ ಸ್ನಾನ ಮಾಡ್ತಿ; ನೀನೇ ಒಂಚೂರು ಪೂಜೆ ಮಾಡ್ಬುಡೇ' ಎಂದು ಅಮ್ಮನ ಬಳಿ ಹೇಳುತ್ತಾನೆ. ಅಮ್ಮ, ದೇವರಿಗೂ, ಅಡಿಕೆ ಕೊನೆಗಳಿಗೂ ಕುಂಕುಮ-ಗಿಂಕುಮ ಹಾಕಿ, ಊದುಬತ್ತಿ ಹಚ್ಚಿ ಪೂಜೆ ಮಾಡುತ್ತಾಳೆ. ತುಪ್ಪದ ದೀಪ ಹಚ್ಚಿಟ್ಟು, 'ನಮ್ಮನೆ ಅಡಿಕೆಗೆ ಈ ವರ್ಷ ಒಳ್ಳೇ ರೇಟು ಸಿಗ್ಲಿ ದೇವ್ರೇ' ಎಂದು ಪ್ರಾರ್ಥಿಸುತ್ತಾಳೆ. ಶುಭ್ರವಾಗಿ ಬೆಳಗುತ್ತದೆ ದೇವರ ಗೂಡಿನಲ್ಲಿ ದೀಪ.

ಮಧ್ಯಾಹ್ನ ಒಂದೂ ವರೆ ಹೊತ್ತಿಗೆ ಕೊನೆ ಹೊರುವ ಒಬ್ಬ ಆಳು, ಅಮ್ಮ 'ಇಲ್ಲೇ ಹಾಕ್ತೀನಿ ಊಟ ಮಾಡ್ರೋ' ಅಂದರೂ ಕೇಳದೇ, 'ತ್ವಾಟದಾಗೇ ಉಣ್ತೀನಿ ಅಮ್ಮಾವ್ರೇ' ಅಂತಂದು, ಚಿತ್ರಾನ್ನ-ರವೆ ಉಂಡೆ-ನೀರು ಇತ್ಯಾದಿಗಳನ್ನೆಲ್ಲಾ ತೋಟಕ್ಕೆ ಒಯ್ದುಬಿಡುತ್ತಾನೆ. ಅವರು ಅಲ್ಲಿ ತೋಟದ ತಂಪಿನಲ್ಲಿ ಊಟ ಮಾಡುತ್ತಿರಬೇಕಾದರೆ ಇಲ್ಲಿ ಅಪ್ಪ-ಅಮ್ಮ-ಪುಟ್ಟ ಮನೆಯಲ್ಲಿ ಉಂಡು ಮುಗಿಸುತ್ತಾರೆ.

ಸಂಜೆ ಐದೂ ವರೆ ಹೊತ್ತಿಗೆ ಅವತ್ತಿನ ಕೊಯ್ಲು ಮುಗಿಸಿ ಆಳುಗಳೆಲ್ಲಾ ತೋಟದಿಂದ ಮರಳುತ್ತಾರೆ. 'ಕೊನೆ, ಉದುರು ಏನನ್ನೂ ತೋಟದಲ್ಲಿ ಬಿಟ್ಟಿಲ್ಲ ತಾನೆ?' ಅಂತ ಅಪ್ಪ ಕೇಳುತ್ತಾನೆ. ಆಮೇಲೆ ಅವತ್ತು ಕೊಯ್ದ ಕೊನೆಗಳನ್ನು ಎಣಿಸಬೇಕು. ಏಕೆಂದರೆ ಕೊನೆಕಾರನಿಗೆ 'ಪೇಮೆಂಟ್' ಮಾಡುವುದು ಕೊನೆಯ ಲೆಕ್ಕದ ಮೇಲೆ. 'ಒಂದು ಕೊನೆಗೆ ಇಷ್ಟು' ಅಂತ. ಲೆಕ್ಕವೆಲ್ಲ ಮುಗಿದ ಮೇಲೆ, ಅಪ್ಪ 'ಲೆಕ್ಕದ ಪುಸ್ತಕ'ದಲ್ಲಿ ನಮೂದಿಸಿಯಾದ ಮೇಲೆ, ಆಳುಗಳು ನಾಳೆ ಬೆಳಗ್ಗೆ ಬರುವುದಾಗಿ ಹೇಳಿ ಹೊರಟುಹೋಗುತ್ತಾರೆ.

ಮುಂದಿನ ಕೆಲಸವೆಂದರೆ, ಉದುರಡಿಕೆಯಲ್ಲಿ ಗೋಟು-ಹಸಿರಡಿಕೆಗಳನ್ನು 'ಸೆಪರೇಟ್' ಮಾಡುವುದು. ಬೇಗಬೇಗ ಮಾಡಬೇಕು. ಏಕೆಂದರೆ ಇನ್ನು ಸ್ವಲ್ಪೇ ಹೊತ್ತಿಗೆ ಅಡಿಕೆ ಸುಲಿಯುವವರು ಬಂದುಬಿಡುತ್ತಾರೆ. ಈ ಕೆಲಸಕ್ಕೆ ಅಮ್ಮ, ಪುಟ್ಟ ಎಲ್ಲರೂ ಕೈಜೋಡಿಸುತ್ತಾರೆ -ಅಪ್ಪನ ಜೊತೆ. ಉದುರಡಿಕೆಯೇ ಸಾಕಷ್ಟಿರುವುದರಿಂದ ಇವತ್ತು ಕೊನೆ ಬಡಿಯುವುದೇನು ಬೇಡ. ನಾಳೆ ಆಳಿಗೆ ಬರಲಿಕ್ಕೆ ಹೇಳಿ ಬಡಿಸಿದರಾಯಿತು.

ಈಗ ಅಡಿಕೆ ಸುಲಿಯುವವರು ಬಂದಿದ್ದಾರೆ. ಜ್ಯೋತಿ ಬಂದ್ಲು, ಜಲಜ ಬಂದ್ಲು, ಸುಮಿತ್ರ ಬಂದ್ಲು, ಬಾಕರ ಬಂದ... ಎಲ್ಲರೂ ತಮ್ಮ ಮೆಟಗತ್ತಿಯನ್ನು (ಮೆಟ್ಟುಗತ್ತಿ) ಮಣೆಗೆ ಬಡಿದು ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ. ಅಪ್ಪ ಅಂಗಳಕ್ಕೆ ಒಂದು ತಾತ್ಕಾಲಿಕ ವೈರೆಳೆದು ನೂರು ಕ್ಯಾಂಡಲಿನ ಬಲ್ಬು ಹಾಕಿ ಬೆಳಕು ಮಾಡಿಕೊಟ್ಟಿದ್ದಾನೆ. ಈಗ ಅಂಗಳದಲ್ಲಿ 'ಕ್ಚ್ ಕ್ಚ್ ಕಟ್ ಕಟ್' ಶಬ್ದ ಶುರುವಾಗಿದೆ. ರಾತ್ರಿ ಒಂಬತ್ತರವರೆಗೆ ಸುಲಿದು, ಗಿದ್ನ (ಅಥವಾ ಡಬ್ಬಿ) ಯಲ್ಲಿ ಅಳೆದು, ಲೆಕ್ಕದ ಪುಸ್ತಕದಲ್ಲಿ ಬರೆಸಿ, ಅವರೆಲ್ಲ ಮನೆಗೆ ಹೋಗುತ್ತಾರೆ. (ಕೆಲವೊಂದು ಊರುಗಳಲ್ಲಿ ರಾತ್ರಿ-ಬೆಳಗು ಸುಲಿಯುತ್ತಾರೆ) ನಂತರ, ಸುಲಿದ ಅಡಕೆಯ ಬುಟ್ಟಿಗಳನ್ನು ಅಪ್ಪ-ಅಮ್ಮ ಇಬ್ಬರೂ ಆಚೆ-ಈಚೆ ಹಿಡಿದುಕೊಂಡು ಮನೆಯೊಳಗೆ ತಂದು ಇಡುತ್ತಾರೆ. ಇವತ್ತು ಹೆಚ್ಚು ಅಡಿಕೆ ಆಗಿಲ್ಲವಾದ್ದರಿಂದ, ನಾಳೆ ಎಲ್ಲಾ ಸೇರಿ ಬೇಯಿಸಿದರಾಯಿತು ಅಂದುಕೊಂಡಿದ್ದಾನೆ ಅಪ್ಪ.

ಮರುದಿನ ಮತ್ತೆ ಕೊನೆಕೊಯ್ಲು, ಅಡಿಕೆ ಸುಲಿಯುವುದು ನಡೆಯುತ್ತದೆ. ಅಪ್ಪ ಅಂಗಳದಲ್ಲೇ ಒಂದು ಮೂಲೆಯಲ್ಲಿ ಅಡಿಕೆ ಬೇಯಿಸುವುದಕ್ಕೆ ದೊಡ್ಡ ಎರಡು ಜಂಬಿಟ್ಟಿಗೆ ಕಲ್ಲುಗಳಿಂದ ಒಲೆ ಹೂಡುತ್ತಾನೆ. ಅದರ ಮೇಲೆ ಹಂಡೆ ತಂದಿಡುತ್ತಾನೆ. ರಾತ್ರಿ ಅಡಿಕೆ ಸುಲಿಯುವವರು ಹೋದಮೇಲೆ ಅಪ್ಪ ಒಲೆಗೆ ಬೆಂಕಿ ಕೊಟ್ಟು, ಹಂಡೆಯಲ್ಲಿ ನೀರು ಸುರಿದು, ಕಳೆದ ವರ್ಷದ ತೊಗರು (ಅಡಿಕೆ ಬೇಯಿಸಿಯಾದ ಮೇಲೆ ಉಳಿಯುವ ಕೆಂಪಗಿನ ನೀರು; 'ಚೊಗರು' ಅಂತಲೂ ಕೆಲವಡೆ ಕರೆಯುತ್ತಾರೆ) ಉಳಿದಿದ್ದರೆ ಅದನ್ನು ಸ್ವಲ್ಪ 'ಮಿಕ್ಸ್' ಮಾಡಿ, ಬುಟ್ಟಿಗಳಲ್ಲಿನ ಸುಲಿದ ಅಡಿಕೆಗಳನ್ನು ತಂದು ಸುರಿಯುತ್ತಾನೆ. ಚಳಿ ಕಾಯಿಸಲಿಕ್ಕೆ ಈ ಅಡಿಕೆ ಬೇಯಿಸುವ ಒಲೆ ಹೇಳಿ ಮಾಡಿಸಿದಂತಿರುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ಗಣಪತಣ್ಣ, ಪಕ್ಕದ ಕಣವನ್ನು ಕಾಯಲು ಬರುವ ಮಾಬ್ಲಜ್ಜ ಎಲ್ಲರೂ ಈ ಒಲೆಯೆಡೆಗೆ ಆಕರ್ಷಿತರಾಗಿ ಒಬ್ಬೊಬ್ಬರೇ ಬರುತ್ತಾರೆ... 'ಹೂಂ, ಈ ವರ್ಷ ಏನು ಭಾರೀ ತೇಜಿ ಕಾಣ್ತಲೋ.. ಶ್ರೀಪಾದನ ಮನೆ ಅಡಿಕೆ ಹನ್ನೆರಡು ಸಾವ್ರಕ್ಕೆ ಹೋತಡ..' ಎನ್ನುತ್ತಾ ಮಾಬ್ಲಜ್ಜ ಕವಳ ಉಗಿದು, ಅಂಗಳದ ಮೂಲೆಗೆ ಹೋಗಿ ವಂದಕ್ಕೆ ಕೂರುತ್ತಾನೆ. 'ಓಹ..? ಆದ್ರೂ ನಮ್ಮನೆ ಅಡಿಕೆ ರೆಡಿಯಾಗ ಹೊತ್ತಿಗೆ ಎಂತಾಗ್ತೇನ' ಎನ್ನುತ್ತಾನೆ ಅಪ್ಪ. 'ಹೂಂ, ಜಾಸ್ತಿ ತೆರಿಬೆಟ್ಟೆ ಬರ್ಲೆ ಅಲ್ದಾ?' ಅನ್ನುತ್ತಾನೆ ನಾರಣಣ್ಣ ಬುಟ್ಟಿಯಲ್ಲಿದ್ದ ಅಡಿಕೆಯಲ್ಲಿ ಒಮ್ಮೆ ಕೈಯಾಡಿಸಿ. 'ಏನಂದ್ರೂ ಇನ್ನೂ ನಾಕು ಒಬ್ಬೆ ಆಗ್ತೇನ' ಅನ್ನುತ್ತಾನೆ ಗಣಪತಣ್ಣ. ಅಷ್ಟೊತ್ತಿಗೆ ಲಕ್ಷ್ಮೀ ಬಸ್ಸು ನಿಂತುಹೋದ ಸದ್ದು ಕೇಳಿಸುತ್ತದೆ. 'ಬಸ್ಸಿಗೆ ಯಾರೋ ಬಂದ ಕಾಣ್ತು.' 'ಹೂಂ, ಯಾರು ಬಂದ್ರೂ ಇನ್ನು ಎರಡು ನಿಮಿಷದಾಗೆ ಗೊತ್ತಾಗ್ತಲ..' 'ಯಾರೋ ಪ್ಯಾಂಟು-ಶರಟು ಹಾಕ್ಯಂಡವರ ಥರ ಕಾಣ್ತಪ.. ಸ್ಟ್ರೀಟ್‍ಲೈಟ್ ಬೆಳಕಗೆ' 'ಓ, ಹಂಗರೆ ಪಟೇಲರ ಮನೆ ಗಣೇಶನೇ ಸಯ್ಯಿ ತಗ..!' ಅವರ ಹರಟೆ ಮುಂದುವರಿಯುತ್ತದೆ. ಅಮ್ಮ ಎಲ್ಲರಿಗೂ ಕಷಾಯ ಮಾಡಿಕೊಟ್ಟು, ತಾನು ಮಲಗಲು ಕೋಣೆಗೆ ಹೋಗುತ್ತಾಳೆ. ಪುಟ್ಟ ಅದಾಗಲೇ ನಿದ್ದೆ ಹೋಗಿರುತ್ತಾನೆ.

ಕೊನೆಕೊಯ್ಲು ಮೂರ್ನಾಲ್ಕು ದಿನಗಳ ವರೆಗೆ ಮುಂದುವರೆಯುತ್ತದೆ: ತೋಟದ ವಿಸ್ತೀರ್ಣವನ್ನು ಅವಲಂಭಿಸಿ. ಬೇಯಿಸಿದ ಅಡಿಕೆಯನ್ನು ಚಾಪೆ (ಅಥವಾ ತಟ್ಟಿ)ಯ ಮೇಲೆ ಒಣಗಿಸಲಾಗುತ್ತದೆ. ಒಳ್ಳೆಯ ಬಿಸಿಲಿದ್ದರೆ ಐದಾರು ದಿನಗಳಲ್ಲಿ ಅಡಿಕೆ ಒಣಗುತ್ತದೆ. ಈ ಮಧ್ಯೆ ತೆರಿಬೆಟ್ಟೆ-ಗೋಟಡಿಕೆಗಳನ್ನು ಹೆರೆಯುವುದು, ಇತ್ಯಾದಿ ಕೆಲಸಗಳು ನಡೆದಿರುತ್ತವೆ. ಒಣಗಿದ ಅಡಿಕೆಯನ್ನು ದೊಡ್ಡ ಗೋಣಿಚೀಲಗಳಲ್ಲಿ ತುಂಬಿ ಅಪ್ಪ ಬಾಯಿ ಹೊಲೆಯುತ್ತಾನೆ. ಸುಬ್ಬಣ್ಣನ ಮನೆ ವ್ಯಾನು ಪೇಟೆಗೆ ಹೋಗುವಾಗ ಅದರಲ್ಲಿ ಹೇರಿ ಮಂಡಿಗೆ ಸಾಗಿಸಲಾಗುತ್ತದೆ. ವ್ಯಾಪಾರಿಗಳು ಒಳ್ಳೆಯ ರೇಟು ನಿಗಧಿಪಡಿಸಿದ ದಿನ ಅಪ್ಪ ಅದನ್ನು ಕೊಡುತ್ತಾನೆ.

ಎಷ್ಟೇ ಮುಂಚೆ ಕೊಯ್ಲು ಮಾಡಿಸಿ ಕೆಂಪಡಿಕೆ ಮಾಡಿದ್ದರೂ ಸಹ ಒಂದಷ್ಟು ಅಡಿಕೆ ಹಣ್ಣಾಗಿರುತ್ತದಾದ್ದರಿಂದ ಅವು ಅಂಗಳದಲ್ಲಿ ಒಣಗುತ್ತಿರುತ್ತವೆ. ಸುಮಾರು ನಲವತ್ತು ದಿನಗಳಲ್ಲಿ ಅದೂ ಒಣಗುತ್ತದೆ. ಆಮೇಲೆ ಅದನ್ನು ಸುಲಿಸಿ ಮಂಡಿಗೆ ಕಳಿಸಲಾಗುತ್ತದೆ.

ಹೀಗೆ ಅಡಿಕೆ ಬೆಳೆಗಾರ ಹವ್ಯಕರ ಮನೆಗಳಲ್ಲಿ ಸುಗ್ಗಿಯೆಂದರೆ ಹಬ್ಬವೇ. ಆ ಒಂದಷ್ಟು ದಿನ ಗುದ್ದಾಡಿಕೊಂಡು ಬಿಟ್ಟರೆ, ಒಳ್ಳೆಯ ಬೆಲೆಗೆ ಅಡಿಕೆ ಮಾರಾಟವಾಗಿಬಿಟ್ಟರೆ, ಉಳಿದಂತೆ ಇಡೀ ವರ್ಷ ಆರಾಮಾಗಿರಬಹುದು. ತೋಟಕ್ಕೆ ದಿನಕ್ಕೊಮ್ಮೆ ಹೋಗಿ-ಬಂದು ಮಾಡಿಕೊಂಡು ಇದ್ದರೆ ಆಯಿತು. ಮಳೆಗಾಲದಲ್ಲಿ ಒಮ್ಮೆ ಗೊಬ್ಬರ ಹಾಕಿಸಬೇಕು. ಮಳೆ ಮುಗಿದಮೇಲೆ ಕಳೆ ತೆಗೆಸಬೇಕು. ಅಷ್ಟೇ! ಉಳಿದಂತೆ ಅಡಿಕೆ ಬೆಳೆಗಾರನ ಜೀವನವೆಂದರೆ ಸುಖಜೀವನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಲೆ ಸಿಕ್ಕಾಪಟ್ಟೆ ಏರುಪೇರು ಆಗುತ್ತಿರುವುದರಿಂದ, ಮತ್ತು ಮಳೆ ಸರಿಯಾಗಿ ಆಗದೆ ಸಿಂಗಾರ ಒಣಗುವುದರಿಂದ, ಮರಗಳೇ ಸಾಯುತ್ತಿರುವುದರಿಂದ, ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು. ಮಳೆ ಸರಿಯಾಗಿ ಆಗಿ, ಅಡಿಕೆಗೆ ಒಳ್ಳೆಯ ರೇಟ್ ಬಂದು, ಬರೆಯದಿರುವಂತೆ ಆದರಂತೂ ಒಳ್ಳೆಯದೇ!

Wednesday, November 29, 2006

ಕೀರ್ವಾಣಿಯ ಮದುವೆ ಸುದ್ದಿ ಕೇಳಿ...

ನಿನ್ನೆ ಮನೆಗೆ ಫೋನ್ ಮಾಡಿದ್ದಾಗ ಅಮ್ಮ 'ಅವಳ' ಮದುವೆ ಫಿಕ್ಸಾಗಿರುವ ಸುದ್ದಿ ಹೇಳಿದಳು. ತಕ್ಷಣ ನನ್ನ ನೆನಪಿನಾಳದಿಂದ ಹರಿದು ಬಂತಲ್ಲ ನೀರು..?

ನಾನು ನನ್ನ ಹೈಸ್ಕೂಲು ಓದಿದ್ದು ನಮ್ಮೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ನಿಸರಾಣಿಯ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯಲ್ಲಿ. ಏಳನೇ ತರಗತಿ ಮುಗಿದದ್ದೇ ನನ್ನನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಬೇಕು ಎಂದು ಅನೇಕರು ಸಲಹೆಯಿತ್ತರಾದರೂ ನನ್ನ ಅಪ್ಪ ಅದಕ್ಕೆ ಮನಸು ಮಾಡಲಿಲ್ಲ. 'ಓದೋವ್ರಿಗೆ ಎಲ್ಲಾದರೆ ಏನು? ನಿಸರಾಣಿ ಶಾಲೆಯಲ್ಲಿ ತುಂಬಾ ಚೆನ್ನಾಗಿ ಪಾಠ ನಡೆಯುತ್ತೆ. ಮೇಷ್ಟ್ರುಗಳೆಲ್ಲ ನಮ್ಮವರೇ. ನಾವೆಲ್ಲ ಹಿಂದೆ ಓದಿದ್ದು ಅಲ್ಲೇ ಅಲ್ವೇನು? ಅಲ್ಲಿ ಓದಿದ ಎಷ್ಟೊಂದು ಜನ ಈಗ ಎಲ್ಲೆಲ್ಲೋ ದೊಡ್ಡ ದೊಡ್ಡ ಕೆಲಸದಲ್ಲಿ ಇಲ್ವೇನು?' ಅಂತೆಲ್ಲಾ ಮಾತುಕತೆಯಾಗಿ ನಾನು ನಿಸರಾಣಿ ಶಾಲೆಗೇ ಸೇರುವುದು ಅಂತ ಆಯ್ತು. ಇಂಗ್ಲೀಷ್ ಮೀಡಿಯಂ ಶಾಲೆ ಎಂದರೆ ಸಾಗರದಲ್ಲಿತ್ತು. ದಿನವೂ ಓಡಾಡುವುದು ತೊಂದರೆ. ಅಲ್ಲದೆ ನಾನು ಆಗ ತುಂಬಾ ಚಿಕ್ಕವನಿದ್ದೆ ಬೇರೆಯವರಿಗೆ compare ಮಾಡಿದ್ರೆ. ಹೀಗಾಗಿ, 'ಇಂವ ಸಾಗರದ ಭಯಂಕರ ಟ್ರಾಫಿಕ್ಕಿನ (!) ರಸ್ತೆಯಲ್ಲಿ ಓಡಾಡಿ ಜಯಿಸಿಕೊಂಡು ಬರುವುದು ಸುಳ್ಳೇ ಸರಿ, ಬ್ಯಾಡೇ ಬ್ಯಾಡ ಸಾಗರ, ಇಲ್ಲೇ ನಿಸರಾಣಿಗೆ ಹೋಗಲಿ ಸಾಕು' ಅಂತ ಅಮ್ಮ ಅಜ್ಜಿಯರೂ ಸೇರಿಸಿದರು. ಅಲ್ಲಿಗೆ ಸರಿಯಾಯಿತು. ನನಗಂತೂ ಆಗ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಸಾಗರವಾದರೆ ಸಾಗರ, ನಿಸರಾಣಿಯಾದರೆ ನಿಸರಾಣಿ ಅಂತ ಇದ್ದವನು ನಾನು.

ಸರಿ, ನನ್ನನ್ನು ನಿಸರಾಣಿಯ ಶಾಲೆಗೆ ಸೇರಿಸಿದರು. ನಾನು ದಿನವೂ ನಾಲ್ಕು ಮೈಲು ಸೈಕಲ್ಲು ಹೊಡೆಯತೊಡಗಿದೆ. ಏರಲ್ಲೂ ಇಳಿಯದೇ ತುಳಿಯುತ್ತಿದ್ದೆ. ನನ್ನ ಜೊತೆ ಅಣ್ಣಪ್ಪ, ದುರ್ಗಪ್ಪರೇ ಮೊದಲಾದ ಸಹೃದಯ ಗೆಳೆಯರು ಸಿಕ್ಕಿದರು. ಈ ಲೋಕಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದ ಮಾತುಗಳನ್ನು ಲೋಕಾಭಿರಾಮವಾಗಿ ಆಡುತ್ತಾ ಸಾಗುತ್ತಿದ್ದರೆ ಶಾಲೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.

ನಿಸರಾಣಿ ಶಾಲೆ ಹಿಂದೊಂದು ಕಾಲದಲ್ಲಿ ತುಂಬಾ ಚೆನ್ನಾಗಿದ್ದ ಶಾಲೆ. ಇಡೀ ಸೊರಬ ತಾಲೂಕಿಗೆ, ಅಷ್ಟೇ ಏಕೆ, ಜಿಲ್ಲೆಯಲ್ಲೇ ಹೆಸರು ಮಾಡಿದ್ದ ಶಾಲೆ. ನಿಸರಾಣಿ ಹೈಸ್ಕೂಲಿನಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿಕೊಂಡು ಬಂದವರಿಗೆ ಯಾವ ಕಾಲೇಜಿನವರೂ ಸೀಟಿಲ್ಲ ಅನ್ನುತ್ತಿರಲಿಲ್ಲ. ಅಲ್ಲಿಯ ವಿಜ್ಞಾನ ಕೊಠಡಿಯಲ್ಲಿ ಇರುವ ಉಪಕರಣಗಳು ಮತ್ಯಾವುದೇ ಉತ್ತಮ ಶಾಲೆಗೆ ಹೋಲಿಸಬಹುದಾದಷ್ಟಿದ್ದವು. ಆಗ ಶಿಕ್ಷಕವರ್ಗವೂ ಹಾಗೆಯೇ ಇತ್ತು. ನನ್ನ ಅಪ್ಪ, ಅತ್ತೆಯರೆಲ್ಲರೂ ಓದಿದ್ದು ಅದೇ ಶಾಲೆಯಲ್ಲಿ. ನನ್ನ ಅಜ್ಜ ಶಾಲೆಯ ಪಕ್ಕ ಒಂದು ಕ್ಯಾಂಟೀನೂ ಇಟ್ಟಿದ್ದನಂತೆ.

ಆದರೆ ನಾನು ಸೇರುವ ಹೊತ್ತಿಗೆ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. Retirement ಸಮೀಪಿಸಿದ್ದ ಶಿಕ್ಷಕವರ್ಗ. ಯಾವ ಮೇಷ್ಟ್ರಿಗೂ ಪಾಟ ಮಾಡಬೇಕು ಅನ್ನುವ ಹುಮ್ಮಸ್ಸೇ ಇರಲಿಲ್ಲ. ಕೆಲ ಹಳೆಯ ಶಿಕ್ಷಕರು ಮತ್ತು ಆಗ ತಾನೇ ಸೇರಿದ್ದ ಒಂದಿಬ್ಬರು ಯುವ ಶಿಕ್ಷಕರನ್ನು ಬಿಟ್ಟರೆ ಉಳಿದವರೆಲ್ಲ ಕಾಟಾಚಾರಕ್ಕೆ ಶಾಲೆಗೆ ಬರುತ್ತಿದ್ದವರೇ. ನಮ್ಮ ಕನ್ನಡ ಪಂಡಿತರು ಕ್ಲಾಸಿಗೆ ಬಂದು ನಮಗೆ ಓದಿಕೊಳ್ಳಲು ಹೇಳಿ ತಾವು ಕಾಫಿಪುಡಿ ಲೆಕ್ಕ ಬರೆಯುತ್ತಾ ಕುಳಿತುಬಿಡುತ್ತಿದ್ದರು. ಹೆಡ್‍ಮಾಸ್ತರಂತೂ ಬಾಯಿ ತುಂಬಾ ಜರದಾ ತುಂಬಿಕೊಂಡು ಬರುತ್ತಿದ್ದರು. 'ಕೆಲವೊಂದು ದಿನ ಕುಡಿದುಕೊಂಡೇ ಬರ್ತಾರೆ' ಎಂದು ಕೆಲ ಗೆಳೆಯರು ಮೂದಲಿಸುತ್ತಿದ್ದರಾದರೂ ನನಗೆ ಆಗ ಅಷ್ಟೆಲ್ಲ ಮೂಗು ಚುರುಕಿರಲಿಲ್ಲ, ಮೇಲಾಗಿ ತಿಳಿಯುತ್ತಲೂ ಇರಲಿಲ್ಲ.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಲಗಡೆಯ ಬೆಂಚುಗಳಲ್ಲಿ, ಗಂಡುಮಕ್ಕಳು ಎಡಗಡೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಧ್ಯದಲ್ಲಿ ಓಡಾಡಲಿಕ್ಕೆ ದಾರಿ. ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಪರಸ್ಪರ ಮಾತನಾಡುವುದನ್ನು ನಿಷೇಧಿಸಲಾಗಿತ್ತು. ನಾವು ಗೆಳೆಯರು ಕಾರಿಡಾರಿನಲ್ಲಿ ಗುಂಪಾಗಿ ಮಾತನಾಡುತ್ತ ನಿಂತಿದ್ದಾಗ ಹುಡುಗಿಯರು ಬಂದರೆ 'ಹುಡುಗ್ರು ದಾರಿ ಬಿಡ್ಬೇಕು!' ಅಂತ ಹೇಳುತ್ತಿದ್ದರು. ನಾವು ಆ 'ಸಶರೀರವಾಣಿ'ಗೆ ಹೆದರಿ ತಕ್ಷಣ ಪಕ್ಕಕ್ಕೆ, ಅಂಗಳಕ್ಕೆ ಇಳಿದುಬಿಡುತ್ತಿದ್ದೆವು. ಯಾರಾದರೂ ಹುಡುಗರು ಕೀಟಲೆ ಮಾಡಿದರೆ ಹುಡುಗಿಯರು ಹೋಗಿ class teacherಗೆ complaint ಮಾಡುತ್ತಿದ್ದರು. ಹೀಗಾಗಿ ಹುಡುಗಿಯರೆಡೆಗೆ ನಮಗೆ ಒಂದು ತರಹದ ಭಯಮಿಶ್ರಿತ ದ್ವೇಷವಿತ್ತು.

ಆದರೆ ದ್ವೇಷವಿದ್ದಲ್ಲೇ ಪ್ರೀತಿ ಮೊಳೆಯುವ ಸಂಭವಗಳು ಜಾಸ್ತಿ. ನಮಗೆ ಅಷ್ಟೆಲ್ಲಾ restrictions ಇದ್ದರೂ ಹುಡುಗಿಯರೆಡೆಗೆ ಒಂದು 'ಹುಡುಗಸಹಜ'ವಾದ ಕುತೂಹಲ ಇದ್ದೇ ಇತ್ತು. ಸಿನಿಮಾ-ಗಿನಿಮಾ ನೋಡಿ ಅಷ್ಟಿಷ್ಟು ಪ್ರೀತಿ-ಪ್ರೇಮಗಳ ಬಗ್ಗೆ ಅರಿತಿದ್ದ ನಾವು, ನಮ್ಮ ನಮ್ಮ ಹೀರೋಯಿನ್ನುಗಳಿಗಾಗಿ ತಲಾಷೆ ನಡೆಸಿದ್ದೆವು. ಚಂದದ ಹುಡುಗಿಯನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನು ತಲೆಯಲ್ಲಿಟ್ಟುಕೊಳ್ಳದೇ ಮಾಸಿಕ ಟೆಸ್ಟುಗಳಲ್ಲಿ ಫೇಲಾಗುವ ಕಲೆಯನ್ನು ಅದಾಗಲೇ ಸಿದ್ಧಿಸಿಕೊಂಡಿದ್ದೆವು. 'ನನಗೆ ಆ ಹುಡುಗಿ, ನಿನಗೆ ಈ ಹುಡುಗಿ' ಎಂಬಂತೆ ನಮ್ಮನಮ್ಮಲ್ಲೇ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ ನಾವು, ಈ ವಿಷಯ ಮಾತ್ರ ಆ ಹುಡುಗಿಯರಿಗಾಗಲೀ, ಮೇಷ್ಟ್ರುಗಳಿಗಾಗಲೀ, ಮುಖ್ಯವಾಗಿ ನಮ್ಮ ತಂದೆ-ತಾಯಿಯರಿಗಾಗಲೀ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದೆವು.

ಏಳುತ್ತಾ ಬೀಳುತ್ತಾ ಅಂತೂ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬಂದಿದ್ದೆವು. ಶಾಲೆ ಬಿಟ್ಟುಹೋಗುವಾಗ ಆಟೋಗ್ರಾಫ್ ಬರೆಸಿಕೊಳ್ಳಬೇಕು ಅಂತಾಯಿತು. ಮನೆಯಲ್ಲಿ ಅಣ್ಣ-ಅಕ್ಕಂದಿರನ್ನು ಹೊಂದಿದ ಕೆಲ ಗೆಳೆಯರು ಈ ಬಗ್ಗೆ ಸ್ವಲ್ಪ ಜ್ಞಾನವುಳ್ಳವರಾಗಿದ್ದರು. ಏಕೆಂದರೆ ಅವರು ತಮ್ಮ ಅಣ್ಣ-ಅಕ್ಕಂದಿರು ಶಾಲೆ ಬಿಡುವಾಗ ಬರೆಸಿಕೊಂಡ ಆಟೋಗ್ರಾಫ್ ಪುಸ್ತಕಗಳನ್ನು ನೋಡಿದ್ದರು. ಹಾಗಾದರೆ ನಾವೂ ಬರೆಸಬೇಕು ಅಂತಾಯಿತು. ಅಲ್ಲದೇ ನಮ್ಮ ಆಟೋಗ್ರಾಫ್ ಪುಸ್ತಕದವನ್ನು ಹುಡುಗಿಯರಿಗೆ ಕೊಟ್ಟು (ಕೊಡುವಾಗ ಸಿಗಬಹುದಾದ ಅವರ ಹಸ್ತಸ್ಪರ್ಷವನ್ನು ಅನುಭವಿಸುವ ಅಭಿಲಾಷೆ ಇರುವಷ್ಟು ವಯಸ್ಸಾಗಿರಲಿಲ್ಲ ನಮಗೆ), ಅವರು ನಮಗೆ ಏನು ಬರೆದುಕೊಡುತ್ತಾರೆ ಎಂದು ನೋಡುವ ಕುತೂಹಲ ಬೇರೆ! ಸರಿ, ಬರೆಸಬೇಕು, ಅದಕ್ಕಿಂತ ಮುಂಚೆ ಆಟೋಗ್ರಾಫ್ ಪುಸ್ತಕವನ್ನು ತರಬೇಕಲ್ಲ? ಸೊರಬ ಪೇಟೆಯಿಂದ ತರುವುದು ಎಂದಾಯಿತು. ಅದಕ್ಕಾಗಿ ಸೊರಬ ಪೇಟೆಯ ಬಗ್ಗೆ ತಿಳಿದಿದ್ದ ಎರಡು ಹುಡುಗರು ಮುಂದೆಬಂದರು. ಆಟೋಗ್ರಾಫ್ ಬರೆಸುವ ಹುಕಿ ಇದ್ದವರೆಲ್ಲಾ ಅವರಿಗೆ ದುಡ್ಡು ಕೊಟ್ಟೆವು. ಒಂದು ಶನಿವಾರ ಅವರು ರಾಘವೇಂದ್ರ ಬಸ್ಸಿಗೆ ಸೊರಬಕ್ಕೆ ಹೋಗಿ ಆಟೋಗ್ರಾಫ್ ಪುಸ್ತಕಗಳನ್ನು ತಂದೇಬಿಟ್ಟರು!

ಬಣ್ಣದ ಕವರನ್ನು ಹೊದ್ದುಕೊಂಡಿದ್ದ ಈ ಪುಟ್ಟ ಆಟೋಗ್ರಾಫ್ ಪುಸ್ತಕ ನೋಡಲಿಕ್ಕೇ ಖುಷಿಯಾಗುವಂತಿತ್ತು. ಅದರೊಳಗೆ ಸ್ಕೆಚ್‍ಪೆನ್ನಿನಿಂದ ನನ್ನ ಹೆಸರು ಬರೆದೆ. 'ಸ್ನೇಹವೇ ಸಂಪದ' ಅಂತ ಮೊದಲ ಪುಟದಲ್ಲಿ ನನ್ನ artistic styleನಲ್ಲಿ ಬರೆದೆ. ನಾನು ಬರೆದಿದ್ದನ್ನು ನೋಡಿದ ನನ್ನ ಕೆಲ ಗೆಳೆಯರು ತಮಗೂ ಬರೆದುಕೊಡುವಂತೆ ಕೋರಿದರು. ಚಾಕ್ಲೇಟಿನ ಆಮಿಷ ಒಡ್ಡಿದರು. ಅವರಿಗೂ ಬರೆದುಕೊಟ್ಟೆ. ಅಂತೂ ಸುಂದರವಾಗಿದ್ದ ಪುಸ್ತಕವನ್ನು ಸಿಂಗಾರ-ಬಂಗಾರ ಮಾಡಿ ಮತ್ತಷ್ಟು ಸುಂದರಗೊಳಿಸಿ ಸುಂದರ ಹುಡುಗಿಯರ ಕಡೆಗೆ ವರ್ಗಾಯಿಸಿ 'ಎಲ್ಲರೂ ಬರ್ದುಕೊಟ್ಬಿಡಿ' ಅಂದು ಕೃಥಾರ್ತನಾದೆ!

ಹುಡುಗಿಯರು ಎಲ್ಲರೂ ಬರೆದುಕೊಡುವುದಕ್ಕೆ ಮೂರು ದಿನ ತೆಗೆದುಕೊಂಡರು. ಈ ಮಧ್ಯೆ ನಾವೂ ಅವರು ಕೊಟ್ಟ ಪುಸ್ತಕಗಳಿಗೆ ನಮ್ಮ ಆಟೋ ಬರೆಯುವದರಲ್ಲಿ ಬ್ಯುಸಿಯಾಗಿದ್ದೆವು. ಎಲ್ಲೆಲ್ಲೋ ತಡಕಾಡಿ ಹೊಂದಿಸಿದ ಸಾಲುಗಳನ್ನು, ಕೆಲವರಿಗೆ ನಮ್ಮದೇ 'own' ವ್ಯಾಕ್ಯೆಗಳನ್ನೂ, ಹಿತವಚನಗಳನ್ನೂ ಬರೆದುಕೊಟ್ಟದ್ದಾಯ್ತು. ಮೂರು ದಿನಗಳ ನಂತರ ಎಲ್ಲಾ ಹುಡುಗಿಯರೂ ಬರೆದಾದಮೇಲೆ ನನ್ನ ಆಟೋಗ್ರಾಫ್ ಬುಕ್ಕು ಕೈಗೆ ವಾಪಸು ಬಂತು. ಬಂದಮೇಲೆ ಅದನ್ನು ಅಲ್ಲಿಯೇ ಬಿಚ್ಚಿ ನೋಡಲಾದೀತೆ? ಎಲ್ಲಾ ಗೆಳೆಯರೂ ಮುತ್ತಿಕೊಂಡಿರುತ್ತಿದ್ದರು. ಅಕಸ್ಮಾತಾಗಿ ಯಾವುದಾದರೂ ಹುಡುಗಿ 'ಏನಾದ್ರೂ' ಬರೆದುಕೊಟ್ಟುಬಿಟ್ಟಿದ್ದರೆ....? ಹಾ! ಇಷ್ಟೆಲ್ಲಾ ಹುಡುಗರ ಎದುರಿಗೆ ಅದನ್ನು ಓಪನ್ನು ಮಾಡಲು ಮನಸಾಗದೆ (ಅಥವಾ ಧೈರ್ಯ ಸಾಲದೆ), ಮನೆಗೆ ಬಂದು, ಕೋಣೆ ಸೇರಿಕೊಂಡು, ಬೆಚ್ಚಗೆ ಕುಳಿತು ಬಿಚ್ಚಿ ನೋಡಿದೆ...

ಆದರೆ excite ಆಗುವಂತಹ ಯಾವ ಆಟೋಗ್ರಾಫೂ ಅದರಲ್ಲಿ ನನಗೆ ಕಾಣಲಿಲ್ಲ. 'ಪರೀಕ್ಷೆ ಎಂಬ ಯುದ್ಧದಲ್ಲಿ, ಪೆನ್ನು ಎಂಬ ಖಡ್ಗ ಹಿಡಿದು...' ಎಂಬಿತ್ಯಾದಿ ಪರೀಕ್ಷೆಯನ್ನು ನೆನಪಿಸಿ ಭಯ ಹುಟ್ಟಿಸುತ್ತಿದ್ದ ಆಟೋಗಳೂ, 'ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ನಶ್ವರವಾಗುವ ಈ ದೇಹಕ್ಕೆ ಸ್ನೇಹವೊಂದೇ ಶಾಶ್ವತ' ಎಂಬಿತ್ಯಾದಿ ಸ್ನೇಹಪರ ಸಾಲುಗಳೂ, 'ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ಉಳಿಯುವ ನೆನಪೇ ಸ್ನೇಹ' ಎಂಬಂತಹ ಗಜಾನನ ಬಸ್ಸಿನ ಹಿಂದಿನಿಂದ ಕದ್ದ ಸಾಲುಗಳೂ, 'Life is a game, play it!' ಎಂದು ಜೀವನವನ್ನು ಆಟಕ್ಕೆ ಹೋಲಿಸಿ ನಮ್ಮನ್ನು confuse ಮಾಡುವಂತಹ ಸಾಲುಗಳೂ ಇದ್ದವು. ಅದರಲ್ಲಿ ಸಹಸ್ರಾರು spelling mistakeಗಳೂ, ಕಾಟು-ಚಿತ್ತುಗಳೂ ಇದ್ದವು. ಎಲ್ಲಕ್ಕಿಂತ ಬೇಜಾರಾದ ಸಂಗತಿಯೆಂದರೆ ಎಲ್ಲಾ ಹುಡುಗಿಯರೂ ಮೊದಲ ಸಾಲಿನಲ್ಲಿ 'ಪ್ರಿಯ ಸಹೋದರನಾದ .....ನಿಗೆ' ಅಂತಲೋ 'My dear brother ....' ಅಂತಲೋ ಶುರುಮಾಡಿರುತ್ತಿದ್ದುದು. ನಾನು ಆಶಾಭಂಗವಾದವನಂತೆ ಸುಮ್ಮನೆ ಪುಟ ತಿರುವುತ್ತಾ ಮುನ್ನಡೆದೆ.

ಆದರೆ ಮತ್ತೆ ಮೂರ್ನಾಲ್ಕು ಪುಟಗಳನ್ನು ತಿರುವುತ್ತಿದ್ದಂತೆ ನನಗೆ ಒಂದು ಆಘಾತ ಕಾದಿತ್ತು. ಬೇರೆಲ್ಲಾ ಆಟೋಗಳಂತೆಯೇ 'My dear brother ....' ಅಂತಲೇ ಅದು ಶುರುವಾಗಿತ್ತಾದರೂ, ಅದರ ಮುಂದಿನ ಸಾಲುಗಳು ನನ್ನನ್ನು ತಬ್ಬಿಬ್ಬು ಮಾಡುವಂತಿದ್ದವು. ಅದನ್ನು ಯಥಾವತ್ತಾಗಿ, ಅದರ spelling mistakeಗಳ ಜೊತೆಗೆ, ಇಲ್ಲಿ ಕೊಡುತ್ತಿದ್ದೇನೆ:

"You are in mine heart like photograph
Then wat yuo to write in my autougraph

Your loving,

........."

ಮುಗಿಯಿತಲ್ಲಪ್ಪಾ? ನಮಗೋ, ಆಗ ಈ ಇಂಗ್ಲೀಷ್ ಭಾಷೆಯೆಂದರೆ ಭಯವಾಗುತ್ತಿದ್ದಂತಹ ಕಾಲ. ನಾವು ಅದನ್ನು ಪರಕೀಯ ಭಾಷೆಯೆಂದು ಪರಿಗಣಿಸಿ ಹೊರಗಿಟ್ಟಿದ್ದ ಕಾಲ. ಇಂಗ್ಲೀಷ್ ಟೀಚರ್ರು ಸಹ ನಮಗೆ ಪ್ರಿಯರಾಗಿರಲಿಲ್ಲ. ಇಂಗ್ಲೀಷ್ ಟೀಚರ್ರು ನಮಗೆ ಪಾಠ ಕಲಿಸಲು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ; ನಮಗೇ ಅವರ ಮೇಲೆ ಕರುಣೆ ಉಕ್ಕುವಷ್ಟು. ಹುಡುಗಿಯರೂ ಏನು ಇಂಗ್ಲೀಷಿನಲ್ಲಿ ಚುರುಕಾಗಿರಲಿಲ್ಲ. ಈ ಆಟೋಗ್ರಾಫ್ ಬರೆದುಕೊಟ್ಟ ಹುಡುಗಿಯೂ ಅದಕ್ಕೆ ಹೊರತಾಗಿರಲಿಲ್ಲ. ಅದು ಅವಳು ಸ್ವತಃ ರಚಿಸಿದ ಆಟೋಗ್ರಾಫ್ ಆಗಿರಲಿಕ್ಕಂತೂ ಶಕ್ಯವೇ ಇರಲಿಲ್ಲ. ಬಹುಶಃ ತನ್ನ ಅಕ್ಕನ ಆಟೋಗ್ರಾಫ್ ಪುಸ್ತಕದಿಂದ ಕದ್ದ ವಾಕ್ಯವಿರಬೇಕು. ಏನೇ ಆಗಿರಲಿ. ನಾನು ಅದನ್ನು ಹೀಗೆ ಅರ್ಥ ಮಾಡಿಕೊಂಡೆ:

"ನೀನು ನನ್ನ ಹೃದಯದಲ್ಲಿ ಒಂದು ಚಿತ್ರದಂತೆ ಇದ್ದೀಯ;
ಇನ್ನು ನೀನು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಏನು ಬರೆಯುತ್ತೀಯ ಎಂದು ಕಾಯುತ್ತಿರುತ್ತೇನೆ" !!!

ಅಬ್ಬ! ಅರ್ಥವಾದದ್ದೇ ನಾನು ಬೆವೆಯತೊಡಗಿದೆ...! ಮತ್ತೆ ಮತ್ತೆ ಓದಿಕೊಂಡೆ.. ಕೊನೆಯಲ್ಲಿ 'Your loving' ಅಂತ ಬೇರೆ! ಸೆಖೆ ಜಾಸ್ತಿಯಾಯಿತು. ಮನೆಯಲ್ಲಿ ಫ್ಯಾನ್ ಬೇರೆ ಇರಲಿಲ್ಲ.. ಆಟೋಗ್ರಾಫ್ ಪುಸ್ತಕವನ್ನು ರಪ್ಪನೆ ಮುಚ್ಚಿಟ್ಟು ಮನೆಯಿಂದ ಹೊರಬಿದ್ದೆ.. ತಂಗಾಳಿ ಸೋಕಿ ಮೈಪುಳಕವಾಯಿತು.. ದೂರದ ಸ್ಟ್ರೀಟ್‍ಲೈಟ್‍ನ ಬೆಳಕು ನನ್ನ ಮೈಮೇಲೆ ಬೀಳುತ್ತಿತ್ತು.. ಆ ಬೆಳಕಿನಲ್ಲಿ ಅಂತೂ ಒಂದು ಹುಡುಗಿಯನ್ನು 'ಬೀಳಿಸಿಕೊಂಡ' ನನ್ನ ಬಾಡಿಯನ್ನೇ ನೋಡಿಕೊಂಡೆ.. ನನಗೂ ಒಬ್ಬ ಹುಡುಗಿ.. ನನಗೂ ಒಬ್ಬ ಹೀರೋಯಿನ್..! ಇನ್ನು ನಾನೂ-ಅವಳೂ ಹಾಡು ಹೇಳುತ್ತಾ ಮರ ಸುತ್ತುತ್ತಾ.... ಅಷ್ಟರಲ್ಲಿ... ಅಮ್ಮ ಮನೆಯ ಒಳಗಿಂದ ಕೂಗಿದಳು: 'ಓದ್‍ಕ್ಯಾ ಅಂದ್ರೆ ಅದೇನು ಅಂಗಳದಲ್ಲಿ ಸುತ್‍ತಾ ಇದೀಯ? ಒಳಗೆ ಬಂದು ಓದ್‍ಕ್ಯಾ..!' ಆಹ್! ನಾನು ದುಃಸ್ವಪ್ನ ಕಂಡವನಂತೆ ಕಲ್ಪನಾಲೋಕದಿಂದ ಹೊರಬಂದೆ. ಮನೆಯ ಒಳಬಂದೆ. ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಕರಗುತ್ತಿರುವ, ಕೊರಗುತ್ತಿರುವ ಆ ಹುಡುಗಿಯ ಬಗ್ಗೆ ಪ್ರೀತಿಯುಂಟಾಯಿತು.. ಆದರೆ ಫಕ್ಕನೆ ಭಯವಾಯಿತು.. ಏನಾದ್ರೂ ಈ ವಿಷಯ ಮನೆಯವರಿಗೆ ಗೊತ್ತಾದ್ರೆ? ಹೋಗಲಿ, ಅವಳ ಮನೆಯಲ್ಲಿ ಈ ಬಗ್ಗೆ ಗೊತ್ತಿದೆಯಾ? ಗೊತ್ತಾದರೆ, ಅವಳ ಅಣ್ಣ ನನ್ನನ್ನು ಹೊಡೆಯಲಿಕ್ಕೆ ಅಂತ ಬಂದ್ರೆ? ...ನಾನು ಫೈಟ್ ಮಾಡಿ.. ಅವನನ್ನು ಮಾರಣಾಂತಿಕ ಗಾಯಗಳಿಗೆ ತುತ್ತುಮಾಡಿ... ಪೋಲೀಸರು ಬಂದು ನನಗೆ ಕೋಳ ಹಾಕಿ... ಸಿನಿಮಾಗಳಲ್ಲಿ ಆಗುವಂತೆ ನಿಜಜೀವನದಲ್ಲೂ ಆಗುತ್ತದೆ ಅಂದುಕೊಂಡೆ.. ಈ ರಗಳೆಗಳೆಲ್ಲ ಬೇಡವೇ ಬೇಡ, ಪ್ರೀತಿ-ಪ್ರೇಮಗಳಿಗೆಲ್ಲ ಗೋಲಿ ಹೊಡೀಲಿ. ಅವಳಾಗೇ ಬಂದು propose ಮಾಡಿದರೂ 'ಇಲ್ಲ' ಅಂದು ತಿರಸ್ಕರಿಸಬೇಕು ಅಂದುಕೊಂಡೆ!

ಇಷ್ಟಕ್ಕೂ ಆ ಹುಡುಗಿ ನಮ್ಮ ಊರಿನ ಪಕ್ಕದ ಊರಿನವಳು. ಶ್ರೀಮಂತರ ಮನೆಯ ಹುಡುಗಿ. ಒಂಥರಾ ಕೀರಲು ದನಿ ಅವಳದು. ಅದಕ್ಕಾಗಿಯೇ ಅವಳನ್ನು ನಾವು 'ಕೀರ್ವಾಣಿ' ಅಂತ ಕರೆಯುತ್ತಿದ್ದೆವು! ಅವಳಾಗಿಯೇ ಆ ಆಟೋಗ್ರಾಫನ್ನು ಉದ್ದೇಶಪೂರ್ವಕವಾಗಿ ಬರೆದಿರಲಿಕ್ಕಂತೂ ಸಾಧ್ಯವಿರಲಿಲ್ಲ. ಆದರೆ ನನ್ನ ಹುಚ್ಚು ಮನಸ್ಸು ಕೇಳಬೇಕಲ್ಲ? ಅಲ್ಲದೇ ಅವಳು ತನ್ನ ಆಟೋಗ್ರಾಫ್ ಬುಕ್ಕಿನಲ್ಲಿ ನಾನು ಏನು ಬರೆಯುತ್ತೀನಿ ಅಂತ ಕಾಯುತ್ತಾ ಇರುತ್ತಾಳೆ... ಅಥವಾ ಇವೆಲ್ಲಾ ಕೇವಲ ನನ್ನ ಹುಚ್ಚು ಭ್ರಮೆಯೇ? ಗೊಂದಲದಲ್ಲಿದ್ದೆ.

ಅಷ್ಟರಲ್ಲಿ ಮತ್ತೊಂದು ಘಟನೆಯಾಯಿತು! ನಮ್ಮೂರಿನಲ್ಲಿ ಒಬ್ಬರ ಮನೆಗೆ ಗುರುಗಳು (ಸ್ವಾಮೀಜಿ) ಬಂದಿದ್ದರು. ಅವರ ಮನೆಯಲ್ಲಿ ಸ್ವಾಮಿಗಳ 'ಭಿಕ್ಷಾ' ಇತ್ತು. ನಾನು ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಅಲ್ಲಿಗೆ ಕೀರ್ವಾಣಿಯ ಪಕ್ಕದ ಮನೆಯ ಒಬ್ಬ ಹುಡುಗ ಕೂಡ ಬಂದಿದ್ದ. ಸುಮಾರು ಐದನೇ ಕ್ಲಾಸು ಓದುತ್ತಿರಬಹುದಾದ ತುಂಬಾ ಕೀಟಲೆ ಹುಡುಗ ಅವನು. ಊಟಕ್ಕೆ ಪಂಕ್ತಿಯಲ್ಲಿ ನಾನೂ-ಅವನು ಒಟ್ಟಿಗೇ ಕುಳಿತುಕೊಳ್ಳುವಂತಾಯಿತು. ಊಟ ಮಾಡುತ್ತಿರುವಾಗ ನನ್ನ ಗೊಂದಲಗಳು ಹೆಚ್ಚಾಗುವಂತಹ ಒಂದು ಮಾತನ್ನು ಆ ಹುಡುಗ ಆಡಿದ. "ನಮ್ಮನೆ ಪಕ್ಕದ್ಮನೆ ಅಕ್ಕ ಇದಾಳಲ್ಲ, ಅವ್ಳು ನಿಂದು ಒಂದು ಫೋಟೋ ಕಟ್ ಮಾಡಿ ಇಟ್ಕೊಂಡ್ ಬಿಟ್ಟಿದಾಳೆ ಮಾರಾಯ.. ನಾವು ಎಷ್ಟು ಕೊಡು ಅಂದ್ರೂ ಕೊಡೋದಿಲ್ಲ.." ಅಂದುಬಿಟ್ಟ! ಅಲ್ಲಿಗೆ ಮುಗಿಯಿತಲ್ಲ? ಊಟ ಮಾಡುತ್ತಿದ್ದವನು ದಂಗಾಗಿಬಿಟ್ಟೆ. ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ಅಷ್ಟಂದು ಅವನೇನೋ ಸುಗ್ರಾಸ ಭೋಜನ ಮುಂದುವರಿಸಿದ. ಆದರೆ ನನಗೆ ಗಂಟಲಲ್ಲಿ ಅನ್ನ ಹಿಡಿಯಲಿಕ್ಕೆ ಶುರುವಾಯಿತು. ಪಲ್ಯ ಬಡಿಸುತ್ತಿದ್ದ ರಾಘವೇಂದ್ರಣ್ಣ 'ಪಲ್ಯ ಪಲ್ಯ ಪಲ್ಯ' ಎಂದು ನನ್ನ ಎದುರು ಮೂರು ಮೂರು ಸಲ ಕೇಳಿದರೂ ನಾನು ಸುಮ್ಮನಿದ್ದುದ್ದು ನೋಡಿ ಎರಡು ಸೌಟು ಸರಿಯಾಗಿ ಪಾಯಸದ ಮೇಲೆ ಹಾಕಿ ಹೋಗಿಬಿಟ್ಟ!

ಇಷ್ಟೆಲ್ಲಾ ಗೊಂದಲಗಳು ನನ್ನ ತಲೆಯಲ್ಲಿ ಆಗುತ್ತಿದ್ದರೂ ಆ ಹುಡುಗಿ ಮಾತ್ರ ಮಾಮೂಲಿನಂತೆಯೇ ಇದ್ದಳು. ಹಾಗೇ ತಲೆ ತಗ್ಗಿಸಿಕೊಂಡು ಶಾಲೆಗೆ ಬರುತ್ತಿದ್ದಳು. ತನ್ನ ಗೆಳತಿಯರೊಡನೆ ಕೀರಲು ದನಿಯಲ್ಲಿ ಮಾತನಾಡುತ್ತಿರುತ್ತಿದ್ದಳು. ಒಟ್ಟಿನಲ್ಲಿ ನನಗಂತೂ ತಲೆ ಕೆಟ್ಟು ಹೋಯಿತು. ನನ್ನ ಬಳಿ ಮಾತನಾಡಿ 'ಮುಂದುವರಿಸ'ಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಕಡೆ at least ಓರೆ ನೋಟವನ್ನೂ ಬೀರಲಿಲ್ಲ. ನನಗೆ ಆಗುತ್ತಿದ್ದುದ್ದು ಹತಾಶೆಯೋ, ನಿರಾಶೆಯೋ, ಭ್ರಮನಿರಸನವೋ ತಿಳಿಯದಾದೆ.

ಅಂತೂ ಮೂರ್ನಾಲ್ಕು ವಾರಗಳ ನಂತರ ಅವಳು ತನ್ನ ಆಟೋಗ್ರಾಫ್ ಪುಸ್ತಕವನ್ನು ನನಗೆ ಬರೆಯಲು ಕೊಟ್ಟಳು. ನಾನೂ ಇದಕ್ಕೇ ಕಾಯುತ್ತಿದ್ದವನಂತೆ, ಹಿಂದೆ ಮುಂದೆ ಯೋಚಿಸದೆ 'What is the real meaning of your autograph?' ಅಂತ ಒಂದೇ ಲೈನು ಬರೆದುಕೊಟ್ಟೆ. ಆದರೆ ಅದಕ್ಕೂ ಅವಳಿಂದ reply ಬರಲಿಲ್ಲ. ಬಹುಶಃ ಅವಳಿಗೆ ಅದು ಅರ್ಥವೇ ಆಗಲಿಲ್ಲವೇನೋ!

ನೋಡುನೋಡುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹತ್ತಿರಾದವು. ನಾವು ಬರೆದದ್ದೂ ಆಯಿತು. ರಿಸಲ್ಟು ಬಂದದ್ದೂ ಆಯಿತು. ಆಕೆ ಫೇಲ್ ಆಗಿದ್ದಳು; ನಾನು ಆ ಗಂಢಾಂತರದಿಂದ ಕೆಲವೇ ಮಾರ್ಕುಗಳ ಅಂತರದಿಂದ ಪಾರಾಗಿದ್ದೆ. ಹಾಗೆ ನಮ್ಮ ಹೈಸ್ಕೂಲು ಜೀವನ ಮುಗಿದುಹೋಯಿತು.

ಕೊನೆಗೆ ನಾನೆಲ್ಲೋ ಅವಳೆಲ್ಲೋ ಆದೆವು. ನಮ್ಮ ಪಕ್ಕದ ಊರಿನಲ್ಲೇ ಇರುತ್ತಿದ್ದಳಾದರೂ ಒಬ್ಬರಿಗೊಬ್ಬರು ಭೇಟಿ ಆಗುವಂತಹ ಸನ್ನಿವೇಶಗಳು ಕೂಡಿಬರಲಿಲ್ಲ. ಒಂದೆರಡು ಬಾರಿ ಕಂಡಿದ್ದಳಾದರೂ ಸುಮ್ನೆ 'ಅರಾಮಿದೀಯ?' 'ಏನ್ಮಾಡ್ತಿದೀಯ ಈಗ?' ಇತ್ಯಾದಿ ಪ್ರಶ್ನೋತ್ತರಗಳಲ್ಲಿ ಮಾತುಕತೆ ಮುಗಿದು ಹೋಗುತ್ತಿತ್ತು. 'ಇಷ್ಟಕ್ಕೂ ನೀನು ನನ್ನನ್ನು ಪ್ರೀತಿಸಿದ್ದು ಹೌದಾ?' ಅಂತ ಕೇಳಬೇಕೆಂದುಕೊಳ್ಳುತ್ತಿದ್ದೆ. ಆದರೆ ಧೈರ್ಯ ಸಾಲುತ್ತಿರಲಿಲ್ಲ. ಅಥವಾ ಮುಜುಗರವಾಗುತ್ತಿತ್ತು.

ಈಗ ನೋಡಿದರೆ ಕೀರ್ವಾಣಿಯ ಮದುವೆಯ ಸುದ್ದಿ ಬಂದಿದೆ. ಎಲ್ಲಾ ನೆನಪಾಗುತ್ತಿದೆ... ಇಷ್ಟಕ್ಕೂ ಕೀರ್ವಾಣಿಗೆ ನನ್ನ ಮೇಲೆ ಒಲವಿತ್ತಾ? ಆ ಪ್ರಶ್ನೆ ಮಾತ್ರ ನನ್ನಲ್ಲೇ ಉಳಿದುಹೋಗಿದೆ: ಸವಿನೆನಪುಗಳನ್ನು ಕೆದಕಲು ಗುದ್ದಲಿಯಾಗಿ.

Monday, November 27, 2006

ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ

'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!

-ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಈ ಗದ್ಯಸಾಲುಗಳನ್ನು ಓದಿ ಹೇಳಿದವರು ಜಯಂತ ಕಾಯ್ಕಿಣಿ- ಭಾನುವಾರ, ೨೬.೧೧.೨೦೦೬ ರಂದು 'ಯವನಿಕಾ'ದಲ್ಲಿ ನಡೆದ ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮ 'ನಾದಲೀಲೆ'ಯಲ್ಲಿ. ಹಿಂದೊಮ್ಮೆ ಅವರು ಇದೇ ಸಾಲುಗಳನ್ನು ತಮ್ಮ 'ಭಾವನಾ' ಮಾಸಿಕದ ಸಂಪಾದಕೀಯದಲ್ಲಿ ಬರೆದಿದ್ದರು.


'ದೇಶಕಾಲ' (ವಿವೇಕ ಶಾನಭಾಗ್ ಸಂಪಾದಕತ್ವದ ಸಾಹಿತ್ಯಿಕ ತ್ರೈಮಾಸಿಕ) ಮತ್ತು 'ಅಷ್ಟದಿಕ್ಕು' (ಅಶೋಕ ಹೆಗಡೆ, ಗೋಪಲಕೃಷ್ಣ ಪೈ ಮತ್ತು ಎಸ್. ದಿವಾಕರ್ ನೇತೃತ್ವದ ಪ್ರಕಾಶನ) -ಸಂಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು. ಪಂಡಿತ್ ಪರಮೇಶ್ವರ ಹೆಗಡೆ, ಯು.ಆರ್. ಅನಂತಮೂರ್ತಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸಿ.ಆರ್. ಸಿಂಹ, ಸಿದ್ದಲಿಂಗಯ್ಯ, ಬಿ. ಜಯಶ್ರೀ, ಕಿ.ರಂ. ನಾಗರಾಜ, ರವಿ ಬೆಳಗೆರೆ, ಪ್ರತಿಭಾ ನಂದಕುಮಾರ್, ಪವಿತ್ರಾ ಲೋಕೇಶ್, ಕೆ.ಎಚ್. ಶ್ರೀನಿವಾಸ, ರಘುನಂದನ, ಎಚ್.ಜಿ. ಸೋಮಶೇಖರ್ ರಾವ್, ಶ್ರೀನಿವಾಸ್ ಜಿ. ಕಪ್ಪಣ್ಣ, ವಿಶ್ವೇಶ್ವರ ಭಟ್, ವಿಜಯ ಭಾರದ್ವಾಜ್, ಚಿರಂಜೀವಿ ಸಿಂಗ್, ಟಿ.ಎನ್. ಸೀತಾರಾಂ, ರೇಖಾ ಹೆಬ್ಬಾರ್, ಎಸ್.ಜಿ. ವಾಸುದೇವ್, ಶ್ರೀಕಾಂತ -ಹೀಗೆ ವಿವಿಧ ಕ್ಷೇತ್ರಗಳ ಇಪ್ಪತ್ತಕ್ಕೂ ಹೆಚ್ಚು ಗಣ್ಯರಿಂದ ಬೇಂದ್ರೆ ಕಾವ್ಯಗಳ ವಾಚನವಾಯಿತು. ಬೇಂದ್ರೆಯವರ ದ್ವನಿಯಲ್ಲಿನ ಅವರ ಕವನ ವಾಚನಗಳ ಅಪರೂಪದ ಧ್ವನಿಮುದ್ರಣವನ್ನು ಮಧ್ಯೆ ಮಧ್ಯೆ ಕೇಳಿಸಿದರು. ಬೇಂದ್ರೆಯವರ ಅಪರೂಪದ ಛಾಯಾಚಿತ್ರ, ರೇಖಾಚಿತ್ರಗಳ ಪ್ರದರ್ಶನವಿತ್ತು. ಕೊನೆಯಲ್ಲಿ ಗಿರೀಶ್ ಕಾರ್ನಾಡ್ ಬೇಂದ್ರೆಯವರ ಕುರಿತು ಚಿತ್ರಿಸಿದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವೂ ಇತ್ತು.

ಭಾನುವಾರ ಬೆಳಗ್ಗೆ ೯.೩೦ಕ್ಕೆ 'ಯವನಿಕಾ' ಪ್ರೇಕ್ಷಕರಿಂದ ತುಂಬಿಹೋಗಿತ್ತು. ಬಹುಶಃ ಅಷ್ಟೊಂದು ಜನ ಸೇರುತ್ತಾರೆ ಎನ್ನುವ ಕಲ್ಪನೆ ಸಂಘಟಕರಿಗೆ ಇರಲಿಲ್ಲವೇನೋ? ಬಂದಿದ್ದ ಅನೇಕ ಸಾಹಿತಿಗಳಿಗೇ ಕುಳಿತುಕೊಳ್ಳಲಿಕ್ಕೆ ಜಾಗ ಸಿಗಲಿಲ್ಲ. ಬಂದವರೆಲ್ಲರಿಗೂ ಬೆಳಗ್ಗೆ ತಿಂಡಿ-ಕಾಫಿ ಕೊಟ್ಟು, ಕಾವ್ಯ ಕೇಳಿಸಿ, ವಾಪಸು ಹೋಗುವಾಗ ಊಟವನ್ನೂ ಕೊಟ್ಟು ಕಳುಹಿಸಿದರು. 'ಹೀಗೆಲ್ಲ ಮಾಡುತ್ತಿದ್ದೀವಿ ಬನ್ನಿ' ಅಂತ ಕರೆದು ಇನ್ನೂ ಸ್ವಲ್ಪ ಪ್ರಚಾರವನ್ನೂ ಕೊಟ್ಟಿದ್ದರೆ ಬಹುಶಃ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಜನ ತುಂಬಿಕೊಳ್ಳುತ್ತಿದ್ದರೇನೋ? ಕನ್ನಡದ ಕಾವ್ಯಾಸಕ್ತರಿಗೇನು ಕೊರತೆಯೇ?

***

ವಾಪಸು ಬರುವಾಗ ನನಗೆ ಹಾಗೇ ಅನ್ನಿಸಿತು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಮ್ಮಂತಹ ಈಗಿನ ಕಾಲದವರಿಗೆ ಬೇಂದ್ರೆ ಕಾವ್ಯದ ಪರಿಚಯ ಅಷ್ಟಾಗಿ ಇಲ್ಲ. ಏಕೆಂದರೆ ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಉದಾಹರಣೆಗೆ, ಅವರ 'ನಾಕುತಂತಿ' ಸಂಕಲನದ 'ನಾಕುತಂತಿ' ಕವನದಲ್ಲಿ ಈ ಸ್ಟಾಂಜ಼ಾ ಬರುತ್ತದೆ: 'ನಾನು ನೀನು ಆನು ತಾನು ನಾಕೇ ನಾಕು ತಂತಿ' -ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಗಣಿತ (ಸಂಖ್ಯಾಶಾಸ್ತ್ರ)ದ ಮೇಲೆ ಹಿಡಿತವಿರಬೇಕು ಮತ್ತು ಸಂಗೀತ ತಿಳಿದಿರಬೇಕು. ಅದಿಲ್ಲದಿದ್ದರೆ ಅರ್ಥವಾಗುವುದೇ ಇಲ್ಲ. ಸಂಗೀತ ಕಲಿತು, ಗಣಿತದಲ್ಲಿ ಪಾಂಡಿತ್ಯ ಗಳಿಸಿ, ಆಮೇಲೆ ಈ ಕವಿತೆ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ನಮಗಿಲ್ಲ. ಅಷ್ಟೊಂದು ಕಷ್ಟವಲ್ಲದ ಕವಿತೆಗಳನ್ನೂ ಬೇಂದ್ರೆ ಬರೆದಿದ್ದಾರೆ. ಅವುಗಳಲ್ಲಿ ಅನೇಕ ಕವಿತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಆದರೆ ಭಾವಗೀತೆಗಳಾಗದ ಅನೇಕ ಅದ್ಭುತ ಕವನಗಳು ಇವೆಯಲ್ಲ, ಅವನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಬಲ್ಲವರಿಂದ ಓದಿಸಿ, ಅದರ ಅರ್ಥ - ಬರೆದ ಸಂದರ್ಭಗಳನ್ನು ಹೇಳಿಸಿದರೆ ನಮ್ಮಂತಹ ಯುವ ಪೀಳಿಗೆಗೆ ಅನುಕೂಲವಾಗುತ್ತದೆ. ಕನ್ನಡ ಕಾವ್ಯಪ್ರೇಮಿಗಳ ಸಂಖ್ಯೆಯೂ ಹೆಚ್ಚುತ್ತದೆ.

ಇತ್ತೀಚೆಗೊಂದು ದಿನ ನನ್ನ ನೆಂಟರ ಮನೆಗೆ ಹೋಗಿದ್ದಾಗ ಕನ್ನಡ ಟೀವಿ ಚಾನೆಲ್ಲೊಂದರಲ್ಲಿ ಕಾರ್ಯಕ್ರಮ ಬರುತ್ತಿತ್ತು. ಟೀವಿ ಸಂದರ್ಶಕಿ ಮೈಕು ಹಿಡಿದುಕೊಂಡು ಸಾರ್ವಜನಿಕರನ್ನು ಮಾತಾಡಿಸಿ, ಒಂದೆರಡು ಪ್ರಶ್ನೆ ಕೇಳಿ, ಸರಿಯುತ್ತರ ಕೊಟ್ಟವರಿಗೆ ಸೋಪಿನ ಬಾಕ್ಸನ್ನೋ, ಊದುಬತ್ತಿ ಬಂಡಲನ್ನೋ ಕೊಡುವ ಕಾರ್ಯಕ್ರಮ ಅದು. ಅಂದು ಆ ಸಂದರ್ಶಕಿ ಬೇಂದ್ರೆಯವರ ರೇಖಾಚಿತ್ರವೊಂದನ್ನು ಜನರಿಗೆ ತೋರಿಸಿ 'ಇವರು ಯಾರು ಗುರುತಿಸಿ?' ಅಂತ ಕೇಳುತ್ತಿದ್ದಳು. ಯಾರೂ ಸರಿಯುತ್ತರ ಕೊಡಲಿಲ್ಲ. ಅನೇಕರು 'ಗೊತ್ತಿಲ್ಲ' ಅಂದರು. ಸುಮಾರು ಹದಿನೈದಿಪ್ಪತ್ತು ಜನರನ್ನು ಸಂದರ್ಶಿಸಿದರೂ ಸರಿಯುತ್ತರ ಸಿಗದಿದ್ದುದು ನೋಡಿ ನನಗೆ ಆಶ್ಚರ್ಯವಾಯಿತು. ಕೊನೆಗೆ ಸಂದರ್ಶಕಿಯೇ 'ಅದು ದ.ರಾ. ಬೇಂದ್ರೆ' ಎಂದು ಉತ್ತರವನ್ನು ಹೇಳಿದಳು. ನನಗೆ ಮತ್ತೂ ಆಶ್ಚರ್ಯವಾದದ್ದೆಂದರೆ, ಅವಳು ಉತ್ತರ ಹೇಳುತ್ತಿದ್ದಂತೆಯೇ ನನ್ನ ಜೊತೆ ಟೀವಿ ನೋಡುತ್ತಿದ್ದವರೂ 'ಓ, ಬೇಂದ್ರೆನಾ?' ಅಂದಿದ್ದು! 'ನಿಮಗ್ಯಾರಿಗೂ ಗೊತ್ತೇ ಇರಲಿಲ್ವಾ?' ಅಂದೆ. 'ಇಲ್ಲ!' ಅಂದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಎಲ್ಲ ಕನ್ನಡ ಭಾಷಾ ಪಠ್ಯದಲ್ಲೂ 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು' ಎಂಬ ಪಟ್ಟಿಯಲ್ಲಿ ಬೇಂದ್ರೆಯವರ ಇದೇ ರೇಖಾಚಿತ್ರ್ರ ಇದೆ. (ನಾನು ಓದಬೇಕಾದರಂತೂ ಇತ್ತು; ಈಗ ಇದೆಯೋ ಇಲ್ಲವೋ ಗೊತ್ತಿಲ್ಲ). ಅಂಥಾದ್ದರಲ್ಲಿ ಗುರುತಿಸಲಾಗಲಿಲ್ಲ ಎಂದರೆ ಏನನ್ನೋಣ?

'ನಾದಲೀಲೆ'ಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು, ಅವು ಟೀವಿ-ರೇಡಿಯೋಗಳಲ್ಲಿ ಪ್ರಸಾರವಾಗುವಂತಾದರೆ ಚೆನ್ನಾಗಿರುತ್ತಿತ್ತಲ್ಲವೇ?

Monday, November 20, 2006

ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. (A trip to Savandurga)

ಆ ನಂದಿ ಸುಮ್ಮನಿತ್ತು.

ಕಲ್ಗಾರ್ ಗಿರಿಯ ಕಿರುಚಾಟ - ಫೋಟೋ ಹುಚ್ಚು, ಸಂದೀಪನ ಶೇರು ಹಗರಣ, ಬಪ್ಪನ ಐರಿಷ್ ಸಂಭಾಷಣೆ.... ಎಲ್ಲವನ್ನೂ ಕೇಳಿಕೊಂಡೂ ಸುಮ್ಮನೇ ಇತ್ತು. ಬೆಳಗ್ಗೆ ಯಾರೋ ಪೂಜೆ ಮಾಡಿಹೋದ ಕುರುಹಾಗಿ ಅದರ ಕೊರಳಲ್ಲಿ ಇನ್ನೂ ಬಾಡದ ಹೂವಿನ ಹಾರ, ಹಣೆಯಲ್ಲಿ ಕುಂಕುಮ ಇದ್ದವು. ಗೆಳೆಯರು ಹೇಳಿದ ಪೋಲಿ ಜೋಕುಗಳಿಗೊಂದಕ್ಕೂ ಅದು ನಗಲಿಲ್ಲ. ಬಹುಶಃ ಆ ಜೋಕುಗಳನ್ನೆಲ್ಲಾ ಅದು ಮೊದಲೇ ಕೇಳಿತ್ತೇನೋ? ಇವೆಲ್ಲಾ 'ಓಲ್ಡ್ ಜೋಕ್ಸ್' ಆಗಿದ್ದವೇನೋ ಅದಕ್ಕೆ... ನಾವು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ತಾನು ಒಂದೂ ಮಾತಾಡದೆ ಸುಮ್ಮನೆ ಕುಳಿತಿತ್ತು.. ಬೀಸುಗಾಳಿಗೆ ಮೈಯೊಡ್ಡಿ..


***


ಈಗ ಮೂರು ದಿನಗಳ ಹಿಂದೆ ಸಂದೀಪ ಫೋನ್ ಮಾಡಿ 'ಈ ಭಾನುವಾರ ಏನೂ ಪ್ರೋಗ್ರಾಮ್ ಫಿಕ್ಸ್ ಮಾಡ್ಕೋಬೇಡ. ಸಾವನದುರ್ಗಕ್ಕೆ ಹೋಗೋಣ. ಹಿಂದೆ ಶಿವನಸಮುದ್ರಕ್ಕೆ ಹೋದದ್ದೇ ಟೀಮು; ಪ್ಲಸ್ ಇನ್ನೊಂದಷ್ಟು ಜನ' ಅಂತ ಹೇಳಿದಾಗ, ನಾನು ಮರುಯೋಚನೆ ಮಾಡದೆ 'ಓಕೆ' ಅಂದುಬಿಟ್ಟೆ. ನಂತರ googleನಲ್ಲಿ ಸಾವನದುರ್ಗದ ಬಗ್ಗೆ search ಮಾಡಿದಾಗ ಅದೊಂದು ಏಕಶಿಲೆಯ ಪರ್ವತ, ಅಲ್ಲಿ ಸಾಮಂತರಾಯನ ಕೋಟೆಯ ಅಳಿದುಳಿದ ಅವಶೇಷಗಳು ಇವೆ ಅಂತಲೂ, ಅದು ಕೆಂಪೇಗೌಡನ ಉಪ-ರಾಜಧಾನಿಯಾಗಿತ್ತು ಅಂತಲೂ, ಆ ಬೆಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ, ಕಾಡಿನಲ್ಲಿ ಕ್ರೂರ ಮೃಗಗಳು ಇವೆ ಅಂತಲೂ ಮಾಹಿತಿಗಳು ದೊರೆತವು.

ಭಾನುವಾರ ಬೆಳಗ್ಗೆ ಆರೂ ಮುಕ್ಕಾಲಿಗೆಲ್ಲಾ ರೆಡಿಯಾಗಿ ಸಂದೀಪನಿಗಾಗಿ ಕಾಯುತ್ತಿದ್ದಾಗ ಚಾರಣಿಗ ಶ್ರೀನಿಧಿಯಿಂದ ಮೆಸೇಜು ಬಂತು: "ಬೆಳಗಿನೆಳೆ ಕಿರಣಗಳ ಜೊತೆ ಸಾಗೋದು ಅಂದರೆ, ಏನೋ ಸಂತಸ.. ಬದುಕು ಸುಂದರವಾಗಿದೆ..!" ನಾನು reply ಒತ್ತಿ: "ನೇಸರನು ಮೀಸೆ ತಿರುವುತ ನುಸುಳುತ್ತಿರಲು, ಸಾವನದುರ್ಗದ ಹೆಸರರಿಯದ ದೇವರು ಕರೆಯುತ್ತಿರಲು, ನಸುಕಿಗೇ ಹೊಸ ಬಣ್ಣ ಬಂದಿರಲು.." ಅಂತ type ಮಾಡಿದೆ; ಅಷ್ಟರಲ್ಲಿ ಸಂದೀಪ ಬಂದ. ಅರ್ಧ ಟೈಪಿಸಿದ್ದ ಮೆಸೇಜನ್ನು ಹಾಗೆಯೇ ಚಾರಣಿಗನಿಗೆ ಕಳಿಸಿ ಮನೆಯ ಮೆಟ್ಟಿಲಿಳಿಯತೊಡಗಿದೆ.

ಗಿರಿಯ ಮನೆಯಿಂದ ನಮ್ಮ ಪಯಣ 'ಅಧಿಕೃತವಾಗಿ' ಶುರುವಾಯಿತು. ಒಟ್ಟು ಹದಿನೇಳು ಹುಡುಗರು. ಒಂಬತ್ತು ಬೈಕುಗಳ ಗಾಲಿಗಳಲ್ಲೂ ಹುಮ್ಮಸ್ಸಿನ ಗಾಳಿ ತುಂಬಿತ್ತು. ಮಾಗಡಿ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಸಾವನದುರ್ಗ ಬೆಟ್ಟ ಕಾಣಲಾರಂಭಿಸಿತು: ಗಮ್ಯದಂತೆ. ಅದನ್ನೇ ನೋಡುತ್ತಾ, ಮಧ್ಯದಲ್ಲೊಮ್ಮೆ ಚಹ ಕುಡಿದು, 'ದುಸ್ಥಿತಿ'ಯಲ್ಲಿದ್ದ ರಸ್ತೆಯಲ್ಲಿ ಸಾಗಿದೆವು...


ಸಾವನದುರ್ಗ ತಲುಪಿದಾಗ ಹತ್ತು ಗಂಟೆ. ಬೈಕು ಪಾರ್ಕ್ ಮಾಡಿ, ಅಲ್ಲೇ ಮಾರುತ್ತಿದ್ದ ನೀರಾ ಕೊಂಡುಕೊಂಡು, ಬ್ಯಾಗೇರಿಸಿ ಬೆಟ್ಟ ಹತ್ತತೊಡಗಿದೆವು. ಏದುಸಿರು ಬಂದು ಅಲ್ಲಲ್ಲಿ ಕುಂತು ಸುಧಾರಿಸಿಕೊಂಡೆವು. ಸುಮಾರು ಅರ್ಧ ಹತ್ತಿದೆವು ಅನ್ನಿಸಿದಾಗ, ಒಂದು ಕಡೆ 'ಕೂರಬಹುದಾದಂತಹ ಜಾಗ' ಕಂಡಾಗ ಕುಂತು, ಕಟ್ಟಿಸಿಕೊಂಡು ಹೋಗಿದ್ದ ಚಪಾತಿ-ಪಲ್ಯ ತಿಂದೆವು. ನೀರು ಕುಡಿದೆವು. ಮತ್ತೆ ಹತ್ತತೊಡಗಿದೆವು. ಹತ್ತಿದಷ್ಟೂ ಬೆಟ್ಟ; ಮುಗಿಯದ ದಾರಿ; ದಾರಿಯಲ್ಲದ ದಾರಿ; ಎಲ್ಲೆಲ್ಲೂ ಕಲ್ಲುಬಂಡೆ; ಒಂದಷ್ಟು ಹಸಿರು ಚಿಗುರು, ಪಾಪಸು ಕಳ್ಳಿ, ನಿಂತ ನೀರು ಅಲ್ಲಲ್ಲಿ.... ಬೆಟ್ಟ ಅದೆಷ್ಟು ಕಡಿದಾಗಿದೆಯೆಂದರೆ... ಹೆಚ್ಚುಕಮ್ಮಿಯಾಗಿ ಜಾರಿ ಬಿದ್ದರೆ ಪುಡಿಪುಡಿ; ಹೆಣ ಸಿಗುವುದೂ ಡೌಟು.. ಕೆಲವೊಂದೆಡೆ ತೆವಳಿಕೊಂಡು ಸಾಗಬೇಕು.


ಬೆಟ್ಟದ ಮೇಲೆ ತಲುಪಿದಾಗ ಹನ್ನೆರಡೂ ಕಾಲು. ಅಲ್ಲೊಂದು ಮಂಟಪದಲ್ಲಿ ನಂದಿ. ತಣ್ಣಗೆ ಬೀಸುವ ಗಾಳಿ. ಒಂದು ತಾಸು ಅಲ್ಲೇ ಕುಳಿತು, ಮಲಗಿ, ಫೋಟೋ ತೆಗಿಸಿಕೊಂಡು, ಜೋಕ್ಸ್ ಹೇಳಿಕೊಂಡು, ನಕ್ಕು, ಹಗುರಾದೆವು. ನಂತರ ಊಟ ಮಾಡಿದೆವು. 'ಮಿತವಾಗಿ' ನೀರು ಕುಡಿದೆವು. ಎರಡೂ ವರೆ ಹೊತ್ತಿಗೆ ಗುಂಪುಗುಂಪಾಗಿ ಅವರೋಹಣ ಶುರುಮಾಡಿದೆವು.


ನಿಧಾನಕ್ಕೆ ಇಳಿದು 'ಭೂಮಿ'ಯನ್ನು ತಲುಪಿದೆವು. ಎಳನೀರು ಕುಡಿದೆವು. ಮಳೆ ಬರುವ ಸಾಧ್ಯತೆ ಇತ್ತು. ಬೇಗ ಮನೆ ಮುಟ್ಟಿಕೊಳ್ಳೋಣ ಎಂದುಕೊಂಡು ಹೊರಟೆವು. ಮಧ್ಯದಲ್ಲೊಮ್ಮೆ ನಿಲ್ಲಿಸಿ, ಉಳಿದಿದ್ದ ಚಪಾತಿ ತಿಂದು ಖಾಲಿ ಮಾಡಿದೆವು. ಮತ್ತೆ ಮುಂದೆ ನಿಲ್ಲಿಸಿ ಕಾಫಿ ಕುಡಿದೆವು. 'ಮತ್ತೆ ಸಿಗೋಣ' ಅಂತಂದು ಎಲ್ಲರೂ ಬೇರಾದೆವು.

***

ರಾತ್ರಿ ಲೈಟಾರಿಸಿ ಮಲಗಿದರೆ ಕಣ್ಣಿನಲ್ಲಿ ಅದೇ ಬಿಂಬ: ಸಾವನದುರ್ಗ ಬೆಟ್ಟದ ಮೇಲಿನ ನಂದಿ ಚಳಿ, ಗಾಳಿ, ಮಳೆಗಳಿಗೆ ಹೆದರದೇ ಮೌನವಾಗಿ ನಿಂತಿದೆ. ಇಲ್ಲ, ಕುಳಿತಿದೆ. ಇಲ್ಲ, ಮಲಗಿದೆ. ಗಂಭೀರವಾಗಿ ಮಲಗಿದೆ. ಬಹುಶಃ ಅದಕ್ಕೆ ಭ್ರಮೆ: ಬರುವ ಜನರೆಲ್ಲಾ ಇಷ್ಟೆತ್ತರದ ಬೆಟ್ಟ ಹತ್ತಿ ತನ್ನನ್ನು ನೋಡಲೇ ಬರುತ್ತಾರೆ ಅಂತ! ಅದಕ್ಕೇ ಅಷ್ಟೊಂದು ಗತ್ತು. ಗೋಣು ಸಹ ಅಲ್ಲಾಡಿಸುವುದಿಲ್ಲ. ಅದರ ಪೂಜಾರಿಯ ಮನೆ ಎಲ್ಲಿದೆ? ಆತ ದಿನವೂ ಬೆಳಗ್ಗೆ ಎದ್ದು, ಬೆಟ್ಟ ಹತ್ತಿ ಬಂದು ಪೂಜೆ ಮಾಡಿ ಹೋಗುತ್ತಾನೆಯೇ?

ಉತ್ತರ ಗೊತ್ತಿರದ ಪ್ರಶ್ನೆಗಳು ಕಾಡುತ್ತಿರಲು, ಸುಸ್ತಿಗೇ ನಿದ್ದೆ ಹತ್ತಿತು.

(For more photos, click here / here)

Monday, November 13, 2006

ಒಂದು ಹುಟ್ಟು, ಒಂದು ಮದುವೆ ಮತ್ತು ಒಂದು ಸಾವು..

"ಚೆಲುವ ಬಿದಿರ ತೊಟ್ಟಿಲಲ್ಲಿ
ನಗುವ ಮಗುವ ಕಂಡೆ"

ಅಂತ ಬರೆದರು ಕೆ‍ಎಸ್‍ನ. ಮೊನ್ನೆ ನಮ್ಮ ಬಾಸ್‍ ತಂದೆಯಾದರು. ಮಗುವನ್ನು ನೋಡಿಕೊಂಡುಬರಲು ನಾನು ನನ್ನ colleagues ಜೊತೆ ಆಸ್ಪತ್ರೆಗೆ ಹೋಗಿದ್ದೆ. ಬಾಸ್ ತುಂಬಾ ಖುಷಿಯಲ್ಲಿದ್ದರು. ಸ್ವೀಟ್ ಕೊಟ್ಟರು. ನಾನು ಇದೇ ಸಂದರ್ಭ ಅಂತ 'ಸರ್, ಸ್ವೀಟ್ ಸಾಕಾಗಲ್ಲ, ಟ್ರೀಟ್ ಬೇಕು' ಅಂದೆ. 'ಓ, ಅದಕ್ಕೇನಂತೆ, ಕೊಡುಸ್ತೀನಿ' ಅಂದ್ರು. ಬೆಡ್ಡಿನಲ್ಲಿ ಮಲಗಿದ್ದ ಬಾಸ್-ಮಿಸ್ಸಸ್‍ಗೆ ಕಂಗ್ರಾಟ್ಸ್ ಹೇಳಿದೆ. ತೊಟ್ಟಿಲಲ್ಲಿ ಮಗು ನಿದ್ದೆ ಹೋಗಿತ್ತು. 'ಯಾರ ಹಾಗಿದಾಳಪ್ಪ?' ಅಂದ್ರು ಬಾಸ್ ಅತ್ತೆ. ಹೆಚ್ಚೆಸ್ವಿ ತಮ್ಮ ಮೊಮ್ಮೊಗಳ ಕುರಿತು ಬರೆದ 'ಸೋನಿ ಪದ್ಯಗಳು' ನೆನಪಾಗುತ್ತಿತ್ತು ನನಗೆ...


***

ಮೊನ್ನೆ ಸಿಂಧು ಅಕ್ಕನ ಮದುವೆಯ receptionಗೆ ಹೋಗಿದ್ದೆ. ತನ್ನನ್ನು ತಾನೇ 'ಅಕ್ಕ' ಅಂತ ಕರೆದುಕೊಂಡ ಮಹಾದೇವಿ ಈಕೆ! ಮದುವೆಗೆ ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿ ಬಂದಿದ್ದರು. ಊಟದ ಸಮಯದಲ್ಲಿ ಜಯಂತ್ ಮಾತಿಗೆ ಸಿಕ್ಕಿದರು. ಈ ಮೊದಲು ಒಮ್ಮೆ ಸಪ್ನಾ ಬುಕ್‍ಹೌಸ್‍ನಲ್ಲಿ ಜಯಂತ್ ಸಿಕ್ಕಿದ್ದರು. ಅದನ್ನು ನೆನಪಿಸಿ, 'ನಾನು..ಸುಶ್ರುತ.. ಅವತ್ತು ಸಪ್ನಾದಲ್ಲಿ ಸಿಕ್ಕಿದ್ನಲ್ಲ...' ಅಂದೆ. 'ಓಹ್, ಹೌದು, ಕರೆಕ್ಟ್!' ಅಂದ್ರು. (ನಿಜವಾಗ್ಯೂ ನೆನಪಾಯ್ತೋ ಸುಳ್ಳೇ ಹೂಂ ಅಂದ್ರೋ ನಂಗಂತೂ ಡೌಟು!). ಕೊನೆಗೆ ಜಯಂತ್ ಜೊತೆಯೇ ತುಂಬಾ ಹೊತ್ತು ಮಾತಾಡಿದೆ. 'ಸರ್ ನೀವು ನಮಗೆ continuous ಆಗಿ ಓದ್ಲಿಕ್ಕೆ ಸಿಗ್ಬೇಕು, ಯಾವ್ದಾದ್ರೂ ಪತ್ರಿಕೆಗೆ ಬರೀರಿ' ಅಂದೆ. 'ಸಧ್ಯದಲ್ಲೇ ಪ್ರಜಾವಾಣಿಗೆ ಬರೀತೀನಿ. ಡಾ| ರಾಜಕುಮಾರ್ ಬಗ್ಗೆ 'ನಮಸ್ಕಾರ' ಸರಣಿಯಲ್ಲಿ ಈಟೀವಿಯಲ್ಲಿ ನಾಡಿದ್ದು ಭಾನುವಾರದಿಂದ ನನ್ನ ಪ್ರೋಗ್ರಾಮ್ ಒಂದು ಬರುತ್ತೆ, ನೋಡಿ' ಅಂದರು. ಅದೂ ಇದು ಮಾತಾಡಿದ್ವಿ.

ಅಕ್ಕನ ಮದುವೆಯ reception hallನಲ್ಲಿ ಕೇಳಿಬರುತ್ತಿದ್ದ 'ಮೈಸೂರು ಮಲ್ಲಿಗೆ' ಮತ್ತಿತರ ಭಾವಗೀತೆಗಳು ಕಿವಿಗಿಂಪಾಗಿದ್ದವು. ಅಕ್ಕನಿಗೆ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕವನ್ನು present ಮಾಡಿದೆ.


***

ಮೊನ್ನೆ Bangalore Book Fairನಿಂದ ಒಂದಷ್ಟು ಪುಸ್ತಕಗಳನ್ನು ಕೊಂಡುತಂದೆ. ತಂದ ಪುಸ್ತಕಗಳಿಗೆಲ್ಲ ಬೈಂಡ್ ಹಾಕಿ, ಮೇಲೆ ಹೆಸರು ಬರೆದು ಇಡುವುದು ನನ್ನ ರೂಢಿ. ನಿನ್ನೆ ಹಾಗೇ ಹೆಸರು ಬರೆಯುತ್ತಾ ಕೂತಿದ್ದೆ. ಅಷ್ಟರಲ್ಲಿ ನಮ್ಮ ಕೆಳಗಡೆ ಮನೆಯ ಆಂಟಿ 'ಸುಪ್ರೇಶ್' ಅಂತ ಕರೆದರು. ಅವರು ನನ್ನನ್ನು ಕರೆಯುವುದೇ ಹಾಗೆ. ನಾನೂ ಅದನ್ನು rectify ಮಾಡಲು ಹೋಗಿಲ್ಲ. ಏಕೆಂದರೆ 'ಸುಶ್ರುತ' ಎಂಬ ನನ್ನ ಹೆಸರನ್ನು ಸರಿಯಾಗಿ ಕರೆಯುವವರ ಸಂಖ್ಯೆ ತುಂಬಾ ಕಮ್ಮಿ. Pronunciation problem! ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ. ನಾನೂ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. (ಎಷ್ಟೂಂತ ಕೆಡಿಸಿಕೊಳ್ಳಲಿ ನಾನಾದರೂ!)

ಆಂಟಿ ಕರೆದಾಗ ನಾನು ಕಾರಂತರ 'ಅಳಿದ ಮೇಲೆ' ಕಾದಂಬರಿಗೆ ಸ್ಕೆಚ್‍ಪೆನ್ನಿನ್ನಲ್ಲಿ ಹೆಸರು ಬರೆಯುತ್ತಿದ್ದೆ. 'ಏನ್ ಆಂಟಿ?' ಎನ್ನುತ್ತಾ ಹೊರಬಂದೆ. ಆಂಟಿ ನನ್ನನ್ನೇ ದುರುದುರು ನೋಡಿದರು. 'ಅಂಕಲ್ ಹೋಗ್ಬಿಟ್ರು ಗೊತ್ತಾಗ್ಲಿಲ್ವಾ ನಿಮ್ಗೆ?' ಅಂದ್ರು. ನನಗೆ ಒಮ್ಮೆಲೇ ಅರ್ಥವಾಗಲಿಲ್ಲ. ಈ ಆಂಟಿ ಮತ್ತು ಅಂಕಲ್ (actually ಅವರು ಅಜ್ಜ-ಅಜ್ಜಿ: ಅಂಕಲ್‍ಗೆ ಸುಮಾರು ಅರವತ್ತು ವರ್ಷ; ಆಂಟಿಗೆ ಐವತ್ತು ಛೇಂಜ್) ನಮ್ಮ ಮನೆಯ ಥರ್ಡ್ ಫ್ಲೋರಿನಲ್ಲಿರುವ ಒಂಡು ಡಬ್ಬಲ್ ಬೆಡ್‍ರೂಮ್ ಹೌಸಿನಲ್ಲಿ ಬಾಡಿಗೆಗಿದ್ದಾರೆ. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಮತ್ತು ಹೆಣ್ಣುಮಕ್ಕಳಿಗೆ ಮದುವೆಯಾಗಿದೆಯಾದ್ದರಿಂದ, ಅಂಕಲ್ ಮತ್ತೆ ಆಂಟಿ ಇಬ್ಬರೇ ಇಲ್ಲಿ ಇರುವುದು. ಅಂಕಲ್ ಆದ್ರೂ ತುಂಬಾ ಉತ್ಸಾಹದಿಂದಿರುವವರು. ಮನೆಗೆ Worldspace Radio, Tata Sky TV ಎಲ್ಲಾ ಹಾಕಿಸಿಕೊಂಡಿದ್ದಾರೆ. 'ರಿಟೈರ್ಡ್ ಲೈಫಪ್ಪ. ಅವಾಗ್ಲಂತೂ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ; ಈಗ ಎಲ್ಲಾ ಇದೆ, ಎಂಜಾಯ್ ಮಾಡೋಣ ಅಂತಿದೀನಿ' ಅಂದಿದ್ರು ನನ್ಹತ್ರ ಒಮ್ಮೆ.

ಆಂಟಿ ನನ್ನ ಬಳಿ 'ಅಂಕಲ್ ಹೋಗಿದ್ದು ನಿಮಗೆ ಗೊತ್ತೇ ಇಲ್ವಾ, ಮೊನ್ನೇನೆ ಹೋಗ್ಬಿಟ್ರು' ಅಂದ್ರು. 'ಎಲ್ಲಿಗೆ?' ಅಂತ ಕೇಳ್ಲಿಕ್ಕೆ ಹೊರಟವನು ಬಾಯಿಗೆ ಬೀಗ ಹಾಕಿಕೊಂಡೆ. ನನಗೆ ಅವರು ಸತ್ತುಹೋಗಿರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಏಕೆಂದರೆ ಆಂಟಿಯ ಹಣೆಯ ಕುಂಕುಮ, ಕೊರಳ ಕರಿಮಣಿ ಸರ ಎಲ್ಲಾ ಹಾಗೇ ಇತ್ತು. ಅಲ್ಲದೇ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ನಾನು ಮತ್ತೆ ಮತ್ತೆ ಆಂಟಿಯನ್ನೇ ನೋಡಿದೆ. 'ಮೊನ್ನೆ ಬೆಳಗ್ಗೆ ಒಂಬತ್ತೂ ವರೆ ಹೊತ್ತಿಗೆ ಹೋಗ್ಬಿಟ್ರಪ್ಪ. ತುಂಬಾ ಜನಗಳು ಸೇರಿದ್ರು, ನಿಮಗೆ ನಿಜವಾಗ್ಯೂ ಗೊತ್ತೇ ಇಲ್ವಾ?' ಅಂದ್ರು. ಈಗ ನಾನು ಸ್ವಲ್ಪ convince ಆದೆ. 'ಓ, ಹೌದಾ ಆಂಟಿ... ಅಯ್ಯೋ, ನಂಗೆ ಗೊತ್ತೇ ಇಲ್ವಲ್ಲ... ಅರೆ.. ಹೆಂಗಾಯ್ತು..' ಅಂತೆಲ್ಲ ಹಲುಬಿದೆ.

ಈ ಬೆಂಗಳೂರು ಇದೆಂತಾ ಊರೋ ಏನೋ. ಕೆಳಗಡೆ ಮನೆಯಲ್ಲಿ ಒಂದು ಸಾವು ಸಂಭವಿಸಿದರೆ ಮೇಲ್ಗಡೆ ಮನೆಯಲ್ಲಿರುವವರಿಗೆ ಅದು ತಿಳಿಯುವುದು ಮೂರು ದಿನಗಳ ನಂತರ! ನಾನು ಬೆಳಗ್ಗೆ ಎಂಟೂ ಮೂಕ್ಕಾಲಿಗೆ ಆಫೀಸಿಗೆ ಹೊರಟುಬಿಡುತ್ತೇನೆ. ಮತ್ತೆ ವಾಪಸು ಬರುವಷ್ಟರಲ್ಲಿ ಎಂಟಾಗಿರುತ್ತದೆ. ಅಲ್ಲದೇ ನಾನು ಈಗ ಮೂರು ದಿನಗಳಿಂದ ಸ್ವಲ್ಪ ಬ್ಯುಸಿ ಇದ್ದುದರಿಂದ ರೂಮಿನಲ್ಲಿರುತ್ತಿದ್ದುದೇ ಕಮ್ಮಿ. ಹೀಗಾಗಿ ನನಗೆ ಅಂಕಲ್ ತೀರಿಕೊಂಡ ಸುದ್ದಿ ತಿಳಿದೇ ಇರಲಿಲ್ಲ. ಅಂಕಲ್‍ಗೆ ಸ್ವಲ್ಪ ಅರಾಮಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಮನೆಯ ಹೊರಗಡೆ ಮೊನ್ನೆ ತುಂಬಾ ಚಪ್ಪಲಿಗಳು ಕಂಡರೂ ಯಾರೋ ನೆಂಟರು ಬಂದಿರಬಹುದು ಅಂತಷ್ಟೇ ಅಂದುಕೊಂಡಿದ್ದೆ.

ಆಂಟಿ 'ಇವರೇನು ನಗುನಗ್ತಾ ಇದಾರಲ ಅಂದ್ಕೋಬೇಡಪ್ಪಾ.. ಮೂರು ದಿನಗಳಿಂದ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋಗಿದೆ' ಅಂದ್ರು. 'ಅಯ್ಯೋ ಹಾಗೇನಿಲ್ಲ ಬಿಡಿ ಆಂಟಿ.. ಸಮಾಧಾನ ಮಾಡ್ಕೋಬೇಕು.. ಏನ್ಮಾಡ್ಲಿಕ್ಕಾಗೊತ್ತೆ...' ಅಂತ ಏನೇನೋ ಅಂದೆ. ನನಗೆ ಇಂತಹ ಸಂದರ್ಭಗಳಲ್ಲಿ ಮಾತನಾಡುವುದಕ್ಕೆ ತೋಚುವುದೇ ಇಲ್ಲ. 'ಇನ್ನು ನೀವು ಒಬ್ರೇ ಇರ್ತೀರ ಆಂಟಿ?' ಅಂತ ಕೇಳಿದೆ. 'ನನ್ನ ಹೆಣ್ಣುಮಕ್ಳು ತಮ್ಮನೇಲೇ ಇರು ಬಾ ಅಂತ ಕರೀತಿದಾರೆ... ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ..' ಅಂದರು. ಅಷ್ಟರಲ್ಲಿ ಅವರ ಹೆಣ್ಣುಮಗಳೊಬ್ಬರು ಮೇಲೆ ಬಂದು ಅವರನ್ನು ಕರೆದುಕೊಂಡು ಕೆಳಗೆ ಹೋದರು.

ಕಾರಂತರ 'ಅಳಿದ ಮೇಲೆ' ಪುಸ್ತಕ ನನ್ನ ಕೈಯಲ್ಲೇ ಇತ್ತು.


***

ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ. ಈ ಬ್ಲಾಗನ್ನು ನನ್ನ ಖಾಸ್‍ಬಾತ್‍ ಮಾಡಬಾರದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಇವತ್ತು ಬೆಳಗ್ಗೆ ಒಂದು ಎಸ್ಸೆಮ್ಮೆಸ್ ಬಂತು: ಸಂತೋಷ ಮತ್ತು ದುಃಖಗಳು ಇರುವುದೇ ಹಂಚಿಕೊಳ್ಳುವುದಕ್ಕಾಗಿ ಅಂತ. ಆಮೇಲೆ ಇದನ್ನೆಲ್ಲಾ ಟೈಪ್ ಮಾಡಿ upload ಮಾಡಿದೆ.