Thursday, March 31, 2016

ಹೋಳಿಯ ಮರುದಿನ

ಹೋಳಿಹಬ್ಬದ ಮರುದಿನ ಎಲ್ಲೆಂದರಲ್ಲಿ ಕಾಮನಬಿಲ್ಲು
ಜೋಡುರಸ್ತೆಯಲ್ಲಿ, ಸಣ್ಣ ಗಲ್ಲಿಯಲ್ಲಿ, ಕಾರಿಡಾರಿನಲ್ಲಿ,
ಮರದ ಬುಡದಲ್ಲಿ, ಉದ್ಯಾನದ ಬೆಂಚಿನಲ್ಲಿ, ಚಪ್ಪಲಿ ಸ್ಟಾಂಡಿನಲ್ಲಿ
ಚೆಲ್ಲಿದ ಬಣ್ಣ. ಮುಂಜಾನೆ ಮಬ್ಬಲ್ಲಿ ಕಣ್ಣುಜ್ಜುತ್ತಲೇ ಬಾಗಿಲು ತೆರೆದರೆ
ಹೂಕುಂಡದ ಪುಟ್ಟಗಿಡದಲ್ಲೊಂದು ಕೆಂಪುಹೂ.
ಬಚ್ಚಲ ಪೈಪಿನಿಂದ ಧಾರಾಕಾರ ಹೊರಹರಿವ ಬಣ್ಣನೀರು;
ಮುಖ ತೊಳೆದಷ್ಟೂ ತೆರೆಯುತ್ತ ಹೋಗುವ ಹೊಸ ಪದರಗಳು;
ತಲೆಗೂದಲ ಸಿಕ್ಕುಗಳಲಿ ಶಾಂಪೂಗಂತೂ ಸಿಕ್ಕಾಪಟ್ಟೆ ಕೆಲಸ;
ಬಿಳಿಯಂಗಿ ಇನ್ನು ಬಳಸಲಾಗದಂತಾದುದಕ್ಕೆ ಒಳಗೇ ಬೇಗುದಿ;
ವಿವರ್ಣವಿಶ್ವಕ್ಕೆ ಹೊಂದಿಕೊಳ್ಳಲು ಅಂದಿಡೀ ಕಷ್ಟ ಪಡುವ ಕಣ್ಣು.

ಆ ರಾತ್ರಿ ಬಹುಳದ ಚಂದ್ರ ಬೆಳ್ಳಗೇ ಏಳುವನು.
ತಾರಸಿಯ ಮೌನದಲ್ಲಿ ಕಾಲಿಡುವಾಗ ಕೌಮುದಿ ಕೇಳುವುದು:
ಬಳಿಸಿಕೊಂಡ ಬಣ್ಣ ಬಲು ಸುಲಭದಲ್ಲಳಿಸುವುದು.
ಬಳಿದುಕೊಂಡ ಬಣ್ಣ ಕಳಚುವುದು ಹೇಗೆ?

ತಂತಿಯಲ್ಲೊಣಗುತ್ತಿರುವ ಅಂಗಿ, ತೊಳೆದ ಅಂಗಳದ ಒದ್ದೆನೆಲ,
ಗೋಡೆಯಲ್ಲಿ ಚಟ್ಟು ಹೊಯ್ದ ಅವಳ ಕೈಯಚ್ಚು
ಎಂದೋ ಬಂದಿದ್ದ ಆಪ್ತಮಿತ್ರನ ಪತ್ರ
ಜಾನಪದ ಸಿರಿಯಜ್ಜಿಯ ಹಾಡಿನಲ್ಲಿನ ಮುಗ್ಧತೆ
ಎಲ್ಲವೂ ಸೇರಿಸುತ್ತಿವೆ ಬೆಳದಿಂಗಳೊಂದಿಗೆ ತಮ್ಮ ದನಿ.
ಪಿಚಕಾರಿಯಲ್ಲುಳಿದ ಓಕುಳಿ ಕುಲುಕದೇ ಕಾಯುತ್ತಿದೆ ಉತ್ತರಕ್ಕೆ.

ತತ್ತರಿಸುತ್ತೇನೆ ಈ ದಾಳಿಗೆ. ಕೆಳಗೋಡಿ ತಿಕ್ಕಿತಿಕ್ಕಿ
ತೊಳೆಯುತ್ತೇನೆ ಮೊಕ. ಶವರಿನಡಿ ಕೊನೆಯಿಲ್ಲದಂತ
ಭರ್ಜರಿ ಅಭ್ಯಂಜನ. ಬುರುಬುರು ಬರುವ ಬುರುಗು.
ಬಚ್ಚಲ ತುಂಬ ಸಾಬೂನಿನ ಘಮಘಮ ಪರಿಮಳ.
ಓಹೋ ಸ್ವಚ್ಛವಾದೆನೇ ಬಣ್ಣವೆಲ್ಲ ಕರಗಿತೇ ನಿರಭ್ರನಾದೆನೇ
-ಎಂದು ಮತ್ತೆಮತ್ತೆ ನೀರೆರೆದುಕೊಂಡು ಬಿಳಿಯ ಟವೆಲಿನಲ್ಲಿ
ಮೈಯೊರೆಸಿಕೊಂಡು ಶುಭ್ರ ಹೊಸಬಟ್ಟೆ ಧರಿಸಿ...

ಮೂರ್ನಾಲ್ಕು ದಿನಗಳಲ್ಲಿ ನಗರ ತನ್ನ ಕಾಲುದಾರಿ,
ಕಟ್ಟಡ ಸೋಪಾನ, ಮರದಿಂದೆದ್ದುಬಂದ ಬೇರು,
ಎಷ್ಟೋ ದಿನದಿಂದ ಅಲ್ಲೇ ನಿಂತಿರುವ ವಾಹನ,
ಮುಚ್ಚಿದಂಗಡಿಯ ಶಟರಿಗೆ ಹಾಕಿದ ಬೀಗ-ಗಳಿಗೆ
ಮೆತ್ತಿದ ಬಣ್ಣವನ್ನೆಲ್ಲ ನಿವಾರಿಸಿಕೊಂಡು ಸರಳ ಸುಂದರ
ನಿತ್ಯನಿರ್ಮಲ ಯೋಗಮುದ್ರೆ ಧರಿಸಿ ನಿಂತಿದೆ.


ನನ್ನ ಕಿವಿಯಲ್ಲಿ ಮಾತ್ರ ಇನ್ನೂ ಸ್ವಲ್ಪ ಬಣ್ಣ ಉಳಿದಿರುವ ಶಂಕೆ.

Tuesday, March 01, 2016

ಖಾಲಿ ಟೆರೇಸು ಮತ್ತು ಒಂಟಿ ರೂಮು

ಒಂದಾನೊಂದು ಕಾಲದಲ್ಲಿ ಈ ನಗರದಲ್ಲೂ ಹೆಂಚಿನ ಮನೆಗಳೂ, ಸೋಗೆಯ ಗುಡಿಸಲುಗಳೂ ಇದ್ದವಂತೆ. ನಗರ ಬೆಳೆದಂತೆ, ಜನರು ಸಿರಿವಂತರಾದಂತೆ, ಅವಶ್ಯಕತೆಗಳು ಅಧಿಕವಾದಂತೆ, ಹೊಸ ಅನ್ವೇಷಣೆಗಳ ಉತ್ಪನ್ನವೇ ಚೆನ್ನ ಎಂಬ ನಿಲುವು ಜಾಸ್ತಿಯಾಗುತ್ತ ಹೋದಂತೆ ಹೆಂಚು-ಸೋಗೆಯ ಮನೆಗಳು ಮಾಯವಾಗತೊಡಗಿ ಆರ್‌ಸಿಸಿ ಮನೆಗಳು ನಗರಾದ್ಯಂತ ತಲೆಯೆತ್ತತೊಡಗಿದವು. ಅಲ್ಲಿಲ್ಲಿ ಇದ್ದ ಶೀಟಿನ ಮನೆಗಳನ್ನೂ ಕೆಡವಿ ಸ್ಲಾಬ್ ಹಾಕಲಾಯಿತು. ಪರವೂರಿನಿಂದ ಇಲ್ಲಿಗೆ ಬಂದು ಬಾಡಿಗೆಗೆ ಮನೆ ಹುಡುಕುವವರೂ ಮೌಲ್ಡ್ ಇರೋ ಮನೆ ಬೇಕಪ್ಪ ನಮಗೆ, ಶೀಟ್ ಆಗಲ್ಲ ಎಂದು ರಿಯಲ್ ಎಸ್ಟೇಟ್ ಏಜೆಂಟುಗಳಿಗೆ ತಾಕೀತು ಮಾಡತೊಡಗಿದರು.  ಸೋಗೆ ಹೊಚ್ಚಿದ ಮನೆಗಳು ಗುಡಿಸಲುಗಳು ಎಂದೂ, ಹೆಂಚಿನ ಮನೆಗಳು ಹಳೆಯ ಕಾಲದ ಅವಾಸ್ತವಿಕ ವ್ಯವಸ್ಥೆಗಳೆಂದೂ, ಶೀಟಿನ ಮನೆಗಳು ಭಯಂಕರ ಸೆಖೆ ಸುಂದರವಲ್ಲದವೆಂದೂ ನಮ್ಮ ಕಲ್ಪನೆಯಲ್ಲಿ ಮಾರ್ಪಾಟಾದವು.  ಮಹಡಿಯ ಮೇಲೆ ಮಹಡಿಯನ್ನು ಕಟ್ಟಿಸಿಕೊಳ್ಳುತ್ತ ಆರ್‌ಸಿಸಿ ಮನೆಗಳು ಒಂದರ ಪಕ್ಕ ಒಂದರಂತೆ ನಗರದ ತುಂಬ ಸಪಾಟಾಗಿ ಎದ್ದೆದ್ದು ನಿಂತವು.

ಈ ನಗರವೇನಾದರೂ ಸಮತಲದಲ್ಲಿದ್ದರೆ, ಮನೆಗಳೆಲ್ಲಾ ಇಂತಿಷ್ಟೇ ಎತ್ತರವಿರಬೇಕು ಎಂಬ ನಿಯಮವೇನಾದರೂ ಇದ್ದಿದ್ದರೆ, ಎಲ್ಲ ಮನೆಗಳನ್ನೂ ಸೇರಿಸಿ ಒಂದೇ ತಾರಸಿ ಹಾಕಿ ಮುಚ್ಚಿ, ಅದರ ಮೇಲೊಂದು ಉಪನಗರವನ್ನೇ ಸೃಷ್ಟಿಸಿಬಿಡಬಹುದಿತ್ತೇನೋ. ಆದರೆ ಹಾಗಾಗಲಿಲ್ಲ. ಇಂಚು ಜಾಗವೂ ಲಕ್ಷಗಟ್ಟಲೆ ಬೆಲೆ ಬಾಳುವ ಈ ನಗರದಲ್ಲಿ, ವಿವಿಧ ಎತ್ತರದ ವಿವಿಧ ಆಕಾರದ ಮನೆಗಳು ತಮ್ಮ ನಡುವೆ ಇಷ್ಟಿಷ್ಟೇ ಅಂತರವಿಟ್ಟುಕೊಂಡು ವಿವಿಧ ಭಂಗಿಯಲ್ಲಿ ರಸ್ತೆಯ ಪಕ್ಕದಲ್ಲಿ ಕ್ಯೂ ನಿಂತವು. ಯಾರು ಅಟೆನ್ಷನ್ ಹೇಳಿದರೋ ಏನೋ, ಇವು ಮಾತ್ರ ಮುಂದೆ ಹೆಜ್ಜೆಯಿಡದೆ, ಭಂಗಿ ಬದಲಿಸದೇ ನಿಂತಲ್ಲೇ ನಿಂತುಬಿಟ್ಟವು. ಮಾಲೀಕರ ಅವಶ್ಯಕತೆಗೆ ತಕ್ಕಂತೆಯೋ, ಆರ್ಥಿಕ ಸ್ಥಿತಿಗನುಗುಣವಾಗಿಯೋ, ಸರ್ಕಾರದ ನಿಯಮದ ಅನ್ವಯವೋ, ಹೀಗೆ ಪೆಟ್ಟಿಗೆಗಳಂತೆ ಮೇಲ್ಮೇಲೆ ಏಳುವ ಈ ಮನೆಗಳ ಬೆಳವಣಿಗೆ ಯಾವುದೋ ನಿಗಧಿತ ಎತ್ತರ ತಲುಪಿದಾಕ್ಷಣ ನಿಂತುಬಿಡುವುದು. ಆ ಕಟ್ಟಕಡೆಯಲ್ಲಿ ಹಾಕಲ್ಪಟ್ಟ ತಾರಸಿಗೆ ಇನ್ನು ಜೀವಮಾನವಿಡೀ ಬಿಸಿಲು-ಮಳೆಯುಣ್ಣುತ್ತ ಹಾಗೇ ಬಿದ್ದಿರುವ ಶಾಪ.

ಕಟ್ಟಿದ ಕೆಲಕಾಲದವರೆಗೆ ಕ್ಯೂರಿಂಗಿನ ನೀರು ಕುಡಿದು ಗಟ್ಟಿಯಾಗುವ ತಾರಸಿ, ಮುಂದೆ ಬರುವ ಸಕಲ ಕಷ್ಟ-ಸುಖಗಳನ್ನೂ ಎದುರಿಸಲು ಸಿದ್ದವಾಗುವುದು. ಹರವಾಗಿರುವ ತನ್ನೆದೆಯನ್ನು ಬಿಸಿಲಿಗೊಡ್ಡಿ ಧೈರ್ಯವಾಗಿ ನಿಲ್ಲುವುದು. ಸಂಜೆಮಳೆಗೆ ಮೈಯೊಡ್ಡಿ ಸ್ನಾನ ಮಾಡಿ ಸ್ವಚ್ಛವಾಗುವುದು.  ಮಾಘೀಚಳಿಯಲ್ಲಿ ತನ್ನ ಕಾಂಕ್ರೀಟೊಡಲ ಸಿಮೆಂಟಿನ ಕಣಗಳಿಗೆಲ್ಲ ಪರಸ್ಪರ ತಬ್ಬಿ ಹಿಡಿದುಕೊಳ್ಳುವಂತೆ ಹೇಳಿ ಆದಷ್ಟೂ ಬೆಚ್ಚಗಿರಲು ಪ್ರಯತ್ನಿಸುವುದು. ಅಪರೂಪಕ್ಕೆ ವೃಷ್ಟಿಯಾದ ಆಲಿಕಲ್ಲುಗಳನ್ನು ತನ್ನ ಬೊಗಸೆಯೊಡ್ಡಿ ಹಿಡಿದು, ಆಯಲು ಬರುವ ಚಿಣ್ಣರಿಗಾಗಿ ಕರಗಿಸದೇ ಕಾಯುವುದು. ಪ್ರತಿ ಸಂಜೆ ದಪ್ಪ ಹೆಜ್ಜೆಯಿಟ್ಟು ವಾಕ್ ಮಾಡುವ ಆಂಟಿಯನ್ನು ಚೂರೂ ಬೈದುಕೊಳ್ಳದೇ ನಡೆಸುವುದು. ಮಕ್ಕಳ ಪ್ಲಾಸ್ಟಿಕ್ ಬಾಲಿನ ಕ್ರಿಕೆಟ್ಟಿಗೆ ತಾನೇ ಪಿಚ್ ಆಗುವುದು. ಹಾರಿ ಬರುವ ದೂರಮರದ ಹಣ್ಣೆಲೆಯನ್ನು, ಹಪ್ಪಳ-ಸಂಡಿಗೆಗಳೊಂದಿಗೆ, ಜತನದಿಂದ ಒಣಗಿಸುವುದು. ರಾತ್ರಿಯ ಹೊತ್ತು ನಕ್ಷತ್ರ ತುಂಬಿದ ಆಕಾಶ ನೋಡುತ್ತ, ಇತ್ತಲಿಂದ ಅತ್ತ ಸಾಗುವ ತುಂಬುಚಂದಿರನನ್ನು ಕಣ್ತುಂಬಿಕೊಳ್ಳುತ್ತ, ಆಗೀಗ ಸದ್ದು ಮಾಡುತ್ತ ಹೋಗುವ ವಿಮಾನಗಳನ್ನು ಬೆರಗಿನಿಂದ ವೀಕ್ಷಿಸುತ್ತ, ಜಾರಿ ಬೀಳುವ ಉಲ್ಕೆಯನ್ನು ಒಮ್ಮೆಯಾದರೂ ಹಿಡಿಯಬೇಕು ಅಂತ ಆಸೆಪಡುತ್ತಾ ನಿದ್ದೆ ಹೋಗುವುದು.

ಈ ತಾರಸಿಯ ಮೇಲೆ, ಸದಾ ಇದರ ಗೆಳೆಯರಂತೆ, ಅಡ್ಡಡ್ಡ ಎಳೆದ ಒಂದಷ್ಟು ತಂತಿಗಳು. ಬಟ್ಟೆ ಒಣಗಿಸಲೆಂದು ಕಟ್ಟಿದ ಈ ತಂತಿಗಳು ಆಗಾಗ ಗಾಳಿಗೆ ಪರಸ್ಪರ ತಾಗಿ ಹೊರಡಿಸುವ ನಾದ ತಾರಸಿಯ ಪಾಲಿಗೆ ಸಂಗೀತೋತ್ಸವ. ತನ್ನನ್ನೇ ಒಂದು ತಂಬೂರಿ ಹಾಗೆ, ಆ ತಂತಿಗಳನ್ನು ತಂಬೂರಿಯ ತಂತಿಗಳ ಹಾಗೆ ಕಲ್ಪಿಸಿಕೊಂಡು ತಾರಸಿ ರೋಮಾಂಚನಗೊಳ್ಳುವುದು. ಈ ತಂತಿಗಳ ಮೇಲೆ ಒಣಹಾಕಿದ ಬಟ್ಟೆಗಳು ಟಪ್ಟಪ್ ಉದುರಿಸುವ ನೀರ ಹನಿಗಳೂ ತಾರಸಿಗೆ ಇಷ್ಟ. ಆಗಾಗ ಆಯತಪ್ಪಿ ಬೀಳುವ ಬಟ್ಟೆಗಳನ್ನು ಈ ಮನೆಬಿಟ್ಟು ಹೊರಹಾರದಂತೆ ತಾರಸಿ ತನ್ನ ಪ್ಯಾರಾಪಿಟ್ಟಿನ ಮೂಲಕ ತಡೆಯುವುದು.

ತಾರಸಿಯ ಮೇಲೆ ಒಂದೋ ಎರಡು ನೀರಿನ ಟ್ಯಾಂಕುಗಳು. ತಾರಸಿಯಿಂದ ಸ್ವಲ್ಪ ಎತ್ತರಕ್ಕೇರಿಸಿ ಕಟ್ಟಿದ ಕಟ್ಟೆಯ ಮೇಲೆ ಇವುಗಳ ಆವಾಸಸ್ಥಾನ. ದಿನಕ್ಕೊಮ್ಮೆ ತುಂಬಿ ಉಕ್ಕುವ ನೀರು ತಾರಸಿಯನ್ನು ಸ್ವಲ್ಪವೇ ತೋಯಿಸಿ, ಯಾವುದೋ ಆಕಾರ ಮೂಡಿಸಿ, ಹಾಗೇ ಬಿಸಿಲಿಗಾವಿಯಾಗುವುದು. ಈ ಟ್ಯಾಂಕು, ತನ್ನ ಸನಿಹದಲ್ಲೇ ಸ್ಥಾಪಿಸಲ್ಪಟ್ಟಿರುವ, ಸೂರ್ಯನ ಶಕ್ತಿ ತನಗೆ ಮಾತ್ರ ಅರಿವಿದೆ ಎಂಬಂತೆ ನಿಂತಿರುವ, ಬಾಗು ಸೋಲಾರ್ ಪ್ಯಾನೆಲ್ಲಿಗೂ ನೀರೊದಗಿಸುತ್ತದೆ. ದೊಡ್ಡ ಟ್ಯಾಂಕು ಪಕ್ಕದ ಟೆರೇಸಿನಲ್ಲಿರುವ ತನಗಿಂತ ಚಿಕ್ಕದಾದ ಟ್ಯಾಂಕನ್ನು ತನ್ನ ತಮ್ಮನಂತೆ ಆದರಿಸುತ್ತದೆ. ಎಲ್ಲರೂ ಮಲಗಿದ ಒಂದು ನಟ್ಟಿರುಳು, ಕರೆಂಟು ಸಹ ಹೋಗಿ ಜಗದೆಲ್ಲ ಯಂತ್ರಗಳೂ ನಿಂತು, ರಸ್ತೆಯಲ್ಲಿ ಯಾವ ವಾಹನವೂ ಓಡಾಡದ ಅಪರೂಪದ ತೃಣಮೌನದ ಹೊತ್ತಲ್ಲಿ, ಎಲ್ಲರ ಮನೆಯ ಟೆರೇಸಿನ ಮೇಲಿನ ಟ್ಯಾಂಕುಗಳು ತಮ್ಮೊಡಲ ನೀರನ್ನು ಜುಳುಜುಳುಗುಡಿಸುತ್ತ ಮಾತಾಡಿಕೊಳ್ಳುತ್ತವೆ ಮತ್ತು ಈ ಗುಟ್ಟು ಯಾರಿಗೂ ತಿಳಿಯದಂತೆ ಎಚ್ಚರ ವಹಿಸುತ್ತವೆ. ಆಶ್ಚರ್ಯ ಎಂದರೆ, ಈ ರಹಸ್ಯದ ಅರಿವಿರುವ ತಾರಸಿಯ ಮೇಲೆ ಇರಿಸಲಾಗಿರುವ ನಾಲ್ಕೈದು ಹೂಕುಂಡಗಳಲ್ಲಿ ಅರಳಿದ ಹೂಗಳೂ ಈ ವಿಷಯದಲ್ಲಿ ಬಾಯಿಬಿಡದೇ ಸುಮ್ಮನಿರುವುದು.

ಸ್ವಲ್ಪ ಬುದ್ಧಿವಂತಿಕೆ ಇರುವ, ಬಾಡಿಗೆಯ ಆಸೆ ಹೆಚ್ಚಿದ ಅಥವಾ ಸರ್ಕಾರದ ನಿಯಮವನ್ನು ಉಲ್ಲಂಘಿಸುವ ಧೈರ್ಯ ತೋರಿದ ಮಾಲೀಕರು ಮತ್ತು ಬಿಲ್ಡರುಗಳು, ಈ ಟ್ಯಾಂಕುಗಳನ್ನು ಇಡಲು ಕಟ್ಟೆ ಕಟ್ಟುವ ಬದಲು ಒಂದು ಪುಟ್ಟ ರೂಮು ಕಟ್ಟಿಬಿಟ್ಟರು. ಈ ರೂಮಿಗೆ ಹೊಂದಿಕೊಂಡಂತೆ ಒಂದು ಶೌಚಗೃಹ.  ಕೆಲ ರೂಮುಗಳೊಳಗೆ ಸಣ್ಣದೊಂದು ಅಡುಗೆ ಕಟ್ಟೆಯೂ ಮೂಡಿತು. ಟೆರೇಸಿನ ಮೇಲಿನ ಈ ಒಂಟಿಕೋಣೆಗಳು ಬ್ಯಾಚುಲರುಗಳ ವಾಸಕ್ಕೆ ಬಾಗಿಲು ತೆರೆದು ನಿಂತವು.  ಕೆಲಸ ಅರಸಿ ನಗರಕ್ಕೆ ಬರುವ ಬ್ಯಾಚುಲರುಗಳ ಪಾಲಿಗೆ ಇವೇ ಅರಮನೆಗಳಾದವು. ಒಬ್ಬರೋ ಇಬ್ಬರೋ ಸೇರಿ, ಓನರಿನ ಜತೆ ಮಾತಾಡಿ ಬಾಡಿಗೆ ಹೊಂದಿಸಿ, ತಮ್ಮ ಪುಟ್ಟ ಬಟ್ಟೆಗಂಟು ಮತ್ತು ಆರೆಂಟು ಪಾತ್ರೆಗಳ ಅಡುಗೆ ಸಾಮಾನಿನೊಂದಿಗೆ ಈ ಗೂಡು ಹೊಕ್ಕುಬಿಟ್ಟರೆ ಆಮೇಲೆ ಅದೇ ಅವರ ಸ್ವರ್ಗ. ಒಳಗೆ ಇಷ್ಟೇ ಜಾಗವಿರುವ ಕೋಣೆ, ಎದುರು ಎಷ್ಟೆಲ್ಲ ಜಾಗವಿರುವ ವಿಶಾಲ ಟೆರೇಸು. ಅಂಚಿಗೆ ಬಂದು, ಪ್ಯಾರಾಪಿಟ್ಟಿಗೆ ಒರಗಿ, ಬಗ್ಗಿ ನೋಡಿದರೆ ಕೆಳಗೆ ಹುಳುಗಳಂತೆ ಓಡಾಡುವ ಜನಗಳು, ಆಟಿಕೆಗಳಂತೆ ಕಾಣುವ ವಾಹನಗಳು. ಸ್ವಚ್ಛಂದ ಬೀಸುವ ಗಾಳಿಗೆ ತೋಳ್ಬಿಚ್ಚಿ ನಿಂತರೆ ಜಗವನ್ನೇ ಮರೆಸುವ ಮಾಯಾಶಕ್ತಿ.

ರೂಮನ್ನಷ್ಟೇ ಬಾಡಿಗೆಗೆ ಪಡೆದಿದ್ದರೂ ಬ್ಯಾಚುಲರುಗಳ ಪಾಲಿಗೆ ಎದುರಿನ ಟೆರೇಸು ಸಹ ಅದರಲ್ಲಿ ಸೇರಿಕೊಂಡಂತೆ. ಟೆರೇಸೂ ಸಹ ಎಂದೂ ಆ ರೂಮನ್ನು ಬೇರೆಯಾಗಿ ಕಂಡಿಲ್ಲ. ಅದು ತನ್ನ ಮಡಿಲ ಮಗುವಂತೆ, ತನ್ನ ಅವಿಭಾಜ್ಯ ಅಂಗದಂತೆ ಭಾವಿಸಿದೆ. ಹೀಗಾಗಿ, ಬ್ಯಾಚುಲರುಗಳು ರೂಮಿನೊಳಗಿನಗಿಂತ ಹೆಚ್ಚಿನ ಸಮಯವನ್ನು ಕಳೆಯುವುದು ಈ ಖಾಲಿ ಟೆರೇಸಿನಲ್ಲೇ. ಬಾಡಿಗೆ ಮಾತಾಡಿದ್ದೇನೂ ಜಾಸ್ತಿಯಾಗ್ಲಿಲ್ಲ ಕಣೋ, ಇಷ್ಟು ದೊಡ್ಡ ಟೆರೇಸು ಫ್ರೀ ಸಿಕ್ಕಿದ್ಯಲ್ಲ?’ ಅಂತ ತಮಗೆ ತಾವೇ ಹೇಳಿಕೊಂಡು ಸಮರ್ಥಿಸಿಕೊಳ್ಳುವರು. ಟೆರೇಸಿನಲ್ಲಿ ಅಡ್ಡಾದಿಡ್ಡಿ ಎಳೆದಿರುವ ವಿವಿಧ ಕೇಬಲ್ಲುಗಳನ್ನು ಇವರು ಸರಿಸಿ ಒಂದು ಮೂಲೆಗೆ ತಳ್ಳುವರು. ಫೋನಿನಲ್ಲಿ ಮಾತಾಡುತ್ತಾ, ಹಾಡು ಕೇಳುತ್ತಾ, ಹರಟೆ ಹೊಡೆಯುತ್ತಾ, ದಿಗಂತದೆಡೆಗೆ ನೋಡುತ್ತಾ ಈ ಟೆರೇಸಿನ ತುಂಬಾ ಅಡ್ಡಾಡುವರು. ಇಲ್ಲಿವರು ಸಿಗರೇಟು ಹಚ್ಚಿದರೆ ಯಾವ ಗ್ರೌಂಡ್ ಫ್ಲೋರಿನ ಅಜ್ಜನೂ ಕೆಮ್ಮುವುದಿಲ್ಲ. ಇಲ್ಲಿವರು ಎಷ್ಟು ಹೊತ್ತು ಶೂನ್ಯದೆಡೆಗೆ ನೋಡುತ್ತ ನಿಂತರೂ ಯಾವ ದಾರಿಹೋಕನೂ ಯಾಕೆಂದು ವಿಚಾರಿಸುವುದಿಲ್ಲ.  ಬೇಸಿಗೆಯಲ್ಲಿ ರೂಮಿನೊಳಗೆ ಮಲಗಲು ತುಂಬಾ ಸೆಖೆಯಾಯಿತಾ? ಟೆರೇಸಿನಲ್ಲಿ ಒಂದು ಚಾಪೆ ಹಾಸಿ ಅಡ್ಡಾದರೆ ಆಕಾಶಕಂಬಳಿಯಡಿ ಹಾಯಾದ ನಿದ್ರೆ. ಶನಿವಾರ ಸಂಜೆಗೆ ಗೆಳೆಯರು ಬಂದರಾ? ಟೆರೇಸಿನಲ್ಲಿ ನಾಲ್ಕು ಸ್ಟೂಲು ಹಾಕಿ, ನಡುವೆ ಒಂದು ಟೀಪಾಯಿಯಿಟ್ಟು, ಅದರ ಮೇಲೆ ಬಾಟಲಿಗಳನ್ನೂ ಕರಿದ ತಿಂಡಿಗಳನ್ನೂ ಇರಿಸಿ ಭರ್ಜರಿ ಪಾರ್ಟಿ. ಸಿಕ್ಕಾಪಟ್ಟೆ ಗಲಾಟೆ ಮಾಡ್ತೀರಿ ಅಂತ ಓನರು ತಕರಾರು ತೆಗೆದರಾ? ಇನ್ಯಾವುದೋ ಇಂಥದೇ ಟೆರೇಸಿನ ಮೇಲಿನ ರೂಮಿಗೆ ಗಂಟುಮೂಟೆ ಕಟ್ಟಿ ಹೊರಟರಾಯಿತು.

ಎಷ್ಟೋ ವರ್ಷಗಳಿಂದ ಬ್ಯಾಚುಲರುಗಳಿಗೂ, ವಿದ್ಯಾರ್ಥಿಗಳಿಗೂ, ಕೆಲವೊಮ್ಮೆ ಪುಟ್ಟ ಸಂಸಾರಗಳಿಗೂ ಆಶ್ರಯದಾಯಿಯಾಗಿರುವ ಈ ಒಂಟಿಕೋಣೆಗಳು, ದೊಡ್ಡ ಮನೆ ಬಾಡಿಗೆಗೆ ಪಡೆದರೆ ಪ್ರತಿ ತಿಂಗಳು ತೆರಬೇಕಿದ್ದ ಬಾಡಿಗೆ ಹಣದಲ್ಲಿ ನಾಲ್ಕು ಕಾಸು ಉಳಿಸುವಲ್ಲಿ ಮಹತ್ವದ ಪಾತ್ರವನ್ನೇ ವಹಿಸಿವೆ. ಇಲ್ಲಿ ಉಳಿದ ರೂಪಾಯಿ ಯಾವುದೋ ಊರಿನಲ್ಲಿರುವ ಅಮ್ಮನಿಗೆ ಮನಿಯಾರ್ಡರ್ ಆಗಿದೆ. ತಂಗಿಯ ಬಳೆಯಾಗಿ ಘಲ್ಲೆಂದಿದೆ. ಟೆರೇಸಿನ ಪುಟ್ಟ ಕೋಣೆಯಲ್ಲೇ ಇದ್ದು ಓದಿದ ಹುಡುಗ ದೊಡ್ಡ ನೌಕರಿ ಹಿಡಿದು ಕೈತುಂಬ ಸಂಬಳ ಗಳಿಸಿ ಹೊಸ ಮನೆ ಕಟ್ಟಿಸಿದ್ದಾನೆ.


ಎಲ್ಲಾ ಗೊತ್ತಿದ್ದೂ ಏನೂ ತಿಳಿಯದಂತೆ ಸುಮ್ಮನೆ ಮಲಗಿದೆ ತಾರಸಿ. ಬಟ್ಟೆ ಒಣಗಿಸಲೆಂದು ತಾರಸಿಗೆ ಬಂದ ಕೆಲಸದವಳು, ಬೀಗ ಹಾಕಿದ ಕೋಣೆಯ ತೆರೆದ ಕಿಟಕಿಯಿಂದ ಹಣಿಕಿ ನೋಡಿ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು, ಹೌಹಾರಿ ವಾಪಸು ಹೋಗಿದ್ದಾಳೆ. ಎದುರು ಮನೆಯ ಬಾಲ್ಕನಿಯಲ್ಲಿ ಪ್ರತಿ ಮುಂಜಾನೆ ಕಾಣುವ ಚೆಲುವೆಯ ಮೇಲೆ ಒಂಟಿಕೋಣೆಯ ಹುಡುಗನಿಗೆ ಮನಸಾಗಿದೆ. ಟೆರೇಸಿನ ತುತ್ತತುದಿಯಲ್ಲಿ ನಿಂತು, ಗಾಳಿಗೆ ಹಾರುವ ಅವಳ ರೇಷ್ಮೆಗೂದಲನ್ನು ಇಲ್ಲಿಂದಲೇ ನೇವರಿಸುತ್ತಾನೆ. ಅವಳಿಂದೊಂದು ಸಣ್ಣ ಇಷಾರೆ ಸಿಕ್ಕರೆ ಸಾಕು, ಇವನು ಟೆರೇಸಿಗಿಂತಲೂ ಎತ್ತರದಲ್ಲಿ ತೇಲುತ್ತಾನೆ. ಟೆರೇಸು ತನ್ನ ಮೈತುಂಬ ಮರಳ ನವಿರೇಳಿಸಿಕೊಂಡು ಈ ಬೆರಗನ್ನು ಎವೆಯಿಕ್ಕದೆ ನೋಡುತ್ತದೆ. 

[ವಿಶ್ವವಾಣಿಯ ಸಾಪ್ತಾಹಿಕ 'ವಿರಾಮ'ದಲ್ಲಿ ಪ್ರಕಟಿತ.]

Friday, February 26, 2016

ಮಾರುವೇಷ

ಭಾವಗಳ ಅಭಿವ್ಯಕ್ತಿ ಬಲು ಸುಲಭ ಈಗ.
ಬೆರಳಂಚಲ್ಲಿ ಎಮೋಟಿಕಾನುಗಳು:
ನಗುವೋ, ಮುಗುಳ್ನಗುವೋ, ಗಹಗಹವೋ,
ಅಳುವೋ, ಬೇಸರವೋ, ಕೋಪವೋ,
ಯಾವುದೆಂದರಿಯಲಾಗದ ಬರಿಮೌನವೋ-
ಹುಡುಕಿ ಕಳುಹಿಸಿದರೆ ಖಂಡಾಂತರ ದಾಟಿ
ತಲುಪಬೇಕಾದವರ ತಲುಪುವುದು ಕ್ಷಣದಲ್ಲೇ.
ಓಹೋ, ಅತ್ತಲಿಂದಲೂ ಪ್ರತಿಕ್ರಿಯೆ ಮರುಕ್ಷಣವೇ.

ವಾದಗಳ ಮಾಡುವುದೂ ಬಲು ಸುಲಭ ಈಗ.
ಬೆರಳಂಚಲ್ಲಿ ಮಾಹಿತಿಗಳ ಸಮೃದ್ಧಿ:
ನಂಬಿದ ಸೂತ್ರಗಳ, ಮೂಗನೇರ ಕಂಡ ದೃಶ್ಯಗಳ,
ಸುಳ್ಳುಗಳ, ನಿಜಗಳ, ಹೇಳಿದ್ದ, ಮಾಡಿದ್ದ, ನೋಡಿದ್ದ,
ಬರೆದಿದ್ದ, ತಿರುಚಿದ್ದ -ಏನು ಬೇಕೆಂದರದನ್ನ ಕ್ಷಣದಲ್ಲಿ ಹುಡುಕಿ ತೆಗೆದು
ಪ್ರಸ್ತುತಪಡಿಸಿ ಸಮಜಾಯಿಷಿ ನೀಡಿ ನಿಬ್ಬೆರಗಾಗುವಂತೆ
ದಾಖಲೆಯೊದಗಿಸಿ ಪಟ್ಟು ಸಡಿಲಿಸದೆ ಬಿಗಿಹಿಡಿದು.
ನೋನೋ, ಇಳಿಸಬೇಡಿ ಬಿಲ್ಲು, ಅತ್ತಲಿಂದಿನ್ನೇನು ಬರಲಿದೆ ತಿರುಗುಬಾಣ.

ಸಂಜೆಯಾಯಿತೋ, ಸೂರ್ಯ ಮುಳುಗಿದನೋ,
ಮುಟ್ಟಬೇಕಾದವರಿಗೆ ಮುಟ್ಟಿತೋ, ನಾಟಬೇಕಾದವರಿಗೆ ನಾಟಿತೋ,
ಕೊಡಬೇಕೆಂದುಕೊಂಡದ್ದನ್ನು ಕೊಟ್ಟಾಯಿತೋ-
ಮುಗಿಯಿತು ನಿಮ್ಮ ಕೆಲಸ.
ನಾಳೆ ಬೆಳಗಾದರೆ ಹೊಸ ಎಮೋಟಿಕಾನುಗಳು
ಪರದೆಯ ಮೇಲೆ ಹೊಳೆಯುತ್ತ ನರ್ತಿಸುತ್ತವೆ.
ಪ್ರತಿಪಾದಿಸಲು ಹೊಸ ವಿಷಯ ಸಿದ್ಧವಿರುತ್ತದೆ.
ಹಳೆಧೂಳ ಕೊಡವಿಕೊಂಡು ಮುಂದೆ ಹೋದರಾಯಿತು.

ಯಾರಲ್ಲಿ ಬಿಕ್ಕಳಿಸುತ್ತಿರುವವರು ನಮ್ಮ ಬಳಿ ಕರ್ಚೀಫ್ ಇಲ್ಲ.
ಯಾರಲ್ಲಿ ರಕ್ತ ಕಾರಿಕೊಂಡು ಬಿದ್ದವರು ಬ್ಯಾಂಡೇಡ್ ಮೆಡಿಕಲ್ಲಿನಲ್ಲಿ ಸಿಗುತ್ತದೆ.
ಯಾರಲ್ಲಿ ಬಿದ್ದೂಬಿದ್ದು ನಗುತ್ತಿರುವವರು ಬೀಳಲಿ, ಈಗ ನಮಗೆ ಪುರುಸೊತ್ತಿಲ್ಲ.
ಯಾರಲ್ಲಿ ಹಸಿದು ಅಡ್ಡಾದವರು ಮೊಬೈಲಲ್ಲೇ ಊಟ ಆರ್ಡರ್ ಮಾಡ್ಬಹುದು,
ಆದರೆ ಅವನಿಗೆ ವಿಳಾಸವಿಲ್ಲವಲ್ಲ.

ಪರರ ಪಾಡು ಕಡೆಗಿರಲಿ, ಈಗಷ್ಟೆ ನಾನು ತಿಂದ ಪಲಾವಿನ ರುಚಿ ಹೇಗಿತ್ತು,
ದಾಟಿ ಬಂದ ಹೂಬನದಲ್ಲಿ ಯಾವ ಕಂಪಿತ್ತು, ಸ್ನಾನ ಮಾಡಿದ ನೀರು
ಎಷ್ಟು ಬೆಚ್ಚಗಿತ್ತು, ಕೇಳಿಸಿದ ದನಿಯಲ್ಲಿ ಎಷ್ಟು ಮಾರ್ದವವಿತ್ತು,
ಆ ಸಾಲ್ಸಾ ನೃತ್ಯದಲದೆಂತ ಸೊಬಗಿತ್ತು ಅಂತೆಲ್ಲ ಯೋಚಿಸಲೂ ಸಮಯವಿಲ್ಲ.

ಬಟ್ಟೆಯ ಮೇಲೆ ಬಟ್ಟೆಯ ಧರಿಸಿ ಏನೂ ತಾಕುತ್ತಿಲ್ಲ.
ಕಡುಗಪ್ಪು ಕನ್ನಡಕದ ಮೂಲಕ ಏನೂ ಕಾಣಿಸುತ್ತಿಲ್ಲ.
ಬಳಿದುಕೊಂಡ ಢಾಳ ಬಣ್ಣ ದಾಟಿ ಏನೂ ಇಳಿಯುತ್ತಿಲ್ಲ.
ಇಯರ್ಫೋನು ಕಿವಿಯೊಳಗೇ ಹೊಕ್ಕು ಏನೂ ಕೇಳಿಸುತ್ತಿಲ್ಲ.

ನಿನ್ನೆ ಏನಾಯಿತು ಗೊತ್ತಾ?
ಕನ್ನಡಿಯೊಳಗೆ ನನ್ನನ್ನೇ ನಾನು ನೋಡಿಕೊಂಡು ಬೆಚ್ಚಿಬಿದ್ದೆ. 

Tuesday, February 09, 2016

ಕದ, ಬೆಳಕು ಮತ್ತು ಸದ್ದು

ಕದ ಹಾಕುವುದು ಸದ್ದಡಗುವ ಮುನ್ಸೂಚನೆ.
ದೀಪ ನಿಧಾನಕೆ ಡಿಮ್ಮಾಗುತ್ತಾ ಪೂರ್ತಿ ಕತ್ತಲಾವರಿಸಿದಮೇಲೆ
ಅಂಬಲದ ತುಂಬ ಮೌನದೊಡೆತನ, ಹೆಚ್ಚೆಂದರೆ ಪಿಸುಮಾತು.
ಆಮೇಲೆ ನಾಟಕವೋ ಸಿನಿಮಾವೋ ಶುರುವಾಗುವುದು ಸರಿಯೇ;
ಆದರೆ, ಆಶ್ಚರ್ಯ ನನಗೆ: ಈ ಕದ ಹಾಕುವ ದೀಪವಾರುವ ಪ್ರಕ್ರಿಯೆ
ಪ್ರತಿ ಸಲ ಮೌನದ ಕರೆಯಾಗುವ ರೀತಿಗೆ.

ಅಂತೂ ಅವತ್ತು ನಗರ ದಾಟುತ್ತಿದ್ದಂತೆಯೇ ನೈಟ್‌ಬಸ್ಸಿನ ಕದ ಹಾಕಲ್ಪಟ್ಟು,
ಆವಾರದಲ್ಲಿ ತುಂಬಿದ್ದ ಬೆಳಕೆಲ್ಲ ಆರಿ ನೀವಿನ್ನು ಮಲಗಬೇಕೂ
ಎಂಬ ಚಾಲಕನ ಮೌನ ತಾಕೀತಿಗೆ ಬೆದರಿ ಪ್ರಯಾಣಿಕರೆಲ್ಲ ಹರಟೆ ನಿಲ್ಲಿಸಿ
ಸೀಟು ಹಿಂದೆ ಮಾಡಿಕೊಂಡು ಕಣ್ಮುಚ್ಚಿಕೊಂಡು ನಿದ್ರಿಸಲೆಣಿಸುತ್ತಾ...

ಆದರೆ ಅವಳು ಮಾತ್ರ ಯಾಕೆ ಹಾಗೆ ಕಣ್ಬಿಟ್ಟುಕೊಂಡು...
ಎಲ್ಲರಿಂದ ಬೇರ್ಪಟ್ಟವಳಂತೆ, ಜನರಲ್ ವಾರ್ಡಿನ ನಿದ್ರೆ ಬಾರದ ರೋಗಿಯಂತೆ...
ಚಿರಂತನ ತಿಮಿರದಲ್ಲಿ ಮುಳುಗಿದವಳಂತೆ...

ಕತ್ತಲಾದಾಗಲಾದರೂ ಕಣ್ಮುಚ್ಚು. ಕಹಿಯನ್ನೂ, ಆತಂಕವನ್ನೂ,
ಜಗತ್ತನ್ನೂ ಮರೆ. ಹಾಗೆ ಕಿಟಕಿಯಿಂದ ಹೊರಗೆ ನಿರುಕಿಸಬೇಡ.
ಹಾಯುವ ವಾಹನಗಳ ಕೋರೈಸುವ ಬೆಳಕು
ನಿನ್ನ ಎದೆಬಡಿತ ಕಿತ್ತುಕೊಂಡಾವು. ಎವೆಯಿಕ್ಕು.
-ಎಂದೆಷ್ಟೇ ಅನುನಯದಿಂದ ಹೇಳಿದರೂ ರೆಪ್ಪೆಯಲ್ಲಾಡಿಸದೆ,
ಸೀಟಿಗೊರಗದೆ, ಚೂರೂ ಕದಲದೆ. ಹಾ! ಅವಳದದೆಂಥ ಹಟ.

ಆ ಅಪರಿಚಿತೆಯ ಕಣ್ಣಲ್ಲಿ ಪ್ರಜ್ವಲಿಸುತ್ತಿದ್ದ ಹಾಯ್ವ ವಾಹನಗಳ ಬೆಳಕು
ಈಗ ಈ ಕೋಣೆಯಲ್ಲಿ ನನ್ನ ನಿದ್ರೆಗೆಡಿಸುತ್ತಿರುವಾಗ
ಅವಳ ಹೃದಯದಲ್ಲಿದ್ದ ಕತ್ತಲೆಯ ಮೇಲೊಂದು ಕವಿತೆ ಬರೆಯಬೇಕಿದೆ.

ಕವಿತೆಯೇನು, ಕಲ್ಪನೆಯ ಸ್ವಚ್ಛಂದದಲ್ಲಿ ಕತೆಯೂ ಬರೆದೇನು.
ಸುತ್ತ ಕತ್ತಲಾವರಿಸಿದೆ, ರಂಗದ ಮೇಲೆ ಅಲ್ಲಲ್ಲಿ ಬೆಳಕಿದೆ.
ಅವಳ ಜೀವನದ ಪಾತ್ರಧಾರಿಗಳೆಲ್ಲ ಅಲ್ಲಿದ್ದಾರೆ.
ಅವರು ಹೆಜ್ಜೆಯಿಟ್ಟೆಡೆಗೆಲ್ಲ ಬೆಳಕೂ ಚಲಿಸುತ್ತಿದೆ.
ಇನ್ನೇನು, ಅವಳೆದೆಯ ಘನೀಕೃತ ಮೌನಕ್ಕೆ ಕಾರಣರಾರು,
ದೀಪವಾರಿಸಿದ ಗಾಳಿ ಯಾವ ದಿಕ್ಕಿನದು,
ಬಾಗಿಲು ಮುಚ್ಚಿದ ಕೈಯಲ್ಲೆಂಥ ಹೊಳೆವ ಉಂಗುರವಿತ್ತು
ಎಂದೆಲ್ಲ ಕಲ್ಪಿಸಿ ಬರೆದು ನಿರೂಪಿಸಬಲ್ಲೆ.

ಅಷ್ಟರಲ್ಲಿ ಚಕ್ಕನೆ ಹಿಂದಿಂದ ಕದ ತೆರೆದು ಬಂದವರಾರು?
ಶುರುವಲ್ಲೇ ಇದೆಂಥ ತಿರುವು?

Wednesday, January 20, 2016

ಹೊಸ ಅಂಗಿ ಧರಿಸಿದ ಹುಮ್ಮಸ್ಸಿನಲ್ಲಿ...

ಈಗಷ್ಟೆ ಕವರಿನಿಂದ ಹೊರತೆಗೆದು ಧರಿಸಿದ ಹೊಸ ಅಂಗಿಯಂತಿದೆ ಎರಡು ಸಾವಿರದ ಹದಿನಾರು. ಇನ್ನೂ ಒಂದೂ ನೆರಿಗೆ ಬಿದ್ದಿಲ್ಲ. ಗರಿಗರಿಯಿದೆ. ಕಮ್ಮಗೆ ಪರಿಮಳ ಬೀರುತ್ತಿದೆ. ಫಳಫಳ ಹೊಳೆಯುತ್ತಿದೆ. ಹೊಸ ಅಂಗಿ ಅಂತ ನೋಡಿದಾಕ್ಷಣ ಗೊತ್ತಾಗುವಂತಿದೆ. ಗೋಡೆಯ ಮೇಲಿನ ಹೊಸ ಕ್ಯಾಲೆಂಡರಿನಂತೆ ಈ ಅಂಗಿಯಲ್ಲೂ ಚೌಕಳಿಗಳು. ಎಷ್ಟಿವೆ ಚೌಕಳಿಗಳು? ಮುನ್ನೂರರವತ್ತೈದಿದೆಯಾ? ಅಥವಾ ಒಂದು ಜಾಸ್ತಿಯಿದೆಯಾ? ಎಣಿಸಲಿಕ್ಕೆ ಯಾರಿಗೂ ಪುರುಸೊತ್ತಿಲ್ಲ. ಹೊಸ ಅಂಗಿ ಧರಿಸಿದ ಖುಷಿಯಲ್ಲಿ, ಹಮ್ಮಿನಲ್ಲಿ, ಭಿಮ್ಮಿನಲ್ಲಿ, ಹೊಸ ಉತ್ಸಾಹದಲ್ಲಿ ಹೊರಟಿದ್ದೇವೆ ನಡೆದು.

ಹಳೆಯ ಅಂಗಿ ಅಗೋ ಅಲ್ಲಿ ಮೂಲೆ ಸೇರಿದೆ. ಬಳಸಿ ಬಳಸಿ ಅದು ಪೂರ್ತಿ ಮಾಸಲಾಗಿದೆ. ಅದನ್ನಿನ್ನು ಧರಿಸಲಾಗದು. ಹಳೆಯ ಕ್ಯಾಲೆಂಡರಿನಂತೆ, ತನ್ನ ಕೆಲಸ ಇಲ್ಲಿಗೆ ಮುಗಿಯಿತೆಂಬಂತೆ, ವಿನಮ್ರವಾಗಿ ಪುಟ್ಟಗೆ ಮುರುಟಿಕೊಂಡು ನಿಶ್ಶಬ್ದಕ್ಕದು ಮೊರೆ ಹೋಗಿದೆ. ಹಾಗಂತ ಅದನ್ನು ಇಷ್ಟು ಬೇಗ ಮರೆಯಲಾದೀತೇ? ಅದರ ಚೌಕಳಿಗಳಲ್ಲಿ ಪೂರ್ತಿ ಒಂದು ವರ್ಷದ ಅಸಂಖ್ಯ ನೆನಪುಗಳಿವೆ, ಅಲ್ಲಲ್ಲಿ ಕಲೆಯ ಗುರುತಿದೆ, ಕೆಲವೆಡೆ ನೂಲು ಕಿತ್ತುಬಂದಿದೆ, ಒಗೆದು ಗಟ್ಟಿ ಹಿಂಡಿದ ನೋವಿದೆ, ಎಂದೋ ಹೊಡೆದ ಪರ್ಫ್ಯೂಮಿನ ಘಮ ಇನ್ನೂ ಅದರ ಕಂಕುಳಲ್ಲಿ ಉಳಿದುಕೊಂಡಿದೆ. ಸರಿಯಾಗಿ ಪರಿಶೀಲಿಸಿದರೆ, ಆ ಅಂಗಿಯ ಜೇಬಲ್ಲಿ ಒಂದೆರಡು ಹರಕಲು ನೋಟುಗಳೂ ಸಿಕ್ಕಾವು. ಸಿಹಿಸುದ್ದಿ ಬಂದ ದಿನ ಕೊಂಡ ಚಾಕಲೇಟಿನ ಜರಿ ಇನ್ನೂ ಉಳಕೊಂಡಿರಬಹುದು. ಒಮ್ಮೆ ಹಿಂತಿರುಗಿ ನೋಡೋಣ. ಎರಡು ಹೆಜ್ಜೆ ಹಿಂದಿಟ್ಟು, ಆ ಅಂಗಿಯನ್ನೊಮ್ಮೆ ಕೈಯಲ್ಲಿ ಹಿಡಿದು ಕಣ್ಣಗಲಿಸಿ ನೋಡೋಣ. ಮೂಗಿನ ಬಳಿ ತಂದು ಉಸಿರೆಳೆದು ನೋಡೋಣ. ಮೈಗೊತ್ತಿಕೊಂಡು ಹಳೆಯ ನೆನಪುಗಳನ್ನು ಆಹ್ವಾನಿಸಿಕೊಡು ಆಸ್ವಾದಿಸಲಾದೀತೇ ನೋಡೋಣ.

ಹೀಗೇ ಒಂದು ವರ್ಷದ ಹಿಂದೆ, ಡಿಸೆಂಬರ್ ಮೂವತ್ತೊಂದರ ಮಧ್ಯರಾತ್ರಿ, ಜನಗಳೆಲ್ಲಾ ಹೊಸ ವರ್ಷ ಬಂತೆಂದು ಸಂಭ್ರಮಿಸಿ ಪಟಾಕಿ ಹೊಡೆದು ಕುಣಿದಾಡುವಾಗ ಧರಿಸಿದ ಶರ್ಟು ಅದು. ಹೀಗೇ ಚಳಿಯಿತ್ತು. ಚೂರು ನಶೆಯಿತ್ತು. ಅವರೆಕಾಳಿನ ಸಿಪ್ಪೆ ಬೀದಿಯಲ್ಲೆಲ್ಲ ಹಾಸಿತ್ತು. ನಾವು ಹೊಸ ವರ್ಷವನ್ನು ತೋಳ್ಬಿಚ್ಚಿ ಸ್ವಾಗತಿಸಿದ್ದೆವು. ಸಂತಸದಿಂದ ಎರಡು ಸಾವಿರದ ಹದಿನೈದರಲ್ಲಿ ಅಡಿಯಿಟ್ಟಿದ್ದೆವು.  ಮುಂದಿನ ಹೆಜ್ಜೆಗಳಲ್ಲಿ ಅದೆಷ್ಟೋ ಸಂತೋಷ-ದುಃಖದ, ನಲಿವು-ಬಿಕ್ಕಳಿಕೆಯ, ಗೆಲುವು-ಸೋಲಿನ, ಆತಂಕ-ನಿರಾಳದ ದಿನಗಳನ್ನು ನಾವು ಅನುಭವಿಸಿದೆವು. ನಮ್ಮ ವೈಯಕ್ತಿಕ ಹರುಷ-ದುಗುಡಗಳೊಡನೆ ಎದುರಿನವರ ನಗು-ಅಳುಗಳಿಗೂ ಸ್ಫಂದಿಸಿದೆವು. ಪ್ರಪಂಚದ ಆಗುಹೋಗುಗಳಿಗೆ ನಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆವು.

ಅಲ್ಲೆಲ್ಲೋ ಬಿಹಾರದಲ್ಲಿ ನಡೆದ ಚುನಾವಣೆಯ ದೃಶ್ಯಗಳನ್ನು ನಾವಿಲ್ಲಿ ಕೂತು ಟೀವಿಯಲ್ಲಿ ನೋಡಿ ಚರ್ಚಿಸಿದೆವು. ದೆಹಲಿಯಲ್ಲಿ ಆಪ್ ಗೆಲ್ತು ಅಂದಾಗ ಅರೇ! ಎಂದುದ್ಘರಿಸಿದೆವು. ವಿಧಾನಸಭೆಯೊಳಗೆ ಕೂತು ರಾಜಕಾರಣಿಗಳು ವಾಗ್ವಾದ ಮಾಡಿಕೊಳ್ಳುತ್ತಿದ್ದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಿಲುವುಗಳನ್ನು ಮಂಡಿಸಿದೆವು.ಇನ್ನು ಡಿಜಿಟಲ್ ಇಂಡಿಯಾ ಎಂದಾಗ ಅನುಮಾನದೊಂದಿಗೇ ಅದನ್ನು ಸ್ವಾಗತಿಸಿದೆವು. ಕಳಂಕಿತ ಲೋಕಾಯುಕ್ತರು ಯಾವಾಗ ಕೆಳಗಿಳಿಯುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ನಮ್ಮನ್ನು ಕಾಡಿತು. ವಿಶ್ವವೇ ಯೋಗ ದಿನವನ್ನಾಚರಿಸುವಾಗ ಹೆಮ್ಮೆಯಿಂದ ಬೀಗಿದೆವು. ಪ್ರಧಾನಿಗಳ ವಿದೇಶ ಪ್ರವಾಸ-ಪಾಕಿಸ್ತಾನ ಭೇಟಿಯನ್ನೂ, ಮುಖ್ಯಮಂತ್ರಿಗಳ ಭಾಗ್ಯ ಯೋಜನೆಗಳನ್ನು ಕೆಲವರು ಸ್ವಾಗತಿಸಿದರೆ ಕೆಲವರು ಗೇಲಿ ಮಾಡಿದ್ದಕ್ಕೆ ಸಾಕ್ಷಿಯಾದೆವು.

ಮಂಗಳ ಗ್ರಹವನ್ನು ಸುತ್ತುತ್ತಿರುವ ಮಾಮ್ ವರ್ಷ ಪೂರೈಸಿದ್ದಕ್ಕೆ ನಾವಿಲ್ಲಿ ಸಿಹಿ ಹಂಚಿಕೊಂಡೆವು. ಸೆನ್ಸೆಕ್ಸ್ ಮೇಲೇರಿದಾಗ ಕಾಲರ್ ಏರಿಸಿದ್ದೂ, ಪೆಟ್ರೋಲ್ ಬೆಲೆ ಇಳಿದಾಗ ಖುಷಿಯಾದದ್ದೂ ನಾವೇ. ರೈತರ ಆತ್ಮಹತ್ಯೆಗಳು ಸರ್ಕಾರಗಳನ್ನು ಕಂಗೆಡಿಸಿದ್ದಷ್ಟೇ ಅಲ್ಲ, ಸಾರ್ವಜನಿಕರೆಲ್ಲ ಇದಕ್ಕೆ ಕಾರಣವನ್ನೂ ಪರಿಹಾರವನ್ನೂ ಯೋಚಿಸುವಂತಾಯಿತು. ಎತ್ತಿನಹೊಳೆ, ಕಳಸಾ-ಬಂಡೂರಿ ಯೋಜನೆಗಳ ಬಗ್ಗೆ ನಡೆದ ಪ್ರತಿಭಟನೆಗಳಲ್ಲಿ ನಾವೂ ಘೋಷಣೆ ಕೂಗಿದೆವು.

ಪ್ರಪಂಚದಾದ್ಯಂತದ ಉಗ್ರರ ಅಟ್ಟಹಾಸ ಕಂಡು ನಾವೆಲ್ಲ ಕ್ರುದ್ಧರಾದದ್ದು ನಿಜ. ಇದ್ದಲ್ಲೇ ಚಡಬಡಿಸಿದ್ದು, ಶಾಪ ಹಾಕಿದ್ದು, ಅಸಹಾಯಕತೆಯಿಂದ ಕುದ್ದಿದ್ದೂ ಸತ್ಯ. ಯಾಕೂಬನನ್ನು ಗಲ್ಲಿಗೇರಿಸುವ ಹಿಂದಿನ ಮಧ್ಯರಾತ್ರಿ ಕೋರ್ಟ್ ಕಲಾಪ ನಡೆಸಿದ್ದು ತಿಳಿದಾಗ ಹೀಗೂ ಉಂಟೇ? ಎಂಬಂತೆ ಕಣ್ಣರಳಿಸಿದ್ದೂ ನಿಜ. ಭಾರೀ ಭೂಕಂಪಕ್ಕೆ ನೇಪಾಳ ನಲುಗಿದಾಗ, ಮಹಾಮಳೆಗೆ ಚೆನ್ನೈ ತತ್ತರಿಸಿದಾಗ ನಮ್ಮ ಹೃದಯ ಕರಗಿ, ಅತ್ತ ಸಹಾಯಹಸ್ತ ಚಾಚಿದೆವು.

ಇಷ್ಟದ ನಾಯಕ-ನಾಯಕಿಯರ, ಇಷ್ಟದ ನಿರ್ದೇಶಕರ ಸಿನಿಮಾಗೆ ಕ್ಯೂನಲ್ಲಿ ನಿಂತು ಟಿಕೀಟು ಖರೀದಿಸಿ ಫಸ್ಟ್ ಡೇ ಫಸ್ಟ್ ಶೋ ನೋಡಿದೆವು. ಕಡಿಮೆ ಸ್ಟಾರ್ ಸಿಕ್ಕ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆದ್ದು, ನಾವು ಮೆಚ್ಚಿದ ಸಿನಿಮಾಗಳು ಎರಡು ವಾರವೂ ಓಡದೇ ಇದ್ದಾಗ ಇದಕ್ಕೆಲ್ಲ ಯಾರು ಹೊಣೆ ಅಂತ ನಮಗೆ ತಿಳಿಯದಾಯಿತು. ಸಲ್ಮಾನ್ ಖಾನ್ ನಿರ್ದೋಷಿ ಅಂತ ತೀರ್ಮಾನವಾದಾಗ ರಿಯಲೀ? ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದೇನು ಬಜರಂಗಿ ಬಾಯಿಜಾನ್ ಚೆನ್ನಾಗಿದೆ ಅಂತ ಪ್ರಶಂಸಿವುದಕ್ಕೆ ಅಡ್ಡಿಯಾಗಲಿಲ್ಲ.

ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ನಿನಲ್ಲಿ ನಂ. ೧ ಸ್ಥಾನಕ್ಕೇರಿದಾಗ ನಮ್ಮ ಮನೆ ಮಗಳೇ ಗೆದ್ದಷ್ಟು ಖುಷಿ ಪಟ್ಟೆವು. ವಿರಾಟ್ ಕೊಹ್ಲಿ ಕಪ್ ಎತ್ತಿದಾಗ ಆದಷ್ಟೇ ಸಂತೋಷ, ಡಿವಿಲಿಯರ್ಸ್ ಚಮತ್ಕಾರಿಕ ಹೊಡೆತಗಳ ಮೂಲಕ ದಾಖಲೆಗಳನ್ನು ಸೃಷ್ಟಿಸುವಾಗಲೂ ಆಗಿದ್ದು ಸುಳ್ಳಲ್ಲ. ಸೆಹವಾಗ್-ಜಹೀರ್ ನಿವೃತ್ತರಾದಾಗ ಅವರ ವೈಭವದ ದಿನಗಳನ್ನು ನೆನೆದೆವು. 

ಅಬ್ದುಲ್ ಕಲಾಮ್ ಇನ್ನಿಲ್ಲವೆಂದಾಗ ಇಡೀ ದೇಶ ಕಣ್ಣೀರಾಯಿತು. ಸಾಹಿತಿ ಕಲ್ಬುರ್ಗಿ ಗುಂಟೇಗಿ ಬಲಿ ಎಂಬ ಸುದ್ದಿ ಬೆಳಗಾಮುಂಚೆ ಕೇಳಿ ಬೆಚ್ಚಿಬಿದ್ದೆವು.  ವಿಚಾರವಾದಿಗಳ ಹತ್ಯೆ ವಿರೋಧಿಸಿ ನಡೆದ ಪ್ರಶಸ್ತಿ ವಾಪಸಾತಿ ಅಭಿಯಾನ ಭರ್ಜರಿ ಚರ್ಚೆಗೆ ಘ್ರಾಸವಾಯಿತು. ಅಸಹಿಷ್ಣುತೆಯ ವಿವಾದ ಭುಗಿಲೆದ್ದಾಗ ಛೇ ಛೇ, ನಮ್ಮ ದೇಶದ ಬಗ್ಗೆ ನಾವೇ ಹೀಗೆ ಮಾತಾಡೋದಾ ಅಂತ ನಮ್ಮನಮ್ಮಲ್ಲಿ ಕೇಳಿಕೊಂಡೆವು.

ಗಣ್ಯ ವ್ಯಕ್ತಿಗಳು ಕಣ್ಮರೆಯಾದಾಗ ಆಪ್ತರನ್ನು ಕಳೆದುಕೊಂಡ ಭಾವ ಅನುಭವಿಸಿದೆವು. ದೇಶವನ್ನು ಪ್ರತಿನಿಧಿಸುವವರು ಪ್ರಶಸ್ತಿ ಗೆದ್ದಾಗ ಆನಂದಬಾಷ್ಪ ಸುರಿಸಿದೆವು. ಇಂಡಿಯಾ ಶೈನಿಂಗ್ ಎಂದಾಗ ನಮ್ಮ ಮೊಗದಲ್ಲೂ ಅದು ಪ್ರತಿಫಲಿಸಿತು.  ಐಸಿಸ್ ಉಗ್ರರ ಉಪಟಳಕ್ಕೊಳಗಾದ ಸಿರಿಯಾದಲ್ಲಿ ಮಡಿದ ಪುಟ್ಟ ಮಗುವಂದು ಮಕಾಡೆ ಮಲಗಿರುವ ಚಿತ್ರಕ್ಕೆ ಇಡೀ ವಿಶ್ವದ ಕಣ್ಣು ತೇವಗೊಳಿಸುವ ಶಕ್ತಿಯಿತ್ತು.

ನಮ್ಮೆಲ್ಲ ಅರಿವು, ಅಜ್ಞಾನ, ಗಡಿಬಿಡಿ, ನಿಲುವು, ಪೂರ್ವಾಗ್ರಹ, ಹಿಂಜರಿಕೆ, ಬಲ, ಅಸಹಾಯಕತೆಗಳ ಜೊತೆಯಲ್ಲೇ ನಾವು ನಮ್ಮವರ, ನೆರೆಯವರ, ಊರವರ, ನಾಗರೀಕರ, ರಾಜ್ಯದ, ದೇಶದ, ವಿಶ್ವದ ವಿದ್ಯಮಾನಗಳಿಗೆ ತುಡಿದೆವು. ಬಿತ್ತಿ ಬೆಳೆದದ್ದಕ್ಕೆ ಒಳ್ಳೆಯ ಬೆಲೆ ಸಿಕ್ಕಾಗ ಸಂತೃಪ್ತಿಯಿಂದ ಉಂಡದ್ದೂ, ಬೇಕಾದ ವಸ್ತು ಕೊಳ್ಳಲು ದುಬಾರಿಯೆನಿಸಿದಾಗ ನಾಲಿಗೆ ಕಚ್ಚಿಕೊಂಡಿದ್ದೂ, ಒಳ್ಳೆಯ ವ್ಯಾಪಾರವಾದ ದಿನ ಖುಷಿಯಿಂದ ಗುನುಗುತ್ತ ಮನೆಗೆ ಹೋದದ್ದು, ಸಂಬಳ ಬಂದ ದಿನ ಪಾರ್ಟಿ ಮಾಡಿದ್ದೂ, ಟ್ರಾಫಿಕ್ಕನ್ನು ಬೈದುಕೊಳ್ಳುತ್ತಲೇ ಗಂಡಾಗುಂಡಿಯ ರಸ್ತೆಯಲ್ಲಿ ಓಡಾಡಿದ್ದೂ, ಕಂಡ ಕನಸು ನನಸಾದಾಗ ಹಿಗ್ಗಲ್ಲಿ ಉಬ್ಬಿದ್ದೂ, ಒಡೆದ ಗಾಜು ನೋಡುತ್ತ ಮರುಗಿದ್ದೂ ನಾವೇ.  ಬಿಸಿಲಲ್ಲಿ ಬಾಯಾರಿದಾಗ ಹದಮಜ್ಜಿಗೆ ಕುಡಿದು ತೇಗಿದೆವು, ಮಳೆಯ ಹಾಡು ಕೇಳಿದಾಗ ಬಣ್ಣದ ಕೊಡೆ ಹಿಡಿದು ಅಂಗಳದಲ್ಲಿ ಕುಣಿದೆವು, ಚಳಿಗೆ ಹಿಮ್ಮಡಿ ಒಡೆದಾಗ ಮುಲಾಮು ಹಚ್ಚಿ ಹಿತನೋವಲ್ಲಿ ನರಳಿದೆವು.


ಹಳೆಯ ಅಂಗಿ ಹಿಡಿದು ನಿಧಾನಕ್ಕದರ ಮೇಲೆ ಕೈಯಾಡಿಸುತ್ತಿದ್ದರೆ ಅದೆಷ್ಟು ನೆನಪುಗಳು... ಅದೆಷ್ಟು ಚಿತ್ರಗಳು ಒಂದು ಕೊಲಾಜಿನಲ್ಲಿ... ಅದೆಷ್ಟು ಭಾವಗಳನುದ್ಧೀಪಿಸುವ ಶಕ್ತಿ ಈ ಪುಟ್ಟ ಅರಿವೆಗೆ... ಈಗ ಅಂಥದೇ ಮತ್ತೊಂದು ಅಂಗಿ ಧರಿಸಿ ನಿಂತಿದ್ದೇವೆ. ಗೊತ್ತು ನಮಗೆ: ಇದೂ ಹಾಗೇ ನೀರು-ಗಾಳಿ-ಬೆಳಕುಗಳಿಗೆ ಒಡ್ಡಲ್ಪಡುತ್ತದೆ. ಇದನ್ನೂ ನೆನೆ ಹಾಕಬೇಕು, ಒಗೆಯಬೇಕು, ಹಿಂಡಬೇಕು, ಒಣಹಾಕಬೇಕು, ಇಸ್ತ್ರಿ ಮಾಡಬೇಕು. ಇದೂ ಸ್ವಲ್ಪ ಕಾಲಕ್ಕೆ ಮಾಸಲಾಗುತ್ತದೆ. ಆಶಯವಿಷ್ಟೇ: ಇದರ ಚೌಕಳಿಗಳಲ್ಲಿ ನಲಿವುಗಳಿಗೆ, ಗೆಲುವುಗಳಿಗೆ, ಸಿಹಿಘಳಿಗೆಗಳಿಗೆ, ನೆಮ್ಮದಿಯ ನಿಟ್ಟುಸಿರುಗಳಿಗೆ ಹೆಚ್ಚಿನ ಜಾಗವಿರಲಿ. ತೊಟ್ಟಷ್ಟು ದಿನ ನಮ್ಮನ್ನು ಬೆಚ್ಚಗಿಟ್ಟಿರಲಿ. ನಂತರವೂ ಸವಿನೆನಪಾಗಿ ನಮ್ಮೊಂದಿಗೆ ಇರಿಸಿಕೊಳ್ಳುವಂತಿರಲಿ. ಹೊಸ ವರುಷ ನಮಗೆಲ್ಲಾ ಶುಭಪ್ರದವಾಗಿರಲಿ. 

['ವಿಶ್ವವಾಣಿ'ಗಾಗಿ ಬರೆದುಕೊಟ್ಟಿದ್ದು. 17.01.2016ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿತ.]