Monday, January 31, 2022

ತಾರಸಿಯಿಂದ ಕಂಡ ಮಹಾನಗರ


ಮಲೆನಾಡಿನ ಪುಟ್ಟ ಹಳ್ಳಿಯಿಂದ ಬಂದ ನಮಗೆ ಇಡೀ ಬೆಂಗಳೂರು ಸುತ್ತಿದರೂ ಒಂದೇ ಒಂದು ಸೋಗೆಯ ಮನೆ ಅಥವಾ ಹೆಂಚಿನ ಮನೆ ಕಾಣದಿದ್ದುದು ಸೋಜಿಗದ ಸಂಗತಿಯಾಗಿತ್ತು. ಬೆಂಗಳೂರನ್ನು ನೋಡಲೆಂದು ನಾನು ಮೊದಲ ಸಲ ಇಲ್ಲಿಗೆ ಹೊರಟಾಗ ಅಪ್ಪ, ‘ಎಂಜಿ ರೋಡು ನೋಡೋದಕ್ಕೆ ಮರೀಬೇಡ. ಅಲ್ಲಿಗೆ ಹೋದರೆ ಬೇರೆಯದೇ ಲೋಕಕ್ಕೆ ಹೋದಹಾಗೆ ಆಗುತ್ತೆ. ಪೆಟ್ಟಿಗೆ-ಪೆಟ್ಟಿಗೆಗಳ ಹಾಗೆ ಪಕ್ಕಪಕ್ಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಆರ್‌ಸಿಸಿ ಕಟ್ಟಡಗಳು, ಎಲ್ಲಾ ನೀಟಾಗಿ ತುಂಬಾ ಚೆನ್ನಾಗಿದೆ’ ಅಂತ ಹೇಳಿದ್ದ. ಅವನಾದರೋ ಎಷ್ಟೋ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರಿನ ಚಿತ್ರವನ್ನು ಕಣ್ಮುಂದೆ ಇಟ್ಟುಕೊಂಡು ಹೇಳಿದ್ದು; ಆದರೆ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಬೆಂಗಳೂರೇ ಎಂಜಿ ರೋಡಿನ ಹಾಗೆ ಆಗಿತ್ತು. ಎಲ್ಲ ಏರಿಯಾಗಳಲ್ಲೂ ಎಂಜಿ ರೋಡಿನ ಹಾಗೆ ಚಂದದ ಥಳಥಳ ಕಟ್ಟಡಗಳು, ಅಲ್ಲಲ್ಲಿ ತಲೆಯೆತ್ತತೊಡಗಿದ್ದ ಮಾಲುಗಳು, ಸಂಜೆಯಾಯಿತೆಂದರೆ ಝಗಮಗ ದೀಪಗಳು, ತಳುಕುಬಳುಕು ತುಂಬಿ ತುಳುಕುವ ಬೀದಿಯಲ್ಲಿ ಜನರು ‘ಶಾಪಿಂಗ್’ ಹೆಸರಿನಲ್ಲಿ ಚೆಂದನೆಯ ಬ್ಯಾಗು ಹಿಡಿದು ಓಡಾಡುವರು. ಹೀಗಾಗಿ ಎಂಜಿ ರೋಡು ಬಹಳ ಭಿನ್ನವಾಗಿಯೇನು ಕಾಣಲಿಲ್ಲ.

ಆದರೆ ಅಪ್ಪ ನೋಡಲು ಹೇಳಿದ್ದ ಪಟ್ಟಿಯಲ್ಲಿದ್ದ ಯುಟಿಲಿಟಿ ಬಿಲ್ಡಿಂಗಿನ ಮೇಲೇರಿದಾಗ ಮಾತ್ರ ನಾನು ದಂಗಾಗಿಬಿಟ್ಟೆ. ಇಪ್ಪತ್ತೈದು ಮಹಡಿಗಳ ಕಟ್ಟಡವನ್ನು ಹೊಕ್ಕು ಲಿಫ್ಟಿನ ಗುಂಡಿಯದುಮಿದ್ದೇ ಆಕಾಶಕ್ಕೆ ನೆಗೆಯುವ ರಾಕೆಟ್ಟಿನಂತೆ ಅದು ನನ್ನನ್ನು ಮೇಲಕ್ಕೊಯ್ದಿತು. ಹೆದರಿ ಎರಡೂ ಕೈಗಳನ್ನು ಲಿಫ್ಟಿನ ಕವಚಗಳಿಗೆ ಒತ್ತಿ ಹಿಡಿದೆ.  ಎದೆಯ ಡವಡವ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಕೊನೆಯ ಮಹಡಿಯಲ್ಲಿ ಲಿಫ್ಟು ನಿಂತು, ನಾನು ಸಾವರಿಸಿಕೊಳ್ಳುತ್ತಾ ನಿಧಾನಕ್ಕೆ ಹೊರಗೆ ಹೆಜ್ಜೆಯಿಟ್ಟರೆ, ಆಕಾಶದಲ್ಲಿ ತೇಲುತ್ತಿರುವಂತೆ ಭಾಸ. ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆಗೆ ಬರುವ ತೊಟ್ಟಿಲಲ್ಲಿ ಕುಳಿತು ನೋಡಿದ್ದು ಬಿಟ್ಟರೆ ಇಷ್ಟು ಎತ್ತರದಿಂದ ಜಗತ್ತನ್ನು ನೋಡುತ್ತಿದ್ದುದು ಇದೇ ಮೊದಲ ಸಲವಾಗಿತ್ತು. ಎದೆ ಇನ್ನೂ ತಾರಕದಲ್ಲಿ ಬಡಿದುಕೊಳ್ಳುತ್ತಲೇ ಇತ್ತು. ನಿಧಾನಕ್ಕೆ ಪ್ಯಾರಾಪಿಟ್ಟಿನ ಅಂಚಿಗೆ ಬಂದೆ. ಮುಂದೆ ನೋಡಿದರೆ, ಬೆಂಗಳೂರಿಗೆ ಬೆಂಗಳೂರೇ ಕಾಣುತ್ತಿದೆಯೇನೋ ಎಂಬಂತೆ ಇಡೀ ನಗರ ಕಣ್ಮುಂದೆ ಹರಡಿಕೊಂಡಿತ್ತು. ಹಸಿರು ಮರಗಳು, ಕೆಂಪು ಹೂಗಳು, ಬಿಳಿಯ ಕಟ್ಟಡಗಳು, ಅಲ್ಲಲ್ಲೇಳುತ್ತಿರುವ ಹೊಗೆ, ದೂರದಲ್ಲಿ ಹಾರುತ್ತಿರುವ ಹಕ್ಕಿಗಳು.... ಆಹಾ! ರುದ್ರಭಯಂಕರವಾಗಿದ್ದ ಆ ದೃಶ್ಯ ಮೈ ನವಿರೇಳಿಸುವ ಹಾಗಿತ್ತು. ಇನ್ನೂ ಧೈರ್ಯ ಮಾಡಿ, ಪ್ಯಾರಾಪಿಟ್ಟಿನ ಅಂಚನ್ನು ಕೈಯಲ್ಲಿ ಹಿಡಿದು, ಬಗ್ಗಿ ನೋಡಿದೆ: ಓಹೋ! ಇರುವೆಗಳ ಹಾಗೆ ಚಲಿಸುತ್ತಿರುವ ವಾಹನಗಳು, ಕುಬ್ಜ ಕೀಟಗಳಂತೆ ಕಾಣುತ್ತಿರುವ ಮನುಷ್ಯರು, ಅಕ್ಕಪಕ್ಕದ ಚಿಕ್ಕ ಕಟ್ಟಡಗಳ ಟೆರೇಸಿನಲ್ಲಿ ಒಣಗಿಸಿರುವ ಬಟ್ಟೆಗಳು... ಅಬ್ಬಬ್ಬಾ ಅಂತ ನಾನು ಆಶ್ಚರ್ಯ ಪಡುತ್ತಿರುವಾಗಲೇ, ಯಾರೋ ಸಿಬ್ಬಂದಿ ಹಿಂದಿನಿಂದ ಕೂಗುತ್ತ ಬಂದರು: “ರೀ ಯಾರ್ರೀ ನೀವು? ಯಾರ್ರೀ ನಿಮ್ಮನ್ನ ಇಲ್ಲಿಗೆ ಬರೋಕೆ ಬಿಟ್ಟಿದ್ದು? ಟೆರೇಸಿಗೆ ಯಾರಿಗೂ ಎಂಟ್ರೀನೇ ಇಲ್ಲ, ಹ್ಯಾಗ್ರೀ ಬಂದ್ರಿ?” ಅಂತ ಬೈಯುತ್ತ, ನನ್ನ ಕೈ ಹಿಡಿದು ಲಿಫ್ಟಿನ ಬಳಿಗೆ ಕರೆದೊಯ್ದ. ಅಂದು ಭಾನುವಾರವಾದ್ದರಿಂದ, ನಾನು ಹೋದ ಸಮಯದಲ್ಲಿ ಅಲ್ಲಿ ಸೆಕ್ಯುರಿಟಿಯವರಾಗಲೀ ಬೇರೆ ಕೆಲಸದವರಾಗಲೀ ಯಾರೂ ಇರಲಿಲ್ಲವಾದ್ದರಿಂದ, ಅದು ಹೇಗೋ ನಾನು ತಿಳಿಯದೇ ಬೆಂಗಳೂರಿನ ಅಂದಿನ ಅತಿ ಎತ್ತರದ ಕಟ್ಟಡದ ಟೆರೇಸಿಗೆ ಬಂದುಬಿಟ್ಟಿದ್ದೆ. ಹಾಗೆ ಬರುವಂತಿಲ್ಲ ಅಂತ ನನಗೆ ಗೊತ್ತೂ ಇರಲಿಲ್ಲ. ಆದರೆ ಅಂದು ಆ ಟೆರೇಸಿನ ಮೇಲಿಂದ ನೋಡಿದ ಆ ದೃಶ್ಯ ಮಾತ್ರ ಎಂದೂ ಮರೆಯುವುದಿಲ್ಲ.

ಬೆಂಗಳೂರಿನಲ್ಲೇ ನನ್ನ ಮುಂದಿನ ಬದುಕು ಎಂಬುದು ನಿಶ್ಚಯವಾದಮೇಲೆ ನಾನೂ ಒಂದು ಬಾಡಿಗೆ ಮನೆ ಹುಡುಕುವುದು ಅನಿವಾರ್ಯವಾಯಿತು. ಬ್ಯಾಚುಲರುಗಳು ದುಬಾರಿ ಬಾಡಿಗೆಯ ದೊಡ್ಡ ಮನೆಗೆ ಹೋಗಲಾದೀತೇ? ಸಣ್ಣ ರೂಮೊಂದನ್ನು ಹುಡುಕತೊಡಗಿದೆ. ಕಿಷ್ಕಿಂದೆಯಂತಹ ನಗರದ ಲಕ್ಷೋಪಲಕ್ಷ ಮನೆಗಳಲ್ಲಿ ನನಗೊಂದು ಕೋಣೆ ಸಿಗುವುದು ಕಷ್ಟವಾಗಲಿಲ್ಲ. ಈ ನಗರದಲ್ಲಿ ಹೆಂಚಿನ ಮನೆಗಳೇ ಇಲ್ಲವೆಂದೆನಷ್ಟೇ? ಇಂತಹ ಮನೆಗಳಲ್ಲಿ ಟೆರೇಸಿನ ಮೇಲೆ ನೀರಿನ ಟ್ಯಾಂಕು ಇಡಲು ಸ್ವಲ್ಪ ಎತ್ತರದ ಕಟ್ಟಣೆಯನ್ನು ಕಟ್ಟುತ್ತಾರೆ. ಅಂತಹ ಕಟ್ಟಣೆಯನ್ನೇ ಕೆಲವರು ಸಣ್ಣ ರೂಮಾಗಿ ಪರಿವರ್ತಿಸಿ ನನ್ನಂತಹ ಅಬ್ಬೇಪಾರಿ ಬ್ಯಾಚುಲರುಗಳಿಗೆ ಬಾಡಿಗೆಗೆ ಕೊಟ್ಟುಬಿಡುವರು. ಅಂತಹುದೊಂದು ರೂಮು ನನಗಾಗಿ ಬಾಗಿಲು ತೆರೆದು ಸ್ವಾಗತಿಸಿತು. ನಾಲ್ಕನೇ ಮಹಡಿಯಲ್ಲಿದ್ದ ಆ ರೂಮು ನಾಲ್ಕು ಜನ ಬಂದರೆ ಹಿಡಿಸುವಂತಿರಲಿಲ್ಲವಾದರೂ ಎದುರಿಗೆ ವಿಶಾಲವಾದ ಟೆರೇಸು ಇದ್ದುದರಿಂದ, ನಾನು ರೂಮಿಗಷ್ಟೇ ಬಾಡಿಗೆ ಕೊಡುವುದಾದರೂ ಇಡೀ ಟೆರೇಸನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿತು. ಈ ಟೆರೇಸಿನಿಂದ ಮಹಾನಗರದ ಸೌಂದರ್ಯವನ್ನು ನೋಡುವುದು ಅಂದಿನಿಂದ ನಿತ್ಯಸುಖವಾಯಿತು.

ಕೆಳಗಿನ ಮೂರು ಮಹಡಿಗಳಲ್ಲಿದ್ದ ಮನೆಗಳ ಸಂಸಾರಗಳ ಚೂರುಪಾರನ್ನು ಓರೆಗಣ್ಣಲ್ಲಿ ಕಿಟಕಿಯಿಂದ ನೋಡುತ್ತ, ನಾನ್ಯಾವಾಗ ಹೀಗಾಗುವುದೋ ಎಂದುಕೊಳ್ಳುತ್ತ, ಮೆಟ್ಟಿಲು ಹತ್ತಿ ಮೇಲೆ ಬಂದುಬಿಟ್ಟರೆ ಸಮತಲದೊಂದು ಸ್ವರ್ಗ ನನ್ನನ್ನೇ ಕಾಯುತ್ತಿರುತ್ತಿತ್ತು. ರೂಮಿನೊಳಗಿನ ಕೆಲಸಗಳನ್ನು ಮುಗಿಸಿದರೆ ಉಳಿದ ಸಮಯವನ್ನೆಲ್ಲ ಟೆರೇಸಿನಲ್ಲೇ ಕಳೆಯಬಹುದು. ಮೂಲೆಯಲ್ಲಿರುವ ಪಾಟುಗಳಲ್ಲಿ ನಳನಳಿಸುತ್ತಿರುವ ಒಂದಷ್ಟು ಗಿಡಗಳು, ಅಡ್ಡಾದಿಡ್ಡಿ ಎಳೆದ ತಂತಿಗಳಲ್ಲಿ ಒಣಗುತ್ತಿರುವ ಕೆಳಗಿನ ಮನೆಗಳವರ ಬಟ್ಟೆಗಳು, ಅಲ್ಲಲ್ಲಿ ಪ್ಯಾರಾಪಿಟ್ಟಿಗೆ ಬಡಿದಿದ್ದ ಡಿಶ್ಶುಗಳು, ಅಷ್ಟೆತ್ತರಕ್ಕೆ ಬೆಳೆದಿದ್ದ ಪಕ್ಕದ ಮನೆಯ ತೆಂಗಿನ ಮರದ ತಲೆ-ಗಳೆಲ್ಲ ಆ ಟೆರೇಸಿನ ಭಾಗವೇ ಆಗಿದ್ದವು. ಟೆರೇಸಿನ ಮೂಲೆಗೆ ನಿಂತು ಸುಂಯ್ಯನೆ ಬೀಸುವ ಗಾಳಿಗೆ ಮೈಯೊಡ್ಡಿ ಕೈ ಬಿಚ್ಚಿ ಕಣ್ಮುಚ್ಚಿ ನಿಂತರೆ ನಾನೇ ಟೈಟಾನಿಕ್ ಹೀರೋ ಆದಂತೆ, ಇಡೀ ಮನೆ ಹಡಗಿನಂತೆ ಚಲಿಸುತ್ತಿರುವಂತೆ ಭ್ರಮೆಯಾಗುತ್ತಿತ್ತು. ಕೇಟ್ ವಿನ್ಸ್‌ಲೆಟ್ ಒಬ್ಬಳು ಬಾಕಿಯಿದ್ದಳು ಅಷ್ಟೇ.

ಈ ಟೆರೇಸಿನ ಅಕ್ಕಪಕ್ಕದ ಮನೆಗಳು ಆಗೀಗ ತಮ್ಮ ಕಿಟಕಿ ತೆರೆದು ತಮ್ಮೊಡಲ ಸಂಸಾರದ ಪ್ರದರ್ಶನ ಮಾಡಿಸುತ್ತಿದ್ದವು. ಯಾರದೋ ಅಡುಗೆಮನೆಯೊಳಗೆ ತಯಾರಾಗುತ್ತಿರುವ ಬಿಸಿಬಿಸಿ ರೊಟ್ಟಿ, ಯಾರದೋ ಮನೆಯೊಳಗಿನ ದೊಡ್ಡ ಟಿವಿಯಲ್ಲಿ ಪ್ರದರ್ಶಿತವಾಗುತ್ತಿರುವ ಧಾರಾವಾಹಿ, ಮತ್ಯಾರೋ ಕರ್ಟನ್ ಸರಿಸಿದಾಗ ಕಂಡ ಬೆಡ್‌ರೂಮಿನ ದೃಶ್ಯ, ಇನ್ಯಾರೋ ಬಾತ್‌ರೂಮಿನ ಕಿಟಕಿಯನ್ನು ಸಿಟ್ಟಿನಿಂದ ಧಡ್ಡನೆ ಹಾಕಿಕೊಂಡ ಸದ್ದು ಎಲ್ಲವೂ ಟೆರೇಸಿನಿಂದ ನಿತ್ಯಕಾವ್ಯ. ನಾನು ನೋಡಬೇಕೆಂದು ನೋಡದಿದ್ದರೂ ಅವರುಗಳು ತಪ್ಪು ತಿಳಿದುಕೊಂಡು ಸಿಡಿಮಿಡಿಗೊಳ್ಳುತ್ತಿದ್ದರು.  ಆ ಟೆರೇಸಿನ ತುದಿಗೆ ಹೋಗಿ ಬಗ್ಗಿದರೆ, ನಮ್ಮ ಮನೆಯೆದುರಿನ ರಸ್ತೆಯಲ್ಲಿ ವಾಹನಗಳೂ ತರಕಾರಿ ಮಾರುವವರೂ ಜನಸಾಮಾನ್ಯರೂ ಚಲಿಸುತ್ತಿರುವ ವಿಹಂಗಮ ದೃಶ್ಯ ಕಾಣುತ್ತಿತ್ತು. ದೂರದಲ್ಲಿರುವ ತರಾತುರಿಯ ಮುಖ್ಯರಸ್ತೆಯಲ್ಲಿ ಸಾಗುವ ದೊಡ್ಡ ವಾಹನಗಳೂ, ಬಿ‌ಎಂಟಿಸಿ ಬಸ್ಸುಗಳೂ, ಕಸದ ಲಾರಿಗಳೂ, ಸೈರನ್ ಕೂಗುತ್ತ ಹೋಗುವ ವೇಗದ ಆಂಬುಲೆನ್ಸುಗಳೂ ಕಾಣುತ್ತಿದ್ದವು. ಸದ್ದು ಬಂತೆಂದು ತಲೆಯಿತ್ತಿದರೆ, ಚುಕ್ಕಿಯಂತಹ ವಿಮಾನಗಳು ನನ್ನ ಮೇಲೆ ಪುಷ್ಪವೃಷ್ಟಿಗೈಯುವ ಯಾವ ಕರುಣೆಯನ್ನೂ ತೋರದೇ ತಮ್ಮ ಪಾಡಿಗೆ ತಾವು ಸಾಗುತ್ತಿದ್ದವು.

ರಾತ್ರಿಯಾಯಿತೆಂದರೆ ನಗರವು ದೀಪಾವಳಿಯ ಲಕ್ಷದೀಪೋತ್ಸವಕ್ಕೆ ಹಚ್ಚಿಟ್ಟ ಹಣತೆಗಳಂತಾಗಿಬಿಡುತ್ತಿತ್ತು. ಎಷ್ಟು ಕತ್ತೆತ್ತಿ ನೋಡಿದರೂ ಮುಗಿಯದ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಪೈಪೋಟಿಗೆ ಬಿದ್ದವಂತೆ ಮಿನುಗುವವು. ಅಕ್ಷಯವಾದ ಈ ಹರಹಿನಲ್ಲಿ ಎಲ್ಲಿ ನನ್ನ ಮನೆ? ಎಲ್ಲಿ ಅವಳ ಮನೆ? ಎಲ್ಲಿ ನನ್ನ ಆಫೀಸು? ಒಂದು ಬೆಳಕಿನ ದಾರ ಹಿಡಿದು, ಸೂಜಿಯಿಂದ ಈ ಚುಕ್ಕಿಗಳನ್ನೆಲ್ಲ ಜೋಡಿಸಿ ಹೊಲಿದುಬಿಟ್ಟರೆ, ದೊಡ್ಡ ಬಲೆಯಂತಾಗುವ ರಚನೆಯಿಂದ ನಗರವನ್ನೇ ಸೆರೆಹಿಡಿದೆತ್ತಿ ಬೇರೆಡೆಗೆ ಒಯ್ಯಬಹುದು ಎಂಬ ಕಲ್ಪನೆ ಬಂದು ರೋಮಾಂಚಿತನಾದೆ. ಆಗಸದಲ್ಲಿ ವಯ್ಯಾರ ಮಾಡುತ್ತ ಚಲಿಸುತ್ತಿದ್ದ ಉಪಗ್ರಹವೊಂದು ನನ್ನ ಕಲ್ಪನೆಗೆ ಭೇಷ್ ಎಂದಿತು.

ಇಂತಹ ಟೆರೇಸುಗಳೇ ನಗರದ ಎಷ್ಟೋ ಪ್ರೇಮಾಂಕುರಗಳಿಗೆ ಹಾಟ್‌ಸ್ಪಾಟುಗಳು. ವೀಡಿಯೋ ಕಾಲ್ಸ್ ಬರುವ ಮೊದಲು, ಈ ಟೆರೇಸಿನಲ್ಲಿ ನಿಂತಿರುವ ಅವನೂ ಆ ಟೆರೇಸಿನಲ್ಲಿ ನಿಂತಿರುವ ಅವಳೂ ಪರಸ್ಪರ ನೋಡಿಕೊಳ್ಳುತ್ತಾ, ತಮ್ತಮ್ಮ ಮೊಬೈಲಿನಲ್ಲಿ ಮಾತಾಡಿಕೊಳ್ಳುತ್ತ, ಕೈಸನ್ನೆ-ಬಾಯ್ಸನ್ನೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ನಡುವಿನ ಮನೆಗಳೂ ರಸ್ತೆಗಳೂ ಮರಗಳೂ ಕಣ್ಮುಚ್ಚಿಕೊಂಡು ಸಹಕರಿಸುವವು. ಅವಳು ಕಳುಹಿಸಿದ ಫ್ಲೈಯಿಂಗ್ ಕಿಸ್ಸನ್ನು ತೆಂಗಿನ ಮರದ ಗಾಳಿ ಸುರಕ್ಷಿತವಾಗಿ ಅವನಿಗೆ ತಲುಪಿಸುವುದು. ಅಪರೂಪಕ್ಕೆ ಅವನು ಬರೆದ ಪ್ರೇಮಪತ್ರವು ರಾಕೆಟ್ಟಾಗಿ ಸಾಗಿ ಅವಳ ಮನೆಯ ಟೆರೇಸು ತಲುಪುವುದು. ಹೃದಯಗಳ ಭಾಷೆಗೆ ನಗರವು ಎರಡು ಟೆರೇಸುಗಳ ನಡುವೆ ಅದೃಶ್ಯ ಸೇತುವೆಯ ಕಲ್ಪಿಸಿ ಪ್ರೇಮಿಗಳನ್ನು ಪೊರೆಯುವುದು.

ಜಾಗತೀಕರಣ ಜಾಸ್ತಿಯಾದಂತೆ ನಗರದ ಕಟ್ಟಡಗಳ ಎತ್ತರವೂ ಜಾಸ್ತಿಯಾಗತೊಡಗಿದವು. ಒಂದೋ ಎರಡೋ ಇದ್ದ ಗಗನಚುಂಬಿ ಕಟ್ಟಡಗಳು ಈಗ ನಗರದಾದ್ಯಂತ ತಲೆಯೆತ್ತಿ ನಿಂತವು. ಆ ಕಟ್ಟಡಗಳಿಗೆ ಹೊಳೆವ ಗಾಜಿನ ಹೊದಿಕೆಗಳು. ಸೂರ್ಯನ ಬೆಳಕನ್ನು ಪ್ರತಿಫಲಿಸುವ ಈ ತಳುಕಿನ ಗಾಜುಗಳು ತಮ್ಮೊಳಗಿನದೇನನ್ನೂ ತೋರಗೊಡುವುದಿಲ್ಲ. ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ಮೇಲ್ಮಹಡಿಯ ಮನೆಗಳಿಗೇ ಹೆಚ್ಚಿನ ಬೆಲೆ. ದೀಪಾವಳಿಯ ದಿವಸ ಸಿಡಿಮದ್ದುಗಳ ಚಂದವನ್ನು ನೋಡಲು ಟೆರೇಸಿಗೇ ಬರಬೇಕು. ಆಕಾಶಕ್ಕೆ ನೆಗೆದು ಸಿಡಿದ ರಾಕೆಟ್ಟುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುವವು. ದೂರದಲ್ಲಿ ಸಾಗುತ್ತಿರುವ ಮೆಟ್ರೋ ರೈಲು ಕಿಟಕಿಕಿಟಕಿಗಳಿಂದ ಬೆಳಕನ್ನು ಸೂಸುತ್ತಾ ತನ್ನದೇ ರೀತಿಯಲ್ಲಿ ಹಬ್ಬವನ್ನಾಚರಿಸುವುದು.

ನಗರದ ರಸ್ತೆಯಲ್ಲಿ ಬೈಕುಗಳೂ, ಕಾರುಗಳೂ, ಬಸ್ಸುಗಳೂ, ಆಟೋಗಳೂ ತಮ್ಮದೇ ವೇಗದಲ್ಲಿ ಓಡುತ್ತಿವೆ. ಇಕ್ಕೆಲದ ಕಟ್ಟಡಗಳ ಟೆರೇಸಿನಲ್ಲಿ ನಿಂತ ಬಿಡುವಿರುವ ಜನ ತಮ್ಮನ್ನು ನೋಡುತ್ತಿದ್ದಾರೆಂಬ ಪರಿವೆಯೇ ಅವಕ್ಕಿಲ್ಲ. ಅವಸರವೇ ಮೈವೆತ್ತಿರುವ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಲೇ ಇಲ್ಲ. ಬಿಸಿಲಿದ್ದರೆ ಬೈದುಕೊಂಡೂ, ಮಳೆ ಬಂದರೆ ತೊಯ್ದುಕೊಂಡೂ, ಚಳಿಯಾದರೆ ನಡುಗಿಕೊಂಡೂ ಚಲಿಸುತ್ತಲೇ ಇವೆ. ಹೊಸಹೊಸ ಬಣ್ಣಗಳನ್ನು ಬಳಿದುಕೊಳ್ಳುತ್ತಾ ನಗರ ಬೆಳೆಯುತ್ತಲೇ ಇದೆ. ತಾರಸಿಯ ಮೇಲಿಂದ ವೀಕ್ಷಿಸುತ್ತಿರುವ ಸಾವಿರಾರು ಬೆರಗಿನ ಕಣ್ಣುಗಳಿಂದ ಹೊರಟ ಬೆಳಕು ಸರ್ಚ್‌ಲೈಟಿನಂತೆ ನಗರವನ್ನು ಕಾಯುತ್ತಿದೆ.

['ಉದಯವಾಣಿ' ಪತ್ರಿಕೆಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ಹೊರತಂದಿರುವ 'ಸುವರ್ಣ ಸಂಪದ' ವಿಶೇಷಾಂಕದಲ್ಲಿ ಪ್ರಕಟಿತ.]

Wednesday, December 01, 2021

ಲಂಚ್ ಅವರ್

ಆಫೀಸಿಗೆ ಹೊರಟ ಅಪ್ಪನ ಚೀಲಕ್ಕೆ
ಮಗಳು ತಿಂಡಿ ತುಂಬಿದ ಡಬ್ಬಿ ಹಾಕಿದಳು

ಪುಟ್ಟ ಪುಟ್ಟ ಪಡ್ಡುಗಳನು
ಪುಟ್ಟ ಪುಟ್ಟ ಕೈಗಳಲಿ ಹಿಡಿದು
ಸಣ್ಣ ದನಿಯಲ್ಲವನು ಎಣಿಸುತ
ತುಂಬುವಷ್ಟರಲ್ಲಿ ಡಬ್ಬಿ ಎಣಿಕೆ ತಪ್ಪಿ
ಮತ್ತೆ ಎಣಿಸಿ ಮತ್ಮತ್ತೆ ಎಣಿಸಿ
ಮುಚ್ಚಳ ಹಾಕುವಷ್ಟರಲ್ಲಿ
ಅಪ್ಪನಿಗೆ ಗಡಿಬಿಡಿಯಾಗಿ ಗಲಿಬಿಲಿ
ಖಾರದ ಚಟ್ನಿಯನು ಸುತಾರಾಂ
ತಾನು ಮುಟ್ಟದೆ ಅಮ್ಮನಿಂದಲೇ
ಡಬ್ಬಿಗೆ ತುಂಬಿಸಿ ಚೀಲದಲಿರಿಸಿ

ಮಧ್ಯಾಹ್ನ ಹಸಿದ ಅಪ್ಪ ಚೀಲ ತೆರೆಯಲು
ಊಟದ ಡಬ್ಬಿಯೊಂದಿಗೆ ಯಾವುದೋ ಮಾಯೆಯಲಿ
ಮಗಳು ಚೀಲದೊಳಗಿರಿಸಿರುವ ಒಂದು
ಆಟಿಕೆ ಸಾಮಗ್ರಿಯೂ ಸಿಕ್ಕು
ಈಗ ಊಟ ಮಾಡುವುದೋ ಆಟವಾಡುವುದೋ
ತಿಳಿಯದೆ ಮತ್ತೆ ಗಲಿಬಿಲಿ

ಆಟದೊಂದಿಗೆ ಪಾಠ ಎಂಬೊಕ್ಕಣೆಯೊಂದಿಗೆ
ಶುರುವಾಗುತ್ತಿದ್ದ ಶಾಲೆಗೆ
ಅಮ್ಮ ತುಂಬಿ ಕಳುಹಿಸುತ್ತಿದ್ದ ಬುತ್ತಿ
ಮದುವೆಯ ನಂತರ
ಸಂಗಾತಿ ತುಂಬಿ ಕೊಡುತ್ತಿದ್ದ ಬುತ್ತಿ
ಈಗ ಕೊಂಚವೇ ದೊಡ್ಡವಳಾಗಿರುವ
ಮಗಳು ಕಳುಹಿಸಿರುವ ಬುತ್ತಿ

ಕೆಫೆಟೇರಿಯಾದ ಟೇಬಲ್ಲಿನ ಮೇಲೀಗ
ಎಷ್ಟು ತರಹದ ಬುತ್ತಿಯ ಡಬ್ಬಿಗಳು
ಒಬ್ಬೊಬ್ಬರ ಮನೆಯಲ್ಲೊಬ್ಬೊಬ್ಬರು
ಲಟ್ಟಣಿಗೆ ಲೊಟಗುಡಿಸುತ್ತೊರೆದ ಚಪಾತಿ
ಜಾವದಲ್ಲಿ ಬಡಿದ ರೊಟ್ಟಿ
ಕುಕ್ಕರಿನ ಶೀಟಿ ಕೂಗಿಸಿ ಬೆಂದನ್ನ
ಬುರುಬುರು ಉಬ್ಬಿದ ಪೂರಿ
ಎಲ್ಲದರೊಳಗೆ ತುಂಬಿರುವ
ಅವರವರ ಹಿತೈಶಿಗಳ ಅಕ್ಕರಾಸ್ತೆ:
ತೆರೆದುಕೊಂಡಿದೆಯೀಗ ಈ ಲಂಚ್ ಅವರಿನಲ್ಲಿ
ಬಣ್ಣಬಣ್ಣದ ಡಬ್ಬಿಗಳೊಡಲಿಂದ

ನೋಡುತ್ತಿದೆ ಮಗಳು ಕಳುಹಿಸಿರುವ ಆಟಿಕೆ
ಎಲ್ಲರ ಬುತ್ತಿಯ ಬಟ್ಟಲುಗಳ
ನೆನಪಾಗುತ್ತಿರಬಹುದೇ ಅದಕ್ಕೆ
ತನ್ನನು ರೂಪಿಸಿದವರ ಹಸಿವು?

ಬಿಸಿಲು-ನೆರಳು

ನ್ಯಾಲೆ ಭರ್ತಿಯಾಗಿದೆ; ಮಗಳ ಎರಡು ಅಂಗಿಗಳಿಗೀಗ ಜಾಗವಿಲ್ಲ
ಅಪ್ಪನೊಂದಿಗೇ ಬಟ್ಟೆಯೊಣಗಿಸಲು ಕ್ಲಿಪ್ಪಿನ ಸಂಗಡ
ಟೆರೇಸಿಗೆ ಬಂದ ಮಗಳು, ತನ್ನೆರಡು ಅಂಗಿ
ಹಾಗೆಯೇ ಉಳಿದುದು ಕಂಡು ಮುಖ ಸಣ್ಣದಾಗಿ
ಬಿಸಿಲು ಸುರಿಸುವ ಸೂರ್ಯನಿಗೂ ದಿಗಿಲು

ಚಪ್ಪಲಿ ಹಾಕಿಕೋ ಎಂದರೂ ಹಾಗೆಯೇ ಬಂದ ಮಗಳು, ಕಾದ ನೆಲ,
ಕಣ್ಣಿಂದೆರಡು ಹನಿ ಜಾರಿದರೂ ಅದು ಕ್ಷಣದಲ್ಲೇ ಇಂಗಬಹುದು
ಅಪ್ಪನೀಗ ತನ್ನ ಚಪ್ಪಲಿಯನ್ನೇ ಕೊಟ್ಟು, ಮಗಳಿಗೆ ನೆರಳಾಗಿ ನಿಂತು
ಮುಂದೇನೆಂದು ನೋಡಲಾಗಿ

ಬೇರೆ ನ್ಯಾಲೆಗಳಲ್ಲಿ ಬೇರೆ ಮನೆಯವರ ಬಟ್ಟೆಗಳು
ಅಂಗಿ ಚಡ್ಡಿ ಪ್ಯಾಂಟು ಟಾಪು ಸೀರೆ ರವಿಕೆ ಬನೀನು
ಮನುಜರ ಮೈ ಮುಚ್ಚಲು ಎಷ್ಟೆಲ್ಲ ಪಡಿಪಾಟಲು

ಮೂಲೆಯಲ್ಲಿರುವ ಪಾಟಿನಲ್ಲಿ ನಳನಳಿಸುತ್ತಿರುವ ದೊಡ್ಡಪತ್ರೆ
ಮೈತುಂಬ ನೀರು ತುಂಬಿಕೊಂಡಿರುವ‌ ಕರಿಯ ಟ್ಯಾಂಕು
ಅಲ್ಲಿಂದಿಳಿದಿರುವ ನೂರಾರು ಪೈಪುಗಳು
ಉಪಗ್ರಹಗಳತ್ತ ಬೊಗಸೆಯೊಡ್ಡಿರುವ ಡಿಶ್ಶುಗಳು
ಎಲ್ಲ ಕಣ್ಬಿಟ್ಟು ನಮ್ಮತ್ತಲೇ ನೋಡುತ್ತಿರುವ ಈ ಘಳಿಗೆ

ಮಗಳೇ ಹೇಳುತ್ತಾಳೆ: ಅಪ್ಪಾ, ನಿನ್ನ ಒಂದು ಅಂಗಿ ತೆಗೆದರೆ
ನನ್ನ ಎರಡು ಅಂಗಿಗಾದೀತು ಜಾಗ.
ಹೌದಲ್ಲ, ಎಷ್ಟು ಸುಲಭದ ಪರಿಹಾರ!
ಅಪ್ಪನ ತೆಳು ಅಂಗಿಗೇನು, ಕೆಳಗೊಯ್ದು ಕುರ್ಚಿಯ
ಮೇಲೆ ಹರವಿದರೆ ಒಣಗುವುದು ಫ್ಯಾನಿನ ಗಾಳಿಗೆ

ಕ್ಲಿಪ್ಪು ತೆಗೆದು ಅಪ್ಪನಂಗಿ ತೆಗೆದು ಮಗಳ ಎರಡೂ ಅಂಗಿ ಹಾಕಿ
ಓಹೋ ಎಂದು ಗೆದ್ದ ಖುಷಿಯಲ್ಲಿ ಚಪ್ಪಾಳೆ ತಟ್ಟಿ
ದೊಡ್ಡ ಚಪ್ಪಲಿಯ ಕಾಲಲಿ ದಡಬಡಾಯಿಸುತ್ತ
ಮೆಟ್ಟಿಲಿಳಿಯುವಾಗ ಮಗಳು ಹೇಳಿದಳು:

ಆಫೀಸಿಗೆ ಬಿಸಿಲಲ್ಲಿ ಹೋಗುವ ನಿನ್ನಂಗಿ
ಹೀಗೇ ತಣ್ಣಗಿರಬೇಕು;
ಮನೆಯೊಳಗಿನ ತಂಪಲ್ಲಿರುವ ನನ್ನಂಗಿ
ಬೆಚ್ಚಗಿರಬೇಕು. ಸರಿಯಲ್ವಾ ಅಪ್ಪಾ?

ಜೀವ


ಪುಷ್ಯ ಮಾಸದ ಆಕಾಶ ಕಡುನೀಲಿ
ರಾತ್ರಿ ಕಟ್ಟಿಕೊಂಡಿದ್ದ ಇಬ್ಬನಿ ಮೋಡಗಳೂ ಕರಗಿ
ರವಿ ಮೂರಾಳೆತ್ತರಕ್ಕೇರುವ ವೇಳೆಗೆ
ಎಲ್ಲಾ ಶುಭ್ರ ನಿರಭ್ರ

ಬೇಕಿದ್ದರೆ ಒಂದು ಕುಂಚ ಹಿಡಿದು
ಇದೇ ನೀಲಿಗದ್ದಿ ತೆಗೆದು
ಮಣ್ಣ ಮೂರುತಿಗೆ ಬಳಿದು
ಅದನು ಕೃಷ್ಣನನ್ನಾಗಿಸಬಹುದು

ಆಮೇಲಾ ಕೃಷ್ಣನಿಗೆ ಊದಲು ಕೊಡಲು
ಬೇಕೊಂದು ಕೊಳಲು
ಈಗಷ್ಟೆ ಕಳೆದ ಮಳೆಗಾಲದ ನೀರು ಕುಡಿದು
ಮೊಳೆತು ಚಿಗುರಿದೆ ಬಿದಿರು
ನುಗ್ಗಿ ಮೆಳೆಯೊಳಗೆ ತೆಗೆದು ಸಿಗುರು
ಇಟ್ಟಾಗಿದೆಯೀಗ ಶ್ಯಾಮನ ಕೈಗೆ
ಇನ್ನು ಭುವಿಯ ಜನರೆಲ್ಲ ಮರುಳು

ನವಿಲುಗರಿಯದೇ ಸಮಸ್ಯೆ
ಮೋಡವಿದ್ದರೆ ಹಿತ್ತಿಲಿಗೆ ಬಂದ ನವಿಲು
ಉನ್ಮಾದದಲಿ ಕುಣಿದು
ಒಂದಷ್ಟು ಗರಿಗಳನುದುರಿಸಿ ಹೋಗುತ್ತಿತ್ತು
ಹೊಸ ಗರಿಯಿಲ್ಲದಿರೆಯೇನು,
ನಾಗಂದಿಗೆಯಲಿದೆ ಒಂದಿಡೀ ಕಟ್ಟು
ತೆಗೆದು ಜುಟ್ಟಿಗೆ ಸಿಕ್ಕಿಸಿದರಾಯ್ತು

ಬೃಂದಾವನದ ಜೌಗುಮಣ್ಣಲಿ ಶಿಲ್ಪ ರಚಿಸಿ
ಆಗಸದ ನೀಲಿಯ ಮೈಗೆ ಬಳಿದು
ಹಸಿಹಸಿ ಗಾಳಿಯ ಪುಪ್ಪುಸಕೆ ತುಂಬಿ
ಯಮುನೆಯ ನೀರು ಕುಡಿಸಿ
ತನ್ನೆದೆಯದೇ ಪ್ರೇಮಾಗ್ನಿಯಲಿ ಬೇಯಿಸಿ

ಪಂಚಭೂತಗಳಿಂದಾದ ಚಿತ್ರಕ್ಕೆ
ಜೀವ ತುಂಬಿದ್ದಾಗಿದೆಯೀಗ

ನಿದ್ದೆಯಿಂದೆಚ್ಚರವಾದವನಂತೆ
ಎದ್ದು ನಿಂತ ಕೃಷ್ಣ ತಕ್ಷಣವೇ
ಹೊರಟು ನಿಂತಿದ್ದಾನೆ
ದಿಟ್ಟತನದಲಿ ಮಥುರೆಯೆಡೆಗೆ
ಪೋಗದಿರೆಂದರೂ ಕೇಳದೆ

ಇತ್ತ ರಾಧೆ ಅಲವತ್ತುಕೊಳ್ಳುತ್ತಿದ್ದಾಳೆ:
ಹೀಗೆಂದು ಮೊದಲೇ ತಿಳಿದಿದ್ದರೆ
ಬಾಲಕೃಷ್ಣನನ್ನೇ ರಚಿಸುತ್ತಿದ್ದೆ
ಕನಿಷ್ಟ ಬಾಲ್ಯ ಕಳೆವವರೆಗಾದರೂ ಸಿಗುತ್ತಿತ್ತು ಸಖ್ಯ
ಬೆಣ್ಣೆ ಮೆದ್ದುಕೊಂಡು, ಸೀರೆ ಕದ್ದುಕೊಂಡು,
ಗೋಪಿಕೆಯರಿಂದ ಮುದ್ದಾಡಿಸಿಕೊಂಡು,
ದನಕರುಗಳ ಮೇಯಿಸಿಕೊಂಡು
ಕೊಳಲ ನಾದದಲೆಲ್ಲರ ತೇಲಿಸಿಕೊಂಡು
ಇರುತ್ತಿದ್ದ ಕಣ್ಣೆದುರೇ ಓಡಾಡಿಕೊಂಡು

ಕುಳಿತಿದ್ದಾಳೆ ರಾಧೆ ಪಡಸಾಲೆಯಲ್ಲಿ ದಿಗ್ಭ್ರಮೆಯಲ್ಲಿ
ಉಳಿದ ಒಂದಷ್ಟು ಮಣ್ಣು, ಬಣ್ಣ,
ಬಿಂದಿಗೆಯಲ್ಲಿನ ನೀರು, ಅಲಂಕಾರಕ್ಕೆಂದು
ತಂದಿಟ್ಟುಕೊಂಡಿದ್ದ ಸಾಮಗ್ರಿಗಳ ನಡುವೆ
ತನ್ನ ಮೂರ್ಖತನಕ್ಕೆ ತನ್ನನೇ ಹಳಿದುಕೊಳ್ಳುತ್ತ
ಜೀವದಂಶವೊಂದು ಎದ್ದು ನಡೆದ ದಿಕ್ಕ ದಿಟ್ಟಿಸುತ್ತ

[ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]

Wednesday, November 24, 2021

ಟಿವಿಯೆಂಬ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ...

ಊರಿನ ಮೊದಲ ಟಿವಿ ಬಂದದ್ದು ನಿಚ್ಛಳವಾಗಿ ನೆನಪಿದೆ. ಎಲ್ಲ ಹೊಸ ವಸ್ತುಗಳಂತೆ ಪಟೇಲರ ಮನೆಗೇ ಬಂದದ್ದು ಮೊದಲ ಟಿವಿ. ಮರ ಹತ್ತುವುದರಲ್ಲಿ ನಿಷ್ಣಾತ ಎಂದು ಹೆಸರಾಗಿದ್ದ ನರಸಿಂಹ ಶೆಟ್ಟಿಗೆ ಆಂಟೆನಾ ಕೂರಿಸುವ ಕೆಲಸ ವಹಿಸಲಾಗಿತ್ತು. ಪಟೇಲರ ಮನೆಯ ಸಮೀಪವಿದ್ದ ಅತಿ ಎತ್ತರದ ಮರದ ಮೇಲೆ ಆಂಟೆನಾ ಕೂರಿಸುವುದು ಅವನ ಜವಾಬ್ದಾರಿಯಾಗಿತ್ತು. ಅಂತಹ ಮರ ಹುಡುಕಿ ಆಂಟೆನಾ ಕೂರಿಸಿದ ಅವನು, ಊರಿನ ಪ್ರತಿ ಮನೆ ಹೊಕ್ಕು, “ನೋಡಿ, ಪಟೇಲ್ರು ಮನಿಗೆ ಟೀವಿ ಬಂತು. ಆಂಟೆನಾ ಕೂರ್ಸಕ್ಕೆ ನನ್ನೇ ಕರ್ದೀರು. ಅದೇ ಅಲ್ ಕಾಣಿ, ಎಷ್ಟ್ ಎತ್ರಕ್ ಕೂರ್ಸೀದೆ” ಅಂತ ಹೇಳಿ, ಎಲ್ಲರಿಂದಲೂ ತನ್ನ ಸಾಹಸಕಾರ್ಯಕ್ಕೆ ಶಹಬ್ಬಾಷ್ ಗಿಟ್ಟಿಸಿಕೊಂಡು ಬಂದಿದ್ದ. ಅವನಾದರೂ ಎಷ್ಟು ಎತ್ತರಕ್ಕೆ ಅದನ್ನು ಕೂರಿಸಿದ್ದ ಎಂದರೆ, ಊರಿನ ಬಹುಪಾಲು ಮನೆಗಳ ಕಟ್ಟೆಯ ಮೇಲೆ ನಿಂತರೆ ಆ ಆಂಟೆನಾ ಕಾಣುತ್ತಿತ್ತು. 
 
ಮಲೆನಾಡಿನ ಒಂದು ಪುಟ್ಟ ಹಳ್ಳಿಯಾದ ನಮ್ಮೂರಿಗೆ ಎಷ್ಟೋ ದೂರದ ದೂರದರ್ಶನ ಕೇಂದ್ರದಿಂದ ಸಿಗ್ನಲ್ ಎಳೆಯಬೇಕೆಂದರೆ ಹಾಗೆ ಅಷ್ಟು ಎತ್ತರದಲ್ಲಿ ಆಂಟೆನಾವನ್ನು ಕೂರಿಸುವುದು ಅನಿವಾರ್ಯವೂ ಆಗಿತ್ತು. ಊರಿಗೆ ಬಂದ ಮೊದಲ ಟಿವಿಯನ್ನು ನಾವೆಲ್ಲಾ ನೋಡಲು ಹೋಗದೇ ಇರಲಾದೀತೇ? ಅವತ್ತಷ್ಟೇ ಡೆಲಿವರಿಯಾದ ಶಿಶು-ಬಾಣಂತಿಯನ್ನು ನೋಡಲು ಹೋಗುವವರಂತೆ ನಾವೆಲ್ಲ ಪಟೇಲರ ಮನೆಗೆ ಧಾಳಿಯಿಟ್ಟೆವು. ನರಸಿಂಹ ಶೆಟ್ಟಿ ಅಷ್ಟು ಕಷ್ಟ ಪಟ್ಟಿದ್ದರೂ, ಸಿಗ್ನಲ್ ಸಾಲದಾಗಿ ಆ ಬ್ಲಾಕ್ ಅಂಡ್ ವೈಟ್ ಟೀವಿಯಲ್ಲಿ ಚಿತ್ರಕ್ಕಿಂತ ಜಾಸ್ತಿ ಚುಕ್ಕಿಗಳೇ ಕಾಣುತ್ತಿತ್ತು. ಆದರೂ ನಾವೆಲ್ಲ ಆ ಅದ್ಭುತ ಮಾಯಾಪೆಟ್ಟಿಗೆಯಲ್ಲಿ ಓಡುವ ಚಿತ್ರಗಳನ್ನು ನೋಡಿ ಆನಂದಿಸಿದೆವು. ಏಕೈಕ ಛಾನೆಲ್ ಆಗಿದ್ದ ದೂರದರ್ಶನದ ನಮಗರ್ಥವಾಗದ ಹಿಂದಿ, ಸಂಜೆಯ ಮೇಲೆ ಬರುತ್ತಿದ್ದ ಕನ್ನಡ, ಭಾನುವಾರದ ಪಿಚ್ಚರುಗಳನ್ನು ಮುಗಿಬಿದ್ದು ನೋಡಿದೆವು. ಎಂದೋ ಥಿಯೇಟರಿಗೆ ಹೋದರೆ ಮಾತ್ರ ನೋಡಲಾಗುತ್ತಿದ್ದ ನಮ್ಮ ನೆಚ್ಚಿನ ಹೀರೋ-ಹೀರೋಯಿನ್ನುಗಳ ಸಿನೆಮಾಗಳು ಈಗ ಮನೆಯಲ್ಲೇ ಪ್ರದರ್ಶನವಾಗುತ್ತಿದ್ದವು. ಜಾಹೀರಾತು ಬಂದಾಗ ಬೈದುಕೊಳ್ಳುತ್ತಾ, ಕರೆಂಟ್ ಹೋದರೆ ಕರೆಂಟಿನವರನ್ನು ಶಪಿಸುತ್ತಾ, ಟಿವಿ ಕೈಕೊಟ್ಟರೆ ನಮ್ಮ ಅದೃಷ್ಟವನ್ನೇ ಹಳಿದುಕೊಳ್ಳುತ್ತಾ, ಟಿವಿಯಿರುವ ಮನೆಯವರು ಬೇಕೆಂದೇ ಟಿವಿ ಹಾಕದಿದ್ದರೆ ಮನಸಲ್ಲೇ ಅವರ ಮೇಲೆ ಆಕ್ರೋಶ ಪಟ್ಟುಕೊಳ್ಳುತ್ತಾ, ಟಿವಿಯೊಳಗೆ ನಿಧಾನಕ್ಕೆ ನಾವು ಹುದುಗತೊಡಗಿದೆವು. 
 
ಬ್ಲಾಕ್ ಅಂಡ್ ವೈಟ್ ಟಿವಿ ಹೋಗಿ ಕಲರ್ ಟಿವಿ ಬಂತು. ಊರಿನ ಹಲವು ಮನೆಗಳಿಗೆ ಟಿವಿ ಬಂದವು. ಜಿಲ್ಲೆ-ತಾಲೂಕು ಕೇಂದ್ರಗಳಲ್ಲಿ ಟಿವಿ ಟವರ್ ಆಯಿತು. ಆಂಟೆನಾಗಳು ಮರದಿಂದ ಇಳಿದು ಮನೆಯ ಕೋಳನ್ನೇರಿದವು. ಬೆಂಗಳೂರು ದೂರದರ್ಶನದಿಂದ ಸಂಜೆಯಿಂದ ಮಾತ್ರ ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮಗಳು ಈಗ ಮಧ್ಯಾಹ್ನದಿಂದಲೇ ಬರಲು ಶುರುವಿಟ್ಟವು. ಪತ್ರಿಕೆಗಳಲ್ಲಿ ಮಾತ್ರ ನೋಡಿ ಗೊತ್ತಿದ್ದ ಧಾರಾವಾಹಿಗಳು ಟೀವಿಯಲ್ಲೂ ಶುರುವಾಗಿ ಜನರನ್ನು ಮೋಡಿ ಮಾಡತೊಡಗಿದವು. ಫ್ಲಾಶ್‌ಬ್ಯಾಕುಗಳೂ, ಫೈಟಿಂಗ್ ಸೀನುಗಳೂ, ಅರೆಬರೆ ಬಟ್ಟೆಯುಟ್ಟ ಲಲನೆಯರ ನೃತ್ಯಗಳೂ ಇಷ್ಟವಾಗದ ಊರ ಕೆಲವು ವೃದ್ಧರು, “ಮನೆ ಮೇಲೆ ಏಣಿ ಅಡ್ಡ ಸಾಚಿದ್ದ; ಮನೆಯೊಳಗೆ ಗೊಂಬೆ ಕುಣಿತು” ಅಂತ ಹೇಳಿಕೊಂಡು ಓಡಾಡಿದರು.
ಭಾನುವಾರದ ಸಿನೆಮಾ ಕೊಡುವ ಕಿಕ್ಕು ಸಾಲದಾಗಿ ವಿಸಿಪಿ ಬಂದಮೇಲೆ, ನಮಗೆ ಬೇಕಾದ ಸಿನೆಮಾವನ್ನು ಬೇಕಾದಾಗ ನೋಡುವ ಸೌಲಭ್ಯ ಬಂತು: ಅದೂ ಜಾಹೀರಾತುಗಳ ಕಾಟವಿಲ್ಲದೆ! ಊರಿಗೊಂದೇ ಟಿವಿಯಾಗಿದ್ದ ಹೊಸದರಲ್ಲಿ, ಪ್ರತಿ ದಿನ ಒಬ್ಬೊಬ್ಬರಂತೆ ಪಾಳಿ ಮಾಡಿಕೊಂಡು, ಪೇಟೆಯಿಂದ ಕ್ಯಾಸೆಟ್ ಬಾಡಿಗೆಗೆ ತಂದು, ಪ್ರತಿರಾತ್ರಿ ಊರವರೆಲ್ಲ ಒಂದು ಮನೆಯಲ್ಲಿ ಸೇರಿ ಸಿನೆಮಾ ನೋಡುವ ಸೌಭಾಗ್ಯ ಬಂತು. ಅದೇ ಜೋಶಿನಲ್ಲಿ ರಾಮಾಯಣ, ಮಹಾಭಾರತ, ಕೃಷ್ಣಾವತಾರ ಮೊದಲಾದ ಸೀರಿಸ್ಸುಗಳನ್ನೂ ಊರವರೆಲ್ಲ ನೋಡಿ ಆನಂದಿಸಿದೆವು. ನಮಗೆ ಅರ್ಥವಾಗುತ್ತಿದೆ ಅಂತ ತೋರಿಸಿಕೊಳ್ಳಲು, ಹಿಂದಿಯಲ್ಲಿದ್ದ ಸಂಭಾಷಣೆಯನ್ನು ಹಿರಿಯರಿಗೆ ಅನುವಾದಿಸಿ ಹೇಳಲು ಪ್ರಯತ್ನಿಸಿ ಕೆಲವು ಹುಡುಗರು, “ರಾಮಾಯಣ-ಮಹಾಭಾರತ ನಮಗೆ ಗೊತ್ತಿದ್ದಷ್ಟು ನಿಮಗೆ ಗೊತ್ತಿಲ್ಲ, ಸುಮ್ನಿರಿ” ಅಂತ ಬೈಸಿಕೊಂಡೆವು. 
 
ನೀಳಕಾಯದ ಆಂಟೆನಾಗಳ ಕಾಲ ಕಳೆದು ಡಿಶ್ಶುಗಳು ಊರಿಗೆ ಲಗ್ಗೆಯಿಟ್ಟವು. ನಗರಕ್ಕೆ ಹೋದಾಗ ನೋಡಿದ್ದ ಕೇಬಲ್ ಟಿವಿಯಲ್ಲಿ ಎಷ್ಟೊಂದು ಛಾನೆಲ್ಸ್ ಬರುತ್ತೆ, ನಮ್ಮಲ್ಲಿ ಬರೋಲ್ಲ ಅಂತ ಬೇಸರ ಪಟ್ಟುಕೊಂಡಿದ್ದ ಹಳ್ಳಿಗರಿಗೂ ವರವಾಗುವಂತೆ ಬಂದ ಈ ಡಿಶ್ಶುಗಳು, ಹತ್ತಾರು ಭಾಷೆಗಳ ನೂರಾರು ಛಾನೆಲ್ಲುಗಳ ಅಸಂಖ್ಯ ಕಾರ್ಯಕ್ರಮಗಳನ್ನು ತೋರಿಸುತ್ತಾ ಮನೆಮನೆಗಳಲ್ಲಿ ಮನರಂಜನೆಯ ಮಹಾಪೂರವೇ ಶುರುವಾಯಿತು. ಅಂಗಳದಲ್ಲೊಬ್ಬರು – ಟಿವಿಯ ಮುಂದೊಬ್ಬರು ಕುಳಿತು, ಬೇಕಾದ ಛಾನೆಲ್ಲುಗಳಿಗಾಗಿ ಬೇಕಾದ ಕಡೆ ಡಿಶ್ಶು ತಿರುಗಿಸುತ್ತ – ಒಳಗೆ ಕುಳಿತವರು ನಿರ್ದೇಶನ ಕೊಡುವ ದೃಶ್ಯ ಸಾಮಾನ್ಯವಾಯಿತು. ಧಾರಾವಾಹಿ ನಟಿಯರ - ವಾರ್ತಾವಾಚಕಿಯರ ಚಂದದ ಸೀರೆಗಳನ್ನು ನೋಡಿ ಕರುಬುವ ಗೃಹಿಣಿಯರೂ, ಪ್ರತಿ ರಾತ್ರಿ ವಾರ್ತೆಗಳನ್ನು ನೋಡಿ ಜಗತ್ತಿನ ವರ್ತಮಾನಗಳನ್ನೆಲ್ಲ ತಿಳಿದುಕೊಂಡೆ ಎಂದು ಭಾವಿಸಿ ಬೀಗುವ ಗೃಹಸ್ಥರೂ, ಫೈಟಿಂಗ್ ದೃಶ್ಯಗಳನ್ನು ನಕಲು ಮಾಡುವ ಮಕ್ಕಳೂ, ಪ್ರೀತಿಸಿದವರಿಗೆ ಪ್ರಪೋಸು ಮಾಡುವ ಟ್ರೈನಿಂಗು ಪಡೆದ ಯುವಕರೂ ಟಿವಿಯನ್ನು ಹೆಚ್ಚೆಚ್ಚು ಮೆಚ್ಚಲು ಹಿಡಿದರು. ಕ್ರಿಕೆಟ್ ಮ್ಯಾಚುಗಳು ಲೈವ್ ಬರಲು ಪ್ರಾರಂಭವಾಗಿ, ಜನ ದಿನಗಟ್ಟಲೆ ಟಿವಿಗಂಟಿ ಕೂರುವುದೂ, ರಿಮೋಟಿಗಾಗಿ ಮನೆಯವರು ಕಿತ್ತಾಡಿಕೊಳ್ಳುವುದೂ ಶುರುವಾಯಿತು. ಧಾರಾವಾಹಿ ನೋಡಲೋಸುಗವೇ ನಮ್ಮ ನಿತ್ಯದ ಕೆಲಸಗಳ ಸಮಯವನ್ನು ಮಾರ್ಪಾಟು ಮಾಡಿಕೊಂಡೆವು. ಮನೆಯ ಜಗಲಿಯಲ್ಲೋ ಹಾಲಿನಲ್ಲೋ ಪ್ರತಿಷ್ಠಾಪಿಸಲ್ಪಟ್ಟ ಟಿವಿ ನಮ್ಮೆಲ್ಲರನ್ನೂ ಒಟ್ಟಿಗೆ ಕೂರಿಸುವ, ನಗಿಸುವ, ಅಳಿಸುವ, ಕುಣಿಸುವ, ತಿಳಿಸುವ, ಮನ ತಣಿಸುವ ಮಾಧ್ಯಮವಾಗಿ ಉನ್ನತ ಸ್ಥಾನವನ್ನಲಂಕರಿಸಿತು. 
 
ವಿಸಿಪಿ-ವಿಸಿಆರ್‌ಗಳು ಮುಂದೆ ವಿಸಿಡಿ-ಡಿವಿಡಿಗಳಾಗಿ ಬಡ್ತಿ ಹೊಂದಿದವು. ಕ್ಯಾಸೆಟ್ಟಿನ ರೀಲು ಪ್ಲೇಯರಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದ ದಿನಗಳು ಹೋದವು. ಕ್ಯಾಸೆಟ್ಟನ್ನು ತಿರುಗಿಸಿ-ಮುರುಗಿಸಿ ಹಾಕಬೇಕಿದ್ದ ಕಾಲ ಇಲ್ಲವಾಯಿತು. ಸುದರ್ಶನ ಚಕ್ರದಂತಹ ಡಿಸ್ಕೊಂದರಲ್ಲಿ ಮೂರ್ನಾಲ್ಕು ಸಿನೆಮಾಗಳು ಜಾಗ ಮಾಡಿಕೊಂಡು ಕೂತವು. ಮುಂದೊಂದು ದಿನ ಸಣ್ಣದೊಂದು ಪೆನ್‌ಡ್ರೈವಿನಲ್ಲಿ ಹತ್ತಾರು ಸಿನೆಮಾ ತುಂಬಿಸಬಹುದು ಎಂಬ ಕಲ್ಪನೆ ಆಗ ಯಾರಿಗೂ ಇರಲಿಲ್ಲವಷ್ಟೇ? 
 
ಡಿಟಿಎಚ್ ಬಂದಮೇಲೆ, ಇಡೀ ಅಂಗಳ ತುಂಬುವಂತಿದ್ದ ದೊಡ್ಡ ಡಿಶ್ಶುಗಳು ಸ್ಲಿಮ್ಮೂ ಟ್ರಿಮ್ಮೂ ಆಗಿ ಮನೆಯ ಕೋಳಂಚನ್ನೋ ಟೆರೇಸಿನ ತುದಿಯನ್ನೋ ಅಪ್ಪಿದವು. ಡೂಮ್ ಟಿವಿಗಳು ಮೂಲೆಗುಂಪಾಗಿ ದೊಡ್ಡ ಪರದೆಯ ಎಲ್‌ಸಿಡಿ-ಎಲ್‌ಇಡಿ ಟಿವಿಗಳು ಬಂದವು. ಈಗ ಟಿವಿಯಲ್ಲಿ ಚುಕ್ಕಿಗಳಿಲ್ಲ, ತೆರೆತೆರೆಯಿಲ್ಲ, ಕಾಮನಬಿಲ್ಲಿನ ಬಣ್ಣಗಳಿಲ್ಲ: ಎಲ್ಲಾ ನಿಚ್ಛಳ ಸುಂದರ ಸ್ಫುಟ. ಕ್ವಿಜ್ ಕಾರ್ಯಕ್ರಮಗಳು, ಸಂಗೀತ ಸ್ಪರ್ಧೆಗಳು, ರಿಯಾಲಿಟಿ ಶೋಗಳ ಟ್ರೆಂಡ್ ಶುರುವಾದಮೇಲಂತೂ ನಮ್ಮ ಅಕ್ಕಪಕ್ಕದವರೇ ಟೀವಿಯಲ್ಲಿ ಬರಲು ತೊಡಗಿದರು. ನಮ್ಮಂತೆಯೇ ಜನಸಾಮಾನ್ಯರು ಎಂದುಕೊಂಡಿದ್ದವರು ಈಗ ಹೀರೋ ಥರ ಕಾಣುವರು! ಅಕಸ್ಮಾತ್ ಯಾರಾದರೂ ನಮ್ಮ ಪರಿಚಿತರು ಟಿವಿಯಲ್ಲಿ ಕಂಡರೆ ಖುಷಿ-ಹೆಮ್ಮೆ ಪಡುತ್ತಿದ್ದ ನಮಗೆ, ಅರೆ, ಈಗ ನಾನು ಬೇಕಾದರೂ ಇಲ್ಲಿ ಕಾಣಿಸಿಕೊಳ್ಳಬಹುದು ಎಂಬಂತಾಯಿತು. 
 
24x7 ನ್ಯೂಸ್‌ಛಾನೆಲ್ಲುಗಳು ಬಂದಮೇಲೆ ಎಲ್ಲ ಸುದ್ದಿಗಳೂ ಎಲ್ಲರಿಗೂ ಆಯಾ ಕ್ಷಣಕ್ಕೆ ತಲುಪುವಂತಾಗಿ, ಆ ಛಾನೆಲ್ಲುಗಳೂ ಮುಂದುವರೆದು, ನಡೆಯುತ್ತಿರುವುದನ್ನೆಲ್ಲಾ ನೇರವಾಗಿ ತೋರಿಸುವವಾಗಿ, ನಮ್ಮ ದಿನಗಳಿಗೊಂದು ರೋಚಕತೆ ಬಂದುಬಿಟ್ಟಿತು. ಎಷ್ಟೋ ಭ್ರಷ್ಟರ ಬಣ್ಣಗಳು ಬಯಲಾದವು. ಕ್ರೈಂ ಶೋಗಳು, ಬ್ರೇಕಿಂಗ್ ನ್ಯೂಸುಗಳು, ಲೈವ್ ದೃಶ್ಯಾವಳಿಗಳು, ವಾರಗಟ್ಟಲೆ ನಡೆಯುವ ಆಡಂಬರದ ಮದುವೆಗಳು, ಯಾರದೋ ಸಂಸಾರದ ಬಿರುಕಿನ ಪಂಚಾಯತಿಗಳೂ, ಯಾರದೋ ಕಣ್ಣೀರು, ಯಾರಿಗೋ ಆದ ಗಾಯ, ಯಾರಿಗೋ ಆದ ಅನ್ಯಾಯಗಳನ್ನೆಲ್ಲ ನೋಡುತ್ತಾ ನಾವು ಕಳೆದುಹೋದೆವು. ಎಷ್ಟರ ಮಟ್ಟಿಗೆ ಎಂದರೆ, ಇತ್ತೀಚಿನ ದಿನಗಳಲ್ಲಿ, ಇವೆಲ್ಲಾ ಜಾಸ್ತಿಯಾಯ್ತೇನೋ, ಧಾರಾವಾಹಿಗಳ ಉದ್ದ, ಕೆಲವು ರಿಯಾಲಿಟಿ ಶೋಗಳಲ್ಲಿನ ವರ್ತನೆ, ನ್ಯೂಸ್‌ಛಾನೆಲ್ಲುಗಳ ವರದಿಗಾರಿಕೆ ಅತಿರೇಖಕ್ಕೆ ಹೋಯ್ತೇನೋ ಅಂತ ಜನ ಮಾತಾಡಿಕೊಳ್ಳುವವರೆಗೆ ಬಂದಿದೆ. “ಎಲ್ಲಾ ಟಿಆರ್‌ಪಿಗಾಗಿ ಮಾಡ್ತಾರೆ” ಅಂತ, ತಿಳಿದವರೂ ತಿಳಿಯದವರೂ ಟಿವಿ ಛಾನೆಲ್ಲುಗಳನ್ನು ಹಳಿದುಕೊಳ್ಳುವ ಕಾಲ ಇದು.
ಇವೆಲ್ಲವುಗಳ ನಡುವೆ ಈಗ ಒಟಿಟಿ ಬಂದಿದೆ. ಸ್ಮಾರ್ಟ್‌ಫೋನುಗಳಲ್ಲೇ ಎಲ್ಲ ತರಹದ ಮನರಂಜನೆ ದೊರಕತೊಡಗಿದಮೇಲೆ, ಟಿವಿಗಳೂ ಸ್ಮಾರ್ಟ್ ಆಗಿವೆ. ಸ್ಥಿರ ಇಂಟರ್ನೆಟ್ ಕನೆಕ್ಷನ್ ಒಂದಿದ್ದರೆ ಸಾಕು, ಆಂಟೆನಾವೂ ಬೇಡ ಡಿಶ್ಶೂ ಬೇಡ: ನೇರ ಅಂತರ್ಜಾಲದಿಂದಲೇ ದೇಶವಿದೇಶಗಳ ಛಾನೆಲ್ಲುಗಳಲ್ಲಿನ ಕಾರ್ಯಕ್ರಮಗಳು, ಕಂಡುಕೇಳರಿಯದ ಭಾಷೆಗಳ ವೆಬ್ ಸೀರಿಸ್ಸುಗಳು, ಬೇಕಾದ ಮನರಂಜನೆಯನ್ನು ಬೇಕಾದಾಗ ನೋಡಬಹುದಾದ ಸೌಕರ್ಯವೀಗ ಇದೆ. ಥಿಯೇಟರಿನಲ್ಲೇ ಬಿಡುಗಡೆಯಾಗುತ್ತಿದ್ದ ಸಿನೆಮಾಗಳು ಈಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಒಟಿಟಿಯೇ ಭವಿಷ್ಯತ್ತು ಎನ್ನಲಾಗುತ್ತಿದೆ. ಹಗಲು-ರಾತ್ರಿಯೆನ್ನದೆ ಸೋಫಾಗೊರಗಿ ಕುಳಿತು ಸಪ್ತಸಾಗರದಾಚೆಯ ಕಥೆಯನ್ನು ಬಿಂಜ್ ವಾಚ್ ಮಾಡುತ್ತಿದ್ದೇವೆ.
 
ಊರಿಗೊಂದಿದ್ದ ಟಿವಿ ಈಗ ಟಿವಿಯಿಲ್ಲದ ಮನೆಯಿಲ್ಲ ಎನ್ನಬಹುದಾದ ಮಟ್ಟ ತಲುಪಿದೆ.  ಕಪ್ಪು-ಬಿಳುಪು ತೆರೆಗಳ ದೊಡ್ಡ ಡಬ್ಬಿಯಂತಹ ಟಿವಿಗಳ ಕಾಲದಿಂದ ಶುರುವಾಗಿದ್ದು ಈಗ ಎಚ್‌ಡಿ, ಅಲ್ಟ್ರಾ ಎಚ್‌ಡಿ, 4ಕೆ ಟಿವಿಗಳಾಗಿ ಅವು ಗೋಡೆಗಂಟಿ ಕುಳಿತಿವೆ. ಟಿವಿಯಲ್ಲಿ ಸಣ್ಣ ಚಿತ್ರ ಬರಬೇಕೆಂದರೂ ಆಕಾಶದೆತ್ತರಕ್ಕೆ ಆಂಟೆನಾ ಏರಿಸಬೇಕಿದ್ದ ಕಾಲದಿಂದ ವೈರ್‌ಲೆಸ್ ಸೆಟ್‌ಟಾಪ್ ಬಾಕ್ಸೊಂದು ಸಾವಿರಾರು ಛಾನೆಲ್ಲುಗಳನ್ನು ಸ್ಟ್ರೀಮ್ ಮಾಡುವ ಬೆರಗಿನ ದಿನಗಳು ಬಂದಿವೆ. ಬೀದಿಗಳೆಲ್ಲ ಮಲಗಿರುವ ರಾತ್ರಿ, ಸುತ್ತಮುತ್ತಲೂ ಕತ್ತಲೆ ಕವಿದಿರುವ ರಾತ್ರಿ, ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ, ದೊಡ್ಡ ಪರದೆಯ ಮಾಯಾಪೆಟ್ಟಿಗೆ ಸೂಸುವ ಬೆಳಕಲ್ಲಿ ಕೂತ ಯುವಕ-ಯುವತಿಯರು ಕ್ರೈಂ ಥ್ರಿಲ್ಲರ್ ಸರಣಿಯನ್ನು ವೀಕ್ಷಿಸುತ್ತಿದ್ದಾರೆ. ಅದೇ ಬೆಳಕಿನ ಬಲದಲ್ಲೇನೋ ಎಂಬಂತೆ ಭೂಮಿ ನಿಧಾನಕ್ಕೆ ತಿರುಗುತ್ತಿದೆ.

[World Television Day ನಿಮಿತ್ತ ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ]