ರಾತ್ರಿಗೆ ಈಗ ಹನ್ನೆರಡರ ಜಾವ. ಒಂಟಿ ರೂಮಿನಲ್ಲಿ ಒಂಟಿ ನಾನು. ಒಂಟಿ ಹಾಸಿಗೆ. 'ಬಾ, ನನ್ನ ಮೇಲೆ ಮಲಗು' ಎಂದು ಸುತ್ತಿ ಸುತ್ತಿ ಕೂತಿರುವ ಅದು ಕರೆಯುತ್ತಿದೆ ಹತ್ತಿರದಿಂದ. ನನಗೋ ನಿದ್ರೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಈ 'ಯಯಾತಿ' ಎಂಬ ಹೆಸರಿನ ಪುಸ್ತಕವನ್ನು ಹಿಡಿದು ಕುಳಿತುಬಿಟ್ಟಿದ್ದೇನೆ. ಇದೇನು ಕಾದಂಬರಿಯೋ, ಕಥೆಯೋ, ಗ್ರಂಥವೋ ನನಗೆ ಹೆಸರು ಕೊಡಲು ಸಾಧ್ಯವಾಗುತ್ತಿಲ್ಲ. ಅಮರ ಪ್ರೇಮ ಕಾವ್ಯ ಎಂದರೆ ಸರಿಯಾಗಬಹುದೇನೋ. ಯಯಾತಿಯ ದುಃಖ, ಶಮಾಳ ಪ್ರೀತಿ, ಕಚನ ತತ್ವ, ದೇವಯಾನಿಯ ದುರುಳತನ... ಅಬ್ಬ, ಅದು ಹೇಗೆ ಬರೆದಿದ್ದಾರೆ ವಿ.ಎಸ್. ಖಾಂಡೇಕರ್! ಅದೆಷ್ಟು ಅದ್ಭುತವಾಗಿ ಕನ್ನಡಕ್ಕೆ ತಂದಿದ್ದಾರೆ ವಿ.ಎಂ. ಇನಾಂದಾರ್! ಅದರೊಳಗೇ ಮುಳುಮುಳುಗಿ ಹೋಗುತ್ತೇನೆ ನಾನು.. ಮುಳುಗಿನಲ್ಲೇ ತೇಲಿ ಮತ್ತೆಲ್ಲೋ ಏಳುತ್ತೇನೆ..
ದೂರದ ಚರ್ಚಿನಲ್ಲಿ ಘಂಟೆ ಹೊಡೆದ ಸದ್ದು. ಮೇನ್ ರೋಡಿನಲ್ಲಿ ಏರು ಹತ್ತುತ್ತಿರುವ ಲಾರಿಯ ಸದ್ದು. ಬಲಕಿವಿಯ ಕಡೆಯಿಂದ ಶುರುವಾಗಿ ಎಡಕಿವಿಯ ಕೊನೆಯಲ್ಲಿ ಮುಗಿದುಹೋದಂತೆ ಹಾದುಹೋದ ಯಮಾಹಾ ಬೈಕಿನ ರೊಂಯ್ ಸದ್ದು. ಯಯಾತಿಯ ಇನ್ನೂರಾ ಮೂವತ್ತೇಳನೇ ಪುಟದ ಮೇಲ್ಗಡೆ ಎಡತುದಿಯನ್ನು ಕಿವಿಯಂತೆ ಸಣ್ಣಗೆ ಮಡಿಚಿ ಗುರುತು ಮಾಡಿ ಮುಚ್ಚಿಟ್ಟು ನಾನು ಗೂಡಿನಿಂದ ಹೊರಬರುತ್ತೇನೆ.
ಆಕಾಶದ ಅಂಗಳದ ತುಂಬ ಯಾರೋ ಚುಕ್ಕಿಗಳನ್ನಿಟ್ಟು ಹೋಗಿದ್ದಾರೆ. ಯಾರದಿರಬಹುದು ಕೆಲಸ..? ದೂರದಲ್ಲಿ ಚಂದ್ರ ಕಾಣಿಸುತ್ತಾನೆ... ಪೋಲಿ, ಇವನದೇ ಕೆಲಸ ಇದು ಅಂದುಕೊಳ್ಳುತ್ತೇನೆ. ನನ್ನ ಕವಿಕಲ್ಪನೆಗೆ ಚಂದ್ರ ಮುಗುಳ್ನಗುತ್ತಾನೆ.
ತಣ್ಣನೆ ಟೆರೇಸು. ಒಂದು, ಎರಡು, ಮೂರು, ನಾಲ್ಕು ....ಐದನೇ ಹೆಜ್ಜೆ ಇಟ್ಟವನು, ಏನೋ ತಡೆದಂತಾಗಿ ಹಿಂದಡಿಯಿಡುತ್ತೇನೆ. ಏನೋ ತಡೆದಂತಾಯಿತು. ತಂತಿಯಂತಹುದು. ಅಥವಾ ಹಗ್ಗ. ಇನ್ನೆರೆಡು ಹೆಜ್ಜೆ ಹಿಂದಿಟ್ಟು ನಾನು ಕಣ್ಣನ್ನು ಕಿರಿದು ಮಾಡಿ ನೋಡುತ್ತೇನೆ. ಹೌದು, ಹಗ್ಗ. ಒಂದು ದಾರ. ಹೊಲಿಯಲು ಬಳಸುತ್ತಾರಲ್ಲ, ಅಂತಹ ಒಂದು ದಾರ. ನನ್ನ ಎದೆ ಮಟ್ಟದಲ್ಲಿ ಟೆರೇಸಿನಲ್ಲಿ ಅಡ್ಡ ಹೋಗಿದೆ. ನಾನು ಆಚೆ ದಾಟದಂತೆ, ಬೇಲಿಯಂತೆ, ಗಡಿರೇಖೆಯಂತೆ ನನ್ನನ್ನು ತಡೆದು ನಿಲ್ಲಿಸಿದೆ. ಬೆಳದಿಂಗಳ ಬೆಳಕಿಗೆ ಬೆಳ್ಳಗೆ ಹೊಳೆಯುತ್ತಿದೆ. ತಂಬೂರಿಯ ತಂತಿಯಂತೆ ನಾನದನ್ನು ಮೀಟುತ್ತೇನೆ. ಗಾಳಿಯಲ್ಲೊಮ್ಮೆ ತುಯ್ದಾಡುತ್ತದೆ ದಾರ. ಸಂಜೆ ಮನೆಗೆ ಬರುವಾಗ ಇರಲಿಲ್ಲವಲ್ಲ ಈ ದಾರ? ಈಗೆಲ್ಲಿಂದ ಬಂತು ಇದು? ಎಲ್ಲಿಗೆ ಹೋಗಿದೆ? ಯಾರು ಎಳೆದದ್ದು ಇದನ್ನು? ಯಾಕೆ ಎಳೆದದ್ದು?
ನನಗೆ ಏನೋ ನೆನಪಾದಂತಾಗುತ್ತದೆ. ಕ್ಷಣದಲ್ಲೇ ಆ ನೆನಪು ಸ್ಪಷ್ಟವಾಗುತ್ತದೆ. ಚಿಕ್ಕವನಿದ್ದಾಗ ನಾನೂ ಹೀಗೇ ದಾರ ಎಳೆದು ಆಟವಾಡುತ್ತಿದ್ದುದು... ನಾವು ಟೆಲಿಫೋನ್ ಆಟ ಆಡುತ್ತಿದ್ದೆವು. ಒಂದು ಟೂಥ್‍ಪೇಸ್ಟ್ ಡಬ್ಬಿಯನ್ನು ಮಧ್ಯದಲ್ಲಿ ಕತ್ತರಿಸಬೇಕು. ಈಗ ಎರಡು ಪುಟ್ಟ ಪುಟ್ಟ ಡಬ್ಬಿಗಳಾಗುತ್ತವಲ್ಲ, ಒಂದು ಊದ್ದ ದಾರ ತೆಗೆದುಕೊಂಡು ಒಂದು ತುದಿಯನ್ನು ಒಂದು ಡಬ್ಬಿಯ ತುದಿಗೆ ಕಟ್ಟುವುದು. ದಾರದ ಮತ್ತೊಂದು ತುದಿಯನ್ನು ಮತ್ತೊಂದು ಡಬ್ಬಿಯ ತುದಿಗೆ ಕಟ್ಟುವುದು. ಒಂದು ಡಬ್ಬಿಯನ್ನು ಒಬ್ಬರು ಹಿಡಿದುಕೊಂಡು ಇಲ್ಲೇ ನಿಲ್ಲುವುದು. ಮತ್ತೊಬ್ಬರು ದೂರ ದೂರ ಹೋಗುವುದು. ದೂರ ಹೋಗಿ ಸಣ್ಣಗೆ ಮಾತಾಡುವುದು. ಅದು ಈಚೆಗಿರುವವರಿಗೆ ದಾರದ ಮೂಲಕ ಹರಿದು ಬಂದು ಡಬ್ಬಿಯಲ್ಲಿ ಗುನುಗುಗುನುಗಾಗಿ ಕೇಳಿಸುತ್ತದೆ.
ಅಪ್ಪ ಹೇಳಿಕೊಟ್ಟದ್ದು ಅದನ್ನು ನನಗೆ. ಸಾಗರದಿಂದ ತಂದ ಹೊಸ ಕೋಲ್ಗೇಟ್ ಡಬ್ಬಿಯನ್ನು ಕತ್ತರಿಸಿ ನನಗವನು ಮಾಡಿಕೊಟ್ಟಿದ್ದ ಈ ಫೋನು. ಅವನು ಟೆಲಿಫೋನ್ ತಯಾರಿಸುವಾಗ ಪಕ್ಕದಲ್ಲಿ ಕೂತು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ ನಾನು. ತಯಾರಾದಮೇಲೆ ತಾನೊಂದು ತುದಿ ಹಿಡಿದು ಜಗುಲಿಯ ಮೇಲೆ ನಿಂತು ಮತ್ತೊಂದು ತುದಿಯನ್ನು ನನಗೆ ಕೊಟ್ಟು ದೂರಕ್ಕೆ ಹೋಗುವಂತೆ ಹೇಳಿದ. ನಾನು ಡಬ್ಬಿಯನ್ನು ಹಿಡಿದು ಅಂಗಳಕ್ಕೆ ಓಡಿದೆ. ದಾರ ಬರುವವರೆಗೂ ಹೋಗಿ, ದಾರ ಜಗ್ಗುವಂತಾದಾಗ ನನ್ನನ್ನು ಅಲ್ಲೇ ನಿಲ್ಲುವಂತೆ ಹೇಳಿದ ಅಪ್ಪ. 'ಫೋನ್ ಕಿವೀಲಿ ಇಟ್ಕೋ' ಎಂದ. ನಾನು ಕಿವಿಗೆ ಹಿಡಿದೆ. 'ಹಲೋ ಹಲೋ.. ಪಾಪು.. ಕೇಳ್ತಾ ಇದ್ದಾ..?' ಕೇಳಿದ. ಅಪ್ಪನ ಪಿಸುಮಾತು ದಾರದಲ್ಲಿ ಹರಿಹರಿದು ಬಂದು ಈ ಡಬ್ಬಿಯಲ್ಲಿ ಅಪ್ಪನೇ ಹತ್ತಿರ ನಿಂತು ಮಾತಾಡಿದಂತೆ ಕೇಳಿಸಿ ಏನೋ ಒಂಥರಾ ಭಯವಾದಂತಾಗಿ ನನಗೆ ರೋಮಾಂಚನ! 'ಹಲೋ ಹಲೋ.. ಕೇಳ್ತಾ ಇದ್ದಾ..? ನೀನೂ ಮಾತಾಡು..' ಅಪ್ಪ ಹೇಳುತ್ತಿದ್ದ. ನನಗೆ ಕೇಳಿಸುತ್ತಿತ್ತು. 'ಹಾಂ, ಕೇಳ್ತಾ ಇದ್ದು' ಎಂದೆ. 'ಇನ್ನೂ ಮಾತಾಡು..' ಎಂದ. ಆದರೆ ಅಪ್ಪನ ಜೊತೆ ಇನ್ನೂ ಏನು ಮಾತಾಡುವುದು ಅಂತಲೇ ನನಗೆ ಹೊಳೆಯಲಿಲ್ಲ. ಅಚಾನಕ್ಕಾಗಿ ಅಪ್ಪನ ಜೊತೆ, ಅದೂ ಫೋನಿನಲ್ಲಿ ಏನಂತ ಮಾತಾಡುವುದು? ನಾನು-ಅಪ್ಪ ಸಾಧಾರಣವಾಗಿ ಮಾತಾಡಿಕೊಳ್ಳುತ್ತಿದ್ದುದೇ ಕಮ್ಮಿ. ಅಂಥದರಲ್ಲಿ ಈಗ ಫೋನಿನಲ್ಲಿ ಏನು ಮಾತಾಡುವುದು? ಅಲ್ಲದೆ ನಾನು ಅಷ್ಟರೊಳಗೆ ಫೋನಿನಲ್ಲಿ ಮಾತಾಡಿರಲೇ ಇಲ್ಲ. ನಮ್ಮೂರಿನಲ್ಲಿ ಆಗ ಪಾಪಣ್ಣನ ಮನೆಯಲ್ಲಿ ಮಾತ್ರ ಫೋನಿತ್ತು. ವಿಪಿಟಿ ಫೋನು. ಡಾಕ್ಟ್ರ ಮನೆಯಲ್ಲೂ ಇತ್ತು ಅನ್ಸುತ್ತೆ. ನಾನು ಫೋನಿನಲ್ಲಿ ಮಾತಾಡಿರಲೇ ಇಲ್ಲ. ಪಾಪಣ್ಣನ ಮನೆಗೆ ಹೋದಾಗ ಯಾರಾದರೂ ಮಾತಾಡುತ್ತಿರುವುದನ್ನು ನೋಡಿದ್ದೆ ಅಷ್ಟೆ. ಅದು ಬಿಟ್ಟರೆ ಭಾನುವಾರದ ಸಿನಿಮಾಗಳಲ್ಲಿ ನೋಡಿದ್ದೆ. ನನಗಂತೂ ಅಪ್ಪನೊಟ್ಟಿಗೆ ಏನು ಮಾತಾಡುವುದು ಅಂತಲೇ ತಿಳಿಯದೆ, ತೀರಾ ಸಂಕೋಚವಾಗಿ ಸುಮ್ಮನೆ ನಿಂತುಬಿಟ್ಟಿದ್ದೆ.
ಇದೂ ಹಾಗೆಯೇ ಟೆಲಿಫೋನ್ ವ್ಯವಸ್ಥೆಯಾ? ದಾರದಗುಂಟ ನಾನು ಟೆರೇಸಿನ ತುದಿಗೆ ಬರುತ್ತೇನೆ. ನಮ್ಮ ಪಕ್ಕದ ಮನೆಯ ಟೆರೇಸಿನಿಂದ ಉದ್ಭಸಿದಂತೆ ಕಾಣಿಸುತ್ತದೆ ದಾರದ ತುದಿ. ಹೌದಾ? ಏನೋ, ಸರಿಯಾಗಿ ಕಾಣುತ್ತಿಲ್ಲ. ಇವತ್ತು ಹುಣ್ಣಿಮೆಯಾಗಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ. ಈಗಿನ ಕಾಲದಲ್ಲೂ ಹೀಗೆ ದಾರ ಎಳೆದು ಫೋನ್ ಮಾಡಿಕೊಂಡು ಆಟವಾಡುವ ಮಕ್ಕಳಿದ್ದಾರಾ? ಅದೂ ಬೆಂಗಳೂರಿನಲ್ಲಿ? ಚಿಕ್ಕ ಹುಡುಗರ ಕೈಯಲ್ಲೂ ಮೊಬೈಲುಗಳಿರುವಾಗ ಈ ದಾರ ಎಳೆಯುವ ರಿಸ್ಕು ಯಾರು ತಾನೆ ತೆಗೆದುಕೊಂಡಾರು ಎಂದೆನಿಸಿ ನಗು ಬಂತು.
ಹಾಗಾದರೆ ಏನಿದು ದಾರ? ಹಾಂ, ಹೊಳೆಯಿತು. ಇದು ಗಾಳಿಪಟದ ದಾರ. ಹೌದು, ಸಂಜೆ ಹೊತ್ತಿಗೆ ಪಕ್ಕದ ಮನೆ ಟೆರೇಸಿನ ಮೇಲೆ ನಿಂತು ಇಬ್ಬರು ಹುಡುಗರು ಗಾಳಿಪಟ ಹಾರಿಸುತ್ತಿದ್ದರು. ಬಹುಶಃ ಗಾಳಿಪಟ ಯಾವುದೋ ಮರಕ್ಕೋ, ಟವರ್ರಿಗೋ, ದೊಡ್ಡ ಕಟ್ಟಡದ ತುದಿಗೋ ಸಿಕ್ಕಿಕೊಂಡಿರಬೇಕು. ಕತ್ತಲಾದ್ದರಿಂದ ದಾರವನ್ನು ಹಾಗೇ ಬಿಟ್ಟು ಹೋಗಿದ್ದಾರೆ ಹುಡುಗರು.
ಆದರೂ ನನಗೇಕೋ ಅನುಮಾನ.. ಇದು ಗಾಳಿಪಟದ ದಾರವೇ ಹೌದೇ? ಅಥವಾ ನಾನು ಆಗ ಅಂದುಕೊಂಡಂತೆ ಟೆಲಿಫೋನ್ ಲೈನೇ? ಆ ಕಡೆಯ ಮನೆಯಲ್ಲಿ ಒಬ್ಬ ಹುಡುಗ, ಈ ಕಡೆಯ ಮನೆಯಲ್ಲಿ ಒಬ್ಬ ಹುಡುಗಿ ಇರಬಹುದೇ? ಅವರಿಬ್ಬರೂ ಪ್ರೇಮಿಗಳೇ? ರಾತ್ರಿಹೊತ್ತು, ಎಲ್ಲರೂ ಮಲಗಿರಲು, ಇವರಿಬ್ಬರೇ ಟೆರೇಸಿಗೆ ಬಂದು, ಒಬ್ಬರನ್ನೊಬ್ಬರು ದೂರದೂರದಿಂದ ನೋಡಿಕೊಳ್ಳುತ್ತ, ಈ ಫೋನಿನ ಮೂಲಕ ಪಿಸುಮಾತನಾಡಿಕೊಳ್ಳುತ್ತ, ಬೆಳದಿಂಗಳು ಚೆಲ್ಲಿದ ಟೆರೇಸಿನಮೇಲೆ ನಡೆದಾಡುತ್ತಿರುತ್ತಾರೆಯೇ? ಮಾತು ಸಾಕಾಗಿ, ಕಣ್ಣು ನಿದ್ರೆ ಬಯಸಿ, ಕೆಳಗಿಳಿದುಹೋಗುವ ಮುನ್ನ ಇಬ್ಬರೂ ಫ್ಲೈಯಿಂಗ್ ಕಿಸ್ ರವಾನಿಸಿಕೊಂಡು, ಗುಡ್‍ನೈಟ್ ಹೇಳಿ... ಇಲ್ಲ, ನಾನು ಇಷ್ಟೆಲ್ಲ ಕಲ್ಪನೆ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಯೋಚಿಸುತ್ತಿದ್ದೇನೆ. ತಪ್ಪು ಸುಶ್, ತಪ್ಪು.
ಗಾಳಿಪಟ ಏನಕ್ಕೆ ಸಿಲುಕಿಕೊಂಡಿದೆ? ನಾನು ಟೆರೇಸಿನ ಆಚೆ ತುದಿಗೆ ನಡೆಯುತ್ತೇನೆ. ದಾರದ ಮೈಯನ್ನೇ, ಕಣ್ಣು ನಿಲುಕುವವರೆಗೂ ದೃಷ್ಟಿ ಹಾಯಿಸಿ ನೋಡುತ್ತೇನೆ. ಸ್ವಲ್ಪ ದೂರದವರೆಗೆ ಕಾಣುತ್ತದೆ ಅಷ್ಟೆ. ಆಮೇಲೆ ಏನಾಗಿದೆಯೋ ಎಲ್ಲಿಗೆ ಹೋಗಿದೆಯೋ ಹೇಗೆ ಮುಂದುವರೆದಿದೆಯೋ ಗೋಚರಿಸುವುದಿಲ್ಲ. ಬೆಳಗ್ಗೆ ಎದ್ದಕೂಡಲೇ ನೋಡಬೇಕು ಎಂದುಕೊಳ್ಳುತ್ತೇನೆ. ಆಕಳಿಕೆ ಬರುತ್ತದೆ.
ಟಾಯ್ಲೆಟ್ಟಿಗೆ ಹೋಗಿಬಂದು ರೂಮಿನೊಳಸೇರುವಾಗ ಮತ್ತೆ ನೆನಪು ಮುಂದುವರೆಯುತ್ತದೆ: ಅಪ್ಪ ಮಾಡಿಕೊಟ್ಟ ಫೋನು ನನಗೆ ತುಂಬಾ ಇಷ್ಟವಾಗಿಬಿಟ್ಟು, ನಾನು ಊರ ಹುಡುಗರಿಗೆಲ್ಲ ತೋರಿಸಿ, ಕೊನೆಗೆ ನಮ್ಮ ಮನೆಗೂ ಮಧು ಮನೆಗೂ ಒಂದು ಟೆಲಿಫೋನ್ ಲೈನ್ ಎಳೆದಿದ್ದೆವು ನಾವು! ಆದರೆ 'ತಾಂತ್ರಿಕ ಅಡಚಣೆ'ಗಳಿಂದಾಗಿ ನಮ್ಮ ಟೆಲಿಫೋನ್ ವ್ಯವಸ್ಥೆ ಸಕ್ಸಸ್ ಆಗಿರಲಿಲ್ಲ. ಮಧು 'ಕೇಳ್ತಾ ಇದ್ದನಾ?' ಎಂದು ಕೂಗುತ್ತಿದ್ದುದು ನನಗೆ ಡೈರೆಕ್ಟಾಗಿಯೇ ಕೇಳಿಸುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಿದುದಕ್ಕೆ ಇಬ್ಬರ ಮನೆಯಿಂದಲೂ ಪ್ರಶಂಸೆ ಸಿಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡು ಶುರುಮಾಡಿದ್ದ ನಮಗೆ ಒಂದು ಪೂರ್ತಿ ನೂಲಿನುಂಡೆ ವೇಸ್ಟ್ ಮಾಡಿದ್ದಕ್ಕಾಗಿ ಬೈಗುಳದ ಬಹುಮಾನ ಸಿಕ್ಕಿದ್ದು ಬಿಟ್ಟರೆ ಮತ್ತಿನ್ನೇನೂ ಸಿಕ್ಕಿರಲಿಲ್ಲ.
ಹಾಸಿಗೆ ಬಿಚ್ಚಿ ಮಲಗುವ ಮುನ್ನ ಹೊಳೆಯುತ್ತದೆ: ಹೌದು, ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ. ರೊಟೀನ್ ಲೈಫು. ಬೆಳಗ್ಗೆ ಎದ್ದಕೂಡಲೆ ಸ್ನಾನ ಮಾಡಿ ಆಫೀಸಿಗೆ ಹೊರಡುವುದು, ಸಂಜೆಯವರೆಗೂ ಆಫೀಸು, ಆಫೀಸು ಮುಗಿಸಿ, ಮಧ್ಯದಲ್ಲೇ ಎಲ್ಲೋ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬರುವುದು. ಒಂದಷ್ಟು ಹೊತ್ತು ಏನನ್ನಾದರೂ ಓದಿ ಮಲಗಿಬಿಡುವುದು. ಮತ್ತೆ ಮರುದಿನ ಬೆಳಗ್ಗೆ ಆಫೀಸು.
ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ. ಕಂಡುಕೊಳ್ಳಬೇಕಿದೆ: ಮನೆಯಿಂದ ಮನೆಗೆ, ಮನದಿಂದ ಮನಕ್ಕೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇರುವ ದಾರದ ದಾರಿಯ ದೂರ...
[೨೪.೦೫.೨೦೦೫; ರಾತ್ರಿ ೧]
Friday, September 28, 2007
Thursday, September 13, 2007
ಗಣೇಶ ಬಂದು ಹೋದ
ಸರ್ವಜಿತು ಸಂವತ್ಸರದ ಭಾದೃಪದ ಶುಕ್ಲದ ಚೌತಿಯ ದಿನ. ಬೆಳಗ್ಗೆ ನಾಲ್ಕು ಗಂಟೆಯಾಗುತ್ತಿತ್ತು. ಈಶ್ವರ ಬಂದು ಗಣೇಶನನ್ನು ಎಬ್ಬಿಸಿದ:
“ಏಳು ಮಗನೇ.. ಗಂಟೆ ನಾಲ್ಕಾಗುತ್ತಿದೆ. ಇವತ್ತು ಚೌತಿ, ಭುವಿಗೆ ಹೋಗಬೇಕು ನೀನು. ಜನ ಎಲ್ಲಾ ಕಾಯ್ತಿರ್ತಾರೆ ಚಕ್ಲಿ, ಮೋದಕ, ಪಂಚಕಜ್ಜಾಯ, ಇನ್ನೂ ಏನೇನೋ ಮಾಡ್ಕೊಂಡು.. ಏಳು.. ಎದ್ದೇಳು.. ಡ್ರೆಸ್ ಮಾಡ್ಕೊಂಡು ಹೊರಡುವ ಹೊತ್ತಿಗೆ ತಡವಾಗೊತ್ತೆ..”
‘ಮೋದಕ’ ಶಬ್ದ ಕೇಳಿದ್ದೇ ತಡ, ಗಣೇಶ ದಡಬಡಿಸಿ ಎದ್ದ. ಅವನಿಗಾಗಲೇ ಹಸಿವಾಗಲಿಕ್ಕೆ ಶುರುವಾಯಿತು. ಅಲ್ಲೇ ಪಕ್ಕದ ಟೀಪಾಯಿಯ ಮೇಲಿಟ್ಟಿದ್ದ ಹಾವನ್ನು ಹೊಟ್ಟೆಗೆ ಸುತ್ತಿಕೊಂಡ. ತನ್ನ ತರಹದ್ದೇ ಸಾವಿರಾರು ರೂಪಗಳನ್ನು ಸೃಷ್ಟಿಸಿಕೊಂಡು ಭೂಮಿಯ ಒಂದೊಂದು ದಿಕ್ಕಿಗೂ ಒಬ್ಬೊಬ್ಬರು ಹೋಗುವಂತೆ ಪ್ಲಾನ್ ಮಾಡಿದ. ಅದರಲ್ಲೇ ಒಂದು ರೂಪ ಕರ್ನಾಟಕದ ರಾಜಧಾನಿ ಬೆಂಗಳೂರಿನತ್ತ ಹೊರಟಿತು.
ಇಲಿ ಜೋರಾಗಿ ಓಡುತ್ತಿತ್ತು. ಗಣೇಶ ಬೈದ: "ಏಯ್ ಸ್ವಲ್ಪ ನಿಧಾನ ಹೋಗೋ.. ಸಿಕ್ಕಾಪಟ್ಟೆ ಜಂಪ್ ಆಗ್ತಿದೆ..!"
"ಹೂಂ ಕಣಣ್ಣ.. ಈ ವರ್ಷ ಮಳೆ ಜಾಸ್ತಿ ಆಗಿರೋದ್ರಿಂದ ರೋಡೆಲ್ಲ ಪೂರ್ತಿ ಹಾಳಾಗ್ ಹೋಗಿದೆ.. ಎಲ್ಲಾ ಆ ವರುಣಂದೇ ತಪ್ಪು!" ಇಲಿ ತಪ್ಪನ್ನು ವರುಣನ ಮೇಲೆ ಹೊರಿಸಿತು.
“ಅಲ್ಲಾ, ಇಷ್ಟು ವರ್ಷ ಮಳೆ ಇಲ್ಲ ಅಂತ ಜನ ಒದ್ದಾಡ್ತಿದ್ರು. ಸುಮಾರು ಜನ ನನ್ ಮುಂದೆ ಅಪ್ಲಿಕೇಶನ್ ಇಟ್ಟು ‘ವರುಣಂಗೆ ಸ್ವಲ್ಪ ಶಿಫಾರಸು ಮಾಡ್ಸಯ್ಯಾ’ ಅಂದಿದ್ರು. ನಂಗೂ ದೂರು ತಗೊಂಡೂ ತಗೊಂಡೂ ಬೇಜಾರ್ ಬಂದುಹೋಗಿತ್ತು. ಅದಕ್ಕೇ ನಾನೇ ವರುಣನ ಹತ್ರ ಹೇಳಿ ಈ ವರ್ಷ ಸ್ವಲ್ಪ ಜಾಸ್ತಿ ಮಳೆ ಗ್ರಾಂಟ್ ಮಾಡ್ಸಿದೆ. ಈಗ ನೋಡಿದ್ರೆ...”
“ಹ್ಮ್.. ಏನೂ ಮಾಡ್ಲಿಕ್ಕಾಗಲ್ಲ ಬಿಡಣ್ಣಾ.. ಆದ್ರೆ ಇಷ್ಟೆಲ್ಲಾ ರಸ್ತೆ ಹಾಳಾಗಿದ್ರೂ ಸರ್ಕಾರದವ್ರು ಇತ್ಲಾಗೆ ಗಮನಾನೇ ಕೊಡದೆ ಬರೀ ‘ಅಧಿಕಾರ ಹಸ್ತಾಂತರ’ ‘ಅಧಿಕಾರ ಹಸ್ತಾಂತರ’ ಅಂತ ಹೇಳ್ತಾ ಕೂತಿದಾರಲ್ಲಾ, ಏನ್ ಮಾಡೋಣ ಹೇಳು ಇವ್ರಿಗೆ?”
“ಏನದು ಅಧಿಕಾರ ಹಸ್ತಾಂತರ?”
“ಅದೇ ಕುಮಾರಸ್ವಾಮಿ ಇದಾರಲ್ಲಾ..?”
“ಯಾರು ನನ್ನ ಅಣ್ಣಾನಾ?”
“ಅವ್ರಲ್ಲ ಒಡೆಯಾ, ಈ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಕುಮಾರಸ್ವಾಮಿ, ಅವ್ರು ಯಡಿಯೂರಪ್ಪನವ್ರಿಗೆ ಎರಡೂವರೆ ವರ್ಷ ಆದ್ಮೇಲೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡ್ತೀನಿ ಅಂದಿದ್ರಂತೆ. ಈಗ ನೋಡಿದ್ರೆ ‘ಅಪ್ಪನ್ ಕೇಳ್ಬೇಕು’ ಅಂತಿದಾರಂತೆ!”
“ಅಯ್! ಹೌದಾ! ಹಾಗಾದ್ರೆ ಆ ಕುಮಾರಸ್ವಾಮಿಗೆ ಒಂದು ಶಾಪ ಕೊಟ್ಬಿಡ್ಲಾ?”
“ಸುಮ್ನಿರೀ ಒಡೆಯಾ.. ನಮಗ್ಯಾಕೆ ರಾಜಕೀಯ.. ಏನಾದ್ರೂ ಮಾಡ್ಕೊಂಡು ಸಾಯ್ಲಿ.. ಅವ್ರಪ್ಪ ದೇವೇಗೌಡ್ರು ಬೇರೆ ದಿನಾ ಯಾವ್ಯಾವ್ದೋ ದೇವ್ರಿಗೆಲ್ಲಾ ಹರಕೆ ಹೊತ್ಕೋತಿದಾರೆ.. ನೀನೀಗ ಶಾಪ ಕೊಡೋದು, ಕೊನೆಗೆ ಮತ್ತಿನ್ಯಾರೋ ಬಂದು ‘ಗೌಡ್ರು ನಂಗೆ ಹರಕೆ ಹೊತ್ಕೊಂಡಿದಾರೆ, ಅವ್ರ ಆಸೇನಾ ನಾನು ಈಡೇರಿಸ್ಲೇಬೇಕು, ನಿನ್ ಶಾಪ ಹಿಂದಕ್ ತಗೋ’ ಅಂದ್ರೆ ಕಷ್ಟ. ಭಕ್ತರು ಕೊಟ್ಟ ಮೋದಕ, ಚಕ್ಲಿ ಎಲ್ಲಾ ತಿಂದ್ಕೊಂಡು ಸುಮ್ನೆ ನಮ್ ಪಾಡಿಗೆ ನಾವಿದ್ದುಬಿಡೋಣ..”
“ಹ್ಮ್.. ನೀ ಹೇಳೋದೂ ಒಂದ್ರೀತಿ ಸರಿ ಇಲಿರಾಯ..”
ಬೆಂಗಳೂರಿನ ಬೀದಿಬೀದಿಗಳಲ್ಲೂ ಶಾಮಿಯಾನಾ ಹಾಕಿ, ಸ್ಟೇಜು ಕಟ್ಟಿ, ದೊಡ್ಡ ದೊಡ್ಡ ಬಣ್ಣಬಣ್ಣದ ಮಡಿ ಉಟ್ಟ ತನ್ನದೇ ಮೂರ್ತಿಗಳನ್ನಿಟ್ಟಿದುದನ್ನು ನೋಡುತ್ತಾ, ಖುಷಿ ಪಡುತ್ತಾ, ಗಣೇಶ ಮುಂದೆ ಸಾಗಿದ. ಒಂದೊಂದೇ ಭಕ್ತರ ಮನೆ ಮೆಟ್ಟಿಲು ಹತ್ತಿಳಿದು ಬರಲಾರಂಭಿಸಿದ. ಎಲ್ಲರ ಮನೆಯಲ್ಲೂ ಪೂಜೆ ನಡೆಯುತ್ತಿತ್ತು. ಭಟ್ಟರಿಗಂತೂ ಪುರುಸೊತ್ತೇ ಇರಲಿಲ್ಲ. ಐದೇ ನಿಮಿಷದಲ್ಲಿ ಮಿಣಿಮಿಣಿಮಿಣಿ ಮಂತ್ರ ಹೇಳಿ ಪೂಜೆ ಮುಗಿಸಿ, ದುಡ್ಡಿಸಕೊಂಡು, ಮುಂದಿನ ಮನೆಗೆ ಹೋಗುತ್ತಿದ್ದರು. ಯಾರದೋ ಮನೆಯಲ್ಲಿ ಗಣೇಶ ಮೊಬೈಲಿನಲ್ಲೇ ಮಂತ್ರ ಪಠಣ ಮಾಡಿಸಿಕೊಂಡು ಪೂಜೆ ಮುಗಿಸಿಕೊಂಡ. ಮತ್ತಿನ್ಯಾರೋ ಭೂಪ ಕಂಪ್ಯೂಟರ್ ಮುಂದೆ ಕೂತು ಗೂಗಲ್ಲಿನಲ್ಲಿ ಸರ್ಚ್ ಮಾಡಿ ಆನ್‌ಲೈನ್ ಪೂಜೆ ಮಾಡಿ ಮುಗಿಸಿಬಿಟ್ಟ! ಪರಮೇಶ್ವರ ಪುತ್ರನಿಗೆ ಪರಮಾಶ್ಚರ್ಯ! ದೇವಲೋಕಕ್ಕೆ ಮರಳಿದಮೇಲೆ ಸರಸ್ವತಿಯನ್ನು ಕಂಡು ‘ನಿನ್ನ ಆಶೀರ್ವಾದದಿಂದ ಭೂಲೋಕದಲ್ಲಿ ಜನ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ’ ಎಂದು ಹೇಳಬೇಕೆಂದುಕೊಂಡ.
ಸಂಜೆ ಹೊತ್ತಿಗೆ ಈ ಬೀದಿ ಶಾಮಿಯಾನಾ ಸ್ಟೇಜುಗಳಿಂದ ಕರ್ಕಶವಾದ ದನಿ ಕೇಳಿಬರುತ್ತಿತ್ತು. ಗಣೇಶ ಏನಾಯಿತೆಂದು ನೋಡಲಾಗಿ, ತನ್ನ ಮೂರುತಿಯ ಎದುರು ನಿಂತು ಒಂದಷ್ಟು ತರುಣಿಯರೂ-ತರುಣರೂ ‘ಕೆಂಚಾಲೋ ಮಂಚಾಲೋ..’ ಎಂದು ಹಾಡುತ್ತಿದ್ದರು. “ಇದ್ಯಾವ ಭಾಷೆ?” ಕೇಳಿದ ಗಣೇಶ ಇಲಿಯ ಬಳಿ. ಇಲಿ “ಗೊತ್ತಿಲ್ಲ” ಅಂತು. ಸ್ಲೀವ್‌ಲೆಸ್ ಹುಡುಗಿಯರನ್ನು ಬ್ರಹ್ಮಚಾರಿ ಗಣೇಶ ನೋಡದಾದ. ಮೈಕಿನ ದನಿ ಕೇಳೀ ಕೇಳೀ ಗಣೇಶನಿಗೆ ತಲೆನೋವು ಬಂತು.
ರಾತ್ರಿ ಹನ್ನೊಂದರ ಹೊತ್ತಿಗೆ ಲಾರಿಗಳ ಮೇಲೆ ಆ ದೊಡ್ಡ ದೊಡ್ಡ ಮೂರ್ತಿಗಳನ್ನೆಲ್ಲ ಇಟ್ಟುಕೊಂಡು ಜನ ಕೆರೆಯ ಕಡೆ ಹೊರಟರು. ಗಣೇಶನೂ ಇಲಿಯ ಮೇಲೆ ಕೂತು ಅವರನ್ನು ಫಾಲೋ ಮಾಡಿದ. ಲಾರಿಯ ಎದುರಿಗೆ ‘ಢಂಕಣಕ ಢಂಕಣಕ’ ಅಂತ ಬಡಿಯುತ್ತ ಒಂದಷ್ಟು ಜನ ತೈತೈ ಎಂದು ಕುಣಿದಾಡುತ್ತಿದ್ದರು. ತನ್ನಪ್ಪ ನಟರಾಜನಿಗಿಂತ ಜೋರಾಗಿ ಕುಣಿಯುತ್ತಿರುವ ಈ ಮಂದಿಯನ್ನು ನೋಡಿ ಗಣೇಶ ದಂಗಾದ. ಅವರೆಲ್ಲರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. “ಏನದು ವಾಸನೆ?” ಕೇಳಿದ ಗಣೇಶ. ಈ ಬಾರಿ ಹಾವು ಉತ್ತರಿಸಿತು: “ನೀವೆಲ್ಲಾ ಸಂತಸದ ಘಳಿಗೆಗಳಲ್ಲಿ ಮಧುಪಾನ ಮಾಡ್ತೀರಲ್ವಾ? ಹಾಗೇನೇ ಇವ್ರೂ ಮಾಡಿದಾರೆ.” “ಓಹ್ ಹಾಗಾ, ಎಲ್ಲಾ ಓಕೆ; ಆದ್ರೆ ವಾಸ್ನೆ ಯಾಕೆ?” “ಇದು ಆ ಮಧುವಿಗಿಂತ ಸ್ವಲ್ಪ ಸ್ಟ್ರಾಂಗು, ಅದಕ್ಕೇ ವಾಸ್ನೆ!”
ಮೂರ್ತಿಗಳನ್ನೆಲ್ಲಾ ಕೆರೆಯೊಳಗೆ ಮುಳುಗಿಸಿದರು. ಅವುಗಳ ಜೊತೆಗೇ ಹೂವು, ಹಣ್ಣು, ಕಾಯಿ, ಕುಂಕುಮ, ಅರಿಶಿಣ.. ಮಣ್ಣ ಗಣೇಶ ನಿಧನಿಧಾನವಾಗಿ ಕೆರೆಯ ನೀರಿನಲ್ಲಿ ಕರಗತೊಡಗಿದ. ಅವನ ಮೈಯ ಬಣ್ಣ ಕೆರೆಯ ನೀರಿನೊಂದಿಗೆ ಬೆರೆಯತೊಡಗಿತು. ಇಡೀ ಕೆರೆಗೆ ಕೆರೆ ಕೊಳಚೆ ಗುಂಡಿಯಂತೆ ಕಾಣತೊಡಗಿತು..
ಇಲಿಯೂ, ಹಾವೂ ಬೆರಗುಗಣ್ಣುಗಳಿಂದ ಇವನ್ನೆಲ್ಲಾ ನೋಡಿದವು.. ಗಣೇಶನಿಗಂತೂ ತಾನೇ ಆ ಕೆರೆಯ ನೀರಿನಲ್ಲಿ ಕರಗುತ್ತಿದ್ದಂತೆ, ತನ್ನ ಅಂತಃಸತ್ವವೇ ಅಲ್ಲಿ ಲೀನವಾಗುತ್ತಿದ್ದಂತೆ ಭಾಸವಾಗತೊಡಗಿತು.. ಹೊಟ್ಟೆ ತೊಳೆಸಲಾರಂಭಿಸಿತು.. ಇಲಿಗೆ ಆದೇಶವಿತ್ತ: “ಇಲ್ಲಿನ್ನು ಅರೆಕ್ಷಣ ಇರಲಾರೆ.. ಬೇಗ ನಡೆ.. ದೇವಲೋಕಕ್ಕೆ ಹೋಗೋಣ..” ಬೆಕ್ಕು ಕಂಡವನಂತೆ ಇಲಿರಾಯ ಓಡತೊಡಗಿದ.
ಗಣೇಶ ಮರುದಿನ ಬೆಳಗ್ಗೆ ಎದ್ದು ಭೂಲೋಕದತ್ತ ಬಗ್ಗಿ ನೋಡಿದರೆ ಒಂದಷ್ಟು ಜೆಸಿಬಿ ಯಂತ್ರಗಳು, ಮಿನಿ ಕ್ರೇನುಗಳು ಕೆರೆಯ ಹೂಳೆತ್ತುತ್ತಿದ್ದವು. ಅರೆಬರೆ ಕರಗಿದ ಗಣೇಶನ ಮೂರ್ತಿಗಳನ್ನು ದಡಕ್ಕೆಳೆದು ಲಾರಿಗಳಲ್ಲಿ ತುಂಬಿ ಕಳುಹಿಸುತ್ತಿದ್ದವು. ಅವನ್ನೆಲ್ಲಾ ಒಡೆದು ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದಾಗಿ ಜನ ಮಾತಾಡಿಕೊಳ್ಳುತ್ತಿರುವುದು ದೇವಲೋಕದವರೆಗೂ ಕೇಳುತ್ತಿತ್ತು. ಹಿಂದಿನ ದಿನ ಹೊಟ್ಟೆಬಿರಿಯೆ ತಿಂದಿದ್ದ ತಿಂಡಿಗಳನ್ನು ಖಾಲಿ ಮಾಡಿಕೊಳ್ಳುವ ಸಲುವಾಗಿ ಗಣೇಶ ಟಾಯ್ಲೆಟ್ಟಿನತ್ತ ನಡೆದ.
[ಎಲ್ಲರಿಗೂ ಚೌತಿಯ ಶುಭಾಷಯಗಳು.]

Friday, August 24, 2007
ವರಮಹಾಲಕ್ಷ್ಮೀ ವ್ರತ
ಎನ್ನ ಅಜ್ಜಿ ಹೆಸ್ರು ವರಮಹಾಲಕ್ಷ್ಮೀ ಹೇಳಿ. ಅವ್ಳು ವರ್ಮಾಲಕ್ಷ್ಮೀ ಹಬ್ಬದ್ ದಿನ ಹುಟ್ಟಿದ್ರಿಂದ ಆ ಹೆಸ್ರು ಇಟ್ಟಿದ್ದಡ. ಹಂಗಾಗಿ ಇವತ್ತು ಅಜ್ಜಿ ಬರ್ತ್-ಡೇ! ಇದ್ದಿದ್ದಿದ್ರೆ ಫೋನ್ ಮಾಡಿ ವಿಶ್ ಮಾಡ್ಲಾಗಿತ್ತು. ಆದ್ರೆ ತೀರ್ಕ್ಯಂಡು ಒಂದೂವರೆ ವರ್ಷಾತು.
ಅವ್ಳು ಒಂದ್ಸಲ ಎಂಥ ಮಾಡಿದ್ಲಡಪಾ ಅಂದ್ರೆ, ಪ್ಯಾಟಿಗೆ ಹೋಗಿದ್ಲಡ. ಸಾಗ್ರ ಪ್ಯಾಟಿಗೆ. ಅಲ್ಲಿ ಸಾಮಾನೆಲ್ಲ ತಗಂಡು, ಹಂಗೇ ಗಣ್ಪತಿ ದೇವ್‍ಸ್ಥಾನದ್ ರಸ್ತೇಲ್ ಬರ್ತಿರಕ್ಕರೆ ಯಶೋಧ ಹೇಳಿ ಪುರಪ್ಪೆಮನೆ ಊರಿನವ್ಳು ಒಬ್ಳು ಕಂಡ್ಲಡ ಅಜ್ಜಿಗೆ. ಅಜ್ಜಿಗೆ ಅವ್ಳುನ್ನ ಮಾತಾಡಿಸ್ಲಾಗ ಹೇಳಿ ಕಾಣ್ಚಡ. ಎಂಥಕೆ ಹಂಗೆ ಕಾಣ್ಚೇನ ನಂಗೊತ್ತಿಲ್ಲೆ. ಸರಿ, ಈಗ ಯಶೋಧಕ್ಕನಿಂದ ಹೆಂಗಾರು ಮಾಡಿ ತಪ್ಪಿಸ್ಕ್ಯಳವಲಪಾ ಅಂತ ನೋಡ್ತಿರಕ್ಕರೆ, ಯಶೋಧಕ್ಕ ಅಲ್ಲೇ ಯಾವ್ದೋ ಅಂಗಡಿ ಹೊಕ್ಚಡ. ಅವ್ಳು ಅತ್ಲಾಗ್ ಹೊಕ್ಕಿದ್ದೇ ತಡ, ನಮ್ಮನೆ ಅಜ್ಜಿ ಫಾಸ್ಟಾಗಿ ಆ ಅಂಗ್ಡಿ ಕ್ರಾಸ್ ಮಾಡಿ ಮುಂದೆ ಹೋತಡ.
ಇನ್ನೂ ನಾಕು ಹೆಜ್ಜೆ ಇಟ್ಟಿರ್ಲೆ, ಅಷ್ಟೊತ್ತಿಗೆ ಯಶೋಧಕ್ಕ ಇತ್ಲಾಗ್ ತಿರುಗ್ಚಡ, ಅಜ್ಜಿನ ನೋಡ್ಬುಡ್ಚಡ! ಅಜ್ಜಿ ಸ್ಪೀಡಾಗಿ ನೆಡಿತಾ ಇತ್ತಾ, ಯಶೋಧಕ್ಕ ಹಿಂದಕ್ಕಿಂದ "ಹೋಯ್ ವರಮಾಲಕ್ಷ್ಮೀ.. ನಿಂತ್ಕಳೇ.. ಆನು ಯಶೋಧಾ.. ಹೋಯ್ ವರ್ಮಾಲಕ್ಷ್ಮೀ.." ಅಂತ ಜೋರಾಗಿ ಕರದ್ ಕೇಳ್ಚಡ. ಆದ್ರೆ ಅಜ್ಜಿಗೆ ತಿರುಗಿ ನೋಡ್ಲಾಗ ಹೇಳಿ. ಹಂಗಾಗಿ ನಮ್ಮನೆ ಅಜ್ಜಿ ಎಂಥ ಪ್ಲಾನ್ ಮಾಡ್ಚಡ ಗೊತಿದಾ? ಹಂಗೇ ಜೋರಾಗ್ ನೆಡ್ಕೋತ್ಲೇ "ಆಂ? ಆನು ವರಮಾಲಕ್ಷ್ಮೀ ಅಲ್ದೇ!" ಅಂತ ಹೇಳಿ ಮುಂದಕ್ ಹೋಗ್ಬುಡ್ಚಡ!
ಹೆಂಗೆ ನಮ್ಮನೆ ಅಜ್ಜಿ?! ಅವ್ಳು ಹಂಗೇ ಸೈಯಿ, ಏನಾರು ಮಾಡಕ್ಕು ಅಂತ ವ್ರತ ಕೈಗೊಂಡ್ರೆ ಮಾಡಿಯೇ ತೀರೋದು! ಗ್ರೇಟು ಅಲ್ದಾ?!

Friday, August 17, 2007
ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ
ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು... ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, 'ಉಫ್ ಉಫ್' ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ 'ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬರ್ತು.. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..' ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ 'ಏಯ್ ಇನ್ನೂ ನೈವೇದ್ಯ ಆಗಲ್ಲೆ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..' ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...
ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ 'ನಿಮ್ಮನೆ ಪೂಜ್ಯಾತನೇ?' ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...
ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. 'ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತಡ..' ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು.. ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ.. ಅಪ್ಪ ಚುಟುಕಾಗಿ ಪೂಜೆ ಮುಗಿಸಿ, ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.
ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ.. ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು. ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..
ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ 'ಬಿಗಿ ಸಾಕಾ?' ಕೇಳುತ್ತಿದ್ದ. ನಾನು 'ಸಾಕು' ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‍ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು. ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ 'ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ' ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ 'ಇನ್ನೊಂದ್ ಬೆರಳು' ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ 'ಇಶಿಶೀ..!' ಎನ್ನುತ್ತಿದ್ದಳು.
ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ 'ಎಲ್ಲಿ ತುರುಸ್ತು?' ಎಂದು ಕೇಳುತ್ತಾ ತುರುಸಿಕೊಟ್ಟದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.
'ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?' ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ 'ಕೆಂಪೆಲ್ಲಾ ಅಳಿಸಿಹೋದರೇ?' ಅಂತ ಕೈ ತೊಳೆಯಲಿಕ್ಕೆ ಅಂಜಿಕೆ.. 'ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..' ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. 'ಹುಡುಗ್ರಿಗೆ ಇಷ್ಟೇ ಕೆಂಪಾಗದು' ಎಂದವಳಂದಾಗ ಸುಪ್ತ ಸಮಾಧಾನ..
ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು. ಶಾಲೆಯಲ್ಲೂ ಅವತ್ತಿಡೀ 'ನಿಮ್ಮನೆಲಿ ಯಾರು ಬೀಸಿದ್ದು?' 'ಸುಣ್ಣ ಹಾಕಿ ಬೀಸಿದ್ದಿದ್ರಾ?' 'ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು' ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.
ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.

Monday, August 13, 2007
ಮರ, ಬಳ್ಳಿ ಮತ್ತು ಕವಿ
ಆ ಬಳ್ಳಿಯನ್ನು ಮೊದಲ ಬಾರಿ ನೋಡಿದಾಗಲೇ
ಅದು ಮರವೊಂದರೆಡೆಗೆ ವಾಲುತ್ತಿರುವುದು
ನನಗೆ ಗೊತ್ತಾಗುತ್ತಿತ್ತು...
ಅದರ ಎಲೆ-ಕಣ್ಣುಗಳು ಇನ್ನೂ ಎಳೆಯವಿದ್ದವು.
ಪಕ್ಕದ ಮರವೊಂದನ್ನು ಬಿಟ್ಟು ಮತ್ತಿನ್ನೇನೂ ದಕ್ಕುತ್ತಿರಲಿಲ್ಲ
ಅದರ ನೋಟಕ್ಕೆ...
ಮರ ತನಗಾಗಿಯೇ ನೆರಳನ್ನು ಸೂಸುತ್ತಿದೆ,
ಮರ ತನಗಾಗಿಯೇ ಗಾಳಿಯನ್ನು ಬೀಸುತ್ತಿದೆ,
ಮರ ತನಗಾಗಿಯೇ ಪ್ರೇಮಪರ್ಣಗಳನ್ನು ಬೀಳಿಸುತ್ತಿದೆ-
ಎಂದೆಲ್ಲ ಭಾವಿಸಿ, ಮರವನ್ನು ಸಮೀಪಿಸಿತು.
ಮರವನ್ನು ತಾಕಿದಾಗ ಬಳ್ಳಿಗೆ ರೋಮಾಂಚನ.
ಮರದ ಕಾಂಡದ ಒರಟೊರಟು ತೊಗಟೆ,
ಅನುರಾಗದ ಕಂಪ ಹೊತ್ತ ಬೀಸುಗಾಳಿ,
ಆಗಾಗ ಮೈಗೆ ತಾಕುತ್ತಿದ್ದ ಉದುರೆಲೆಗಳು-
ಎಲ್ಲಾ ಬಳ್ಳಿಗೆ ಇಷ್ಟ ಇಷ್ಟ.
ಸಂಚರಿಸುತ್ತಿದ್ದ ಪಿಸುಮಾತಿನ ಸಂದೇಶಗಳು
ಬಳ್ಳಿಯ ಪತ್ರಹರಿತ್ತಿನ ಸಂವಹನ ವೇಗವನ್ನು ಹೆಚ್ಚಿಸುತ್ತಿದ್ದವು.
ಬಳ್ಳಿಗೆ ಗೊತ್ತಿಲ್ಲದ್ದೆಂದರೆ, ಮರದ ಆಚೆ
ಇನ್ನೂ ಅನೇಕ ಬಳ್ಳಿಗಳು ಹಬ್ಬಿರುವುದು,
ಮರ ಎಲ್ಲಾ ಬಳ್ಳಿಗಳಿಗೂ ಇವಿವೇ ರೋಮಾಂಚನ,
ನೆರಳು, ಸುಖ, ಜತೆಗಿರುವ ಅಭಯ, ಭರವಸೆಗಳನಿತ್ತಿರುವುದು.
ಕಾಲ ಸರಿಯುತ್ತಾ, ಬಳ್ಳಿ ಬೆಳೆಯುತ್ತಾ,
ಒಂದು ಕವಲೊಡೆದ ದಾರಿಯ ಬಳಿ ಬಂದಾಗ,
ರೆಂಬೆಯ ತೋಳು ತಪ್ಪಿ ಬೀಳುವಂತಾದಾಗ, ಮುಂದೇನೆಂದು ತಿಳಿಯದೆ,
ಕಾಡಿದ ಅಭದ್ರತೆಗೆ ಹೆದರಿ, ಕೇಳುತ್ತೆ ಅದು ಮರದ ಬಳಿ:
"ನೀನು ನನ್ನ ಪ್ರೀತಿಸ್ತೀಯಲ್ಲ? ನನ್ನನ್ನೆಂದೂ ಬಿಡೋಲ್ಲವಲ್ಲ?"
ಮರ ತಿರಸ್ಕರಿಸೊತ್ತೆ.
"ನನ್ನ ಪಾಡಿಗೆ ನಾನಿದ್ದೆ.
ನೀನಾಗೇ ಬಂದು ನನ್ನ ತಬ್ಬಿದೆ,
ಏನೇನೋ ಪರಿಕಲ್ಪಿಸಿಕೊಂಡೆ,
ಸ್ನೇಹವನ್ನೇ ಪ್ರೇಮವೆಂದು ಭಾವಿಸಿದರೆ,
ನನ್ನ ಸಹಜ ಅಭಿವ್ಯಕ್ತಿಗಳನ್ನೇ ಅನುರಾಗವೆಂದುಕೊಂಡುಬಿಟ್ಟರೆ
ಅದು ನನ್ನ ತಪ್ಪಾ?" ಎಂದೆಲ್ಲಾ ಗೊಣಗಿ
ಕಳ್ಳನಂತೆ ಸುಮ್ಮನಾಗುತ್ತದೆ.
ಬಳ್ಳಿಗೆ ಮರದ ಆಶ್ರಯ ಒಮ್ಮಿಂದೊಮ್ಮೆಲೇ ತಪ್ಪಿಹೋಗಿ,
ಬಾಗಿ, ಕತ್ತರಿಸಿ ಬೀಳುತ್ತದೆ.
ನೋವು ತಾಳಲಾರದೇ ಕಣ್ಣೆಲೆಗಳಿಂದ
ನೀರುದುರಿಸುತ್ತದೆ...
ಬಾಡತೊಡಗುತ್ತದೆ...
ಸಾಯುತ್ತೇನೆನ್ನುತ್ತದೆ...
ಅದರ ಕಷ್ಟವನ್ನು ನೋಡಲಾರದೆ ನಾನದರ ಬಳಿಸಾರುತ್ತೇನೆ...
ಸಮಾಧಾನ ಹೇಳುತ್ತೇನೆ...
ನೀರೆರೆಯುತ್ತೇನೆ...
ಗೊಬ್ಬರ ಹಾಕುತ್ತೇನೆ...
"ಆದದ್ದಾಯ್ತು, ಅದೇ ಮರದ ನೆನಪಲ್ಲಿ ಕೊರಗಬೇಡ,
ನೋಡಲ್ಲಿ, ಪಕ್ಕದಲ್ಲಿನ್ನೂ ಅನೇಕ ಮರಗಳಿವೆ" ಎನ್ನುತ್ತೇನೆ;
ಹೊಸ ಕನಸು ಕಾಣಲು ಪ್ರೇರೇಪಿಸುತ್ತೇನೆ.
"ಸಾಧ್ಯವೇ ಇಲ್ಲ...
ಹೇಗೆ ಮರೆಯಲಿ ಆ ಮರದ ಸ್ಪರ್ಶಸುಖವನ್ನು?
ಹೇಗೆ ಅಲ್ಲಗಳೆಯಲಿ ಅದರ ಸಂದೇಶಗಳಲ್ಲಿ ತುಂಬಿರುತ್ತಿದ್ದ ಅನುರಾಗವನ್ನು?
ಹೇಗೆ ಸುಳ್ಳೆನ್ನಲಿ ಅದು ಪ್ರೇಮವಾಗಿರಲೇ ಇಲ್ಲವೆಂದು?
ಅಥವಾ, ಉಹೂಂ, ಹೇಗೆ ಬಿಟ್ಟಿರಲಿ
ಇಷ್ಟು ದಿನ ಜತೆಗಿದ್ದ ಮರವನ್ನು?"
ಬಳ್ಳಿಯ ಹುಚ್ಚುತನವನ್ನು ನೋಡಿ ಬೇಸತ್ತ ನಾನು
ಒಂದು ನೀಳ ನಿಶ್ವಾಸ ಬಿಟ್ಟು ಈ ನೇವರಿಕೆಯಿಂದ ನಿವೃತ್ತನಾಗುತ್ತೇನೆ.
ಅದರ ಕನವರಿಕೆಗಳನ್ನು ಕಡೆಗಣಿಸುತ್ತೇನೆ.
ಕಾರುಣ್ಯದ ಕಣ್ಣನ್ನು ಕೊಂಚ ಬದಿಗೆ ಸರಿಸುತ್ತೇನೆ.
ಆದರೆ, ಎಂದಿನಂತೆ, ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ:
ಒಂದು ಶುಭದಿನ, ತಾನು ಮತ್ತೆ ಚಿಗುರುತ್ತಿರುವ,
ಚೇತರಿಸಿಕೊಳ್ಳುತ್ತಿರುವ ಸುದ್ದಿಯನ್ನು ಬಳ್ಳಿ ಹೇಳಿಕೊಳ್ಳುತ್ತದೆ.
ನಾನು ಸಂಭ್ರಮಿಸಿ ಅಲ್ಲಿಗೆ ಧಾವಿಸಿ ನೋಡುತ್ತೇನೆ:
ನನ್ನ ಸಾಂತ್ವನದ ನೀರು-ಗೊಬ್ಬರಗಳ ಸಾರ್ಥಕತೆ
ಅಲ್ಲಿ ಕುಡಿಯಾಗಿ ಒಡೆದಿರುವುದು ಗೋಚರಿಸುತ್ತದೆ.
ಹರಿತ್ತಿನ ಹರಿವು, ಬಳ್ಳಿಯ ಹಸಿವು ಎಲ್ಲಾ ಸಹಜವಾಗುತ್ತಿರುವುದು ಕಾಣಿಸುತ್ತದೆ.
ಬಣ್ಣದ ಹೂವರಳಿಸಿಕೊಳ್ಳುವ ಹೊಸ ಕನಸನ್ನು ಬಳ್ಳಿಗೆ ಕೊಟ್ಟು,
ಶುಭ ಹರಸಿ, ಇವನ್ನೆಲ್ಲಾ ಬರೆಯಲು ಕೂತ ನಾನು
ಈ ಕವಿತೆಯ ಕವಿಯಷ್ಟೇ ಆಗಿ ಉಳಿದುಬಿಡುತ್ತೇನೆ.

Subscribe to:
Posts (Atom)