Friday, April 12, 2024

ಸ್ಕೂಲ್ ಟ್ರಿಪ್

ಶಾಲಾಪ್ರವಾಸ ಹೊರಟ ಮಗಳು
ಬಸ್ಸಿನ ಕಿಟಕಿಯಿಂದ ಕೈ ಬೀಸಿದಳು
ಅಪ್ಪ-ಅಮ್ಮರ ಜತೆಯಿಲ್ಲದೆ ಮೊದಲ ಪಯಣ:
ಸರ್ವಸ್ವತಂತ್ರ, ಯಾರೂ ಹಿಡಿವವರಿಲ್ಲವೆನಿಸಿದರೂ
ಸಣ್ಣ ಭಯ ಇದ್ದದ್ದೇ ಎದೆಯೊಳಗೆ;
ಅಪ್ಪ-ಅಮ್ಮರಿಗಿರುವಷ್ಟಲ್ಲ, ಅಷ್ಟೇ!
ಸುತ್ತಲೆಲ್ಲ ಗೆಳೆಯರು,‌ ಕಾಯಲೊಬ್ಬ ಮ್ಯಾಮು
ಹಾಡು ಮಾತು ಆಟ ಅಂತ್ಯಾಕ್ಷರೀ ಕುರ್ಕುರೇ

ಮೊದಲು ನೋಡಿದ್ದೇ ಜಾಗ,‌ ಈಗ ಗೆಳೆಯರೊಡನಿರುವಾಗ
ಹೇಗೆ ಎಲ್ಲ ಬೇರೆಯೆನ್ನಿಸುತ್ತಿದೆ..
ಮನೆಯಲ್ಲಿ ಸೇರದ ಇಡ್ಲಿ, ಉಪ್ಪಿಟ್ಟು,
ಬಿಸಿಬೇಳೆಬಾತುಗಳು ಇಲ್ಲಿ ಹೇಗೆ ಇಷ್ಟವಾಗುತ್ತಿದೆ..
ಶಾಲೆಯಲ್ಲಿ ಕಟ್ಟುನಿಟ್ಟೆನಿಸುವ ಟೀಚರು
ಇಲ್ಲಿ ಹೇಗೆ ಎಲ್ಲರೊಂದಿಗೆ ನಗುನಗುತ್ತಿದ್ದಾರೆ..
ಅರೆ, ಅವರೂ ಹಾಡುತ್ತಿದ್ದಾರೆ, ಆಡುತ್ತಿದ್ದಾರೆ,
ನಮ್ಮೊಡನೆಯೇ ತಿನ್ನುತ್ತಿದ್ದಾರೆ, ಖಾರಕ್ಕೆ ಬಾಯಿ ಸೆಳೆಯುತ್ತಿದ್ದಾರೆ..

ಇತ್ತ ಮಗಳಿಲ್ಲದೇ ಮನೆಯೆಲ್ಲ ಬಿಕೋ ಬಿಕೋ..
ಹುಷಾರಾಗಿ ತಲುಪಿದಳೇ ಮಗಳು
ವಾಂತಿಯಾಯಿತೇ ಬಸ್ಸಿನಲ್ಲಿ
ಹುಡುಹುಡುಗರು ತಳ್ಳಾಡಿಕೊಂಡು ಬಿದ್ದರೋ
ತಿಂದಳೋ ಕೊಟ್ಟ ಊಟ ದಾಕ್ಷಿಣ್ಯ ಬಿಟ್ಟು

ಅಪ್ಪ-ಅಮ್ಮರಿಗೂ ತಮ್ಮ ಶಾಲೆಯ ಪ್ರವಾಸದ ನೆನಪು:
ಪಕ್ಕದೂರ ದೇವಸ್ಥಾನಕ್ಕೆ ಕರೆದೊಯ್ದಿದ್ದ
ಪ್ರೈಮರಿ ಶಾಲೆಯ ಒಳ್ಳೆಯ ಟೀಚರು
ಪಕ್ಕದ ತಾಲೂಕಿನ ಹೊಳೆದಂಡೆಗೆ ಕರೆದೊಯ್ದಿದ್ದ
ಮೆಡ್ಲಿಸ್ಕೂಲಿನ ಗುರುವೃಂದ
ಚಿತ್ರದುರ್ಗದ ಕಲ್ಲಿನಕೋಟೆಯ ತೋರಿಸುತ್ತ
'ಕನ್ನಡನಾಡಿನ ವೀರರಮಣಿಯ' ಹಾಡೇಬಿಟ್ಟಿದ್ದ
ಸಮಾಜಶಾಸ್ತ್ರದ ಮೇಷ್ಟ್ರು
ಅದು ಹೇಗೋ ಕೊನೆಯ ದಿನದ ಹೊತ್ತಿಗೆ
ಟೂರಿನ ದುಡ್ಡು ಹೊಂಚಿ ಕೊಡುತ್ತಿದ್ದ ಅಪ್ಪ
ಹಣ ಕೊಡಲಾಗದೆ ಸಪ್ಪಗಾಗಿದ್ದ ವಿದ್ಯಾರ್ಥಿಯ
ವೆಚ್ಚ ತಾವೇ ಭರಿಸಿದ್ದ ಹೈಸ್ಕೂಲಿನ ಹೆಡ್‌ಮೇಷ್ಟ್ರು..

ಕಾಲೇಜ್ ಪಿಕ್‌ನಿಕ್ಕಿನ ಬಸ್ಸಿನಲ್ಲಿ ಆ ಅತಿನಾಚಿಕೆಯ ಹುಡುಗಿ
ಪಕ್ಕದಲ್ಲೇ ಕುಳಿತುಕೊಳ್ಳುವಂತಾಗಿ ಮೈ ಬೆವರಿದ್ದು...
ಬೇರೆ ಹುಡುಗರೆಲ್ಲ ಸುಳ್ಸುಳ್ಳೇ ಹಾಡು ಕಟ್ಟಿ ಕಿಚಾಯಿಸುವಾಗ
ಟಚ್ಚುಟಚ್ಚಿಗೂ ಮೈ ಪುಳಕಗೊಂಡದ್ದು...

ಸಂಜೆಯಾಗುತ್ತಲೇ ಬಂದಿದೆ
ಮಗಳನು ಕರೆದೊಯ್ದಿದ್ದ ಬಸ್ಸು ಸುರಕ್ಷಿತ ವಾಪಸು
ಹಾರಿ ಇಳಿದ ವಿಜಯೀ ಮಗಳು ಬೀಗುತ್ತಿದ್ದಾಳೆ ಹಿಗ್ಗಿನಿಂದ
ಮನೆಯ ಹಾದಿಯಲಿ ಕಥೆಯೋ ಕಥೆ ಏನೇನಾಯ್ತು ಹೆಂಗೆಂಗಾಯ್ತು
ಏನೇನು ತಿಂದೆ ಏನೇನು ನೋಡಿದೆ ಏನೇನು ಮಾಡಿದೆ
ಅಜ್ಜ-ಅಜ್ಜಿಯರಿಗೆ ಫೋನಿಸಿ ವಿವರಿಸುತ್ತಿದ್ದಾಳೆ
ತಾನು ಮಾಡಿದ ಸಾಹಸಕಾರ್ಯ...

ಪೂರ್ವದಿಂದ ಪಶ್ಚಿಮಕ್ಕೆ ದಿನವೂ ಟೂರು ಹೋಗುವ ರವಿ
ಅಕೋ ಅಲ್ಲಿ ಕಿಟಕಿಯ ಗಾಜಿನಲ್ಲಿ ಹೊಳೆಯುತ್ತಿದ್ದಾನೆ ಫಳಫಳ
ಕಾದು ಕಾದು ಮೈಯೆಲ್ಲ ಕೆಂಪಾಗಿದ್ದರೂ,
ನನ್ನ ಮಗಳನೂ ಕಾದಿದ್ದಾನೆ ಇಡೀದಿನ. 

 

No comments: