Wednesday, October 18, 2006

ದೀಪಾವಳಿಗೆ ಒಂದಷ್ಟು ಪ್ರಣತಿಗಳು

ಗೋಪೂಜೆ ಮಾಡಬೇಕಿದೆ..

ಇದು ಈ ವರ್ಷ ತಂದ ಹೊಸ ದನ..
ಕಳೆದ ವರ್ಷ ಇತ್ತಲ್ಲ, ಆ ದನ
ಕೆಚ್ಚಲುಬಾವು ಬಂದು ಮಧ್ಯದಲ್ಲೇ ಹಾಲು
ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ನಮಗ್ಯಾಕಿದ್ದೀತು ರಗಳೆ ಎಂದು ಆಲೋಚಿಸಿ
ಒಳ್ಳೆಯ ರೇಟು ನೋಡಿ ಮಾರಿಬಿಟ್ಟೆವು.

ಈಗ ಆ ದನ ಎಲ್ಲಿದೆಯೋ ಗೊತ್ತಿಲ್ಲ
ಅದಕ್ಕೆ ಸರಿಯಾಗಿ ಅಕ್ಕಚ್ಚು, ಹಿಂಡಿ
ಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ
ಮೇಯಲು ಹೊರಗೆ ಬಿಡುತ್ತಾರೊ
ಅಥವಾ ಅವರೇ ಹುಲ್ಲು ಕೊಯ್ದು
ತಂದು ಹಾಕುತ್ತಾರೋ ಗೊತ್ತಿಲ್ಲ
ಅಪ್ಪನನ್ನು ಕೇಳಿದರೆ
'ಕೊಟ್ಟ ದನ ಕೊಟ್ಟಿಗೆಗೆ ಹೊರಗೆ,
ಸುಮ್ಮನಿರು' ಅನ್ನುತ್ತಾನೆ.

ಗೋಪೂಜೆ ಮಾಡಬೇಕಿದೆ..
ಕಳೆದ ವರ್ಷದ ದೀಪಾವಳಿಯಲ್ಲಿ
ಕೆಂಪು-ಹಸಿರು ಬಣ್ಣಗಳನ್ನು ಕೊಂಬು,
ಮೈಗೆಲ್ಲ ಸವರುವಾಗ ಆ ದನ
ಸ್ವಲ್ಪವೂ ತಿರುಗಾಡದೆ, ಹಾಯದೆ, ಒದೆಯದೆ
ನಿಂತಿರುತ್ತಿತ್ತು. ಅದರ ಕರು ಮಾತ್ರ ಚಿಗರೆಮರಿ.
ನನ್ನ ಹುಡುಗಿಗಿಂಥಾ ಜೋರು ಹಾರಾಟ-ಕುಣಿದಾಟ
-ಗುದ್ದುಮುರಿಯಾಟಗಳಲ್ಲಿ.

ಗೋಪೂಜೆ ಮಾಡಬೇಕಿದೆ..
ನನಗೋ ಹಳೆಯ ಗೋವಿನದೇ ನೆನಪು
ಈ ವರ್ಷ ಅದನ್ನು ಹಿಡಿದು ಕಟ್ಟಿ,
ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಣ್ಣ ಹಚ್ಚಿ,
ಹೊಸ ಕಣ್ಣಿ ಕಟ್ಟಿ, ಪೂಜೆ ಮಾಡಿ,
ಗೋಗ್ರಾಸ ಕೊಟ್ಟು, ಕೊನೆಗೆ ಮರುದಿನ
ದೃಷ್ಟಿ ತೆಗೆದು... ಅದನ್ನೆಲ್ಲಾ ಮಾಡುವವರು ಯಾರು?

ಗೋಪೂಜೆ ಮಾಡಬೇಕಿದೆ..
ಅಪ್ಪನ ಬಳಿ ಹೇಳುತ್ತೇನೆ:
'ಅಪ್ಪಾ, ನಂಗ್ಯಾಕೋ ಆಗುತ್ತಿಲ್ಲ,
ನೀನೇ ಮಾಡು..'

***
ನನಗೆ ಹಾಗೇ, ಒಂಥರಾ ತಿಕ್ಕಲು.
ದೀಪ ಹಚ್ಚುವಾಗ
ಹಣತೆ ಮಾಡಿದ ಕೈಗಳು
ಬತ್ತಿ ಹೊಸೆಯುವಾಗ
ಹತ್ತಿಯನ್ನು ಬೀಜದಿಂದ ಬಿಡಿಸಿದ ಕೈಗಳು
ಹಣತೆಗೆ ಎಣ್ಣೆ ಎರೆಯುವಾಗ
ಆ ಎಣ್ಣೆಯನ್ನು ತಯಾರಿಸಿದ ಕೈಗಳು
ಹೋಳಿಗೆಗೆ ಉಂಡೆ ಕಟ್ಟಿಕೊಡುವಾಗ
ಬೇಳೆ ಬೆಳೆದವನ ಕೈಗಳು
ಹೊಸ ಕಣ್ಣಿಯನ್ನು ಕಟ್ಟುವಾಗ
ಅದನ್ನು ಹೊಸೆದ ಕೈಗಳು
ಪಟಾಕಿ ಹಚ್ಚುವಾಗ
ಅದರೊಳಗೆ ಮದ್ದು ತುಂಬಿದ ಕೈಗಳು
.....ಬಿಡದೇ ಕಾಡುತ್ತವೆ.
ಮಂದಿಯ ಪ್ರಕಾರ ನಾನು
ನಾಟ್ ಪ್ರಾಕ್ಟಿಕಲ್ಲು.
ನನಗೆ ಹಾಗೇ, ಒಂಥರಾ ತಿಕ್ಕಲು!

***

ಆದರೆ ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ ನೋಡಿ
ಹಣತೆ ಎಲ್ಲಿದೆ ಹುಡುಕಬೇಕು
ಬೆಂಕಿಪೊಟ್ಟಣವಂತೂ ಇಟ್ಟಲ್ಲಿ ಇರುವುದಿಲ್ಲ
ಹಣತೆಯಲ್ಲಿ ನಿನ್ನೆ ಸುರಿದಿಟ್ಟಿದ್ದ ಎಣ್ಣೆ ಆರಿಹೋಗಿದೆ
ಬತ್ತಿ ಕಟ್ಟು ಎಲ್ಲಿದೆ...?
ಓಹ್! ದೇವರ ಗೂಡಿನ ಮೇಲಿದೆ
ಎಲ್ಲವನ್ನೂ ಹುಡುಕಿ ತಂದು,
ಹಣತೆಗೆ ಎಣ್ಣೆ ಸುರಿದು,
ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ,
ಕಡ್ಡಿ ಗೀರಿ "ಚೊರ್ರ್"... ಬೆಳಕು.
ಹಾಗೆಲ್ಲಾ ಒಂದೇ ಕಡ್ಡಿಯಲ್ಲಿ ಹಚ್ಚಲಾಗುವುದಿಲ್ಲ
(ಇದೇನು ಸಿಗರೇಟಾ?)
ಮತ್ತೊಂದು ಕಡ್ಡಿ ಗೀರಬೇಕು.

ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ.
ಗಾಳಿಯಿದ್ದರಂತೂ ಮತ್ತೂ ಕಷ್ಟ.

***

ನಾನು ಚಿಕ್ಕವನಿದ್ದಾಗ
ಪಟಾಕಿ ಹಚ್ಚುವುದಕ್ಕೆ ಹೆದರುತ್ತಿದ್ದೆ.
ಈಗ ಏನಕ್ಕೂ ಹೆದರುವುದಿಲ್ಲ.

***

ದೀಪಾವಳಿಯೆಂದರೆ ದೀಪಗಳ ಹಬ್ಬ
ಅನ್ನುತ್ತಾರೆ.

ನಾನೀಗ ಕಷ್ಟ ಪಟ್ಟು
ಎರಡು ದೀಪಗಳನ್ನು ಹಚ್ಚಿಟ್ಟಿದ್ದೇನೆ.
ಅವು ಪರಸ್ಪರ ಮಾತಾಡಿಕೊಳ್ಳುತ್ತಿವೆ:
"ಹೇ, ನೀನು ಈಗ ಕಾಣಿಸುತ್ತಿದ್ದೀಯ"
"ಹೇ, ನೀನಿವತ್ತು ಚಂದ ಕಾಣಿಸುತ್ತಿದ್ದೀಯ".
"ಹೂಂ, ಇವತ್ತು ಹಬ್ಬ ಅಲ್ವಾ?"
"ಏನ್ ಹಬ್ಬ?"
"ದೀಪಾವಳಿ, ನಮ್ಮ ಹಬ್ಬ"

ಹಣತೆ ಹಣತೆಯನ್ನು ನೋಡುವುದಕ್ಕೂ
ಬೆಳಕು ಬೇಕು ನೋಡಿ.

***

ದೀಪದ ಬೆಳಕಿನಲ್ಲಿ ಕಂಡಷ್ಟು ಚಂದ
ಬೆಂಕಿಯ ಬೆಳಕಿನಲ್ಲಿ ಕಾಣುವುದಿಲ್ಲ
ನಲ್ಲೆಯ ಮುಖಾರವಿಂದ.

*** *** *** ***

ಎಲ್ಲೋ ಇರುವ ಆ ದನಕ್ಕೆ ಈ ವರ್ಷವೂ ಗೋಗ್ರಾಸ ಸಿಗಲಿ. ಎಲ್ಲೋ ಇದ್ದೂ ಇಲ್ಲಿ ನೆನಪಾಗುವ ಎಲ್ಲಾ ಕಷ್ಟಜೀವಿಗಳ ಅಗೋಚರ ಕೈಗಳು ಬೆಚ್ಚಗಿರಲಿ. ಕತ್ತಲೆಯಲ್ಲಿರುವವರಿಗೆ ದೀಪ ಬೇಗ ಸಿಗಲಿ. ಒಂದೇ ಬೆಂಕಿಕಡ್ಡಿಯಿಂದ ದೀಪ ಹತ್ತಿಕೊಳ್ಳಲಿ. ಪಟಾಕಿಯ ಸದ್ದಿಗೆ ಮಲಗಿದ ಮಗು ಎಚ್ಚರಗೊಳ್ಳದಿರಲಿ. ಹಣತೆಗಳು ಸದಾ ಮಾತಾಡಿಕೊಳ್ಳುತ್ತಿರಲಿ. ನಲ್ಲೆಯ ಮುಖದಲ್ಲಿ ದೀಪದ ಬೆಳಕು ಸದಾ ಲಾಸ್ಯವಾಡುತ್ತಿರಲಿ. ಮತ್ತು ದೀಪ ಎಂದೂ ಬೆಂಕಿಯಾಗದಿರಲಿ.

ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.

12 comments:

ಶ್ರೀನಿಧಿ.ಡಿ.ಎಸ್ said...

ಸುಶ್,
ಎಷ್ಟ್ ಚಂದ ಬರದ್ದೆ ಮಾರಾಯ್ನೆ! ನಾನು ನನ್ನ ಎಲ್ಲಾ ಸ್ನೇಹಿತರಿಗೂ, ನಿನ್ನ ಬ್ಲಾಗಿನ ಲಿಂಕ್ ನೇ ಕಳ್ಸಿದ್ದಿ! :) ನನ್ನ ಕೆಲಸ ಕಡ್ಮೆ ಮಾಡಿದ್ದೆ!
ಹಳ್ಳಿ ಬದಿ ದೀಪಾವಳಿ ಆಚರಣೆ ಎಲ್ಲ ಮತ್ತೆ ನೆನ್ಪಾತು. ಅರ್ಥಪೂರ್ಣ ಬರಹ..

ಬರೀತಾ ಇರು...

santhripthi said...

Nice One........ Deepavali habbada Shubasayagalu

Jahnavi said...

Very excellent- filled with lots of feelings and wishes.


Deepavali habbada harthika shubashayagalu.

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ, santhripthi, jahnavi

Thank you very much.

ಮನಸ್ವಿನಿ said...

ಚಲೊ ಇದ್ದು ಮಾರಾಯ :)

vikas said...

ಸುಸ್, ನಿನಗೂ ದೀಪಾವಳಿಯ ಶುಭಾಶಯಗಳು..

ಬಹಳ ಚೆನ್ನಾಗಿ ಬರದ್ದೆ. ಕೀಪ್ ಇಟ್ ಅಪ್.

ನಿನ್ನ ತಿಕ್ಕಲು ತನ ಹೇಳಿ ಬರದ್ಯಲ.. ಅದು ತಿಕ್ಕಲು ತನವಲ್ಲ .. ಅದು ಎಲ್ಲರಿಗೂ ಇರಬೇಕಾದ ಕನಿಷ್ಟ ಮಟ್ಟದ ಸಾಮಾಜಿಕ/ನೈತಿಕ ಜವಾಬ್ದಾರಿ.. ಆದರೆ ವಿಪರ್ಯಾಸವೆಂದರೆ.. ಇಂದು ಬಹುತೇಕ ಜನರಿಗೆ ಅದಿಲ್ಲ.

~rAGU said...

ಬಾರಿ ಚನಾಗಿದ್ದಾ ಮಾರಯ. ಓಳ್ಳೆ ಬರಿತ್ಯಲೊ ಮಾರಯ.
ದೀಪಾವಳಿ ಶುಭಾಶಯಗಳು.
ನಿಮ್ಮಗಮನಕ್ಕೆ. ಪ್ರಣತಿ ಯೆ೦ದರೆ ನಮಸ್ಕಾರ ಯೆ೦ದರ್ಥ ಹಣತೆ ಯೆ೦ದಲ್ಲ.

~rAGU said...

ಐ ವಿಸಿಟೆಡ್ ಯುವರ್ ವೆಬ್ ಪೇಜ್. ಇಟ್ ಇಸ್ ಗ್ರೇಟ್. ಕೀಪ್ ರೈಟಿ೦ಗ್. ಐ ಹೂಪ್ ಯು ಆರ್ ದ ಸೇಮ್ ಸುಶ್ರುತ ಐ ನೌ.

ರಾಗು ಕಟ್ಟಿನಕೆರೆ.

ಸುಶ್ರುತ ದೊಡ್ಡೇರಿ said...

@ ಮನಸ್ವಿನಿ

ಥ್ಯಾಂಕ್ಸ್ ಮಾರಾಯ್ತಿ :)

@ ~rAGu

'ಪ್ರಣತಿ' ಅಂದ್ರೆ 'ಹಣತೆ' ಅಲ್ವಾ? ಅರೆರೆ! Dictionary ನೋಡ್ಬೇಕಾಯ್ತು!

ನಾನು 'ಸುಶ್ರುತ' ಹೌದು, ಆದ್ರೆ 'ಅದೇ ಸುಶ್ರುತ' ಹೌದೋ ಅಲ್ದೋ ಗೊತ್ತಿಲ್ಲೆ!

ಸುಶ್ರುತ ದೊಡ್ಡೇರಿ said...

@ vikas

ದೈನಿಕದ ಜಂಜಡಗಳಲ್ಲಿ ಸಾಮಾಜಿಕ / ನೈತಿಕ ಜವಾಬ್ದಾರಿ ಮರೆಯುವುದು ಸಹಜ. 'ನನ್ನ ದುಡ್ಡು, ನಾನು enjoy ಮಾಡ್ತೀನಿ' ಎನ್ನುವವರ ಜಗ ಇದು. ಸಾವಿರಾರು ರುಪಾಯಿಯ ಪಟಾಕಿ ಸುಡುವಾಗ ಪಟಾಕಿ ಮಳಿಗೆ ಸುಟ್ಟು ಭಸ್ಮವಾದ ಜೀವಗಳು ನೆನಪಾಗುವುದು ಕಷ್ಟವೇನೋ. ಆಗಲಿ ಎಂಬುದು ನನ್ನ ಆಶಯ ಅಷ್ಟೇ.

ಸುಶ್ರುತ ದೊಡ್ಡೇರಿ said...

@ ~rAGu

Dictionary ನೋಡಿದೆ.

'ಪ್ರಣತಿ' ಎಂಬ ಪದಕ್ಕೆ 'ತಲೆಬಾಗು', 'ನಮಸ್ಕರಿಸು' ಎಂಬ ಅರ್ಥಗಳು ಇವೆ. ಜೊತೆಗೆ 'ಹಣತೆ', 'ಮಣ್ಣಿನ ದೀಪ' ಎಂಬ ಅರ್ಥಗಳೂ ಇವೆ. ಆ ಪದ ಕ್ರಿಯಾಪದವೂ, ನಾಮಪದವೂ ಆಗಿದೆ. ಹಾಗೆಯೇ 'ಪ್ರಣತೆ' ಎಂದರೂ 'ಹಣತೆ' ಎಂದೇ ಅರ್ಥ.

Dictionary ನೋಡುವಷ್ಟು ನನ್ನನ್ನು confuse ಮಾಡಿದ್ದಕ್ಕೆ congrats!

~rAGU said...

ಒ೦ದು ಕ್ಷಣ ಒಪ್ಪಿಕೊಳ್ಳೋಣ ಹಣತೆ ಎ೦ದೇ. ಆದರೆ ಸ೦ಸ್ಕೃತ ಶಬ್ದದ ಅರ್ಥ ತಲೆಬಾಗು/ವಿಕೆ(ನಾಮಪದ ಮತ್ತು ಕ್ರಿಯಾಪದ) ಅಥವಾ ಭಾವಾರ್ಥದಲ್ಲಿ ಸ೦ದರ್ಬೋಚಿತವಾಗಿ ಹಣತೆಗೆ ರೂಪಕದ ಆರೋಪಮಾಡಿ ಬಾಗುವಿಕೆಯ ಸ೦ಕೇತ ಎ೦ದರೆ ಅಲ್ಲವೆನ್ನಲು ಸಾಧ್ಯವಿಲ್ಲ. ಪ್ರಣತೆ ಅಪಭ್ರ೦ಶವೇನೋ ಎ೦ಬನುಮಾನ. ಅರ್ಥವನ್ನು ಸಡಿಲವಾಗಿ ಬಳಸಲಡ್ಡಿಯಿಲ್ಲ. ಕ೦ಡ ತಕ್ಷಣ ಅನಿಸಿದ್ದನ್ನ ಹೇಳಿದ್ದಷ್ಟೇ. ಬಳಕೆಯ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ.