Saturday, November 04, 2006

ಮಳೆಗಾಲದ ನೆನಪು

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ, ಸಂಜೆ ಹೊತ್ತಿಗೆ ಮಳೆ. ಮನಸು ಪ್ರಫುಲ್ಲವಾಗಿರಬೇಕೆಂದರೆ ಆಗಸ ಶುಭ್ರವಾಗಿರಬೇಕು. ಬೆಳಗ್ಗೆ ಎದ್ದು ಹೊರಬಂದಾಗ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು ಕಂಡರೆ ಆ ದಿನವೆಲ್ಲಾ ಏನೋ ಹುಮ್ಮಸ್ಸು. ಬೆಳಗು ಚೆನ್ನಾಗಿ ಆಗಲಿಲ್ಲ ಆ ದಿನವೆಲ್ಲ mood out.

ಇವತ್ತು ಬೆಳಗ್ಗೆ ಎದ್ದಾಗ ಎಂಟೂ ಕಾಲು. ಮಬ್ಬು ವಾತಾವರಣವಾದ್ದರಿಂದ ಎಚ್ಚರೇ ಆಗಲಿಲ್ಲ. ಮೊಬೈಲಿನ ಅಲಾರಾಂ ಕೂಗಿದರೂ ಹಾಗೇ ಮುಸುಕು ಹಾಕಿ ಮಲಗಿಕೊಂಡಿರುವ ಮನಸು. ಆದರೂ ಆಫೀಸಿಗೆ ಹೋಗಬೇಕಾದ್ದರಿಂದ ಎದ್ದೆ. ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಊರಿಗೆ ಹೋಗಿದ್ದ ಗೆಳೆಯ ಶ್ರೀನಿಧಿಯಿಂದ ಎಸ್ಸೆಮ್ಮೆಸ್ಸು ಬಂತು:

"ಗುಡ್ಡೆಗೆ ದನ ಕಟ್ಟಿ ಬರಲು ಹೋಗಿದ್ದೆ.
ಚೆನ್ನಾದ ಐದಾರು ನವಿಲುಗರಿಗಳು ಸಿಕ್ಕಿದವು.
ಕೈಗೆ ಖುಷಿಯೇ ವಸ್ತುರೂಪ ಧರಿಸಿ ಸಿಕ್ಕಂತಾಯ್ತು"

-ಅಂತ ಇತ್ತು. ಮೆಸೇಜು ಓದಿಯಾದಮೇಲೆ ಮನಸ್ಸು ಉಲ್ಲಾಸದಿಂದ ತುಂಬಿಕೊಂಡಿತು. ಆ ಕ್ಷಣದಲ್ಲಿ ನವಿಲು, ನವಿಲುಗರಿ, ಗುಡ್ಡೆ (ನಮ್ಮೂರಿನ ಕಡೆ ಅದು ಹಿತ್ಲು ಅಥವಾ ಹಕ್ಲು), ದನ, ಅದನ್ನು ಮೇಯಲು ಬಿಟ್ಟುಬರಲು ಹೋಗುವುದು ....ಎಲ್ಲಾ ಕಣ್ಣಮುಂದೆ ಬಂದು, ಊರು ನೆನಪಾಗಿ, ಓಹ್! ನನ್ನ ದಿನವನ್ನು ಹಸನುಗೊಳಿಸಲು ಒಂದು ಮೆಸೇಜು ಸಾಕು. ಶ್ರೀನಿಧಿಯ ಕೈಗೆ ಸಿಕ್ಕ 'ಖುಷಿ' ಮೊಬೈಲಿನ ಮೂಲಕ ನನ್ನ ಕೈಗೆ ವರ್ಗಾವಣೆಯಾಗಿತ್ತು!

ಆಗಸದ ಬಣ್ಣ ನಮ್ಮ ಮೂಡನ್ನು ಹೇಗೆ ನಿರ್ಧರಿಸುತ್ತದೋ ಊರಿನ ನೆನಪೂ ಹಾಗೇ. ಈ ಬೆಂಗಳೂರಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಿಗೆ ವ್ಯತ್ಯಾಸವೇ ಇಲ್ಲ. ಯಾವಾಗ ಬೇಕೆಂದರೆ ಅವಾಗ ಮಳೆ ಬರುತ್ತದೆ. ಮಳೆಗಾಲದಲ್ಲೂ ಬಿಸಿಲಿರುತ್ತದೆ, ಎಲ್ಲೋ ಸಂಜೆ ಹೊತ್ತಿಗೆ ಒಂದು ಮಳೆ ಬಂದು ಹೋಗುತ್ತದೆ. ಆದರೆ ಊರಿನಲ್ಲಿ ಮಳೆಗಾಲ ಎಂದರೆ ಹೀಗಲ್ಲ. ಊರಿನಲ್ಲಿ ಮಳೆಗಾಲ ಎಂದರೆ... ಧೋ ಎಂದು ದಿನವಿಡೀ ಸುರಿಯುತ್ತಿರುತ್ತದೆ ಮಳೆ.. ಮಳೆ ನೀರು ಕುಡಿದು ಕುಡಿದು ಧರೆ ತಣಿಯುತ್ತದೆ... ಎಲ್ಲೆಂದರಲ್ಲಿ ಜಲ ಒಡೆದು, ಜವಳಾಗಿ, ಕೆರೆ ತುಂಬಿ, ಕೋಡಿ ಬಿದ್ದು, ವಟರುಗಪ್ಪೆ ಕೂಗಿ, ಕಂಬಳಿಕೊಪ್ಪೆ ಹಾಕಿಕೊಂಡ ರೈತರು ಉಗ್ಗ ಹಿಡಿದು ಗದ್ದೆಗಳಿಗೆ ತೆರಳಿ, ತೋಟದಲ್ಲಿ ಕಳೆ ಹುಟ್ಟಿ, ಹಿತ್ತಿಲಲ್ಲಿ ಹುಲ್ಲು ಚಿಗುರಿ, ಅಪ್ಪ ಹುಲ್ಲು ಕೊಯ್ದು ತಂದು ಹಾಕಿ, ಅಮ್ಮ ಸೌತೆ-ಚೀನಿ-ಕುಂಬಳ ಬೀಜಗಳನ್ನು ಅಲ್ಲಲ್ಲಿ ಹಾಕಿ... ಓಹೋಹೋ..! ಊರಿನಲ್ಲಿ ಮಳೆಗಾಲ ಎಂದರೆ ಏನೆಲ್ಲ... ಹೊರಗೆ ಜೋರು ಮಳೆಯಾಗುತ್ತಿದ್ದರೆ ಒಳಗೆ ಹಲಸಿನಕಾಯಿ ಹಪ್ಪಳವನ್ನು ಕರಿದುಕೊಂಡೋ, ಗೇರುಬೀಜ ಸುಟ್ಟುಕೊಂಡೋ ಬೆಚ್ಚಗೆ ತಿನ್ನುವುದರಲ್ಲಿರುವ ಸ್ವರ್ಗಸುಖ ಈ ಬೆಂಗಳೂರಿನ ಯಾವ ಡಿಸ್ಕೋಥೆಕ್ಕಿನಲ್ಲಿದೆ?

ಅಂಥಾ ಸುಂದರ 'ಕೈಬರಹ'ದಂತಹ ಊರನ್ನು ಬಿಟ್ಟುಬಂದು ಈ 'ಪ್ರಿಂಟೆಡ್'ನಂತಹ ಬೆಂಗಳೂರಿನಲ್ಲಿ ಬದುಕುತ್ತಿರುವ ನಮ್ಮದು ಇದೆಂತಹ ದುರಾದೃಷ್ಟ... ಊರು, I miss you.

6 comments:

ಶ್ರೀನಿಧಿ.ಡಿ.ಎಸ್ said...

ಪಾಪಿ ಸುಶ್ ಗೆ!,
ನಾನು ಊರಿಂದ ಬಂದು ಎನು ಬರ್ಯಕು ಅಂತ ಮಾಡಿದಿದ್ನೊ, ಅದ್ನ ಮೊದಲೆ ಬರೆದು ನಾನಿನ್ನು ಬರೀದೇ ಇದ್ದ ಹಾಂಗೆ ಮಾಡಿದ್ದಕ್ಕೆ ಪ್ರೀತಿಪೂರ್ವಕ ಧನ್ಯವಾದಗಳು!!

Sushrutha Dodderi said...

@ ಶ್ರೀನಿಧಿ...

'ಪಾಪಿ ಚಿರಾಯು'ಯಾಗುವ ಬಯಕೆ ಅಷ್ಟೇ; ನೀನು ಬರೆಯುವುದನ್ನು ತಪ್ಪಿಸುವ ಆಸೆಯಂತೂ ಅಲ್ಲ!

Anonymous said...

ಹ್ಹ ಹ್ಹ, ಈ ಸುಖವೆಲ್ಲಾ ಅನುಭವಿಸಿದವರಿಗೇ ಗೊತ್ತಾಗಬೇಕು..
ನಗರದವರಿಗೆ ಕಷ್ಟ ಸಾಧ್ಯ.

ವಿಪರ್ಯಾಸವೆಂದರೆ ನಾವೂ ಈಗ ಈ ಕೃತಕ ಜಗತ್ತಿನಲ್ಲಿ ಅನಿವಾರ್ಯವಾಗಿ ಬಂಧಿಗಳಾಗಿರುವುದು ....

:( :(

Sushrutha Dodderi said...

@ Vikas

ಅಷ್ಟರಮಟ್ಟಿಗೆ ನಾವು ಅದೃಷ್ಟವಂತರು ಅಲ್ವಾ..? ಹಹ್ಹ!

ಹಳ್ಳಿಗಳಲ್ಲೇ ನಮಗೆ opportunities ಸಿಗೋಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು...

Enigma said...

oorina nenepu marukalisithide. adre bahala door ideve nanvu oorige thirgi hogalike

Sushrutha Dodderi said...

@ enigma

ಊರೇ ನೆನಪೇ ಹಾಗೆ, ಕಾಡುತ್ತೆ. ಧನ್ಯವಾದಗಳು.