ಹೋಳಿಗೆ ಮಾಡುವುದು ಹೇಗೆ ಗೊತ್ತಾ?
ಮೊದಲು ಕಡಲೆ ಬೇಳೆಯನ್ನು ತೊಳೆದು, ನೆನೆಸಿಡಬೇಕು. ಆಮೇಲೆ ಅದನ್ನು ಬೆಲ್ಲದೊಂದಿಗೆ ಬೇಯಿಸಬೇಕು. ಅದು ಬೆಂದಾದಮೇಲೆ ಸಿದ್ದವಾಗುವ ಖಾದ್ಯವೇ ಹಯಗ್ರೀವ. ಆಮೇಲೆ ಅದನ್ನು ಬೀಸಬೇಕು. ಈಗ ಹೂರಣ ಸಿದ್ದ. ಈ ಮಧ್ಯೆ ಹೋಳಿಗೆ ರವೆ (ಅಥವಾ ಗೋಧಿ/ಮೈದಾ ಹಿಟ್ಟು) ಯನ್ನು ಎಣ್ಣೆ/ನೀರಿನೊಂದಿಗೆ ಕಲಸಿ, ಮೆದ್ದು, ಸರಿಯಾಗಿ ಹದ ಮಾಡಿಟ್ಟುಕೊಳ್ಳಬೇಕು. ರಬ್ಬರಿನಂತೆ flexible ಆಗಿರಬೇಕು ಅದು. ಈಗ ಕಣಿಕೆ ಸಿದ್ದ. ಈಗ ಏನು ಮಾಡಬೇಕೆಂದರೆ.. ಕಣಿಕೆಯನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಹೂರಣವನ್ನೂ ಉಂಡೆ ಕಟ್ಟಬೇಕು. ಈ ಹೂರಣದ ಉಂಡೆಗಳು ಕಣಿಕೆ ಉಂಡೆಗಳಿಗಿಂತ ದೊಡ್ಡವು. ಕಣಿಕೆಯ ಉಂಡೆಗಳು ಮತ್ತು ಹೂರಣದ ಉಂಡೆಗಳು ಸಮಸಂಖ್ಯೆಯಲ್ಲಿರಬೇಕು. (ಕಣಿಕೆ ಸ್ವಲ್ಪ ಉಳಿದುಬಿಟ್ಟರೆ ಕೊನೆಯಲ್ಲಿ 'ಕಣಿಕೆ ರೊಟ್ಟಿ' ಮಾಡಬಹುದು, ಚಿಂತೆಯಿಲ್ಲ!). ಕಾವಲಿ ಕಾದಿದೆಯಾ ನೋಡಿ... ಹಾಂ, ಕಾದಿದೆ. ಈಗ ಕಾವಲಿಗೆ ಎಣ್ಣೆ ಸವರಿ. ಹಾಂ, ಇನ್ನು ಕಣಿಕೆಯನ್ನು ಒತ್ತಿ (ಅಥವಾ ತಟ್ಟಿ) ಚಪ್ಪಟೆ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು, ಕಣಿಕೆಯಿಂದ ಮುಚ್ಚಿಬಿಡಿ. ಈಗ ಅದನ್ನು ಮಣೆಯ ಮೇಲಿಟ್ಟು, (ಮಣೆಯ ಮೇಲೆ ಕವರು ಹಾಸಿಕೊಂಡಿದ್ದೀರ ತಾನೆ?), ಲಟ್ಟಣಿಗೆಯಿಂದ ತೆಳ್ಳಗೆ ವರೆಯಬೇಕು... ಕಣಿಕೆ transparent ಆಗಿ ಒಳಗಿನ ಹೂರಣ ಎದ್ದುಬರುವಂತಾಗುವವರೆಗೆ ವರೆಯಬೇಕು. ಈಗ ಇದನ್ನು ಕಾದ ಕಾವಲಿಯ ಮೇಲೆ ಹಾಕಬೇಕು. ಹತ್ತಿ ಕರಕಲಾಗದಂತೆ ಆಗಾಗ ಮಗುಚಿಹಾಕುತ್ತಿರಬೇಕು. ಬೆಂದಮೇಲೆ ತೆಗೆದು ಪೇಪರ್ ಮೇಲೆ ಆರಲು ಹಾಕಬೇಕು... ಇಗೋ, ಇದೀಗ ಹೋಳಿಗೆ ತಿನ್ನಲು ಸಿದ್ದ! ನೋಡಿ, ಎಷ್ಟು ಕಷ್ಟ ಹೋಳಿಗೆ ಮಾಡುವುದು...!
ಮನುಷ್ಯನಿಗೆ ಬೇಳೆ, ಬೆಲ್ಲ, ರವೆ, ಹಿಟ್ಟುಗಳನ್ನು ಹಾಗ್-ಹಾಗೇ ತಿನ್ನಲಾಗುವುದಿಲ್ಲ ಅದಕ್ಕಾಗಿ ಇಷ್ಟೆಲ್ಲ ಕಷ್ಟ ಪಡುತ್ತಾನೆ! ಅದ್ಸರಿ, ಈ ಹೋಳಿಗೆ ಮಾಡುವುದನ್ನು ಕಂಡುಹಿಡಿದವರು ಯಾರು?
ಮರೆತದ್ದು: ಹಯಗ್ರೀವವನ್ನು ಬೀಸುವ ಮುಂಚೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಹೋಳಿಗೆಗೆ ಪರಿಮಳವೂ, ಜಾಸ್ತಿ ರುಚಿಯೂ ಲಭ್ಯವಾಗುತ್ತದೆ!
***
ಯಾಕೆ ಬರೆದೆ ಇದನ್ನ ಇಲ್ಲಿ ಅಂದ್ರೆ...
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಹೆಣ್ಣುಮಕ್ಕಳು ಇಲ್ಲದ ಕಾರಣ ನಾನೇ ಅಮ್ಮನಿಗೆ ಹೋಳಿಗೆ ಮಾಡುವಲ್ಲಿ assist ಮಾಡುವುದು. ಕಳೆದ ವರ್ಷದವರೆಗೆ ಅಜ್ಜಿ ಇದ್ದಳು. ಅವಳಿಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲವಾದರೂ, ಒಂದಷ್ಟು ಹೊತ್ತು ಒಲೆ ಬುಡದಲ್ಲಿ ಕೂತು ಹೋಳಿಗೆ ಮಗುಚಿಹಾಕುವ ಕೆಲಸವನ್ನು ಮಾಡುತ್ತಿದ್ದಳು. ಅವಳು ತೀರಿಕೊಂಡಮೇಲೆ ಈ ವರ್ಷ ಹೂರಣದ ಉಂಡೆ ಕಟ್ಟುವುದು, ಬೆಂಕಿಯ ಕಾವು ಹೆಚ್ಚುಕಮ್ಮಿಯಾಗದಂತೆ manage ಮಾಡುವುದು, ಹೋಳಿಗೆ ಮಗುಚಿಹಾಕುವುದು ಎಲ್ಲಾ ನಾನೇ. ಅಮ್ಮ ಕಣಿಕೆಯ ಉಂಡೆ ಕಟ್ಟುವುದು, ಹೂರಣದ ಉಂಡೆಯನ್ನು ಕಣಿಕೆಯ ಒಳಗಿಟ್ಟು ಹೋಳಿಗೆ ವರೆಯುವುದು, ಆಮೇಲೆ ಅದನ್ನು ಕೈಮೇಲೆ ಹಾಕಿಕೊಂಡು ಹರಿದುಹೋಗದಂತೆ ಕಾದ ಕಾವಲಿಯ ಮೇಲೆ ವರ್ಗಾಯಿಸುವುದು, ಹೋಳಿಗೆ ಬೆಂದಿತಾ ಅಂತ ಚೆಕ್ ಮಾಡುವುದು.. ಎಲ್ಲಾ ಮಾಡುತ್ತಾಳೆ.
ನನಗೆ ಮೊದಲಿನಿಂದಲೂ ಅಮ್ಮನಿಗೆ ಸಹಾಯ ಮಾಡುವ ಇಂತಹ ಕೆಲಸಗಳಲ್ಲಿ ಆಸಕ್ತಿ. ಏಕೆಂದರೆ ಒಲೆಯ ಹಳದಿ ಬೆಳಕು ಅಮ್ಮನ ಮುಖದ ಮೇಲೆ ಲಾಸ್ಯವಾಡುತ್ತಿರುವಾಗ ನಾನು ಉಂಡೆ ಕಟ್ಟಿಕೊಡುತ್ತಾ ಅದೆಷ್ಟು ಮಾತಾಡಬಹುದು...! ಊರ ಕಥೆಯನ್ನೆಲ್ಲಾ ಅಮ್ಮ ಹೇಳುತ್ತಾಳೆ. ಯಾರ್ಯಾರ ಮನೆಯಲ್ಲಿ ಏನೇನಾಯ್ತು, ಪಾರಕ್ಕ ಗಂಡ-ಹೆಂಡ್ತಿ ಕಾಶೀಯಾತ್ರೆಗೆ ಹೋಗಿಬಂದದ್ದು, ಹೊಸವರ್ಷದ ಹಿಂದಿನ ದಿನ ಊರವರೆಲ್ಲಾ ಸೇರಿ ಕಂಬಳ ಮಾಡಿದ್ದು, ಪ್ರಕಾಶಣ್ಣನ ಮನೆಯ ಹುಲ್ಲು ಗೊಣಬೆಗೆ ಬೆಂಕಿ ಬಿದ್ದುಬಿಟ್ಟದ್ದು, (ಬೆಂಕಿ ಹಾಕಿದ್ದು ಇಂಥವನೇ ಇರಬೇಕು ಅಂತ ಊರವರೆಲ್ಲ ಗುಸುಗುಸು ಮಾತಾಡಿಕೊಳ್ಳುತ್ತಿರುವುದು), ಸರೋಜಕ್ಕನೂ ಶ್ರೀಲಕ್ಷ್ಮಕ್ಕನೂ ಮಾಡಿಕೊಂಡ ಜಗಳ, ಗುಂಡ ಹೊಸ ಬೈಕಿನಿಂದ ಬಿದ್ದು ಕಾಲು ಮುರಿದುಕೊಂಡದ್ದು... ಎಲ್ಲ.
ಇವನ್ನೆಲ್ಲ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ. ಏಕೆಂದರೆ ಬಹಳ ಸಲ ನಮ್ಮನೆಯ ಫೋನಿನಲ್ಲಿ ಮಾತಾಡುತ್ತಿರುವುದನ್ನು ಬೇರೆಯವರ ಮನೆಯವರು ಫೋನೆತ್ತಿದರೆ ಕೇಳಿಸಿಕೊಳ್ಳಬಹುದು! ಆದ್ದರಿಂದ, ಇದಕ್ಕೆ ಹಿತ್ಲಕಡೆ ಲಾಯದಲ್ಲಿ ಹೋಳಿಗೆ ಮಾಡಲಿಕ್ಕೆಂದು ಹೂಡಿದ ವಿಶೇಷ ಒಲೆಯ ಎದುರೇ ಆಗಬೇಕು. ನಾನು ಹಿಂದಿನ ಸಲ ಊರಿಗೆ ಬಂದುಹೋದಂದಿನಿಂದ ಈ ಸಲ ಬರುವವರೆಗೆ ಊರಿನಲ್ಲಿ, ನಮ್ಮ ನೆಂಟರಿಷ್ಟರ ಕುಟುಂಬಗಳಲ್ಲಿ ಏನೇನಾಯ್ತೋ ಎಲ್ಲದರ ವರದಿ ಈ ಒಲೆಯ ಮುಂದೆ ನನಗೆ ಸಿಗುತ್ತದೆ ಅಮ್ಮನಿಂದ. ನಾನು ಹೂರಣದ ಉಂಡೆ ಕಟ್ಟಿಕೊಡುತ್ತಾ, ಆ ಉಂಡೆ ಅಮ್ಮನ ಪುಟ್ಟ ಕಣಿಕೆಯ ಉಂಡೆಯೊಳಗೆ ಬೆಚ್ಚಗೆ ಮುಚ್ಚಿಹೋಗುವುದನ್ನು ವಿಸ್ಮಯದಿಂದ ನೋಡುತ್ತಾ, ಈ ಕಥೆಯನ್ನೆಲ್ಲಾ ಕೇಳುತ್ತೇನೆ... ಆಗಾಗ ಬೆಂಕಿ ಮುಂದೂಡುತ್ತಾ, ಕಾವು ಜಾಸ್ತಿಯಾದರೆ ಕಟ್ಟಿಗೆಯನ್ನು ಹಿಂದಕ್ಕೆಳೆಯುತ್ತಾ, ಕಣಿಕೆಯ ಉಂಡೆ ಮತ್ತು ನನ್ನ ಹೂರಣದ ಉಂಡೆ -ಎರಡೂ ಸಮಸಂಖ್ಯೆಯಲ್ಲಿದೆಯಾ ಅಂತ ಲೆಕ್ಕ ಮಾಡುತ್ತಾ ನಾನು ಕುಳಿತಿರುವಾಗ ಲಟ್ಟಣಿಗೆಯ ಕೆಳಗೆ ಕಣಿಕೆಯೊಳಗಣ ಹೂರಣ ಅಗಲವಾಗುತ್ತಾ ಹೋಗುತ್ತದೆ. ಕಣಿಕೆ ತಾನು ಪಾರದರ್ಶಕವಾಗುತ್ತಾ, ಹೂರಣವನ್ನು ಅಗಲವಾಗಲು ಬಿಡುತ್ತದೆ. ಹೂರಣಕ್ಕೆ ಕಣಿಕೆಯನ್ನೂ ಮೀರಿ ಬೆಳೆಯುವ ಧೈರ್ಯ. ಆದರೆ ಅಷ್ಟರಲ್ಲಿ ಅಮ್ಮ ವರೆಯುವುದನ್ನು ನಿಲ್ಲಿಸಿಬಿಡುತ್ತಾಳೆ.
ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಆಟವಾಡಿದ್ದು ಎಲ್ಲ ಈ ಹಳ್ಳಿಯಲ್ಲೇ, ಅಮ್ಮ-ಅಪ್ಪ-ಅಜ್ಜಿಯರ ಸಂಗಡವೇ. ನನ್ನ ಜೀವನದ ಮೊದಲ ಹದಿನೆಂಟು ವರ್ಷಗಳನ್ನು ಇಲ್ಲೇ ಕಳೆದುಬಿಟ್ಟೆ. ಓದಿನಲ್ಲಿ ಮುಂದಿದ್ದ ಕಾರಣ, ನಾನೇ ಊರಿಗೆಲ್ಲ ಹೀರೋ ಆಗಿದ್ದೆ. ಅಲ್ಲದೆ ಏನೇನೂ ಕೀಟಲೆ ಮಾಡದೆ, ಹೆಚ್ಚು ಮಾತೂ ಆಡದೆ, decent ಆಗಿ ಇರುತ್ತಿದ್ದೆನಾದ್ದರಿಂದ ನನಗೆ 'ತುಂಬಾ ಒಳ್ಳೇ ಮಾಣಿ' ಎಂಬ ಬಿರುದೂ ಬಂದುಬಿಟ್ಟಿತ್ತು! ಆದರೆ ಕೊನೆಕೊನೆಗೆ ಆ ಪಟ್ಟ ಬೇರೆಯವರಿಗೆ ವರ್ಗಾವಣೆಯಾಗುವ ಸಂಭವ ಬಂತು. ಓದುವುದರಲ್ಲಿ dull ಹೊಡೆಯಲು ಶುರು ಮಾಡಿದೆ. ನನ್ನ ಉಳಿದ ಸ್ನೇಹಿತರಿಗೆ ಬೇರೆಬೇರೆ ಕ್ಷೇತ್ರಗಳಲ್ಲಿ 'ಮನ್ನಣೆ' ಸಿಗಲಿಕ್ಕೆ ಪ್ರಾರಂಭವಾಗಿತ್ತು. ಹೀಗಾಗಿ ನಾನು ಏನೂ ಇಲ್ಲದೆ, ತೀರ ಪೇಲವನಂತಾಗಿಬಿಟ್ಟೆ. ಇಲ್ಲೇ ಇದ್ದರೆ ನಾನು ಇನ್ನು ಕೊಳೆತುಹೋಗಿಬಿಡುತ್ತೇನೆ ಅನ್ನಿಸಲು ಶುರುವಾಯಿತು ನನಗೆ... So, ನನ್ನ ಡಿಪ್ಲೋಮಾ ಮುಗಿದದ್ದೇ ಬೆಂಗಳೂರಿಗೆ ಹತ್ತಿಬಿಟ್ಟೆ.
ಇಲ್ಲಿಗೆ ಬರುವ ಮುನ್ನ ಕಟ್ಟಿದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಅವನ್ನೆಲ್ಲಾ achieve ಮಾಡಿಕೊಳ್ಳಲು ಬೇಕಾದ ಸಮಯ ಮತ್ತು ಅವಕಾಶವನ್ನು ಈ ಬೆಂಗಳೂರಿನ busyನೆಸ್ಸು ತಿಂದುಹಾಕುತ್ತಿದೆ. ಮೆಜೆಸ್ಟಿಕ್ಕಿನ ಬಳಿಯ ಫ್ಲೈಓವರಿನ ಮೇಲೆ ನಿಂತು ಕೆಳಗೆ ನೋಡಿದರೆ ಜನಸಾಗರ. ಎಲ್ಲಾ ಸರಸರನೆ ಓಡಾಡುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಗೆ ಹೋಗುತ್ತಿದ್ದಾರೆ? ಏನದು ತರಾತುರಿ? ಒಂದೂ ಅರ್ಥವಾಗುತ್ತಿಲ್ಲ. ಸುಮ್ಮನೇ ಎಲ್ಲರೂ ಓಡುತ್ತಿದ್ದಾರೆ. ಗಮನಿಸಿ ನೋಡಿದರೆ, ನಾನೂ ಓಡುತ್ತಿದ್ದೇನೆ -ಇವರಂತೆಯೇ, ಇವರೊಂದಿಗೇ. ಹೀಗೇ ಓಡುತ್ತಿದ್ದರೆ ಮುಂದೊಂದು ದಿನ ಎಲ್ಲಿಗೆ ಹೋಗಿ ಮುಟ್ಟುತ್ತೇನೋ ಅನ್ನಿಸಿದಾಗ ಭಯವಾಗುತ್ತದೆ.
***
I am sorry. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಕ್ಕೆ ಬಂದರೂ, ಅದೆಷ್ಟೇ ನಗರೀಕೃತಗೊಂಡಿದ್ದೇನೆಂದರೂ, ಇನ್ನೂ ಊರಲ್ಲೇ ಇದ್ದೇನೆ ಅನ್ನಿಸುತ್ತದೆ. ಅಮ್ಮನನ್ನೂ, ಊರನ್ನೂ, ಬೆಚ್ಚನೆಯ ಆ ಒಲೆಯ ಎದುರನ್ನೂ ಬಿಟ್ಟಿರಲು ಆಗುವುದೇ ಇಲ್ಲ. ಅಮ್ಮ ಕೊಟ್ಟುಕಳುಹಿಸಿದ ಹೋಳಿಗೆಯನ್ನು ಮೆಲ್ಲುವಾಗ ಎಲ್ಲಾ ನೆನಪಾಗುತ್ತದೆ...
18 comments:
ಸುಶ್,
ಎಂದಿನಂತೆ ಸುಂದರ ಬರಹ! ಹೋಳಿಗೆಯಿಂದ ಬರಹನಾಶುರು ಮಾಡಿ, ಮೆಜೆಸ್ಟಿಕ್ ನ ಫ್ಲೈಓವರಿನ ಮೇಲೆ ತಂದು ನಿಲ್ಸಿದ್ದ್ ಶೈಲಿನೇ ಮಸ್ತ್ ಇದ್ದು ಬಿಡಪಾ!!
ಇತ್ತಿತ್ಲಾಗೆ "nostalgicತನ"ಸ್ವಲ್ಪ ಜಾಸ್ತಿ ಆಯ್ದನಾ?!!:)
@ ಶ್ರೀನಿಧಿ..,
ಇತ್ತಿತ್ಲಾಗೆ "nostalgicತನ"ಸ್ವಲ್ಪ ಜಾಸ್ತಿ ಆಯ್ದನಾ? ಹೌದು ಕಾಣ್ತು ಮಾರಾಯ! ಊರಿಗೆ ಹೋಗಿ ಬಂದ್ಮೇಲೆ ಯಾಕೋ ಊರೇ ಕಾಡ್ತಾ ಇದ್ದು..!
ಹಮ್!! sailing in same boat!!:)
snehitare, nanagu kooda hage aagta ide.... ondondu sala (andare hechchu kammi gantege ondu sala).. ee Bengaloorannu bittu odi hogona annisuttade.... nijvaglu nemmadiya jeevanada munde ee Bengaloorina duddu, busyness, deluxu yavdu beda annisuttade....
@ Vikas
ಅಂದ್ರೆ ಈ ಖಾಯಿಲೆ ಎಲ್ರಿಗೂ ಇರುವಂಥದ್ದೇ ಅಂತ ಆಯ್ತು. ಬದುಕಿದೆ! (ಆದರೆ ನಿಮಗೆ ಗಂಟೆಗೊಂದ್ಸಲ ಇದು ಮರುಕಳುಸುತ್ತೆ ಅಂದ್ರೆ ಸ್ವಲ್ಪ ಜಾಗರೂಕವಾಗಿರ್ಬೇಕು!)
ಓಡಿ ಮಾತ್ರ ಹೋಗ್ಬೇಡಿ, ಏಕೆಂದರೆ, ಹಿರಿಯರು ಹೇಳಿಲ್ವೇ: ಎಲ್ಲುಂಟಯ್ಯಾ ನೆಮ್ಮದಿಯ ತಾಣ ಈ ಜಗದಲಿ..?
ಧನ್ಯವಾದಗಳು..
he he,,, gantegondu sala antha swalpa hype maadi helide ashte... dinakkondu sala antha itkolli....illina trafikku,crowdu,BMTC bussu ella nodida koodle jaastiyagutte adu... he he
ಓಡಿ ಮಾತ್ರ ಹೋಗ್ಬೇಡಿ,
khanditha nanage bere kade avakasha sikkare ODI HOGE HOGTEENI.
ಏಕೆಂದರೆ, ಹಿರಿಯರು ಹೇಳಿಲ್ವೇ: ಎಲ್ಲುಂಟಯ್ಯಾ ನೆಮ್ಮದಿಯ ತಾಣ ಈ ಜಗದಲಿ..?
comparitively nemmadiya taana sikkare saaku :)
@@ vikas
ಖಾಯಿಲೆಯ ಅವಧಿ ಕಡಿಮೆಯಾಗಿರುವುದು ಒಳ್ಳೆಯ ಸೂಚನೆ :)
ಅವಕಾಶ ಸಿಕ್ರೆ ಹೋಗಿ ಬ್ಯಾಡ ಅನ್ನೋಲ್ಲ; ಆದ್ರೆ ಓssssಡಿ ಮಾತ್ರ ಹೋಗ್ಬೇಡಿ ಅಂದೆ! ಯಾಕೇಂದ್ರೆ ನೀವು ಓಡೋದನ್ನ ನೋಡ್ಲಿಕ್ಕಾಗಲ್ಲ ನಂಗೆ..!! :)
ಖಾಯಿಲೆಯ ಅವಧಿ ಕಡಿಮೆಯಾಗಿರುವುದು ಒಳ್ಳೆಯ ಸೂಚನೆ :)
aagale idu ondu "khaliye" antha teermanisibittya??? idu khayile alve alla...
ಯಾಕೇಂದ್ರೆ ನೀವು ಓಡೋದನ್ನ ನೋಡ್ಲಿಕ್ಕಾಗಲ್ಲ ನಂಗೆ..!! :)
yaake guru??
@ Vikas
ಇರ್ಲಿ ಬಿಡು ಗುರು.. ಏನೋ ತಮಾಶೆ ಮಾಡ್ದೆ.. Let's not make it a discussion forum. ಹೋಳಿಗೆ ರುಚಿ ಇತ್ತು ಅಂದ್ರೆ ತಿಂದು, 'ಚನಾಗಿತ್ತು' ಅಂದ್ರೆ ಸಾಕು.
sarinappa, tappaythu :(
hOlige chennagittu.. elli,yavdu, yake, enu , henge antha kelalla. sarina ?!! ok.
ಬಹಳ ಚೆನ್ನಾಗಿದೆ, ಮನುಷ್ಯ ಎಲ್ಲೆ ಇದ್ದರೂ ಅವನ ಬೇರು ಅವನ ಊರಿನಲ್ಲಿ ಇರಬೇಕು ಅಂತ ಹಿರಿಯರು ಹೇಳುತ್ತಾರೆ. ಬೆಂಗಳೂರೇ ನಮಗೆ ಜನ್ಮಭೂಮಿ ಮತ್ತು ಕರ್ಮಭೂಮಿ ಆದ ಕಾರಣ ಇಂತಹ ಅನುಭವ ಓದಲು ಚೆನ್ನಾಗಿರುತ್ತದೆ.
@ Vikas
Thas good!
@ pavvi
ಧನ್ಯವಾದಗಳು ಪವ್ವಿ. ಅನೇಕ ಬೆಂಗಳೂರಿಗರ ಪ್ರಕಾರ ಇದು ಪುಣ್ಯಭೂಮಿ; ಆದರೆ ನೀವು ಕರ್ಮಭೂಮಿ ಎಂದದ್ದು ಆಶ್ಚರ್ಯ :)
ನೆನಪುಗಳೇ ಹಾಗೇ..
ನಮ್ಮೂರು..ನಮ್ಮ ಬಾಲ್ಯ..ನಮ್ಮದೇ ಅಂತಾ ಇದ್ದ ಒಂದು ಪ್ರಪಂಚ..ಗೊತ್ತಿಲ್ಲಾ ಇಂತ ಎಷ್ಟು ಪ್ರಪಂಚಗಳಿಂದ ಜನ ಬಂದು ಈ ಬೆಂಗಳೂರು ಎಂಬ ಸಾಗರದಲ್ಲಿ ಸೇರಿ ಕಳೆದುಹೋಗಿದಾರೋ..
ಅಂದಾಗೇ ಹೋಳಿಗೆ expert ಆಗಿದೀರಾ ನೀವು..ಮುಂದೆ ನಿಮ್ಮ 'ಮನೆಯವರಿಗೆ' ಹೋಳಿಗೆ ಮಾಡುವ ಪ್ರಮೇಯವೇ ಬರೋಲ್ಲಾ ಬಿಡಿ :)
@ vibes
'ಅವಳು' ಬಂದಮೇಲಾದ್ರೂ ನಂಗೆ ಉಂಡೆ ಕಟ್ಟಿಕೊಡೋದು ತಪ್ಪುತ್ತೆ ಅಂದ್ಕೊಂಡಿದ್ದೆ; ಆದ್ರೆ ನೀವು ನೋಡಿದ್ರೆ ನಾನೇ ಮುಂದೆ ಹೋಳಿಗೆ ಮಾಡೋ ಪರಿಸ್ಥಿತಿ ಬರಬಹುದು ಅಂತ ಹೆದರಿಸ್ತಿದೀರ... :) ನೋಡೋಣ ಏನಾಗತ್ತೋ?
ಪ್ರತಿಕ್ರಿಯೆಗೆ ಧನ್ಯವಾದಗಳು.
hai
nange mejestic fly over mele ninthu nodidre ondu song nenpagthu "esthond jana illi yaaru nannoru, esthond mane illi elli nammane"
nija bengaloru bittu yavaga manege hokthno eno antha annistu.
E busy life vakarike baro asthu bejaru agi hoydu.
@ ranjana
vikasa hogthi hELtha idda. neenoo honTya eega? hinge elroo biT hodre ee bengLur gathi enthu?! :)
Post a Comment