Monday, November 13, 2006

ಒಂದು ಹುಟ್ಟು, ಒಂದು ಮದುವೆ ಮತ್ತು ಒಂದು ಸಾವು..

"ಚೆಲುವ ಬಿದಿರ ತೊಟ್ಟಿಲಲ್ಲಿ
ನಗುವ ಮಗುವ ಕಂಡೆ"

ಅಂತ ಬರೆದರು ಕೆ‍ಎಸ್‍ನ. ಮೊನ್ನೆ ನಮ್ಮ ಬಾಸ್‍ ತಂದೆಯಾದರು. ಮಗುವನ್ನು ನೋಡಿಕೊಂಡುಬರಲು ನಾನು ನನ್ನ colleagues ಜೊತೆ ಆಸ್ಪತ್ರೆಗೆ ಹೋಗಿದ್ದೆ. ಬಾಸ್ ತುಂಬಾ ಖುಷಿಯಲ್ಲಿದ್ದರು. ಸ್ವೀಟ್ ಕೊಟ್ಟರು. ನಾನು ಇದೇ ಸಂದರ್ಭ ಅಂತ 'ಸರ್, ಸ್ವೀಟ್ ಸಾಕಾಗಲ್ಲ, ಟ್ರೀಟ್ ಬೇಕು' ಅಂದೆ. 'ಓ, ಅದಕ್ಕೇನಂತೆ, ಕೊಡುಸ್ತೀನಿ' ಅಂದ್ರು. ಬೆಡ್ಡಿನಲ್ಲಿ ಮಲಗಿದ್ದ ಬಾಸ್-ಮಿಸ್ಸಸ್‍ಗೆ ಕಂಗ್ರಾಟ್ಸ್ ಹೇಳಿದೆ. ತೊಟ್ಟಿಲಲ್ಲಿ ಮಗು ನಿದ್ದೆ ಹೋಗಿತ್ತು. 'ಯಾರ ಹಾಗಿದಾಳಪ್ಪ?' ಅಂದ್ರು ಬಾಸ್ ಅತ್ತೆ. ಹೆಚ್ಚೆಸ್ವಿ ತಮ್ಮ ಮೊಮ್ಮೊಗಳ ಕುರಿತು ಬರೆದ 'ಸೋನಿ ಪದ್ಯಗಳು' ನೆನಪಾಗುತ್ತಿತ್ತು ನನಗೆ...


***

ಮೊನ್ನೆ ಸಿಂಧು ಅಕ್ಕನ ಮದುವೆಯ receptionಗೆ ಹೋಗಿದ್ದೆ. ತನ್ನನ್ನು ತಾನೇ 'ಅಕ್ಕ' ಅಂತ ಕರೆದುಕೊಂಡ ಮಹಾದೇವಿ ಈಕೆ! ಮದುವೆಗೆ ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿ ಬಂದಿದ್ದರು. ಊಟದ ಸಮಯದಲ್ಲಿ ಜಯಂತ್ ಮಾತಿಗೆ ಸಿಕ್ಕಿದರು. ಈ ಮೊದಲು ಒಮ್ಮೆ ಸಪ್ನಾ ಬುಕ್‍ಹೌಸ್‍ನಲ್ಲಿ ಜಯಂತ್ ಸಿಕ್ಕಿದ್ದರು. ಅದನ್ನು ನೆನಪಿಸಿ, 'ನಾನು..ಸುಶ್ರುತ.. ಅವತ್ತು ಸಪ್ನಾದಲ್ಲಿ ಸಿಕ್ಕಿದ್ನಲ್ಲ...' ಅಂದೆ. 'ಓಹ್, ಹೌದು, ಕರೆಕ್ಟ್!' ಅಂದ್ರು. (ನಿಜವಾಗ್ಯೂ ನೆನಪಾಯ್ತೋ ಸುಳ್ಳೇ ಹೂಂ ಅಂದ್ರೋ ನಂಗಂತೂ ಡೌಟು!). ಕೊನೆಗೆ ಜಯಂತ್ ಜೊತೆಯೇ ತುಂಬಾ ಹೊತ್ತು ಮಾತಾಡಿದೆ. 'ಸರ್ ನೀವು ನಮಗೆ continuous ಆಗಿ ಓದ್ಲಿಕ್ಕೆ ಸಿಗ್ಬೇಕು, ಯಾವ್ದಾದ್ರೂ ಪತ್ರಿಕೆಗೆ ಬರೀರಿ' ಅಂದೆ. 'ಸಧ್ಯದಲ್ಲೇ ಪ್ರಜಾವಾಣಿಗೆ ಬರೀತೀನಿ. ಡಾ| ರಾಜಕುಮಾರ್ ಬಗ್ಗೆ 'ನಮಸ್ಕಾರ' ಸರಣಿಯಲ್ಲಿ ಈಟೀವಿಯಲ್ಲಿ ನಾಡಿದ್ದು ಭಾನುವಾರದಿಂದ ನನ್ನ ಪ್ರೋಗ್ರಾಮ್ ಒಂದು ಬರುತ್ತೆ, ನೋಡಿ' ಅಂದರು. ಅದೂ ಇದು ಮಾತಾಡಿದ್ವಿ.

ಅಕ್ಕನ ಮದುವೆಯ reception hallನಲ್ಲಿ ಕೇಳಿಬರುತ್ತಿದ್ದ 'ಮೈಸೂರು ಮಲ್ಲಿಗೆ' ಮತ್ತಿತರ ಭಾವಗೀತೆಗಳು ಕಿವಿಗಿಂಪಾಗಿದ್ದವು. ಅಕ್ಕನಿಗೆ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಪುಸ್ತಕವನ್ನು present ಮಾಡಿದೆ.


***

ಮೊನ್ನೆ Bangalore Book Fairನಿಂದ ಒಂದಷ್ಟು ಪುಸ್ತಕಗಳನ್ನು ಕೊಂಡುತಂದೆ. ತಂದ ಪುಸ್ತಕಗಳಿಗೆಲ್ಲ ಬೈಂಡ್ ಹಾಕಿ, ಮೇಲೆ ಹೆಸರು ಬರೆದು ಇಡುವುದು ನನ್ನ ರೂಢಿ. ನಿನ್ನೆ ಹಾಗೇ ಹೆಸರು ಬರೆಯುತ್ತಾ ಕೂತಿದ್ದೆ. ಅಷ್ಟರಲ್ಲಿ ನಮ್ಮ ಕೆಳಗಡೆ ಮನೆಯ ಆಂಟಿ 'ಸುಪ್ರೇಶ್' ಅಂತ ಕರೆದರು. ಅವರು ನನ್ನನ್ನು ಕರೆಯುವುದೇ ಹಾಗೆ. ನಾನೂ ಅದನ್ನು rectify ಮಾಡಲು ಹೋಗಿಲ್ಲ. ಏಕೆಂದರೆ 'ಸುಶ್ರುತ' ಎಂಬ ನನ್ನ ಹೆಸರನ್ನು ಸರಿಯಾಗಿ ಕರೆಯುವವರ ಸಂಖ್ಯೆ ತುಂಬಾ ಕಮ್ಮಿ. Pronunciation problem! ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ. ನಾನೂ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗುವುದಿಲ್ಲ. (ಎಷ್ಟೂಂತ ಕೆಡಿಸಿಕೊಳ್ಳಲಿ ನಾನಾದರೂ!)

ಆಂಟಿ ಕರೆದಾಗ ನಾನು ಕಾರಂತರ 'ಅಳಿದ ಮೇಲೆ' ಕಾದಂಬರಿಗೆ ಸ್ಕೆಚ್‍ಪೆನ್ನಿನ್ನಲ್ಲಿ ಹೆಸರು ಬರೆಯುತ್ತಿದ್ದೆ. 'ಏನ್ ಆಂಟಿ?' ಎನ್ನುತ್ತಾ ಹೊರಬಂದೆ. ಆಂಟಿ ನನ್ನನ್ನೇ ದುರುದುರು ನೋಡಿದರು. 'ಅಂಕಲ್ ಹೋಗ್ಬಿಟ್ರು ಗೊತ್ತಾಗ್ಲಿಲ್ವಾ ನಿಮ್ಗೆ?' ಅಂದ್ರು. ನನಗೆ ಒಮ್ಮೆಲೇ ಅರ್ಥವಾಗಲಿಲ್ಲ. ಈ ಆಂಟಿ ಮತ್ತು ಅಂಕಲ್ (actually ಅವರು ಅಜ್ಜ-ಅಜ್ಜಿ: ಅಂಕಲ್‍ಗೆ ಸುಮಾರು ಅರವತ್ತು ವರ್ಷ; ಆಂಟಿಗೆ ಐವತ್ತು ಛೇಂಜ್) ನಮ್ಮ ಮನೆಯ ಥರ್ಡ್ ಫ್ಲೋರಿನಲ್ಲಿರುವ ಒಂಡು ಡಬ್ಬಲ್ ಬೆಡ್‍ರೂಮ್ ಹೌಸಿನಲ್ಲಿ ಬಾಡಿಗೆಗಿದ್ದಾರೆ. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಮತ್ತು ಹೆಣ್ಣುಮಕ್ಕಳಿಗೆ ಮದುವೆಯಾಗಿದೆಯಾದ್ದರಿಂದ, ಅಂಕಲ್ ಮತ್ತೆ ಆಂಟಿ ಇಬ್ಬರೇ ಇಲ್ಲಿ ಇರುವುದು. ಅಂಕಲ್ ಆದ್ರೂ ತುಂಬಾ ಉತ್ಸಾಹದಿಂದಿರುವವರು. ಮನೆಗೆ Worldspace Radio, Tata Sky TV ಎಲ್ಲಾ ಹಾಕಿಸಿಕೊಂಡಿದ್ದಾರೆ. 'ರಿಟೈರ್ಡ್ ಲೈಫಪ್ಪ. ಅವಾಗ್ಲಂತೂ ಏನೂ ಮಾಡ್ಲಿಕ್ಕೆ ಆಗ್ಲಿಲ್ಲ; ಈಗ ಎಲ್ಲಾ ಇದೆ, ಎಂಜಾಯ್ ಮಾಡೋಣ ಅಂತಿದೀನಿ' ಅಂದಿದ್ರು ನನ್ಹತ್ರ ಒಮ್ಮೆ.

ಆಂಟಿ ನನ್ನ ಬಳಿ 'ಅಂಕಲ್ ಹೋಗಿದ್ದು ನಿಮಗೆ ಗೊತ್ತೇ ಇಲ್ವಾ, ಮೊನ್ನೇನೆ ಹೋಗ್ಬಿಟ್ರು' ಅಂದ್ರು. 'ಎಲ್ಲಿಗೆ?' ಅಂತ ಕೇಳ್ಲಿಕ್ಕೆ ಹೊರಟವನು ಬಾಯಿಗೆ ಬೀಗ ಹಾಕಿಕೊಂಡೆ. ನನಗೆ ಅವರು ಸತ್ತುಹೋಗಿರಬಹುದು ಎಂಬ ಕಲ್ಪನೆಯೇ ಬರಲಿಲ್ಲ. ಏಕೆಂದರೆ ಆಂಟಿಯ ಹಣೆಯ ಕುಂಕುಮ, ಕೊರಳ ಕರಿಮಣಿ ಸರ ಎಲ್ಲಾ ಹಾಗೇ ಇತ್ತು. ಅಲ್ಲದೇ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ನಾನು ಮತ್ತೆ ಮತ್ತೆ ಆಂಟಿಯನ್ನೇ ನೋಡಿದೆ. 'ಮೊನ್ನೆ ಬೆಳಗ್ಗೆ ಒಂಬತ್ತೂ ವರೆ ಹೊತ್ತಿಗೆ ಹೋಗ್ಬಿಟ್ರಪ್ಪ. ತುಂಬಾ ಜನಗಳು ಸೇರಿದ್ರು, ನಿಮಗೆ ನಿಜವಾಗ್ಯೂ ಗೊತ್ತೇ ಇಲ್ವಾ?' ಅಂದ್ರು. ಈಗ ನಾನು ಸ್ವಲ್ಪ convince ಆದೆ. 'ಓ, ಹೌದಾ ಆಂಟಿ... ಅಯ್ಯೋ, ನಂಗೆ ಗೊತ್ತೇ ಇಲ್ವಲ್ಲ... ಅರೆ.. ಹೆಂಗಾಯ್ತು..' ಅಂತೆಲ್ಲ ಹಲುಬಿದೆ.

ಈ ಬೆಂಗಳೂರು ಇದೆಂತಾ ಊರೋ ಏನೋ. ಕೆಳಗಡೆ ಮನೆಯಲ್ಲಿ ಒಂದು ಸಾವು ಸಂಭವಿಸಿದರೆ ಮೇಲ್ಗಡೆ ಮನೆಯಲ್ಲಿರುವವರಿಗೆ ಅದು ತಿಳಿಯುವುದು ಮೂರು ದಿನಗಳ ನಂತರ! ನಾನು ಬೆಳಗ್ಗೆ ಎಂಟೂ ಮೂಕ್ಕಾಲಿಗೆ ಆಫೀಸಿಗೆ ಹೊರಟುಬಿಡುತ್ತೇನೆ. ಮತ್ತೆ ವಾಪಸು ಬರುವಷ್ಟರಲ್ಲಿ ಎಂಟಾಗಿರುತ್ತದೆ. ಅಲ್ಲದೇ ನಾನು ಈಗ ಮೂರು ದಿನಗಳಿಂದ ಸ್ವಲ್ಪ ಬ್ಯುಸಿ ಇದ್ದುದರಿಂದ ರೂಮಿನಲ್ಲಿರುತ್ತಿದ್ದುದೇ ಕಮ್ಮಿ. ಹೀಗಾಗಿ ನನಗೆ ಅಂಕಲ್ ತೀರಿಕೊಂಡ ಸುದ್ದಿ ತಿಳಿದೇ ಇರಲಿಲ್ಲ. ಅಂಕಲ್‍ಗೆ ಸ್ವಲ್ಪ ಅರಾಮಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಮನೆಯ ಹೊರಗಡೆ ಮೊನ್ನೆ ತುಂಬಾ ಚಪ್ಪಲಿಗಳು ಕಂಡರೂ ಯಾರೋ ನೆಂಟರು ಬಂದಿರಬಹುದು ಅಂತಷ್ಟೇ ಅಂದುಕೊಂಡಿದ್ದೆ.

ಆಂಟಿ 'ಇವರೇನು ನಗುನಗ್ತಾ ಇದಾರಲ ಅಂದ್ಕೋಬೇಡಪ್ಪಾ.. ಮೂರು ದಿನಗಳಿಂದ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋಗಿದೆ' ಅಂದ್ರು. 'ಅಯ್ಯೋ ಹಾಗೇನಿಲ್ಲ ಬಿಡಿ ಆಂಟಿ.. ಸಮಾಧಾನ ಮಾಡ್ಕೋಬೇಕು.. ಏನ್ಮಾಡ್ಲಿಕ್ಕಾಗೊತ್ತೆ...' ಅಂತ ಏನೇನೋ ಅಂದೆ. ನನಗೆ ಇಂತಹ ಸಂದರ್ಭಗಳಲ್ಲಿ ಮಾತನಾಡುವುದಕ್ಕೆ ತೋಚುವುದೇ ಇಲ್ಲ. 'ಇನ್ನು ನೀವು ಒಬ್ರೇ ಇರ್ತೀರ ಆಂಟಿ?' ಅಂತ ಕೇಳಿದೆ. 'ನನ್ನ ಹೆಣ್ಣುಮಕ್ಳು ತಮ್ಮನೇಲೇ ಇರು ಬಾ ಅಂತ ಕರೀತಿದಾರೆ... ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ತಿಲ್ಲ..' ಅಂದರು. ಅಷ್ಟರಲ್ಲಿ ಅವರ ಹೆಣ್ಣುಮಗಳೊಬ್ಬರು ಮೇಲೆ ಬಂದು ಅವರನ್ನು ಕರೆದುಕೊಂಡು ಕೆಳಗೆ ಹೋದರು.

ಕಾರಂತರ 'ಅಳಿದ ಮೇಲೆ' ಪುಸ್ತಕ ನನ್ನ ಕೈಯಲ್ಲೇ ಇತ್ತು.


***

ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ. ಈ ಬ್ಲಾಗನ್ನು ನನ್ನ ಖಾಸ್‍ಬಾತ್‍ ಮಾಡಬಾರದು ಅನ್ನುವುದು ನನ್ನ ಉದ್ದೇಶವಾಗಿತ್ತು. ಆದರೆ ಇವತ್ತು ಬೆಳಗ್ಗೆ ಒಂದು ಎಸ್ಸೆಮ್ಮೆಸ್ ಬಂತು: ಸಂತೋಷ ಮತ್ತು ದುಃಖಗಳು ಇರುವುದೇ ಹಂಚಿಕೊಳ್ಳುವುದಕ್ಕಾಗಿ ಅಂತ. ಆಮೇಲೆ ಇದನ್ನೆಲ್ಲಾ ಟೈಪ್ ಮಾಡಿ upload ಮಾಡಿದೆ.

12 comments:

Anonymous said...

ಸುಶ್,
ಸಾವಿನ ಸುದ್ದಿ ಧುತ್ ಅಂತ ಗೊತ್ತಾದಾಗ ಕಕ್ಕಾಬಿಕ್ಕಿ ಆಗೋದೆ! ಸುಮ್ನೆ ಪೆಕರು ಪೆಕರಾಗಿ ಸಮಾಧಾನ ಮಾಡೋಕೆ try ಮಾಡಿ ಸೋತಿದೀನಿ ನಾನೂ...ಅಂತ ಸಂದರ್ಭದಲ್ಲಿ ಅವರಿಗೇ ಮಾತಾಡೋಕೆ ಬಿಟ್ಟು ನಾವು "ಹು"ಗುಡೋದು bestu!
ಜಯಂತ ಕಾಯ್ಕಿಣಿ ಹತ್ರ ಮತ್ತೆ "ಬೊಗಸೆಯಲ್ಲಿ ಮಳೆ" ಬರೆಸೋಕೆ ಪ್ರಯತ್ನಿಸ್ತೀನಿ ಅಂತ ಬೆಳಗೆರೆ ಯಾವತ್ತೋ ಬರೆದ ನೆನಪು, ಸದ್ಯಕ್ಕಂತೂ ಇಲ್ಲ ಹಾಗದರೆ! :(
ನಾನೂ ಹೊರಟಿದ್ದೇನೆ book festival ge, ಈ ವಾರಂತ್ಯ!

Sushrutha Dodderi said...

@ ಶ್ರೀನಿಧಿ...

'ಬೊಗಸೆಯಲ್ಲಿ ಮಳೆ' ಶುರುವಾಗೋ ಲಕ್ಷಣಗಳು ಇಲ್ಲ. ಯಾಕೇಂದ್ರೆ ನಾನು ಜಯಂತ್ ಹತ್ರ ಈ ಬಗ್ಗೆ ಕೇಳ್ದೆ. ಅವ್ರಂದ್ರು: 'ನನಗೆ ಆ ಪೇಪರ್ರೇ ಹಿಡ್ಸಲ್ಲ, ಅದ್ಕೇ ಬರೆಯಲ್ಲ' ಅಂತ. ಏನ್ಮಾಡೋದು, ಒಬ್ಬೊಬ್ರು ಒಂದೊಂದು ಥರ ಹೇಳ್ತಾರೆ..!

Anonymous said...

--------ಈ ಬ್ಲಾಗ್ ಶುರುಮಾಡುವಾಗ ಇಂತಹ personal ಆದ ವಿಷಯಗಳನ್ನು ಇಲ್ಲಿ ಬರೆಯಬಾರದು ಅಂತ ಅಂದುಕೊಂಡಿದ್ದೆ.----------

antha lakshantara prasara sankye iruva "hi bengaloor" nalle 'Ravi belagere' 2 page tanna personal vishaya barkotanante.....neen illi barkandre enagalla bidu :)

Sushrutha Dodderi said...

@ vikas

Thanx bro. ನೀನ್ ಹೇಳಿದ್ದೂ ಸರಿ ಹಂಗೆ ನೋಡಿದ್ರೆ.. :)

Anveshi said...

ಸುಶ್ರುತರೇ
ನೀವೇಕೆ ಮೌನವಾಗಿ ಗಾಳ ಹಾಕ್ತಾ ಇದೀರಾ....
ಇಷ್ಟೊಳ್ಳೆ ಬೊಗಳೆ ಕಣ್ಣಿಗೆ ಬೀಳಲೇ ಇಲ್ಲ ಯಾಕೆ ಅಂದ್ರೆ ಅದುವೇ... ಮೌನ ಗಾಳ!

Sushrutha Dodderi said...

@ ಅಸತ್ಯ ಅನ್ವೇಷಿ

ಅನ್ವೇಷಿಗಳಿಗೆ ಸುಸ್ವಾಗತ. ಗದ್ದಲ ಎಬ್ಬಿಸಲು ನೀವೆಲ್ಲ ಇರುವಾಗ ಒಂದಿಷ್ಟಾದರೂ ಮೌನ ಬೇಡವೇ? ಮೌನವಿದ್ದರೆ ಮಾತ್ರ ಸಂಗೀತ ಕೇಳಿಸುವುದು... ಹಾಗಂತ ನಂಬಿರುವವನು ನಾನು. ಧನ್ಯವಾದಗಳು.

Phantom said...

ಮೌನಗಾಳ,

ಹೆಸರು ಸೊಗಸಾಗಿದೆ. ಇದೇ ಮೊದಲ ಬಾರಿಗೆ ಇಲ್ಲಿಗೆ ಬಂದದ್ದು.

ನಿಮ್ಮ್ಮ ಮೌನಗಾಳವನ್ನು ಬೀಸುತ್ತಲೆ ಇರಿ, ಗಾಳದಲ್ಲಿ ಸಿಕ್ಕಿಕೊಳ್ಲಲು, ಮೀನುಗಳು ಹೇರಳವಾಗಿವೆ.

ಇಂತಿ
ಭೂತ

Sushrutha Dodderi said...

ಭೂತಕ್ಕೆ ಸುಸ್ವಾಗತ.

ಗಾಳಕ್ಕೆ ಸಿಕ್ಕ ಮೀನುಗಳನ್ನು ಹಂಚಿದರೆ ಸ್ವೀಕರಿಸುವವರಿರುವಾಗ ಗಾಳವೇನು, ಬಲೆ ಬೀಸಲೂ ಸಿದ್ದ. (ಹಾಗಂತ, ನನಗೆ ಮೀನಿನ ಬಗ್ಗೆ ಕರುಣೆಯಿದೆ ಮತ್ತೆ!)

ಧನ್ಯವಾದಗಳು.

Shiv said...

ಸುಶ್ರುತ,

ಮೌನದ ಗಾಳಕ್ಕೆ ಸಿಕ್ಕ ಮೇಲೆ ಮಾತುಗಳು ಹೊರಬರ್ತಾನೇ ಇಲ್ಲ..ಮನಕ್ಕೆ ಎಲ್ಲೋ ಮುಟ್ಟೋ ಹಾಗೇ ಬರೀತೀದ್ದಿರಾ..ಹಿಂಗೆ ಗಾಳ ಹಾಕ್ತಾ ಇರೀ..

ಈಡೀ ಜೀವನದ ಪ್ರಮುಖ ಘಟನೆಗಳನ್ನಾ ಈ ಒಂದು ಲೇಖನದ ಮೂಲಕ ಹೇಳಿದೀರಾ..ಸೊಗಸಾಗಿದೆ..ಹೌದಲ್ವಾ..ಅಕ್ಕಪಕ್ಕದಲ್ಲಿ ಎನೂ ಅಗ್ತಾ ಇದೆ ಅನ್ನೋದೇ ತಿಳಿಯೊಲ್ಲ..ಅದು ಹೋಗಲಿ ಕೆಲವೊಮ್ಮೆ ತಮ್ಮದೇ ಮನೆಯಲ್ಲಿ ತಾನೇ ಅಗುಂತಕ ಆಗೋ ಸನ್ನಿವೇಶಗಳೂ ಉಂಟು

Sushrutha Dodderi said...

@ Vibes

ಸುಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ, ಹೊಗಳಿಕೆಗೆ ಅನಂತಾನಂತ ಧನ್ಯವಾದಗಳು.

ನಿಮ್ಮ 'ಮನೆ'ಗೆ ಬರೋಣ ಅಂದ್ರೆ profile not available ಅಂತ ಬರ್ತಾ ಇದೆ. ದಯವಿಟ್ಟು ಪರಿಶೀಲಿಸಿ.

talegari (ತಾಳೆಗರಿ) said...

ಸುಶ್ರುತ,
ಜೇವನದಲ್ಲಿ ಯಾವುದು personal ಯಾವುದು general ಅನ್ನೋ ಸಮಸ್ಯೆ ಇದ್ದೇ ಇದೆ.ಎಲ್ಲಾ ಅನುಭವಗಳು ಒಟ್ಟಾರೆಯಾಗಿ ನಮ್ಮನ ರೂಪಿಸ್ತವೆ.ನಿಮ್ಮ ಬರವಣಿಗೆಯಲ್ಲಿ ' ಬೊಗಸೆಯಲ್ಲಿ ಜೇವನ ' ಹಿಡಿದಿಡೋ ಕಲೆ ಇದೆ.ಹಿಂಗೇ ಸಾಗಲಿ ನಿಮ್ಮ ಬ್ಲಾಗ್ ಬರವಣಿಗೆ.

Sushrutha Dodderi said...

@ srikanth.k.s

ಎಲ್ಲಾ ಅನುಭವಗಳು ಒಟ್ಟಾರೆಯಾಗಿ ನಮ್ಮನ ರೂಪಿಸ್ತವೆ ಎಂಬ ನಿಮ್ಮ ಮಾತು ಅಕ್ಷರಶಃ ನಿಜ. ಅದಕ್ಕೇನೇನೋ ನಾನು ಇಂತಹ personal(?) ಆದಂತಹ ವಿಷಯವನ್ನೂ ಬರೆಯಬಹುದು ಅಂತ ತೀರ್ಮಾನಿಸಿದ್ದು.

ಹೊಗಳಿಕೆಗೆ ಧನ್ಯವಾದಗಳು. :)