Monday, November 27, 2006

ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ

'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ 'ದೀಪದ ಮಲ್ಲಿ'ಯ ಗೊಂಬೆ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ: "ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ; ಆ ಸ್ಮಿತದಲ್ಲಿ ಎಲ್ಲ ಇದೆ- ಆ ದೀಪ, ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ. ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?" ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ: "ಶ್...! ನಾನು ಹ್ಯಾಂಗ ಸುಮ್ಮನಿದ್ದೀನಿ, ಹಾಗೆ ಸ್ವಲ್ಪ ಸುಮ್ಮನಿರು." ಸುಮ್ಮನಿದ್ದಾಗ ಕಾಣುವಂಥಾದ್ದು- ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆ ದೀಪಶಿಖೆ!

-ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಈ ಗದ್ಯಸಾಲುಗಳನ್ನು ಓದಿ ಹೇಳಿದವರು ಜಯಂತ ಕಾಯ್ಕಿಣಿ- ಭಾನುವಾರ, ೨೬.೧೧.೨೦೦೬ ರಂದು 'ಯವನಿಕಾ'ದಲ್ಲಿ ನಡೆದ ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮ 'ನಾದಲೀಲೆ'ಯಲ್ಲಿ. ಹಿಂದೊಮ್ಮೆ ಅವರು ಇದೇ ಸಾಲುಗಳನ್ನು ತಮ್ಮ 'ಭಾವನಾ' ಮಾಸಿಕದ ಸಂಪಾದಕೀಯದಲ್ಲಿ ಬರೆದಿದ್ದರು.


'ದೇಶಕಾಲ' (ವಿವೇಕ ಶಾನಭಾಗ್ ಸಂಪಾದಕತ್ವದ ಸಾಹಿತ್ಯಿಕ ತ್ರೈಮಾಸಿಕ) ಮತ್ತು 'ಅಷ್ಟದಿಕ್ಕು' (ಅಶೋಕ ಹೆಗಡೆ, ಗೋಪಲಕೃಷ್ಣ ಪೈ ಮತ್ತು ಎಸ್. ದಿವಾಕರ್ ನೇತೃತ್ವದ ಪ್ರಕಾಶನ) -ಸಂಯೋಜಿಸಿದ್ದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂತು. ಪಂಡಿತ್ ಪರಮೇಶ್ವರ ಹೆಗಡೆ, ಯು.ಆರ್. ಅನಂತಮೂರ್ತಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸಿ.ಆರ್. ಸಿಂಹ, ಸಿದ್ದಲಿಂಗಯ್ಯ, ಬಿ. ಜಯಶ್ರೀ, ಕಿ.ರಂ. ನಾಗರಾಜ, ರವಿ ಬೆಳಗೆರೆ, ಪ್ರತಿಭಾ ನಂದಕುಮಾರ್, ಪವಿತ್ರಾ ಲೋಕೇಶ್, ಕೆ.ಎಚ್. ಶ್ರೀನಿವಾಸ, ರಘುನಂದನ, ಎಚ್.ಜಿ. ಸೋಮಶೇಖರ್ ರಾವ್, ಶ್ರೀನಿವಾಸ್ ಜಿ. ಕಪ್ಪಣ್ಣ, ವಿಶ್ವೇಶ್ವರ ಭಟ್, ವಿಜಯ ಭಾರದ್ವಾಜ್, ಚಿರಂಜೀವಿ ಸಿಂಗ್, ಟಿ.ಎನ್. ಸೀತಾರಾಂ, ರೇಖಾ ಹೆಬ್ಬಾರ್, ಎಸ್.ಜಿ. ವಾಸುದೇವ್, ಶ್ರೀಕಾಂತ -ಹೀಗೆ ವಿವಿಧ ಕ್ಷೇತ್ರಗಳ ಇಪ್ಪತ್ತಕ್ಕೂ ಹೆಚ್ಚು ಗಣ್ಯರಿಂದ ಬೇಂದ್ರೆ ಕಾವ್ಯಗಳ ವಾಚನವಾಯಿತು. ಬೇಂದ್ರೆಯವರ ದ್ವನಿಯಲ್ಲಿನ ಅವರ ಕವನ ವಾಚನಗಳ ಅಪರೂಪದ ಧ್ವನಿಮುದ್ರಣವನ್ನು ಮಧ್ಯೆ ಮಧ್ಯೆ ಕೇಳಿಸಿದರು. ಬೇಂದ್ರೆಯವರ ಅಪರೂಪದ ಛಾಯಾಚಿತ್ರ, ರೇಖಾಚಿತ್ರಗಳ ಪ್ರದರ್ಶನವಿತ್ತು. ಕೊನೆಯಲ್ಲಿ ಗಿರೀಶ್ ಕಾರ್ನಾಡ್ ಬೇಂದ್ರೆಯವರ ಕುರಿತು ಚಿತ್ರಿಸಿದ ಸಾಕ್ಷ್ಯಚಿತ್ರವೊಂದರ ಪ್ರದರ್ಶನವೂ ಇತ್ತು.

ಭಾನುವಾರ ಬೆಳಗ್ಗೆ ೯.೩೦ಕ್ಕೆ 'ಯವನಿಕಾ' ಪ್ರೇಕ್ಷಕರಿಂದ ತುಂಬಿಹೋಗಿತ್ತು. ಬಹುಶಃ ಅಷ್ಟೊಂದು ಜನ ಸೇರುತ್ತಾರೆ ಎನ್ನುವ ಕಲ್ಪನೆ ಸಂಘಟಕರಿಗೆ ಇರಲಿಲ್ಲವೇನೋ? ಬಂದಿದ್ದ ಅನೇಕ ಸಾಹಿತಿಗಳಿಗೇ ಕುಳಿತುಕೊಳ್ಳಲಿಕ್ಕೆ ಜಾಗ ಸಿಗಲಿಲ್ಲ. ಬಂದವರೆಲ್ಲರಿಗೂ ಬೆಳಗ್ಗೆ ತಿಂಡಿ-ಕಾಫಿ ಕೊಟ್ಟು, ಕಾವ್ಯ ಕೇಳಿಸಿ, ವಾಪಸು ಹೋಗುವಾಗ ಊಟವನ್ನೂ ಕೊಟ್ಟು ಕಳುಹಿಸಿದರು. 'ಹೀಗೆಲ್ಲ ಮಾಡುತ್ತಿದ್ದೀವಿ ಬನ್ನಿ' ಅಂತ ಕರೆದು ಇನ್ನೂ ಸ್ವಲ್ಪ ಪ್ರಚಾರವನ್ನೂ ಕೊಟ್ಟಿದ್ದರೆ ಬಹುಶಃ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಜನ ತುಂಬಿಕೊಳ್ಳುತ್ತಿದ್ದರೇನೋ? ಕನ್ನಡದ ಕಾವ್ಯಾಸಕ್ತರಿಗೇನು ಕೊರತೆಯೇ?

***

ವಾಪಸು ಬರುವಾಗ ನನಗೆ ಹಾಗೇ ಅನ್ನಿಸಿತು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಮ್ಮಂತಹ ಈಗಿನ ಕಾಲದವರಿಗೆ ಬೇಂದ್ರೆ ಕಾವ್ಯದ ಪರಿಚಯ ಅಷ್ಟಾಗಿ ಇಲ್ಲ. ಏಕೆಂದರೆ ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಉದಾಹರಣೆಗೆ, ಅವರ 'ನಾಕುತಂತಿ' ಸಂಕಲನದ 'ನಾಕುತಂತಿ' ಕವನದಲ್ಲಿ ಈ ಸ್ಟಾಂಜ಼ಾ ಬರುತ್ತದೆ: 'ನಾನು ನೀನು ಆನು ತಾನು ನಾಕೇ ನಾಕು ತಂತಿ' -ಈ ಸಾಲುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಗಣಿತ (ಸಂಖ್ಯಾಶಾಸ್ತ್ರ)ದ ಮೇಲೆ ಹಿಡಿತವಿರಬೇಕು ಮತ್ತು ಸಂಗೀತ ತಿಳಿದಿರಬೇಕು. ಅದಿಲ್ಲದಿದ್ದರೆ ಅರ್ಥವಾಗುವುದೇ ಇಲ್ಲ. ಸಂಗೀತ ಕಲಿತು, ಗಣಿತದಲ್ಲಿ ಪಾಂಡಿತ್ಯ ಗಳಿಸಿ, ಆಮೇಲೆ ಈ ಕವಿತೆ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ನಮಗಿಲ್ಲ. ಅಷ್ಟೊಂದು ಕಷ್ಟವಲ್ಲದ ಕವಿತೆಗಳನ್ನೂ ಬೇಂದ್ರೆ ಬರೆದಿದ್ದಾರೆ. ಅವುಗಳಲ್ಲಿ ಅನೇಕ ಕವಿತೆಗಳು ಭಾವಗೀತೆಗಳಾಗಿ ಜನಪ್ರಿಯವಾಗಿವೆ. ಆದರೆ ಭಾವಗೀತೆಗಳಾಗದ ಅನೇಕ ಅದ್ಭುತ ಕವನಗಳು ಇವೆಯಲ್ಲ, ಅವನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಬಲ್ಲವರಿಂದ ಓದಿಸಿ, ಅದರ ಅರ್ಥ - ಬರೆದ ಸಂದರ್ಭಗಳನ್ನು ಹೇಳಿಸಿದರೆ ನಮ್ಮಂತಹ ಯುವ ಪೀಳಿಗೆಗೆ ಅನುಕೂಲವಾಗುತ್ತದೆ. ಕನ್ನಡ ಕಾವ್ಯಪ್ರೇಮಿಗಳ ಸಂಖ್ಯೆಯೂ ಹೆಚ್ಚುತ್ತದೆ.

ಇತ್ತೀಚೆಗೊಂದು ದಿನ ನನ್ನ ನೆಂಟರ ಮನೆಗೆ ಹೋಗಿದ್ದಾಗ ಕನ್ನಡ ಟೀವಿ ಚಾನೆಲ್ಲೊಂದರಲ್ಲಿ ಕಾರ್ಯಕ್ರಮ ಬರುತ್ತಿತ್ತು. ಟೀವಿ ಸಂದರ್ಶಕಿ ಮೈಕು ಹಿಡಿದುಕೊಂಡು ಸಾರ್ವಜನಿಕರನ್ನು ಮಾತಾಡಿಸಿ, ಒಂದೆರಡು ಪ್ರಶ್ನೆ ಕೇಳಿ, ಸರಿಯುತ್ತರ ಕೊಟ್ಟವರಿಗೆ ಸೋಪಿನ ಬಾಕ್ಸನ್ನೋ, ಊದುಬತ್ತಿ ಬಂಡಲನ್ನೋ ಕೊಡುವ ಕಾರ್ಯಕ್ರಮ ಅದು. ಅಂದು ಆ ಸಂದರ್ಶಕಿ ಬೇಂದ್ರೆಯವರ ರೇಖಾಚಿತ್ರವೊಂದನ್ನು ಜನರಿಗೆ ತೋರಿಸಿ 'ಇವರು ಯಾರು ಗುರುತಿಸಿ?' ಅಂತ ಕೇಳುತ್ತಿದ್ದಳು. ಯಾರೂ ಸರಿಯುತ್ತರ ಕೊಡಲಿಲ್ಲ. ಅನೇಕರು 'ಗೊತ್ತಿಲ್ಲ' ಅಂದರು. ಸುಮಾರು ಹದಿನೈದಿಪ್ಪತ್ತು ಜನರನ್ನು ಸಂದರ್ಶಿಸಿದರೂ ಸರಿಯುತ್ತರ ಸಿಗದಿದ್ದುದು ನೋಡಿ ನನಗೆ ಆಶ್ಚರ್ಯವಾಯಿತು. ಕೊನೆಗೆ ಸಂದರ್ಶಕಿಯೇ 'ಅದು ದ.ರಾ. ಬೇಂದ್ರೆ' ಎಂದು ಉತ್ತರವನ್ನು ಹೇಳಿದಳು. ನನಗೆ ಮತ್ತೂ ಆಶ್ಚರ್ಯವಾದದ್ದೆಂದರೆ, ಅವಳು ಉತ್ತರ ಹೇಳುತ್ತಿದ್ದಂತೆಯೇ ನನ್ನ ಜೊತೆ ಟೀವಿ ನೋಡುತ್ತಿದ್ದವರೂ 'ಓ, ಬೇಂದ್ರೆನಾ?' ಅಂದಿದ್ದು! 'ನಿಮಗ್ಯಾರಿಗೂ ಗೊತ್ತೇ ಇರಲಿಲ್ವಾ?' ಅಂದೆ. 'ಇಲ್ಲ!' ಅಂದರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಎಲ್ಲ ಕನ್ನಡ ಭಾಷಾ ಪಠ್ಯದಲ್ಲೂ 'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು' ಎಂಬ ಪಟ್ಟಿಯಲ್ಲಿ ಬೇಂದ್ರೆಯವರ ಇದೇ ರೇಖಾಚಿತ್ರ್ರ ಇದೆ. (ನಾನು ಓದಬೇಕಾದರಂತೂ ಇತ್ತು; ಈಗ ಇದೆಯೋ ಇಲ್ಲವೋ ಗೊತ್ತಿಲ್ಲ). ಅಂಥಾದ್ದರಲ್ಲಿ ಗುರುತಿಸಲಾಗಲಿಲ್ಲ ಎಂದರೆ ಏನನ್ನೋಣ?

'ನಾದಲೀಲೆ'ಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದು, ಅವು ಟೀವಿ-ರೇಡಿಯೋಗಳಲ್ಲಿ ಪ್ರಸಾರವಾಗುವಂತಾದರೆ ಚೆನ್ನಾಗಿರುತ್ತಿತ್ತಲ್ಲವೇ?

7 comments:

Sandeepa said...

ಒಳ್ಳೆಯ ವರದಿ.
ನಾನು ಊರಿನಲ್ಲಿರಲಿಲ್ಲವಾದ್ದರಿಂದ ಬರಲಾಗಲಿಲ್ಲ.
ಆದರೂ ಸಖೀಗೀತದಲ್ಲಿ ಮುಳುಗೆದ್ದು ಬಂದ ಸಮಾಧಾನ!

ಊರಿಗೆಹೋಗುವಾಗ ಬೇಂದ್ರೆ, ನಾರಣಪ್ಪರೂ ನನ್ನ ಜೊತೆಗಿದ್ದರು:)

ಹೀಗೇ ಬರೆಯುತ್ತಿರು.

Sushrutha Dodderi said...

@ alpazna

ಹಾಂ, ತಪ್ಪಿಸಿಕೊಂಡವರಿಗಂತೂ great loss. ತುಂಬಾ ಒಳ್ಳೇ ಪ್ರೋಗ್ರಾಮ್. ಇರ್ಲಿ, ಮತ್ತೆ ಎಲ್ಲಾದ್ರೂ ನಡೆದ್ರೆ ಬರುವಂತೆ. ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ said...

ಸುಶ್,
ಯಶಸ್ವಿಯಗಿ ಹೊಟ್ಟೆ ಉರಿಸಿದ್ದೀಯಾ! ಆದರೆ ಆ ಸಂದರ್ಭದಲ್ಲಿ ನಾನು ಮತ್ತೊಂದು ದೊಡ್ಡ ಸಾಹಿತ್ಯ ಜಾತ್ರೆ, ಆಳ್ವಾಸ್ ನುಡಿಸಿರಿಯಲ್ಲಿ ಇದ್ದೆನಾದ್ದರಿಂದ ಹೆಚ್ಚಿನ ಬೇಸರವಾಗಲಿಲ್ಲ!

Sushrutha Dodderi said...

@ ಶ್ರೀನಿಧಿ..

ಹೂಂ ಮತ್ತೆ! ನೀನು ಅಲ್ಲಿಂದ ವರದಿ-ಗಿರದಿ ಮಾಡ್ಕೋಂತ, ಮೆಸೇಜ್-ಗಿಸೇಜ್ ಕಳಿಸ್ಕೋಂತ ನನ್ನ ಹೊಟ್ಟೆ ಉರ್ಸಿರ್ಲಿಲ್ವಾ? ಅಲ್ಲಿಗೆ ಎಲ್ಲಾ ಸರಿಯಾಯ್ತು. ಲೆಕ್ಕ ಚುಪ್ತಾ!

talegari (ತಾಳೆಗರಿ) said...

ನಿಮ್ಮ ಬ್ಲಾಗ್ ಓದಿ ತುಂಬಾ ಸಂತೋಷ ಆಯ್ತು.ನಾನು ಓದುತ್ತಿರುವ ಮೊದಲನೇ ಶುದ್ಧ ಕನ್ನಡ ಬ್ಲಾಗು.ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತಿರುವ ನಮ್ಮ ಯುವ ಜನಾಂಗದ ಗತಿ ಏನು ?

Sushrutha Dodderi said...

@ srikanth.k.s

ನಿಮ್ಮ ಸಂತೋಷವೇ ನಮ್ಮ ಸಂತೋಷ! ಹಾಗೇನಿಲ್ಲ, ಇನ್ನೂ ಬಹಳಷ್ಟು 'ಶುದ್ಧ ಕನ್ನಡದ ಬ್ಲಾಗು'ಗಳಿವೆ ಅಂತರ್ಜಾಲದಲ್ಲಿ. ನನ್ನ ಪ್ರಕಾರ ಕಂಪ್ಯೂಟರಿನಲ್ಲಿ ಕನ್ನಡ ಎಂಬುದು ನಿಜಕ್ಕೂ ದೊಡ್ಡ ಕ್ರಾಂತಿ ಮತ್ತು ಕನ್ನಡ 'ಮುಂದು'ವರಿಯಬೇಕಾದರೆ ಇದು ಸಹಕಾರಿಯಾಗಲಿದೆ: ನಮ್ಮ-ನಿಮ್ಮಂತವರ ಬ್ಲಾಗು / ಕನ್ನಡ ವೆಬ್‍ಸೈಟುಗಳಿಂದ.

Anonymous said...

ತುಂಬ ಚೆನ್ನಾಗಿದೆ.
ದ.ರಾ.ಬೇಂದ್ರೆಯವರ ಕವಿತೆಗಳ ಅದರಲ್ಲೂ "ಸಖಿಗೀತ"ದಲ್ಲಿ ಪುನರಾವರ್ತನೆಗೊಳ್ಳುವ
" ಸಖಿ, ನಿನ್ನ ಸಖ್ಯದ ಆಖ್ಯಾನ ಬಲು ಮಧುರ,
ವ್ಯಾಖ್ಯಾನದೊಡಗೂಡಿ ವಿವರಿಸಲೇ" ಎಂಬಂತಹ ಸಾಲುಗಳು .....
ವರ್ಣಿಸಲಸದಳ.
ಕಾರ್ಯಕ್ರಮದಲ್ಲಿ ಗೈರುಹಾಜರಿದ್ದ ನಮಗೆ ಒಳ್ಳೆಯ ವರದಿ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
-ಶಾಂತಲಾ ಭಂಡಿ.