Wednesday, November 29, 2006

ಕೀರ್ವಾಣಿಯ ಮದುವೆ ಸುದ್ದಿ ಕೇಳಿ...

ನಿನ್ನೆ ಮನೆಗೆ ಫೋನ್ ಮಾಡಿದ್ದಾಗ ಅಮ್ಮ 'ಅವಳ' ಮದುವೆ ಫಿಕ್ಸಾಗಿರುವ ಸುದ್ದಿ ಹೇಳಿದಳು. ತಕ್ಷಣ ನನ್ನ ನೆನಪಿನಾಳದಿಂದ ಹರಿದು ಬಂತಲ್ಲ ನೀರು..?

ನಾನು ನನ್ನ ಹೈಸ್ಕೂಲು ಓದಿದ್ದು ನಮ್ಮೂರಿನಿಂದ ನಾಲ್ಕು ಮೈಲು ದೂರದಲ್ಲಿರುವ ನಿಸರಾಣಿಯ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯಲ್ಲಿ. ಏಳನೇ ತರಗತಿ ಮುಗಿದದ್ದೇ ನನ್ನನ್ನು ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸಬೇಕು ಎಂದು ಅನೇಕರು ಸಲಹೆಯಿತ್ತರಾದರೂ ನನ್ನ ಅಪ್ಪ ಅದಕ್ಕೆ ಮನಸು ಮಾಡಲಿಲ್ಲ. 'ಓದೋವ್ರಿಗೆ ಎಲ್ಲಾದರೆ ಏನು? ನಿಸರಾಣಿ ಶಾಲೆಯಲ್ಲಿ ತುಂಬಾ ಚೆನ್ನಾಗಿ ಪಾಠ ನಡೆಯುತ್ತೆ. ಮೇಷ್ಟ್ರುಗಳೆಲ್ಲ ನಮ್ಮವರೇ. ನಾವೆಲ್ಲ ಹಿಂದೆ ಓದಿದ್ದು ಅಲ್ಲೇ ಅಲ್ವೇನು? ಅಲ್ಲಿ ಓದಿದ ಎಷ್ಟೊಂದು ಜನ ಈಗ ಎಲ್ಲೆಲ್ಲೋ ದೊಡ್ಡ ದೊಡ್ಡ ಕೆಲಸದಲ್ಲಿ ಇಲ್ವೇನು?' ಅಂತೆಲ್ಲಾ ಮಾತುಕತೆಯಾಗಿ ನಾನು ನಿಸರಾಣಿ ಶಾಲೆಗೇ ಸೇರುವುದು ಅಂತ ಆಯ್ತು. ಇಂಗ್ಲೀಷ್ ಮೀಡಿಯಂ ಶಾಲೆ ಎಂದರೆ ಸಾಗರದಲ್ಲಿತ್ತು. ದಿನವೂ ಓಡಾಡುವುದು ತೊಂದರೆ. ಅಲ್ಲದೆ ನಾನು ಆಗ ತುಂಬಾ ಚಿಕ್ಕವನಿದ್ದೆ ಬೇರೆಯವರಿಗೆ compare ಮಾಡಿದ್ರೆ. ಹೀಗಾಗಿ, 'ಇಂವ ಸಾಗರದ ಭಯಂಕರ ಟ್ರಾಫಿಕ್ಕಿನ (!) ರಸ್ತೆಯಲ್ಲಿ ಓಡಾಡಿ ಜಯಿಸಿಕೊಂಡು ಬರುವುದು ಸುಳ್ಳೇ ಸರಿ, ಬ್ಯಾಡೇ ಬ್ಯಾಡ ಸಾಗರ, ಇಲ್ಲೇ ನಿಸರಾಣಿಗೆ ಹೋಗಲಿ ಸಾಕು' ಅಂತ ಅಮ್ಮ ಅಜ್ಜಿಯರೂ ಸೇರಿಸಿದರು. ಅಲ್ಲಿಗೆ ಸರಿಯಾಯಿತು. ನನಗಂತೂ ಆಗ ಏನೆಂದರೆ ಏನೂ ತಿಳಿಯುತ್ತಿರಲಿಲ್ಲ. ಸಾಗರವಾದರೆ ಸಾಗರ, ನಿಸರಾಣಿಯಾದರೆ ನಿಸರಾಣಿ ಅಂತ ಇದ್ದವನು ನಾನು.

ಸರಿ, ನನ್ನನ್ನು ನಿಸರಾಣಿಯ ಶಾಲೆಗೆ ಸೇರಿಸಿದರು. ನಾನು ದಿನವೂ ನಾಲ್ಕು ಮೈಲು ಸೈಕಲ್ಲು ಹೊಡೆಯತೊಡಗಿದೆ. ಏರಲ್ಲೂ ಇಳಿಯದೇ ತುಳಿಯುತ್ತಿದ್ದೆ. ನನ್ನ ಜೊತೆ ಅಣ್ಣಪ್ಪ, ದುರ್ಗಪ್ಪರೇ ಮೊದಲಾದ ಸಹೃದಯ ಗೆಳೆಯರು ಸಿಕ್ಕಿದರು. ಈ ಲೋಕಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದ ಮಾತುಗಳನ್ನು ಲೋಕಾಭಿರಾಮವಾಗಿ ಆಡುತ್ತಾ ಸಾಗುತ್ತಿದ್ದರೆ ಶಾಲೆ ಬಂದದ್ದೇ ಗೊತ್ತಾಗುತ್ತಿರಲಿಲ್ಲ.

ನಿಸರಾಣಿ ಶಾಲೆ ಹಿಂದೊಂದು ಕಾಲದಲ್ಲಿ ತುಂಬಾ ಚೆನ್ನಾಗಿದ್ದ ಶಾಲೆ. ಇಡೀ ಸೊರಬ ತಾಲೂಕಿಗೆ, ಅಷ್ಟೇ ಏಕೆ, ಜಿಲ್ಲೆಯಲ್ಲೇ ಹೆಸರು ಮಾಡಿದ್ದ ಶಾಲೆ. ನಿಸರಾಣಿ ಹೈಸ್ಕೂಲಿನಲ್ಲಿ ಎಸ್‍ಎಸ್‍ಎಲ್‍ಸಿ ಮಾಡಿಕೊಂಡು ಬಂದವರಿಗೆ ಯಾವ ಕಾಲೇಜಿನವರೂ ಸೀಟಿಲ್ಲ ಅನ್ನುತ್ತಿರಲಿಲ್ಲ. ಅಲ್ಲಿಯ ವಿಜ್ಞಾನ ಕೊಠಡಿಯಲ್ಲಿ ಇರುವ ಉಪಕರಣಗಳು ಮತ್ಯಾವುದೇ ಉತ್ತಮ ಶಾಲೆಗೆ ಹೋಲಿಸಬಹುದಾದಷ್ಟಿದ್ದವು. ಆಗ ಶಿಕ್ಷಕವರ್ಗವೂ ಹಾಗೆಯೇ ಇತ್ತು. ನನ್ನ ಅಪ್ಪ, ಅತ್ತೆಯರೆಲ್ಲರೂ ಓದಿದ್ದು ಅದೇ ಶಾಲೆಯಲ್ಲಿ. ನನ್ನ ಅಜ್ಜ ಶಾಲೆಯ ಪಕ್ಕ ಒಂದು ಕ್ಯಾಂಟೀನೂ ಇಟ್ಟಿದ್ದನಂತೆ.

ಆದರೆ ನಾನು ಸೇರುವ ಹೊತ್ತಿಗೆ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. Retirement ಸಮೀಪಿಸಿದ್ದ ಶಿಕ್ಷಕವರ್ಗ. ಯಾವ ಮೇಷ್ಟ್ರಿಗೂ ಪಾಟ ಮಾಡಬೇಕು ಅನ್ನುವ ಹುಮ್ಮಸ್ಸೇ ಇರಲಿಲ್ಲ. ಕೆಲ ಹಳೆಯ ಶಿಕ್ಷಕರು ಮತ್ತು ಆಗ ತಾನೇ ಸೇರಿದ್ದ ಒಂದಿಬ್ಬರು ಯುವ ಶಿಕ್ಷಕರನ್ನು ಬಿಟ್ಟರೆ ಉಳಿದವರೆಲ್ಲ ಕಾಟಾಚಾರಕ್ಕೆ ಶಾಲೆಗೆ ಬರುತ್ತಿದ್ದವರೇ. ನಮ್ಮ ಕನ್ನಡ ಪಂಡಿತರು ಕ್ಲಾಸಿಗೆ ಬಂದು ನಮಗೆ ಓದಿಕೊಳ್ಳಲು ಹೇಳಿ ತಾವು ಕಾಫಿಪುಡಿ ಲೆಕ್ಕ ಬರೆಯುತ್ತಾ ಕುಳಿತುಬಿಡುತ್ತಿದ್ದರು. ಹೆಡ್‍ಮಾಸ್ತರಂತೂ ಬಾಯಿ ತುಂಬಾ ಜರದಾ ತುಂಬಿಕೊಂಡು ಬರುತ್ತಿದ್ದರು. 'ಕೆಲವೊಂದು ದಿನ ಕುಡಿದುಕೊಂಡೇ ಬರ್ತಾರೆ' ಎಂದು ಕೆಲ ಗೆಳೆಯರು ಮೂದಲಿಸುತ್ತಿದ್ದರಾದರೂ ನನಗೆ ಆಗ ಅಷ್ಟೆಲ್ಲ ಮೂಗು ಚುರುಕಿರಲಿಲ್ಲ, ಮೇಲಾಗಿ ತಿಳಿಯುತ್ತಲೂ ಇರಲಿಲ್ಲ.

ಶಾಲೆಯಲ್ಲಿ ಹೆಣ್ಣು ಮಕ್ಕಳು ಬಲಗಡೆಯ ಬೆಂಚುಗಳಲ್ಲಿ, ಗಂಡುಮಕ್ಕಳು ಎಡಗಡೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಧ್ಯದಲ್ಲಿ ಓಡಾಡಲಿಕ್ಕೆ ದಾರಿ. ಹೆಣ್ಣು ಮಕ್ಕಳೂ ಗಂಡು ಮಕ್ಕಳೂ ಪರಸ್ಪರ ಮಾತನಾಡುವುದನ್ನು ನಿಷೇಧಿಸಲಾಗಿತ್ತು. ನಾವು ಗೆಳೆಯರು ಕಾರಿಡಾರಿನಲ್ಲಿ ಗುಂಪಾಗಿ ಮಾತನಾಡುತ್ತ ನಿಂತಿದ್ದಾಗ ಹುಡುಗಿಯರು ಬಂದರೆ 'ಹುಡುಗ್ರು ದಾರಿ ಬಿಡ್ಬೇಕು!' ಅಂತ ಹೇಳುತ್ತಿದ್ದರು. ನಾವು ಆ 'ಸಶರೀರವಾಣಿ'ಗೆ ಹೆದರಿ ತಕ್ಷಣ ಪಕ್ಕಕ್ಕೆ, ಅಂಗಳಕ್ಕೆ ಇಳಿದುಬಿಡುತ್ತಿದ್ದೆವು. ಯಾರಾದರೂ ಹುಡುಗರು ಕೀಟಲೆ ಮಾಡಿದರೆ ಹುಡುಗಿಯರು ಹೋಗಿ class teacherಗೆ complaint ಮಾಡುತ್ತಿದ್ದರು. ಹೀಗಾಗಿ ಹುಡುಗಿಯರೆಡೆಗೆ ನಮಗೆ ಒಂದು ತರಹದ ಭಯಮಿಶ್ರಿತ ದ್ವೇಷವಿತ್ತು.

ಆದರೆ ದ್ವೇಷವಿದ್ದಲ್ಲೇ ಪ್ರೀತಿ ಮೊಳೆಯುವ ಸಂಭವಗಳು ಜಾಸ್ತಿ. ನಮಗೆ ಅಷ್ಟೆಲ್ಲಾ restrictions ಇದ್ದರೂ ಹುಡುಗಿಯರೆಡೆಗೆ ಒಂದು 'ಹುಡುಗಸಹಜ'ವಾದ ಕುತೂಹಲ ಇದ್ದೇ ಇತ್ತು. ಸಿನಿಮಾ-ಗಿನಿಮಾ ನೋಡಿ ಅಷ್ಟಿಷ್ಟು ಪ್ರೀತಿ-ಪ್ರೇಮಗಳ ಬಗ್ಗೆ ಅರಿತಿದ್ದ ನಾವು, ನಮ್ಮ ನಮ್ಮ ಹೀರೋಯಿನ್ನುಗಳಿಗಾಗಿ ತಲಾಷೆ ನಡೆಸಿದ್ದೆವು. ಚಂದದ ಹುಡುಗಿಯನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನು ತಲೆಯಲ್ಲಿಟ್ಟುಕೊಳ್ಳದೇ ಮಾಸಿಕ ಟೆಸ್ಟುಗಳಲ್ಲಿ ಫೇಲಾಗುವ ಕಲೆಯನ್ನು ಅದಾಗಲೇ ಸಿದ್ಧಿಸಿಕೊಂಡಿದ್ದೆವು. 'ನನಗೆ ಆ ಹುಡುಗಿ, ನಿನಗೆ ಈ ಹುಡುಗಿ' ಎಂಬಂತೆ ನಮ್ಮನಮ್ಮಲ್ಲೇ ಅಲಿಖಿತ ಒಪ್ಪಂದ ಮಾಡಿಕೊಂಡಿದ್ದ ನಾವು, ಈ ವಿಷಯ ಮಾತ್ರ ಆ ಹುಡುಗಿಯರಿಗಾಗಲೀ, ಮೇಷ್ಟ್ರುಗಳಿಗಾಗಲೀ, ಮುಖ್ಯವಾಗಿ ನಮ್ಮ ತಂದೆ-ತಾಯಿಯರಿಗಾಗಲೀ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದೆವು.

ಏಳುತ್ತಾ ಬೀಳುತ್ತಾ ಅಂತೂ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬಂದಿದ್ದೆವು. ಶಾಲೆ ಬಿಟ್ಟುಹೋಗುವಾಗ ಆಟೋಗ್ರಾಫ್ ಬರೆಸಿಕೊಳ್ಳಬೇಕು ಅಂತಾಯಿತು. ಮನೆಯಲ್ಲಿ ಅಣ್ಣ-ಅಕ್ಕಂದಿರನ್ನು ಹೊಂದಿದ ಕೆಲ ಗೆಳೆಯರು ಈ ಬಗ್ಗೆ ಸ್ವಲ್ಪ ಜ್ಞಾನವುಳ್ಳವರಾಗಿದ್ದರು. ಏಕೆಂದರೆ ಅವರು ತಮ್ಮ ಅಣ್ಣ-ಅಕ್ಕಂದಿರು ಶಾಲೆ ಬಿಡುವಾಗ ಬರೆಸಿಕೊಂಡ ಆಟೋಗ್ರಾಫ್ ಪುಸ್ತಕಗಳನ್ನು ನೋಡಿದ್ದರು. ಹಾಗಾದರೆ ನಾವೂ ಬರೆಸಬೇಕು ಅಂತಾಯಿತು. ಅಲ್ಲದೇ ನಮ್ಮ ಆಟೋಗ್ರಾಫ್ ಪುಸ್ತಕದವನ್ನು ಹುಡುಗಿಯರಿಗೆ ಕೊಟ್ಟು (ಕೊಡುವಾಗ ಸಿಗಬಹುದಾದ ಅವರ ಹಸ್ತಸ್ಪರ್ಷವನ್ನು ಅನುಭವಿಸುವ ಅಭಿಲಾಷೆ ಇರುವಷ್ಟು ವಯಸ್ಸಾಗಿರಲಿಲ್ಲ ನಮಗೆ), ಅವರು ನಮಗೆ ಏನು ಬರೆದುಕೊಡುತ್ತಾರೆ ಎಂದು ನೋಡುವ ಕುತೂಹಲ ಬೇರೆ! ಸರಿ, ಬರೆಸಬೇಕು, ಅದಕ್ಕಿಂತ ಮುಂಚೆ ಆಟೋಗ್ರಾಫ್ ಪುಸ್ತಕವನ್ನು ತರಬೇಕಲ್ಲ? ಸೊರಬ ಪೇಟೆಯಿಂದ ತರುವುದು ಎಂದಾಯಿತು. ಅದಕ್ಕಾಗಿ ಸೊರಬ ಪೇಟೆಯ ಬಗ್ಗೆ ತಿಳಿದಿದ್ದ ಎರಡು ಹುಡುಗರು ಮುಂದೆಬಂದರು. ಆಟೋಗ್ರಾಫ್ ಬರೆಸುವ ಹುಕಿ ಇದ್ದವರೆಲ್ಲಾ ಅವರಿಗೆ ದುಡ್ಡು ಕೊಟ್ಟೆವು. ಒಂದು ಶನಿವಾರ ಅವರು ರಾಘವೇಂದ್ರ ಬಸ್ಸಿಗೆ ಸೊರಬಕ್ಕೆ ಹೋಗಿ ಆಟೋಗ್ರಾಫ್ ಪುಸ್ತಕಗಳನ್ನು ತಂದೇಬಿಟ್ಟರು!

ಬಣ್ಣದ ಕವರನ್ನು ಹೊದ್ದುಕೊಂಡಿದ್ದ ಈ ಪುಟ್ಟ ಆಟೋಗ್ರಾಫ್ ಪುಸ್ತಕ ನೋಡಲಿಕ್ಕೇ ಖುಷಿಯಾಗುವಂತಿತ್ತು. ಅದರೊಳಗೆ ಸ್ಕೆಚ್‍ಪೆನ್ನಿನಿಂದ ನನ್ನ ಹೆಸರು ಬರೆದೆ. 'ಸ್ನೇಹವೇ ಸಂಪದ' ಅಂತ ಮೊದಲ ಪುಟದಲ್ಲಿ ನನ್ನ artistic styleನಲ್ಲಿ ಬರೆದೆ. ನಾನು ಬರೆದಿದ್ದನ್ನು ನೋಡಿದ ನನ್ನ ಕೆಲ ಗೆಳೆಯರು ತಮಗೂ ಬರೆದುಕೊಡುವಂತೆ ಕೋರಿದರು. ಚಾಕ್ಲೇಟಿನ ಆಮಿಷ ಒಡ್ಡಿದರು. ಅವರಿಗೂ ಬರೆದುಕೊಟ್ಟೆ. ಅಂತೂ ಸುಂದರವಾಗಿದ್ದ ಪುಸ್ತಕವನ್ನು ಸಿಂಗಾರ-ಬಂಗಾರ ಮಾಡಿ ಮತ್ತಷ್ಟು ಸುಂದರಗೊಳಿಸಿ ಸುಂದರ ಹುಡುಗಿಯರ ಕಡೆಗೆ ವರ್ಗಾಯಿಸಿ 'ಎಲ್ಲರೂ ಬರ್ದುಕೊಟ್ಬಿಡಿ' ಅಂದು ಕೃಥಾರ್ತನಾದೆ!

ಹುಡುಗಿಯರು ಎಲ್ಲರೂ ಬರೆದುಕೊಡುವುದಕ್ಕೆ ಮೂರು ದಿನ ತೆಗೆದುಕೊಂಡರು. ಈ ಮಧ್ಯೆ ನಾವೂ ಅವರು ಕೊಟ್ಟ ಪುಸ್ತಕಗಳಿಗೆ ನಮ್ಮ ಆಟೋ ಬರೆಯುವದರಲ್ಲಿ ಬ್ಯುಸಿಯಾಗಿದ್ದೆವು. ಎಲ್ಲೆಲ್ಲೋ ತಡಕಾಡಿ ಹೊಂದಿಸಿದ ಸಾಲುಗಳನ್ನು, ಕೆಲವರಿಗೆ ನಮ್ಮದೇ 'own' ವ್ಯಾಕ್ಯೆಗಳನ್ನೂ, ಹಿತವಚನಗಳನ್ನೂ ಬರೆದುಕೊಟ್ಟದ್ದಾಯ್ತು. ಮೂರು ದಿನಗಳ ನಂತರ ಎಲ್ಲಾ ಹುಡುಗಿಯರೂ ಬರೆದಾದಮೇಲೆ ನನ್ನ ಆಟೋಗ್ರಾಫ್ ಬುಕ್ಕು ಕೈಗೆ ವಾಪಸು ಬಂತು. ಬಂದಮೇಲೆ ಅದನ್ನು ಅಲ್ಲಿಯೇ ಬಿಚ್ಚಿ ನೋಡಲಾದೀತೆ? ಎಲ್ಲಾ ಗೆಳೆಯರೂ ಮುತ್ತಿಕೊಂಡಿರುತ್ತಿದ್ದರು. ಅಕಸ್ಮಾತಾಗಿ ಯಾವುದಾದರೂ ಹುಡುಗಿ 'ಏನಾದ್ರೂ' ಬರೆದುಕೊಟ್ಟುಬಿಟ್ಟಿದ್ದರೆ....? ಹಾ! ಇಷ್ಟೆಲ್ಲಾ ಹುಡುಗರ ಎದುರಿಗೆ ಅದನ್ನು ಓಪನ್ನು ಮಾಡಲು ಮನಸಾಗದೆ (ಅಥವಾ ಧೈರ್ಯ ಸಾಲದೆ), ಮನೆಗೆ ಬಂದು, ಕೋಣೆ ಸೇರಿಕೊಂಡು, ಬೆಚ್ಚಗೆ ಕುಳಿತು ಬಿಚ್ಚಿ ನೋಡಿದೆ...

ಆದರೆ excite ಆಗುವಂತಹ ಯಾವ ಆಟೋಗ್ರಾಫೂ ಅದರಲ್ಲಿ ನನಗೆ ಕಾಣಲಿಲ್ಲ. 'ಪರೀಕ್ಷೆ ಎಂಬ ಯುದ್ಧದಲ್ಲಿ, ಪೆನ್ನು ಎಂಬ ಖಡ್ಗ ಹಿಡಿದು...' ಎಂಬಿತ್ಯಾದಿ ಪರೀಕ್ಷೆಯನ್ನು ನೆನಪಿಸಿ ಭಯ ಹುಟ್ಟಿಸುತ್ತಿದ್ದ ಆಟೋಗಳೂ, 'ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ನಶ್ವರವಾಗುವ ಈ ದೇಹಕ್ಕೆ ಸ್ನೇಹವೊಂದೇ ಶಾಶ್ವತ' ಎಂಬಿತ್ಯಾದಿ ಸ್ನೇಹಪರ ಸಾಲುಗಳೂ, 'ಅಪರಿಚಿತರಾಗಿ ಬಂದು ಪರಿಚಿತರಾಗಿ ಹೋಗುವಾಗ ಉಳಿಯುವ ನೆನಪೇ ಸ್ನೇಹ' ಎಂಬಂತಹ ಗಜಾನನ ಬಸ್ಸಿನ ಹಿಂದಿನಿಂದ ಕದ್ದ ಸಾಲುಗಳೂ, 'Life is a game, play it!' ಎಂದು ಜೀವನವನ್ನು ಆಟಕ್ಕೆ ಹೋಲಿಸಿ ನಮ್ಮನ್ನು confuse ಮಾಡುವಂತಹ ಸಾಲುಗಳೂ ಇದ್ದವು. ಅದರಲ್ಲಿ ಸಹಸ್ರಾರು spelling mistakeಗಳೂ, ಕಾಟು-ಚಿತ್ತುಗಳೂ ಇದ್ದವು. ಎಲ್ಲಕ್ಕಿಂತ ಬೇಜಾರಾದ ಸಂಗತಿಯೆಂದರೆ ಎಲ್ಲಾ ಹುಡುಗಿಯರೂ ಮೊದಲ ಸಾಲಿನಲ್ಲಿ 'ಪ್ರಿಯ ಸಹೋದರನಾದ .....ನಿಗೆ' ಅಂತಲೋ 'My dear brother ....' ಅಂತಲೋ ಶುರುಮಾಡಿರುತ್ತಿದ್ದುದು. ನಾನು ಆಶಾಭಂಗವಾದವನಂತೆ ಸುಮ್ಮನೆ ಪುಟ ತಿರುವುತ್ತಾ ಮುನ್ನಡೆದೆ.

ಆದರೆ ಮತ್ತೆ ಮೂರ್ನಾಲ್ಕು ಪುಟಗಳನ್ನು ತಿರುವುತ್ತಿದ್ದಂತೆ ನನಗೆ ಒಂದು ಆಘಾತ ಕಾದಿತ್ತು. ಬೇರೆಲ್ಲಾ ಆಟೋಗಳಂತೆಯೇ 'My dear brother ....' ಅಂತಲೇ ಅದು ಶುರುವಾಗಿತ್ತಾದರೂ, ಅದರ ಮುಂದಿನ ಸಾಲುಗಳು ನನ್ನನ್ನು ತಬ್ಬಿಬ್ಬು ಮಾಡುವಂತಿದ್ದವು. ಅದನ್ನು ಯಥಾವತ್ತಾಗಿ, ಅದರ spelling mistakeಗಳ ಜೊತೆಗೆ, ಇಲ್ಲಿ ಕೊಡುತ್ತಿದ್ದೇನೆ:

"You are in mine heart like photograph
Then wat yuo to write in my autougraph

Your loving,

........."

ಮುಗಿಯಿತಲ್ಲಪ್ಪಾ? ನಮಗೋ, ಆಗ ಈ ಇಂಗ್ಲೀಷ್ ಭಾಷೆಯೆಂದರೆ ಭಯವಾಗುತ್ತಿದ್ದಂತಹ ಕಾಲ. ನಾವು ಅದನ್ನು ಪರಕೀಯ ಭಾಷೆಯೆಂದು ಪರಿಗಣಿಸಿ ಹೊರಗಿಟ್ಟಿದ್ದ ಕಾಲ. ಇಂಗ್ಲೀಷ್ ಟೀಚರ್ರು ಸಹ ನಮಗೆ ಪ್ರಿಯರಾಗಿರಲಿಲ್ಲ. ಇಂಗ್ಲೀಷ್ ಟೀಚರ್ರು ನಮಗೆ ಪಾಠ ಕಲಿಸಲು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ; ನಮಗೇ ಅವರ ಮೇಲೆ ಕರುಣೆ ಉಕ್ಕುವಷ್ಟು. ಹುಡುಗಿಯರೂ ಏನು ಇಂಗ್ಲೀಷಿನಲ್ಲಿ ಚುರುಕಾಗಿರಲಿಲ್ಲ. ಈ ಆಟೋಗ್ರಾಫ್ ಬರೆದುಕೊಟ್ಟ ಹುಡುಗಿಯೂ ಅದಕ್ಕೆ ಹೊರತಾಗಿರಲಿಲ್ಲ. ಅದು ಅವಳು ಸ್ವತಃ ರಚಿಸಿದ ಆಟೋಗ್ರಾಫ್ ಆಗಿರಲಿಕ್ಕಂತೂ ಶಕ್ಯವೇ ಇರಲಿಲ್ಲ. ಬಹುಶಃ ತನ್ನ ಅಕ್ಕನ ಆಟೋಗ್ರಾಫ್ ಪುಸ್ತಕದಿಂದ ಕದ್ದ ವಾಕ್ಯವಿರಬೇಕು. ಏನೇ ಆಗಿರಲಿ. ನಾನು ಅದನ್ನು ಹೀಗೆ ಅರ್ಥ ಮಾಡಿಕೊಂಡೆ:

"ನೀನು ನನ್ನ ಹೃದಯದಲ್ಲಿ ಒಂದು ಚಿತ್ರದಂತೆ ಇದ್ದೀಯ;
ಇನ್ನು ನೀನು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ ಏನು ಬರೆಯುತ್ತೀಯ ಎಂದು ಕಾಯುತ್ತಿರುತ್ತೇನೆ" !!!

ಅಬ್ಬ! ಅರ್ಥವಾದದ್ದೇ ನಾನು ಬೆವೆಯತೊಡಗಿದೆ...! ಮತ್ತೆ ಮತ್ತೆ ಓದಿಕೊಂಡೆ.. ಕೊನೆಯಲ್ಲಿ 'Your loving' ಅಂತ ಬೇರೆ! ಸೆಖೆ ಜಾಸ್ತಿಯಾಯಿತು. ಮನೆಯಲ್ಲಿ ಫ್ಯಾನ್ ಬೇರೆ ಇರಲಿಲ್ಲ.. ಆಟೋಗ್ರಾಫ್ ಪುಸ್ತಕವನ್ನು ರಪ್ಪನೆ ಮುಚ್ಚಿಟ್ಟು ಮನೆಯಿಂದ ಹೊರಬಿದ್ದೆ.. ತಂಗಾಳಿ ಸೋಕಿ ಮೈಪುಳಕವಾಯಿತು.. ದೂರದ ಸ್ಟ್ರೀಟ್‍ಲೈಟ್‍ನ ಬೆಳಕು ನನ್ನ ಮೈಮೇಲೆ ಬೀಳುತ್ತಿತ್ತು.. ಆ ಬೆಳಕಿನಲ್ಲಿ ಅಂತೂ ಒಂದು ಹುಡುಗಿಯನ್ನು 'ಬೀಳಿಸಿಕೊಂಡ' ನನ್ನ ಬಾಡಿಯನ್ನೇ ನೋಡಿಕೊಂಡೆ.. ನನಗೂ ಒಬ್ಬ ಹುಡುಗಿ.. ನನಗೂ ಒಬ್ಬ ಹೀರೋಯಿನ್..! ಇನ್ನು ನಾನೂ-ಅವಳೂ ಹಾಡು ಹೇಳುತ್ತಾ ಮರ ಸುತ್ತುತ್ತಾ.... ಅಷ್ಟರಲ್ಲಿ... ಅಮ್ಮ ಮನೆಯ ಒಳಗಿಂದ ಕೂಗಿದಳು: 'ಓದ್‍ಕ್ಯಾ ಅಂದ್ರೆ ಅದೇನು ಅಂಗಳದಲ್ಲಿ ಸುತ್‍ತಾ ಇದೀಯ? ಒಳಗೆ ಬಂದು ಓದ್‍ಕ್ಯಾ..!' ಆಹ್! ನಾನು ದುಃಸ್ವಪ್ನ ಕಂಡವನಂತೆ ಕಲ್ಪನಾಲೋಕದಿಂದ ಹೊರಬಂದೆ. ಮನೆಯ ಒಳಬಂದೆ. ನನ್ನನ್ನೇ ಮನಸಿನಲ್ಲಿಟ್ಟುಕೊಂಡು ಕರಗುತ್ತಿರುವ, ಕೊರಗುತ್ತಿರುವ ಆ ಹುಡುಗಿಯ ಬಗ್ಗೆ ಪ್ರೀತಿಯುಂಟಾಯಿತು.. ಆದರೆ ಫಕ್ಕನೆ ಭಯವಾಯಿತು.. ಏನಾದ್ರೂ ಈ ವಿಷಯ ಮನೆಯವರಿಗೆ ಗೊತ್ತಾದ್ರೆ? ಹೋಗಲಿ, ಅವಳ ಮನೆಯಲ್ಲಿ ಈ ಬಗ್ಗೆ ಗೊತ್ತಿದೆಯಾ? ಗೊತ್ತಾದರೆ, ಅವಳ ಅಣ್ಣ ನನ್ನನ್ನು ಹೊಡೆಯಲಿಕ್ಕೆ ಅಂತ ಬಂದ್ರೆ? ...ನಾನು ಫೈಟ್ ಮಾಡಿ.. ಅವನನ್ನು ಮಾರಣಾಂತಿಕ ಗಾಯಗಳಿಗೆ ತುತ್ತುಮಾಡಿ... ಪೋಲೀಸರು ಬಂದು ನನಗೆ ಕೋಳ ಹಾಕಿ... ಸಿನಿಮಾಗಳಲ್ಲಿ ಆಗುವಂತೆ ನಿಜಜೀವನದಲ್ಲೂ ಆಗುತ್ತದೆ ಅಂದುಕೊಂಡೆ.. ಈ ರಗಳೆಗಳೆಲ್ಲ ಬೇಡವೇ ಬೇಡ, ಪ್ರೀತಿ-ಪ್ರೇಮಗಳಿಗೆಲ್ಲ ಗೋಲಿ ಹೊಡೀಲಿ. ಅವಳಾಗೇ ಬಂದು propose ಮಾಡಿದರೂ 'ಇಲ್ಲ' ಅಂದು ತಿರಸ್ಕರಿಸಬೇಕು ಅಂದುಕೊಂಡೆ!

ಇಷ್ಟಕ್ಕೂ ಆ ಹುಡುಗಿ ನಮ್ಮ ಊರಿನ ಪಕ್ಕದ ಊರಿನವಳು. ಶ್ರೀಮಂತರ ಮನೆಯ ಹುಡುಗಿ. ಒಂಥರಾ ಕೀರಲು ದನಿ ಅವಳದು. ಅದಕ್ಕಾಗಿಯೇ ಅವಳನ್ನು ನಾವು 'ಕೀರ್ವಾಣಿ' ಅಂತ ಕರೆಯುತ್ತಿದ್ದೆವು! ಅವಳಾಗಿಯೇ ಆ ಆಟೋಗ್ರಾಫನ್ನು ಉದ್ದೇಶಪೂರ್ವಕವಾಗಿ ಬರೆದಿರಲಿಕ್ಕಂತೂ ಸಾಧ್ಯವಿರಲಿಲ್ಲ. ಆದರೆ ನನ್ನ ಹುಚ್ಚು ಮನಸ್ಸು ಕೇಳಬೇಕಲ್ಲ? ಅಲ್ಲದೇ ಅವಳು ತನ್ನ ಆಟೋಗ್ರಾಫ್ ಬುಕ್ಕಿನಲ್ಲಿ ನಾನು ಏನು ಬರೆಯುತ್ತೀನಿ ಅಂತ ಕಾಯುತ್ತಾ ಇರುತ್ತಾಳೆ... ಅಥವಾ ಇವೆಲ್ಲಾ ಕೇವಲ ನನ್ನ ಹುಚ್ಚು ಭ್ರಮೆಯೇ? ಗೊಂದಲದಲ್ಲಿದ್ದೆ.

ಅಷ್ಟರಲ್ಲಿ ಮತ್ತೊಂದು ಘಟನೆಯಾಯಿತು! ನಮ್ಮೂರಿನಲ್ಲಿ ಒಬ್ಬರ ಮನೆಗೆ ಗುರುಗಳು (ಸ್ವಾಮೀಜಿ) ಬಂದಿದ್ದರು. ಅವರ ಮನೆಯಲ್ಲಿ ಸ್ವಾಮಿಗಳ 'ಭಿಕ್ಷಾ' ಇತ್ತು. ನಾನು ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಅಲ್ಲಿಗೆ ಕೀರ್ವಾಣಿಯ ಪಕ್ಕದ ಮನೆಯ ಒಬ್ಬ ಹುಡುಗ ಕೂಡ ಬಂದಿದ್ದ. ಸುಮಾರು ಐದನೇ ಕ್ಲಾಸು ಓದುತ್ತಿರಬಹುದಾದ ತುಂಬಾ ಕೀಟಲೆ ಹುಡುಗ ಅವನು. ಊಟಕ್ಕೆ ಪಂಕ್ತಿಯಲ್ಲಿ ನಾನೂ-ಅವನು ಒಟ್ಟಿಗೇ ಕುಳಿತುಕೊಳ್ಳುವಂತಾಯಿತು. ಊಟ ಮಾಡುತ್ತಿರುವಾಗ ನನ್ನ ಗೊಂದಲಗಳು ಹೆಚ್ಚಾಗುವಂತಹ ಒಂದು ಮಾತನ್ನು ಆ ಹುಡುಗ ಆಡಿದ. "ನಮ್ಮನೆ ಪಕ್ಕದ್ಮನೆ ಅಕ್ಕ ಇದಾಳಲ್ಲ, ಅವ್ಳು ನಿಂದು ಒಂದು ಫೋಟೋ ಕಟ್ ಮಾಡಿ ಇಟ್ಕೊಂಡ್ ಬಿಟ್ಟಿದಾಳೆ ಮಾರಾಯ.. ನಾವು ಎಷ್ಟು ಕೊಡು ಅಂದ್ರೂ ಕೊಡೋದಿಲ್ಲ.." ಅಂದುಬಿಟ್ಟ! ಅಲ್ಲಿಗೆ ಮುಗಿಯಿತಲ್ಲ? ಊಟ ಮಾಡುತ್ತಿದ್ದವನು ದಂಗಾಗಿಬಿಟ್ಟೆ. ಒಂದು ಕ್ಷಣ ಸುಮ್ಮನೆ ಕುಳಿತುಬಿಟ್ಟೆ. ಅಷ್ಟಂದು ಅವನೇನೋ ಸುಗ್ರಾಸ ಭೋಜನ ಮುಂದುವರಿಸಿದ. ಆದರೆ ನನಗೆ ಗಂಟಲಲ್ಲಿ ಅನ್ನ ಹಿಡಿಯಲಿಕ್ಕೆ ಶುರುವಾಯಿತು. ಪಲ್ಯ ಬಡಿಸುತ್ತಿದ್ದ ರಾಘವೇಂದ್ರಣ್ಣ 'ಪಲ್ಯ ಪಲ್ಯ ಪಲ್ಯ' ಎಂದು ನನ್ನ ಎದುರು ಮೂರು ಮೂರು ಸಲ ಕೇಳಿದರೂ ನಾನು ಸುಮ್ಮನಿದ್ದುದ್ದು ನೋಡಿ ಎರಡು ಸೌಟು ಸರಿಯಾಗಿ ಪಾಯಸದ ಮೇಲೆ ಹಾಕಿ ಹೋಗಿಬಿಟ್ಟ!

ಇಷ್ಟೆಲ್ಲಾ ಗೊಂದಲಗಳು ನನ್ನ ತಲೆಯಲ್ಲಿ ಆಗುತ್ತಿದ್ದರೂ ಆ ಹುಡುಗಿ ಮಾತ್ರ ಮಾಮೂಲಿನಂತೆಯೇ ಇದ್ದಳು. ಹಾಗೇ ತಲೆ ತಗ್ಗಿಸಿಕೊಂಡು ಶಾಲೆಗೆ ಬರುತ್ತಿದ್ದಳು. ತನ್ನ ಗೆಳತಿಯರೊಡನೆ ಕೀರಲು ದನಿಯಲ್ಲಿ ಮಾತನಾಡುತ್ತಿರುತ್ತಿದ್ದಳು. ಒಟ್ಟಿನಲ್ಲಿ ನನಗಂತೂ ತಲೆ ಕೆಟ್ಟು ಹೋಯಿತು. ನನ್ನ ಬಳಿ ಮಾತನಾಡಿ 'ಮುಂದುವರಿಸ'ಬಹುದು ಅಂದುಕೊಂಡೆ. ಆದರೆ ಆಕೆ ನನ್ನ ಕಡೆ at least ಓರೆ ನೋಟವನ್ನೂ ಬೀರಲಿಲ್ಲ. ನನಗೆ ಆಗುತ್ತಿದ್ದುದ್ದು ಹತಾಶೆಯೋ, ನಿರಾಶೆಯೋ, ಭ್ರಮನಿರಸನವೋ ತಿಳಿಯದಾದೆ.

ಅಂತೂ ಮೂರ್ನಾಲ್ಕು ವಾರಗಳ ನಂತರ ಅವಳು ತನ್ನ ಆಟೋಗ್ರಾಫ್ ಪುಸ್ತಕವನ್ನು ನನಗೆ ಬರೆಯಲು ಕೊಟ್ಟಳು. ನಾನೂ ಇದಕ್ಕೇ ಕಾಯುತ್ತಿದ್ದವನಂತೆ, ಹಿಂದೆ ಮುಂದೆ ಯೋಚಿಸದೆ 'What is the real meaning of your autograph?' ಅಂತ ಒಂದೇ ಲೈನು ಬರೆದುಕೊಟ್ಟೆ. ಆದರೆ ಅದಕ್ಕೂ ಅವಳಿಂದ reply ಬರಲಿಲ್ಲ. ಬಹುಶಃ ಅವಳಿಗೆ ಅದು ಅರ್ಥವೇ ಆಗಲಿಲ್ಲವೇನೋ!

ನೋಡುನೋಡುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಹತ್ತಿರಾದವು. ನಾವು ಬರೆದದ್ದೂ ಆಯಿತು. ರಿಸಲ್ಟು ಬಂದದ್ದೂ ಆಯಿತು. ಆಕೆ ಫೇಲ್ ಆಗಿದ್ದಳು; ನಾನು ಆ ಗಂಢಾಂತರದಿಂದ ಕೆಲವೇ ಮಾರ್ಕುಗಳ ಅಂತರದಿಂದ ಪಾರಾಗಿದ್ದೆ. ಹಾಗೆ ನಮ್ಮ ಹೈಸ್ಕೂಲು ಜೀವನ ಮುಗಿದುಹೋಯಿತು.

ಕೊನೆಗೆ ನಾನೆಲ್ಲೋ ಅವಳೆಲ್ಲೋ ಆದೆವು. ನಮ್ಮ ಪಕ್ಕದ ಊರಿನಲ್ಲೇ ಇರುತ್ತಿದ್ದಳಾದರೂ ಒಬ್ಬರಿಗೊಬ್ಬರು ಭೇಟಿ ಆಗುವಂತಹ ಸನ್ನಿವೇಶಗಳು ಕೂಡಿಬರಲಿಲ್ಲ. ಒಂದೆರಡು ಬಾರಿ ಕಂಡಿದ್ದಳಾದರೂ ಸುಮ್ನೆ 'ಅರಾಮಿದೀಯ?' 'ಏನ್ಮಾಡ್ತಿದೀಯ ಈಗ?' ಇತ್ಯಾದಿ ಪ್ರಶ್ನೋತ್ತರಗಳಲ್ಲಿ ಮಾತುಕತೆ ಮುಗಿದು ಹೋಗುತ್ತಿತ್ತು. 'ಇಷ್ಟಕ್ಕೂ ನೀನು ನನ್ನನ್ನು ಪ್ರೀತಿಸಿದ್ದು ಹೌದಾ?' ಅಂತ ಕೇಳಬೇಕೆಂದುಕೊಳ್ಳುತ್ತಿದ್ದೆ. ಆದರೆ ಧೈರ್ಯ ಸಾಲುತ್ತಿರಲಿಲ್ಲ. ಅಥವಾ ಮುಜುಗರವಾಗುತ್ತಿತ್ತು.

ಈಗ ನೋಡಿದರೆ ಕೀರ್ವಾಣಿಯ ಮದುವೆಯ ಸುದ್ದಿ ಬಂದಿದೆ. ಎಲ್ಲಾ ನೆನಪಾಗುತ್ತಿದೆ... ಇಷ್ಟಕ್ಕೂ ಕೀರ್ವಾಣಿಗೆ ನನ್ನ ಮೇಲೆ ಒಲವಿತ್ತಾ? ಆ ಪ್ರಶ್ನೆ ಮಾತ್ರ ನನ್ನಲ್ಲೇ ಉಳಿದುಹೋಗಿದೆ: ಸವಿನೆನಪುಗಳನ್ನು ಕೆದಕಲು ಗುದ್ದಲಿಯಾಗಿ.

18 comments:

Sandeepa said...

ನಿನ್ನ ನೆನಪಿನ ಬುತ್ತಿಯಿಂದ ಬಗೆದು ತೆಗೆದು,
ಬಗೆ ಬಗೆ ಭಾವನೆಗಳ ಉಪ್ಪಿನಕಾಯಿಯ ಜೊತೆ,
ನೀ ಹೀಗೆ ಉಣಬಡಿಸುತ್ತಿದ್ದರೆ...
ಆಹಾ!!
ಉಂಡಂಗೂ ಹಸಿವು..:)

ಶ್ರೀನಿಧಿ.ಡಿ.ಎಸ್ said...

ಅಲಲಲಲಲಲಲಾ!

ಅದೇನ್ ಬರಿತ್ಯೋ ಮಾರಾಯ ಸಾಯ್ಲಿ! ಸೋಲಿಡಾಗದೆ ದೋಸ್ತಾ! ನಂಗು ನಾವ್ ಈ ಆಟೊಗ್ರಾಫ್ ಮಾಡಿದ್ ಮಳ್ ‍ವೇಷ ನೆನ್ಪಾತು. ಬಹಳ ಕಾಲದ ಮೇಲೆ ಸುಧೀರ್ಘವಾಗಿ ಬರದ್ದೆ, ಖುಷಿ ಆತು ಮಗ್ನೆ.

ಹೀಂಗೇ ಜಮಾಯ್ಸ್ತಾ ಇರು!

Enigma said...

odakke maja vagi ithu odake

Shiv said...

ಸುಶ್ರುತ,

ಸೀದಾ ಕರಕೊಂಡು ಹೋಗಿ ಹೈಸ್ಕೂಲಿನ ಆ ದಿನಗಳಿಗೆ ಬಿಟ್ಟುಬಂದಿರಿ..ಆ ಆಟೋಗ್ರಾಫ್, ಅದನ್ನು ಬರೆಸಿ-ಬರೆದು ಕೊಡುವ ಸಡಗರ, ಆಟೋಗ್ರಾಫ್‍ನ ಆ standard repeatative ಸಾಲುಗಳು..ಎಲ್ಲಾ ನೆನಪುಮಾಡಿಕೊಟ್ಟ್ರಿ..

ನಿಮ್ಮ ಕೀರ್ವಾಣಿ ಆಟೋಗ್ರಾಫ್ ನಿಜಕ್ಕೂ confusing ಇದೆ.ಒಂದು ಕಡೆ dear brother..ಇನ್ನೊಂದ ಕಡೆ your loving..ಅದರ ಮೇಲೆ ನಿಮ್ಮ ಪೋಟೋ..ಅಂದಾಗೆ ಪೋಟೋ ಹೆಂಗೆ ಸಿಕ್ತು ಕೀರ್ವಾಣಿಗೆ??!!

ಕೆಲವೊಂದು ವಿಷಯಗಳು ಹಿಂಗೆ ಉಳಿದುಬಿಡುತ್ತವೆ ಜೀವನದಲ್ಲಿ..ಒಂದು ಮಧುರ ನೋವು-ನೆನಪಿನ ಪ್ರಶ್ನೆಯಾಗಿ..

Anveshi said...

ಮೈ ಆಟೋಗ್ರಾಫ್ ಚಿತ್ರದ
ಸವಿ ಸವಿ ನೆನಪು ಸಾವಿರ ನೆನಪು
ಹಾಡು ಇವತ್ತಷ್ಟೇ ಕೇಳಿದೆ.

ಇಲ್ಲಿ ಬಂದು ನೋಡುವಾಗ ನಿಮ್ಮ ಆಟೋದಲ್ಲಿ ಪ್ರೇಮದ ಗ್ರಾಫ್ ಮೇಲೇರಿಬಿಟ್ಟಿದೆ...!

ಶಿವ್ ಹೇಳಿದ್ದೇ ಡೌಟು ನಂಗೂ.

ನೀವೇ ಏನಾದ್ರೂ ಫೋಟೋ ಬೀಳಿಸಿದ್ರಾಂತ ;)

Sushrutha Dodderi said...

@ alpazna, ಶ್ರೀನಿಧಿ, enigma, shiv, ಅಸತ್ಯ ಅನ್ವೇಷಿ...

ಎಲ್ಲರಿಗೂ ಧನ್ಯವಾದಗಳು.

ಕೀರ್ವಾಣಿಯ ಆಟೋಗ್ರಾಫು confusing ಆಗಿದೆ ಎಂಬ ವಿಚಾರಕ್ಕೆ ನೀವೆಲ್ಲಾ ಸಹಮತಿ ಸೂಚಿಸಿರುವುದು ನನಗೆ ಸಂತೋಷದ ವಿಷಯ. ಅವಳ ಆಟೋಗ್ರಾಫಿನ 'ನಿಜವಾದ' ಅರ್ಥ ಏನು ಎಂಬುದು ನನಗೆ ಇಂದಿಗೂ ಗೌಪ್ಯವೇ. ಹಾಗೆಯೇ ಅವಳಿಗೆ ನನ್ನ ಫೋಟೋ ಹೇಗೆ ಸಿಕ್ಕಿತು ಎಂಬುದೂ.

Shree Harsha said...

tuMbA chennAgide kaNayya ee ee blAgu. nakku nakku sustAde. ninna baravaNigeyalli hosatana ide. aMda hAge nanna blAgige nAnu tuMbA dinagaLiMda bhETiyE koTTiralilla!! hAgAgi nanna blAgige neenu gALa hAkiddu tiLidiralilla. tuMbA dhanyavAdagaLu sushruta.

Sushrutha Dodderi said...

@ shreeharsha

ಧನ್ಯವಾದಗಳು ಹರ್ಷ.

Gubbacchi said...

ತುಂಬಾ ಚೆನ್ನಾಗಿ ಬರೆದಿದ್ದೀರಿ.

ಮನಸ್ವಿನಿ said...

ಸುಶ್ರುತ,

ತುಂಬಾ ಚೆನ್ನಾಗಿದೆ.ಬರೆಯುವ ಶೈಲಿಯಂತೂ ಮಸ್ತಿದೆ....ಬರೆಯುತ್ತಿರಿ.

Sushrutha Dodderi said...

@ gubbacchi

ಗುಬ್ಬಚ್ಚಿಗೆ ಸುಸ್ವಾಗತ. ತುಂಬಾ ಧನ್ಯವಾದಗಳು. ಆಗಾಗ ಹೀಗೇ ಬಂದು ನಿಮ್ಮ 'ಪುಕ್ಕ' ಉದುರಿಸುತ್ತಿರಿ.

Sushrutha Dodderi said...

@ ಮನಸ್ವಿನಿ

ನನ್ನದೇ ಆದ ಶೈಲಿಯೊಂದನ್ನು ಕಂಡುಕೊಳ್ಳುವ ಹುಕಿಯಲ್ಲಿದ್ದೇನೆ. ನಿಮ್ಮ ಹಾರೈಕೆಯಿರಲಿ. ಧನ್ಯವಾದಗಳು.

Anonymous said...

ಕೀರವಾಣಿ ಸಿಗದಿದ್ದೇ ಒಳ್ಳೆದಾಯಿತು ಬಿಡಿ. ನಿಮಗಾಗಿ ಕಾದಿರುವ ಕೋಕಿಲವಾಣಿಗೆ ನಿರಾಸೆ ಆಗ್ತಾ ಇತ್ತು ಆಗ :-)

Sushrutha Dodderi said...

@ sritri

ತ್ರಿವೇಣಿ ಮೇಡಂಗೆ ಸುಸ್ವಾಗತ. ಕೀರ್ವಾಣಿ ಸಿಗದಿದ್ದುದರ ಬಗ್ಗೆ ನನಗೆ ಬೇಸರವೇನೂ ಇಲ್ಲ; ಆದರೆ ಈ ಕೋಕಿಲವಾಣಿ ಯಾರು? ಎಲ್ಲಿಹಳು? ಏಕೆಂದರೆ ನನಗೆ ಈಗಲೂ ಸಹ ಈ 'ವಾಣಿ'ಯರೆಂದರೆ ಯಾಕೋ ಭಯ..!

ಧನ್ಯವಾದಗಳು. ಆಗಾಗ ಬರುತ್ತಿರಿ.

Anonymous said...

hai
super agi iddu nimma autograph kathe.
nangu nanna high school days nenpagthu. en en love stories antheera nam class nalli thumba chanagi ittu.
Dear brother antha bariyadu, brother antha kariyadu iga esthu silly annisthu alda.
thumba nagu banthu idanna odi.

Sushrutha Dodderi said...

@ ranjana

>> dear brother antha bariyadu, brother antha kariyadu iga esthu silly annisthu

yake hange?! kaala badalaagide? hihhi, irli..

mecchugege thanx

Anonymous said...

ಸುಶ್ರುತ...
ಚೊಲೊ ಇದ್ದು ಕತೆ. ನನ್ನ ಹೈಸ್ಕೂಲ್ ದಿನ ಎಲ್ಲ ನೆನ್ಪಾತು ನಂಗೆ. ಆಟೋಗ್ರಾಫ್ನ ಆ ಎಲ್ಲ ಸಾಲೂ ನನ್ನ ಆಟೋಗ್ರಾಫ್ ಪುಸ್ತಕದಲ್ಲೂ ಇದ್ದು, (ಕೀರ್ವಾನಿ ಬರ್ದಿದ್ದು ಮಾತ್ರ ಇಲ್ಲೆ)
ಎಂತಕ್ಕೋ ಓದಕ್ಕರೆ ರಾಶೀ ನಗು ಬಂತು, ನೆಗ್ಯಾಡ್ದಿ.
ಗಂಭೀರ ವಸ್ತು ಇಟ್ಗಂಡು ಅದ್ರಲ್ಲಿ ತಮಾಷೆಯ ಸೊಗಡನ್ನ ಸೇರ್ಸಿದ ರೀತಿ ರಾಶೀ ಚಂದ ಬಂಜು.ಇಂಥ ಒಳ್ಳೆ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದ.

- ಶಾಂತಲಾ ಭಂಡಿ.

Sushrutha Dodderi said...

@ ಶಾಂತಲಾ

ತುಂಬಾ ಧನ್ಯವಾದ.