Monday, November 20, 2006

ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. (A trip to Savandurga)

ಆ ನಂದಿ ಸುಮ್ಮನಿತ್ತು.

ಕಲ್ಗಾರ್ ಗಿರಿಯ ಕಿರುಚಾಟ - ಫೋಟೋ ಹುಚ್ಚು, ಸಂದೀಪನ ಶೇರು ಹಗರಣ, ಬಪ್ಪನ ಐರಿಷ್ ಸಂಭಾಷಣೆ.... ಎಲ್ಲವನ್ನೂ ಕೇಳಿಕೊಂಡೂ ಸುಮ್ಮನೇ ಇತ್ತು. ಬೆಳಗ್ಗೆ ಯಾರೋ ಪೂಜೆ ಮಾಡಿಹೋದ ಕುರುಹಾಗಿ ಅದರ ಕೊರಳಲ್ಲಿ ಇನ್ನೂ ಬಾಡದ ಹೂವಿನ ಹಾರ, ಹಣೆಯಲ್ಲಿ ಕುಂಕುಮ ಇದ್ದವು. ಗೆಳೆಯರು ಹೇಳಿದ ಪೋಲಿ ಜೋಕುಗಳಿಗೊಂದಕ್ಕೂ ಅದು ನಗಲಿಲ್ಲ. ಬಹುಶಃ ಆ ಜೋಕುಗಳನ್ನೆಲ್ಲಾ ಅದು ಮೊದಲೇ ಕೇಳಿತ್ತೇನೋ? ಇವೆಲ್ಲಾ 'ಓಲ್ಡ್ ಜೋಕ್ಸ್' ಆಗಿದ್ದವೇನೋ ಅದಕ್ಕೆ... ನಾವು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ತಾನು ಒಂದೂ ಮಾತಾಡದೆ ಸುಮ್ಮನೆ ಕುಳಿತಿತ್ತು.. ಬೀಸುಗಾಳಿಗೆ ಮೈಯೊಡ್ಡಿ..


***


ಈಗ ಮೂರು ದಿನಗಳ ಹಿಂದೆ ಸಂದೀಪ ಫೋನ್ ಮಾಡಿ 'ಈ ಭಾನುವಾರ ಏನೂ ಪ್ರೋಗ್ರಾಮ್ ಫಿಕ್ಸ್ ಮಾಡ್ಕೋಬೇಡ. ಸಾವನದುರ್ಗಕ್ಕೆ ಹೋಗೋಣ. ಹಿಂದೆ ಶಿವನಸಮುದ್ರಕ್ಕೆ ಹೋದದ್ದೇ ಟೀಮು; ಪ್ಲಸ್ ಇನ್ನೊಂದಷ್ಟು ಜನ' ಅಂತ ಹೇಳಿದಾಗ, ನಾನು ಮರುಯೋಚನೆ ಮಾಡದೆ 'ಓಕೆ' ಅಂದುಬಿಟ್ಟೆ. ನಂತರ googleನಲ್ಲಿ ಸಾವನದುರ್ಗದ ಬಗ್ಗೆ search ಮಾಡಿದಾಗ ಅದೊಂದು ಏಕಶಿಲೆಯ ಪರ್ವತ, ಅಲ್ಲಿ ಸಾಮಂತರಾಯನ ಕೋಟೆಯ ಅಳಿದುಳಿದ ಅವಶೇಷಗಳು ಇವೆ ಅಂತಲೂ, ಅದು ಕೆಂಪೇಗೌಡನ ಉಪ-ರಾಜಧಾನಿಯಾಗಿತ್ತು ಅಂತಲೂ, ಆ ಬೆಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ, ಕಾಡಿನಲ್ಲಿ ಕ್ರೂರ ಮೃಗಗಳು ಇವೆ ಅಂತಲೂ ಮಾಹಿತಿಗಳು ದೊರೆತವು.

ಭಾನುವಾರ ಬೆಳಗ್ಗೆ ಆರೂ ಮುಕ್ಕಾಲಿಗೆಲ್ಲಾ ರೆಡಿಯಾಗಿ ಸಂದೀಪನಿಗಾಗಿ ಕಾಯುತ್ತಿದ್ದಾಗ ಚಾರಣಿಗ ಶ್ರೀನಿಧಿಯಿಂದ ಮೆಸೇಜು ಬಂತು: "ಬೆಳಗಿನೆಳೆ ಕಿರಣಗಳ ಜೊತೆ ಸಾಗೋದು ಅಂದರೆ, ಏನೋ ಸಂತಸ.. ಬದುಕು ಸುಂದರವಾಗಿದೆ..!" ನಾನು reply ಒತ್ತಿ: "ನೇಸರನು ಮೀಸೆ ತಿರುವುತ ನುಸುಳುತ್ತಿರಲು, ಸಾವನದುರ್ಗದ ಹೆಸರರಿಯದ ದೇವರು ಕರೆಯುತ್ತಿರಲು, ನಸುಕಿಗೇ ಹೊಸ ಬಣ್ಣ ಬಂದಿರಲು.." ಅಂತ type ಮಾಡಿದೆ; ಅಷ್ಟರಲ್ಲಿ ಸಂದೀಪ ಬಂದ. ಅರ್ಧ ಟೈಪಿಸಿದ್ದ ಮೆಸೇಜನ್ನು ಹಾಗೆಯೇ ಚಾರಣಿಗನಿಗೆ ಕಳಿಸಿ ಮನೆಯ ಮೆಟ್ಟಿಲಿಳಿಯತೊಡಗಿದೆ.

ಗಿರಿಯ ಮನೆಯಿಂದ ನಮ್ಮ ಪಯಣ 'ಅಧಿಕೃತವಾಗಿ' ಶುರುವಾಯಿತು. ಒಟ್ಟು ಹದಿನೇಳು ಹುಡುಗರು. ಒಂಬತ್ತು ಬೈಕುಗಳ ಗಾಲಿಗಳಲ್ಲೂ ಹುಮ್ಮಸ್ಸಿನ ಗಾಳಿ ತುಂಬಿತ್ತು. ಮಾಗಡಿ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಸಾವನದುರ್ಗ ಬೆಟ್ಟ ಕಾಣಲಾರಂಭಿಸಿತು: ಗಮ್ಯದಂತೆ. ಅದನ್ನೇ ನೋಡುತ್ತಾ, ಮಧ್ಯದಲ್ಲೊಮ್ಮೆ ಚಹ ಕುಡಿದು, 'ದುಸ್ಥಿತಿ'ಯಲ್ಲಿದ್ದ ರಸ್ತೆಯಲ್ಲಿ ಸಾಗಿದೆವು...


ಸಾವನದುರ್ಗ ತಲುಪಿದಾಗ ಹತ್ತು ಗಂಟೆ. ಬೈಕು ಪಾರ್ಕ್ ಮಾಡಿ, ಅಲ್ಲೇ ಮಾರುತ್ತಿದ್ದ ನೀರಾ ಕೊಂಡುಕೊಂಡು, ಬ್ಯಾಗೇರಿಸಿ ಬೆಟ್ಟ ಹತ್ತತೊಡಗಿದೆವು. ಏದುಸಿರು ಬಂದು ಅಲ್ಲಲ್ಲಿ ಕುಂತು ಸುಧಾರಿಸಿಕೊಂಡೆವು. ಸುಮಾರು ಅರ್ಧ ಹತ್ತಿದೆವು ಅನ್ನಿಸಿದಾಗ, ಒಂದು ಕಡೆ 'ಕೂರಬಹುದಾದಂತಹ ಜಾಗ' ಕಂಡಾಗ ಕುಂತು, ಕಟ್ಟಿಸಿಕೊಂಡು ಹೋಗಿದ್ದ ಚಪಾತಿ-ಪಲ್ಯ ತಿಂದೆವು. ನೀರು ಕುಡಿದೆವು. ಮತ್ತೆ ಹತ್ತತೊಡಗಿದೆವು. ಹತ್ತಿದಷ್ಟೂ ಬೆಟ್ಟ; ಮುಗಿಯದ ದಾರಿ; ದಾರಿಯಲ್ಲದ ದಾರಿ; ಎಲ್ಲೆಲ್ಲೂ ಕಲ್ಲುಬಂಡೆ; ಒಂದಷ್ಟು ಹಸಿರು ಚಿಗುರು, ಪಾಪಸು ಕಳ್ಳಿ, ನಿಂತ ನೀರು ಅಲ್ಲಲ್ಲಿ.... ಬೆಟ್ಟ ಅದೆಷ್ಟು ಕಡಿದಾಗಿದೆಯೆಂದರೆ... ಹೆಚ್ಚುಕಮ್ಮಿಯಾಗಿ ಜಾರಿ ಬಿದ್ದರೆ ಪುಡಿಪುಡಿ; ಹೆಣ ಸಿಗುವುದೂ ಡೌಟು.. ಕೆಲವೊಂದೆಡೆ ತೆವಳಿಕೊಂಡು ಸಾಗಬೇಕು.


ಬೆಟ್ಟದ ಮೇಲೆ ತಲುಪಿದಾಗ ಹನ್ನೆರಡೂ ಕಾಲು. ಅಲ್ಲೊಂದು ಮಂಟಪದಲ್ಲಿ ನಂದಿ. ತಣ್ಣಗೆ ಬೀಸುವ ಗಾಳಿ. ಒಂದು ತಾಸು ಅಲ್ಲೇ ಕುಳಿತು, ಮಲಗಿ, ಫೋಟೋ ತೆಗಿಸಿಕೊಂಡು, ಜೋಕ್ಸ್ ಹೇಳಿಕೊಂಡು, ನಕ್ಕು, ಹಗುರಾದೆವು. ನಂತರ ಊಟ ಮಾಡಿದೆವು. 'ಮಿತವಾಗಿ' ನೀರು ಕುಡಿದೆವು. ಎರಡೂ ವರೆ ಹೊತ್ತಿಗೆ ಗುಂಪುಗುಂಪಾಗಿ ಅವರೋಹಣ ಶುರುಮಾಡಿದೆವು.


ನಿಧಾನಕ್ಕೆ ಇಳಿದು 'ಭೂಮಿ'ಯನ್ನು ತಲುಪಿದೆವು. ಎಳನೀರು ಕುಡಿದೆವು. ಮಳೆ ಬರುವ ಸಾಧ್ಯತೆ ಇತ್ತು. ಬೇಗ ಮನೆ ಮುಟ್ಟಿಕೊಳ್ಳೋಣ ಎಂದುಕೊಂಡು ಹೊರಟೆವು. ಮಧ್ಯದಲ್ಲೊಮ್ಮೆ ನಿಲ್ಲಿಸಿ, ಉಳಿದಿದ್ದ ಚಪಾತಿ ತಿಂದು ಖಾಲಿ ಮಾಡಿದೆವು. ಮತ್ತೆ ಮುಂದೆ ನಿಲ್ಲಿಸಿ ಕಾಫಿ ಕುಡಿದೆವು. 'ಮತ್ತೆ ಸಿಗೋಣ' ಅಂತಂದು ಎಲ್ಲರೂ ಬೇರಾದೆವು.

***

ರಾತ್ರಿ ಲೈಟಾರಿಸಿ ಮಲಗಿದರೆ ಕಣ್ಣಿನಲ್ಲಿ ಅದೇ ಬಿಂಬ: ಸಾವನದುರ್ಗ ಬೆಟ್ಟದ ಮೇಲಿನ ನಂದಿ ಚಳಿ, ಗಾಳಿ, ಮಳೆಗಳಿಗೆ ಹೆದರದೇ ಮೌನವಾಗಿ ನಿಂತಿದೆ. ಇಲ್ಲ, ಕುಳಿತಿದೆ. ಇಲ್ಲ, ಮಲಗಿದೆ. ಗಂಭೀರವಾಗಿ ಮಲಗಿದೆ. ಬಹುಶಃ ಅದಕ್ಕೆ ಭ್ರಮೆ: ಬರುವ ಜನರೆಲ್ಲಾ ಇಷ್ಟೆತ್ತರದ ಬೆಟ್ಟ ಹತ್ತಿ ತನ್ನನ್ನು ನೋಡಲೇ ಬರುತ್ತಾರೆ ಅಂತ! ಅದಕ್ಕೇ ಅಷ್ಟೊಂದು ಗತ್ತು. ಗೋಣು ಸಹ ಅಲ್ಲಾಡಿಸುವುದಿಲ್ಲ. ಅದರ ಪೂಜಾರಿಯ ಮನೆ ಎಲ್ಲಿದೆ? ಆತ ದಿನವೂ ಬೆಳಗ್ಗೆ ಎದ್ದು, ಬೆಟ್ಟ ಹತ್ತಿ ಬಂದು ಪೂಜೆ ಮಾಡಿ ಹೋಗುತ್ತಾನೆಯೇ?

ಉತ್ತರ ಗೊತ್ತಿರದ ಪ್ರಶ್ನೆಗಳು ಕಾಡುತ್ತಿರಲು, ಸುಸ್ತಿಗೇ ನಿದ್ದೆ ಹತ್ತಿತು.

(For more photos, click here / here)

16 comments:

ಶ್ರೀನಿಧಿ.ಡಿ.ಎಸ್ said...

ಮಸ್ತ್ ಬರಹ!! ಅಲ್ಲೇನೋ ಸುಮ್ನೇ ಇದ್ರೂ, ಇಲ್ಲಿ ಸರಿಯಾಗೇ "express" ಮಾಡಿದ್ದೆ!

Sushrutha Dodderi said...

@ ಶ್ರೀನಿಧಿ...

ಈ ಸಲನೂ ನಿಂದೇ first commentಲ ಮಾರಾಯ..! Anyway, thanx. ನಿಂಗ್ಳ ಬ್ಲಾಗಲ್ಲಿ ನಿಮ್ಮ ಅನುಭವಗಳಿಗಾಗಿ ಕಾಯ್ತಾ ಇರ್ತಿ..

Krishnakumar said...

ತುಂಬಾ ಚೆನ್ನಾಗಿ ಬರದ್ದೆ....
ಖುಷಿ ಆತು ಓದಿ...

ಶ್ರೀನಿಧಿ ಹೆಳಿದಾಂಗೆಯಾ ಅಲ್ಲಿ ಸುಮ್ಮಂಗಿದ್ರೂ ಇಲ್ಲಿ ಮಸ್ತ್ ಬರದ್ದೆ...

keep up the good work...
Krishna

Sandeepa said...

ಒಳ್ಳೆಯ ಬರಹ.
ಸಮಯ ಸಾಕಾಗದೇ ಮೊಟುಕುಗೊಳಿಸಿದ್ದೊ ಅಥವಾ --- ? ;)

ಎನಿವೇ! ಸಕ್ಕತ್ತಾಗಿದ್ದು....

Sushrutha Dodderi said...

@ krishnakumar

Thanx bro. ಎಲ್ಲೆಲ್ಲಿ ಸುಮ್ನಿರವೋ ಅಲ್ಲಲ್ಲಿ ಸುಮ್ನಿರವು; ಎಲ್ಲೆಲ್ಲಿ ಮಾತಾಡವೋ ಅಲ್ಲಲ್ಲಿ ಮಾತಾಡವು: ಏನಂಬೆ?

Sushrutha Dodderi said...

@ alpazna

ಸಮಯ....? ಹಂಗೇನಿಲ್ಲ. ಇಷ್ಟೇ ಸಾಕೇನೋ ಅನ್ನಿಸ್ತು.. ಸುಮ್ನೇ ಏನೇನೋ ಬರೆಯೋದು ಬ್ಯಾಡ ಅಂತ... Thanx..

ಶ್ರೀನಿಧಿ.ಡಿ.ಎಸ್ said...

"ಎಲ್ಲೆಲ್ಲಿ ಸುಮ್ನಿರವೋ ಅಲ್ಲಲ್ಲಿ ಸುಮ್ನಿರವು; ಎಲ್ಲೆಲ್ಲಿ ಮಾತಾಡವೋ ಅಲ್ಲಲ್ಲಿ ಮಾತಾಡವು: ಏನಂಬೆ?" -

ಹ್ವಾ, ಹೀಂಗಿದ್ dilogue ಗೆ ಏನೂ ಕಡ್ಮೆ ಇಲ್ಲೆ ನೋಡು! ನಿನ್ ನೋಡಿರೆ ಎಲ್ಲೂ ಮಾತಾಡ ನಮ್ನಿ ಕಾಣ್ತಲ್ಯಪಾ!! :)

Unknown said...

ಮುಂದಿನ ಸಲ ಹೋಗ್ತಾ ನಿನ್ನ ಬಿಟ್ಟಿಕ್ಕಿ ಹೋಗ್ತಿ ನೋಡು...........

Sushrutha Dodderi said...

@ ಶ್ರೀನಿಧಿ..

ಛೇ! ನನ್ ಬಗ್ಗೆ ನಿಂಗ ಎಲ್ಲಾ ತಪ್ಪು ತಿಳ್ಕೈಂದಿ. ನಂಗೆ ಮಾತಾಡಲೆ ಬತ್ತು ಮರಾಯ್ರಾ... ನಿಂಗ್ಳಕಿಂತ ಚನಾಗೇ ಆಡ್ತಿ ಬೇಕರೆ.. ನಾನು 'ವಾಚಾಳಿ' ಅಲ್ಲ; 'ವಾಕ್ಪಟು'! [ಸಂದೀಪ ನೆನಪಿಸಿಕೊಟ್ಟ ಡೈಲಾಗು or 'ನೆಪ':)]

Sushrutha Dodderi said...

@ giridhara

ಇಷ್ಟೆಲ್ಲಾ ಕೋಪ ಮಾಡ್ಕ್ಯಂಡ್ರೆ ಹ್ಯಾಂಗೆ? ಮಾತಾಡ್ದೇ ಇದ್ರೂ ತಪ್ಪು, ಮಾತಾಡಿರೂ ತಪ್ಪು... ಛೇ! ಏನಪ್ಪಾ ಹಿಂಗೆ?

Sandeepa said...

ಸುಶ್ರುತ,

ಕಲ್ಗಾರ್ ಗಿರಿ ಬೆದರಿಕೆಗೆಲ್ಲ ಹೆದ್ರಡ. ಯಂಗವ್ವಿದ್ಯ.
ಇವತ್ತು ರಾತ್ರೆ ಅಲ್ಲಿ ಜಾತ್ರೆಲ್ಲಿ ಗಲಾಟೆ ಮಾಡಿದ್ದಕ್ಕೆ
ಪೋಲೀಸರ ಹತ್ರ ಹೊಡ್ತ ತಿನ್ಕಂಡ್ ಬೈಂದ... ;)

ಗಿರಿ,
sorry, ಹೇಳವು ಅಂತ ಹೇಳಿದ್ದಲ್ಲ. ಏನೊ ಸಂದರ್ಭ
ಬಂತು.... :D

Sushrutha Dodderi said...

@ alpazna

ಹೌದಾ? ಗಿರಿ ಇಷ್ಟೆಲ್ಲ ಕೆಟ್ಟೋಯ್ದ ಅಂತ ಗೊತ್ತಿರ್ಲೆ ಬಿಡು..! ಮುಂದಿನ್ಸಲ ಅವನ್ನೇ ಬಿಟ್ಟಿಕ್ಕೆ ಹೋಪನ ಟೂರಿಗೆ... (ಆದ್ರೆ ಚಪಾತಿ ಮಾಡ್ಸವ್ರು ಯಾರು??!)

Sandeepa said...

ಸಾಕು ಇಷ್ಟಕ್ಕೆ ನಿಲ್ಸನ. ಗಿರಿಗೆ ಬೇಜಾರಾಗ್ತು.

ಆಗಿದ್ದೆಂತು ಅಂದ್ರೆ ನಂಗ್ಳಷ್ಟಕ್ಕೆ ನಂಗವು ಹಳ್ಳಿ ತಿಂಡಿ ತಿಂತಾ
ಇದ್ದಿದ್ಯ.
ಪೋಲೀಸರು ಬಂದು ಗಿರಿಗೆ ಹೊಡ್ದ.

Sushrutha Dodderi said...

@ alpazna

ಹೌದಾ... ಸುಮ್‍ಸುಮ್ನೆ ಬಂದು ಹೊಡೆಯಕ್ಕೆ ಪೋಲೀಸ್ರಿಗೆಂತು ಹುಚ್ಚಾ? ಇವ್ನೇ ಎಂತೋ ಕಿರಿಕ್ ಮಾಡಿರ್ತ... ಇರ್ಲಿ ಬಿಡು, ಎಷ್ಟಂದ್ರೂ ನಮ್ ಗಿರಿ ಸಯ್ಯಲ... ಇದೊಂದ್ ಸಲ ಕ್ಷಮಿಸನ...!

Anveshi said...

ನೀವೆಲ್ಲಾ ಏನೇನೋ ರಂಪ ಮಾಡಿ
ಪೊಲೀಸ್ ಕರೆಸಿ
ಅಲ್ಲಿ ಕಪ್ಪನೆ ಬೆಪ್ಪನೆ ಕುಳಿತ ನಂದಿಗೇನೂ ಆಗಿಲ್ಲ ತಾನೇ?
:)

Sushrutha Dodderi said...

@ ಅಸತ್ಯ ಅನ್ವೇಷಿ

ಉಂಟೇ? ಎಲ್ಲಾದ್ರೂ ಉಂಟೇ...? ನಾವು ನಮಗೇನಾದ್ರೂ ಚಿಂತೆಯಿಲ್ಲ; ನಂದಿಗೆ ಮಾತ್ರ ಏನೂ ಆಗಬಾರದು...! ಹೂಂ, ಅದಕ್ಕೇನಾಗೊತ್ತೆ ಬಿಡಿ, ಕಲ್ಲಿನಂತೆ-ಕಲ್ಲಾಗಿ ಕುಳಿತಿದೆ ಅಲ್ಲಿ.

ಧನ್ಯವಾದಗಳು.