Monday, July 09, 2007

ಗಂಗಮ್ಮನ ಜೀರಿಗೆ

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಓದಿ: ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‍ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನಿತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. 'ಹುಚ್ಚಾಪಟ್ಟೆ ಗಾಳಿ ಸಹ' ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು 'ಈ ವರ್ಷ ಗಂಗಮ್ಮನ ಜೀರಿಗೆ ಫಸಲು ಬಂದಿದೆಯಾ?' ಎಂದು ಕೇಳಲು ಮರೆಯಲಿಲ್ಲ. ಈ ಗಂಗಮ್ಮನ ಜೀರಿಗೆ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ. ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆ, ಬಂದ ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ. ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

ನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ. ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಗಂಗಮ್ಮನ ಜೀರಿಗೆ ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಗಂಗಮ್ಮನ ಜೀರಿಗೆ ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ. ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. 'ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‍ಕಾಯಿ ಜೊತಿಗೆ ಸೇರುಸ್ತಿದ್ದಿ' ಎಂದ ಸರೋಜಕ್ಕನಿಂದ ಹಿಡಿದು 'ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ...' ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ 'ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ' ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಗಂಗಮ್ಮನ ಜೀರಿಗೆಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ 'ಊರಲ್ಲಿ ಗಾಳಿಮಳೆ' ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಗಂಗಮ್ಮನ ಜೀರಿಗೆ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು. ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‍ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! 'ಏನೋ? ಸಿಕ್ಚನೋ?' ಎಂದ ಮಾಬ್ಲಗಿರಣ್ಣನಿಗೆ 'ಇಲ್ಯಾ, ಎರಡೇ ಸಿಕ್ಕಿದ್ದು' ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಗಂಗಮ್ಮನ ಜೀರಿಗೆ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಗಂಗಮ್ಮನ ಜೀರಿಗೆಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ.

[ಈ ಲೇಖನ, ದಿನಾಂಕ ೨೬.೦೮.೨೦೦೭ರ ವಿಜಯ ಕರ್ನಾಟಕ - ಸಾಪ್ತಾಹಿಕ ವಿಜಯದಲ್ಲಿ ಪ್ರಕಟವಾಗಿದೆ.]

18 comments:

ಸಿಂಧು Sindhu said...

ಸು,
ಜೀರಿಗೆ ಮಿಡಿಯ ನೆನಪು, ನೀನು ಮಾಡಿದ ಹುಣಿಸೇ ಗೊಜ್ಜು, ಗಂಗಮ್ಮನ ಮಾವಿನ ಮರದ ನೆರಳಲ್ಲಿ ಹಬ್ಬಿಸಿ ತಂದ ಮಾವಿನ ಮಿಡಿ/ಕಾಯಿಯ ಕಾಲವನ್ನ ಹಬ್ಬದಂತೆ,ವ್ರತದಂತೆ ಸೇರಿಸಿಕೊಂಡ ಊರಿನ ಬದುಕಿನ ಚಿತ್ರಣ.. ಎಲ್ಲವೂ ಮನದಲ್ಲಿ ಹುಳಿಹುಳಿಯಾಗಿ ಇಳಿಯುತ್ತಾ, ಜೀರಿಗೆಯ ಪರಿಮಳವೇಳುತ್ತಿದೆ.. ಚನಾಗಿದೆ.

ಶ್ರೀನಿಧಿ.ಡಿ.ಎಸ್ said...

ಸುಶ್,

ಹೊರಗೆ ಮೋಡ ಕವಿದ ವಾತಾವರಣ. ಮೊನ್ನೆ ಮೊನ್ನೆ ಅಷ್ಟೇ ಮನೆಯಿಂದ ವಾಪಾಸಾಗಿ, ಇನ್ನೂ ಅದೇ ಲಹರಿಯಲ್ಲಿರುವ ಮನಸ್ಸು. ನೀ ನೋಡಿರೆ ಗಂಗಮ್ಮನ ಜೀರಿಗೆ ಬರದ್ದೆ.
ಬಹಳ ಖುಷಿ ಕೊಡ್ತು. ಪೇಪರಿಗ್ಯಾವದಕ್ಕಾರೂ ಕಳ್ಸು!

Anonymous said...

ಪುಟ್ಟಣ್ಣ,
ನಿಂಗ ಎಲ್ಲಾ ಬ್ಲಾಗ್ ಬರಿಯವು ಇದ್ರಲ್ಲಾ ಇಂಥದರ ಬಗ್ಗೆ ಎಲ್ಲಾ ಬರದು ಬರದು ನಂಗೆ ರಾಶಿ ಮನೆ ನೆನಪು ಬಪ್ಪ ಹಂಗೆ ಮಾಡ್ತಿ. ಹೋಗ್ರಪ್ಪಾ ನಿಂಗ.

ಜಿರಿಗೆ ಮಿಡಿ ಉಪ್ಪಿನ ಕಾಯಿ, ಮಂದನ ಗೊಜ್ಜು ಎಲ್ಲಾ ತಿಂದಂಗೆ ಆತು ನೀನು ಬರೆದಿದ್ದು ಓದಿ. ಚನ್ನಾಗಿ ಇದ್ದು ನಿರೂಪಣೆ.

ಸುಶ್ರುತ ದೊಡ್ಡೇರಿ said...

@ ಸಿಂಧು

ಥ್ಯಾಂಕ್ಯೂ ವೆರಿ ಮಚ್ ಅಕ್ಕಾ... ಮೆಚ್ಚುಗೆಗೆ, ಚಂದದ ಪ್ರತಿಕ್ರಿಯಿಗೆ..

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ

ನೀ ಮೆಚ್ಚಿಕೊಂಡೆ ಅಂದ್ಮೇಲೆ ಧನ್ಯ ನಾನು! ಪೇಪರ್ರಿಗೇ... ಊಂ.. ನೋಡನ.. :)

ಸುಶ್ರುತ ದೊಡ್ಡೇರಿ said...

@ ranju

ಅಯ್ಯೋ! ಅಷ್ಟೆಲ್ಲ ತಲಿಗೆ ಹಚ್ಕ್ಯಳಡ್ದೇ ಮಾರಾಯ್ತಿ! ಏನ್ ಮಾಡನ ಹೇಳು, ನಮ್ಗೂ ನಮ್ಮೂರ ನೆನ್ಪುಗಳು ಜಾಸ್ತೀ ಜಾಸ್ತೀ ಕಾಡ್ತು, ಅದ್ಕೇ ಬರಿತ್ಯ ಅಷ್ಟೆ. ಬರೆದಾದಮೇಲೆ ಏನೋ ಸಣ್ಣ ತೃಪ್ತಿ ಸಿಕ್ತು ಅನ್ಸ್ತು.. ಅದ್ಕೇ...

ಥ್ಯಾಂಕ್ಸ್ ತಂಗೂ ಮೆಚ್ಚಿದ್ದಕ್ಕೆ...

suptadeepti said...

ಬೆಂಗಳೂರಿಗೆ ಬಂದಾಗ ನಿಮ್ಮ ಹುಳಿ-ಗೊಜ್ಜು ತಿನ್ನಲಿಕ್ಕೆ ಅಥವಾ ಜೀರಿಗೆ ಮಾವಿನಮಿಡಿಯ (ನಿಮ್ಮಮ್ಮ ಮಾಡಿದ) ಉಪ್ಪಿನಕಾಯಿ ತಿನ್ನಲಿಕ್ಕೆ ಬರಲಾ?

ಸುಶ್ರುತ ದೊಡ್ಡೇರಿ said...

@ suptadeepti

ಖಂಡಿತಾ ಬನ್ನಿ ಜ್ಯೋತೀಜಿ.. ನಾಡಿದ್ದು ಊರಿಗೆ ಹೋಗ್ತಿದೀನಿ.. ಆಗ ಗಂಗಮ್ಮನ ಜೀರಿಗೆ ಹುಳಿ ತಂದಿರ್ತೀನಿ.. ನಿಮ್ಗೆ ಸ್ಪೆಶಲ್ ಮಂದನ್ ಗೊಜ್ಜು ಮಾಡಿ ಊಟ ಹಾಕ್ತೀನಿ ಬಿಡಿ... :)

ಶ್ಯಾಮಾ said...

ಪೂರ್ತಿ ಓದುವ ಹೊತ್ತಿಗೆ ಜೀರಿಗೆ ಮಾವಿನ ಮಿದಿ ಪರಿಮಳ ಮನಸ್ಸೆಲ್ಲ ತುಂಬಿದ ಹಾಗೆ ಆಗಿತ್ತು. ಅಮ್ಮಮ್ಮ ಮಾಡುತ್ತಿದ್ದ ಜೀರಿಗೆ ಮಿದಿ ಉಪ್ಪಿನಕಾಯಿ, ಅಮ್ಮ ಮಾದುವ ಮಂದನ ಗೊಜ್ಜು, ನೀರುಗೊಜ್ಜುಗಳೆಲ್ಲ ನೆನಪಾಗಿ ಬಾಯಲ್ಲಿ ನೀರು ಬಂತು.

ಸುಶ್ರುತ ದೊಡ್ಡೇರಿ said...

@ ಶ್ಯಾಮಾ

ಹಾಗೆ ಬಾಯಲ್ಲಿ ನೀರು ಬಂದಿದ್ರಿಂದಾನೇ ನೀನು 'ಡ' ಅನ್ನೋ ಅಲ್ಲೆಲ್ಲ 'ದ' ಅಂದ್ಯೇನೋ ಅಂತ...?! :) ಸಾರಿ, ತಮಾಷಿ ಮಾಡಿದಿ.. ಥ್ಯಾಂಕ್ಸ್ ಮೆಚ್ಚುಗೆಗೆ..

yaatrika said...

ನಮಸ್ಕಾರ ಸುಶ್ರುತ.

’ಅದುವೆಕನ್ನಡ’ದಲ್ಲೂ ನಿಮ್ಮ ಈ ಲೇಖನ ಇದೀಗ ಓದಿದೆ. ನಿಮ್ಮ ಚಂದದ ’ಪಟ’ಸಹಿತ ಲೇಖನ ಓದಿ ಖುಷಿಯಾಯಿತು. ಇನ್ನು ನಿಮ್ಮ ಬರಹ ಯಥಾಪ್ರಕಾರ ನಿರಾಳ ಅನುಭವ ಕೊಟ್ಟಿತು ಅನ್ನುವುದಕ್ಕೆ ಎರಡು ಮಾತಿಲ್ಲ.
ಒಂದು ಸಂಶಯ ಮಾತ್ರ ಉಳಿಯಿತು - ಮಾವಿನ ಜಾತಿಗೆ ’ಜೀರಿಗೆ’ ಅನ್ನುವ ಹೆಸರು ಯಾಕೆ ಇಟ್ರು ಅಂತ ಕೊನೆಗೂ ಗೊತ್ತಾಗ್ಲಿಲ್ಲ. ತಿಳಿಸ್ತೀರಾ?

ಸುಶ್ರುತ ದೊಡ್ಡೇರಿ said...

ಯಾತ್ರಿಕ, ಪ್ರತಿನಮಸ್ಕಾರ.

ಯಾವ ಜಾತಿಯ ಮಾವು 'ಜೀರಿಗೆ'ಯ ಪರಿಮಳವನ್ನ ಹೊಮ್ಮಿಸೊತ್ತೋ ಆ ಮಾವಿಗೆ 'ಜೀರಿಗೆ ಮಾವು' ಅಂತಾರೆ. ನಮ್ ಗಂಗಮ್ಮನ ಜೀರಿಗೆ ಇದರಲ್ಲೇ ಸ್ಪೆಶಲ್. ಅದರ ಒಂದು ಹನಿ ಸೊನೆಯನ್ನ ನೀವು ಬೆರಳ ತುದಿಗೆ ತಾಗಿಸಿಕೊಂಡರೆ ಮಿನಿಮಮ್ ಎರಡು ದಿನದವರೆಗೆ ಆ ಪರಿಮಳ ಹಾಗೇ ಇರೊತ್ತೆ! ಅಷ್ಟು ಸ್ಟ್ರಾಂಗ್ ಇದೆ ಗಂಗಮ್ಮನ ಜೀರಿಗೆ. ಮತ್ತು ಅದಕ್ಕೇ ಅದು ಶ್ರೇಷ್ಠ ಮತ್ತು ಫೇಮಸ್ಸು.

VENU VINOD said...

ವರ್ಷದ ಹಿಂದೆ ತಿಂದ ಅಪ್ಪೆ/ಜೀರಿಗೆ ಮಿಡಿಯ ನೆನಪು ಮತ್ತೆ ಬಂತು. ನನ್ನ ನಾಲಗೆ ಕೆಳಗೆ ನೀರಾಡಿದ್ದು ಮಿಡಿಯ ಸೊನೆಯ ಖಾರದಷ್ಟೇ ಸತ್ಯ ;)

ಸುಶ್ರುತ ದೊಡ್ಡೇರಿ said...

ವೇಣು,

ಥ್ಯಾಂಕ್ಸ್ ಫಾರ್ ದಿ ಕಮೆಂಟ್. ಮಿಡಿಯ ಸೊನೆ 'ಸುಟಿ' ಅಂತೇವೆ ನಮ್ ಕಡೆ. ಅದನ್ನ ಡೈರೆಕ್ಟಾಗಿ ಬಾಯಿಗೆ ತಾಕಿಸಿದರೆ ಸುಟ್ಟೇ ಹೋಗತ್ತೆ ಚರ್ಮ!! ಅಷ್ಟು ಸ್ಟ್ರಾಂಗ್ ಇರುತ್ತೆ ಅದು.

ಅರ್ಚನ ಧಾಮಿ said...

ತುಂಬಾನೇ ಚೆನ್ನಾಗಿತ್ತು ಸುಶ್ರುತರೇ,
ನಂಗೂ ನಮ್ಮನೆ, ನಮ್ಮಮ್ಮ, ಮತ್ತೆ ನಮ್ಮ ಮಾವಿನಮರದ ನೆನಪು ಬರಿಸಿದ್ರಿ.

ಸುಶ್ರುತ ದೊಡ್ಡೇರಿ said...

@ ಅರ್ಚನ

ಥ್ಯಾಂಕ್ಸ್ ಅರ್ಚನಾಜೀ. ಹಾಗೇ ನೀವು ನಿಮ್ಮನೆ ಮಾವಿನ್ ಮರಾನ ಒಂದು ರೌಂಡ್ ಸುತ್ತಿ, ಬಿದ್ದಿದ್ದ ಹಣ್ಣು ಹೆಕ್ಕೊಂಡು ಬಂದ್ರಿ ತಾನೇ? :)

ಮನಸ್ವಿನಿ said...

ಎಷ್ಟು ಚಂದ ಬರ್ದಿದ್ದ್ಯೋ ಮಾರಾಯ! ಖುಶಿ ಆಯ್ತು :)

ಸುಶ್ರುತ ದೊಡ್ಡೇರಿ said...

@ ಮನಸ್ವಿನಿ

ಹೌದು, ಈ ಬರಹ ನಂಗೂ ಭಾಳಾ ಇಷ್ಟ ಆಗೋಯ್ದು ಅನ್ಸ್ತು. ಮೂರ್ನಾಕು ಸಲ ನಾನೇ ಓದ್ಕ್ಯಂಡಿ. :)
ಥ್ಯಾಂಕ್ಸ್ ಮಾರಾಯ್ತಿ! :-)