Friday, September 28, 2007

ದಾರದ ದಾರಿಯ ದೂರ

ರಾತ್ರಿಗೆ ಈಗ ಹನ್ನೆರಡರ ಜಾವ. ಒಂಟಿ ರೂಮಿನಲ್ಲಿ ಒಂಟಿ ನಾನು. ಒಂಟಿ ಹಾಸಿಗೆ. 'ಬಾ, ನನ್ನ ಮೇಲೆ ಮಲಗು' ಎಂದು ಸುತ್ತಿ ಸುತ್ತಿ ಕೂತಿರುವ ಅದು ಕರೆಯುತ್ತಿದೆ ಹತ್ತಿರದಿಂದ. ನನಗೋ ನಿದ್ರೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಈ 'ಯಯಾತಿ' ಎಂಬ ಹೆಸರಿನ ಪುಸ್ತಕವನ್ನು ಹಿಡಿದು ಕುಳಿತುಬಿಟ್ಟಿದ್ದೇನೆ. ಇದೇನು ಕಾದಂಬರಿಯೋ, ಕಥೆಯೋ, ಗ್ರಂಥವೋ ನನಗೆ ಹೆಸರು ಕೊಡಲು ಸಾಧ್ಯವಾಗುತ್ತಿಲ್ಲ. ಅಮರ ಪ್ರೇಮ ಕಾವ್ಯ ಎಂದರೆ ಸರಿಯಾಗಬಹುದೇನೋ. ಯಯಾತಿಯ ದುಃಖ, ಶಮಾಳ ಪ್ರೀತಿ, ಕಚನ ತತ್ವ, ದೇವಯಾನಿಯ ದುರುಳತನ... ಅಬ್ಬ, ಅದು ಹೇಗೆ ಬರೆದಿದ್ದಾರೆ ವಿ.ಎಸ್. ಖಾಂಡೇಕರ್! ಅದೆಷ್ಟು ಅದ್ಭುತವಾಗಿ ಕನ್ನಡಕ್ಕೆ ತಂದಿದ್ದಾರೆ ವಿ.ಎಂ. ಇನಾಂದಾರ್! ಅದರೊಳಗೇ ಮುಳುಮುಳುಗಿ ಹೋಗುತ್ತೇನೆ ನಾನು.. ಮುಳುಗಿನಲ್ಲೇ ತೇಲಿ ಮತ್ತೆಲ್ಲೋ ಏಳುತ್ತೇನೆ..

ದೂರದ ಚರ್ಚಿನಲ್ಲಿ ಘಂಟೆ ಹೊಡೆದ ಸದ್ದು. ಮೇನ್ ರೋಡಿನಲ್ಲಿ ಏರು ಹತ್ತುತ್ತಿರುವ ಲಾರಿಯ ಸದ್ದು. ಬಲಕಿವಿಯ ಕಡೆಯಿಂದ ಶುರುವಾಗಿ ಎಡಕಿವಿಯ ಕೊನೆಯಲ್ಲಿ ಮುಗಿದುಹೋದಂತೆ ಹಾದುಹೋದ ಯಮಾಹಾ ಬೈಕಿನ ರೊಂಯ್ ಸದ್ದು. ಯಯಾತಿಯ ಇನ್ನೂರಾ ಮೂವತ್ತೇಳನೇ ಪುಟದ ಮೇಲ್ಗಡೆ ಎಡತುದಿಯನ್ನು ಕಿವಿಯಂತೆ ಸಣ್ಣಗೆ ಮಡಿಚಿ ಗುರುತು ಮಾಡಿ ಮುಚ್ಚಿಟ್ಟು ನಾನು ಗೂಡಿನಿಂದ ಹೊರಬರುತ್ತೇನೆ.

ಆಕಾಶದ ಅಂಗಳದ ತುಂಬ ಯಾರೋ ಚುಕ್ಕಿಗಳನ್ನಿಟ್ಟು ಹೋಗಿದ್ದಾರೆ. ಯಾರದಿರಬಹುದು ಕೆಲಸ..? ದೂರದಲ್ಲಿ ಚಂದ್ರ ಕಾಣಿಸುತ್ತಾನೆ... ಪೋಲಿ, ಇವನದೇ ಕೆಲಸ ಇದು ಅಂದುಕೊಳ್ಳುತ್ತೇನೆ. ನನ್ನ ಕವಿಕಲ್ಪನೆಗೆ ಚಂದ್ರ ಮುಗುಳ್ನಗುತ್ತಾನೆ.

ತಣ್ಣನೆ ಟೆರೇಸು. ಒಂದು, ಎರಡು, ಮೂರು, ನಾಲ್ಕು ....ಐದನೇ ಹೆಜ್ಜೆ ಇಟ್ಟವನು, ಏನೋ ತಡೆದಂತಾಗಿ ಹಿಂದಡಿಯಿಡುತ್ತೇನೆ. ಏನೋ ತಡೆದಂತಾಯಿತು. ತಂತಿಯಂತಹುದು. ಅಥವಾ ಹಗ್ಗ. ಇನ್ನೆರೆಡು ಹೆಜ್ಜೆ ಹಿಂದಿಟ್ಟು ನಾನು ಕಣ್ಣನ್ನು ಕಿರಿದು ಮಾಡಿ ನೋಡುತ್ತೇನೆ. ಹೌದು, ಹಗ್ಗ. ಒಂದು ದಾರ. ಹೊಲಿಯಲು ಬಳಸುತ್ತಾರಲ್ಲ, ಅಂತಹ ಒಂದು ದಾರ. ನನ್ನ ಎದೆ ಮಟ್ಟದಲ್ಲಿ ಟೆರೇಸಿನಲ್ಲಿ ಅಡ್ಡ ಹೋಗಿದೆ. ನಾನು ಆಚೆ ದಾಟದಂತೆ, ಬೇಲಿಯಂತೆ, ಗಡಿರೇಖೆಯಂತೆ ನನ್ನನ್ನು ತಡೆದು ನಿಲ್ಲಿಸಿದೆ. ಬೆಳದಿಂಗಳ ಬೆಳಕಿಗೆ ಬೆಳ್ಳಗೆ ಹೊಳೆಯುತ್ತಿದೆ. ತಂಬೂರಿಯ ತಂತಿಯಂತೆ ನಾನದನ್ನು ಮೀಟುತ್ತೇನೆ. ಗಾಳಿಯಲ್ಲೊಮ್ಮೆ ತುಯ್ದಾಡುತ್ತದೆ ದಾರ. ಸಂಜೆ ಮನೆಗೆ ಬರುವಾಗ ಇರಲಿಲ್ಲವಲ್ಲ ಈ ದಾರ? ಈಗೆಲ್ಲಿಂದ ಬಂತು ಇದು? ಎಲ್ಲಿಗೆ ಹೋಗಿದೆ? ಯಾರು ಎಳೆದದ್ದು ಇದನ್ನು? ಯಾಕೆ ಎಳೆದದ್ದು?

ನನಗೆ ಏನೋ ನೆನಪಾದಂತಾಗುತ್ತದೆ. ಕ್ಷಣದಲ್ಲೇ ಆ ನೆನಪು ಸ್ಪಷ್ಟವಾಗುತ್ತದೆ. ಚಿಕ್ಕವನಿದ್ದಾಗ ನಾನೂ ಹೀಗೇ ದಾರ ಎಳೆದು ಆಟವಾಡುತ್ತಿದ್ದುದು... ನಾವು ಟೆಲಿಫೋನ್ ಆಟ ಆಡುತ್ತಿದ್ದೆವು. ಒಂದು ಟೂಥ್‍ಪೇಸ್ಟ್ ಡಬ್ಬಿಯನ್ನು ಮಧ್ಯದಲ್ಲಿ ಕತ್ತರಿಸಬೇಕು. ಈಗ ಎರಡು ಪುಟ್ಟ ಪುಟ್ಟ ಡಬ್ಬಿಗಳಾಗುತ್ತವಲ್ಲ, ಒಂದು ಊದ್ದ ದಾರ ತೆಗೆದುಕೊಂಡು ಒಂದು ತುದಿಯನ್ನು ಒಂದು ಡಬ್ಬಿಯ ತುದಿಗೆ ಕಟ್ಟುವುದು. ದಾರದ ಮತ್ತೊಂದು ತುದಿಯನ್ನು ಮತ್ತೊಂದು ಡಬ್ಬಿಯ ತುದಿಗೆ ಕಟ್ಟುವುದು. ಒಂದು ಡಬ್ಬಿಯನ್ನು ಒಬ್ಬರು ಹಿಡಿದುಕೊಂಡು ಇಲ್ಲೇ ನಿಲ್ಲುವುದು. ಮತ್ತೊಬ್ಬರು ದೂರ ದೂರ ಹೋಗುವುದು. ದೂರ ಹೋಗಿ ಸಣ್ಣಗೆ ಮಾತಾಡುವುದು. ಅದು ಈಚೆಗಿರುವವರಿಗೆ ದಾರದ ಮೂಲಕ ಹರಿದು ಬಂದು ಡಬ್ಬಿಯಲ್ಲಿ ಗುನುಗುಗುನುಗಾಗಿ ಕೇಳಿಸುತ್ತದೆ.

ಅಪ್ಪ ಹೇಳಿಕೊಟ್ಟದ್ದು ಅದನ್ನು ನನಗೆ. ಸಾಗರದಿಂದ ತಂದ ಹೊಸ ಕೋಲ್ಗೇಟ್ ಡಬ್ಬಿಯನ್ನು ಕತ್ತರಿಸಿ ನನಗವನು ಮಾಡಿಕೊಟ್ಟಿದ್ದ ಈ ಫೋನು. ಅವನು ಟೆಲಿಫೋನ್ ತಯಾರಿಸುವಾಗ ಪಕ್ಕದಲ್ಲಿ ಕೂತು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ ನಾನು. ತಯಾರಾದಮೇಲೆ ತಾನೊಂದು ತುದಿ ಹಿಡಿದು ಜಗುಲಿಯ ಮೇಲೆ ನಿಂತು ಮತ್ತೊಂದು ತುದಿಯನ್ನು ನನಗೆ ಕೊಟ್ಟು ದೂರಕ್ಕೆ ಹೋಗುವಂತೆ ಹೇಳಿದ. ನಾನು ಡಬ್ಬಿಯನ್ನು ಹಿಡಿದು ಅಂಗಳಕ್ಕೆ ಓಡಿದೆ. ದಾರ ಬರುವವರೆಗೂ ಹೋಗಿ, ದಾರ ಜಗ್ಗುವಂತಾದಾಗ ನನ್ನನ್ನು ಅಲ್ಲೇ ನಿಲ್ಲುವಂತೆ ಹೇಳಿದ ಅಪ್ಪ. 'ಫೋನ್ ಕಿವೀಲಿ ಇಟ್ಕೋ' ಎಂದ. ನಾನು ಕಿವಿಗೆ ಹಿಡಿದೆ. 'ಹಲೋ ಹಲೋ.. ಪಾಪು.. ಕೇಳ್ತಾ ಇದ್ದಾ..?' ಕೇಳಿದ. ಅಪ್ಪನ ಪಿಸುಮಾತು ದಾರದಲ್ಲಿ ಹರಿಹರಿದು ಬಂದು ಈ ಡಬ್ಬಿಯಲ್ಲಿ ಅಪ್ಪನೇ ಹತ್ತಿರ ನಿಂತು ಮಾತಾಡಿದಂತೆ ಕೇಳಿಸಿ ಏನೋ ಒಂಥರಾ ಭಯವಾದಂತಾಗಿ ನನಗೆ ರೋಮಾಂಚನ! 'ಹಲೋ ಹಲೋ.. ಕೇಳ್ತಾ ಇದ್ದಾ..? ನೀನೂ ಮಾತಾಡು..' ಅಪ್ಪ ಹೇಳುತ್ತಿದ್ದ. ನನಗೆ ಕೇಳಿಸುತ್ತಿತ್ತು. 'ಹಾಂ, ಕೇಳ್ತಾ ಇದ್ದು' ಎಂದೆ. 'ಇನ್ನೂ ಮಾತಾಡು..' ಎಂದ. ಆದರೆ ಅಪ್ಪನ ಜೊತೆ ಇನ್ನೂ ಏನು ಮಾತಾಡುವುದು ಅಂತಲೇ ನನಗೆ ಹೊಳೆಯಲಿಲ್ಲ. ಅಚಾನಕ್ಕಾಗಿ ಅಪ್ಪನ ಜೊತೆ, ಅದೂ ಫೋನಿನಲ್ಲಿ ಏನಂತ ಮಾತಾಡುವುದು? ನಾನು-ಅಪ್ಪ ಸಾಧಾರಣವಾಗಿ ಮಾತಾಡಿಕೊಳ್ಳುತ್ತಿದ್ದುದೇ ಕಮ್ಮಿ. ಅಂಥದರಲ್ಲಿ ಈಗ ಫೋನಿನಲ್ಲಿ ಏನು ಮಾತಾಡುವುದು? ಅಲ್ಲದೆ ನಾನು ಅಷ್ಟರೊಳಗೆ ಫೋನಿನಲ್ಲಿ ಮಾತಾಡಿರಲೇ ಇಲ್ಲ. ನಮ್ಮೂರಿನಲ್ಲಿ ಆಗ ಪಾಪಣ್ಣನ ಮನೆಯಲ್ಲಿ ಮಾತ್ರ ಫೋನಿತ್ತು. ವಿಪಿಟಿ ಫೋನು. ಡಾಕ್ಟ್ರ ಮನೆಯಲ್ಲೂ ಇತ್ತು ಅನ್ಸುತ್ತೆ. ನಾನು ಫೋನಿನಲ್ಲಿ ಮಾತಾಡಿರಲೇ ಇಲ್ಲ. ಪಾಪಣ್ಣನ ಮನೆಗೆ ಹೋದಾಗ ಯಾರಾದರೂ ಮಾತಾಡುತ್ತಿರುವುದನ್ನು ನೋಡಿದ್ದೆ ಅಷ್ಟೆ. ಅದು ಬಿಟ್ಟರೆ ಭಾನುವಾರದ ಸಿನಿಮಾಗಳಲ್ಲಿ ನೋಡಿದ್ದೆ. ನನಗಂತೂ ಅಪ್ಪನೊಟ್ಟಿಗೆ ಏನು ಮಾತಾಡುವುದು ಅಂತಲೇ ತಿಳಿಯದೆ, ತೀರಾ ಸಂಕೋಚವಾಗಿ ಸುಮ್ಮನೆ ನಿಂತುಬಿಟ್ಟಿದ್ದೆ.

ಇದೂ ಹಾಗೆಯೇ ಟೆಲಿಫೋನ್ ವ್ಯವಸ್ಥೆಯಾ? ದಾರದಗುಂಟ ನಾನು ಟೆರೇಸಿನ ತುದಿಗೆ ಬರುತ್ತೇನೆ. ನಮ್ಮ ಪಕ್ಕದ ಮನೆಯ ಟೆರೇಸಿನಿಂದ ಉದ್ಭಸಿದಂತೆ ಕಾಣಿಸುತ್ತದೆ ದಾರದ ತುದಿ. ಹೌದಾ? ಏನೋ, ಸರಿಯಾಗಿ ಕಾಣುತ್ತಿಲ್ಲ. ಇವತ್ತು ಹುಣ್ಣಿಮೆಯಾಗಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತೇನೋ. ಈಗಿನ ಕಾಲದಲ್ಲೂ ಹೀಗೆ ದಾರ ಎಳೆದು ಫೋನ್ ಮಾಡಿಕೊಂಡು ಆಟವಾಡುವ ಮಕ್ಕಳಿದ್ದಾರಾ? ಅದೂ ಬೆಂಗಳೂರಿನಲ್ಲಿ? ಚಿಕ್ಕ ಹುಡುಗರ ಕೈಯಲ್ಲೂ ಮೊಬೈಲುಗಳಿರುವಾಗ ಈ ದಾರ ಎಳೆಯುವ ರಿಸ್ಕು ಯಾರು ತಾನೆ ತೆಗೆದುಕೊಂಡಾರು ಎಂದೆನಿಸಿ ನಗು ಬಂತು.

ಹಾಗಾದರೆ ಏನಿದು ದಾರ? ಹಾಂ, ಹೊಳೆಯಿತು. ಇದು ಗಾಳಿಪಟದ ದಾರ. ಹೌದು, ಸಂಜೆ ಹೊತ್ತಿಗೆ ಪಕ್ಕದ ಮನೆ ಟೆರೇಸಿನ ಮೇಲೆ ನಿಂತು ಇಬ್ಬರು ಹುಡುಗರು ಗಾಳಿಪಟ ಹಾರಿಸುತ್ತಿದ್ದರು. ಬಹುಶಃ ಗಾಳಿಪಟ ಯಾವುದೋ ಮರಕ್ಕೋ, ಟವರ್ರಿಗೋ, ದೊಡ್ಡ ಕಟ್ಟಡದ ತುದಿಗೋ ಸಿಕ್ಕಿಕೊಂಡಿರಬೇಕು. ಕತ್ತಲಾದ್ದರಿಂದ ದಾರವನ್ನು ಹಾಗೇ ಬಿಟ್ಟು ಹೋಗಿದ್ದಾರೆ ಹುಡುಗರು.

ಆದರೂ ನನಗೇಕೋ ಅನುಮಾನ.. ಇದು ಗಾಳಿಪಟದ ದಾರವೇ ಹೌದೇ? ಅಥವಾ ನಾನು ಆಗ ಅಂದುಕೊಂಡಂತೆ ಟೆಲಿಫೋನ್ ಲೈನೇ? ಆ ಕಡೆಯ ಮನೆಯಲ್ಲಿ ಒಬ್ಬ ಹುಡುಗ, ಈ ಕಡೆಯ ಮನೆಯಲ್ಲಿ ಒಬ್ಬ ಹುಡುಗಿ ಇರಬಹುದೇ? ಅವರಿಬ್ಬರೂ ಪ್ರೇಮಿಗಳೇ? ರಾತ್ರಿಹೊತ್ತು, ಎಲ್ಲರೂ ಮಲಗಿರಲು, ಇವರಿಬ್ಬರೇ ಟೆರೇಸಿಗೆ ಬಂದು, ಒಬ್ಬರನ್ನೊಬ್ಬರು ದೂರದೂರದಿಂದ ನೋಡಿಕೊಳ್ಳುತ್ತ, ಈ ಫೋನಿನ ಮೂಲಕ ಪಿಸುಮಾತನಾಡಿಕೊಳ್ಳುತ್ತ, ಬೆಳದಿಂಗಳು ಚೆಲ್ಲಿದ ಟೆರೇಸಿನಮೇಲೆ ನಡೆದಾಡುತ್ತಿರುತ್ತಾರೆಯೇ? ಮಾತು ಸಾಕಾಗಿ, ಕಣ್ಣು ನಿದ್ರೆ ಬಯಸಿ, ಕೆಳಗಿಳಿದುಹೋಗುವ ಮುನ್ನ ಇಬ್ಬರೂ ಫ್ಲೈಯಿಂಗ್ ಕಿಸ್ ರವಾನಿಸಿಕೊಂಡು, ಗುಡ್‍ನೈಟ್ ಹೇಳಿ... ಇಲ್ಲ, ನಾನು ಇಷ್ಟೆಲ್ಲ ಕಲ್ಪನೆ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ನಾನು ಸಿಕ್ಕಾಪಟ್ಟೆ ಯೋಚಿಸುತ್ತಿದ್ದೇನೆ. ತಪ್ಪು ಸುಶ್, ತಪ್ಪು.

ಗಾಳಿಪಟ ಏನಕ್ಕೆ ಸಿಲುಕಿಕೊಂಡಿದೆ? ನಾನು ಟೆರೇಸಿನ ಆಚೆ ತುದಿಗೆ ನಡೆಯುತ್ತೇನೆ. ದಾರದ ಮೈಯನ್ನೇ, ಕಣ್ಣು ನಿಲುಕುವವರೆಗೂ ದೃಷ್ಟಿ ಹಾಯಿಸಿ ನೋಡುತ್ತೇನೆ. ಸ್ವಲ್ಪ ದೂರದವರೆಗೆ ಕಾಣುತ್ತದೆ ಅಷ್ಟೆ. ಆಮೇಲೆ ಏನಾಗಿದೆಯೋ ಎಲ್ಲಿಗೆ ಹೋಗಿದೆಯೋ ಹೇಗೆ ಮುಂದುವರೆದಿದೆಯೋ ಗೋಚರಿಸುವುದಿಲ್ಲ. ಬೆಳಗ್ಗೆ ಎದ್ದಕೂಡಲೇ ನೋಡಬೇಕು ಎಂದುಕೊಳ್ಳುತ್ತೇನೆ. ಆಕಳಿಕೆ ಬರುತ್ತದೆ.

ಟಾಯ್ಲೆಟ್ಟಿಗೆ ಹೋಗಿಬಂದು ರೂಮಿನೊಳಸೇರುವಾಗ ಮತ್ತೆ ನೆನಪು ಮುಂದುವರೆಯುತ್ತದೆ: ಅಪ್ಪ ಮಾಡಿಕೊಟ್ಟ ಫೋನು ನನಗೆ ತುಂಬಾ ಇಷ್ಟವಾಗಿಬಿಟ್ಟು, ನಾನು ಊರ ಹುಡುಗರಿಗೆಲ್ಲ ತೋರಿಸಿ, ಕೊನೆಗೆ ನಮ್ಮ ಮನೆಗೂ ಮಧು ಮನೆಗೂ ಒಂದು ಟೆಲಿಫೋನ್ ಲೈನ್ ಎಳೆದಿದ್ದೆವು ನಾವು! ಆದರೆ 'ತಾಂತ್ರಿಕ ಅಡಚಣೆ'ಗಳಿಂದಾಗಿ ನಮ್ಮ ಟೆಲಿಫೋನ್ ವ್ಯವಸ್ಥೆ ಸಕ್ಸಸ್ ಆಗಿರಲಿಲ್ಲ. ಮಧು 'ಕೇಳ್ತಾ ಇದ್ದನಾ?' ಎಂದು ಕೂಗುತ್ತಿದ್ದುದು ನನಗೆ ಡೈರೆಕ್ಟಾಗಿಯೇ ಕೇಳಿಸುತ್ತಿತ್ತು. ಇಂತಹ ಸಾಹಸ ಕಾರ್ಯ ಮಾಡಿದುದಕ್ಕೆ ಇಬ್ಬರ ಮನೆಯಿಂದಲೂ ಪ್ರಶಂಸೆ ಸಿಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡು ಶುರುಮಾಡಿದ್ದ ನಮಗೆ ಒಂದು ಪೂರ್ತಿ ನೂಲಿನುಂಡೆ ವೇಸ್ಟ್ ಮಾಡಿದ್ದಕ್ಕಾಗಿ ಬೈಗುಳದ ಬಹುಮಾನ ಸಿಕ್ಕಿದ್ದು ಬಿಟ್ಟರೆ ಮತ್ತಿನ್ನೇನೂ ಸಿಕ್ಕಿರಲಿಲ್ಲ.

ಹಾಸಿಗೆ ಬಿಚ್ಚಿ ಮಲಗುವ ಮುನ್ನ ಹೊಳೆಯುತ್ತದೆ: ಹೌದು, ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ. ರೊಟೀನ್ ಲೈಫು. ಬೆಳಗ್ಗೆ ಎದ್ದಕೂಡಲೆ ಸ್ನಾನ ಮಾಡಿ ಆಫೀಸಿಗೆ ಹೊರಡುವುದು, ಸಂಜೆಯವರೆಗೂ ಆಫೀಸು, ಆಫೀಸು ಮುಗಿಸಿ, ಮಧ್ಯದಲ್ಲೇ ಎಲ್ಲೋ ಹೋಟೆಲಿನಲ್ಲಿ ಊಟ ಮಾಡಿ ಮನೆಗೆ ಬರುವುದು. ಒಂದಷ್ಟು ಹೊತ್ತು ಏನನ್ನಾದರೂ ಓದಿ ಮಲಗಿಬಿಡುವುದು. ಮತ್ತೆ ಮರುದಿನ ಬೆಳಗ್ಗೆ ಆಫೀಸು.

ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ. ಕಂಡುಕೊಳ್ಳಬೇಕಿದೆ: ಮನೆಯಿಂದ ಮನೆಗೆ, ಮನದಿಂದ ಮನಕ್ಕೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಇರುವ ದಾರದ ದಾರಿಯ ದೂರ...


[೨೪.೦೫.೨೦೦೫; ರಾತ್ರಿ ೧]

19 comments:

ರಂಜನಾ ಹೆಗ್ಡೆ said...

ಸುಶ್,
ನಿನ್ನ ಲೇಖನ ಎಲ್ಲಿಯೋ ಶುರುವಾಗಿ ಎಲ್ಲೆಲ್ಲೋ ಅಲೆದು ಎಲ್ಲೋ ಕೊನೆ ಮುಟ್ಟಿದ ಹಾಗೆ ಅನ್ನಿಸಿತು.

ಯಯಾತಿ ಪುಸ್ತಕದ ಬಗ್ಗೆ ಇನ್ನು ಸ್ವಲ್ಪ ಜಾಸ್ತಿ ಬರೆದಿದ್ರೆ ಚನ್ನಾಗಿ ಇರ್ತಿತ್ತು. ನಾನು ಓದಿದ ಪುಸ್ತಕಗಳಲ್ಲೆ ಅದು ಅದ್ಭುತವಾದ ಪುಸ್ತಕ.

ನೀನು ಹೇಗೆ ಪ್ರೇಮಿಗಳು ಕಟ್ಟಿರಬಹುದು ಅಂಥ ಬರದೇಯೋ ಹಂಗೆ ನಾನು ಯೋಚನೆ ಮಾಡ್ತಾ ಇದ್ದೆ.
ಆಮೇಲೆ ಎನಾಯ್ತು ದಾರ ಕಟ್ಟಿದ್ದು ಯಾರು?

Harisha - ಹರೀಶ said...

ಗಾಳಿಪಟ ಹಾರಿಸುತ್ತಿದ್ದ ಆ ದಿನಗಳು ಇತಿಹಾಸದ ಪುಟ ಸೇರಿ ಎಷ್ಟೋ ದಿನಗಳಾಗಿರುವಾಗ, ದಾರದ ಟೆಲಿಫೋನ್ ಉಪಯೋಗಿಸಿ ವರುಷಗಳೇ ಕಳೆದಿರುವಾಗ ಬಾಲ್ಯದ ನೆನಪು ತಂದಿತಲ್ಲದೆ ಕೊನೆಗೆ ಬರೆದಿರುವ "ಇತ್ತೀಚೆಗೆ ನನ್ನ ದಿನಗಳಲ್ಲಿ ಯಾವುದೇ ಸ್ವಾರಸ್ಯ ಇಲ್ಲದಾಗಿದೆ ... ಮತ್ತೆ ಮರುದಿನ ಬೆಳಗ್ಗೆ ಆಫೀಸು" ಎಂಬ ಸಾಲುಗಳು ಇಂದಿನ ಜೀವನದಲ್ಲಿನ ವೈವಿಧ್ಯತೆಯ ಕೊರತೆಯನ್ನು ಬಿಂಬಿಸುತ್ತವೆ...

ಒಂದೇ ಮಾತಿನಲ್ಲಿ ಹೇಳುವುದಾದರ, ಸುಂದರ ಕಲ್ಪನೆ.

Anonymous said...

Dear susruta,

Nannate ennobba pustaka prami eddane annode ondu kushi.
Geleyaa ondu salahe, dayavettu putada tudi madesi book mark maaduva abyaasa bettu bedu. Adu putagalannu haalu maadutte.

-Snaheta

VENU VINOD said...

ದಾರದ ರಹಸ್ಯ ಕೊನೆಗೂ ಗೊತ್ತಾಗ್ಲಿಲ್ಲ. ನಿಮಗೆ ಗೊತ್ತಾಯ್ತ?

Anonymous said...

ಸುಶ್ರುತ ಅವರೇ,
ನಿಮ್ಮ ಎಲ್ಲಾ ಲೇಖನಗಳು ತುಂಬಾ ಚನ್ನಾಗಿ ಮೂಡಿಬಂದಿವೆ. ನಿಮ್ಮ ಲೆಖನಗಳನ್ನು ತಪ್ಪದೇ ಓದುತ್ತೇನೆ. ನಿಮ್ಮ ಬ್ಲಾಗನ್ನು ದೇಟ್ಸ ಕನ್ನಡದಲ್ಲಿ ನೋಡಿದಾಗಿಂದಿನಿಂದ ಪ್ರತಿ ತಿಂಗಳು ಇದರಲ್ಲಿ ನಿಮ್ಮ ಒಳ್ಳೆಯ ಹಾಸ್ಯ ಭರಿತ ಲೇಖನಗಳನ್ನು ಓದಿ ನಕ್ಕದ್ದೇನೆ. ಮತ್ತಸ್ಟು ಲೇಖನಗನ್ನು ನಿರೀಕ್ಷಿಸುತ್ತೇನೆ.
ನಮಸ್ಕಾರಗಳು,

ಸಿಂಧು sindhu said...

ಪ್ರೀತಿಯ ಸು,

ಈಗಷ್ಟೇ ನಿನ್ನ ಬರಹ ಓದಿದೆ. interesting..
ಯಯಾತಿ, ನನ್ನ ತುಂಬ ಇಷ್ಟದ ಪುಸ್ತಕಗಳಲ್ಲಿ ಮೊದಲನೆಯದು.. ಖಾಂಡೇಕರ್ ಅವರ ಇನ್ನೊಂದು ಮಾಣಿಕ್ಯ - "ಅಶ್ರು", ಎರಡನೆಯದು.. ಅದು ಸಿಕ್ಕಿದರೆ ತಪ್ಪದೆ ಓದು.

ದಾರವನ್ನ ಎಳೆದು ಪೋಣಿಸಿದ ಭಾವಮಾಲೆ ಎಂದಿನ ಗಾಳ ಹಾಕುವ ರೀತಿಗಿಂತ ವಿಭಿನ್ನವಾಗಿದೆ.. :)

ದಾರದ ಬಗ್ಗೆ ಬೇಂದ್ರೆಯವರ ಸಾಲು, ಕಟ್ಟಿಯವರ ದನಿ.....ಸೂಜಿಯೊಳಗ ದಾರದಾಂಗಾ, ಕಣಿವೆಯೊಳಗೆ ಜಾರಿದಾಂಗ..ಹೋತ ಮನಸು ಅವನ ಹಿಂದ, ಹಿಂದ ನೋಡದಾ...

Anonymous said...

Bechchaneya baraha...

-Poornima

Anonymous said...

ಸುಶ್ರುತ...
ವಿಷಯ ಚೊಲೊ ಇದ್ದು. ನಾನು ಈ ಲೇಖನ post ಆಗಿ ಅರ್ಧ ಗಂಟೆಯೊಳ್ಗೆ ಓದಿದ್ದಿ. ನನ್ನ ಮಗಂಗೆ ಆವತ್ತು Staff Learning Day ರಜ ಕೊಟ್ಟಿದಿದ್ದ. ಅವಂಗೆ ಒಂದು phone ಮಾಡ್ಕೊಡನ ಹೇಳ ಖುಷಿಯಲ್ಲಿ comment ಬರಿಲಿಲ್ಲೆ.
ಯಂಗ ಎಲ್ಲ ಬೆಂಕಿಪೆಟ್ಗೆಯಿಂದ ಈ phone ಮಾಡ್ತಿದ್ಯ. ಅದೆಲ್ಲಾ ನೆನಪಾತು.ರಾಶೀ ಚೊಲೋ ಇದ್ದು ಲೇಖನ.
ಪತ್ತೇದಾರಿಕೆಯಿಂದ ಹಳೇನೆನಪಿಗೆ ಕರೆದೊಯ್ಯುವಂತ ವಿಷ್ಯ.ಅಂದಹಂಗೆ ದಾರ ಕಟ್ದವ್ವು ಯಾರಾಗಿದ್ವೇನ?

ಇನ್ನೊಂದು ಬರಹದ ನಿರೀಕ್ಷೆಯಲ್ಲಿ....

-ಶಾಂತಲಾ ಭಂಡಿ

Anonymous said...

bariya ondu daarada eleyinda ishtu olle lekhana srushti maadidira
too good :-)

venu said...

alda nee benki potna try madidyilyana telephone madale ??
Best iddo... good!!

venu said...

Alda ne benki potna use madidre telephone success agtittala !

Thumba cholo iddo...

Archana said...

ಪುಟ್ಟದಾಗಿದ್ದಾಗ ಹೀಗೆ ಉಂಡೆ ಉಂಡೆ ದಾರವನ್ನ ಗಾಳಿಪಟ ಬಿಡಲು ತೆಗೆದುಕೊಂಡು ಹೋಕ್ತಾ ಇದ್ವು. ದೊಡ್ಡ ಮೈದಾನ ಅದು. ನಾನು, ಅಣ್ಣ, ಪಕ್ಕದ ಮನೇಲಿ ನನಗಿದ್ದ ಬೆಸ್ಟ್ ಫ್ರೆಂಡ್, ಅದರಾಚೆ ಬೀದೀಲಿ ಇದ್ದ ಅಣ್ಣನ ಕ್ಲೋಸ್ ಫ್ರೆಂಡ್, ಆಮೇಲೆ ಆ ಫ್ರೆಂಡ್ ಗಳ ಫ್ರೆಂಡ್ ಗಳು.. ಅವರ ಮನೆ ಎಲ್ಲಿ ಅಂತ ಗೊತ್ತಿಲ್ಲ. ತಿಳಿದುಕೊಳ್ಳಬೇಕು ಅಂತ ಅನಿಸಿಯೂ ಇದ್ದಿರಲಿಲ್ಲ. ಆಗ ದಾರದ ದೂರ ನಮಗೆ ತಿಳಿಯುತ್ತಲೇ ಇರಲಿಲ್ಲ. ಚುಕ್ಕೆಯಾದ ಗಾಳಿಪಟವಷ್ಟೇ ಗೊತ್ತು ನಮಗೆ. ಈಗ ಗಾಳಿಪಟ ಇಲ್ಲ. ದಾರದ ದೂರ ತಿಳಿಯುತ್ತಿದೆ. ಮರೆತಿದ್ದನ್ನು ನೆನಪಿಸಿದ ಯಯಾತಿಗೆ ಟೂತ್ ಪೇಸ್ಟ್ ಫೋನಿಂದ ಥ್ಯಾಂಕ್ಸ್ :)

ನಾನು
ಹಕ್ಕಿ

ಶ್ರೀನಿಧಿ.ಡಿ.ಎಸ್ said...

cಆಹಾ!!

ಏನಲೇ ಇದು?! ಹಳೇ ಕಡತ ಎಲ್ಲಾ ಭಡ ಭಡ ತೆಗ್ದು ಪಟ ಪಟಾ ಹಾಕ್ತಾ ಬಾ ನೋಡನ!

Jagali bhaagavata said...

ನಾವೀಗ ನವರಾತ್ರಿ ಹಬ್ಬದ ತನಕ ಕಾಯ್ತಾ ಕೂತ್ಕೊಂಡಿರ್ಬೇಕಾ, ಮುಂದಿನ ಬರಹಕ್ಕೆ?:-))

Anonymous said...

Daara- represents here fading relationships in modern life. We all had atleast one "daara" in our lives. That daara might be initiated by appa, amma, or whoever showed their significance in life. That daara of relationships is gradually fading away in the modern lifestyle.
Sushrutha gave a link to next day life hinting that he wants to verify the origin of that daara.This sounds like an unknown traveller turning back to examine how much of distance he had travelled in the journey of exploratory life. I am surprised that none of the blog-readers has noticed this hidden (intentionally written or not, though) undercurrent message in this writing. Not only Sushrutha, we all should examine the daara as soon as we get up in the next morning, every day. That daara shouldn't break/damaged.

That daara is a representative of all those wishperings, confirmations, messages, goodnight-kisses and so many moments of unspoken communication between people!!. This is one of the best writings that I have read so far. Sushrutha should try to write such writings wherein he can use such icons (such as daara) in his writings and such a writing can emanate more meanings than the usual textual writings that most of the other bloggers write.

Regards
Dr.D.M.Sagar
Canada

Anonymous said...

I don't agree with Ranju that there should be more about Yayathi. While your writing is not meant for providing critics about that book. There are so many reviews about Yayathi book.

Regards
Dr.D.M.Sagar

ವಿ.ರಾ.ಹೆ. said...

Really a wonderful explanation by Dr. D.M.Sagar. Thankyou.

Sushrutha Dodderi said...

ranju,

ಎಲ್ಲೂ ಹೋಗಿಲ್ಲ ಮಾರಾಯ್ತಿ, ಅಲ್ಲೇ ಟೆರೇಸಿನ ಮೇಲೇ ಇದೀನಿ!

harish,

>>"ಇಂದಿನ ಜೀವನದಲ್ಲಿನ ವೈವಿಧ್ಯತೆಯ ಕೊರತೆ" ಹ್ಮ್.. :(

ಸ್ನೇಹಿತ,

ನಿಮ್ಮ ಸಲಹೆಯನ್ನು ಖಂಡಿತಾ ಪಾಲಿಸುತ್ತೇನೆ. ಥ್ಯಾಂಕ್ಸ್..

ವೇಣು,

ಹ್ಮ್.. ತಾಳಿ ಹೇಳ್ತೀನಿ.. .. :-)

vijaya,

ಥ್ಯಾಂಕ್ಸ್..

ಸಿಂಧು ಅಕ್ಕ,

ಹಿಂದ ನೋಡದಾ.. ಗೆಳತೀ.. ಹಿಂದ ನೋಡದ.. :) ಆಹ್!
ಥ್ಯಾಂಕ್ಯೂ...

Poornima,

Thanksooo... :-)

ಶಾಂತಲಾ,

ಮಗನಿಗೆ ಫೋನ್ ಮಾಡ್ಕೊಟ್ಟೆ ಅಂದ್ರಾ? ಸಾರ್ಥಕವಾಯ್ತು ಕಣ್ರೀ ನಾನು ಬರ್ದಿದ್ದಕ್ಕೂ..! :O

shwetha,

:) Thanx.. :-)

venu,

benki potnadalli madle.. toothpaste dabbadalli madiddu ashte! :)

archana,

ನೈಸ್ ಕಮೆಂಟ್! 'ಗಾಳಿಪಟ ಇಲ್ಲವಾದಮೇಲೆ ದಾರದ ದೂರ ತಿಳಿಯುತ್ತಿದೆ..' ನಿಜ, ಎಲ್ಲರ ಪರಿಸ್ಥಿತಿಯೂ ಅದೇ ಆಗಿದೆ. ದುರಂತವಲ್ವೇ? :(

ಶ್ರೀನಿ,

ತಡಿಯೋ ಮಾರಾಯಾ..!

ಭಾಗ್ವತ್ರು,

ದೀಪಾವಳಿ ಬರೋದ್ರೊಳಗೆ ಮತ್ತೊಂದು ಪೋಸ್ಟ್ ಕೊಟ್ರೆ ಆಯ್ತಲ್ಲಾ? :D :D

D.M. Sagar,

Thanx a zillion for your excellent comment! I really was on air for some time..!

Your comment adds a new annex to my article. Actually the last line of my article was implicitly trying to say the same thing that what you have written clearly ( i.e., about fading relationships). You know what? When I wrote this article two years ago, I thought that it is a plain article which looks into our childhood days. But when I read it again a week back, I observed that 'this article has a hidden message!', and so I put it into the blog immediately. I'm really glad that somebody noticed it and commented.

Sure, I shall try to write such articles more n more.. Thanx again.. :-)

ವಿಕಾಸ್,

ನಿಜ ನಿಜ! ಮತ್ತೂ ಒಂದು ಥ್ಯಾಂಕ್ಸ್!

ಮೃಗನಯನೀ said...

ಮಹಡಿ ಮನೆ ವೇಣು ಮಾಮ ಇಂಥದ್ದನ್ನ ರಾಜೀವನ್ಗೆ ಮಾಡಿ ಕೊಟ್ಟಾಗ ನಾನು ನನ್ನ ಅಕ್ಕ
"ನಮ್ಮ ಮನೇಲಿ ನಿಜ್ವಾದ ಫೊನೆ ಇದೆ ಗೊತ್ತ? ನಿಂದೇನು ಡಬ್ಬ"
ಅಂತ ಅವನ ಹೊಟ್ಟೆ ಉರಿಸಿದ್ದು, ಅವನು ಅಳು ಮುಖ ಮಾಡಿಕೊಂಡು ಹೋಗಿದ್ದು, ಜ್ನಾಪಕ ಬಂದು ನನ್ನ ಬಗ್ಗೆನೇ ನಾಚಿಕೆ ಆಯ್ತು..... ಎಷ್ಟೊಂದು
"ಜಂಬದ ಕೋಳಿ 'ಇದ್ದೆನಲ್ಲ ನಾನು ಆಗ ಅಂತ.....

"ಆದರೆ ನಾಳೆ ಬೆಳಗ್ಗೆ ಎಂದಿನಂತಲ್ಲ. ಇದಕ್ಕೊಂದು ಉದ್ದೇಶವಿದೆ. ಎದ್ದಕೂಡಲೇ ಹೊರಗೆ ಹೋಗಿ ನೋಡಬೇಕಿದೆ. ಪರಿಕಿಸಬೇಕಿದೆ. ದಾರದ ಬಗೆಗಿನ ನನ್ನ ಅನುಮಾನವನ್ನು ಪರಿಹರಿಸಿಕೊಳ್ಳಬೇಕಿದೆ"

excellent lines

ಸಾಗರ್ ಕೊಟ್ಟ ವಿವರಣೆನು ತುಂಬ ಚೆನ್ನಗಿದೆ but Sagar ಇವುಗಳನೆಲ್ಲ ಅನುಭವಿಸಬೇಕು ಅಷ್ಟೊಂದು explicit ಆಗಿ ಹೇಳಬೇಕಿಲ್ಲ ಅನ್ಸುತ್ತೆ ನನಗೆ.. everyone usually has their own visions nd u ristrict his writing to ur vision by explaining it....

hwever ಚಂದದ ಪೊಸ್ಟ್ liked it a world