ಹೌದು, ವಡಪ್ಪೆ ತಿಂದಿದ್ರ ಬಗ್ಗೆ ಬರಿಯಕ್ಕು ನೋಡು ಸಂದೀಪಾ!
ತಿಂದುಂಡಿದ್ರ ಬಗ್ಗೇನೆಲ್ಲ ಏನು ಬರಿಯೋದು, ಮಾಡಿದ್ರ ಬಗ್ಗೆ ಬರೀಬೇಕು. ನಿಜ ಹೇಳಬೇಕೂಂದ್ರೆ, ವಡಪ್ಪೆ ಮಾಡಿದ್ದಷ್ಟೇ, ತಿಂದಿದ್ದು ಅಷ್ಟರಲ್ಲೇ ಇದೆ! ಆದರೆ ಮಾಡಲು ನಾವು ಪಟ್ಟ ಸಾಹಸಗಳಿವೆಯಲ್ಲ, ಅದನ್ನು ಬರೆಯದಿದ್ದರೆ ತಪ್ಪಾದೀತು.
ಅದು ಏನಾಯಿತೆಂದರೆ.... ತಾಳಿ, ಅದನ್ನು ಹೇಳುವ ಮುನ್ನ ಸ್ವಲ್ಪ ಬ್ಯಾಕ್ಗ್ರೌಂಡ್ ಹೇಳ್ಕೋಬೇಕು: ನನ್ನ ರೂಂಮೇಟು ವಿನೂಗೆ ಅಡುಗೆ ಮಾಡಿಕೊಂಡು ತಿನ್ನೋದು ಅಂದ್ರೆ ಒಂದು ಕ್ರೇಜು. ಈ ಮಳ್ಗದ್ದೆ ಊರೋರು ಮತ್ತೆ ನಡಳ್ಳಿ ಊರೋರು ತಿನ್ನೋದ್ರಲ್ಲಿ ಎತ್ತಿದ್ ಕೈಯಿ ಅಂತ ಕ್ಯಾಸನೂರು ಸೀಮೆಲೆಲ್ಲ ಹೆಸರುವಾಸಿ. ಅವರು ಎಷ್ಟ್ರ ಮಟ್ಟಿಗೆ ಹೆಸರುವಾಸಿ ಅಂದ್ರೆ, 'ಕ್ಯಾಸನೂರು ಸೀಮೆಯವ್ರು ತಿನ್ನೋದ್ರಲ್ಲಿ ಎತ್ತಿದ್ ಕೈ' ಅಂತ ಬೇರೆ ಸೀಮೆಯವ್ರೆಲ್ಲ ಮಾತಾಡ್ಕೋತಾರೆ! ಐ ಮೀನ್, ನಾ ಹೇಳಿದ್ದು ನಿಮ್ಗೆ ಅರ್ಥ ಆಯ್ತಲ್ಲ? ಮಳಲಗದ್ದೆ ಮತ್ತು ನಡಹಳ್ಳಿ ಊರಿನವರ ಭೋಜನ ಪ್ರಿಯತೆ ಸುತ್ನಾಲ್ಕು ಸೀಮೆಗಳಲ್ಲಿ ಕ್ಯಾಸನೂರು ಸೀಮೆಗೇ ಒಂದು ಹೆಸರನ್ನು ತಂದುಕೊಟ್ಟಿದೆ. ಲಗ್ನದ ಮನೆಗಳಲ್ಲಿ, ಗಂಡು ಅಥವಾ ಹೆಣ್ಣು ಕ್ಯಾಸನೂರು ಸೀಮೆಯದು ಅಂತಾದ್ರೆ ಛತ್ರದ ಅಡುಗೆ ಮನೆಯಲ್ಲಿ ಮಾತುಕತೆ ನಡೆದಿರುತ್ತದೆ: "ಹೋಯ್, ಬಪ್ಪೋರು ಯಾರು ಗೊತಿದಲ, ಕ್ಯಾಸ್ನೂರು ಸೀಮ್ಯೋರು. ಐಟಮ್ಮೆಲ್ಲ ಸ್ವಲ್ಪ್ ಸ್ವಲ್ಪ ಜಾಸ್ತಿ ಮಾಡವು!"
ಉಳಿದೆಲ್ಲ ವಿಷಯಗಳಲ್ಲಿ ಓಕೆಯಾದರೂ, ವಿನೂಗೆ ನಾನು ತಿನ್ನುವ ವಿಷಯದಲ್ಲಿ ಕಂಪನಿ ಅಲ್ಲವೇ ಅಲ್ಲ. ನಾನು ತಿನ್ನುವುದು ಗುಬ್ಬಿ ತಿಂದಂತೆ ತುದೀ ಬೆರಳುಗಳಲ್ಲಿ ನಾಲ್ಕು ಅಗುಳು. ಅವನದೋ ಇಡೀ ಹಸ್ತ ಬಳಸಿ ಬಳುಗಿ, ಸುರಿದು, ಕತ್ತರಿಸಿ ಮಾಡುವ ಊಟ. ಪ್ರತಿ ರಾತ್ರಿ ಊಟ ಮಾಡುವಾಗ ನಮ್ಮನೆಯಲ್ಲಿ ಇದೇ ಕಾರಣಕ್ಕೆ ಮಾತುಗಳು. ಆಫೀಸಿನಿಂದ ಹೊರಡುವುದು ಸ್ವಲ್ಪ ತಡವಾದರೂ ನಾನು ಅವನಿಗೆ ಫೋನ್ ಹಚ್ಚಿ 'ಏಯ್ ಹೋಟ್ಲಲ್ಲೆ ಊಟ ಮಾಡ್ಕೊಂಡು ಹೋಗೋಣ ಮಾರಾಯಾ' ಅನ್ನುತ್ತೇನೆ. ಅವನು ನನ್ನ ಮಾತನ್ನು ಅಲ್ಲೇ ತುಂಡರಿಸಿ 'ಮನೇಲೆ ಅಡುಗೆ ಮಾಡೋಣ ಬಾ. ನೀ ಕಾಯಿ ಹೆರ್ಕೊಡು ಸಾಕು. ನಾನು ಅಡುಗೆ ಮಾಡ್ತೀನಿ' ಅನ್ನುತ್ತಾನೆ. ನಾನು ಸ್ಟ್ರಾಂಗ್ ಕಾಫಿ, ಖಾರದ ಚಿಪ್ಸು, ಚಾಕ್ಲೇಟು, ಬಿಸ್ಕೇಟು, ಕೇಕು ಎಂದೇನೇನೋ ಹಾಳುಮೂಳನ್ನೆಲ್ಲ ತಿಂದುಕೊಂಡು ಓಡಾಡಿಕೊಂಡಿರುತ್ತೇನೆ. ಅವನು ಹಾಲು, ಕಷಾಯ, ಹಣ್ಣು, ಹಂಪಲು ಇತ್ಯಾದಿಗಳಲ್ಲಿ ಮುಳುಗಿರುತ್ತಾನೆ.
ಇಂಥಾ ವಿನೂ 'ಒಂದು ಭಾನ್ವಾರ ತಿಂಡಿಗೆ ವಡಪ್ಪೆ ಮಾಡವಲೇ ಭಟ್ಟಾ' ಅಂತ ಅವಾಗಿವಾಗ ಹೇಳುತ್ತಿದ್ದ. ಆಗೆಲ್ಲ ನಾನು ಆ ವಡಪ್ಪೆ ಮಾಡಲು ಬೇಕಾಗುವ ಸಮಯ, ಶ್ರಮಗಳನ್ನು ನೆನೆಸಿಕೊಂಡೇ ಒಳಗೊಳಗೇ ಹಿಂಜರಿಯುತ್ತಿದ್ದೆ. ಬಹುಶಃ ನನ್ನ ಹಿಂಜರಿಕೆಯನ್ನು ನೋಡೀ ನೋಡಿ ಬೇಸತ್ತ ವಿನು ತಾನೊಬ್ಬನೇ ಕೂತು ಇದಕ್ಕೆ ಪರಿಹಾರ ಏನೆಂದು ಯೋಚಿಸಿದ್ದಾನೆ. ಆಗ ಅವನಿಗೆ ನೆನಪಾದದ್ದೇ ಸಂದೀಪ! ವಿನಾಯಕನಿಗೆ ಸಂದೀಪನಿಗಿಂತ ಬೆಸ್ಟ್ ಪಾರ್ಟನರ್ ಮತ್ತಿನ್ಯಾರು ಸಿಗಲಿಕ್ಕೆ ಸಾಧ್ಯ? ಸರಿ, ಅದೊಂದು ಭಾನುವಾರ ಅವನು ನನ್ನ ಕಣ್ತಪ್ಪಿಸಿ (ಸಾರಿ, ಕಿವಿ) ಸಂದೀಪನಿಗೆ ಫೋನ್ ಮಾಡಿದ್ದಾನೆ. ಇಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ: ವಡಪ್ಪೆ ಮಾಡಲೇಬೇಕು.
ಸಂದೀಪ ಸಂಜೆ ಆರರ ಹೊತ್ತಿಗೆ ನನಗೆ ಫೋನ್ ಮಾಡಿದ: "ಎಲ್ಲಾ ರೆಡಿನನಾ?"
"ಏಂತು?" ನಾನು ಕೇಳಿದೆ.
"ಅದೇ ವಡಪ್ಪೆ"
"ವಡಪ್ಪೆ?!"
"ಹಾಂ, ವಿನಾಯ್ಕ ಹೇಳಲ್ಯಾ? ಇವತ್ ನಿಮ್ಮನೆಲಿ ವಡಪ್ಪೆ ಮಾಡವು ಅಂತ ಆಯ್ದಲಾ.. ನಾ ಬರ್ತಾ ಇದ್ದಿ. ಹಿಟ್ಟು ಕಲ್ಸಿಟ್ಟಿರಿ!"
"!"
ವಿಶೇಷವೆಂದರೆ, ವಡಪ್ಪೆಯ ಬಗ್ಗೆ ಅಷ್ಟೊಂದು ನಿರಾಸಕ್ತಿ ಹೊಂದಿದ್ದ ನಾನೂ ಅದೇಕೋ ಇದ್ದಕ್ಕಿದ್ದಂತೆ ಹುಜುರತ್ತಾಗಿಬಿಟ್ಟೆ! ನಾನೂ-ವಿನು ಹೋಗಿ ಒಂದು ಕೇಜಿ ಅಕ್ಕಿ ಹಿಟ್ಟು ತಂದೆವು. ಈರುಳ್ಳಿ, ಹಸಿಮೆಣಸು, ತೆಂಗಿನಕಾಯಿ, ವಳ್ಳೆಣ್ಣೆ ತಂದು ಸಂದೀಪ ಬರುವ ಹೊತ್ತಿಗೆ ನಾವು ಸಕಲ ಶಸ್ತ್ರಸನ್ನದ್ಧರಾಗಿ ಕೂತಿದ್ದೆವು. ಸಂದೀಪ ಬಂದಮೇಲೆ ಈರುಳ್ಳಿ ಹೆಚ್ಚಲು ಕೂತೆವು. ಸಣ್ಣಕೆ ಹೆಚ್ಚಬೇಕು ಎಂದಾಯಿತು. ವಿನು ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದು ದೊಡ್ಡಕಾತು ಅಂತ ಸಂದೀಪ ಸ್ವಲ್ಪ ಹೆಚ್ಚಿದ. ಅಂವ ಹೆಚ್ಚಿದ್ದೂ ದೊಡ್ಡಕಾತು ಅಂತ ನಾ ಹೆಚ್ಚಿದೆ. ನಾ ಹೆಚ್ಚಿದ್ದು ದೊಡ್ಡಕಾತು ಅಂತ ಹೇಳಲು ಯಾರೂ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಕಣ್ಣೀರು ಸುರಿಸುತ್ತ ಪೂರ್ತಿ ಈರುಳ್ಳಿಯನ್ನು ನಾನೇ ಹೆಚ್ಚಬೇಕಾಯಿತು. ಆಮೇಲೆ ಹಸಿಮೆಣಸು ಕತ್ತರಿಸಿ ಹಾಕಿದೆವು. ಕಾಯಿಯನ್ನು ಪುಟ್ಟ ಪುಟ್ಟ ಚೂರುಗಳನ್ನಾಗಿ ಕತ್ತರಿಸಿ ಮಿಕ್ಸ್ ಮಾಡಿದೆವು. ನಂತರ ಸುಮಾರು ಅರ್ಧ ಕೆಜಿ ಹಿಟ್ಟು ಬೇಸಿನ್ನಿಗೆ ಹಾಕಿಕೊಂಡು ಅದಕ್ಕೆ ನೀರು-ಎಣ್ಣೆ ಹಾಕಿ, ಹೆಚ್ಚಿದ್ದ ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಸ್ವಲ್ಪ ಉಪ್ಪು ಎಲ್ಲಾ ಹಾಕಿ ಕಲಸಲು ಶುರು ಮಾಡಿದೆವು. ಸ್ವಲ್ಪ ಗಟ್ಟಿಯಾಯಿತು ಎನಿಸಿತು. ನೀರು ಹಾಕಿದೆವು. ನೀರು ಜಾಸ್ತಿಯಾಯಿತು ಎನ್ನಿಸಿತು. ಹಿಟ್ಟು ಹಾಕಿದೆವು. ಮತ್ತೆ ಗಟ್ಟಿಯಾಯಿತೆನ್ನಿಸಿ ನೀರು ಹಾಕಿದೆವು... ಹೀಗೇ ಜಾಸ್ತಿಯಾಗುತ್ತಾ ಕಮ್ಮಿಯಾಗುತ್ತಾ ಅಂತೂ ಹಿಟ್ಟು ಹದಕ್ಕೆ ಬಂತು ಎನಿಸುವಷ್ಟರಲ್ಲಿ ಹಿಟ್ಟಿನ ಪ್ಯಾಕೆಟ್ಟು ಖಾಲಿಯಾಗಿತ್ತು!
ಸರಿ, ಹಿಟ್ಟೇನೋ ಹದಕ್ಕೆ ಬಂತು, ಈಗ ಅದನ್ನು ತಟ್ಟಿ ಕಾವಲಿಯ ಮೇಲೆ ಹಾಕಬೇಕಲ್ಲ... ತಟ್ಟಲಿಕ್ಕೇನಿದೆ ನಮ್ಮ ಬಳಿ? ಸಂದೀಪನ ಬಳಿ ಬರುವಾಗ ಬಾಳೆ ಎಲೆ ತಗೋಂಬಾ ಎಂದಿದ್ದೆವು. ಎಲ್ಲೂ ಸಿಕ್ಕಲಿಲ್ಲವಂತೆ, ಅವನು ತಂದಿರಲಿಲ್ಲ. ಈಗ ಇರುವುದರಲ್ಲಿಯೇ ಏನರಲ್ಲಾದರೂ ಅಡ್ಜಸ್ಟ್ ಮಾಡಬೇಕಾಯ್ತಲ್ಲ.. ನಾವು ಮೊದಲು ಆಯ್ದುಕೊಂಡದ್ದು ಪ್ಲಾಸ್ಟಿಕ್ ಕವರುಗಳು!
ದಪ್ಪ ಪ್ಲಾಸ್ಟಿಕ್ ಕವರೊಂದನ್ನು ಹುಡುಕಿ, ನೀಟಾಗಿ ಕತ್ತರಿಸಿ ಅದರ ಮೇಲೆ ಒಂದು ಮುಷ್ಟಿ ಹಿಟ್ಟಿಟ್ಟು ತಟ್ಟಿದ್ದಾಯ್ತು. ತಟ್ಟಿದ ವಡಪ್ಪೆಗೆ ನಾಲ್ಕಲ್ಲ, ಐದು ತೂತು ಮಾಡಿದ್ದಾಯ್ತು. ಒಲೆಯ ಮೇಲೆ ಕಾವಲಿ ಕಾಯುತ್ತಿತ್ತು. ಸಂದೀಪ ಎತ್ತಿಕೊಟ್ಟ. 'ಕಾವ್ಲಿ ಮೇಲೆ ಹಾಕ್ತಿದ್ದಾಂಗೆ ಕವರ್ ಎತ್ಕ್ಯಳವು' ಎಂದು ಕಾಶನ್ ಕೊಟ್ಟ. 'ಏಯ್ ಎತ್ತಿರೆ ಸೈ ತಗಳಾ' ಎಂದು ಭಾರೀ ಹುರುಪಿನಿಂದ ನಾನೇ ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಮಗುಚಿಯೇಬಿಟ್ಟೆ! ಆದರೆ ನಾನು ಕವರನ್ನು ಎತ್ತುವುದರೊಳಗೇ ಕಾದಿದ್ದ ಕಾವಲಿಗೆ ಪ್ಲಾಸ್ಟಿಕ್ಕೆಲ್ಲ ಮೆತ್ತಿಕೊಂಡು, ಕರಗಿ, ಹೊಗೆಯೆದ್ದು, ಕಮರು ಅಡುಗೆಮನೆಯನ್ನೆಲ್ಲ ತುಂಬಿಕೊಂಡು, ಸಂದೀಪ-ವಿನಾಯಕರ ಮೂಗು ತಲುಪಿ, ಅದನ್ನವರ ಮೆದುಳು ಪ್ರೊಸೆಸ್ ಮಾಡಿ, ಇದು ಪ್ಲಾಸ್ಟಿಕ್ ಸುಟ್ಟ ವಾಸನೆ ಎಂಬುದವರಿಗೆ ಹೊಳೆದು, 'ಏಯ್ ಎಂಥಾತಾ??' ಎಂದು ಕೇಳುವುದಕ್ಕೂ ನಾನು 'ಅಯ್ಯೋ ಹಿಡ್ಕಂಡೇಬುಡ್ಚ!' ಅನ್ನುವುದಕ್ಕೂ ಸರಿಹೋಯಿತು. ಆದರೂ ಅವರು ಅಡುಗೆಮನೆಗೆ ನುಗ್ಗುವುದರೊಳಗೆ ನಾನು ಹರಸಾಹಸ ಮಾಡಿ ಅಷ್ಟಿಷ್ಟು ಪ್ಲಾಸ್ಟಿಕ್ಕು ಎತ್ತಿ ಮರ್ಯಾದೆ ಉಳಿಸಿಕೊಳ್ಳುವ ಯತ್ನ ಮಾಡಿದೆ. ನಮ್ಮ ಮೊದಲ ವಡಪ್ಪೆ ಹೀಗೆ ವೇಸ್ಟಾಯಿತು. ಆಮೇಲೆ ಕಾವಲಿಯನ್ನು ನೆನೆಸಿ, ಕಾಯಿಸಿ, ಕೆರಚಿ, ವ್ಹಿಮ್ ಹಚ್ಚಿ ಏನೇನೋ ಮಾಡಿ ತೊಳೆದು ಕ್ಲೀನ್ ಮಾಡಿದೆವು.
ನಮ್ಮ ಮುಂದಿನ ಪ್ರಯೋಗಕ್ಕೆ ಕತ್ತರಿಸಲ್ಪಟ್ಟದ್ದು ರಟ್ಟುಗಳು! ಬಟ್ಟೆ ಕಂಪನಿಯವರು ನಮ್ಮ ಅಂಗಿಗಳಿಗೆ ರೇಟ್ ಹೆಚ್ಚಿಸಲು ಮುಚ್ಚಿ ಕೊಟ್ಟಿದ್ದ ಚಂದನೆಯ ಬಾಕ್ಸ್ಗಳನ್ನು ಕತ್ತರಿಸಿದೆವು. ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ನಾನು ಎತ್ತಿಕೊಂಡು ಹೋಗಿ ಕಾವಲಿ ಮೇಲೆ ಹಾಕಿದೆ. ಆದರೆ ಈ ವಡಪ್ಪೆ ಹಿಟ್ಟಿಗೆ ಈ ಅಂಗಿ ಬಾಕ್ಸಿನ ಮೇಲೆ ಅದೇನೋ ಪ್ರೀತಿಯೋ ಏನೋ, ನಾನೆಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಅದು ರಟ್ಟಿನಿಂದ ಬಿಡಲೇ ಇಲ್ಲ! ಹಾಲಿನಲ್ಲಿ ಕೂತಿದ್ದ ಅವರು 'ಎಂಥಾತಾ ಎಂಥಾತಾ' ಎನ್ನುತ್ತಿದ್ದರು. ನಾನು ರಟ್ಟಿನಿಂದ ಹಿಟ್ಟು ಬಿಡಿಸುವುದರಲ್ಲೇ ಮಗ್ನನಾಗಿದ್ದೆ. ನನ್ನಿಂದ ಯಾವುದೇ ರಿಪ್ಲೇ ಬಾರದಿದ್ದುದನ್ನು ನೋಡಿ ಅವರೇ ಅಡುಗೆಮನೆಗೆ ಬಂದರು. ನನ್ನ ಕಷ್ಟದ ಬಗ್ಗೆ ಸಂತಾಪ ವ್ಯಕ್ತಪಡಿಸುವುದನ್ನು ಬಿಟ್ಟು ಮತ್ತಿನ್ನೇನೋ ಮಾಡುವುದು ಅವರಿಗೂ ಸಾಧ್ಯವಿರಲಿಲ್ಲ. ಹೀಗೆ ನಮ್ಮ ಎರಡನೇ ಪ್ರಯೋಗವೂ ಫೇಲಾಯಿತು.
ನಾವು ಈಗಾಗಲೇ ಹೇಗೆಹೇಗೋ ಅಷ್ಟಿಷ್ಟು ಬೆಂದು ತಯಾರಾಗಿದ್ದ ವಡಪ್ಪೆಯ ಚೂರುಗಳನ್ನು ಮೂವರೂ ಹಂಚಿಕೊಂಡು ತಿಂದಿದ್ದೆವು. ಅದು ಅದೆಷ್ಟು ರುಚಿಯಾಗಿಬಿಟ್ಟಿತ್ತು ಅಂದ್ರೆ, ನಾವು ವಡಪ್ಪೆ ಮಾಡುವುದನ್ನು ಎಟ್ಟೆನಿಕಾಸ್ಟ್ ಮುಂದುವರಿಸಲೇಬೇಕಿತ್ತು.
ಈ ಬಾರಿ ಹೊಸ ಪ್ರಯೋಗಕ್ಕೆ ಮುನ್ನಾಗುವ ಮೊದಲು ನಾವು ಸ್ವಲ್ಪ ಹೊತ್ತು ಯೋಚಿಸಿದೆವು. ಬಟ್ಟೆಯ ಮೇಲೆ ತಟ್ಟುವುದು ನಮ್ಮ ಐಡಿಯಾವಾಗಿತ್ತು. ವಿನಾಯಕನ ಹಳೆಯ ಶಾಲೊಂದನ್ನು ಕಪಾಟಿನಿಂದ ತೆಗೆದೆವು. 'ಮೊನ್ನೆಯಷ್ಟೇ ತೊಳೆದದ್ದು' ಅಂತ ವಿನು ಅಂದ. ನಾವು ನಂಬಿದೆವು. ಕತ್ತರಿಸಿ ಅದರ ಮೇಲೆ ಸಂದೀಪ ವಡಪ್ಪೆ ತಟ್ಟಿದ. ಎರಡೆರೆಡು ಬಾರಿ ಪ್ರಯೋಗಿಸಿ ಮುಖಭಂಗವಾಗಿದ್ದ ನಾನು ಈ ಬಾರಿ ಮುಗುಮ್ಮಾಗಿ ಪೇಪರ್ರೋದುತ್ತ ಕುಳಿತಿದ್ದೆ. ವಿನು ವಡಪ್ಪೆ ತಟ್ಟಲ್ಪಟ್ಟಿದ್ದ ಬಟ್ಟೆಯನ್ನು ಹಿಡಿದು ಅಡುಗೆಮನೆ ಹೊಕ್ಕ -ನಾನು ಮೊದಲ ಬಾರಿ ಹೊಕ್ಕಷ್ಟೇ ಗತ್ತಿನಿಂದ. ನಾನು ಪೇಪರ್ರನ್ನು ಕೈಯಲ್ಲಿ ಹಿಡಿದಿದ್ದೆನಷ್ಟೇ, ಕಿವಿಯೆಲ್ಲಾ ಇದೀಗ ಅಡುಗೆಮನೆಯಿಂದ ಕೇಳಿಬರಬಹುದಾದ ವಿನಾಯಕನ 'ಛೇ ತೂ' ಗಳನ್ನೇ ನಿರೀಕ್ಷಿಸುತ್ತಿತ್ತು. ಆದರೆ ನಾನು ನಿಬ್ಬೆರಗಾಗುವಂತೆ ವಿನು 'ಆಹಾಹ! ಏನು ಸಲೀಸಾಗಿ ಬಿಡ್ಚಲೇ! ನಾ ಆಗ್ಲೇನೇ ಹೇಳಿದ್ದಿ ಬಟ್ಟೆ ಮೇಲ್ ಹಾಕನ ಅಂತ' ಎನ್ನುತ್ತಾ ಖಾಲಿ ಬಟ್ಟೆಯನ್ನು ಹಿಡಿದು ಬಂದ. ನಾನು ಬೆಪ್ಪನಂತೆ ಮಿಕಿಮಿಕಿ ನೋಡಿದೆ. ಅಂತೂ ನಾವು ಮೂವರು ಗಂಡುಗಲಿಗಳ ಸಾಹಸದಿಂದ ಸುಂದರ ವಡಪ್ಪೆಯೊಂದು ಕಾವಲಿಯ ಮೇಲೆ ಬೆಂದು ಕೆಂಪಾಗಿ ಹೊರಬಂತು. ನಮಗೆ ದ್ರೌಪದಿಯನ್ನೇ ಗೆದ್ದಷ್ಟು ಖುಷಿ!
ಆಮೇಲೆಲ್ಲ ಸುಲಭವಾಯಿತು. ಒಂದರ ಮೇಲೊಂದು ವಡಪ್ಪೆ ತಟ್ಟಿದೆವು. ಐದೇ ನಿಮಿಷದಲ್ಲಿ ಕಾಯಿಚಟ್ನಿ ತಯಾರಾಯಿತು. ಊರಿಂದ ತಂದಿದ್ದ ಜೋನಿ ಬೆಲ್ಲವಂತೂ ಇತ್ತು. ತುಪ್ಪದ ಬಾಟ್ಲಿಯೂ ಇತ್ತು. ಆದರೆ ಪೂರ್ತಿ ವಡಪ್ಪೆ ತಟ್ಟಿಯಾಗಿ, ಅವು ಬೆಂದು, ನಾವು ಪ್ಲೇಟೆಲ್ಲ ಹಾಕಿಕೊಂಡು, ಮಧ್ಯದಲ್ಲಿ ಸಿದ್ಧವಾಗಿದ್ದ ವಡಪ್ಪೆ ಗುಡ್ಡೆ ಇಟ್ಟುಕೊಂಡು ಕೂರುವ ಹೊತ್ತಿಗೆ ಎರಡು ಎಡವಟ್ಟುಗಳಾಗಿದ್ದವು:
ಮಾಡುತ್ತ ಮಾಡುತ್ತಲೇ ನಾವು ಸುಮಾರು ವಡಪ್ಪೆಗಳನ್ನು ತಿಂದುಬಿಟ್ಟಿದ್ದರಿಂದ ನಮ್ಮೆಲ್ಲರ ಹೊಟ್ಟೆಯೂ ತುಂಬಿಹೋಗಿತ್ತು. ಮತ್ತು ಎಂಟು ಗಂಟೆಗೆ ಶುರು ಮಾಡಿದ್ದ ನಮ್ಮ ವಡಪ್ಪೆ ತಯಾರಿಕೆ ಫ್ಯಾಕ್ಟರಿ ಮುಗಿದಾಗ ರಾತ್ರಿ ಹನ್ನೊಂದೂವರೆ ಆಗಿತ್ತು! ಇನ್ನೆಲ್ಲಿಂದ ತಿನ್ನುವುದು? ಒಂದು ಕಡೆಗೆ ನಿದ್ರೆ ಎಳೆಯುತ್ತಿತ್ತು. ಸಂದೀಪ ಜೋಕಿನ ಮೇಲೆ ಜೋಕು ಹೇಳುತ್ತಿದ್ದ. ಚಟ್ನಿ ಬೇರೆ ಖಾರವಾಗಿತ್ತು. ನನಗಂತೂ ನಗುವುದೋ ಅಳುವುದೋ ಒಂದೂ ಗೊತ್ತಾಗದೆ, ತಿಂಗಳಿಗೆ ಕನಿಷ್ಟ ನಾಲ್ಕು ದಿನ ಸ್ವಲ್ಪವೂ ಬೇಸರಿಸಿಕೊಳ್ಳದೆ ಬೆಳಗ್ಗೆ ತಿಂಡಿಗೆ ವಡಪ್ಪೆ ಮಾಡುವ ಅಮ್ಮನನ್ನು ನೆನೆಸಿಕೊಳ್ಳುತ್ತಾ, ಚೂರು ಚೂರೇ ಮುರಿಯುತ್ತ ಮೆಲ್ಲತೊಡಗಿದೆ. ತಲಾ ಎರಡು ವಡಪ್ಪೆ ತಿನ್ನುವುದರೊಳಗೆ ನಾವೆಲ್ಲ ಸುಸ್ತು! 'ನಾಳೆ ತಿಂದ್ರಾತು ತಗಳಾ' ಎಂದು ಗೊಣಗಿಕೊಂಡು ಮಲಗಿದೆವು. ಸಂದೀಪನೂ ಆ ರಾತ್ರಿ ನಮ್ಮನೆಯಲ್ಲೇ ಉಳಿದ.
ಆದರೆ ಬೆಳಗ್ಗೆ ಮತ್ತೆ ಅದೇ ವಡಪ್ಪೆಯನ್ನು ತಿನ್ನುವ ಉತ್ಸಾಹ ಯಾರಿಗೂ ಇರಲಿಲ್ಲ. ಹೀಗಾಗಿ, ಆ ಉಳಿದ ವಡಪ್ಪೆಗಳು ನಮ್ಮನೆ ಗ್ಯಾಸ್ ಕಟ್ಟೆ ಮೇಲೆ ಮೂರ್ನಾಲ್ಕು ದಿನ ಕೂತಿದ್ದು, ಆಮೇಲೆ ಡಸ್ಟ್ಬಿನ್ನು ಸೇರಿ, ನಂತರ ಕಸ ಸಂಗ್ರಹಿಸುವವರ ತಳ್ಳುಗಾಡಿ ಹತ್ತಿ, ಆಮೇಲೆ ದೊಡ್ಡದೊಂದು ಲಾರಿಯಲ್ಲಿ ಕೂತು ರಾಜಧಾನಿಯ ಬೀದಿಯಲ್ಲಿ ಮೆರವಣಿಗೆ ಹೋಗಿ, ನಮಗ್ಯಾರಿಗೂ ಗೊತ್ತಿಲ್ಲದ ತಗ್ಗು ಪ್ರದೇಶವೊಂದರಲ್ಲಿ ಅಂತರ್ಧಾನವಾಗಿಹೋದವು.
23 comments:
ಅರ್ರೆ!!! ನೆಡ್ದಿದ್ ಎಲ್ಲ, ನೆಡ್ದಾಂಗೆ ಬರದ್ಯಲೊ!!
ಸದ್ಯ ನಾ ಹೇಳಿದ್ ಜೋಕ್ ಯಾವ್ದುನ್ನು ಬರ್ಯಲ್ಯಲ ;)
next timಉ ಪೋಟೋ ಗೀಟೋ ಹಾಕಿ ಬರಿಲಕ್ಕು ಸುಮ್ನಿರು..
ಸುಶ್ರುತ...
ರಾಶೀ ಚೊಲೊ ಇದ್ದು ಕಥೆ, ನಾ ಮೊದಲಬಾರಿಗೆ ವಡಪ್ಪೆ ಮಾಡಿದ ನೆನಪಾತು. :)
ಬೆಂಗಳೂರಲ್ಲಿ "ಒಬ್ಬಟ್ಟಿನ ಕಾಗದ" ಕೊಡಿ ಅಂತ ಕೆಲವು ಪ್ರಾವಿಸನ್ ಸ್ಟೋರ್ಸಲ್ಲಿ ಕೇಳಿರೆ ಕೊಡ್ತ. ಚೆನಾಗಾಗ್ತು ವಡಪ್ಪೆ ತಟ್ಟಕ್ಕೆ. ಅದ್ರಮೇಲೆ ಪ್ಲಾಸ್ಟಿಕ್ ಸರ್ಫೇಸ್ ಇರ ಕಡೆ ತಟ್ಟಿರೆ ಆರಾಮಾಗಿ ವಡ್ಡಪ್ಪೆ ಪೇಪರನ್ನ ಬಿಡ್ತು, ಇನೊಂದ್ಸಲ ಅದ್ನೇ ಟ್ರೈ ಮಾಡು.
Tumba channagi ide. neevu saahiti anisutte nange. nanagu ee thara blog alli bari beku anta aase. adke enu madbeku. I dont know how to create blogs account. could u plzz help me regarding this??
ನಿಜಕ್ಕೂ ವಡಪ್ಪೆ ಹೇಗಿರುತ್ತೆ ಅಂತ ನೋಡಿಲ್ಲ,ತಿಂದಿಲ್ಲ... :( ಆದ್ರೂ ಅವುಗಳ ರಾಜಧಾನಿ ಮೆರವಣಿಗೆಗಾಗಿ ನೀವು ಪಟ್ಟ ಹರಸಾಹಸ ಕೇಳಿ ನಗು ಬಂತು...!! ;) ;o)
ಹಾಃ ಹಾಃ :) :)
ನಂಗೆ ಕರಿಲೆ ಇಲ್ಲೆ ಅನ್ಯಾಯ ಇದು. ನೀನು ನಂಗೆ ಮೊದಲೆ ವಡಪ್ಪೆ ತಿಂಬಲೇ ಕರೆದಿದ್ರೆ ನಿನ್ನ ಎರೆಡು ಅಟೆಂಪ್ಟು ಫೇಲ್ ಆಕ್ತಾ ಇರ್ಲೆ.
ತುಂಬಾ ದಿನದ ಮೇಲೆ ನಿನ್ನ ಬ್ಲಾಗ್ ಅಪ್ ಡೆಟ್ ಮಾಡಿದ್ದೆ ಓದಿ ಖುಷಿ ಆತು.
ಹಿ ಹಿ ಚೊಲೊ ಇದ್ದು... ಃ)
ರಂಜು ಹೇಳ್ದಂಗೆ ನಮ್ಮನ್ನೆಲ್ಲ ಕರದಿದ್ರೆ ಹಿಂಗೆ ಆಗ್ತಿರ್ಲೆ.. ತಿನ್ನಕ್ಕೊಂದೇ ಅಲ್ಲ ಒಂದೆರಡು ವಡಪ್ಪೆ ತಟ್ಟಿ ಕೊಡ್ತಿದ್ಯ ಃ) ...
ಇದನ್ನ ಓದಕ್ಕಾದ್ರೆ ನನ್ನ ಫ್ರೆಂಡ ಮನೆಲ್ಲಿ ನಾವು ೩ ಜನ ಸೇರಿ ಜಾಮೂನು ಮಾಡಿದ್ದು ನೆನ್ಪಾತು.. ಪಾಕ ಎಂತ ಮಾಡಿದ್ರು ಗಟ್ಟಿ
ಆಗ್ಬಿಡ್ತಿತ್ತು. ಜಾಮೂನು ಗಟ್ಟ್ಟಿ ಪಾಕದೊಳಗೇ ಸಿಕ್ಕಿ ಹಾಕ್ಯಂಡಿತ್ತು.. ಒಂದು ಜಾಮೂನೂ ಮಾಡಕ್ಕೆ ಬರದಲ್ಲೆ ಅಂತ ಟೀಕೆ ನಾ ಈಗ್ಲು ಕೇಳ್ತಾ ಇದ್ಯಾ ಃ)
ಸುಶ್ರುತ,
ಮಜಾ ಇದ್ದು :)
ನಾನೂ ಕೂಡ ವಡಪ್ಪೆ ಮಾಡವು ಹೇಳಿ ಟ್ರೈ ಮಾಡಿ ಪ್ಲಾಸ್ಟಿಕ್ ಶೀಟ್ ಮೇಲೆ ತಟ್ಟಿ ಅನುಭವಿಸಿದ್ದಿ!
ಕಡಿಗೆ ಒಂದು ಐಡಿಯಾ ಕಂಡು ಹಿಡದ್ದಿ. ವಡಪ್ಪೆ ಹಿಟ್ಟನ್ನ ಗೋಲವಾಗಿ ಕತ್ತರಿಸಿದ ಪ್ಲಾಸ್ಟಿಕ್ ಶೀಟ್ ಗೆ ತುಂಬಾ ಹಚ್ಚವು.
ಅಂದ್ರೆ ಶೀಟ್ ಪೂರ್ತಿ ಕವರ್ ಆಗೋ ಹಂಗೆ.
ಕಾವಲಿ ಮೇಲೆ ಹಾಕಿ ತಕ್ಷಣ ಇನ್ನೂ ಸ್ವಲ್ಪ ತಟ್ಟಿ ಬಿಟ್ಟರೆ...ಪ್ಲಾಸ್ಟಿಕ್ ಕಾವಲಿಗೆ ತಾಗದೆ ಇರದಕ್ಕೆ ನಾವು ಸೇಫು.
ಬಟ್ಟೆ ಮೇಲೆ ಹಚ್ಚದು ಹೊಸದಾಗಿ ಕಲಿತ ಹಂಗೆ ಆತು. ಟ್ರೈ ಮಾಡಿ ನೋಡ್ತಿ!
ಸುಶ್ರುತ,
ಮಾಡ್ತಾಮಾಡ್ತಾನೇ ತಿಂದು ಹೊಟ್ಟೆ ತುಂಬಿಕೊಂಡು ಆಮೇಲೆ, ತಿನ್ನಕ್ಕಾಗದೇ ಬಿಟ್ಟ ರುಚ್ಚ್ಚ್ಚ್ಚಿಯಾದ ವಡಪೆಯಷ್ಟೇ ಮಸ್ತಾಗಿದೆ ಬರಹ.
ಬರಿ ಹೀಗೇ ರುಚಿರುಚಿಯಾಗಿ..
ಸಿಂಧು
next time ವಡೆಪ್ಪೆ ಯಾವಾಗ ಮಾಡ್ತೀರಿ? ನಮಗೂ ತಿಳಿಸಿ ಮಾರಾಯರೆ..
@ alpazna
ನೆಡ್ದಿದ್ ನೆಡ್ದಾಂಗೆ ಕೆಲ್ವೊಂದು ಸಲ ಬರಿಯಕ್ಕಾಪ್ದಿಲ್ಲ್..ಲೆ ಅಲ್ದಾ? ;p
ಅಲ್ಲ ಈಗ ಮತ್ತೊಂದ್ಸಲ ವಡಪ್ಪೆ ಮಾಡ ಯೋಜ್ನೆ ಬೇರೆ ಇದ್ದಾ??!! :O
ಶಾಂತಲಾ,
ಥ್ಯಾಂಕ್ಸ್ ಫರ್ ದಿ ಟಿಪ್ಸ್ ಅಕ್ಸ್ !
ಮುಂದಿನ್ ಸಲ ಮಾಡೋದು ಸುಲ್ಭ ಆತು. :-)
lingaraj,
neevu nanna ID (hisushrutha at gmail dot com) ge ondu personal mail kalsi.. I'll guide you..
Thanks for the compliments.
ಅನಂತ,
ಹಹಾ! 'ಮೆರವಣಿಗೆಗಾಗಿಯೇ ನಾವು ಪಟ್ಟ ಸಾಹಸ' ..ಚೆನ್ನಾಗಿದೆ ನಿಮ್ಮ ವಿಡಂಬನೆ!
ಮತ್ತೊಮ್ಮೆ ವಡಪ್ಪೆ ಮಾಡೋ ಸಾಹಸಕ್ಕೆ ಕೈ ಹಾಕಿದ್ರೆ ಖಂಡಿತ ನಿಮ್ಮನ್ನೂ ಕರೀತೀನಿ ಬಿಡಿ.
ರಂಜನಾ,
ಓಹೋಹೋಹೋ! ಇವೆಲ್ಲ ಬ್ಯಾಡ. ನಿಂಗೇನ್ ವಡಪ್ಪೆ ಮಾಡಕ್ ಬರ್ತಾ ಭಾರೀ... :x
ಶ್ಯಾಮಾ,
ಸೈಯಪ! ಅದು ಹೇಳ್ಚು ಅಂತ ಇದೂ ಶುರು ಹಚ್ಕ್ಯಂಡ್ಚು! ಜಾಮೂನೇ ಮಾಡಕ್ ಬರ್ದೇ ಇದ್ದೋಳು ವಡಪ್ಪೆ ಮಾಡ್ತಿದ್ಯಾ? :P
ಅಲ್ಲ ಫಸ್ಟ್ ಟೈಮ್ ಅತಿಥಿಗಳನ್ನ ಕರ್ದು ಅವ್ರುನ್ನ ವಡಪ್ಪೆ ತಟ್ಟಕ್ಕೆ ಕೂರ್ಸಿರೆ ಚೊಲೋ ಇರ್ತಾ ಹೇಳು? ಅದ್ಕೇ ಕರಿಯಲ್ಲೆ.. ;)
seema,
ನೀ ಹೇಳಿದ್ ಪ್ರಯೋಗನೂ ಮಾಡಕ್ಕು ಅಂದ್ಕಂಡ್ಯ.. ಆದ್ರೆ ಯಾಕೋ ಧೈರ್ಯ ಸಾಲ್ದೆ...
ಸಿಂಧು,
ಥ್ಯಾಂಕ್ಸ್ ಅಕ್ಕಾ...
jomon,
ಖಂಡಿತಾ ತಿಳಿಸ್ತೀನಿ ಜೋ. ಆದ್ರೆ ಒಂದೇ ಕಂಡೀಶನ್: ನೀವೂ ವಡಪ್ಪೆ ಮಾಡ್ಲಿಕ್ಕೆ ಹೆಲ್ಪ್ ಮಾಡ್ಬೇಕು, ಅಷ್ಟೆ. :-)
ಮೊದಲೆರಡು ವಡಪ್ಪೆ ಹಾಳಾದ್ರೂ, ಈರುಳ್ಳಿ ಹೆಚ್ಚತಾ ಕಣ್ಣಲ್ಲಿ ನೀರು ಸುರದ್ರೂ ನನಗಂತೂ ಬಾಯಲ್ಲಿ ನೀರು ಬತ್ತಾ ಇದ್ದು. ಆದರೆ ತಳ್ಳುಗಾಡಿಯಲ್ಲಿ ಮೆರವಣಿಗೆ ಹೋಗಿ ತಗ್ಗು ಪ್ರದೇಶದಲ್ಲಿ ಅಂತರ್ಧಾನ ಆಗಿದ್ದರ ಬಗ್ಗೆ ಭಾರೀ ಬೇಜಾರಿದ್ದು...
-ತನ್ ಹಾಯಿ
ಸುಶ್ರುತ, ಒಂದು ಪೋಸ್ಟನಲ್ಲಿ ಹೃದಯ ಕರಗುವಂತ ಕಥೆ ಹೇಳಿ ಕಣ್ಣಲ್ಲಿ ನೀರು ತುಂಬಿಕೊಳ್ಳುವಂತೆ ಮಾಡ್ತಿಯಾ, ಇನ್ನೊಂದರಲ್ಲಿ ಕಚುಕುಳಿ ಇಟ್ಟು ನಗಿಸ್ತಾ ಕಣ್ಣಲ್ಲಿ ನೀರಿನ ಪಸೆ ತರಿಸ್ತಿಯಾ! ಭೇಷ್
"ಆಮೇಲೆ ದೊಡ್ಡದೊಂದು ಲಾರಿಯಲ್ಲಿ ಕೂತು ರಾಜಧಾನಿಯ ಬೀದಿಯಲ್ಲಿ ಮೆರವಣಿಗೆ ಹೋಗಿ, ನಮಗ್ಯಾರಿಗೂ ಗೊತ್ತಿಲ್ಲದ ತಗ್ಗು ಪ್ರದೇಶವೊಂದರಲ್ಲಿ ಅಂತರ್ಧಾನವಾಗಿಹೋದವು."- ಅಲಂಕಾರದಲ್ಲಿ ಕಾಳಿದಾಸನನ್ನೂ ಹಿಂದೆ ಹಾಕಿಬಿಡ್ತಿ. ಹೊಸದಾಗಿ ಅಡುಗೆ ಮಾಡುವಾಗ ನಾವು ಸಹ ಇಂತಹ ಅವಾಂತರಗಳನ್ನು ಮಾಡಿದ್ವಿ. ಆದರೆ ಅದನ್ನು ನಮ್ಮವರ ಬಳಿ ಹೇಳಿಕೊಳ್ಳುವಾಗ ಅದು ಸಪ್ಪೆ ಆಗಿರ್ತಿತ್ತು. ನೀನು ಚೆನ್ನಾಗಿ ಉಪ್ಪು ಖಾರ ಹಾಕಿ ವಿವರಿಸಿದ್ದಿಯಾ! ನಿಮ್ಮ ವಡೆಯಪ್ಪೆ ಹೇಗಿತ್ತೋಏನೋ ಅದರೆ ನನಗಂತೂ ಸಿಹಿ ಸಿಹಿ ಅಪ್ಪ ತಿಂದಹಾಗೆ ಆಯಿತು.
ಅಕ್ಕ ಅಂತಿಯಲ್ಲ, ಅದಕ್ಕೆ ಸಲಿಗೆ ತಕ್ಕಂಡು ಹೇಳ್ತಿನಿ. ಈ ಬ್ರೆಡ್ಡು ಗಿಡ್ಡು ಅಂತ ಹಾಳು ಮೂಳು ತಿನ್ನದೆ ವಿನಾಯಕನ ಹಾಗೆ ಹಣ್ಣು ತರಕಾರಿ ತಿನ್ನಪ್ಪಾ.
ಅಂದ ಹಾಗೆ ಸುಮ್ಮನೆ ನಮಗೆ ಗೊಂದಲ ಮಾಡಿಸ್ಬೇಡ. ಕಥೆ ಬರೆಯುದಾದರೆ ಅದಕ್ಕೆ ಕಥೆ ಅಂತ ಲೇಬಲ್ ಕೊಡು. ಇದು ನಿನ್ನ ಆ ಅಪ್ಪ ಮಗನ ಕಥೆ ಬಗ್ಗೆ.ಅಂತೂ ಹಾಸ್ಯದಲ್ಲೂ ಗಂಭೀರ ಬರಹದಲ್ಲೂ ನಿನಗೆ ಚೆನ್ನಾಗಿ ಹಿಡಿತವಿದೆ. ಸರಸ್ವತಿ ನಿನ್ನ ಮೇಲೆ ಚೆನ್ನಾಗಿ ಕೃಪೆ ತೋರಲಿ. ಅಕ್ಕನ ಹಾರೈಕೆ.
ಶೀಲಕ್ಕ.
ಸುಶ್ರುತ,
ಬರವಣಿಗೆಲಿ ವೈವಿಧ್ಯತೆ ಬಹಳ ಮುಖ್ಯ, ನಿನ್ನಲ್ಲಿ ಆ ವೈವಿಧ್ಯತೆ ಇದೆ. ಯಾವದೆ ವಸ್ತು ಬಗ್ಗೆ ಬರೆದರೂನು ಓದುಗರ ಮನಸೂರೆಗೊಳ್ಳತರ ಬರಿಯಬಹುದು ಅನ್ನೊದಕ್ಕೆ ಇದೂಂದು ನಿದರ್ಶನ.
~ಕಿರಣ್
Hi Sushrutha,
ಗಮ್ಮತ್ತಾಗಿತ್ತು ಓದ್ಲಿಕ್ಕೆ! ಸಖತ್ ಎಂಜಾಯ್ ಮಾಡಿದೆ. ನನ್ನವಗೂ ಓದಿ ಹೇಳಿದೆ. ನಗಾಡಿಕೊಂಡೆವು.
Thanx for the laughs.
- ಟೀನಾ
ತನ್ ಹಾಯೀ,
ನಂಗೂ ಅದ್ರ ಬಗ್ಗೆ ಬೇಜಾರಿದ್ದು; ಕೊಟ್ಗೆಯರು ಇದ್ದಿದ್ರೆ ದನ್ಕರಕ್ಕಾದ್ರೂ ಕೊಡ್ಲಾಯಿತ್ತು ಅಂದ್ಕಂಡಿ.. :(
ಶೀಲಕ್ಕ,
ನಿಮ್ಮ ಉದ್ದುದ್ದ ಪ್ರತಿಕ್ರಿಯೆಗೆ ತುಂಬಾ ಪ್ರೀತಿಯ ಥ್ಯಾಂಕ್ಸ್. ಮೆಚ್ಚುಗೆ ನನ್ನನ್ನು ಉಬ್ಬಿಸುವಷ್ಟಿದೆ!
ನೀವು ಸಪೋರ್ಟ್ ಮಾಡಿದ್ನೋಡಿ ವಿನಾಯಕ ಫುಲ್ ಖುಷಿಯಾಗಿದ್ದಾನೆ! ಸಲಹೆಯನ್ನು ಮನ್ನಿಸಲು ಖಂಡಿತಾ ಪ್ರಯತ್ನಿಸ್ತೇನೆ. ಥ್ಯಾಂಕ್ಸ್ ಫಾರ್ ದಿ ಕೇರ್ ಅಕ್ಕಾ...
ಕಿರಣ್,
ತುಂಬಾ ಥ್ಯಾಂಕ್ಸ್. Everything depends on my mood. ;-)
ಟೀನಾ,
:-)
ಸುಶ್ರುತ,
ನಿಮ್ಮ ವಡಪ್ಪೆ ಕಥೆ ಚೆನ್ನಾಗಿತ್ತು. ವಡಪ್ಪೆ ಎಂದರೆ ಅಪ್ಪೆಮಿಡಿಗೆ ರಿಲೇಟೆಡ್ ಇರಬಹುದೇನೋ ಅಂದುಕೊಂಡಿದ್ದೆ. ಊಹೆ ತಪ್ಪಾಯ್ತು. ಈ ವಡಪ್ಪೆಯ ರೆಸಿಪಿ, ಬೇರೆ ಹೆಸರುಗಳಿದ್ದರೆ ಅದು ಮತ್ತು ಸೈಂಟಿಫಿಕ್ ನೇಮ್ ಕೊಟ್ರೆ ಚೆನ್ನಾಗಿರ್ತಿತ್ತು. ನಮ್ಮ ಕಡೆಯವರೂ ಕಲೀತಿದ್ರು
ಭಾಳ ಸೊಗಸಾಗಿದೆ ವಡಪ್ಪೆ ತಯಾರಿ ಅನುಭವ. ಲೇಖನವನ್ನು ಸಂಪೂರ್ಣವಾಗಿ ಆನಂದಿಸಿದೆ.
ಏನ್ರೋ ನಿಂಗ ಎಂತ ಮಾಡದಿದ್ರೂ ಹಿಂಗೇ ಎಡವಟ್ಟು ಮಾಡ್ಕ್ಯತ್ರ ಹ್ಯಾಂಗೆ? ಸಂದೀಪ ಹೇಳ್ಧಂಗೆ ನೆಕ್ಸ್ಟ್ ಟೈಮ್ ಚಿತ್ರ ಸಮೇತ ಹಾಕಿ..
@ಅನಂತ:
ಕೆಲವು ಕಡೆ ವಡಪ್ಪೆಗೆ ತಾಳಿಪೆಟ್ಟು ಅಂತಲೂ ಕರೀತಾರೆ..
ವೇಣು,
ಥ್ಯಾಂಕ್ಸ್.
ಹಹಾ, ವಡಪ್ಪೆಗೂ ಅಪ್ಪೆಮಿಡಿಗೂ ಯಾವ ಸಂಬಂಧವೂ ಇಲ್ಲ. ಸೈಂಟಿಫಿಕ್ ನೇಮೆಲ್ಲ ಏನೋ ನಂಗೊತ್ತಿಲ್ಲ. ಬೆಂಗಳೂರಿನಲ್ಲಿ 'ಅಕ್ಕಿ ರೊಟ್ಟಿ' ಅಂತ ಕೊಡ್ತಾರಲ್ಲ, ಅದು ನಮ್ ವಡಪ್ಪ ಹಾಗೇ ಇರತ್ತೆ. ಮತ್ತೆ, ಹರೀಶ್ ಹೇಳ್ದಾಗೆ, ವಡಪ್ಪೆಗೆ 'ತಾಳಿಪಟ್ಟು' ಅಂತ್ಲೂ ಕರೀತಾರೆ. ರೆಸಿಪಿ, ಇನ್ಗ್ರೀಡಿಯೆಂಟ್ಸ್ ಎಲ್ಲಾ ಪೋಸ್ಟಲ್ಲೇ ಬರ್ದಿದೀನಿ.
ರಾಜೇಶ್,
:-)
ಹರೀಶ,
ಏಯ್ ಅಷ್ಟೆಲ್ಲಾ ಯಡ್ವಟ್ಟು ಏನ್ ಮಾಡ್ಕ್ಯೈಂದ್ವ ಯಂಗ..? ಎಲ್ಲೋ ಒಂದೊಂದ್ಸಲ ಮಿಸ್ಟೇಕ್ ಆಗ್ತಪ.. :P
ನಿಮ್ಮ ವಡಪ್ಪೆ ಪುರಾಣ ಚೆನ್ನಾಗಿತ್ರೀ. ನಾನೂ ಹೆಸರು ನೋಡಿ, ಉತ್ತರಕನ್ನಡದ ಏನೋ ಸ್ಪೆಶಲ್ ಅಂದ್ಕೊಂಡೆ ರೀ. ಮಾಡೋ ವಿಧಾನ ನೋಡಿದ್ರೆ, ಆದು ನಮ್ಮನೆಯ ಅಕ್ಕಿ ರೊಟ್ಟಿ!
ರೊಟ್ಟಿ ತಟ್ಟಕ್ಕೆ ಇಷ್ಟು ಕಷ್ಟ ಪಡಬೇಡಿ. ನಾವು ರೊಟ್ಟಿ ತಟ್ಟೋಕೆ ಪ್ಲಾಸ್ಟಿಕ್, ಅಥವ್ ಬಾಳೆಲೆ (ಹ್ಹ! ಅದೆಲ್ಲಿ ಸಿಗ್ಬೇಕು ನಮಗೆ) ಉಪ್ಯೋಗ್ಸಲ್ಲ. ಬದ್ಲಿಗೆ ಎರಡು ಕಾವಲೆನೋ, ಬಾಂಡ್ಲೆನೋ ಇಟ್ಟುಕೊಂಡು ಒಂದರ ತಪ್ಪ ಒಂದು ನೇರವಾಗಿ ಕಾವಲೆ ಮೇಲೇ ತಟ್ಟೋದು.ಮುಂದಿನ್ಸಲ ಅದು ಪ್ರಯತ್ನ ಮಾಡಿ ;)
@ ಹಂಸಾನಂದಿ
ಧನ್ಯವಾದ; ಬ್ಲಾಗಿಗೆ ಸಾಗತ.
ಕಾವಲಿ ಮೇಲೇ ಡೈರೆಕ್ಟಾಗಿ ತಟ್ಟೋದಾ? ಕೈ ಸುಟ್ಟುಹೋಗಲ್ವೇನ್ರೀ?! :O
Post a Comment