Friday, December 28, 2007

ಹೊಸ ವರುಷದ ಜೋಳಿಗೆಯಲ್ಲಿ...

ಪ್ರತಿಯೊಬ್ಬರ ಕೈಗೂ ಒಂದೊಂದು ಬಿಳೀ ಖಾಲಿ ಹಾಳೆ ಕೊಟ್ಟು ಹೋಗಿಬಿಟ್ಟಿದ್ದಾರೆ ಯಾರೋ ಮೇಷ್ಟ್ರು..

ಅವರು ಕೊಟ್ಟಾಗ ಅದ್ಯಾಕೆ ಕೊಟ್ಟರು ಅಂತಲೇ ಗೊತ್ತಿರಲಿಲ್ಲ ನನಗೆ.. ಅಕ್ಕ ಪಕ್ಕ ನೋಡಿದೆ: ಎಲ್ಲರೂ ಮಗ್ನರಾಗಿ ತಲೆ ತಗ್ಗಿಸಿ ಚಿತ್ರ ಬಿಡಿಸುತ್ತಿದ್ದರು, ಕೆಲವರು ಮೇಲೆ ನೋಡುತ್ತಾ ಯೋಚಿಸುತ್ತಿದ್ದರು, ಕೆಲವರು ಪಕ್ಕದವರದನ್ನು ಕಾಪಿ ಹೊಡೆಯುತ್ತಿದ್ದರು, ಕೆಲವರು ಯಾರದೋ ಚಿತ್ರಕ್ಕೆ ಬಣ್ಣ ತುಂಬುತ್ತಿದ್ದರು, ಕೆಲವರು ಆಗಲೇ ಬಿಡಿಸಿ ಮುಗಿಸಿ, ಹಾಳೆಯನ್ನು ಟೇಬಲ್ಲಿನ ಮೇಲಿಟ್ಟು ಎದ್ದು ಹೋಗುತ್ತಿದ್ದರು.

ನಾನೂ ನನ್ನ ಹಾಳೆಯನ್ನು ಎದುರಿಗೆ ಹರವಿಕೊಂಡು ಬಿಡಿಸಲು ತೊಡಗಿದೆ. ಒಂದಷ್ಟು ದಿನ, ಅಪ್ಪ, ಅಮ್ಮ, ಮತ್ತೂ ಇನ್ನೇನೋ ಅವರ ಹೆಸರುಗಳು- ಅವರೆಲ್ಲ ಇದ್ದರು.. ಮೊದಮೊದಲು ಕೈ ಹಿಡಿದು ತಿದ್ದಿಸಿದರು, ನಂತರ ಪಕ್ಕದಲ್ಲಿ ನಿಂತು ಹುರಿದುಂಬಿಸುತ್ತಿದ್ದರು: 'ಹೂಂ, ಬರಿ ಬರಿ.. ಚನಾಗ್ ಬಿಡಿಸ್ತೀಯ.. ಬಿಡಿಸು..' ಆಮೇಲೆ ನನ್ನ ಪಾಡಿಗೆ ನನ್ನನ್ನು ಬಿಟ್ಟು ಅವರೆಲ್ಲ ಸುಮ್ಮನಾಗಿಬಿಟ್ಟರು.

ಮಂಕಾಗಿ ಕೂತಿದ್ದ ನನ್ನ ಬಳಿ ಯಾರೋ ಪುಣ್ಯಾತ್ಮರು ಬಂದು ಹಾಳೆಯ ಮೇಲೆ ಒಂದಷ್ಟು ಚುಕ್ಕಿಗಳನ್ನಿಟ್ಟು ಸ್ಕೆಚ್ ಹಾಕಿಕೊಟ್ಟರು. 'ಹೀಗೇ ಬಿಡಿಸಿದರೆ ಅದ್ಭುತ ಚಿತ್ರವಾಗೊತ್ತೆ' -ಎಂದರು. ನಾನು ಹೌದೆಂದುಕೊಂಡು ಬಿಡಿಸತೊಡಗಿದೆ. ಬಿಡಿಸಿದ ಚಿತ್ರ, ಸ್ವಲ್ಪ ಹೊತ್ತಿಗೆ ನನಗೇ ಇಷ್ಟವಾಗದೆ ಎಲ್ಲಾ ಅಳಿಸಿಹಾಕಿದೆ.

ಮತ್ತೆ ಬಿಳೀ ಖಾಲಿ ಹಾಳೆ..

ಯಾರೋ ಹೇಳಿದಂತೆ ನಾನ್ಯಾಕೆ ಬಿಡಿಸಬೇಕು? ನಾನೇ ಸ್ವಂತ ಸ್ವತಂತ್ರ ಚಿತ್ರ ಬಿಡಿಸಬೇಕೆಂಬ ಹಂಬಲು ಮೂಡಿತು. ಕುಂಚವನ್ನು ಕೈಗೆತ್ತಿಕೊಂದು ಬಿಡಿಸತೊಡಗಿದೆ... ಏನೋ ಕಲ್ಪನೆ.. ಏನೋ ಕನಸು.. ಹೌದು, ಎಷ್ಟು ಚಂದ ಮೂಡಿಬರುತ್ತಿದೆ ಚಿತ್ರ..! ಎಲ್ಲಾ ಸರಿಯಿದೆ, ಹುಬ್ಬಿಗೆ ಸ್ವಲ್ಪ ಕಪ್ಪು ತೀಡಿದರೆ ಮುಗಿಯಿತು ಎನಿಸುವಷ್ಟರಲ್ಲಿ ಯಾರೋ ಬಂದು ಇಡೀ ಚಿತ್ರದ ಮೇಲೆ ಒಂದು ಅಡ್ಡಗೆರೆ ಎಳೆದು ಹೋಗಿಬಿಡುತ್ತಾರೆ.. ನನ್ನ ಚಿತ್ರ ಹಾಳಾಗಿಬಿಡುತ್ತದೆ. ನಾನೀಗ ಅದನ್ನು ಪೂರ್ತಿ ಅಳಿಸಿ ಮತ್ತೆ ಹೊಸದಾಗಿ ಬಿಡಿಸಬೇಕು.

ಅದೇ ಚಿತ್ರವನ್ನು ಮತ್ತೆ ಬಿಡಿಸಲಾಗದು. ಬಿಡಿಸಿದರೂ ಅದೂ ಒಪ್ಪವಾಗಲಾರದು. ಆಗ ಉಷಃಕಾಲವಿತ್ತು; ಆ ರಾಗಕ್ಕದು ಒಗ್ಗುತ್ತಿತ್ತು. ಈಗ ಮಧ್ಯಾಹ್ನ; ಬೇರೆಯದೇ ರಾಗ; ಹೊಸದೇ ಚಿತ್ರ ಬೇಕು.

ಯಾರೋ ಹೇಳುತ್ತಾರೆ: 'ಪಕ್ಕದವನನ್ನು ನೋಡಿಕೊಂಡು ಬಿಡಿಸು. ಚಿತ್ರ ಯಾರದಾದರೇನು? ಚಿತ್ರಕ್ಕೆ ಜೀವ ಬರಲು ಬೇಕು ಹಚ್ಚುವವನದೇ ಭಾವ, ರಾಗ, ಬಣ್ಣ.' ಇರಬಹುದೇನೋ ಅಂದುಕೊಂಡು ನಾನು ಅವರಿವರ ಹಾಳೆ ನೋಡಿದೆ. ಕೆಲವು ಈಗ ತಾನೇ ಬಿಡಿಸಲು ಶುರುವಾದ ಚಿತ್ರಗಳು. ಇನ್ನು ಕೆಲವು ಅರ್ಧ ಬಿಡಿಸಿದ ಚಿತ್ರಗಳು. ಮತ್ತೆ ಕೆಲವಕ್ಕೆ ಢಾಳ ಬಣ್ಣಗಳು. ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಕೆಲವು ಅತ್ಯಾಕರ್ಷಕವಾಗಿದ್ದವು. ನಾನೂ ಹಾಗೇ ಬಿಡಿಸಬೇಕು ಎಂದು ನನ್ನ ಒಂದು ಮನಸು ಹೇಳಿದರೆ, ಮತ್ತೊಂದು ಮನಸು ಒಪ್ಪಲಿಲ್ಲ. ನನ್ನ ಚಿತ್ರ ಯಾರದನ್ನೂ ಹೋಲಬಾರದು. ನನ್ನ ಚಿತ್ರ, ಅದಕ್ಕೆ ನನ್ನದೇ ಬಣ್ಣ -ಆಗಲೇ ಚಂದ ಎನ್ನಿಸಿತು.

ನಾನು ಮತ್ತೆ ಬಿಡಿಸಲು ತೊಡಗುತ್ತೇನೆ; ಏನು ಬಿಡಿಸಬೇಕೆಂದೇ ಗೊತ್ತಾಗದೆ ಹೆಣಗಾಡುತ್ತೇನೆ.

ಹಾಗೆ ನಮ್ಮನ್ನೆಲ್ಲ ಬರೆಯಲು ಹಚ್ಚಿ ಹಾಳೆ ಹಂಚಿಹೋದ ಮೇಷ್ಟ್ರು ಮಾತ್ರ ಇನ್ನೂ ಸಿಕ್ಕಿಲ್ಲ. ಅವಾಗಿವಾಗ ಬಂದು ನೋಡಿಕೊಂಡು ಹೋಗುತ್ತಿರುತ್ತಾರೆ, ಒಳ್ಳೆಯ ಚಿತ್ರ ಬಿಡಿಸಿದರೆ ಪ್ರಶಸ್ತಿ ಕೊಡುತ್ತಾರೆ, ಕೆಟ್ಟ ಚಿತ್ರಕ್ಕೆ ಶಾಪ ಎಂದೆಲ್ಲ ಗುಸುಗುಸು ನಮ್ಮಲ್ಲಿ... ನನಗಂತೂ ಅವರನ್ನು ನೋಡಿದ ನೆನಪೂ ಇಲ್ಲ. ಅವರು ಯಾವಾಗ ಬರುತ್ತಾರೋ, ಏನೋ, ಕಾದೂ ಕಾದೂ ಬೇಸತ್ತು ನಾನಂತೂ ಇತ್ತೀಚೆಗೆ ಅವರ ಬಗ್ಗೆ ಧೇನಿಸುವುದನ್ನೂ ಬಿಟ್ಟಿದ್ದೇನೆ.

ಯಾರೋ ಬಂದು ಪಕ್ಕದಲ್ಲಿ ಕೂರುತ್ತಾರೆ. 'ನಿನ್ನ ಹಾಳೆಯಲ್ಲಿ ನಾನೂ ಬಿಡಿಸಲಾ?' ಎನ್ನುತ್ತಾರೆ. 'ಇಬ್ಬರೂ ಸೇರಿ ಬಿಡಿಸಿದರೆ ಚಿತ್ರಕ್ಕೆ ಹೆಚ್ಚು ಸೊಗಸು ಬರುತ್ತದೆ' ಎನ್ನುತ್ತಾರೆ. ನನಗೂ ಅದು ಹಿತವೆನಿಸುತ್ತದೆ. ನಾನವರ ಮುಖ ನೋಡುತ್ತೇನೆ. ಮುಗುಳ್ನಗುತ್ತೇನೆ. ಅದನ್ನವರು ಸಮ್ಮತಿಯೆಂದು ಭಾವಿಸಿ ನನ್ನ ಜೊತೆ ಕೈಜೋಡಿಸುತ್ತಾರೆ. ಹೊಸ ಕನಸಿನ ಹೊಸ ಚಿತ್ರ ಶುರುವಾಗುತ್ತದೆ... ಆದರೆ ನನ್ನ ಅವರ ಭಾವಕ್ಕೆ ಹೊಂದಾಣಿಕೆಯಾಗದೆ, ಚಿತ್ರ ಚಿತ್ರಾನ್ನವಾಗಿ, ಅವರು ಬೇಸರಗೊಂಡು ಎಲ್ಲಾ ಅಳಿಸಿ, ಎದ್ದು ನಡೆಯುತ್ತಾರೆ.

ಮತ್ತದೇ ಬಿಳೀ ಹಾಳೆ... ಅಲ್ಲಲ್ಲಿ ಹಳೆಯ, ಅಳಿಸಿದರೂ ಪೂರ್ತಿ ಮರೆಯಾಗದ ಚಿತ್ರದ ಕುರುಹುಗಳು.. ಆ ಮತ್ತೊಬ್ಬರೊಂದಿಗೆ ಬೆಸೆದುಕೊಂಡು ಬಿಡಿಸಿ ಅಭ್ಯಾಸವಾಗಿದ್ದ ಕೈಗೆ ಸ್ವಲ್ಪ ದಿನ ಕಷ್ಟವಾಗುತ್ತದೆ; ಆಮೇಲೆ ಒಗ್ಗಿಹೋಗುತ್ತದೆ.

ಎಷ್ಟೋ ಚಿತ್ರಗಳನ್ನು ಬಿಡಿಸುತ್ತೇನೆ ನಾನು. ಬಿಡಿಸಿದ ಯಾವ ಚಿತ್ರವೂ ನನಗೆ ಪರಿಪೂರ್ಣ ಎನಿಸುವುದಿಲ್ಲ. ಒಮ್ಮೊಮ್ಮೆ ಯೋಚಿಸಿದಾಗ ದಿಗಿಲಾಗುತ್ತದೆ: ನಾನು ಚಿತ್ರ ಬಿಡಿಸಲು ತೊಡಗಿ ಎಷ್ಟೋ ವರ್ಷಗಳಾಗಿಬಿಟ್ಟಿವೆ. ಇನ್ನೂ ಈ ಚಿತ್ರ ಪೂರ್ತಿಯಾಗಿಲ್ಲ.. ಯಾವತ್ತಿಗಿದು ಮುಗಿಯುವುದು? ಎಂದಿದಕ್ಕೆ ಮುಕ್ತಿ? ಪಕ್ಕದಲ್ಲಿ ಹಣೆಗೆ ವಿಭೂತಿ ಹಚ್ಚಿ ಕೂತವನೊಬ್ಬ ಹೇಳುತ್ತಾನೆ: 'ಹಾಗೆಲ್ಲ ಚಿಂತಿಸುತ್ತಾ ಕೂರಬಾರದು. ಈ ಚಿತ್ರ ಮುಗಿಯುವುದೇ ಇಲ್ಲ. ಈಗಾಗಲೇ ಎದ್ದು ಹೋದವರೆಲ್ಲ ಮುಗಿಸಿಯೇ ಕೊಟ್ಟು ಹೋದವರೇನಲ್ಲ. ಅರ್ಧಕ್ಕೇ ಬೇಸತ್ತು ಎದ್ದು ಹೋದವರಿದ್ದಾರೆ. ಸುಸ್ತಾಗಿ ಎದ್ದು ಹೋದವರಿದ್ದಾರೆ. ಮೇಷ್ಟ್ರು ಕರೆದಂತಾಯ್ತು ಎಂದುಕೊಂಡು ಎದ್ದು ಹೋದವರಿದ್ದಾರೆ. ಚಿತ್ರ ಬಿಡಿಸೀ ಅಳಿಸಿ - ಬಿಡಿಸೀ ಅಳಿಸಿ ಹಾಳೆಯೆಲ್ಲ ಹರಿದುಹೋಗಿ ಎದ್ದು ಹೋದವರಿದ್ದಾರೆ. ನೀನ್ಯಾಕೆ ಹೀಗೆ ಚಿಂತಿಸುತ್ತ ಕುಳಿತಿದ್ದೀಯಾ? ನಿನಗೆ ತೋಚಿದಂತೆ ಬಿಡಿಸು. ಬಿಡಿಸುವಾಗ ಸಿಗುವ ಆನಂದವನ್ನು ಅನುಭವಿಸು.'

ಅವರು ಹೇಳಿದ್ದು ನನಗೆ ಸರಿಯೆನಿಸುತ್ತದೆ. ಹೊಸ ಉತ್ಸಾಹದೊಂದಿಗೆ ಬಿಡಿಸತೊಡಗುತ್ತೇನೆ...

* * *

ಬರುವ ಹೊಸ ವರ್ಷದ ಜೋಳಿಗೆಯಲ್ಲಿ ಚಿತ್ರ ಬಿಡಿಸುತ್ತಿರುವ ನಿಮಗೆ ಹೊಸ ಕಲ್ಪನೆಗಳನ್ನೂ, ವಿನ್ಯಾಸಗಳನ್ನೂ, ಪರಿಪೂರ್ಣತೆಯೆಡೆಗಿನ ತಿರುವುಗಳನ್ನೂ ಒದಗಿಸಬಲ್ಲ ಪೆನ್ಸಿಲ್ಲು - ಬಣ್ಣಗಳಿರಲಿ. ಬಿಡಿಸುವ ಮನಸಿನಲ್ಲಿ ಉಲ್ಲಾಸ ತುಂಬಿರಲಿ.

ಶುಭಾಶಯಗಳು.

16 comments:

ಸಿಂಧು sindhu said...

ಸುಶ್ರುತ,

ಭಾವಚಿತ್ತಾರದ ಶುಭಾಶಯದ ಹೊಸ್ತಿಲಲ್ಲಿ ಹಿತವೆನಿಸುತ್ತಿದೆ.
ಎಂದಿನಂತೆಯೇ ತುಂಬ ಚೆನಾಗಿ ಬರ್ದಿದೀ..

ಚಿತ್ತಾರ ಬರೆಯಲು ಹಚ್ಚುವ ಮೇಷ್ಟರಂತಹ ಬದುಕು, ಬರೆಯುತ್ತ ಬರೆಯುತ್ತ ಬೆರಗಾಗಿ ಕೂತ ಮಗುವಿನಂತಹ ಮನಸು ಎಲ್ಲ ಎಷ್ಟು ಸೊಗಸಾಗಿದೆ!

ಶುಭಾಶಯಗಳು
ಪ್ರೀತಿಯಿಂದ
ಸಿಂಧು

Anonymous said...

chennaagi barediddeeya.
aadre ninna vayassige takkante yaake bareyabaardu?

hosa varshada shubaashayagaLu.

Anonymous said...

ಸುಶ್ರುತರಿಗೆ ನಮಸ್ಕಾರ,
ನಿಮ್ಮ ಹೊಸ ವರ್ಷದ ಆಶಯ, ಶುಭಾಷಯ ಚೆನ್ನಾಗಿದೆ.
ಬದುಕಿನ ಮೆರವಣಿಗೆಯಲ್ಲಿ ಎಷ್ಟೊಂದು ಚಿತ್ರಗಳು, ಪಾತ್ರಗಳು. ಬಣ್ಣ ಹಾಕಲೆಂದು ಬಂದವರು ಯಾರೋ, ಚಿತ್ರ ಬರೆಯಲೆಂದು ಯಾರೋ, ಒಟ್ಟು ಮೆರವಣಿಗೆ ಸಮಾರೋಪಗೊಳ್ಳುವವರೆಗೂ ಅದರಲ್ಲಿನ ಉತ್ಸಾಹದ ಕಿಡಿಯಾಗಿದ್ದರೆ ಸಾಕು.

ನಾವಡ

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಧನ್ಯವಾದ. ನಿಂಗೂ ಹೊಸ ವರ್ಷದ ಶುಭಾಷಯಗಳು.
ನಿನ್ನೆ ಅಷ್ಟೆ "ತಾರೆ ಜಮೀನ್ ಪರ್" ಮೂವಿ ನೋಡ್ಕ್ಯಂಡು ಬಂದಿ. ಓದ್ತ ಓದ್ತಾ ಆ ಮೂವಿಯಲ್ಲಿನ ಚಿತ್ರಗಳೇ ಕಣ್ಣಲ್ಲಿ ಚಿತ್ರವಾಗಿ ಬರ್ತಾ ಇತ್ತು. ಆದ್ರೆ ಇದು ಹೊಸ ವರ್ಷದ ಶುಭಾಷಯ ಅಂತ ಗೊತ್ತಾದಾಗ ಮತ್ತೆ ವಾಸ್ತವಕ್ಕೆ ಬಂದಿ.
Thanks for the matured and different article along with the New Year Wishes. Keep it up.

ಕಲ್ಪನೆಗಳ ಬರಹಗಳಿಗೂ ಮತ್ತು ವಾಸ್ತವದ ವಯಸ್ಸಿಗೂ ಯಾವುದೇ ಸಂಬಂಧ ಇಲ್ಲೆ ಅನ್ನೋದನ್ನು ಸಾಬೀತು ಮಾಡುವ ಶಕ್ತಿ ನಿನ್ನಲ್ಲಿದ್ದು. ಬದುಕಿನ ಎಲ್ಲ ಸಜೀವ/ನಿರ್ಜೀವ ಪಾತ್ರಗಳಲ್ಲೂ ಪ್ರವೇಶಿಸಿ, ಅನುಭವಿಸಿ ಬರೆಯಲು ಸಾಧ್ಯ ಇದೆ ಎನ್ನುವುದನ್ನು ತೋರಿಸಿಕೊಟ್ಟ ಪುಟಾಣಿ ಲೇಖಕ .

Seema S. Hegde said...

ಸುಶ್ರುತ,
ಹೊಸವರ್ಷದ ಶುಭಾಶಯಗಳು! ಅನಂತ ಶುಭ ಹಾರೈಕೆಗಳು!
ಬಿಡಿಸಿದ ಒಂದೊಂದು ಚಿತ್ರವೂ ಜೀವನದ ಬಗೆಗಿನ ಅನುಭವವನ್ನು ಇನ್ನಷ್ಟು ಬಲಪಡಿಸುತ್ತದೆ.
ಹೊಸ ಅನುಭವವನ್ನೇ ಹೇಳುತ್ತದೆ.
ಬಿಡಿಸುತ್ತಾ, ಅಳಿಸುತ್ತಾ, ಕಲಿಯುತ್ತಾ ಹೋಗುವುದೇ ಕಾಯಕ.
2008 ರಲ್ಲೂ ಕೂಡ ಬಿಡಿಸೋಣ, ಕಲಿಯೋಣ.

Pramod P T said...

ಹೊಸ ಹುಮ್ಮಸ್ಸು ತರುವಂತಿದೆ ಬರಹ...
ನಿಮಗೂ ಹೊಸವರ್ಷದ ಶುಭಾಶಯಗಳು..!

ರಂಜನಾ ಹೆಗ್ಡೆ said...

ಸುಶ್,
ನಿಂಗೂ ಹೊಸ ವರುಷದ ಶುಭಾಷಯಗಳು.

ಬಿಡುಸುವ ಚಿತ್ರ ಯಾವುದಾದರೇನು ಬಿಡಿಸುವಾಗ ಆನಂದ ಅನುಭವಿಸ ಬೇಕು 100% ಸತ್ಯ.

ಹಿಂದೆ ಬರೆದ ಚಿತ್ರ ಹಾಳಾದರೇನು, ಅಂದವಾಗಲ್ಲಿಲ್ಲವಾದರೇನು ಮುಂದಿನ ಚಿತ್ರ ಚನ್ನಾಗಿ ಬರೆಯುತ್ತೇನೆ ಅನ್ನುವ Confidence ನಮಗಿರಬೇಕು. ಹಿಂದೆ ಬರೆದ ಚಿತ್ರ ಯಾಕೆ ಹಾಳಾಯಿತು, ಅಂದವಾಗಿ ಯಾಕೆ ಮೂಡಿಬಂದಿಲ್ಲಾ ಎನ್ನುವ ಅನುಭವ ನಮಗಿರುತ್ತದೆ ಅಲ್ಲವೆ?

ತುಂಬಾ ಚನ್ನಾಗಿ ಬರೆದ್ದಿದ್ದೀಯಾ. ಮತ್ತೆ ಹೊಗಳುವ ಅವಶ್ಯಕತೆ ಇಲ್ಲಾ ಅಲ್ವಾ. ಲೇಖನದ ತುಂಬಾ ಒಳಾರ್ಥಗಳೆ ತುಂಬಿವೆ. Different article. so nice.

ಮುಂಬರುವ ವರುಷ ಎಲ್ಲಾರ ಬಾಳಲ್ಲೂ ಸುಖ, ಸಮೃದ್ಧಿ,ಸಂತೋಷ,ಆಯುರಾರೋಗ್ಯ, ನೆಮ್ಮದಿ ದೊರೆಯಲೆಂದು ಹಾರೈಸುತ್ತೇನೆ. all the best.

ಶ್ರೀನಿಧಿ.ಡಿ.ಎಸ್ said...

ಚಿತ್ರ, ಬಣ್ಣ , ಹಾಳೆ ... :)
ಯಾರಿಗೋ ಗುರಿಯಿಟ್ಟಿದ್ಯಾ ಹ್ಯಾಂಗೆ?:)

ಯಾರದೋ ಚಿತ್ರಕ್ಕೆ ಬಣ್ಣ ಹಚ್ಚದೂ ಒಂದು ಕಲೆ, ನಮ್ಮ ಚಿತ್ರಕ್ಕೆ ನಾವೇ ಬಣ್ಣ ಹಚ್ಚಿದ್ದಕ್ಕಿಂತ , ಬೇರೇ ಯಾರೋ ಹಚ್ಚಿದ್ದು ಚಂದ ಕಾಣ ಬಹುದು - ಅಲ್ಲವೇ? . ಬಣ್ಣ ಹಚ್ಚಿದ್ದು ಮುಖ್ಯನಾ, ಚಿತ್ರಾನಾ? - ಒಟ್ಟಿನಲ್ಲಿ ಇಡಿಯ ಕಲಾಕೃತಿ ಚೆನ್ನಾಗಿರದು ಮುಖ್ಯ! ಯಾರು ಬೇಕಾರೂ ಬಿಡಿಸಲಿ, ಯಾರು ಬೇಕಾರೂ ಬಣ್ಣ ಹಚ್ಲಿ! .. ಏನ್ ಹೇಳ್ತೆ?

ಮೃಗನಯನೀ said...

ಏನು ಹೇಳೋಕ್ ಗೊತ್ತಾಗ್ತಿಲ್ಲೆ. ಅದ್ಭುತ ತುಂಬ ಚೆನ್ನಾಗಿದೆ ಅಂತೆಲ್ಲಾ ಏನೇನೋ ಹೇಳೋಕ್ ಹೊರಟರೂ ಛೆ!! ಕಮ್ಮಿ ಆಯ್ತಲ್ಲ ಅನ್ಸ್ತಿದೆ... ತುಂಬ ವಿಚಿತ್ರ ತಳಮಳ ಆಗ್ತಿತ್ತು ಓದೊವಾಗ ಚಿತ್ರಕಾರನ ಧಾವಂತಗಳೆಲ್ಲಾ ಮನಸ್ಸನ್ನು ತುಂಬಿಕೊಂಡಿವೆ!

VENU VINOD said...

ನಿಮ್ಮ ಬದುಕಿನ ಬಿಳಿಹಾಳೆಯಲ್ಲೂ ಬಹುವರ್ಣದ ಸುಂದರ ಚಿತ್ರಗಳು ಮೈದಳೆಯಲಿ. ನಿಮ್ಮ ಆತ್ಮೀಯ ಬರಹ ಮುದಕೊಟ್ಟಿತು

Ultrafast laser said...

Yes!, this is what I exactly meant by saying "kaavyathe" in a writing. The main contrast between science and literature is -
In literature you emanate many meanings from one phrase, wheras in science you should take proper care that a word or phrase should mean only that particular thing.

An altogether different writing.

Dr.D.M.Sagar

ಶ್ವೇತ said...

badukannu meshtarige holisi bareda lekhana tumba chennagide. tumba philosophical aagi hosa varushada shubhashaya heluttiddira :-)
nimagu shubhashayagalu

ಸುಪ್ತದೀಪ್ತಿ suptadeepti said...

ಚೆನ್ನಾಗಿದೆ ಸುಶ್...
ನಿನಗೂ ನಿನ್ನ ಜೊತೆಗಾರರೆಲ್ಲರಿಗೂ ನನ್ನ ಹಾರೈಕೆಗಳು:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.

Anonymous said...

ಹೊಸದಾಗಿದೆ, ಹಿತವಾಗಿದೆ
ಸ್ಫೂರ್ತಿಯ ಹೊಳೆ ಹರಿಯುತ್ತಿದೆ

ಓದಿದ ಮೇಲೆ ಮನಸ್ಸು ಗೋಜಲಾಯಿತು
ಗೋಜಲಿಗೇ ಒಂದು ಹೊಸ ಆಕಾರ ಸಿಕ್ಕಿತು

ಹೃದಯ ತಟ್ಟಿತು, ಮನಸ್ಸು ಮುಟ್ಟಿತು
ನಿನಗೂ ಹೊಸ ವರ್ಷದ ಶುಭ ಹಾರೈಕೆಗಳು

ಅನಂತ said...

!

Sushrutha Dodderi said...

ಪ್ರತಿಕ್ರಿಯಿಸಿದ, ಮರುಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳು.

anonymous,

adEke haage? heege baredare Enaagatthe?

ಶ್ರೀನಿಧಿ,

ಗುರೀ... ಮ್... ನೀ ಯಾಕೆ ಕುಂಬ್ಳಕಾಯಿ ಕಳ್ಳ ಅಂದ್ರೆ ಹೆಗ್.. ? :P
ಏನ್ ಹೇಳ್ಲಿ ದೋಸ್ತಾ..ಅವರವರ ಭಾವಕ್ಕೆ ತಕ್ಕಂತೆ ನಡೆಯೋದು ಎಲ್ಲರೂ.. ಅಷ್ಟೇ.. ಒಟ್ನಲ್ಲಿ ಖುಷಿಯಾಗಿದ್ರೆ ಆತು. ಅಲ್ದಾ?

ಥ್ಯಾಂಕ್ಸ್ ಎವೆರಿಬಡಿ..