Wednesday, January 09, 2008

ಬೆಟ್ಟ, ಚಿಟ್ಟೆ..

"ಶೆಡ್ತಿಕೆರೆಯಾ?" ಉದ್ಘರಿಸಿದರು ಭಟ್ಟರು.
"ಹೌದು. ಯಾಕೆ ಅಲ್ಲಿ ಯಾರಾದ್ರೂ ಗೊತ್ತಾ ನಿಮಗೆ?" ಕೇಳಿದೆ.
"ಹಾಂ! ನಮ್ಮನೆಯವಳಿಗೆ ಅಲ್ಲೇ ವರದಾಮೂಲ! ಏಯ್ ಏನೇ, ನಿಮ್ಮೂರು ಕಡೆಯೋರು ಬಂದಿಯಾರೆ ನೋಡು.." ಭಟ್ಟರು ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕೂಗಿದರು.
ಒಳಗಿನಿಂದ ಬಂದ ಭಟ್ರ ಹೆಂಡತಿಯನ್ನು ಅಡುಗೆ ಒಲೆಯ ಮಶಿ ಬಡಿದು ಬಡಿದೇ ಹೀಗಾಗಿದೆಯೇನೋ ಎನಿಸುವಷ್ಟು ಕಪ್ಪು ಬಣ್ಣದ ಸೀರೆಯೊಂದು ಸುತ್ತಿತ್ತು. ಆ ಸೀರೆಗೆ ಹೊಳೆಯುವ ಹಸಿರು ಗೆರೆಗಳಿದ್ದವು. ಕೈಯ ಬಳೆಗಳಿಗೆ ಅದು ಮ್ಯಾಚಿಂಗ್ ಆಗುತ್ತಿತ್ತು.
"ಶೆಡ್ತಿಕೆರೆಯಾ? ಯಾರ ಮನೆ?" ಕೇಳಿದರು ಭಟ್ರ ಹೆಂಡತಿ.
"ಹೊಸೊಕ್ಲೋರ ಮನೆ ಅಂತಾರೆ. ನನ್ನ ಅಪ್ಪನ ಹೆಸರು ಅನಂತರಾವ್ ಅಂತ"
"ನಿನ್ನ ಅಮ್ಮಂಗೆ ಯಾವೂರು ಹೇಳು? ತುಮರಿ ಅಲ್ದಾ?"
"ಹಾಂ, ತುಮರಿಯೇ"
"ಗೊತ್ತಾತು ಬಿಡು.. ವನಮಾಲ ಅಲ್ದಾ ಹೆಸರು? ನಂಗೆ ವರದಾಮೂಲ. ಶಂಕರ ಭಟ್ರ ಮನೆ.. ನೀವು ಈಗಿನ ಹುಡುಗ್ರಿಗೆ ಗೊತ್ತಿರೂದಿಲ್ಲ ಬಿಡು.."

ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಪೆಚ್ಚು ನಗೆ ನಕ್ಕೆ. ಇವರು ಹವಿಗನ್ನಡ, ಮಂಗಳೂರು ಕನ್ನಡ ಮಿಕ್ಸ್ ಮಾಡಿ ಮಾತಾಡುತ್ತಿದ್ದರು. ಅದಕ್ಕಾಗಿ ನಾನು ಪೂರ್ತಿ ಪೇಟೆ ಭಾಷೆಯಲ್ಲೇ ಮಾತಾಡುತ್ತಿದ್ದೆ. ಹೊರಗೆ ಇಳಿಯುತ್ತಿದ್ದ ಸಂಜೆಗತ್ತಲೆ, ಜಗುಲಿಯಲ್ಲಿದ್ದ ಅಲ್ಪ ಬೆಳಕನ್ನೂ ಆಹುತಿ ತೆಗೆದುಕೊಳ್ಳುತ್ತಿತ್ತು. ಜಗುಲಿಯ ಬಲಮೂಲೆಯಲ್ಲಿದ್ದ ಕಿಟಕಿಯಿಂದ ಭಟ್ಟರ ಮನೆಯ ಧರೆ ಕಾಣುತ್ತಿತ್ತು. ಬಳಿಯೇ ಹೋಗಿ ಬಗ್ಗಿ ನೋಡಿದರೆ ಇಡೀ ಬೆಟ್ಟ ಕಾಣಬಹುದೆಂದು ನಾನು ಊಹಿಸಿದೆ. "ಇನ್ನು ನೀನು ಕೆಳಗಿಳೀಲಿಕ್ಕೆ ಆಗೂದಿಲ್ಲ. ನಮ್ಮಲ್ಲೇ ಉಳ್ದು ಬೆಳಗ್ಗೆ ಮುಂಚೆ ಹೊರಡು" ಎಂದರು ಭಟ್ಟರು. ಸುಸ್ತಾಗಿದ್ದ ನನಗೂ ಗತ್ಯಂತರವಿರಲಿಲ್ಲ. ಭಟ್ಟರ ಹೆಂಡತಿ ಜಗುಲಿಯ ಲೈಟಿನ ಸ್ವಿಚ್ಚು ಒತ್ತಿ ಕಾಫಿ ತರುವುದಾಗಿ ಹೇಳಿ ಒಳಹೋದರು. ನಾನು ಬಟ್ಟೆ ಬದಲಿಸಲೆಂದು ಎದ್ದೆ. ಟ್ಯೂಬ್‍ಲೈಟು ಫಕಫಕನೆ ಹೊತ್ತಿಕೊಂಡಿತು.

ಇಲ್ಲಿಗೆ ಚಾರಣಕ್ಕೆ ಹೊರಡುವ ಮೊದಲೇ 'ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲಿಕ್ಕೆ ಸಾಧ್ಯವೇ ಇಲ್ಲ, ನೀನು ಭಟ್ಟರ ಮನೆಯಲ್ಲಿ ಪರಿಚಯ ಹೇಳಿಕೊಂಡು ಇರು, ಕತ್ತಲಾದಮೇಲೂ ಮುಂದುವರೆಯುವ ಸಾಹಸ ಮಾಡಬೇಡ, ಒಬ್ಬನೇ ಬೇರೆ ಹೋಗುತ್ತಿದ್ದೀಯಾ, ತುಂಬಾ ದಟ್ಟ ಕಾಡಿದೆ, ಆನೆ ಹಿಂಡೂ ಇದೆಯಂತೆ' ಎಂದೆಲ್ಲ ನನ್ನ ಸ್ನೇಹಿತರು ಹೆದರಿಸಿದ್ದರು. ಅವರು ಅಷ್ಟೆಲ್ಲಾ ಅಂದಿದ್ದರೂ ನನಗೆ ನಾವು ಹಿಂದೊಮ್ಮೆ ಮಾಡಿದ ಸಾಹಸದ ನೆನಪಿದ್ದಿದ್ದರಿಂದ 'ಏಯ್ ಅವ್ಕೆಲ್ಲ ನಾನು ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಹತ್ತಿಳಿದು ತೋರಿಸ್ತೇನೆ ನೋಡ್ತಿರಿ' ಅಂದು ಬಂದಿದ್ದೆ.

ಆದರೆ ಕಳೆದ ಬಾರಿಯಂತೆ ಈ ಬಾರಿ ಹತ್ತಿಳಿಯುವುದು ಸುಲಭವಿರಲಿಲ್ಲ. ನನ್ನ ಸ್ಪೋರ್ಟ್ಸ್ ಶೂ ಹೊಸದಾಗಿದ್ದರಿಂದ ಅದಿನ್ನೂ ಕಾಲಿಗೆ ಹೊಂದಿಕೊಂಡಿರಲಿಲ್ಲ. ಬೆಟ್ಟದ ಕಲ್ಲು ಹಾದಿಯಲ್ಲಿ ಇಳಿಯುವಾಗ ಪಾದಕ್ಕೆ, ಹೆಬ್ಬೆರಳುಗಳಿಗೆ ಒತ್ತೀ ಒತ್ತಿ ತುಂಬಾ ನೋಯುತ್ತಿತ್ತು. ಹೆಜ್ಜೆ ಎತ್ತಿಡುವುದೆಂದರೆ ಜೀವ ಹೋದಂತಾಗುತ್ತಿತ್ತು. ಭಟ್ಟರ ಮನೆ ಬಳಿ ಬರುವುದರೊಳಗೆ ನಾನು ಪೂರ್ತಿ ಬಸವಳಿದುಹೋಗಿದ್ದೆ. ನನ್ನ ಜೊತೆ ತಾನೂ ಇಳಿಯುತ್ತಿದ್ದ ಸೂರ್ಯ, ನಾನು ಭಟ್ಟರ ಮನೆ ಬಳಿ ಬರುವಷ್ಟರಲ್ಲಿ ತಾನಿನ್ನು ಮರೆಯಾಗುವುದಾಗಿ ಹೇಳಿ ಟಾಟಾ ಮಾಡುತ್ತಿದ್ದ. ನನ್ನ ಬ್ಯಾಗಿನೊಳಗಿದ್ದ ಪೆನ್-ಟಾರ್ಚನ್ನು ಒಮ್ಮೆ ತಡವಿಕೊಂಡೆ. ಅದು ತಾನು ಬೇಕಾದರೆ ಒಂದೆರೆಡು ತಾಸು ಉರಿಯಬಲ್ಲೆ ಎಂದು ಅಭಯ ನೀಡಿತು. ಆದರೆ ಪೂರ್ತಿ ಬೆಟ್ಟ ಇಳಿಯುವುದಕ್ಕೆ ಇನ್ನೂ ಮೂರು ತಾಸಾದರೂ ಬೇಕೆಂದು ನನ್ನ ಹಿಂದಿನ ಅನುಭವ ಹೇಳುತ್ತಿತ್ತು. ಆನೆಯ ಹಿಂಡಿನ ನೆನಪಾಯಿತು. ಧೈರ್ಯ ಸಾಲಲಿಲ್ಲ. ಭಟ್ಟರ ಮನೆಯಲ್ಲೇ ಉಳಿದು ನಾಳೆ ಬೆಳಗ್ಗೆ ಅವರೋಹಣ ಮುಂದುವರೆಸುವುದೇ ಸರಿಯಿಂದು ನಿಶ್ಚಯಿಸಿದೆ. ಅಲ್ಲದೇ ಭಟ್ಟರ ಹೆಂಡತಿಯ ಊರಿನವನೇ ಅಂತ ಹೇಳಿಕೊಂಡಿದ್ದರಿಂದ ನನಗೆ ಇವತ್ತು ಇಲ್ಲಿ ಉಳಕೊಳ್ಳಲಿಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿತ್ತು. ಅದನ್ನು ನಿರಾಕರಿಸುವ ಗೋಜಿಗೆ ಹೋಗದೇ, ಬಟ್ಟೆ ಬದಲಿಸಿದವನು ಕೈಕಾಲು ತೊಳೆದು ಬರುವುದಾಗಿ ಹೇಳಿ, ಬಚ್ಚಲು ಮನೆ ಕೇಳಿಕೊಂಡು ಮನೆಯ ಒಳಹೊಕ್ಕೆ.

ಮೊದಲಿನದು ಜಗುಲಿ. ನಂತರ ಕತ್ತಲ ಒಳಮನೆ. ಆಮೇಲೆ ಕೈಸಾಲೆ. ಅದರ ಪಕ್ಕದಲ್ಲೇ ಅಡುಗೆಮನೆ. ಕೈಸಾಲೆಯಿಂದ ಹೊರಗೆ ನಡೆದರೆ ಅಲ್ಲೇ ಬಚ್ಚಲುಮನೆ. "ಬಿಸೀ ನೀರಿದ್ದು. ಬೇಕಾದ್ರೆ ಸ್ನಾನ ಮಾಡೋದಿದ್ರೆ ಮಾಡು" ಎಂದರು ಭಟ್ಟರ ಹೆಂಡತಿ. ಬಿಂದಿಗೆ ಬಿಂದಿಗೆ ಹೊಯ್ದುಕೊಂಡೆ. ಗೂಡಿನಲ್ಲಿದ್ದ ಅವರ ಲೈಫ್‍ಬಾಯ್ ಸೋಪನ್ನೇ ಬಳಸಿಕೊಂಡೆ. ಘಮಘಮ ಪರಿಮಳ. ಹಬೆ. ಹಿತಾನುಭವ. ನಾನು ಸ್ನಾನ ಮುಗಿಸಿ, ಬರೀ ಟವಲು ಸುತ್ತಿಕೊಂಡು ಕೈಸಾಲೆಗೆ ಬಂದೆ.

ಕೈಸಾಲೆಯ ಮೂಲೆಯಲ್ಲಿ ಒಂದು ಹುಡುಗಿ ಕೂತಿತ್ತು. ಬರೀ ಮೈಯಲ್ಲಿ ಬಂದ ನನ್ನನ್ನು ನೋಡಿದ ಅದು ನಾಚಿದಂತೆ ಮುಖವನ್ನು ಗೋಡೆಯ ಕಡೆ ತಿರುಗಿಸಿಕೊಂಡಿತು. ನೆಲ್ಲಿಕಾಯಿಯನ್ನೋ ಏನನ್ನೋ ತಿನ್ನುತ್ತಿದ್ದಂತಿತ್ತು. ಓರೆಗಣ್ಣಿನಿಂದ ನೋಡುತ್ತಾ ನಾನು ಒಳಮನೆ ದಾಟಿ ಜಗುಲಿಗೆ ಹೋಗಿ ಒಂದು ತೆಳು ಬನೀನು, ಬರ್ಮುಡಾ ಧರಿಸಿ, ತಲೆ ಬಾಚಿ ರೆಡಿಯಾಗುವಷ್ಟರಲ್ಲಿ ಭಟ್ಟರ ಹೆಂಡತಿ ಒಳಗೆ ಕರೆದರು. ಅಡುಗೆ ಮನೆಯಲ್ಲಿ ಮಣೆ ಹಾಕಿ ಕೂರಿಸಿ ನನಗೆ ಮಸಾಲೆ ಅವಲಕ್ಕಿ, ಒಂದು ದೊಡ್ಡ ಲೋಟದ ತುಂಬ ಕಾಫಿ ಕೊಟ್ಟರು. ಹಸಿವಾಗಿದ್ದ ನನ್ನ ಹೊಟ್ಟೆಗೆ ಖುಷಿಯಾಯಿತು. ಕೈ ತೊಳೆಯಲು ಬಚ್ಚಲಿಗೆ ಹೋಗುವಾಗ ಕೈಸಾಲೆಯ ಮೂಲೆ ನೋಡಿದರೆ ಅಲ್ಲಿ ಆ ಹುಡುಗಿ ಇರಲಿಲ್ಲ.

ಜಗುಲಿಗೆ ಬಂದು ಕೂತೆ. ಭಟ್ಟರು ಟೀವಿ ನೋಡುತ್ತಿದ್ದರು. ದೂರದರ್ಶನದ ಏಳು ಗಂಟೆ ವಾರ್ತೆ ಬರುತ್ತಿತ್ತು. ನನ್ನ ಅರೆತೆರೆದ ಕಣ್ಗಳು ನಿದ್ರೆಯನ್ನು ಬಯಸುತ್ತಿದ್ದವು. ಆದರೆ ವಾರ್ತೆ ಮುಗಿಯುತ್ತಿದ್ದಂತೆಯೇ ಭಟ್ಟರು ನನ್ನ ಬಗ್ಗೆಯೆಲ್ಲಾ ವಿಚಾರ ಮಾಡಲು ಶುರು ಮಾಡಿದ್ದರಿಂದ ನಾನು ಕಷ್ಟಪಟ್ಟು ನಿದ್ರೆಯನ್ನು ತಡೆಹಿಡಿಯಲೇ ಬೇಕಾಯಿತು. ಊರು, ಕೇರಿ, ಅಪ್ಪ, ಕೆಲಸ... ಎಲ್ಲಾ ವಿಚಾರಿಸಿದ ಅವರು, ತಮ್ಮ ಬಗ್ಗೆಯೂ ಹೇಳಿಕೊಂಡರು. ಇಲ್ಲಿಗೆ ತಾವು ಬಂದದ್ದು, ಹೀಗೆ ಒಂಟಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿರುವುದು, ಈ ಪಾಳುಗುಡಿಯ ಪೂಜೆ... ಎಲ್ಲಾ ಕಾರಣ, ಕತೆ, ಹಿನ್ನೆಲೆಗಳನ್ನು ಹೇಳಿದರು. "ಕುಮಾರ ಪರ್ವತವನ್ನು ಒಂದೇ ದಿನದಲ್ಲಿ ಹತ್ತಿಳಿಯೋದಕ್ಕೆ ಗಂಡೆದೆ ಬೇಕು" ಎಂದರು. ಇಲ್ಲಿಗೆ ಬರುವವರೆಲ್ಲರು ಅಡುಗೆ-ಆಹಾರವನ್ನೆಲ್ಲ ತಂದುಕೊಂಡು, ಮೇಲ್ಗಡೆ ಟೆಂಟು ಹಾಕಿ ಉಳಿದು ಮರುದಿನ ಕೆಳಗಿಳಿಯುತ್ತಾರಂತೆ. ಆದರೆ ಹಿಂದೊಮ್ಮೆ ನಾವು ಆರು ಜನ ಹುಡುಗರು ಸಾಹಸ ಮಾಡಿ ಒಂದೇ ದಿನದಲ್ಲಿ ಹತ್ತಿಳಿದ ಕತೆಯನ್ನು ನಾನು ಅವರಿಗೆ ಹೇಳಿದೆ. ಭಟ್ಟರು "ಭಯಂಕರ ಬಿಡ್ರಪ್ಪ.. ಅದೂ ಪುಳಿಚಾರು ತಿನ್ನೋ ಬ್ರಾಮಣ್ರ ಹುಡುಗ್ರಾಗಿ.. ಆಂ?" ಎಂದು ನಕ್ಕರು. ಆ ಹಿಂದಿನ ಬಾರಿಯ ಚಾರಣವನ್ನು ನೆನೆಸಿಕೊಳ್ಳುತ್ತಾ ನಾನೂ ನಕ್ಕೆ.

ಬೆಂಗಳೂರಿನಿಂದ ರಾತ್ರಿ ಹನ್ನೊಂದರ ಹೊತ್ತಿಗೆ ರಾಜಹಂಸ ಬಸ್ಸಿಗೆ ಹೊರಟ ನಾವು ಆರು ಜನ ಹುಡುಗರು ಸೋಮವಾರಪೇಟೆಯಲ್ಲಿ ಇಳಿದಾಗ ಮೂಲೆ ಹೋಟಿಲಿನ ಕಾಫಿಯೋ ಚಹಾವೋ ಗೊತ್ತಾಗದಂತಹ ಬಣ್ಣದ ದ್ರವವೊಂದು ಸ್ವಾಗತ ಕೋರಿತ್ತು. ಅಲ್ಲೇ ನಾವೆಲ್ಲ ಮುಖ ತೊಳೆದು, ಹಲ್ಲುಜ್ಜಿ, ಮೈಮುರಿದು ತಯಾರಾದೆವು. ನೀರಿಗಿಂತಲೂ ತೆಳ್ಳಗಿದ್ದ ಸಾರಿನಲ್ಲಿ ಇಡ್ಲಿಯ ಚೂರುಗಳನ್ನು ಮುಳುಗಿಸಿ ಎತ್ತಿ ಬಾಯಿಗೆಸೆದುಕೊಂಡು ಅಗಿಯದೇ ನುಂಗಿ ಬೆಳಗಿನ ತಿಂಡಿ ಮುಗಿಸಿದ್ದೆವು. ಅಲ್ಲಿಂದ ಬೆಟ್ಟದ ಬುಡದವರೆಗೆ ಒಂದು ಕಾರು. ನಂತರ ಒಂದೇ ಸಮನೆ ಆರೋಹಣ.

ಕರ್ನಾಟಕದ ಅತ್ಯಂತ ದುರ್ಗಮ ಚಾರಣದ ಹಾದಿಯೂ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವೂ ಆಗಿರುವ ಕುಮಾರ ಪರ್ವತವನ್ನು ಹತ್ತಲಿಕ್ಕೆ ಎರಡು ದಾರಿಗಳಿವೆ. ಒಂದು, ಸೋಮವಾರಪೇಟೆಯಿಂದ ಶುರುವಾಗುವುದು. ಇನ್ನೊಂದು, ಸುಬ್ರಹ್ಮಣ್ಯದಿಂದ ಶುರುವಾಗುವುದು. ನಾವು ಸೋಮವಾರಪೇಟೆಯಿಂದ ಹತ್ತಿ ಸುಬ್ರಹ್ಮಣ್ಯದಲ್ಲಿ ಇಳಿಯುವ ಯೋಜನೆ ಹಾಕಿಕೊಂಡಿದ್ದೆವು. ಬೆಟ್ಟ ಹತ್ತಲಿಕ್ಕೆ ಮುಂಚೆ ಅರಣ್ಯ ಮಂಡಲಿಯವರದೊಂದು ಆಫೀಸಿದೆ. ಅಲ್ಲಿ ಒಂದು ಡಿಕ್ಲರೇಶನ್ ಬರೆದುಕೊಡಬೇಕು. ಪ್ರತಿ ಚಾರಣಿಗನಿಗೆ ೧೧೫ ರೂಪಾಯಿ ಫೀಸು. ಸುಮಾರು ಮುಕ್ಕಾಲು ಬೆಟ್ಟ ಹತ್ತುವವರೆಗೆ ಬೆಟ್ಟವೇ ಕಾಣುವುದಿಲ್ಲ. ಸುಮ್ಮನೆ ಕಾಡ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು: ಹಕ್ಕಿ ಹಾಡು ಕೇಳುತ್ತಾ. ತುಂಬಾ ಕಡಿದಾಗಿಯೂ ಇಲ್ಲದ, ಅಲ್ಲಲ್ಲಿ ಏರು ಅಲ್ಲಲ್ಲಿ ಇಳುಕಲಿನ ದಾರಿ: ನಾವು ಬೆಟ್ಟವನ್ನೇ ಹತ್ತುತ್ತಿದ್ದೇವೋ ಇಲ್ಲಾ ತಪ್ಪು ದಾರಿ ಹಿಡಿದು ಯಾವುದೋ ಊರ ಕಡೆ ಹೋಗುತ್ತಿದ್ದೇವೋ ಎಂದು ಅನುಮಾನ ಬರುವಂತೆ. ನಾವು ಅಲ್ಲಲ್ಲಿ ನಿಂತು ನೀರು ಕುಡಿಯುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ಕತೆ ಹೇಳುತ್ತಾ, ಚೆರ್ರಿ ಹಣ್ಣು ತಿನ್ನುತ್ತಾ ನಡೆಯುತ್ತಿದ್ದೆವು. ಯಾರಿಗೂ ಸುಸ್ತೇನು ಆದಂತೆ ಕಾಣುತ್ತಿರಲಿಲ್ಲ. ಮಧ್ಯೆ ಮಧ್ಯೆ ಸುಮಾರು ಜನ ಬೆಟ್ಟ ಇಳಿಯುತ್ತಿದ್ದವರು ಸಿಗುತ್ತಿದ್ದರು. ಅವರ ಬಳಿ 'ಇನ್ನೆಷ್ಟು ದೂರ?' ಅಂತ ಕೇಳುವುದು. ಅವರು 'ಇನ್ನೂ ಒಂದು-ಒಂದೂ ವರೆ ತಾಸು ಬೇಕು ತುದಿ ಮುಟ್ಟಲಿಕ್ಕೆ' ಎನ್ನುವುದು. ನಂತರ ಅವರು ನಮ್ಮ ಬಳಿ 'ಕೆಳಗಿಳಿಯಲಿಕ್ಕೆ ಇನ್ನೂ ಎಷ್ಟು ದೂರ?' ಅಂತ ಕೇಳುವುದು. ನಾವು 'ಇನ್ನೂ ಎರಡು ತಾಸು ಬೇಕು' ಎನ್ನುವುದು. ಮಧ್ಯೆ ಎರಡ್ಮೂರು ದೊಡ್ಡ ಬಂಡೆಗಳಿವೆ. ಹತ್ತಬೇಕಾದರೆ ಸ್ವಲ್ಪ ಹುಷಾರಾಗಿರಬೇಕು. ಉಳಿದಂತೆ ಕುಮಾರ ಪರ್ವತವನ್ನು ಸೋಮವಾರಪೇಟೆಯ ಕಡೆಯಿಂದ ಹತ್ತುವುದು ಕಷ್ಟದ ವಿಷಯವೇನಲ್ಲ.

ನಾವು ಶೃಂಗವನ್ನು ಮುಟ್ಟಿದಾಗ ಮಧ್ಯಾಹ್ನ ಒಂದೂ ವರೆ. ಸುಡು ಬಿಸಿಲು. ಬಿಸಿ ಗಾಳಿ. ಅಲ್ಲಲ್ಲಿ ಟೆಂಟು ಹಾಕಿ ಅಡುಗೆ ಮಾಡಿಕೊಳ್ಳುತ್ತಿದ್ದ ಗುಂಪುಗಳು. ನಾವೂ ಅಲ್ಲೇ ಒಂದು ಕಡೆ ತಂಪಲು ಅರಸಿ ಕೂತು, ಕಟ್ಟಿಕೊಂಡು ಹೋಗಿದ್ದ ಚಪಾತಿ ತಿಂದು ಮುಗಿಸಿದೆವು. ಕತ್ತಲಾಗುವುದರೊಳಗೆ ಕೆಳಗಿಳಿಯಲೇಬೇಕಿದ್ದರಿಂದ, ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಅವರೋಹಣವನ್ನು ಶುರುಮಾಡಿಯೇ ಬಿಟ್ಟೆವು. ಶೃಂಗದಿಂದ ಸ್ವಲ್ಪ ಇಳಿದ ಮೇಲೆ ಎಡಕ್ಕೊಮ್ಮೆ ತಿರುಗಿ ನೋಡಬೇಕು. ಅಲ್ಲಿಂದ ಕಾಣುತ್ತದೆ ಕುಮಾರ ಪರ್ವತದ ರುದ್ರ ರಮಣೀಯ ದೃಶ್ಯ... ಇದೇ ಬೆಟ್ಟವನ್ನಾ ನಾವು ಹತ್ತಿ ಬಂದಿದ್ದು ಎನಿಸುವಂತೆ ದಂಗುಬಡಿಸುವ ದೃಶ್ಯ. ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಕೊನೆಯ ಅಧ್ಯಾಯವನ್ನು ಸಟ್ಟನೆ ನೆನಪಿಸುವಂತಹ ದೃಶ್ಯ. ಇಲ್ಲೇ, ಹೀಗೇ, ಆ ಓತಿ ತನ್ನ ರೆಕ್ಕೆಗಳನ್ನು ಪವಾಡದಂತೆ ಬಿಚ್ಚಿ ದಿಗಂತದತ್ತ ಸ್ವಚ್ಚಂದ ಪಯಣ ಹೋದದ್ದು.. ಇದೇ, ಇಲ್ಲೇ, ಕರ್ವಾಲೊ, ತೇಜಸ್ವಿ, ಕರಿಯಪ್ಪ, ಮಂದಣ್ಣ, ಯೆಂಗ್ಟ, ಕಿವಿ... ದಿಗ್ಭ್ರಮೆಗೊಂಡು ಶೂನ್ಯದತ್ತ ನೋಡಿದ್ದುದು.. ಕುಮಾರ ಪರ್ವತವನ್ನು ಹತ್ತಿದ್ದು ಸಾರ್ಥಕವಾಯ್ತೆಂದೆನಿಸುತ್ತದೆ ಇಲ್ಲಿಗೆ ಬಂದಾಗ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಭಟ್ಟರ ಜೊತೆ ಮಾತಾಡುತ್ತಲೇ ಯೋಚಿಸುತ್ತಿದ್ದ ನನಗೆ ಹಳೆಯದೆಲ್ಲ ತುಂಬಾ ಆಪ್ಯಾಯಮಾನವಾಗಿ ಕಾಣತೊಡಗಿದ್ದವು. ಭಟ್ಟರ ಹೆಂಡತಿ ಊಟಕ್ಕೆ ಕರೆದರು. ನಾನೂ ಭಟ್ಟರೂ ಒಳಹೋದೆವು. "ಇವಳು ನನ್ನ ಮಗಳು. ಶ್ಯಾಮಲಾ ಅಂತ. ಫಸ್ಟ್ ಇಯರ್ ಡಿಗ್ರೀ. ಮಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿ ಇದ್ಕಂಡು ಓದ್ತಾ ಇದ್ದು.." ಭಟ್ಟರು ಕೈಸಾಲೆಯ ಮೂಲೆಯಲ್ಲಿ ಕೂತಿದ್ದ ಹುಡುಗಿಯನ್ನು ಪರಿಚಯಿಸಿಕೊಟ್ಟರು. ಹುಡುಗಿ ನನ್ನೆಡೆಗೆ ನೋಡಿ ಮುಗುಳ್ನಕ್ಕಳು. "ಡಿಗ್ರಿ, ಯಾವುದ್ರಲ್ಲಿ?" ನಾನು ಕೇಳಿದೆ. "ಬಿಎಸ್ಸಿ" ಅವಳೆಂದಳು. ನಾನು ಭಟ್ಟರ ಹಿಂದೆ ಅಡುಗೆ ಮನೆಗೆ ಹೋದೆ. ನಮ್ಮಿಬ್ಬರಿಗೂ ಅಡುಗೆಮನೆಯಲ್ಲೇ ಬಾಳೆ ಹಾಕಿದ ಭಟ್ಟರ ಹೆಂಡತಿ, ಮಗಳಿಗೆ ಕೈಸಾಲೆಯ ಮೂಲೆಯಲ್ಲೇ ಬಾಳೆ ಹಾಕಿದರು. ಇದೇನು ಹೀಗೆ ಅಂತ ನಾನು ಯೋಚಿಸುತ್ತಿರುವಾಗಲೇ "ಅವ್ಳು ಒಳಗೆ ಬರೂಹಂಗಿಲ್ಲೆ ಇವತ್ತು.. ಹಹ್ಹ!" ಎಂದರು ಭಟ್ಟರ ಹೆಂಡತಿ. ಹುಡುಗಿ ಸಿಟ್ಟು ಮಾಡಿಕೊಂಡವಳಂತೆ ಅಮ್ಮನೆಡೆಗೆ ಒಮ್ಮೆ ಬಿರುಗಣ್ಣು ಬಿಟ್ಟು ತಲೆತಗ್ಗಿಸಿ ಅನ್ನ ಕಲಸತೊಡಗಿದಳು. "ನಿಧಾನ ಊಟ ಮಾಡು" ಎಂದರು ನನ್ನ ಬಳಿ ಭಟ್ಟರ ಹೆಂಡತಿ. ಶ್ಯಾಮಲಾಳ ಮುಗುಳ್ನಗೆ, ಬಿರುಗಣ್ಣು, ನೆಲ್ಲಿಕಾಯಿ ಹಿಡಿದಿದ್ದ ಚಿಗುರು ಬೆರಳುಗಳು ನನಗೆ ಬಾಳೆ ಎಲೆಯ ಮೇಲೆಲ್ಲ ಕಾಣಿಸಿ ಕಾಡತೊಡಗಿದ್ದರಿಂದ ಊಟ ತನ್ನಿಂತಾನೇ ನಿಧಾನವಾಗಿತ್ತು.

"ಕವಳ ಹಾಕ್ತೀಯೇನು?" ಭಟ್ಟರು ತಬಕನ್ನು ನನ್ನ ಮುಂದೆ ದೂಡಿದರು. ನಾನು ಬರೀ ಎರಡು ಅಡಿಕೆಯ ಹೋಳುಗಳನ್ನು ಬಾಯಿಗೆಸೆದುಕೊಂಡೆ. "ಸುಸ್ತಾಯ್ದು ನಿಂಗೆ. ಮೆತ್ತಿನ ಮೇಲೆ ಹಾಸಿಗೆ ಹಾಸ್ತಿ. ಮಲಗೂವಂತೆ" ಭಟ್ಟರು ಬಾಯೊಳಗಿನ ಕವಳದ ರಸವನ್ನು ಕುಲುಕಿಸುತ್ತ ಒಳನಡೆದರು. ನನಗೆ ಕಣ್ಣು ಎಳೆಯುತ್ತಿದ್ದವು.

ಅಷ್ಟೊತ್ತಿಗೆ ಕರೆಂಟು ಹೋಯಿತು! ಭಟ್ಟರ ಹೆಂಡತಿ ಇನ್ನೂ ಊಟ ಮಾಡುತ್ತಿದ್ದರು ಅನ್ನಿಸೊತ್ತೆ. "ಥೋ! ಕರೆಂಟ್ ಹೋಯ್ತಲ್ಲಪ್ಪ.. ಹೋಯ್, ಒಂಚೂರು ಲಾಟೀನ್ ಹಚ್ಚಿ ಬನ್ನಿ.." ಗಂಡನನ್ನು ಕೂಗಿದರು. ಭಟ್ಟರು ನನ್ನ ಹಾಸಿಗೆ ತಯಾರು ಮಾಡುವುದಕ್ಕೆ ಮಹಡಿಯ ಮೇಲಿದ್ದರು. ಅವರು ಮೆಟ್ಟಿಲಿಳಿದು ಬರುವುದಕ್ಕೆ ಸಮಯವಾಗಬಹುದೆಂದು ಬಗೆದು ನಾನೇ ಎದ್ದು, "ಎಲ್ಲಿದ್ದು ಅಕ್ಕಾ ಲಾಟೀನು..? ನಾನೇ ಹಚ್ತಿ.." ಎನ್ನುತ್ತಾ, ತಡಕಾಡುತ್ತಾ ಒಳಮನೆ ದಾಟಿ, ಅಡುಗೆ ಮನೆ ಇಲ್ಲೇ ಇರಬೇಕೆಂದು ಕೈಸಾಲೆ ಬಳಿ ಅತ್ತಿತ್ತ ಕೈಚಾಚುತ್ತಾ ಹುಡುಕಾಡುತ್ತಿರಬೇಕಾದರೆ, ಯಾರಿಗೋ ಕೈ ತಾಕಿದಂತಾಗಿ, ಅವರು ಸರಕ್ಕನೆ ಅತ್ತ ಸರಿದು, ಅದು ಯಾರೆಂದು ಕ್ಷಣದಲ್ಲಿ ಮೆದುಳಿಗೆ ಗೊತ್ತಾಗಿ, ಮೈಯಲ್ಲಿ ರೋಮಾಂಚನವಾಗಿ, ಕತ್ತಲಲ್ಲದು ಯಾರಿಗೂ ತಿಳಿಯದೇ ಹೋಗಿ, ನಾನು "ಎಲ್ಲಿದೆ ಲಾಟೀನು?" ಎಂದು ಮತ್ತೊಮ್ಮೆ ಕೇಳುವಷ್ಟರಲ್ಲಿ ಕರೆಂಟೇ ಬಂದುಬಿಟ್ಟಿತು. "ಹಾಳು ಕರೆಂಟು.. ಒಂದು ನಿಮಿಷಕ್ಕೆ ಹೋಗ್ತು, ಮತ್ತೊಂದು ನಿಮಿಷಕ್ಕೆ ಬರ್ತು!" ಗೊಣಗಿದರು ಭಟ್ಟರ ಹೆಂಡತಿ. ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು. ನಾನು ಒಂದು ನಿಮಿಷ ಅಡುಗೆಮನೆಯ ಬಾಗಿಲಲ್ಲಿ ನಿಂತಿದ್ದು, ನಂತರ ಸೀದಾ ಮೆತ್ತಿಗೆ ಹೋಗಿ, ಭಟ್ಟರು ಹಾಸಿಕೊಟ್ಟ ಹಾಸಿಗೆಯಲ್ಲಿ ಪವಡಿಸಿಬಿಟ್ಟೆ: ಅಷ್ಟೆಲ್ಲ ಸುಸ್ತಾಗಿದ್ದರೂ ನಿದ್ರೆ ಬರದಿರುವಂತೆ ಮಾಡಿದ ಆ ಚಿಟ್ಟೆಯ ಸ್ಪರ್ಶಕ್ಕೆ ಮನಸಿನಲ್ಲೇ ಶಾಪ ಹಾಕುತ್ತಾ.

ಬೆಳಗ್ಗೆ ಭಟ್ಟರ ಮನೆಯಲ್ಲಿ ದೋಸೆ ತಿಂದು, ಊರಿಗೆ ಹೋದಾಗ ಶೆಡ್ತಿಕೆರೆಗೆ-ನಮ್ಮ ಮನೆಗೆ ಹೋಗಿಬರುವಂತೆ ಭಟ್ಟರ ಹೆಂಡತಿಗೆ ಹೇಳಿ, ನನ್ನ ಸ್ಪೋರ್ಟ್ಸ್ ಶೂಗೆ ಲೇಸ್ ಬಿಗಿಯುತ್ತಿದ್ದಾಗ, ಚಿಟ್ಟೆ ಶ್ಯಾಮಲಾ ಒಳಮನೆಯ ಬಾಗಿಲ ಹಿಂದೆ ನಿಂತಿದ್ದಳು. ಆಗತಾನೆ ಮಿಂದು ಬಂದಿದ್ದ ಅವಳ ಹೆರಳು ವಾಸ್ತುಬಾಗಿಲಿಗೆ ಇಳಿಬಿಟ್ಟ ತೋರಣವಾಗಿತ್ತು. ಜಿಂಕೆ ಕಣ್ಣು ಕಳ್ಳ ಕಣ್ಣಾಗಿದ್ದವು. "ಮತ್ತೆ ಸಿಗೋಣ?" ಮುಗುಳ್ನಗುತ್ತಾ ನಾನು ಕೈ ಚಾಚಿದೆ: ಇನ್ನು ಸಿಗುತ್ತದೋ ಇಲ್ಲವೋ ಎಂಬ ಸ್ಪರ್ಶ ಇದೊಮ್ಮೆ ದೊರಕಿಬಿಡಲಿ ಎಂಬಾಸೆಯಿಂದ. ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು.

ಚುರುಕು ಬಿಸಿಲಲ್ಲಿ ಬೆಟ್ಟ ಇಳಿಯುವಾಗ ಹಿಂದಿನ ಬಾರಿ ಇಳಿದ ಘೋರ ನೆನಪುಗಳು.. 'ಕರ್ವಾಲೋ ಪಾಯಿಂಟಿ'ನಿಂದ ಒಂದೇ ಸಮನೆ ಇಳಿಜಾರು. ಇಳಿ ಇಳಿ ಇಳಿ. ಒತ್ತುವ ಕಲ್ಲುಗಳು. ಜಾರಿದರೆ ಪ್ರಪಾತ. ಸುಮಾರು ಒಂದು ತಾಸು ಇಳಿದ ಮೇಲೆ ಕಾಣಿಸತೊಡಗುವ ಭಟ್ಟರ ಮನೆ. ಅದೇ ಭಟ್ಟರ ಮನೆಯಾ ಎಂಬ ಅನುಮಾನ. ಇಳಿದು ಇಳಿದು ಇಳಿದು... ಕಾಲುಗಳಿಗೆ ಕೆಳಕೆಳಗೆ ಹೆಜ್ಜೆಯಿಡುವುದೊಂದು ಯಾಂತ್ರಿಕ ಕ್ರಿಯೆಯಂತಾಗಿ, ನಮಗಿನ್ನು ಸಮತಟ್ಟು ನೆಲದಲ್ಲಿ ನಡೆಯಲಿಕ್ಕೇ ಬರುವುದಿಲ್ಲವೇನೋ ಎಂದು ಭಯ ಹುಟ್ಟಿ... ಇನ್ನೇನು ಬಂದೇ ಬಿಟ್ಟಿತು ಎಂಬಂತೆ ತೋರಿದರೂ ಮತ್ತೆ ದೂರ ದೂರ ಹೋಗುವ 'ಭಟ್ಟರ ಮನೆ' ಎಂಬ ಮರೀಚಿಕೆ... ಭಟ್ಟರ ಮನೆಗಿಂತಲೂ ಮುಂಚೆ ಅರಣ್ಯ ಇಲಾಖೆಯವರ ಕಛೇರಿ. ಸುಸ್ತಾಗಿದ್ದ ನಾವೆಲ್ಲ ಅಲ್ಲೇ ಉಳಿದಿದ್ದ ತಿಂಡಿ ತಿಂದು, 'ಇಲ್ಲಿಂದ ದಾರಿ ಚೆನ್ನಾಗಿದೆ.. ಎರಡು ತಾಸಿನಲ್ಲಿ ಸುಬ್ರಹ್ಮಣ್ಯ ಮುಟ್ಟಬಹುದು' ಎಂಬ ಫಾರೆಸ್ಟರಿನ ಮಾತು ನಂಬಿ, ಭಟ್ಟರ ಮನೆಯಲ್ಲಿ ಅರ್ಧ ತಾಸು ರೆಸ್ಟ್ ತಗೊಂಡು ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ರದ್ದು ಮಾಡಿ, ದಢದಢನೆ ಇಳಿಯತೊಡಗಿದ್ದು. ಕತ್ತಲು.. ಕಾಡು.. ಕಲ್ಲು.. ಜೀವ ಹೋಗುವಂತೆ ನೋಯುತ್ತಿದ್ದ ಕಾಲು.. ಸುಸ್ತು.. ಆನೆ ಭಯ..

ಈಗ ಯೋಚಿಸಿದರೂ ಭಯವಾಗುತ್ತದೆ.. ಅಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ ನಮ್ಮ ಹುಂಬತನದ ಬಗ್ಗೆ.. ಆದರೆ ಜೀವನದ ಅತ್ಯದ್ಭುತ ಚಾರಣಾನುಭವವನ್ನು ಕಲ್ಪಿಸಿದ ಆ ದಿನದ ಬಗ್ಗೆ ಖುಷಿಯಿದೆ. ಮಾಡಿದ ಸಾಹಸದ ಬಗ್ಗೆ ಏನೋ ಹೆಮ್ಮೆಯಿದೆ.

ಚಿಟ್ಟೆ ಸ್ಪರ್ಶದ ಗುಂಗಿನಲ್ಲಿ ನಾನು ಸುಮ್ಮನೆ ಇಳಿಯುತ್ತೇನೆ.. ದೂರದಲ್ಲಿ ಸುಬ್ರಹ್ಮಣ್ಯದ ದೇವಸ್ಥಾನದ ಘಂಟೆಯ ಶಬ್ದ ಕೇಳಿಸುತ್ತದೆ.. ಇನ್ನೇನು ಸ್ವಲ್ಪ ದೂರ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.. ಕಾಡ ನೆರಳು, ಇಣುಕು ಬಿಸಿಲು, ಹಕ್ಕಿ ಕುಕಿಲು, ನೆನಪ ಹೊನಲು... ಕುಮಾರ ಪರ್ವತದ ಎತ್ತರಕ್ಕೆ ಶರಣು.

28 comments:

Sandeepa said...

ಅಲ್ಲೇಲ್ಲಾರೂ ತೂಗು ಸೇತುವೆ ಕಂಡ್ಚಾ?? :)

btw, ಸಕ್ಕತ್ ಬರದ್ದೆ!

Sushrutha Dodderi said...

@ alpazna,

ಹಹಾ! ತೂಗುಸೇತುವೆ ಬಗ್ಗೆ ನೀನೇ ಒಂದು ಫೋಟೋ ಹಾಕಿ ಬರಿತೆ ಅಂತ ಕಾಯ್ತಾ ಇದ್ದಿ...

ವಿ.ರಾ.ಹೆ. said...

nicely 'written' ;)

ನೀ ಫೋಟೋಗಳನ್ನ ಹಾಕ್ದೇ ಇದ್ದಿದ್ರೆ ’ಬೆಟ್ಟ ಹತ್ತಿದ್ದರ’ ಬಗ್ಗೆ ತಪ್ಪು ತಿಳಿದುಕೊಳ್ಳೋ ಚಾನ್ಸ್ ಇತ್ತು ಬಿಡು ;-)

ರಾಜೇಶ್ ನಾಯ್ಕ said...

"ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು"
"ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು"

ಈ ಎರಡೂ ವಾಕ್ಯಗಳನ್ನು ಬಹಳ ಮೆಚ್ಚಿಕೊಂಡೆ. ಮತ್ತೆ ಮತ್ತೆ ಓದಿದೆ. ಓದಿದಷ್ಟು ಇಷ್ಟವಾಗುತ್ತಿತ್ತು. ಸುಂದರ ಲೇಖನಕ್ಕಾಗಿ ಧನ್ಯವಾದಗಳು, ಸುಶ್ರೂತ.

ಸುಧನ್ವಾ ದೇರಾಜೆ. said...

ಮೋಟುಗೋಡೆಯಾಚೆಗೆ ಹೋದ ಬರೆಹ ಚೆನ್ನಾಗಿದೆ ! ಪ್ರತಿ ಚಾರಣಿಗನಿಗೆ ೧೧೫ ರೂ. ವಸೂಲು ಮಾಡುತ್ತಿರುವುದು ಭಯಂಕರ. ನನ್ನ ಬ್ಲಾಗ್‌ನಲ್ಲಿ ಕುಮಾರಪರ್ವತ ಚಾರಣದ ಬಗೆಗಿನ ಒಂದು ಬರೆಹವಿದೆ. ಸಾಧ್ಯವಾದರೆ ಓದಿ ಪ್ರತಿಕ್ರಿಯಿಸು. ನಿರೂಪಣೆಯಲ್ಲಿರುವ ವೈವಿಧ್ಯ ಮುದ ನೀಡುತ್ತದೆ. ಅದು ಒಬ್ಬೊಬ್ಬನಿಗೂ ಒಂದೊಂದು ತರಹ ಕಾಣುವುದು ಖುಶಿಯ ವಿಚಾರ. ನಮ್ಮ ರೆಸಾರ್ಟ್, ಲುಂಬಿನಿ ಗಾರ್ಡನ್, ವಂಡರ್ ಲಾ ಗಳಂತಲ್ಲ ಅವು.

Harsha Bhat said...

sush....,

hangadre neenu innondu trek ge ready adange aatu.... yaavaga bag ready madana heLu....


By the way... tumba chennagi bardyooooo...

ಶ್ರೀನಿಧಿ.ಡಿ.ಎಸ್ said...

ಭಟ್ಟರ ಮನೆಯ ಹಂಚಿನಡಿಯಿದ್ದ ಅಂಕಣ - ಮನುಷ್ಯರನ್ನು ಸ್ಕ್ಯಾನ್ ಮಾಡಿದ ನಿನ್ನ ಮೆದುಳಿನ ಕಣ್ಣಿಗೆ ನಮಸ್ತೇ! ಮಸ್ತ್ ಬರಹ ಮಗಾ!

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ...
ಚಂದನೆಯ ಚಾರಣದ ಸುಂದರದ ವರ್ಣನೆ.

ಓದ್ತಾ ಓದ್ತಾ ಯಾಕೋ ಈ ಸಾಲುಗಳ ನೆನಪು...

"ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು"

"ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ"

ಸುಶ್ರುತ...ನೀನು ಕೂಗಿದಾಗಲೆಲ್ಲ ಬರಲಾರಳೋ ಶ್ಯಾಮಲೆ. :)

ಶ್ಯಾಮಾ said...

:-)

Sushrutha Dodderi said...

@ ವಿಕಾಸ್

ಯೋಯ್! ಕುಮಾರ ಪರ್ವತ ಹತ್ತಿಳಿದಿದ್ರ ಬಗ್ಗೆ ಅಷ್ಟೆಲ್ಲ ಬರದ್ದಿ.. ಏನೋ ಪಾಪ 'ಚಿಟ್ಟೆ' ಬಗ್ಗೆನು ಸ್ವಲ್ಪ ಬರಿಯವು ಅನ್ನಿಸ್ಚಪ.. ;) ಅದ್ಕೇ ಬರ್ದಿ.. ನೀನು ಹಿಂಗೆಲ್ಲ ಹೇಳೋದಾ? :x

ರಾಜೇಶ್,
ಸುಶ್ರೂತ ಅಲ್ರೀ, 'ಸುಶ್ರುತ'. ಜಾಣಮರಿ! :-)
ಥ್ಯಾಂಕ್ಸ್ ಎನಿವೇ!

ಸುಧನ್ವಾ,
ಥ್ಯಾಂಕ್ಸ್..
ಕರೆಕ್ಟ್ ಹೇಳಿದಿ! ಚಾರಣಗಳು ನೀಡುವ ಆನಂದ ಚಾರಣಿಗರಿಗಷ್ಟೇ ಗೊತ್ತು. ಚಂಪಕಾವತಿಯಲ್ಲಿನ ಕುಮಾರ ಪರ್ವತ ಟ್ರೆಕ್ಕಾನುಭವವೂ ಚೆನ್ನಾಗಿದೆ.

Sushrutha Dodderi said...

ಹರ್ಷ,
ಹೋ! ನಾನಂತೂ ರೆಡಿ!
ಶ್ರೀನಿಧಿ,
;) 'ನಮಸ್ತೇ'!! 'ಬಸವನಗುಡಿ' ಚಂದ್ರಶೇಖರ್ ನೆನ್ಪಾತು ..:D :D

ಶಾಂತಕ್ಕ,

ಮಾರಾಯ್ತೀ ನೀ ಹಿಂಗೆಲ್ಲ ಹೇಳಿರೆ ನಾಚ್ಕ್ಯಾಗ್ತು ನಂಗೆ.. ;-/
ನೋಡು, ಏನೋ ಅಕ್ಕ ಹೇಳ್ಕ್ಯತ್ತೆ, ಭಟ್ರಿಗೆ ಒಂದು ಮಾತು ಹೇಳಿ ಕನ್ವಿನ್ಸ್ ಮಾಡ್ಸಕ್ಕಾಗ್ತಾ ಅಂತ.. ;D

ಶ್ಯಾಮಾ,
;)

Lakshmi Shashidhar Chaitanya said...

ಅತಿ ಮನೋಜ್ಞ ಪ್ರವಾಸ ಕಥನ ! ಶ್ಯಾಮಲಾಳ ಕಥೆ ಚೆನ್ನ ! ;-)

jomon varghese said...

ಚಿಟ್ಟೆಯ ನೆನಪಾಗಿ ಮತ್ತೊಮ್ಮೆ ಕುಮಾರ ಪರ್ವತಕ್ಕೆ ಚಾರಣ ಹೋದೀರಿ ಮತ್ತೆ! ಭಟ್ಟರ ಹೆಂಡತಿ ಕೊಟ್ಟ ಕಾಫಿ ಹೀರಿ, ದೋಸೆ ತಿಂದು ಬರುವುದು ಬಿಟ್ಟು, ನೀವ್ಯಾಕೆ ಚಿಟ್ಟೆಯ ಸ್ಪರ್ಶಕ್ಕೆ ಹೋದಿರಿ? ಮೌನ ನಿಮ್ಮ ಗಾಳದಲ್ಲಿಯೋ ಚಿಟ್ಟೆಯ ಸ್ಪರ್ಶದಲ್ಲಿಯೋ? ತಿಳಿಯುತ್ತಿಲ್ಲ. ನವಿರು ನಿರೂಪಣೆ ಇಷ್ಟವಾಯಿತು.

chetana said...

ಚೆಂದದ ಬರಹ.
ಬೆಟ್ಟ ಹತ್ತಿಳಿಯುವಾಗಿನ ಕಥೆಯಷ್ಟೇ ರೋಚಕವಾಗಿದೆ ನಿಮ್ಮ ಬೆಟ್ಟದ ಮೇಲಿನ ಕಥೆ!

- ಚೇತನಾ ತೀರ್ಥಹಳ್ಳಿ

ಸುಪ್ತದೀಪ್ತಿ suptadeepti said...

ಬೆಟ್ಟ ಮತ್ತು ಚಿಟ್ಟೆ ಕೊಟ್ಟ ರೋಮಾಂಚನಗಳ ನಿರೂಪಣೆ ರಮ್ಯ. ಹಾಗೇ ಓದಿಸಿಕೊಂಡು ತೇಲಿಸಿತು. ಚಿಟ್ಟೆಗಾಗಿ ಇನ್ನೊಮ್ಮೆ ಚಾರಣ ಮಾಡುವ ಹಾಗಿದ್ದರೆ, ಗುಡ್-ಲಕ್.

ಕಿರಣ್ said...

ಹಾಯ್ ಸುಶ್ರುತ,
ಬೆಟ್ಟ,ಚಿಟ್ಟೆ ಎರಡ್ರದ್ದು ಚಿತ್ರಣ ಚೆನ್ನಗಿ ಬಂದಿದೆ.
ಕುಮಾರ ಪರ್ವತನ ೧ ದಿನದಲ್ಲಿ ಹತ್ತಿ ಇಳಿಯೊದನ್ನು ಸಾಹಾಸ ಅನ್ನೊಕಿಂತ ದುಸ್ಸಾಹಸ ಅಂತನೆ ಕರಿಬಹುದು, ಹಿಂದೊಮ್ಮೆ ನಾನು ಈ ೧ ದಿನದ ಸಾಹಸಕ್ಕೆ ಕೈಹಾಕಿ ಬೆಳಿಗ್ಗೆ ೬ ಕ್ಕೆ ಸೊಮವಾರಪೇಟೆ ಕಡೆಯಿಂದ ನಡೆಯಲು ಶುರುಮಾಡಿದ್ದಕ್ಕೆ,ರಾತ್ರಿ ೯.೩೦ ಕ್ಕೆ ಸುಬ್ರಮಣ್ಯ ತಲುಪಿದ್ದು ಅದೂ ಮಾರ್ಚ್ ತಿಂಗಳ ಕಡು ಬೇಸಿಗೆಯಲ್ಲಿ. ನಿನ್ನ ಬರಹ ಓದಿ ಮತ್ತದು ನೆನಪಾಯಿತು.

~ಕಿರಣ್

Unknown said...

ಚಂದ ಇದ್ದು. ಮಸ್ತ್ ಖುಷ್ಯಾತು. ಆ ಚಿಟ್ಟೆಗೆ ನಿದ್ದೆ ಬಂದಿರಬಹುದಾ ಅಂತ ಯೋಚಿಸ್ತಿದೀನಿ.. ಕೆಳ್ಕಂಡು ಬರೊಕ್ಕಾದರೂ ಹೊಗಿ ಬಾ..ನಾನೂ ಬರ್ತೆ ಕುಮಾರಪರ್ವತಕ್ಕೆ.. ಭಟ್ಟರಿಗೆ ಚಂದದ ಮಗನಿಲ್ಲವ?;-)
ಮಲ್ನಾಡ್ ಹುಡ್ಗಿ

Sushrutha Dodderi said...

lakshmi,

ಧನ್ಯವಾದ ಲಕ್ಷ್ಮೀ.

ಜೋಮನ್,

ನೀವು ಹಿಂಗೆಲ್ಲ ನನ್ನನ್ನ ತರಾಟೆಗೆ ತಗೋತೀರಿ ಅಂತ ಗೊತ್ತಿದ್ರೆ ಹೋಗ್ತಾನೇ ಇರ್ಲಿಲ್ಲ ನೋಡಿ.. :D
ಅದೂ... ಅದೂ.. ಯಾವ್ದೂ ನಾನೇ ಬೇಕೂಂತ ಮಾಡಿದ್ದಲ್ಲ; ಎಲ್ಲ ಅದದಾಗೇ ಆಗ್‍ಹೋಯ್ತು..! ನಾನು ತುಂಬಾ ಮುಗ್ದ.. ನಂಬಿ.. ;)

chetana,

ಥ್ಯಾಂಕ್ಸ್ ಚೇತನಾ..

suptadeepti,

ನಿಮ್ಮ ಗುಡ್ಲಕ್ಕಿಗೆ ಸಿಕ್ಕಾಪಟ್ಟೆ ಥ್ಯಾಂಕ್ಸ್. ಮತ್ತೊಂದ್ಸಲ ಹೋದಾಗ ಆಕೆ 'ಒಳಗಿರ್ಲಿ' ಅಂತಾನೂ ಹಾರೈಸಿಬಿಡಿ! :P

Sushrutha Dodderi said...

ಕಿರಣ್,

ಹಾಯ್.. ನೀ ಹೇಳಿದ್ದು ನಿಜ.. ಕೆಳಗಿಳಿಯಲು ಶುರು ಮಾಡೋವಾಗ ಹುಮ್ಮಸ್ಸಿತ್ತು; ಅರ್ಧ ಇಳಿದಮೇಲೆ ಭಯ, ಹೀಗ್ಮಾಡ್ಬಾರ್ದಿತ್ತೇನೋ ಅನ್ನಿಸ್ಲಿಕ್ಕೆ ಶುರು ಆಗಿತ್ತು; ಪೂರ್ತಿ ಇಳಿದ ಮೇಲೆ ಇಳಿದ ಬಗ್ಗೆ ಖುಷಿಯಿತ್ತಾದ್ರೂ ಇಂತಹ ಸಾಹಸಕ್ಕೆ ಯಾವತ್ತೂ ಕೈ ಹಾಕ್ಬಾರ್ದು ಅನ್ನಿಸ್ತು..

ಮಲ್ನಾಡ್ ಹುಡ್ಗಿ,

ಕೂಸೇ, ಭಟ್ರಿಗೆ ಮಗ ಇಲ್ಲೆ.. ನೆಕ್ಸ್ಟ್ ಟೈಮ್ ನೀನೂ ಬರ್ಲಿಕ್ಕೆ ಅಡ್ಡಿಯಿಲ್ಲ; ಚಿಟ್ಟೆಗೆ ನನ್ನೊಬ್ನೊಟ್ಟಿಗೇ ಮಾತಾಡ್ಲಿಕ್ಕೆ ಮುಜುಗರ ಆಗ್ತಿದ್ರೆ ನೀನೂ ಜೊತೇಲಿದ್ರೆ ಅನುಕೂಲ ಆಗತ್ತೆ.. :P

ರಂಜನಾ ಹೆಗ್ಡೆ said...

ಹೆಲ್ಲೋ ಬ್ರದರ್,
ಕಮಾರ ಪರ್ವತಕ್ಕೆ ಹೋಗಿದ್ದು ಸಾರ್ಥಕ ಆಯಿತು ಅಲ್ವಾ. ಚಿಟ್ಟೆ ಬೆಟ್ಟ ವಾವ್ ವಾವ್. :)
ನಿಂಗೆ ತೆಜಸ್ವಿ ಗೆ ಕಂಡ ಹಾಗೆ ಹಾರುವ ಓತಿ ಕಾಣದೆ ಹೋದರು ಹಾರುವ ಚಿಟ್ಟೆ ಕಂಡತಲಾ.
ಬೆಂಗಳೂರು ಬಿಟ್ಟು ಮಂಗಳೂರ್ ಸೇರೊ ಐಡಿಯಾ ಇದೆಯಾ? ಮತ್ತೆ.

VENU VINOD said...

ಸುಶ್ರುತರೇ,
ನಾನೂ ಕುಮಾರ ಪರ್ವತ ಏರಿದ್ದೇನೆ, ದಾರಿಯಲ್ಲಿ ಗಿರಿಗದ್ದೆ ಭಟ್ಟರ ಮನೆಯಲ್ಲಿ ಊಟಾನೂ ಮಾಡಿದೇನೆ, ಆದರೆ ನನ್ನ ಕಣ್ಣಿಗೆ ಚಿಟ್ಟೆ ಕಾಣಿಸಲಿಲ್ಲ :(
ನಿಮ್ಮ ಲೇಖನ ಚೆನ್ನಾಗಿದೆ, ಚಿಟ್ಟೆ part ಕಲ್ಪನೆಯಿಂದ ಸೇರಿದ್ದೋ ನಿಜವೋ ?

ಪಯಣಿಗ said...

ಬಲು ಚೆ೦ದದ ಭಾವ ಯಾನ. ಇನ್ನೆತ್ತ ನಿಮ್ಮ ಮನದ ಚಿಟ್ಟೆಯ ಪಯಣ?

Sushrutha Dodderi said...

ರಂಜನಾ,

ಹೆಲೋ ಸಿಸ್ಟರ್, ನಾನು ಮಂಗ್ಳೂರಿಗೆ ಹೋಗ್ಬಿಟ್ರೆ ಬೆಂಗ್ಳೂರಲ್ಲಿರೋರೆಲ್ಲ ಏನ್ಮಾಡ್ಬೇಕು? :O

Venu,

ಶ್..! ಅದು ಸೀಕ್ರೆಟ್! ಹೀಗೆಲ್ಲ ಪಬ್ಲಿಕ್ಕಲ್ಲಿ ಉತ್ತರಿಸ್ಲಿಕ್ಕಾಗಲ್ಲ.. :P

ಪಯಣಿಗ,

ಚಿಟ್ಟೆ ಕರೆದಲ್ಲಿಗೆ.. ಗಾಳಿ ಕರೆದೊಯ್ದಲ್ಲಿಗೆ.. :-) :-)

Jagali bhaagavata said...

ನಾನು ಮಂಗ್ಳೂರಿಗೆ ಹೋಗ್ಬಿಟ್ರೆ ಬೆಂಗ್ಳೂರಲ್ಲಿರೋರೆಲ್ಲ ಏನ್ಮಾಡ್ಬೇಕು?....

ನೀನು ಮಂಗ್ಳೂರಿಗೆ ಹೋದ್ರೆ...ಬೆಂಗ್ಳೂರಿನ ಚಿಟ್ಟೆಗಳೆಲ್ಲ ನೆಮ್ಮದಿಯ ನಿಟ್ಟುಸಿರು ಬಿಡುತ್ತವೆ :-))

ವೇಣು,
'ಚಿಟ್ಟೆ part ಕಲ್ಪನೆಯಿಂದ ಸೇರಿದ್ದೋ ನಿಜವೋ ?'

ಇತ್ತೀಚೆಗೆ ಸುಶ್ರುತ ರೊಮ್ಯಾಂಟಿಕ್ ಚಲನಚಿತ್ರಗಳನ್ನ ವಿಪರೀತ ನೋಡ್ತಿರುವುದರ ಪರಿಣಾಮ ಅದು :-)

Sushrutha Dodderi said...

ಭಾಗ್ವತಣ್ಣ, ನೀ ಹಿಂಗಾ ಕೈ ಕೊಡೋದು??! :( :( :(

Unknown said...

ಚೆನ್ನಾಗಿದೆ. ನಿಮ್ಮ ಅನುಭವ ಮತ್ತು ಬರಹ ಎರಡೂ! ಚಿಟ್ಟೆಯ ಸ್ಪರ್ಶ ಪ್ರಕರಣ ಮಾತ್ರ ಸಖತ್ ಆಗಿದೆ!!
ವರದಾಮೂಲ ಮರೆತು ಕುಮಾರಪರ್ವತ ಮಾತ್ರ ನೆನಪುಳಿಯದಿದ್ದರೆ ಸಾಕು!!

Sushrutha Dodderi said...

@ shashi,

ಹಹಹಾ! ಡೋಂಟ್ ವರೀ.. ವರದಾಮೂಲದಲ್ಲೂ ಚಿಟ್ಟೆಗಳು ಇವೆ.. ;)

sreenath said...

ನಿಮ್ಮ ಬರಹ ಇಷ್ಟ ಆಯಿತು .
ನಾವು ಒಂದು ಸುತ್ತು ಕುಮಾರ ಪರ್ವತ ಚಾರಣ ಮಾಡಿದ ಹಾಗಾಯ್ತು.