ಪಿಯೂಸಿ ಮುಗಿಸಿದ ಮೇಲೆ ಮುಂದೆ ಓದದೇ ಮನೆಯಲ್ಲೇ ಉಳಿದಿದ್ದ ಮಗಳು ಪೂರ್ಣಿಮಾಳನ್ನು ಕಾಲಿಗೊರಗಿಸಿಕೊಂಡು ಅವಳ ಬಿಚ್ಚಿದ ಕೂದಲ ನಡುವೆ ಹೇನು ಹುಡುಕುತ್ತಾ ಹಿತ್ಲಕಡೆ ಮೆಟ್ಟಿಲ ಮೇಲೆ ಕೂತಿದ್ದ ಶರಾವತಿ, ಓಡಿಹೋಗುತ್ತಿದ್ದ ದೊಡ್ಡದೊಂದು ಗೂಳಿ ಹೇನನ್ನು ಹೆಕ್ಕಿ ತನ್ನ ಎಡಗೈ ಹೆಬ್ಬೆರಳ ಉಗುರ ಮೇಲಿಟ್ಟುಕೊಂಡು, ಬಲಗೈ ಹೆಬ್ಬೆರಳ ಉಗುರಿನಿಂದ 'ಚಟ್' ಎನಿಸುತ್ತಾ ಒರೆಯುವಾಗ "ಅಮಾ ಎಲ್ಲಿ ಎಲ್ಲಿ? ಎಷ್ಟು ದೊಡ್ಡದು?" ಎಂದು ಕೇಳಿದಳು ಪೂರ್ಣಿಮಾ. "ನೋಡೋದೆಂತಿದ್ದು ಅದ್ರಲ್ಲಿ? ಗೂಳಿ ಹೇನು! ಆ ಮೇಸ್ತ್ರಿ ಮಗಳು ನಾಗ್ರತ್ನನ ಜೊತೆ ಸೇರಡ ಅಂದ್ರೆ ಕೇಳದಿಲ್ಲೆ.. ಅವ್ವೆಲ್ಲ ವಾರಕ್ಕೊಂದು ಸಲ ಸ್ನಾನ ಮಾಡೋದು.. ಹೇನಾಗ್ದೆ ಇರ್ತಾ? ನೀನು ಅವಳ ಜೊತೆ ಸುತ್ತಿದ್ರೆ ಅವಳ ತಲೆ ಹೇನೆಲ್ಲ ನಿನ್ ತಲೇಗೆ ಸೇರ್ಕ್ಯಳ್ತು ಅಷ್ಟೆ.. ಇನ್ನು ನಾಕು ತಿಂಗ್ಳಾದ್ರೆ ಮದ್ವೆ ನಿಂಗೆ.. ಸ್ವಲ್ಪಾನೂ ಜವಾಬ್ದಾರಿ ಇಲ್ಲೆ" ಬೈದಳು ಅಮ್ಮ. ಮಗಳು ಮುಖ ಊದಿಸಿಕೊಂಡಳು.
ನಾಗರತ್ನಳ ಜೊತೆ ಅದು ಹೇಗೆ ತಾನೆ ಸೇರದಿರುವುದು? ...ಪೂರ್ಣಿಮಾಗೆ ತಿಳಿಯುವುದಿಲ್ಲ. ಮೊದಲಿನಿಂದಲೂ ಅವರಿಬ್ಬರೂ ಫ್ರೆಂಡ್ಸು. ಅವರಿಬ್ಬರೂ ಒಟ್ಟಿಗೇ ಶಾಲೆಗೆ ಹೋಗಿದ್ದು, ಒಟ್ಟಿಗೇ ಓದಿದ್ದು, ಒಟ್ಟಿಗೇ ಆಡಿದ್ದು, ಒಟ್ಟಿಗೇ ಉಂಡದ್ದು, ಒಟ್ಟಿಗೇ ಬೆಳೆದದ್ದು ಮತ್ತು, ದೊಡ್ಡವರಾದಮೇಲೆ ತಮ್ಮ ಯೌವನದ ಗುಟ್ಟುಗಳನ್ನು ಪರಸ್ಪರ ಹಂಚಿಕೊಂಡದ್ದು, ನಕ್ಕಿದ್ದು, ಕನಸು ಕಂಡಿದ್ದು. ಪೂರ್ಣಿಮಾ ನಾಗರತ್ನಳ ಮನೆಗೆ ಹೋದಾಗ ನಾಗರತ್ನಳ ಅಮ್ಮ ಬಂಗಾರಮ್ಮ ಇವಳಿಗೆ ಉಪ್ಪು ಹಾಕಿ ಬೇಯಿಸಿದ ಗೆಣಸು ಕೊಡುತ್ತಾಳೆ.. ಅದು ಪೂರ್ಣಿಮಾಗೆ ಇಷ್ಟ.. ಅದಕ್ಕಿಂತಲೂ, ಬಂಗಾರಮ್ಮ ಹೆರೆದು ಅಂಗಳದಲ್ಲಿ ಒಣಗಲು ಹಾಕಿರುವ ಹುಳಿಹುಳಿ ವಾಟೆಕಾಯಿಯ ಸಿಪ್ಪೆ ಎಂದರೆ ಪೂರ್ಣಿಮಾಗೆ ಪ್ರಾಣ.. ಅದಲ್ಲದೆ, ನಾಗರತ್ನ ಅಡುಗೆಮನೆಯಿಂದ ಕದ್ದು, ಇಷ್ಟೇ ಮೆಣಸಿನಪುಡಿ, ಇಷ್ಟೇ ಉಪ್ಪು ಬೆರೆಸಿ, ಒಳ್ಳುಕಲ್ಲಿನ ಮೇಲಿಟ್ಟು ಜಜ್ಜಿ ತಂದುಕೊಡುತ್ತಿದ್ದ ಹುಣಸೇಹಣ್ಣಿನ ಚೂರುಗಳು ಪೂರ್ಣಿಮಾಗೆ ನಾಗರತ್ನಳ ಮೇಲೆ ಮುದ್ದು ಮಾಡುವಷ್ಟು ಪ್ರೀತಿಯನ್ನು ತರುತ್ತಿದ್ದವು. ಅವಳ ಸಂಗದಿಂದ ತಲೆಯಲ್ಲಿ ಹೇನಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇವನ್ನೆಲ್ಲ ಕಳೆದುಕೊಳ್ಳಲಿಕ್ಕೆ ಪೂರ್ಣಿಮಾ ತಯಾರಿರಲಿಲ್ಲ.
ಅವಳ ಅಪ್ಪ ರಘುರಾಮ, ಮೇಸ್ತ್ರಿಯಾಗಿ ಈ ಊರಿಗೆ ಬಂದದ್ದಂತೆ. ಪೂರ್ಣಿಮಾಳ ಅಪ್ಪ ಕೃಷ್ಣಮೂರ್ತಿ ಶಾಸ್ತ್ರಿಗಳೇ ಅವನನ್ನು ಕರೆತಂದದ್ದು. ಪುರೋಹಿತಿಕೆಗೆಂದು ಕರ್ಕಿಕೊಪ್ಪಕ್ಕೆ ಹೋಗಿದ್ದ ಕೃಷ್ಣಮೂರ್ತಿ ಶಾಸ್ತ್ರಿಗಳು, ಅಲ್ಲಿ ತಮ್ಮ ಖಾಯಂ ಪುರೋಹಿತಿಕೆಯ ಮನೆಯೊಂದರ ಗೃಹಪ್ರವೇಶ ಮಾಡಿಸಿದವರು, ಆ ಮನೆ ಕಟ್ಟಿದವರಾರೆಂದು ವಿಚಾರಿಸಿ, ರಘುರಾಮ ಮೇಸ್ತ್ರಿಯನ್ನು ತಮಗೊಂದು ಹೊಸ ಮನೆ ಕಟ್ಟಿ ಕೊಡುವಂತೆ ಊರಿಗೆ ಕರೆತಂದಿದ್ದರು. ಅವನ ಮಗಳು ನಾಗರತ್ನಳೊಂದಿಗೆ ಪೂರ್ಣಿಮಾ ಕುಂಟಲ್ಪೆ, ಅನ್ನ-ಆಸೆ, ಹುಲಿ-ಹಸು ಆಟಗಳನ್ನು ಆಡುತ್ತಿದ್ದಳು. ಮರಳ ರಾಶಿಯಲ್ಲಿ ಇಬ್ಬರೂ ಸೇರಿ ಗುಬ್ಬಚ್ಚಿ ಗೂಡು ಮಾಡುತ್ತಿದ್ದರು. ಪೂರ್ಣಿಮಾಳನ್ನು ಶಾಲೆಗೆ ಸೇರಿಸುವಾಗ ಶರಾವತಿ ರಘುರಾಮನಿಗೆ ಹೇಳಿ ನಾಗರತ್ನಳನ್ನೂ ಒಟ್ಟಿಗೇ ಸೇರಿಸಿದ್ದಳು.
ಮೊದಲು ಒಂದು ಸಣ್ಣ ಬಿಡಾರ ಹೂಡಿಕೊಂಡು ವಾಸವಾಗಿದ್ದ ರಘುರಾಮ, ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆ ಕಟ್ಟಿಯಾದಮೇಲೂ ಒಂದಾದ ಮೇಲೊಂದರಂತೆ ಕೆಲಸಗಳು ಸಿಗತೊಡಗಿ, ಇಲ್ಲೇ ನೆಲೆಯೂರುವಂತಾಯಿತು. ಬಿಡಾರದ ಜಾಗದಲ್ಲೊಂದು ಗಟ್ಟಿ ಮನೆ ಎದ್ದು ನಿಂತಿತು. ಊರವರೂ ಯಾರೂ ಆಕ್ಷೇಪಿಸಲಿಲ್ಲ. ಮನೆ, ಗೋಬರ್ ಗ್ಯಾಸ್ ಡ್ಯೂಮ್ ಕಟ್ಟುವುದು, ಇತ್ಯಾದಿಗಳಲ್ಲಿ ಚಾಣಾಕ್ಷತೆ ಪಡೆದ ರಘುರಾಮ ಸುತ್ನಾಲ್ಕೂರುಗಳಲ್ಲಿ ಹೆಸರು ಮಾಡಿದ. ಸಾಗರ ಪೇಟೆಯಲ್ಲಿ ಎರಡು ದೊಡ್ಡ ಕಟ್ಟಡಗಳನ್ನು ತಾನೇ ಮುಖ್ಯ ಮೇಸ್ತ್ರಿಯಾಗಿ ನಿಂತು ಕಟ್ಟಿಸಿದ ಮೇಲೆ ಅವನ ದೆಸೆಯೇ ಬದಲಾಗಿಹೋಯಿತು. ಈಗ್ಗೆ ಎಂಟೊಂಭತ್ತು ವರ್ಷಗಳ ಹಿಂದೆ ಯಾರದೋ ಸಂಪರ್ಕ ಸಿಕ್ಕು ಬೆಂಗಳೂರಿಗೆ ಹೋದವನು ಒಂದು ವರ್ಷ ಮನೆಗೇ ಬಂದಿರಲಿಲ್ಲ. ಎಲ್ಲಿಗೆ ಹೋದ ಏನಾದ ಅಂತ ತಿಳಿಯದೇ ಕಂಗಾಲಾಗಿದ್ದ ಬಂಗಾರಮ್ಮನಿಗೆ ಒಂದು ತಿಂಗಳಾದಮೇಲೆ, ಡೈರೆಕ್ಟ್-ಬೆಂಗಳೂರು ಬಸ್ಸಿನ ಕಂಡಕ್ಟರ್ ಶಿವರಾಮು ಸುದ್ದಿ ಮುಟ್ಟಿಸಿದ ಮೇಲೇ ತಿಳಿದದ್ದು ಗಂಡ ಬೆಂಗಳೂರಿನಲ್ಲಿ ಸುರಕ್ಷಿತವಾಗಿದ್ದಾನೆ, ಈಗ ದೊಡ್ಡ ದೊಡ್ಡ ಕಾಂಟ್ರಾಕ್ಟರುಗಳ ಕೈಕೆಳಗೆ ಕೆಲಸ ಮಾಡುತ್ತಿದ್ದಾನೆ ಎಂದು. ದುಡ್ಡು ಮಾಡಿಕೊಂಡು ಚಿನ್ನ-ಬೆಳ್ಳಿ ಹೊತ್ತು ತರುವ ಗಂಡನಿಗಾಗಿ ಬಂಗಾರಮ್ಮ, ಹಣ್ಣು-ಚಾಕ್ಲೇಟು-ಹೊಸ ಅಂಗಿ ತರುವ ಅಪ್ಪನಿಗಾಗಿ ನಾಗರತ್ನ ಕಾಯತೊಡಗಿದರು.
ಒಂದು ವರ್ಷವಾದಮೇಲೆ ರಘುರಾಮ ಊರಿಗೆ ಮರಳಿದ್ದೇನೋ ನಿಜ; ಆದರೆ ಹೆಂಡತಿ-ಮಗಳ ಚಿನ್ನ-ಬಟ್ಟೆಯ ಕನಸುಗಳು ಮಾತ್ರ ನನಸಾಗಲೇ ಇಲ್ಲ. 'ರಘುರಾಮ ಸರಿಯಾಗಿ ದುಡ್ಡು ಮಾಡಿ ಬ್ಯಾಂಕಿನಲ್ಲಿಟ್ಟಿರಬಹುದು, ಚಿನ್ನ-ಬಟ್ಟೆ ಎಂದೆಲ್ಲ ಪ್ರದರ್ಶಿಸಿದರೆ ಊರವರಿಗೆ ಹೊಟ್ಟೆಕಿಚ್ಚಾಗಬಹುದೆಂದು ತಂದಿಲ್ಲವೇನೋ' ಎಂದೆಲ್ಲ ಊರವರು ಮಾತಾಡಿಕೊಂಡರು. ಅಕ್ಕಿ ಕೇರಿಕೊಡಲು ಬಂದ ಬಂಗಾರಮ್ಮ ಮಾತ್ರ ಶರಾವತಿಯ ಬಳಿ 'ನಮ್ಮನ್ಯೋರಿಗೆ ದುಡ್ದಿದ್ದೆಲ್ಲ ಉಣ್ಣಕ್ಕೆ, ಕುಡಿಯಕ್ಕೆ, ಬೀಡಿಗೇ ಹೋಯ್ತದಂತೆ.. ಬೆಂಗ್ಳೂರು ಅಂದ್ರೇನು ತಮಾಸೇನಾ? ಅಲ್ಲಿ ಎಲ್ಲಾದಕ್ಕೂ ಕಾಸು ಬಿಚ್ಬೇಕು' ಎಂದಿದ್ದಳು.
ಈಗ ಒಂದು ವರ್ಷದ ಹಿಂದೆ ರಘುರಾಮ ಊರಿಗೆ ಬಂದಿದ್ದಾಗ ಬೆಂಗಳೂರಿನ ರಾಜಾಜಿನಗರದಲ್ಲಿ ತಾವೊಂದು ದೊಡ್ಡ ಅಪಾಲ್ಟ್ಮೆಂಟ್ ಕಟ್ಟುತ್ತಿರುವುದಾಗಿ ಹೇಳಿಕೊಂಡಿದ್ದ. ಅದೆಂಥದು ಅಪಾಲ್ಟ್ಮೆಂಟು ಎಂದು ಪೂರ್ಣಿಮಾ ನಾಗರತ್ನಳ ಬಳಿ ಕೇಳಿದಾಗ 'ಅದೇನೋ ನಂಗ್ ಸರಿಯಾಗಿ ಗೊತ್ತಿಲ್ಲ ಕಣೇ.. ಬಿರ್ಗೇಡ್ ಅಂತ ಹೆಸ್ರಂತೆ.. ದೊಡ್ಡ ಮನೆಯಂತೆ.. ಮನೆ ಅಂದ್ರೇನು, ಒಂದು ಬಿಲ್ಡಿಂಗ್ನಾಗೆ ಮೂರ್ನಾಕು ಸಾವ್ರ ಮನೆ ಇದಾವಂತೆ.. ಹತ್ತೆಕರೆ ಜಾಗದಲ್ಲಿ ಕಟ್ತಿದಾರಂತೆ.. ಅದ್ರಲ್ಲೇ ಇಸ್ಕೂಲು, ಸಿನ್ಮಾ ಟಾಕೀಸು, ದೊಡ್ ದೊಡ್ ಅಂಗಡಿ ಎಲ್ಲಾ ಇದಾವಂತೆ.. ಸಾವ್ರಾರು ಜನ ಹಗ್ಲೂ-ರಾತ್ರಿ ಕೆಲಸ ಮಾಡ್ತಿದಾರಂತೆ' ಎಂದೆಲ್ಲ ಇಷ್ಟು ದೊಡ್ಡದಾಗಿ ಕಣ್ಣರಳಿಸುತ್ತಾ ಹೇಳಿದ್ದಳು ನಾಗರತ್ನ. 'ಅಷ್ಟು ದೊಡ್ಡ ಮನೆಯಲ್ಲಿ ಯಾರೇ ಇರ್ತಾರೆ ನಾಗಿ?' ಎಂದ ಪೂರ್ಣಿಮಾಗೆ ನಾಗರತ್ನ, 'ಅಲ್ಲೆಲ್ಲ ತುಂಬಾ ಜನ ಸಾವ್ಕಾರು ಇದಾರಲ್ವಾ, ಅವ್ರೇ ಯಾರೋ ಇರ್ಬೋದು' ಎಂದಿದ್ದಳು. 'ನಿಮ್ಮಪ್ಪ ಇನ್ನೂ ಎಷ್ಟು ವರ್ಷ ಬೆಂಗ್ಳೂರಲ್ಲೇ ಇರ್ತಾರಂತೆ?' ಎಂದು ಪೂರ್ಣಿಮಾ ಕೇಳಿದ್ದಕ್ಕೆ, 'ಬರ್ತಾನಂತೆ ಕಣೇ.. ಇನ್ನೊಂದು ಐದಾರ್ ವರ್ಷ ಅಲ್ಲಿದ್ದು ಆಮೇಲೆ ಇಲ್ಲಿಗೇ ಬಂದು ಇರ್ತಾನಂತೆ' ಎಂದಿದ್ದಳು.
ಹೀಗೆ ಮೇಸ್ತ್ರಿ ರಘುರಾಮ ಅವಾಗಿವಾಗ ಊರಿಗೆ ಬಂದು, ಏನೇನೋ ತಮಗರ್ಥವಾಗದ ಭಾಷೆಯಲ್ಲಿ ಬೆಂಗಳೂರಿನ ಸುದ್ದಿಗಳನ್ನು ರಂಜನೀಯವಾಗಿ ಹೇಳುವಾಗ, ಊರವರಿಗೆ ಆತ ಸಹ ಒಬ್ಬ ಸಾಫ್ಟ್ವೇರ್ ಇಂಜಿನಿಯರಿನಂತೆ, ಮೇಲಿನ ಮನೆ ಗೋಪಿಯಂತೆ ಅಥವಾ ಸುಬ್ಬಣ್ಣನ ಮಗ ಚಿನ್ಮಯನಂತೆ ಕಾಣಿಸುತ್ತಿದ್ದ. ಬೆಂಗಳೂರೆಂಬ, ದಿನವೂ ಟೀವಿ-ಪೇಪರುಗಳಲ್ಲಿ ಸುದ್ದಿಯಾಗುವ, ರಸ್ತೆ ತುಂಬಾ ಕಾರು-ಬೈಕುಗಳೇ ಓಡಾಡುವ ಸಿಟಿಯಲ್ಲಿ ಬದುಕನ್ನು ಒಲಿಸಿಕೊಂಡ ವೀರನಂತೆ ಕಾಣಿಸುತ್ತಿದ್ದ. ಮೇಲಿನ ಮನೆ ಗೋಪಿಯಂತೆ ಕಾರಿನಲ್ಲಿ ಬರುವುದೋ, ಚಿನ್ಮಯನಂತೆ ಮನೆಗೆ ಬರುವಾಗಲೆಲ್ಲ ಹೊಸ ವಸ್ತುವೇನನ್ನಾದರೂ ತರುವುದೋ ಮಾಡದಿದ್ದರೂ, ರಘುರಾಮ ಬೆಂಗಳೂರಿನಿಂದ ಊರಿಗೆ ಬಂದಿದ್ದಾನೆ ಎಂದರೇ ಜನ ಒಮ್ಮೆ ಅತ್ತ ಸುಳಿದಾಡಿ ಬರುವಂತಹ ಆಕರ್ಷಣೆ ಅವನಿಗೆ ಲಭಿಸಿತ್ತು.
* *
ಜಡೆ ಹೆಣಿಸಿಕೊಂಡ ಪೂರ್ಣಿಮಾ ಅವಲಕ್ಕಿ-ಮೊಸರನ್ನೂ ತಿನ್ನದೇ ನಾಗರತ್ನಳ ಮನೆಗೆ ಓಡಿದಾಗ ಅವಳಿಗೊಂದು ಅಚ್ಚರಿ ಕಾದಿತ್ತು. ಕೇವಲ ಮೂರು ತಿಂಗಳ ಹಿಂದಷ್ಟೇ ಬಂದುಹೋಗಿದ್ದ ರಘುರಾಮ ಇವತ್ತು ಮತ್ತೆ ಬಂದಿದ್ದ. ಮನೆಯ ಅಂಗಳದಲ್ಲೇ ಬೀಡಿ ಸೇದುತ್ತಾ ನಿಂತಿದ್ದ ಅವನು ಪೂರ್ಣಿಮಾಳನ್ನು ಕಂಡದ್ದೇ "ಏನು ಸಣ್ಣಮ್ಮಾರು.. ಪುಲ್ ಡ್ರೆಸ್ಸಾಗಿ ಬಂದೀರಿ..?" ಎಂದ. ಅವನಿಂದ ಮಾರು ದೂರದಲ್ಲಿ ಚುಪುರು ಗಡ್ಡದ ಯುವಕನೊಬ್ಬ ತೆಂಗಿನ ಮರಕ್ಕೆ ಒರಗಿಕೊಂಡು ಬೀಡಿ ಸೇದುತ್ತಿದ್ದ. ಸುಮ್ಮನೆ ಮುಗುಳ್ನಕ್ಕು ಮನೆಯ ಒಳನಡೆದ ಪೂರ್ಣಿಮಾ, ನಾಗರತ್ನಳನ್ನು ಕೌಳಿ ಹಣ್ಣಿಗೆ ಹೋಗಲು ಕರೆದಳು. ಆದರೆ ನಾಗರತ್ನ "ಇವತ್ತು ನಾನು ಬರಾಕಿಲ್ಲ ಕಣೇ.. ನಮ್ಮನಿಗೆ ನೆಂಟ್ರು ಬಂದಾರೆ.." ಎಂದು ಒಳಹೋಗಿಬಿಟ್ಟಳು. ಅವಳ ವರ್ತನೆ ಪೂರ್ಣಿಮಾಗೆ ವಿಚಿತ್ರವೆನಿಸಿದರೂ ಏನೂ ಹೇಳದೇ ಮನೆಗೆ ಮರಳಿದಳು.
ಮರುದಿನ ಬೆಳಗ್ಗೆ ಹೊತ್ತಿಗೆ, 'ರಘುರಾಮ ಬೆಂಗಳೂರಿನಿಂದ ಮಗಳಿಗೆ ವರನನ್ನು ಕರೆತಂದಿದಾನಂತೆ, ಅವನೂ ಮೇಸ್ತ್ರಿಯಂತೆ, ಇವನ ಜೊತೆಯಲ್ಲೇ ಕೆಲಸ ಮಾಡೋದಂತೆ' ಎಂದೆಲ್ಲ ಸುದ್ದಿಯಾಯಿತು. ಅವತ್ತು ಕೆಲಸಕ್ಕೆ ಬಂಗಾರಮ್ಮ ಬರಲಿಲ್ಲ. ಪೂರ್ಣಿಮಾಳಿಗೂ ಏನೋ ತಡೆದಂತಾಗಿ ನಾಗರತ್ನಳನ್ನು ಕಾಣಲು ಹೋಗಲಿಲ್ಲ. ಎರಡು ದಿನ ಬಿಟ್ಟು ಅವರು ವಾಪಸು ಹೋದಮೇಲೆ ಸಂಜೆ ಹೊತ್ತಿಗೆ ಮನೆಗೆ ಬಂದ ಬಂಗಾರಮ್ಮ ವಿಷಯ ಹೌದೆಂದು ಖಚಿತಪಡಿಸಿ, ಇನ್ನು ಒಂದು ತಿಂಗಳಲ್ಲಿ ನಾಗರತ್ನಳ ಮದುವೆ ಎಂದು ಹೇಳಿದಳು. ಖರ್ಚಿಗೆ ದುಡ್ಡೆಲ್ಲಾ ರಘುರಾಮನೇ ತರುತ್ತಿರುವುದಾಗಿಯೂ, ಇನ್ನು ಹತ್ತು ದಿನದೊಳಗೆ ಅವನು ಬರುತ್ತಿರುವುದಾಗಿಯೂ ಹೇಳಿದಳು.
"ಹುಡುಗ ಏನ್ ಮಾಡ್ತಿದಾನೆ ಬಂಗಾರಮ್ಮ?" ಕೇಳಿದರು ಶಾಸ್ತ್ರಿಗಳು.
"ಇವ್ರ ಜತೀಗೇ ಕೆಲ್ಸ ಮಾಡ್ತಾನಂತೆ.. ಒಳ್ಳೇ ಸಂಮಂದ ಅನ್ನುಸ್ತಂತೆ.. ಮೂಲ ಊರು ಬಳ್ಳಾರಿ ಕಡೀಗಂತೆ.. ನಮ್ಮೋರೇ.. ಬೆಂಗ್ಳೂರಾಗೆ ದುಡಿಯಾಕ್ ಹಿಡ್ದು ಆಗ್ಲೇ ಏಳೆಂಟ್ ವರ್ಸ ಆಯ್ತಂತೆ.. ಚನಾಗ್ ದುಡ್ ಮಾಡಿ ಮಡ್ಗಿದಾನಂತೆ.. ನಮ್ ಮನ್ಯೋರಿಗೆ ಮೊದ್ಲಿಂದ್ಲೂ ಗೊತ್ತಂತೆ.. ನಾನೂ ನೋಡಿದ್ನಲ್ಲ, ಒಳ್ಳೇ ಗುಣ" ಹೇಳಿದಳು ಬಂಗಾರಮ್ಮ.
"ಒಪ್ಗೆ ಆಯ್ತಾ ಅವ್ನಿಗೆ?" ಕೇಳಿದರು ಶಾಸ್ತ್ರಿಗಳು.
"ಹೂಂ.. ಒಂದೇ ಪಟ್ಗೆ ಒಪ್ಗಂಡ.. ಆದ್ರೆ ನಮ್ ನಾಗೀಗೇ ಒಪ್ಗೆ ಇಲ್ಲ ಅನ್ಸುತ್ತೆ.. ಒಂದೇ ಸಮನೆ ಅಳ್ತಾ ಕೂತಿದೆ.. 'ಇಷ್ಟ್ ಬೇಗ ತಂಗೆ ಮದುವೆ ಬ್ಯಾಡ.. ಅಷ್ಟು ದೂರ ಬ್ಯಾಡ' ಅನ್ತಾ.. ಆದ್ರೆ ನಮ್ಮನೆಯೋರು ಬಿಡ್ಬೇಕಲ್ಲ? 'ಒಳ್ಳೇ ಸಂಮಂದ.. ಬಿಟ್ಕಂಡ್ರೆ ಸಿಗಾಕಿಲ್ಲ.. ಅಲ್ದೇ ನಿಂಗೂ ಬೆಂಗ್ಳೂರ್ ಪ್ಯಾಟೆ ಸೇರೋ ಅವ್ಕಾಸ' ಅಂತೆಲ್ಲ ಹೇಳಿ ನಂಬ್ಸಿದಾರೆ.."
ಪೂರ್ಣಿಮಾಗೆ ನಾಗರತ್ನಳ ಬಗ್ಗೆ ಯೋಚಿಸಿ ಬೇಸರವಾಯ್ತು. ಮೊನ್ನೆ ಅವಳ ಮನೆಯೆದುರು ಬೀಡಿ ಸೇದುತ್ತಾ ನಿಂತಿದ್ದ ಕೆಂಪಿಕಣ್ಣು - ಚುಪುರು ಗಡ್ಡದ ಯುವಕನ ಚಿತ್ರ ಕಣ್ಮುಂದೆ ಬಂತು. ನಾಗರತ್ನಳ ಮನೆಗೆ ಓಡಿ ಅವಳನ್ನು ಸಮಾಧಾನ ಮಾಡಲೆತ್ನಿಸಳು. ಇಬ್ಬರು ಗೆಳತಿಯರೂ ಪರಸ್ಪರ ಅಗಲಲೇಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಂಡರು. ನೋಡನೋಡುತ್ತಿದ್ದಂತೆ ನಾಗರತ್ನಳ ಮನೆ ಮುಂದೆ ಚಪ್ಪರ ಎದ್ದುನಿಂತು, ವಾಲಗ ಊದಲ್ಪಟ್ಟು, ಭರ್ಜರಿಯೇ ಎನ್ನುವಷ್ಟು ಜೋರಾಗಿ ಮದುವೆ ನಡೆದು, ನಾಗರತ್ನ ರಾಜಧಾನಿ ಸೇರಿಬಿಟ್ಟಳು.
ಪೂರ್ಣಿಮಾ ಒಂಟಿಯಾದಳು. ಕೌಳಿ ಮಟ್ಟಿಯ ಹಾದಿಗೆ, ಬುಕ್ಕೆ ಹಣ್ಣಿನ ಗಿಡಗಳಿಗೆ, ಒಣಗಿಸಿದ ವಾಟೆ ಸಿಪ್ಪೆಗಳಿಗೆ ಬೇಸರದ ಮೋಡ ಕವಿಯಿತು. ಕುಂಟ್-ಹಲ್ಪೆ ಬೇರೆ ಕಲ್ಲುಗಳೊಡನೆ ಸೇರಿತು. ಬಂಗಾರಮ್ಮ ಗೆಣಸು ಕೀಳುವುದನ್ನೇ ಬಿಟ್ಟಳು.
* *
ಪೂರ್ಣಿಮಾಳ ಮನೆಯಲ್ಲಿ 'ಹುಡುಗಿ ನೋಡುವ ಶಾಸ್ತ್ರ'. ಹುಡುಗನಿಗೆ ಇಲ್ಲೇ ಬೆಳೆಯೂರು. ಬೆಂಗಳೂರಿನಲ್ಲಿದ್ದಾನೆ. ಸಾಫ್ಟ್ವೇರ್ ಇಂಜಿನಿಯರ್. ಅವನ ಜುಬ್ಬಾದ ಘರಿಘರಿ ಸ್ಪರ್ಶವನ್ನು ಕೃಷ್ಣಮೂರ್ತಿ ಶಾಸ್ತ್ರಿಗಳ ಮನೆಯ ಮರದ ಸೋಫಾ ಅನುಭವಿಸುತ್ತಿದೆ. ಕಾಫಿ ಕಪ್ಪುಗಳನ್ನಿಟ್ಟ ಟ್ರೇ ಹಿಡಿದು ಬರುತ್ತಿರುವ ಪೂರ್ಣಿಮಾಳ ಹೆಜ್ಜೆಗಳಿಗೆ ಗೆಜ್ಜೆ ದನಿಯಿದೆ. ಗಲ್ಲಕ್ಕೆ ಲಜ್ಜೆ ಲಗ್ಗೆ ಇಟ್ಟಿದೆ. ಉದ್ದ ಜಡೆಗೆ ಮೊಗ್ಗೆ ಮಲ್ಲಿಗೆ ದಂಡೆ. ಪೂರ್ಣಿಮಾಳ ಕಣ್ಣೋಟದಿಂದಲೇ ಬಿಸಿಯಾಗಿದೆಯೇನೋ ಎನಿಸುವ ನೊರೆನೊರೆ ಕಾಫಿ, ಗುಡ್-ಡೇ ಬಿಸ್ಕೇಟಿಗಿಂತ ರುಚಿಯೆನಿಸಿದೆ ಸಾಫ್ಟ್ವೇರ್ ಇಂಜಿನಿಯರ್ರಿಗೆ.
ಹುಡುಗನ ಸಂಬಂಧಿಕರು ಶುರು ಮಾಡಿದರು: "ಅಂದ್ನಲ್ಲಾ, ಸಾಫ್ಟ್ವೇರ್ ಇಂಜಿನಿಯರ್ರು. ಮುಂದಿನ್ ವರ್ಷ ಅಮೆರಿಕಾ. ಬೆಂಗ್ಳೂರಲ್ಲಿ ಓನ್ ಅಪಾರ್ಟ್ಮೆಂಟು. ಕಾರು. ಊರಲ್ಲಿ ಎರಡು ಎಕರೆ ತೋಟ."
"ನಮ್ಮನೆ ಮಾಣಿಗೆ ಹೆಚ್ಗೆ ಓದಿದವರು ಬ್ಯಾಡ ಹೇಳಿ. ಜಸ್ಟ್ ಪೀಯೂಸಿ ಆಗಿದ್ರೂ ಸಾಕು. ತಾನು ಹೆಂಗಂದ್ರೂ ದುಡಿತ. ಮನೇಲಿ ಹೆಂಡತಿ ಆರಾಮಾಗಿ ಅಡುಗೆ ಮಾಡ್ಕ್ಯಂಡು ಇರ್ಲಿ ಹೇಳಿ" ಎಂದರು ಹುಡುಗನ ತಂದೆ.
"ಮನೆ ಯಾವ ಏರಿಯಾದಲ್ಲಿ ಮಾಡಿದ್ದೆ?" ಕೇಳಿದರು ಶಾಸ್ತ್ರಿಗಳು.
"ರಾಜಾಜಿನಗರದಲ್ಲಿ. ಬ್ರಿಗೇಡ್ ಗೇಟ್ವೇ ಅಂತ. ಅದ್ರಲ್ಲಿ ನಾರ್ತ್ ಬ್ಲಾಕಲ್ಲಿ ಎಯ್ತ್ ಫ್ಲೋರಲ್ಲಿ ನಾ ಖರೀದಿ ಮಾಡಿರೋ ಅಪಾರ್ಟ್ಮೆಂಟು." ಹೇಳಿದ ಹುಡುಗ.
"ಬಿರ್ಗೇಡಾ?" ಇಷ್ಟು ಹೊತ್ತೂ ತಲೆತಗ್ಗಿಸಿ ಕೂತಿದ್ದ ಪೂರ್ಣಿಮಾ ಸಟ್ಟನೆ ಕೇಳಿ ನಾಲಿಗೆ ಕಚ್ಚಿಕೊಂಡಳು.
"ಹಾಂ! ಬ್ರಿಗೇಡೇ! ಯಾಕೆ?" ಕೇಳಿದರು ಹುಡುಗನ ತಂದೆ.
"ಯಾಕೂ ಇಲ್ಲೆ"
"ಮನೆ ಅಂದ್ರೆ ಏನು ಮಾಡಿದ್ದೆ? ಅದ್ರಲ್ಲೇ ಎಲ್ಲಾನೂ ಇದ್ದು. ಅಲ್ಲೇ ಶಾಪಿಂಗ್ ಮಾಲು, ಅಲ್ಲೇ ಟಾಕೀಸು, ಅಲ್ಲೇ ಪಾರ್ಕು, ಅಲ್ಲೇ ಹುಡುಗ್ರಿಗೆ ಆಟದ ಬಯಲು, ಅಲ್ಲೇ ಸ್ವಿಮ್ಮಿಂಗ್ ಪೂಲು... ಯಾವ್ದಕ್ಕೂ ಹೊರಗಡೆ ಹೋಗೋದೇ ಬ್ಯಾಡ... ಗೊತ್ತಾತಲ?"
ತಲೆಯಾಡಿಸಿದಳು ಪೂರ್ಣಿಮಾ. ಎಲ್ಲರೂ ತಲೆದೂಗಿದರು.
ಇನ್ನರ್ಧ ಗಂಟೆಯಲ್ಲಿ ಮಾತುಕತೆ ಮುಗಿಯಿತು: ಎರಡು ತಿಂಗಳೊಳಗೆ ನಿಶ್ಚಿತಾರ್ಥ. ಮಳೆಗಾಲ ಬರುವುದರೊಳಗೆ ಮದುವೆ.
ಪೂರ್ಣಿಮಾ ಸೀರೆ ಬಿಚ್ಚಿ ಹಾಕಿ ನೈಟಿ ತೊಡುತ್ತಿದ್ದಾಗ ರೂಮಿಗೆ ಬಂದ ಶರಾವತಿ "ಎಂಥಾ ಆಶ್ಚರ್ಯ ನೋಡು ಅಮ್ಮೀ.. ಈ ಮನೆ ಕಟ್ಟಿದ್ದೂ ರಘುರಾಮ ಮೇಸ್ತ್ರಿ. ಈಗ ನೀ ಹೋಗ್ತಿರೋ ಮನೆ ಕಟ್ಟಿರೋದೂ ರಘುರಾಮ ಮೇಸ್ತ್ರಿ. ಜತೆಗೆ ನಿನ್ನ ನೆಚ್ಚಿನ ಗೆಳತಿಯ ಗಂಡ! ಎಂಥಾ ವಿಚಿತ್ರ ಅಲ್ದಾ?" ಎಂದಳು. ಬಿಚ್ಚಿ ಹಾಕಿದ್ದ ಸೀರೆಯ ಗುಡ್ಡೆಯನ್ನೇ ನೋಡುತ್ತಿದ್ದಳು ಪೂರ್ಣಿಮಾ.
16 comments:
ಪುಟ್ಟಣ್ಣ,
ಕಥೆ ಹಂದರ ಚನ್ನಾಗಿ ಇದೆ. ಆದರೆ ಯಾಕೋ incomlete ಅನ್ನಿಸ್ತು.
"ಹೆಜ್ಜೆಗಳಿಗೆ ಗೆಜ್ಜೆ ದನಿಯಿದೆ. ಗಲ್ಲಕ್ಕೆ ಲಜ್ಜೆ ಲಗ್ಗೆ ಇಟ್ಟಿದೆ. ಉದ್ದ ಜಡೆಗೆ ಮೊಗ್ಗೆ ಮಲ್ಲಿಗೆ ದಂಡೆ. ಪೂರ್ಣಿಮಾಳ ಕಣ್ಣೋಟದಿಂದಲೇ ಬಿಸಿಯಾಗಿದೆಯೇನೋ ಎನಿಸುವ ನೊರೆನೊರೆ ಕಾಫಿ " ಸಕತ್ ಇಷ್ಟ ಆಯಿತು ಈ ಲೈನ್
ಹುಡ್ಗಾ.. ನೀನೇನಾ ಬರ್ದಿದ್ದು???? ಏನೂ ಹೇಳ್ಲಿಲ್ಲೆ ಅನ್ಸ್ತಿದೆ ಕಣೋ... ಕೆಲವು ಕಡೆ ಮಾತ್ರ ಸುಶ್ರುತನ ಛಾಯೆ...
Super Maga Super. Keep it up. Top quality Story. RK Narayan Malgudi Days odhida haage aathu.
ಅನ್ನ-ಆಸೆ, ಆಟ ಅಂದರೆ ಯಾವುದು ?
ದೊಡ್ಡ ಕಾದಂಬರಿಯ ಪುಟ್ಟದೊಂದು ಅಧ್ಯಾಯ ಓದಿದ ಹಾಗಾಯ್ತು. ಮುಂದಿನ ಪಾರ್ಟ್ ಯಾವಾಗ?
@ ಪುಟ್ಟಣ್ಣಾ...
ಸಕತ್ ಆಗಿದ್ದು ಕತೆ...
ಆದ್ರೆ ಪೂರ್ಣಿಮಾನ್ನ ಎಷ್ಟೊತ್ತೂಂತ ಎಲ್ಲಾರ್ ಮುಂದೆ ನೈಟಿಯಲ್ಲಿ ನಿಲ್ಲಿಸ್ತೆ? ಬೇಗನೆ ಭಾಗ-2 ಬರೆದು ಸೀರೆ ಉಡ್ಸು ಮಾರಾಯಾ....:)
"ಕೌಳಿ ಮಟ್ಟಿಯ ಹಾದಿಗೆ, ಬುಕ್ಕೆ ಹಣ್ಣಿನ ಗಿಡಗಳಿಗೆ, ಒಣಗಿಸಿದ ವಾಟೆ ಸಿಪ್ಪೆಗಳಿಗೆ ಬೇಸರದ ಮೋಡ ಕವಿಯಿತು. ಕುಂಟ್-ಹಲ್ಪೆ ಬೇರೆ ಕಲ್ಲುಗಳೊಡನೆ ಸೇರಿತು."
ಮೋಡಕವಿಸಿದವು ಸಾಲುಗಳು ಮನದ ತೆರೆಗೆ.
ಹೇಳ್ಲಿಕ್ಕೆ ಮರ್ತೆ! ಹಾಂ, ಇದು ಫಸ್ಟ್ ಪಾರ್ಟ್ ಅಷ್ಟೇ. ಸಧ್ಯದಲ್ಲೇ ಮುಂದುವರಿಸ್ತೀನಿ...
ಥ್ಯಾಂಕ್ಸ್.. :-)
joey,
ಅನ್ನ-ಆಸೆ ಆಟ ಅಂದ್ರೆ ಅಡುಗೆ ಆಟ. ನಮ್ಮೂರ್ ಕಡೆ ಹವ್ಯಕರು ಅನ್ನದ ಜೊತೆ ಮಿಕ್ಸ್ ಮಾಡ್ಕೊಳ್ಳೋ ಪದಾರ್ಥಗಳನ್ನ (ಹುಳಿ, ಸಾರು, ಗೊಜ್ಜು) 'ಆಸೆ' ಅಂತಾರೆ..
ಇದನ್ನು ಕಥೆಯೆಂಬಂತೆ ಓದಿಕೊಂಡೆ. ಭಾಷೆಯ ಸ್ಪಷ್ಟತೆ ಮನಸ್ಸಿಗೆ ತಟ್ಟುವಂತಿದೆ. ಎಲ್ಲೋ ಕೆಲವೆಡೆ ಏನನ್ನೋ ಧ್ವನಿಸುವಂತೆ ಕಾಣುತ್ತಾ ಕೊನೆಗೆ ಕೇವಲ ಬೆರಗಿನಲ್ಲಿ, ಅನೀರಿಕ್ಷಿತ ಅಂತ್ಯದಲ್ಲಿ ಮುಕ್ತಾಯವಾಗುವ ಬರಹ ಕಥೆಯಾದೀತಾ ಪ್ರಶ್ನಿಸಿಕೊಳ್ಳುತ್ತೇನೆ. ಅಸ್ಪಷ್ಟತೆ ಎಂಬುದೂ ಕಥೆ ಹೇಳುವ ತಂತ್ರದ ಒಂದು ಭಾಗವಾದಾಗ ಅದು ಶಕ್ತಿಶಾಲಿಯಾಗುತ್ತದೆ ಎಂಬುದು ನನ್ನ ಅನಿಸಿಕೆ.
ಕೆಂಪಿಕಣ್ಣು-ಚುಪುರು ಗಡ್ಡದ ಯುವಕ ಹೇಗಿರ್ತಾನ್ರಿ, ನನಗಂತೂ ಯಾವ ಚಿತ್ರಣ ರೂಪಿಸಿಕೊಳ್ಳಲೂ ಸಾಧ್ಯವಾಗಲಿಲ್ಲ...
ಒಳ್ಳೆಯ ಕತೆ. ತುಂಬ ಒಳ್ಳೆಯ ಪ್ರಯತ್ನ. ಇಷ್ಟ ಆತು. ಎಲ್ಲೋ ಸ್ವಲ್ಪ ಅಪೂರ್ಣತೆ, ಮತ್ತು ಅದೇ ಈ ಬರಹದ ಶೋಭೆ ಕೂಡಾ ಅನ್ನಿಸ್ತಿದ್ದು.
ಪ್ರೀತಿಯಿಂದ
ಸಿಂಧು
you have done excellent job, keep writing you will improve great deal keep observing human relations bring you infinite stroires,,, now with new pc I can read all Kannada and trying to learn to write in kannada,but you are oustanding!!!
ಚೆನ್ನಾಗಿ ಬರ್ದಿದ್ದೀರಾ ಸುಶ್ರುತರವರೇ....
ಗುರುವೇ,
ಸಕ್ಕತ್ತಾಗಿದ್ದೂ ಬರದ್ದೆ.
ನಿಮ್ಮಾಣೆ ಚನ್ನಾಗಿದೆ.ಬೇಗ ಎರಡನೇ ಕ೦ತು ಒಗಾಯ್ಸಿ ಮಾರಾಯ್ರೆ.
ಇಬ್ಬರು ಹುಡುಗಿಯರ ಮನಸ್ಸಿನ ಭಾವನೆ, ತೊಳಲಾಟಗಳ ಚಿತ್ರಣ ಬಹಳ ಮನೋಜ್ಞವಾಗಿದೆ.ಕಥೆ ಬೊಂಬಾಟ್ !!!
ಸುಶ್ರುತ,
ಅಪಾರ್ಟ್ಮೆಂಟ್ ತುಂಬಾ ಚೆನ್ನಾಗಿ ಬರ್ತಾಯಿದೆ, ಬೇಗ ಕಟ್ಟಪ್ಪ ಬಿರ್ಗೇಡ್ ಗೇಟ್ವೆ ಭಾಗ ೨ ನ್ನು.
~ಕಿರಣ
ನಮಸ್ತೇ.
ನಮ್ಮ ಆಫೀಸ್ ಹತ್ರ ಒಂದು brigade gateway ಕಟ್ತಾ ಇದಾರೆ. ದಿನಾ ಅದರೆದ್ರು ಹಾದು ಹೋಗುವಾಗ ನಂಗೆ ಈ ಕಥೆ ನೆನಪಾಗತ್ತೆ.
ಇದರ ಮುಂದುವರೆದ ಭಾಗ ಯಾವಾಗ? brigade gateway ಕಟ್ಟಿ ಮುಗಿಯೋದರೊಳಗೆ ನೀವು ಮುಗಿಸ್ತೀರಿ ತಾನೆ!? ಕಾಯ್ತಿರ್ತೀನಿ...
- ಚೇತನಾ ತೀರ್ಥಹಳ್ಳಿ
Post a Comment