Thursday, February 21, 2008

ಅಮ್ಮ ಬಂದಿದ್ದಳು..

ಅಮ್ಮ ಬಂದಿದ್ದಳು.

ಮಗನ ಪುಸ್ತಕ ಬಿಡುಗಡೆಯಾಗುತ್ತಿರುವುದು ಒಂದು ನೆಪವಾಗಿತ್ತಷ್ಟೇ. ಆದರೆ ಅವಳು ನಿಜವಾಗಿಯೂ ಬಂದದ್ದು ಬೆಂಗಳೂರು ನೋಡುವುದಕ್ಕೆ. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳೇ ಕಳೆದುಹೋಗಿದ್ದವು. ಮೊದಲೆರಡು ವರ್ಷ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ, ಇಲ್ಲಿ ಸೆಟಲ್ ಆಗಲಿಕ್ಕೇ ವ್ಯಯವಾಗಿಹೋಯಿತು. ಕಳೆದ ಒಂದು-ಒಂದೂ ವರೆ ವರ್ಷದಿಂದ ನಾನು ಅಮ್ಮನನ್ನು ಬೆಂಗಳೂರಿಗೆ ಬರುವಂತೆ ತುಂಬಾ ತುಂಬಾ ಕರೆಯುತ್ತಿದ್ದೆ. ಆದರೆ ಅವಳು ಮಳೆಗಾಲ, ಸುಗ್ಗಿ, ಅಜ್ಜಂಗೆ ಹುಷಾರಿಲ್ಲೆ, ಇತ್ಯಾದಿ ಏನೇನೋ ಕಾರಣವೊಡ್ಡಿ ಬರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಳು. ಮುಂದಿನ ಬಾರಿ ಊರಿಗೆ ಹೋದಾಗ ಏನಾದರಾಗಲಿ, ಅಮ್ಮನನ್ನು ಕರೆದುಕೊಂಡೇ ಬರುವುದು ಅಂತಲೂ ಪ್ಲಾನ್ ಮಾಡಿದ್ದೆ. ಈ ಮಧ್ಯೆ ಪದೇ ಪದೇ ಮುಂದೂಡಲ್ಪಡುತ್ತಿದ್ದ ನಮ್ಮ ಪುಸ್ತಕ ಬಿಡುಗಡೆ ಸಮಾರಂಭ ಅಂತೂ ಫೆಬ್ರುವರಿ ಹತ್ತಕ್ಕೆ ಖಾಯಂ ಎಂದಾದಾಗ ನಾನು ಮನೆಗೆ ಫೋನ್ ಮಾಡಿದೆ. ಮೊದಲು ಅಪ್ಪ ತಾನೇ ಬರುವುದಾಗಿ ಹೇಳಿದ. ಆಮೇಲೆ ಬಹುಶಃ ಏನೇನೋ ಮಾಡಿ ಅಮ್ಮನಿಗೆ ಧೈರ್ಯ ತುಂಬಿ ಒಪ್ಪಿಸಿದ್ದಾನೆ. ನನ್ನ ಅಜ್ಜನ ಮನೆಯ ಊರಿನವರೊಬ್ಬರು ಬುಧವಾರ ರಾತ್ರಿ ಬೆಂಗಳೂರಿಗೆ ಹೊರಡುವವರಿದ್ದಾರೆ ಎಂಬ ಸುದ್ಧಿಯನ್ನು ಸಂಗ್ರಹಿಸಿದ್ದಾರೆ. ಅವರ ಜೊತೆಯೇ ಅಮ್ಮನೂ ಹೊರಡುವುದು ಎಂದು ತೀರ್ಮಾನವಾಗಿದೆ. ಆವೊತ್ತು ರಾತ್ರಿ ಅಮ್ಮ ಫೋನ್ ಮಾಡಿ ತಾನೇ ಬರುತ್ತಿರುವುದಾಗಿ ಘೋಷಿಸಿಬಿಟ್ಟಳು! ನನಗಾದ ಸಂಭ್ರಮ ಅಷ್ಟಿಷ್ಟಲ್ಲ.

ಆ ಭಾನುವಾರ ನಾನೂ ನನ್ನ ರೂಂಮೇಟೂ ಸೇರಿ ಇಡೀ ಮನೆಯನ್ನು ಗುಡಿಸಿ, ಸಾರಿಸಿ, ಫಿನಾಯಿಲ್ ಹಾಕಿ ತೊಳೆದು ಸ್ವಚ್ಚ ಮಾಡಿದೆವು. ಹೇಗ್‍ಹೇಗೋ ತುರುಕಿಟ್ಟಿದ್ದ ಬಟ್ಟೆಗಳನ್ನು ಚಂದ ಮಾಡಿ ಮಡಿಚಿ ಜೋಡಿಸಿಟ್ಟೆವು. ಅಂಡರ್‌ವೇರನ್ನು ಎಲ್ಲೆಂದರಲ್ಲಿ ನೇತುಹಾಕಿದರೆ ಕೊಲೆ ಮಾಡುವುದಾಗಿ ರೂಂಮೇಟಿಗೆ ಬೆದರಿಕೆ ಹಾಕಿದೆ. ಹಳೆಯ ನ್ಯೂಸ್‍ಪೇಪರುಗಳನ್ನು ಮಾರಿದೆವು. ನನ್ನ ಲೈಬ್ರರಿಯಲ್ಲಿ ಮನೆ ಮಾಡಿಕೊಂಡಿದ್ದ ಜಿರಲೆಗಳು ಸ್ವರ್ಗದ ದಾರಿ ಹಿಡಿದವು. ಗ್ಯಾಸ್ ಕಟ್ಟೆ ಫಳಫಳನೆ ಹೊಳೆಯಲಾರಂಭಿಸಿತು. ಅಮ್ಮನನ್ನು ಬರಮಾಡಿಕೊಳ್ಳಲಿಕ್ಕೆ ನಮ್ಮ ಮನೆ ಸಜ್ಜಾಗಿ ನಿಂತಿತು!

ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ನನ್ನ ಮೊಬೈಲು ರಿಂಗಾಯಿತು. ಹೊದಿಕೆಯೊಳಗೆಲ್ಲೋ ಹುದುಗಿದ್ದ ಕೈ ಹೊರಬಂದು ಶಬ್ದವನ್ನರಸಿ ಮೊಬೈಲನ್ನು ಹಿಡಿದು ಕಿವಿಯ ಬಳಿ ತಂದು ಆನ್ಸರ್ ಬಟನ್ನನ್ನು ಒತ್ತಿತು. "ಅಪ್ಪೀ, ನಾ ಬಂದು ಮುಟ್ಟಿದಿ! ಮೆಜೆಸ್ಟಿಕ್ಕಲ್ಲಿ ಅಮರ್ ಹೋಟ್ಲ್ ಹತ್ರ ಇದ್ದಿ. ಬರ್ತ್ಯಾ?" ಅಮ್ಮ! ನನ್ನ ಅಮ್ಮ! ಇಲ್ಲೇ, ಬಳಿಯ ಮೆಜೆಸ್ಟಿಕ್ಕಿನಿಂದ ಮಾತಾಡುತ್ತಿದ್ದಾಳೆ! ನಾನು ಹೌಹಾರಿ ಎದ್ದೆ. ದಡದಡನೆ ಹಾಸಿಗೆಯನ್ನು ಮಡಿಚಿಟ್ಟು, ಮುಖಕ್ಕೆ ನೀರು ಚುಮುಕಿಸಿಕೊಂಡು, ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ... ಮುಂಜಾನೆಯ ಗಾಳಿಯನ್ನು ಸುಯ್ಯನೆ ಸೀಳಿಕೊಂಡು ಓಡುತ್ತಿತ್ತು ಬೈಕು.. ಹತ್ತೇ ನಿಮಿಷದಲ್ಲಿ ಮೆಜೆಸ್ಟಿಕ್ಕಿನಲ್ಲಿದ್ದೆ. ಬೈಕು ಪಾರ್ಕ್ ಮಾಡಿ ಅಮರ್ ಹೋಟೆಲ್ ಬಳಿ ಬಂದರೆ ಅಲ್ಲಿ ನಿಂತಿದ್ದಳು ಅಮ್ಮ.. ನನ್ನ ಅಮ್ಮ.. ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು. ನನ್ನ ಮುಖ ಕಾಣುತ್ತಿದ್ದಂತೆಯೇ "ಅದೇ! ಅಪ್ಪಿ ಬಂದ!" ಅಂತ ತನ್ನ ಪಕ್ಕದಲ್ಲಿದ್ದ ತವರೂರಿನ ಮಾಬ್ಲೇಶ್ವರಣ್ಣನಿಗೆ ತೋರಿಸಿದಳು. ನಾನು ಅಮ್ಮನ ಬಳಿ ಹೋದೆ. "ಬಸ್ಸಲ್ಲಿ ನಿದ್ದೆ ಬಂತಾ ಅಮಾ?" ಕೇಳಿದೆ. "ನಿದ್ಯಾ? ಒಂದು ನಿಮ್ಷ ಕಣ್ಮುಚ್ಚಿದ್ಲಾ ಕೇಳು ಅವ್ಳುನ್ನ! ಹೊಟ್ಟೆ ತೊಳುಸ್ತಿತ್ತಡ.. ರಾತ್ರಿಡೀ ಕಿಟಕಿ ಹೊರಗೆ ನೋಡ್ಕ್ಯೋತ್ ಕೂತಿದ್ದ. ನೀನು ವಾಪಾಸ್ ಹೋಗಕ್ಕರೆ ಬಲಬದಿ ಸೀಟಲ್ಲೆ ಕೂರ್‍ಸಿ ಕಳ್ಸು. ಈಗ ಹೆಂಗರು ಈ ಕಡೆ ಸೈಡ್ ಪೂರ್ತಿ ನೋಡ್‍ಕೈಂದ. ವಾಪಸ್ ಹೋಗಕ್ಕರೆ ಆ ಕಡೆನು ನೋಡ್ಲಿ!" ಮಾಬ್ಲೇಶ್ವರಣ್ಣ ಹೇಳಿದ. ನಾನು ಜೋರಾಗಿ ನಕ್ಕೆ. ಮೇಷ್ಟ್ರು, ಮನೆಯವರ ಬಳಿ ಕಂಪ್ಲೇಂಟ್ ಮಾಡುವಾಗ ಪಕ್ಕದಲ್ಲಿ ತಲೆ ತಗ್ಗಿಸಿ ನಿಂತಿರುವ ಶಾಲಾಬಾಲಕನಂತೆ ಅಮ್ಮ ಪೆಚ್ಚಾಗಿ ನಿಂತಿದ್ದಳು.

ಮಹಾಬಲೇಶ್ವರಣ್ಣನಿಗೆ ಥ್ಯಾಂಕ್ಸ್ ಹೇಳಿ, ವಾಪಸು ಹೋಗುವುದರೊಳಗೆ ನಮ್ಮನೆಗೊಮ್ಮೆ ಬಂದು ಹೋಗುವಂತೆ ಕರೆದು, ಅಮ್ಮನ ದೊಡ್ಡ-ವಜ್ಜೆ ಏರ್‌ಬ್ಯಾಗನ್ನು ತೆಗೆದುಕೊಂಡೆ. ಅಮ್ಮ ನನ್ನ ಹಿಂದೆಯೇ ಬಂದಳು. ನನ್ನ ಹೊಸ ಬೈಕು ಹತ್ತುವಾಗ "ಇದು ಅಪ್ಪನ್ ಬೈಕ್ ತರ ಇಲ್ಲೆ, ಸಿಕ್ಕಾಪಟ್ಟೆ ಎತ್ತರ" ಎಂದಳು. ಲೇಡೀಸ್ ಹ್ಯಾಂಡ್ ಇಲ್ಲದ್ದರಿಂದ ಎಲ್ಲಿ ಹಿಡಕೊಳ್ಳುವುದು ಅಂತ ಗೊಂದಲಕ್ಕೆ ಬಿದ್ದಳು. ನನ್ನ ಹೆಗಲನ್ನೆ ಹಿಡಕೋ ಎಂದೆ. "ನಿಧಾನ ಓಡ್ಸು" ಎಂದಳು. ಬ್ಯಾಗನ್ನು ಪೆಟ್ರೋಲ್ ಟ್ಯಾಂಕಿನ ಮೇಲಿಟ್ಟುಕೊಂಡು ನಿಧಾನವಾಗಿ ಹೊರಟರೆ ಇನ್ನೂ ಶುರುವೇ ಆಗದಿದ್ದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬೈಕು ಓಡುವಾಗ ಅಮ್ಮ ಹಿಂದೆ ಕಣ್ಮುಚ್ಚಿ ಕೂತಿದ್ದಳು.

ಅಮ್ಮನಿಗೆ ಮನೆ ತೋರಿಸಿದೆ. ಕಾಯ್ಲ್ ಹಾಕಿ ನೀರು ಕಾಯಿಸುವುದನ್ನು ಹೇಳಿಕೊಟ್ಟೆ. ಕಾಫಿಪುಡಿ ಯಾವ ಡಬ್ಬಿಯಲ್ಲಿದೆ ಎಂದು ತೋರಿಸಿಕೊಟ್ಟೆ. ಈಳಿಗೆ ಮಣೆ ಇಲ್ಲದೆ ಚಾಕುವಿನಲ್ಲಿ ತರಕಾರಿ ಹೆಚ್ಚಲು ಹೆದರಿದ್ದಕ್ಕೆ ನಾನೇ ಹೆಚ್ಚಿಕೊಟ್ಟೆ. ಅಮ್ಮ ಊರಿಂದ ಕೊಬ್ರಿ ಮಿಠಾಯಿ ಮಾಡಿಕೊಂಡು ಬಂದಿದ್ದಳು. ನೆಲ್ಲಿಸಟ್ಟು ತಂದಿದ್ದಳು. ಹಲಸಿನ ಹಪ್ಪಳ ತಂದಿದ್ದಳು. 'ಓಹೋ! ಮಗನ ಮನೇಲಿ ಅಡುಗೆ-ಗಿಡುಗೆ ಮಾಡಿಕೊಂಡು ಹದಿನೈದು ದಿನ ಇದ್ದು ಹೋಗಿ..' ಎಂದ ಓನರ್ರಿಗೆ 'ಇಲ್ಲ, ನಮ್ಮ ಮಾವನವ್ರಿಗೆ ಅರಾಮಿರಲ್ಲ.. ಒಂದು ವಾರ ಅಷ್ಟೇ. ಹೋಗ್ಬೇಕು ಊರಿಗೆ' ಎಂದಳು ಅಮ್ಮ.

ಪುಸ್ತಕ ಬಿಡುಗಡೆಯಲ್ಲಿ ನಾನು ಮಾತಾಡಿದ್ದು ನೋಡಿ ಅಮ್ಮ ಖುಷಿಯಾಗಿದ್ದಳು. ಮನೆಗೆ ಫೋನ್ ಮಾಡಿದ್ದಾಗ ಅಪ್ಪನ ಬಳಿ 'ಅಪ್ಪಿ ಚನಾಗ್ ಮಾತಾಡಿದ.. ನಾ ಅಂವ ಮಾತಾಡಿದ್ದೇ ನೋಡಿರ್ಲೆ' ಅಂದಳು. ಅಮ್ಮನನ್ನು ಬೆಂಗಳೂರಿನ ನೆಂಟರ ಮನೆಗಳಿಗೆ ಕರೆದೊಯ್ದೆ. ಸಿಗ್ನಲ್ಲುಗಳಲ್ಲಿ ರಸ್ತೆ ದಾಟುವುದು ಹೇಗೆ ಎಂದು ಹೇಳಿಕೊಟ್ಟೆ. ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. ಮೆಜೆಸ್ಟಿಕ್ಕಿನ ಫ್ಲೈಓವರ್ರಿನ ಮೇಲ್ಗಡೆ ನಿಲ್ಲಿಸಿಕೊಂಡು 'ಈ ಕಡೆ ಸಿಟಿ ಬಸ್‍ಸ್ಟ್ಯಾಂಡು, ಆ ಕಡೆ ಕೆ.ಎಸ್.ಆರ್.ಟಿ.ಸಿ ಬಸ್‍ಸ್ಟ್ಯಾಂಡು, ಹೀಗೇ ಹೋದ್ರೆ ರೈಲ್ವೇ ಸ್ಟೇಶನ್ನು, ಆ ಕಡೆ ಗಾಂಧಿನಗರ' ಅಂತ ತೋರಿಸಿದೆ. ಸಿಗ್ಮಾ ಮಾಲ್‍ಗೆ ಕರೆದುಕೊಂಡು ಹೋಗಿ ಎಸ್ಕಲೇಟರ್ ಬಳಿ ಹೋಗಿ ನಿಂತರೆ ಹೆದರಿಕೊಂಡು ನಿಂತುಬಿಟ್ಟಳು. ಹತ್ತೋದೇ ಇಲ್ಲ ಎಂದಳು. ಕೈ ಹಿಡಿದುಕೊಂಡು 'ನೋಡೂ, ಹೀಗೆ ಮೆಟ್ಲು ಬರ್ತಿದ್ದಂಗೆ ಎರಡೂ ಹೆಜ್ಜೆನೂ ಇಟ್ಬಿಡು, ತಂತಾನೇ ಮೇಲೆ ಹೋಗ್ತು.. ಹೆದ್ರಡ' ಎಂದೆ. ಮೆಟ್ಟಿಲು ಮೇಲೇರುತ್ತಿದ್ದಾಗ ಅವಳ ಎದೆ ಡವಗುಟ್ಟುತ್ತಿದ್ದುದು ನಡುಗುತ್ತಿದ್ದ ಕೈಯಿಂದಲೇ ಗೊತ್ತಾಗುತ್ತಿತ್ತು. ಬಿಗ್ ಬಜಾರಿನಲ್ಲಿ ಶಾಪಿಂಗ್ ಮಾಡೋದು ಎಂದರೆ ಹೇಗೆ ಅಂತ ತೋರಿಸಿದೆ. 'ಶೆಟ್ರ್ ಅಂಗಡೀಲಿ ಪಟ್ಟಿ ಹಿಡ್ಕಂಡ್ ಸಾಮಾನ್ ಹಾಕ್ಸೋ ರಗಳೇನೆ ಇಲ್ಲೆ.. ನಮ್ಗೇನು ಬೇಕೋ ಎಲ್ಲ ಈ ಗಾಡಿಲಿ ಇಟ್ಕಂಡು ಹೋಗಿ ಲಾಸ್ಟಿಗೆ ಬಿಲ್ ಮಾಡ್ಸಿದ್ರೆ ಆತು.. ದುಡ್ ಕೊಡೋದೂ ಬ್ಯಾಡ; ಕಾರ್ಡ್ ಕೊಟ್ರೆ ಸಾಕು' ಎಂದೆ.

ಪುಟ್ಟ ತಳ್ಳುಗಾಡಿಯಂತಹ ಅಂಗಡಿಯಲ್ಲಿ ಟೋಪಿ ಹಾಕಿಕೊಂಡವನೊಬ್ಬ ಏನೋ ಮಾರುತ್ತಿದ್ದುದನ್ನು ನೋಡಿ 'ಅದೇನು?' ಅಂದಳು. 'ಅದು ಸ್ವೀಟ್ ಕಾರ್ನ್' ಎಂದು ಹೇಳಿ, ಒಂದು ರೆಗ್ಯುಲರ್ ಕಪ್ ತಗೊಂಡು ತಿನ್ನಿಸಿದೆ. 'ಇಷ್ಟು ಸಣ್ಣ ಲೋಟಕ್ಕೆ ನಲ್ವತ್ತು ರೂಪಾಯಿಯಾ? ಎಂಥಿದ್ದು ಇದ್ರಲ್ಲಿ? ಸುಮ್ನೆ ದುಡ್ ದಂಡ' ಎಂದಳು. ಗುಂಡಿ ಒತ್ತಿ ಲಿಫ್ಟ್‍ಗೆ ಕಾಯತೊಡಗಿದೆ. ಬಾಗಿಲು ತೆರೆದುಕೊಂಡಕೂಡಲೇ ಒಳನುಗ್ಗಿ ಅಮ್ಮನನ್ನು 'ಬಾ' ಅಂತ ಒಳಗೆಳೆದುಕೊಂಡೆ. ತಕ್ಷಣ ಬಾಗಿಲು ಮುಚ್ಚಿಕೊಂಡು ನಾವು ಕೆಳಹೋಗತೊಡಗಿದಾಗ ಅಮ್ಮನ ಕೈಯಲ್ಲಿದ್ದ ಸ್ವೀಟ್‍ಕಾರ್ನ್ ಕಪ್ಪು ಬೀಳುವಂತಾಗಿ 'ಅಯ್ಯೋ ಇದೆಂಥಾತು?' ಎಂದಳು. 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು.

ಅಮ್ಮನ ಕಣ್ಗಳೊಳಗೆ ವಿಧಾನಸೌಧ ಪ್ರತಿಫಲಿಸುತ್ತಿದ್ದಾಗ 'ಇಲ್ಲೇ ನೋಡು.. ನಮ್ಮ ಮಂತ್ರಿಗಳೆಲ್ಲ ಕೂತು ದಾದಾಗಿರಿ ಮಾಡೋದು' ಎಂದು ನಕ್ಕೆ. ಅಕ್ಕಪಕ್ಕದವರೆಲ್ಲ ನಮ್ಮನ್ನೇ ನೋಡಿದರು. ಆಮೇಲವಳನ್ನು ಕರೆದುಕೊಂಡು ಹೈಕೋರ್ಟಿನ ಕೆಂಪು ತೋರಿಸುತ್ತಾ ಕಬ್ಬನ್ ಪಾರ್ಕಿನ ಹಸಿರಿನೊಳಗೆ ನುಗ್ಗಿದೆ. 'ಇಲ್ಲೆಂತ ಮರಗಿಡ ನೋಡದು! ನಮ್ಮೂರ್ ಕಾಡು ಇದ್ರಕಿಂತ ಎಷ್ಟೋ ಚೊಲೋ ಇದ್ದು. ನೆಡಿ ಹೋಪನ!' ಎಂದಳು. ಇದ್ದುದರಲ್ಲೇ ಲಾಲ್‍ಭಾಗಿನ ಹೂಗಿಡಗಳು ಅವಳಿಗೆ ಇಷ್ಟವಾಯಿತು. ಗುಲಾಬಿ ತೋಟ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಳು. ಯಾವುದೋ ಹೂವು ನೋಡುತ್ತ 'ಇದ್ರದ್ದೊಂದು ಹೆರೆ ಕೊಡ್ತಿದ್ವೇನ.. ನಮ್ಮನೆ ಅಂಗಳದಲ್ಲಿ ಇಲ್ಲೇ ಇಲ್ಲೆ ಈ ಥರದ್ದು' ಎಂದಳು. ಒಳ್ಳೆಯದೊಂದು ಹೋಟೆಲ್ಲಿಗೆ ಕರೆದೊಯ್ದು ಊಟ ಮಾಡಿಸಿದೆ. ಫಿಂಗರ್ ಬೌಲ್‍ನಲ್ಲಿ ಕೈ ತೊಳೆದದ್ದು ಸರಿಯಾಗದೆ ವಾಶ್ ಬೇಸಿನ್ ಬಳಿ ಹೋದಳು. ಅದೇ ಸಂದರ್ಭದಲ್ಲಿ ನಾನು ಅವಳಿಗೆ ಕಾಣದಂತೆ ಬಿಲ್ ದುಡ್ಡು ಕೊಟ್ಟೆ. ಬೆಂಗಳೂರಿನ ಟ್ರಾಫಿಕ್ಕಿಗಾದರೂ ಅವಳು ಹೆದರಿದಳೋ ಇಲ್ಲವೋ, ಆದರೆ ಇಸ್ಕಾನಿನ ಬಂಗಾರದ ಶೋಕೇಸಿನೊಳಗಿನ ಕೃಷ್ಣಾರಾಧೆಯರೆದುರು ಮಾತ್ರ ಅಮ್ಮ ಕೈಮುಗಿಯುವುದನ್ನೂ ಮರೆತು ಸುಮ್ಮನೆ ನೋಡುತ್ತ ನಿಂತುಬಿಟ್ಟಳು. ನನಗಂತೂ ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ'ದ ಅಮ್ಮನೇ ನನ್ನ ಅಮ್ಮನಲ್ಲಿ ಕಾಣುತ್ತಿದ್ದಳು. ಎಲ್ಲ ಅಮ್ಮಂದಿರೂ ಹೀಗೇನೇನೋ ಅಂದುಕೊಂಡೆ.

ಒಂದು ದಿನ ಮಾತ್ರ ಅಮ್ಮನನ್ನು ಮನೆಯಲ್ಲಿ ಒಬ್ಬಳನ್ನೇ ಬಿಟ್ಟು ಆಫೀಸಿಗೆ ಹೋಗಿದ್ದೆ. ವಾಪಸು ಬರುವ ಹೊತ್ತಿಗೆ, ನನ್ನ ತೊಳೆಯಬೇಕಿದ್ದ ಬಟ್ಟೆಗಳನ್ನೆಲ್ಲ ತೊಳೆದುಹಾಕಿ, ಸಾಂಬಾರು ಬಟ್ಟಲಿನ ಖಾಲಿ ಹೊಡೆಯುತ್ತಿದ್ದ ಕುಳಿಗಳೊಳಗೆ ಎಲ್ಲವನ್ನೂ ಮಟ್ಟಸವಾಗಿ ತುಂಬಿಸಿಟ್ಟು, ನನ್ನ ಬಾಚಣಿಗೆಯಲ್ಲಿ ಸಿಕ್ಕಿಕೊಂಡಿದ್ದ ಕಸವನ್ನೆಲ್ಲ ಚೊಕ್ಕ ಮಾಡುತ್ತ ಕೂತಿದ್ದಳು. 'ಅಮ್ಮಾ ಎಂಥಕಮ್ಮ ಇದ್ನೆಲ್ಲ ಮಾಡಕ್ ಹೋದೆ.. ಒಂದು ದಿನ ಆರಾಮಾಗಿ ಮನೇಲಿರು ಅಂತ ಬಿಟ್ಟಿಕ್ ಹೋಗಿದ್ದಲ್ದಾ?' ಎಂದು ನಾನು ಸಿಡಿಗುಟ್ಟಿದರೆ, 'ಮನೇಲಿ ಸುಮ್ನೆ ಕೂತ್ಕಂಡು ಎಂಥ ಮಾಡ್ಲಾ ನಾನು? ಬೇಜಾರ್ ಬಂದುಹೋಗ್ತು.. ಊರಲ್ಲಾದ್ರೆ ಅಡಕೆ ಸುಲಿಯಕ್ಕೆ ಹೋಗ್ಲಕ್ಕು, ತೋಟಕ್ ಹೋಗಿ ಬರ್ಲಕ್ಕು, ಹಿತ್ಲಿಗೆ ಹೋಗಿ ಗೇರ್‌ಪೀಠ ಹೆಕ್ಲಕ್ಕು, ಕೊಟ್ಟಿಗೆ ಕೆಲಸ ಇರ್ತು.... ಇಲ್ಲಿ ಎಂತೆಂತು ಕೆಲ್ಸಿಲ್ಲೆ! ಅಕ್ಕಪಕ್ಕದ ಮನೆಯವ್ರು ಯಾರಾದ್ರೂ ಮಾತಾಡಕ್ಕೆ ಬರ್ತ್ವನ ಅಂದ್ರೆ ಅದೂ ಇಲ್ಲೆ.. ಇದೆಂಥ ಬೆಂಗ್ಳೂರೇನ!' ಎಂದಳು ಅಮ್ಮ. 'ಅದ್ಕೇನಮ್ಮ, ಇಲ್ಲಿ ಹೆಂಗಸ್ರು ಗಂಡಸ್ರು ಎಲ್ಲಾ ಕೆಲಸಕ್ಕೆ ಹೋಗ್ತ' ಎಂದೆ. 'ಹೂಂ, ಹೌದಪ್ಪಾ.. ನೀನೂ ಕೆಲ್ಸಕ್ಕೆ ಹೋಗೋ ಹುಡುಗೀನೇ ಮದುವೆ ಮಾಡ್ಕ್ಯ! ಅದಿಲ್ಲೇಂದ್ರೆ ನನ್ ಸೊಸಿಗೆ ಮನೇಲ್ ಕೂತ್ಗಂಡು ಹುಚ್ ಹಿಡಿತು ಅಷ್ಟೇ!' ಎಂದಳು. ಅಷ್ಟೊತ್ತಿಗೆ ಮೊಬೈಲು ಪೀಂಗುಟ್ಟಿತು. 'ಅತ್ಗೇನ ಅಮ್ಮಂಗೆ ಪರಿಚಯ ಮಾಡ್ಸಿಕೊಟ್ಯಾ?' ಅಂತ ಮಧು ಎಸ್ಸೆಮ್ಮೆಸ್ ಮಾಡಿದ್ದ. ಸುಮ್ನೇ ಒಂದು ಸ್ಮೈಲೀ ಹಾಕಿ ರಿಪ್ಲೇ ಮಾಡಿದೆ.

ಚಿಕ್ಕಪೇಟೆಯ ಸ್ಯಾರಿ ಸೆಂಟರೊಂದಕ್ಕೆ ಕರೆದೊಯ್ದು ಅಮ್ಮನಿಗೆ ಸೀರೆ ಕೊಡಿಸಿದೆ. 'ಅದು ಚನಾಗಿಲ್ಲೆ, ಇದು ಚನಾಗಿಲ್ಲೆ, ಇದ್ನ ತಗಂಡ್ ಹೋದ್ರೆ ವೀಣತ್ತೆ ಎಂತ ಹೇಳ್ತ್ಲೇನ, ಮಡಿ ಸೀರೆ ಥರ ಕಾಣ್ತು ಅನ್ಸ್ತು, ಇದು ಪ್ಯೂರ್ ರೇಶ್ಮೆ ಹೌದಾ ಅಲ್ದಾ, ಇಷ್ಟೆಲ್ಲ ರೇಟ್ ಕೊಟ್ಟು ಇಲ್ಲಿ ತಗಳಕ್ಕಿಂತ ಸಾಗರದಲ್ಲಿ ತಗಂಡ್ರ್‍ಏ ಚೀಪಾಗ್ತು' ಎಂದೇನೇನೋ ಗೊಣಗುತ್ತಲೇ ಅಂತೂ ಅಮ್ಮ ಒಂದು ಸೀರೆ ಕೊಂಡಳು. ಮನೆಗೆ ಬಂದಮೇಲೂ ಅದನ್ನು ನಾಕ್ನಾಕು ಬಾರಿ ತೆರೆದು ನೋಡಿ ಸವರಿ 'ಚನಾಗಿದ್ದು ಅಲ್ದನಾ?' ಎಂದು ಕೇಳಿದಳು. 'ಹೈಕ್ಲಾಸ್ ಇದ್ದು ಬಿಡು ಚಿಕ್ಕೀ' ಎಂದು ನನ್ನ ರೂಂಮೇಟೂ ಶಿಫಾರಸು ಮಾಡಿದಮೇಲೇ ಅವಳಿಗೆ ಸ್ವಲ್ಪ ಸಮಾಧಾನ ಆಗಿದ್ದು!

ಅಮ್ಮನನ್ನು ವಾಪಸು ಕಳುಹಿಸಿಕೊಡಲಿಕ್ಕೆ ನನ್ನ ಮನಸಿನ್ನೂ ತಯಾರಾಗಿರಲೇ ಇಲ್ಲ. ಆದರೆ ಆಗಲೇ ವಾರವಾಗಿಬಿಟ್ಟಿತ್ತು. ಅಜ್ಜನನ್ನು ನೋಡಿಕೊಳ್ಳುವುದಕ್ಕೆ ಮತ್ತು ಅಡುಗೆ ಮಾಡಿ ಹಾಕಲಿಕ್ಕೆಂದು ಮನೆಗೆ ಬಂದಿದ್ದ ವೀಣತ್ತೆ ತಾನು ನಾಳೆ ವಾಪಸು ಹೋಗುತ್ತಿರುವುದಾಗಿ ಹೇಳಿದಳು ಫೋನಿನಲ್ಲಿ. ಅಮ್ಮ ಇವತ್ತು ರಾತ್ರಿ ಹೊರಡಲೇಬೇಕಿತ್ತು. ಗಜಾನನ ಬಸ್ಸು ಬಂದು, ಏರ್‌ಬ್ಯಾಗನ್ನು ಡಿಕ್ಕಿಯಲ್ಲಿರಿಸಿ, ಅಮ್ಮನನ್ನು ಹತ್ತಿಸಿ, ಪುಶ್‍ಬ್ಯಾಕ್ ಸೀಟನ್ನು ಹಿಂದೆ ಮಾಡಿಕೊಟ್ಟು ಕೂರಿಸಿ, ವಾಂತಿ ಬಂದರೆ ಕವರಿನಲ್ಲಿಯೇ ಮಾಡುವಂತೆ ಹೇಳಿ, ಹೋಗ್ಬಾ ಎಂದು ನಾನು ಕೆಳಗಿಳಿದೆ. ಬಸ್ಸು ಹೊರಟು ನಾನು ಕೈ ಬೀಸುವಾಗ ಯಾವ್ಯಾವುದೋ ಸಿನೆಮಾಗಳ ಇಂಥದೇ ಸೀನುಗಳೆಲ್ಲ ಕಣ್ಮುಂದೆ ಬಂದು ನಿಂತಿದ್ದವು. ಆದರೆ ಕಣ್ಣು ತುಂಬಿಕೊಂಡಿದ್ದರಿಂದ ಅವು ಸರಿಯಾಗಿ ಕಾಣುತ್ತಿರಲಿಲ್ಲ.

ಬೆಳಗ್ಗೆ ಎಂಟೂವರೆಗೆ ಮನೆಗೆ ಫೋನ್ ಮಾಡಿದರೆ ಅಜ್ಜ ಎತ್ತಿಕೊಂಡು 'ಅಪ್ಪ ಕರ್ಕಂಬರಕ್ಕೆ ಬಸ್‍ಸ್ಟ್ಯಾಂಡಿಗೆ ಹೋಯ್ದ.. ಈಗ ಹೋತು ಕಾಣ್ತು ಪಾಳಾ ಬಸ್ಸು.. ಅದೇ ಅಲ್ಲಿ ಡಾಕ್ಟ್ರು ಮನೆ ಹತ್ರ ಬರ್ತಾ ಇದ್ದಂಗೆ ಕಾಣ್ತಪ' ಎಂದ. ಏರ್‌ಬ್ಯಾಗ್ ಹಿಡಿದ ಅಪ್ಪನ ಪಕ್ಕ ಅಮ್ಮ ನಿಧಾನವಾಗಿ ನಡೆದುಕೊಂಡು, ಎದುರಿಗೆ ಸಿಕ್ಕಿ 'ಓಹೋಹೋಹೋ! ಬೆಂಗ್ಳೂರಿಗ್ ಹೋಗ್ಬಂದಾತಾ ಸವಾರಿ?' ಎಂದು ಕೇಳಿರಬಹುದಾದ ಸರೋಜಕ್ಕನಿಗೆ ಬೆಂಗಳೂರಿನ ಕಥೆಯನ್ನೆಲ್ಲ ಹೇಳುತ್ತ, ಆಮೇಲೆ ರತ್ನಾವತಿ ಚಿಕ್ಕಿ ಒತ್ತಾಯ ಮಾಡಿದಳು ಅಂತ ಹಾಗೇ ಅವಳ ಮನೆ ಹೊಕ್ಕು ಮಗ ಕೊಡಿಸಿದ ರೇಶ್ಮೆ ಸೀರೆ ತೋರಿಸಿ, ಚಂದ್ರಕ್ಕನ ಮನೆ ಹುಡುಗ್ರಿಗೆ ಸ್ವೀಟ್ಸ್ ಕೊಟ್ಟು... ಎಲ್ಲಾ ಮಾಡಿಕೊಂಡು ಅಮ್ಮ ಮನೆ ಮುಟ್ಟುವ ಹೊತ್ತಿಗೆ ಇನ್ನೂ ಅರ್ಧ ತಾಸಾದರೂ ಬೇಕು ಬಿಡು ಎಂದುಕೊಳ್ಳುತ್ತಾ 'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು' ಎಂದು ಅಜ್ಜನಿಗೆ ಹೇಳಿ ಫೋನಿಟ್ಟೆ. ಆಫೀಸಿಗೆ ಹೊರಡಲು ತಯಾರಾಗತೊಡಗಿದೆ. ಮನೆ ಮತ್ತು ಮನ ಎರಡೂ ಬಿಕೋ ಎನ್ನುತ್ತಿದ್ದವು.

66 comments:

Archu said...

wow!!!tumbaa chanda barediddi sushruta..
good..

nanna amma bengaLoorige bandaaga avara maatugaLoo ide thara iddavu!!

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ....
ಚೆನಾಗ್ ಬರ್ದೆ ಕಣೋ....
ನನ್ ಕಣ್ಣಲ್ಲಿ ನೀರು ಜಿನುಗ್ತಾ ಇದ್ದು. ನಂಗೂ ನನ್ ಅಮ್ಮನ್ ನೆನ್ಪಾಗೋತು.

"ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ."
ಇದು ಸಾಲಲ್ಲ, ಮಾಣಿಕ್ಯ.

anu said...

Sushruta,tumba changai baredidra.
Manasina bhavanegalu matugalaagi istu chanagi moodisakkagatte anta gotte irlilla. Nijavaaglu amma great. heege baritaa iri.ಅಜ್ಜನ ಮನೆಗೆ ಹೋಗುವಾಗ ನನ್ನ ಕೈ ಹಿಡಕೊಂಡು 'ಎರಡೂ ಕಡೆ ನೋಡ್ಕ್ಯಂಡು ದಾಟವು' ಎನ್ನುತ್ತಾ ಸಾಗರದಲ್ಲಿ ರಸ್ತೆ ದಾಟಿಸುತ್ತಿದ್ದ ಅಮ್ಮನ ನೆನಪಿನ ಚಿತ್ರವನ್ನು ಕಣ್ಮುಂದಿಟ್ಟುಕೊಂಡು, ಈ ಬಾರಿ ನಾನು ಅಮ್ಮನ ಕೈಹಿಡಿದು ರಸ್ತೆ ದಾಟಿಸಿದೆ. Ee saalu tumba ista aytu. haage nanage gottillada haage alu bantu

ರಂಜನಾ ಹೆಗ್ಡೆ said...

ಸುಶ್,
ಸಕತ್ ಕಣೋ. ತುಂಬಾ ಚನ್ನಾಗಿ ಬರದ್ದೆ.
ಕೊಬ್ರಿ ಮಿಠಾಯಿ ಸಿಕ್ತು. ನೆಲ್ಲಿ ಸೆಟ್ ಎಲ್ಲಿ ಕೊಡಲೇ ಇಲ್ಲಾ . ತುಂಬಾ ಇಷ್ಟ ಆಯಿತು.
ನನ್ನ ಅಮ್ಮನು ಬೆಂಗಳೂರಿಗೆ ಬಂದಾಂಗ ಹಿಂಗೆ ಆಗುತ್ತೇನೋ?

Sushrutha Dodderi said...

ಅರ್ಚನಾ,

ಬಹುಶಃ ಎಲ್ಲ ಅಮ್ಮಂದಿರೂ ಹೀಗೇನೇನೋ ಕಣೇ..ಥ್ಯಾಂಕ್ಸ್..

ಪುಟ್ಟಕ್ಕ,

ಥ್ಯಾಂಕ್ಸ್. ಈ ಸಲ ಇಂಡಿಯಾ ಬಂದಾಗ ಅಮ್ಮನ್ ಜೊತೆ ಹೆಚ್‍ಚ್‍ಚ್‍ಗೆ ಟೈಮ್ ಸ್ಪೆಂಡ್ ಮಾಡು..

anu,

ಅಳು ಬಂತು ಅಂದ್ರೆ ನೀವೆಷ್ಟು ನಿಮ್ಮಮ್ಮನ್ನ ಪ್ರೀತಿಸ್ತೀರ ಅಂತ ಗೊತ್ತಾಗತ್ತೆ.. ಧನ್ಯವಾದ ಅನು..

ರಂಜು,

ಥ್ಯಾಂಕ್ಸ್ ಪುಟ್ಟೀ.. ಮನೆಗ್ ಬಾ, ಕೊಡ್ತಿ ನೆಲ್ಲಿಸಟ್ಟು.. ಇನ್ನೊಂದೆರಡು ಚೂರು ಉಳದ್ದು ಅಷ್ಟೇ.

Parisarapremi said...

ನಂಗೆ ಇಂಥದ್ದೊಂದು ಅನುಭವ ಆಗುವುದಕ್ಕೆ ಸಾಧ್ಯವೇ ಇಲ್ಲ. ಅಮ್ಮನೇ ವಿಧಾನಸೌಧ ತೋರಿಸಿ, "ನೋಡೋ, ಇದೇ ವಿಧಾನಸೌಧ" ಎಂದು ಹೇಳುವವರ ಮನೆಯಲ್ಲಿ ಹುಟ್ಟಿದವನು ನಾನು. :-)

ಓದಲು ಸೊಗಸಾಗಿದೆ. ಟಚ್ ಮಾಡ್ತು. :-)

Vijaya said...

tumba dina aagittu yaavdaadru blog odi kannalli neeru bandu ... tumba chennagi bardideeya. Im lucky to have you as one of my fabulous five!!!
nangoo kobri mithai tumba ishta ... nange kodle illa :-(

ಶ್ಯಾಮಾ said...

ನನ್ನ ಅಮ್ಮ ಮುಂದಿನವಾರ ಬರದನ್ನ ಈಗ್ಳಿಂದನೇ ಕನಸು ಕಾಣ್ತಾ ಇದ್ದಿದ್ದಿ ಅಮ್ಮ ಇವತ್ತೇ ಬರ್ಲಾಗಿತ್ತು ಹೇಳಿ. ಅದೇ ಹೊತ್ತಿಗೆ ನಿನ್ನ ಲೇಖನ ಓದಿದಿ. ಅಮ್ಮನ ನೆನಪು ಮತ್ತೂ ಜಾಸ್ತಿ ಆತು. ಹಿಂದಿನಸಲ ಅಮ್ಮ ಬಂದಾಗ ನಡೆದಿದ್ದನ್ನೆಲ್ಲ ನೀನು ಹೇಳ್ತಾ ಇದ್ಯನ ಅನ್ಸ್ಯೋತು. ಅಮ್ಮ ಅಂದ್ರೆ ಹಂಗೇ ಅಲ್ದಾ?

ಮತ್ತೆ ಎಂತಾ ನೆನ್ಪಾತು ಅಂದ್ರೆ ಹಿಂದಿನ್ಸಲ ಅಮ್ಮ ಅಪ್ಪಯ್ಯ ಬಂದಾಗ ಫೋರಮ್ ಮಾಲ್ ಅಲ್ಲಿ ಎಸ್ಕಲೇಟರ್ ನೋಡಿ ಅಮ್ಮಂಗೂ ಹೆದ್ರಿಕೆ ಆಗಿತ್ತು. ಮೆತ್ತಿ ಮೆಟ್ಲು ಅಂದ್ರೆ ಹೆದ್ರಿಕೆ ನನ್ನಮ್ಮಂಗೆ ಇನ್ನು ಎಸ್ಕಲೇಟರ್? ಅಲ್ಲಿಂದ ವಾಪಸ ಬರಕ್ಕರೆ ಅಪ್ಪಯ್ಯ ನ ಹತ್ರ ಹೇಳ್ತಾ ಇತ್ತು ಮನಿಗೆ ಹೋದ ಮೇಲೆ ಇದನ್ನ ಎಲ್ಲರಿಗು ಹೇಳ್ಕ್ಯಂಡು ನಿಗ್ಯಾಡದಾದ್ರೇ ನಾನು ಸುಮ್ನಿರದಿಲ್ಲೆ ಹೇಳಿ :)

Sushrutha Dodderi said...

ಅರುಣ್,

ನಿಮ್ಮ ಅನುಭವಗಳು ಬೇರೇನೇ ತರಹ ಇರಬಹುದು.. ಆದರೂ ನಿಮ್ಮಮ್ಮಾನೂ ನಿಮ್ಮನ್ನು ಹೇಗೋ ತಟ್ಟಿರ್ತಾರೆ, ಮಮತೆಯ ಮಳೆಯಲ್ಲಿ ಮೀಯಿಸಿರ್ತಾರೆ, ಎದುರಿಗಿಲ್ಲದಿದ್ದಾಗ ನೆನಪಾಗಿ ಕಣ್ಣಲ್ಲಿ ನೀರು ತರಿಸಿರ್ತಾರೆ ...ಅಲ್ವಾ?
ಥ್ಯಾಂಕ್ಸ್ ಪಾರ್ಟನರ್..

vijaya,

I consider it an honor . next time oorige hodaga nimagaagi kobri miTai madiskond bartheeni aytha? :-)

Thumba thanx madam...

ಶ್ಯಾಮಾ,

ಲವ್ಲೀ ಕಮೆಂಟ್! ಮುಂದಿನ್ ವಾರ ನಿನ್ನಮ್ಮ ಬರ್ತಿದ್ಲಾ? ಸುಪ್ಪರ್ರಲ! ಎಂಜಾಯ್ ದಿ ಅಕೇಶನ್.

ನನ್ನಮ್ಮನೂ ಅಷ್ಟೇ. ಅವ್ಳು ಸಾಗರದ ಜಾತ್ರೆಲಿ ಸಣ್ ತೊಟ್ಲು ಸಹ ಹತ್ತಿದವ್ಳಲ್ಲ, ಇಲ್ಲಿ ಬೆಂಗ್ಳೂರಲ್ಲಿ ಫ್ಲೈಓವರ್ ಮೇಲೆ ಓಡಾಡಕ್ಕರೆ 'ತಲೆ ಸುತ್ತಿದಂಗಾಗ್ತು ಮಾರಾಯಾ' ಹೇಳ್ತಿದಿದ್ದ.. ಇಂಥಾ ಸಂದರ್ಭಗಳಲ್ಲೇ, ನಂಗೆ ಅಮ್ಮನ್ನ ಮುದ್ ಮಾಡೋಷ್ಟ್ ಪ್ರೀತಿ ಬರ್ತು.. ಮತ್ತೇ, ಇಂತಹ ಕೆಲವೇ ಕ್ಷಣಗಳಲ್ಲಲ್ದಾ ನಾವು ಅಮ್ಮನ್ ಪಕ್ಕ ಅಮ್ಮಂಗಿಂತಾ ದೊಡ್ಡವ್ರ ಥರ, ಅಮ್ಮಂಗಿಂತ ಏನೋ ಜಾಸ್ತಿ ತಿಳ್ಕಂಡವ್ರ ಥರ, ಅವ್ಳಿಗಾಗ್ದೇ ಇರೋದ್ನ ಅವ್ಳಿಗಿಂತ ಮುಂಚೆ ಸಾಧಿಸಿದವ್ರ ಥರ ನಿಂತ್ಕಳದು...? ಅದ್ಕೇ ಅದು ನಮಗೆ ದೊಡ್ಡದರಂಗೆ ಕಾಣ್ತಾ? ಏನೋ.. ಗೊತ್ತಿಲ್ಲೆ.. ..

ಅಹರ್ನಿಶಿ said...

ಸುಶ್ರುತ,
ಅಪ್ಪಿ ಬ೦ದ......ಮನೆ ಮನ ಬೀಕೋ ಎನ್ನುತ್ತಿದ್ದವು....ಕಣ್ ಮನ ತು೦ಬಿ ಬ೦ದವು.ಅಮ್ಮ ಬ೦ದಿದ್ದಳು.....ನಿಜ ಇ೦ತಹ ಬರಹಗಳೇ ನನ್ನ ಅಮ್ಮನಿಗೆ ಆಫ್ರಿಕಾ ಪ್ರವಾಸ ಮಾಡಿಸಬೇಕೆ೦ದಿರುವ ನನ್ನ ನಿರ್ಧಾರವನ್ನ ಅಚಲವಾಗಿಸುವುದು.ಆ ದಿನ ಬರಲಿ ನಾನು ಬರಿತೀನಿ...ಅಮ್ಮ ಬ೦ದಿದ್ದಳು.

ಅನಂತ said...

:D

ವಿ.ರಾ.ಹೆ. said...

ಸುಪರ್, ಟಚ್ ಆತು.

ಆದರೆ ಎಲ್ಲರಂತೆ ನೀನು ಕೂಡ ಬೆಂಗಳೂರಿನ ಥಳಕು ಬಳಕು ಜಗತ್ತನ್ನು ಮಾತ್ರ ತೋರಿಸಿದಂತಿದೆ.

ಅದಿರ್ಲಿ, ಕಡಿಗೆ ನಿನ್ ಅಮ್ಮ ಬೆಂಗಳೂರಿನ ಬಗ್ಗೆ ಎಂಥ ಅಭಿಪ್ರಾಯ ಹೇಳ್ತು?

Sushrutha Dodderi said...

@ ಅಹರ್ನಿಶಿ

:-) ಆ ದಿನ ಬೇಗ ಬರಲಿ ಅಂತ ನಾನೂ ಹಾರೈಸ್ತೀನಿ..

ಅನಂತ,

ಯಾಕ್ ಸ್ವಾಮೀ ನಗು? :O

ವಿಕಾಸ್,

ಮತ್ತಿನ್ನೆಂತಿದ್ದಾ ಬೆಂಗ್ಳೂರಲ್ಲಿ ತೋರ್ಸಕ್ಕೆ? ಇಷ್ಟಲ್ದೇ ಕೆ.ಆರ್. ಮಾರ್ಕೆಟ್ಟಿನ ಕೊಳಕಲ್ಲೂ ಅವಳನ್ನ ಓಡಾಡ್ಸಿದ್ದಿ; ಎಲೆಕ್ಟ್ರಾನಿಕ್ ಸಿಟೀಲಿ ಕಟ್ತಿರೋ ಎಲಿವೇಟೆಡ್ ಫ್ಲೈಓವರ್ರೂ ತೋರ್ಸಿದ್ದಿ..

ಹಹಾ, ಅಮ್ಮನ ಅಭಿಪ್ರಾಯ ಅವಳ ಬೆರಗುಗಣ್ಣಲ್ಲೇ ಗೊತ್ತಾಗ್ತಿತ್ತು.. ಅವ್ಳಿಗೆ ಈ ಟ್ರಾಫಿಕ್ ನೋಡಿ ಪೂರ್ತಿ ಭಯ ಆಗಿದೆ.. ನನ್ ಹತ್ರ 'ಹುಶಾರಿ ಬೈಕ್ ಓಡ್ಸಕ್ಕರೆ' ಅಂತ ಮಿನಿಮಮ್ ಅಂದ್ರೂ ನೂರು ಸಲ ಹೇಳಿದ್ಲು.. ಉಳಿದಂತೆ ಲಾಲ್‍ಭಾಗು, ಕಬ್ಬನ್ ಪಾರ್ಕುಗಳೇನು ನಾವು ಹಳ್ಳಿಯಿಂದ ಬಂದವರಿಗೆ ಹೇಗೆ ವಿಶೇಷವಾಗಿ ಕಾಣಲ್ವೋ ಹಾಗೇ ಅವ್ಳಿಗೂ ಕಾಣ್ಲಿಲ್ಲ.. 'ಎಲ್ಲಾ ನೆಂಟ್ರು ಮನಿಗೂ ಹೋಗ್ಬಂದಂಗಾತು, ಅಂತೂ ಬೆಂಗ್ಳೂರ್ ನೋಡ್ದಂಗಾತು' ಅನ್ನೋದಷ್ಟೇ ಅವಳ ಸಮಾಧಾನ. :-)

ಮೃಗನಯನೀ said...

sush.................... love ur style kano..... ninna ammanigoMdu puppy kodaNa annistittu...;-)

Sanath said...

@ ಸುಶ್,
ಸಕ್ಕತ್ ಆಗಿ ಬರದ್ದೆ...

Unknown said...

ತುಂಬಾ ಚೆನ್ನಾಗಿದೆ. ನನ್ನಮ್ಮ ಮೊದಲನೆ ಸಾರಿ ಬೆಂಗಳೂರಿಗೆ ಬಂದಿದ್ದು ನೆನಪಾಯ್ತು. ಅವಳು ರಿಯಾಕ್ಷನ್ ಆಲ್‌ಮೋಸ್ಟ್ ಹೀಗೆ ಇತ್ತು. ಎಲ್ಲಾ ಅಮ್ಮಂದಿರೂ ಹಾಗೆ ಅನ್ನಿಸ್ತು.

chetana said...

ನಮಸ್ತೇ ಸುಶೃತ,
ಅದು ಹಾಗೇ ಅಲ್ವಾ? ಚಿಕ್ಕವರಿರ್ತ ನಾವು ಮುಗ್ಧರು,ಬೆಳೆದ ಮೇಲೆ ಅಪ್ಪ- ಅಮ್ಮ ಮುಗ್ಧರು!
ಮೊನ್ನೆ ನನ್ನಮ್ಮನೂ ಬಂದಿದ್ಲು. ಬಿಡೀ, ಅವಳು ನನಗಿಂತ ಹೆಚ್ಚು ದೇಶ ಸುತ್ತಿದಾಳೆ. ಆದ್ರೆ ಎಲ್ಲ ಅಮ್ಮಂದಿರ ಒಳಮನಸ್ಸೂ ಒಂದೇ... ನಾ ಆಫೀಸಿಂದ ಬರೋದ್ರೊಳಗೆ ಹುಳುಗಳ ಸಮೇತ ಮುಚ್ಚಿಟ್ಟಿದ್ದ ಡಬ್ಬಿಗಳ್ನೆಲ್ಲ ಕ್ಲೀನ್ ಮಾಡಿ, ನನ್ ಬಟ್ಟೆ ಒಗ್ದು, ಬುಕ್ ಜೋಡ್ಸಿ....
ಆಮೇಲೆ ನಾನು ನಿಮ್ಮ ಹಾಗೇ ಅಮ್ಮನ್ನ ಗದರಿದ್ದಾಯ್ತು!:)

ಬಹಳ ಚೆನ್ನಾಗಿ ಬರೀರ ನೀವು. ಹೀಗೇ ಮುಂದುವರೆಸಿ.
ಹಾ! ನನ್ನಮ್ಮನೂ ಕೊಬ್ರಿ ಮಿಟಾಯಿ ಮಾಡಿ ತಂದಿದ್ಲು! ;)
- ಚೇತನಾ

ಯಜಮಾನ said...

Sushruta,

bahaLa chalo bardeeripa. nanagantu bahaLa hiDistu. neevu hELiddu kharene - ella ammandru heege eno!

iMti,
Suhruta

Keshav.Kulkarni said...

ಸುಶೃತ,

ದಿನ ನಿತ್ಯದ ಸಹಜ ಆಗುಹೋಗುಗಳು ಕಲೆಯಾಗುವುದೇ ಇಂಥ ಬರಹಗಳಿಂದ. ಏನೂ ಘಟಿಸದೆಯೂ ಬರಹ ತುಂಬ ತಟ್ಟುತ್ತದೆ. ನೀವು ತುಂಬ ಚೆನ್ನಾಗಿ ಬರೆಯುತ್ತೀರಿ, ನಿಮಗೆ ಗದ್ಯದ ಮೇಲಿನ ಹಿಡಿತ ತುಂಬ ಚೆನ್ನಾಗಿದೆ. ಬ್ಲಾಗಿನ ಬರಹಗಳಿಂದಾಚೆ, ಬ್ಲಾಗಿನ ಚಿಕ್ಕ ಚಿಕ್ಕ ಕತೆಗಳಿಂದಾಚೆ ನೀವು ಬೆಳೆಯಬಲ್ಲಿರಿ. ನಿಮ್ಮ ಇತ್ತೀಚಿನ ಪುಸ್ತಕ ಓದುವುದು ಆಗಿಲ್ಲ, ಈ ಸಲ ಭಾರತಕ್ಕೆ ಬಂದಾಗ ಖಂಡಿತ ಓದುತ್ತೇನೆ. ದೊಡ್ಡ ಕತೆಗಳನ್ನು ಬರೆಯಿರಿ, ಕಾದಂಬರಿ ಬರೆಯಿರಿ.

" 'ನಾವೀಗ ಲಿಫ್ಟಲ್ಲಿದ್ದು! ಕೆಳಗಡೆ ಹೋಗ್ತಾ ಇದ್ದು' ಎಂದೆ. ಅಮ್ಮ ಕಂಗಾಲಾದಳು. 'ನಾನು ಎಸ್.ಟಿ.ಡಿ. ಬೂತ್ ಒಳಗೆ ಕರ್ಕಂಡ್ ಬಂದೆ ಅಂದ್ಕಂಡಿ' ಎಂದಳು."
STD ಬೂತ್-ಗಳು ಬೆಂಗಳೂರಿನಿಂದ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ, STD ಬೂತ್ ಹಳ್ಳಿಯ ಜೀವನದ ಸಂಕೇತವಾಗುದು ಎಷ್ಟು ವಿಚಿತ್ರವಲ್ಲವೇ?

-ಕೇಶವ (www.kannada-nudi.blogspot.com)

ಸುಪ್ತದೀಪ್ತಿ suptadeepti said...

ತಲೆ ಸರಿಸುತ್ತಾ ತುಂಬಿದ ಕಣ್ಣುಗಳ ಎಡೆಯಲ್ಲಿ ಅಕ್ಷರ ನೋಡುತ್ತಾ, ಮೂಗು ಒರೆಸಿಕೊಳ್ಳುತ್ತಾ ಓದಿದೆ...
ನಮ್ಮಮ್ಮ ಇಷ್ಟು ಮುಗ್ಧೆಯೇನಲ್ಲ. ಎಲ್ಲದರಲ್ಲೂ ಏನೋ ತಪ್ಪು ಹುಡುಕುವ perfectionist. ಆದರೂ ಒಂದು ಮುಗ್ಧ ಅಮ್ಮನ ಮಡಿಲಿನಲ್ಲಿ ತಲೆಯಿಟ್ಟು ಬಂದೆ. ಥ್ಯಾಂಕ್ಸ್.

Anonymous said...

ಸುಶ್ರುತ, ತುಂಬಾ ಚೆನ್ನಾಗಿ ಬರ್ದಿದೀರ. simple and very effective ಅನ್ನೋದಕ್ಕೆ ಒಳ್ಳೆ ಉದಾಹರಣೆ

Sushrutha Dodderi said...

ಮೃಗನಯನೀ,

ಥ್ಯಾಂಕ್ಸ್ ಹುಡ್ಗೀ.. ಹಂಗೆಲ್ಲ ಪಪ್ಪಿ ಕೊಟ್ರೆ ಅಮ್ಮಂಗೆ ಮತ್ತಷ್ಟು ನಾಚ್ಕೆ ಆಗೀ.. .. .. .. ..
;-)

sanath,
:-) ಧನ್ಯವಾದ..

ಮಧು,

ಹೌದೇ ಹೌದು. ನೋ ಡೌಟ್ ಇನ್ ದಟ್. ಎಲ್ಲ ಅಮ್ಮಂದ್ರೂ ಹೀಗೇನೆ. :-)
ಧನ್ಯವಾದ.

ಚೇತನಾ,
ಥ್ಯಾಂಕ್ಸ್ ಫಾರ್ ಶೇರಿಂಗ್ ಅಬೌಟ್ ಯುವರ್ ಅಮ್ಮ.
ಅಲ್ಲಾ, ಎಲ್ಲಾ ಅಮ್ಮಂದ್ರೂ ಕೊಬ್ರಿ ಮಿಠಾಯಿನೇ ಮಾಡಿ ತರ್ತಾರಾ ಹೇಗೆ? :O :D

ಖಂಡಿತಾ, ಬರೀತಿರ್ತೀನಿ.. ಧನ್ಯವಾದ್..!

Sushrutha Dodderi said...

ಯಜಮಾನ್ರು,
ಥ್ಯಾಂಕ್ಸರೀ ಸರ.. :-)ಬರ್ತಿರ್ರಿ ಈ ಕಡೆ..

ಕೇಶವ,

ನಿಮ್ಮ ಮೆಚ್ಚುಗೆಯ ಮಾತುಗಳಿಗೆ ತುಂಬಾ ಧನ್ಯವಾದ ಸರ್.. ದೊಡ್ಡ ಕತೆ, ಕಾದಂಬರಿ... ಹ್ಮ್, ಖಂಡಿತ ಬರೀತೀನಿ.. :-)
STD ಬೂತ್‍ಗಳ ಬಗ್ಗೆ ನೀವು ಹೇಳಿದ್ದು ನಂಗೂ ನಿಜ ಅನ್ನಿಸ್ತು.. :-(

ಸುಪ್ತದೀಪ್ತಿ,

ನನ್ನಮ್ಮನ ಮಡಿಲಲ್ಲಿ ತಲೆ ಹುದುಗಿಸಿ ಬಂದ ನಿಮ್ಮ ಒಳ್ಳೆಯತನಕ್ಕೆ ಹ್ಯಾಟ್ಸಾಫ್. ಆ ಕಣ್ಣೀರಿಗೆ ನನ್ನ ಕರ್ಚೀಫ್.

createam,
:-) Thanks..

Harsha Bhat said...

sushrutha,

nasheeba maraya nindu.. ninna amma ondu sarti adru bangalorege bandu hotu, aanu mane bittu 7 varsha aatu aanu mane bittu... onde ondu sarti ammange aanu iddallige bappale aajille

VENU VINOD said...

ಸುಶ್ರುತ,
ಅಮ್ಮಂದಿರ ಬಗ್ಗೆ ಬರೆದ ಎಷ್ಟೋ ಲೇಖನ ಓದಿದ್ದೇನೆ. ಇದು ಅವೆಲ್ಲದರಿಗಿಂತ ಮಿಗಿಲು. ಅಮ್ಮ ಬಂದು ಹೋದ ವಿಷಯವನ್ನು ಇಷ್ಟು ಮನಮುಟ್ಟುವಂತೆ ನಿರೂಪಿಸಿದ್ದೀರಿ. ಆಫೀಸಿನ ಬ್ಯುಸಿಯೆಡೆಯೇ ಈ ಲೇಖನ ಓದಿದೆ, ಕಣ್ಣು ಮಂಜಾಯಿತು.....

Anveshi said...

ಯಾಕ್ರೀ ನಮ್ ಕಣ್ಣೀರಿಳಿಸ್ತೀರಾ? ನಿಮ್ ಈ ಬರಹಕ್ಕೆ ಏನು ಹೇಳ್ಬೋಕೋ ಗೊತ್ತಾಗ್ತಿಲ್ಲ... ಮಾತಾಡೋಕೆ ಮಾತು ಬಂದ್ರಲ್ಲಾ... ಬಾಯಿ ಮುಚ್ಚಿಸಿಬಿಟ್ರಿ... ಕಣ್ಣು ಕೂಡ ನೀರಿನಿಂದಲೇ ಮುಚ್ತಾ ಇದೆ...

ಅಬ್ಬ....

ಶ್ರೀನಿಧಿ.ಡಿ.ಎಸ್ said...
This comment has been removed by a blog administrator.
ಶ್ರೀನಿಧಿ.ಡಿ.ಎಸ್ said...

ಅಣ್ಣಾ ತಂದೇ, ಸಾಕೋ.. ಅದೇನ್ ಬರಿತೆ ಮಾರಾಯಾ.. ಕಣ್ಣೆಲ್ಲಾ ಒದ್ ಒದ್ದೆ. ಹೀಂಗೆ ಬರಿಯಲೆ ನಿನ್ ಹತ್ರ ಮಾತ್ರ ಆಗ್ತು ಅನಸ್ತು. ವಸುಧೇಂದ್ರ ಅಮ್ಮನ ಬಗ್ಗೆ ಬರ್ದಿದ್ದೇ ಫಸ್ಟ್ ಪ್ಲೇಸ್ ಆಗಿತ್ತು ಇಸ್ಟ್ ದಿನ ನಂಗೆ. ಈಗ ನಿನ್ನ ಬರಹಕ್ಕೆ ಬಂಪರ್ ಬಹುಮಾನ.

ಹಾಂ, ಅಂದಾಂಗೆ, ನಿನ್ನ ಅಮ್ಮನ್ನ ನಾನು ಟೀವೀಲೂ ತೋರ್ಸಿದ್ದಿ ಗೊತಾತಲಾ!ಕ್ಯಾಮರಾ ನೋಡ್ಕ್ಯಂಡು ನಗಾಡಿದ್ದು ಹಾಂಗ್ ಹಾಂಗೇ ಬೈಂದು!:)

Ultrafast laser said...
This comment has been removed by a blog administrator.
Ultrafast laser said...

"ಕೈಗೆ ಸಿಕ್ಕಿದ ಒಂದು ಪ್ಯಾಂಟು ಸಿಕ್ಕಿಸಿಕೊಂಡು, ಗಾಡಿಯನ್ನು ಕಾಂಪೌಂಡಿನಿಂದ ಹೊರತಂದು ಹೊರಟೆ.."- ಹೌದು, ನೀನು ಶರ್ಟ್ ಇಲ್ದೆ ಬರೀ ಪ್ಯಾಂಟ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದುದನ್ನು ನೋಡಿದೆ ನಾನು!.
ಗೌರಿ ಚಿಕ್ಕಿಗೆ ಖಂಡಿತ ಖುಷಿಯಾಗಿರಬಹುದು! (ಸುತ ವಿನೋದದ ಸಿರಿಗೆ ಸ್ವರ್ಗದ ಸಿರಿ ತೋತ್ತು). ನನಗೆ ನಾನು ಎಂ ಎಸ್ ಸಿ ನಲ್ಲಿ ಗೋಲ್ಡ್ ಮೆಡಲ್ ತೆಗೆದುಕೊಂಡಾಗ ನನ್ನ ಅಮ್ಮ ಯುನಿವರ್ಸಿಟಿ ಫಂಕ್ಷನ್ ಗೆ ಬಂದ ನೆನಪಾಯಿತು. ಬರಹದ ಬಗ್ಗೆ ಏನು ಹೇಳಲಿ!. ಅದ್ಭುತವಾಗಿದೆ!.

Dr.D.M.Sagar (Original)

Shree said...

ಯಾರಾ ಅದು 'ಅತ್ಗೆ'? ನಂಗ್ ಹೇಳಿಲ್ಲ? :)

ತೇಜಸ್ವಿನಿ ಹೆಗಡೆ said...

ಸುಶ್ರುತ,

ಇಷ್ಟೊಳ್ಳೆ ಬರ್ದಿದ್ದನ್ನ ಇಷ್ಟಲೇಟಾಗಿ ಓದಿದ್ದಕ್ಕೆ ಬೇಜಾರಗ್ತ ಇದ್ದು. ನಿಜ್ವಾಗ್ಲೂವಾ ಮನಸಿಗೆ ತಾಗ್ಹೊತು. ಅಮ್ಮ ಎನ್ನುವ ಪದವೇ ಹಾಂಗೆ. ಅಮ್ಮ ಹೇಳಿ ಕರೆಯಲೂ ಖುಶಿ..ಕರೆಸಕಂಬಲೂ ಖುಶಿ. ಮೊದ್ಲಿಂದನೂವಾ ಡಾ.ರಾಜಕುಮಾರ್ ನ ಈ ಹಾಡು ನಂಗೆ ರಾಶಿನೇ ಇಷ್ಟ.

ಅಮ್ಮ ನೀನು ನಮಗಾಗಿ,
ಸಾವಿರ ವರುಷ ಸುಖವಾಗಿ
ಬಾಳಲೇ ಬೇಕು ಈ ಮನೆ ಬೆಳಕಾಗಿ.

ಎಲ್ಲರ ಅಮ್ಮಂದ್ರೂ ಸಾವಿರಾರು ವರುಷ ಸುಖವಾಗಿ ಬಾಳಲಿ.

ಭಾವನೆಗಳಿಗೆ ಜೀವ ತುಂಬುತ್ತ... said...

beautiful man... vert very nice... yako ontara feel agtade...

Sushrutha Dodderi said...

ಹರ್ಷ,

ಏಯ್ ಬೇಜಾರ್ ಮಾಡ್ಕ್ಯಳಡ್ದಾ ದೋಸ್ತಾ.. ಈ ವರ್ಷ ಬಂದೇ ಬರ್ತ ನಿನ್ನಮ್ಮ, ನೋಡ್ಲಕ್ಕಡ.. ಕೊನೇಪಕ್ಷ, ಸೊಸೆ ಜೊತೆ 'ಮನೆ ಹೂಡಿಕೊಡಕ್ಕೆ' ಬರ್ತ, ಐಯಾಮ್ ಶೂರ್! ;)
ಕಮಾನ್, ಚೀರ್ ಅಪ್. :-)

ವೇಣು,

ಹೌದು, ಎಷ್ಟ್ ಜನ ಬರ್ದಿದಾರೆ ಅಮ್ಮನ ಬಗ್ಗೆ.. ಬಹುಶಃ ಈ ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಗೆ ಪಾತ್ರಳಾದ ಜೀವಿ 'ಅಮ್ಮ'ನೇ ಇರಬೇಕು.. ಯಾಕೇಂದ್ರೆ, ಅವ್ಳಷ್ಟು ಪ್ರೀತಿಸೋ ಜೀವೀನೂ ಮತ್ತೊಂದಿಲ್ಲ..! ಅಲ್ವಾ?
ಥ್ಯಾಂಕ್ಸ್..

ಅಸತ್ಯ ಅನ್ವೇಷಿ,

ಸಾರಿ ಸರ್.. ಅಳಿಸ್ಬೇಕು ಅಂತ ಬರ್ದಿದ್ದಲ್ಲ.. ಅಮ್ಮ ಬೆಂಗಳೂರಿಗೆ ಬಂದಿದ್ದು ನನ್ನ ಪಾಲಿಗೊಂದು ದೊಡ್ಡ ಸಂಭ್ರಮ.. ಅದನ್ನ ಬರೆಯದೇ ಇರಲಿಕ್ಕೆ ಸಾಧ್ಯ ಆಗ್ಲಿಲ್ಲ.. ಆದ್ರೆ ಬರೀತಾ ಬರೀತಾ ನಂಗೇ ಅಳು ಬಂದ್ಬಿಡ್ತು.. :'(

ಶ್ರೀನಿಧಿ,

ಧನ್ಯ!
ಅಮ್ಮನ್ನ ಟೀವೀಲಿ ತೋರ್ಸಿದ್ದಕ್ಕೆ ಥ್ಯಾಂಕ್ಸ್.. ಆದ್ರೆ ಅದ್ಯಾವಾಗ ಬಂತೇನ, ಅಮ್ಮ ನೋಡಿದ್ಲಾ ಇಲ್ಯಾ.. ಇವತ್ ಫೋನ್ ಮಾಡಿದಾಗ ಕೇಳವು. :-\

Sushrutha Dodderi said...

ಮಂಜಣ್ಣ,

:D :D ಏಯ್ ಅಂಗಿ ಹಾಕ್ಯಂಡೇ ಮಲ್ಕ್ಯಂಡಿದ್ನೋ ರಾತ್ರಿ..ಆದ್ರೆ ಲುಂಗಿ ಉಟ್ಕಂಡಿದಿದ್ದಿ, ಅದ್ನ ಬಿಚ್ಹಾಕಿ ಪ್ಯಾಂಟ್ ಹಾಕ್ಯಂಡ್ ಹೊಂಟಿ ಅಂತ ಬರ್ದಿದ್ದು.. ;D
ಗೌರಿ ಚಿಕ್ಕಿಗೆ ಖುಶಿಯಾಗಿದ್ದು ಹೌದು. ನಿನ್ನೆ ಫೋನ್ ಮಾಡಿದಾಗ 'ಒಳ್ಳೇ ಮಜಾ ಅನುಭವನಪ' ಹೇಳ್ತಿತ್ತು.. ;D
ದೊಡ್ಡಮ್ಮನ ಬಗ್ಗೆ ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್..

ಶ್ರೀ,

ಶ್.....! ;) ;) ;)

ತೇಜಸ್ವಿನಿ,

ಥ್ಯಾಂಕ್ಸ್ ಅಕ್ಕಾ.. ರಾಜ್‍ಕುಮಾರ್ ಹಾಡು ನಂಗೂ ಇಷ್ಟ. :-)
"ಅಮ್ಮ ಹೇಳಿ ಕರೆಯಲೂ ಖುಶಿ..ಕರೆಸಕಂಬಲೂ ಖುಶಿ." -ಥ್ಯಾಂಕ್ಸ್ ಫಾರ್ ದಟ್ ಪಾಯಿಂಟ್!

sunil,

Thanks Sunil.

ನಾವಡ said...

ಅಮ್ಮ ಕಣ್ತುಂಬಿಕೊಂಡಿಬಿಟ್ಟಳು. ಎಲ್ಲರ ಅಮ್ಮ ಒಂದೇ ಅನಿಸಿಬಿಡುತ್ತೆ, ಮಕ್ಕಳ ಹಾಗೆ !
ಒಳ್ಳೆಯ ಬರಹ. ಕೆಲಸದಲ್ಲೇ ಖುಷಿ ಪಡುತ್ತಾ ಜೀವನಪ್ರೀತಿ ಉಳಿಸಿಕೊಂಡ ಒಂದು ತಲೆಮಾರೇ ಹೋಗುತ್ತಿದೆ ಅನಿಸುತ್ತಿದೆ. ಅದನ್ನೇ ನಮ್ಮಲ್ಲೂ ಉಳಿಸಿಹೋಗಲಿ ಎಂಬುದು ಸದಾಶಯ.
ನಾವಡ

ಸಿಂಧು sindhu said...

ಚೊಲೋ ಇದ್ದು ಸುಶ್ರುತ,

ತನ್ನದೇ ಕುಡಿಯೊಂದು ಚಿಗುರಿ ಹೂಬಿಡುವುದನ್ನು ನೋಡುವ ಖುಷಿ ಮತ್ತು ಪ್ರೀತಿಯ ಈ ಗಾಢತೆ ಅಮ್ಮನಿಗೆ ಮಾತ್ರ ಸಾಧ್ಯ.
ಮತ್ತು ನೀನದನ್ನು ಅಕ್ಷರಕ್ಕಿಳಿಸಿದ ರೀತಿ ಅನನ್ಯ.

ಇಷ್ಟವಾಯಿತು.
ಪ್ರೀತಿಯಿಂದ
ಸಿಂಧು

Shiv said...

ಸುಶ್,
ನೀನು ಯಾಕಾಪ್ಪ ಹೀಗೆ ನಮ್ಮ ಕಣ್ಣಲ್ಲಿ ನೀರು ಬರಿಸೋದು..
ತುಂಬಾ ಆತ್ಮೀಯವಾಗಿತ್ತು ಕಣೋ..

ಅಂದಾಗೆ ಅತ್ತಿಗೆ ವಿಷ್ಯ ತಿಳಿಯಲಿಲ್ಲ ಗುರುವೇ...;)

Ashwini Kumar Bhat said...

Hay Sushrutha,
tumba chennagi baradde... sikkapatte touch aatu feelings ge... enna badiyinda ondu warm thanks itga! :)

- Sumasuta

Sushrutha Dodderi said...

ನಾವಡ,

ಧನ್ಯವಾದ. ನಿಮ್ಮಾಶಯಕ್ಕೂ. :-)

ಚಿಂದಕ್ಕ,

ಹೌದೌದು.. ಟೆಂಕೂ..:-)

shiv,

ಏನೂ ಎಲ್ರಿಗೂ ಅತ್ಗೆ ಬಗ್ಗೆ ಇಷ್ಟೊಂದು ಕುತೂಹಲ...?? ಇರ್ರೀ ಸ್ವಲ್ಪ ದಿನಾ...! ;)

ಥ್ಯಾಂಕ್ಸಣ್ಣೋ..

Sumasuta,

Prathi thanks: Warm thanks-ge. ;-)

ಮನಸ್ವಿನಿ said...

ತುಂಬಾ ಚಂದ ಇದೆ ಬರಹ ಸುಶ್.

ಅತ್ಗೆ ಅಂತೆಲ್ಲಾ ಇಲ್ಲಿವರೆಗೂ ಕೇಳ್ಸ್ತಾ ಇದೆ...ಏನದು? ;)

Seema S. Hegde said...

ಸುಶ್ರುತ,
ನಾನು ಓದಿದ್ದು late. ಹೇಳದೆಲ್ಲಾ ಎಲ್ಲರೂ ಹೇಳಿ ಮುಗಿಸಿದ್ದ. ಚೊಲೋ ಇದ್ದು.... ಇನ್ನೇನೂ ಹೆಚ್ಚಿಗೆ ಹೇಳಲಾರೆ.

Seema S. Hegde said...

ಹಾ! ಹೇಳಲ್ಲೇ ಮರೆತು ಹೋಗಿತ್ತು ನೋಡು,
ನಾನು ನಾಲ್ಕು ವರ್ಷ ಧಾರವಾಡದಲ್ಲಿ hostel ನಲ್ಲಿ ಇದ್ದಾಗ ಅಮ್ಮ ಒಂದು ದಿನ ನಿನ್ನ hostel ನಲ್ಲಿ ಬಂದು ಇರ್ತಿ ಹೇಳ್ತಾ ಇತ್ತು; ಸುಮ್ನೆ hostel life ನೋಡವು ಹೇಳಿ. ಮನೆ ತೊಂದ್ರೆ ಸುಧಾರಿಸಿ ಮುಗದ್ದೇ ಇಲ್ಲೇ. ಅದ್ಕೆ ಬರಲ್ಲೇ ಆಜಿಲ್ಲೆ:( ನೀನು ಬರದಿದ್ದು ಓದಿದ ಮೇಲೆ ಅದೆಲ್ಲಾ ಮತ್ತೆ ನೆನಪಾತು.

Anonymous said...

ಬಹಳ ಚೆನ್ನಾಗಿದೆ ಬರಹ. ಅಮ್ಮಂದಿರೇ ಹಾಗೆ ಅಲ್ಲವೆ?

-ನೀಲಾಂಜನ

Sushrutha Dodderi said...

ಮನಸ್ವಿನಿ,

ಅಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯೋ...! ನಾನು ಯಾಕಾದ್ರೂ ಅತ್ಗೆ ಸುದ್ದಿ ಎತ್ತಿದ್ನಪ್ಪಾಆಆಆಆಆ!
ಎಂಥ ಅತ್ಗೇನೂ ಇಲ್ಲೆ ಮಾರಾಯ್ತಿ, ಆ ಮಧುಗೆ ಬೇರೆ ಕೆಲ್ಸಿಲ್ಲೆ, ಏನೇನೋ ಮೆಸೇಜ್ ಕಳುಸ್ತ. ಅಷ್ಟೇ. ;)
ಅಂದ್‍ಹಾಗೇ, ಚನಾಗಿದ್ದೂಂದಿದ್ದಕ್ಕೊಂದು ಥ್ಯಾಂಕ್ಯೂ.:-)

seema,

ಹ್ಮ್.. :( ಹೋಗ್ಲಿ ಬಿಡು.. ಹೆಂಗಸ್ರು ಕೆಲ್ಸ ಎಲ್ಲ ಪೂರೈಸಿ ಬಪ್ದು ಯಾವಾಗ್ಲೂ ಲೇಟೇ. ಅದ್ರಲ್ಲೂ ಅಮ್ಮಂದ್ರು. :O

ಧನ್ಯವಾದ, ಪ್ರತಿಕ್ರಿಯೆಗೆ.

neelanjana,

ಕರೆಕ್ಟ್! 100%! ಥ್ಯಾಂಕ್ಸ್!

ಅನಂತ said...

@ಸುಶ್ರುತ
ಹೀಗೆ ಸುಮ್ನೆ... ;) ಎಲ್ಲರನ್ನೂ ಅಳಿಸ್ತಿದಿರಲಾ, ಜನ ಎಲ್ಲಿ ನಗುವುದನ್ನ ಮರೆತುಬಿಡ್ತಾರೇನೋ ಅಂತ ನಕ್ಕೆ ಅಷ್ಟೆ.. :)
ಸಕ್ಕತ್ತಾಗಿ ಬರ್ದಿದಿರಾ.. ಎಂದಿನಂತೆ... :)

Srikanth - ಶ್ರೀಕಾಂತ said...

ಮನಸ್ಸಿನ ಭಾವನೆಗಳು ಪದಗಳಲ್ಲಿ ಸೊಗಸಾಗಿ ಕಾಣುತ್ತಿವೆ. ಅದ್ಭುತವಾದ, ಮನಮುಟ್ಟುವ ಲೇಖನ!

Sushrutha Dodderi said...

ಅನಂತ,

ಹಹ್ಹ! ಸರಿಯಾತು ಬಿಡು. :)

ಶ್ರೀಕಾಂತ್,

ಥ್ಯಾಂಕ್ಸ್ ಭಯ್ಯಾ..

ಪಯಣಿಗ said...

Pure!!!!!! I cannot dilute my appreciation for your article by using more words.

Sushrutha Dodderi said...

@ ಪಯಣಿಗ,

!!
Thank you!

ರವಿ ಕೃಷ್ಣಾ ರೆಡ್ಡಿ said...

ಸುಶ್ರುತ,

ಇತ್ತೀಚಿನ ದಿನಗಳಲ್ಲಿ ನನ್ನನ್ನು (ವೈಯಕ್ತಿಕ ಕಾರಣಗಳಿಗೆ) ಕಾಡಿದ ಲೇಖನ ಇದು. ಬಹುಶಃ ನಾನೂ ಸಹ ನಿಮ್ಮಂತಹದೆ ಅನುಭವವನ್ನು ಒಂದೆರಡು ವಾರದಲ್ಲಿ ನನ್ನದಾಗಿಸಿಕೊಳ್ಳಲಿದ್ದೇನೆ ಎನ್ನುವುದೆ ಅದಕ್ಕೆ ಕಾರಣ. ಇದೇ ಸಮಯದಲ್ಲಿ ನನ್ನ ಇತರ ಆಸಕ್ತಿ ಮತ್ತು ಕಾಳಜಿಗಳು ನಾನು ಮಗುವಾಗುವುದನ್ನು ಕಸಿದುಕೊಳ್ಳದೆ ಇರಲಿ ಎಂದು ಬಯಸುತ್ತೇನೆ.

ಈಗ ತಾನೆ ಬರೆದಿದ್ದ ಒಂದೆರಡು ವಾಕ್ಯಗಳನ್ನು ಅಳಿಸಿ, ಇಷ್ಟನ್ನು ಮಾತ್ರ ಬರೆಯುತ್ತಿದ್ದೇನೆ. ಇಲ್ಲಿ ಏನು ಬರೆಯಬೇಕೆಂದರೂ ಆ ಪದಗಳಿಗಿಂತ ನನ್ನ ಚಿತ್ತ ವಿಹಾರವೆ ಮುಖ್ಯವಾಗುತ್ತಿದೆ. ಎಲ್ಲೆಲ್ಲಿಗೊ ಎಳೆಯುತ್ತಿದೆ. ಅದಕ್ಕಿಲ್ಲಿ ಪದಗಳಲ್ಲಿ ನ್ಯಾಯ ಕೊಡಲಾರೆ.

ನಮ್ಮ ಸಜ್ಜನಿಕೆ ಮತ್ತು ಒಳ್ಳೆಯತನ ನಮ್ಮ ಬಾಂಧವ್ಯಗಳಲ್ಲಿ, ಸ್ನೇಹದಲ್ಲಿ, ನಾವು ತೋರಿಸುವ ಪ್ರಾಮಾಣಿಕ ಪ್ರೀತಿಯಲ್ಲಿದೆ ಮತ್ತು ಅದು ಈ ಬರಹದಲ್ಲಿ ಕಾಣಿಸಿದೆ ಎಂದಷ್ಟೆ ಹೇಳಲು ಬಯಸುತ್ತೇನೆ.

ರವಿ...
http://amerikadimdaravi.blogspot.com

lokesh mosale said...

amma badiddalu odide. collagu dinagalu nenapaadavu

ಅರವಿ೦ದ said...

Sushruta, manada aalada maathugalanna bicchi aadiddikke dhanyavaadagalu. Amma hegidaare?

Sushrutha Dodderi said...

ರವಿ ಕೃಷ್ಣಾ ರೆಡ್ಡಿ,

ಸರ್ ನಮಸ್ಕಾರ. ನೀವು ನನ್ನ ಬ್ಲಾಗಿಗೆ ಬಂದಿದ್ದು, ಪ್ರತಿಕ್ರಿಯಿಸಿದ್ದು ಖುಶಿಯ ವಿಷಯ.

ಬರೆಯಬೇಕಾದರಾಗಲಿ, ಬರೆದಾದಮೇಲಾಗಲೀ ಈ ಲೇಖನ ಇಷ್ಟೆಲ್ಲ ಜನರ ಭಾವನೆಗಳ ಸುನೀತ ತಂತುಗಳನ್ನು 'ತಾಕೀತು' ಎಂದು ನಾನು ಖಂಡಿತ ಅಂದುಕೊಂಡಿರಲಿಲ್ಲ. ನನ್ನೆಲ್ಲಾ ಉಳಿದ ಲೇಖನಗಳಷ್ಟೇ ಪ್ರೀತಿಯಿಂದ ಇದನ್ನು ಬರೆದೆ ಅಷ್ಟೇ. ಆದರೆ ಈ ಲೇಖನಕ್ಕೆ ಬಂದಿರುವ / ಬರುತ್ತಿರುವ ಪ್ರತಿಕ್ರಿಯೆಗಳು ನನಗೆ ದಂಗು ಬಡಿಸುತ್ತಿವೆ. ಕಂಡು ಕೇಳರಿಯದೂರಿನವರಿಂದೆಲ್ಲ ಈಮೇಲ್ ಬರುತ್ತಿದೆ.

ನನ್ನಮ್ಮನ ಬಗ್ಗೆ ಬರೆದ ಈ ಪುಟ್ಟ ಲೇಖನವನ್ನ ಮೆಚ್ಚಿಕೊಂಡ, ಹೀಗೆ ಯಾರದೋ ಕತೆ ಓದಿ ಕಣ್ಣೊದ್ದೆ ಮಾಡಿಕೊಂಡ, ನಿಮಗೆಲ್ಲ ನನ್ನದೊಂದು ಹ್ಯಾಟ್ಸಾಫ್! ಎಷ್ಟೊಳ್ಳೆಯ ಮನಸುಗಳು ನಿಮ್ಮೆಲ್ಲರದು..!

ಥ್ಯಾಂಕ್ಸ್! ಥ್ಯಾಂಕ್ಸ್ ಅ ಲಾಟ್!

lokesh,

ಪ್ರತಿಕ್ರಿಯೆಗೆ ಧನ್ಯವಾದ.

arvinda,

ನಿಮಗೂ ಧನ್ಯವಾದ. ಅಮ್ಮ ಅರಾಮಿದಾಳೆ. ನಿನ್ನೆ ಮನೆಗೆ ಫೋನ್ ಮಾಡಿದಾಗ ಅವಳಿಗೆ ನಾನು ಬರೆದ ಈ ಲೇಖನದ ಬಗ್ಗೆ, ಅದಕ್ಕೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬರುತ್ತಿರುವ ಬಗ್ಗೆ ಹೇಳಿದೆ. 'ಅಷ್ಟೆಲ್ಲಾ ಜನ ಓದ್ತಿದ್ದ ಅಂದ್ರೆ ಅದೇನ್ ಬರದ್ಯೋ ಮಾರಾಯಾ..! ಪ್ರಿಂಟ್ ಮಾಡಿ ಪೋಸ್ಟಲ್ ಕಳ್ಸು ನೋಡನ' ಅಂದ್ಲು.

ಈ ಎಲ್ಲ ಪ್ರತಿಕ್ರಿಯೆಗಳ ಸಮೇತ ಕಳುಹಿಸುತ್ತಿದ್ದೇನೆ ಇವತ್ತು..

ಥ್ಯಾಂಕ್ಸ್!

MD said...

ಡಿಟ್ಟೋ ಅಂದ್ರೆ ಡಿಟ್ಟೋ ಅನುಭವ.
ನಾನು ಹೇಳಿದ್ದ ಅನುಭವಗಳನ್ನು ನೀವು ಬರೆದು ಬ್ಲಾಗಿಸಿದ್ದೀರೇನೋ ಅನ್ನುವಷ್ಟು !
ಸುಶ್ರುತ ನೀವು ಹೇಳಿದ ಹಾಗೆ "ಬಹುಶಃ ಎಲ್ಲ ಅಮ್ಮಂದಿರೂ ಹೀಗೇನೇನೋ".

'ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು' ಹ್ :-(
ಅಮ್ಮನನ್ನು ಕಂಡ ಅವಳ ಪ್ರೀತಿಯನ್ನುಂಡ ನಾವೆಲ್ಲ ಎಷ್ಟೊಂದು ಲಕ್ಕಿ ಅಲ್ವಾ?

'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು'
ಎಷ್ಟೇ ದೊಡ್ಡವರಥರಾ ಆಡಿದ್ರು ನಾವು ಅವಳ ಮುಂದೆ ಎಷ್ಟೊಂದು ಚಿಕ್ಕವರು. ಅಲ್ಲಾ?

ಐದನೇ ವಯಸ್ಸಿನಲ್ಲಿಯೇ ಅವಳ ಮೇಲೆ ರೋಪು ಹಾಕೋಕೆ ಶುರು ಹಚ್ಚಿಕೊಂಡಿರ್ತೇವೆ. ನಾವು ಚಿಕ್ಕವರಾಗಿದ್ರೂ ನಮ್ಮ ರೋಪುಗಳಿಗೆ ಬಹುಶಃ ಅವಳೊಬ್ಬಳೇ ಗೌರವಿಸಿದ್ದು.
ಹೇಗನಿಸುತ್ತೆ?

Sushrutha Dodderi said...

ನಿಜ ಎಂಡೀ.. ಸಣ್ಣ ಕಾರಣಕ್ಕೂ ಸಿಡುಕುತ್ತಿರುತ್ತೇವೆ.. ಆದ್ರೆ ಆಕೆ ಅದನ್ನ ಎಷ್ಟು ಬೇಗ ಕ್ಷಮಿಸ್ತಾಳೆ..

ಧನ್ಯವಾದ..

Shubhada said...

ನಿಮ್ಮ ಬರಹವನ್ನು ತುಂಬ ತಡವಾಗಿ ಇಂದು ಓದಿದೆ. ನಿಜಕ್ಕೂ ಮನ ತಟ್ಟಿತು. ವಸುಧೇಂದ್ರರ ‘ನನ್ನಮ್ಮ ಅಂದ್ರೆ ನನಗಿಷ್ಟ’ ಓದುವಾಗಲೂ ಕಣ್ಣಲ್ಲಿ ಹನಿ ಜಿನುಗಿತ್ತು. ನಿಮ್ಮ ಬರಹವೂ ಅದೇ ಅನುಭವ ಕೊಟ್ಟಿತು. ಅಭಿನಂದನೆಗಳು.

ಶುಭದಾ

Nagaraj MM said...

ಸುಶ್ರುತ ಅವರೇ,
ಅತ್ಯದ್ಭುತ ಲೇಖನ , ಮನಮುಟ್ಟುವ ಸಾಲುಗಳು, ಅಮ್ಮನ ವಾತ್ಸಲ್ಯ ,ಮುಗ್ದತೆ ಎಲ್ಲವನ್ನು ಸುಂದರವಾಗಿ ಬರೆದಿದ್ದೀರಿ .

ಧನ್ಯವಾದಗಳು
ನಾಗರಾಜ್ ಎಂ ಎಂ

Sushrutha Dodderi said...

ಶುಭದಾ,
ಧನ್ಯವಾದ. ನಿಮ್ಮ ಬ್ಲಾಗು ಚೆನ್ನಾಗಿದೆ. :-)

raj,
ಧನ್ಯವಾದ ರಾಜ್.

Unknown said...

hi,sushruta,
estudina internet elde odakkagalle anta bejaraytu.tumba chennagi baradde.nangu nanna atte dubaige bandiddu nenapagtu.avalu kobarimitayi madidlu,eskelotor hattakke hedriddu,ella nenapagtu

Sushrutha Dodderi said...

@ pushpa,

ಥ್ಯಾಂಕ್ಸ್ ಪುಷ್ಪಾ.. ಅದು ಹಾಗೇ, ಯಾರದೋ ಕನ್ನಡಿಯಲ್ಲಿ ನಮ್ಮ ಬಿಂಬ ಕಂಡಹಾಗೆ.. ..

Srujana Bhat said...

Ammana nishkalmasha preetige ondu pavitravada arpane....Idanna ninna ammange torsu, Raashi khushi patgattu.

Sushrutha Dodderi said...

@ spandana,

Thorsidi.. ammana kaNNalli aanandada maLe..

ಗಿರೀಶ ಕೆ ಎಸ್ said...

ಇಂಗೆ ನೆಟ್ಟಲ್ಲಿ ಅಲ್ದಾಡ್ತಾ ಇದ್ದಾಗ ನಿಮ್ಮ ಬ್ಲಾಗ್ ಕಣ್ಣಿಗ್ ಬಿತ್ತು. ಸರಿ ಅಂಗೆ ಹುಡುಕ್ತಾ ಇದ್ದೆ... ಈ ಪೋಸ್ಟ್ ಸಿಕ್ತು ಸಿವಾ.. ಓದ್ದೆ.. ಮನಸ್ಸಿಗೆ ಎನೋ ಒಂಥರಾ!!!
ನಿಜಕ್ಕೂ ಅಮ್ಮ ಅಂದ್ರೆ.... ಹಾಗೇನೆ.

ಇಂಗೆ ಬರಿತಾ ಇರಣ್ಣ.
ಗಿರೀಶ ಕೆ ಎಸ್
ಶಾರ್ಜಾ , ಯುಎಇ

Sushrutha Dodderi said...

Thanks Girish.. Barthiri..

Preethi Shivanna said...

ಕಣ್ಣೆಲ್ಲಾ ಒದ್ದೆ ...