ಪೆನ್ನು ಪುಟ್ಟಿ ಮತ್ತೆ ಸಿಟ್ಟು ಮಾಡಿಕೊಂಡಿದ್ದಾಳೆ! ಬ್ಲಾಗರ್ಸ್ ಮೀಟಿನ ಬಗ್ಗೆ ಬಂದ ಪ್ರತಿಕ್ರಿಯೆಗಳು, ಆಮೇಲಾದ ಗಲಾಟೆ, ಎಲ್ಲಾ ನೋಡಿ ಮುನಿದು ಮುದುಡಿಹೋಗಿದ್ದ ಮನಸು ಇನ್ನೂ ಪೂರ್ತಿ ರಿಪೇರಿಯಾದಂತಿಲ್ಲ. ಜತೆಗೆ ಅಕಾಲದಲ್ಲಿ ಸುರಿಯತೊಡಗಿದ ವರ್ಷಧಾರೆ ನನಗೆ ನೆಗಡಿಯನ್ನು ಕರುಣಿಸಿ, ನಾನು ಸೀನೀ ಸೀನೀ ಸೀನಿ, ಕರ್ಚೀಫಿನಿಂದ ಮೂಗೊರೆಸಿಕೊಂಡೂ ಕೊಂಡು, ಕನ್ನಡಿ ನೋಡಿಕೊಂಡರೆ ಮೂಗಿನ ಬದಲು ಅಲ್ಲಿ ಅರಳಿದ ಕೆಂಡಸಂಪಿಗೆ ಕಾಣುವಂತಾಗಿ, 'ವಿಕ್ಸ್ ಸೇದುವುದರಲ್ಲೂ ಒಂಥರಾ ಸುಖವಿದೆ ಕಣೋ' ಅಂತೆಲ್ಲಾ ಅವರಿವರ ಬಳಿ ಹಲುಬುತ್ತಾ, ತೀರಾ ಅಬ್ಬೇಪಾರಿಯಂತಾಗಿ ಹೋಗಿದ್ದೇನೆ.
ಬರೆಯಬೇಕಿದೆ ಏನಾದರೂ.. ನಾನು ಪ್ರತಿ ಹಬ್ಬಕ್ಕೂ ಸಾಮಾನ್ಯವಾಗಿ ಗೆಳೆಯರಿಗೆ, ನೆಂಟರಿಗೆ ನಾನೇ ತಯಾರಿಸಿದ ಗ್ರೀಟಿಂಗ್ಸ್ ಕಳುಹಿಸುತ್ತೇನೆ. ಆ ಗ್ರೀಟಿಂಗನ್ನೇ ಬ್ಲಾಗಿನಲ್ಲೂ ಹಾಕುತ್ತಿದ್ದೆ. ಆದರೆ ಈ ಯುಗಾದಿಗೆ ಅದನ್ನೂ ಮಾಡಲಾಗುತ್ತಿಲ್ಲ.
ಬರೀ ಭಾವನೆಗಳನ್ನು ಬರೆಯಬಾರದು ಎಂದುಬಿಟ್ಟರು ಅವರು.. ನಾನೂ ಒಪ್ಪಿಬಿಟ್ಟೆ. ಸೀರಿಯಸ್ಸಾಗಿ ಬರೆಯೋಣವೆಂದು ಸೀರಿಯಸ್ಸಾಗಿಯೇ ಕುಳಿತೆ ಮೊನ್ನೆ ರಾತ್ರಿ. ಆದರೆ ಏನೆಂದರೆ ಏನೂ ಬರೆಯಲಾಗಲಿಲ್ಲ. ಕೊನೆಗೆ ಬೇಸತ್ತು, ಪೆನ್ನು ಬೀಸಾಡಿ, ಒಂದು ವಾಕ್ ಹೋಗಿ ಬಂದರೆ ಸರಿಯಾಗಬಹುದೆಂದು, ರೂಂಮೇಟನ್ನೆಳೆದುಕೊಂಡು ಹೊರ ಹೊರಟೆ. ಆಗಸ ಮಿಂಚುತ್ತಿತ್ತು. ಯಾವಾಗ ಬೇಕಿದ್ದರೂ ಮಳೆ ಬರಬಹುದಿತ್ತು. ನಮ್ಮ ಮನೆಯಿಂದ ಹೊರಟು ಮೊದಲು ರೈಟಿಗೆ ಹೋಗಿ ಆಮೇಲೆ ಲೆಫ್ಟಿಗೆ ತಿರುಗಿ ಮತ್ತೆ ರೈಟಿಗೆ ತಿರುಗಿದರೆ ಅದು ಮಲ್ಲೇಶ್ವರಂಗೆ ಹೋಗುವ ಹದಿನೇಳನೇ ಕ್ರಾಸ್ ರಸ್ತೆ. ಪಕ್ಕದಲ್ಲೊಂದು ಗೂಡಂಗಡಿ. ಅಲ್ಲಿ ಚಿಕ್ಕಿ ತಗೊಂಡು ತಿನ್ನುತ್ತಾ ಹೋಗುವುದು.. ಒಂದು ಬ್ರಿಜ್ ಸಿಗುತ್ತದೆ. ಹನ್ನೊಂದೂ ವರೆಗೆ ಸರಿಯಾಗಿ ಆ ಬ್ರಿಜ್ಜಿನಡಿ ಪೋಂಕನೆ ಸದ್ದು ಮಾಡುತ್ತಾ ಒಂದು ರೈಲು ಹೋಗುತ್ತದೆ. ಅದನ್ನು ನೋಡಿಕೊಂಡು ಹಾಗೇ ಸ್ವಲ್ಪ ಮುಂದೆ ಹೋಗುತ್ತೇವೆ.. ಅಲ್ಲಿ ನಮಗೊಂದು ಜೋಡಿ ಬಲೂನು ಸಿಗುತ್ತದೆ. ಒಂದು ಬಿಳೀ, ಇನ್ನೊಂದು ನೀಲಿ. ಎರಡೂ ಬಲೂನುಗಳ ಮೇಲೂ ಅಲ್ಲಲ್ಲಿ ಕರೀ ಚುಕ್ಕಿಗಳು. ನನ್ನ ರೂಂಮೇಟು ಅದನ್ನು ಕಂಡವನೇ ಓಡಿ ಹೋಗಿ, 'ಏಯ್ ನನ್ ಮಗ್ನೇ.. ಓಡೀಬೇಡಲೇ..' ಎಂಬ ನನ್ನ ಕೂಗು ಕೇಳುವುದರೊಳಗೇ, ಒಂದು ಬಲೂನನ್ನು ಕಾಲಲ್ಲಿ ಗುದ್ದಿ ಒಡೆದು ಬಿಡುತ್ತಾನೆ. 'ಪಾಠ್' ಎಂಬ ಶಬ್ದವೊಂದು ಇದೀಗ ತಾನೇ ದೂರಾದ ರೈಲಿನ ಶಬ್ದದೊಂದಿಗೆ ಲೀನವಾಗುತ್ತದೆ.
ಇನ್ನುಳಿದ, ಮೊಲದ ಮರಿಯಂತಹ ಬಿಳೀ ಬಲೂನನ್ನು ನಾನು ಎತ್ತಿಕೊಳ್ಳುತ್ತೇನೆ. ಅದರ ಮೈಯನ್ನು ಕೈಯಲ್ಲಿ ನೇವರಿಸುತ್ತೇನೆ. ಎಷ್ಟೊಂದು ನೆನಪುಗಳು ಆ ಸ್ಪರ್ಶದಲ್ಲಿ..! ಅಮ್ಮನ ಕೈ ಹಿಡಿದು ಅಪ್ಪನ ಜೊತೆ ಹೋಗಿ ಮಳ್ಗದ್ದೆ ಜಾತ್ರೆಯಲ್ಲಿ ಕೊಂಡಿದ್ದ ಬಲೂನು, ಸಾಗರದ ಜಾತ್ರೆಯಲ್ಲಿ ಭಾಗ್ಯತ್ಗೆ ಕೊಡಿಸಿದ್ದ ಬಲೂನು, ಬೆಂಕ್ಟಳ್ಳಿ ಪುಟ್ಟಿಗೆ ಊದಿಕೊಡುವಾಗಲೇ ಒಡೆದುಹೋಗಿದ್ದ ಬಲೂನು (ಆಮೇಲೆ ಅವಳು ಅತ್ತಿದ್ದು-ಹೊಸ ಬಲೂನು ಬೇಕೂ ಎಂದು ಹಟ ಮಾಡಿದ್ದು-ಕೊನೆಗೆ ವಿಧಿಯಿಲ್ಲದೇ ಸೈಕಲ್ಲೇರಿ ಕರ್ಕಿಕೊಪ್ಪದಿಂದ ಬಲೂನು ತಂದುಕೊಟ್ಟಿದ್ದು), ಕಾಲೇಜಿನಲ್ಲಿ ಗೆಟ್-ಟುಗೇದರ್ ದಿನ ಊದಿ ಕೊಡಲೆಂದು 'ಅವಳು' ಕೊಟ್ಟಿದ್ದ ಹಾರ್ಟ್ ಶೇಪ್ ರೆಡ್ ಬಲೂನ್, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದಿದ್ದ ಅಶ್ವತ್ಥರ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ನೀಲಾಕಾಶಕ್ಕೆ ತೇಲಿಬಿಟ್ಟಿದ್ದ ಸಾವಿರ ಸಾವಿರ ಕಂತೆ ಕಂತೆ ಬಲೂನ್, ಚಂದ್ರಗುತ್ತಿ ಗುಡ್ಡದಲ್ಲಿ ಬಲೂನಿಂತೆಯೇ ಹಾರಿಹೋಗಿ ಕನಸಿನಂತೆ ಕಣ್ಮರೆಯಾಗಿದ್ದ ಬಿಳೀ ಕವರ್... ಆಹಾ.. ಊದಿದಷ್ಟೂ ಹಿಗ್ಗುವ ಬಲೂನಿನಂತೆ ನೆನಪುಗಳು.
ಮಳೆ ಬರತೊಡಗುತ್ತದೆ.. ನಾ ಕಾಣದ ಯಾವುದೋ ವ್ಯಕ್ತಿಯ ಉಸಿರನ್ನು ತುಂಬಿಕೊಂಡಿರುವ ಈ ಬಲೂನನ್ನು ಎದೆಗವಚಿಕೊಂಡು ಮನೆಗೆ ಬರುತ್ತೇನೆ. ಇನ್ನೊಂದು ಬಲೂನ್ ಒಡೆದದ್ದಕ್ಕಾಗಿ ನನ್ನಿಂದ ಬೈಸಿಕೊಂಡ ರೂಂಮೇಟ್ ಪೆಚ್ಚಾಗಿ ನಡೆದು ಬರುತ್ತಾನೆ ನನ್ನ ಹಿಂದೆ. ರೂಮಿಗೆ ಹೋಗಿ, ಸ್ಕೆಚ್ ಪೆನ್ನಿನಿಂದ ಆ ಬಿಳೀ ಬಲೂನಿನ ಮೇಲೆ ಒಂದು ಕಣ್ಣು ಬಿಡಿಸುತ್ತೇನೆ, ಪುಟ್ಟ ಮೂಗು, ಬಿರಿದ ತುಟಿ, ಎರಡು ಹುಬ್ಬುಗಳ ಮಧ್ಯೆ ಒಂದು ಚುಕ್ಕಿ ಇಟ್ಟರೆ ಥೇಟ್ ಅವಳ ಮುಖದಂತೆಯೇ ಕಾಣತೊಡಗುತ್ತದೆ ಬಲೂನ್.. ಕೆಳಗೆ ಅವಳ ಹೆಸರು ಬರೆಯುತ್ತೇನೆ. ಬಲೂನನ್ನು ತಬ್ಬಿಕೊಂಡು ತುಂಬ ಹೊತ್ತು ಹಾಗೆಯೇ ಕೂರುತ್ತೇನೆ. ಭಾವನೆಗಳ ಬಗ್ಗೆ ಬರೆಯಬಾರದು ಎಂದು ನಿಶ್ಚೈಸಿಕೊಂಡಿದ್ದು ಮರೆತುಹೋಗುತ್ತದೆ. ಸುಮಾರು ಹೊತ್ತಿನ ಮೇಲೆ ಯೋಚನೆಯಾಗುತ್ತದೆ. ಯೋಚಿಸಿದರೆ ಏನೂ ಹೊಳೆಯುವುದೇ ಇಲ್ಲ.
ಹೊಗೇನಕಲ್ಲಿನಲ್ಲಿ ನಡೆಯುತ್ತಿರುವ ಗಡಿ ವಿವಾದ, ಅದಕ್ಕಾಗಿ ಎಲ್ಲೆಲ್ಲೂ ಆಗುತ್ತಿರುವ ಪ್ರತಿಭಟನೆ, ಸತ್ಯಾಗ್ರಹ, ಗಲಾಟೆ, ದೊಂಬಿಗಳು.. ಈಗ ಎರಡು ವರ್ಷದ ಹಿಂದೆ ನಾನು, ಸಂತೋಷ, ರಾಘು ಹೋಗಿದ್ದೆವು ಹೊಗೇನಕಲ್ಗೆ. ಎಲ್ಲಿ ನೋಡಿದರೂ ಹುರಿದ ಕೆಂಪು ಮೀನಿನ ಮಾರಾಟ, ವಾಕರಿಕೆ ಬರುವಷ್ಟು ವಾಸನೆ, ಮಸಾಜ್ ಮಾಡುವವರ - ದೋಣಿಯವರ ದುಂಬಾಲು... ಸುಂದರ ಪ್ರವಾಸೀ ತಾಣವನ್ನು ಇಷ್ಟೊಂದು 'ಕಮರ್ಶಿಯಲೈಸ್' ಮಾಡಿದ್ದಕ್ಕಾಗಿ ನಾವು ಬೈದುಕೊಳ್ಳುತ್ತಾ, ಕೊನೆಗೆ ಒಂದು ತೆಪ್ಪ (ದೋಣಿ)ವನ್ನು ಚೌಕಾಶಿ ಮಾಡಿ ನೂರೈವತ್ತು ರೂಪಾಯಿಗೆ ಬುಕ್ ಮಾಡಿ ಯಾನ ಹೊರಟಿದ್ದೆವು.. ತೆಪ್ಪ ನಡೆಸಲಿಕ್ಕೆ ಸರ್ಕಾರದ ಲೈಸೆನ್ಸ್ ಬೇಕಂತೆ. ತಿಂಗಳಿಗೆ ಇಂತಿಷ್ಟು ಎಂದು ಅವರು ಕಟ್ಟಬೇಕು. ಅಲ್ಲದೇ ಪ್ರತೀ ಬೋಟ್ ಡ್ರೈವರ್ ಪ್ರತೀ ವಿಹಾರಕ್ಕೂ ಮುನ್ನ ದುಡ್ಡು ಕಟ್ಟಿ ಟಿಕೇಟ್ ಪಡೆದುಕೊಳ್ಳಬೇಕು. 'ಕಷ್ಟ ಸಾರ್.. ಇಷ್ಟೆಲ್ಲಾ ಮಾಡ್ಕೊಂಡು, ನಾವು ಕಾಸು ಮಾಡಿ ಹೆಂಡ್ರು ಮಕ್ಳುನ್ನ ಸಾಕೋದು ಅಂದ್ರೆ..' ಎಂದಿದ್ದ ದೋಣಿ ನಡೆಸುವವ. ಅವನ ಹೆಸರು ಸೆಲ್ವನ್. ಅವನ ಹೆಂಡತಿ ಕರ್ನಾಟಕದವಳು. ನಮ್ಮ ತೆಪ್ಪ ಅರ್ಧ ತಾಸಿನ ಮೇಲೆ ನೀರಿನ ಮಧ್ಯಕ್ಕೆಲ್ಲೋ ಬಂದಿದ್ದಾಗ 'ನೋಡೀ, ಇದೇ ತಮಿಳುನಾಡು-ಕರ್ನಾಟಕದ ಗಡಿ.. ಇದೇ, ಇಲ್ಲೇ ಬರುತ್ತೆ' ಎಂದಿದ್ದ ಸೆಲ್ವನ್. ಹೊಳೆಯ ಕೆಳಗೆಲ್ಲೋ ಮುಳುಗಿದ್ದ ಗಡಿ ನಮಗೆ ಕಂಡೇ ಇರಲಿಲ್ಲ. ಕರ್ನಾಟಕದ ರಾಜಧಾನಿಯಿಂದ ತಮಿಳುನಾಡಿಗೆ ಬಂದಿದ್ದ ನಮಗೆ, ಕನ್ನಡತಿಯೊಬ್ಬಳ ಗಂಡ ಸೆಲ್ವನ್ ತೋರಿಸಿದ್ದ ಗಡಿರೇಖೆ, ಊಹುಂ, ಕಣ್ಣಿಗಷ್ಟೇ ಅಲ್ಲ; ಮನಸಿಗೂ ಕಂಡಿರಲಿಲ್ಲ.. ಎಲ್ಲ ಎಲ್ಲೆಗಳನ್ನೂ ಮೀರಿ ಹೋಗುತ್ತಿತ್ತದು ವಿಹಾರ.. ಈಗಲ್ಲಿ ವಿವಾದ. ದೋಣಿ ಸಂಚಾರ ನಿಶೇಧವಾಗಿದೆಯಂತೆ. ಹೊಡೆದಾಟಗಳಾಗುತ್ತಿವೆಯಂತೆ. ಸೆಲ್ವನ್ ಮತ್ತವನ ಕುಟುಂಬ ಈಗ ಏನಾಗಿರಬಹುದು? ಯೋಚಿಸಿದರೆ ಮಂಕು ಕವಿಯುತ್ತದೆ.
ಚುನಾವಣೆ ಹತ್ತಿರಾಗುತ್ತಿದೆ. ಕ್ಷೇತ್ರ ಮರುವಿಂಗಡನೆ ಈ ದಿನಾಂಕದೊಳಗೆ ಆಗುತ್ತದೆ, ನಾಮಪತ್ರ ಸಲ್ಲಿಕೆಗೆ ಇದು ಕೊನೇ ದಿನ, ಬ್ಯಾನರ್ ಕಟ್ಟಲು ಇದು ಕೊನೇ ದಿನ, ನಾಮಪತ್ರ ಹಿಂತೆಗೆದುಕೊಳ್ಳಲು ಇದು ಕೊನೇ ದಿನ, ಈ ದಿನ ಚುನಾವಣೆ... ದಿನಾಂಕಗಳು ನಿಗಧಿಯಾಗುತ್ತಿವೆ, ಗಡಿಗಳು ಸೃಷ್ಟಿಯಾಗುತ್ತಿವೆ. ಮೊನ್ನೆ ನಾನು ಯೋಚಿಸುತ್ತಿದ್ದೆ: ಹೀಗೆ ನಾನು ಸಣ್ಣಪುಟ್ಟದ್ದಕ್ಕೆಲ್ಲ ತಲೆಕೆಡಿಸಿಕೊಂಡು, ಬೇಸರಗೊಂಡು, ಮೂಡೌಟ್ ಮಾಡಿಕೊಂಡು ಕೂರುತ್ತೇನೆ. ಆದರೆ ಪ್ರತಿದಿನ ಟೆನ್ಷನ್ ಮಾಡಿಕೊಳ್ಳುತ್ತಾ, ಒಬ್ಬರ ಮೇಲೊಬ್ಬರು ಆಪಾದನೆ ಹೊರಿಸುತ್ತಾ, ಜಗಳವಾಡುತ್ತಲೇ ಇರುತ್ತಾರಲ್ಲಾ ರಾಜಕಾರಣಿಗಳು, ಅವರಿಗೆ ಸ್ವಲ್ಪವೂ ಬೇಜಾರಾಗೊಲ್ಲವಾ? ಯಾವನಾದರೂ ಒಬ್ಬ ರಾಜಕಾರಣಿಗೆ "ಅಯ್ಯೋ ಸಾಕಾಗಿ ಹೋಯ್ತಪ್ಪ ಈ ರಾಜಕೀಯ! ಈ ಓಡಾಡೋದು, ಇವತ್ತು ಕಿತ್ತಾಡಿಕೊಂಡವರ ಜೊತೆಯೇ ನಾಳೆ ಮೈತ್ರಿಗಾಗಿ ಹೋಗುವುದು, ಜನರಿಗೆ ಸುಳ್ಳೇ ಆಶ್ವಾಸನೆಗಳನ್ನ ಕೊಡೋದು, ಎಲೆಕ್ಷನ್ನಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡೋದು, ಕೊನೆಗೆ ಗೆದ್ದು ಬಂದು ಅಧರ್ಮಮಾರ್ಗದಲ್ಲಿ ದುಡ್ಡು ಮಾಡೋದು.. ಎಲ್ಲಾ ಬೇಜಾರ್ ಬಂದುಹೋಯ್ತು! ಇಷ್ಟು ವರ್ಷ ರಾಜಕೀಯ ಮಾಡಿದ್ದು ಸಾಕು. ಇನ್ನು ಹಾಯಾಗಿ ಹೆಂಡತಿ-ಮಕ್ಕಳ ಜೊತೆ ಮನೇಲಿರ್ತೀನಿ" ಅಂತ ಅನ್ನಿಸಿಲ್ಲವಲ್ಲ? ಯೋಚಿಸಿದರೆ ಆಶ್ಚರ್ಯವಾಗತ್ತೆ, ಅಸಹ್ಯವಾಗತ್ತೆ. ಅದಕ್ಕೇ, ನಾನು ಯೋಚಿಸಬಾರದೆಂದು ನಿರ್ಧರಿಸುತ್ತೇನೆ.
ಇವತ್ತು ರಾತ್ರಿ ಯುಗಾದಿ ಹಬ್ಬಕ್ಕೆಂದು ಊರಿಗೆ ಹೊರಟಿದ್ದೇನೆ. ಸಾಕಾಗಿದೆ ಬೆಂಗಳೂರು. ಸಾಕಾಗಿದೆ ಟ್ರಾಫಿಕ್ಕು. ಸಾಕಾಗಿದೆ ಗಲಾಟೆ. ಸಾಕಾಗಿದೆ ಮಾತು. ಬೇಕಾಗಿದೆ: ಅಮ್ಮನ ಮಡಿಲು, ಅಪ್ಪನ ಜೊತೆ ಮೌನ, ತೊಂಭತ್ತಕ್ಕೂ ಹೆಚ್ಚು ಸಂವತ್ಸರಗಳನ್ನು ಕಂಡಿರುವ ಅಜ್ಜನೊಂದಿಗೆ ಮೆಲು ಸಂವಾದ, ಕೊಟ್ಟಿಗೆಯ ಕರುವಿನ ನೀಲಿ ಕಣ್ಣಲ್ಲಿ ಕಾಣಬೇಕಿರುವ ನನ್ನ ಬಿಂಬ... ಈ ಸಲದ ಚೈತ್ರ, ಫಾಲ್ಗುಣದ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಬರುತ್ತಿದ್ದಾನೆ: ಎಲ್ಲ ಗಡಿಗಳನ್ನೂ ಮೀರಿ.. ಹಿತ್ತಿಲ ಪೇರಲೆ ಗಿಡದಲ್ಲಿ ಹಣ್ಣಾಗಿವೆಯಂತೆ.. ಮಳೆಗಾಲಕ್ಕೆ ಮುನ್ನವೇ ಗಿಡಗಳೆಲ್ಲ ಚಿಗುರಿವೆಯಂತೆ.. ಬಾವಿಯಲ್ಲಿ ನೀರು ಬಂದಿದೆಯಂತೆ.. ಅಂಗಳದಲ್ಲಿ ಕಳೆ ಹಬ್ಬಿದೆಯಂತೆ.. ಅಪ್ಪನ ಬಾಯಲ್ಲಿ ವರ್ಣನೆ ಕೇಳುತ್ತಿದ್ದರೆ, ಅದೆಷ್ಟು ಬೇಗ ರಾತ್ರಿಯಾಗುತ್ತದೋ, ಬಸ್ಸು ಬರುತ್ತದೋ, ಊರು ತಲುಪುತ್ತೇನೋ ಎಂದು ತುಡಿಯುತ್ತಿದ್ದೇನೆ!
ನಿಮಗೆಲ್ಲಾ, ಯುಗಾದಿಯ ಹಾರ್ದಿಕ ಶುಭಾಶಯಗಳು..
19 comments:
ಥ್ಯಾಂಕ್ಸ್ ಸುಶ್ರುತ. ನಿನಗೂ ಯುಗಾದಿಯ ಶುಭಾಶಯಗಳು. ನಿನ್ನನ್ನು ನೊಡಿದ್ರೆ ನಂಗೆ ಹೊಟ್ಟೆ ಉರಿತಾ ಇದೆ. ನಾನು ಈ ಬಾರಿ ಹಬ್ಬಕ್ಕೆ ಊರಿಗೆ ಹೊಗ್ತ ಇಲ್ಲ. ಹಬ್ಬಕ್ಕೆ ತಯಾರಾಗೊ ಹೂರಣದ ಹೊಳಿಗೆನ ಈಗ್ಲಿಂದಾನೆ ಮಿಸ್ ಮಾದ್ಕೊಳಕ್ಕೆ ಶುರು ಮಾಡಿದಿನಿ. ಎಂಜಾಯ್ ಮಾಡು. ಮತ್ತೊಮ್ಮೆ ಯುಗಾದಿಯ ಶುಭಾಶಯಗಳು
ಲೇಖನ ಚೆನ್ನಾಗಿದೆ.
ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು!
happy ugadi dear. enjoy with the family.
"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.
ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com
ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.
ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.
ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.
I apologize for spamming, but no other way to inform :-(
ಒಂದು ಕ್ಷಣಿಕ ಸುಮಧುರ ಅನುಭವ, ಹಾಗು ಅದರ ನೆನಪು ನಿರಂತರ! - ಕಡೆ ಪಕ್ಷ ಮದುವೆಯಾಗುವೆ ವರೆಗೆ!
D.M.Sagar
ನಮಗೆಲ್ಲಾ ಊರಿನ ಹುಚ್ಚು ಬಿಡೋದು ಯಾವಾಗ ಮಾರಾಯ? ಎಂಥಾ ಕರ್ಮಬಂಧ?!
ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ಸಂಗತಿಗಳಿಗೂ ಬೇಕಾದಷ್ಟು ಭಾವ ಬೆರೆಸಿ ಅಮೋಘವಾಗಿ ಹೇಳುವ ರಶೀದರ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡ ! ಅವರು ಹೇಳಿದ್ದು ನಿನ್ನಂಥವರ ಬರವಣಿಗೆಗಲ್ಲ. ಸೂಕ್ಷ್ಮವೇ ಇಲ್ಲದೆ ಭಾವಗಳಲ್ಲೇ ತೇಲಿಹೋಗುವ, ಕಾಲೇಜು ಹುಡುಗರ (ಡಮ್ಮಿ!) ಲವ್ಲೆಟರ್ನಂತಿರುವ ಬರೆಹಗಳ ಬಗ್ಗೆ.
ನಾವು 'ಸರ್ವಧಾರಿ'ಗಳಾಗಿರೋಣ. ಶುಭಾಶಯಗಳು.
ಇದೆಲ್ಲ ಕಥೆ ಬೇಡ, ನಾನು ಆ ಬಲೂನು ನೋಡ್ಬೇಕು! :P
HEY NICE BLOG COOL POST REALLY NICE ONE REALLY ENJOYED GOIN THROUGH IT
WITH REGARDS
EDGAR DANTAS
www.gadgetworld.co.in
ಭಾವನೆಗಳ ಲಹರಿ ಚೆನ್ನಾಗಿ ಸಾಗಿದೆ. ಯುಗಾದಿಯ ಶುಭಾಶಯಗಳು.
yene aadroo nin friend-u balloon odeebaardittu ... :-)
hosa varsha hechchu hechchu balloon tarli!!!
ಸದ್ಯ, ಅಂತೂ ಯುಗಾದಿ ಹಬ್ಬಕ್ಕೆ ಒಂದು ಪೋಸ್ಟ್ ಬಂತಲ್ಲ :-)) ಮುಂದಿನ ಹಬ್ಬ ಯಾವಾಗ? :-)
ನಿನ್ನ ಪೆನ್ನುಪುಟ್ಟಿಗೆ ಯಾಕೆ ಬೇಸರ? ನಿನಗೆ ಪ್ರೀತಿ ಎನಿಸಿದ್ದನ್ನ, ಇಷ್ಟಪಟ್ಟದ್ದನ್ನ ಬರೆ ಮಾರಾಯ. ಯಾವ ಯಾವದೋ ನಿಯಮಗಳನ್ನೆಲ್ಲ ನಮ್ಮ ಮೇಲೆ ಎಳೆದುಕೊಂಡರೆ ಹೊಸದೇನೂ ಹುಟ್ಟುವುದಿಲ್ಲ. ತೇಜಸ್ವಿ, ಜಯಂತ, ವಿವೇಕ ಇಷ್ಟವಾಗುವುದು ಅವರ ಶೈಲಿಗಳ ಅನನ್ಯತೆಯಿಂದಾಗಿಯೇ. ಯಾರದೋ ನಿಯಮಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ಕೂತಿದ್ದರೆ ಏನೂ ಆಗಿತ್ತಿರಲಿಲ್ಲ. "ಭಾವ ಬರೆಯಕೂಡದು", "ಓದುಗರಿಗೆ ಹತ್ತಿರವಾಗಬಾರದು" ಅಂತೆಲ್ಲ ಅನ್ನೋದು ಯಾಕೊ ಸರಿ ಅನ್ನಿಸ್ತಿಲ್ಲ. ಬ್ಲಾಗು ಮುಕ್ತ ಅಭಿವ್ಯಕ್ತಿ ಮಾಧ್ಯಮ. ಗಂಭೀರ ಸಾಹಿತ್ಯವೂ ಬ್ಲಾಗುಗಳ ಒಂದು ಸಾಧ್ಯತೆ. ಆದರೆ ಸಾಹಿತ್ಯವೊಂದೆ ಅದರ ಸಾಧ್ಯತೆ ಅಲ್ಲ. ಬಹುಶಃ ಕನ್ನಡ ಬ್ಲಾಗು ಲೋಕ ಇನ್ನೂ ಶೈಶವಾವಸ್ಥೆಯಲ್ಲಿರೋದೆ ಇಂತಹ ನಿಯಮಗಳಿಗೆಲ್ಲ ಕಾರಣವಿರಬಹುದು. ಹೆಚ್ಚಿನೆಲ್ಲ ಬ್ಲಾಗರುಗಳೂ ಒಂದೇ ತೆರನಾದ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದಿರುವುದೂ ಕನ್ನಡ ಬ್ಲಾಗುಗಳ ಏಕತಾನಕ್ಕೆ ಕಾರಣ ಇರಬಹುದು. ಆದಷ್ಟೂ ಹೊಸತನವಿದ್ದು ನಿನ್ನದೇ ಛಾಪು ಇದ್ದರೆ ಸರಿ. ಭಾವನೋ, ಅಕ್ಕನೋ, ಏನೋ ಒಂದು. ಮಂಡೆ ಬಿಸಿ ಮಾಡ್ಕೊಳ್ಬೇಡ. ಈ ಲೇಖನ ಇಷ್ಟ ಆಗ್ಲಿಲ್ಲ. ನೀನು ಸೋತವನ ಹಾಗೆ, ನಿರಾಶಾವಾದಿ ಥರ ಕಾಣಿಸ್ತ್ಯ.
ನೋಡು, ಪುಟ್ಟಣ್ಣ. ನೀನು ಹೀಂಗೆಲ್ಲ ಬರೆದ್ರೆ ನಿನ್ನ ಅಭಿಮಾನಿನಿಯರೆಲ್ಲ ಓಡೋಗ್ತಾರೆ ಅಷ್ಟೆ. ಹುಷಾರು. ಅವ್ರಲ್ಲಿ ಯಾರಾದ್ರೂ ನಂಗೆ ಸಿಕ್ಕಿದ್ರೆ ವಾಪಾಸ್ ಕಳಿಸ್ತಿ. ತಲೆಬಿಶಿ ಮಾಡ್ಕ್ಯಳಡ :-)
ನಾನು ಸೀನೀ ಸೀನೀ ಸೀನಿ, ಕರ್ಚೀಫಿನಿಂದ ಮೂಗೊರೆಸಿಕೊಂಡೂ ಕೊಂಡು, ಕನ್ನಡಿ ನೋಡಿಕೊಂಡರೆ ಮೂಗಿನ ಬದಲು ಅಲ್ಲಿ ಅರಳಿದ "ಕೆಂಡಸಂಪಿಗೆ" ಕಾಣುವಂತಾಗಿ,....!
ನೀವು ಸುಶ್ರುತನ ಹಾಗೆ ಬರದ್ರೆನೆ ನಂಗಂಗೂ ಖುಷಿನಪ್ಪಾ..
ಯುಗಾದಿ ಹಬ್ಬ ಹೇಗಾಯ್ತು?
*ನಂಗಂತೂ
ಶರಶ್ಚಂದ್ರ,
ಥ್ಯಾಂಕ್ಸ್ ಬಾಸ್.. ಇರ್ಲಿ, ಹೊಟ್ಟೆ ಅಷ್ಟೆಲ್ಲಾ ಉರಿಸ್ಕೋಬೇಡ.. ;-)
ಶ್ರೀಕಾಂತ, ರಂಜನಾ,
ಥ್ಯಾಂಕ್ಸ್ ಡಿಯರ್ಸ್..
md,
ತುಂಬಾ ಒಳ್ಳೇ ಕೆಲಸ.. ಇನ್ನು ಯಾವುದೂ ಮಿಸ್ ಆಗಲ್ಲ..
DMS,
ಏನದು ಹೆದ್ರಿಸ್ತಿರೋದು?! :O
ಸುಧನ್ವಾ,
ರಶೀದರ ಮಾತಿಗೆ ತಲೆ ಕೆಡಿಸ್ಕೊಂಡೆ ಅಂತ ಅಲ್ಲ; ನಂಗೇ ಹೀಗೇ ಯೋಚ್ನೆ ಆಯ್ತು.. ನೋಡಿ, ಈಗ ಸುಮಾರು ಬ್ಲಾಗುಗಳಲ್ಲಿ ಈ ಬಗ್ಗೆ ಜೋರು ಚರ್ಚೆಯೇ ಶುರುವಾಗಿಬಿಟ್ಟಿದೆ..!
ಲಿಂಕ್ ೧
ಲಿಂಕ್ ೨
ಲಿಂಕ್ ೩
shree,
ನೀನ್ಯಾಕೋ ನನ್ನ ಬಿಡೋ ಥರ ಕಾಣಲ್ಲ.. :x
edgar dantas, Sunaath
Thanks..
vijaya madam,
nija! thanx!
ಭಾಗ್ವತಣ್ಣ,
ಅಷ್ಟೆಲ್ಲಾ ಸರಳ ಇಲ್ಲ ಮಾರಾಯಾ ವಿಷ್ಯ..! ನೋಡು, ಬ್ಲಾಗರ್ಸ್ ಮೀಟಿನಲ್ಲಿ ಕೇಳಿಬಂದ ಅದೊಂದು ಮಾತು ಈಗ ಎಷ್ಟೊಂದು ಚರ್ಚೆಗಳಿಗೆ ಕಾರಣ ಆಗ್ತಿದೆ ಅಂತ.. ನಿನ್ನ ಅನಿಸಿಕೆ, ದೃಷ್ಟಿಕೋನವೂ ಸರಿ ಇರಬಹುದು; ನಾನೂ ಒಪ್ತೀನಿ; ಆದ್ರೆ......
ನನ್ನದು ನಿರಾಶಾವಾದವೇನಲ್ಲ. ಕೆಲ ಅನುಮಾನ, ಆತಂಕಗಳು ಅಷ್ಟೇ. ಆದ್ರೆ ನೀನು ಅಭಿಮಾನಿಯರೆಲ್ಲ ಓಡಿ ಹೋಗ್ತಾರೆ ಅಂತ ಹೆದ್ರಿಸಿದ್ ಮೇಲೆ ಸ್ವಲ್ಪ ನಾನು ಕೇರ್ಫುಲ್ ಆಗಿರ್ಬೇಕಿದೆ.. ;P
ಪ್ರಮೋದ್,
ಥ್ಯಾಂಕ್ಸ್ ಪ್ರಮೋದ್.. ಹಾಗೇ ಬರೀತೀನಿ..
ಯುಗಾದಿ ಚನಾಗಾಯ್ತು.. ಹಬ್ಬದ್ ದಿನ ಬರೆದ ಒಂದು ಕವನ ಹಾಕಿದೀನಿ, ನೋಡಿ.
ಪ್ರೀತಿಯ ಸುಶ್ರುತ,
ಬ್ಲಾಗಿಗರ ಮೀಟು ಮತ್ತು ಆ ಕುರಿತಂತೆ ನಡೆದ ಚರ್ಚೆಗಳು(ಕೆಲವೆಡೆ ’ಕೆಸರೆರಚಾಟ’ ಎಂದೂ ಕರೆದುಕೊಂಡರು) ಇತ್ಯಾದಿಗಳಿಗೆ ಯಾರನ್ನೂ ಉದ್ದೇಶಿಸುವ ಕಾಂಕ್ಷೆ ಇರಲಿಲ್ಲ. ಆದರೆ ಬ್ಲಾಗ್ ಬೆಳವಣಿಗೆ ಕುರಿತಂತೆ ಆ ತೆರನಾದ ಜಗಳ-ಆರೋಗ್ಯಕರ ಕ್ರಿಯೆ ಪ್ರತಿಕ್ರಿಯೆಗಳು ಬೇಕಿತ್ತು. ಬ್ಲಾಗ್ ಅನ್ನೋದೇ ಕಂಡೋರ ಮನೆಯ ಹಂಗಿನ ಅರಮನೆ. ಹಂಗಿನ ಅರಮನೆಯಲ್ಲಿ ನಾನು ನನ್ನಿಷ್ಟದಂತೆ ಇರುತ್ತೀನಿ ಅಂದರೆ ಆಗದು. ಯಾವತ್ತಾದರೂ ಒಂದು ದಿನ ನಿನ್ನ ಹಂಗು ನನಗ್ಯಾಕೆ ತಗೋ ಇಷ್ಟು ಅನ್ನುವ ನೈತಿಕ ಧೈರ್ಯವೂ ಬೇಕು. ಆ ನಿಟ್ಟಿನಿಂದ ಬ್ಲಾಗ್ಗಳು ವಾಣಿಜ್ಯೀಕರಣದತ್ತ ಮನಸ್ಸು ಮಾಡಲೇಬೇಕು. ನಾನು ನನ್ನ ಲೋಕ ಅನ್ನುವುದನ್ನು ಪಕ್ಕಕ್ಕಿಟ್ಟು ಎಲ್ಲರೂ ಒಂದಾದರೆ ಇದಕ್ಕೊಂದು ಪರಿಹಾರ ಸಾಧ್ಯ.
ಇನ್ನು ಕಂಟೆಂಟ್ ಬಗ್ಗೆ ಹೇಳೋದಾದರೆ ಅವರಿಗೆ, ಅವರಂಥ ಓದುಗರಿಗಿಷ್ಟವಾದದ್ದನ್ನು ಅವರು ಬರಕೊಳ್ಳಲಿ. ಆದರೆ ಮಾಹಿತಿಯ ವಿಷಯವಾಗಿ ಕನ್ನಡದಲ್ಲಿ ಕಂಟೆಂಟ್ ಬಹಳ ಕಡಿಮೆ ಇದೆ. ಮೊನ್ನೆ ಯಾವಾಗಲೋ ಅನಂತಮೂರ್ತಿಯವರ ಮನೆಗೆ ಹೋದಾಗ ಜ್ಞಾನ.ಕಾಂ ಅಂತ ಒಂದು ವೆಬ್ ಸೈಟ್ ಮಾಡಿ. ಕನ್ನಡದಲ್ಲೇ ಅಲ್ಲಿ ಎಲ್ಲಾ ಮಾಹಿತಿಯೂ ಸಿಗುವಂತಾಗಬೇಕು ಅಂದಿದ್ದರು. ಆದರೆ ಅದಕ್ಕೆ ಬೇಕಾಗುವ ಸಂಪನ್ಮೂಲವನ್ನು ನೆನೆದು ಸುಮ್ಮನೆ ತಲೆಯಾಡಿಸಿ ಎದ್ದು ಬಂದಿದ್ದೆವು. ಆದರೆ ಮಾಹಿತಿಗಳನ್ನು ತಮ್ಮ ಪೋಸ್ಟ್ಗಳ ಮೂಲಕ ಸೇರಿಸಲು ಕನಿಷ್ಟ ಒಂದು ವರ್ಗದ ಬ್ಲಾಗಿಗಳಾದರೂ ಮನಸ್ಸು ಮಾಡಬೇಕು. ಎಲ್ಲದಕ್ಕೂ ಇಂಟರ್ನೆಟ್ ಇದೆ, ಇಂಗ್ಲೀಷ್ ಇದೆ ನೋಡಿಕೊಳ್ಳಿ ಅನ್ನೋದು ಬಹಳ ಕಠಿಣ ನಡವಳಿಕೆ.
ರವೀ..
ಯೋ ಮಾರಾಯ, ಸುಮ್ನೇ ನಿಂಗೆ ಗಾಳಿಹಾಕೋಣ ಅಂತ ಪ್ರಯತ್ನ :-) ಕಾಂಪ್ಲಿಕೇಟ್ ವಿಚಾರಗಳೆಲ್ಲ ನನ್ನ ದಪ್ಪ ಮಂಡೆಗೆ ಹೋಗಲ್ಲ ಮಾರಾಯ :-)
ಬ್ಲಾಗ್ ಸಮಾವೇಶದಲ್ಲಿ ವ್ಯಕ್ತವಾದ ವಿಭಿನ್ನ ಪ್ರತಿಕ್ರಿಯೆಗಳನ್ನು ಓದಿದೆ. ಪರಿಣಾಮವಾಗಿ ಕೆಲವು ಬ್ಲಾಗರುಗಳು ಬೇಸರ/ಗೊಂದಲ ಪಟ್ಟುಕೊಂಡಿರುವುದು ಆಶ್ಚರ್ಯದ ವಿಷಯ. ಇಷ್ಟಕ್ಕೂ ಈ ಬ್ಲಾಗ್ ಸಂಸ್ಕೃತಿ ಎನ್ನುವುದು ನಮ್ಮ ಭಾರತೀಯ ಸಮಾಜಕ್ಕೆ ಹೊಸದು. ಬಹುಸಾದ್ಯತೆಗಳನ್ನು ಹೊಂದಿದಂತಹ ಅಂತರ್ಜಾಲ ಮಾಧ್ಯಮ ಒಮ್ಮೆಲೇ ಒಂದು ಸಮಾಜವನ್ನು ಪ್ರವೇಶಿಸಿದಾಗ ಅತ್ಯುಕ್ರಷ್ಟ ಬರಹಗಳಿಂದ ಚಿಲ್ಲರೆ (?!) ಬರಹಗಳ ವರೆಗೆ ಸಾಹಿತ್ಯ ಉದ್ಭವಗಾಗುವುದು ಸಹಜ. ಅದರ ಜೊತೆ ಈ ಹೊಸ ಮಾಧ್ಯಮವನ್ನು ಹೇಗೆ ದುಡಿಸಿಕೊಳ್ಳಬಹುದು ಎನ್ನುವುದನ್ನು ಸೂಚಿಸಲು ಸಾಕಸ್ಟು ಚಿಂತನಶೀಲರು ಹುಟ್ಟಿಕೊಳ್ಳುತ್ತಾರೆ. ಅದರಲ್ಲೂ ನಮ್ಮಂತಹ ಅಭಿವ್ಯಕ್ತಿಶೀಲವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಗಳು ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ!. ಬ್ಲಾಗ್ ಸಾಹಿತ್ಯ ತನ್ನ ಪಾಡಿಗೆ ತಾನು ಹುಟ್ಟಿಕೊಂಡಿದೆ, ತನ್ನ ಪಾಡಿಗೆ ತಾನು ಜೀವನದಿಯಂತೆ ಹರಿಯಲಿ. ಕಾಲಪ್ರವಾಹದಲ್ಲಿ ಗಟ್ಟಿ ಕಾಳ್ಯಾವುದು, ಜೋಳ್ಯಾವುದು ಎನ್ನುವುದು ನಿರ್ಧರಿಸಲ್ಪದಲಿ. ಕತೆ ಕವನ ಎಷ್ಟು ಬರೆದುಕೊಂಡಿರುತ್ತಿರಿ ?- ಎನ್ನುವುದು ಒಂದು ಅಭಿಪ್ರಾಯ. ಇಷ್ಟಕ್ಕೂ ಅದನ್ನು ತಲೆಯಮೀಲೆ ಹೊತ್ತುಕೊಂಡು ತಿರುಗುವುದು ಹಾಸ್ಯಾಸ್ಪದ. ಅಪ್ ಕೋರ್ಸ್, ಎಲ್ಲರಿಗೂ ನಿರ್ವಿವಾದವಾಗಿ ಇರಲೇಬೇಕಾದವುಗಳೆಂದರೆ ೧. ಅಭಿಪ್ರಾಯ, ಹಾಗು ೨. ಅಂಡು! (ಇವೆರಡನ್ನೂ ತಲೆಯಮೀಲೆ ಹೊತ್ತುಕೊಳ್ಳುವುದು ಅನಗತ್ಯ ಎನ್ನುವುದು ನನ್ನ ಭಾವನೆ!)
Dr.D.M.Sagar
Post a Comment