Saturday, May 10, 2008

ಬೇಸರದ ಬಣ್ಣ

ಒಂದು ಬೇಸಿಗೆ ರಾತ್ರಿ, ನಿದ್ರೆ ಬಾರದೆ ದೀರ್ಘ,
ಬದುಕು ಕೇಳಿತು ಮನಸ:
"ಕುಳಿತೆ ಏಕೆ ಸುಮ್ಮನೆ? ಮುಗಿವುದೆಂದೀ ಬೇಸರ?"

"ಬೇಸರಕೆ ಬಣ್ಣವಿಲ್ಲ..
ಅದಕೇ, ಅದು ಕಾಣುವುದಿಲ್ಲ..
ಕಂಡಿದ್ದರೆ ಹಿಡಿದು ದಬ್ಬಬಹುದಿತ್ತು ಆಚೆ;
ದೂರ ಮಾಡಬಹುದಿತ್ತು; ನಿವಾರಿಸಿಕೊಳ್ಳಬಹುದಿತ್ತು..
ಪಾಪಿ, ಕಾಣುವುದೇ ಇಲ್ಲ; ಎಲ್ಲಿದೆಯೆಂದೇ ತಿಳಿಯುವುದಿಲ್ಲ.."

ಸ್ವಲ್ಪ ಸಮಯದ ಬಳಿಕ:
"ಇಲ್ಲ ಇಲ್ಲ, ಬೇಸರಕೆ ಬಣ್ಣವಿದೆ..!
ಬೇಸರದ ಬಣ್ಣ ಬೂದು..
ಬೂದು ಬಣ್ಣ ಮಂಜಿನಲ್ಲಿ ಕಾಣುವುದಿಲ್ಲ..
ಬೇಸರ ಆವರಿಸಿದಾಗಲೆಲ್ಲ ಕಣ್ಣು ಮಂಜಾಗುತ್ತದೆ..
ಅದಕೇ, ಅದು ಕಾಣುವುದಿಲ್ಲ.."

ರಾತ್ರಿ ಮುಂದುವರೆದಂತೆ:
"ಇಲ್ಲ ಇಲ್ಲ, ಬೇಸರವೆಂದರೆ ಹೊಗೆ!
ಹೊಗೆ ಹಬ್ಬಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ..
ಇದು ಬೆಂಕಿ ಉರಿದಾರಿದಮೇಲೆ ಉಂಟಾಗಿರುವ ಹೊಗೆ..
ಗೊತ್ತಾಗಲಿಲ್ಲ ಬೆಂಕಿ ಉರಿವಾಗ;
ತಿಳಿಯಲಿಲ್ಲ ತುಪ್ಪ ಎರೆವಾಗ..
ಈಗರ್ಥವಾಗುತ್ತಿದೆ: ನನ್ನ ಬೇಸರಕೆ ನಾನೇ ಕಾರಣ"

"ಕಾರಣ ತಿಳಿಯಿತಲ್ಲ, ಮತ್ತೀಗ ಬೇಸರವ ದೂರ ಮಾಡಬಹುದಲ್ಲ?
ಹೊಗೆಯ ಬಣ್ಣ ಬಿಳಿ.."

"ಹ್ಮ್.. ಕೈಯಾಡಿಸಿ ಕಣ್ಣೆದುರಿಂದ ಹೋಗಲಾಡಿಸಬಹುದಷ್ಟೇ..
ಆದರೆ ನನ್ನೊಳಹೊಕ್ಕು ಕೋಶಗಳಿಗೆ ಮೆತ್ತಿ ಕೂತಿರುವ ಹೊಗೆಯ
ಒರೆಸಿ ಚೊಕ್ಕ ಮಾಡಲಿ ಹೇಗೆ?
ಅದ ತೊಳೆಯಲಿಕ್ಕಿರುವ ಒಂದೆ ಔಷಧಿ ವಿಷ!
ಆದರೆ.. ಬಳಸಲು ಹಿಂಜರಿವುದಲ್ಲ ಜೀವ, ನಿನ್ನದೆಂಥಾ ಪಾಶ!"

"ಇಲ್ಲ, ತಪ್ಪು ತಿಳಿದಿರುವಿ ನೀನು..
ಮನದಿ ಮನೆ ಮಾಡಿರುವ ಹೊಗೆಬಿಳಿಯ ಬಣ್ಣಕೆ
ಚೂರೆ ಹೊಸ ನೀರೆರೆ.. ಕಣ್ಣ ಪಟ್ಟಕ ಮಾಡಿ, ಬೆಳಕ ಹಾಯಿಸಿ,
ನವದೃಷ್ಟಿಯಿಂ ನೋಡು..
ಬಿಳಿಬಣ್ಣದೊಳಗಿರ್ಪ ನವಿರೇಳು ವರ್ಣಗಳು
ಇಂದ್ರಚಾಪವಾಗಿ ಹರಡುವ ಇಂದ್ರಜಾಲವ ನೋಡು.. .. ..

ಹೊಮ್ಮಿತೇ ವದನದಲಿ ಹೊಸದೊಂದು ಕಾಂತಿ?"

"ಹೌದು.. ವಿಷದ ವಿಷಾದ ವಿಷಯವಿನ್ಯಾಕೆ?
ಕಾಮನಬಿಲ್ಲು ಚಿಮ್ಮಿಸುತಿರುವ ಉತ್ಸಾಹದಂಬುಗಳು
ಬೇಸರವ ಹೊಡೆದೋಡಿಸಿ ಆಯ್ತಲ್ಲ ಗೆಳೆಯ?
ಒಡಗೂಡಿ ಬಾಳೋಣ, ಬಾ ಬದುಕೇ,
ಮುಗಿಯಿತೀ ಕ್ಲೇಶಕಾವಳದಿರುಳು,
ಇನ್ನು ನಿನ್ನೊಳಗೆ ನಾನು; ನನ್ನೊಡನೆ ನೀನು
ದಾರಿ ಮುಂದಿದೆ ನಮಗೆ; ನಡೆ,
ಕಾಲ ಚಿಮ್ಮುವ ಮುನ್ನ ಸೇರಿ ಸಾಗೋಣ."

12 comments:

ತೇಜಸ್ವಿನಿ ಹೆಗಡೆ said...

ಸುಶ್ರುತ,

ಯಾವಾಗ್ ಬೇಜಾರಾದ್ರೂ ತಪ್ಪದೇ ನಿನ್ನೀ ಕವನ ಓದ್ತೆ... ಬೇಸರ ಹೋಗಿ ನನ್ನೊಳಗೂ ಸಪ್ತವರ್ಣ ಬಂದೇ ಬತ್ತು ಹೇಳ ನಂಬಿಕೆ ಇದ್ದು....ಅಷ್ಟು ಆಪ್ತವಾಗಿದ್ದು ಕವನ. ಹೆಚ್ಚಿಗೆ ವರ್ಣಿಸಲು ಶಬ್ದಗಳಿಲ್ಲೆ.

Karthik said...

ಸುಶ್ರುತ,
ಬಹಳ ಚೆನ್ನಾಗಿದೆ ಈ ಕವನ. ಯಾಕಂದ್ರೆ.. ಯಾವ್ದೇ ಕವನದಲ್ಲೂ positive end ಇದ್ರೆ ನಂಗೆ ಇಷ್ಟ. ಜೀವನದಲ್ಲೂ ಅಷ್ಟೆ ಎಷ್ಟೇ negative extreme ನಲ್ಲಿದ್ರೂ positive extreme ಗೆ ಬರಬಹುದು ಅನ್ನೋ ನಂಬಿಕೆ ನಂದು. ನನ್ನ ಕೆಲ ಕಾವ್ಯ ಮಿತ್ರರು ದುಃಖ, ಬೇಸರದ ಕವನಗಳನ್ನು ಹೆಚ್ಚು ಬರೆಯುತ್ತಿದ್ದರು, ಅವರ ending ಸಹ ಹಾಗೆ ಮನಸ್ಸಿಗೆ ನಾಟುವಂತಿರುತ್ತಿತ್ತು, ಆದ್ರೆ positive ಆಗಿರ್ತಿರ್ಲಿಲ್ಲ. ಅವರ ಹತ್ರ ಬಹಳ ಜಗಳ ಆಡ್ತಿದ್ದೆ. ಹ್ಮ್ಮ್ ಇರ್ಲಿ.. ಈ ಕವನ ಚೆನ್ನಾಗಿ ಮೂಡಿಬಂದಿದೆ..

Vijaya said...

tumba chennagide ... someone had once told me ... the beauty of poem is that, many people can relate to a poem as it can be read in different perspectives :-) ellaru kavithegalige helo ondu relate maadtaare ...!! keep them flowing Sush....

ಶಾಂತಲಾ ಭಂಡಿ said...

ಪುಟ್ಟಣ್ಣಾ...
ಆರು ವರ್ಷಕ್ಕೆ ಒಂದೇ ಒಂದು ದಿನ ಮೊದಲು ಹುಟ್ಟಿದ್ರೂ ನನಗಿಂತ ಎಷ್ಟೊಂದು ತಿಳ್ಕೊಂಡಿದ್ದೀಯಾ!
ಬೇಸರದ ಬಣ್ಣಗಳನು ನೇಸರದ ಬಣ್ಣಗಳಲಿ ಹೊಸೆದ ಸಾಲುಗಳಿಷ್ಟವಾದ್ವು. ಬರೀತಾನೇ ಇರು.....

ಸುಪ್ತದೀಪ್ತಿ suptadeepti said...

ಕವನ ಚೆನ್ನಾಗಿದೆ ಸುಶ್. ಬೇಸರದ ಬಣ್ಣಗಳ ವಿಶ್ಲೇಷಣೆ, ಮನದೊಳಗಿನ ಸಂವಾದ, ಕಣ್ಣ ಪಟ್ಟಕದ ಕಲ್ಪನೆ- ಎಲ್ಲವೂ ಇಷ್ಟವಾದವು. ಹೀಗೇ ಇನ್ನೂ ಬರೆಯುತ್ತಿರು.

ಸುಶ್ರುತ ದೊಡ್ಡೇರಿ said...

@ ತೇಜಕ್ಕಯ್ಯ,

"ನನ್ನೊಳಗೂ ಸಪ್ತವರ್ಣ ಬಂದೇ ಬತ್ತು " -ಅಷ್ಟಾದ್ರೆ ಸಾರ್ಥಕ!
ಧನ್ಯವಾದ.

karthik,

ನೀವು ಹೇಳಿದ್ದು ನಿಜ. ಎಲ್ಲಾ ಬರೆಯುವಾಗಿನ ಭಾವದ ಮೇಲೆ ಅವಲಂಭಿಸೊತ್ತೆ ಅನ್ಸತ್ತೆ. ಆದ್ರೆ ಕವನಕ್ಕೆ positive end 'ಕೊಡೋದರಿಂದ' ಓದುಗರಲ್ಲಿ ಉಲ್ಲಾಸವನ್ನ ತುಂಬಬಹುದು ಅಂತ ನಂಗೆ ಈ ಕವನದಿಂದ ಗೊತ್ತಾಯ್ತು..
ಥ್ಯಾಂಕ್ಸ್..

vijaya,

Thats true! ಒಂದೇ ಕವನವನ್ನ ಒಬ್ಬೊಬ್ಬರು ಒಂದೊಂದು ರೀತಿ ಅರ್ಥ ಮಾಡ್ಕೋತಾರೆ. Thanks for the comment.

ಸುಶ್ರುತ ದೊಡ್ಡೇರಿ said...
This comment has been removed by the author.
ಸುಶ್ರುತ ದೊಡ್ಡೇರಿ said...

@ ಶಾಂತಲಕ್ಕ,
ಒಂದ್ ದಿನ ಮುಂಚೆ ಹುಟ್ಟಿದ್ದಿ ನೋಡು, ಅಲ್ಲೇ ಇರೋದು ಪಾಯಿಂಟು! :D :D
ಏಯ್ ನಾ ಎಂಥ ತಿಳ್ಕೈಂದಿ ಮಾರಾಯ್ತಿ.. ಯಾವುದೋ ಲಹರಿ, ಎಷ್ಟೋ ಸಲ ಆ ಕ್ಷಣದ ಭಾವ, ಮೂಡು, ತುಡಿತ -ನನ್ನನ್ನ ಬರಿಯೋಹಂಗೆ ಮಾಡ್ತು ಅಷ್ಟೇ.

ಅಂದಹಾಗೇ, ಈ ಕವನದಲ್ಲಿನ 'ಬೇಸರಕೆ ಬಣ್ಣವಿಲ್ಲ' ಅನ್ನೋ thought ಶ್ರೀದು. ಆಕೆಗೊಂದು ಥ್ಯಾಂಕ್ಸ್. :-)

ಥ್ಯಾಂಕ್ಸ್ ಅಕ್ಕಾ..

ಸುಪ್ತದೀಪ್ತಿ,

ಧನ್ಯವಾದ ಜ್ಯೋತೀಜೀ..

Parisarapremi said...

ಪುಸ್ತಕಕ್ಕೆ ಇರಲಿ.

kanasu said...

wow! tumba chennagide.. ;)

ಸುಶ್ರುತ ದೊಡ್ಡೇರಿ said...

parisarapremi,

ಇಡೋಣ.

kanasu,

ಧನ್ಯವಾದ.

SHREE (ಶ್ರೀ) said...

Thumba keTTa mooDalliruvaaga idna nodidde, ivattu aaraamagi nodide. Thanx Sush.