Monday, June 16, 2008

ಬಂಧ ದೊಡ್ಡದು ಕಣಾ...

ಎಚ್ಚರಾದಾಗ ಬಸ್ಸು ಘಟ್ಟ ಇಳಿಯುತ್ತಿತ್ತು. ಕಿಟಕಿ ಪರದೆ ಸರಿಸಿ, ಕಣ್ಮಿಟುಕಿಸಿ ಹೊರಗೆ ನೋಡಿದೆ: ಇನ್ನೂ ಚಿಗುರಾಗಿದ್ದ ದಿನದ ಬೆಳಕಿನಲ್ಲಿ ಇಬ್ಬನಿ ಚಾದರ ಹೊದ್ದ ಹಸಿರು ಮರಗಳು ಚಳಿಗೆ ಗಡಗಡ ನಡುಗುತ್ತ ನಿಂತಿದ್ದಂತೆ ಕಂಡವು. 'ಆಹ್, ದಿನಕರಾ, ಬೇಗ ಬಾ, ಈ ಚಳಿ ಓಡಿಸು' ಎಂದು ಕೈ ಮುಗಿದು ಭಿನ್ನವಿಸಿಕೊಳ್ಳುತ್ತಿದ್ದವೋ ಎಂಬಂತೆ ಎಲೆಗಳು ಅರೆ-ಮುದುಡಿಕೊಂಡಿದ್ದವು. ದಟ್ಟ ಕಾಡ ನಡುವಿನ ಕೊಕ್ಕಟೆ ರಸ್ತೆಯಲ್ಲಿ ಬಸ್ಸು ಹೋಗುತ್ತಿತ್ತು. ಅದು ಹೊರಡಿಸುತ್ತಿದ್ದ ಸದ್ದೂ ಮುಂಜಾನೆಯ ನಿಶ್ಯಬ್ದಕ್ಕೆ ಹೇಳಿ ಮಾಡಿಸಿದಂತಿತ್ತು. ಪಕ್ಕದ ಸೀಟಿನವರ ಬಳಿ ಕೇಳಿದೆ: 'ಇನ್ನೂ ಕೋಟೇಶ್ವರ ಎಷ್ಟು ದೂರ?' ಅಂತ. 'ಇನ್ನು ಹತ್ತು ನಿಮಿಷ. ನಾವೂ ಅಲ್ಲೇ ಇಳಿಯೋದು' ಎಂದರು. ಹತ್ತನೇ ನಿಮಿಷದಲ್ಲಿ ಕೋಟೇಶ್ವರದಲ್ಲಿ ನಿಂತ ಬಸ್ಸಿನಿಂದ ನನ್ನ ಹೆಗಲ ಬ್ಯಾಗಿನೊಂದಿಗೆ ಇಳಿದೆ. ನನ್ನೊಂದಿಗೇ ಇಳಿದವರ ಬಳಿ 'ಆಚಾರ್ಯ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಎಲ್ಲಿದೆ?' ಕೇಳಿದೆ. ಅವರು ದಾರಿ ತೋರಿಸಿದರು. ಸರಸರನೆ ಹೆಜ್ಜೆ ಹಾಕಿದೆ.

ವಾರ್ಡ್ ನಂ. ೨೦೩. ಬಿಳೀ ಬಾಗಿಲು ನಿಧಾನಕ್ಕೆ ತಳ್ಳಿದೆ. ಮಾವ ಇತ್ತ ತಿರುಗಿದ: 'ಓಹ್, ಬಂದ್ಯಾ ಅಪ್ಪೀ? ಬಾ..' ಆಹ್ವಾನಿಸಿದ. ಪಕ್ಕದ ಮಂಚದಲ್ಲಿ ಮಲಗಿದ್ದ ಅಪ್ಪ ಕಣ್ಬಿಟ್ಟು, ಇತ್ತ ತಿರುಗಿ ನನ್ನನ್ನೇ ನೋಡಿದ: 'ಪಾಪೂ, ಬಾ..' ಅಪ್ಪ ಅದಾಗಲೇ ಆಸ್ಪತ್ರೆಯ ಹಸಿರು ಗೌನಿನಲ್ಲಿದ್ದ. ಮಂಚದ ಈಚೆ ಮೂಲೆಗೆ ನೇತುಹಾಕಿದ್ದ ಬಾಟಲಿಯಿಂದ ಅಪ್ಪನ ಕೈಗೆ ಹೋಗಿದ್ದ ಸಣ್ಣ ಪೈಪಿನಲ್ಲಿ ನೀರು ಹನಿ ಹನಿಯಾಗಿ ಜಾರುತ್ತಿತ್ತು. ನಾನು ಅಪ್ಪನ ಕೈ ಹಿಡಕೊಂಡೆ. ಏನೋ ಒಂಥರಾ ಆಯಿತು. 'ಅರಾಮಿದ್ಯಾ?' ಅಂತೇನೋ ಕೇಳಿದೆ. 'ಓಹ್! ಬೆಳಗ್ಗೆ ಆರ್ ಗಂಟೆಗೆ ಬಂದು ನರ್ಸ್ ಇದ್ನೆಲ್ಲ ಹಾಕಿಕ್ ಹೋದ. ಏಳೂ ವರೆಗೆ ಆಪರೇಶನ್ನಡ' ಅಪ್ಪ ಅಂದ. ನಾನು ವಾಚು ನೋಡಿಕೊಂಡೆ: ಏಳು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತು. ಮಾವನ ಪಕ್ಕ ನನ್ನ ಚೀಲವನ್ನಿಟ್ಟು ಕೂತೆ. ಮಾವ ವಾರ್ಡಿನ ದೊಡ್ಡ ಟ್ಯೂಬ್‍ಲೈಟ್ ಹಾಕಿದ. ಆಗಷ್ಟೆ ಬೆಳಗಾದಂತೆ ಬೆಳಕು ಹರಡಿಕೊಂಡಿತು.

ನಾನು ಹೋದ ಹತ್ತೇ ನಿಮಿಷಕ್ಕೆ ನರ್ಸ್ ಮತ್ತಿಬ್ಬರು ಸಿಬ್ಬಂದಿಗಳೊಂದಿಗೆ ಬಂದು, ಎಲ್ಲಾ ದಡಬಡಾಯಿಸಿ ಗಾಭರಿ ಮಾಡಿ, ಅಪ್ಪನನ್ನು ಕರೆದುಕೊಂಡು, ಅವನಿಗೆ ಚುಚ್ಚಿದ್ದ ಡ್ರಿಪ್ಪಿನ ಬಾಟಲಿಯನ್ನು ಹಿಡಿದುಕೊಂಡು, ಓಟಿಯ ಕಡೆ ಹೊರಟೇಬಿಟ್ಟಳು. ನಾನಿನ್ನೂ ಮುಖ ತೊಳೆದು, ಬ್ಯಾಗಿನಿಂದ ಟವೆಲ್ ತೆಗೆದು ಒರೆಸಿಕೊಳ್ಳುತ್ತಿದ್ದೆ. ತಕ್ಷಣ ಟವೆಲ್ಲು ಮಂಚದ ಮೇಲೆ ಬಿಸಾಕಿ ಅಪ್ಪನ ಹಿಂದೆ ಓಡಿದೆ. ಅಪ್ಪನನ್ನು ಒಳಗೆ ಕರೆದೊಯ್ದದ್ದೇ ಓಟಿಯ ಬಾಗಿಲು ಮುಚ್ಚಿಕೊಂಡುಬಿಟ್ಟಿತು. ಹೊರಗುಳಿದವರು ನಾನು ಮತ್ತು ಮಾವ. 'ನೋಡಿದ್ಯಾ? ಟೈಮು ಅಂದ್ರೆ ಟೈಮು ಇಲ್ಲಿ!' ಎಂದ ಮಾವ. ಸಮಯಕ್ಕೆ ಸರಿಯಾಗಿ ಮುಟ್ಟಿಕೊಂಡದ್ದಕ್ಕೆ ನಿಟ್ಟುಸಿರು ಬಿಡುತ್ತಾ ನಾನು ತಲೆಯಾಡಿಸಿದೆ.

ಎರಡು ವರ್ಷದ ಮೇಲೇ ಆಗಿತ್ತು: ಅಪ್ಪನಿಗೆ ಕಿಡ್ನಿಯಲ್ಲಿ ಕಲ್ಲಿದೆ ಅಂತ ಗೊತ್ತಾಗಿ. ಮೊದಮೊದಲು ಅದನ್ನವನು ಕಡೆಗಣಿಸಿದ. ಆಮೇಲೆ ತುಂಬಾ ನೋವು ಬರತೊಡಗಿದಾಗ ಹತ್ತಿರದ ಡಾಕ್ಟರುಗಳ ಬಳಿಗೆ ಹೋಗಿಬಂದ. ಅವರು ಏನೇನೋ ಮಾತ್ರೆ ಕೊಟ್ಟರು. ಆಯುರ್ವೇದಿಕ್, ಹೋಮಿಯೋಪತಿ ಡಾಕ್ಟರುಗಳನ್ನು ಕಂಡ. ಅವರೂ ಒಂದಷ್ಟು ಮಾತ್ರೆ ಕೊಟ್ಟು ಪಥ್ಯ ಹೇಳಿದರು. ನೀರು ಜಾಸ್ತಿ ಕುಡಿಯುವಂತೆ ಹೇಳಿದರು. ಅಪ್ಪ ಅವನ್ನೆಲ್ಲಾ ಪಾಲಿಸಿದನಾದರೂ ತೊಂದರೆ ಕಮ್ಮಿಯಾಗಲಿಲ್ಲ. ಆ ಬಾರಿ ಸಾಗರಕ್ಕೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ, 'ಕಲ್ಲು ತುಂಬಾ ದೊಡ್ಡದಾಗಿಯೇ ಇರುವುದರಿಂದ ಅದು ಮಾತ್ರೆ-ಔಷಧಿಗಳಲ್ಲಿ ಕಮ್ಮಿಯಾಗುವುದಿಲ್ಲ, ಆಪರೇಶನ್ನೇ ಮಾಡಿಸಬೇಕು' ಎಂದರು ಡಾಕ್ಟರು. 'ಸರಿ, ಮತ್ತಿನ್ನು ತಡ ಮಾಡುವುದು ಬೇಡ, ಹೇಗಾದರೂ ಮಾಡಿಸಬೇಕು ಅಂದ್ಮೇಲೆ ಸುಮ್ನೇ ನೋವು ಅನುಭವಿಸುವುದು ಯಾಕೆ, ಈಗಲೇ ಮಾಡಿಸಿದರಾಯಿತು' ಅಂತ ನಾನೂ ಹೇಳಿದೆ ಅಪ್ಪನಿಗೆ ಫೋನಿನಲ್ಲಿ. ಅಪ್ಪನ ಬಳಿ ರಾಜ್ಯ ಸರ್ಕಾರದವರು ರೈತರಿಗೆಂದು ಮಾಡಿರುವ 'ಯಶಸ್ವಿನಿ' ವಿಮೆ ಕಾರ್ಡ್ ಇತ್ತು. ಕೋಟೇಶ್ವರದಲ್ಲಿನ ಆಸ್ಪತ್ರೆ -ನನ್ನ ಮಾವನ ಅಪ್ಪನಿಗೆ ಒಮ್ಮೆ ಅಲ್ಲಿ ಆಪರೇಶನ್ ಮಾಡಿಸಿದ್ದರು- ಅದು ಚೆನ್ನಾಗಿದೆಯಂತೆ, ಅಲ್ಲಿ 'ಯಶಸ್ವಿನಿ'ಯ ಸೌಲಭ್ಯವನ್ನೂ ಪಡೆಯಬಹುದು ಎಂದಾಯಿತು. ಅಪ್ಪ-ಮಾವ ಹೋಗಿ ಒಮ್ಮೆ ಆಸ್ಪತ್ರೆ ನೋಡಿಕೊಂಡು, ಚೆಕ್-ಅಪ್ ಮಾಡಿಸಿ, ಆಪರೇಶನ್ನಿಗೆ ದಿನಾಂಕ ನಿಗಧಿ ಮಾಡಿಕೊಂಡು ಬಂದರು. ನನಗೆ ಫೋನಿಸಿ ಹೇಳಿದರು. ಅಪ್ಪ ಮಾವನೊಂದಿಗೆ ಹೋಗಿ ಹಿಂದಿನ ದಿನವೇ ಅಡ್ಮಿಟ್ ಆಗುವುದು; ನಾನು ಆಪರೇಶನ್ ದಿನ ಬೆಳಗ್ಗೆ ಹೋಗಿ ಮುಟ್ಟಿಕೊಳ್ಳುವುದು ಅಂತ ತೀರ್ಮಾನವಾಯಿತು.

ಕೋಟೇಶ್ವರದ ಆಸ್ಪತ್ರೆ ನಿಜಕ್ಕೂ ಚೆನ್ನಾಗಿತ್ತು. ಸಕಲ ಸೌಲಭ್ಯಗಳೂ ಇದ್ದವು. ನರ್ಸುಗಳು ತರಾತುರಿಯಲ್ಲಿ ಓಡಾಡುತ್ತಿದ್ದರು. ವಲ್ಲಗೆ ವಾಕಿಂಗ್ ಮಾಡುತ್ತಿದ್ದ ಪೇಶೆಂಟುಗಳು, ಅವರನ್ನು ನೋಡಲು ಸೇಬು ಹಣ್ಣು - ಬ್ರೆಡ್ಡಿನ ಪ್ಯಾಕೆಟ್ಟು ಹಿಡಿದು ಬರುತ್ತಿದ್ದ ಬಂಧುಗಳು, 'ಥೂ! ಬಾಯಿರುಚಿಯೇ ಹೋಗ್ಬಿಟ್ಟಿದೆ! ಒಂಚೂರ್ ಕಾಫಿನಾದ್ರೂ ಕುಡೀಬಹುದಿತ್ತೇನೋ?' ಎಂದ ಪೇಶೆಂಟಿನ ಗೊಣಗನ್ನು ಮನ್ನಿಸಿ, ಕ್ಯಾಂಟೀನಿನಿಂದ ಬಿಸಿ ಕಾಫಿ ತುಂಬಿಸಿಕೊಂಡ ಫ್ಲಾಸ್ಕು ನೇತಾಡಿಸಿಕೊಂಡು ಬರುತ್ತಿದ್ದ ನಲವತ್ತರ ಹೆಂಗಸು... ಆಸ್ಪತ್ರೆಯ ಕಾರಿಡಾರಿನಲ್ಲಿ ಪಟಪಟ ಚಪ್ಪಲಿಗಳ ಸದ್ದು ಮಾರ್ದನಿಸುತ್ತಿತ್ತು. ಓಟಿಯೊಳಗೆ ಈಗ ಏನಾಗುತ್ತಿರಬಹುದು? ಮುಚ್ಚಿದ ಬಾಗಿಲನ್ನೇ ದಿಟ್ಟಿಸಿದೆ. ಅದು ನಿರ್ಭಾವುಕವಾಗಿತ್ತು. 'ಹೆದರಿಕೊಳ್ಳುವಂಥದ್ದೇನಿಲ್ಲ; ಇದು ಮೈನರ್ ಆಪರೇಶನ್ನು. ಲೇಸರ್ ರೇಸ್ ಬಿಟ್ಟು ಕಲ್ಲು ಪುಡಿ ಮಾಡಿ ತೆಗೀತೀವಿ ಅಷ್ಟೇ' ಡಾಕ್ಟರು ಎಷ್ಟೇ ಸಮಾಧಾನ ಹೇಳಿದ್ದರೂ.... ಇದು ಆಪರೇಶನ್ನು! ಅದೂ ಅಪ್ಪನಿಗೆ! ನನ್ನ ಅಪ್ಪನಿಗೆ! ಅದು ಹೇಗೆ ತಾನೆ ನಿರಾತಂಕವಾಗಿರಲು ಸಾಧ್ಯ?

ಅದು ಯಾಕೋ ಏನೋ? ಅಪ್ಪನನ್ನು ಒಬ್ಬ ಪೇಶೆಂಟಾಗಿ ಎಂದೂ ನೋಡಲಿಚ್ಚಿಸದವ ನಾನು. ಮತ್ತು ಅಪ್ಪ ಇಷ್ಟರೊಳಗೆ ಖಾಯಿಲೆ ಬಂದು ಮಲಗಿದ್ದೇ ಇಲ್ಲ: ಹಿಂದೊಮ್ಮೆ ಮೂಲವ್ಯಾದಿಯಾಗಿ ಚಿಕಿತ್ಸೆಗೆ ಗುರಿಯಾದದ್ದು, ಮತ್ತೊಮ್ಮೆ ಸೈಕಲ್ಲಿನಿಂದ ಬಿದ್ದು ಪೆಟ್ಟಾಗಿ ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿದ್ದು ಹೊಲಿಗೆ ಹಾಕಿಸಿಕೊಂಡು ಬಂದದ್ದು ಹೊರತು ಪಡಿಸಿ. ಆಗೆಲ್ಲ ನಾನು ತುಂಬಾ ಚಿಕ್ಕವನಿದ್ದೆ. ಅದು ಬಿಟ್ಟರೆ ಅಪ್ಪ ತುಂಬಾ ಗಟ್ಟಿಗ ಮತ್ತು ಯಂಗ್. ನನ್ನ ಪಾಲಿಗೆ ಅವನೇ ಹೀರೋ. ಪದೇ ಪದೇ ಜ್ವರ-ಕೆಮ್ಮು ಅಂತ ಬರುತ್ತಿದ್ದ ನನ್ನನ್ನು ಡಾಕ್ಟರ ಬಳಿಗೆ ಕರೆದೊಯ್ಯುತ್ತಿದ್ದವ ಅಪ್ಪ. 'ಇಂಜೆಕ್ಷನ್ ಕೊಡಲ್ಲ' ಅಂತ ಧೈರ್ಯ ತುಂಬುತ್ತಿದ್ದವ ಅಪ್ಪ. ಡಾಕ್ಟರು ಎದೆಯ ಮೇಲೆ ಸ್ಟೆಥೋಸ್ಕೋಪ್ ಇಟ್ಟು ನನ್ನ ಹೆಸರು ಕೇಳುವಾಗ 'ಹಾಂ, ಸುಶ್ರುತ ಅಂತ ಹೇಳು' ಎಂದು ಹೇಳಿಕೊಡುತ್ತಿದ್ದವ ಅಪ್ಪ. ವಾಪಸು ಬರುವಾಗ 'ಯಾವ ಚಾಕ್ಲೇಟ್ ಬೇಕು?' ಅಂತ ಕೇಳಿ ಕೊಡಿಸುತ್ತಿದ್ದವ ಅಪ್ಪ. ಇಂಜೆಕ್ಷನ್ ಕೊಡಿಸಿಕೊಂಡ ನನ್ನ ಅಂಡಿಗೆ ನೋವಾಗದಂತೆ ಬಸ್ಸಿನಲ್ಲಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಬರುತ್ತಿದ್ದವ ಅಪ್ಪ.

ಈಗ ಅಪ್ಪನೇ ಪೇಶೆಂಟು! ನಿನ್ನೆ ರಾತ್ರಿ ಮತ್ತೊಮ್ಮೆ ಪರೀಕ್ಷಿಸಿದ ಡಾಕ್ಟರು, 'ಲೇಸರ್‌ನಿಂದ ಆಗ್ಲಿಲ್ಲ ಅಂದ್ರೆ ಸಣ್ಣದೊಂದು ಹೋಲ್ ಮಾಡಿ ತೆಗೀಬೇಕಾಗಬಹುದು. ಸ್ವಲ್ಪ ಮೇಜರ್ ಆಪರೇಶನ್ನೇ ಆಗತ್ತೆ. ಯಾವುದಕ್ಕೂ ಓಟಿಗೆ ಹೋದಮೇಲೇ ತೀರ್ಮಾನ' ಎಂದುಬಿಟ್ಟಿದ್ದರು. ಒಳಗಡೆ ಅಪ್ಪನಿಗೆ ಈಗಾಗಲೇ ಅನಸ್ತೇಶಿಯಾದಿಂದ ಎಚ್ಚರ ತಪ್ಪಿರಬಹುದು.. ಮೂಗಿಗೆ ಬಿಳಿ ಬಟ್ಟೆ ಕಟ್ಟಿಕೊಂಡಿರುವ ಕನ್ನಡಕದ ಡಾಕ್ಟರು ಕತ್ತರಿ, ಚಾಕು, ಹತ್ತಿ, ಇನ್ನೂ ಏನೇನೋ ಶಸ್ತ್ರಗಳನ್ನೆಲ್ಲ ಹಿಡಿದುಕೊಂಡು ಎದುರಿನ ಸ್ಕ್ರೀನಿನಲ್ಲಿ ಬರುತ್ತಿರುವ ಗ್ರಾಫ್ ನೋಡುತ್ತಾ ಚಿಕಿತ್ಸೆ ಮಾಡುತ್ತಿರಬಹುದು.. ಎಚ್ಚರ ತಪ್ಪಿದ್ದರೂ ಕಣ್ಣು ಬಿಟ್ಟುಕೊಂಡಿರುವ ಅಪ್ಪ ಏನೋ ಹೇಳಬೇಕೆಂದು ಬಯಸಿ ಬಾಯಿ ಕಳೆಯುತ್ತಿರಬಹುದು.. ಅರೆ, ನರ್ಸೊಬ್ಬಳು ಹೊರಬಂದು ಕೌಂಟರಿಗೆ ಓಡಿ ಹೋದಳಲ್ಲ ಏಕೆ? ನಾವೂ ಅವಳ ಹಿಂದೆ ಓಡಬೇಕಾ? ಅಷ್ಟೇ ವೇಗವಾಗಿ ವಾಪಸು ಓಡಿ ಬಂದ ಅವಳು ನಮ್ಮ ಆತಂಕದ ಕಣ್ಗಳ ಕಡೆಗೂ ನೋಡದೇ ಒಳ ಹೊಕ್ಕಳಲ್ಲ, ಯಾಕೆ ಏನಾಯ್ತು? ಲೇಸರ್‌ನಿಂದ ಆಗುವುದಿಲ್ಲವೆಂದು ಆಪರೇಶನ್ನೇ ಮಾಡುವುದಕ್ಕೆ ತೀರ್ಮಾನಿಸಿದರಾ ಡಾಕ್ಟರು? ಮುಚ್ಚಿದ ಬಾಗಿಲ ಹಿಂದಿನ ದೃಶ್ಯಗಳನ್ನು ಕಲ್ಪಿಸಿಕೊಂಡು ನಾನು ಸಣ್ಣಗೆ ಕಂಪಿಸುತ್ತಿದ್ದೆ. ನಿಮಿಷಗಳು ಗಂಟೆಗಳಂತೆ ಭಾಸವಾಗುತ್ತಿದ್ದವು.

'ನೀ ಬೇಕಾದ್ರೆ ಕಾಫಿ-ತಿಂಡಿ ಮಾಡ್ಕೊಂಡು ಬಾ; ನಾನು ಕಾಯ್ತಿರ್ತಿ' ಮಾವ ಹೇಳಿದ -ತಾನು ನಂತರ ಹೋಗುತ್ತೇನೆ ಎಂಬರ್ಥದಲ್ಲಿ. ನಿಜಕ್ಕೂ ನಮಗೇನೂ ಕೆಲಸವಿರಲಿಲ್ಲ ಇಲ್ಲಿ. ಹೊರಗೆ ಕೂತು ನಿರ್ಭಾವುಕ ಬಾಗಿಲು ನೋಡುತ್ತ ಆತಂಕ ಮಾಡಿಕೊಳ್ಳುವುದೊಂದನ್ನು ಬಿಟ್ಟು. ಆಪರೇಶನ್ನೇ ಮಾಡುತ್ತಿದ್ದಾರೆ ಅಂತಾದರೆ ಇನ್ನೂ ಅರ್ಧ-ಮುಕ್ಕಾಲು ತಾಸಾದರೂ ಬೇಕು ಅಪ್ಪನನ್ನು ಹೊರಗೆ ತರುವುದಕ್ಕೆ... ಏನು ಮಾಡುವುದು? ಊಹುಂ, ನಾನು ಕದಲಲಿಲ್ಲ.

ಇಪ್ಪತ್ತು ನಿಮಿಷದಲ್ಲಿ ಬಾಗಿಲು ದೊಡ್ಡಕೆ ತೆರೆದುಕೊಂಡಿತು. ಸಿಬ್ಬಂಧಿಗಳು ಅಪ್ಪನನ್ನು ಮಲಗಿಸಿಕೊಂಡಿದ್ದ ಮಂಚವನ್ನು ತಳ್ಳಿಕೊಂಡು ಹೊರಬಂದರು. ಗ್ಲೌಸ್ ಬಿಚ್ಚುತ್ತಾ ಡಾಕ್ಟರೂ. 'ಡಾಕ್ಟರ್?' ಮುಖ ನೊಡುತ್ತಾ ಕೇಳಿದೆ. 'ಹ್ಮ್.. ನಾಟ್ ಟು ವರಿ. ಲೇಸರ್ರಲ್ಲೇ ಪೌಡರ್ ಮಾಡಿ ತೆಗೆದಿದ್ದೇನೆ. ಇನ್ನೊಂದು ಥ್ರೀ ಅವರ್ಸ್ ಐಸೀಯೂನಲ್ಲಿ ಇರಬೇಕಾಗತ್ತೆ ಪೇಶಂಟ್. ಆಮೇಲೆ ವಾರ್ಡ್‍ಗೆ ಶಿಫ್ಟ್ ಮಾಡ್ತಾರೆ' ಎಂದರು. ನಿಟ್ಟುಸಿರು ಬಿಟ್ಟೆ. ತಳ್ಳುಮಂಚದ ಹಿಂದೆಯೇ ಓಡಿದೆವು ನಾನು-ಮಾವ. ಮಂಚ ಐಸೀಯೂದೊಳಗೆ ಹೋಯಿತು. 'ಬರಬಹುದಲ್ವಾ?' ಅಂತ ಕೇಳಿಕೊಂಡು ನಾವೂ ಒಳ ಹೋದೆವು. ಹಸಿರು ಬಣ್ಣದ ತೆಳು ವಸ್ತ್ರವೊಂದು ಅಪ್ಪನನ್ನು ಮುಚ್ಚಿತ್ತು. ಐಸೀಯೂಗೆ ಹೋದ ಐದು ನಿಮಿಷಕ್ಕೆ ಅಪ್ಪನಿಗೆ ಎಚ್ಚರಾಯಿತು. ಕಣ್ಣು ಬಿಡಲಿಕ್ಕೆ ಪ್ರಯತ್ನಿಸಿದ. 'ಅಪ್ಪಾ..?' ಮುಖದ ಬಳಿ ಹೋಗಿ ಉಸುರಿದೆ. ತಕ್ಷಣ ಪೂರ್ತಿ ಕಣ್ಣು ಬಿಡಲಿಕ್ಕೆ ಆಗಲಿಲ್ಲ ಅವನಿಗೆ. ನನ್ನನ್ನು ನೋಡಿ ಗುರುತು ಹಿಡಿದ. ಏಳಲಿಕ್ಕೆ ಪ್ರಯತ್ನಿಸಿದ. ಮಲಗಿಸಿದೆ. 'ಪಾಪೂ.. ಟೈಮೆಷ್ಟು?' ಕೇಳಿದ. ನಾನು ವಾಚು ನೋಡಿ ಟೈಮ್ ಹೇಳಿದೆ. ಇನ್ನೂ ಪೂರ್ತಿ ಎಚ್ಚರಾಗಿರಲಿಲ್ಲ ಅವನಿಗೆ. ಮತ್ತೆ ಕಣ್ಮುಚ್ಚಿ ಮಲಗಿಕೊಂಡ. 'ಇನ್ನೊಂದು ಅರ್ಧ ತಾಸು ಬೇಕು ಪೂರ್ತಿ ಎಚ್ಚರಾಗ್ಲಿಕ್ಕೆ.. ರೆಸ್ಟ್ ತಗೊಳ್ಲಿ ಬಿಡಿ' ಎಂದರು ನರ್ಸ್. ನಾನು-ಮಾವ ಹೊರಬಂದೆವು.

ಮನೆಗೆ ಫೋನ್ ಮಾಡಿದೆ. ಅಮ್ಮ ಫೋನಿನ ಬಳಿಯೇ ಕೂತಿದ್ದಳು ಅನ್ನಿಸೊತ್ತೆ; ಎರಡೇ ರಿಂಗಿಗೆ ಎತ್ತಿದಳು. 'ಅಮ್ಮಾ, ಆಪರೇಶನ್ ಆತು. ಅರಾಮಿದ್ದ ಅಪ್ಪ' ಹೇಳಿದೆ. 'ಆತಾ? ಎಚ್ರಾಯ್ದಾ?' ಒಂದೇ ಉಸಿರಿಗೆ ಕೇಳಿದಳು. 'ಹುಂ, ಲೇಸರ್ರಲ್ಲೇ ಆತು. ಏನೂ ಪ್ರಾಬ್ಲಂ ಇಲ್ಲೆ. ಮಾತಾಡಿದ್ದಿ ಅಪ್ಪನ ಹತ್ರ' ಉತ್ತರಿಸಿದೆ. ಆ ಕಡೆಯಿಂದ ಮತ್ತಷ್ಟು ಆತಂಕ ತುಂಬಿದ ಪ್ರಶ್ನೆಗಳು. ಸಾವಧಾನದಿಂದ ಉತ್ತರಿಸಿದೆ, ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತಾ. ಅಜ್ಜ ಫೋನಿಸಕೊಂಡ. 'ಎಂಥಾ, ಹೊಟ್ಟೆ ಕೊಯ್‍ದ್ವನಾ?' ಅಜ್ಜನ ದನಿಯಲ್ಲಿ ಬಿಕ್ಕು. 'ಇಲ್ಲೆ ಮಾರಾಯಾ.. ಏನೂ ಮಾಡ್ಲೆ. ಹಂಗೇ ತೆಗದ್ದ ಕಲ್ಲು' ಅಂತ ನಾನಂದರೆ ನಂಬಲು ತಯಾರಿಲ್ಲದ ಅಜ್ಜ. ಬರೀ ಅಳು ಆ ಕಡೆಯಿಂದ. ಅಪ್ಪನಿಗೆ ಪೂರ್ತಿ ಎಚ್ಚರಾಗಿ, ವಾರ್ಡಿಗೆ ಶಿಫ್ಟ್ ಮಾಡಿ, ಅಪ್ಪನಿಗೇ ಮೊಬೈಲು ಕೊಟ್ಟು ಅಜ್ಜನ ಬಳಿ ಮಾತನಾಡಿಸುವವರೆಗೂ ಅಜ್ಜನ ಅಳುವನ್ನು ಒಂದು ಹಂತಕ್ಕೆ ತರುವುದೇ ಸಾಧ್ಯವಾಗಲಿಲ್ಲ: ನನಗೆ, ಅಮ್ಮನಿಗೆ, ಮನೆಯಲ್ಲಿ ಧೈರ್ಯಕ್ಕಿರಲು ಬಂದಿದ್ದ ನನ್ನ ಮತ್ತೊಬ್ಬ ಮಾವನಿಗೆ! ಅಜ್ಜ ತನ್ನ ಮಗನೊಂದಿಗೆ ಮಾತಾಡಿದ. ಅಪ್ಪ ತನ್ನ ಅಪ್ಪನಿಗೆ ಸಮಾಧಾನ ಹೇಳಿದ. ಅಜ್ಜ ತನ್ನ ಮಗನಿಗೆ ನೋವಾಗುತ್ತಿರಬಹುದೆಂದು ಕಲ್ಪಿಸಿ ಅತ್ತ. ಅಪ್ಪ ತನ್ನ ಅಪ್ಪನಿಗೆ ಅಳುವಂತಹದ್ದೇನಿಲ್ಲವೆಂದು ಸಣ್ಣ ದನಿಯಲ್ಲಿ ಹೇಳಿದ. ಅಜ್ಜನಿಗೆ ತನ್ನ ಮಗನನ್ನು ಕಣ್ಣಾರೆ ನೋಡುವನಕ ಸಮಾಧಾನವಿಲ್ಲ. ಅಪ್ಪ ತನ್ನ ಅಪ್ಪನನ್ನು ಪೂರ್ತಿ ತಹಬಂದಿಗೆ ತರುವುದು ಹೇಗೆಂದು ತಿಳಿಯದೇ ಭಾವುಕನಾಗುತ್ತಿದ್ದ. ಆ ಕ್ಷಣದಲ್ಲಿ- ಅಷ್ಟು ವಯಸ್ಸಾಗಿರುವ ಅಜ್ಜ, ಇನ್ನೂ ಆಪರೇಶನ್ನಿನ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಪ್ಪ, ಮೂಕನಂತೆ ಬೆರಗಿಲೆ ನೋಡುತ್ತಿರುವ ನಾನು -ನಾವು ಮೂವರ ಕಣ್ಣಲ್ಲೂ ಬಂದೊತ್ತಿ ನಿಂತಿದ್ದ ಹನಿಗಳ ಭಾವ ಒಂದೇ ಇತ್ತು: ಅಪ್ಪ-ಮಗ; ಪಿತಾ-ಸುತ; ಬಾಪ್-ಬೇಟಾ; ಫಾದರ್-ಸನ್! ಒಂದೇ ಬಂಧ!

ಅಂದುಕೊಳ್ಳುತ್ತಿದ್ದೆ ಆ ಕ್ಷಣಗಳಲ್ಲಿ: ಸಂಬಂಧ ದೊಡ್ಡದು ಕಣಾ ಬದುಕಿಗೆ, ಬಂಧ ದೊಡ್ಡದು.. ಒಬ್ಬ ಅಪ್ಪ ಇರಬೇಕು ಬಾಳಿಗೆ -ಅಂತ. ಎರಡು ದಿನದ ನಂತರ ಅಪ್ಪನಿಗೆ ಡಿಸ್‌ಚಾರ್ಜ್ ಆಗಿ, ಊರಿಗೆ ಕರೆದುಕೊಂಡು ಹೋಗಿ, ನಾನು ಬೆಂಗಳೂರಿಗೆ ವಾಪಸು ಬರುವವರೆಗೂ ಆ ಕಣ್ಣೀರ ಕ್ಷಣ ನನ್ನ ಮಾನಸ ಸರೋವರದಲ್ಲಿ ಅಲೆಗಳನ್ನೆಬಿಸುತ್ತಲೇ ಇತ್ತು.

* *

ಇಲ್ಲಿ ಬೆಂಗಳೂರಿನ ಉಲ್ಲಾಳ ಉಪನಗರದಲ್ಲೊಂದು ಅನಾಥಾಶ್ರಮ. ಹೆಸರು 'ನೆಲೆ'. ರದ್ದಿ ಹೆಕ್ಕುವ ಬೀದಿ ಮಕ್ಕಳು, ಮನೆಯಿಂದ ಓಡಿ ಬಂದವರು, ತಂದೆ-ತಾಯಿ ಯಾರೆಂದೇ ಗೊತ್ತಿಲ್ಲದವರು, ನಿರಾಶ್ರಿತರು, ಪರಿತ್ಯಕ್ತರು ಆದ ಪುಟ್ಟ ಮಕ್ಕಳನ್ನು ಒಂದೆಡೆ ಕಲೆಹಾಕಿ, ಅವರಿಗೆ ಊಟ, ವಸತಿ, ವಸ್ತ್ರ, ಶಿಕ್ಷಣ, ಮನೋರಂಜನೆ ಕೊಡುತ್ತಿರುವ ಸಂಸ್ಥೆ. ಈ ಮಕ್ಕಳ ಹಾಡು, ನೃತ್ಯ, ಏಕಪಾತ್ರಾಭಿನಯ, ಆಟ, ಭಾಷಣಗಳ ಮಧ್ಯೆ ನನ್ನ ಗೆಳೆಯನೊಬ್ಬನ ಮಗನ ಹುಟ್ಟುಹಬ್ಬ. ಮಕ್ಕಳೆಲ್ಲ ಸೇರಿ ಮಗುವಿಗೆ ಆರತಿ ಎತ್ತಿ, ಶುಭ ಕೋರಿ...

ಖುಷಿಯೇ ಮೈವೆತ್ತಂತೆ ಕುಣಿದಾಡುತ್ತಾ ನಲಿದಾಡುತ್ತಾ ಓಡಾಡಿಕೊಂಡಿರುವ ಈ ಮಕ್ಕಳೊಂದಿಗೆ ಬೆರೆತು ಊಟ ಮಾಡುವಾಗ, ಪಕ್ಕದಲ್ಲಿ ಕೂತ ಮಗುವನ್ನು ನೋಡುತ್ತಾ ಇದರ ಅಪ್ಪ ಎಲ್ಲಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದೆ. ರದ್ದಿ ಹೆಕ್ಕುತ್ತಿರಬಹುದೇ? ಭಿಕ್ಷೆ ಬೇಡುತ್ತಿರಬಹುದೇ? ಜೈಲಿನಲ್ಲಿರಬಹುದೇ? ಕುಡಿದು ಫುಟ್‍ಪಾತ್ ಮೇಲೆ ಮಲಗಿರಬಹುದೇ? ಚಪಲ ತೀರಿಸಿದ ಹೆಂಗಸು ಯಾರೆಂಬುದನ್ನೇ ಮರೆತು ಮನೆಯಲ್ಲಿ ನೆಮ್ಮದಿಯಿಂದಿರಬಹುದೇ? ಸನ್ಯಾಸತ್ವ ಸ್ವೀಕರಿಸಿ ಹಿಮಾಲಯಕ್ಕೆ ಹೋಗಿರಬಹುದೇ? ಸತ್ತು ಹೋಗಿರಬಹುದೇ? ಅಥವಾ... ಅವನಿಗೂ ಕಿಡ್ನಿಯಲ್ಲಿ ಕಲ್ಲಾಗಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿಸಿಕೊಳ್ಳುತ್ತಿರಬಹುದೇ? ಇಲ್ಲಿಯ ಯಾವ ಮಗು ಅಪ್ಪನ ಆಪರೇಶನ್ನಿನ ಸುದ್ದಿ ಕೇಳಿ ಊರಿಗೆ ಧಾವಿಸಬಲ್ಲದು? ಇಲ್ಲಿಯ ಯಾವ ಮಗುವಿನ ತಂದೆ ತನ್ನ ಮಗಳ ಕಷ್ಟದ ಸಂದರ್ಭದಲ್ಲಿ ಕಣ್ಣೀರಿಡಬಲ್ಲ?

ಅಂದುಕೊಳ್ಳುತ್ತಿದ್ದೇನೆ ಈ ಕ್ಷಣಗಳಲ್ಲಿ: ಬಂಧವೆಂದರೆ ಇಷ್ಟೇ ಕಣಾ, ಸಂಬಂಧವೆಂದರೆ ಇಷ್ಟೇ..

ಅಪ್ಪನಿಲ್ಲವೆಂಬ ಕೊರತೆ ಕಾಣದಂತೆ ಇವರನ್ನು ಸಾಕುತ್ತಿದೆ 'ನೆಲೆ'. ಇಚ್ಚೆಯಿದ್ದರೆ, ಮಕ್ಕಳ ನಲಿವನ್ನು ನೋಡಿ ಮನ ತುಂಬಿಕೊಳ್ಳುವ ಇಚ್ಚೆಯಿದ್ದರೆ, ಸಹಾಯ ಮಾಡಬಹುದು ನಾವೂ...

ಬೆಳಗಾ ಮುಂಚೆ ಅಪ್ಪನಿಗೆ ಕಳುಹಿಸಿದ್ದ 'ಹ್ಯಾಪಿ ಫಾದರ್ಸ್ ಡೇ' ಮೆಸೇಜನ್ನು ಸೆಂಟ್ ಐಟಮ್ಸ್‍ನಲ್ಲಿ ಮತ್ತೊಮ್ಮೆ ನೋಡಿಕೊಳ್ಳುತ್ತೇನೆ. ಮೊಬೈಲನ್ನು ಹಿತವಾಗಿ ಸವರುತ್ತೇನೆ. ತಾವು ಹುಟ್ಟಿದ ದಿನ ಯಾವುದೆಂದೇ ಗೊತ್ತಿಲ್ಲದಿರಬಹುದಾದ ಈ ಮಕ್ಕಳ ಮಧ್ಯೆ ನಮ್ಮ ಮಗುವಿನ ಹುಟ್ಟುಹಬ್ಬವನ್ನು ಆಚರಿಸುವುದು ಎಷ್ಟು ಸರಿಯೋ ಎಂಬಾಲೋಚನೆ ಮನಸಿಗೆ ಬಂದರೂ, ಆ ಮಕ್ಕಳು ದಿನವಿಡೀ ಸಂಭ್ರಮದಿಂದ ನಲಿದಾಡುತ್ತಿದ್ದುದನ್ನು ನೆನೆಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾ, ಹೆಚ್ಚಿಗೆ ಯೋಚಿಸಲಾರದೇ ಬೈಕು ಹತ್ತುತ್ತೇನೆ. ಈ ಬಾರಿ ಮಾನಸ ಸರೋವರದಲ್ಲಿ ಬೇರೆಯದೇ ನೀರು.

22 comments:

ಶ್ರೀನಿಧಿ.ಡಿ.ಎಸ್ said...

ಅತ್ಯಂತ ಕೆಟ್ಟ ಮೂಡು ಹೊತ್ತು ದಿನ ಆರಂಭಿಸಿದ್ದೆ. ಥ್ಯಾಂಕ್ಸ್ ಮಾರಾಯಾ..

ಸಂಬಂಧ ದೊಡ್ಡದು ಕಣಾ, ದೊಡ್ಡದು.

ಶಾಂತಲಾ ಭಂಡಿ said...

ಪುಟ್ಟಣ್ಣಾ...
"ಬಂಧ ದೊಡ್ಡದು ಕಣಾ"
ಈ ಕಣ್ಣಲ್ಲೂ ಬಂದೊತ್ತಿ ನಿಂತ ಹನಿಯೊಳವಿನ ಭಾವ ಅದೇ...
ನಿಮ್ಮ ತಂದೆಯವರು ಬೇಗ ಗುಣಮುಖರಾಗಲೆಂಬ ಬೇಡಿಕೆ ಬಗವಂತನಲ್ಲಿ.

Vijaya said...

ನಿಜ, ಅಪ್ಪ ಇರಬೇಕು ಬಾಳಿಗೆ :-(

Vijaya said...

wishing a speedy recovery to your dad!

ಸುಶ್ರುತ ದೊಡ್ಡೇರಿ said...

hey, ಅಪ್ಪಂಗೆ ಆಪರೇಶನ್ ಆದದ್ದು ಈಗ ಆರು ತಿಂಗಳ ಹಿಂದೆ. ನಿನ್ನೆ ಅವೆಲ್ಲ ನೆನ್ಪಾಯ್ತು ಅಷ್ಟೇ. appa is fine now. thanx :)

Suma Udupa said...

Hi,

Writing was very good!
-Thanks,
Suma Udupa.K.

ಏಕಾಂತ said...

ನಿಮ್ಮ ಬ್ಲಾಗ್ ತಲೆಬರಹ ಹಾಗೂ ಅಡಿಬರಹ ತುಂಬಾ ಹಿಡಿಸಿತು. ಮೆಚ್ಚಿ ಬರೆದಿದ್ದೀರಿ. ಮೆಚ್ಚುಗೆಯಾಯ್ತು. ನಿಮ್ಮ ಹುಡುಕಾಟಕ್ಕೆ ನನ್ನ ಹಾರೈಕೆಯಿದೆ.

....Laxmikanth...

Harish - ಹರೀಶ said...

ಸೂಪರ್ರೋ ಸೂಪರ್ !!

Tina said...

ಸುಶ್ರುತ,
ಬಲು ಚೆನ್ನಾಗಿ ಬರೆದಿದೀರಿ. ಮಗನಿಗೆ ನೋವಾಗುವುದೇನೊ ಎಂದು ಕಣ್ಣೀರು ಹಾಕಿದ ನಿಮ್ಮ ಅಜ್ಜ, ಅಪ್ಪನನ್ನ ಅಸಹಾಯಕ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲಾಗದೆ ಹಿಂಸೆ ಅನುಭವಿಸಿದ ನೀವು.. ಇನ್ನು ನೀವುಗಳು ಅಪ್ಪಂದಿರಾದಾಗಲೆ ನಿಮ್ಮ ಅಜ್ಜನ ಕಾಳಜಿ ತಿಳಿದೀತು, ಅಲ್ಲ? ನನ್ನಮ್ಮ ಯಾವಾಗಲು ಅನ್ನೋರು ’ಮಂಕೇ, ಈಗೇನು ತಿಳೀತದೆ? ಅಮ್ಮ ಆಗು, ನಮ್ಮ ನೋವು ಗೊತ್ತಾಗತ್ತೆ’ ಅಂತ. ಚೆನ್ನಾಗಿ ಗೊತ್ತಾಯಿತು.
ಬಹಳ ಭಾವಜೀವಿ ನೀವು. ನಿಮ್ಮ, ನಾವಡರ ಬರಹಗಳು ತಮ್ಮ ಭಾವಪೂರ್ಣ ಕ್ವಾಲಿಟಿಯಿಂದ ಮತ್ತೊಮ್ಮೆ ಓದುವ ಹಾಗೆ ಮಾಡುತ್ತವೆ.
- ಟೀನಾ

chetana said...

ಸುಶ್ರುತ,
ಒಳ್ಳೆಯ ಬರಹ.
ಅಂದ ಹಾಗೆ, ನೀವು ‘ನೆಲೆ’ಯ ಬಗ್ಗೆಯೂ ಬರೆದಿದ್ದು ಬಹಳ ಖುಶಿ ಕೊಟ್ಟಿತು. ಆ ಮಕ್ಕಳ ಮುಗ್ಧತೆ, ಆಸಕ್ತಿ, ಕನಸುಗಳು ಎಲ್ಲವೂ ನೆನಪಾಗಿ ಉಲ್ಲಾಸ ತುಂಬಿತು.
ಥ್ಯಾಂಕ್ಸ್.

- ಚೇತನಾ

ಸುಶ್ರುತ ದೊಡ್ಡೇರಿ said...

ನಿಧಿ,

ಹೌದೂಂತೀಯಾ? ಥ್ಯಾಂಕ್ಸ್ ಮಾರಾಯಾ..

ಪುಟ್ಟಕ್ಕ, vijaya madam, suma,

ಹ್ಮ್..? ಥ್ಯಾಂಕ್ಸ್.

ಏಕಾಂತ,

ಧನ್ಯವಾದ ಲಕ್ಷ್ಮೀಕಾಂತ್. ಬ್ಲಾಗಿಗೆ ಬರುತ್ತಿರಿ.

ಸುಶ್ರುತ ದೊಡ್ಡೇರಿ said...

ಹರೀಶ,

ಥ್ಯಾಂಕ್ಸೋ ಥ್ಯಾಂಕ್ಸು!

Tina,

ಇನ್ನು ನೀವುಗಳು ಅಪ್ಪಂದಿರಾದಾಗಲೆ ನಿಮ್ಮ ಅಜ್ಜನ ಕಾಳಜಿ ತಿಳಿದೀತು, ಅಲ್ಲ? >>ಹ್ಮ್.. ಇದ್ದೀತು.. :(
ಥ್ಯಾಂಕ್ಸ್ ಮೇಡಂ..

ಚೇತನಾ,

ಧನ್ಯವಾದ ಅಕ್ಕಾ. 'ನೆಲೆ'ಯ ಬಗ್ಗೆ ಬರೆಯದೇ ಇರಲಾಗಲಿಲ್ಲ.

ರಂಜನಾ ಹೆಗ್ಡೆ said...

nija sambhanda doddadu. appa the great. nice article.

ಜೋಮನ್ said...

ಸುಶ್ರುತ,

ನವಿರಾದ ಲೇಖನ, ಅಪ್ಪಯ್ಯ ಆರೋಗ್ಯವಾಗಿರಲಿ.

ಧನ್ಯವಾದಗಳು.

ಜೋಮನ್.

SHREE (ಶ್ರೀ) said...

ಸಂಬಂಧ ದೊಡ್ಡದು - aMta ellaruu opteevi... adre jeevana ondond sala maresatthe adna... mareebaardu. Chandada lekhana... Thanx Sush.

Shrilatha Putthi said...

ಸುಶ್,

ಅದೇ ಆಚಾರ್ಯ ಆಸ್ಪತ್ರೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ಆಗ ತಾನೇ ಸಿಸೇರಿಯನ್ ಹೆರಿಗೆ ಮಾಡಿ ಹೊರತೆಗೆದ ಅಕ್ಕನ ಮಗುವನ್ನು ಸಿಸ್ಟರ್ ನನ್ನ ಕೈಯಲ್ಲಿ ಕೊಟ್ಟು, "ಮಗು ಎಷ್ಟ್ ಚಂದ ಇತ್ತ್, ಕೂದ್ಲ್ ಕಾಣಿ ಲಾಯ್ಕಿತ್ತ್. ಹೆಣ್ಣಾಯಿದ್ರೆ ಮಿಸ್ ಇಂಡಿಯಾ ಆತಿತ್ತ್" ಎಂದೆಲ್ಲಾ ಮಾತಾಡುತ್ತಿದ್ದಾಗ..

ಮತ್ತದೇ ಆಸ್ಪತ್ರೆಯಲ್ಲಿ ಕಳೆದ ವರ್ಷ.. ಬಿದ್ದು ಬಲಕೈ ಮೂಳೆ ಮುರಿದುಕೊಂಡಿದ್ದ ಅಮ್ಮ ಕೈಗೆ ಪ್ಲಾಸ್ಟರ್ ಹಾಕಿಸಿಕೊಂಡು,ಇನ್ನು ಒಂದು ತಿಂಗಳು ಬ್ಯಾಂಡೇಜ್ ಇರಬೇಕೆಂದು ಡಾಕ್ಟರ್ ಹೇಳಿದಾಗ, "ಅಶನ ಎಂಚ ಅಂಪುಣ ಜೆ?" ಎಂದು ಕೇಳಿದಾಗ..

ಇದೇ ತರ feeling ಆಗಿತ್ತು! ಸಂಬಂಧ ಯಾವಾಗಲೂ ದೊಡ್ಡದು.

ಸುಪ್ತದೀಪ್ತಿ suptadeepti said...

ಸಂಬಂಧಗಳ ಬಂಧ ಅರಿಯಲಾಗದ್ದು, ಮುರಿಯಲಾಗದ್ದು, ಮರೆಯಲಾಗದ್ದು. ಅದನ್ನು ಬರೆದ ರೀತಿ- ಮೆಚ್ಚುವಂಥಾದ್ದು.

'ನೆಲೆ'ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

avisblog said...

ಸುಶ್ರುತ...

ಬರವಣಿಗೆಯ ಶೈಲಿ... ಮನತಟ್ಟುವಂತೆ... ಜಸ್ಟ್ ಹ್ಯಾಟ್ಸ್ ಆಫ್...!

----

ಸಾರಿ.... ರ‌್ಯಾಂಕ್ ಬರೆಯುವ ಕುರಿತಾದ ಲೇಖನಕ್ಕೆ ನಿಮ್ಮ ಕಾಮೆಂಟನ್ನು ಯಾಕೋ ನಮ್ಮ ಆಕಿಸ್ಮೆಟ್ ಎಂಬ ಸ್ಪ್ಯಾಮ್ ನಿರೋಧಕವು ಆಕ್ಸಿಡೆಂಟಾಗಿ ಸ್ಪಾಮ್‌ಗೆ ಕಳುಹಿಸಿತ್ತು. ಇವತ್ತು ನೋಡಿದಾಗ ಗೊತ್ತಾಯಿತು.

ಇರಲಿ... ಇದು ಕೂಡ ಒಂದು ಆಕ್ಸಿಡೆಂಟೇ. ಯಾಕೆಂದರೆ "ಆ" ಕ್ಕೆ "ಯ" ಅಡಿವತ್ತು ಕೊಡುವುದು ಯುನಿಕೋಡಿನಲ್ಲಿ ಸಾಧ್ಯವಾಗದ ಮಾತು. ಬಹುಶಃ ಕನ್ನಡಲ್ಲಿಯೂ ಅದು ಬಳಕೆಯಲ್ಲಿಲ್ಲ. ಇಂಗ್ಲಿಷಿನಲ್ಲಿರೋದು ಮಾತ್ರ. ನಾವೇನಿದ್ದರೂ ಆಂಟಿವೈರಸ್, ಆಕ್ಸಿಡೆಂಟ್, ಅಂತಲೇ ಹೇಳಬೇಕು. :)

ಧನ್ಯವಾದಗಳು.

Parisarapremi said...

ನನಗೆ ಅಪ್ಪನೊಂದಿಗಿನ ಸಂಬಂಧದ ಅನುಭವಿವಲ್ಲ ಕಣಪ್ಪ. ಬರೀ ನೋಡಿದ್ದು, ಕೇಳಿದ್ದು, ಓದಿದ್ದು, ಕಲ್ಪನೆ ಮಾಡಿದ್ದು. ನಿನ್ನ ಲೇಖನದಿಂದ ಒಂದಷ್ಟು ಕಲಿತೆ. ವಿಜಯಾ ಹೇಳಿರೋ ಕಮೆಂಟನ್ನೇ ಮತ್ತೊಂದೆರಡು ಸಲ ಓದ್ಕೊಂಡು ಹೊರಟೆ ನಾನು..

ಅಂದ ಹಾಗೆ, ಲೇಖನ ಸೊಗಸಾಗಿದೆ. :-)

dinesh said...

ಧ ....ದೊಡ್ಡದು ಕಣಾ .... ಸೂಪರ್ ಬರಹ...

ಸುಶ್ರುತ ದೊಡ್ಡೇರಿ said...

ಶ್ರೀ,

ನೀ ಹೇಳಿದ್ರಲ್ಲೂ ಒಂದು 'ಇದು' ಇದೆ ನೋಡು! ಒಂದೊಂದ್ಸಲ ಮರೆಯೊತ್ತೆ..

ಥ್ಯಾಂಕ್ಸ್.

shrilatha,

ನೈಸ್! ಚೆನ್ನಾಗಿದೆ ನೀವು ಹಂಚಿಕೊಂಡದ್ದು..
ನಿಮ್ಮ ತುಳು ಸಂಭಾಷಣೆಯನ್ನ ನನ್ನ ಗೆಳೆಯರಿಂದ translate ಮಾಡಿಸಿಕೊಂಡು ಅರ್ಥ ಮಾಡಿಕೊಂಡೆ. :)
ಥ್ಯಾಂಕ್ಸ್..

ಸುಪ್ತದೀಪ್ತಿ,

ನಿಜ ನಿಜ.. ಧನ್ಯವಾದ..

ಸುಶ್ರುತ ದೊಡ್ಡೇರಿ said...

avi,

ಧನ್ಯವಾದ ಅವಿನಾಶ್!

ಹೋಗ್ಲಿ ಬಿಡಿ, 'ಅಪಘಾತ', 'ವಿಷಕಣ ನಿರೋಧಕ' ಅಂತ ಅಚ್ಚಾನುಅಚ್ಚ ಕನ್ನಡದಲ್ಲಿ ಮಾತಾಡೋಣ. ಆಗ ಅಚ್ಚಾ ಅಚ್ಚಾ ಆಗತ್ತೆ. :)

parisarapremi,

ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಅರುಣ್..
:-/

ಂಕ್ಯೂ.. :-)