Monday, July 21, 2008

ಚರಣಗಳ ಮಧ್ಯದ ಮೌನಚಣ..

ಗಿಜಿಗುಡುವ ದಿನಗಳು. ಮಳೆಗಾಲವಾದರೂ ಬಾರದ ಮಳೆ - ಧಗೆಯ ದಿನಗಳು. ದಿನಬೆಳಗಾದರೆ ಆಫೀಸು, ಶೆಡ್ಯೂಲು, ಟೆನ್ಷನ್ನು, ಟ್ರಾಫಿಕ್ಕು, ಒಂದಲ್ಲಾ ಒಂದು ಕಿರಿಕ್ಕು. ಕೋರಮಂಗಲದಲ್ಲೆಲ್ಲೋ ಹುಡುಗ, ರಾಜಾಜಿನಗರದಲ್ಲೆಲ್ಲೋ ಹುಡುಗಿ; ಎಸ್ಸೆಮ್ಮೆಸ್ಸಿನ ತುಂಬ ಬರೀ ಮಿಸ್ಯೂ; ಅದೂ ಬಾರದ ದಿನ ಬದುಕೆಂಬುದು ಕರೆಂಟಿಲ್ಲದ ಬೆಂಗಳೂರು. ಸಾಯಿಬಾಬಾ ಕಣ್ಣು ಬಿಟ್ಟರೂ ಮುಗಿಯದ ಹಣದುಬ್ಬರ; ಬಿಜೆಪಿ ಬಂದರೂ ಅಷ್ಟೇ, ಯಡಿಯೂರಪ್ಪ ಗೆದ್ದರೂ ಅಷ್ಟೇ, ಅದೇ ಹೊಲಸು ರಾಜಕೀಯ; ಬದಲಾಗದ ಜೀವನ ಕ್ರಮ; ದಿನವೂ ಕರ್ಮಕಾಂಡ. ಇದನ್ನೆಲ್ಲಾ ಬಿಟ್ಟು ಎಲ್ಲಿಗಾದರೂ ಓಡಿ ಹೋಗಿಬಿಡಬೇಕೆಂಬ ತಪನೆ; ಸಾಧ್ಯವಾಗದ ಅಸಹಾಯಕತೆ; ಬದುಕು ಮಾಯೆಯ ಆಟ.

ಸರಿ. ಹಾಗಾದರೆ ಏನು ಮಾಡಬೇಕು? ಈ ಏಕತಾನತೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಬದುಕಿಗೂ ಬೆಂಗಳೂರಿಗೂ ನಡುವೆ ಫರಕು ಕಲ್ಪಿಸುವ ಬಗೆಯೆಂತು?

ಊರಲ್ಲಾದರೂ ಮಳೆ ಬರುತ್ತಿದ್ದಿದ್ದರೆ ಗಂಟು ಮೂಟೆ ಕಟ್ಟಿಕೊಂಡು, ಕನಿಷ್ಟ ಒಂದು ವಾರ ರಜ ಹಾಕಿ ಹೋಗಿಬಿಡಬಹುದಿತ್ತು. ದಟ್ಟ ಮೋಡಕಟ್ಟಿದ ಮುಗಿಲು ನೋಡುತ್ತ ಬೆಳಗಾ ಮುಂಚೆ ಬಸ್‍ಸ್ಟಾಂಡಿನಲ್ಲಿ ಇಳಿಯಬಹುದಿತ್ತು. ಕಂಬಳಿ ಕೊಪ್ಪೆ ಹೊದ್ದು - ಉಗ್ಗ ಹಿಡಿದು ಗದ್ದೆಗೆ ಹೊರಟ ಆಳುಗಳು 'ಓಹ್ ಹೆಗ್ಡೇರು ಬೆಂಗ್ಳೂರಿಂದ ಬಂದ್ರಾ?' ಎಂದು ಕೇಳುವಾಗ 'ಹೌದು, ನೀ ಅರಾಮಿದೀಯಾ?' ಎನ್ನುತ್ತಾ ಮಣ್ಣು ರಸ್ತೆಯಲ್ಲಿ ಜಾರುತ್ತಾ ಮನೆ ಕಡೆ ಹೆಜ್ಜೆ ಹಾಕಬಹುದಿತ್ತು. ಕಟ್ಟೆ ಮೇಲೆ ತನ್ನ ದಿನದ ಮೊದಲ ಕವಳದ ತಯಾರಿಕೆಯಲ್ಲಿ ತೊಡಗಿದ್ದ ಕನ್ನಡಕ ಹಾಕಿಕೊಳ್ಳದ ಮಂಜುಗಣ್ಣಿನ ಅಜ್ಜನ ಎದುರು ನಿಂತು 'ಯಾರು ಬಂದಿದ್ದು ಹೇಳು ನೋಡನ?' ಎಂದು ಕೇಳಬಹುದಿತ್ತು. ದನಿಯಿಂದಲೇ ಮೊಮ್ಮಗನನ್ನು ಗುರುತಿಸಿದ ಅವನು 'ಓಹೊಹೋ, ಮಾಣಿ! ಇದೇನೋ ಇದ್ದಕ್ಕಿದ್ದಂಗೆ?' ಎಂದು ಆನಂದಾಶ್ಚರ್ಯದಿಂದ ಕೇಳುವಾಗ 'ನಿನ್ನ ನೋಡವು ಅನ್‍ಸ್ಚು; ಹಂಗೇ ಬಂದಿ' ಎಂದು ಅವನ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಅಮ್ಮ ದೋಸೆಯನ್ನು ಎರೆದೆರೆದು ಹಾಕುವಾಗ ಬಾಳೆಲೆಯಲ್ಲಿ ಜೋನಿ ಬೆಲ್ಲ, ಹೆರೆಗಟ್ಟಿದ ತುಪ್ಪ, ಚೂರೇ ಉಪ್ಪಿನಕಾಯಿ, ಗಟ್ಟಿ ಮೊಸರು ಹಾಕಿಕೊಂಡು ಹೊಟ್ಟೆ ತುಂಬ ತಿನ್ನಬಹುದಿತ್ತು; ಕುಕ್ಕರಗಾಲಲ್ಲಿ ಕೂತ ಅಪ್ಪನಿಗೆ ಬೆಂಗಳೂರಿನ ಕತೆ ಹೇಳಬಹುದಿತ್ತು. ಕೊಟ್ಟಿಗೆಗೆ ಹೋಗಿ ಶಂಕ್ರಿ ಹಾಕಿದ ಹೊಸ ಕರುವಿಗೆ ಹಿಂಡಿಯ ಚೂರು ಕೊಟ್ಟು 'ಫ್ರೆಂಡ್' ಮಾಡಿಕೊಳ್ಳಬಹುದಿತ್ತು; ಬೆದರಿದಂತಾಡುವ ಅದರ ಕಣ್ಣು ನೋಡುತ್ತಾ ಯಾರನ್ನೋ ನೆನಪು ಮಾಡಿಕೊಳ್ಳಬಹುದಿತ್ತು.

ಅಮ್ಮ ಅಂಗಳದಲ್ಲಿ ಹಾಕಿದ ಸೌತೆಬೀಜ ಮಳೆನೀರು ಕುಡಿದು ದಪ್ಪಗಾಗಿ, ಮೊಳಕೆಯೊಡೆದು, ತಾನು ಹುದುಗಿದ್ದ ನೆಲವನ್ನು ತಳ್ಳಿಕೊಂಡು ಹೊರಬಂದು, ರವಿಕಿರಣ ಉಂಡು ಮೊಳಕೆ ಬಲಿತು ಸಣ್ಣ ಎಲೆಗಳು ಮೂಡಿ, ಹರಿತ್ತು ಹರಿದು ಬಳ್ಳಿ ಬೆಳೆದು ಇಡೀ ಅಂಗಳವನ್ನಾವರಿಸಿ... ದೊಡ್ಡ ದೊಡ್ಡ ಎಲೆಗಳ ಬಳ್ಳಿಯಲ್ಲಿ ಪುಟ್ಟ ಪುಟ್ಟ ಬಿಳಿ ಹೂಗಳು ಅರಳಿ, ಬಣ್ಣ ಬಣ್ಣದ ಚಿಟ್ಟೆಗಳು ಆ ಹೂವನರಸಿ ಬಂದು, ಮಕರಂದ ಹೀರಿ, ಊಹೂಂ ದಾಹ ತೀರದೇ ಮತ್ತೊಂದು ಹೂವಿಗೆ ಹೋಗಿ ಕುಳಿತದ್ದೇ ಪರಾಗಸ್ಪರ್ಶವೇರ್ಪಟ್ಟು, ಹೂವ ತಾಯಿಯಾಗುವ-ಕಾಯಿಯಾಗುವ ಕನಸು ನನಸಾಗಿ... ಹೂವ ಅಂಡಿನಲ್ಲೇ ಕಿರಿದಾದೊಂದು ಮಿಡಿ ಮೂಡಿ, ಆ ಮಿಡಿಯೇ ದೊಡ್ಡ ಸೌತೆಕಾಯಿಯಾಗಿ, ತಿಂಗಳೊಳಗೆ ಅದು ಹಣ್ಣಾಗಿ, ಆ ಹಣ್ಣೊಡಲ ತುಂಬ ನೂರಾರು ಬೀಜಗಳು; ಆ ಬೀಜಗಳ ತುಂಬ ಮತ್ತೆ ಧರೆಯೊಡಲು ಸೇರಿ ಮೊಳಕೆಯಾಗಿ ಬಳ್ಳಿಯಾಗಿ ಹೂವಾಗಿ ಕಾಯಾಗುವ ಕನಸುಗಳು... ಈ ಪ್ರಕೃತಿ ಎಷ್ಟೊಂದು ಸುಂದರ ಮತ್ತು ಸಹಜ..! ಅದರಲ್ಲೇ ಮುಳುಗಿಹೋಗುವ ಆನಂದಕಿಂತ ಮಿಗಿಲು ಮತ್ತೇನಿದೆ? -ಎಂದುಕೊಳ್ಳುತ್ತ ನಾನು ಅಂಗಳ - ಹಿತ್ತಿಲು - ತೋಟ ಎಂದೆಲ್ಲ ಓಡಾಡುತ್ತಾ...

ಆದರೆ ಈ ಬಾರಿ ಮಳೆಯೇ ಇಲ್ಲ. ಬರೀ ಅಪ್ಪನ ನಿಟ್ಟುಸಿರನ್ನೇ ಕೇಳಿಸುವ ಮೊಬೈಲಿನ ಸ್ಪೀಕರು. ಮೋಡಗಳ ಸುಳಿವೇ ಇಲ್ಲವಂತೆ. ಹೋರಾಡಿ ಪಡೆದ ಗೊಬ್ಬರ ಚೀಲದಲ್ಲೇ ಉಳಿದಿದೆಯಂತೆ. ಊರಲ್ಲೂ ಬವಣೆ, ದಾಹ, ನೀರು ತಳಕಂಡಿರುವ ಬಾವಿ, ಬರದ ಭಯ. ಅಂದರೆ, ಈಗ ಅಲ್ಲಿಗೆ ಹೋದರೆ ಪ್ರಯೋಜನವಿಲ್ಲ. ಹಾಗಾದರೆ ಏನು ಮಾಡಬೇಕು?

ಏನಿಲ್ಲ, ಒಂದಷ್ಟು ಗೆಳೆಯರನ್ನು ಕರೆದುಕೊಂಡು, ಬುತ್ತಿ ಕಟ್ಟಿಕೊಂಡು, ಚಾರಣ ಹೊರಟುಬಿಡಬೇಕು. ಮಡಿಕೇರಿಯ ಬಸ್‍ಸ್ಟಾಂಡ್ ಹೋಟೆಲು ತೆರೆಯುವುದನ್ನೇ ಕಾದು ಬಿಸಿಬಿಸಿ ಕಾಫಿ ಕುಡಿಯಬೇಕು. ಒತ್ತುಶಾವಿಗೆಗೆ ಸಿಹಿಹಾಲು ಹಾಕಿಕೊಂಡು ತಿನ್ನಬೇಕು. ಅಲ್ಲಿಂದ ಒಂದು ಜೀಪು ಮಾಡಿಸಿಕೊಂಡು 'ಕೋಟೆ ಬೆಟ್ಟ'ದ ಬುಡದವರೆಗೆ ಹೋಗಬೇಕು. ಅಲ್ಲಿಂದ ಆರೋಹಣ.

ಮೊದಲರ್ಧ ತಂಪು ಬಂಡಿಹಾದಿ; ಇಕ್ಕೆಲಗಳಲ್ಲಿ ಎಸ್ಟೇಟು. ದಾರಿಯುದ್ದಕ್ಕೂ ಅಲ್ಲಲ್ಲಿ ಅಡ್ಡ ಸಿಗುವ ಹರಿವ ತೊರೆಗಳು. ತಣ್ಣಗೆ ಕೊರೆವ ಶುದ್ಧಜಲ. ಬಾಟಲಿಗೆ ತುಂಬಿಸಿಕೊಳ್ಳಬೇಕು. ಕಾಲಿಗೆ ಹತ್ತಿಕೊಂಡ ಇಂಬಳವನ್ನು ಪ್ರೀತಿಯಿಂದ ಕಿತ್ತು ತೆಗೆಯಬೇಕು. ಸೋರುವ ರಕ್ತವನ್ನು ಕಡೆಗಣಿಸಿ, ಏದುಸಿರು ಬಿಡುತ್ತಾ ಬೆಟ್ಟ ಹತ್ತಬೇಕು. ಹಾದಿಯಲ್ಲಿ ಆನೆ ಹೆಜ್ಜೆ ಕಂಡು ಬೆಚ್ಚಬೇಕು. ಹಸಿರೆಲೆಗಳ ನಡುವೆ ಮಿಡತೆ ಮರಿಗಳೆರಡು ಆಟವಾಡುವುದನ್ನು ಕೆಮೆರಾದ ಮ್ಯಾಕ್ರೋ ಮೋಡಿನಲ್ಲಿ ಸೆರೆಹಿಡಿಯಬೇಕು. ಕಾಡುಹರಟೆ ಹೊಡೆಯುತ್ತ ಮೇಲೇರುತ್ತ ಏರುತ್ತ ಹೋದಂತೆಲ್ಲ ಬದುಕು-ಬ್ಯುಸಿ-ಬೆಂಗಳೂರು ಎಲ್ಲಾ ಮರೆತು ದೂರವಾಗುವುದನ್ನು, ಜಗತ್ತು ವಿಶಾಲವಾಗುವುದನ್ನು ಅರಿತುಕೊಳ್ಳುತ್ತ, ತಿನ್ನುವ ಚಾಕಲೇಟಿನಲ್ಲಿ ಕರಗಬೇಕು. ಮುಕ್ಕಾಲು ಬೆಟ್ಟ ಹತ್ತಿದ ನಂತರ ನಿಂತರೆ ಕಾಣುವ ಬೆಟ್ಟದ ಅಪೂರ್ವ ದೃಶ್ಯವನ್ನು ಕಣ್ತುಂಬ ಉಣ್ಣಬೇಕು. 'ಕುಹೂಊ' ಎಂದು ಕೂಗಬೇಕು. ಆ ಕೂಗು ಮಾರ್ದನಿಯಾಗಿ 'ಕುಹೂಊ' 'ಕುಹೂಊ' 'ಕುಹೂಊ' ಆಗುವುದನ್ನು ಕೇಳುತ್ತಾ ಮೈಮರೆಯಬೇಕು.

'ಇನ್ನೇನು, ಒಂದು ತಾಸು ಅಷ್ಟೇ. ಅದೋ, ಅಲ್ಲಿ ಕಾಣ್ತಿದೆಯಲ್ಲಾ, ಅದೇ ಶೃಂಗ' ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಪರಸ್ಪರ ಹುರಿದುಂಬಿಸುತ್ತಾ, ಹಸಿದ ಹೊಟ್ಟೆಯಲ್ಲಿ ದಡದಡನೆ ನಡೆಯಬೇಕು. ಜೋಕಿಗೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು. ಮಧ್ಯಾಹ್ನವಾಯಿತು ಎನ್ನುವಾಗ ತುದಿಯಲ್ಲಿರಬೇಕು.

ಅಲ್ಲೊಂದು ಗುಡಿ. ಗುಡಿಯೊಳಗ್ಯಾವುದೋ ದೇವರು ಕತ್ತಲೆಯಲ್ಲಿ. ಮರದ ಬಾಗಿಲಿಗೆ ಬೀಗ. ಬಡಿದರೆ ಮೌನಕ್ಕೆ ಢಂಡಣ ಬೆರೆಸುವ ಘಂಟೆಗಳು ಅಕ್ಕ-ಪಕ್ಕ. ಗುಡಿಯೆದುರು ಸುಮ್ಮನೆ ನೋಡುತ್ತ ಕೂತಿರುವ ಮೂರ್ನಾಲ್ಕು ಕಲ್ಲ ನಂದಿಗಳು. ಗುಡಿಯ ಕಟ್ಟೆಯ ಮೇಲೆ ಕೂತು, ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ತಿನ್ನಬೇಕು. ಚಟ್ನಿಯ ಖಾರಕ್ಕೆ ಬಾಯಿ ಸೆಳೆದುಕೊಳ್ಳಬೇಕು. ನೀರು ಕುಡಿಯಬೇಕು. ಹೊಟ್ಟೆ ತುಂಬಿದ ಹಿಗ್ಗಿನಲ್ಲಿ ಮತ್ತೆ ಎಲ್ಲರೂ ಹೊರಬಂದು ಶೃಂಗದ ತುದಿಯ ಬಂಡೆಗಳ ಮೇಲೆ ಒಬ್ಬರಿಗೊಬ್ಬರು ಒರಗಿ ಕುಳಿತುಕೊಳ್ಳಬೇಕು.

'ಯಾರಾದರೂ ಹಾಡು ಹೇಳಿ..?'
'ಹ್ಮ್, ಶ್ರೀಕಾಂತ್?'
'ಊಹುಂ, ನನಗಿಂತ ಶ್ರೀನಿವಾಸ್ ಚನಾಗ್ ಹಾಡ್ತಾನೆ'
'ಹೂಂ, ಶ್ರೀನಿವಾಸ್, ಹಾಡಿ'

ಬೀಸುತ್ತಿರುವ ತಂಗಾಳಿ. ಶ್ರೀನಿವಾಸ್ ಹಾಡತೊಡಗುತ್ತಾನೆ: 'ವ್ಯಥೆಗಳ ಕಳೆಯುವ ಕತೆಗಾರ.. ನಿನ್ನ ಕಲೆಗೆ ಯಾವುದು ಭಾರ..' ಅಶ್ವತ್ಥ್, ಬೆಟ್ಟದ ಮೇಲೆ ಅನುರಣಿಸುತ್ತಾರೆ. ಆ ಹಾಡಿನ ಚರಣಗಳ ಮಧ್ಯೆ, ಅಲ್ಲಲ್ಲಿ, ಚೂರೂ ಅಡಚಣೆಯಿಲ್ಲದ ಮೌನ... ಶ್ರೀನಿವಾಸ್ ನಂತರ ಅರುಣ್. ಆಮೇಲೆ ಶ್ರೀಕಲಾ. ಹಾಗೇ ವಿಜಯಾ. 'ಸುಶ್, ನೀನೂ ಹಾಡೋ' ಎನ್ನುವ ಶ್ರೀನಿಧಿ. ಫೋಟೋ ತೆಗೆಯುವ ಅಮರ್. ಅಷ್ಟರಲ್ಲಿ, ಬೀಸುವ ಗಾಳಿಯಲ್ಲಿ ಚಳಿಯ ಕಣಗಳು ಜಾಸ್ತಿಯಾಗಿ, ಎಲ್ಲರಿಗೂ ಮೈ ನಡುಗಿ, ಗುಡಿಯಲ್ಲಿ ಬಿಟ್ಟು ಬಂದಿದ್ದ ಜಾಕೆಟ್ಟುಗಳೆಡೆಗೆ ಓಟ.

ಮೈ-ಕೈ-ತಲೆ-ಮುಖ ಎಲ್ಲಾ ಮುಚ್ಚುವಂತೆ ಹೊದ್ದುಕೊಂಡು, ಮುದುಮುದುಡಿಕೊಂಡು ಹೊರಬಂದರೆ, ಬೆಳ್ಳಗೆ ಸುರಿಯತೊಡಗಿರುವ ಹಿಮ. ಎದುರಿಗಿರುವವರು ಯಾರು? ಊಹುಂ, ಕಾಣುತ್ತಿಲ್ಲ. ಮೋಡದ ಮೊಟ್ಟೆಯೊಳಗೆ ಅವಿತಿರುವ ನಾವು, ಆ ಹಿಮಕಣಗಳು ಪದರ ಪದರವಾಗಿ ಗಾಳಿಯಲ್ಲಿ ತೇಲಿ ತೇಲಿ ಬಂದು ಮೈಗಪ್ಪಳಿಸುವುದನ್ನು, ಗಿಡಗಳೆಲೆಗಳಿಂದ ನೀರು ತೊಟ್ಟಿಕ್ಕುವುದನ್ನು ನೋಡುತ್ತಾ, 'ಸ್ವರ್ಗ ಅಂದರೆ ಇದೇ ಇರಬೇಕು ಅಲ್ವೇನೋ ದೋಸ್ತಾ?' ಎಂದುಸುರುತ್ತಾ, ಸಮಯ ಉರುಳುತ್ತಿರುವುದೇ ತಿಳಿಯದಾಗಿ, ಹಾಗೇ ಸಂಜೆಯಾಗಿ.

ಕೆಳಗೆ ಕಾಯುತ್ತಿರುವ ಜೀಪಿನವನಿಲ್ಲದಿದ್ದರೆ ನಾವು ಅಲ್ಲೇ ಇರುತ್ತಿರಲಿಲ್ಲವೇ ಅವತ್ತು? ಯಾರಿಗೆ ಬೇಕಿತ್ತು ಈ ಜಗತ್ತು? ಮಂಜುಮುಚ್ಚಿದ ಬೆಟ್ಟದ ಮೇಲಿಂದ ಇಳಿಯುವ ದರ್ದಾದರೂ ಏನಿತ್ತು? ನಾಳೆ ಬೆಳಗಾದರೆ ಬೆಂಗಳೂರು, ಮತ್ತೆ ಟ್ರಾಫಿಕ್ಕು, ಅದೇ ಆಫೀಸು, ಹಾಳು ಮೊಬೈಲು, ಚೆಕ್ ಮಾಡಲೇಬೇಕಿರುವ ಈಮೇಲು, ಒಟ್ಟಿನಲ್ಲಿ ಬ್ಯುಸಿ, ತೈತೈ ಕುಣಿದಾಟ.

ಯಾಕೆ ಅಲ್ಲೇ ಉಳಿದುಬಿಡಲಿಲ್ಲ ನಾವು ಅವತ್ತು? ಆ ಬೆಟ್ಟ, ಆ ಹಸಿರು, ಆ ಕುಕಿಲು, ಆ ಹಾಡು, ಆ ಮಂಜು... ಯಾಕಾಗಬಾರದು ನಿರಂತರ? ಇಲ್ಲೆಲ್ಲಿ ಕ್ರೆಡಿಟ್ ಕಾರ್ಡುಜ್ಜಿದರೆ ಸಿಕ್ಕೀತು ಆ ಹಾಡಿನ ಮಧ್ಯದ ಮೌನ? ಇಲ್ಯಾವ ಪಾರ್ಕಿನ ಹೂವಿನ ಗಿಡದಲ್ಲಿ ಕಾಣಸಿಕ್ಕೀತು ಆ ಮಿಡತೆಯಾಟ? ಇಲ್ಲೆಷ್ಟೆತ್ತರದ ಬಿಲ್ಡಿಂಗು ಹತ್ತಿದರೆ ಕಂಡೀತು ಆ ಬೆಟ್ಟದ ಮೇಲಣ ರಮಣೀಯ ದೃಶ್ಯ?

ಗೊತ್ತು ನಮಗೂ, ಸಿಗುವುದಿಲ್ಲವೆಂದು. ಈ ಬೆಂಗಳೂರ ಬದುಕಿನ ಹಾಡೇ ಹೀಗೇ. ಈ ಹಾಡ ನಡುನಡುವೆ ಬೇಕು ಸಣ್ಣ ಸಣ್ಣ ಮೌನದ ಕ್ಷಣಗಳು. ಅದಕ್ಕೇ, ನಾವು ಹೊರಡುತ್ತೇವೆ ಚಾರಣ. ಈ ಸಲ ಕೋಟೆಬೆಟ್ಟ. ಮಳೆ ಬರಲಿ ಸಾಕು, ಸೀದಾ ಊರು. ಸೌತೆ ಬಳ್ಳಿಯ ನಡುವೆ ಎಳೇಕಾಯಿಗಾಗಿ ಹುಡುಕಾಟ. ಉಪ್ಪು-ಕಾರ.

15 comments:

chetana said...

ಮೊದ್ಲೇ ಬೆಂಗ್ಳೂರಂದ್ರೆ ಮೈಮೇಲೆ ಕಂಬ್ಳಿಹುಳ ಹತ್ತಿಕೊಂಡ ಹಾಗೆ ರೇಜಿಗೆಯಾಗ್ತಿದೆ... ನೀವು ಬೇರೆ...
ಹೋಗ್ಲಿ ಬಿಡಿ. ನೀವಾದ್ರೂ ಒಂದಿನ ಬೆಟ್ಟ ಗುಡ್ಡ ಹತ್ಕೊಂಡು ತಂಪಾಗಿದ್ದು ಬಂದ್ರಲ್ಲ, ಅಭಿನಂದನೆ!
ಬಹಳ ಚೆಂದದ ಬರಹ ಇದು. ಊರಿಗೆ ಹೋಗ್ಲಿಕ್ಕೆ ನಾನೂ ಮಳೆ ಬರೋದನ್ನ ಕಾಯ್ತಿದೀನಿ. :(
- ಚೇತನಾ

Vijaya said...

Sush .... nange en helbeku antha ne gothaagtilla ... tumba chennag bardideeya. nijavaaglu, alli swargadalle idvi alwa?
illi namnamma karma phalagalanna anubhavisale bekalla ... atleast aagaaga ee thara hogi baro adrushta naadru idyalla, kannu bitta sai baba no, yaaro ... avrige jai.
nange innondsala hogi, alli koothu, haadella mathe keli bandhaag aaytu :-)

ಅರ್ಚನಾ said...

sush,
beLagaguvude tada ....

breakfst ready maadi, tindu, bus catch maadi, trafic jam nalli nalugi, baLali beMdaagi, office na karya kalaapagaLa janjaatadalli muLugi, matte sanje hottige innomme bus catch maadi, trafic jam nalli mattashtu baLali, maraLi goodige hoguvashtara hottige..abba hegadaroo ondu dina mugiyitalla anisuttade..

bengaLoorinalli monday to friday jeevana ve anthaddu..naanadannu somavaaradinda shukravaaradavaregina mega dhaarawahi antale kareyuvudu..


inthaha jevaanada naduve, neevella gudda hatti, nalidu bandiddeeralla..odi khushi aayitu..


chendada baraha..good..keep it up..
cheers,
archu

Keshav Kulkarni said...

very good. Enjoyed reading every bit of it.
You are missing rain and village. It may sound funny, I am missing Mysore and Bangalore, its warm weather, roads full of people, two wheelers, autos and what not?
Keshav

ಶಾಂತಲಾ ಭಂಡಿ said...

ಪುಟ್ಟಣ್ಣಾ...
ಪ್ರತಿ ಕ್ಷಣದೊಳಗಿನ ಕ್ಷಣಗಳ ಹಿಡಿದಿಡುವ ಚಳಕಕ್ಕೆ ಬೆರಗಾಗಲೇ ಬೇಕು.
ಊರು, ಮಳೆಯನ್ನೇ ಕಾಣದ ಮಳೆಗಾಲ, ಚಾರಣ, ಇವತ್ತಿನ ತಕ ತೈ ಬದುಕಿನ ಚಿತ್ರಣ ಎಲ್ಲವನ್ನೂ ಒತ್ತಟ್ಟಿಗೆ ಹೆಣೆದು ಓದಿದವರು ಭಾವುಕರಾಗ್ಲೇ ಬೇಕು. ಕಣ್ಣಂಚು ತೇವವಾಗುತ್ತಲೇ ತುಟಿಯಂಚಲಿ ಮುಗುಳ್ನಗೆ ಮಿಂಚಲೇ ಬೇಕು.
ಓಡೋಡಿ ಊರನ್ನೊಮ್ಮೆ ಸೇರುವ ತವಕ ಹುಟ್ಟಿಸುವ ಬರಹ.

ಆಗಸ ನೋಡುತ್ತ ಇಷ್ಟು ಮಾತ್ರ ಬೇಡಿಕೊಳ್ಳಲು ಸಾಧ್ಯ" ಒಮ್ಮೆ ಮಳೆಸುರಿಯಲಿ ಸಾಕು".

Praveen said...

Hi Sush..
Really I was not able to undersand the intent of this post, Here are you writing abt Bangalore,your Village or trucking or fedup with the routine job.
Sorry yako half boild writ up anstu.
Praveen

ಸಂತೋಷಕುಮಾರ said...

ಮೊದಲರ್ಧ ಭಲೇ ಸೊಗಸಾಗಿತ್ತು. ಅನೇಕ ಕಡೆ ಚಾರಣದ ಅನುಭವ ಓದಿ ಓದಿಯೋ ಕಾಣೆ ಆಮೇಲಿನದು ವಿಶೇಷ ಅನಿಸಲಿಲ್ಲಾ. Approach is Mast.

ಸುಶ್ರುತ ದೊಡ್ಡೇರಿ said...

chetanakka,

ಹೊಟ್ಟೆ ಉರೀತಾ? ಹಂಗೇ ಆಗ್ಬೇಕು!! :P

ಅದ್ಸರೀ, ನಿಮ್ ಬ್ಲಾಗಿಗೆ ಏನಾಯ್ತು? ಯಾಕೆ ಏನೂ ಬರೀತಿಲ್ಲ?

vijaya madam,

ಹೌದು, ನಿಜಕ್ಕೂ ಅದು ಸ್ವರ್ಗಾನೇ.. ಮತ್ತೊಮ್ಮೆ ಹೋಗ್ಬೇಕು ನಾವು.. ಏನಂತೀರಿ?

ಅರ್ಚನಾ,

ನೋಡು, ಆ ಜಂಜಡದ ನಡುವೆ ಬಿಡುವು ಮಾಡ್ಕೋತೀಯಾ ಅಂದ್ರೆ ನಮ್ ಟೀಮ್ ಜೊತೆ ನಿನ್ನೂ ಕರ್ಕೊಂಡ್ ಹೋಗ್ತೀವಿ..

keshav,

ya, it sounds funny.. ಆದ್ರೆ, ಅದು ಕಹಿಸತ್ಯ.. ಮಿಸ್ಸಿಂಗ್.. :(

ಸುಶ್ರುತ ದೊಡ್ಡೇರಿ said...

ಪುಟ್ಟಕ್ಕ,

ಥೋ ತಡಿ ಮಾರಾಯ್ತಿ.. ಸುಧಾರ್‍ಸ್ಕ್ಯಳ್ತಿ..

praveen,

Intent?? Well.. ಇದೊಂದು ಲಹರಿಗೆ ಸಿಕ್ಕಿ ಬರೆದ ಬರಹ ಅಷ್ಟೇ. ನಗರ ಬದುಕಿನ ಏಕತಾನತೆಯಿಂದ ತಪ್ಪಿಸಿಕೊಳ್ಳಲಿಕ್ಕಿರುವ ಸಾಧ್ಯತೆಗಳನ್ನ ಒಮ್ಮೆ ಮೆಲುಕು ಹಾಕಿಕೊಂಡಂತೆ.. ತನ್ಮೂಲಕ ಹಗುರಾದಂತೆ..

ಸಂತೋಷ್,

ಧನ್ಯವಾದ.

ಇರಬಹುದು. ನಮ್ ಟೀಮಿನವರೇ ಇನ್ನುಳಿದವರೂ ಇದೇ ಪ್ರವಾಸದ ಬಗ್ಗೆ ಬರೆಯೋರಿದಾರೆ ಇನ್ನೂ.. So, be careful! ;)

VENU VINOD said...

ವಿಭಿನ್ನ, ಸುಂದರ ಚಾರಣಕಥನ:)

Parisarapremi said...

correction: vyathe alla... vete.... :-)

tiruka said...

ಸುಂದರ ಬರಹ = ಚಾರಣದ ಚಿತ್ರ ನೋಡಿದ್ದೆ. ಅರ್ಧ ಅನುಭವ ಆದ ಹಾಗಿತ್ತು!
ಬರಹ ಓದಿದ ಮೇಲೆ ಪೂರ್ಣ ಅನುಭವ ಆದ ಹಾಗಾಯ್ತು :)

chitra said...

ಸುಶ್ರುತ,
ನಿಜಕ್ಕೂ ಒಮ್ಮೊಮ್ಮೆ, ಈ ಪೇಟೆಯ ಗಡಿಬಿಡಿ ಜೀವನದಿಂದ ಹೊರಬಿದ್ದು ,ಸುಮ್ಮನೇ ಎಲ್ಲಾದರೂ ಅಲೆದುಕೊಂಡು ಬರಬೇಕು ಎನಿಸುತ್ತದೆ . ಟ್ರಾಫಿಕ್ ಜಾಮ್ ಗಳಿಂದ, ಮೊಬೈಲ್ ಫೋನ್ ಗಳಿಂದ,ಕೆಲಸದ ಟೆನ್ಶನ್ ಗಳಿಂದ ತುಂಬಾ ದೂರ ಈ ಪ್ರಪಂಚದ ಸಂಪರ್ಕವೇ ಇಲ್ಲದಂತೆ ಕೆಲ ಕ್ಷಣಗಳನ್ನು ಕಳೆಯಬೇಕು ಅಂತ ಅನಿಸುತ್ತದೆ.

ನಂಗಿಷ್ಟವಾಯ್ತು ಲೇಖನ. ಯಾವುದೇ ತಲೆಬಿಸಿಯಿಲ್ಲದೇ ಸಿರ್ಸಿ ಸುತ್ತಲಿನ ಕಾಡುಗಳಲ್ಲಿ ಅಲೆದ ಬಾಲ್ಯ ನೆನಪಾಯಿತು.

ಸುಶ್ರುತ ದೊಡ್ಡೇರಿ said...

venu,

ಧನ್ಯವಾದ. :-)

parisarapremi,

ರೀ ಸುಮ್ನಿರ್ರೀ.. ಮತ್ತೆ ಮತ್ತೆ ಅದ್ನೇ ಹೇಳ್ತೀರ. :x

tiruka,

ಧನ್ಯವಾದ ಸರ್.. ಮತ್ತೆ ಏನಂತಿದೆ ಮುಂಬೈ?

chitra,

ಥ್ಯಾಂಕ್ಯೂ!
ಸಿರ್ಸಿ ಸುತ್ತಲಿನ ಕಾಡು.. ಹ್ಮ್ ಹ್ಮ್.. :)

ಸವಿಗನಸು...ಸಿಹಿ ನೆನಪಿಗೂ ಇಲ್ಲಿ ಜಾಗವುಂಟು.. said...

ಹಾಯ್ ಮೊನ್ನೆ ಅಷ್ಟೇ ಊರಿಂದ ಬಂದಿ... ಮತ್ತೆ ಈಗ ಹೋಗ್ಬಂದಿ...!! ಪುನಃ ಮತ್ತೆ ಹೋಗಕು ಕಾಣ್ತಾ ಇದ್ದು...!!!
- ಪ್ರವೀಣ್